Tuesday, December 30, 2008

ಹೊಸ ವರ್ಷಕ್ಕೆ ಹೊಸ ಟೋಪಿಗಳು !!

ಹೊಸ ವರ್ಷದ ಶುಭಾಶಯಗಳು.


ವರ್ಷದ ಮೊದಲ ದಿನ ಯಾವ ವಿಚಾರವನ್ನು ಬ್ಲಾಗಿಗೆ ಹಾಕೋಣವೆಂದುಕೊಂಡಾಗ ನನ್ನ ಆಯ್ಕೆಗಳು ಮೂರು ಇದ್ದವು. ಮೊದಲನೆಯದು ಆಸ್ಸಾಮಿ ಬಿಹು ನೃತ್ಯದ ಸಹೋದರಿಯರಿಯರ ಎರಡನೆ ಭಾಗ. ಎರಡನೆಯದು ನಾನು ತುಂಬಾ ವರ್ಷಗಳಾದ ಮೇಲೆ ಬರೆದ ಕವನ. ಮೂರನೆಯದು ಟೋಪಿಗಳು.

ಕೊನೆಗೆ ಮೂರನೆಯದನ್ನೇ ಆಯ್ಕೆ ಮಾಡಿಕೊಂಡೆ. ಯಾವ ರೀತಿಯ ಟೋಪಿಗಳನ್ನು ಹಾಕುವುದು ? ಮತ್ತೆ ಹೊಸ ಪ್ರಶ್ನೆ ? ಏಕೆಂದರೆ ನನಗೆ ಟೋಪಿ ಹಾಕುವ ಅಲ್ಲಲ್ಲ.......... ಟೋಪಿ ಫೋಟೊ ತೆಗೆಯುವ ಹುಚ್ಚು ಯಾವಾಗ ಹಿಡಿಯಿತೊ ಅಂದಿನಿಂದ ಇವತ್ತಿನವರೆಗೆ ಕಡಿಮೆಯೆಂದರೂ ೮೦ಕ್ಕೂ ಹೆಚ್ಚು ಟೋಪಿಗಳು ನನ್ನ ಖಜಾನೆಯಲ್ಲಿವೆ.

ಅವತ್ತಿನಿಂದ ಇವತ್ತಿನವರೆಗೆ ದಿನಕೊಂದು ಟೋಪಿ ಫೋಟೊ ಕ್ಲಿಕ್ಕಿಸಬೇಕೆಂದು ನಾನು ಹಾಕಿಕೊಂಡ ನಿಯಮವನ್ನು ಚಾಚು ತಪ್ಪದೇ ಪಾಲಿಸಿಕೊಂಡು ಬಂದಿದ್ದೇನೆ.

ಸರಿ ಹೊಸ ವರ್ಷದ ಕೊಡುಗೆಯಾಗಿ ನಮ್ಮದೇ ರಾಜ್ಯದ, ಇತರೆ ರಾಜ್ಯದ ಜಾನಪದ ಕಲೆಯ ಪ್ರಕಾರಗಳಲ್ಲಿ ಬಳಸುವ ಟೋಪಿಗಳನ್ನು ಹಾಕಿದರೆ ಚಂದ ಕಾಣುತ್ತದೆ ಅಂತನ್ನಿಸಿತು.

ಮತ್ತೇ ಈ ಟೋಪಿಗಳ ಬಗ್ಗೆ ಏನಾದರೂ ಬರೆಯಬೇಕಲ್ಲ ? ಏನನ್ನು ಬರೆಯವುದು ? ಬರೆಯಲು ಏನಾದರೂ ತಲೆಯಲ್ಲಿ ಇದ್ದರೆ ತಾನೆ ! ಹುಡುಕಿದೆ ಸಿಕ್ಕಲಿಲ್ಲ. ಕೊನೆಗೆ ಏನೋ ಬರೆದು ಕೊರೆಯುವುದಕ್ಕಿಂತ ಸುಮ್ಮನೆ ಟೋಪಿ ಹಾಕುವುದು ಮೇಲು ಎನ್ನಿಸಿತು.

ರಾತ್ರೋ ರಾತ್ರಿ ನನ್ನ ಟೋಪಿಗಳ ಮೂಟೆಯಲ್ಲಿ ಎಂದೆಂದೋ ಕ್ಲಿಕ್ಕಿಸಿದ್ದ ನಮ್ಮ ಜನಪದ ಕಲೆಯ ಟೋಪಿಗಳನ್ನು ಒಟ್ಟು ಮಾಡಿ ನಿಮಗಿಲ್ಲಿ ಅರ್ಪಿಸುತ್ತಿದ್ದೇನೆ.....

ಪ್ರೀತಿಯಿಂದ ಒಪ್ಪಿಸಿಕೊಳ್ಳಿ..................

೧. ಪಾಳೆಯಗಾರನ ಟೋಪಿ !


೨. ಕಿತ್ತೂರು ಚೆನ್ನಮ್ಮ ಟೋಪಿ !


೩. ಜಡೆ ಟೋಪಿ !

೪. ಡೊಲ್ಲು ಕುಣಿತಗಾರರ ಟೋಪಿ !


೫. ಒಂಟಿ ನಗಾರಿಕಾರರ ಟೋಪಿ !

೬. ಜಂಟಿ ನಗಾರಿಕಾರರ ಟೋಪಿ !


೭. ಕರಡಿ ಗೊರವಯ್ಯನವರ ಟೋಪಿ !


೮. ಚುನರಿ ಜನಪದ ಕಲೆಗಾರರ ಟೋಪಿ !


೯. ಜಾನಪದ ತುತ್ತೂರಿಯವರ ಟೋಪಿ !


೧೦. ಜನಪದ ತಾಳ ಮತ್ತು ಹಾಡುಗಾರರ ಟೋಪಿ !


೧೧. ದೊಡ್ಡ ನಗಾರಿ ಬಾರಿಸುವವರ ಟೋಪಿ !


೧೨. ಜನಪದ ಕೀಲು ಕುದುರೆಗಾರನ ಟೋಪಿ !


೧೩. ಪಟ ಕುಣಿತಗಾರನ ಟೋಪಿ !


೧೪. ಆಸ್ಸಾಮಿ ಬಿಹು ನೃತ್ಯಗಾರ್ತಿಯರ ಟೋಪಿ !
ಕೇರಳ ಕಥಕ್ಕಳಿ ಟೋಪಿ !
ಫೋಟೊ ಮತ್ತು ಲೇಖನ
ಶಿವು.

Monday, December 22, 2008

ಬಿಹು ಜನಪದ ನೃತ್ಯದ ಸಹೋದರಿಯರು.

ಇತ್ತೀಚೆಗೆ ನನ್ನ ಬುದ್ಧಿಗೆ ಏನಾಗಿದೆಯೋ ಗೊತ್ತಾಗುತ್ತಿಲ್ಲ. ನಾನು ಹೋಗುವ ಕೆಲಸ ಒಂದಾದರೆ ಮಾಡುವ ಕೆಲಸ ಮತ್ತೊಂದು ಆಗಿರುತ್ತದೆ. ಚಿತ್ರ ಕಲಾ ಪರಿಷತ್ ಅವರಣದಲ್ಲಿ ಬಣ್ಣದ ಕರಕುಶಲವಸ್ತುಗಳು ಮತ್ತು ಜನಪದ ಮೇಳದಲ್ಲಿ ಕರ್ನಾಟಕ , ಅಸ್ಸಾಂ, ರಾಜಸ್ಥಾನ್ ಜನಪದ ನೃತ್ಯ ಪ್ರಕಾರಗಳ ಒಂದಷ್ಟು ಫೋಟೊವನ್ನು ತೆಗೆಯೋಣವೆಂದು ಅಲ್ಲಿಗೆ ಹೋಗಿದ್ದೆ.


ಅಲ್ಲಿ ನನ್ನ ಗಮನ ಸೆಳೆದಿದ್ದು ಅಸ್ಸಾಂ ರಾಜ್ಯದ ಜಾನಪದ ಕಲೆಯಾದ "ಬಿಹು" ನೃತ್ಯ ಮತ್ತು ನೃತ್ಯ ಪ್ರದರ್ಶಿಸುವ ಸಹೋದರಿಯರು.


ಬಿಹು ನೃತ್ಯದ ಮತ್ತೊಮ್ಮೆ ಬರೆಯುತ್ತೇನೆ. ಯಾವುದೇ ಜನಪದ ಕಲೆಯಾದರೂ ಅದು ಬಂದಿರುವುದು ಹಳ್ಳಿಯಿಂದಲ್ಲವೇ. ಹಳ್ಳಿ ಅಂದ ಮೇಲೆ ಅದರ ಜೊತೆ ಜೊತೆಯಾಗಿ ಸರಳವಾಗಿ ಮುಗ್ಧತೆಯೂ ಕೂಡಿಬರುತ್ತದೆ. ಅದೇ ರೀತಿ ಇಲ್ಲಿ ಬಿಹು ನೃತ್ಯಗಾರ್ತಿಯರಾದ ಆಸ್ಸಾಂ ಸಹೋದರಿಯರು ಸಹಜ ಸರಳತೆಯಿಂದಾಗಿ ನನ್ನ ಗಮನ ಸೆಳೆದಿದ್ದರು.


ಇಂದಿನ ತಳುಕು ಬಳುಕಿನ ಕಾಲದಲ್ಲಿ ಅವರು ಈ ನೃತ್ಯ ಪ್ರಕಾರಕ್ಕಾಗಿ ಹಣೆಯ ಮೇಲೆ ಹಗಲವಾದ ಕೆಂಪು ಬೊಟ್ಟು. ಸಂಪೂರ್ಣ ಮೈಮುಚ್ಚಿಕೊಳ್ಳುವಂತರ ಅವರ ಸೀರೆ ಮತ್ತು ರವಿಕೆ, ಸರಿಯಾಗಿ ಮದ್ಯ ಬೈತಲೆ ತೆಗೆದು ಕೂದಲನ್ನೆಲ್ಲಾ ಓಟ್ಟು ಮಾಡಿ ಹಿಂದೆ ತುರುಬುಹಾಕಿರುವುದು, ತಲೆಯ ಹಿಂಬಾಗ ಮತ್ತು ತುರುಬಿನೊಳಗೆ ಸಿಕ್ಕಿಸಿಕೊಂಡಿರುವ ಅವರದೇ ಊರಿನ ನಯವಾಗಿ ತಿದ್ದಿ ತೀಡಿದ ಬಿದಿರಿನ ಕಡ್ಡಿ.


ಕೊರಳಿಗೆ ಸರಳವಾದ ಕಂದು ಬಣ್ಣದ ಮಣಿಹಾರ, ಸೌಂದರ್ಯವನ್ನೆಲ್ಲಾ ತಮ್ಮ ಮುಖಾರವಿಂದದ ಮುಗ್ದ ನಗುವಿನಲ್ಲೇ ಹೊರಹೊಮ್ಮಿಸುವ ಸಹಜತೆ, ನನ್ನ ಕ್ಯಾಮೆರಾ ಅಲರ್ಟ್ ಆದದ್ದೆ ಆಗ. ನೃತ್ಯ ಪ್ರದರ್ಶನ ಸಮಯ ಬಿಟ್ಟು ಬೇರೆ ಸಮಯದಲ್ಲಿ ಅವರು ಹೇಗಿರುತ್ತಾರೆ ಎನ್ನುವ ಕುತೂಹಲ ಬಂದಾಗ ಸುಮ್ಮನೆ ದೂರದಿಂದ ಕ್ಲಿಕ್ಕಿಸುತ್ತಾ ಹೋದೆ.


ಕಲೆಗಾಗಿ ತಮ್ಮ ಜೀವನವನ್ನೆ ಮುಡಿಪಾಗಿಟ್ಟಿರುವ ಈ ಸಹೋದರಿಯರು ನನ್ನ ಕ್ಯಾಮೆರಾ ಕಣ್ಣಿಗೆ ನಗುವಾಗಿ, ಗುಳಿಕೆನ್ನೆಯೊಳಗಿನ ಮುಗುಳ್ನಗುವಾಗಿ, ಭಾರತನಾರಿಯರ ಸ್ವತ್ತಾದ ನಾಚಿಕೆಯ ನೀರಾಗಿ, ಕಣ್ಣಲ್ಲೇ ಸಾವಿರ ಭಾವನೆಗಳನ್ನು ತೋರಿಸುವ ಮಗುವಾಗಿ, ಮಗುಮನಸ್ಸಿನ ಕುತೂಹಲಿಗಳಾಗಿ, ಪಕ್ಕಾ ಸಾಂಪ್ರದಾಯಿಕ ಮಹಿಳೆಯಾಗಿ, ಇವೆಲ್ಲಾ ಗುಣಗಳಿಗೆ ಕಿರೀಟದಂತಿರುವ ಮುಗ್ದತೆಯ ಪ್ರತಿರೂಪವಾಗಿ ಕಂಡರು.


ಇನ್ನು ಇವರ ಬಗ್ಗೆ ಹೆಚ್ಚಿಗೆ ಬರೆದರೆ ಕಲ್ಪನೆಯ ಕದ ತೆರೆದಂತಾಗಿ ವಾಸ್ತವ ಚಿತ್ರಗಳ ನಿಜ ಹೊಳಪುಗಳುಗಳು ಮಂಕಾಗುತ್ತವೆನ್ನುವ ಭಯ. ಬದಲಿಗೆ ಒಂದೊಂದೆ ಚಿತ್ರವನ್ನು ನಿದಾನವಾಗಿ ಆಸ್ವಾದಿಸೋಣ ಬನ್ನಿ. !

೧. ಹೆಣ್ಣಿಗೆ ಅಂದ........................ನಾಚಿಕೆ ಚಂದ...............ಕೈಸೆರೆಯಾದರೆ..................



೨. ಪಿಸುಮಾತೊಂದಾ........ಹೇಳಲೇ ನಾನೀಗಲೇ.......

೩. ಒಂದು ದಿನ ಎಲ್ಲಿಂದಲೋ......ನೀ ಬಂದೆ...........


೪. ಓ ಗುಣವಂತಾ.........ನೀನೆಂದೂ ನನ್ನ ಸ್ವಂತಾ..................................

ಯಾರೇ ನೀನು ಚೆಲುವೇ................ನಿನ್ನಷ್ಟಕ್ಕೆ ನೀನೆ ಏಕೆ ನಗುವೇ...................................



೬. ಚೆಲುವೆಯಾ ನೋಟ ಚೆನ್ನಾ...........ಒಲವಿನ ಮಾತು ಚೆನ್ನಾ.............

೭. ಕಣ್ಣು ರೆಪ್ಪೆ ಒಂದನೊಂದು ಮರೆವುದೇ..........ಅದು ಎಂದಾದರೂ ಬೇರೆ ಬೇರೆ ಇರುವುದೇ............


೮. ಮೌನವೇ ಆಭರಣಾ.............ಮುಗುಳ್ನಗೇ ಶಶಿಕಿರಣಾ................


೧೧. ನನ್ನ ಕಣ್ಣ ಕನ್ನಡಿಯಲ್ಲಿ.......ಕಂಡೇ ನಿನ್ನ ರೂಪ............


೧೦. ಕಣ್ಣು ಕಣ್ಣು ಕಲೆತಾಗ.............ಮನವೂ ಉಯ್ಯಾಲೆ ಆಡಿದೆ ಈಗ..............

೯. ಮೆಲ್ಲುಸುರೇ..........ಸವಿಗಾನ............. ಎದೆ ಝಲ್ಲನೇ............ಹೂವಿನ ಬಾಣ..............

೧೨. ನಗು ನಗುತಾ....ನಲಿ ನಲಿ................ ಏನೇ ಆಗಲಿ...............


೧೩. ನೋಟದಾಗೇ ನಗೆಯಾ ಮೀಟಿ......ಮೋಜಿನಾಗೆ ಎಲ್ಲೆಯ ದಾಟಿ..............



೧೪. ಇವಳು ಯಾರು ಬಲ್ಲೆ ಏನು........ಇವಳ ಹೆಸರ ಹೇಳಲೇನು.......... ಇವಳ ದನಿಗೆ ಕರಗಲೇನು

೧೫. ನೀರಿನಲ್ಲಿ ಅಲೆಯೋ ಉಂಗುರಾ.................... ಮನಸೆಳೆದನಲ್ಲಾ....... ಕೊಟ್ಟನಲ್ಲಾ.......ಕೆನ್ನೆ ಮೇಲೆ ಪ್ರೇಮದುಂಗುರಾ.........

೧೬. ಒಲವಿನ..... ಪ್ರಿಯಲತೆ......ಅವಳದೇ ಚಿಂತೇ......... ಅವಳ ಮಾತೆ........ಮಧುರ ಗೀತೆ... ಅವಳೇ ನನ್ನ ದೇವತೇ........
ಮುಂದಿನ ಬಾರಿ ಇದೇ ಸಹೋದರಿಯರ " ಈ ಸಂಭಾಷಣೆ.....ನಮ್ಮ ಈ ಪ್ರೇಮ ಸಂಭಾಷಣೆ........

ಚಿತ್ರ ಮತ್ತು ಲೇಖನ

ಶಿವು.

Thursday, December 18, 2008

ಈ ಸಿನಿಮಾ ನೋಡಿದ್ದೀರಾ !!


ಒಂದು ಅದ್ಬುತ ಸಿನಿಮಾ ಬಗ್ಗೆ ಬರೆಯಬೇಕೆನಿಸಿದೆ. ಇಂದಿನ ಪ್ರಸ್ತುತ ಬಾಂಬ್ ಬ್ಲಾಸ್ಟ್, ಟೆರರಿಷ್ಟ್ ಆಟ್ಯಾಕ್, ರಾಜಕೀಯದವರ ಮೋಸ, ಸೋಗಲಾಡಿತನದ ಹಿನ್ನೆಲೆಯಲ್ಲಿ, ಎಲ್ಲರೂ ಅದರ ಬಗ್ಗೆ ಮಾತಾಡುವುದು, ಓದುವುದು, ನೋಡುವುದು, ಬರೆಯುವುದು ನಡೆದಿರುವ ಇಂಥ ಸಮಯದಲ್ಲಿ ಒಂದು ಹೃದಯಸ್ಪರ್ಶಿ, ಮನಕಲಕುವ, ನೋಡುತ್ತಾ, ನೋಡುತ್ತಾ ನಾವೇ ಪಾತ್ರವಾಗಿಬಿಡುವ, ನೋಡಿದ ನಂತರವೂ ಬಹುದಿನ ಕಾಡುವಂತ ಒಂದು ಇರಾನಿ ಸಿನಿಮಾ ಬಗ್ಗೆ ಬರೆಯಬೇಕು ಅನ್ನಿಸಿದೆ.
ಆ ಸಿನಿಮಾ ಹೆಸರೇ " Children of Heavan"
ಆಲಿ ಎನ್ನುವ ೧೨ ವರ್ಷದ ಹುಡುಗ ತನ್ನ ತಂಗಿಯ ಕಿತ್ತುಹೋದ ಶೂವನ್ನು ರಿಪೇರಿ ಮಾಡಿಸಿಕೊಂಡು ಬರುವಾಗ ದಾರಿಯಲ್ಲಿ ಅದನ್ನು ಕಳೆದುಕೊಳ್ಳುತ್ತಾನೆ. ಅವರ ತಂದೆ ತಾಯಿಗಳಿಗಂತೂ ಮಕ್ಕಳಿಗೆ ಒಂದು ಜೊತೆ ಷೂ ಕೊಡಿಸಲಾಗದಷ್ಟು ಬಡತನ. ಆಷ್ಟು ಚಿಕ್ಕ ವಯಸ್ಸಿನಲ್ಲೇ ಅಪ್ಪ ಅಮ್ಮನ ಕಷ್ಟವನ್ನಿರಿತ ಆ ಇಬ್ಬರು ಮಕ್ಕಳು ತಂದೆ ತಾಯಿಯರಿಗೆ ತಿಳಿಯದಂತೆ ಒಂದು ಉಪಾಯ ಮಾಡುತ್ತಾರೆ. ಅದೇನೆಂದರೆ ಜಹೀರಾ ಸ್ಕೂಲು ಬೆಳಗಿನ ಸಮಯವಿರುವುದರಿಂದ ಇರುವ ಒಂದು ಜೊತೆ ಆಣ್ಣನ ಷೂವನ್ನು ಮೊದಲು ಆವಳು ಹಾಕಿಕೊಂಡು ಹೋಗುವುದು. ನಂತರ ಓಡಿಬಂದು ಅದೇ ಷೂವನ್ನು ಅಣ್ಣ ಆಲಿಗೆ ಕೊಟ್ಟರೆ ಆಲಿ ಹಾಕಿಕೊಂಡು ತನ್ನ ಮದ್ಯಾಹ್ನದ ಸ್ಕೂಲಿಗೆ ಹೋಗುವುದು. ಈ ರೀತಿ ನಡೆಯುವಾಗ ಇಬ್ಬರು ಮಕ್ಕಳಲ್ಲಿ ಆಗುವ ದಿಗಿಲು, ಭಯ, ಆತಂಕ, ಕುತೂಹಲ, ಆಸೆ, ಅಣ್ಣನ ಮೇಲಿನ ಜಹೀರಾಳ ಪ್ರೀತಿ, ಆಲಿಗೆ ತಂಗಿಯ ಮೇಲಿನ ಜವಾಬ್ದಾರಿ, ವಾತ್ಸಲ್ಯ, ಎಲ್ಲವೂ ಸ್ಪಟಿಕ ಶುಭ್ರ ತಿಳಿನೀರಿನಂತೆ ನಿಮ್ಮ ಮುಂದೆ ಅಭಿವ್ಯಕ್ತವಾಗುತ್ತಾ ಹೋಗುತ್ತದೆ.
ಇಂಥಹ ಪರಿಸ್ಥಿತಿಯಲ್ಲೇ ಇಬ್ಬರೂ ಚೆನ್ನಾಗಿ ಓದುವುದು ಕ್ಲಾಸಿಗೆ ಮೊದಲ ಬರುವುದು ನಡೆಯುತ್ತದೆ. ಕೊನೆಗೆ ಅಂತರ ಶಾಲಾ ಓಟದ ಸ್ಪರ್ಧೆಯಲ್ಲಿ ಬಹುಮಾನವಾಗಿ ಮೊದಲು ಮತ್ತು ಎರಡನೆ ಬಹುಮಾನವಾಗಿ ಟ್ರೋಫಿ, ಮತ್ತು ಮೂರನೆ ಬಹುಮಾನವಾಗಿ ಒಂದು ಜೊತೆ ಹೊಸ ಷೂಗಳನ್ನು ಇಟ್ಟಿರುತ್ತಾರೆ.
ಆಲಿ ತನ್ನ ತಂಗಿಗಾಗಿ ಷೂ ಗೆಲ್ಲುವ ಒಂದೇ ಒಂದು ಆಸೆಯಿಂದ ಆ ಸ್ಪರ್ಧೆಗೆ ಸೇರುತ್ತಾನೆ. ರೇಸಿನಲ್ಲಿ ತನ್ನ ಪ್ರೀತಿಯ ತಂಗಿಗಾಗಿ ಷೂ ಗೆಲ್ಲುತ್ತಾನ ಎನ್ನುವುದು ಕತೆಯ ಕ್ಲೈಮಾಕ್ಸ್. ಅದನ್ನು ನೀವು ಸಿನಿಮಾ ನೋಡಿಯೇ ತಿಳಿಯಬೇಕು.
ಕತೆ ಇಷ್ಟು ಸರಳವಾಗಿದ್ದರೂ ಇಡೀ ಚಿತ್ರದ ಚೌಕಟ್ಟನ್ನು "ಮಾಜಿದ್ ಮಾಜಿದಿ" ಎನ್ನುವ ಇರಾನಿ ನಿರ್ಧೇಶಕ ಕಲ್ಪಿಸಿಕೊಂಡಿರುವ ರೀತಿಯೇ ಒಂದು ಅದ್ಬುತ. ಒಂದೊಂದು ಫ್ರೇಮು ದೃಶ್ಯಕಾವ್ಯವೆನ್ನುವಂತೆ ಚಿತ್ರಿಸಿದ್ದಾರೆ. ಯಾವುದೇ ಒಂದು ದೃಶ್ಯವೂ ಇಲ್ಲಿ ತೆಗೆದುಹಾಕುವಂತಿಲ್ಲ. ನೀವು ಸಿನಿಮಾ ನೋಡಲು ಶುರುಮಾಡಿದರೆ ಯಾವೊಂದು ಸನ್ನಿವೇಶವನ್ನೂ ಕಳೆದುಕೊಳ್ಳಲು ಇಷ್ಟಪಡದೆ ತನ್ಮಯರಾಗಿ ನೋಡಿಸುವಂತ ಅದ್ಭುತ ಚಿತ್ರಕತೆ ಇದೆ.
ಅಂದಮಾತ್ರಕ್ಕೆ ಇದೊಂದು ಅದ್ಬುತ ತಾಂತ್ರಿಕ ಹಿನ್ನೆಲೆಯುಳ್ಳ ಬಾಲಿವುಡ್, ಹಾಲಿವುಡ್ ರೀತಿಯ ಚಿತ್ರವಲ್ಲ. ಕೇವಲ ೧ ಲಕ್ಷ ೮೦ ಸಾವಿರ ಡಾಲರ್ ಖರ್ಚಿನಲ್ಲಿ ತಯಾರಾದ ಚಿತ್ರ. ಚಿತ್ರಕ್ಕಾಗಿ ಬಳಸಿರುವ ಸಣ್ಣ ಸಣ್ಣ ಕಾಲೋನಿಗಳು, ಓಣಿಗಳು, ಮನೆಗಳು, ಸಹಜವಾದ ಜನರಿರುವ ಪೂರಕ ವಾತಾವರಣ, ಒಂದು ಪಕ್ಕಾ ಸಾಂಪ್ರದಾಯಿಕ ಚೌಕಟ್ಟಿನ ಹಿನ್ನೆಲೆಯಲ್ಲಿ ಒಂದು ಸರಳವಾದ ಹಿತವಾದ, ಹದವಾದ ಸಾಫ್ಟ್ ಲೈಟಿನಲ್ಲಿ ಚಿತ್ರದ ಛಾಯಾಗ್ರಹಣ ಮಾಡಿರುವುದರಿಂದ ಇಡಿ ಚಿತ್ರವು ನಿಮ್ಮನ್ನು ಆವರಿಸಿಕೊಳ್ಳುತ್ತದೆ.
ಇವೆಲ್ಲಕ್ಕೂ ಕಿರೀಟವಿಟ್ಟಂತೆ ಆಲಿ ಪಾತ್ರವಹಿಸಿರುವ ಮೊಹಮದ್ ಅಮೀರ್ ನಾಜಿ ಎನ್ನುವ ಪುಟ್ಟ ಹುಡುಗ ಮತ್ತು ಜಹೀರಾ ಪಾತ್ರ ಮಾಡಿರುವ ಅಮೀರ್ ಫರೋಕ್ ಹಷೀಮಿಯಾ ಎನ್ನುವ ಪುಟ್ಟ ಹುಡುಗಿಯ ಮರೆಯಲಾಗದ ನಟನೆಯಿದೆ. ನೀವು ಸಿನಿಮಾ ನೋಡಿದ ಮೇಲೆ ಬಹುದಿನಗಳ ಕಾಲ ನಿಮಗೆ ತಮ್ಮ ತಂಗಿಯಾಗಿ, ಅಥವಾ ಮಗ ಮತ್ತು ಮಗಳಾಗಿ, ಮಕ್ಕಳಿಗೆ ಗೆಳೆಯರಾಗಿ ಕಾಡದಿದ್ದರೆ ಕೇಳಿ.
ಅವರು ಸಿನಿಮಾದಲ್ಲಿ ನಟಿಸಿಲ್ಲ. ಆ ಪಾತ್ರಗಳಲ್ಲಿ ಜೀವಿಸಿದ್ದಾರೆ. ಅದಕ್ಕಾಗಿ ಕೆಲವು ದೃಶ್ಯಗಳನ್ನು ನಾನು ಹೇಳಲು ಪ್ರಯತ್ನಿಸುತ್ತೇನೆ.
ದೃಶ್ಯ ೧. ಕಳೆದು ಹೋದ ಷೂ ವಿಚಾರ ಮನೆಯವರಿಗೆ ಗೊತ್ತಾಗದ ಹಾಗೆ ಆದರೆ ಅಪ್ಪ-ಅಮ್ಮನ ಸಮ್ಮುಖದಲ್ಲೇ ಆಣ್ಣ ಆಲಿ ತಂಗಿ ಜಹೀರಾಗೆ ಹೇಳುವಾಗ ಇಬ್ಬರೂ ತಮ್ಮ ಪುಸ್ತಕದಲ್ಲಿ ಬರೆದು ಹೇಳುವ ರೀತಿ, ಆಗ ಅಲ್ಲಿ ಹೊರಹೊಮ್ಮಿರುವ ತಂಗಿಯ ಹುಸಿಮುನಿಸು, ತುಸುಕೋಪ, ಅದಕ್ಕೆ ತಕ್ಕಂತೆ ಅಣ್ಣನ ದಿಗಿಲು, ಸಾಂತ್ವಾನ ಎಲ್ಲವೂ ಕೇವಲ ಮುಖಭಾವದಲ್ಲಿ ಮೂಡಿಸುವಾಗ ನೋಡುತ್ತಿರುವ ನೀವು ನಿಮ್ಮ ಬಾಲ್ಯವನ್ನು ನೆನಪಿಸಿಕೊಳ್ಳುತ್ತೀರಿ..
ದೃಶ್ಯ ೨. ಟಿ.ವಿ ಯಲ್ಲಿ ಬರುವ ಷೂ ಜಾಹಿರಾತನ್ನು ನೋಡಿ ಆಸೆ ಪಡುವ ಇಬ್ಬರೂ ಮರುಕ್ಷಣವೇ ಅಂತಹುದು ಪಡೆಯುವ ಅದೃಷ್ಟ ನಮಗಿಲ್ಲವೆಂದು ಅರಿವಾದಾಗ ಆಗುವ ನಿರಾಸೆಗಳು,
ದೃಶ್ಯ ೩. ಜಹೀರಾ ಸ್ಕೂಲು ಮುಗಿಸಿ ಮನೆಗೆ ಬರುವಾಗ ಅಂಗಡಿಯಲ್ಲಿಟ್ಟ ಹೊಸ ಹೊಸ ಷೂಗಳನ್ನು ಆಸೆಯ ಕಣ್ಣುಗಳಿಂದ ನೋಡುವುದು.
ದೃಶ್ಯ ೪. ಪರೀಕ್ಷೆ ಬರೆಯುವಾಗ ಬೆರೆಯುವುದಕ್ಕಿಂತ ಮುಖ್ಯವಾಗಿ ತಾನು ಹಾಕಿಕೊಂಡ ಷೂವನ್ನು ಅಣ್ಣನಿಗೆ ಕೊಡಬೇಕೆಂದು ಬೇಗ ಮುಗಿಸಿ ಓಡಿಬರುವಾಗ ಒಂದು ಕಾಲಿನ ಷೂ ಕಳಚಿ ನೀರು ಹರಿಯುತ್ತಿರುವ ಚರಂಡಿಯೊಳಗೆ ಬೀಳುತ್ತದೆ. ಅಯ್ಯೋ ಇದ್ದ ಒಂದು ಷೂ ಕೂಡ ಹೋಯ್ತಲ್ಲ ಅಂತ ಹರಿಯುವ ಚರಂಡಿ ನೀರಿನಲ್ಲಿ ತೇಲಿ ಹೋಗುತ್ತಿದ್ದ ಅದನ್ನು ಹಿಡಿಯಲು ಜಹೀರಾ ಓಡುವ ಪರಿ, ಕೊನೆಗೆ ಸಿಗದೆ, ಇದ್ದ ಕಾಲಿನ ಷೂ ಹೋಯ್ತಲ್ಲ ಎಂದು ಖಚಿತವಾಗಿ ಅವಳಿಗೆ ಆಳು ಬಂದುಬಿಡುತ್ತದೆ. ಆಗ ಯಾರೋ ಒಬ್ಬರು ಬಂದು ಚರಂಡಿಯಲ್ಲಿ ಸಿಕ್ಕಿಕೊಂಡ ಷೂ ಎತ್ತಿಕೊಡುತ್ತಾರೆ ಕಳೆದೇ ಹೋಯ್ತು ಅಂದುಕೊಂಡಿದ್ದು ಮತ್ತೆ ಸಿಕ್ಕಾಗ ಜಹೀರ ಮುಖದಲ್ಲಿ ಸಾವಿರ ಮಿಂಚು. ಈ ಪೂರ್ತಿ ಸನ್ನಿವೇಶ ನಿಮ್ಮನ್ನು ಯಾವ ರೀತಿ ಅವರಿಸಿಕೊಳ್ಳುತ್ತದೆಂದರೆ ನೀವೆನಾದ್ರು ಈ ಸಿನಿಮಾ ನೋಡುತ್ತಿದ್ದರೇ ಅದನ್ನು ಮರೆತು ನೀವೇ ಒಂದು ಪಾತ್ರವಾಗಿ ಚರಂಡಿಯಲ್ಲಿ ಬಿದ್ದ ಜಹೀರಾಳ ಷೂ ಎತ್ತಿಕೊಡಲು ಮುಂದಾಗುವಷ್ಟು.!
ದೃಶ್ಯ ೫. ಇರುವ ಒಂದೇ ಜೊತೆ ಷೂಗಳನ್ನು ಬದಲಾಯಿಸಿಕೊಳ್ಳುವುದು, ಅದರಿಂದ ಅಲಿ ಲೇಟಾಗಿ ಸ್ಕೂಲಿಗೆ ಹೋಗಿ ಅವರ ಮೇಷ್ಟ್ರ ರಿಂದ ಬೈಸಿಕೊಳ್ಳುವುದು ಆ ಸಮಯದಲ್ಲಿ ಈ ಪುಟ್ಟ ಮಕ್ಕಳ ಅಬಿನಯ ಮತ್ತು ಅಲ್ಲಿನ ವಸ್ತು ಸ್ಥಿತಿ, ಬಡತನವನ್ನು ಪರೋಕ್ಷವಾಗಿ ನಮಗೆ ಅರ್ಥೈಸಿ ಮನಕಲಕುವಂತೆ ಮಾಡುತ್ತದೆ.
ಪೂರ್ತಿ ಚಿತ್ರ ನೋಡಿ ಬಂದಾಗ ಅಲಲ್ಲಿ ಜಹೀರಾಳಲ್ಲಿನ ಮುಗ್ದತೆ, ತನ್ನ ಕೈಗೆಟುಕದ ವಸ್ತುವಿಗಾಗಿ ಕಾತರಿಸುವ ಕಣ್ಣುಗಳು,. ಅದು ತನಗೆ ಸಿಗದು ಎಂದು ಮರುಕ್ಷಣ ಅರಿವಾದಾಗ ಆಗುವ ನಿರಾಸೆ, ಪುಟ್ಟ ತಂಗಿಯಾಗಿ ಆಣ್ಣನ ಬಗೆಗಿನ ಕಾಳಜಿ , ನೊರೆಗುಳ್ಳೆ ಬಿಡುವಾಗ ಕಣ್ಣುಗಳಲ್ಲಿನ ಸಂಬ್ರಮ. ಅವಳಿಗೆ ಸರಿಸಮವಾಗಿ ಆಲಿ ತಂಗಿಯ ಮೇಲಿನ ಅತಿಯಾದ ಪ್ರೀತಿ, ಕಾಳಜಿ, ಆ ವಯಸ್ಸಿಗೆ ತನ್ನ ಪರಿಸ್ಥಿತಿ ಅರಿತು ಯೋಗ್ಯತೆಗೆ ಮೀರಿದ ಜವಾಬ್ದಾರಿಯನ್ನು ಹೊತ್ತು ಅಪ್ಪನಿಗೆ ಸಹಾಯಕನಾಗುವುದು ಇಂಥ ಮಿಂಚುಗಳು ಬಹುಕಾಲ ನಮ್ಮನ್ನು ಕಾಡುತ್ತವೆ.
ಜಹೀರಾ ಮತ್ತು ಆಲಿ ಇಡೀ ಚಿತ್ರದಲ್ಲಿ ಮಕ್ಕಳಾಗಿ ಪುಟ್ಟ ಪುಟ್ಟ ಆಣ್ಣ ತಂಗಿಯಾಗಿ, ಅಪ್ಪ ಅಮ್ಮ ಮತ್ತು ಮನೆಯ ಪರಿಸ್ಥಿತಿ ಅರಿತ ಬುದ್ಧಿವಂತರಾಗಿ ತಮ್ಮದೇ ಲೋಕದಲ್ಲಿ ಕಷ್ಟ, ಸುಖ, ಪ್ರೀತಿ ವಾತ್ಸಲ್ಯ, ಆಸೆ, ನಿರಾಸೆ ದುಃಖ ಎಲ್ಲವನ್ನು ನಿಮ್ಮ ಮುಂದೆ ತೆರೆದಿಡುತ್ತಾ ನಿಮ್ಮನ್ನು ಮಕ್ಕಳಾಗಿಸುತ್ತಾರೆ.
ಇವರಿಬ್ಬರ ಜೊತೆ ಒಂದು ಮುಖ್ಯ ಪಾತ್ರವೇ ಆಗಿ ಅಲ್ಲಲ್ಲಿ ಕಂಡು ಬರುವ ಶೂಗಳು, ಪೋಷಕ ಪಾತ್ರದಾರಿಗಳು, ಆಲಿ ಮತ್ತು ಜಹೀರಾಳ ಗೆಳೆಯ ಗೆಳತಿ ಬಳಗ, ಸ್ಕೂಲ್ ಮೇಷ್ಟ್ರು, ಕತೆಯ ಮದ್ಯದಲ್ಲಿ ಬರುವ ಒಬ್ಬ ಕಣ್ಣು ಕಾಣದ ಕುರುಡು ವ್ಯಾಪಾರಿಗಳೆಲ್ಲಾ ನಮ್ಮ ಮನದಲ್ಲಿ ಆಚ್ಚಳಿಯದೆ ಉಳಿಯುತ್ತಾರೆ. ಸಿನಿಮಾದ ಕೊನೆಯಲ್ಲಿ ಬರುವ ದೃಶ್ಯವಂತೂ ನಿಮ್ಮ ಕಣ್ಣನ್ನು ಒದ್ದೆಯಾಗಿಸುತ್ತದೆ. ಹೃದಯವನ್ನು ಭಾರವಾಗಿಸುತ್ತದೆ.
ಇಷ್ಟು ಸಾಕೆನಿಸುತ್ತದೆ. ಇದುವರೆಗೂ ನಾನು ಹೇಳಿದ್ದು ಸಿನಿಮಾದ ಕೆಲವು ತುಣುಕುಗಳಷ್ಟೇ.
ಕೊನೆ ಮಾತು. ಕಾಲಿಗೆ ಹಾಕುವ ಒಂದು ಷೂನಂತ ವಸ್ತುವನ್ನು ಬಳಸಿಕೊಂಡು ತೆಗೆದಿರುವ ಈ ಚಿತ್ರವನ್ನು ನೋಡದಿದ್ದರೆ ಜೀವನದಲ್ಲಿ ಏನೋ ಕಳೆದುಕೊಂಡ ಭಾವನೆ ಉಂಟಾಗುತ್ತದೆ.
೧೯೯೭ ರಲ್ಲಿ ಕೊನೆಯ ಅಂತಿಮ ಘಟ್ಟದಲ್ಲಿ ಅತ್ಯುತ್ತಮ ವಿದೇಶಿ ಚಿತ್ರ ಎನ್ನುವ ಆಸ್ಕರ್ ಪ್ರಶಸ್ತಿಯನ್ನು ಮತ್ತೊಂದು ಇಟಲಿಯ ಚಿತ್ರದಿಂದಾಗಿ ತಪ್ಪಿಸಿಕೊಂಡ ಈ ಚಿತ್ರ ಇಂದಿಗೂ ಮಾಸ್ಟರ್ ಫೀಸ್ ಎನಿಸಿಕೊಂಡಿದೆ. ಇಂಥ ಮಾಸ್ಟರ್ ಪೀಸ್ ಆಗಿರುವ ಚಿತ್ರವನ್ನೇ ಸೋಲಿಸಿ ಆಸ್ಕರ್ ಗೆದ್ದ ಇಟಲಿಯ "Life is beautiful " ಎನ್ನುವ ಮತ್ತೊಂದು ಮಾಸ್ಟರ್ ಪೀಸ್ ಚಿತ್ರದ ಬಗ್ಗೆ ಮುಂದೆಂದಾದರೂ ಬರೆಯುತ್ತೇನೆ.
ಶಿವು.

Sunday, October 19, 2008

ನಾಚಿಕೆಯಿಲ್ಲದ ಪಾರಿವಾಳ ಕುಟುಂಬ

ನನ್ನ ಮಡದಿ 'ರ್ರೀ ಅಡುಗೆ ಮನೆಯಲ್ಲಿ ಏನೋ ಸೇರಿಕೊಂಡಿದೆ ನೋಡಿ ಬನ್ನಿ" ಎಂದು ನನ್ನನ್ನೂ ಕರೆದಳು. ನಾನು ಹೋಗಿ ನೋಡಿ ಏನು ಇಲ್ಲದಿರುವುದನ್ನು ನೋಡಿ " ಏನೂ ಇಲ್ವಲ್ಲೋ" ಅಂದೆ. "ಅಯ್ಯೋ ನೀವೊಂದು ನೀವಿಲ್ಲಿ ನಿಂತು ಸರಿಯಾಗಿ ಕೇಳಿಸಿಕೊಳ್ಳಿ........ಸ್ವಲ್ಪ ತಡೆದು "ನೋಡಿದ್ರಾ ಒಂಥರಾ ಶಬ್ದ ಬರ್ತಿದೆ ಅಲ್ವಾ, ಕೇಳಿಸಿಕೊಳ್ಳಿ" ಎಂದಳು.
ನಾನು ಸ್ವಲ್ಪ ಹೊತ್ತು ಮೈಯೆಲ್ಲಾ ಕಿವಿಯಾಗಿಸಿಕೊಂಡಾಗ "ಗುಟುರ್ ಗುಟುರ್, ಗುಟುರ್........ " ಎನ್ನುವ ಶಬ್ದ ಕೇಳಿಸಿತು. ತಕ್ಷಣ ನನಗೆ ಅದು ಪಾರಿವಾಳದ ಸದ್ದೆಂದು ಗೊತ್ತಾಯಿತು. ನಾನು ಆಡುಗೆ ಮನೆಯ ಮೇಲೆ ಕೆಳಗೆ ಸಜ್ಜೆ, ಎಲ್ಲಾ ಜಾಗದಲ್ಲಿ ಹುಡುಕಿದೆ. ಎಲ್ಲಾದರೂ ನಮಗೇ ಗೊತ್ತಾಗದ ಹಾಗೆ ಬಂದು ಸೇರಿಕೊಂಡಿರಬಹುದಾ ಎಂದು. ಎಲ್ಲಿಯೂ ಇರಲಿಲ್ಲ. ಆದರೆ ಶಬ್ದ ಮಾತ್ರ ಬರುತ್ತಿತ್ತು. ಸ್ವಲ್ಪ ಹೊತ್ತು ನಿದಾನವಾಗಿ ಕೇಳಿಸಿಕೊಂಡಾಗ ತಿಳಿಯಿತು. ಪಾರಿವಾಳ ಶಬ್ದ ಮಾಡುತ್ತಿರುವುದು ಆಡುಗೆ ಮನೆಯ ಕಿಟಕಿಯ ಹೊರಗೆ ಅಂತ.
ತಕ್ಷಣ ಹೊರಬಂದು ನಮ್ಮ ಮನೆಯ ಟೆರೆಸಿಗೆ ಹೋಗಿ ನೋಡಿದರೆ, ಅಡುಗೆ ಮನೆಯ ಕಿಟಕಿಯ ಹೊರಗೆ ಸಜ್ಜೆ ಮೇಲೆ ನಿದಾನವಾಗಿ ಗೂಡುಕಟ್ಟಲು ಕಸ ಕಡ್ಡಿಗಳನ್ನು ತಂದು ಹಾಕುತ್ತಿದೆ. ಒಂದು ವಾರದ ನಂತರ ನೋಡಿದರೆ ಅದರ ಗೂಡು ಸಿದ್ದವಾಗಿದೆ. ಆ ಗೂಡಿಗೆ ಒಮ್ಮೆ ಗಂಡು ಮತ್ತೊಮ್ಮೆ ಹೆಣ್ಣು ಎರಡು ಬಂದು ಹೋಗುವುದು ನಡೆದೇ ಇತ್ತು. ಇತ್ತ ನಾವು ಗಣೇಶ ಹಬ್ಬಕ್ಕೆ ತುಮಕೂರಿಗೆ ಅಣ್ಣನ ಮನೆಗೆ ಹೋಗಿದ್ದವರು ವಾಪಸು ಬಂದು ನೋಡುತ್ತೇವೆ, ಆಗಲೇ ಎರಡು ಮೊಟ್ಟೆ!.
ಸರಿ ಶುರುವಾಯ್ತಲ್ಲ ಸುಧ್ದಿ. ಪಕ್ಕದ ಮನೆಯವರು, ಮಹಡಿ ಮನೆಯವರು, ಕೆಳಗಿನವರು ಹೊರಗಿನವರು ನೆಂಟರು ಒಬ್ಬೊಬ್ಬರಾಗಿ ಬಂದು ನೋಡಿ "ಆಹಾ ಎಷ್ಟು ಚೆನ್ನಾಗಿದೆ ಮೊಟ್ಟೆಗಳು, ಮರಿ ಹಾಕೋದು ಯಾವಾಗ? ಮಳೆ ಬಂದಾಗ ಹೇಗಿರುತ್ತವೆ?! ಇವಕ್ಕೆ ಮಳೆಗಾಲದಲ್ಲಿಯೇ ಗೂಡು ಕಟ್ಟಬೇಕಾಗಿತ್ತ? ನಾವು ನಮ್ಮ ಮನೆಯನ್ನು ಮಳೆಗಾಲದಲ್ಲಿ ಕಟ್ಟಲು ಶುರುಮಾಡಿ ಪಟ್ಟ ಕಷ್ಟ ಒಂದೊರೆಡಲ್ಲ, ಹೀಗೆ ನಾನಾ ಪ್ರಶ್ನೋತ್ತರಗಳು. ನನಗಂತೂ ಯಾಕದ್ರೂ ಗೊತ್ತಾಯ್ತೋ ಇವರಿಗೆಲ್ಲಾ, ಗಂಟೆಗೊಂದು ಬಾರಿ ಗಳಿಗೆಗೊಂದು ಬಾರಿ ನೋಡಿಕೊಂಡು ಹೋಗ್ತಾರಲ್ಲ! ಇವರಿಂದ್ ಅವಕ್ಕೆ ತೊಂದರೆಯೆನಿಸಿ ಈ ಜಾಗ ಸರಿಯಲ್ಲ ನಮಗೆ ಎಂದು ಖಾಲಿಮಾಡಿಬಿಟ್ಟರೆ? ಎನಿಸಿತ್ತು.
ನನಗೆ ಹಾಗೆ ಅನ್ನಿಸಿದರೂ ನಾನೆ ದಿನಕ್ಕೆ ೫-೬ ಬಾರಿ ಟೆರಸ್ಸಿಗೆ ಹೋಗಿ ಕುತೂಹಲದಿಂದ ಇಣುಕಿನೋಡಿ ಬರುತ್ತಿದ್ದೆ. ಅವುಗಳಿಗೆ ಬೇರೆಯವರಿಗಿಂತ ನನ್ನಿಂದಲೇ ಹೆಚ್ಚು ತೊಂದರೆಯುಂಟಾಗುತ್ತಿದೆ ಅನಿಸಿತ್ತು.
ನಾವು ಬೇರೆ ಎಲ್ಲೂ ಜಾಗ ಸಿಗೋದಿಲ್ಲವೆಂದು ಇಲ್ಲಿ ಬಾಡಿಗೆಗೆ ಬಂದರೆ ಏನಪ್ಪ ಇದು ಓನರ್[ನಾನು]ಸೇರಿದಂತೆ ಎಲ್ಲರಿಂದಲೂ ಇಷ್ಟೊಂದು ತೊಂದರೆಯಲ್ಲಪ್ಪ, ನಾವು ನೆಮ್ಮದಿಯಾಗಿ ಒಂದು ತಿಂಗಳು ಸಂಸಾರ ಮಾಡಿ ಅಮೇಲೆ ಹೋಗಿಬಿಡ್ತೀವಿ, ನಮ್ಮನೆಯಲ್ಲಿ ಏನು ನಡೀತಿದೆ ಅಂತ ಒಬ್ಬರಾದ ಮೇಲೆ ಒಬ್ಬರು ಇಣುಕುತ್ತಿದ್ದರೆ ನಮ್ಮ ಪ್ರೈವೇಸಿಗೆ ಏನಾಗಬೇಡ? ನಾವೇನು ಹಾಗೆ ಅವರ ಮನೆಗೆಲ್ಲಾ ಹೋಗಿ ನೋಡ್ತೀವಾ?!..........ಹೀಗೆ ನಾನಾ ರೀತಿ ಆ ಜೋಡಿ ಪಾರಿವಾಳಗಳು ಅಂದುಕೊಂಡಿರಬಹುದು. ಕೊನೆಗೆ ನಾನೆ ತೀರ್ಮಾನಿಸಿದೆ. ಮೂರು ದಿನಕೊಮ್ಮೆ ಮಾತ್ರ ಹೋಗಿ ನೋಡುವುದು ಅಥವಾ ಫೋಟೋ ತೆಗೆಯುವುದು ಅಂತ. ಅವು ಪಾಪ ಏನು ಮಾಡುತ್ತವೆ? ಹೇಳಿ! ನಾವಾದರೂ ಯಾರಮನೆಯಲ್ಲಾದರೂ ಬಸುರಿ ಹೆಣ್ಣು ಇದ್ದರೆ ಡೆಲಿವರಿ ಆಗುವವರೆಗೂ ಮನೆ ಖಾಲಿಮಾಡುವಂತಿಲ್ಲವಲ್ಲ! ಹಾಗೆ ಇಲ್ಲೂ ನನ್ನಂತ ತೊಂದರೆ ಕೊಡುವ ಓನರ್ ಇದ್ದರೂ ಮೊಟ್ಟೆ ಇಟ್ಟಾಗಿದೆ ಅದು ಒಂದು ಲೆಕ್ಕದಲ್ಲಿ ಬಸುರಿಯಾದಂತೆಯೇ...!
ಆ ಮೊಟ್ಟೆಗಳ ಮೇಲೆ ಕೂತು ಹಗಲು-ರಾತ್ರಿ ಕಾವು ಕೊಡುವುದು , ಒಂದು ಹೆಣ್ಣು ಬಸುರಿಯಾಗುವುದು ಎರಡು ಒಂದೇ ಅಂತ ಆ ಪಾರಿವಾಳಗಳಿಗೆ ಅನ್ನಿಸಿ ಏನಾದರಾಗಲಿ ನಮ್ಮ ಸಂಸಾರವನ್ನು ಇಲ್ಲೇ ಚೆನ್ನಾಗಿ ಮಾಡಿಹೋಗೋಣವೆಂದು ಅವು ಮೊಂಡು ಬಿದ್ದು ತೀರ್ಮಾನಿಸಿರಬೇಕು! ಅವು ನಮ್ಮನ್ನೂ ಕೇರ್ ಮಾಡದೆ ತಮ್ಮ ಕೆಲಸ ಮುಂದುವರಿಸಿದವು..
ಈಗ ಹೆಣ್ಣು ಪಾರಿವಾಳ ಸದಾಕಾಲ ತತ್ತಿಯ ಮೇಲೆ ಕೂತು ಕಾವು ಕೊಡುತ್ತಿದ್ದರೆ ಗಂಡು ಹೊರಹೋಗಿ ದುಡಿದು[ಆಹಾರ ಹುಡುಕಿ] ಬಂದು ತನ್ನ ಶ್ರೀಮತಿಗೆ ಆಹಾರ ಕೊಡುತ್ತಿತ್ತು. ಇದು ಸರಿ ಸುಮಾರು ೨೧ ದಿನ ಕಳೆದಿರಬಹುದು. ನಾನು ಆಗಾಗ ಅವುಗಳ ದಿನಚರಿಗಳನ್ನೆಲ್ಲಾ ಕ್ಲಿಕ್ಕಿಸುತ್ತಿದ್ದೆ. ಇವನೇನಾದ್ರು ಮಾಡಿಕೊಂಡು ಸಾಯಲಿ ಎಂದು ಆ ಪಾರಿವಾಳಗಳು ತಮ್ಮ ಪಾಡಿಗೆ ತಾವು ಇದ್ದವು.
ಒಂದು ದಿನ ನಾನು ಸ್ವಲ್ಪ ರಾಗಿಯನ್ನು ಟೆರಸಿನಲ್ಲಿ ಹಾಕಿದೆ. ಅವು ಮುಟ್ಟಲಿಲ್ಲ. ಬಿಕ್ಷೆಯನ್ನೆಲ್ಲಾ ನಾವು ತಿನ್ನುವುದಿಲ್ಲ, ಪ್ರತಿದಿನ ದುಡಿದು ತಿನ್ನುತ್ತೇವೆ ಎನ್ನುವ ಆತ್ಮವಿಶ್ವಾಸ, ಸ್ವಾಬಿಮಾನ ಅವುಗಳಿಗೆ ಸ್ವಲ್ಪ ಹೆಚ್ಚೇ ಇರಬೇಕೆಂದುಕೊಂಡು ಸುಮ್ಮನಾದೆ.
ಅಂದು ಭಾನುವಾರ ೨೧ನೇ ತಾರೀಖು. ಬೆಳಿಗ್ಗೆ ನೋಡುತ್ತೇನೆ. ಗೂಡಿನಲ್ಲಿ ಎರಡು ಪುಟ್ಟಮರಿಗಳು. ಅವು ಹೊರಗೆ ಕಾಣದಂತೆ ತಾಯಿಹಕ್ಕಿ ರೆಕ್ಕೆಯಲ್ಲಿ ಬಚ್ಚಿಟ್ಟುಕೊಂಡಿತ್ತು. ಮೂರುದಿನದ ನಂತರ ಮರಿಗಳು ಸ್ವಲ್ಪ ದೊಡ್ಡವಾದವಲ್ಲದೇ ಪಿಳಿಪಿಳಿ ಕಣ್ಣು ಬಿಡಲಾರಂಭಿಸಿದವು. ನಾನು ಮತ್ತು ನನ್ನ ಶ್ರೀಮತಿ ಇಬ್ಬರೂ ಧಾರಾಳವಾಗಿ ಹಕ್ಕಿ, ರಾಗಿ, ಗೋದಿ, ಬಿಸಾಡುವ ಸೊಪ್ಪು, ಸಿಪ್ಪೆಗಳು, ಎಲ್ಲವನ್ನೂ ಹಾಕತೊಡಗಿದವು. ನಾನು ಹಾಕಿದ್ದನ್ನು ಇದುವರೆಗೂ ಮುಟ್ಟದಿದ್ದ ಈ ಹಕ್ಕಿಗಳು, ನಾನು ಇಲ್ಲದಿರುವಾಗ ಅವನ್ನು ತಾವು ತಿಂದು ಮರಿಗಳಿಗೂ ಕೊಕ್ಕಿನಲ್ಲಿ ತೆಗೆದುಕೊಂಡು ಹೋಗಿ ಗುಟುಕು ಕೊಡಲಾರಂಭಿಸಿದವು.
"ಈಗಿನ ಕಾಲದಲ್ಲಿ ಮಕ್ಕಳನ್ನು ಸಾಕಲು ಈ ಬೆಂಗಳೂರಲ್ಲಿ ಎಷ್ಟು ಕಷ್ಟವಿದೆ ಅಂತ ನಮಗೇ ಗೊತ್ತು. ಇಷ್ಟಕ್ಕೂ ನಾವೇನೂ ಬಿಟ್ಟಿ ತಿನ್ನುತ್ತಿಲ್ಲವಲ್ಲ! ಅದಕ್ಕೆ ಪ್ರತಿಫಲವಾಗಿ ಅವನು ನಮ್ಮ ಫೋಟೊ ತೆಗೆಯುತ್ತಿದ್ದಾನಲ್ಲ! ಅದೇನೋ ಫೋಟೊ ಕ್ಲಿಕ್ ಮಾಡಿಕೊಂಡು ಸಾಯಲಿ ನಮಗೇನು" ಅಂತ ಅವುಗಳಿಗೂ ಅನ್ನಿಸಿರಬೇಕು. ನಾವು ಹಾಕಿದ ಯಾವುದೇ ಆಹಾರವನ್ನು ಮುಟ್ಟದೇ ತಾವೆ ಹುಡುಕಿತಂದು ತಿನ್ನಬೇಕೆನ್ನುವ ಸ್ವಾಬಿಮಾನ ಇರುವ ಕಾಡಿನ ಪಾರಿವಾಳಗಳಿಗಿಂತ, ನಗರದಲ್ಲೇ ಹುಟ್ಟಿಬೆಳೆದು ನಗರದ ಎಲ್ಲಾ ಗುಣಸ್ವಾಭಾವಗಳನ್ನೂ ಅಳವಡಿಸಿಕೊಂಡು ಇಲ್ಲಿ ಬದುಕಬೇಕಾದರೆ ಸಮಯಕ್ಕೆ ತಕ್ಕಂತೆ ತಮ್ಮ ಗುಣಲಕ್ಷಣಗಳನ್ನೂ ನಾಚಿಕೆಯಿಲ್ಲದೆ ಬದಲಿಸಿಕೊಳ್ಳುವ ಮನುಷ್ಯ ಗುಣದ ಪ್ರಬಾವ ಈ ಜೋಡಿಹಕ್ಕಿಗಳ ಮೇಲು ಆಗಿರಬೇಕು.
ಹೀಗೆ ಒಂದು ವಾರ ಕಳೆಯಿತು. ಮರಿಗಳು ದೊಡ್ಡವಾಗುತ್ತಾ ಇದ್ದವು. ಒಂದು ದಿನ ನಾನು ಪಾರಿವಾಳಗಳಿಗೆ ಟೆರಸಿನಲ್ಲಿ ಗೋದಿಯನ್ನು ಹಾಕಿ ಅಲ್ಲೇ ಹತ್ತಿರದಲ್ಲಿ ಕುಳಿತು ಇವುಗಳ ಬಗ್ಗೆ ಲೇಖನ ಬರೆಯಲಾರಂಭಿಸಿದೆ. ಸ್ವಲ್ಪ ಹೊತ್ತಿನಲ್ಲೇ ಗಂಡು ಪಾರಿವಾಳ ಬಂದು ಟೆರಸ್ ಕಂಬಿಯ ಮೇಲೆ ಕುಳಿತುಕೊಂಡಿತು. ಅದರ ಕಡೆ ಗಮನಿಸಿದರೂ ನೋಡದಂತೆ ಬರೆಯುತ್ತಿದ್ದೆ.
"ಫೋಟೊ ತೆಗೆದಿದ್ದಾಯ್ತು, ಈಗೇನೋ ಬರೆಯುತ್ತಿದ್ದಾನೆ, ನಮ್ಮ ಬಗ್ಗೆಯೇ ಇರಬೇಕು. ಎಂದುಕೊಂಡಿತ್ತೇನೋ, ಒಮ್ಮೆ ಜೋರಾಗಿ ಕೂಗು ಹಾಕಿತು. ಅ ಕೂಗಿಗೆ ಹೆಣ್ಣು ಪಾರಿವಾಳವೂ ಬಂತು. ಎರಡು ಸ್ವಲ್ಪ ಹೊತ್ತು ಮುಖ-ಮುಖಿ ನೋಡಿಕೊಂಡವು. ಕೊನೆಗೆ ಧೈರ್ಯವಾಗಿ ಕೆಳಗಿಳಿದು ಬಾಯಿತುಂಬಾ ಗೋದಿ ರಾಗಿ ತುಂಬಿಕೊಂಡು ಮರಿಗಳಿಗೆ ಹೋಗಿ ಕೊಡಲಾರಂಬಿಸಿದವು. ಕೆಲವೇ ನಿಮಿಷಗಳಲ್ಲಿ ನಾನು ಹಾಕಿದನ್ನೆಲ್ಲಾ ಖಾಲಿ ಮಾಡಿ ಎದುರಿಗೆ ನಿಂತು ನನ್ನ ಕಡೆ ನೋಡತೊಡಗಿದವು.
"ನಮ್ಮ ಫೋಟೋ ತೆಗೆಯುತ್ತಿದ್ದೀಯಾ, ಜೊತೆಗೆ ಈಗ ಲೇಖನಾನೂ ಬರಿತಿದ್ದೀಯ, ಇದೆಲ್ಲವನ್ನೂ ಯಾವುದೋ ಪತ್ರಿಕೆಗೆ ಕಳಿಸಿ ಎಲ್ಲಾ ಕ್ರೆಡಿಟ್ ನೀನೇ ತಗೋತೀಯಾ. ಇಷ್ಟೆಲ್ಲಾ ಉಪಯೋಗ ನಮ್ಮಿಂದ ಆಗುತ್ತಿರುವಾಗ ನಮಗೆ ಸ್ವಲ್ಪ ಗೋದಿ ರಾಗಿ ತಂದು ಹಾಕಲಿಕ್ಕೇನು ದಾಡಿ, ಈ ರೀತಿ ಕೇಳುವುದು ನಮ್ಮ ಹಕ್ಕು" ಎಂದು ತಮ್ಮ ಹಕ್ಕು ಚಲಾಯಿಸಲು ಸಿದ್ಧವಾಗಿವೆಯೇನೋ ಅಂತ ನನಗನ್ನಿಸಿತು. ಇರಬಹುದು. ಇವು ಹೇಳಿಕೇಳಿ ಸಿಟಿ ಪಾರಿವಾಳಗಳು, ಸಿಟಿ ಜನರ ಹಾಗೆ ಇಲ್ಲಿ ಬದುಕಲು ನಾಚಿಕೆ ಮಾನ ಮರ್ಯಾದೆ ಎಲ್ಲವನ್ನೂ ಬಿಟ್ಟರೆ ಹಾಗೂ ಆಗಾಗ ನಮ್ಮ ಹಕ್ಕನ್ನೂ ನೆನಪಿಸುತ್ತಿದ್ದರೇ ಮಾತ್ರ ಇಲ್ಲಿ ಬದುಕಲು ಸಾಧ್ಯ ಅಂತ ಇವಕ್ಕೂ ಅನ್ನಿಸಿರಬೇಕು. ಅದಕ್ಕೇ ನಾನು ಹಾಕಿದನ್ನೆಲ್ಲಾ ಖಾಲಿ ಮಾಡಿ ಇನ್ನಷ್ಟು ತಂದು ಹಾಕುತ್ತಾನೇನೋ ಅಂತ ಕಾಯುತ್ತಿರಬಹುದು ಅನ್ನಿಸಿತ್ತು.
ಇದುವರೆಗೂ ಈ ಪಾರಿವಾಳಗಳ ಜೀವನದ ಬಗ್ಗೆ, ಅವುಗಳ ಸಂಸಾರದ ಬಗ್ಗೆ ಗಂಭೀರವಾಗಿ ತಲೆಕೆಡಿಸಿಕೊಂಡು ಫೋಟೊ ಮತ್ತು ಲೇಖನ ಬರೆಯುತ್ತಿದ್ದವನಿಗೆ ದಸರ ಹಬ್ಬಕ್ಕಾಗಿ ನನ್ನ ಶ್ರೀಮತಿ ನನ್ನ ಕೈಗಿತ್ತ ದೊಡ್ಡ ಸಾಮಾನು ಪಟ್ಟಿಯನ್ನು ನೋಡಿದಾಗ, ನನ್ನ ಸಂಸಾರದ ಕಡೆಗೆ ಗಮನವನ್ನೇ ಹರಿಸಿರಲಿಲ್ಲವೆಂಬ ಜ್ಜಾನೋಧಯವಾಯಿತು. ಮುಗಿಯಿತಲ್ಲ ಹಬ್ಬ. ಬಂದು ಹೋಗುವವರ ನಡುವೆ ಮತ್ತು ನನ್ನ ಕೆಲಸದಲ್ಲಿ ನಿರತನಾಗಿ ನನ್ನ ಗಮನ ಈ ಪಾರಿವಾಳಗಳ ಕಡೆ ಹರಿಯುವಷ್ಟರಲ್ಲಿ ಹತ್ತು ದಿನಗಳು ಕಳೆದು ಹೋಗಿತ್ತು. ಸ್ವಲ್ಪ ಬಿಡುವು ಮಾಡಿಕೊಂಡು ಕ್ಯಾಮೆರಾ ಸೆಟ್ ಮಾಡಿಕೊಂಡು ಮತ್ತೆ ಟೆರೆಸ್ಸಿನಲ್ಲಿ ಕೂತೆ.
ನಾನು ಬಂದಿದ್ದು ನೋಡಿ ಅವಕ್ಕೆ ಮತ್ತೆ ಇರಿಸುಮುರಿಸುಂಟಾಯಿತೇನೋ! ಹೋದೆಯಾ ಪಿಶಾಚಿ ಅಂದ್ರೆ ಬಂದೆ ಗವಾಕ್ಷೀಲಿ ಅನ್ನೋ ಗಾಧೆ ಅವುಗಳಿಗೂ ನೆನಪಾಗಿರಬೇಕು. ಅದರೇನು ಮಾಡುವುದು? ಮಕ್ಕಳನ್ನು ಸಾಕುವ ಜವಾಬ್ದಾರಿ ಇದ್ದೇ ಇದೆಯಲ್ಲ! ನನ್ನನ್ನು ಗಮನಿಸದೇ ಆ ದಂಪತಿ ಪಾರಿವಾಳಗಳು ಹಾರಿಹೋದವು. ನನಗೂ ಬೇಕಾಗಿದ್ದುದ್ದು. ಅದೆ ತಾನೆ! ಇವುಗಳ ಮೇಲೆ ಸಾಕಷ್ಟು ಫೋಟೋಗಳನ್ನು ತೆಗೆದಿದ್ದಾಗಿತ್ತು. ಒಂದು ರೀತಿಯಲ್ಲಿ ನನ್ನ ಪ್ರಕಾರ ಅವುಗಳ ಮಾರ್ಕೆಟ್ ಇಳಿದಿದೆ ಅಂತ ನನಗೂ ಅನಿಸಿತ್ತು. ಈಗೇನಿದ್ದರೂ ಬೆಳೆಯುತ್ತಿರುವ ಮರಿಗಳ ನಟನೆ ಹಾವಭಾವ ಚಟುವಟಿಕೆಗಳನ್ನು ಸೆರೆಯಿಡಿಯುವಲ್ಲಿ ನಾನು ತಲ್ಲೀನನಾದೆ.
ಮರಿಗಳು ನಾನು ಬರುತ್ತಿರುವುದು ಗೊತ್ತಾಗುತ್ತಿದ್ದಂತೆ ಗೂಡಿನ ಪಕ್ಕದ ಸ್ಯಾನಿಟರಿ ಪೈಪಿನ ಮರೆಗೆ ಹೋಗಿ ನನ್ನ ಕ್ಯಾಮೆರಾ ಕಡೆಗೆ ತಮ್ಮ ಹಿಂಬಾಗವನ್ನು ತೋರಿಸುತ್ತಾ ನಿಂತುಬಿಡುತ್ತಿದ್ದವು. ಫೋಟೊ ತೆಗೆಯುವುದಾದರೇ ನಮ್ಮ ಹಿಂಬಾಗದ [ಮರ್ಮಾಂಗವನ್ನು ಸೇರಿದಂತೆ]ಫೋಟೊ ಹೊಡ್ಕೊ ಹೋಗ್! ಅಂತ ನನ್ನನ್ನೂ ಅಣಕಿಸಿದಂತಾಯಿತು.
ಆದರೆ ಇಂತ ಎಷ್ಟು ಹಕ್ಕಿಗಳ ಆಟಗಳನ್ನು ನೋಡಿದ್ದೀನಿ ನನ್ನ ಪಕ್ಷಿಲೋಕದ ಛಾಯಾಗ್ರಹಣದಲ್ಲಿ! ಇವು ಇನ್ನೂ ಸಣ್ಣಮರಿಗಳು ಇರಲಿ ಬಿಡು ಅಂತ ನಾನೇ ತಾಳ್ಮೆ ತಂದುಕೊಂಡು ಕಾಯುತ್ತ ಕುಳಿತೆ. ಈ ಸರ್ಕಸ್ ಮೂರು ದಿನ ನಡೆಯಿತು. ನಾನು ಪಟ್ಟು ಬಿಡದೇ ಕಾಯುತ್ತಿದ್ದೆ. ಇದರ ನಡುವೆ ಅವುಗಳ ಪೇರೆಂಟ್ ಪಾರಿವಾಳಗಳು ಗುಟುಕು ತಂದು ಕಾಯುತ್ತಿರುತ್ತಿದ್ದವು. ಆ ಸಮಯದಲ್ಲಿ ಕೆಳಗೆ ಬಂದುಬಿಡುತ್ತಿದ್ದೆ. ಮರಿಗಳಿಗೆ ಗುಟುಕು ಕೊಟ್ಟು ಸುಮಾರು ಹೊತ್ತು ಕಳೆದ ಮೇಲೆ ಮತ್ತೆ ಕ್ಯಾಮೆರಾ ಏರಿಸಿಕೊಂಡು ಮತ್ತೆ ಟೆರೆಸಿನಲ್ಲಿ ಸೆಟ್ಲ್ ಆಗಿಬಿಡುತ್ತಿದ್ದೆ. ನಾಲ್ಕನೇ ದಿನ ಕೊನೆಗೂ ನನ್ನಿಂದ ಏನು ತೊಂದರೆ ಇಲ್ಲ ಅಂತ ಪಾರಿವಾಳ ಮರಿಗಳಿಗೆ ಅರಿವಾಗಿರಬೇಕು ಅಥವ ಅವುಗಳ ಅಪ್ಪ ಅಮ್ಮ ನನ್ನಿಂದೇನು ತೊಂದರೆ ಇಲ್ಲ ಅಂತ ತಿಳುವಳಿಕೆ ನೀಡಿರಬಹುದೇನೋ! ನಿದಾನವಾಗಿ ಪೈಪಿನ ಮರಿಯಿಂದ ಬಂದು ತಮ್ಮ ಗೂಡಿನ ಬಳಿ ಬರುವುದು ಅರಾಮವಾಗಿ ಓಡಾಡುವುದು ಎಲ್ಲಾ ಮಾಡತೊಡಗಿದವು.
ಮತ್ತೆರಡು ದಿನ ನಾನು ಮರಿಗಳ ಫೋಟೊಗಳನ್ನು ಧಾರಾಳವಾಗಿ ತೆಗೆದೆ. ಆವುಗಳು ದೊಡದಾಗುತ್ತಾ ಹೊರಗಿನ ಪ್ರಪಂಚದಲ್ಲಿ ಏನಾಗುತ್ತಿದೆ ಅನ್ನುವುದನ್ನು ಗಮನಿಸತೊಡಗಿದವು. ಅದು ಅವುಗಳ ಹಾವಭಾವ ಚಟುವಟಿಕೆಗಳನ್ನು ನಾನು ಕ್ಯಾಮೆರಾದ ವ್ಯೂಫೈಂಡರಿನಿಂದ ನೋಡುವಾಗ ತಿಳಿಯುತ್ತಿತ್ತು.
ಒಂದು ಸಂಜೆ ಆರು ಗಂಟೆ ದಾಟಿತ್ತು. ನಾನು ಕತ್ತಲಾಯಿತಲ್ಲ ಎಂದು ಕ್ಯಾಮೆರಾವನ್ನು ಸ್ಟ್ಯಾಂಡಿನಿಂದ ಬಿಚ್ಚಲು ಸಿದ್ದನಾಗುತ್ತಿದ್ದಂತೆ ಅದುವರೆಗೂ ಸುಮ್ಮನೇ ಕುಳಿತಿದ್ದ ಒಂದು ಪಾರಿವಾಳ ಮರಿ ಎದ್ದು ನಿಂತಿತು. ಅದು ಎದ್ದು ನಿಲ್ಲಲು ಕಾರಣ ನನ್ನ ಆಡುಗೆ ಮನೆಯ ಕುಕ್ಕರ್ ಕೂಗಿದ ಶಬ್ದಕ್ಕೆ ಕುತೂಹಲ ಉಂಟಾಯಿತೇನೋ! ನಾನು ತಕ್ಷಣ ಕ್ಯಾಮೆರಾವನ್ನು ಸ್ಟ್ಯಾಂಡಿನಿಂದ ತೆಗೆಯದೆ ನೋಡೋಣ ಏನು ಮಾಡುತ್ತದೆ ಅಂತ ಹಾಗೆ ಕ್ಯಾಮೆರಾ ಕಿಂಡಿಯಿಂದ ನೋಡತೊಡಗಿದೆ. ಮತ್ತೊಂದು ವಿಷಲ್ ಕುಕ್ಕರಿನಿಂದ ಬಂತಲ್ಲ! ಎದ್ದು ನಿಂತಿದ್ದ ಅದು ಅದರ ಆಳತೆಯ ನಾಲ್ಕು ಹೆಜ್ಜೆ ಮುಂದೆ ಬಂದು ಕೆಳಗೆ ಬಗ್ಗಿ ನೋಡತೊಡಗಿತು. ನಾನು ಅದು ಆಡಿಗೆ ಮನೆ ಕಡೆಗೆ ನೋಡುವುದನ್ನು ಫೋಟೊ ತೆಗೆದೆ. ಮೂರನೇ ಬಾರಿ ಕೂಗಿದಾಗಲೂ ಅಲ್ಲೇ ನಿಂತು ಇಣುಕಿತ್ತು. ಅದು ಕುಕ್ಕರಿನಿಂದ ಹೊರಬಂದ ಹಬೆಗಾಳಿಯಲ್ಲಿರುವ ಮಸಾಲೆ ವಾಸನೆಯನ್ನು ಎಂಜಾಯ್ ಮಾಡುತ್ತಿದೆಯಾ? ಅಥವಾ ಆಡುಗೆ ಮನೆ ಕಿಟಕಿಯ ಒಳಗಿರುವವರನ್ನು[ನನ್ನ ಶ್ರೀಮತಿ]ಗಮನಿಸುತ್ತಿದೆಯಾ? ಗೊತ್ತಿಲ್ಲ. ಮತ್ತೊಂದು ಮರಿ ಮೂಲೆಯಲ್ಲಿ ಕುಳಿತು ಇದನ್ನೇ ಗಮನಿಸುತ್ತಿತ್ತು. ಐದು ನಿಮಿಷ ಕಳೆದಿರಬಹುದು. ಅದಕ್ಕೇನನ್ನಿಸಿತೊ ಏನೋ ! ಇದ್ದಕ್ಕಿದ್ದಂತೆ ಹಿಂದಕ್ಕೆ ತಿರುಗಿ ತನ್ನ ಗುದದ್ವಾರದಿಂದ ಪಚಕ್ಕನೆ ಹಿಕ್ಕೆ ಹಾಕಿತಲ್ಲ! ಅದೇ ಕ್ಷಣಕ್ಕೆ ನಾನು ಕ್ಲಿಕ್ಕಿಸಿ ಆ ದೃಶ್ಯವನ್ನು ಸೆರೆಹಿಡಿದೆನಲ್ಲ! ಎಲ್ಲವೂ ಮಿಂಚಿ ಮರೆಯಾದಂತೆ ಆಗಿಹೋಯಿತು.
ಆ ಮರಿ ಪಾರಿವಾಳ ಬಹುಶ: ಈ ರೀತಿ ಸಿಟ್ಟಿನಿಂದ ಮಾಡಿರಬಹುದೇ ? ಇರಬಹುದು ನಾನು ಬಿಟ್ಟಿ ಫೋಟೊ ತೆಗೆಯುತ್ತಿದ್ದೇನೆ, ಅತ್ತ ಆಡಿಗೆಮನೆಯಿಂದ ಕೇವಲ ವಾಸನೆ ಮಾತ್ರ ಬರುತ್ತಿದೆ, ಅಥವಾ ಆ ಶಬ್ದವೇ ಅದಕ್ಕೆ ಕಿರಿಕಿರಿ ಉಂಟು ಮಾಡುತ್ತಿತ್ತೇನೋ! ಎಷ್ಟೇ ಆದರೂ ಅದು ಅಪ್ಪ ಅಮ್ಮನಿಂದ ಕಲಿತ ಸಿಟಿ ಪಾಠ ಇರಬಹುದು. ಬಿಟ್ಟಿ ಏನನ್ನು ಕೊಡಬಾರದು ಕೊಟ್ಟರೂ ಅದು ಉಪಯೋಗಕ್ಕೆ ಬರಬಾರದು, ಅಥವ ಹಿಂಭಾಗ ತೋರಿಸಿ ಆಣಕಿಸುವ ಬುದ್ದಿ ಸಿಟಿಯಲ್ಲಿ ಹುಟ್ಟಿದ ಈ ಮರಿಪಾರಿವಾಳದ ಹುಟ್ಟುಗುಣವೋ ? ಒಂದು ಅರಿಯದೆ ನಾನು ತಬ್ಬಿಬ್ಬಾಗಿದ್ದೆ. ಕೊನೆಗೊಂದು ದಿನ ಇವುಗಳನ್ನು ಏಮಾರಿಸಿ ಹೇಗಾದರೂ ಫೋಟೊ ತೆಗೆಯಬೇಕಲ್ಲ ಅಂದು ಒಂದು ಉಪಾಯ ಮಾಡಿದೆ. ರಾತ್ರಿ ಎಂಟು ಗಂಟೆಯ ಕತ್ತಲಿನಲ್ಲಿ ಯಾರು ನೋಡುವುದಿಲ್ಲವೆಂದು ಗೂಡಿನಿಂದ ಹೊರಬಂದಾಗ ನಾನು ಫೋಟೊ ತೆಗೆಯುವುದೆಂದುಕೊಂಡು ಕತ್ತಲಲ್ಲಿ ಸ್ಟ್ಯಾಂಡಿಗೆ ಕ್ಯಾಮೆರಾ ಮತ್ತು ಪ್ಲಾಶ್ ಸೆಟ್ ಮಾಡಿದೆ. ಕತ್ತಲಲ್ಲಿ ಏನು ಕಾಣುತ್ತಿರಲಿಲ್ಲ. ಫೋಕಸ್ ಕೂಡ ಆಗುತ್ತಿರಲಿಲ್ಲ. ಕ್ಯಾಮೆರಾ ಕೂಡ ಕಂಡ ವಸ್ತುವನ್ನು ಮನನ ಮಾಡಿಕೊಳ್ಳಲು ಅದಕ್ಕೂ ಬೆಳಕು ಬೇಕಲ್ಲವೆ? ಕೊನೆಗೆ ನಾನೇ ನನಗೆ ತಿಳಿದಂತೆ ಕತ್ತಲಿಗೆ ನನ್ನ ಕಣ್ಣು ಹೊಂದಿಸಿಕೊಂಡು ನಿದಾನವಾಗಿ ಅಂದಾಜಿನ ಮೇಲೆ ಮ್ಯಾನ್ಯೂವಲ್ ಫೋಕಸ್ ಮಾಡುತ್ತಾ ಐದಾರು ಕ್ಲಿಕ್ ಮಾಡಿದ್ದೆ.
ಕ್ಲಿಕ್ಕಾದಾಗ ಬಂದ ಪ್ಲಾಶ್ ಬೆಳಕಿಗೆ ಗೂಡಿನಿಂದ ಈ ಕಡೆ ಬಂದು ಕುಳಿತಿದ್ದ ಆ ಮರಿಗಳು ಒಮ್ಮೆ ಗಾಬರಿಯಾಗಿ ನಂತರ ಕತ್ತಲಲ್ಲಿ ಅವಕ್ಕೆ ಏನೂ ಕಾಣದೆ ಮತ್ತೆ ಸುಮ್ಮನಾದವು. ನಂತರ ಆಗ ತೆಗೆದ ಚಿತ್ರಗಳನ್ನು ಕಂಪ್ಯೂಟರಿಗೆ ವರ್ಗಾಯಿಸಿದಾಗ ತೆಗೆದ ಐದಾರು ಫೋಟೊಗಳಲ್ಲಿ ಎರಡು ಚೆನ್ನಾಗಿ ಶಾರ್ಪಾಗಿ ಬಂದಿತ್ತು. ನನ್ನ ಪ್ರಯೋಗ ಯಶಸ್ವಿಯಾಗಿತ್ತು. ಮುಂದೆ ಮತ್ತಷ್ಟು ಫೋಟೊ ತೆಗೆಯಬೇಕೆಂದು ನನಗೇನು ಅನ್ನಿಸಲಿಲ್ಲ. ಅಂಥ ಫೋಸುಗಳೇ ಸಿಕ್ಕಿರುವಾಗ ನನಗೇ ಮತ್ತೆ ಅದಕ್ಕಿಂತ ವಿಶೇಷ ಫೋಟೊ ಸಿಗಲಿಕ್ಕಿಲ್ಲವೆಂದು ಅನಿಸಿತ್ತು. ಈ ಮದ್ಯೆ ನನ್ನ ಹೆಂಡತಿ ಬೇರೆ "ಆದೇನ್ರಿ ನೀವು ಇನ್ನೂ ಫೋಟೊ ತೆಗೆಯುತ್ತಿದ್ದೀರಿ? ಆವು ನಿಮಗೆ ಫೋಸ್ ಕೊಡೊಲ್ಲ, ನೀವು ಬಿಡಲ್ಲ. ಅವತ್ತು ಆದ ಅವಮಾನ ಸಾಕಲ್ವ? ಎಂದು ಅಂಗಿಸುತ್ತಿದ್ದಳು. ನನಗೂ ಅವಳ ಮಾತು ಸರಿಯೆನಿಸಿತ್ತು.
ಅಷ್ಟರಲ್ಲಿ ಮರಿಗಳು ಮತ್ತಷ್ಟು ದೊಡ್ಡವಾಗಿದ್ದವು. ಟೆರೆಸ್ಸಿನ ಮೇಲೆಲ್ಲಾ ಓಡಾಡುತ್ತಿದ್ದವು. ದೀಪಾವಳಿ ಹತ್ತಿರ ಬಂತಲ್ಲ! ಮತ್ತೆ ನನ್ನ ಕೆಲಸ ಕಡೆ ಗಮನ ಕೊಡಬೇಕಲ್ಲ. ಸಾಕೆನಿಸಿತ್ತು ಎರಡು ತಿಂಗಳಿಂದ ಈ ಹಕ್ಕಿಗಳ ಸಹವಾಸ ಅಂತಲೂ ಅನಿಸಿತ್ತು.
ಮತ್ತೊಂದು ವಾರ ಕಳೆಯಿತು. ನನ್ನದು ಮೊಂಡು ಬುದ್ದಿಯ ಹುಟ್ಟುಗುಣವೋ ? ಮತ್ತೆ ಕುತೂಹಲದಿಂದ ಟೆರೆಸ್ಸಿಗೆ ಹೋಗಿ ನೋಡಿದೆ. ಪಾರಿವಾಳಗಳು ಸಂಸಾರ ಸಮೇತ ಮನೆ ಖಾಲಿ ಮಾಡಿ ಹೋಗಿದ್ದವು. ಗಲೀಜಾದ ಗೂಡು ಮಾತ್ರ ಖಾಲಿಯಾಗಿ ಬಿದ್ದಿತ್ತು.
ಶಿವು.ಕೆ

Monday, October 6, 2008

ಚಂದ್ರ ಮಕುಟ ಹಕ್ಕಿಯ ದಿನಚರಿ

ಮನುಷ್ಯ ತನ್ನ ಜೀವನಪೂರ್ತಿ ಸೋಮಾರಿಯಾಗಿ ಕಳೆಯುವುದೇ ಹೆಚ್ಚು. ಆದರೆ ಪ್ರಾಣಿ, ಪಕ್ಷಿ, ಕೀಟಗಳು ಹಾಗಲ್ಲ. ಹುಟ್ಟಿದ ಮರುಕ್ಷಣದಿಂದಲೇ ಚಟುವಟಿಕೆ ಪ್ರಾರಂಭಿಸುತ್ತವೆ.

ಅದಕ್ಕೊಂದು ತಾಜಾ ಉದಾಹರಣೆ ಈ ಚಂದ್ರಮಕುಟ ಹಕ್ಕಿ. ಕ್ಯಾಮೆರಾ ಕಣ್ಣಿಗೆ ಸೆರೆಸಿಕ್ಕ ಕೇವಲ ಒಂದು ನಿಮಿಷದಲ್ಲಿ ಅದೆಷ್ಟು ಭಂಗಿಗಳಲ್ಲಿ ಕಾಣಿಸಿಕೊಂಡಿತು ನೋಡಿ!


ನನ್ನ ಮಕ್ಕಳಿಗೆ ಪ್ರೀತಿಯಿಂದ ಊಟ ಕೊಡ್ತೀನಿ.....

ತತ್!...... ಈ ಕಾಗೆ ಹದ್ದುಗಳು ಕೆಳಗೆ ಗೂಡಿನ ಹತ್ತಿರವೇ ಹೊಂಚು ಹಾಕುತ್ತಿವೆಯಲ್ಲಾ!
{ಬಲಗಡೆ ತಿರುಗಿ] ನೋಡ್ರೋ ಹದ್ದುಗಳಾ! ನನ್ನ ರಾಕ್ಷಸ ರೂಪವನ್ನು, ನನ್ನ ಪುಟ್ಟಮರಿಗಳ ತಂಟೆಗೆ ಬಂದರೆ ಹುಷಾರ್!!.

ಹೇ ದರಿದ್ರಾ ಕಾಗೆಗಳಾ ನೋಡಿದ್ರಾ? ನನ್ನ ರೌದ್ರಾವತಾರವನ್ನು! ನನ್ನ ಗೂಡಿನ ಕಡೆ ಬಂದ್ರೇ ಹುಷಾರ್!!.'
ಸದ್ಯ ತೊಲಗಿದವು ಪೀಡೆಗಳು, ಒಮ್ಮೆ ಮೈ ಕೊಡವಿಕೊಳ್ಳೋಣ!.
ಗಡಿಯಾರದ ಮುಳ್ಳುಗಳ ಮೇಲೆ ಒಂದು ಕಣ್ಣು ಮತ್ತು ಚಂದ್ರ ಮಕುಟ ಹಕ್ಕಿಯ ಮೇಲೆ ಇನ್ನೊಂದು ಕಣ್ಣು ನೆಟ್ಟಿದ್ದೆ. ಸರಿಯಾಗಿ ಅರವತ್ತು ಸೆಕೆಂಡಿನಲ್ಲಿ ಅದು ಎಷ್ಟು ಚಟುವಟಿಕೆಯಿಂದ ಇರುತ್ತದೆ. ಎಂಬುದನ್ನು ಕಂಡುಂಡಾಗ ಮೈ ಜುಮ್ಮೆಂದಿತು.

ಹೇಗಿದೆ ನನ್ನ ಬ್ಯಾಲೆ ಸ್ಟೈಲ್?
ಕುತ್ತಿಗೆ ಕೆಳಗೆ ತಾಳಲಾರದ ಕಡಿತ!.

ಬೆನ್ನಗರಿಗಳ ಕೆಳಗೆ ಕೆರೆತ.

ಗರಿಗಳಿಗೊಮ್ಮೆ ನಯವಾದ ಮಾಲಿಶ್.
ಓಹ್, ಒಂದು ಸಣ್ಣ ಮೈ ಮುರಿತ.
ಛೇ!.... ಗುದದ್ವಾರದಲ್ಲಿ ಎಂಥದೋ ನವೆ[ನಾಚಿಕೆಯಾಗುತ್ತೆ!!........ನೋಡಬೇಡಿ ಕಣ್ಣು ಮುಚ್ಚಿಕೊಳ್ಳಿ!] ಚಳಿಗಾಲ ಬಂತೆಂದರೆ ಇದು ಸಹನೀಯ ಹವೆ ಇರುವೆಡೆಗೆ ವಲಸೆ ಹೋಗುತ್ತದೆ. ಕ್ಷಣಾರ್ಧದಲ್ಲಿ ಕೀಟಗಳನ್ನು ಹಿಡಿಯುವುದರಲ್ಲಿ ಇದು ನಿಸ್ಸೀಮ. ಮರಿಗಳನ್ನು ಜತನ ಮಾಡುವ ರೀತಿ ಆಹಾರ ತಂದು ಕೊಡುವ ಪರಿ, ಮರಿಗಳನ್ನು ನೋಡಿಕೊಳ್ಳುವ ಕಾಳಜಿ ಅದ್ಬುತ.

ಶಿವು.ಕೆ