Sunday, October 19, 2008

ನಾಚಿಕೆಯಿಲ್ಲದ ಪಾರಿವಾಳ ಕುಟುಂಬ

ನನ್ನ ಮಡದಿ 'ರ್ರೀ ಅಡುಗೆ ಮನೆಯಲ್ಲಿ ಏನೋ ಸೇರಿಕೊಂಡಿದೆ ನೋಡಿ ಬನ್ನಿ" ಎಂದು ನನ್ನನ್ನೂ ಕರೆದಳು. ನಾನು ಹೋಗಿ ನೋಡಿ ಏನು ಇಲ್ಲದಿರುವುದನ್ನು ನೋಡಿ " ಏನೂ ಇಲ್ವಲ್ಲೋ" ಅಂದೆ. "ಅಯ್ಯೋ ನೀವೊಂದು ನೀವಿಲ್ಲಿ ನಿಂತು ಸರಿಯಾಗಿ ಕೇಳಿಸಿಕೊಳ್ಳಿ........ಸ್ವಲ್ಪ ತಡೆದು "ನೋಡಿದ್ರಾ ಒಂಥರಾ ಶಬ್ದ ಬರ್ತಿದೆ ಅಲ್ವಾ, ಕೇಳಿಸಿಕೊಳ್ಳಿ" ಎಂದಳು.
ನಾನು ಸ್ವಲ್ಪ ಹೊತ್ತು ಮೈಯೆಲ್ಲಾ ಕಿವಿಯಾಗಿಸಿಕೊಂಡಾಗ "ಗುಟುರ್ ಗುಟುರ್, ಗುಟುರ್........ " ಎನ್ನುವ ಶಬ್ದ ಕೇಳಿಸಿತು. ತಕ್ಷಣ ನನಗೆ ಅದು ಪಾರಿವಾಳದ ಸದ್ದೆಂದು ಗೊತ್ತಾಯಿತು. ನಾನು ಆಡುಗೆ ಮನೆಯ ಮೇಲೆ ಕೆಳಗೆ ಸಜ್ಜೆ, ಎಲ್ಲಾ ಜಾಗದಲ್ಲಿ ಹುಡುಕಿದೆ. ಎಲ್ಲಾದರೂ ನಮಗೇ ಗೊತ್ತಾಗದ ಹಾಗೆ ಬಂದು ಸೇರಿಕೊಂಡಿರಬಹುದಾ ಎಂದು. ಎಲ್ಲಿಯೂ ಇರಲಿಲ್ಲ. ಆದರೆ ಶಬ್ದ ಮಾತ್ರ ಬರುತ್ತಿತ್ತು. ಸ್ವಲ್ಪ ಹೊತ್ತು ನಿದಾನವಾಗಿ ಕೇಳಿಸಿಕೊಂಡಾಗ ತಿಳಿಯಿತು. ಪಾರಿವಾಳ ಶಬ್ದ ಮಾಡುತ್ತಿರುವುದು ಆಡುಗೆ ಮನೆಯ ಕಿಟಕಿಯ ಹೊರಗೆ ಅಂತ.
ತಕ್ಷಣ ಹೊರಬಂದು ನಮ್ಮ ಮನೆಯ ಟೆರೆಸಿಗೆ ಹೋಗಿ ನೋಡಿದರೆ, ಅಡುಗೆ ಮನೆಯ ಕಿಟಕಿಯ ಹೊರಗೆ ಸಜ್ಜೆ ಮೇಲೆ ನಿದಾನವಾಗಿ ಗೂಡುಕಟ್ಟಲು ಕಸ ಕಡ್ಡಿಗಳನ್ನು ತಂದು ಹಾಕುತ್ತಿದೆ. ಒಂದು ವಾರದ ನಂತರ ನೋಡಿದರೆ ಅದರ ಗೂಡು ಸಿದ್ದವಾಗಿದೆ. ಆ ಗೂಡಿಗೆ ಒಮ್ಮೆ ಗಂಡು ಮತ್ತೊಮ್ಮೆ ಹೆಣ್ಣು ಎರಡು ಬಂದು ಹೋಗುವುದು ನಡೆದೇ ಇತ್ತು. ಇತ್ತ ನಾವು ಗಣೇಶ ಹಬ್ಬಕ್ಕೆ ತುಮಕೂರಿಗೆ ಅಣ್ಣನ ಮನೆಗೆ ಹೋಗಿದ್ದವರು ವಾಪಸು ಬಂದು ನೋಡುತ್ತೇವೆ, ಆಗಲೇ ಎರಡು ಮೊಟ್ಟೆ!.
ಸರಿ ಶುರುವಾಯ್ತಲ್ಲ ಸುಧ್ದಿ. ಪಕ್ಕದ ಮನೆಯವರು, ಮಹಡಿ ಮನೆಯವರು, ಕೆಳಗಿನವರು ಹೊರಗಿನವರು ನೆಂಟರು ಒಬ್ಬೊಬ್ಬರಾಗಿ ಬಂದು ನೋಡಿ "ಆಹಾ ಎಷ್ಟು ಚೆನ್ನಾಗಿದೆ ಮೊಟ್ಟೆಗಳು, ಮರಿ ಹಾಕೋದು ಯಾವಾಗ? ಮಳೆ ಬಂದಾಗ ಹೇಗಿರುತ್ತವೆ?! ಇವಕ್ಕೆ ಮಳೆಗಾಲದಲ್ಲಿಯೇ ಗೂಡು ಕಟ್ಟಬೇಕಾಗಿತ್ತ? ನಾವು ನಮ್ಮ ಮನೆಯನ್ನು ಮಳೆಗಾಲದಲ್ಲಿ ಕಟ್ಟಲು ಶುರುಮಾಡಿ ಪಟ್ಟ ಕಷ್ಟ ಒಂದೊರೆಡಲ್ಲ, ಹೀಗೆ ನಾನಾ ಪ್ರಶ್ನೋತ್ತರಗಳು. ನನಗಂತೂ ಯಾಕದ್ರೂ ಗೊತ್ತಾಯ್ತೋ ಇವರಿಗೆಲ್ಲಾ, ಗಂಟೆಗೊಂದು ಬಾರಿ ಗಳಿಗೆಗೊಂದು ಬಾರಿ ನೋಡಿಕೊಂಡು ಹೋಗ್ತಾರಲ್ಲ! ಇವರಿಂದ್ ಅವಕ್ಕೆ ತೊಂದರೆಯೆನಿಸಿ ಈ ಜಾಗ ಸರಿಯಲ್ಲ ನಮಗೆ ಎಂದು ಖಾಲಿಮಾಡಿಬಿಟ್ಟರೆ? ಎನಿಸಿತ್ತು.
ನನಗೆ ಹಾಗೆ ಅನ್ನಿಸಿದರೂ ನಾನೆ ದಿನಕ್ಕೆ ೫-೬ ಬಾರಿ ಟೆರಸ್ಸಿಗೆ ಹೋಗಿ ಕುತೂಹಲದಿಂದ ಇಣುಕಿನೋಡಿ ಬರುತ್ತಿದ್ದೆ. ಅವುಗಳಿಗೆ ಬೇರೆಯವರಿಗಿಂತ ನನ್ನಿಂದಲೇ ಹೆಚ್ಚು ತೊಂದರೆಯುಂಟಾಗುತ್ತಿದೆ ಅನಿಸಿತ್ತು.
ನಾವು ಬೇರೆ ಎಲ್ಲೂ ಜಾಗ ಸಿಗೋದಿಲ್ಲವೆಂದು ಇಲ್ಲಿ ಬಾಡಿಗೆಗೆ ಬಂದರೆ ಏನಪ್ಪ ಇದು ಓನರ್[ನಾನು]ಸೇರಿದಂತೆ ಎಲ್ಲರಿಂದಲೂ ಇಷ್ಟೊಂದು ತೊಂದರೆಯಲ್ಲಪ್ಪ, ನಾವು ನೆಮ್ಮದಿಯಾಗಿ ಒಂದು ತಿಂಗಳು ಸಂಸಾರ ಮಾಡಿ ಅಮೇಲೆ ಹೋಗಿಬಿಡ್ತೀವಿ, ನಮ್ಮನೆಯಲ್ಲಿ ಏನು ನಡೀತಿದೆ ಅಂತ ಒಬ್ಬರಾದ ಮೇಲೆ ಒಬ್ಬರು ಇಣುಕುತ್ತಿದ್ದರೆ ನಮ್ಮ ಪ್ರೈವೇಸಿಗೆ ಏನಾಗಬೇಡ? ನಾವೇನು ಹಾಗೆ ಅವರ ಮನೆಗೆಲ್ಲಾ ಹೋಗಿ ನೋಡ್ತೀವಾ?!..........ಹೀಗೆ ನಾನಾ ರೀತಿ ಆ ಜೋಡಿ ಪಾರಿವಾಳಗಳು ಅಂದುಕೊಂಡಿರಬಹುದು. ಕೊನೆಗೆ ನಾನೆ ತೀರ್ಮಾನಿಸಿದೆ. ಮೂರು ದಿನಕೊಮ್ಮೆ ಮಾತ್ರ ಹೋಗಿ ನೋಡುವುದು ಅಥವಾ ಫೋಟೋ ತೆಗೆಯುವುದು ಅಂತ. ಅವು ಪಾಪ ಏನು ಮಾಡುತ್ತವೆ? ಹೇಳಿ! ನಾವಾದರೂ ಯಾರಮನೆಯಲ್ಲಾದರೂ ಬಸುರಿ ಹೆಣ್ಣು ಇದ್ದರೆ ಡೆಲಿವರಿ ಆಗುವವರೆಗೂ ಮನೆ ಖಾಲಿಮಾಡುವಂತಿಲ್ಲವಲ್ಲ! ಹಾಗೆ ಇಲ್ಲೂ ನನ್ನಂತ ತೊಂದರೆ ಕೊಡುವ ಓನರ್ ಇದ್ದರೂ ಮೊಟ್ಟೆ ಇಟ್ಟಾಗಿದೆ ಅದು ಒಂದು ಲೆಕ್ಕದಲ್ಲಿ ಬಸುರಿಯಾದಂತೆಯೇ...!
ಆ ಮೊಟ್ಟೆಗಳ ಮೇಲೆ ಕೂತು ಹಗಲು-ರಾತ್ರಿ ಕಾವು ಕೊಡುವುದು , ಒಂದು ಹೆಣ್ಣು ಬಸುರಿಯಾಗುವುದು ಎರಡು ಒಂದೇ ಅಂತ ಆ ಪಾರಿವಾಳಗಳಿಗೆ ಅನ್ನಿಸಿ ಏನಾದರಾಗಲಿ ನಮ್ಮ ಸಂಸಾರವನ್ನು ಇಲ್ಲೇ ಚೆನ್ನಾಗಿ ಮಾಡಿಹೋಗೋಣವೆಂದು ಅವು ಮೊಂಡು ಬಿದ್ದು ತೀರ್ಮಾನಿಸಿರಬೇಕು! ಅವು ನಮ್ಮನ್ನೂ ಕೇರ್ ಮಾಡದೆ ತಮ್ಮ ಕೆಲಸ ಮುಂದುವರಿಸಿದವು..
ಈಗ ಹೆಣ್ಣು ಪಾರಿವಾಳ ಸದಾಕಾಲ ತತ್ತಿಯ ಮೇಲೆ ಕೂತು ಕಾವು ಕೊಡುತ್ತಿದ್ದರೆ ಗಂಡು ಹೊರಹೋಗಿ ದುಡಿದು[ಆಹಾರ ಹುಡುಕಿ] ಬಂದು ತನ್ನ ಶ್ರೀಮತಿಗೆ ಆಹಾರ ಕೊಡುತ್ತಿತ್ತು. ಇದು ಸರಿ ಸುಮಾರು ೨೧ ದಿನ ಕಳೆದಿರಬಹುದು. ನಾನು ಆಗಾಗ ಅವುಗಳ ದಿನಚರಿಗಳನ್ನೆಲ್ಲಾ ಕ್ಲಿಕ್ಕಿಸುತ್ತಿದ್ದೆ. ಇವನೇನಾದ್ರು ಮಾಡಿಕೊಂಡು ಸಾಯಲಿ ಎಂದು ಆ ಪಾರಿವಾಳಗಳು ತಮ್ಮ ಪಾಡಿಗೆ ತಾವು ಇದ್ದವು.
ಒಂದು ದಿನ ನಾನು ಸ್ವಲ್ಪ ರಾಗಿಯನ್ನು ಟೆರಸಿನಲ್ಲಿ ಹಾಕಿದೆ. ಅವು ಮುಟ್ಟಲಿಲ್ಲ. ಬಿಕ್ಷೆಯನ್ನೆಲ್ಲಾ ನಾವು ತಿನ್ನುವುದಿಲ್ಲ, ಪ್ರತಿದಿನ ದುಡಿದು ತಿನ್ನುತ್ತೇವೆ ಎನ್ನುವ ಆತ್ಮವಿಶ್ವಾಸ, ಸ್ವಾಬಿಮಾನ ಅವುಗಳಿಗೆ ಸ್ವಲ್ಪ ಹೆಚ್ಚೇ ಇರಬೇಕೆಂದುಕೊಂಡು ಸುಮ್ಮನಾದೆ.
ಅಂದು ಭಾನುವಾರ ೨೧ನೇ ತಾರೀಖು. ಬೆಳಿಗ್ಗೆ ನೋಡುತ್ತೇನೆ. ಗೂಡಿನಲ್ಲಿ ಎರಡು ಪುಟ್ಟಮರಿಗಳು. ಅವು ಹೊರಗೆ ಕಾಣದಂತೆ ತಾಯಿಹಕ್ಕಿ ರೆಕ್ಕೆಯಲ್ಲಿ ಬಚ್ಚಿಟ್ಟುಕೊಂಡಿತ್ತು. ಮೂರುದಿನದ ನಂತರ ಮರಿಗಳು ಸ್ವಲ್ಪ ದೊಡ್ಡವಾದವಲ್ಲದೇ ಪಿಳಿಪಿಳಿ ಕಣ್ಣು ಬಿಡಲಾರಂಭಿಸಿದವು. ನಾನು ಮತ್ತು ನನ್ನ ಶ್ರೀಮತಿ ಇಬ್ಬರೂ ಧಾರಾಳವಾಗಿ ಹಕ್ಕಿ, ರಾಗಿ, ಗೋದಿ, ಬಿಸಾಡುವ ಸೊಪ್ಪು, ಸಿಪ್ಪೆಗಳು, ಎಲ್ಲವನ್ನೂ ಹಾಕತೊಡಗಿದವು. ನಾನು ಹಾಕಿದ್ದನ್ನು ಇದುವರೆಗೂ ಮುಟ್ಟದಿದ್ದ ಈ ಹಕ್ಕಿಗಳು, ನಾನು ಇಲ್ಲದಿರುವಾಗ ಅವನ್ನು ತಾವು ತಿಂದು ಮರಿಗಳಿಗೂ ಕೊಕ್ಕಿನಲ್ಲಿ ತೆಗೆದುಕೊಂಡು ಹೋಗಿ ಗುಟುಕು ಕೊಡಲಾರಂಭಿಸಿದವು.
"ಈಗಿನ ಕಾಲದಲ್ಲಿ ಮಕ್ಕಳನ್ನು ಸಾಕಲು ಈ ಬೆಂಗಳೂರಲ್ಲಿ ಎಷ್ಟು ಕಷ್ಟವಿದೆ ಅಂತ ನಮಗೇ ಗೊತ್ತು. ಇಷ್ಟಕ್ಕೂ ನಾವೇನೂ ಬಿಟ್ಟಿ ತಿನ್ನುತ್ತಿಲ್ಲವಲ್ಲ! ಅದಕ್ಕೆ ಪ್ರತಿಫಲವಾಗಿ ಅವನು ನಮ್ಮ ಫೋಟೊ ತೆಗೆಯುತ್ತಿದ್ದಾನಲ್ಲ! ಅದೇನೋ ಫೋಟೊ ಕ್ಲಿಕ್ ಮಾಡಿಕೊಂಡು ಸಾಯಲಿ ನಮಗೇನು" ಅಂತ ಅವುಗಳಿಗೂ ಅನ್ನಿಸಿರಬೇಕು. ನಾವು ಹಾಕಿದ ಯಾವುದೇ ಆಹಾರವನ್ನು ಮುಟ್ಟದೇ ತಾವೆ ಹುಡುಕಿತಂದು ತಿನ್ನಬೇಕೆನ್ನುವ ಸ್ವಾಬಿಮಾನ ಇರುವ ಕಾಡಿನ ಪಾರಿವಾಳಗಳಿಗಿಂತ, ನಗರದಲ್ಲೇ ಹುಟ್ಟಿಬೆಳೆದು ನಗರದ ಎಲ್ಲಾ ಗುಣಸ್ವಾಭಾವಗಳನ್ನೂ ಅಳವಡಿಸಿಕೊಂಡು ಇಲ್ಲಿ ಬದುಕಬೇಕಾದರೆ ಸಮಯಕ್ಕೆ ತಕ್ಕಂತೆ ತಮ್ಮ ಗುಣಲಕ್ಷಣಗಳನ್ನೂ ನಾಚಿಕೆಯಿಲ್ಲದೆ ಬದಲಿಸಿಕೊಳ್ಳುವ ಮನುಷ್ಯ ಗುಣದ ಪ್ರಬಾವ ಈ ಜೋಡಿಹಕ್ಕಿಗಳ ಮೇಲು ಆಗಿರಬೇಕು.
ಹೀಗೆ ಒಂದು ವಾರ ಕಳೆಯಿತು. ಮರಿಗಳು ದೊಡ್ಡವಾಗುತ್ತಾ ಇದ್ದವು. ಒಂದು ದಿನ ನಾನು ಪಾರಿವಾಳಗಳಿಗೆ ಟೆರಸಿನಲ್ಲಿ ಗೋದಿಯನ್ನು ಹಾಕಿ ಅಲ್ಲೇ ಹತ್ತಿರದಲ್ಲಿ ಕುಳಿತು ಇವುಗಳ ಬಗ್ಗೆ ಲೇಖನ ಬರೆಯಲಾರಂಭಿಸಿದೆ. ಸ್ವಲ್ಪ ಹೊತ್ತಿನಲ್ಲೇ ಗಂಡು ಪಾರಿವಾಳ ಬಂದು ಟೆರಸ್ ಕಂಬಿಯ ಮೇಲೆ ಕುಳಿತುಕೊಂಡಿತು. ಅದರ ಕಡೆ ಗಮನಿಸಿದರೂ ನೋಡದಂತೆ ಬರೆಯುತ್ತಿದ್ದೆ.
"ಫೋಟೊ ತೆಗೆದಿದ್ದಾಯ್ತು, ಈಗೇನೋ ಬರೆಯುತ್ತಿದ್ದಾನೆ, ನಮ್ಮ ಬಗ್ಗೆಯೇ ಇರಬೇಕು. ಎಂದುಕೊಂಡಿತ್ತೇನೋ, ಒಮ್ಮೆ ಜೋರಾಗಿ ಕೂಗು ಹಾಕಿತು. ಅ ಕೂಗಿಗೆ ಹೆಣ್ಣು ಪಾರಿವಾಳವೂ ಬಂತು. ಎರಡು ಸ್ವಲ್ಪ ಹೊತ್ತು ಮುಖ-ಮುಖಿ ನೋಡಿಕೊಂಡವು. ಕೊನೆಗೆ ಧೈರ್ಯವಾಗಿ ಕೆಳಗಿಳಿದು ಬಾಯಿತುಂಬಾ ಗೋದಿ ರಾಗಿ ತುಂಬಿಕೊಂಡು ಮರಿಗಳಿಗೆ ಹೋಗಿ ಕೊಡಲಾರಂಬಿಸಿದವು. ಕೆಲವೇ ನಿಮಿಷಗಳಲ್ಲಿ ನಾನು ಹಾಕಿದನ್ನೆಲ್ಲಾ ಖಾಲಿ ಮಾಡಿ ಎದುರಿಗೆ ನಿಂತು ನನ್ನ ಕಡೆ ನೋಡತೊಡಗಿದವು.
"ನಮ್ಮ ಫೋಟೋ ತೆಗೆಯುತ್ತಿದ್ದೀಯಾ, ಜೊತೆಗೆ ಈಗ ಲೇಖನಾನೂ ಬರಿತಿದ್ದೀಯ, ಇದೆಲ್ಲವನ್ನೂ ಯಾವುದೋ ಪತ್ರಿಕೆಗೆ ಕಳಿಸಿ ಎಲ್ಲಾ ಕ್ರೆಡಿಟ್ ನೀನೇ ತಗೋತೀಯಾ. ಇಷ್ಟೆಲ್ಲಾ ಉಪಯೋಗ ನಮ್ಮಿಂದ ಆಗುತ್ತಿರುವಾಗ ನಮಗೆ ಸ್ವಲ್ಪ ಗೋದಿ ರಾಗಿ ತಂದು ಹಾಕಲಿಕ್ಕೇನು ದಾಡಿ, ಈ ರೀತಿ ಕೇಳುವುದು ನಮ್ಮ ಹಕ್ಕು" ಎಂದು ತಮ್ಮ ಹಕ್ಕು ಚಲಾಯಿಸಲು ಸಿದ್ಧವಾಗಿವೆಯೇನೋ ಅಂತ ನನಗನ್ನಿಸಿತು. ಇರಬಹುದು. ಇವು ಹೇಳಿಕೇಳಿ ಸಿಟಿ ಪಾರಿವಾಳಗಳು, ಸಿಟಿ ಜನರ ಹಾಗೆ ಇಲ್ಲಿ ಬದುಕಲು ನಾಚಿಕೆ ಮಾನ ಮರ್ಯಾದೆ ಎಲ್ಲವನ್ನೂ ಬಿಟ್ಟರೆ ಹಾಗೂ ಆಗಾಗ ನಮ್ಮ ಹಕ್ಕನ್ನೂ ನೆನಪಿಸುತ್ತಿದ್ದರೇ ಮಾತ್ರ ಇಲ್ಲಿ ಬದುಕಲು ಸಾಧ್ಯ ಅಂತ ಇವಕ್ಕೂ ಅನ್ನಿಸಿರಬೇಕು. ಅದಕ್ಕೇ ನಾನು ಹಾಕಿದನ್ನೆಲ್ಲಾ ಖಾಲಿ ಮಾಡಿ ಇನ್ನಷ್ಟು ತಂದು ಹಾಕುತ್ತಾನೇನೋ ಅಂತ ಕಾಯುತ್ತಿರಬಹುದು ಅನ್ನಿಸಿತ್ತು.
ಇದುವರೆಗೂ ಈ ಪಾರಿವಾಳಗಳ ಜೀವನದ ಬಗ್ಗೆ, ಅವುಗಳ ಸಂಸಾರದ ಬಗ್ಗೆ ಗಂಭೀರವಾಗಿ ತಲೆಕೆಡಿಸಿಕೊಂಡು ಫೋಟೊ ಮತ್ತು ಲೇಖನ ಬರೆಯುತ್ತಿದ್ದವನಿಗೆ ದಸರ ಹಬ್ಬಕ್ಕಾಗಿ ನನ್ನ ಶ್ರೀಮತಿ ನನ್ನ ಕೈಗಿತ್ತ ದೊಡ್ಡ ಸಾಮಾನು ಪಟ್ಟಿಯನ್ನು ನೋಡಿದಾಗ, ನನ್ನ ಸಂಸಾರದ ಕಡೆಗೆ ಗಮನವನ್ನೇ ಹರಿಸಿರಲಿಲ್ಲವೆಂಬ ಜ್ಜಾನೋಧಯವಾಯಿತು. ಮುಗಿಯಿತಲ್ಲ ಹಬ್ಬ. ಬಂದು ಹೋಗುವವರ ನಡುವೆ ಮತ್ತು ನನ್ನ ಕೆಲಸದಲ್ಲಿ ನಿರತನಾಗಿ ನನ್ನ ಗಮನ ಈ ಪಾರಿವಾಳಗಳ ಕಡೆ ಹರಿಯುವಷ್ಟರಲ್ಲಿ ಹತ್ತು ದಿನಗಳು ಕಳೆದು ಹೋಗಿತ್ತು. ಸ್ವಲ್ಪ ಬಿಡುವು ಮಾಡಿಕೊಂಡು ಕ್ಯಾಮೆರಾ ಸೆಟ್ ಮಾಡಿಕೊಂಡು ಮತ್ತೆ ಟೆರೆಸ್ಸಿನಲ್ಲಿ ಕೂತೆ.
ನಾನು ಬಂದಿದ್ದು ನೋಡಿ ಅವಕ್ಕೆ ಮತ್ತೆ ಇರಿಸುಮುರಿಸುಂಟಾಯಿತೇನೋ! ಹೋದೆಯಾ ಪಿಶಾಚಿ ಅಂದ್ರೆ ಬಂದೆ ಗವಾಕ್ಷೀಲಿ ಅನ್ನೋ ಗಾಧೆ ಅವುಗಳಿಗೂ ನೆನಪಾಗಿರಬೇಕು. ಅದರೇನು ಮಾಡುವುದು? ಮಕ್ಕಳನ್ನು ಸಾಕುವ ಜವಾಬ್ದಾರಿ ಇದ್ದೇ ಇದೆಯಲ್ಲ! ನನ್ನನ್ನು ಗಮನಿಸದೇ ಆ ದಂಪತಿ ಪಾರಿವಾಳಗಳು ಹಾರಿಹೋದವು. ನನಗೂ ಬೇಕಾಗಿದ್ದುದ್ದು. ಅದೆ ತಾನೆ! ಇವುಗಳ ಮೇಲೆ ಸಾಕಷ್ಟು ಫೋಟೋಗಳನ್ನು ತೆಗೆದಿದ್ದಾಗಿತ್ತು. ಒಂದು ರೀತಿಯಲ್ಲಿ ನನ್ನ ಪ್ರಕಾರ ಅವುಗಳ ಮಾರ್ಕೆಟ್ ಇಳಿದಿದೆ ಅಂತ ನನಗೂ ಅನಿಸಿತ್ತು. ಈಗೇನಿದ್ದರೂ ಬೆಳೆಯುತ್ತಿರುವ ಮರಿಗಳ ನಟನೆ ಹಾವಭಾವ ಚಟುವಟಿಕೆಗಳನ್ನು ಸೆರೆಯಿಡಿಯುವಲ್ಲಿ ನಾನು ತಲ್ಲೀನನಾದೆ.
ಮರಿಗಳು ನಾನು ಬರುತ್ತಿರುವುದು ಗೊತ್ತಾಗುತ್ತಿದ್ದಂತೆ ಗೂಡಿನ ಪಕ್ಕದ ಸ್ಯಾನಿಟರಿ ಪೈಪಿನ ಮರೆಗೆ ಹೋಗಿ ನನ್ನ ಕ್ಯಾಮೆರಾ ಕಡೆಗೆ ತಮ್ಮ ಹಿಂಬಾಗವನ್ನು ತೋರಿಸುತ್ತಾ ನಿಂತುಬಿಡುತ್ತಿದ್ದವು. ಫೋಟೊ ತೆಗೆಯುವುದಾದರೇ ನಮ್ಮ ಹಿಂಬಾಗದ [ಮರ್ಮಾಂಗವನ್ನು ಸೇರಿದಂತೆ]ಫೋಟೊ ಹೊಡ್ಕೊ ಹೋಗ್! ಅಂತ ನನ್ನನ್ನೂ ಅಣಕಿಸಿದಂತಾಯಿತು.
ಆದರೆ ಇಂತ ಎಷ್ಟು ಹಕ್ಕಿಗಳ ಆಟಗಳನ್ನು ನೋಡಿದ್ದೀನಿ ನನ್ನ ಪಕ್ಷಿಲೋಕದ ಛಾಯಾಗ್ರಹಣದಲ್ಲಿ! ಇವು ಇನ್ನೂ ಸಣ್ಣಮರಿಗಳು ಇರಲಿ ಬಿಡು ಅಂತ ನಾನೇ ತಾಳ್ಮೆ ತಂದುಕೊಂಡು ಕಾಯುತ್ತ ಕುಳಿತೆ. ಈ ಸರ್ಕಸ್ ಮೂರು ದಿನ ನಡೆಯಿತು. ನಾನು ಪಟ್ಟು ಬಿಡದೇ ಕಾಯುತ್ತಿದ್ದೆ. ಇದರ ನಡುವೆ ಅವುಗಳ ಪೇರೆಂಟ್ ಪಾರಿವಾಳಗಳು ಗುಟುಕು ತಂದು ಕಾಯುತ್ತಿರುತ್ತಿದ್ದವು. ಆ ಸಮಯದಲ್ಲಿ ಕೆಳಗೆ ಬಂದುಬಿಡುತ್ತಿದ್ದೆ. ಮರಿಗಳಿಗೆ ಗುಟುಕು ಕೊಟ್ಟು ಸುಮಾರು ಹೊತ್ತು ಕಳೆದ ಮೇಲೆ ಮತ್ತೆ ಕ್ಯಾಮೆರಾ ಏರಿಸಿಕೊಂಡು ಮತ್ತೆ ಟೆರೆಸಿನಲ್ಲಿ ಸೆಟ್ಲ್ ಆಗಿಬಿಡುತ್ತಿದ್ದೆ. ನಾಲ್ಕನೇ ದಿನ ಕೊನೆಗೂ ನನ್ನಿಂದ ಏನು ತೊಂದರೆ ಇಲ್ಲ ಅಂತ ಪಾರಿವಾಳ ಮರಿಗಳಿಗೆ ಅರಿವಾಗಿರಬೇಕು ಅಥವ ಅವುಗಳ ಅಪ್ಪ ಅಮ್ಮ ನನ್ನಿಂದೇನು ತೊಂದರೆ ಇಲ್ಲ ಅಂತ ತಿಳುವಳಿಕೆ ನೀಡಿರಬಹುದೇನೋ! ನಿದಾನವಾಗಿ ಪೈಪಿನ ಮರಿಯಿಂದ ಬಂದು ತಮ್ಮ ಗೂಡಿನ ಬಳಿ ಬರುವುದು ಅರಾಮವಾಗಿ ಓಡಾಡುವುದು ಎಲ್ಲಾ ಮಾಡತೊಡಗಿದವು.
ಮತ್ತೆರಡು ದಿನ ನಾನು ಮರಿಗಳ ಫೋಟೊಗಳನ್ನು ಧಾರಾಳವಾಗಿ ತೆಗೆದೆ. ಆವುಗಳು ದೊಡದಾಗುತ್ತಾ ಹೊರಗಿನ ಪ್ರಪಂಚದಲ್ಲಿ ಏನಾಗುತ್ತಿದೆ ಅನ್ನುವುದನ್ನು ಗಮನಿಸತೊಡಗಿದವು. ಅದು ಅವುಗಳ ಹಾವಭಾವ ಚಟುವಟಿಕೆಗಳನ್ನು ನಾನು ಕ್ಯಾಮೆರಾದ ವ್ಯೂಫೈಂಡರಿನಿಂದ ನೋಡುವಾಗ ತಿಳಿಯುತ್ತಿತ್ತು.
ಒಂದು ಸಂಜೆ ಆರು ಗಂಟೆ ದಾಟಿತ್ತು. ನಾನು ಕತ್ತಲಾಯಿತಲ್ಲ ಎಂದು ಕ್ಯಾಮೆರಾವನ್ನು ಸ್ಟ್ಯಾಂಡಿನಿಂದ ಬಿಚ್ಚಲು ಸಿದ್ದನಾಗುತ್ತಿದ್ದಂತೆ ಅದುವರೆಗೂ ಸುಮ್ಮನೇ ಕುಳಿತಿದ್ದ ಒಂದು ಪಾರಿವಾಳ ಮರಿ ಎದ್ದು ನಿಂತಿತು. ಅದು ಎದ್ದು ನಿಲ್ಲಲು ಕಾರಣ ನನ್ನ ಆಡುಗೆ ಮನೆಯ ಕುಕ್ಕರ್ ಕೂಗಿದ ಶಬ್ದಕ್ಕೆ ಕುತೂಹಲ ಉಂಟಾಯಿತೇನೋ! ನಾನು ತಕ್ಷಣ ಕ್ಯಾಮೆರಾವನ್ನು ಸ್ಟ್ಯಾಂಡಿನಿಂದ ತೆಗೆಯದೆ ನೋಡೋಣ ಏನು ಮಾಡುತ್ತದೆ ಅಂತ ಹಾಗೆ ಕ್ಯಾಮೆರಾ ಕಿಂಡಿಯಿಂದ ನೋಡತೊಡಗಿದೆ. ಮತ್ತೊಂದು ವಿಷಲ್ ಕುಕ್ಕರಿನಿಂದ ಬಂತಲ್ಲ! ಎದ್ದು ನಿಂತಿದ್ದ ಅದು ಅದರ ಆಳತೆಯ ನಾಲ್ಕು ಹೆಜ್ಜೆ ಮುಂದೆ ಬಂದು ಕೆಳಗೆ ಬಗ್ಗಿ ನೋಡತೊಡಗಿತು. ನಾನು ಅದು ಆಡಿಗೆ ಮನೆ ಕಡೆಗೆ ನೋಡುವುದನ್ನು ಫೋಟೊ ತೆಗೆದೆ. ಮೂರನೇ ಬಾರಿ ಕೂಗಿದಾಗಲೂ ಅಲ್ಲೇ ನಿಂತು ಇಣುಕಿತ್ತು. ಅದು ಕುಕ್ಕರಿನಿಂದ ಹೊರಬಂದ ಹಬೆಗಾಳಿಯಲ್ಲಿರುವ ಮಸಾಲೆ ವಾಸನೆಯನ್ನು ಎಂಜಾಯ್ ಮಾಡುತ್ತಿದೆಯಾ? ಅಥವಾ ಆಡುಗೆ ಮನೆ ಕಿಟಕಿಯ ಒಳಗಿರುವವರನ್ನು[ನನ್ನ ಶ್ರೀಮತಿ]ಗಮನಿಸುತ್ತಿದೆಯಾ? ಗೊತ್ತಿಲ್ಲ. ಮತ್ತೊಂದು ಮರಿ ಮೂಲೆಯಲ್ಲಿ ಕುಳಿತು ಇದನ್ನೇ ಗಮನಿಸುತ್ತಿತ್ತು. ಐದು ನಿಮಿಷ ಕಳೆದಿರಬಹುದು. ಅದಕ್ಕೇನನ್ನಿಸಿತೊ ಏನೋ ! ಇದ್ದಕ್ಕಿದ್ದಂತೆ ಹಿಂದಕ್ಕೆ ತಿರುಗಿ ತನ್ನ ಗುದದ್ವಾರದಿಂದ ಪಚಕ್ಕನೆ ಹಿಕ್ಕೆ ಹಾಕಿತಲ್ಲ! ಅದೇ ಕ್ಷಣಕ್ಕೆ ನಾನು ಕ್ಲಿಕ್ಕಿಸಿ ಆ ದೃಶ್ಯವನ್ನು ಸೆರೆಹಿಡಿದೆನಲ್ಲ! ಎಲ್ಲವೂ ಮಿಂಚಿ ಮರೆಯಾದಂತೆ ಆಗಿಹೋಯಿತು.
ಆ ಮರಿ ಪಾರಿವಾಳ ಬಹುಶ: ಈ ರೀತಿ ಸಿಟ್ಟಿನಿಂದ ಮಾಡಿರಬಹುದೇ ? ಇರಬಹುದು ನಾನು ಬಿಟ್ಟಿ ಫೋಟೊ ತೆಗೆಯುತ್ತಿದ್ದೇನೆ, ಅತ್ತ ಆಡಿಗೆಮನೆಯಿಂದ ಕೇವಲ ವಾಸನೆ ಮಾತ್ರ ಬರುತ್ತಿದೆ, ಅಥವಾ ಆ ಶಬ್ದವೇ ಅದಕ್ಕೆ ಕಿರಿಕಿರಿ ಉಂಟು ಮಾಡುತ್ತಿತ್ತೇನೋ! ಎಷ್ಟೇ ಆದರೂ ಅದು ಅಪ್ಪ ಅಮ್ಮನಿಂದ ಕಲಿತ ಸಿಟಿ ಪಾಠ ಇರಬಹುದು. ಬಿಟ್ಟಿ ಏನನ್ನು ಕೊಡಬಾರದು ಕೊಟ್ಟರೂ ಅದು ಉಪಯೋಗಕ್ಕೆ ಬರಬಾರದು, ಅಥವ ಹಿಂಭಾಗ ತೋರಿಸಿ ಆಣಕಿಸುವ ಬುದ್ದಿ ಸಿಟಿಯಲ್ಲಿ ಹುಟ್ಟಿದ ಈ ಮರಿಪಾರಿವಾಳದ ಹುಟ್ಟುಗುಣವೋ ? ಒಂದು ಅರಿಯದೆ ನಾನು ತಬ್ಬಿಬ್ಬಾಗಿದ್ದೆ. ಕೊನೆಗೊಂದು ದಿನ ಇವುಗಳನ್ನು ಏಮಾರಿಸಿ ಹೇಗಾದರೂ ಫೋಟೊ ತೆಗೆಯಬೇಕಲ್ಲ ಅಂದು ಒಂದು ಉಪಾಯ ಮಾಡಿದೆ. ರಾತ್ರಿ ಎಂಟು ಗಂಟೆಯ ಕತ್ತಲಿನಲ್ಲಿ ಯಾರು ನೋಡುವುದಿಲ್ಲವೆಂದು ಗೂಡಿನಿಂದ ಹೊರಬಂದಾಗ ನಾನು ಫೋಟೊ ತೆಗೆಯುವುದೆಂದುಕೊಂಡು ಕತ್ತಲಲ್ಲಿ ಸ್ಟ್ಯಾಂಡಿಗೆ ಕ್ಯಾಮೆರಾ ಮತ್ತು ಪ್ಲಾಶ್ ಸೆಟ್ ಮಾಡಿದೆ. ಕತ್ತಲಲ್ಲಿ ಏನು ಕಾಣುತ್ತಿರಲಿಲ್ಲ. ಫೋಕಸ್ ಕೂಡ ಆಗುತ್ತಿರಲಿಲ್ಲ. ಕ್ಯಾಮೆರಾ ಕೂಡ ಕಂಡ ವಸ್ತುವನ್ನು ಮನನ ಮಾಡಿಕೊಳ್ಳಲು ಅದಕ್ಕೂ ಬೆಳಕು ಬೇಕಲ್ಲವೆ? ಕೊನೆಗೆ ನಾನೇ ನನಗೆ ತಿಳಿದಂತೆ ಕತ್ತಲಿಗೆ ನನ್ನ ಕಣ್ಣು ಹೊಂದಿಸಿಕೊಂಡು ನಿದಾನವಾಗಿ ಅಂದಾಜಿನ ಮೇಲೆ ಮ್ಯಾನ್ಯೂವಲ್ ಫೋಕಸ್ ಮಾಡುತ್ತಾ ಐದಾರು ಕ್ಲಿಕ್ ಮಾಡಿದ್ದೆ.
ಕ್ಲಿಕ್ಕಾದಾಗ ಬಂದ ಪ್ಲಾಶ್ ಬೆಳಕಿಗೆ ಗೂಡಿನಿಂದ ಈ ಕಡೆ ಬಂದು ಕುಳಿತಿದ್ದ ಆ ಮರಿಗಳು ಒಮ್ಮೆ ಗಾಬರಿಯಾಗಿ ನಂತರ ಕತ್ತಲಲ್ಲಿ ಅವಕ್ಕೆ ಏನೂ ಕಾಣದೆ ಮತ್ತೆ ಸುಮ್ಮನಾದವು. ನಂತರ ಆಗ ತೆಗೆದ ಚಿತ್ರಗಳನ್ನು ಕಂಪ್ಯೂಟರಿಗೆ ವರ್ಗಾಯಿಸಿದಾಗ ತೆಗೆದ ಐದಾರು ಫೋಟೊಗಳಲ್ಲಿ ಎರಡು ಚೆನ್ನಾಗಿ ಶಾರ್ಪಾಗಿ ಬಂದಿತ್ತು. ನನ್ನ ಪ್ರಯೋಗ ಯಶಸ್ವಿಯಾಗಿತ್ತು. ಮುಂದೆ ಮತ್ತಷ್ಟು ಫೋಟೊ ತೆಗೆಯಬೇಕೆಂದು ನನಗೇನು ಅನ್ನಿಸಲಿಲ್ಲ. ಅಂಥ ಫೋಸುಗಳೇ ಸಿಕ್ಕಿರುವಾಗ ನನಗೇ ಮತ್ತೆ ಅದಕ್ಕಿಂತ ವಿಶೇಷ ಫೋಟೊ ಸಿಗಲಿಕ್ಕಿಲ್ಲವೆಂದು ಅನಿಸಿತ್ತು. ಈ ಮದ್ಯೆ ನನ್ನ ಹೆಂಡತಿ ಬೇರೆ "ಆದೇನ್ರಿ ನೀವು ಇನ್ನೂ ಫೋಟೊ ತೆಗೆಯುತ್ತಿದ್ದೀರಿ? ಆವು ನಿಮಗೆ ಫೋಸ್ ಕೊಡೊಲ್ಲ, ನೀವು ಬಿಡಲ್ಲ. ಅವತ್ತು ಆದ ಅವಮಾನ ಸಾಕಲ್ವ? ಎಂದು ಅಂಗಿಸುತ್ತಿದ್ದಳು. ನನಗೂ ಅವಳ ಮಾತು ಸರಿಯೆನಿಸಿತ್ತು.
ಅಷ್ಟರಲ್ಲಿ ಮರಿಗಳು ಮತ್ತಷ್ಟು ದೊಡ್ಡವಾಗಿದ್ದವು. ಟೆರೆಸ್ಸಿನ ಮೇಲೆಲ್ಲಾ ಓಡಾಡುತ್ತಿದ್ದವು. ದೀಪಾವಳಿ ಹತ್ತಿರ ಬಂತಲ್ಲ! ಮತ್ತೆ ನನ್ನ ಕೆಲಸ ಕಡೆ ಗಮನ ಕೊಡಬೇಕಲ್ಲ. ಸಾಕೆನಿಸಿತ್ತು ಎರಡು ತಿಂಗಳಿಂದ ಈ ಹಕ್ಕಿಗಳ ಸಹವಾಸ ಅಂತಲೂ ಅನಿಸಿತ್ತು.
ಮತ್ತೊಂದು ವಾರ ಕಳೆಯಿತು. ನನ್ನದು ಮೊಂಡು ಬುದ್ದಿಯ ಹುಟ್ಟುಗುಣವೋ ? ಮತ್ತೆ ಕುತೂಹಲದಿಂದ ಟೆರೆಸ್ಸಿಗೆ ಹೋಗಿ ನೋಡಿದೆ. ಪಾರಿವಾಳಗಳು ಸಂಸಾರ ಸಮೇತ ಮನೆ ಖಾಲಿ ಮಾಡಿ ಹೋಗಿದ್ದವು. ಗಲೀಜಾದ ಗೂಡು ಮಾತ್ರ ಖಾಲಿಯಾಗಿ ಬಿದ್ದಿತ್ತು.
ಶಿವು.ಕೆ

18 comments:

Santhosh Rao said...

ಸಾರ್ ತುಂಬಾ ಚೆನ್ನಾಗಿ ಬರೆದಿದ್ದೀರ ನಿಮ್ಮ ಪಾರಿವಾಳ ಸಹವಾಸ !! Next time ಒಂದ್ rental agreement ಮಾಡ್ಕೊಳಿ !!

shivu.k said...

ಸಂತೋಷ್ ಸಾರ್, ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು. ನಿಮ್ಮ ಅಭಿಪ್ರಾಯದಂತೆ ಹಾಗೆ ಅನ್ನಿಸಿತ್ತು. ಅದ್ರೆ ನನ್ನದು ಸ್ವಾರ್ಥ [ಫೋಟೊ ತೆಗೆಯುವುದು]ಇತ್ತಲ್ಲ. ಹಾಗೂ ಅವು ಕಲಿಸಿದ ಪಾಠದಿಂದ ಮುಂದೆ ಅದರ ಸಹವಾಸ ಸಾಕು ಎಂದು ಬೇರೆ ಯಾವುದಾದರೂ ಪಕ್ಷಿ ಬಂದರೆ ನೀವು ಹೇಳಿದಂತೆ ಮಾಡುತ್ತೇನೆ.

ranjith said...

ನಮ್ಮ ಸುತ್ತಮುತ್ತಲಿನ ಪ್ರಾಣಿಗಳ, ಪಕ್ಷಿಗಳ ಬಗ್ಗೆ ತಿಳಿದುಕೊಳ್ಳುವುದು ಬಹಳ ಖುಷಿಕೊಡುತ್ತದೆ.ನಿಮ್ಮ ಸಚಿತ್ರ ವಿವರಣೆಗಳಿಗೆ ಅಂದದ ಶೈಲಿಯನ್ನೂ ಸೇರಿಸಿ ಬಡಿಸುತ್ತಿದ್ದೀರಿ.

ಧನ್ಯವಾದಗಳು ಸರ್..:-)

-ರಂಜಿತ್

ಆಲಾಪಿನಿ said...

ನಿರೂಪಣೆ ಜೊತೆಗೆ ಫೋಟೋ ಚೆನ್ನಾಗಿವೆ ಅಂತ ಹೇಳ್ತಿನಿ.

sunaath said...

ಉತ್ತಮ ಚಿತ್ರಗಳ ಜೊತೆಗೆ, ವಿನೋದಪೂರ್ಣವಾದ ಉತ್ತಮ ಲೇಖನ ಕೊಟ್ಟಿದ್ದೀರಿ. ನಿಮ್ಮ ಪಾರಿವಾಳಗಳು ನಮಗೂ ಆಪ್ತವಾಗಿ ಬಿಡುತ್ತವೆ.

ಮನಸ್ವಿ said...

ನಿಮ್ಮ ಬರವಣಿಗೆ ಶೈಲಿ ತುಂಬಾ ಚನ್ನಾಗಿದೆ.. ಚಿತ್ರಗಳು ಚನ್ನಾಗಿವೆ ಅವಕ್ಕು ನೀವು ಪತ್ರಕರ್ತರು ಅಂತ ಗೊತ್ತಯ್ತು ಅನ್ನಿ.. :)
ಅಂದ ಹಾಗೆ ನಿಮ್ಮ ಬ್ಲಾಗ್ (ಸ್ನೇಹಿತರು)ಲಿಸ್ಟಿನಲ್ಲಿ "ನನ್ನ ಪೋಟೋ ಗ್ಯಾಲರಿಯ" ಬದಲು Aditya`s Photo Gallery ಎಂದು ಬದಲಾಯಿಸದರೆ ಅನುಕೂಲವಾಗುತ್ತದೆ
ನಾನು ನನ್ನದೆ ಬ್ಲಾಗ್ ಆಗಿರುವುದರಿಂದ ನನ್ನ ಮತ್ತೊಂದು ಬ್ಲಾಗ್ ಅನ್ನು ಹಾಗೆ ಹೆಸರಿಸಿಕೊಂಡಿದ್ದೇನೆ..

ದನ್ಯವಾದಗಳು

Harisha - ಹರೀಶ said...

ನೀವು ತೆಗೆದಿರುವ ಫೋಟೋಗಳು ಮತ್ತು ಅವುಗಳ ವಿವರಣೆ - ಎರಡೂ ಚೆನ್ನಾಗಿವೆ

ತೇಜಸ್ವಿನಿ ಹೆಗಡೆ said...

ಸುಂದರ ಚಿತ್ರಗಳನ್ನೊಳಗೊಂಡ ಲೇಖನ ತುಂಬಾ ಹಿಡಿಸಿತು. ಆದರೆ ಯಾಕ್ರೀ ಅವುಗಳನ್ನು ನಾಚಿಕೆಯಿಲ್ಲದವು ಅಂತೀರಾ ಪಾಪ!:-) ನಾಚಿಗೆ ಇಲ್ಲದವಾಗಿದ್ದಿದ್ರೆ ಮರಿಯನ್ನು ಕಟ್ಟಿಕೊಂಡು ಬಿಟ್ಟು ಹೋಗ್ತಿತ್ತಾ ನಿಮ್ಮ ಮನೆಯಾ?

ನಾವು ಮನೆ ಬಿಟ್ಟು ಇನ್ನೊಂದು ಮನೆಗೆ ಹೋಗುವಾಗ ಕಸಗಳನ್ನೆಲ್ಲ ಗುಡಿಸಿ ಚೊಕ್ಕಮಾಡಿ ಹೋಗಬಾರದು.. ಹಾಗೆ ಮಾಡಿದರೆ ಮನೆಮಾಲಿಕನಿಗೆ ಒಳಿತಾಗದೆಂಬ ಹಿಂದಿನ ನಂಬಿಕೆಯಿದೆ(ಮೂಢನಂಬಿಕೆ ಅಂತ ತಿಳ್ಕೊಂಡ್ರೂ ಪರ್ವಾಗಿಲ್ಲ). ಅದಕ್ಕೇ ಬಹುಶಃ ಗೂಡನ್ನು ಚೊಕ್ಕಗೊಳಿಸಲಿಲ್ಲವೇನೋ? :)

NilGiri said...

ಪರ್ವಾಗಿಲ್ವೇ! ದಂಪತಿಗಳಿಗೆ ಊಟ ಉಪಚಾರ ಜೋರಾಗಿಯೇ ಮಾಡಿದ್ದೀರ! ಮಕ್ಕಳಿಗೆ ಏನಾದ್ರೂ ಉಡುಗೊರೆ ಕೊಟ್ರೋ ಅಥವಾ ಹಾಗೆ ಬರಿ ಕೈನಲ್ಲಿ ಕಳಿಸಿ ಬಿಟ್ರೋ? ಸಚಿತ್ರ ಲೇಖನ ಚೆನ್ನಾಗಿದೆ.

ಮಹೇಶ್ ಪುಚ್ಚಪ್ಪಾಡಿ said...

ಅಯ್ಯೋ ಎಷ್ಟು ಚೆನ್ನಾಗಿತ್ರೀ ಫೋಟೋ.. ಬರವೂ ಅಷ್ಟೇ.ಸ್ವಲ್ಪ ಉದ್ದವಾಯಿತೋ ಏನೋ.

shivu.k said...

ರಂಜಿತ್,
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು ನನ್ನ ಉಳಿದ ಲೇಖನಗಳನ್ನು ಓದಿ ಇನ್ನೂ ಬೇರೆ ಬೇರೆ ಪಕ್ಷಿಗಳು ಚಿಟ್ಟೆಗಳು ಅದರ ಗೆಳೆತನ ಇನ್ನೂ ಅನೇಕ ವಿಚಾರಗಳಿವೆ.

ಶ್ರೀದೇವಿ ಮೇಡಮ್, ಧನ್ಯವಾದಗಳು ಬರುತ್ತಿರಿ!

ಸುನಾಥ್ ಸಾರ್,
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.

ಮನಸ್ವಿ ಸಾರ್,
ಓದಿ ಪ್ರತಿಕ್ರಿಯೆಸಿದ್ದಕ್ಕೆ ಧನ್ಯವಾದಗಳು. ಮತ್ತು ನೀವು ಹೇಳಿದಂತೆ ನಾನು ಪತ್ರಕರ್ತನಲ್ಲ. ಏನೋ ಆಗಾಗ ಬರೆದು ಪತ್ರಿಕೆಗೆ ಕಳುಹಿಸುತ್ತಿರುತ್ತೇನೆ. ಹಾಗೆ ನೀವು ಹೇಳಿದ ಹಾಗೆ ನನ್ನ ಬ್ಲಾಗಿನಲ್ಲಿ ನಿಮ್ಮ ಹೆಸರು ಬದಲಿಸುತ್ತೇನೆ.

ಹರೀಶ್ ಸಾರ್,
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.

ತೇಜಸ್ವಿನಿ ಮೇಡಮ್,
ಲೇಖನ ಓದಿ enjoy ಮಾಡಿದ್ದಕ್ಕೆ ಧನ್ಯವಾದಗಳು. ನನ್ನ ಶ್ರೀಮತಿಯು [ಮನೆ ಬಿಟ್ಟು ಹೋಗುವಾಗ ಸ್ವಚ್ಚ ಮಾಡಿದರೆ ಅದು ಓನರಿಗೆ ಓಳ್ಳೆಯದಾಗುವುದಿಲ್ಲ ಅಂತ] ಇದೇ ಮಾತನ್ನು ಹೇಳಿದ್ದರಿಂದ[ಹುಡುಗಿಯರ ಮಾತನ್ನು ಒಪ್ಪಲೇಬೇಕಾದ್ದರಿಂದ]ನಿಮ್ಮ ಮಾತನ್ನು ಒಪ್ಪುತ್ತೇನೆ.

ನೀಲಗಿರಿಯವರೆ,
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು. ಒಂದು ವಾರದ ನಂತರ ಕುಟುಂಬ ಸಮೇತರಾಗಿ ಮತ್ತೆ ಬಂದಿದ್ದವು. ನೀವು ಹೇಳಿದಂತೆ ಅವಕ್ಕೆ ಮತ್ತು ಮರಿಗಳಿಗೆ[ಹಾರುವಷ್ಟು ದೊಡ್ಡವಾಗಿವೆ]ಗೋದಿ ರಾಗಿ ಬತ್ತದ ಉಡುಗೊರೆ ಕೊಟ್ಟೆ. ಹೊಟ್ಟೆ ತುಂಬ ತಿಂದು thanks ಹೇಳಿ ಹೋದವು.

ಪುಚ್ಚಪ್ಪಾಡಿ ಸಾರ್,
ಪ್ರತಿಕ್ರಿಯೆಗೆ ದ್ಯನ್ಯವಾದಗಳು. ಲೇಖನ ಮೊದಲು ಇನ್ನೂ ಉದ್ದವಾಗಿತ್ತು. ಪಾರಿವಾಳಗಳು ಬೈಯ್ದಿದ್ದರಿಂದ ಸ್ವಲ್ಪ ಚಿಕ್ಕದು ಮಾಡಿದ್ದೆ.

Ramesh BV (ಉನ್ಮುಖಿ) said...

ಶಿವೂ ಅವರೇ,
ಪಾರಿವಾಳದ ಫ್ಯಾಮಿಲಿಗೆ ಕಾಳು-ಕಡಿ, ಇರೋಕೆ ಜಾಗ, ರಕ್ಷಣೆ ಇವೆಲ್ಲ ಕೊಟ್ಟು, ಪುಣ್ಯ ಕಟ್ಕೊಂಡ್ ಬಿಟ್ರಿ ಬಿಡಿ. ಫೋಟೋ ತೆಗಿಯೋಕೆ ತಾಳ್ಮೆ , ಸಾಹಸ ಎರಡೂ ತೋರಿಸಿದ್ದೀರ.. :)

-ರಮೇಶ್
www.googlekannada.com

shivu.k said...

ರಮೇಶ್ ಸಾರ್,
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.

ಮಲ್ಲಿಕಾರ್ಜುನ.ಡಿ.ಜಿ. said...

ನಿಮಗೆ ಪಾರಿವಾಳದ ಸಹವಾಸ ಸಾಕೆನಿಸಿದ್ರೂ,ನಮಗೆ ಪಾರಿವಾಳ ಮತ್ತು ನಿಮ್ಮ ಚಿತ್ರಲೇಖನದ ಸಹವಾಸ ಬೇಕು ಬೇಕು ಅನ್ಸುತ್ತೆ. ಸಿಟಿಯವರೆಲ್ರೂ ಕೆಟ್ತವರಿರಲ್ಲ.ಅತಿಥಿ ಸತ್ಕಾರದಲ್ಲಿ ನೀವು ಎತ್ತಿದ ಕೈ ಅಂತ ಪ್ರೂವ್ ಮಾಡಿದ್ದೀರಲ್ಲ.

ಹರೀಶ ಮಾಂಬಾಡಿ said...

ಪಾರಿವಾಳ ಸಿಟಿಗೆ ಹೇಗಿರಬೇಕೋ ಹಾಗೇ ವರ್ತಿಸುತ್ತಾ ನಿಮ್ಮನ್ನು ಏಮಾರಿಸಲು ಹವಣಿಸುತ್ತಿದ್ದಂತೆ ಕಂಡು ಬಂತು ಅಲ್ವಾ? ಚೆನ್ನಾಗಿದೆ ಬರೆಹ. ಅದಕ್ಕಿಂತ ಚೆನ್ನಾಗಿದೆ ಚಿತ್ರ

shivu.k said...

ಮಾಂಬಾಡಿ ಸಾರ್,
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು. ಎಷ್ಟೇ ಆದರೂ ಅವು ಸಿಟಿ ಪಾರಿಗಳಲ್ವ ! ಮತ್ತೊಂದು ತಮಾಷೆಯೆಂದರೆ ನೀವು ಹೇಳಿದಂತೆ ನಮ್ಮ ನ್ನೂ ಯಾಮಾರಿಸಲು ಅದೇ ಜಾಗದಲ್ಲಿ ಮತ್ತೊಂದು ಜೋಡಿ ಗೂಡು ಕಟ್ಟಲು ಸಿದ್ದವಾಗುತ್ತಿವೆ !!.
ಶಿವು

ಸೀತಾರಾಮ. ಕೆ. / SITARAM.K said...

ತಮ್ಮ ಸಚಿತ್ರ ಲೇಖನ ಚೆನ್ನಾಗಿದೆ. ಧನ್ಯವಾದಗಳು.

Hailey Williams said...

ರಂಜಿತ್, ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು ನನ್ನ ಉಳಿದ ಲೇಖನಗಳನ್ನು ಓದಿ ಇನ್ನೂ ಬೇರೆ ಬೇರೆ ಪಕ್ಷಿಗಳು ಚಿಟ್ಟೆಗಳು ಅದರ ಗೆಳೆತನ ಇನ್ನೂ ಅನೇಕ ವಿಚಾರಗಳಿವೆ. ಶ್ರೀದೇವಿ ಮೇಡಮ್, ಧನ್ಯವಾದಗಳು ಬರುತ್ತಿರಿ! ಸುನಾಥ್ ಸಾರ್, ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು. ಮನಸ್ವಿ ಸಾರ್, ಓದಿ ಪ್ರತಿಕ್ರಿಯೆಸಿದ್ದಕ್ಕೆ ಧನ್ಯವಾದಗಳು. ಮತ್ತು ನೀವು ಹೇಳಿದಂತೆ ನಾನು ಪತ್ರಕರ್ತನಲ್ಲ. ಏನೋ ಆಗಾಗ ಬರೆದು ಪತ್ರಿಕೆಗೆ ಕಳುಹಿಸುತ್ತಿರುತ್ತೇನೆ. ಹಾಗೆ ನೀವು ಹೇಳಿದ ಹಾಗೆ ನನ್ನ ಬ್ಲಾಗಿನಲ್ಲಿ ನಿಮ್ಮ ಹೆಸರು ಬದಲಿಸುತ್ತೇನೆ. ಹರೀಶ್ ಸಾರ್, ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು. ತೇಜಸ್ವಿನಿ ಮೇಡಮ್, ಲೇಖನ ಓದಿ enjoy ಮಾಡಿದ್ದಕ್ಕೆ ಧನ್ಯವಾದಗಳು. ನನ್ನ ಶ್ರೀಮತಿಯು [ಮನೆ ಬಿಟ್ಟು ಹೋಗುವಾಗ ಸ್ವಚ್ಚ ಮಾಡಿದರೆ ಅದು ಓನರಿಗೆ ಓಳ್ಳೆಯದಾಗುವುದಿಲ್ಲ ಅಂತ] ಇದೇ ಮಾತನ್ನು ಹೇಳಿದ್ದರಿಂದ[ಹುಡುಗಿಯರ ಮಾತನ್ನು ಒಪ್ಪಲೇಬೇಕಾದ್ದರಿಂದ]ನಿಮ್ಮ ಮಾತನ್ನು ಒಪ್ಪುತ್ತೇನೆ. ನೀಲಗಿರಿಯವರೆ, ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು. ಒಂದು ವಾರದ ನಂತರ ಕುಟುಂಬ ಸಮೇತರಾಗಿ ಮತ್ತೆ ಬಂದಿದ್ದವು. ನೀವು ಹೇಳಿದಂತೆ ಅವಕ್ಕೆ ಮತ್ತು ಮರಿಗಳಿಗೆ[ಹಾರುವಷ್ಟು ದೊಡ್ಡವಾಗಿವೆ]ಗೋದಿ ರಾಗಿ ಬತ್ತದ ಉಡುಗೊರೆ ಕೊಟ್ಟೆ. ಹೊಟ್ಟೆ ತುಂಬ ತಿಂದು thanks ಹೇಳಿ ಹೋದವು. ಪುಚ್ಚಪ್ಪಾಡಿ ಸಾರ್, ಪ್ರತಿಕ್ರಿಯೆಗೆ ದ್ಯನ್ಯವಾದಗಳು. ಲೇಖನ ಮೊದಲು ಇನ್ನೂ ಉದ್ದವಾಗಿತ್ತು. ಪಾರಿವಾಳಗಳು ಬೈಯ್ದಿದ್ದರಿಂದ ಸ್ವಲ್ಪ ಚಿಕ್ಕದು ಮಾಡಿದ್ದೆ.