Thursday, May 24, 2012

"ಯು-ಟರ್ನ್" ನೀವೊಮ್ಮೆ ತಗೊಂಡು ನೋಡ್ರಿ...


      ಅವತ್ತು ದಿನಾಂಕ ೨೦೧೨ರ ಜನವರಿ ಇಪ್ಪತ್ತರ ಸಂಜೆ ಆರುಗಂಟೆ.

      ಡ್ರನ್..ಡ್ರರರ್ನ್...ಡ್ರನ್ ಡ್ರರರರ...ರ್ನ್...

       ಹೀಗೆ ನನ್ನ ವಿಡಿಯೋಗ್ರಾಫರ್ ಶಿವಪ್ರಸಾದ್ ತನ್ನ ಹೀರೋ ಹೋಂಡ ಪ್ಯಾಷನ್ ದ್ವಿಚಕ್ರವಾಹನದ ಎಕ್ಸಲೇಟರನ್ನು ಹೆಚ್ಚು ಕಡಿಮೆ ಮಾಡುತ್ತಲೋ ಇದ್ದರು. ಇನ್ನೇನು ತಿರುಗಬೇಕು ಅಷ್ಟರಲ್ಲಿ ಮತ್ತೊಂದು ವಾಹನ ನಮ್ಮ ಹಿಂದೆ ಬಲಭಾಗದಲ್ಲಿ. ಅದರ ಹಿಂದೆ ಮತ್ತೊಂದು ಅದರ ಹಿಂದೆ ಮೂರು ಕಾರು, ಮತ್ತೆ ಐದಾರು ದ್ವಿಚಕ್ರವಾಹನಗಳು....ಅದೋ ದೊಡ್ಡ ಬಸ್ಸು ಬರುತ್ತಿದೆ. ಹತ್ತಿಪ್ಪತ್ತು ಸೆಕೆಂಡಿನಲ್ಲಿ ತಿರುಗಿಕೊಳ್ಳಬಹುದು ಅಂದು ಕೊಂಡ ನಾನು ಸಮಯ ನೋಡಿದೆ. ಆಗಲೇ ಒಂದು ನಿಮಿಷ ದಾಟಿದೆ,  ನಮ್ಮ ಬಲಭಾಗದ ಹಿಂಭಾಗದಿಂದ ಒಂದಾದ ಮೇಲೆ ಒಂದು ವಾಹನಗಳು ಬರುತ್ತಲೇ ಇವೆ..ಸಮಯ ಒಂದುವರೆ ನಿಮಿಷ ದಾಟಿತು, ಹಾಗೆ ಎರಡು ನಿಮಿಷ, ಮೂರು ನಿಮಿಷ, ಮೂರುವರೆ ನಿಮಿಷ, ನಾಲ್ಕು ನಿಮಿಷಕ್ಕೆ ಇನ್ನು ಹತ್ತು ಸೆಕೆಂಡು ಮಾತ್ರ ಬಾಕಿ ಇದೆ ಎನ್ನುವಷ್ಟರಲ್ಲಿ ವಾಹನಗಳೆಲ್ಲಾ ನಿದಾನವಾಗಿ ಕಡಿಮೆಯಾಗುತ್ತ ಬಂದವು. ಕೊನೆಯ ಕಾರು ಹೋಗುವವರೆಗೂ ನಾವು ನಮ್ಮ ದ್ವಿಚಕ್ರವಾಹನವನ್ನು ಯು-ಟರ್ನ್ ತೆಗೆದುಕೊಳ್ಳುವಂತಿಲ್ಲ.....ಸಮಯ ನೋಡಿದೆ. ಆರುಗಂಟೆ ನಾಲ್ಕು ನಿಮಿಷವಾಗಿತ್ತು. ಅಂತು ಮುಗಿಯತಲ್ಲ ಅಂದುಕೊಂಡು ಯು ಟರ್ನ್ ತೆಗೆದುಕೊಂಡು ಹತ್ತೇ ಸೆಕೆಂಡಿನಲ್ಲಿ ನಿಜಗುಣ ಕಲ್ಯಾಣಮಂಟಪದಲ್ಲಿದ್ದೆವು.

        ಇಷ್ಟಕ್ಕೂ ಇಲ್ಲಿ ನಡೆದಿದ್ದೇನೆಂದರೆ ನಾನು ಮತ್ತು ನನ್ನ ವಿಡಿಯೋಗ್ರಾಫರ್ ಶಿವಪ್ರಸಾದ್ ಬಸವನ ಗುಡಿ ರಸ್ತೆಯಲ್ಲಿರುವ ನಿಜಗುಣ ಕಲ್ಯಾಣಮಂಟಪಕ್ಕೆ ಸಂಜೆ ಐದುವರೆ ಗಂಟೆಯೊಳಗೆ ತಲುಪಬೇಕಿತ್ತು.  ಅಲ್ಲಿ ಒಂದು ಮದುವೆ ಕಾರ್ಯಕ್ರಮದ ಅಂಗವಾಗಿ ವರನ ಕಡೆಯವರು ಆರುಗಂಟೆಗೆ ಸರಿಯಾಗಿ ಬರುವವರಾದ್ದರಿಂದ ನಾವು ಅಲ್ಲಿದ್ದು ಹೆಣ್ಣಿನ ಕಡೆಯವರು ಮದುವೆ ಗಂಡು ಮತ್ತು ಅವರ ಕಡೆಯವರನ್ನು ಸ್ವಾಗತಿಸುವ ಕಾರ್ಯಕ್ರಮದ ಫೋಟೊಗ್ರಫಿ ಮತ್ತು ವಿಡಿಯೋಗ್ರಫಿಯನ್ನು ಮಾಡಲು ಸಿದ್ದವಾಗಿರಬೇಕಿತ್ತು.  ನಾವಿಬ್ಬರೂ ಇಂಥ ಕಾರ್ಯಕ್ರಮಗಳಿಗಾಗಿ ಅರ್ಧಗಂಟೆ ಮೊದಲೇ ತಲುಪಿರುತ್ತೇವೆ. ಸ್ವಲ್ಪ ತಡವಾದರೂ ಕಾಲು ಗಂಟೆ ಮೊದಲೇ ತಲುಪುವುದು ಖಚಿತ. ನಾವು ಹೀಗೆ ಒಟ್ಟಿಗೆ ನಮ್ಮ ಕ್ಯಾಮೆರ ಸಲಕರಣೆಗಳನ್ನು ಹೊತ್ತುಕೊಂಡು ನನ್ನ ಸ್ಕೂಟಿ ಅಥವ ಅವರ ಬೈಕ್ ನಲ್ಲಿ ಸಾಗುವಾಗ ದಾರಿಯುದ್ದಕ್ಕೂ ಮಾತಾಡಿಕೊಂಡು ಹೋಗುತ್ತಿರುತ್ತೇವೆ. ಅವತ್ತು ರಾಮಕೃಷ್ಣ ಆಶ್ರಮದ ಕಡೆಯಿಂದ ಸಾಗಿ ಮುಂದೆ ಬಲಬದಿಗೆ ಸಿಗುವ ನಿಜಗುಣ ಕಲ್ಯಾಣಮಂಟಪವನ್ನು ಸೇರಬೇಕಿತ್ತು. ಹೀಗೆ ಮಾತಾಡಿಕೊಂಡು ಹೋಗುವಾಗ ಸ್ವಲ್ಪ ಮುಂದೆ ಕಾಮತ್ ಬ್ಯೂಗಲ್ ರಾಕ್ ತಲುಪಿಬಿಟ್ಟೆವು.  ಅರೆರೆ...ನಾವು ತಲುಪಬೇಕಾಗಿದ್ದ ಕಲ್ಯಾಣಮಂಟಪ ಹಿಂದಕ್ಕೆ ಹೋಯ್ತಲ್ಲ ಅಂತ ಅವರ ಗಾಡಿಯನ್ನು ಸ್ವಲ್ಪ ಎಡಕ್ಕೆ ತೆಗೆದುಕೊಂಡು ನಂತರ ಹಿಂದೆ ಬರುವ ವಾಹನಗಳನ್ನು ನೋಡಿಕೊಂಡು ಯು ಟರ್ನ್ ತೆಗೆದುಕೊಂಡು ವಾಪಸ್ ಆ ಕಲ್ಯಾಣಮಂಟಪವನ್ನು ತಲುಪಬೇಕು ಅಂದುಕೊಂಡು ಮಾಡಿದ ಸರ್ಕಸ್ ಅದು. ಬಸವನಗುಡಿಯಲ್ಲಿಯ ಆ ರಸ್ತೆ ಕೊನೆಯಲ್ಲಿ ಒಂದು ಯು-ಟರ್ನ್ ತೆಗೆದುಕೊಳ್ಳಲಿಕ್ಕೆ ಅವತ್ತು ನಾಲ್ಕು ನಿಮಿಷವಾಗಿತ್ತು.  "ಅಯ್ಯೋ ಶಿವಪ್ರಸಾದ್ ನಾವು ಮಾತಾಡಿಕೊಂಡು ಹೀಗೆ ಮುಂದೆ ಬರುತ್ತಿರುವುದು ಇದು ಐದನೇ ಬಾರಿ ಇನ್ನು ಮುಂದೆ ನಮ್ಮ ಮಾತು ಕಡಿಮೆ ಮಾಡಿಕೊಳ್ಳಬೇಕು ಎಂದೆ.  ಹೌದು ಶಿವು, ಕರೆಕ್ಟ್  ನಮ್ಮ ಮಾತನ್ನು ನಿಲ್ಲಿಸಬೇಕು. ಇಲ್ಲದಿದ್ದಲ್ಲಿ ಹೀಗೆ ತಡವಾಗುತ್ತಿರುತ್ತದೆ" ಎಂದರು. ಹೀಗೆ ತಡವಾಗುತ್ತಿರುವುದು ಇಬ್ಬರಿಗೂ ಬೇಸರವಾದರೂ ನನಗೇನೋ ಇಲ್ಲಿ ಯು-ಟರ್ನ್ ತೆಗೆದುಕೊಳ್ಳಲು ತೆಗೆದುಕೊಂಡ ನಾಲ್ಕು ನಿಮಿಷಗಳು ನನ್ನನ್ನು ಕಾಡತೊಡಗಿತು.

    ವರನ ಕಡೆಯವರನ್ನು ಹೆಣ್ಣಿನ ಕಡೆಯವರು ಸ್ವಾಗತಿಸುವ ಫೋಟೊಗ್ರಫಿ ಮತ್ತು ವಿಡಿಯೋಗ್ರಫಿ ಮುಗಿದ ಮೇಲೆ ನಮಗೆ ಸ್ವಲ್ಪ ಬಿಡುವು ಸಿಕ್ಕಿತ್ತು.  "ನೋಡಿ ಶಿವಪ್ರಸಾದ್, ಇಲ್ಲೊಂದು ಹೊಸ ವಿಚಾರವನ್ನು ಹೇಳುತ್ತೇನೆ. ಅದಕ್ಕೆ ಮೊದಲು ನಮ್ಮೊಳಗೆ ಒಂದು ಒಪ್ಪಂದವನ್ನು ಮಾಡಿಕೊಳ್ಳಬೇಕು. ನೀವು ಒಪ್ಪುವುದಾದರೇ ನಾವಿಬ್ಬರು ಈಗ ಒಂದು ಒಪ್ಪಂದವನ್ನು ಮಾಡಿಕೊಳ್ಳೋಣ. ಅದೇನೆಂದರೆ ಮೊದಲಿಗೆ ನಮ್ಮ ಮಾತುಗಳನ್ನು ಕಡಿಮೆಮಾಡಿಕೊಳ್ಳುವುದು,  ಮುಂದೆ ನಾವು ಮದುವೆ, ಮುಂಜಿ, ಹುಟ್ಟುಹಬ್ಬ, ಹೋಟಲ್ಲುಗಳಲ್ಲಿ ನಡೆಯುವ ಕಾನ್ಪರೆನ್ಸ್..ಇತ್ಯಾದಿಗಳಗೆ ನನ್ನ ದ್ವಿಚಕ್ರವಾಹನವಾದ ಸ್ಕೂಟಿ ಅಥವ ನಿಮ್ಮ ಬೈಕ್ ಯಾವುದರಲ್ಲಿಯೇ ಆಗಲಿ ನಾವು ಅಂದುಕೊಂಡದ್ದಕ್ಕಿಂತ ಹತ್ತು ನಿಮಿಷ ಮೊದಲು ಹೊರಡಬೇಕು.  ನಾವು ತಲುಪಬೇಕಾದ ಸ್ಥಳಕ್ಕೆ ಯಾವುದೇ ಟ್ರ್‍ಆಫಿಕ್ ಇಲ್ಲದಿದ್ದಲ್ಲಿ ಸರಿಯಾದ ಸಮಯಕ್ಕೆ ತಲುಪುತ್ತೇವೆ ಅಲ್ವಾ?"  ಪ್ರಶ್ನಿಸಿದೆ.

 "ಹೌದು ಖಂಡಿತ ತಲುಪುತ್ತೇವೆ." ಶಿವಪ್ರಸಾದ್ ಉತ್ತರ.

 "ನಾವು ತಲುಪಬಾರದು!" ನಾನು ಶಾಂತವಾಗಿ ಉತ್ತರಿಸಿದ್ದೆ.

 "ಏಕೆ?" ಮತ್ತೆ ಕುತೂಹಲದಿಂದ ಶಿವಪ್ರಸಾದ್ ಪ್ರಶ್ನೆ.

 "ನೋಡಿ ಶಿವಪ್ರಸಾದ್, ನಮ್ಮ ದ್ವಿಚಕ್ರವಾಹನಗಳು ನಾವು ತಲುಪಬೇಕಾದ ಕಲ್ಯಾಣಮಂಟಪ, ಹೋಟಲ್ಲು ಇತ್ಯಾದಿಗಳು ನಾವು ಸಾಗುವ ರಸ್ತೆಯ ಬಲಭಾಗದಲ್ಲಿದ್ದಲ್ಲಿ ನಾವು ಕನಿಷ್ಟ ಪಕ್ಷ ನೂರು ಮೀಟರ್ ಮುಂದೆ ಸಾಗಬೇಕು. ಮತ್ತೆ ನಿದಾನವಾಗಿ ಎಡಭಾಗಕ್ಕೆ ಬಂದು ಒಂದು ಯು ಟರ್ನ್ ತೆಗೆದುಕೊಂಡು ವಾಪಸ್ ಮತ್ತೆ ನೂರು ಮೀಟರ್ ಹಿಂದಕ್ಕೆ ಸಾಗಿ ನಾವು ತಲುಪಬೇಕಾದ ಸ್ಥಳವನ್ನು ತಲುಪಬೇಕು" ಅಂದೆ.

  "ಶಿವು, ನಿಮಗೇನು ತಲೆಕೆಟ್ಟಿದೆಯಾ? ನಾವು ತಲುಪಬೇಕಾದ ಸ್ಥಳ ಗೊತ್ತಿದ್ದು ಕೂಡ ನಾವ್ಯಾಕೆ ನೂರು ಮೀಟರ್ ಮುಂದೆ ಸಾಗಬೇಕು. ಅದರಿಂದ ಏನು ಉಪಯೋಗ?"  ಕುತೂಹಲದಿಂದ ಪ್ರಶ್ನಿಸಿದರು ಶಿವಪ್ರಸಾದ್.

   "ಶಿವಪ್ರಸಾದ್, ನಾವು ಇವತ್ತು ದ್ವಿಚಕ್ರವಾಹನದಲ್ಲಿ ಚಲಿಸುವಾಗ ಮಾತಾಡಿಕೊಂಡು ಬರುತ್ತಿರುತ್ತಿದ್ದೆವು ಅಲ್ವಾ..ಅದರಿಂದಾಗಿ ಇಬ್ಬರೂ ಮೈಮರೆತು ನೂರು ಮೀಟರ್ ಮುಂದಕ್ಕೆ ಕಾಮತ್ ಬ್ಯೂಗಲ್ ರಾಕ್ ಹೋಟಲ್ಲಿನವರೆಗೆ ಹೋಗಿ ಅಮೇಲೆ ವಾಪಸ್ ಬರಬೇಕೆಂದು ಗೊತ್ತಾಗಿ ನೀವು ನಿಮ್ಮ ದ್ವಿಚಕ್ರವನ್ನು ಯು ಟರ್ನ್ ತೆಗೆದುಕೊಳ್ಳಲು ಪ್ರಯತ್ನಿಸಿದ್ರಿ. ಆದ್ರೆ ತಕ್ಷಣಕ್ಕೆ ಸಾಧ್ಯವಾಗಲಿಲ್ಲ. ಏಕೆಂದರೆ ನಮ್ಮ ಬಲಬದಿಯಲ್ಲಿ ಅನೇಕ ವಾಹನಗಳು ವೇಗವಾಗಿ ಚಲಿಸುತ್ತಿದ್ದವು. ಅವು ಕಡಿಮೆಯಾಗಿ ಒಂದರೆ ಕ್ಷಣ ಯಾವುದೂ ವಾಹನವಿಲ್ಲವೆಂದು ಗೊತ್ತಾದಾಗ ನಾವು ಯು ಟರ್ನ್ ತೆಗೆದುಕೊಂಡು ವಾಪಸ್ ನಾವು ತಲುಪಬೇಕಾದ ಈ ಕಲ್ಯಾಣಮಂಟಪವನ್ನು ತಲುಪಿದ್ದೇವೆ. ನಿಮಗೆ ಆ ಕ್ಷಣದಲ್ಲಿ ಎಷ್ಟು ಬೇಸರವಾಗಿದೆಯೋ ನನಗೆ ಗೊತ್ತಿಲ್ಲ. ಆದ್ರೆ ನಾನು ಮಾತ್ರ ಒಂದು ಯು ಟರ್ನ್ ತೆಗೆದುಕೊಳ್ಳಲಿಕ್ಕೆ ಎಷ್ಟು ಸಮಯ ತೆಗೆದುಕೊಳ್ಳಬಹುದು ಅಂತ ಲೆಕ್ಕ ಹಾಕುತ್ತಿದೆ. ಇಲ್ಲಿ ನನಗೆ ಸಿಕ್ಕಿದ ಲೆಕ್ಕದ ಪ್ರಕಾರ ನಾಲ್ಕು ನಿಮಿಷಗಳಾಯ್ತು."

   "ಓಕೆ ಓಕೆ....ಆದ್ರೆ ಆ ಸಮಯದಲ್ಲಿ ನೀವು ನಾಲ್ಕು ನಿಮಿಷ ಅಂತ ಸಮಯವನ್ನು ನೋಡಿಕೊಂಡಿದ್ದೀರಿ. ಆದ್ರೆ ಇದರಿಂದ ಏನು ಉಪಯೋಗ?"
ಮತ್ತೆ ಪ್ರಶ್ನಿಸಿದರು ಶಿವಪ್ರಸಾದ್.

    "ಶಿವಪ್ರಸಾದ್, ಇಲ್ಲೇ ಇರುವುದು ಮುಖ್ಯ ವಿಚಾರ. ಬಸವನಗುಡಿಯ ಕೊನೆಯಲ್ಲಿನ ಈ ರಸ್ತೆಯಲ್ಲಿ ಒಂದು ಯು ಟರ್ನ್ ತೆಗೆದುಕೊಳ್ಳಬೇಕೆಂದರೆ ನಾಲ್ಕು ನಿಮಿಷಗಳಾದರೆ ಬೆಂಗಳೂರಿನ ನೂರಾರು ದೊಡ್ದ ರಸ್ತೆಗಳಲ್ಲಿ ಪ್ರತಿಯೊಂದರಲ್ಲೂ ಹೀಗೆ ಒಂದು ಯು-ಟರ್ನ್ ತೆಗೆದುಕೊಳ್ಳಬೇಕಾದರೆ ಎಷ್ಟು ಸಮಯ ಆಗಬಹುದು ಅಂತ ಒಂದು ಹೊಸ ಲೆಕ್ಕಚಾರವನ್ನು ಕಂಡುಹಿಡಿಯಬೇಕೆನ್ನಿಸುತ್ತಿದೆ. ಅದಕ್ಕೆ ನಿಮ್ಮ ಸಹಕಾರ ಬೇಕು" ಅಂದೆ.

    "ಆ ಸಮಯವನ್ನು ತಿಳಿದುಕೊಂಡು ಏನುಮಾಡುತ್ತೀರಿ?" ಮತ್ತೆ ಮರುಪ್ರಶ್ನೆಯನ್ನು ಹಾಕಿದರು.

    "ಅದರಿಂದ ಏನು ಉಪಯೋಗವೆಂದು ಈಗಲೇ ಏನು ಹೇಳುವುದಿಲ್ಲ. ಮುಂದೆ ನಿಮಗೆ ಗೊತ್ತಾಗುತ್ತದೆ"

   ನನ್ನ ಕಡೆ ಅಚ್ಚರಿಯಿಂದ ನೋಡಿದರು. ಮೇಲೆ ಕಲ್ಯಾಣಮಂಟಪದ ಟೆರೆಸ್ ನೋಡಿದರು. ಅವರಿಗೆ ಅಕಾಶ ಕಾಣಲಿಲ್ಲ. ಒಮ್ಮೆ ನಕ್ಕು  "ಆಯ್ತು ಶಿವು. ನೀವು ಹೇಳುತ್ತಿರುವ ವಿಚಾರ ಹೊಸದು ಅನ್ನಿಸುತ್ತಿದೆ. ನನಗೂ ಈ ಮದುವೆಗಳ ವಿಡಿಯೋಗ್ರಫಿ ಏಕತಾನತೆ ಎನಿಸಿದೆ. ನೀವು ಹೇಳಿದ ವಿಚಾರದಲ್ಲಿ ನಾನು ಕೈಜೋಡಿಸುತ್ತೇನೆ. ನನಗೂ ಇಂಥವು ಬೇಕು ಅನ್ನಿಸುತ್ತಿದೆ..." ಅಂದರು.

   ಅಲ್ಲಿಂದ ಮುಂದೆ ನಾಲ್ಕು ತಿಂಗಳಲ್ಲಿ ಕೆಲವು ಮುಖ್ಯ ರಸ್ತೆಗಳಲ್ಲಿ ನಡೆದಿದ್ದು ನಮ್ಮ ಮಹತ್ವಾಕಾಂಕ್ಷೆ ಸರ್ವೆ. ಇದಕ್ಕಾಗಿ ನಾವು ಆಯ್ಕೆ ಮಾಡಿಕೊಂಡಿದ್ದು ಮೊದಲಿಗೆ ದ್ವಿಮುಖ ಸಂಚಾರವಿರುವ ರಸ್ತೆಗಳನ್ನು.  ಸಾಕಷ್ಟು ರಸ್ತೆಗಳಲ್ಲಿ ಯು ಟರ್ನ್ ತೆಗೆದುಕೊಂಡಿದ್ದೇವೆ. ಈ ಪ್ರತಿಯೊಂದು ರಸ್ತೆಯಲ್ಲಿಯೂ ಯು ಟರ್ನ್ ತೆಗೆದುಕೊಳ್ಳುವಾಗ ಆಗುವ ಸಮಯವನ್ನು ಲೆಕ್ಕಮಾಡಿದ್ದೇನೆ. ಬರೆದಿಟ್ಟುಕೊಂಡಿದ್ದೇನೆ. ರಸ್ತೆಗಳಲ್ಲಿ ಇದನ್ನು ಮಾಡುವಾಗ ನಮಗಾದ ಅನುಭವ ಮಾತ್ರ ಆಘಾದವಾದುದು. ಒಂದಕ್ಕಿಂತ ಒಂದು ವಿಭಿನ್ನವಾದ ಅನುಭವ. ಸುಭೇಧಾರ್ ಚತ್ರಂ ರಸ್ತೆಯಲ್ಲಿ ಆಗಿದ್ದು ಒಂಥರವಾದರೆ ವಿ.ವಿ.ಪುರಂ ರಸ್ತೆಯಲ್ಲಿ ಆಗಿದ್ದು ಇನ್ನೊಂಥರ. ಆ ರಸ್ತೆಯಲ್ಲಿ ಆಗಿದ್ದು ಈ ರಸ್ತೆಯಲ್ಲಿ ಆಗಿಲ್ಲ. ಮಲ್ಲೇಶ್ವರಂನ ತೆಂಗಿನ ಮರದಲ್ಲಿನ ರಸ್ತೆಯ ಅನುಭವವೇ ಬೇರೆ ಟ್ಯಾನಿ ರಸ್ತೆಯಲ್ಲಿ ಆದ ಅನುಭವವೇ ಬೇರೆ. ಅದೆಲ್ಲ ಅನುಭವವನ್ನು ಹಂಚಿಕೊಂಡರೆ ಪ್ರತಿಯೊಂದು ರಸ್ತೆಗೆ ಒಂದು ಪುಟದಂತೆ ನೂರುಪುಟವಾದರೂ ಆಗಬಹುದು. ಅದಕ್ಕಾಗಿ ಇವುಗಳಲ್ಲಿ ಕೆಲವೊಂದು ರಸ್ತೆಗಳಲ್ಲಿ ಯು ಟರ್ನ್ ತೆಗೆದುಕೊಳ್ಳುವಾಗಿನ ಅನುಭವ, ತೆಗೆದುಕೊಂಡ ಸಮಯ ಇತ್ಯಾದಿಗಳನ್ನು ಚುಟುಕಾಗಿ ವಿವರಿಸುತ್ತೇನೆ.  ಮೊದಲಿಗೆ ಶಂಕರ ಮಠದಿಂದ ಪವಿತ್ರ ಪ್ಯಾರಡೈಸ್ ಹೋಟಲ್‍ವರೆಗಿನ ಬಸವೇಶ್ವರನಗರದ ರಸ್ತೆಯಲ್ಲಿರುವ ಪೋಸ್ಟ್ ಆಫೀಸ್ ಬಳಿ ನಾವು ಯು-ಟರ್ನ್ ತೆಗೆದುಕೊಳ್ಳಬೇಕಾಗಿತ್ತು. ಏಕೆಂದರೆ ನಾವು ಸ್ವಲ್ಪ ಹಿಂದೆ ವಾಟರ್ ಟ್ಯಾಂಕ್ ರಸ್ತೆಯ ಮೂಲಕ ಕಮಲನಗರಕ್ಕೆ ಹೋಗಬೇಕಾಗಿತ್ತು. ನನ್ನ ಎಡಕ್ಕೆ ನಿರ್ಮಲ್ ಸಾರ್ವಜನಿಕ ಸೌಚಾಲಯವಿತ್ತು. ನನ್ನ ಸ್ಕೂಟಿಯಲ್ಲಿ ನಾನು ನನ್ನ ಹಿಂದೆ ನನ್ನ ವಿಡಿಯೊಗ್ರಾಫರ್ ಶಿವಪ್ರಸಾದ್ ಮತ್ತು ಅವರ ಕೈಯಲ್ಲಿ ನನ್ನ ಕ್ಯಾಮೆರ ಬ್ಯಾಗು, ಕಾಲುಗಳ ಮದ್ಯೆ ವಿಡಿಯೋ ಕ್ಯಾಮೆರ, ಸ್ಟ್ಯಾಂಡು. ಇದಿಷ್ಟನ್ನು ಇಟ್ಟುಕೊಂಡು ಯು-ಟರ್ನ್ ತೆಗೆದುಕೊಳ್ಳಲು ಪ್ರಯತ್ನಿಸಿದೆ. ಅರ್ಧ ನಿಮಿಷವಾಯ್ತು, ಸ್ವಲ್ಪ ಮುಂದೆ ಬಲಕ್ಕೆ ಬಂದೆ, ಪಕ್ಕನೇ ಹಿಂದಿನಿಂದ ಜೋರಾಗಿ ಹಾರ್ನ್, ಮತ್ತೆ  ಸ್ವಸ್ಥಾನಕ್ಕೆ ವಾಪಸ್ ನನ್ನ ಸ್ಕೂಟಿ. ಆ ಕಾರಿನವನು ನಮ್ಮನ್ನು ನಮ್ಮ ಪುಟ್ಟ ಸ್ಕೂಟಿಯನ್ನು ನೋಡಿ ಮುಖ ಸಿಂಡರಿಸಿಕೊಂಡು ಹೋದ. ಹಿಂದೆ ತಿರುಗಿ ನೋಡಿದೆವು ಸಾಲು ಸಾಲಾಗಿ ಎರಡು ಕಡೆಯಿಂದ ವಾಹನಗಳು ಬರುತ್ತಲೇ ಇವೆ. ನಾವು ಸ್ವಲ್ಪ ಮುಂದೆ ಬರುವುದು ಹಾಗೆ ಹಿಂದೆ ಹೋಗುವುದು ನಡೆದೇ ಇತ್ತು. ಎರಡೂ ಕಡೆಯಿಂದ ಸುಮಾರು ನಲವತ್ತು ಎಲ್ಲಾ ತರಹದ ವಾಹನಗಳು ಸಾಗಿರಬಹುದು...ಇನ್ನೂ ಕಡಿಮೆಯಾಯ್ತು ಅಂದುಕೊಂಡು ನಾವು ನಿದಾನವಾಗಿ ತಿರುಗಿಸುತ್ತಾ ನಡುರಸ್ತೆಬರುವಷ್ಟರಲ್ಲಿ ಆಗಲೇ ಎರಡೂವರೆ ನಿಮಿಷವಾಗಿತ್ತು. ಮದ್ಯದಲ್ಲಿ ನಿಂತಿರುವ ನಮ್ಮನ್ನು ಬೈಕಗಳಲ್ಲಿನ ಜೋಡಿಗಳು, ಸ್ಕೂಟಿ, ಆಕ್ಟೀವ, ಕೈನಿಟಿಕ್ ಗಳಲ್ಲಿನ ಹುಡುಗಿಯರು, ಹುಡುಗರು, ಮದ್ಯ ವಯಸ್ಕರು, ಮುದುಕ-ಮುದುಕಿಯರು ಎಲ್ಲರೂ ನೋಡಿಕೊಂಡು ಹೋಗುತ್ತಿದರೂ ಅವರ ಮುಖದಲ್ಲಿ ಹೆಚ್ಚು ಭಾವನೆಗಳಿರಲಿಲ್ಲ. ಒಂದು ತಿರಸ್ಕಾರದ ನೋಟವಿತ್ತಷ್ಟೆ. ಬಸವೇಶ್ವರನಗರದಲ್ಲಿ ಹೆಚ್ಚಾಗಿ ಮಾರವಾಡಿಗಳು ಮತ್ತು ಗುಜರಾತಿಗಳು ಹೆಚ್ಚಾಗಿ ಇದ್ದು ಹೀಗೆ ಓಡಾಡುವ ಅವರು ಯಾರಮೇಲು ತಕ್ಷಣಕ್ಕೆ ಕೋಪವನ್ನು ಮುಖದಲ್ಲಿ ತೋರಿಸಿಕೊಳ್ಳುವುದಿಲ್ಲ. ಅದಕ್ಕೆ ಅವರು ನಮ್ಮನ್ನು ನೋಡಿ ನೋಡಿದಾಗ ಅವರ ಮುಖದ ಭಾವನೆ ಹೀಗಿರಬಹುದು ಅಂತ ಅರ್ಥೈಸಿಕೊಂಡೆ. ಎದುರಿಗೆ ಬರುವ ನಾಲ್ಕು ವಾಹನಗಳು ಹೋದ ನಂತರ ನಾನು ನಿದಾನವಾಗಿ ಉಳಿದರ್ಧ ರಸ್ತೆಯಲ್ಲಿ ಯು ಟರ್ನ್ ತೆಗೆದುಕೊಂಡು ಆಕಡೆಗೆ ಹೋಗುವಷ್ಟರಲ್ಲಿ ಮೂರುನಿಮಿಷ ಮುವತ್ತು ನಾಲ್ಕು ಸೆಕೆಂಡುಗಳಾಗಿತ್ತು.

   ಈಗ ಟ್ಯಾನಿ ರಸ್ತೆಗೆ ಬರೋಣ. ಅಲ್ಲಿ ಯು ಟರ್ನ್ ತೆಗೆದುಕೊಳ್ಳಲು ಸಿದ್ದರಾದೆವು. ರಸ್ತೆ ಸ್ವಲ್ಪ ಚಿಕ್ಕದು ಬೇಗ ತೆಗೆದುಕೊಳ್ಳಬಹುದು ಎಂದುಕೊಂಡರೆ ನಾವು ಅಂದುಕೊಂಡಿದ್ದಕ್ಕಿಂತ ಸುಲಭವೇನು ಆಗಲಿಲ್ಲ. ಬದಲಾಗಿ ಹೆಚ್ಚು ಕಷ್ಟವೇ ಆಯ್ತು.  ನಮ್ಮ ಸ್ಕೂಟಿಯನ್ನು ಎಡಬದಿಗೆ ತಂದು ಸಮಯ ನೋಡಿಕೊಂಡೆ  ಬೆಳಿಗ್ಗೆ ಒಂಬತ್ತು ನಲವತ್ತು.  ಸ್ಕೂಟಿ ಆನ್ ಮಾಡಿಕೊಂಡು ಹಿಂದೆ ತಿರುಗಿನೋಡಿದೆ. ಓಹ್! ನೂರಾರು ವಾಹನಗಳು ಅದರಲ್ಲೂ ಬೈಕು ಸ್ಕೂಟರುಗಳು...ಸಾಲು ಸಾಲಾಗಿ ಬರುತ್ತಿವೆ. ಅವೆಲ್ಲ ಸಾಗುವಷ್ಟರಲ್ಲಿ ಮತ್ತೆ ಸಮಯ ಒಂಬತ್ತು ನಲವತ್ತೆರಡಾಗಿತ್ತು. ನಾವು ಸ್ವಲ್ಪ ಬಲಕ್ಕೆ ತಿರುಗಿಸುವುದು ಹಿಂದೆ ಬರುವವರು  ಜೋರಾಗಿ ಹಾರ್ನ್ ಮಾಡಿ ನಮ್ಮನ್ನು ಬೈಯ್ದುಕೊಂಡು ಹೋಗುವುದು ನಡೆದಿತ್ತು. ಹಾಗೂ ಹೀಗು ಮದ್ಯ ರಸ್ತೆಗೆ ಬರುವಷ್ಟರಲ್ಲಿ ಮೂರು ನಿಮಿಷ ದಾಟಿತ್ತು. ಅಷ್ಟರಲ್ಲಿ ಹತ್ತಾರು ಜನರು ಬೈದುಕೊಂಡು ಸಾಗಿದ ಹಿಂದಿ, ಉರ್ದು ಭಾಷೆ ಮಾತ್ರ ನಮ್ಮ ಕಿವಿಗೆ ಬಿದ್ದಿತ್ತು. ಮತ್ತೆ ನಿದಾನವಾಗಿ ಅತ್ತ ಇತ್ತ ನೋಡಿ ಎದುರು ಬರುವ ವಾಹನಗಳನ್ನು ಕಡಿಮೆಯಾಗುತ್ತಿದ್ದಂತೆ ಆ ಕಡೆ ತಿರುಗಿಕೊಂಡು ಸಮಯವನ್ನು ನೋಡಿದರೆ...ಒಂಬತ್ತು ನಲವತ್ತನಾಲ್ಕು ನಿಮಿಷ ಇಪ್ಪತ್ತು ಸೆಕೆಂಡುಗಳಾಗಿದ್ದವು. ಈ ನಡುವೆ ಎದುರಿನಿಂದ ಬಂದವನೊಬ್ಬ "ಹೇ ಎಲ್. ಎಲ್ ಘರ್ ಮೇ ಬೋಲಾಹೇ...ಅಂದಿದ್ದು ಮಾತ್ರ ಜೋರಾಗಿ ಕೇಳಿಸಿತ್ತು. ದಾಟಿದ ನಂತರ ಶಿವಪ್ರಸಾದ್ ಕೇಳಿದರು " ಎಲ್ ಎಲ್ ಅಂದರೇನು" ಅಂತ ಲರ್ನಿಂಗ್ ಲೈಸೆನ್ಸ್ ಅಂತ ಹೇಳಿ ಸುಮ್ಮನೆ ನಕ್ಕು ಸಮಯವನ್ನು ಬರೆದಿಟ್ಟುಕೊಂಡೆ. ಹೀಗೆ ಪ್ರತಿ ರಸ್ತೆಯಲ್ಲಿಯೂ ಇಂಥ ಸರ್ವೆ ಮಾಡುವಾಗ ನಮಗಾದ ಅನುಭವ ಒಂದಕ್ಕಿಂತ ಒಂದು ವಿಭಿನ್ನವಾದರೂ ಯು ಟರ್ನ್ ಸಮಯವಂತೂ ಮೂರರಿಂದ ಐದು ನಿಮಿಷಗಳವರೆಗೆ ಇರುತ್ತಿತ್ತು.

                 ಸಂಪಿಗೆ ರಸ್ತೆ....


  ಓಕಲಿಪುರಂನಿಂದ ಶ್ರೀರಾಮಪುರದವರೆಗೆ ಸಾಗುವ ಕ್ರಾಂತಿಕವಿ ಸರ್ವಜ್ಞ ರಸ್ತೆಯಲ್ಲಿ ಎರಡುವರೆ ನಿಮಿಷ,, ಅದಕ್ಕೆ ಸಮನಾಂತರವಾಗಿರುವ ಮು.ಗೋವಿಂದರಾಜು ರಸ್ತೆಯಲ್ಲಿ ಎರಡು ನಿಮಿಷ, ಓಕಲಿಪುರಂನಿಂದ ರಾಜಾಜಿನಗರದ ಪ್ರವೇಶದ್ವಾರದವರೆಗೆ ಇರುವ ವಾಟಾಳ್ ನಾಗರಾಜ್ ರಸ್ತೆಯಲ್ಲಿ ಐದು ನಿಮಿಷ,  ಮಲ್ಲೇಶ್ವರಂನ ತೆಂಗಿನ ಮರದ ರಸ್ತೆಯಲ್ಲಿ ಎರಡುಕಾಲು ನಿಮಿಷ, ದತ್ತಾತ್ರಯ ರಸ್ತೆ, ಬಸವನಗುಡಿ ರಸ್ತೆಯಲ್ಲಿ ಅಥವ ಪಂಡಿತ್ ದೀನ್ ದಯಾಳ್ ರಸ್ತೆಯಲ್ಲಿ ನಾಲ್ಕು ನಿಮಿಷ, ಶಿವಾಜಿನಗರದ ಬಸ್ ನಿಲ್ದಾಣದ ಎದುರಿನ ದ್ವಿಮುಖರಸ್ತೆಯಲ್ಲಿ ಮೂರು ನಿಮಿಷ, ಸಜ್ಜನ್ ರಾವ್ ರಸ್ತೆಯಲ್ಲಿ ಮೂರುನಿಮಿಷ, ಜಯನಗರದ ಅಶೋಕಪಿಲ್ಲರ್ ರಸ್ತೆಯಲ್ಲಿ ಮೂರುವರೆ ನಿಮಿಷ,  ಸುಂಕದ ಕಟ್ಟೆಯಿಂದ ಅಂಜನಪುರದವರೆಗೆ ಸಾಗುವ ರಸ್ತೆಯಲ್ಲಿ ಎರಡೂವರೆ ನಿಮಿಷ, ಪೀಣ್ಯದ ಎಂಟನೆ ಮೈಲಿಯಿಂದ ಹೆಸರಗಟ್ಟದವರೆಗೆ ಸಾಗುವ ರಸ್ತೆಯಲ್ಲಿ ಮೂರು ನಿಮಿಷ, ಜಾಲಹಳ್ಳಿ ಸರ್ಕಲ್ಲಿನಿಂದ ಪೀಣ್ಯ ಎರಡನೆ ಹಂತಕ್ಕೆ ಸಾಗುವ ರಸ್ತೆಯಲ್ಲಿ ಮೂರುವರೆ ನಿಮಿಷ, ಮತ್ತೆಅದೇ ಜಾಲಹಳ್ಳಿಯಿಂದ ಎಚ್ ಎಮ್ ಟಿ ಕಡೆಗೆ ಸಾಗುವ ರಸ್ತೆಯಲ್ಲಿ ಎರಡುವರೆ ನಿಮಿಷ, ಬಿ.ಎಲ್ ನಿಂದ ವಿದ್ಯಾರಣ್ಯಪುರಂ ಕಡೆಗೆ ಸಾಗುವ ರಸ್ತೆಯಲ್ಲಿ ಎರಡೂವರೆ ನಿಮಿಷ, ಯಶವಂತಪುರದ ತ್ರೀವೇಣಿ ರಸ್ತೆಯಲ್ಲಿ ಎರಡು ನಿಮಿಷ, ವಿಲ್ಸನ್ ಗಾರ್ಡನ್ ಮುಖ್ಯರಸ್ತೆಯಲ್ಲಿ ಮೂರುಮುಕ್ಕಾಲು ನಿಮಿಷ, ಹೆಣ್ಣೂರು ರಸ್ತೆಯಲ್ಲಿ ಮೂರು ನಿಮಿಷ, ರಾಜಾಜಿನಗರ ಮೊದಲ ಹಂತದ ರಸ್ತೆಯಲ್ಲಿ ಮೂರು ನಿಮಿಷ, ರಾಜಾಜಿನಗರದ ಬಾಷ್ಯಂ ಸರ್ಕಲ್ ವರೆಗಿನ ಮುಖ್ಯ ರಸ್ತೆಯಲ್ಲಿ ಎರಡುವರೆ ನಿಮಿಷ, ಕುರುಬರ ಹಳ್ಳಿಯಿಂದ ಎರಡನೇ ಹಂತದ ರಿಂಗ್ ರೋಡ್ ತಲುಪುವ ನಂದಿನ ಬಡಾವಣೆಯ ಮುಖ್ಯರಸ್ತೆಯಲ್ಲಿ ಎರಡುವರೆ ನಿಮಿಷ, ಮಹಲಕ್ಷ್ಮಿ ಲೇಹೌಟಿನ ಮುಖ್ಯರಸ್ತೆಯಲ್ಲಿ ಮೂರು ನಿಮಿಷ,  ಡಿವಿಜಿ ರಸ್ತೆಯಲ್ಲಿ ಮೂರು ನಿಮಿಷ, ಗಾಂದಿಭಜಾರ್ ರಸ್ತೆಯಲ್ಲಿ ಎರಡೂವರೆ ನಿಮಿಷ, ಹಾವಿನಂತ ನಾಗರಭಾವಿ ರಸ್ತೆಯಲ್ಲಿ ಎರಡು ನಿಮಿಷ, ಲಗ್ಗೆರೆ ಕ್ರಾಸಿನ ರಸ್ತೆಯಲ್ಲಿ ಎರಡು ನಿಮಿಷ, ಟಿವಿಎಸ್ ಕ್ರಾಸ್ ರಸ್ತೆಯಲ್ಲಿ ಎರಡುಮುಕ್ಕಾಲು ನಿಮಿಷ, ಮಲ್ಲೇಶ್ವರದಿಂದ ಯಶವಂತಪುರದವರೆಗಿನ ೯೦ ಬಸ್ ಸಂಖ್ಯೆಯ ರಸ್ತೆಯಲ್ಲಿ ಮೂರು ನಿಮಿಷ, ಮಲ್ಲೇಶ್ವರ ರಾಜಾಜಿನಗರ ಸಂಪರ್ಕಿಸುವ ೧೭ನೇ ಕ್ರ್‍ಆಸ್ ರಸ್ತೆಯಲ್ಲಿ ಮೂರುವರೆ ನಿಮಿಷ, ವೈಯಾಲಿಕಾವಲ್ ಮುಖ್ಯರಸ್ತೆಯಲ್ಲಿ ಮೂರು ನಿಮಿಷ, ಗಂಗೇನಹಳ್ಳಿ ಮುಖ್ಯ ರಸ್ತೆಯಲ್ಲಿ ಮೂರುವರೆ ನಿಮಿಷ, ಸಿ.ಎಂ.ಎಚ್ ರಸ್ತೆಯಲ್ಲಿ ಮೂರುವರೆ ನಿಮಿಷ, ಯಡಿಯೂರ್ ಕೆರೆ ರಸ್ತೆಯಲ್ಲಿ ಎರಡುಮುಕ್ಕಾಲು ನಿಮಿಷ, ಹಾವಿನಂತೆ ಸಾಗುವ ವಿದ್ಯಾಪೀಠ ರಸ್ತೆಯಲ್ಲಿ ಮೂರು ನಿಮಿಷ, ಎನ್.ಅರ್ ಕಾಲೋನಿ ರಸ್ತೆಯಲ್ಲಿ ಎರಡುಕಾಲು ನಿಮಿಷ, ಮೈಸೂರ್ ರಸ್ತೆಯನ್ನು ಸಂಪರ್ಕಿಸುವ ಚಾಮರಾಜಪೇಟೆ ಮುಖ್ಯ ರಸ್ತೆಯಲ್ಲಿ ನಾಲ್ಕು ನಿಮಿಷ, ಚಾಮರಾಜಪೇಟೆಯಿಂದ ವಿಜಯನಗರ ತಲುಪುವ ಆ.ನ. ಕೃಷ್ಣರಾಯ ರಸ್ತೆಯಲ್ಲಿ ಮೂರುವರೆ ನಿಮಿಷ, ಶ್ರೀರಾಮಪುರಂನಿಂದ ರೈಲ್ವೆ ಹಳಿಯುದ್ದಕ್ಕೂ ಸಾಗುವ ರೈಲ್ವೇ  ಪ್ಯಾರಲಲ್ ರಸ್ತೆಯಲ್ಲಿ ಎರಡು ನಿಮಿಷ,  ಗಾಯತ್ರಿನಗರದ ಮುಖ್ಯರಸ್ತೆಯಲ್ಲಿ ಎರಡು ನಿಮಿಷ, ವಿ.ವಿ.ಪುರಂನ ಶಂಕರಮಠ ರಸ್ತೆಯಲ್ಲಿ ಎರಡುವರೆ ನಿಮಿಷ, ನ್ಯಾಷನಲ್ ಕಾಲೇಜಿನಿಂದ ಲಾಲ್‍ಬಾಗ್ ತಲುಪುವ ರಸ್ತೆಯಲ್ಲಿ ಮೂರು ನಿಮಿಷ, ಕನ್ನಡ ಸಾಹಿತ್ಯ ಪರಿಷತ್ ಇರುವ ಪಂಪಮಹಾಕವಿ ರಸ್ತೆಯಲ್ಲಿ ಒಂದುಮುಕ್ಕಾಲು ನಿಮಿಷ, ಸಾಗರ್ ಟಾಕೀಸ್‍ವರೆಗಿನ ಕಾಳಿದಾಸ ರಸ್ತೆಯಲ್ಲಿ ಎರಡುಕಾಲು ನಿಮಿಷ, ಶೇಷಾದ್ರಿಪುರಂನಿಂದ ಆನಂದರಾವ್ ಸರ್ಕಲ್ ವರೆಗಿನ ಸುಭೇಧಾರ್ ಚತ್ರಂ ರಸ್ತೆಯಲ್ಲಿ ಮೂರು ನಿಮಿಷ,.....ಹೀಗೆ ಇನ್ನು ಹತ್ತಾರು ಇದೆ...ನಿಮಗೆ ಬೇಸರವಾಗಬಹುದೆಂದು ಇಷ್ಟಕ್ಕೆ ನಿಲ್ಲಿಸುತ್ತೇನೆ. 

    ಎಲ್ಲಾ ಓಕೆ. ಆದ್ರೆ ಇದರಿಂದ ಏನು ಉಪಯೋಗ ಅಂತ ನಿಮಗೆ ಅನ್ನಿಸಬಹುದು. ಇದೇ ಪ್ರಶ್ನೆಯನ್ನು ಶಿವಪ್ರಸಾದ್ ಕೂಡ ಪ್ರಾರಂಭದಲ್ಲಿ ಕೇಳಿದ್ದರು. ನಿಜ ಹೇಳುತ್ತೇನೆ ಖಂಡಿತ ಇದೆಲ್ಲವನ್ನು ಮಾಡುವುದರಿಂದ ನಯಾಪೈಸೆ ಪ್ರಯೋಜನವಿಲ್ಲ. ಸುಮ್ಮನೇ ಕುತೂಹಲಕ್ಕೆ ಏನಾದರೂ ಮಾಡೋಣ ಅಂತ ಅಂದುಕೊಂಡೇ ಇದೆಲ್ಲವನ್ನು ನಾನು ಪ್ರಾರಂಭಿಸಿದ್ದು. ಆದ್ರೆ ಯಾವಾಗ "ಯು" ತಿರುಗುವಿಕೆಯಲ್ಲಿ ಸಮಯದ ಲೆಕ್ಕಾಚಾರ ಬಂತೋ ಅಲ್ಲಿಂದ ಈ ವಿಚಾರ ಅನೇಕ ಯು ತಿರುವುಗಳನ್ನು ಪಡೆದುಕೊಂಡಿತ್ತು. ಮೇಲೆ ತಿಳಿಸಿದಂತೆ ದೊಡ್ಡ ರಸ್ತೆಗಳಲ್ಲಿ ಸುಮಾರು ನಾಲ್ಕರಿಂದ ಐದು ನಿಮಿಷ, ಮಧ್ಯಮ ಹಂತದ ರಸ್ತೆಅಳಲ್ಲಿ ಮೂರರಿಂದ ನಾಲ್ಕು ನಿಮಿಷ, ಸಣ್ಣರಸ್ತೆಗಳಲ್ಲಿ ಎರಡು-ಎರಡೂವರೆ ನಿಮಿಷ ಅಂತ ಸರಾಸರಿ ಲೆಕ್ಕವನ್ನು ತೆಗೆದುಕೊಂಡರೂ ನಾವು ಆಷ್ಟು ಹೊತ್ತು ಏನುಮಾಡುತ್ತಿರುತ್ತೇವೆಂದರೆ ನಮ್ಮ ದ್ವಿಚಕ್ರವಾಹನವನ್ನು ಆನ್ ಮಾಡಿಕೊಂಡು ಎಕ್ಸಲೇಟರನ್ನು ಡ್ರಿನ್...ಡ್ರಿನ್...ಡ್ರಿರರರನ್...ಡ್ರಿನ್...ಅಂತ ಹಿಂದೆ ಮುಂದೆ ತಿರುಗಿಸುತ್ತಿರುತ್ತೇವೆ ನಡುವೆ ಬ್ರೇಕನ್ನು ಹಿಡಿಯುತ್ತಿರುತ್ತೇವೆ. ಹೀಗೆ ಮಾಡುವುದರಿಂದ ಎಷ್ಟು ಪೆಟ್ರೋಲ್ ಖರ್ಚಾಗಬಹುದು ಅಂತ ಲೆಕ್ಕ ನೋಡಿದಾಗ ನನ್ನ ಸ್ಕೂಟಿಯಲ್ಲಿ ನಿಮಿಷಕ್ಕೆ ಇಪ್ಪತ್ತು ಪೈಸೆ ಪೆಟ್ರೋಲ್ ಖರ್ಚಾಯಿತು. ನಾಲ್ಕು ನಿಮಿಷಕ್ಕೆ ಎಂಬತ್ತು ಪೈಸೆಯಾಯ್ತು. ಪೆಟೋಲ್ ಲೆಕ್ಕಚಾರವನ್ನು ನೋಡಿದಾಗ ನಾಲ್ಕು ನಿಮಿಷಕ್ಕೆ ಹದಿನೈದು ಎಂ ಎಲ್ ಪೆಟ್ರೋಲ್ ಖರ್ಚಾಗಿತ್ತು. ಹೀಗೆ ಒಂದು ದಿನದಲ್ಲಿ ಒಬ್ಬ ವ್ಯಕ್ತಿ ತನ್ನ ದ್ವಿಚಕ್ರ ವಾಹನದಲ್ಲಿ ಒಂದಲ್ಲ ಒಂದು ಕಡೆ ಹೀಗೆ ಯು ಟರ್ನ್ ತೆಗೆದುಕೊಳ್ಳುತ್ತಾನೆ. ತಡೆರಹಿತ ವಾಹನಗಳಿಂದಾಗಿ ಹೀಗೆ ಇಪ್ಪತ್ತು-ಮುವತ್ತು-ನಲವತ್ತು ಎಂಎಲ್ ಕೇವಲ ಇದಕ್ಕಾಗಿ ಬಳಕೆಯಾದಾಗ ನಮ್ಮ ಬೆಂಗಳೂರಿನಲ್ಲಿರುವ ಇಪ್ಪತ್ತೈದು ಲಕ್ಷ ದ್ವಿಚಕ್ರ ವಾಹನಗಳಲ್ಲಿ ಕಡಿಮೆಯೆಂದರೂ ದಿನಕ್ಕೆ ಹದಿನೈದು ಲಕ್ಷ ವಾಹನಗಳು ರಸ್ತೆಗಿಳಿಯುತ್ತವೆ. ಇವುಗಳಲ್ಲಿ ಕನಿಷ್ಟವೆಂದರೂ ಹತ್ತನೆ ಒಂದು ಭಾಗವಾದ ಒಂದುವರೆಲಕ್ಷ ವಾಹನಗಳಾದರೂ ಒಮ್ಮೆಯಾದರೂ "ಯು" ತಿರುಗುತ್ತವೆ. ಒಂದು ದ್ವಿಚಕ್ರವಾಹನಕ್ಕೆ ಇಪ್ಪತ್ತು ಎಂ ಎಲ್ ಪೆಟ್ರೋಲ್ ಲೆಕ್ಕ ತೆಗೆದುಕೊಂಡರೂ ಒಂದುವರೆಲಕ್ಷ ವಾಹನಗಳಿಗೆ ದಿನಕ್ಕೆ ಬೆಂಗಳೂರಿನಲ್ಲಿ ಮೂರು ಸಾವಿರ ಲೀಟರ್ ಪೆಟ್ರೋಲನ್ನು ಈ ಒಂದು "ಯು ಟರ್ನ್" ನುಂಗಿಹಾಕುತ್ತದೆ. ಮತ್ತೆ ಸಮಯದ ಲೆಕ್ಕವನ್ನು ಹಾಕಿದಾಗ ಒಬ್ಬ ದ್ವಿಚಕ್ರಧಾರಿ ಸರಾಸರಿ ಮೂರು ನಿಮಿಷ ತೆಗೆದುಕೊಂಡರೂ ಇದಕ್ಕಾಗಿ ಬೆಂಗಳೂರಿನ ನಾಲ್ಕುವರೆ ಸಾವಿರ ಗಂಟೆಗಳು ಒಂದು ದಿನಕ್ಕೆ ವ್ಯಯವಾಗುತ್ತವೆ. ಒಬ್ಬನ ಮೂರು ನಿಮಿಷ ಚಿಕ್ಕದಾಗಿ ಕಂಡರೂ ವಿಶ್ವದಲ್ಲಿಯೇ ವೇಗವಾಗಿ ಬೆಳೆಯುತ್ತಿರುವ ಬೆಂಗಳೂರಿನ ನಾಲ್ಕುವರೆ ಸಾವಿರ ಗಂಟೆಗಳು ಹೀಗೆ ಅನವಶ್ಯಕವಾಗಿ ಖರ್ಚಾಗುತ್ತಿದೆಯಲ್ಲ! ಒಂದು "ಯು ಟರ್ನ್ ಗಾಗಿ ವ್ಯಯಿಸುವ ಇಷ್ಟು ಸಮಯವನ್ನು ಮುವತ್ತು ನಲವತ್ತು ಸೆಕೆಂಡಿಗೆ ಇಳಿಸಿಕೊಂಡು ಪೆಟ್ರೋಲ್ ಮತ್ತು ಸಮಯದ ವ್ಯಯವನ್ನು ಉಳಿಸಿಕೊಳ್ಳಬಹುದಲ್ವ...ಅಂತ ಒಮ್ಮೆ ಅಂದುಕೊಂಡೆ. ವಾಹನಗಳು ಕಡಿಮೆಯಾದರೆ ಮಾತ್ರ ಇದು ಸಾಧ್ಯ ಅನ್ನಿಸಿತ್ತು. ಆದ್ರೆ ನಮ್ಮ ಬೆಂಗಳೂರಿನಂತ ಮೆಟ್ರೋ ಪಾಲಿಟನ್ ಸಿಟಿಯಲ್ಲಿ ವಾಹನಗಳು ಹೆಚ್ಚಾಗುತ್ತಲೇ ಇವೆ. ಪ್ರತಿಯೊಂದು ರಸ್ತೆಯಲ್ಲಿಯೂ ನೂರಾರು, ಸಾವಿರಾರು ವಾಹನಗಳು ಚಲಿಸುತ್ತಲೇ ಇರುತ್ತವೆ. ಹೀಗೆ ಚಲಿಸುವುದರ ನಡುವೆ ನಾವು ಒಂದು ಯು ಟರ್ನ್ ತೆಗೆದುಕೊಳ್ಳಬೇಕೆಂದರೆ ಕಡಿಮೆ ಸಮಯದಲ್ಲಿ ಹೇಗೆ ಸಾಧ್ಯ? ಇದು ದ್ವಿಮುಖ ರಸ್ತೆಗಳಲ್ಲಿ ಕೇವಲ ಒಂದು ಯು ತಿರುಗುವಿಕೆಯಲ್ಲಿ ಸಿಕ್ಕ ಲೆಕ್ಕಾಚಾರ.


   ಇನ್ನು ದ್ವಿಮುಖ ಸಂಚಾರವಿದ್ದರೂ ನಡುವೆ ಡಿವೈಡರುಗಳನ್ನು ಹೊಂದಿರುವ ರಸ್ತೆಗಳನ್ನು ಒಮ್ಮೆ ಗಮನಿಸೋಣ. ಅವುಗಳಲ್ಲಿ ಕೆಲವು ಇವು.  ರೇಸ್ ಕೋರ್ಸ್ ರಸ್ತೆ, ಕ್ವೀನ್ಸ್ ರಸ್ತೆ, ಅಂಬೇಡ್ಕರ್ ವೀದಿ, ಕಸ್ತೂರಿ ಬಾ ರಸ್ತೆ, ಬನ್ನೇರುಘಟ್ಟ ರಸ್ತೆ, ನಿಮ್ಯಾನ್ಸ್ ರಸ್ತೆ, ಕೋರಮಂಗಲದ ಮುಖ್ಯರಸ್ತೆ, ಅರಮನೆ ರಸ್ತೆ, ಅಂಬೇಡ್ಕರ್ ಭವನದ ಮುಂದಿನ ರಸ್ತೆ, ಸೌತ್ ಸರ್ಕಲ್ಲಿನ ಕೆ.ಅರ್ ರಸ್ತೆ, ಲಾಲ್ ಭಾಗ್ ರಸ್ತೆ, ಸೌಥ್ ಎಂಡ್ ಸರ್ಕಲ್ಲಿನಿಂದ ಸುರಾನ ಕಾಲೇಜಿನ ಕಡೆಗೆ ಹೋಗುವ ರಸ್ತೆ, ಜಯನಗರ ಕಾಂಪ್ಲೆಕ್ಸ್ ನಿಂದ ಸಾಗುವ ಅರವಿಂದೋ ಮಾರ್ಗ, ಸಂಜಯಗಾಂದಿ ಅಸ್ಪತ್ರೆಕಡೆಗೆ ಸಾಗುವ ಮತ್ತೊಂದು ರಸ್ತೆ, ಅಲಸೂರು ಕೆರೆಯಿಂದ ಕೆ ಅರ್ ಪುರಂ ಕಡೆಗೆ ಸಾಗುವ ರಸ್ತೆ, ಗೊರಗೊಂಟೆ ಪಾಳ್ಯದಿಂದ ನಾಗರಭಾವಿಯವರೆಗೆ ಸಾಗುವ ರಿಂಗ್ ರಸ್ತೆ, ಬೆಂಗಳೂರಿನ ಸುತ್ತ ಇರುವ ಮೊದಲ ಹಂತದ ರಿಂಗ್ ರೋಡ್ ಆದ ವೆಸ್ಟ್ ಅಪ್ ಕಾರ್ಡ್ ರೋಡ್, ಕೆಂಗೇರಿ ತ್ಪಲುಪುವ ರಸ್ತೆ, ಮೈಸೂರು ರಸ್ತೆಯಿಂದ ದೇವೇಗೌಡ ಪೆಟೋಲ್ ಬಂಕ್, ಅಲ್ಲಿಂದ ಮುಂದೆ ಜೆ.ಪಿ ನಗರದವರೆಗೆ ಸಾಗುವ ರಸ್ತೆ, ಎರಡನೇ ಹಂತದ ರಿಂಗ್ ರಸ್ತೆಯಲ್ಲಿ ಹೆಬ್ಬಾಳದಿಂದ ತುಮಕೂರು ರಸ್ತೆ, ಈ ಕಡೆಗೆ ನಾಗವಾರ, ಬಾಣಸವಾಡಿ, ಕೆ.ಅರ್ ಪುರಂ, ಹೊಸೂರು ರಸ್ತೆ, ಹೌಗ್ರೌಂಡ್ಸ್ ನಿಂದ ಯಲಹಂಕ, ದೇವನಹಳ್ಳಿ ವಿಮಾನ ನಿಲ್ದಾಣದ ವರೆಗೆ ಸಾಗುವ ವಿಮಾನ ನಿಲ್ದಾಣ ರಸ್ತೆ, ಅರಮನೆ ಮೈದಾನದ ಮುಂಭಾಗದ ರಸ್ತೆ, ಹಿಂಭಾಗದ ಜಯಮಹಲ್ ರಸ್ತೆ, ರಾಜಾಜಿನಗರದ ರಾಜ್‍ಕುಮಾರ್ ರಸ್ತೆ, ಮಲ್ಲೇಶ್ವರಂನಿಂದ ಕುರುಬರಹಳ್ಳಿಯವರೆಗಿನ ಮಹಾಕವಿ ಕುವೆಂಪು ರಸ್ತೆ,  ಪ್ರಸನ್ನ ಚಿತ್ರಮಂದಿರದಿಂದ ಕೊಟ್ಟಿಗೆ ಪಾಳ್ಯದವರೆಗಿನ ರಸ್ತೆ, ವಿಜಯನಗರ ಮುಖ್ಯರಸ್ತೆ, ಕಂಟೀರವ ಸ್ಟುಡಿಯೋ ರಸ್ತೆ, ಸ್ಯಾಂಕ್ ಟ್ಯಾಂಕ್ ರಸ್ತೆ, ಅರ್‍.ಟಿ.ನಗರ ಮುಖ್ಯರಸ್ತೆ, ಕಾವಲ್ ಬೈರಸಂದ್ರ ಮುಖ್ಯರಸ್ತೆ, ಇಂದಿರನಗರ ಮುಖ್ಯರಸ್ತೆ, ಓಕಲಿಪುರಂನಿಂದ ರಾಮಮಂದಿರವರೆಗಿನ ರಸ್ತೆ, ಆರ್.ವಿ. ರಸ್ತೆ,..............ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ.
 ನೈಸ್ ರಸ್ತೆಯಲ್ಲಿ "U Turn" ಸಾಧ್ಯವೆ?

 ಈ ರಸ್ತೆಗಳಲ್ಲಿ ದ್ವಿಮುಖ ರಸ್ತೆಯಂತೆ ಯು ಟರ್ನ್ ತೆಗೆದುಕೊಳ್ಳಲು ಸಾಧ್ಯವಿಲ್ಲ. ಆದ್ರೆ ದಾರಿತಪ್ಪಿದರೆ ಅಥವ ಮುಂದೆ ಹೋದರೆ, ನಾವು ತಲುಪಬೇಕಾದ ಸ್ಥಳ ನಾವು ಚಲಿಸುತ್ತಿರುವ ರಸ್ತೆಯ ಬಲಭಾಗದಲ್ಲಿದ್ದರೇ ಅಲ್ಲಿಗೆ ತಲುಪಲೇಬೇಕಲ್ಲ!  ಇಂಥ ರಸ್ತೆಯಲ್ಲಿ ಏನಾಗಬಹುದು!  ಡಿವೈಡರುಗಳಿರುವುದರಿಂದ ಮುಂದೆ ಒಂದು ಪರ್ಲಾಂಗು, ಕಾಲು ಕಿಲೋಮೀಟರ್, ಅರ್ಧ ಕಿಲೋಮೀಟರ್, ಅಥವ ಒಂದು, ಎರಡು ಮೂರು ಕಿಲೋಮೀಟರ್ ದೂರದವರೆಗೆ ಸಾಗಿ ಅಲ್ಲಿ "ಯು" ಮತ್ತೆ ನಾವು ಕ್ರಮಿಸಿದ ಅಷ್ಟೆ ದೂರಕ್ಕೆ ಹಿಂದಕ್ಕೆ ಬರಬೇಕಾಗುತ್ತದೆ. ದ್ವಿಮುಖರಸ್ತೆಗೆ ಹೋಲಿಸಿಕೊಂಡರೆ ಇಲ್ಲಿ ಯು ಟರ್ನ್ ತೆಗೆದುಕೊಳ್ಳುವವರು ತುಂಬಾ ಕಡಿಮೆ. ಹತ್ತನೆ ಒಂದು ಭಾಗವಿರಬಹುದು.  ಆದ್ರೆ ಈ ಹತ್ತನೇ ಒಂದು ಭಾಗವೇ ದ್ವಿಮುಖ ಸಂಚಾರ ರಸ್ತೆಗಳಿಗಿಂತ ಹೆಚ್ಚು ಸಮಯ ಮತ್ತು ಪೆಟ್ರೋಲ್ ಖರ್ಚಾಗುತ್ತದೆ. ಒಂದು ಉದಾಹರಣೆಯನ್ನು ಗಮನಿಸಿದರೆ, ನಂದಿನಿ ಲೇಹೌಟಿನ ರಸ್ತೆಯ ಮೂಲಕ ಸಾಗಿ ರಿಂಗ್ ರೋಡ್ ತಲುಪಿ ಗೊರಗೊಂಟೆ ಪಾಳ್ಯ ತಲುಪಬೇಕಾಗಿರುತ್ತದೆ. ನೀವು ಮರೆತು ಒಮ್ಮೆ ಎಡಕ್ಕೆ ತಿರುಗಿ ರಿಂಗ್ ರಸ್ತೆಗೆ ಇಳಿದುಬಿಟ್ಟರೆ ಮುಗಿಯಿತು. ಎಲ್ಲಿಯೂ ನೀವು ಹಿಂದಕ್ಕೆ ಬರುವಂತಿಲ್ಲ. ಸುಮ್ಮನೇ ಸುಮಾರು ಎರಡು ಕಿಲೋಮೀಟರ್ ದೂರದಲ್ಲಿರುವ ಸುಮ್ಮನಳ್ಳಿ ಸರ್ಕಲ್ ತಲುಪಿ ಅಲ್ಲಿ ಒಂದು ಯು ಟರ್ನ್ ತೆಗೆದುಕೊಂಡು ಮತ್ತೆ ಅಲ್ಲಿಂದ ಯಶವಂತಪುರ ತಲುಪಬೇಕಾಗುತ್ತದೆ. ಐದುಕಿಲೋಮೀಟರ್ ದೂರ ಮತ್ತು ಹತ್ತು ನಿಮಿಷದ ಲೆಕ್ಕಚಾರವಾಯ್ತು. ಡಿವೈಡರುಗಳ ನಡುವಿನ ಸ್ಥಳ ಕಡಿಮೆ ಅಂತರವಿದ್ದಲ್ಲಿ ಸಮಯ ಮತ್ತು ಪೆಟ್ರೋಲ್ ಖರ್ಚು ಕಡಿಮೆಯಾಗಬಹುದು. ಮೇಲೆ ತಿಳಿಸಿದ ಎಲ್ಲಾ ಡಿವೈಡರು ಹೊಂದಿದ ಇಂಥ ರಸ್ತೆಗಳಲ್ಲಿ ನಿಮ್ಮದೇ ಲೆಕ್ಕಚಾರವನ್ನು ಸಮಯ ಮತ್ತು ಪೆಟ್ರೋಲ್ ಲೆಕ್ಕಚಾರವನ್ನು ಹಾಕಿಕೊಳ್ಳಬಹುದು.  ಹಾಗೆ ನಾನೊಮ್ಮೆ ಲೆಕ್ಕಮಾಡಿದಾಗ ಸಮಯದ ವಿಚಾರದಲ್ಲಿ ಸ್ವಲ್ಪ ಹೋಲಿಕೆ ಬಂದರೂ ಪೆಟ್ರೋಲ್ ಖರ್ಚಿನ ವಿಚಾರದಲ್ಲಿ ಹೆಚ್ಚೇ ಆಗಿತ್ತು.

     ಕೊನೆಯದಾಗಿ  ಏಕಮುಖ ರಸ್ತೆಗಳ ಕತೆಯೇನೆಂದು ನೋಡಿಬಿಡೋಣ. ಅವುಗಳಲ್ಲಿ ಕೆಲವು ಹೀಗಿವೆ: ಸಂಪಿಗೆ ರಸ್ತೆ, ಮಾರ್ಗೋಸ ರಸ್ತೆ, ಗುಬ್ಬಿ ವೀರಣ್ಣ ರಸ್ತೆ, ಕೆಂಪೆಗೌಡ ರಸ್ತೆ,  ಸಾಗರ್ ಟಾಕೀಸಿನ ರಸ್ತೆ, ಗಾಂಧಿನಗರದ ಐದನೇ ಮುಖ್ಯರಸ್ತೆ ರಸ್ತೆ, ಬಸ್ ನಿಲ್ದಾಣದ ಎದುರಿನ ಸಂಗಂ ಟಾಕೀಸ್ ಮುಂದಿನ ರಸ್ತೆ, ಇನ್‍ಫೆಂಟ್ರಿ ರಸ್ತೆ, ರಾಜಭವನ್ ರಸ್ತೆ, ಬ್ರಿಗೇಡ್ ರಸ್ತೆ, ವಿಟ್ಟಲ್ ಮಲ್ಯ ರಸ್ತೆ, ಕಾವೇರಿ ಭವನ ಮುಂದಿನ ಕೆಂಪೇಗೌಡ ರಸ್ತೆ, ನೃಪತುಂಗ ರಸ್ತೆ, ಮಹಾರಾಣಿ ಕಾಲೇಜು ರಸ್ತೆ, ಮಲ್ಲೇಶ್ವರಂನ ಎಂಟನೇ ಕ್ರಾಸ್, ಶೇಷಾದ್ರಿಪುರಂ ಲಿಂಕ್ ರಸ್ತೆ, ಗೂಡ್ಸ್ ಸೆಡ್‍ನ ಎರಡೂ ರಸ್ತೆಗಳು,  ಕಂಟೋನ್ಮೆಂಟಿನ ಎರಡೂ ಬದಿಯ ಏಕಮುಖ ರಸ್ತೆಗಳು, ಯಶವಂತಪುರದಿಂದ ಪೀಣ್ಯ, ಬೆಂಗಳೂರು ಪ್ರದರ್ಶನ ಕೇಂದ್ರದವರೆಗಿನ ಮುಖ್ಯರಸ್ತೆ, ಕಮರ್ಸಿಯಲ್ ರಸ್ತೆ, ಅವಿನ್ಯು ರಸ್ತೆ, ರೆಸಿಡೆನ್ಸಿ ರಸ್ತೆ, ಸೆಂಟ್ ಮಾರ್ಕ್ ರಸ್ತೆ, ಲೆವೆಲ್ಲೆ ರಸ್ತೆ, ರಿಚ್‍ಮಂಡ್ ರಸ್ತೆ, ಜೆ ಸಿ ರಸ್ತೆ, ಶಿವನಂದ ಸರ್ಕಲ್ಲಿನಿಂದ ಶೇಷಾದ್ರಿಪುರಂ ಪೋಲಿಸ್ ಟಾಣೆ ತಲುಪುವ ಆಜಾರ್ಯ ಗೋವಿಂದ ವಿಟ್ಟಲ ಭಾವೆ ರಸ್ತೆ, ಶೇಷಾದ್ರಿಪುರಂ ಕಾಲೇಜಿನ ಮುಂದಿನ ಜಿ.ನಾಗಪ್ಪ ಬೀದಿ, ರಾಜಾಜಿನಗರದ ರಾಮಮಂದಿರ ಎರಡು ಬದಿಯ ಏಕಮುಖ ರಸ್ತೆಗಳು, ರ್‍ಆಯನ್ ಸರ್ಕಲ್ ತಲುಪುವ ಎಸ್.ವಿ.ನಾರಯಣಸ್ವಾಮಿ ಐಯಂಗಾರ್ ರಸ್ತೆ, ವಾಣಿವಿಲಾಸ್ ಮುಂದಿನ ರಸ್ತೆ, ಕಲಾಸಿಪಾಳ್ಯಂ ರಸ್ತೆ,  ಪುರಭವನದ ಎದುರಿರುವ ಎನ್.ಅರ್ ರಸ್ತೆ, ಸಿಲ್ವರ್ ಜೂಬಿಲಿ ರಸ್ತೆ,  ಪೈಲ್ವಾನ್ ಎಂ ಕೃಷ್ಣಪ್ಪ ರಸ್ತೆ, ಓ.ಟಿ.ಸಿ ರಸ್ತೆ, ಶೇಷಾದ್ರಿಪುರಂ ಮುಖ್ಯರಸ್ತೆ ಜಿ.ಲಿಂಗಯ್ಯ ರಸ್ತೆ, ಲಿಂಕ್ ರಸ್ತೆ,.................

    ಈ ರಸ್ತೆಗಳಲ್ಲಿ ನಿಮ್ಮ ಯು ಟರ್ನ್ ಹೇಗಿರುತ್ತದೆ ಅಂತ ಒಂದು ಉದಾಹರಣೆ ಸಹಿತ ವಿವರಿಸಿಬಿಡುತ್ತೇನೆ. ನೀವು ಶೇಷಾದ್ರಿಪುರಂನಲ್ಲಿನ ಸುದರ್ಶನ ಸಿಲ್ಕ್ ಮಳಿಗೆಗೆ ಬರಬೇಕೆಂದುಕೊಳ್ಳುತ್ತೀರಿ. ಸದ್ಯ ನೀವು ಕೃಷ್ಣ ಪ್ಲೋರ್ ಮಿಲ್ ಕಡೆಯಿಂದ ಬರುತ್ತಿರುತ್ತೀರಿ. ಮರೆತು ಮಂತ್ರಿ ಮಾಲ್‍ವರೆಗೆ ಹೋಗಿಬಿಡುತ್ತೀರಿ. ಅದು ಏಕಮುಖ ರಸ್ತೆ. ಹಿಂದಕ್ಕೆ ಬರುವಂತಿಲ್ಲ. ವಿಧಿಯಿಲ್ಲದೇ ಮುಂದೆ ಸಾಗಿ ಸಂಪಿಗೆ ಟಾಕೀಸಿನ ಪೋಲಿಸ್ ಸಿಗ್ನಲ್ ಬಳಿ ಬಲಕ್ಕೆ ತಿರುಗಿ ಅಥವ ಅದರ ಹಿಂಭಾಗದ ನ್ಯೂಕೃಷ್ಣಭವನ್ ಹೋಟಲ್ಲಿನ ಪುಟ್ಟ ರಸ್ತೆಯಲ್ಲಿ ಸಾಗಿ ಮತ್ತೆ ಬಲಕ್ಕೆ ತಿರುಗಿ ಅಲ್ಲಿ ಮತ್ತೆ ಎಡಕ್ಕೆ ತಿರುಗಿ ಸ್ವಲ್ಪ ಮುಂದೆ ಸಾಗಿ ಮತ್ತೆ ಬಲಕ್ಕೆ ತಿರುಗಿ ಶೇಷಾದ್ರಿಪುರಂ ಮುಖ್ಯರಸ್ತೆಯನ್ನು ತಲುಪಿ ಮತ್ತೆ ಬಲಕ್ಕೆ ತಿರುಗಿ ಸ್ವಲ್ಪ ಮುಂದ್ ಬಂದರೆ ನಿಮಗೆ ನಟರಾಜ ಟಾಕೀಸಿನ ಎದುರಿಗೆ ಸುದರ್ಶನ ಸಿಲ್ಕ್ ಮಳಿಗೆ ಕಾಣುತ್ತದೆ. ಇಂಥ ಒಂದು ದೊಡ್ಡ ಯು ಟರ್ನ್ ತೆಗೆದುಕೊಳ್ಳಲು ನಿಮಗೆ ಏಳು ನಿಮಿಷ ಮತ್ತು ಐವತ್ತು ಎಂ ಎಲ್ ಪೇಟ್ರೋಲ್ ಖರ್ಚಾಗುವುದು ಖಚಿತ. ಹೀಗೆ ಇನ್ನೂಳಿದ ಏಕಮುಖ ರಸ್ತೆಗಳಲ್ಲಿ ಇಂಥ ದೊಡ್ಡ ದೊಡ್ಡ ಯು ಟರ್ನ್ ತೆಗೆದುಕೊಳ್ಳಲು ಅಥವ ಕ್ರಮಿಸಲು ನಿಮ್ಮ ದ್ವಿಚಕ್ರ ವಾಹನದಲ್ಲಿ  ಎಷ್ಟು ಸಮಯ ಮತ್ತು ಎಷ್ಟು ಪೆಟ್ರೋಲ್ ಖರ್ಚಾಗುತ್ತದೆ ಅಂತ ನೀವೇ ನೋಡಿಕೊಳ್ಳಬಹುದು.

    ಇವೆಲ್ಲವನ್ನು ನಾವು ಬೆಳಗಿನ ಒಂಬತ್ತು ಗಂಟೆಯಿಂದ ಹನ್ನೊಂದು ಗಂಟೆಯವರೆಗೆ ಮತ್ತು ಸಂಜೆ ಐದುಗಂಟೆಯಿಂದ ಏಳುಗಂಟೆಯ ಸಮಯದಲ್ಲಿ ಮಾತ್ರ ಮಾಡಿದ್ದು. ಈ ಸಮಯದಲ್ಲಿ ವಾಹನ ದಟ್ಟಣೆ ಹೆಚ್ಚಿರುತ್ತದೆ. ಅದರ ಪಲಿತಾಂಶವಿದು. ಇಲ್ಲಿ ನಾವು ಮಾಡಿರುವ ಪ್ರಯತ್ನವೆಲ್ಲಾ ಬೆಂಗಳೂರಿನ ದೊಡ್ಡ ದೊಡ್ಡ ರಸ್ತೆಗಳು ಮುಖ್ಯರಸ್ತೆ ಮಾತ್ರ. ನಾವು ಸಣ್ಣ ಪುಟ್ಟ ರಸ್ತೆಗಳಿಗೆ ಕೈಹಾಕಿಲ್ಲ. ನಿಮ್ಮ ನಿಮ್ಮ ಬಡಾವಣೆಯಲ್ಲಿನ ಪುಟ್ಟ ಪುಟ್ಟ ರಸ್ತೆಗಳಲ್ಲಿ ಸುಮ್ಮ ಸುಮ್ಮನೇ ಮಾತಾಡುತ್ತಾ ಅದರಲ್ಲೂ ಕಾಲೇಜು ಹುಡುಗ ಮತ್ತು ಹುಡುಗಿಯರು, ಎಷ್ಟೆಷ್ಟು ಯು ಟರ್ನ್ ಮಾಡುತ್ತಿರುತ್ತಾರೆ. ಎಷ್ಟೆಷ್ಟು ಪೆಟ್ರೋಲ್ ಖರ್ಚು ಮಾಡುತ್ತಾರೆ ಎನ್ನುವುದನ್ನು ನೋಡಿ ನೀವೇ ಲೆಕ್ಕಮಾಡಿಕೊಳ್ಳಬಹುದು.


   ಕೇವಲ ಕುತೂಹಲಕ್ಕಾಗಿ ಮಾಡಿದ ಇಂಥ ಒಂದು ಪ್ರಯತ್ನದಲ್ಲಿ ಕೊಟ್ಟ ಲೆಕ್ಕಚಾರಗಳೆಲ್ಲವೂ ಪಕ್ಕಾ ಆಗಿದೆಯೆಂದುಕೊಳ್ಳಬೇಡಿ. ಇದೊಂದು ಸರಾಸರಿ ಲೆಕ್ಕಚಾರವಷ್ಟೆ. ನೀವು ಪ್ರಯತ್ನಿಸಿದರೆ ವ್ಯತ್ಯಾಸವಾಗಲೂಬಹುದು. ಇಂಥ ಹೊಸ ವಿಚಾರಗಳ ಹಿಂದೆ ಬಿದ್ದಾಗ ನನಗೆ ಖುಷಿಯಾದರೂ ನನ್ನ ಜೊತೆಯಲ್ಲಿ ಸಹಕರಿಸಿದವರಿಗೆ ಅನೇಕಸಲ ಬೇಸರವಾಗಿದೆ. ಕೆಲವು ಕಡೆ ನಾವು ಬೈಸಿಕೊಂಡಾಗ ನನ್ನ ಗೆಳೆಯ ಶಿವಪ್ರಸಾದ್ "ಇದೆಲ್ಲ ನಮಗೆ ಬೇಕಿತ್ತಾ" ಅಂದುಕೊಂಡಿದ್ದು ಇದೆ. ಆದರೂ ನನಗೆ ಸಹಕರಿಸಿದ್ದಾರೆ. ಅದಕ್ಕೆ ಅವರಿಗೆ ಧನ್ಯವಾದಗಳು. ನಾನಿಲ್ಲಿ ಕೇವಲ ದ್ವಿಚಕ್ರ ವಾಹನಗಳನ್ನು ಮಾತ್ರ ಲೆಕ್ಕಕ್ಕೆ ತೆಗೆದುಕೊಂಡಿದ್ದೇನೆ. ನಾಲ್ಕುಚಕ್ರದ ಕಾರು, ಲಾರಿ ಟೆಂಪೋ, ಬಸ್ಸು, ಟ್ರಕ್ಕುಗಳು, ಮೂರು ಚಕ್ರದ ಆಟೋಗಳನ್ನು ಪರಿಗಣಿಸಿಲ್ಲ. ಅವುಗಳ ಲೆಕ್ಕಚಾರವೇನಿರಬಹುದೆನ್ನುವ ಕುತೂಹಲವಂತೂ ಇದ್ದೇ ಇದೆ.  ನಮ್ಮ ಆಟೋ ಚಾಲಕರ ವಿಚಾರವನ್ನು ಗಮನಿಸಿದಾಗ ಅವರು ತಮಗೆ ಬೇಕಾದಾಗಲೆಲ್ಲ ಸ್ವಲ್ಪವೂ ಯೋಚಿಸದೇ ಸುಲಭವಾಗಿ "ಯು ಟರ್ನ್ ತೆಗೆದುಕೊಂಡುಬಿಡುತ್ತಾರೆ" ಮತ್ತೆ ನಮ್ಮ ದ್ವಿಚಕ್ರ ವಾಹನಗಳಿಗೆ ಹೋಲಿಸಿಕೊಂಡಾಗ ಅವರು ಹೆಚ್ಚು ಸಲ "ಯು ಟರ್ನ್" ತೆಗೆದುಕೊಳ್ಳುತ್ತಾರೆ. ನಾವು ಪ್ರತಿಭಾರಿ ಯು ಟರ್ನ್ ತೆಗೆದುಕೊಳ್ಳುವಾಗಲೂ ದೊಡ್ಡ ಸರ್ಕಸ್ ಮಾಡುವಂತಿತ್ತು. ಗಾಭರಿ, ಭಯ ಆತಂಕ ಎಲ್ಲವೂ ಉಂಟಾಗುತ್ತಿತ್ತು.  ಆದ್ರೆ ಈ ಆಟೋ ಚಾಲಕರು ನಮಗಿಂತ ಹೆಚ್ಚು ಸಲ ಯು" ತಿರುಗುತ್ತಾರೆ, ಮತ್ತೆ ಸರಳ ಮತ್ತು ಸುಲಭವಾಗಿ ಯು ತಿರುಗುತ್ತಾರಲ್ಲ...ಎನ್ನುವುದೇ ನನಗೆ ಆಶ್ಚರ್ಯದ ವಿಚಾರ. ಮತ್ತೆ ಅವರು ನಮ್ಮಂತೆ ಡ್ರಿನ್..ಡ್ರಿನ್....ಅಂತ ಎಕ್ಸಲೇಟರನ್ನು ತಿರುಗಿಸುತ್ತಾ ಇರದೇ, ಒಮ್ಮೆ  ಮನಸ್ಸಿನಲ್ಲಿ "ಯು ತಿರುಗಬೇಕೆನಿಸಿದರೆ ಮುಗೀತು. ಹಿಂದೆ ಮುಂದೆ ಯಾರು ಬರುತ್ತಿರಲಿ ಬಿಡಲಿ,,,ನೋಡಿಕೊಂಡು ಕೆಲವೊಮ್ಮೆ ನೋಡದೆಯೂ ತಿರುಗಿಬಿಡುತ್ತಾರೆ. ಇದನ್ನು ಗಮನಿಸಿದ ಅನೇಕ ಇತರ ವಾಹನಗಳೇ ನಿದಾನವಾಗಿಬಿಡುತ್ತವೆ, ನಿಂತುಬಿಡುತ್ತವೆ ಆಟೋಗೆ ದಾರಿಮಾಡಿಕೊಡಲು.  ಇದೆಲ್ಲರ ಪಲಿತಾಂಶವೇನೆಂದರೆ ಎಷ್ಟೇ ದೊಡ್ಡ ರಸ್ತೆ, ಮುಖ್ಯ ರಸ್ತೆಯಿದ್ದರೂ ಅವರು ಇಪ್ಪತ್ತು-ಮುವತ್ತು-ಸೆಕೆಂಡು ಅಥವ ಹೆಚ್ಚೆಂದರೆ ಒಂದು ನಿಮಿಷದಲ್ಲಿ "ಯು ಟರ್ನ್ ತಗೊಂಡು ಸುಲಭವಾಗಿ ಹೋಗಿಬಿಡುತ್ತಾರೆ. ಇಲ್ಲಿ ಅವರು ನಮಗಿಂತ ಕಡಿಮೆ ಪೆಟ್ರೋಲ್ ಮತ್ತು ಸಮಯವನ್ನು ಬಳಸಿಕೊಳ್ಳುತ್ತಾರೆನ್ನುವುದು ಅವರನ್ನು ಮೆಚ್ಚಬೇಕಾದ ವಿಚಾರವೇ ಸರಿ. ಆದ್ರೂ ಅವರ ಅನಿರೀಕ್ಷಿತ "ಯು" ಎಲ್ಲರಿಗೂ ಗಾಬರಿಯುಂಟು ಮಾಡುವುದಂತೂ ಬೇಸರವೇ ಸರಿ.

    ಒಂಥರ ಥ್ರಿಲ್ ಕೊಟ್ಟ ಈ ವಿಚಾರದಿಂದಾಗಿ ಕಾರುಗಳ "ಯು ಟರ್ನ್" ಲೆಕ್ಕಚಾರ ಹೇಗಿರಬಹುದು ಅಂತ ಪ್ರಯತ್ನಿಸಿದೆ. ನನ್ನ ಮತ್ತೊಬ್ಬ ಗೆಳೆಯನ ಸಹಕಾರದಿಂದ ಎರಡು ಕಡೆ ಯಶಸ್ವಿಯಾದರೂ ಮೂರನೆ ರಸ್ತೆಗೆ ಬಂದಾಗ ಅಲ್ಲಿನ ಅತಿಯಾದ ವಾಹನದಿಂದಾಗಿ ಹತ್ತು ನಿಮಿಷಕ್ಕೂ ಹೆಚ್ಚು ಸಮಯವಾದಾಗ ಅವನಿಗೆ ಬೇಸರದ ಜೊತೆಗೆ ಸಿಟ್ಟು ಕೂಡ ಬಂತು. "ನೋಡು ಶಿವು, ನಿನಗೇನೋ ತಲೆಕೆಟ್ಟಿದೆ ಅಂತ ನಾನು ಕೂಡ ಏಕೆ ತಲೆ ಕೆಡಿಸಿಕೊಳ್ಳಬೇಕು, ನನಗೆ ಮಾಡಲು ಬೇಕಾದಷ್ಟು ಕೆಲಸಗಳಿವೆ" ಅಂತ ಆತ ಪ್ರಾರಂಭದಲ್ಲಿಯೇ ನನ್ನ ಕೈಬಿಟ್ಟಿದ್ದರಿಂದ ಅದರ ಆಸೆಯನ್ನು ಸದ್ಯಕ್ಕೆ ಬಿಟ್ಟಿದ್ದೇನೆ.

    ಈ ಲೇಖನ ಬರೆದು ಬ್ಲಾಗಿಗೆ ಹಾಕುವ ಹೊತ್ತಿಗೆ ನಮ್ಮ ಕೇಂದ್ರ ಸರಕಾರದವರು ಇವತ್ತಿನಿಂದ ಏಳುವರೆ ರೂಪಾಯಿಯಷ್ಟು ಪೆಟ್ರೋಲ್ ಬೆಲೆಯನ್ನು ಹೆಚ್ಚಿಸಿ ಸಾಮಾನ್ಯ ಜನಗಳ ಬದುಕಿಗೆ ಬರೆ ಎಳೆದಿದ್ದಾರೆ.  ನಾನು ಹಾಕಿದ ಇದುವರೆಗಿನ "ಯು ಟರ್ನ್ ಲೆಕ್ಕಚಾರ" ಪೆಟ್ರೋಲ್ ಬೆಲೆ ಏರಿಕೆಯಿಂದಾಗಿ ವ್ಯತ್ಯಾಸವಾಗಿ ಇನ್ನಷ್ಟು ಹಣ ನಮ್ಮ ತೂತಾದ ಜೇಬಿನಿಂದ ನೇರವಾಗಿ ಪೆಟ್ರೋಲ್ ಬಂಕಿಗೆ ಸೇರಬಹುದು. ಕೇವಲ ಕುತೂಹಲದ ಪ್ರಯತ್ನವಾದ ಈ ಲೇಖನ ಓದಿದ ಮೇಲೆ ನಿಮಗೆ ಹೇಗನ್ನಿಸಿತು...ನಿಮ್ಮ ಅಭಿಪ್ರಾಯಕ್ಕಾಗಿ ಕಾಯುತ್ತಿರುತ್ತೇನೆ.


ಚಿತ್ರಗಳು ಮತ್ತು ಲೇಖನ
 ಶಿವು.ಕೆ

   

Wednesday, May 16, 2012

ಗೆಳೆತನ

         


        ಅದೊಂದು ಅನಿರೀಕ್ಷಿತ ಬೇಟಿ
 
        ಗೆಳೆಯ ಸಿಕ್ಕಿದ್ದ ಇಪ್ಪತ್ತು ವರ್ಷಗಳ ನಂತರ

        ಉಭಯ ಕುಶಲೋಪರಿ, ಕಷ್ಟ

         ಸುಖ, ಉದ್ಯೋಗ, ಮದುವೆ
 
         ಆಚಾರ ವಿಚಾರಗಳು ಇಣುಕಿತ್ತು
 
         ಕೈ ಕುಲುಕಿ, ಮನಕಲಕಿ

         ಅತಿ ವಿನಯದ ನಾಗರೀಕತೆಯ ತೆರೆಯೊಳಗೆ

         ಕೃತಕತೆ, ಇಗೋಗಳ ಪೊರೆಯೊಳಗೆ.

    
         ಬಾಲ್ಯದಲ್ಲಿ

         ಜೊತೆಗೂಡಿ ಆಡಿದ್ದು, ತಿಂದಿದ್ದು,

         ರೇಗಿಸಿದ್ದು, ಕಿಚಾಯಿಸಿದ್ದು

         ಅರಳಲು ಕಾತರಿಸುವ ಮೊಗ್ಗಿನ ಹಾಗೆ

         ಎಲೆಯಿಂದ ಜಾರಿದ ಇಬ್ಬನಿ

         ನಯವಾಗಿ ಹೂದಳದಲ್ಲಿ ಇಳಿದ ಹಾಗೆ.

         ಎಲ್ಲವೂ ತೆರೆದ ಬೆತ್ತಲು ಮನಸ್ಸಿನೊಳಗೆ

         ಹಸಿ ಹಸಿ ಮುಗ್ದತೆಯೊಳಗೆ.

         ಅದೆಲ್ಲವೂ ಅಂದು ಹೂ ಪರಿಮಳದಂತೆ ವಾಸ್ತವ.

         ಇಂದು ವಿದೇಶಿ ಪರಿಮಳದಂತೆ ಕೃತಕ.


          ಬಾಲ್ಯದ ದಟ್ಟ ಸ್ನೇಹದ ಕುಚೇಲಗಳು

          ಇಂದು ಆತ್ಮಿಯತೆ ಆಚೆಗಿನ

          ಹೊರನೋಟದ ಚೇಲಗಳು.


     ಈ ಕವನವನ್ನು ಬರೆದಿದ್ದು 1997 ರಲ್ಲಿ.  ಆಗ ನನ್ನೊಳಗಿನ ಬರವಣಿಗೆಯ ತುಡಿತವೇ ಇಂಥ ಪುಟ್ಟ ಪುಟ್ಟ ಕವನಗಳು. ಓದಿ ನಿಮ್ಮ ಅಭಿಪ್ರಾಯವನ್ನು ತಿಳಿಸಿ.

ಶಿವು.ಕೆ