ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎನ್ನುವಂತೆ ಮುತ್ಮರ್ಡು ಊರಿನ ಸಾಧನೆ ಇಷ್ಟಕ್ಕೆ ಮುಗಿದಿಲ್ಲ ಇನ್ನೂ ಇದೆ. ಮೊದಲ ಭಾಗದಲ್ಲಿ ವಿವರಿಸಿದ ವಿಶಿಷ್ಟ ವ್ಯಕ್ತಿಗಳ ಜೊತೆಗೆ ಮತ್ತಷ್ಟು ಸಾಧಕರ ಪರಿಚಯವನ್ನು ಈ ಭಾರಿ ಮಾಡಲು ಪ್ರಯತ್ನಿಸುತ್ತಿದ್ದೇನೆ.
ವಿಜ್ಞೇಶ್ವರ ಹೆಗಡೆ ತಮ್ಮ ಕಲಾಕೃತಿಯೊಂದಿಗೆ...
ಇವರು ೪೫ ವರ್ಷದ ವಿಜ್ಞೇಶ್ವರ ಹೆಗಡೆ ಎನ್ನುವವರು ದೊಡ್ಡ ದೊಡ್ಡ ನಾಟಕ ಪರಧೆಗಳ ಚಿತ್ರಗಳನ್ನು ಬರೆಯುವುದರಲ್ಲಿ ಪರಿಣಿತರು. ಜಾತ್ರೆಗಳಲ್ಲಿ, ಉತ್ಸವಗಳಲ್ಲಿ ನಡೆಯುವ ದೊಡ್ದ ದೊಡ್ಡ ನಾಟಕಗಳಿಗೆ ಬಳಸುವ ದೊಡ್ಡ ಪರದೆಗಳ[ಕ್ಯಾನ್‌ವಸ್ ಬಟ್ಟೆ]ಪೌರಾಣಿಕ ಚಿತ್ರಗಳನ್ನು ಬರೆಯುವ ಅದ್ವಿತೀಯ ಕಲಾವಿದರು.
ಯುವ ಸಂಗೀತಗಾರ.ವಿನಾಯಕ ಹೆಗಡೆ
ಇವರ ತಮ್ಮನಾದ ವಿನಾಯಕ ಹೆಗಡೆ ಎನ್ನುವವರು ಹಿಂದುಸ್ಥಾನಿ ಸಂಗೀತ ಕಲಾವಿದರು. ಇವರೆಂಥ ಪ್ರತಿಭಾವಂತರೆಂದರೇ ಕೇಂದ್ರ ಸರ್ಕಾರದಿಂದ ಹಿಂದುಸ್ಥಾನಿ ಕ್ಲಾಸಿಕಲ್ ಸಂಗೀತ ಕಲಿಯಲು ಪ್ರತಿತಿಂಗಳಿಗೆ ಆರುಸಾವಿರ ರೂಪಾಯಿಯಂತೆ ಎರಡುವರ್ಷಗಳವರೆಗೆ ಸ್ಕಾಲರ್‌ಷಿಪ್ ಸಿಕ್ಕಿದೆ. ಈ ರೀತಿಯ ಕರ್ನಾಟಕದಿಂದ ಅವಕಾಶ ಸಿಕ್ಕಿರುವ ಇಬ್ಬರಲ್ಲಿ ಇವರೊಬ್ಬರು ಅಂದರೇ ಇವರ ಸಾಧನೆ ಎಂಥದ್ದು ಎಂದು ಊಹಿಸಬಹುದು...
ಇಷ್ಟೆಲ್ಲಾ ಹೇಳಿದ ಮೇಲೆ ಇಲ್ಲಿನ ಹೆಣ್ಣು ಮಕ್ಕಳು ಏನು ಸಾಧಿಸಿಲ್ವಾ ಅಂತ ನಿಮಗನ್ನಿಸಬಹುದು...ಯಾಕಿಲ್ಲ. ಈ ಊರಿನ ಮಣ್ಣಿನಲ್ಲೇ ಕಲೆಯಾ ಗುಣವಿರುವಾಗ ಅವರನ್ನು ಬಿಟ್ಟಿರಲು ಹೇಗೆ ಸಾಧ್ಯ.? ...ಸ್ವಾತಿಯ ತಾಯಿ ಉಷಾ ಹೆಗಡೆ, ಮತ್ತು ಜಯಂತ್ ತಾಯಿ ಜಯಲಕ್ಷ್ಮಿ ಹೆಗಡೆ ಇಬ್ಬರೂ ಸೊಗಸಾಗಿ ಬಟ್ಟೆ ಹೊಲೆಯುತ್ತಾರೆ. ಸುತ್ತಮುತ್ತಲ ಊರಿಗೆಲ್ಲಾ ಮಕ್ಕಳ ಮತ್ತು ಹೆಣ್ಣು ಮಕ್ಕಳ ಬಟ್ಟೆ ಹೊಲಿಯುವುದರಲ್ಲಿ ಇವರು ತುಂಬಾ ಫ಼ೇಮಸ್ಸು....!
ಜಯಲಕ್ಷ್ಮಿ ಹೆಗಡೆ
ಉಷಾ ಹೆಗಡೆ.
ನಾಗೇಂದ್ರರವರ ಶ್ರೀಮತಿ ನಾಗರತ್ನ ಹೆಗಡೆಯವರು ಆಡಿಕೆ ಬೀಜಗಳನ್ನು ಸಂಗ್ರಹಿಸಿ ಕಸಿ ಮಾಡಿ ಪ್ರತಿವರ್ಷ ಸಾವಿರಾರು ಆಡಿಕೆ ಸಸಿಗಳನ್ನು ಸುತ್ತಲ ಊರಿಗೆ ಮಾರುತ್ತಾರೆ. ಜೊತೆಗೆ ಬೆಟ್ಟದಲ್ಲಿ ಸಿಗುವ ಅಂಟುವಾಳ, ಕೋಕಮ್, ಬೆಟ್ಟದ ಹಲಸು, ಮಾವು, ವಾಟೆ, ಸೀಗೆಪುಡಿಗಿಡ, ಬೆಟ್ಟದ ನೆಲ್ಲಿಕಾಯಿ, ಆಳಲೇಕಾಯಿ......ಇನ್ನೂ ಅನೇಕ ಔಷದೀಯಾ ಗಿಡಗಳು ಇವರೇ ಮನೆಯ ಸುತ್ತ ಮಾಡಿಕೊಂಡ ನರ್ಸರಿಯಲ್ಲಿ ಪ್ರತಿವರ್ಷ ಸಿದ್ಧವಾಗುತ್ತವೆ. ಮತ್ತೆ ಇದೆಲ್ಲವನ್ನು ಮನೆಯ ಕೆಲಸ, ಮಕ್ಕಳ ಓದು, ಅವರನ್ನು ಸ್ಕೂಲಿನ ಸಮಯದಲ್ಲಿ ಸಿದ್ಧಮಾಡಿಕಳಿಸುವುದು, ಮನೆಯ ಹಿರಿಯರೆಲ್ಲರಿಗೆ ಆಡಿಗೆ ಊಟ ತಿಂಡಿ, ಇತ್ಯಾದಿ ಮನೆಕೆಲಸಗಳನ್ನು ಮಾಡುತ್ತಾ ಮನೆಯ ಹಿರಿಯರ ಕೃಷಿಕೆಲಸದಲ್ಲಿ ಸಹಾಯ ಮಾಡುತ್ತಾ ಇಂಥ ನರ್ಸರಿ ನಡೆಸುತ್ತಾರೆಂದರೇ ನಂಬಲಿಕ್ಕೆ ಸಾಧ್ಯವಿಲ್ಲ ಅಲ್ಲವೇ....ಹಾಗೆ ಇವರು ಆಡಿಕೆ ಸುಲಿಯುವುದರಲ್ಲಿ ಪಳಗಿದ ಕೈ ಕೂಡ...
ನಾಗರತ್ನ ಹೆಗಡೆ
ನಾನು ಇದುವರೆಗೆ ಹೇಳಿದ್ದೆಲ್ಲಾ ಇದೇ ಊರಿನಲ್ಲಿ ಇದ್ದು ಸಾದನೆ ಮಾಡಿದವರ ಬಗ್ಗೆ. ಈಗ ಈ ಊರಿನಲ್ಲಿ ಹುಟ್ಟಿ ಬೆಳದು ಹೊರರಾಜ್ಯ, ವಿದೇಶಗಳಲ್ಲಿ ನೆಲಸಿ ದೊಡ್ಡ ಸಾಧನೆ ಮಾಡಿ ಊರಿಗೆ ಕೀರ್ತಿ ತಂದವರ ಬಗ್ಗೆ ಮುಂದಿನ ಭಾಗದಲ್ಲಿ ಹೇಳುತ್ತೇನೆ.
ಚಿತ್ರಗಳು: ನಾಗೇಂದ್ರ ಮತ್ಮುರ್ಡು.
ಲೇಖನ : ಶಿವು.ಕೆ