"ಇರ್ಲಿ ಬಿಡೋ., ನನಗೆ ಅಮ್ಮ ಇಲ್ವಲ್ವಾ" -
ನಸುಕಿನಲ್ಲಿ ಪೇಪರುಗಳೊಳಗೆ ಸ್ಪಪ್ಲಿಮೆಂಟರಿಗಳನ್ನು ಹಾಕುವುದು, ಬಂಡಲ್ ಕಟ್ಟುವುದು, ಸೈಕಲ್ ಮೇಲೆ ಜೋಡಿಸುವುದು, ಸೈಕಲೇರಿ ಮನೆಮನೆಗೆ ಪೇಪರ್ ಹಾಕುವುದು ಇದೆಲ್ಲ ದೃಶ್ಯಗಳಿಂದ ಚಿತ್ರ ಪ್ರಾರಂಭವಾಗುತ್ತಿದ್ದಂತೆ ಹದಿನೆಂಟು ವರ್ಷಗಳ ಹಿಂದೆ ನಾನು ಪೇಪರ್ ಹಾಕುವ ಹುಡುಗನಾಗಿದ್ದ ಹಿಂದಿನ ಬಾಲ್ಯದ ನೆನಪುಗಳು ಮರುಕಳಿ ಇದು ನನ್ನದೇ ಬದುಕಿನ ಕತೆಯಲ್ಲವೇ ಅನ್ನಿಸಿತ್ತು. ಮುಂದೆ ಅದು ಅನಾಥ ಆಶ್ರಮ, ಅಲ್ಲಿನ ಪುಟ್ಟ ಪುಟ್ಟ ಮಕ್ಕಳು, ಅವರ ಆಟ ಪಾಠ ನೋವು-ನಲಿವು, ಅನಾಥಪ್ರಜ್ಞೆಗಳನ್ನೆಲ್ಲಾ ನೋಡಿದಾಗ ಇದು ಆನಾಥ ಮಕ್ಕಳ ಚಿತ್ರವೆನಿಸಿತ್ತು. ಮುಂದೆ ಕತೆ ಅನೇಕ ತಿರುವು ಪಡೆದು ಕೊಪ್ಪಳ ಒಂದು ಹಳ್ಳಿಗೆ ಲಿಂಕ್ ಆಗಿ ಅಲ್ಲಿನ ರೈತರ ಬದುಕಿನ ಕಷ್ಟಗಳು, ಮೂಡನಂಬಿಕೆ, ಎಳೆಮಕ್ಕಳನ್ನು ಬಲಿಪಶುವಾಗಿಸುವುದು ಹೀಗೆ ವಿಸ್ತಾರವಾದ ಕಥಾ ಹಂದರವನ್ನು ಹೊಂದಿರುವ ಈ ಚಿತ್ರವನ್ನು ನೋಡಿ ಹೊರಬರುವಾಗ ಇದು ನಮ್ಮೆಲ್ಲದ ಬದುಕಿನ ಕತೆ, ರೈತರ ಕತೆ, ಎಳೆಹಸುಗೂಸುಗಳ ಕತೆಯೆನ್ನಿಸಿ ಹೊರಬಂದ ಎಷ್ಟೋ ಹೊತ್ತಿನವರೆಗೂ ಕಾಡಲಾರಂಭಿಸಿತ್ತು. ದಿನಪತ್ರಿಕೆ ಹಂಚುವ ಹುಡುಗರ ಪುಟ್ಟ ಬದುಕುನ್ನು ಮೊದಲ ಬಾರಿಗೆ ಚಲನಚಿತ್ರವೆಂಬ ಮುಖ್ಯವಾಹಿನಿಯಲ್ಲಿ ತೋರಿಸಿದ್ದಕ್ಕೆ ನಾನು ಒಬ್ಬ ದಿನಪತ್ರಿಕೆ ಹಂಚುವ ಹುಡುಗನಾಗಿ, ನಂತರ ವೆಂಡರ್ ಆಗಿ "ಬಾಲ್‍ಪೆನ್" ಚಿತ್ರದ ನಿರ್ಧೇಶಕ ಶಶಿಕಾಂತ್‍ರಿಗೆ, ನಿರ್ಮಾಪಕರಾದ ಶ್ರೀನಗರ ಕಿಟ್ಟಿ ಮತ್ತು ಭಾವನ ಬೆಳಗೆರೆಯವರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ.
ಎಂದಿನ ಅದೇ ಮಚ್ಚು, ಲಾಂಗು, ಗನ್, ಹೊಡೆದಾಟ ಬಡಿದಾಟ, ಅಥವ ದೋಸೆಗಳನ್ನು ತಿರುಗಿಸಿ, ಮಗುಚಿ ಹಾಕಿದಂತೆ ಮಗುಚಿ-ತಿರುಚುವ ಲವ್ ಸ್ಟೋರಿಗಳು ಬರುತ್ತಿರುವ ಪ್ರಸ್ತುತ ಸ್ಥಿತಿಯಲ್ಲಿ "ಬಾಲ್‍ಪೆನ್’ ಎನ್ನುವ ಮಕ್ಕಳ ಚಿತ್ರ ನಿಜಕ್ಕೂ ವಿಭಿನ್ನವೆನಿಸುತ್ತದೆ. ಮದರ್ ತೆರೆಸ ಆಶ್ರಮದ ಅನಾಥ ಹುಡುಗನೊಬ್ಬ ಪೇಪರ್ ಹಾಕುವ ಹುಡುಗನಿಂದ ಸ್ಪೂರ್ತಿಪಡೆಯುವ ರೀತಿಯನ್ನು ಅದ್ಬುತವಾಗಿ ಕಟ್ಟಿಕೊಟ್ಟಿರುವ ನಿರ್ಧೇಶಕ ಶಶಿಕಾಂತ್ ಅಲ್ಲಿಂದಲೇ ವೀಕ್ಷಕರಲ್ಲಿ ಕುತೂಹಲವನ್ನು ಅರಳಿಸಿಬಿಡುತ್ತಾರೆ. ಮುಂದೆ ಆದೇ ಕೇಶವ ತನ್ನ ಇನ್ನಿಬ್ಬರು ಅನಾಥ ಗೆಳೆಯರೊಡಗೂಡಿ ಅವರು ಕೂಡ ಸರ್ಕಾರಿ ಕಚೇರಿಗಳಿಗೆ ದಿನಪತ್ರಿಕೆಗಳನ್ನು ಹಾಕುವುದು, ಅಧಿಕಾರಿಗಳ ಕಚೇರಿಗೆ ಪೇಪರುಗಳನ್ನು ಹಾಕುವಾಗ ಅಲ್ಲಿ ಬಂದಿದ್ದ ಕಾಗದಗಳನ್ನು ಓದುತ್ತಾ ಪತ್ರಗಳಲ್ಲಿ ವ್ಯಕ್ತವಾದ ಕಷ್ಟಗಳು, ನೋವುಗಳನ್ನು ಓದಿತಿಳಿದು ಆ ಪುಟ್ಟ ಮನಸ್ಸು ನಲುಗುವುದು, ಹೀಗೆ ನಿತ್ಯವೂ ನಡೆಯುತ್ತಿರುತ್ತದೆ. ಅದೊಂದು ದಿನ ಆತನ ಕೈಗೆ ಸಿಕ್ಕ ಹೀಗೆ ಸರ್ಕಾರಿ ಕಚೇರಿಯ ಬಾಗಿಲ ಹೊರಗೆ ಬಿದ್ದಿದ್ದ ಒಂದು ಪತ್ರವನ್ನು ನೋಡಿದವನೇ ಪೇಪರ್ ಹಾಕುವುದನ್ನು ಬಿಟ್ಟು ಆಶ್ರಮಕ್ಕೆ ಓಡಿಬರುತ್ತಾನೆ. ತನ್ನ ಇನ್ನಿಬ್ಬರು ಗೆಳೆಯರ ಜೊತೆಗೂಡಿ ಆ ಪತ್ರ ಬಂದ ಊರ್‍ಇಗೆ ಯಾರಿಗೂ ಗೊತ್ತಾಗದ ಹೋಗುತ್ತಾರೆ. ಮುಂದೇನಾಯ್ತು ಎನ್ನುವುದನ್ನು ನೀವು ಚಿತ್ರ ನೋಡಿ ಆನಂದಿಸಬಹುದು.
"ಹುಂಡಿಯಲ್ಲಿರುವ ಹಣದಲ್ಲಿ ಎಷ್ಟು ಲಾಡು ಬರುತ್ತವೆ" "ಒಂದು ಲಕ್ಷ ಕೋಟಿಗೆ ಎಷ್ಟು ಸೊನ್ನೆಗಳು ಅಪ್ಪಾಜಿ" "ನನ್ನ ತಲೆಗಿಂತ ಟಿಫನ್ ಚೆನ್ನಾಗಿರುತ್ತೆ ಹೋಗಿ ತಿನ್ನು", ನಾನು ಬಾಗಿಲು ಹಾಕ್ತಿನಿ ನಿನ್ನ ಬಾಗಿಲು ಹಾಕ್ಕೋ, ಇಂಥ ಅನೇಕ ಸಂಭಾಷಣೆಗಳು ಚಿಕ್ಕಂದಿನಲ್ಲಿ ಬಡತನದ ನಡುವೆ, ನಗು, ಖುಷಿ, ದುಃಖ, ಮಗುಮನಸ್ಸಿನ ಗೆಳೆತನ, ಇವೆಲ್ಲವನ್ನು ಮುಗ್ದ ಮನಸ್ಸಿನಲ್ಲಿ ಅನುಭವಿಸುತ್ತಿದ್ದ ಸವಿ ಸವಿ ನೆನಪುಗಳು ಮರುಕಳಿಸುತ್ತವೆ. ಇಂಥ ಸಂಭಾಷಣೆಗಳ ಮೂಲಕ ನಮ್ಮ ಕಿವಿ ಮತ್ತು ಮನಸ್ಸು ಪುಳಕಗೊಂಡರೆ, ಬಾಲ ಲಾಡು ತಿನ್ನುವ ದೃಶ್ಯ, ಕೇಶವ ಪೇಪರ್ ಕಟಿಂಗ್, ಕಣ್ಣಲ್ಲೇ ಮಾತಾಡುವ ರೀಟಾ, ಸಮರ್ಥ್, ಹುಂಡಿ ಹೊಡೆದು ಹಾಗೆ ಹಣವನ್ನು ಟವಲ್ಲಿನಲ್ಲಿ ಎತ್ತಿಕೊಂಡು ಮರೆಯಾಗುವ ದೃಶ್ಯ, ಹೀಗೆ ಇಂಥ ಹತ್ತಾರು ದೃಶ್ಯಾವಳಿಗಳ ಝಲಕ್‍ಗಳು ಇವೆ. ಪತ್ರದಲ್ಲಿನ ವಿಚಾರವನ್ನು ಓದಿ ಯಾರಿಗೂ ಹೇಳಲಾಗದೆ, ಇರಲೂ ಆಗದೆ, ಒಬ್ಬನೇ ಕುಳಿತು ಕೇಶವ ಅನುಭವಿಸುವ ನೋವು, ಅಪ್ಪಾಜಿಯನ್ನು ಕಂಡೊಡನೆ ಈ ವಿಚಾರವನ್ನು ಹೇಳಲಾಗದೆ ನನಗೆ ಅಪ್ಪನ ನೆನಪಾಯ್ತು" ನಮ್ಮೊಲ್ಲರ ಅಮ್ಮ ಮದರ್ ತೆರೆಸಾ" ಇಂಥ ಸನ್ನಿವೇಶಗಳು ನಮ್ಮ ಕಣ್ಣುಗಳನ್ನು ಒದ್ದೆಯಾಗಿಸುತ್ತವೆ. "ಇರ್ಲಿಬಿಡು ನನಗೆ ಅಮ್ಮ ಇಲ್ವಾಲ್ಲ" ತಿಂಡಿ ಪೋತ ಬಾಲನ ಮಾತನ್ನು ಕೇಳಿದಾಗಲಂತೂ ನಮಗರಿವಿಲ್ಲದಂತೆ ಕಣ್ಣಂಚಲ್ಲಿ ಹನಿ.
ಒಂದು ಕ್ಯಾನನ್ ೫ಡಿ ಮಾರ್ಕ್ ೨ ಕ್ಯಾಮೆರ, ಕೇವಲ ಎಲ್ ಇ ಡಿ ದೀಪಗಳನ್ನು ಬಳಸಿ ನೆರಳು ಬೆಳಕು ಹೊಂದಾಣಿಕೆ, ಹೀಗೆ ಇಂಥ ಅದ್ಬುತ ದೃಶ್ಯಾವಳಿಗಳನ್ನು ಕಟ್ಟಿಕೊಟ್ಟಿರುವ ಛಾಯಾಗ್ರಾಹಕ .........ಮತ್ತು ಅದ್ಬುತವೆನಿಸುವ ಹಾಡು ಮತ್ತು ಹಿನ್ನೆಲೆ ಸಂಗೀತವನ್ನು ನೀಡಿದ ಮಣಿಕಾಂತ್ ಕದ್ರಿ ಇಬ್ಬರಿಗೂ ಹ್ಯಾಟ್ಸಪ್ ಎನ್ನಲೇಬೇಕು.
ಚಿತ್ರದಲ್ಲಿ ನಟಿಸಿರುವ ಮುಖ್ಯ ಪಾತ್ರಧಾರಿ ಕೇಶವನ ನಟನೆಯಂತೂ ತುಂಬಾ ಸಹಜವೆನಿಸುತ್ತದೆ. ಅತಿಥಿನಟನಾಗಿ ಬರುವ ಶ್ರೀನಗರ ಕಿಟ್ಟಿ, ತಿಂಡಿಪೋತ ಬಾಲನ ಮುಗ್ಧತೆ, ಕಣ್ಣುಗಳಲ್ಲೇ ಮುಂಚು ಹರಿಸುವ ರೀಟಾ, ಕೆಂಪ ಪಾತ್ರಧಾರಿ ಸಂಫೂರ್ಣ ಹೊಸಬರಾದರೂ ಅದ್ಬುತವಾಗಿ ನಟಿಸಿದ್ದಾರೆ. ಯಾವ ಪಾತ್ರೆಗೆ ಹಾಕಿದರೂ ಸಲ್ಲುವಂತಿರುವ ಹಿರಿಯ ನಟರಾದ ಸುಚ್ಯೇಂದ್ರಪ್ರಸಾದ್ ಆಶ್ರಮದ ನಿರ್ವಾಹಕನಾಗಿ ಸಹಜಾಭಿನಯ. ಕುಡುಕ ತಂದೆ, ಆತನ ಹೆಂಡತಿ ಮತ್ತು ಮಗಳು, ಪೋಸ್ಟ್ ಮ್ಯಾನ್, ಮಾರಪ್ಪ, ಆಶ್ರಮದ ಆಡುಗೆ ಭಟ್ಟ, ಪೇಪರ್ ಹಾಕುವ ಹುಡುಗ ಹೀಗೆ ಎಲ್ಲರೂ ಚೆನ್ನಾಗಿ ನಟಿಸಿದ್ದಾರೆ.
ಎಂದಿನ ದೃಶ್ಯವಳಿಗಿಂತ ವಿಭಿನ್ನವಾದ ಮತ್ತು ಕಂಡರೂ ಕಾಣದಂತಿರುವ ನಿತ್ಯ ಸತ್ಯ ಸಂಗತಿಗಳ ಕುತೂಹಲಕಾರಿ ದೃಶ್ಯಗಳಿಂದ ಕೂಡಿರುವ "ಬಾಲ್ ಪೆನ್" ಎನ್ನುವ ಚಿತ್ರ ಮಕ್ಕಳ ಚಿತ್ರವೆನಿಸಿದರೂ ಸಕುಟುಂಬ ಸಮೇತರಾಗಿ ನೋಡುವಂತ ಮತ್ತು ಸಮಾಜಕ್ಕೆ ಮಕ್ಕಳ ವಿಚಾರವಾಗಿ ಒಂದು ಸಂದೇಶವನ್ನು ಕೊಡುವ ಚಿತ್ರ. ಕೋಟಿ ಕೋಟಿ ಬಂಡವಾಳ ಹಾಕಿ ಸ್ಟಾರ್ ನಟ-ನಟಿಯನ್ನು ಹಾಕಿಕೊಂಡು ಕತೆಯಿಲ್ಲದ ಸಿನಿಮಾ ಮಾಡುವ ಬದಲು ತೀರ ಕಡಿಮೆ ಬಜೆಟ್‍ನಲ್ಲಿ ಒಂದು ಉತ್ತಮ ಕತೆಯನ್ನಿಟ್ಟುಕೊಂಡು ಒಂದು ಸದಭಿರುಚಿಯ ಎಲ್ಲರೂ ನೋಡುವಂತ ಚಿತ್ರ ಬೇಕೆನ್ನುವವರಿಗೆ "ಬಾಲ್ ಪೆನ್" ಒಂದು ಉತ್ತಮ ಉದಾಹರಣೆ. ನೋಡಲು ಮಿಸ್ ಮಾಡಬೇಡಿ.
ಶಿವು.ಕೆ.
ಬೆಂಗಳೂರು