ರಂಜಾನ್ ಹಬ್ಬವೋ ಅಥವಾ ಬಕ್ರೀದ್ ಸಂಭ್ರಮವೋ-ಸಾವಿರಾರು ಮುಸಲ್ಮಾನ ಬಂಧುಗಳು ಸಾಮೂಹಿಕ ಪ್ರಾರ್ಥನೆ ಸಲ್ಲಿಸುವ ಚಿತ್ರ ಅದ್ಭುತ ಕಲಾಕೃತಿಯಂತೆ ಕಾಣಿಸುತ್ತದೆ. ನೆಲಕ್ಕೆ ಬಾಗಿದ ಅವರ ತಲೆಗಳು ಅಕಾಶಕ್ಕೆ ಕಣ್ಣು ಮಿಟುಕಿಸುವಂತೆ ಕಾಣಿಸುತ್ತವೆ. ಟೋಪಿ ಎಂದಾಗಲೆಲ್ಲಾ ತಕ್ಷಣ ನನಗೆ ನೆನಪಾಗುವುದು ಈ ಸಾಲುಟೋಪಿಗಳ ಕಲಾಕೃತಿಯೇ!
ಟೋಪಿಯ ಸಹವಾಸಕ್ಕೆ ಬಿದ್ದುದು ಯಾವಾಗ ಎಂದು ನಿಶ್ಚಿತವಾಗಿ ಹೇಳಲಾರೆ. "ಟೋಪಿ ಬೇಕೆ ಟೋಪಿ, ಬಣ್ಣದ ಟೋಪಿ" ಎಂದು ಚಿಕ್ಕಂದಿನಲ್ಲಿ ಆಡಿದ ಆಟ ಈಗಲೂ ನೆನಪಿದೆ. ಈ ನೆನಪೇ ಇವತ್ತಿನ ಟೋಪಿ ವ್ಯಾಮೋಹಕ್ಕೆ ಕಾರಣವಿರಬಹುದೇ? ಗೊತ್ತಿಲ್ಲ. ಈಗ, ಟೋಪಿ ಬೇಕೆ ಟೋಪಿ ಎಂದು ಯಾರಾದರೂ ಕೇಳಿದರೆ ಮಾತನಾಡುವುದು ನಾನಲ್ಲ. ನನ್ನ ಕ್ಯಾಮೆರಾ! ಈ ಟೋಪಿಗಳಿಗಾಗಿ ಕತ್ತಿಗೆ ಕ್ಯಾಮೆರಾ ನೇತುಹಾಕಿಕೊಂಡು ಎಲ್ಲೆಲ್ಲಿ ಅಲೆದಿರುವೆನೋ?
ಹಾಂ, ನಾನೀಗ ಹೇಳಹೊರಟಿರುವುದು ನನ್ನ ಟೋಪಿ ಸಾಹಸಯಾತ್ರೆ ಬಗ್ಗೆ ಅಲ್ಲ.[ಟೋಪಿ ಚಿತ್ರಗಳಿಗಾಗಿ ಯಾವ ಟ್ರೋಫಿಯನ್ನು ನಿರೀಕ್ಷಿಸುತ್ತಿಲ್ಲ]. ನನ್ನ ಆಸಕ್ತಿ ಏನಿದ್ದರೂ ಟೋಪಿ ಬೆನ್ನು ಹತ್ತಿದ ನಾನು ಅವುಗಳ ಕುರಿತು ಕಲೆಹಾಕಿದ ಸ್ವಾರಸ್ಯಕರ ಮಾಹಿತಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳುವ ಬಗೆಗೆ.
ಪ್ರಾಚೀನ ಕಾಲದ ಜನ ಪ್ರಾಣಿಗಳ ಚರ್ಮ ತೆಗೆದು ತಮ್ಮ ತಲೆಯ ಮೇಲೆ ಹಾಕಿಕೊಳ್ಳುತ್ತಿದ್ದರಂತೆ. ಇದು ಇತರ ಪ್ರಾಣಿ ಅಥವ ಮನುಷ್ಯನಿಂದ ರಕ್ಷಿಸಿಕೊಳ್ಳಲು ಮಾಡಿಕೊಂಡ ವಿಧಾನವಾಗಿತ್ತು. ಪ್ರಾಚೀನ ಗ್ರೀಸ್ ಮತ್ತು ರೋಮ್‌ನಲ್ಲಿ ಗುಲಾಮರನ್ನು ಬಿಡುಗಡೆ ಮಾಡಿದಾಗ ವಿಮುಕ್ತಿಯ ಸೂಚನೆಯಾಗಿ ಅವರ ತಲೆಗೊಂದು ಟೋಪಿಯನ್ನು ಹಾಕಿ ಕಳಿಹಿಸುತ್ತಿದ್ದರಂತೆ. ಅದು ಸ್ವತಂತ್ರದ ಟೊಪ್ಪಿ! ಹಾಗೆಯೇ ಹೆಂಗಸರು ತಮ್ಮ ತಲೆಯನ್ನು ಮುಚ್ಚಿಕೊಳ್ಳಲು ಬಿದಿರಿನ ವಸ್ತುಗಳು, ಎಲೆಗಳಿಂದ ಮಾಡಿದ ಆಕೃತಿಗಳನ್ನು ಬಳಸುತ್ತಿದ್ದರು. ಹದಿನೇಳನೇ ಶತಮಾನದ ಕೊನೆಯಲ್ಲಿ, ಪುರುಷರ ಟೊಪ್ಪಿಗಳ ಅನುಕರಣೆಬಿಟ್ಟು ಮಹಿಳೆಯರಿಗೆಂದೇ ಟೋಪಿಗಳನ್ನು ರೂಪಿಸಲಾಯಿತು. ಮಿಲ್ಲಿನರ್ ಎಂಬಾತ ೧೮೦೦ರ ಮದ್ಯದಲ್ಲಿ ಕೊಳವೆಗಳನ್ನು ಬಳಸಿ ಕಾಗದ, ಕಾರ್ಡ್‌ಬೋರ್ಡ್, ಹುಲ್ಲು, ಕುದುರೆ ರೋಮಗಳಿಂದ ಮಹಿಳೆಯರ ಟೋಫಿ ತಯಾರಿಸುತ್ತಿದ್ದನು. ನಂತರ ವೆಲ್ವೆಟ್ ಟೋಪಿಗಳು ಬಳಕೆಗೆ ಬಂದವು.
ಹತ್ತೊಂಬತ್ತನೇ ಶತಮಾನದ ಮದ್ಯದಲ್ಲಿ ಮಹಿಳೆಯರ ಟೋಪಿಗಳು ಹೂವು, ಗರಿಗಳು, ರಿಬ್ಬನ್, ಇತ್ಯಾದಿಗಳಿಂದ ಅಲಂಕೃತಗೊಂಡವು. ಮಹಿಳೆಯರು ಕೂದಲು ಕತ್ತರಿಸಿಕೊಳ್ಳುವುದು ಫ್ಯಾಶನ್ ಆಗತೊಡಗಿದಾಗ ಅದಕ್ಕೆ ತಕ್ಕಂತೆ ಟೋಪಿಗಳು ಬದಲಾಗಿವೆ.
೧೯೧೪ರಿಂದ ೧೯೧೮ರವರೆಗೆ ಯುದ್ಧಕಾಲದಲ್ಲಿ ಟೋಪಿಗಳ ಬೇಡಿಕೆ ಮತ್ತು ಬಳಕೆ ಕಡಿಮೆಯಾಗಿತ್ತು. ಯುದ್ಧಾನಂತರ ಮಿಲಿಟರಿಗೆ ಸಂಭಂದಿಸಿದಂತೆ ಸುರಕ್ಷತೆಗಾಗಿ ಟೋಪಿಗಳು ತಯಾರಾದವು. ೧೯೬೦ರ ನಂತರ ಪುರುಷರ ಮತ್ತು ಮಹಿಳೆಯರ ತಲೆಯ ಕೂದಲನ್ನು ಅನೇಕ ಆಕಾರದಲ್ಲಿ ಶ್ರದ್ಧೆಯಿಂದ ಅಲಂಕರಿಸುವ ಬೆಳವಣಿಗೆ ಉಂಟಾಯಿತು. ವಸ್ತ್ರಗಳೊಂದಿಗೆ ಟೋಪಿಯೂ ಒಂದು ಸ್ವಾಭಾವಿಕ ಧಿರಿಸಾಗಿ ಬೆಳವಣಿಗೆ ಕಂಡಿತು. ೮೦-೯೦ರ ದಶಕದಲ್ಲಂತೂ ಟೋಪಿಗಳ ಸಾಮ್ರಾಜ್ಯ ಅತ್ಯುನ್ನತ ಸ್ಥಾನಕ್ಕೇರಿತು. ವೇಲ್ಸ್ ರಾಜಕುಮಾರ ಹೊಸ ಬಗೆಯ ಟೋಪಿ ಧರಿಸುವುದರಲ್ಲಿ ಉತ್ಸಾಹಿಯಾಗಿದ್ದ ಕಾರಣ ತಯಾರಕರು ಸಾವಿರಾರು ಹೊಸ ಶೈಲಿಯ ಟೋಪಿಗಳನ್ನು ಮಾರುಕಟ್ಟೆಗೆ ತಂದರು.
ಸಮವಸ್ತ್ರವಾಗಿ, ಅಲಂಕಾರಿಕ ವಸ್ತುವಾಗಿ ಘನತೆಯ ಗುರುತಾಗಿ, ಆಟೋಟಗಳ ತಲೆದಿರಿಸಾಗಿ ಮತ್ತು ಸುರಕ್ಷತೆಯ ಗುರಾಣಿಯಾಗಿ ಟೋಪಿಗಳ ಸ್ವರೂಪವಿದೆ. ಗಣಿಗಳಲ್ಲಿ ಕೆಲಸ ಮಾಡುವ ಕೂಲಿಯವನಿಗೆ ಸಿಗುವ ಸಂಬಳದ ನೂರು ಪಟ್ಟು ಬೆಲೆಯ ಹೆಲ್ಮೆಟ್ಟನ್ನು ಅವನು ಧರಿಸಿರುವ ಉದಾಹರಣೆ ಇದೆ. ಹೆಲ್ಮೆಟ್ಟಿಗೆ ಅಂಟಿಕೊಂಡ ದೊಡ್ಡ ಲೈಟ್ ಈ ಕಾಲಮಾನದ ಬೆರಗೇ ಹೌದು.
ರಾಜ-ಮಹಾರಾಜರ ಕಾಲದಲ್ಲಿ ಕಿರೀಟದ ಸ್ವರೂಪವೇ ಅವರವರ ಹುದ್ದೆಗೆ ಕನ್ನಡಿ ಹಿಡಿಯುತ್ತಿತ್ತು. ಜೋಕರ್‌ಗೆ ತ್ರಿಕೋನಾಕಾರದ ಟೋಪಿ, ಸಾಂತಕ್ಲಾಸ್‌ಗೆ ವಾಲಾಡುವ ವಿಚಿತ್ರವಾದ ಬಿಳಿ ಟೋಪಿ. ಟೋಪಿಗೆ ಅಲಂಕಾರ ಮಾಡುವುದೇ ಇಂದು ದೊಡ್ಡ ಉದ್ಯಮ.
ಈಗಲೂ ಕರಾವಳಿ ಕಡೆ ನೋಡಿ; ಅಡಿಕೆಪಟ್ಟೆಯ ಟೋಪಿ ತೊಡುವ ಕೂಲಿ ಕಾರ್ಮಿಕರಿದ್ದಾರೆ. ಅದೇ ಆಡಿಕೆಪಟ್ಟೆಯ ಟೋಪಿಗೆ ಅಧುನಿಕ ರೂಪಕೊಟ್ಟು, ಕೌಬಾಯ್ ಟೋಪಿಯ ಆಕರಕ್ಕೆ ತಂದು ಮಾರುಕಟ್ಟೆ ಅಂಗಡಿಗೆ ತಂದಿಟ್ಟಿದ್ದೂ ಆಗಿದೆ. ಅಡಿಕೆ ಟೋಪಿ ನೆತ್ತಿಗೆ ತಂಪು ಎನ್ನುವುದು ಮಾರಾಟದ ತಂತ್ರ.
ರಾಜನ ಕಿರೀಟ, ಗಾಂಧಿ ಟೋಪಿ, ತಿಲಕರ ಟೋಪಿ, ಶಿವಾಜಿ ಟೋಪಿ, ಕೌಬಾಯ್ ಟೋಪಿ, ವಿಷ್ಣುವರ್ಧನ್ ಟೋಪಿ, ರವಿಚಂದ್ರನ್ ಟೋಪಿ,[ಅದರೊಳಗೆ ಐಸ್ ಗಡ್ಡೆಗಳನ್ನು ಹಾಕಿ ಮಂಡೆಯನ್ನು ತಣ್ಣಗೆ ಮಾಡಿಕೊಳ್ಳಬಹುದು]. ಮಂಕಿ ಟೋಪಿ, ದೊಡ್ಡ ದೊಡ್ಡ ಕಂಪನಿಗಳ ಡಿಸೈನರ್ ಟೋಪಿ....ಟೋಪಿ ನಾಗರಿಕತೆ ಹೇಗೆಲ್ಲಾ ರೂಪಾಂತರಗೊಂಡಿದೆ ನೋಡಿ.
ಹೆದ್ದಾರಿಯಲ್ಲಿ ಬರ್ರನೆ ಸಾಗುವ ವಾಹನಗಳಲ್ಲಿ ಓಡಾಡುವವರ ಟೋಪಿ ಆಗೀಗ ಹಾರುತ್ತಲೇ ಇರುತ್ತದೆ. ಒಮ್ಮೆ ಟೋಪಿ ಹಾರಿದರೆ, ಮತ್ತೆ ಅದು ಸಿಗುವುದು ಕಷ್ಟ. ಅಂಥ ಟೋಪಿಗಳನ್ನೆಲ್ಲಾ ಕಲೆಹಾಕಿ ಪುಟ್‌ಪಾತ್ ಬದಿಯಲ್ಲಿ ಮಾರುವ ಹುಡುಗರು ನಮ್ಮ ನಡುವೆ ಇದ್ದಾರೆನ್ನುವುದು ಸೋಜಿಗ. "ಟೋಪಿ ಹಾಕುವುದು" ಎಂಬ ನುಡಿಗಟ್ಟಿಗೆ ಏನೆಲ್ಲಾ ಅರ್ಥವಿದೆ ಅಲ್ಲವೇ?.
ಗೆಳೆಯರೆ, ಜುಲೈ ೨೦೦೯ ತಿಂಗಳ ಮಯೂರ ಮಾಸಪತ್ರಿಕೆಯಲ್ಲಿ ಟೋಪಿ ಚಿತ್ರಗಳ ಜೊತೆಗೆ ಈ ಲೇಖನ ಪ್ರಕಟವಾಗಿತ್ತು. ಲೇಖನ ಓದಿಲ್ಲದವರಿಗಾಗಿ ಮತ್ತೆ ಅದನ್ನೇ ಇಲ್ಲಿ ಹಾಕಿದ್ದೇನೆ. ಹಾಗೂ ಹೊಸದಾಗಿ ಇನ್ನೊಂದು ಸುತ್ತಿನ ಹೊಸ ಟೋಪಿಗಳನ್ನು ನಿಮಗಾಗಿ ಕೊಡುತ್ತಿದ್ದೇನೆ. ಛಾಯಾಕನ್ನಡಿ ಮೊದಲ ವರ್ಷ ಮುಗಿದು ಎರಡನೆ ವರ್ಷ ಪ್ರಾರಂಬಿಸುವ ಹಂತದಲ್ಲಿ ಮೊದಲಿಗೆ ಟೋಪಿಗಳಿಂದ ಪ್ರಾರಂಭಿಸುತ್ತಿದ್ದೆನೆಂದು ಬೇಸರಿಸಬೇಡಿ, ಇಷ್ಟವಿದ್ದವರು ಟೋಪಿ ಹಾಕಿಕೊಳ್ಳಬಹುದು.
ಸ್ಕೇಟಿಂಗ್ ಟೋಪಿ..
ಸ್ಕೇಟಿಂಗ್ ಟೋಪಿ ಹಾಕಿಕೊಂಡ ಮಕ್ಕಳು ಸಂಜೆ ಸಮಯದಲ್ಲಿ ಎಷ್ಟು ಹುರುಪಿನಿಂದ ಅಭ್ಯಾಸ ಮಾಡುತ್ತಿದ್ದಾರೆ ನೋಡಿ...
ಈ ಟೋಪಿಯನ್ನು ಬೆಂಗಳೂರಿನ ವರ್ಲ್ಡ್ ಟೆನ್ ಕೆ ನಲ್ಲಿ ಕ್ಲಿಕ್ಕಿಸಿದ್ದು. ಇದು ಜೋಕರ್ ಟೋಪಿ ಇರಬಹುದೇ?
ಶಿವು.ಕೆ ARPS.