ಕೇಂದ್ರ ಸರ್ಕಾರವನ್ನು ನಡುಗಿಸಿ, ವಿಶ್ವದ ಗಮನವನ್ನೇ ಸೆಳೆದ ಅಣ್ಣಾ ಅಜಾರೆ ಭ್ರಷ್ಟಾಚಾರ ವಿರುದ್ದದ ಉಪವಾಸ ಸತ್ಯಗ್ರಹ ನಮಗೆಲ್ಲಾ ಗೊತ್ತೇ ಇದೆ. ಪ್ರತಿಯೊಬ್ಬ ನಾಗರೀಕನಲ್ಲೂ ಭ್ರಷ್ಟಾಚಾರವನ್ನು ಹೋಗಲಾಡಿಸಲು ಹೋರಾಟ ಮಾಡಬೇಕೆನ್ನುವ ಸಂಚಲನವನ್ನೇ ಉಂಟು ಮಾಡಿದ ಆರೋಗ್ಯಕರ ಸಮೂಹ ಸನ್ನಿ ಎನ್ನಬಹುದು. ಇಂಥ ಅರೋಗ್ಯಕರ ಸಮೂಹ ಸನ್ನಿ ನಮಗೆ ಬೇಕಿತ್ತು.
ಇಂಥದ್ದೇ ಒಂದು ಸಮೂಹ ಸನ್ನಿ ನಮ್ಮ ಪೇಪರ್ ಹಾಕುವ ಹುಡುಗರಲ್ಲಿ ನೆಗಟೀವ್ ಆಗಿ ಆಗಿಬಿಟ್ಟರೆ ಏನಾಗಬಹುದು? ಅಂತ ಒಮ್ಮೆ ಪ್ರಶ್ನಿಸಿಕೊಂಡೆ. ನಿಜಕ್ಕೂ ಒಂದು ಕ್ಷಣ ಹೃದಯ ಬಡಿತ ನಿಂತಂತೆ ಆಗಿ ಆತಂಕ ದಿಗಿಲುಗಳು ಒಟ್ಟಿಗೆ ಮೈಮನಸ್ಸುಗಳನ್ನು ಆವರಿಸಿಕೊಂಡವು. ಇದೇನಿದು ಪೇಪರ್ ಹಾಕುವ ಹುಡುಗರ ಮನಸ್ಸು ಬದಲಾದರೇ ಹೃದಯಬಡಿತ ನಿಲ್ಲುವಂತದ್ದು, ದಿಗಿಲು, ಆತಂಕ ಪಡುವಂತದ್ದು ಏನಾಗಿಬಿಡುತ್ತದೆ ಅಂತ ನಿಮ್ಮಲ್ಲಿ ಪ್ರಶ್ನೆ ಮೂಡಬಹುದು. ವಿವರಿಸಿಬಿಡುತ್ತೇನೆ ಬಿಡಿ..
ಎಲ್ಲೋ ಪುಟ್ಟ ಗುಡಿಸಲಿನಲ್ಲಿ ಮಲಗಿದ್ದ ಒಬ್ಬ ಹದಿನೆಂಟು ವರ್ಷದ ಪೇಪರ್ ಹಾಕುವ ಹುಡುಗನಿಗೆ ಒಂದು ಅಲೋಚನೆ ಬರುತ್ತದೆ. ಅದನ್ನು ತನ್ನ ಇತರ ಪೇಪರ್ ಹಾಕುವ ಹುಡುಗರಿಗೆ ಹೇಳುತ್ತಾನೆ. ಅದು ಒಬ್ಬರಿಂದ ಒಬ್ಬರಿಗೆ ಎಸ್ ಎಂ ಎಸ್ ತರ ಸಾಗಿ ಹತ್ತು..ನೂರು...ಸಾವಿರ...ಕೊನೆಗೆ ಭಾರತದಾದ್ಯಂತ ಮುಂಜಾನೆ ದಿನಪತ್ರಿಕೆ ಹಂಚುವ ಎಲ್ಲಾ ಹುಡುಗರ ಮನಸ್ಸಿನಲ್ಲಿಯೂ ಆದೇ ಅಲೋಚನೆ ಗಟ್ಟಿಯಾಗಿಬಿಡುತ್ತದೆ. ನಿಮಗೆ ಗೊತ್ತಿರಲಿ, ನಮ್ಮ ಭಾರತದಾದ್ಯಂತ ಪೇಪರ್ ಹಾಕುವ ಹುಡುಗರೆಲ್ಲರ ವಯಸ್ಸು ಹದಿನೈದರಿಂದ ಇಪ್ಪತ್ತೈದು. ಈ ಪೇಪರ್ ಹಾಕುವ ಕೆಲಸವನ್ನು ಹಣವಂತರ ಮಕ್ಕಳು ಮಾಡುವುದಿಲ್ಲ. ಸೋಕಿಗೆ ಅಥವ ವ್ಯಾಯಾಮಕ್ಕೆ ಆಗುತ್ತೆ ಅಂದುಕೊಂಡು ಬರುವವರು ಹೆಚ್ಚೆಂದರೆ ಒಂದು ವಾರ್‍ಅ-ಹದಿನೈದು ದಿನವಷ್ಟೆ. ಅಷ್ಟರಲ್ಲಿ ಬೇಸರವಾಗಿ ಮನೆಯಲ್ಲಿ ಸುಖನಿದ್ರೆ ಮಾಡುತ್ತಾರೆ. ಇನ್ನೂ ಮೇಲ್ಮದ್ಯಮ, ಮದ್ಯಮ ವರ್ಗದ ಹುಡುಗರು ಇತ್ತ ಸುಳಿಯುವುದಿಲ್ಲ. ಸುಳಿದರೂ ಅವರ ಕತೆ ಶ್ರೀಮಂತ ಹುಡುಗರ ಕತೆಯೇ! ಇಲ್ಲಿ ಅವರ ತಂದೆ ತಾಯಿಗಳಿಗೆ ಗೌರವ ಅಂತಸ್ಥು, ಪಕ್ಕದ ಮನೆಯವರು, ಸಂಭಂದಿಕರು ಏನಂದುಕೊಳ್ಳುತ್ತಾರೋ ಎನ್ನುವ ಕಾರಣಕ್ಕೆ ಅವರ ಮಕ್ಕಳನ್ನು ಈ ಕೆಲಸಕ್ಕೆ ಕಳಿಸುವುದಿಲ್ಲ. ಇನ್ನೂ ಕೆಳ ಮದ್ಯಮವರ್ಗದವರು ಸ್ವಲ್ಲ ಜನ ಬರುತ್ತಾರಾದರೂ ಅವರು ತಾತ್ಕಾಲಿಕ ಅಷ್ಟೆ. ಇಂಥ ಕೆಲಸಕ್ಕೆ ಬಡತನದಲ್ಲಿರುವವರು, ಸ್ಲಮ್‍ನಲ್ಲಿರುವ ಹುಡುಗರು, ಮನೆಯಲ್ಲಿ ಕಷ್ಟವಿರುವವರು. ಇವರೇ ಮುಂಜಾನೆ ದಿನಪತ್ರಿಕೆ ಸಂತೆಯ ಜೀವಾಳ. ಈ ಹುಡುಗರ ಮನಸ್ಥಿತಿಯನ್ನು ಎಂಥದ್ದು ಅಂದರೆ ಇವರೊಮ್ಮೆ ಮನಸ್ಸು ಮಾಡಿದರೆ ಕಿತ್ತು ಹೋದ ಕಚಡ ಮಾಸ್ ಸಿನಿಮವನ್ನು ಸೂಪರ್ ಹಿಟ್ ಮಾಡಿಬಿಡಬಲ್ಲರು. ತುಂಬಾ ಚೆನ್ನಾಗಿರುವ ಮಾಸ್ ಚಿತ್ರವನ್ನು ಪ್ಲಾಪ್ ಮಾಡಿ ಡಬ್ಬದೊಳಗೆ ಹಾಕಿಬಿಡುವಂತೆ ಮಾಡುವವರು. ಪಾದರಸಕ್ಕಿಂತ ವೇಗವಾಗಿ ಸದಾ ಚಂಚಲತೆಯನ್ನು ಹೊಂದಿರುವ, ಇವರು "ಇದರಿಂದೇನು ಲಾಭವಿಲ್ಲ, ಇಷ್ಟು ವರ್ಷ ನಮ್ಮ ಮುಂಜಾನೆ ಸಕ್ಕರೆ ನಿದ್ರೆಗಳನ್ನು ಹಾಳುಮಾಡಿಕೊಂಡು ಪೇಪರ್ ಹಾಕುವ ಕೆಲಸಕ್ಕೆ ನಿಂತೆವಲ್ಲ, ಇದನ್ನು ಮನೆ ಮನೆಗೆ ಹಾಕಿ ಯಾರನ್ನು ಉದ್ದಾರ ಮಾಡಬೇಕಾಗಿದೆ? ನಾಳೆಯಿಂದ ಯಾರು ಪೇಪರ್ ಹಾಕುವ ಕೆಲಸಕ್ಕೆ ಹೋಗುವುದು ಬೇಡ ಅಂತ ತೀರ್ಮಾನಿಸಿ ಅಣ್ಣಾ ಅಜಾರೆಯಷ್ಟೇ ದೊಡ್ಡ ಸಂಚಲನ ಉಂಟು ಮಾಡಿದ ಸಮೂಹ ಸನ್ನಿಗೊಳಗಾಗಿಬಿಟ್ಟರೆ ಮುಂದೇನಾಗಬಹುದು..
ಮೊದಲು ಕೆಲಸ ಕಳೆದುಕೊಳ್ಳುವುದು ನಮ್ಮಂಥ ನೂರಾರು ಸಾವಿರಾರು ವೆಂಡರುಗಳು. ಒಬ್ಬ ವೆಂಡರ್ ಹೆಚ್ಚೆಂದರೆ ೨೦೦ ದಿನಪತ್ರಿಕೆಯನ್ನು ಮುಂಜಾನೆ ಮನೆಮನೆಗಳಿಗೆ ವಿತರಿಸಬಹುದು ಅದಕ್ಕಿಂತ ಹೆಚ್ಚು ಸಾಧ್ಯವೇ ಇಲ್ಲ. ಹಾಗೆ ಆದಲ್ಲಿ ಒಬ್ಬ ವೆಂಡರ್ ಆದಾಯ ನೂರರಲ್ಲಿ ೯೦% ಮಾಯವಾಗಿ ೧೦% ಗಿಳಿಯುತ್ತದೆ.
ನಂಬರ್ ಒನ್ ಎಂದು ಮೀಸೆ ತಿರುಗಿಸುವ ಟೈಮ್ಸ್ ಆಫ್ ಇಂಡಿಯ ಸರ್ಕುಲೇಷನ್ ಐದು ಲಕ್ಷ ನಲವತ್ತು ಸಾವಿರದಿಂದ ಐವತ್ತನಾಲ್ಕು ಸಾವಿರಕ್ಕೆ ಇಳಿಯುತ್ತದೆ.
ಡೆಕ್ಕನ್ ಹೆರಾಲ್ಡ್ ಒಂದು ಲಕ್ಷದಿಂದ ಹತ್ತು ಸಾವಿರಕ್ಕೆ, ಹಿಂದೂ ದಿನಪತ್ರಿಕೆ ಅರವತ್ತು ಸಾವಿರದಿಂದ ಆರುಸಾವಿರಕ್ಕೆ, ಇಂಡಿಯನ್ ಎಕ್ಸ್ ಪ್ರೆಸ್ ನಲವತ್ತು ಸಾವಿರದಿಂದ ನಾಲ್ಕು ಸಾವಿರಕ್ಕೆ, ಡೆಕ್ಕನ್ ಕ್ರಾನಿಕಲ್ ಇಪ್ಪತ್ತು ಸಾವಿರದಿಂದ ಎರಡು ಸಾವಿರಕ್ಕೆ, ಡಿ ಎನ್ ಎ ಪತ್ರಿಕೆ ಹದಿನೆಂಟು ಸಾವಿರದಿಂದ ಸಾವಿರದ ಎಂಟು ನೂರಕ್ಕೆ ಇಳಿಯುತ್ತದೆ. ಮತ್ತೆ ಕನ್ನಡ ದಿನಪತ್ರಿಕೆಗಳಲ್ಲಿ ಎರಡು ಲಕ್ಷವಿರುವ ವಿಜಯ ಕರ್ನಾಟಕ ಇಪ್ಪತ್ತು ಸಾವಿರಕ್ಕೆ ಒಂದುಲಕ್ಷ ನಲವತ್ತು ಸಾವಿರವಿರುವ ಪ್ರಜಾವಾಣಿ ಹದಿನಾಲ್ಕು ಲಕ್ಷಕ್ಕೆ, ಅರವತ್ತು ಸಾವಿರವಿರುವ ಕನ್ನಡಪ್ರಭ ಆರುಸಾವಿರಕ್ಕೆ, ಮುವತ್ತು ಸಾವಿರವಿರುವ ಉದಯವಾಣಿ ಮೂರು ಸಾವಿರಕ್ಕೆ, ಹದಿನೆಂಟು ಸಾವಿರವಿರುವ ಸಂಯುಕ್ತ ಕರ್ನಾಟಕ ಸಾವಿರದ ಎಂಟುನೂರಕ್ಕೆ, ಇದು ಬಿಟ್ಟು ಹೊಸದಿಗಂತ, ವ್ಯಾಪಾರಿ ದಿನಪತ್ರಿಕೆಗಳಾದ ಎಕನಾಮಿಕ್ಸ್ ಟೈಮ್ಸ್, ಬುಸಿನೆಸ್ ಲೈನ್, ಬುಸಿನೆಸ್ ಸ್ಟಾಂಡರ್ಡ್, ಇತ್ಯಾದಿಗಳು ನೂರು ಇನ್ನೂರು ಲೆಕ್ಕಕ್ಕೆ ಇಳಿದುಬಿಡುತ್ತವೆ. ಇದು ಬೃಹತ್ ಬೆಂಗಳೂರಿನ ಲೆಕ್ಕಚಾರ. ಇತರೆ ನಗರಗಳು, ಇತರೆ ರಾಜ್ಯಗಳು, ಪೂರ್ತಿ ಭಾರತದ ಮುಂಜಾನೆ ದಿನಪತ್ರಿಕೆ ವಿತರಣೆ ಲೆಕ್ಕಾಚಾರ ಕೇವಲ ೧೦% ಗೆ ಇಳಿದುಬಿಡುತ್ತದೆ.
ನೂರು ರೂಪಾಯಿಯನ್ನು ನೋಡುತ್ತಿದ್ದ ನನ್ನಂತ ವೆಂಡರ್ ಹತ್ತು ರೂಪಾಯಿಗೆ ಎಷ್ಟು ದಿನ ಇಂಥ ವ್ಯಾಪಾರ ಮಾಡಿಯಾನು? ವಿಧಿಯಿಲ್ಲದೇ ಅವನು ಬೇರೆ ಉದ್ಯೋಗ, ಅಥವ ವ್ಯಾಪರವನ್ನೋ ಹುಡುಕಿಕೊಳ್ಳುತ್ತಾನೆ. ಅಲ್ಲಿಗೆ ಮೇಲೆ ವಿವರಿಸಿದ ಹತ್ತು ಪರಸೆಂಟ್ ಕೂಡ ಇಲ್ಲವಾಗುತ್ತದೆ.
ಯಾರು ಇದ್ದರೆಷ್ಟು ಬಿಟ್ಟರೆಷ್ಟು ಅಂದುಕೊಂಡ ಪತ್ರಿಕಾ ಕಛೇರಿಗಳು ತಾವೆ ವಿತರಣೆ ಮಾಡುತ್ತೇವೆ ಅಂತ ಮುಂದೆ ನಿಂತರೆ ಅವರಿಗೆ ಮನೆಮನೆಗೆ ತಲುಪಿಸಲು ಅವರ ವರದಿಗಾರರನ್ನು ಬಿಡುತ್ತಾರಾ, ಎಸಿ ರೂಮಿನಲ್ಲಿ ಕುಳಿತ ಡೆಸ್ಕ್ ಆಪರೇಟರುಗಳಿಗೆ ಸೈಕಲ್ ಕೊಟ್ಟು ಮನೆಮನೆಗೆ ಕಳಿಸುತ್ತಾರಾ? ಈಗಿನ ವರದಿಗಾರರು ಮತ್ತು ಡೆಸ್ಕ್ ಆಪರೇಟರುಗಳು ಆಕಾಶದಿಂದ ಇಳಿದುಬಂದ ರಾಜಕುಮಾರರಂತೆ ವರ್ತಿಸುವ ಇಂದಿನ ಕಾಲದಲ್ಲಿ ಅವರನ್ನು ಮನೆಮನೆಗೆ ಪೇಪರ್ ಹಂಚುವ ಕೆಲಸಕ್ಕೆ ಹಚ್ಚಿಬಿಟ್ಟರೆ ಅವರ ಅಹಂಗೆ ಕುಂದು ಬಂದಂತಾಗಿ ಅವರು ಖಂಡಿತ ಕೆಲಸ ಬಿಡುತ್ತಾರೆ. ಇದೆಲ್ಲವನ್ನು ಬಿಟ್ಟು ಮಾರುಕಟ್ಟೆ ವಿಭಾಗದ ಪ್ರತಿನಿಧಿಗಳಿಗೆ ಸೈಕಲ್ಲು, ಮೋಟರ್ ಸೈಕಲ್ ಕೊಟ್ಟು ಮನೆಮನೆಗೆ ಪೇಪರ್ ಹಾಕಲು ಕಳಿಸಿದರೂ ಇವರ ಅರ್ಹತೆಯೂ ವೆಂಡರಿನಷ್ಟೆ. ಮತ್ತೆ ಈಗಾಗಲೇ ಐದು ಆರಂಕಿ ಪಗಾರದ ರುಚಿಯನ್ನು ನೋಡಿರುವ ಇವರೆಲ್ಲಾ ಐನೂರು ಸಾವಿರಕ್ಕೆ ಕೆಲಸ ಮಾಡುತ್ತಾರಾ? ಅಲ್ಲಿಗೆ ಇದು ಕಾರ್ಯಸಾಧುವಲ್ಲವೆಂದಾಯಿತು.
ಈ ಪತ್ರಿಕೆ ಕಛೇರಿಯವರು ಮೊಂಡುಬಿದ್ದು ವೆಂಡರುಗಳು ಬೇಡ, ಪೇಪರ್ ಹಾಕುವ ಹುಡುಗರೂ ಬೇಡ ಅಂತ ಅಜೆಂಡ ಹೊರಡಿಸಿ, ಈ ದಿನಪತ್ರಿಕೆ ವಿತರಣೆ ಕೆಲಸಕ್ಕೆ ಹೊಸದಾಗಿ ನೂರಾರು ಜನರನ್ನು ನೇಮಿಸಿಕೊಂಡರೂ ಪ್ರತಿಯೊಬ್ಬನೂ ಹೆಚ್ಚೆಂದರೆ ಇನ್ನೂರು ಪೇಪರುಗಳನ್ನು ಮನೆಮನೆಗೆ ತಲುಪಿಸಬಹುದು....ಅಲ್ಲಿಗೆ ಅವನ ಕತೆಯೂ ವೆಂಡರ್‌ಗಿಂತ ವ್ಯತ್ಯಾಸವೇನು ಇಲ್ಲ. ಮತ್ತೆ ಅವನ ಕೆಲಸಕ್ಕೆ ವೆಂಡರಿಗೆ ಸಿಗುವ ೧೦% ಅಧಾಯವನ್ನೆ ಸಂಬಳವಾಗಿ ಕೊಟ್ಟರೆ ಅವನಿಗೆ ಅದು ಸಾಲದಾಗಿ ಒಂದೇ ತಿಂಗಳಿಗೆ ಕೆಲಸ ಬಿಟ್ಟು ಓಡುತ್ತಾನೆ. ಅಥವ ಅವರ ಸಂಬಳವನ್ನು ೧೦% ಗೆ ೯೦% ಸೇರಿಸಿ ಕೊಟ್ಟರೆ ಪತ್ರಿಕೆ ಕಂಪನಿಗಳು ಒಂದೇ ತಿಂಗಳಿಗೆ ಬಾಗಿಲು ಮುಚ್ಚಿಕೊಂಡು ಒಳಗೆ ಮಲಗಬೇಕಾಗುತ್ತದೆ.
ಮತ್ತೇನು ಮಾಡಬಹುದು ಅಂತ ಬೇರ್‍ಎ ದಿಕ್ಕಿನಲ್ಲಿ ಅಲೋಚಿಸಿದಾಗ ಹೀಗೆ ಹೊಸದಾಗಿ ನೇಮಕ ಮಾಡಿಕೊಂಡ ನೂರಾರು ಜನರನ್ನೇ ಮನೆಮನೆಗಳಿಗೆ ವಿತರಿಸುವ ಬದಲು ನೂರು ಇನ್ನೂರು ಪತ್ರಿಕೆಗಳನ್ನು ನೇರವಾಗಿ ಎಲ್ಲಾ ಏರಿಯಗಳಲ್ಲಿರುವ ದೊಡ್ಡ-ಪುಟ್ಟ ಅಂಗಡಿಗಳಿಗೆ ಕೊಟ್ಟರೆ ಅವರು ಭರ್ಜರಿ ವ್ಯಾಪರ ಮಾಡಬಹುದು ಅಂದುಕೊಂಡರೆ ಅದು ಸುಳ್ಳೇ ಸುಳ್ಳು. ನಿಮಗೆ ಮತ್ತೊಂದು ವಿಚಾರ ಗೊತ್ತಿರಲಿ, ಬೆಂಗಳೂರಿನಲ್ಲಿ ಪ್ರಿಂಟ್ ಆಗುವ ಎಲ್ಲಾ ದಿನಪತ್ರಿಕೆಗಳ ಕೇವಲ ೧% ಮಾತ್ರ ಅಂಗಡಿಗಳಲ್ಲಿ ಸೇಲ್ ಆಗುತ್ತವೆ. ಎಷ್ಟೇ ಶ್ರಮವಹಿಸಿ ಚಾಣಕ್ಷತೆ ಮೆರೆದರೂ ಇದು ೫% ದಾಟುವುದಿಲ್ಲ. ಏಕೆ ದಾಟುವುದಿಲ್ಲವೆನ್ನುವುದಕ್ಕೆ ಕಾರಣಗಳನ್ನು ಕೊಡುತ್ತೇನೆ. ಬೆಂಗಳೂರಿನ ಒಂದು ಏರಿಯದಲ್ಲಿ ನೂರು ಮೀಟರ್ ರಸ್ತೆಯ ಆ ಬದಿ ಈ ಬದಿ ಎರಡು ಅಂಗಡಿಗಳಿದ್ದರೂ ಆ ನೂರು ಮೀಟರ್ ಸುತ್ತಳತೆಯಲ್ಲಿರುವ ಒಂದು ಸಾವಿರ ಮನೆಗಳಲ್ಲಿ ಕೇವಲ ನಲವತ್ತು-ಐವತ್ತು ಮನೆಯವರು ಮಾತ್ರ ಮನೆಯಿಂದ ಹೊರಗೆ ವಾಕಿಂಗ್ ಅಂತ ಬಂದು ಪೇಪರ್ ಕೊಳ್ಳುತ್ತಾರೆ. ಅಲ್ಲಿಗೆ ೫೦ ಪೇಪರ್ ಮಾತ್ರ ಖರ್ಚಾಯಿತು. ಉಳಿದ ಮನೆಯವರಿಗೆ ಪೇಪರ್ ಓದುವ ಆಸಕ್ತಿಯಿಲ್ಲ ಇಲ್ಲವಾ ಅಂದುಕೊಂಡರೆ ಅವರಲ್ಲಿ ಕಡಿಮೆಯೆಂದರೂ ಇನ್ನೂ ಏಳುನೂರು ಮನೆಗಳವರಿಗೆ ಪೇಪರ್ ಬೇಕಿದೆ. ಆದ್ರೆ ನಮ್ಮ ಬೆಂಗಳೂರು ಇವರಿಗೆಲ್ಲಾ ಅದೆಂತ ಅರಾಮದಾಯಕ ಜೀವನವನ್ನು ಒದಗಿಸಿಕೊಟ್ಟಿದೆಯೆಂದರೆ ಅವರು ಕುಳಿತಲ್ಲೆ ಮಲಗಿದಲ್ಲೇ ಬೇಕಾದರೆ ವೆಂಡರುಗಳ ಜೊತೆ ಪೇಪರ್ ಹುಡುಗರ ಜೊತೆ ಫೋನಿನಲ್ಲೇ ಅರ್ಧಗಂಟೆ ಮಾತಾಡುತ್ತಾರೆ ಹೊರತು, ಮನೆಯಿಂದ ಹೊರಬಂದು ಮೆಟ್ಟಿಲಿಳಿದು ಪೇಪರ್ ಅಂಗಡಿಯಲ್ಲಿ ಪೇಪರ್ ಕೊಳ್ಳುವುದಿಲ್ಲ. ಇದೆಲ್ಲಾ ನಮ್ಮ ಬೆಂಗಳೂರು ಇವರಿಗೆ ಕರುಣಿಸಿರುವ ಮಾರ್ವಾಡಿ ಬದುಕಿನ ಗಿಪ್ಟ್. ಇದೇ ಲೆಕ್ಕಾಚಾರದಲ್ಲಿ ಈಗ ನೂರು ಮೀಟರ್ ಅಂತರದಲ್ಲಿರುವ ಸಾವಿರ ಮನೆಗಳಲ್ಲಿ ವೆಂಡರುಗಳು-ಪೇಪರ್ ಹುಡುಗರ ಮೂಲಕ ಏಳುನೂರಕ್ಕೂ ಹೆಚ್ಚು ಮನೆಗಳಿಗೆ, ನೂರು ಮನೆಗಳಿರುವ ಅಪಾರ್ಟ್‍ಮೆಂಟಿನಲ್ಲಿ ೯೫ ಮನೆಗಳ ಬಾಗಿಲಿಗೆ, ಮೆಟ್ಟಿಲ ಮೇಲೆ, ಬಾಲ್ಕನಿಗಳ ಮೇಲೆ, ಪೇಪರುಗಳು ಸುರಕ್ಷಿತವಾಗಿ ತಲುಪುತ್ತಿವೆ ಎನ್ನುವ ವಿಚಾರ ನಿಮ್ಮ ಮನಸ್ಸಿನಲ್ಲಿರಲಿ. ನಾನಿಲ್ಲಿ ವಿವರಿಸಿದ ವಿಚಾರಗಳು ಬೆಂಗಳೂರಿಗೆ ಸೀಮಿತವಾದರೂ ಇತರೆ ನಗರಗಳು ಹಾಗೂ ನಮ್ಮ ಭಾರತದಾದ್ಯಂತ ಒಂದರಡು % ಹೆಚ್ಚು ಕಡಿಮೆಯಾದರೂ ದೊಡ್ಡ ಬದಲಾವಣೆಯೇನಿಲ್ಲ.
ಮತ್ತೊಂದು ವಿಚಾರ್‍ಅವಿದೆ. ಅದು ಜಾಹಿರಾತಿಗೆ ಸಂಭಂದಿಸಿದ್ದು. ನೀವ್ಯಾರು ಬೇಕಾಗಿಲ್ಲ. ನೀವಿಲ್ಲದಿದ್ದಲ್ಲಿ ನಮ್ಮ ಪತ್ರಿಕೆ ನಿಂತುಹೋಗುವುದಿಲ್ಲ ನಮಗೆ ಜಾಹಿರಾತಿನ ಅದಾಯವಿದೆ. ಅದರಿಂದ ನಾವು ಪತ್ರಿಕೆಯನ್ನು ನಡೆಸುತ್ತೇವೆ ಬೇಕಾದರೆ ಪತ್ರಿಕೆಯನ್ನು ಉಚಿತವಾಗಿ ಹಂಚುತ್ತೇವೆ ಅಂತ ಶೂರ ಧೀರ ಏಕಾಂಗಿ ವೀರರಂತೆ ಮುನ್ನುಗ್ಗಿದರೂ ಹಾಗೆ ಉಚಿತವಾಗಿ ಮನೆಮನೆಗೆ ತಲುಪಿಸಲು ನೂರಾರು ಸಾವಿರಾರು ಕೆಲಸಗಾರರು ಬೇಕಾಗುತ್ತದೆ. ಮತ್ತೆ ಅವರೆಲ್ಲಾ ವೆಂಡರುಗಳು ಮತ್ತು ಪೇಪರ್ ಬಾಯ್‍ಗಳಾಗುವುದಕ್ಕೆ ಆಗುವುದಿಲ್ಲ. ಈ ರೀತಿ ಉಚಿತವಾಗಿ ಹಂಚಿದರೂ ಈಗಿನ ಜಾಹಿರಾತು ತುಂಬಿದ ಪೇಪರುಗಳನ್ನು ಮತ್ತೆ ಹತ್ತು % ಮಾತ್ರ ಹಂಚಲು ಸಾಧ್ಯ. ಇನ್ನೂ ನಾಲ್ಕರಷ್ಟು ಹೆಚ್ಚು ಕೆಲಸಗಾರರನ್ನು ನೇಮಿಸಿ ಮನೆಮನೆಗೆ ಹಂಚುತ್ತೇವೆ. ಅಂತ ಶುರುಮಾಡಿದರೇ ಅದು ಖಂಡಿತ ಚೆನ್ನಾಗಿ ನಡೆಯುತ್ತದೆ. ಆಹಾ! ಎಲ್ಲಾ ಪತ್ರಿಕೆಗಳು ಉಚಿತವಾಗಿ ಸಿಗುತ್ತಿವೆಯಲ್ಲಾ ಅಂತ ಗ್ರಾಹಕರು ಪುಲ್ ಖುಷ್! ಆದ್ರೆ ಉಚಿತವಾಗಿ ಹಂಚುವವನು ಉಪ್ಪುಕಾರ ತಿನ್ನುವ, ನವರಸಗಳ ಮನುಷ್ಯರೇ ತಾನೆ! ಒಂದು ತಿಂಗಳು ತುಂಬಾ ಖುಷಿಯಾಗಿ ತಾವು ಪಡೆಯುವ ಸಂಬಳಕ್ಕೆ ತಕ್ಕಂತೆ ಉಚಿತವಾಗಿ ಮನೆಮನೆಗೆ ಪೇಪರ್ ತಲುಪಿಸುತ್ತಾರೆ. ಮುಂದಿನ ತಿಂಗಳಿಗೆ ಅವರ ತಲೆ ತಿರುಗುತ್ತದೆ. ಮನೆಮನೆಗೆ ಉಚಿತವಾಗಿ ಏಕೆ ಕೊಡಬೇಕು. ಅದರ ಬದಲು ತೂಕಕ್ಕೆ ಹಾಕಿದರೆ ಸಕ್ಕತ್ ಹಣಬರುತ್ತದಲ್ಲಾ....ಸರಿಯಾಗಿ ಹಾಕಬೇಕು ಎನ್ನುವುದಕ್ಕೆ ಮನೆಯವರೇನು ಹಣಕೊಡುವುದಿಲ್ಲವಲ್ಲ. ಒಂದೆರಡು ದಿನ ತಪ್ಪಿಸಿದರಾಯಿತು..ಅಂದುಕೊಂಡು ಒಂದೆರಡು ದಿನ ತಪ್ಪಿಸಿ ತೂಕಕ್ಕೆ ಹಾಕುತ್ತಾರೆ. ಈ ಸುಲಭದ ಹಣ ಯಾವಾಗ ಕೈತುಂಬ ಸಿಗಲು ಪ್ರಾರಂಭವಾಗುತ್ತದೋ...ಅಲ್ಲಿಗೆ ಅದು ಒಂದು ವಾರ, ತಿಂಗಳು.ಹುಚ್ಚುಮುಂಡೆ ಮದುವೆಯಲ್ಲಿ ಉಂಡವನೇ ಜಾಣ ಅಂತ ಈ ಕೆಲಸಗಾರರೆಲ್ಲಾ ಚೆನ್ನಾಗಿ ಹಣ ಮಾಡುತ್ತಾರೆ....ಹೀಗೆ ಮುಂದುವರಿದು ಪತ್ರಿಕೋದ್ಯಮದ ಮಾರುಕಟ್ಟೆ ವ್ಯವಸ್ಥೆಯೇ ಅಡ್ಡದಾರಿ ಹಿಡಿಯುತ್ತದೆ. ಜಾಹಿರಾತು ನೀಡುವವರಿಗೆ ಸತ್ಯ ಗೊತ್ತಾಗಿ ಅವರು ಪತ್ರಿಕೆಗೆ ಕೊಡುವ ಜಾಹಿರಾತು ನಿಲ್ಲಿಸಿದರೆ ಅದನ್ನೇ ನಂಬಿಕೊಂಡು ಪತ್ರಿಕೆ ನಡೆಸುವ ಶೂರ ಧೀರರೆಲ್ಲಾ ಟುಸ್ ಪಟಾಕಿಗಳಾಗಿ ತಲೆಮೇಲೆ ಟವಲ್ ಹಾಕಿಕೊಂಡು ಮಕಾಡೆ ಮಲಗಬೇಕಾಗುತ್ತದೆ.
ಈಗ ಹೇಳಿ ಮುಂಜಾನೆ ದಿನಪತ್ರಿಕೆಯ ನಿಜವಾದ ಹೀರೋಗಳು ಯಾರು? ಭಾರತಕ್ಕೆ ನಂಬರ್ ಒನ್ ಎಂದು ಮೀಸೆ ತಿರುವುವ ಟೈಮ್ಸ್ ಅಫ್ ಇಂಡಿಯಾನ, ಡೆಕ್ಕನ್, ಪ್ರಜಾವಾಣಿ, ಕನ್ನಡಪ್ರಭ, ಉದಯವಾಣಿಯ....ಇತ್ಯಾದಿ ಹತ್ತಾರು ಪತ್ರಿಕೆಗಳ ಮಾಲೀಕರಾ, ತಾವು ಅದ್ಬುತ ಕಾಲಂ ಲೇಖಕರು ಎಂದು ಬೀಗುವ ಸಂಪಾದಕರಾ, ಹೊರಪ್ರಪಂಚದಲ್ಲಿರುವವರೆಲ್ಲಾ ದಡ್ಡರು, ನಾವು ಬರೆದಿದ್ದೇ ವೇದವಾಕ್ಯ ಎಂದುಕೊಂಡು ಬೈಲೈನ್ ಹಾಕಿಕೊಳ್ಳುವ ವರದಿಗಾರರು ಮತ್ತು ಡೆಸ್ಕ್ ಅಪರೇಟರುಗಳಾ? ವಾರಕ್ಕೊಂದು ಕಾಲಂ ಬರೆಯುವ ಪ್ರಖ್ಯಾತ ಲೇಖಕರಾ? ಪುಟಗಟ್ಟಲೇ ಜಾಹಿರಾತು ಹಾಕಿಸಿ ಜನರನ್ನು ಟೆಂಪ್ಟ್ ಮಾಡುತ್ತಿರುವ ಜಾಹಿರಾತು ಕಂಪನಿಗಳಾ? ಇರುವುದರಲ್ಲೇ ಸ್ವಲ್ಪ ವಾಸಿ ಎನ್ನುವಂತೆ ವೆಂಡರುಗಳನ್ನು ಪುಸಲಾಯಿಸುತ್ತಾ, ಕಛೇರಿಯಲ್ಲಿ ಸರ್ಕುಲೇಷನ್ ಹೆಚ್ಚು ಮಾಡಬೇಕು ಅಂತ ಮಾಡುವ ತಾಕೀತನ್ನು ಸಹಿಸಿಕೊಳ್ಳುವ ಮಾರುಕಟ್ಟೆ ವಿಭಾಗದ ಪ್ರತಿನಿಧಿಗಳಾ?
ಜನರ ಮಾನಸಿಕ ಸ್ಥಿತಿಗತಿಗಳನ್ನು ಬದಲಾಯಿಸುವ ನಾವೇ ಹೀರೋಗಳು ಅಂತ ಭ್ರಮೆಯಲ್ಲಿರುವವರು. ಈ ಭ್ರಮೆಯಲ್ಲಿರುವುದಕ್ಕೆ ಅವರಿಗೆ ವರ್ಷಕ್ಕೊಮ್ಮೆಯಾದರೂ ಅವರಿಗೆ ವೆಂಡರ್ಸ್ ಡೇ ನೆನಪಾಗುವುದಿಲ್ಲ. ವೆಂಡರುಗಳ ಕಷ್ಟಗಳು ಮನಸ್ಸಿಗೆ ಬರುವುದಿಲ್ಲ. ಇದುವರೆಗೂ ಒಬ್ಬಸಂಪಾದಕ, ಸಹಸಂಪಾದಕನಾಗಲಿ, ವರದಿಗಾರನಾಗಲಿ, ಪ್ರಖ್ಯಾತ ಲೇಖನರಾಗಲಿ, ವಾರಕ್ಕೊಂದು ಕಾಲಂ ಬರೆಯುವ ಡೆಸ್ಕ್ ಆಪರೇಟರುಗಳಾಗಲಿ ಒಬ್ಬ ವೆಂಡರ್‍ಅನ್ನು ಸಂದರ್ಶಿಸಿಲ್ಲ. ಪೇಪರ್ ಹುಡುಗನ ಸ್ಥಿತಿ ಗತಿ ತಿಳಿದಿಲ್ಲ.
ನಂಬರ್ ಒನ್ ಪತ್ರಿಕೆಯಲ್ಲಿ ಮಾನವ ಸಂಪನ್ಮೂಲ ವಿಭಾಗದಲ್ಲಿ ಕೆಲಸ ಮಾಡುವವರ ಮನೆಗೆ ಪೇಪರ್ ಹಾಕುತ್ತೇನೆ. ಆರಾಮ ಸೋಪ ಮೇಲೆ ಕುಳಿತು ಟೀಪಾಯ್ ಮೇಲೆ ಕಾಲುಚಾಚಿ ಎದುರಿನ ಗೋಡೆಯಲ್ಲಿನ ನಲವತ್ತು ಇಂಚಿನ ಟಿವಿಯನ್ನು ನೋಡುವ ಅವರಿಗೆ ನಾಲ್ಕು ಅಡಿ ಅಗಲ ಎಂಟು ಅಡಿ ಉದ್ದ ಮಲಗಿದರೆ ಕಾಲು ಚಾಚಲು ಆಗದ ನಮ್ಮ ಪೇಪರ್ ಹುಡುಗನ ಪುಟ್ಟ ಗುಡಿಸಲು ಗೊತ್ತಿಲ್ಲ. ಜಾಹಿರಾತು ಹಣಕ್ಕಾಗಿ ಗಂಡು ಹೆಣ್ಣಿನ ಅರೆಬೆತ್ತಲೆ ಫೋಟೊಗಳನ್ನು ಹಾಕುವ ನಮ್ಮ ಸಂಪಾದಕರಿಗೆ ಅರಕಲು ಕುಪ್ಪಸ, ಸೀರೆ ಹಾಕಿಕೊಂಡ ನಮ್ಮ ಸಾವಿರಾರು ಪೇಪರ್ ಹುಡುಗರ ತಾಯಂದಿರ ಸ್ಥಿತಿಯ ಕಲ್ಪನೆಯಿಲ್ಲ.
ಈಗ ಮತ್ತೆ ಮೊದಲೆರಡು ಪ್ಯಾರಗಳನ್ನು ನೆನಪಿಸಿಕೊಳ್ಳೋಣ. ನಮ್ಮ ಭಾರತದಾಧ್ಯಂತ ಇರುವ ಇಂಥ ನೂರಾರು ಸಾವಿರಾರು, ಲಕ್ಷಾಂತರ ಪುಟ್ಟ ಪುಟ್ಟ ಮನೆ, ಗುಡಿಸಲು,...ಮುಂತಾದವುಗಳಲ್ಲಿರುವ ನಮ್ಮ ಪೇಪರ್ ಹಾಕುವ ಹುಡುಗರೆಲ್ಲಾ ನಾಳೆಯಿಂದ ಪೇಪರ್ ಹಾಕಬಾರದೆಂದು ತೀರ್ಮಾನಿಸಿ "ಸಮೂಹ ಸನ್ನಿಗೆ ಒಳಗಾಗಿಬಿಟ್ಟರೆ"........ನಮ್ಮ ಭಾರತದಲ್ಲಿ ಮುಂಜಾನೆ ದಿನಪತ್ರಿಕೆ ಉದ್ಯಮ ಮಕಾಡೆ ಮಲಗುತ್ತದೆ. ಈಗ ನಿಮ್ಮ ಎದೆ ಬಡಿತವೂ ಒಂದು ಕ್ಷಣ ನಿಂತಂತೆ ಅಯ್ತಲ್ಲವೇ....ಜನರನ್ನು ಮೆಚ್ಚಿಸುವ ಸಲುವಾಗಿ ಉಪ್ಪು ಖಾರ, ಮಸಾಲೆಗಳನ್ನು ತಮ್ಮ ಲೇಖನಗಳಲ್ಲಿ ತುರುಕುವ, ನಮ್ಮ ಪತ್ರಿಕೆಗಳ ಸಂಪಾದಕರು, ವರದಿಗಾರರು ಈ ಮುಂಜಾನೆ ಹೀರೋಗಳು ಕೈಕೊಟ್ಟರೆ.....ಆ ಮಸಾಲಯುಕ್ತ ಬಿಸಿಬಿಸಿ ಪತ್ರಿಕೆಗಳನ್ನು ತಮ್ಮ ತಮ್ಮ ಮನೆಗಳ ಟೆರಸ್ ಮೇಲೆ ಹರಡಿ ಅದರ ಮೇಲೆ ಹಪ್ಪಳ ಸಂಡಿಗೆಗಳನ್ನು ಒಣಗಿಸುತ್ತಾ, ಅದನ್ನು ಕದ್ದು ತಿನ್ನಲು ಬರುವ ಕಾಗೆ ಕೋತಿಗಳನ್ನು ಓಡಿಸುತ್ತಾ ಕೂರಬೇಕಾಗುತ್ತದೆ. ಏನಂತೀರಿ?
ಇದುವರೆಗೂ ದಿನಪತ್ರಿಕೆ ವೆಂಡರುಗಳು ಮತ್ತು ಪೇಪರ್ ಹುಡುಗರು ಗ್ರೇಟ್, ಸೆಲೆಬ್ರಿಟಿಗಳು, ಹೀರೋಗಳು, ಅವರಿಲ್ಲದಿದ್ದರೇ ಬೆಳಗಾಗುವುದಿಲ್ಲ ಅಂತ ಹೇಳಲಿಕ್ಕೆ ನಾನು ಈ ಲೇಖನವನ್ನು ಖಂಡಿತ ಬರೆಯಲಿಲ್ಲ. ಸದ್ಯ ನಮ್ಮ ಸ್ಥಿತಿಗತಿಯನ್ನು ನೇರವಾಗಿ ವಿವರಿಸುತ್ತಿದ್ದೇನೆ ಅಷ್ಟೆ. ಹಾಗಾಂತ ಎಲ್ಲಾ ದಿನಪತ್ರಿಕೆ ಸಂಪಾದಕರು, ರಿಪೋರ್ಟರುಗಳು, ಡೆಸ್ಕ್ ಆಪರೇಟರುಗಳು ಮಾರುಕಟ್ಟೆ ಪ್ರತಿನಿಧಿಗಳು ಕೆಟ್ಟವರಲ್ಲ. ಒಳ್ಳೆಯ ಸಂಪಾದಕರು, ರೆಪೋರ್ಟರುಗಳು, ಪ್ರತಿನಿಧಿಗಳು ಇದ್ದಾರೆ. ಅವರಿಂದಲೇ ವೆಂಡರುಗಳ ಮತ್ತು ಪೇಪರ್ ಹುಡುಗರಿಗೆ ಬೆಳಗಿನ ಕೆಲಸ ಸಿಗುತ್ತಿದೆ. ಅದಕ್ಕಾಗಿ ಈ ಲೇಖನದಿಂದಾಗಿ ಬೇರೆ ಗ್ರಾಹಕರು, ಮತ್ತು ಪತ್ರಿಕೋದ್ಯಮದವರು ತಪ್ಪು ತಿಳಿಯಬಾರದಾಗಿ ವಿನಂತಿ.
ಮತ್ತೊಂದು ವಿಚಾರವೇನೆಂದರೆ, ಈ ಲೇಖನದಲ್ಲಿರುವ ಕೆಲವು ಅಂಶಗಳನ್ನು ತುಂಬಾ ನೇರವಾಗಿ ಬರೆದಿರುವುದರಿಂದ ನನ್ನ ಪತ್ರಕರ್ತ ಗೆಳೆಯರು, ಪತ್ರಿಕೆಯಲ್ಲಿ ಕೆಲಸಮಾಡುವ ಡೆಸ್ಕ್ ಆಪರೇಟರುಗಳು, ಸಂಪಾದಕರು ಒಪ್ಪದಿರಬಹುದು. ಇಲ್ಲಿ ಇವೆರೆಲ್ಲ ಕೆಟ್ಟವರು ಅಂತ ಹೇಳಲು ಪ್ರಯತ್ನಿಸಿಲ್ಲ. ಯಾರ ಮನಸ್ಸನ್ನು ನೋಯಿಸುವ ಉದ್ದೇಶವೂ ನನಗಿಲ್ಲ. ನಮ್ಮ ಮುಂಜಾನೆ ಸತ್ಯದ ನೋವುಗಳನ್ನು ಹೊರಜಗತ್ತಿಗೆ ತೋರಿಸಲು ಪ್ರಯತ್ನಿಸಿದ್ದೇನೆ. ಮತ್ತೆ ಸಮೂಹ ಸನ್ನಿ ಎನ್ನುವ ಪದಕ್ಕೂ ಚಳುವಳಿಗೂ ಹೋಲಿಸಿ ಇಲ್ಲಿ ಬರೆದಿರುವುದು ತಪ್ಪು ಅಂತ ನನಗೂ ಗೊತ್ತು. ಆದಕ್ಕಾಗಿ ಅದನ್ನು "ಆರೋಗ್ಯಕರ ಸಮೂಹ ಸನ್ನಿ" ಎಂದು ಹೇಳಿದ್ದೇನೆ. ನಾನು ಬರೆಯುವ ಸಮಯದಲ್ಲಿ ನನಗೆ ಹೊಳೆದ ಪದ ಇದೊಂದೆ. ಆ ಕಾರಣಕ್ಕೆ ಅದನ್ನೇ ಹೈಲೈಟ್ ಮಾಡಿ ಲೇಖನದ ದಿಕ್ಕು ತಪ್ಪಿಸಬಾರದಾಗಿ ವಿನಂತಿ. ಈ ಪದಕ್ಕಿಂತ ಉತ್ತಮ ಪದವಿದ್ದಲ್ಲಿ ತಿಳಿಸಿದರೆ ಸ್ವಾಗತಿಸುತ್ತೇನೆ ಮತ್ತು ನಾನು ಕಲಿತಂತಾಗುತ್ತದೆ.
ಮತ್ತೆ ಅನಾಮಧೇಯ ನಾಮದಲ್ಲಿ ವಿತಂಡವಾದ, ಇತ್ಯಾದಿ comments ನೀಡಿದರೆ ಅದಕ್ಕೆ ಉತ್ತರಿಸದೆ ಡಿಲಿಟ್ ಮಾಡಲಾಗುವುದು. ಇಲ್ಲಿರುವ ವಿಚಾರಗಳಿಗಾಗಿ ನಿಮ್ಮ ಪ್ರತಿಕ್ರಿಯೆಗಳು ಆರೋಗ್ಯಕರವಾಗಿದ್ದು ಚರ್ಚೆಗೆ ಅವಕಾಶ ಮಾಡಿಕೊಟ್ಟರೆ ಎಲ್ಲರಿಂದ ಎಲ್ಲರೂ ಕಲಿಯಲು ಅವಕಾಶವಾಗುತ್ತದೆ.
ಈ ಲೇಖನ "ಸಂಪಾದಕೀಯ" ಬ್ಲಾಗಿನಲ್ಲೂ ಪ್ರಕಟವಾಗಿದೆ ಬೇಕಿದ್ದವರು ಅಲ್ಲಿಯೂ ಓದಬಹುದು.
http://sampadakeeya.blogspot.com/2011/10/blog-post.html#comments
ಚಿತ್ರಗಳು ಮತ್ತು ಲೇಖನ
ಶಿವು.ಕೆ