ಹೊರಬಂದು ನೋಡಿದರೆ ಇವರ ಮನೆಯೊಂದು ಬಿಟ್ಟು ಊರು ಪೂರ್ತಿ ಮಲಗಿತ್ತು. ಬಾವಲಿಗಳ ಹಾರಾಟ, ಮಿಂಚುಳಗಳ ಮಿಣುಕಾಟ, ಕಪ್ಪೆಗಳ ಸಣ್ಣ ಒಟರ್‌ಗುಟ್ಟುವಿಕೆ ಬಿಟ್ಟರೇ ದೂರದಲ್ಲಿ ಭಯಂಕರ ಮೌನವಿತ್ತು. "ಯಾವಾಗ ಬಂದಿ ಮಗ ಬಾ, ಕೈಕಾಲು ತೊಳಕೊಂಡು ಬಾ, ಉಂಡು ಮಲಗುವಿಯಂತೆ, ನಾಳೆ ಸರೋತ್ತಿನಲ್ಲಿ ಎದ್ದೇಳಬೇಕು" ಅವ್ವನ ಮಾತು ಕೇಳಿ ಒಳಗೆ ಕೈಕಾಲು ತೊಳೆಯಲು ಬಚ್ಚಲುಗೂಡಿನ ಕಡೆಗೆ ನಡೆದ. ಬೀರ ಮತ್ತು ಪಾರ್ವತಿ ಇಬ್ಬರಿಗೂ ಉಣಬಡಿಸಿ ಅಪ್ಪನನ್ನು ಎಚ್ಚರಗೊಳಿಸುತ್ತಿದ್ದಳು. ಮಂಜ ಊಟಕ್ಕೆ ಕೂತ. "ಲೇ ಮಗ ನಾಳೆ ನಿನಗೆ ಸಂಬಳ ಕೊಡೋ ದಿನ ಅಲ್ವೇನೋ" ಅವ್ವನ ಮಾತು ಕೇಳಿ ಗಕ್ಕನೇ ನೆನಪಾಯಿತು. ತಾನಾಗಲೇ ಯೋಚಿಸಿದ್ದು ನನ್ನ ಸಂಬಳದ ಬಗ್ಗೇನೆ ಅಲ್ವೇ, ಆದರೇ ಆಗ ಸರಿಯಾಗಿ ನೆನಪಾಗಲಿಲ್ಲವಲ್ಲ. "ಹೂನವ ನಾಳೆ ಕಮ್ಮಾರ ಶೆಟ್ಟಿ ಸಂಬಳ ಕೊಡಬಹುದು" ಜೋಪಾನವಾಗಿ ತಗಂಡು ಬಾ ಮಗ" ಎನ್ನುತ್ತಾ ತಾನು ಊಟ ಮಾಡಲು ಕೋಣೆಗೆ ಹೋದಳು. ರಾತ್ರಿ ಮಲಗುವಾಗ ನಾಳೆ ತೆಗೆದುಕೊಳ್ಳುವ ಸಂಬಳದ ಯೋಚನೆಯಲ್ಲೇ ನಿದ್ದೇ ಹೋಗಿದ್ದ ಮಂಜ.
ಎಚ್ಚರವಾದಾಗ ಕಣ್ಣು ಬಿಟ್ಟು ನೋಡಿದ. ಹೊರಗೆ ಹಕ್ಕಿಗಳ ಚಿಲಿಪಿಲಿ ಕಲರವ ಕೇಳಿಸುತ್ತಿತ್ತು. ಇನ್ನೂ ಪೂರ್ತಿ ಬೆಳಕಾಗಿರಲಿಲ್ಲ ಮಂಜನ ತಾಯಿ ಬಚ್ಬಲು ಮನೆಯಲ್ಲಿ ನೀರೊಲೆಗೆ ಬೆಂಕಿಹಾಕಿದ್ದಳೆನಿಸುತ್ತದೆ, ಅದರ ಮಬ್ಬು ಬೆಳಕು ನಾನು ಮಲಗಿದ್ದ ಕೋಣೆಯನ್ನು ಬೇರ್ಪಡಿಸಿದ್ದ ಗೋಡಿಯ ಕಿಂಡಿಯಿಂದ ಬಿಳಿಕೋಲಾಗಿ ಎದುರುಗೋಡೆಯನ್ನು ಕೊರೆಯುತ್ತಿತ್ತು. ಪಕ್ಕದ ಗೋಣಿತಾಟು ಅಲುಗಿದ್ದರಿಂದ "ಪಾತಿ" ಅಂದ. ಕೊಂಚ ಅಲುಗಾಡಿ ಪೂರ್ತಿ ತಲೆ ಒಳಗೆ ಎಳೆದುಕೊಂಡು "ಹೂಂ" ಎಂದು ಸದ್ದಾಗಿ ಮತ್ತೆ ಸ್ಥಬ್ಧವಾಯಿತು. ಈ ಪಕ್ಕ ಮಲಗಿದ್ದ ಬೀರನನ್ನು ಕೂಗಬೇಕೆನಿಸಿದರೂ ಅವನು ಮೂಲೆಯಲ್ಲಿ ಮುಸುಕು ಹಾಕಿಕೊಂಡು ಮುದುರಿಕೊಂಡಿರುವುದು ನೋಡಿ ಬೇಡವೆನಿಸಿತ್ತು ಕೂಗಲಿಲ್ಲ. ಅವರಿಬ್ಬರೂ ತಮ್ಮ ಗೋಣಿತಾಟಿನೊಳಗೆ ಮುದುರಿ ಗೊರಕೆ ಹೊಡೆಯುತ್ತಿದ್ದರು. ಅವ್ವ ಯಾರೊಡನೆಯೋ ಮಾತಾಡುತ್ತಿರುವುದು ಕೇಳಿಸಿತು. ಮತ್ಯಾರ ಜೊತೆ ಮಾತಾಡಿಯಾಳು, ಅಪ್ಪನ ಜೊತೆ ತಾನೆ, ಅವನು ಅವ್ವನಿಗೆ ಏನೇನೋ ಬೈಯ್ಯುತ್ತಿದ್ದ. ಅವನ ಗಲಾಟೆ ಜೋರಾಗಿತ್ತು. ಬಹುಶಃ ಅವನ ಗಲಾಟೆಯಿಂದಲೇ ಮಂಜನಿಗೆ ಎಚ್ಚರವಾಯಿತೇನೋ. "ಹತ್ತು ರೂಪಾಯಿ ಕೊಡೆ" ಅವ್ವನನ್ನು ಕೇಳುತ್ತಿದ್ದ. ಕೇಳುತ್ತಿದ್ದ ಎನ್ನುವುದಕ್ಕಿಂತ ಪೀಡಿಸುತ್ತಿದ್ದ. ಹಾಡು ಹಗಲಾಗಲಿ, ಮದ್ಯ ರಾತ್ರಿಯಾಗಲಿ ತನಗೆ ಕುಡಿಯಲು ಕಾಸುಬೇಕೆಂದರೇ ಅವ್ವನನ್ನು ಹೀಗೆ ಪೀಡಿಸುತ್ತಿದ್ದ. ಅವನು ಕೂಲಿ ಮಾಡುವುದು ಬಿಟ್ಟು ಅದೆಷ್ಟು ದಿನ ಕಳೆದುಹೋದವೋ.. "ದಿನಾ ಯಾಕೆ ನನ್ನ ಪಿರಾಣ ತಿಂತೀ, ನಿನಗೇನು ಹೊತ್ತು ಗೊತ್ತಿಲ್ಲವೇ, ಇನ್ನೂ ಬೆಳಕೇ ಹರಿದಿಲ್ಲ ಆಗಲೇ ನನ್ನ ಪೀಡಿಸುತ್ತಿದ್ದಿಯಲ್ಲ, ಕಾಸು ಕಾಸು ನಾನೆಲ್ಲಿಂದ ತರಲಿ ಹೋಗು" ಗೊಣಗುತ್ತಿದ್ದಳು. ಅವಳಾದರೂ ಏನು ಮಾಡುತ್ತಾಳೆ, ಅಪ್ಪ ಕೂಲಿ ಮಾಡೋದು ಬಿಟ್ಟ ಮೇಲೆ ಅವ್ವನೇ ಕೂಲಿಗೆ ಹೋಗಬೇಕಾಗಿತ್ತು. ಗಂಡಾಳಿಗಿಂತ ಹೆಣ್ಣಾಳಿಗೆ ಕಡಿಮೆ ಕೂಲಿ ಇದ್ದರೂ ಅದರಲ್ಲೇ ಸಂಸಾರ ನಿಭಾಯಿಸುತ್ತಿದ್ದಳು. ಅಪ್ಪ ಮೊದಲು ಹೇಗಿದ್ದ ಈಗ ಏಕೆ ಹಿಂಗಾದ? ದಿನಾಲು ಕೆಲಸಕ್ಕೆ ಹೋಗುತ್ತಿದ್ದವನು ಎಲ್ಲರನ್ನೂ ಚೆನ್ನಾಗಿ ನೋಡಿಕೊಳ್ಳುತ್ತಿದ್ದ. ಇದ್ದಕ್ಕಿದ್ದಂತೆ ಒಂದು ದಿನ ಏನಾಯಿತೋ ಕುಡಿದು ಬಂದಿದ್ದ. ಅವ್ವನ ಮೇಲೆ ಜಗಳ ಮಾಡಿದ. ಅಂದೇ ಕೊನೆ ಮರುದಿನದಿಂದ ಕೂಲಿಗೆ ಹೋಗಲಿಲ್ಲ. ಕುಡಿತದ ದಾಸನಾಗಿಬಿಟ್ಟಿದ್ದ. ಸಹವಾಸದಿಂದ ಕೆಟ್ಟು ಹೋಗಿದ್ದ. ಅಂದಿನಿಂದ ಇಂದಿನವರೆಗೆ ಮನೆಯ ಪರಿಸ್ಥಿತಿಯಂತೂ ಬಿಗಡಾಯಿಸಿಹೋಗಿದೆ. ಅಮೇಲೆ ತಾನೆ ನಾನು ಸ್ಕೂಲು ಬಿಟ್ಟು ದೂರದ ಬಡಿಗಳ್ಳಿಯ ಕಮ್ಮಾರ ಶೆಟ್ಟಿಯ ಕುಲುಮೇಲಿ ಕಬ್ಬಿಣ ಬಡಿಯುವ ಕೆಲಸಕ್ಕೆ ಸೇರಿದ್ದು. ಇಂದಿಗೆ ಸರಿಯಾಗಿ ಒಂದು ತಿಂಗಳಾಯಿತು. ಅಂದರೆ ಇಂದು ನನಗೆ ಸಂಬಳದ ದಿನ. ಸಂಬಳವೆಂದ ಕೂಡಲೇ ಲಗುಬಗನೇ ಎದ್ದ. ಪಕ್ಕದಲ್ಲಿ ತಮ್ಮ ತಂಗಿಯರಿಬ್ಬರೂ ಇನ್ನೂ ನಿದ್ರಿಸುತ್ತಿದ್ದರು. ಎದ್ದು ಬಚ್ಚಲುಗೂಡಿನ ಕಡೆಗೆ ನಡೆದ. ಅವ್ವನನ್ನು ಅಪ್ಪ ಪೀಡಿಸುತ್ತಲೇ ಇದ್ದ ಹತ್ತು ರೂಪಾಯಿಗಾಗಿ. ಅದನ್ನು ಗಮನಿಸದೆ ಅವ್ವ ಮಂಜನನ್ನು ನೋಡಿ "ಏನ್ ಮಗ ಇಷ್ಟು ನಿದಾನ ಎದ್ದಿ, ಹೊತ್ತಾಯ್ತಾ ಬಂತು, ಬೇಗ ಹೊರಡು ಎಂದಳು ಮಂಜನಿಗೆ ಹೊಟ್ಟೆ ಚುರುಗುಟ್ಟುತ್ತಿತ್ತೇನೋ ಹಾಗೆ ನಿಂತಿದ್ದ. ಅದ್ಯಾಕೆ ಹಾಗೆ ನಿಂತಿದ್ದಿ, ರಾತ್ರೀದು ಮುದ್ದೆ ಮೆಣಸಿನ ಕಾರ ಇರಬೋದು ಹಾಕ್ಕೊಂಡು ತಿಂದು ಹೋಗು ಮಗ" ಮತ್ತೆ ಹೇಳಿದ್ದಳು. ಅವ್ವ ದಿನಾಲು ಇದೇ ಮಾತನ್ನು ಹೇಳುತ್ತಿದ್ದಳು. ಮಂಜನೂ ದಿನಾ ಅದನ್ನೇ ತಿನ್ನುತ್ತಿದ್ದ. ಆದರೆ ಇಂದು ಹಾಗಾಗುವುದಿಲ್ಲ ಅವನಿಗೆ ಸಂಬಳ ಬರುತ್ತದೆ, ಕಮ್ಮಾರ ಶೆಟ್ಟಿ ಸಂಬಳ ಕೊಟ್ಟ ಮೇಲೆ ನಾಗಮಂಗಲ ಪೇಟೆಗೆ ಹೋಗಿ ಮನೆಗೆ ಬೇಕಾದ ಅಕ್ಕಿ ಮುಂತಾದ ಸಾಮಾನು ತರಬೇಕು, ಹಾಗೆ ಅವ್ವನ ಬಳಿ ಇರೋದು ಒಂದೇ ರವಿಕೆ, ಅದೂ ಬೆನ್ನ ಹಿಂದೆ ಹರಿದು ಹೋಗಿದೆ. ಅವಳಿಗೆ ಹೊಸದೊಂದು ರವಿಕೆ ತರಬೇಕು, ನಾಳೆಯಿಂದ ಕೆಲದಿನಗಳ ಮಟ್ಟಿಗಾದ್ರು ಅನ್ನದ ಮುಖ ನೋಡ್ತಿವಲ್ಲ ಅಂದುಕೊಳ್ಳುತ್ತಾ ಖುಷಿಯಲ್ಲಿ ತಟ್ಟೆಯಲ್ಲಿದ್ದದ್ದನ್ನೆಲ್ಲಾ ಖಾಲಿಮಾಡಿ ನೀರು ಕುಡಿದು ಎದ್ದ. ಅಪ್ಪ ಅವ್ವನನ್ನು ಪೀಡಿಸುತ್ತಿದ್ದು ಇನ್ನೂ ನಡೆಯುತ್ತಿತ್ತು. ಅವಳು ಕೊಡೋವರೆಗೂ ಇವನು ಬಿಡೋದಿಲ್ವೇನೋ ಅಂದುಕೊಂಡು ಮಂಜ ಮನೆಯಂಗಳ ದಾಟಿದ್ದ.
ಪುಟ್ಟೇಗೌಡ್ರ ಹಿತ್ತಲು ದಾಟಿದ್ರೆ ಸಾಮೇಗೌಡ್ರ ಅಂಗಳ, ಅಲ್ಲಿಂದ ಮುಂದೆ ಮಣ್ಣಿನ ರಸ್ತೆ. ಕಾಲುದಾರೀಲಿ ನಾಗಮಂಗಲದತ್ತ ಹೆಜ್ಜೆ ಹಾಕುವಾಗ ತಣ್ಣಗೆ ಚಳಿ ಕೊರೆಯುತ್ತಿತ್ತು. ಕಮ್ಮಾರ ಶೆಟ್ಟಿ ಕುಲುಮೆ ತಲುಪುವ ಹೊತ್ತಿಗೆ ಬೆಳಕಾಗಿತ್ತು. ಕೊಂಚ ತಡವೂ ಆಗಿತ್ತು. ಕುತ್ತಿಗೆಯಿಂದಿಳಿಯುತ್ತಿದ್ದ ಬೆವರು ಒರೆಸಿಕೊಳ್ಳುತ್ತಾ ಕುಲುಮೆಯ ಗುಡಿಸಲಿಗೆ ಕಾಲಿಟ್ಟರೆ ಬಾಗಿಲಲ್ಲೇ ಇದ್ದಾನೆ ಕಮ್ಮಾರಶೆಟ್ಟಿ. "ಸಾಕೇನೋ ಹೊತ್ತು, ಇನ್ನೂ ಕೊಂಚ ತಡವಾಗಿ ಬರಬಹುದಿತ್ತಲ್ಲ, ಬರೋವಾಗ ಮೊದಲೇ ಹೇಳಿದ್ರೆ ಸಾರೋಟು ಕಳಿಸ್ತಿದ್ದೆ. ನಿಮ್ಮಂತವರನ್ನು ನಂಬಿದ್ರೆ ನನ್ನ ಹೊಟ್ಟೆ ತುಂಬಿದಾಗೆ, ನಡಿಯೋ ಒಳಗೆ" ಕಮ್ಮಾರ ಶೆಟ್ಟಿಯ ಬೈಗುಳದಿಂದ ಅವನಿಗೇನು ಬೇಸರವಾಗಲಿಲ್ಲ. ಯಾಕೆಂದರೆ ಇದೆಲ್ಲಾ ಪ್ರತಿದಿನದ ದಿನಚರಿ ಎಂಬಷ್ಟು ಸಲೀಸಾಗಿ ಒಳನಡೆದ. ಅವನಿಗಾಗಿ ಕೆಲಸ ಕಾಯುತ್ತಿತ್ತು. ಆಗ ಶುರುಮಾಡಿದ ಕೆಲಸ ಸಂಜೆಯಾದರೂ ಮುಗಿಯುತ್ತಿರಲಿಲ್ಲ. ಒಂಬತ್ತು ಗಂಟೆಗೊಮ್ಮೆ 'ಚಾ" ಬಂತು. ಅದು ದಿನವೂ ಬರುತ್ತದೆ, ಅದು "ಚಾ"ನೋ ಅಥವ ಕಲಗಚ್ಚೋ, ಅದಾದರೂ ಸಿಕ್ಕುತ್ತಲ್ಲ ಸುಸ್ತಾದವನಿಗೆ ಸುಧಾರಿಸಿಕೊಳ್ಳಲು ಒಂದೇ ದಾರಿ ಇದಾಗಿತ್ತು. ಮತ್ತೊಮ್ಮೆ ಸಂಬಳ ಸಿಕ್ಕುವ ನೆನಪಾಯ್ತು. ರಾತ್ರಿ ಅಂದುಕೊಂಡಂತೆ ಮಾಡಿದ ಮೇಲೆ ಹಣ ಉಳಿದರೆ ತಂಗಿ ಪಾರ್ವತಿ, ತಮ್ಮ ಬೀರನಿಗೆ ಬಳೆ ಬತ್ತಾಸು ಕೊಳ್ಳಬೇಕು. ಅವನ್ನೆಲ್ಲಾ ಪಡೆದುಕೊಂಡ ಮೇಲೆ ಅವರ ಮುಖದಲ್ಲೂ ಅರಳುವ ಸಂತೋಷವನ್ನು ನಾನು ನೋಡಬೇಕು. ಆಲೋಚನೆಯ ಜೊತೆಯಲ್ಲೇ ಕೆಲಸವನ್ನು ಮಾಡುತ್ತಾ ಸಂಜೆಯಾಗುವುದನ್ನು ಕಾಯುತ್ತಿದ್ದ ಮಂಜ.
ಸಂಜೆ ಐದು ಗಂಟೆಯಾಯಿತು ಹೀರ ಮತು ಮಂಜ ಇಬ್ಬರು ಕೆಲಸ ಮುಗಿಸಿ ಕೈಕಾಲು ತೊಳೆದುಕೊಂಡು ಕಮ್ಮಾರಶೆಟ್ಟಿಗಾಗಿ ಕಾಯುತ್ತಿದ್ದರು ಸಂಬಳ ಪಡೆಯಲು. ಕಮ್ಮಾರ ಶೆಟ್ಟಿ ಹೊರಗೆ ಹೋಗಿದ್ದ. ಇಬ್ಬರು ಮಾತಾಡಿಕೊಳ್ಳುತ್ತಿರುವಾಗ ದೂರದಿಂದ ಒಬ್ಬ ವ್ಯಕ್ತಿ ವೇಗವಾಗಿ ಬರುತ್ತಿದ್ದುದು ಕಂಡಿತು. ಅವನ ಮುಖದಲ್ಲಿ ವಿಷಾದ, ದುಃಖ ಮಿಶ್ರಿತವಾಗಿ ಎದ್ದುಕಾಣುತ್ತಿತ್ತು.
"ಕಮ್ಮಾರ ಶೆಟ್ಟಿ ಎಲ್ಲಿ" ಹೀರ ಕೇಳಿದ.
ನೀವಿಬ್ಬರೂ ಬೇಗ ಹೋಗಿ ಕಮ್ಮಾರ ಶೆಟ್ಟಿಯ ಹೆಣವನ್ನು ಊರ ಚತ್ರದ ಅಂಗಳದಲ್ಲಿ ಮಲಗಿಸಿದ್ದಾರೆ. ಮದ್ಯಾಹ್ನ ರಸ್ತೆಯನ್ನು ದಾಟುವಾಗ ಲಾರಿಯೊಂದು ವೇಗವಾಗಿ ಬಂದು ಕಮ್ಮಾರಶೆಟ್ಟಿಗೆ ಅಪ್ಪಳಿಸಿ ಅಲ್ಲೇ ಸತ್ತ" ಹೇಳಿ ಬಂದಷ್ಟೇ ವೇಗವಾಗಿ ವಾಪಸ್ ಹೊರಟ ಆತ.
"ಕಮ್ಮಾರ ಶೆಟ್ಟಿ ಸತ್ತ" ಮಾತಷ್ಟೇ ಕೇಳಿಸಿತ್ತು. ಮುಂದಿನ ಮಾತುಗಳ್ಯಾವುವು ಕೇಳಿಸಲಿಲ್ಲ ಮಂಜನಿಗೆ. ಕಣ್ಣಂಚಲ್ಲಿ ನೀರು ತುಂಬಿಕೊಂಡಿತ್ತು ಒರೆಸಿಕೊಂಡಷ್ಟು ಜಾಸ್ತಿಯಾಗಿ. ಅವ್ವನ ಹರಿದ ರವಿಕೆ, ಗೋಣಿತಾಟುಗಳಲ್ಲಿ ಮುದುರಿಕೊಂಡಿರುವ ತಮ್ಮ ತಂಗಿ, ಅದೇ ಗಂಜಿ, ತಂಗಳು ಮುದ್ದೆ, ಗೊಡ್ಡು ಕಾರ ಎಲ್ಲಾ ಕಣ್ಣ ಮುಂದೆ ಸರಿಯುತ್ತಿದ್ದವು.
ಶಿವು.ಕೆ.