ಅರೆರೆ... ಇದೇನಿದು ಇವನು ಯಾವುದೋ ಹಾಲಿಹುಡ್ ಸಿನಿಮಾ ಕತೆಯನ್ನು ಹೇಳುತ್ತಿದ್ದಾನೆ ಎಂದುಕೊಂಡಿರಾ? ಖಂಡಿತ ಇಲ್ಲ. ಒಂದು ಗಿಡದ ಎಲೆಯ ಮರೆಯಲ್ಲಿ ಎಲೆಯ ಬಣ್ಣಕ್ಕೆ ಹೊಂದಿಕೊಂಡಂತೆ ಕಾಯುತ್ತಾ ಕುಳಿತಿದ್ದ ಒಂದು ಪ್ರೈಯಿಂಗ್ ಮಾಂಟಿಸ್ ಎನ್ನುವ ಎಲೆಯ ಬಳ್ಳಿ ಬಣ್ಣದ ಹುಳು ತನ್ನ ಹತ್ತಿರ ಹಾರಿಬಂದು ಕುಳಿತ ಒಂದು ಗ್ಲಾಸ್ ಟೈಗರ್ ಚಿಟ್ಟೆಯನ್ನು ತನ್ನೆರಡು ಬಲಿಷ್ಟ ಕೈಗಳಿಂದ ಹಿಡಿದು ನಂತರ ನಿದಾನವಾಗಿ ಅದರ ತಲೆಯನ್ನು ಒಮ್ಮೆ ನೆಕ್ಕಿದಾಗ ಅದು ಮುತ್ತಿಡುತ್ತಿರಬಹುದು ಎನ್ನುವುದನ್ನು ನನ್ನ ಹೊಸ ಟ್ಯಾಮರಾನ್ ೯೦ಎಮ್ ಎಮ್ ಮ್ಯಾಕ್ರೋ ಲೆನ್ಸ್ ಹಾಕಿದ ೫ಡಿ ಕ್ಯಾಮೆರದ ವ್ಯೂ ಪೈಂಡರ್‍ಉನೊಳಗೆ ನೋಡಿದಾಗ ಅನ್ನಿಸಿತ್ತು. ಮ್ಯಾಕ್ರೋ ಲೆನ್ಸಿನ ಮೂಲಕ ಕಾಣುವ ದೃಶ್ಯವಳಿಗಳು ಕೊಡುವ ಅನುಭವ ಮತ್ತು ಅನುಭೂತಿಯೇ ಬೇರೆಯದು. ಚಿಟ್ಟೆಯನ್ನು ಬೇಟೆಯಾಡಿದ್ದ ಪ್ರೈಯಿಂಗ್ ಮಾಂಟಿಸ್ ಮಿಡತೆಯ ಉದ್ದವಾದ ಹಲ್ಲುಗಳು ಸಿನಿಮಾ ಟಾಕೀಸಿನ ದೊಡ್ಡ ತೆರೆಯ ಮೇಲೆ ಕಾಣಿಸುವ ಡೈನೋಸಾರ್‌ನ ಹಲ್ಲುಗಳಂತೆ ಕಂಡು ಚಿಟ್ಟೆಯ ತಲೆ ಮಾಂಸವನ್ನು ತನ್ನ ಹರಿತವಾದ ಹಲ್ಲುಗಳಿಂದ ಕಚ್ಚಿ ಎಳೆದು ತಿನ್ನುತ್ತಿರುವುದನ್ನು ನೋಡುತ್ತಾ ಫೋಟೊ ಕ್ಲಿಕ್ಕಿಸುವುದನ್ನೇ ಮರೆತಿದ್ದೆ.
ಇನ್ನೂ ಹೀಗೆ ಬಿಟ್ಟರೆ ಕೆಲವೇ ಕ್ಷಣಗಳಲ್ಲಿ ಚಿಟ್ಟೆಯ ದೇಹವನ್ನು ಪೂರ್ತಿ ತಿಂದುಹಾಕಿ ರೆಕ್ಕೆಯನ್ನು ನಿಮ್ಮ ಮಕ್ಕಳಿಗೆ ಆಡಲು ಇಟ್ಟುಕೊಳ್ಳಿ ಅಂತ ಈ ಪ್ರೈಯಿಂಗ್ ಮಾಂಟಿಸ್ ತನ್ನ ದೊಡ್ಡ ಕುಂಡಿ ತೋರಿಸಿ ಹೋಗುವುದು ಗ್ಯಾರಂಟಿ ಎಂದುಕೊಂಡು ತಡಮಾಡದೆ ಸತತವಾಗಿ ಕ್ಲಿಕ್ಕಿಸತೊಡಗಿದೆ. ಈ ಸನ್ನಿವೇಶವನ್ನು ನಾನೊಬ್ಬನೇ ಕ್ಲಿಕ್ಕಿಸುತ್ತಿರಲಿಲ್ಲ. ನನ್ನ ಜೊತೆಗೆ ಸಮ್ಮಿಲನ ಶೆಟ್ಟಿ, ರಾಕೇಶ್ ಕುಮಾರ್ ಕೊಣಜೆ, ಗುರು ಕಾಪು, ರತ್ನಾಕರ, ರವಿರಾಜರಾವ್, ಇರ್ಷಾದ್ ಅಕ್ಬರ್, ತಮ್ಮದೇ ಕೋನಗಳಿಂದ ಫೋಟೊ ತೆಗೆಯುತ್ತಿದ್ದರು.
ಇನ್ನೂ ಸ್ವಲ್ಪ ಹತ್ತಿರದಿಂದ ಕ್ಲಿಕ್ಕಿಸಿದಾಗ
ನಾವಿಷ್ಟೂ ಜನ ಛಾಯಗ್ರಾಹಕರು ಅದರ ಸುತ್ತ ನಿಂತು ಅದು ತಿನ್ನುತ್ತಿರುವ ದೃಶ್ಯಗಳನ್ನು ಸತತವಾಗಿ ಕ್ಲಿಕ್ಕಿಸುತ್ತಿದ್ದರೂ ನಮ್ಮನ್ನು ನೋಡಿಯೂ ನೋಡದಂತೆ ಮೈಮರೆತು ಗಬಗಬನೆ ಅನಾಗರೀಕನಂತೆ ತಿನ್ನುತ್ತಿದೆಯಲ್ಲ! ನಾವು ಮನುಷ್ಯರಾದರೆ ಒಬ್ಬರೇ ಇದ್ದಾಗ ಅನೇಕ ಸಾರಿ ಹೀಗೆ ಗಬಗಬನೆ ತಿಂದರೂ ಎದುರಿಗೆ ಗೆಳೆಯರು, ನೆಂಟರು, ಬಂಧುಗಳು, ನಮ್ಮ ಕಚೇರಿಯ ಬಾಸುಗಳು, ಕೊನೆಯ ಪಕ್ಷ ಹೆಂಡತಿ ಮಕ್ಕಳು ಎದುರಿಗಿದ್ದಾಗಲೂ ಸ್ವಲ್ಪ ನಯ ನಾಜೂಕು, ಶಿಸ್ತುನಿಂದ ತಿನ್ನುತ್ತೇವಲ್ಲವೇ...ಕೆಲವೊಂದು ಪಾರ್ಟಿಗಳಲ್ಲಿ ಎಲ್ಲರೆದುರು ಸ್ವಲ್ಪವೇ ತಿಂದ ಶಾಸ್ತ್ರ ಮಾಡಿ ಶೋ ಅಪ್ ಮಾಡುತ್ತೇವೆ ಏಕೆ? ಪ್ರಕೃತಿಯೊಳಗಿಂದ ಬಂದು ಪ್ರಕೃತಿಯೊಳಗೆ ಒಂದಾಗಿರುವ ಈ ಪ್ರೈಯಿಂಗ್ ಮಾಂಟಿಸ್ ಪ್ರಕೃತಿ ಸಹಜವಾದ ಗುಣವನ್ನು ಹೊಂದಿದೆ ಅಂತ ಅಂದುಕೊಂಡರೂ, ನಾವು ಕೂಡ ಪ್ರಕೃತಿಯಿಂದಲೇ ಬಂದವರು. ಆದರೂ ಈ ರೀತಿ ಏಕೆ ವರ್ತಿಸುತ್ತೇವೆ? ಅತಿವಿನಯವಂತಿಕೆ, ತಿನ್ನುವ ಉಣ್ಣುವ ವಿಚಾರದಲ್ಲಿ ಕೆಲವೊಂದು ಲೆಕ್ಕಾಚಾರ, ಶಿಷ್ಟಾಚಾರ, ಎದುರಿಗೆ ಯಾರಾದರೂ ನೋಡುತ್ತಿದ್ದಾರೆ ಎನ್ನುವುದು ತಿಳಿದರೆ ಮುಗೀತು. ನಾವು ಗಬಗಬನೆ ತಿನ್ನುವ ಆಸೆಯಿದ್ದರೂ ಅವರೆದುರು ಬೇಕಂತಲೇ ಕೇವಲ ಮೂರು ಬೆರಳುಗಳನ್ನು ಬಳಸಿಕೊಂಡು ಪುಟ್ಟ ತುತ್ತುಗಳನ್ನು ಬಾಯಿಗಿಟ್ಟುಕೊಳ್ಳುತ್ತೇವೆ. ಚೆನ್ನಾಗಿ ಅಗಿದು ರುಚಿಯನ್ನು ಸವಿಯಬೇಕೆನ್ನುವ ಆಸೆಯಿದ್ದರೂ, ಬಾಯೊಳಗೆ ಕಂಡರೂ ಕಾಣದ ಹಾಗೆ ಅಗಿದು ನುಂಗುತ್ತೇವಲ್ಲ ಏಕೆ? ಅದಕ್ಕಿಲ್ಲದ ಸಂಸ್ಕಾರ ನಮಗ್ಯಾಕೆ? ನಾವು ಮನುಷ್ಯರು ನಮಗೆ ದೇವರು ಕೊಟ್ಟ ಬುದ್ದಿವಂತಿಕೆಯಿದೆ. ಆಲೋಚನೆ ಮಾಡುವ ಶಕ್ತಿಯಿದೆ, ಸಂಸ್ಕಾರವಂತರಾಗಿರುವುದು ಬದುಕಿನಲ್ಲಿ ಮುಖ್ಯವೆಂದುಕೊಂಡರೂ ಈ ಕೀಟಗಳಿಗೂ ಬುದ್ದಿವಂತಿಕೆಯಿದೆಯಲ್ಲ, ಅಲೋಚನೆ ಮಾಡುವ ಶಕ್ತಿಯಿದೆಯಲ್ಲಾ...ಇರಲೇಬೇಕು ಏಕೆಂದರೆ ನಮಗೆ ಬುದ್ದಿ ಮತ್ತು ಆಲೋಚನೆ ಮಾಡುವ ಶಕ್ತಿ, ಕೀಟಗಳಿಗಿಂತ ಸಾವಿರ ಪಟ್ಟು ದೊಡ್ಡ ಗಾತ್ರದ ದೇಹ ನೀಳವಾದ ಕೈಗಳು, ನೋಡುವ ದೃಷ್ಠಿ, ಓಡಲು ಬೇಕಾದ ಬಲಿಷ್ಟವಾದ ಕಾಲುಗಳೆಲ್ಲಾ ಇದ್ದರೂ ಹೀಗೆ ಕುಳಿತಿರುವ ಚಿಟ್ಟೆಯನ್ನು ನಾವು ಬರಿಕೈಯಲ್ಲಿ ಹಿಡಿಯಲು ಆಗುವುದಿಲ್ಲ. ಆದ್ರೆ ಹಾರಾಡದ ಇದೇ ಪ್ರೈಯಿಂಗ್ ಮಾಂಟಿಸ್ ನಮಗಿಂತ ಗಾತ್ರದಲ್ಲಿ ಸಾವಿರ ಪಟ್ಟು ಚಿಕ್ಕದಿದ್ದರೂ ಮರೆಯಲ್ಲಿ ಕಾಯ್ದು ಕುಳಿತು ಹಾರಾಡುವ ಚಿಟ್ಟೆ ಕುಳಿತ ತಕ್ಷಣ ಕ್ಷಣಮಾತ್ರದಲ್ಲಿ ಹಿಡಿದುಬಿಡುತ್ತದಲ್ಲ..ಇಷ್ಟೆಲ್ಲಾ ಮಾಡುವುದಕ್ಕೆ ಅದಕ್ಕೆ ಬುದ್ಧಿವಂತಿಕೆ, ಮುಂದಾಲೋಚನೆ ಇರಲೇಬೇಕಲ್ಲವೇ?....ಹೀಗೆ ನನ್ನದೇ ಅಲೋಚನೆಯಲ್ಲಿ ಮಗ್ನನಾಗುವ ಹೊತ್ತಿಗೆ ಪ್ರೈಯಿಂಗ್ ಮಾಂಟಿಸ್, ಗ್ಲಾಸ್ ಟೈಗರ್ ಚಿಟ್ಟೆಯ ಪೂರ್ತಿ ದೇಹವನ್ನು ತಿಂದು ರೆಕ್ಕೆಯನ್ನು ಕೆಳಕ್ಕೆ ಬೀಳಿಸಿತ್ತು.
ಅದು ತಿನ್ನುವ ಪರಿಯನ್ನು ನೋಡಲು ಮತ್ತಷ್ಟು ಹತ್ತಿರದಿಂದ ನೋಡಿದಾಗ...ಕಂಡಿದ್ದು ಹೀಗೆ..
ಜೊತೆಗಿದ್ದವರೆಲ್ಲಾ ಇವತ್ತಿನ ಮಟ್ಟಿಗೆ ಇದು ನಮಗೆ ಅದ್ಬುತ ಫೋಟೊ, ನಮಗಿಷ್ಟು ಸಾಕು ಎಂದು ಬೇರೆ ಚಿಟ್ಟೆಗಳನ್ನು ಹುಡುಕುತ್ತಾ ಹೋದರು. ಆದ್ರೆ ನನಗೆ ಈ ಪ್ರೈಯಿಂಗ್ ಮಾಂಟಿಸ್ ತಿಂದ ಮೇಲೆ ಏನು ಮಾಡಬಹುದು ಎನ್ನುವುದನ್ನು ನೋಡುವ ಕುತೂಹಲ. ಮತ್ತೆ ಕ್ಯಾಮೆರ ವ್ಯೂಪೈಂಡರ್ ಮೂಲಕ ನೋಡತೊಡಗಿದೆ. ಆಷ್ಟರಲ್ಲಿ ಸಮ್ಮಿನಲ ಶೆಟ್ಟಿಯವರ ಅಮ್ಮ ನಮ್ಮನ್ನೆಲ್ಲ ತಿಂಡಿಗೆ ಕರೆದರು. ಈಗ ಬಂದೆವು ಎಂದುಕೊಂಡು ಮತ್ತೆ ತಮ್ಮ ಕಾರ್ಯದಲ್ಲಿ ಎಲ್ಲರೂ ಮಗ್ನರಾದೆವು. ಚಿಟ್ಟೆಯನ್ನು ತಿಂದು ಆಯ್ತಲ್ಲ...ಹಿಂಭಾಗವೊಂದು ಬಿಟ್ಟು ಸುಲಭವಾಗಿ ಎಲ್ಲ ದಿಕ್ಕಿಗೂ ತನ್ನ ಕತ್ತನ್ನು ತಿರುಗಿಸುವ ಅವಕಾಶವಿರುವುದರಿಂದ ಈ ಪ್ರೈಯಿಂಗ್ ಮಾಂಟಿಸ್ ಸುಮ್ಮನೆ ಸುತ್ತಲೂ ತನ್ನ ವಿ ಆಕಾರದ ತಲೆಯನ್ನು ಎಲ್ಲಾ ಕಡೆ ನಿದಾನವಾಗಿ ತಿರುಗಿಸಿ ನೋಡಿತು.
ತನ್ನೆದುರಿದ್ದವರೆಲ್ಲಾ ಜಾಗ ಖಾಲಿಮಾಡಿ ನಾನೊಬ್ಬನಿರುವುದು ಅದಕ್ಕೆ ಕಾಣಿಸರಬೇಕು. ಎಲ್ಲರೂ ಎದ್ದು ಹೋದ ಮೇಲೆ ಇವನದೇನು ವಿಶೇಷ..ಎದುರಿಗಿದ್ದರೇ ಇದ್ದುಕೊಳ್ಳಲಿ..ನನ್ನ ಊಟವನ್ನು ಕಿತ್ತುಕೊಳ್ಳಲಿಲ್ಲವಾದ್ದರಿಂದ ಈಗ ನನಗೆ ಸ್ಪರ್ಧಿಯಲ್ಲ...ಇದುವರೆಗೂ ನನಗೇನು ತೊಂದರೆಯನ್ನು ಕೊಟ್ಟಿಲ್ಲವಲ್ಲವಾದ್ದರಿಂದ ವೈರಿಯಂತೂ ಅಲ್ಲವೇ..ಅಲ್ಲ. ಮಾಡಲು ಬೇರೆ ಕೆಲಸವಿಲ್ಲದ್ದರಿಂದ ಹೀಗೆ ನನ್ನನ್ನೇ ನೋಡುತ್ತ ಕುಳಿತಿರುವ ಸೋಮಾರಿ ಇರಬೇಕು ಎಂದುಕೊಂಡಿತ್ತೇನೋ...ನನ್ನನ್ನು ಗಮನಿಸದೇ ತನ್ನ ತಲೆಯನ್ನು ಅದರ ಕೈಗಳಿಂದ ಉಜ್ಜಿಕೊಳ್ಳತೊಡಗಿತು.
ಒಂದೈದು ನಿಮಿಷ ಹೀಗೆ ಮಾಡಿ, ಇದುವರೆಗೂ ತಲೆಕೆಳಕಾಗಿ ನೇತಾಡಿಕೊಂಡೇ ಚಿಟ್ಟೆಯನ್ನು ತಿಂದುಹಾಕಿದ್ದ ಇದು ಈಗ ನಿದಾನವಾಗಿ ಕೆಳಗಿನಿಂದ ಮೇಲ್ಮುಖವಾಗಿ ಎಲೆಗಳ ಮೇಲೆ ಸರಿಯತೊಡಗಿತು. ಅದನ್ನು ಗಮನಿಸಿ ಫೋಟೊ ಕ್ಲಿಕ್ಕಿಸುತ್ತಿದ್ದ ನಾನು ಅದು ಮೇಲ್ಮುಖವಾಗಿ ಹೋಗುತ್ತಿದ್ದಂತೆ ನನ್ನ ಕ್ಯಾಮೆರವನ್ನು ಹಿಂದೆ ಸರಿಸಿ ಸ್ಟ್ಯಾಂಡ್ ಎತ್ತರಿಸಿಕೊಳ್ಳುವಷ್ಟರಲ್ಲಿ ಅದು ತನ್ನ ಎಂದಿನ ಟಿಪಿಕಲ್ ಶೈಲಿಯಲ್ಲಿ ತನ್ನೆರಡು ಕೈಗಳಿಂದ ಶರಣಾಗತಿಯಲ್ಲಿ ಕೈಮುಗಿಯುವಂತೆ ನಿಂತು ತಲೆಯನ್ನು ಎಡಭಾಗದಲ್ಲೊಮ್ಮೆ ನೋಡಿ ಆ ಕಡೆ ಮತ್ತೊಂದು ಹುಳುವೋ ಅಥವ ಚಿಟ್ಟೆಯೋ ಕಂಡಿರಬೇಕು. ನಿದಾನವಾಗಿ ಅತ್ತ ಚಲಿಸತೊಡಗಿತ್ತು. ಅದು ಕೈಮುಗಿದು ನಿಲ್ಲುವ ಸಹಜ ಶೈಲಿಯ ಫೋಟೊವನ್ನು ತೆಗೆಯಲಿಕ್ಕೆ ಆಗಲಿಲ್ಲ.
ಸಮಯವನ್ನು ನೋಡಿಕೊಂಡೆ. ಆಗಲೇ ಬೆಳಗಿನ ಒಂಬತ್ತು ಕಾಲು ಆಗಿತ್ತು. ಅರೆರೆ....ಕಾಲುಗಂಟೆಗೆ ಮುಂಚೆಯೇ ಇಲ್ಲಿಂದ ನಾವು ಮಂಗಳೂರಿನ ತೊಕ್ಕಟ್ಟು ಕಡೆಗೆ ಹೊರಟಿರಬೇಕಿತ್ತು. ತಡವಾಗಿ ಹೋಯ್ತಲ್ಲ ಅಂದುಕೊಳ್ಳುತ್ತಾ ಗಡಿಬಿಡಿಯಿಂದ ಕ್ಯಾಮೆರ ಮತ್ತು ಲೆನ್ಸುಗಳನ್ನು ಬ್ಯಾಗಿನೊಳಗೆ ಹಾಕಿ ಫ್ಯಾಕ್ ಮಾಡಿ ಸಮ್ಮಿಲನ ಶೆಟ್ಟಿಯವರ ತಾಯಿಯವರು ರುಚಿಯಾಗಿ ಮಾಡಿದ್ದ ಇಡ್ಲಿ ಮತ್ತು ಚಟ್ನಿಯನ್ನು ತಿನ್ನತೊಡಗಿದೆವು.
ಹಾಗೆ ನೋಡಿದರೆ ನಾನು ಇಲ್ಲಿಗೆ ಬಂದಿದ್ದ ಉದ್ದೇಶವೇ ಬೇರೆ. ರಾಕೇಶ್ ಕುಮಾರ್ ಕೊಣಜೆ ಆಗಾಗ ಬೆಳ್ವಾಯಿಯ ಸಮ್ಮಿಲನ ಶೆಟ್ಟಿ ಮತ್ತು ಅವರ ತಾಯಿಯವರ ಸಹಕಾರದಿಂದ ಯಾವುದೇ ಸ್ವಾರ್ಥವಿಲ್ಲದೇ ಕೇವಲ ಹವ್ಯಾಸಕ್ಕಾಗಿ ಚಿಟ್ಟೆ ಪಾರ್ಕು ಮಾಡಿರುವುದನ್ನು ಹೇಳಿದ್ದರು. ಅದಕ್ಕಾಗಿ ಅವರು ಚಿಟ್ಟೆಗಳು, ಅವುಗಳ ಜೀವನಕ್ರಮ, ಅವುಗಳಿಗೆ ಬೇಕಾದ ಆಹಾರದ ಗಿಡ ಮತ್ತು ಮರಗಳು, ಅವುಗಳ ವೈಜಾನಿಕ ಹೆಸರುಗಳು...ಹೀಗೆ ಪ್ರತಿಯೊಂದನ್ನು ಹಗಲು ರಾತ್ರಿಯೆನ್ನದೇ ಅಧ್ಯಾಯನ ಮಾಡುತ್ತಿರುವುದು ಮತ್ತು ತಮ್ಮ ಮನೆಯ ಸುತ್ತಲಿನ ಜಾಗದಲ್ಲಿಯೇ ಚಿಟ್ಟೆಗಳಿಗಾಗಿಯೇ ಉದ್ಯಾನವನ್ನು ನಿರ್ಮಿಸಿರುವುದನ್ನು ತಿಳಿದು ನಾನು ಒಬ್ಬ ಛಾಯಗ್ರಾಹಕನಾಗಿ ಮತ್ತು ಅದಕ್ಕೂ ಮೀರಿ ಈ ಚಿಟ್ಟೆಗಳ ಜೀವನಕ್ರಮದ ಬಗ್ಗೆ ಮತ್ತಷ್ಟು ಅರಿಯಲು ಮತ್ತು ಚರ್ಚಿಸಲು ಸಮ್ಮಿಲನ ಶೆಟ್ಟಿಯವರ ಚಿಟ್ಟೆಗಳ ಉದ್ಯಾನವನಕ್ಕೆ ಬೇಟಿಕೊಡುವ ಪ್ಲಾನ್ ಮಾಡಿದ್ದೆ.
ಹಿಂದಿನ ರಾತ್ರಿ ಆಭಿಲಾಶ್ ಮನೆಯಲ್ಲಿ ಭೂರಿ ಬೋಜನವನ್ನು ಮಾಡಿ ಅಲ್ಲಿಯೇ ತಂಗಿದ್ದು ಮರುದಿನ ಮುಂಜಾನೆ ಐದುಗಂಟೆಗೆ ಎದ್ದು ಸಿದ್ದರಾಗಿ ಆರುವರೆಯ ಹೊತ್ತಿಗೆ ಎಂಟು ಕಿಲೋಮೀಟರ್ ದೂರದ ಬೆಳ್ವಾಯಿ ಎಂಬ ಪುಟ್ಟ ಊರಿನ ಒಳಭಾಗದಲ್ಲಿರುವ ಶಮ್ಮಿಲನ ಶೆಟ್ಟಿಯವರ ಮನೆಗೆ ನಾನು ರಾಕೇಶ್ ಮತ್ತು ಅಭಿಲಾಶ್ ಕಾರಿನಲ್ಲಿ ಹೊರಟೆವು. ಹಿಂದಿನ ದಿನದ ಮಳೆಯಿಂದಾಗಿ ಮುಂಜಾವು ಹಿತವಾಗಿ ತಂಪಾಗಿತ್ತು. ನಾವು ಅಲ್ಲಿ ತಲುಪುವ ಮೊದಲೇ ಮಂಗಳೂರು ಮತ್ತು ಉಡುಪಿಯಿಂದ ರವಿರಾಜರಾವ್, ಗುರುಕಾಪು, ರತ್ನಕರ್, ಇರ್ಷಾದ್ ಅಕ್ಬರ್ ಬಂದಿದ್ದರು. ಮೊದಲ ಬೇಟಿಯಾದ್ದರಿಂದ ಪರಿಚಯ ಮಾಡಿಕೊಂಡೆವು. ಇಂಥ ಹವ್ಯಾಸ ಅದಕ್ಕೆ ಅವರ ತಾಯಿಯವರ ಸಹಕಾರ, ಪಕ್ಕಾ ಹಳ್ಳಿಯವಾತವರಣದಂತಿರುವ ಅವರ ಮನೆ, ಸುತ್ತಲಿನ ಅವರ ಕೈತೋಟದ ವಾತಾವರಣ, ಇಷ್ಟೆಲ್ಲ ಶ್ರಮ, ಶ್ರದ್ಧೆ ಅದಕ್ಕೆ ತಕ್ಕಂತ ತಾಳ್ಮೆಯಿಂದ ಒಂದು ಸೊಗಸಾದ ಚಿಟ್ಟೆ ಉಧ್ಯಾನವನ್ನು ಸೃಷ್ಟಿಸಿರುವ ಸಮ್ಮಿಲನ ಶೆಟ್ಟಿ ನಿಜಕ್ಕೂ ಸಾಧಕರು ಎನಿಸಿತ್ತು. ಒಂದು ಸಂಸ್ಥೆ ಅಥವ ಸರ್ಕಾರ ಮಾಡಬೇಕಾದ ಕೆಲಸವನ್ನು ಒಬ್ಬ ಯುವಕ ಅದು ತನ್ನ ಸ್ವಂತ ಬದುಕಿನ ಕನಸುಗಳನ್ನು ಮತ್ತು ಬದುಕನ್ನು ರೂಪಿಸಿಕೊಳ್ಳುವ ವಯಸ್ಸಿನಲ್ಲಿ ಇಂಥದೊಂದ್ದು ಸಾಧನೆಯ ದಾರಿಯಲ್ಲಿರುವ ಅವರನ್ನು ಮೊದಲ ಸಲ ಬೇಟಿಯಾದಾಗ ಅವರ ಮೇಲೆ ಮತ್ತು ಮಗನಿಗೆ ಸಂಪೂರ್ಣ ಸಹಕಾರ ನೀಡುತ್ತಿರುವ ಅವರ ತಾಯಿಯವರ ಮೇಲೆ ಅಭಿಮಾನ ಮತ್ತು ಗೌರವ ಉಂಟಾಗಿತ್ತು.
ಒಂದಷ್ಟು ಮಾತುಕತೆಯ ನಂತರ ಅವರ ಮನೆಯ ವರಾಂಡದಲ್ಲಿ ನಮ್ಮೆಲ್ಲರ ಗ್ರೂಪ್ ಫೋಟೊ. ನಂತರ ಚಿಟ್ಟೆಗಳನ್ನು ನೋಡಲು ಕ್ಯಾಮೆರ ಸಹಿತ ಹೊರಟೆವು. ಆಗಲೇ ಅನೇಕ ಚಿಟ್ಟೆಗಳು ಪುಟ್ಟದಾಗಿ ಗಿಡದಿಂದ ಗಿಡಕ್ಕೆ ಹಾರಾಟ ನಡೆಸಿದ್ದವು. ಕಣ್ಣಿಗೆ ಕಾಣುವ ಪ್ರತಿಯೊಂದು ಚಿಟ್ಟೆಯ ಸಾಮಾನ್ಯ ಹೆಸರು ಮತ್ತು ವೈಜ್ಞಾನಿಕ ಹೆಸರುಗಳನ್ನು ತಟ್ಟಂತೆ ಹೇಳುತ್ತಾ ದಾರಿಯುದ್ದಕ್ಕೂ ಅಲ್ಲಿಲ್ಲಿ ಕಾಣುವ ಪುಟ್ಟ ಪುಟ್ಟ ಗಿಡಗಳನ್ನು ತೋರಿಸುತ್ತಾ " ಇದು ಗ್ಲಾಸ್ ಟೈಗಸ್‍ಗೆ ಹೋಸ್ಟ್ ಪ್ಲಾಂಟ್, ಕಾಮನ್ ಮರಮಾನ್ ಇದರ ಎಲೆಯನ್ನೇ ತಿನ್ನುವುದು, ಈ ಒಣಗಿದ ಎಲೆಯನ್ನೇ ಒಂದು ಜಾತಿಯ ಚಿಟ್ಟೆಯ ಕ್ಯಾಟರ್ ಪಿಲ್ಲರ್ ತಿನ್ನುತ್ತದೆ..." ಇದು ನೋಡಿ ಸ್ಕಿಪ್ಪರ್, ಈ ವರ್ಷ ಮುನ್ನೂರು ರೀತಿಯ ಚಿಟ್ಟೆಯ ಅಹಾರವಾಗು ಪುಟ್ಟ ಪುಟ್ಟ ಸಸಿಗಳನ್ನು ಈ ವರ್ಷ ಹಾಕಿದ್ದೇವೆ. ಇವೆಲ್ಲ ದೊಡ್ಡದಾಗಲು ಒಂದು ವರ್ಷ ಬೇಕು. ಈ ದಾರಿಗೆ ಬನ್ನಿ ಆ ದಾರಿಯಲ್ಲಿ ಇನ್ನಷ್ಟು ಹೋಸ್ಟ್ ಪ್ಲಾಂಟುಗಳನ್ನು ಹಾಕಿದ್ದೇವೆ. ನೋಡಿ ಎಂದು ಎಂದು ಸಮ್ಮಿಲನ ಶೆಟ್ಟಿ ವಿವರಿಸುತ್ತ ತೋರಿಸತೊಡಗಿದರು. ನಾನು ತನ್ಮಯತೆಯಿಂದ ಆವರ ಮಾತುಗಳನ್ನು ಕೇಳುತ್ತಾ ನನ್ನೊಳಗೆ ಮೂಡಿದ ಪ್ರಶ್ನೆಗಳನ್ನು ಅವರೊಂದಿಗೆ ಚರ್ಚಿಸುತ್ತಿರುವಾಗ ಗುರು, ರತ್ನಕರ್ ಸರ್, ಇರ್ಷಾದ್ ಆಗಲೇ ಕಣ್ಣಿಗೆ ಕಂಡ ಚಿಟ್ಟೆಗಳ ಫೋಟೊಗ್ರಫಿಯಲ್ಲಿ ತೊಡಗಿದ್ದರು. ಅಷ್ಟರಲ್ಲಿ ಒಂದೆರಡು ಚಿಕ್ಕ ಸ್ಕಿಪ್ಪರ್ ಚಿಟ್ಟೆಗಳು ಒಂದು ಹುಲ್ಲುಕಡ್ಡಿಯಿಂದ ಮತ್ತೊಂದು ಹುಲ್ಲುಕಡ್ಡಿಗೆ ಹಾರುತ್ತಬಂದು ಕುಳಿತುಕೊಳ್ಳುತ್ತಿದ್ದವು.
"ಇದರ ಫೋಟೊ ತೆಗೆಯೋಣವಾ" ನಾನು ಉಳಿದವರನ್ನು ಕೇಳಿದೆ.
"ಹೋ ಇವುಗಳಾ ಸರ್, ಅವನ್ನು ತೆಗೆಯಲು ಸಾಧ್ಯವಾಗುವುದಿಲ್ಲ. ನಮ್ಮ ಕ್ಯಾಮೆರ ಹತ್ತಿರ ಹೋಗುತ್ತಿದ್ದಂತೆ ಅವು ಹಾರಿಹೋಗುತ್ತವೆ" ಎಂದರು ಸಮ್ಮಿಲನ ಶೆಟ್ಟಿ.
ಪ್ರಯತ್ನಿಸೋಣ ಎಂದುಕೊಂಡು ರಾಕೇಶ್‍ರ ಕ್ಯಾಮೆರ ಸ್ಯಾಂಡಿಗೆ ನನ್ನ ಕ್ಯಾಮೆರ ಮತ್ತು ಮ್ಯಾಕ್ರೋ ಲೆನ್ಸ್ ತಗುಲಿಸಿ ಚಿಟ್ಟೆಗಿಂತ ನಾಲ್ಕು ಆಡಿ ದೂರದಲ್ಲಿ ನೆಲಮಟ್ಟಕ್ಕೆ ಇಟ್ಟು ಒದ್ದೆಯಾಗಿದ್ದ ಹುಲ್ಲಿನ ನೆಲದ ಮೇಲೆ ಕುಳಿತು ಕ್ಯಾಮೆರವಿದ್ದ ಸ್ಟ್ಯಾಂಡನ್ನು ಅರ್ಧರ್ಧ ಅಡಿ ಮುಂದಕ್ಕೆ ಸರಿಸುತ್ತ ಹೋದೆ. ಐದು ನಿಮಿಷದಲ್ಲಿ ಆ ಸ್ಕಿಪ್ಪರ್ ಚಿಟ್ಟೆಗೆ ನನ್ನ ಕ್ಯಾಮೆರ ಒಂದು ಅಡಿ ದೂರದಲ್ಲಿತ್ತು. ಈ ಮೊದಲು ಕ್ಯಾಮೆರವನ್ನು ಸ್ಟ್ಯಾಂಡಿಗೆ ಹಾಕುವ ಮೊದಲೇ ಕ್ಯಾಮೆರ ಸೆಟ್ಟಿಂಗ್ ಮಾಡಿಕೊಂಡಿದ್ದೆನಾದ್ದರಿಂದ ನಿದಾನವಾಗಿ ಫೋಕಸ್ ಮಾಡಿ ಒಂದು ಫೋಟೊ ತೆಗೆದೆ. ಸ್ವಲ್ಪ ಅಪಾರ್ಚರ್ ಜಾಸ್ತಿ ಮಾಡಿಕೊಂಡು ಇನ್ನೊಂದು ಫೋಟೊ ತೆಗೆಯಬೇಕೆನ್ನುವಷ್ಟರಲ್ಲಿ ಅದು ಬೇರೆ ಕಡೆಗೆ ಹಾರಿಹೋಯ್ತು.
ಪುಟ್ಟ ಸ್ಕಿಪ್ಪರ್ ಚಿಟ್ಟೆ.[ ಫೋಟೊಶಾಫ್ ಸಂಸ್ಕರಣದ ನಂತರ]
ಫೋಟೊ ಶಾಪ್‍ನಲ್ಲಿ ಸಂಸ್ಕರಣ ಮಾಡುವ ಮೊದಲ ಚಿತ್ರ.
ಆ ಚಿಟ್ಟೆಯ ಹತ್ತಿರ ಸಾಗಲು ನಾನು ಮಾಡಿದ ಸರ್ಕಸ್ ನೋಡಿ ಉಳಿದವರಿಗೆ ಆಶ್ಚರ್ಯವಾಗಿತ್ತು. ಇಷ್ಟೊಂದು ತಾಳ್ಮೆ ನಮಗಿಲ್ಲ ಸರ್ ಎಂದರು. ಇದೇನು ಇಲ್ಲ ಹೀಗೆ ಗಂಟೆಗಟ್ಟಲೇ ಅಲುಗಾಡದೇ ಕುಳಿತುಕೊಳ್ಳುವ ಪ್ರಮೇಯ ಬರುತ್ತದೆ ಅದಕ್ಕೆ ಸಿದ್ದರಾಗಿ ಎಂದಾಗ ಎಲ್ಲರೂ ನಕ್ಕರು. ಅಲ್ಲೊಂದು ಎಲೆಯ ಮೇಲೆ ಕಾಮನ್ ಮರ್ಮಾನ್ ಚಿಟ್ಟೆಯ ಕ್ಯಾಟರ್ ಪಿಲ್ಲರ್ ಕಾಣಿಸಿತು. ಹಾಗೆ ಕ್ಲಿಕ್ಕಿಸಿಕೊಂಡೆ.
ಹೀಗೆ ಹುಡುಕಾಟ ಮತ್ತು ಫೋಟೊಗಳ ಕ್ಲಿಕ್ಕಾಟ ನಡೆಯುತ್ತಿರುವಾಗಲೇ ಸರ್ ಇಲ್ಲಿ ನೋಡಿ ಅಂತ ಗುರು ತೋರಿಸಿದರು. ಅದೊಂದು ಹಳದಿಬಣ್ಣದ ಕಿರುಬೆರಳಿಗಿಂತ ಚಿಕ್ಕದಾಗಿರುವ ಒಂದು ಅಪರೂಪದ ಕಪ್ಪೆ ಹಸಿರೆಲೆಯ ಮೇಲೆ ಕುಳಿತಿತ್ತು. ಅದನ್ನು ತಮ್ಮ ಟೆಲಿ ಲೆನ್ಸುಗಳಿಂದ ಕ್ಲಿಕ್ಕಿಸಿಕೊಂಡರು.
ನೋಡಲು ಸುಂದರವಾಗಿ ವಿಭಿನ್ನ ಬಣ್ಣದ್ದು ಆಗಿದ್ದ ಅದನ್ನು ಕ್ಯಾಮೆರದಲ್ಲಿ ವಿಧ ವಿಧ ತಾಂತ್ರಿಕ ಬದಲಾವಣೆ ಮಾಡಿಕೊಂಡು ಕ್ಲಿಕ್ಕಿಸಿದೆ. "ನೀವು ಇದನ್ನು ಕ್ಯಾಮೆರ ಮೂಲಕ ನೋಡುವುದಾದರೆ ನೋಡಬಹುದು. ಬೇಕಾದರೆ ಫೋಟೊ ತೆಗೆಯಬಹುದು" ಅಂದಾಗ ಒಬ್ಬೊಬ್ಬರಾಗಿ ನೋಡಿದರು. ನನ್ನ ಕ್ಯಾಮೆರದಲ್ಲಿಯೇ ಫೋಟೊ ತೆಗೆದರು. ಮ್ಯಾಕ್ರೋ ಲೆನ್ಸು ಮೂಲಕ ಆ ಹಳದಿ ಬಣ್ಣದ ಕಪ್ಪೆಯನ್ನು ಮೊದಲ ಬಾರಿ ನೋಡಿ ಅಚ್ಚರಿಪಟ್ಟರು. ಅದರ ಫೋಟೊಗ್ರಫಿ ಮಾಡುತ್ತಿರುವಾಗಲೇ ಪಕ್ಕದಲ್ಲೊಂದು ಪುಟ್ಟ ಕಂದು ಬಣ್ಣದ ಪ್ರೈಯಿಂಗ್ ಮಾಟಿಂಗ್ ಇತ್ತಲ್ಲ! ಅದನ್ನು ಫೋಟೊಗ್ರಫಿ ಮಾಡಬೇಕೆಂದು ಸಿದ್ದನಾಗುತ್ತಿರುವಾಗಲೇ..."ಸರ್ ಅಲ್ಲಿ ನೋಡಿ ಅಲ್ಲೊಂದು ಪ್ರೈಯಿಂಗ್ ಮಾಂಟಿಸ್ ಒಂದು ಚಿಟ್ಟೆಯನ್ನು ಬೇಟೆಯಾಡಿದೆ" ಅಂದಾಗ ನಾವೆಲ್ಲ ಈ ಪುಟ್ಟ ಪ್ರೈಯಿಂಗ್ ಮಾಂಟಿಸ್ ಬಿಟ್ಟು ಅದನ್ನು ನೋಡಲು ಹೊರಟೆವು. ಅಲ್ಲಿಂದ ಶುರುವಾಯ್ತು ಚಿಟ್ಟೆಯನ್ನು ತಿನ್ನುವ ಪ್ರೈಯಿಂಗ್ ಮಾಂಟಿಸ್ ಮ್ಯಾಕ್ರೋ ಫೋಟೊಗ್ರಫಿ. ಅದರ ಫೋಟೊ ತೆಗೆಯುವ ಅನುಭವವೇ ಮೇಲಿನ ವಿವರಣೆ.
ಮ್ಯಾಕ್ರೋ ಫೋಟೊಗ್ರಫಿ ಕಲಿಕೆಯ ಅನುಭವ...
ಮೂಡುಬಿದ್ರಿಗೆ ಹನ್ನೆರಡು ಕಿಲೋಮೀಟರ್ ದೂರದಲ್ಲಿರುವ ಬೆಳ್ವಾಯಿ ಒಂದು ಪುಟ್ಟ ಪಟ್ಟಣ. ಅದರ ಒಳಭಾಗಕ್ಕೆ ಅರ್ಧಕಿಲೋಮೀಟರ್ ದೂರಕ್ಕೆ ಇರುವುದು ಸಮ್ಮಿಲನ ಶೆಟ್ಟಿಯವರ ಮನೆ ಮತ್ತು ಅವರ ಚಿಟ್ಟೆ ಉದ್ಯಾನವನ. ಮುಂದಿನ ದಿನಗಳಲ್ಲಿ ಇದೊಂದು ಉತ್ತಮ ಚಿಟ್ಟೆಗಳ ಆಶ್ರಯ ತಾಣವಾಗುವುದರಲ್ಲಿ ಸಂಶಯವಿಲ್ಲ. ಅದನ್ನು ಸಾರ್ವಜನಿಕರಿಗೆ ಮತ್ತು ಮಕ್ಕಳಿಗೆ ತೆರೆದುಕೊಳ್ಳುವ ಮೊದಲು ಕೆಲವೊಂದು ವ್ಯವಸ್ಥೆಗಳು ಆಗಬೇಕೆನ್ನುವುದು ನನ್ನ ಅನಿಸಿಕೆ. ಮೊದಲಿಗೆ ಸಾರ್ವಜನಿಕರು ಮತ್ತು ಮಕ್ಕಳು ಇಲ್ಲಿಗೆ ಚಿಟ್ಟೆಗಳನ್ನು ನೋಡಿ ಆನಂದಿಸಲು ಬರುತ್ತಾರೆ. ಈ ಸಂದರ್ಭದಲ್ಲಿ ಚಿಟ್ಟೆಗಳ ಸಂತಾನಕ್ಕಾಗಿ ಹಾಕಿರುವ ಪುಟ್ಟ ಪುಟ್ಟ ಗಿಡಗಳು, ಎಲೆಗಳನ್ನು ತಿಳಿಯದೇ ತುಳಿದು ನಾಶ ಮಾಡುವ ಸಾಧ್ಯತೆಗಳು ಹೆಚ್ಚು. ಎಲ್ಲೆಂದರಲ್ಲಿ ಖುಷಿಯಿಂದ ಓಡಾಡುವಾಗ, ನೆಲದ ಮೇಲೆ, ಎಲೆಗಳ ಕೆಳಗೆ ಹರಿದಾಡುವ ಚಿಟ್ಟೆಗಳ ಲಾರ್ವಗಳು, ಕ್ಯಾಟರ್ ಪಿಲ್ಲರುಗಳು, ಪ್ಯೂಪಗಳನ್ನು ಗೊತ್ತಿಲ್ಲದೇ ತುಳಿದು ಹಾಳು ಮಾಡುವ ಸಾಧ್ಯತೆಗಳು ಹೆಚ್ಚು. ಇದರಿಂದ ಕೆಲವೇ ತಿಂಗಳುಗಳಲ್ಲಿ ಇಲ್ಲಿ ಸೃಷ್ಟಿಯಾಗುತ್ತಿರುವ ಚಿಟ್ಟೆಗಳ ಪ್ರಪಂಚ ನಶಿಸಿಹೋಗಬಹುದು. ಶಮ್ಮಿಲನ ಶೆಟ್ಟಿಯವರು ಈಗಾಗಲೇ ನೂರಾರು ಚಿಟ್ಟೆಗಳ ಹೆಸರು, ವೈಜ್ಞಾನಿಕ ಹೆಸರುಗಳು, ಅವುಗಳ ಜೀವನ ಸರಣಿ, ಆಹಾರ, ಸಂಯೋಗ, ಇತ್ಯಾದಿ ವಿಚಾರಗಳ ಬಗ್ಗೆ ವಿವರಿಸುವ ರೀತಿ ಮತ್ತು ಅದಕ್ಕೆ ಬೇಕಾದ ರೀತಿ ತಮ್ಮದೇ ಸ್ಥಳದಲ್ಲಿ ಅದೆಲ್ಲವನ್ನು ನೋಡಿಕೊಳ್ಳುವ ಪರಿಯನ್ನು ನೊಡಿದಾಗ ಈ ವಿಚಾರದಲ್ಲಿ ಅವರ ಶ್ರದ್ಧೆ ಮತ್ತು ಶ್ರಮ, ಆಸಕ್ತಿ, ಇವೆಲ್ಲವನ್ನೂ ಮೀರಿ ಪ್ರಪಂಚಕ್ಕೆ ಇಂಥದೊಂದು ಸೇವೆ ನಿಜಕ್ಕೂ ಶ್ಲಾಘನೀಯ. ಸದ್ಯಕ್ಕೆ ಇದನ್ನು ಸಾರ್ವಜನಿಕ ಪ್ರವಾಸಿ ತಾಣವನ್ನಾಗಿ ಪರಿವರ್ತಿಸುವ ಬದಲು ಚಿಟ್ಟೆ ಮತ್ತು ಹುಳುಗಳ ಅಧ್ಯಾಯನ, ಅದಕ್ಕೆ ಪೂರಕವಾದ ಛಾಯಾಗ್ರಾಹಣ, ಅದರ ಬಗ್ಗೆ ತಿಳುವಳಿಕೆಗಳು ಇತ್ಯಾದಿಗಳಲ್ಲಿ ಆಸಕ್ತಿಯಿರುವವರಿಗೆ ಮಾತ್ರ ಅವಕಾಶ ಮಾಡಿಕೊಟ್ಟರೆ ಒಳ್ಳೆಯದೆಂದು ನನ್ನ ಭಾವನೆ. ಇದರಿಂದಾಗಿ ಅಲ್ಲಿನ ಚಿಟ್ಟೆಗಳು ಮತ್ತು ಕೀಟಲೋಕವು ಭವಿಷ್ಯದಲ್ಲಿ ಹತ್ತಾರು ಪುಸ್ತಕಗಳು, ಅಧ್ಬುತವಾದ ಛಾಯಚಿತ್ರಗಳು, ಡಿಸ್ಕವರಿ, ಅನಿಮಲ್ ಪ್ಲಾನೆಟ್, ನ್ಯಾಷನಲ್ ಜಿಯಾಗ್ರಫಿ ಚಾನಲ್ಲಿನಲ್ಲಿ ಬರುವಂತ ಅಧ್ಬುತವಾದ ವಿಡಿಯೋ ಡಾಕ್ಯುಮೆಂಟರಿಗಳು ಪೀಳಿಗೆಗೆ ಲಭ್ಯವಾಗುವಂತೆ ಮಾಡುವುದರಲ್ಲಿ ಸಾರ್ಥಕತೆಯಿದೆಯೆಂದು ನನಗೆ ಅನ್ನಿಸುತ್ತದೆ. ಸಾರ್ವಜನಿಕರಿಗೆ ಇದು ನೋಡಲು ಸಿಗಬಾರದು ಎನ್ನುವುದು ನನ್ನ ಮಾತಿನ ಉದ್ದೇಶವಲ್ಲ. ಮೊದಲು ಅಲ್ಲಿ ಸಾರ್ಜಜನಿಕರಿಗೆ ಓಡಾಡಲು ವಿಶೇಷವಾದ ಕಾಲುದಾರಿ, ಚಿಟ್ಟೆಗಳನ್ನು ಪರಿಚಯಿಸುವಂತ ಪ್ರಾತಕ್ಷಿಕೆಗಳು, ಯಾವ ಸಂದರ್ಭದಲ್ಲಿ ಬೇಟಿಯಾಗಬೇಕೆನ್ನುವ ನಿಗದಿತ ಸಮಯ, ಇವೆಲ್ಲವನ್ನು ಸರಿಯಾಗಿ ಪ್ಲಾನ್ ಮಾಡಿ ರೂಪಿಸಿದಲ್ಲಿ ಚಿಟ್ಟೆಗಳ ಅಧ್ಯಾಯನ ಮಾಡುವವರಿಗೂ ಮತ್ತು ನೋಡುವವರು ಇಬ್ಬರಿಗೂ ದಕ್ಕುವಂತೆ ಮಾಡಬಹುದು. ಇಲ್ಲದಿದ್ದಲ್ಲಿ ಬೆಂಗಳೂರು ಮತ್ತು ಮೈಸೂರಿನಲ್ಲಿರುವ ಚಿಟ್ಟೆ ಪಾರ್ಕುಗಳು ಸಾರ್ವಜನಿಕರಿಗೆ ನೋಡಲು ಸಿಕ್ಕಿ ಅವರು ಸಂತೋಷ ಪಟ್ಟರೂ, ಅವು ಇದುವರೆಗೂ ಅಧ್ಯಾಯನ ಕೇಂದ್ರಗಳಾಗಿ ದಾಖಲಾಗಿಲ್ಲ. ಮುಂದಿನ ಪೀಳಿಗೆಯವರಿಗಾಗಿ ಇದುವರೆಗೂ ಏನೊಂದು ದಾಖಲಾಗಿಲ್ಲ. ಏಕೆಂದರೆ ಇವರೆಡೂ ಚಿಟ್ಟೆ ಪಾರ್ಕುಗಳು ಛಾಯಗ್ರಾಹಕರಿಗೆ ಮತ್ತು ಅಧ್ಯಾಯನ ಮಾಡುವವರಿಗೆ ಸರಿಯಾಗಿ ಲಭ್ಯವಾಗಿಲ್ಲದಿರುವುದೇ ಮುಖ್ಯ ಕಾರಣ. ಈ ಸಮ್ಮಿಲನ ಶೆಟ್ಟಿಯವರ ಚಿಟ್ಟೆ ಪಾರ್ಕು ಹಾಗಾಗದಿರಲಿ ಎಂಬ ಆಶಯ ನನ್ನದು.
ಸಮ್ಮಿಲನ ಶೆಟ್ಟಿಯವರ ಉದ್ಯಾನವನದಲ್ಲಿ ಪ್ರೈಯಿಂಗ್ ಮಾಂಟಿಸ್ ಬೇಟೆಯ ಪ್ರಕರಣ ಮತ್ತು ಅದರ ಫೋಟೊಗ್ರಫಿಯಿಂದಾಗಿ ನಾವು ಅಲ್ಲಿಂದ ಹೊರಡುವಾಗ ಮುಕ್ಕಾಲು ಗಂಟೆ ತಡವಾಗಿತ್ತು. ನಾವು ಸರಿಯಾಗಿ ಹನ್ನೊಂದು ಗಂಟೆಗೆ ನಲವತ್ತೇದು ಕಿಲೋಮೀಟರ್ ದೂರದ ಮಂಗಳೂರಿನ ತೊಕ್ಕಟ್ಟುವಿನ ಮಾಧ್ಯಮ ಕೇಂದ್ರದಲ್ಲಿರಬೇಕಿತ್ತು. ಎಲ್ಲರಿಗೂ ವಿಷ್ ಮಾಡಿ ಮತ್ತೊಮ್ಮೆ ಬರುತ್ತೇವೆ ಎಂದು ಹೇಳಿ ಹೊರಟೆವು.
ಮುಂದಿನ ಭಾಗದಲ್ಲಿ ಮಂಗಳೂರು, ಉಡುಪಿಯಲ್ಲಿ ಸ್ಪಂದನ ಟಿವಿಯಲ್ಲಿ ಫೋಟೊಗ್ರಫಿ ಸಂದರ್ಶನ, ದಾರಿಯುದ್ದಕ್ಕೂ ಜೊತೆಯಾದ ಮಳೆ.....
ಚಿತ್ರಗಳು: ರಾಕೇಶ್, ಗುರು ಕಾಪ್, ಶಿವು.ಕೆ
ಲೇಖನ ; ಶಿವು.ಕೆ