Sunday, April 10, 2011

ಫೋಟೋ ಸುಖ...ಪ್ರಜಾವಾಣಿ ದು:ಖ

       

          ದಿನಾಂಕ ೧೦-೪-೨೦೧೧ರ ಭಾನುವಾರದ ಪ್ರಜಾವಾಣಿ ಸಾಪ್ತಾಹಿಕ ಪುರವಣಿಯಲ್ಲಿನ ಮುಖಪುಟದಲ್ಲಿ ನನ್ನ ಆತ್ಮೀಯ ಗೆಳೆಯ ಚಿಕ್ಕಮಗಳೂರಿನ ಪ್ರಜಾವಾಣಿ ಮುಖ್ಯ ಪ್ರತಿನಿಧಿ ಡಿ.ಎಂ.ಘನಶ್ಯಾಮ ಬರೆದ "ಫೋಟೊ ಸುಖ... ಹಕ್ಕಿ ದು:ಖ"  ಲೇಖನವನ್ನು ಓದಿದೆ. ಓದಿದ ಮೇಲೆ ಅದು ಪ್ರಜಾವಾಣಿಯ ದು:ಖವೆನಿಸಿತ್ತು.  ಪ್ರತಿಷ್ಟಿತ ಪ್ರಜಾವಾಣಿಗೆ ಇಂಥ ಲೇಖನವನ್ನು ಪ್ರಕಟಿಸುವ ಮುನ್ನ ಆ ಲೇಖನದ ಹಿಂದೆ ಎಷ್ಟರ ಮಟ್ಟಿಗಿನ ಶ್ರಮವಿದೆ ಅಂತ ಏಕೆ ನೋಡಲಿಲ್ಲ.  ಘನಶ್ಯಾಮ ನನ್ನ ಆತ್ಮೀಯ ಗೆಳೆಯ. ಆತ ಹತ್ತಾರು ಉತ್ತಮ ಲೇಖನಗಳನ್ನು ಬರೆದಿದ್ದಾರೆ. ಅವರ ಬಗ್ಗೆ ಮೆಚ್ಚುಗೆ ಮತ್ತು ಗೌರವವಿದೆ.  ಪತ್ರಿಕೆಯಲ್ಲಿ ತನ್ನ ಲೇಖನ ಬಂದು ತುಂಬ ದಿನವಾಯಿತಲ್ಲ ಎನ್ನುವ ಹಫಾಹಫಿತನದಿಂದಾಗಿ ಬರೆದ ಲೇಖನವನ್ನು ಪ್ರಜಾವಾಣಿಯ ಸಾಪ್ತಾಹಿಕ ಸಂಪಾದಕರು ಅದನ್ನು ಪರಾಮರ್ಶಿಸದೆ ಪ್ರಕಟಿಸಿದ್ದಾರೆ. ಪ್ರಕಟಿಸುವುದರ ಜೊತೆಗೆ ನೂರಾರು ವನ್ಯಜೀವಿ ಛಾಯಾಗ್ರಾಹಕರನ್ನು ಅವಮಾನಿಸಿದ್ದಾರೆ. "ಪಕ್ಷಿಗಳ ಮಟ್ಟಿಗೆ ಹೆಸರು ಮಾಡುವ ಏಕೈಕ ಉದ್ದೇಶದಿಂದ ಬರುವ ಫೋಟೊಗ್ರಾಫರುಗಳೇ ದೊಡ್ಡ ಅಪತ್ತು. ಫೋಟೊ ಕ್ಲಿಕ್ಕಿಸುವ ಭರದಲ್ಲಿ ಇವರು ಮಾಡುವ ಅವಾಂತರ ಒಂದೆರಡಲ್ಲ.............ಹೀಗೆ ಬರೆದಿರುವ ಘನಶ್ಯಾಮ್  ಎಷ್ಟು ಪಕ್ಷಿ ಛಾಯಾಗ್ರಾಹಕರು ಹಕ್ಕಿಗಳ ಗೂಡುಗಳನ್ನು ಹಾಳುಮಾಡುವುದನ್ನು ಖುದ್ದಾಗಿ ನೋಡಿದ್ದಾರೆ? ಹೋಗಲಿ ಕಲೆಹಾಕಿದ ಮಾಹಿತಿಯಿಂದ ಬರೆದಿರುವ ವಿಚಾರವೆಂದು ತಿಳಿಯೋಣವೆಂದರೆ ಆ ಮಾಹಿತಿಗೂ ತಲೆಬುಡ ಸರಿಯಿಲ್ಲ.  ಏಕೆಂದರೆ ಅವರೇ ಕೊಟ್ಟ ಒಂದು ಉದಾಹರಣೆಯನ್ನು ತೆಗೆದುಕೊಳ್ಳುವುದಾದರೆ   "ಚಿಕ್ಕಮಗಳೂರು-ಬೇಲೂರು ರಸ್ತೆಯಲ್ಲಿರುವ ಕೋಟೆಕೆರೆಯಲ್ಲಿ ಸಾಮಾನ್ಯವಾಗಿ ಬೆಳ್ಳಕ್ಕಿ ಹಿಂಡು ಬೀಡು ಬಿಟ್ಟಿರುತ್ತದೆ. ಕೆರೆಯ ಒಂದು ಬದಿಯಲ್ಲಿ ವಿಶ್ರಮಿಸುತ್ತಿರುವ ಬೆಳ್ಳಕ್ಕಿಗಳ ಫೋಟೊ ತೆಗೆದ ಫೋಟೊಗ್ರಾಫರ್ ಒಬ್ಬರಿಗೆ ಅವು ರೆಕ್ಕೆ ಬಿಚ್ಚಿ ಹಾರುವ ಫೋಟೊಗಳು ಬೇಕು ಎನಿಸಿತ್ತು. ಆದರೆ ಅವರು ಹಿಂದುಮುಂದು ಯೋಚಿಸದೆ ಕಲ್ಲು ತೆಗೆದು ಬೀಸಿದರು. ಕಲ್ಲೊಂದು ಬೆಳ್ಳಕ್ಕಿ ಕಾಲಿಗೆ ತಾಗಿ ಗಾಯವಾಯಿತು. ಉಳಿದವು ಹಾರಿದವು. ಈ ಮಹಾನುಭಾವ ಫೋಟೊ ತೆಗೆದು ಸಂಭ್ರಮಿಸಿದ."    ಹೀಗೆ ಬರೆದಿದ್ದಾರೆ.  ಒಬ್ಬ ಪಕ್ಷಿ ಫೋಟೋ ತೆಗೆಯುವ ಛಾಯಾಗ್ರಾಹಕ ಇದೇ ಬೆಳ್ಳಕ್ಕಿಗಳ ಫೋಟೊ ತೆಗೆಯುವ ಸಮಯದಲ್ಲಿ ತನ್ನ ಬಳಿಯಿರುವ ನಾಲ್ಕರಿಂದ ಆರುಕೇಜಿ ತೂಕವಿರುವ ಕ್ಯಾಮೆರ ಮತ್ತು ಜೊತೆಗಿರುವ ದೊಡ್ದ ಲೆನ್ಸ್ ಅನ್ನು ನೆಲದ ಮೇಲಿಟ್ಟು ಒಂದು ಕಲ್ಲನ್ನೆತ್ತಿಕೊಂಡು ಪಕ್ಷಿಗಳಿಗೆ ಗುರಿಯಿಟ್ಟು ಹೊಡೆದು ಮರುಕ್ಷಣ ಅಷ್ಟು ತೂಕವಿರುವ ಕ್ಯಾಮೆರ ಮತ್ತು ಲೆನ್ಸುಗಳನ್ನೆತ್ತಿ ಯಾವುದೋ ಒಂದು ಹಕ್ಕಿಯನ್ನು ಫೋಕಸ್ ಮಾಡಿ ಫೋಟೊ ತೆಗೆಯಲು ಸಾಧ್ಯವೇ? ಬಹುಶಃ ಇಂಥ ವರದಿಗಾಗಿ ಘನಶ್ಯಾಮ್ ತನ್ನ ಗೆಳೆಯರನ್ನು ಅದೇ ಜಾಗಕ್ಕೆ ಕಳಿಸಿ ಅಲ್ಲಿ ಹಕ್ಕಿಗಳಿಗೆ ಕಲ್ಲು ಹೊಡೆಸಿ ಗಾಯಮಾಡಿ ತಮ್ಮ ಪುಟ್ಟ ಕ್ಯಾಮೆರದಲ್ಲಿ ಫೋಟೊ ಕ್ಲಿಕ್ಕಿಸುವ ಹಾಗೆ ಮಾಡಿದ್ದಾರ ಅಂತ ಸಂಶಯ ಬರುವುದು ಖಂಡಿತ.  ಒಬ್ಬ ವನ್ಯ ಜೀವಿ ಅಥವ ಪಕ್ಷಿಗಳ ಛಾಯಾಗ್ರಾಹಕರು ಮೊದಲಿಗೆ ಅವರು ಪ್ರಕೃತಿ ಪ್ರೇಮಿಗಳಾಗಿರುತ್ತಾರೆ.  ಅವರು ಮೊದಲಿಗೆ ಹಕ್ಕಿಗಳ ಬಗ್ಗೆ ತಿಳಿದುಕೊಳ್ಳಲು ಪ್ರಯತ್ನಿಸುತ್ತಾರೆ. ಅವುಗಳ ಸಂರಕ್ಷಣೆಗಾಗಿ ಉಳಿವಿಗಾಗಿ ಮತ್ತು ಮಾಹಿತಿಗಾಗಿ ಫೋಟೊಗ್ರಫಿ ಮಾಡುತ್ತಾರೆ.  ಒಳ್ಳೆಯ ಮತ್ತು ಅದ್ಬುತ ಫೋಟೊಗ್ರಫಿ ಮಾಡಿ ಅದು ಪತ್ರಿಕೆಗಳಲ್ಲಿ, ಪುಸ್ತಕಗಳಲ್ಲಿ ಮಾದ್ಯಮಗಳಲ್ಲಿ ಬಂದರೆ ಪಕ್ಷಿವೀಕ್ಷಕರಿಗೆ ಅಧ್ಯಾಯನ ಮಾಡುವವರಿಗೆ, ಅದರ ಬಗ್ಗೆ ಆಸಕ್ತಿಯಿರುವವರಿಗೆ ಆಗುವ ಉಪಯೋಗಗಳು ನೂರಾರು. ಇಂಥ ಪ್ರಯತ್ನದಿಂದಾಗಿ ಆ ಛಾಯಾಗ್ರಹಕನಿಗೆ  ಹೆಸರು ಮತ್ತು ಖ್ಯಾತಿ ಬಂದರೆ ಅದು ಛಾಯಾಗ್ರಾಹಕನಿಗೆ ಬೋನಸ್ ಮಾತ್ರ.  ಆದು ಬಿಟ್ಟು ಘನಶ್ಯಾಮ್ ಬರೆದ ಹಾಗೆ ನಡೆದುಕೊಳ್ಳುವ ವನ್ಯಜೀವಿ ಛಾಯಾಗ್ರಾಹರಿರುವುದಿಲ್ಲ. 


ಮತ್ತೊಂದು ವಿಚಾರವೇನೆಂದರೆ ನಮ್ಮ ನಾಡಿನ ಪ್ರಖ್ಯಾತ ವನ್ಯಜೀವಿ ಛಾಯಾಗ್ರಾಹಕರು ಪಕ್ಷಿಗಳ ಫೋಟೊಗ್ರಫಿ ಮಾಡಿ ಲಂಡನ್ನಿನ ರಾಯಲ್ ಫೋಟೊಗ್ರಫಿ ಸೊಸೈಟಿ ಮತ್ತು ಫ್ಯಾರಿಸ್ಸಿನ "ಫೆಡರೇಷನ್ ಅಪ್ ಇಂಟರ್‌ನ್ಯಾಷನಲ್ ಡಿ ಲ ಅರ್ಟ್  ಫೋಟೊಗ್ರಫಿ" ಸಂಸ್ಥೆಗಳಿಂದ ಪ್ರತಿಷ್ಟಿತ ಡಿಸ್ಟಿಂಕ್ಷನ್ ಪಡೆದಿದ್ದಾರೆ.  ಆ ರೀತಿ 2011ರವರೆಗೆ 50ಕ್ಕೂ ಹೆಚ್ಚು ಕರ್ನಾಟಕದ ಛಾಯಾಗ್ರಾಹಕರು ಮತ್ತು  200ಕ್ಕೂ ಹೆಚ್ಚು ಡಿಸ್ಟಿಂಕ್ಷನ್ ಪಡೆದ ಛಾಯಾಗ್ರಾಹಕರು ಭಾರತದಾದ್ಯಂತ ಇದ್ದಾರೆ. ಹಾಗಾದರೆ ಇವರಿಗೆಲ್ಲಾ ಡಿಸ್ಟಿಂಕ್ಷನ್ ಕೊಟ್ಟ ಆ ಅಂತರರಾಷ್ಟ್ರೀಯ ಸಂಸ್ಥೆಗಳಿಗೆ ಬುದ್ದಿಯಿಲ್ಲವೇ?   ಇವರೆಲ್ಲಾ ಘನಷ್ಯಾಮ್ ಬರೆದಂತೆ ಫೋಟೊಗ್ರಫಿಗಾಗಿ ಹಕ್ಕಿಗಳನ್ನು ಸಾಯಿಸಿದ್ದಾರೆಯೇ?  ಒಂದುವೇಳೆ  ಸಾಯಿಸಿದ್ದಾರೆ ಅಂತಲೇ ಅಂದುಕೊಂಡರೆ ಅವರು ಕ್ಲಿಕ್ಕಿಸಿದ ಹಕ್ಕಿಗಳ ಚಿತ್ರಗಳನ್ನು ನಿಮ್ಮದೇ ಪತ್ರಿಕೆಯಲ್ಲಿ ಇದುವರೆಗೂ ಪ್ರಕಟಿಸಿದ್ದೀರಲ್ಲ ಅದು ಎಷ್ಟು ಸರಿ? 

            ಯಾವುದೋ ಇಂಟರ್‍ನೆಟ್ ಲೇಖನವನ್ನು ಓದಿ ಹೀಗೆ ಬರೆಯುವ ಡಿ.ಎಂ ಘನಶ್ಯಾಂ ಈಗ ಪತ್ರಿಕೆಯ ಮುಖ್ಯ ವರಧಿಗಾರನಾಗಿರುವುದು ಚಿಕ್ಕಮಗಳೂರಿನಲ್ಲಿ. ಘನಶ್ಯಾಂ ಅವರು ಬರೆದ ಲೇಖನ ಪ್ರಕಟವಾಗಿದ್ದು ದಿನಾಂಕ 10-4-2011ರ ಭಾನುವಾರದಂದು. ಆದ್ರೆ ಅದೇ ದಿನಾಂಕದಂದು ಪ್ರಜಾವಾಣಿಯ ನಾಲ್ಕನೆ ಪುಟದಲ್ಲಿ "ಪ್ರಜಾವಾಣಿ ಕ್ಲಿಕ್" ಕಾಲಂನಲ್ಲಿ "ತುತ್ತಾ ಮುತ್ತಾ" ಕೆಂಪಕ್ಷರದ ಹೆಡ್ಡಿಂಗಿನಲ್ಲಿ "ನಗರದ ಕಬ್ಬನ್ ಉದ್ಯಾನದಲ್ಲಿನ ಮರದ ಪೊಟರೆಯಲ್ಲಿ ಗಿಳಿಯೊಂದು ತನ್ನ ಮರಿಗೆ ಗುಟುಕು ನೀಡಿದ ದೃಶ್ಯ ಶನಿವಾರ ಕಂಡುಬಂತು."  "ಪ್ರಜಾವಾಣಿ ಚಿತ್ರ: ಬಿ.ಕೆ. ಜನಾರ್ಧನ್." ಎನ್ನುವ ಪುಟ್ಟ ಶೀರ್ಷಿಕೆಯ ಮೇಲೆ ಒಂದು ಗಿಳಿ ತನ್ನ ಮರಿಗಿಳಿಗೆ ಗುಟುಕು ನೀಡುತ್ತಿರುವ ಸುಂದರ ಚಿತ್ರವನ್ನು ಪ್ರಕಟಿಸಿಬಿಟ್ಟಿದ್ದಾರೆ. ಈ ಚಿತ್ರದಿಂದಾಗಿ ಪ್ರಜಾವಾಣಿ ಪತ್ರಿಕೆಗೂ ಅದನ್ನು ತೆಗೆದ ಛಾಯಾಗ್ರಾಹಕನಿಗೂ ಹೆಸರು ಮತ್ತು ಕೀರ್ತಿ ಅವತ್ತಿನ ಮಟ್ಟಿಗೆ ಬಂದಿರುವುದಂತೂ ನಿಜ.  ಪಾಪ ಘನಶ್ಯಾಮರಿಗೆ ಮರದ ಪೊಟರೆಯಲ್ಲಿ ಗೂಡುಮಾಡಿರುವ ಆ ಗಿಳಿಯು ತನ್ನ ಮರಿಗೆ ಗುಟುಕು ನೀಡುವುದನ್ನು ಫೋಟೊ ತೆಗೆದ ತಮ್ಮ ಪ್ರಜಾವಾಣಿಯ ಛಾಯಾಗ್ರಾಹಕ ಬಿ.ಕೆ ಜನಾರ್ಧನ್ ಫೋಟೊಗ್ರಫಿ ಮಾಡುವ ಸಲುವಾಗಿ ಆ ಗಿಳಿ ಮತ್ತು ಅದರ ಮರಿಗೆ ತೊಂದರೆ ಕೊಡುತ್ತಿದ್ದಾರೆ ಅಂತ ಏಕೆ ಅನ್ನಿಸಲಿಲ್ಲ. ಪತ್ರಿಕೆಯಲ್ಲಿ ಪ್ರಕಟವಾದ ಈ ಚಿತ್ರವನ್ನು ನೋಡಿ ಅಲ್ಲೊಂದು ಗಿಳಿಗೂಡಿದೆ. ಅದರಲ್ಲೊಂದು ಮರಿಯಿದೆ. ತಾಯಿ ಗಿಳಿಯಿದೆ. ಅದರಿಂದ ನಮಗೆ ಮಾಂಸ ಸಿಗುತ್ತದೆ ಅಂತ ಹಕ್ಕಿಗಳ ಬೇಟೆಗಾರರು ಖುಷಿಪಡುವುದಿಲ್ಲವೇ... ಇಂಥ ಚಿತ್ರಗಳನ್ನು ಪ್ರಕಟಿಸಿ ಆ  ಹಕ್ಕಿಗಳ ಸಾವಿಗೆ ಪತ್ರಿಕೆ ಪರೋಕ್ಷವಾಗಿ  ಕಾರಣವಾಗುವುದಿಲ್ಲವೇ?  ಪಾಪ ಆ ಛಾಯಾಗ್ರಾಹಕರಿಗೆ ಗೊತ್ತಿರದಿದ್ದರೂ ಘನಶ್ಯಾಂ ಲೇಖನವನ್ನು ಪ್ರಕಟಿಸುವ ಪ್ರಜಾವಾಣಿ ಪತ್ರಿಕೆಗೆ ಏಕೆ ಅನ್ನಿಸಲಿಲ್ಲ. ತಮ್ಮ ಪತ್ರಿಕೆಯ ಛಾಯಾಗ್ರಾಹಕರು ಇಂಥ ಫೋಟೊಗಳನ್ನು ಕ್ಲಿಕ್ಕಿಸಿದರೆ ಅದರಿಂದ ತಮ್ಮ ಪತ್ರಿಕೆಗೆ ಮತ್ತು ಛಾಯಾಗ್ರಾಹಕನಿಗೆ ಕೀರ್ತಿ. ಇತರ ವನ್ಯ ಜೀವಿ ಛಾಯಾಗ್ರಾಹಕರು ಇಂಥ ಫೋಟೊಗಳನ್ನು ಕ್ಲಿಕ್ಕಿಸಿದರೆ ಹಕ್ಕಿಗಳಿಗೆ ದು:ಖ ಅಲ್ಲವೇ....

ತಮ್ಮ ಪತ್ರಿಕೆಯ ವರದಿಗಾರ ಈ ಲೇಖನದ ಮೂಲಕ ಎಲ್ಲಾ ವನ್ಯಜೀವಿ ಛಾಯಾಗ್ರಾಹಕರನ್ನು ಅವಮಾನಿಸಿರುವುದಲ್ಲದೇ ಇಂಥ ಆಧಾರವಿಲ್ಲದ ಲೇಖನವನ್ನು ಪ್ರಕಟಿಸಿರುವ ಪ್ರಜಾವಾಣಿಯ ಸಾಪ್ತಾಹಿಕ ಪುರವಾಣಿಯ ಸಂಪಾದಕರು ಇದಕ್ಕೆ ಉತ್ತರಿಸುವರೆ?

ಪ್ರಜಾವಾಣಿಯ ಸಾಪ್ತಾಹಿಕ ಪುರವಣಿಯ ಲೇಖನಕ್ಕಾಗಿ ಇಲ್ಲಿ ಕ್ಲಿಕ್ಕಿಸಿ..

http://220.227.178.12/prajavani/web/include/story.php?news=1591&section=54&menuid=13


ಲೇಖನ: ಶಿವು.ಕೆ


39 comments:

ಬಾಲು said...

ghanashyam avara lekhana vanna PV paraamarshisi prakatisabekittu. Prajaavani avarige naadina hesanta chaayachitra grahakara arivu illa annisuttade.

nimma lekhanavanna PV ge kalisi.

ಚುಕ್ಕಿಚಿತ್ತಾರ said...

ನಿಮ್ಮ ಮಾತು ನಿಜ ಶಿವು ಸರ್..
ಛಾಯಾಗ್ರಾಹಕರು ಪ್ರಕೃತಿ ಪ್ರೀತಿಯುಳ್ಳವರೆ ಆಗಿರುತ್ತಾರೆ..
ಪ್ರಕೃತಿ ಹಾನಿಕಾರಕರು ಬಹಳ ಕಡಿಮೆ.
ವಿವೇಚನೆ ಇಟ್ಟುಕೊ೦ಡು ಬರೆಯಬಹುದಿತ್ತು ಆ ವ್ಯಕ್ತಿ...

ತೇಜಸ್ವಿನಿ ಹೆಗಡೆ said...

ನೈಜ ಕಾಳಜಿ, ಕಳಕಳಿ ಇರುವ ಛಾಯಾಚಿತ್ರಗ್ರಾಹಕರು ಬಹಳಷ್ಟಿದ್ದಾರೆ. ಎಲ್ಲರನ್ನೂ generalize ಮಾಡಿ ಈ ರೀತಿ ಆರೋಪಮಾಡಿರುವುದು ಸರಿಯಲ್ಲ. ವನ್ಯಜೀವಿಗಳ ಪ್ರತಿ ಆಸಕ್ತಿ.. ಆದರ.. ಪ್ರೀತಿ ಇರುವವರಿಂದ ಮಾತ್ರ ಅತ್ಯುತ್ತಮ ಚಿತ್ರಗಳು ಹೊರಬರಲು ಸಾಧ್ಯ ಎಂದು ನಂಬಿರುವೆ ನಾನು.

ಮನಸು said...

ಶಿವು ನಿಮ್ಮ ಮಾತು ನಿಜ. ಛಾಯಾಗ್ರಾಹಕರಿಂದಲೇ ನಮ್ಮಂತವರಿಗೆ ಎಷ್ಟೋ ವಿಷಯಗಳು ತಿಳಿದಿವೆ ಜೊತೆಗೆ ಅರಿವು ಮೂಡಿಸಿವೆ. ಅವರಲ್ಲಿನ ಪ್ರಕೃತಿ ಪ್ರೀತಿ ಹೊಸ ರೂಪವನ್ನೇ ಕೊಟ್ಟಿದೆ.

sunaath said...

ಶಿವು,
ವನ್ಯಜೀವಿಗಳ ಫೋಟೋಗಳನ್ನು ನೋಡಿದಾಗ, ಆ ಚಿತ್ರಗಳನ್ನು ತೆಗೆಯಲು ಎಷ್ಟು ತಾಳ್ಮೆ ಬೇಕಾಗುತ್ತದೆ ಎನ್ನುವದರ ಅರಿವಾಗುವದು. ಈ ಘನಶ್ಯಾಮ ಎನ್ನುವವರು ಎಲ್ಲೋ ಎಡಬಿಡಂಗಿಯ ತರಹ ಕಾಣುತ್ತಾರೆ. ಆದರೆ ಪ್ರಜಾವಾಣಿಯ ಸಂಪಾದಕರಿಗಾದರೂ ತಿಳಿವಳಿಕೆ ಬೇಡವೆ?
ನಿಮ್ಮ ಲೇಖನಕ್ಕೆ ಅವರ ಪ್ರತಿಕ್ರಿಯೆಯನ್ನು ನಿರೀಕ್ಷಿಸೋಣ.

Chaithrika said...

ನಾನು ಒಂದು ಮನೆಯ ಸಾಕು ಬೆಕ್ಕಿನ ಫೋಟೋ ತೆಗೆಯಲು ಹೋಗಿ ಸೋತಿದ್ದೇನೆ. ಕೂತಲ್ಲಿ ಕೋರದೆ, ತಲೆ ಅತ್ತಿತ್ತ ತಿರುಗಿಸಿ, ಕೊನೆಗೆ ನನ್ನ ಕ್ಯಾಮೆರಾಗೆ ಹಾರಿ ಪರಚಲು ಹೊರಟು ಸಾಕುಸಾಕಾಗಿದೆ. ಇನ್ನು ಕಾಡಿನ ಪ್ರಾಣಿ ಪಕ್ಷಿಗಳ ಕಥೆ ಬಿಡಿ. ಪ್ರಾಣಿ ಪಕ್ಷಿಗಳ ಬಗ್ಗೆ ಪ್ರೀತಿ ಇರದವರು ಅವುಗಳ ಫೋಟೋಗ್ರಫಿ ಮಾಡಲು ಸಾಧ್ಯವೇ ಇಲ್ಲ. ತಾಳ್ಮೆ ಕೆಟ್ಟು ಹಿಂತಿರುಗಿಯಾರು.

ಸಂದೀಪ್ ಕಾಮತ್ said...

ಫೋಟೋಗ್ರಾಫರ್ ಗೆ ಅದರಲ್ಲೂ ವನ್ಯಜೀವಿ ಫೋಟೋಗ್ರಾಫರ್ ಗೆ ಇರಬೇಕಾದ ಎರಡನೇ ಅಂಶವೇ ತಾಳ್ಮೆ(ಮೊದಲನೆ ಅಂಶ ಕ್ಯಾಮೆರಾ!)

ಹೀಗೆ ಕಲ್ಲು ಹೊಡೆದು ಫೋಟೊ ತೆಗೆಯೋದು ಸಾಧ್ಯವೇ ಇಲ್ಲ. ಗಿಳಿ ಬಂದು ಫೋಟೋಗ್ರಾಫರ್ ನ ಮೂಗು ಕಚ್ಚದೇ ಬಿಡುತ್ತಾ ಕಲ್ಲೆಸೆದರೆ ;)

PARAANJAPE K.N. said...

ನಾನು ಪ್ರಜಾವಾಣಿ ಓದಿಲ್ಲ, ನಿಮ್ಮ ಲೇಖನದಿ೦ದ ವಿಚಾರ ತಿಳಿಯಿತು. ವನ್ಯ ಜೀವಿ ಛಾಯಾಗ್ರಹಣಕ್ಕೆ ಬೇಕಾಗಿರುವುದು ಅಪಾರ ಸಹನಶೀಲತೆ ಎ೦ಬುದು ಎಲ್ಲರಿಗೆ ತಿಳಿದ ವಿಷಯ. ವ್ಯಕ್ತಿ ಪರಿಸರದ ಬಗ್ಗೆ ಕಾಳಜಿ ಹೊಂದಿದವನಾದಲ್ಲಿ ಮಾತ್ರ ಆ ಸಹನೆ ಅವನಲ್ಲಿ ಮೈಗೂಡಿರುತ್ತದೆ. ಆದ್ದರಿ೦ದ ಛಾಯಾಗ್ರಾಹಕರಿ೦ದ ವನ್ಯಜೀವಿ ಸ೦ಕುಲಕ್ಕೆ ತೊ೦ದರೆ ಎ೦ಬ ಮಾತು ಒಪ್ಪತಕ್ಕದ್ದೇ ಅಲ್ಲ. ನನಗೆ ಇನ್ನೂ ನೆನಪಿದೆ. ನಿಮ್ಮ ಫೋಟೋ ಸಹಕಾರದೊ೦ದಿಗೆ ಹಕ್ಕಿ ಗೂಡಿನ ಕುರಿತಾದ ಒ೦ದು ಅಪರೂಪದ ಮಾಹಿತಿಯುಳ್ಳ ಲೇಖನ ನಾನು ಬರೆದು ಕನ್ನಡದ ಅಷ್ಟೂ ಪತ್ರಿಕೆಗಳಿಗೆ ಕಳಿಸಿದ್ದೆ, ಯಾರೊಬ್ಬರೂ ಪ್ರಕಟಿಸಲಿಲ್ಲ. ಆ ವಿಷಯದ ಬಗ್ಗೆ ಅದಕ್ಕೆ ಮೊದಲು ಮತ್ತು ಆ ನ೦ತರ ಯಾವ ಪತ್ರಿಕೆಯಲ್ಲೂ ಲೇಖನ ಬಂದಿಲ್ಲ. ಪ್ರಕಟವಾಗದೆ ಇದ್ದುದು ನನಗೆ ಬೇಸರ ತ೦ದಿತ್ತು. ನೀವು ಅದನ್ನು ನಿಮ್ಮ ಆಪ್ತರಾದ ಹಿರಿಯ ಪರಿಸರವಾದಿಗಳಿಗೆ ಕಳಿಸಿದ್ರಿ, ಆಗ ಅವರಿ೦ದ ಬ೦ದ ಅಭಿಪ್ರಾಯ ದ೦ಗುಬಡಿಸುವ೦ತಿತ್ತು. ಯಾಕೋ ನಿಮ್ಮ ಲೇಖನ ಓದಿ ಇದೆಲ್ಲ ನೆನಪಿಗೆ ಬಂತು. ಅ೦ದ ಹಾಗೆ ನಿಮ್ಮ ಲೇಖನದಲ್ಲಿ "ಅಪಾಅಪಿತನ" ಅ೦ತ ಇರೋದನ್ನ "ಹಪಾಹಪಿತನ" ಅ೦ತ ತಿದ್ದುಪಡಿ ಮಾಡಿಕೊಳ್ಳಿ.

shivu.k said...

ಲೇಖನವನ್ನು ಬರೆದ ಘನಶ್ಯಾಂ ಪ್ರತಿಕ್ರಿಯೆ,

ಪ್ರೀತಿಯ ಗೆಳೆಯನಾಗಿದ್ದ ಕೆ.ಶಿವು ಅವರಿಗೆ ನಮಸ್ಕಾರ...

ತಮ್ಮ ಪತ್ರವನ್ನು ಎರಡು ಬಾರಿ ಸಂಪೂರ್ಣ ಓದಿದ ನಂತರ ಏನೂ ಉತ್ತರ ಬರೆಯುವ ಅವಶ್ಯಕತೆ
ಇಲ್ಲವೆಂದು ತಿಳಿಯಿತು. ಅಸಲಿಗೆ ನಿಮಗೆ ನನ್ನ ಉತ್ತರವೂ ಬೇಕಿಲ್ಲ. ನನಗೇಕೆ ಈ
ಪತ್ರವನ್ನು ಮೇಲ್ ಮಾಡಿದ್ದೀರೋ ಅರ್ಥವಾಗಲಿಲ್ಲ.

ಛಾಯಾಗ್ರಹಣ ಹಾಗೂ ಛಾಯಾಗ್ರಹಕರ ಬಗ್ಗೆ ನನಗಿರುವ ಪ್ರೀತಿ ಮತ್ತು ಗೌರವವನ್ನು ತಿಳಿದು
ತಾವು 'ಹಪಾಹಪಿತನ' ಎನ್ನುವ ಪದ ಪ್ರಯೋಗಿಸಿದ್ದೀರಿ. ಇದು ನನಗೆ ಸರಿ ಕಾಣಲಿಲ್ಲ. ನನ್ನ
ಬಗ್ಗೆ ಏನೇನೂ ತಿಳಿಯದ ಹಾಗೂ ನಿಮ್ಮಷ್ಟೇ ಚೆನ್ನಾಗಿ ನನ್ನ ಲೇಖನವನ್ನು ಅರ್ಥ
ಮಾಡಿಕೊಂಡಿರುವ(!) ನಿಮ್ಮ ಬ್ಲಾಗ್ ಓದುಗರು ಔಚಿತ್ಯ ಮೀರಿ ಸಲ್ಲದ ಮಾತನಾಡಿದ್ದಾರೆ.

ಇನ್ನೇನು ಬರೆಯಲು- ಮಾತನಾಡಲು ಉಳಿದಿಲ್ಲ. ಎಲ್ಲವನ್ನೂ ನೀವೇ ಮುಗಿಸಿದ್ದೀರಿ. ಬಹುಷಃ
ತುಂಬ ಎತ್ತರಕ್ಕೆ ಬೆಳೆದಿದ್ದೀರಿ. ಸಂತೋಷ.

ತಮ್ಮ ವಿಶ್ವಾಸಿ
ಡಿ.ಎಂ.ಘನಶ್ಯಾಮ

shivu.k said...

ಬಾಲು ಸರ್,
ಲೇಖನವನ್ನು ಪ್ರಕಟಿಸುವ ಮೊದಲು ಪರಾಮರ್ಶಿಸದೆ ಇರುವುದು ಇಡೀ ಲೇಖನದಲ್ಲಿ ಎದ್ದು ಕಾಣುತ್ತದೆ. ಖಂಡಿತ ನಾಡಿನ ಛಾಯಾಗ್ರಹಕರ ಬಗ್ಗೆ ಅರಿವಿದ್ದಲ್ಲಿ ಇಂಥ ಲೇಖನ ಪ್ರಕಟವಾಗುತ್ತಿರಲಿಲ್ಲ.

ನನ್ನ ಪ್ರತಿಕ್ರಿಯೆಯನ್ನು ಪ್ರಜಾವಾಣಿಗೆ ಕಳಿಸಿದ್ದೇನೆ. ಅವರಿಂದ ಉತ್ತರವೂ ಬಂದಿದೆ. ಅದನ್ನು ಇಲ್ಲಿ ಹಾಕುತ್ತೇನೆ..

shivu.k said...

ಚುಕ್ಕಿಚಿತ್ತಾರ,
ಇಡೀ ಲೇಖನದಲ್ಲಿ ಛಾಯಾಗ್ರಾಹಕರು ಪ್ರಕೃತಿ ಪ್ರೀತಿಯುಳ್ಳವರು ಅಂತ ಎಲ್ಲೂ ಬರೆದಿಲ್ಲ. ಅದರ ಬದಲಾಗಿ ಎಲ್ಲಾ ವನ್ಯ ಜೀವಿ ಛಾಯಾಗ್ರಾಹಕರನ್ನು ಅವಮಾನಿಸಿದ್ದಾರೆ. ಇಂಥ ಲೇಖನವನ್ನು ಛಾಯಾಗ್ರಾಹಕರಲ್ಲದ ಸಾಮಾನ್ಯ ಜನರು ಓದಿದಾಗ ಎಲ್ಲಾ ವನ್ಯ ಜೀವಿ ಛಾಯಾಗ್ರಹಕರು ಇಂಥ ಕೆಟ್ಟ ಕೆಲಸ ಮಾಡುವವರು ಅಂತ ಅಭಿಪ್ರಾಯವನ್ನು ರೂಪಿಸಿಕೊಳ್ಳುವುದು ಖಂಡಿತ. ಪ್ರಜಾವಾಣಿಯ ಲೇಖನ ಲಿಂಕ್ ಈಗ ಮತ್ತೆ ಬ್ಲಾಗಿನಲ್ಲಿ ಹಾಕಿದ್ದೇನೆ. ನೀವು ಮತ್ತೆ ಓದಿದರೆ ಅದರ ಪೂರ್ತಿ ವಿವರ ಗೊತ್ತಾಗಬಹುದು..
ಪ್ರತಿಕ್ರಿಯೆಗೆ ಧನ್ಯವಾದಗಳು.

shivu.k said...

ತೇಜಸ್ವಿನಿ ಮೇಡಮ್,
ನೀವು ಹೇಳಿರುವ ವಿಚಾರ ಅವರಿಗೆ ಗೊತ್ತಿದ್ದರೆ ಹೀಗೆ ಬರೆಯುತ್ತಿರಲಿಲ್ಲ. ನಾವು ಇಂಥವುಗಳನ್ನು ಪ್ರತಿಭಟಿಸದಿದ್ದಲ್ಲಿ ಖಂಡಿತ ಇನ್ನಷ್ಟು ಇಂಥ ವಿವೇಚನೆಯಿಲ್ಲದ ಲೇಖನಗಳು ಬಂದು ತಪ್ಪು ಅಭಿಪ್ರಾಯಗಳನ್ನು ಸಾರ್ವಜನಿಕರಲ್ಲಿ ಮೂಡಿಸುವುದು ಖಂಡಿತ..
ನನ್ನ ಪ್ರತಿಭಟನೆಯನ್ನು "ಸಂಪಾದಕೀಯ" ಬ್ಲಾಗ್ ಪ್ರಕಟಿಸಿ ಈ ವಿಚಾರವಾಗಿ ಚರ್ಚೆಗೆ ಅನುವು ಮಾಡಿಕೊಟ್ಟಿದೆ.
ಮತ್ತೆ ಪ್ರಜಾವಾಣಿ ಲೇಖನದ ಲಿಂಕ್ ಅನ್ನು ಕೊಟ್ಟಿದ್ದೇನೆ. ನೀವು ಮತ್ತೊಮ್ಮೆ ಓದಿದರೆ ಲೇಖನದ ಪೂರ್ಣ ಭಾವಾರ್ಥ ಗೊತ್ತಾಗಬಹುದು..
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.

shivu.k said...

ಸುಗುಣಕ್ಕ,

ಛಾಯಾಗ್ರಾಹಕರಿಲ್ಲದಿದ್ದಲ್ಲಿ ಪತ್ರಿಕೆಗೆ ಫೋಟೊಗಳು ಇರುತ್ತಿರಲಿಲ್ಲ. ಅವರಿಗೆ ಈ ವಿಚಾರದ ಅರಿವಿದ್ದಲ್ಲಿ ಹೀಗೆಲ್ಲಾ ಬರೆಯಲು ಆಗುತ್ತಿರಲಿಲ್ಲ.

shivu.k said...

ಸುನಾಥ ಸರ್,
ವನ್ಯಜೀವಿಗಳ ಫೋಟೊಗ್ರಫಿ ಬೇಕಾದ ತಾಳ್ಮೆ ಇಂಥ ಲೇಖನವನ್ನು ಬರೆಯುವಾಗ ಬೇಕಾಗುವುದಿಲ್ಲ. ಅದಕ್ಕೆ ಇಂಥ ಲೇಖನಗಳು ಸುಲಭವಾಗಿ ಪ್ರಕಟವಾಗಿಬಿಡುತ್ತವೆ. ಘನಶ್ಯಾಂ ಕೂಡ ಛಾಯಾಗ್ರಾಹಕ ಹೌದು. ಆದ್ರೆ ಅವರೆಲ್ಲಾ ಯಾವುದೇ ಹಕ್ಕಿ ಫೋಟೊಗ್ರಫಿ ಮಾಡಿದ ಅನುಭವವಿಲ್ಲವೆನ್ನುವುದು ಈ ಲೇಖನದಿಂದ ಗೊತ್ತಾಗುತ್ತದೆ. ಅದಕ್ಕಿಂತ ಹೆಚ್ಚಾಗಿ ಅವರು ಬರೆದ ಲೇಖನವನ್ನು ಪ್ರಕಟಿಸುವ ಮೊದಲು ಪರಾಮರ್ಶಿಸದೆ ಇಂಥವಕ್ಕೆ ಕಾರಣವಾಗುತ್ತದೆ..
ಈಗ ಬ್ಲಾಗಿನಲ್ಲಿ ಪ್ರಜಾವಾಣಿ ಲೇಖನದ ಲಿಂಕ್ ಕೊಟ್ಟಿದ್ದೇನೆ. ಒಮ್ಮೆ ಓದಿನೋಡಿ ಸರ್..
ಪ್ರತಿಕ್ರಿಯೆಗೆ ಧನ್ಯವಾದಗಳು.

shivu.k said...

Chaitrika,

ಬೆಕ್ಕಿನ ಫೋಟೊಗ್ರಫಿಯಲ್ಲಿ ಆದ ಅನುಭವದಿಂದಾಗಿ ನಮ್ಮ ವನ್ಯ ಜೀವಿ ಫೋಟೊಗ್ರಫಿ ಎಷ್ಟು ಕಷ್ಟವಿರಬಹುದು ಅಂತ ನಿಮಗೆ ಅನಿಸಿದೆ. ಆದ್ರೆ ಈ ಲೇಖನ ಬರೆದವರು ಒಮ್ಮೆ ಕಾಡು ಮೇಡು ಅಲೆದು ಇಂಥ ಫೋಟೊಗ್ರಫಿ ಮಾಡಿ ಅದರ ಬಗ್ಗೆ ಪ್ರೀತಿ ಬೆಳೆಸಿಕೊಂಡಿದ್ದರೆ ಖಂಡಿತ ಇಂಥ ಲೇಖನವನ್ನು ಬರೆಯುತ್ತಿರಲಿಲ್ಲ..
ಪ್ರಜಾವಾಣಿಯ ಲೇಖನವನ್ನು ಬ್ಲಾಗಿನ ಲಿಂಕ್ ಕ್ಲಿಕ್ಕಿಸಿ...
ಪ್ರತಿಕ್ರಿಯೆಗೆ ಧನ್ಯವಾದಗಳು.

shivu.k said...

ಸಂದೀಪ್ ಕಾಮತ್,

ತಾಳ್ಮೆ ಫೋಟೊಗ್ರಫಿಯಲ್ಲಿ ಖಂಡಿತ ಮುಖ್ಯವಲ್ಲವೇ...ಮತ್ತೆ ಹಕ್ಕಿಗೆ ಕಲ್ಲು ಹೊಡೆಯುವ ವಿಚಾರವಾಗಿ ನಿಮ್ಮ ಅಭಿಪ್ರಾಯ ಮಂಡಿಸಿದ್ದೀರಿ..ಅದಕ್ಕಾಗಿ ಥ್ಯಾಂಕ್ಸ್..
ಈಗ ಬ್ಲಾಗಿನಲ್ಲಿ ಪ್ರಜಾವಾಣಿ ಲೇಖನದ ಲಿಂಕ್ ಕೊಟ್ಟಿದ್ದೇನೆ. ಒಮ್ಮೆ ಓದಿನೋಡಿ..

ಪ್ರತಿಕ್ರಿಯೆಗೆ ಧನ್ಯವಾದಗಳು.

shivu.k said...

ಪರಂಜಪೆ ಸರ್,

ಮೊದಲಿಗೆ ಈಗ ಪ್ರಜಾವಾಣಿಯ ಲೇಖನದ ಲಿಂಕ್ ಕೊಟ್ಟಿದ್ದೇನೆ. ಮೊದಲು ಅದನ್ನು ಓದಿಬಿಡಿ.

ಇಂಥ ಲೇಖನವನ್ನು ಬರೆಯುವ ಮೊದಲು ಒಮ್ಮೆ ಕಾಡುಮೇಡು ಊರೂರು ತಿರುಗಿ ಪಕ್ಷಿ ವೀಕ್ಷಣೆ ಹೇಗಿರುತ್ತದೆ. ಮತ್ತು ಫೋಟೊಗ್ರಫಿ ಹೇಗಿರುತ್ತದೆ ಎನ್ನುವ ವಿಚಾರವನ್ನು ತಿಳಿಯಬೇಕು. ಹೀಗೆ ಹವಾನಿಯಂತ್ರಿತ ಕಚೇರಿಯಲ್ಲಿ ಕುಳಿತು ಬರೆದರೆ ಬರುವ ಲೇಖನಗಳು ಇಂಥವು. ಹೋಗಲಿ ಯಾರಾದರೂ ಅಷ್ಟೇಲ್ಲಾ ತಾಳ್ಮೆ ಸಾಹಸಗಳನ್ನು ಮಾಡಿ ಚಿತ್ರಸಹಿತ ಲೇಖನವನ್ನು ಕೊಟ್ಟರೆ ಅದನ್ನು ಪ್ರಕಟಿಸುವ ಮನಸ್ಸು ಮಾಡುವುದಿಲ್ಲ. ಏಕೆಂದರೆ ಅವರಿಗೆ ಅನುಭವವಾಗಿಲ್ಲವಾದ್ದರಿಂದ ಪ್ರಕಟವಾಗುವುದಿಲ್ಲ. ಹೀಗೆ ನಿಮ್ಮ ಲೇಖನಕ್ಕೂ ಆಗಿದೆ. ನನಗೆ ಹೀಗೆ ಆಗಿರುವುದಕ್ಕೆ ಲೆಕ್ಕವೇ ಇಲ್ಲ.
ಹೊರಗಿನವರಿಗೆ ಅವಕಾಶವನ್ನು ಕೊಡದೇ ಅವರು ಹೀಗೆ ಕಛೇರಿಯಲ್ಲಿ ಕುಳಿತು ಬರೆದರೆ ಹೀಗೆಲ್ಲಾ ಆಗುತ್ತದೆ..
ನೀವು ಹೇಳಿದ ತಪ್ಪನ್ನು ತಿದ್ದಿಕೊಂಡಿದ್ದೇನೆ..
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.

shivu.k said...

ಘನಶ್ಯಾಮ್,

ನೀವು ಇದಕ್ಕೆ ಉತ್ತರಿಸಲು ಸಾಧ್ಯವಿಲ್ಲವೆಂದು ನನಗೆ ಗೊತ್ತು. ನಾನು ಮೊದಲು ಸಾಪ್ತಾಹಿಕಕ್ಕೆ ಮೇಲ್ ಮಾಡುವ ಸಮಯದಲ್ಲಿ ನಿಮ್ಮ ಮೇಲ್ ಐಡಿ ಸಿಕ್ಕಿತು ಅದಕ್ಕೆ ಮೇಲ್ ಮಾಡಿದೆ.

ನೇರ ವಿಷಯಕ್ಕೆ ಬರುತ್ತೇನೆ. ನಾನು ಪೂರ್ತಿ ಲೇಖನವನ್ನು ಓದಿದ ಮೇಲೆ ಅದರಲ್ಲಿ ಒಂದಷ್ಟು ತಿರುಳಿಲ್ಲ. ಏಕೆಂದರೆ ಫೋಟೊಗ್ರಫಿಗಾಗಿ ವೈಯಕ್ತಿಕವಾಗಿ ಕ್ಯಾಮೆರ ಹಿಡಿದು ಕಾಡಿಗೆ, ಪಕ್ಷಿಗಳ ವೀಕ್ಷಣೆಗೆ, ಅದರ ಅಭ್ಯಾಸಕ್ಕೆ ದಿನವೆಲ್ಲಾ ತಾಳ್ಮೆಯಿಂದ ಸುತ್ತಾಡಿ ಪ್ರಯತ್ನ ಮಾಡಿದರೆ ಹೀಗೆ ಬರೆಯಲು ಸಾಧ್ಯವಿಲ್ಲ. ಇಂಥ ಲೇಖನಗಳನ್ನು ಬರೆಯುವ ಮೊದಲು ಯಾರಾದರೂ ಉತ್ತಮ ವನ್ಯಜೀವಿ ಛಾಯಾಗ್ರಾಹಕರ ಜೊತೆಗೆ ಫೋಟೊಗ್ರಫಿಗಾಗಿ ದಿನವೆಲ್ಲಾ ಓಡಾಡಿ ಅನುಭವ ಪಡೆದಕೊಂಡರೆ ಉತ್ತಮ. ಅದು ಸಾಧ್ಯವಿಲ್ಲವೆನ್ನುವುದಾದರೆ ಅದರ ಬದಲು ಮನೆಯಲ್ಲಿ ಕುಳಿತು ಸುಲಭವಾಗಿ ಹೀಗೆ ಬರೆಯಬಹುದು. ಸದ್ಯ ನಾನು ಛಾಯಾಗ್ರಾಹಕನಲ್ಲ. ಘನಶ್ಯಾಂಗೆ ಗೆಳೆಯನಲ್ಲ. ಹೀಗೆ ಅಂದುಕೊಂಡು ಯಾವುದೇ ಪೂರ್ವಗ್ರಹ ಪೀಡಿತನಾಗದೆ ಸಾಮಾನ್ಯ ಓದುಗನಾಗಿ ಲೇಖನವನ್ನು ಓದಿದರೂ ನನಗೆ ಅನ್ನಿಸಿದ್ದು ಈ ಕೆಳಗಿನಂತೆ.
ಮೊದಲನೆಯದಾಗಿ ಪಕ್ಷಿಗಳ ಫೋಟೊ ತೆಗೆಯುವವರು ಇಷ್ಟೊಂದು ಕೆಟ್ಟವರ? ಅಂತ...ನನಗನ್ನಿಸಿದ್ದು ಈ ಲೇಖನ ಓದುವ ಸಾರ್ವಜನಿಕರಿಗೂ ಅನ್ನಿಸುವುದು ಖಚಿತ. ಅವರಿಗೆ ನಮ್ಮ ಮೇಲಿರುವ ಗೌರವ ಇಲ್ಲವಾಗಿ ನಮ್ಮನ್ನು ಚೀಪ್ ಆಗಿ ಗುರುತಿಸಲು ಪ್ರಯತ್ನಿಸುತ್ತಾರೆ..

ಎರಡನೆದಾಗಿ ಛಾಯಾಗ್ರಾಹಕನಾಗಿ ಓದುವುದು ಮುಖ್ಯ. ಮೇಲೆ ವಿವರಿಸಿದ ಛಾಯಗ್ರಾಹಕನ ಅನುಭವವಾಗಿದ್ದಲ್ಲಿ ಈ ಲೇಖನ ಬೇರೆ ರೀತಿಯಾಗಿರುತ್ತಿತ್ತು. ಅದಾಗದೇ ಇರುವುದರಿಂದ ಆತುರದಲ್ಲಿ ಬರೆದ ಲೇಖನ ಬೇಗ ಪ್ರಕಟವಾಗಿಬಿಡಲಿ ಎನ್ನುವ "ಹಪಾಹಪಿತನ"ವಿದೆ ಅಂತ ನನಗನ್ನಿಸಿತ್ತು. ಅದನ್ನು ನೀವು ಸ್ವೀಕರಿಸುವುದು ಬಿಡುವುದು ನಿಮಗೆ ಸೇರಿದ್ದು.

ಸದ್ಯ ನೀವು ಹೊಸದಾಗಿ ಛಾಯಾಗ್ರಾಹಕರ ಬಗ್ಗೆ ಸಾರ್ವಜನಿಕರ ಅಭಿಪ್ರಾಯವನ್ನು ರೂಪಿಸಲು ಹೊರಟಿದ್ದೀರಿ..ಅದೂ ಈ ವಿಚಾರದಲ್ಲಿ ಏನೇನು ಅನುಭವವಿಲ್ಲದೇ. ಮತ್ತೆ ಇದನ್ನು ಬ್ಲಾಗಿನಲ್ಲಿ ಓದಿದವರು ಸರಿಯಾಗಿ ಅರ್ಥಮಾಡಿಕೊಂಡಿದ್ದಾರೆ. ಏಕೆಂದರೆ ಅವರಲ್ಲಿ ಆನೇಕರು ಛಾಯಾಗ್ರಾಹಕರು. ಅವರು ಅನೇಕ ಲೇಖನಗಳನ್ನು ಪತ್ರಿಕೆಗಳಲ್ಲಿ ಮತ್ತು ತಮ್ಮ ಬ್ಲಾಗುಗಳಲ್ಲಿ ಬರೆದಿದ್ದಾರೆ.

ಮತ್ತೆ ನಾನು ಬೆಳೆಯುವ ಎತ್ತರ ನನಗೆ ಮತ್ತು ನನ್ನ ಗೆಳೆಯರಿಗೆ ಅದಕ್ಕಿಂತ ನನ್ನ ತಂದೆತಾಯಿಗೆ ಗೊತ್ತಿರುತ್ತದೆ. ಅದು ಬೇರೆಯವರಿಂದ ತಿಳಿದುಕೊಳ್ಳುವ ಅವಶ್ಯಕತೆ ನನಗಿಲ್ಲ.

ಮತ್ತೆ ಇನ್ನೊಮ್ಮೆ ನಿದಾನವಾಗಿ ಒಬ್ಬ ಸಾಮಾನ್ಯ ಓದುಗನಾಗಿ ಮತ್ತು ವನ್ಯ ಜೀವಿ ಛಾಯಾಗ್ರಾಹಕನಾಗಿ ಪೂರ್ತಿ ಓದಿದರೆ ಅದರ ಪೂರ್ಣ ಭಾವಾರ್ಥ ಗೊತ್ತಾಗಬಹುದು..

ಒಂದು ಲೇಖನಕ್ಕೆ ಪರ ಮತ್ತು ವಿರೋಧ ಪ್ರತಿಕ್ರಿಯೆ ಬರುತ್ತದೆ. ಅದನ್ನು ಸಮಾನವಾಗಿ ಸ್ವೀಕರಿಸಿದರು ಬೆಳೆಯುತ್ತಾರೆ ಅಂದುಕೊಳ್ಳುತ್ತೇನೆ. ಇಲ್ಲವಾದಲ್ಲಿ ಮತ್ತಷ್ಟು ಇಂಥ ಲೇಖನಗಳು ಬರುವ ಸಾಧ್ಯತೆಗಳು ಹೆಚ್ಚು. ಬರಹಕ್ಕೂ ಗೆಳತನಕ್ಕೂ ಲಿಂಕ್ ಮಾಡುವವರು ಬೆಳೆಯುವ ಸಾಧ್ಯತೆ ಕಡಿಮೆ. ಮತ್ತೆ ನಾನು ಎಂದು ಪ್ರೀತಿಯ ಗೆಳೆಯನಾಗಿರಲಿಲ್ಲ. ಈಗಲೂ ಆಗಿಲ್ಲವಾಗಿದ್ದರಿಂದ ಅದರ ಬಗ್ಗೆ ನನಗೆ ಚಿಂತೆಯಿಲ್ಲ.
ಶಿವು.ಕೆ

ದೀಪಸ್ಮಿತಾ said...

ವನ್ಯಜೀವಿ ಛಾಯಾಗ್ರಹಣ ಬೇರೆ ಛಾಯಾಗ್ರಹಣಕ್ಕಿಂತ ಕಷ್ಟಕರವಾದದ್ದು. ವನ್ಯಜೀವಿಗಳ ಬಗ್ಗೆ ಆಳವಾದ ಅಧ್ಯಯನ, ತಾಳ್ಮೆ, ತಾಂತ್ರಿಕ ಜ್ಞಾನ ತುಂಬಾ ಅಗತ್ಯ. ನೀವು ಬರೆದಂತೆ ಹೆಚ್ಚಿನ ವನ್ಯಜೀವಿ ಛಾಯಾಗ್ರಾಹಕರು ಈ ಗುಣಗಳನ್ನು ಹೊಂದಿರುತ್ತಾರೆ. ಎಲ್ಲೋ ಕೆಲ ಆತುರಗಾರರು ಘನಶ್ಯಾಮ್ ಬರೆದಂತೆ ಇರಬಹುದು ಅಷ್ಟೆ

shivu.k said...

ಕುಲದೀಪ್ ಸರ್,

ನಮ್ಮ ಘನಶ್ಯಾಮ್‍ಗೆ ಹಾಗೆ ಹೇಳುವಂತಿಲ್ಲ. ಏಕೆಂದರೆ ಅವರಿಗೆ ಬ್ಲಾಗ್ ಪ್ರತಿಕ್ರಿಯೆ ನೀಡುವವರ ಮೇಲೆ ಕೋಪವಿದೆ.
ನೀವು ನಿಮ್ಮ ಅನಿಸಿಕೆಯನ್ನು ಪ್ರಜಾವಾಣಿ ಸಾಪ್ತಾಹಿಕಕ್ಕೆ ಈ ಲೇಖನದ ಬಗ್ಗೆ ಬರೆದು ಕೇಳಬಹುದು ಸರ್..
ಪ್ರತಿಕ್ರಿಯೆಗೆ ಧನ್ಯವಾದಗಳು.

balasubramanya said...
This comment has been removed by the author.
NilGiri said...

ಶಿವು ಬೇಸರ ಬೇಡ,
ಪ್ರಾಣಿ, ಪಕ್ಷಿಗಳ ಫೋಟೋ ತೆಗೆಯುವುದು ಎಷ್ಟು ಕಷ್ಟವೆಂಬುದು ನನ್ನ ಅನುಭವಕ್ಕೇ ಬಂದಿದೆ. ಇಲ್ಲಿ ಸೀಸನ್ನಿನಲ್ಲಷ್ಟೇ ಕಾಣಸಿಗುವ ಕ್ಯಾಲಿಫೋರ್ನಿಯಾ ಕ್ವೇಲ್ ನಮ್ಮ ಮನೆಯ ಬಳಿಯೇ ಬಂದಿದ್ದರ ವಿಡಿಯೋ ತೆಗೆಯಲು ನಾನು ಪಟ್ಟ ಕಷ್ಟ ಅಷ್ಟಿಷ್ಟಲ್ಲ!http://www.youtube.com/watch?v=1dCxuL_rm_s&feature=player_embedded
(ಅಂದ ಹಾಗೆ " ನಾನು ಈ ವಿಡಿಯೋ ತೆಗೆದದ್ದು ಮನೆಯೊಳಗಿಂದ....ಹಕ್ಕಿಯನ್ನು ಓಡಿಸಿಕೊಂಡಲ್ಲ!!)

ಸ್ವಚ್ಛಂದವಾಗಿ ಹಾರುವ ಏಷ್ಟೋ ಪಕ್ಷಿಗಳ ಚಿತ್ರಗಳನ್ನು ನಾನು ನೋಡಿದ್ದೇನೆ.(ಘನಶ್ಯಾಮರು ಪಟ್ಟಿ ಮಾಡಿರುವ ಒಳ್ಳೆ ಫೋಟೋಗಳಿರಬೇಕಾದ ಎಲ್ಲಾ ಅಂಶಗಳಿರುವ) ಅವಕ್ಕೆಲ್ಲಾ ಕಲ್ಲು ಬೀಸಿ ಹೊಡೆದು ಫೋಟೋ ತೆಗೆದಿರುತ್ತಾರೆಯೇ?!

ಹಿಂದೆ (ಈಗಿನದ್ದು ಗೊತ್ತಿಲ್ಲ ) ಪ್ರಜಾವಾಣಿಯಲ್ಲೇ ಎಷ್ಟೋ ಪ್ರಾಣಿ ಪಕ್ಷಿಗಳ ಚಿತ್ರಗಳು ಬಂದಿವೆಯಲ್ಲ!ಹಾಗಿದ್ದರೆ, ಇನ್ನು ಮುಂದೆ ಪ್ರಜಾವಾಣಿಯಲ್ಲಿ ಯಾವುದೇ ಪ್ರಾಣಿ ಪಕ್ಷಿಗಳ ಚಿತ್ರಗಳು ಬರುವುದಿಲ್ಲವೆಂದಾಯ್ತು!!

ಘನಶ್ಯಾಮರಿಗೆ ಬ್ಲಾಗಿಗರ ಬಗ್ಗೆ ಇರುವ ಅಭಿಪ್ರಾಯವೇನೆಂಬುದು ಅವರ ಪ್ರತಿಕ್ರಿಯೆಯಿಂದ ಗೊತ್ತಾಯಿತು. ಇನ್ನು ಅವರ ಬಗ್ಗೆ ನಮಗೆ ತಿಳಿಯಬೇಕಾದುದೇನು ಇಲ್ಲ.

Dr.D.T.Krishna Murthy. said...

ಶಿವು;ಘನಶ್ಯಾಮ್ ಅವರ ಲೇಖನ ಖಂಡನೀಯ.ನೀವು ನಿಮ್ಮ ಪಾಡಿಗೆ ಕೆಲಸ ಮುಂದುವರಿಸಿ.ವಿವೇಚನೆ ಇಲ್ಲದೆ ಬರೆದ ಲೇಖನದ ಬಗ್ಗೆ ತಲೆ ಕೆಡಿಸಿಕೊಳ್ಳುವುದು ಅನಾವಶ್ಯಕ.

Unknown said...

ಶಿವೂ ಸಾರ್ ನಮಸ್ತೆ ,

ಪ್ರಜಾವಾಣಿ ಯಲ್ಲಿ ಬಂದ ಲೇಖನ ಮತ್ತು ನಿಮ್ಮ ಪ್ರತಿಕ್ರಿಯೆ ಎರಡೂ ಓದಿದೆ... ನನಗೆ ಅನಿಸಿದ್ದಿಷ್ಟು... ಬಹುಶ ಪ್ರಜಾವಾಣಿಯವರು ಮೊದಲರ್ಧ ಲೇಖನ ಬಿಟ್ಟು ಉಳಿದರ್ಧ ಲೇಖನ ಮಾತ್ರ ಪ್ರಕಟಿಸಿದ್ದರೆ ಸಾಕಿತ್ತು.. :-)

ಫೋಟೋ ತೆಗೆಯುವವರು ಅದೇನು ಮಾಡ್ತಾರೋ ನನಗಂತೂ ಗೊತ್ತಿಲ್ಲ, ಅವೆಲ್ಲ ನನ್ನಿಂದಾಗದ ಕೆಲಸ ಅಂತ ನಾನು ಅದ್ರ ಬಗ್ಗೆ ಯೋಚಿಸಿಯೂ ಇಲ್ಲ, ಆದ್ರೆ ಬ್ಲಾಗ್ ನಲ್ಲಿ ನಿಮ್ಮ ಲೇಖನ ಗಳನ್ನೂ ಓದಿ , ಚಿತ್ರಗಳನ್ನು ನೋಡಿ ನಾನೂ ಪಕ್ಷಿ ಪ್ರೆಮಿಯಾಗಿದ್ದೇನೆ ಅಂತ ಈ ಹಿಂದೆಯೇ ಹೇಳಿದ್ದೇನೆ... ಅದರಂತೆ ಮನೆಯಲ್ಲಿ ಗುಬ್ಬಚ್ಚಿಗಳಿಗಾಗಿ ಗೂಡು ಕಟ್ಟಿ ಅವು ಬರಬಹುದು ಅಂತ ವಾರಗಟ್ಟಲೆ ಕಾದು ಕೂತವನು ನಾನು.. ಒಂದು ಗುಬ್ಬಚ್ಚಿಯಂತೂ ಬಂದಿತ್ತು ಆದರೆ ಆಮೇಲೆ ಎಲ್ಲಿ ಹೋಯಿತು ತಿಳಿಯಲಿಲ್ಲ... ಇದಕ್ಕೆಲ್ಲ ಪ್ರೇರಣೆ ನಿಮ್ಮಂಥವರ ಲೇಖನ ಓದಿ ಆ ಬಗ್ಗೆ ಆಸಕ್ತಿ ಹೊಂದಿದ್ದು.. ಫೋಟೋ ಗ್ರಾಪ್ಹೆರ್ ಗಳು ಮಾಡೋ ದೊಡ್ಡ ಕೆಲಸವೇ ಅದು, ಜನ ಸಾಮಾನ್ಯರಲ್ಲಿ ಪ್ರಾಣಿ ಪಕ್ಷಿಗಳ ಬಗ್ಗೆ ಜ್ಞಾನ ಮೂಡಿಸಿ ಅವುಗಳ ಉಳಿವಿಗಾಗಿ ಉತ್ತೇಜಿಸುವುದು ... ನಿಮ್ಮ ಕೆಲಸ ನೀವು ಮಾಡ್ತಾ ಇದ್ದೀರಾ, ಮುಂದುವರೆಸಿ...

Anonymous said...

ನೀವು ಹೆಗಲು ಮುಟ್ಕೊಳೋದನ್ನ ನೋಡಿದ್ರೆ ಕಲ್ಲು ಹೊಡೆದು ಹಕ್ಕಿ ಹಾರಿಸಿದವರು ನೀವೇನಾ ಅಂತ ಡೌಟ್....! ನಿಮ್ಮ ಪ್ರಸಿದ್ಧ ಚಿತ್ರಗಳಿಗೆ ಮಕ್ಳನ್ನ ಹೀಗೆ ನಿಂತ್ಕೊಳ್ಳಿ, ಹಾಗೆ ನೀರು ಹಾರ್ಸಿ ಅಂತ ಹೇಳ್ಕೊಟ್ಟು ಫೋಟೋ ತೆಗೆದಾಗೆ...... ಅಲ್ಲವ್ರ?

Anonymous said...

ನಿಮ್ಮ ಅವಗಾಹನೆಗೆ....
ಘನಶ್ಯಾಮ ಅವರ ಬರಹದಲ್ಲಿ ಮಾಹಿತಿಯ ಕೊರತೆ ಇರಬಹುದು. ಆದರೆ ಒಟ್ಟಾರೆ ಲೇಖನ ಖಂಡಿತವಾಗಿ ಛಾಯಾಚಿತ್ರಗ್ರಾಹಕರೆಲ್ಲರನ್ನು generalize ಮಾಡಿ ಒಂದೇ ತಕ್ಕಡಿಯಲ್ಲಂತೂ ಕೂರಿಸಿಲ್ಲ. ಗೀಜಗನ ಗೂಡು ಕಿತ್ತು ತಂದು ಫೋಟೋ ಹೊಡೆಯುತ್ತಿದ್ದ photographerನನ್ನು ನಾನು ಮೈಸೂರಿಗೆ ಸಮೀಪದ ಬಲಮುರಿಯಲ್ಲೊಮ್ಮೆ ಕಂಡಿದ್ದೆ. (ಅವನು ನಿಜವಾದ wildlife photographer ಆಗಿದ್ದರೆ ಅವನಲ್ಲಿ zoom lenses ಇರ್ತಿತ್ತು. ಗೂಡು ಕಿತ್ತು ತಂದು ಫೋಟೋ ಹೊಡೆಯುವ ಸಂದರ್ಭವೇ ಇರ್ತಿರ್ಲಿಲ್ಲ ಅಂತೆಲ್ಲ ಹೇಳಿ ನಗು ಬರಿಸ್ಬೇಡಿ ಮತ್ತೆ...!) ಹಾಗೆಯೇ ಕಾರಂಜಿಕೆರೆಯಲ್ಲೊಮ್ಮೆ ಗೂಡಿನಿಂದ ಕೆಳಬಿದ್ದ ಪುಟ್ಟ ಪಕ್ಷಿಯೊಂದನ್ನು (ಬಹುಶಹ ಹೆಜ್ಜಾರ್ಲೆಯಿರಬೇಕು) ಸುತ್ತ ನಿಂತು ಕಡ್ಡಿಯಲ್ಲಿ ಬಾಯಿ ತೆರೆಸಲು ಕಸರತ್ತು ಮಾಡುವ photographerನನ್ನೂ ನೋಡಿದ್ದೆ . ಎಲ್ಲರೂ ಹಾಗಲ್ಲ. ಆದರೆ ಅಂತವರಿರುವುದು ಸುಳ್ಳಲ್ಲ.
ನೀವು ಹೇಳಿದಂತೆ ಘನಶ್ಯಾಮರು ಪಕ್ಷಿ ಛಾಯಾಗ್ರಹಣವನ್ನೇ ವಿರೋಧಿಸುವಂತಿದ್ದರೆ ಕೊನೆಗೆ ಉತ್ತಮ ಛಾಯಾಚಿತ್ರ ಹೇಗಿರಬೇಕು ಎಂಬ ಟಿಪ್ಸ್ ಗಳನ್ನು ಕೊಡುವ ಅಗತ್ಯವಿರಲಿಲ್ಲ. ಗಮನಿಸಿ ನೋಡಿ...
- ಮೀಂಜೆ

shivu.k said...

ನೀಲಗಿರಿ ಬ್ಲಾಗಿನ ಗಿರಿಜಕ್ಕ,

ನೀವು ಮತ್ತೆ ಬ್ಲಾಗ್ ಲೋಕಕ್ಕೆ ಬರುತ್ತಿರುವುದು ಖುಷಿವಿಚಾರ. ನನ್ನ ಬ್ಲಾಗಿಗೆ ಸ್ವಾಗತ.

ನನ್ನ ಪ್ರತಿಕ್ರಿಯೆಗೆ ತಕ್ಕಂತೆ ನಿಮ್ಮ ಊರಿನಲ್ಲಿ ಹಕ್ಕಿಯ ಫೋಟೊಗ್ರಫಿ ಅನುಭವವನ್ನು ವಿಡಿಯೋ ಸಮೇತ ಕೊಟ್ಟಿದ್ದೀರಿ.ಇದರಿಂದಲಾದರೂ ಬರೆದವರೆಗೆ ಅರಿವಾದರೆ ಸಾಕು.
ಮತ್ತೆ ಅವರ ಲೇಖನದ ಸಮರ್ಥಿಸಿಕೊಂಡಿರುವುದರ ಪ್ರಕಾರ ಗೂಡುಗಳಲ್ಲಿರುವ ಹಕ್ಕಿಗಳು..ಹಾರುತ್ತಿರುವ ಹಕ್ಕಿಗಳು ಚಿತ್ರಗಳು ಅವರ ಪತ್ರಿಕೆಯಲ್ಲಿ ಪ್ರಕಟವಾಗುವುದಿಲ್ಲವೆಂದು ನಂಬಿದ್ದೇನೆ.
ಆದ್ರೆ ಜಾಣಮರೆವು ತೋರಿ ಪ್ರಕಟವಾದಲ್ಲಿ "ಮಾಡೋದು ಅನಾಚಾರ ಮನೆಮುಂದೆ ಬೃಂದಾವನ"ಎನ್ನುವಂತೆ ಆಗುತ್ತದೆ. ನೋಡೋಣ ಏನು ಮಾಡುತ್ತಾರೋ ಅಂತ..
ನಿಮ್ಮ ಕಾಳಜಿಪೂರ್ವ ಪ್ರತಿಕ್ರಿಯೆಗೆ ಧನ್ಯವಾದಗಳು.

shivu.k said...

ಡಾಕ್ಟ್ರೆ,
ನನ್ನ ಕೆಲಸ ಸಹಜವಾಗಿ ಮುಂದುವರಿದಿದೆ. ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು.

shivu.k said...

ರವಿಕಾಂತ್ ಸರ್, ನಮಸ್ತೆ,

ನಿಮ್ಮ ಪ್ರತಿಕ್ರಿಯೆ ಸರಿಯೆನ್ನಿಸುತ್ತೆ.. ಅವರು ದ್ವಿತಿಯಾರ್ಧ ಲೇಖನವನ್ನು ಪ್ರಕಟಿಸಿದ್ದಲ್ಲಿ ಖಂಡಿತ ಇಷ್ಟೆಲ್ಲಾ ಅವಾಂತರ ಆಗುತ್ತಿರಲಿಲ್ಲ.

ಉತ್ತಮ ಫೋಟೊಗಳನ್ನು ನೀವು ಫೋಟೊಗ್ರಫಿ ಅಭಿಮಾನಿಯಾಗಿರುವುದು ಅದರಲ್ಲೂ ಬ್ಲಾಗಿನಲ್ಲಿ ಬರುತ್ತಿರುವ ಫೋಟೊಗಳನ್ನು ಫೋಟೋಗ್ರಫಿ ಆಸಕ್ತಿ ಬೆಳೆಸಿಕೊಂಡಿರುವುದು ನಮಗೆಲ್ಲಾ ಖುಷಿತರುವ ವಿಚಾರ. ಪತ್ರಿಕೆಗಳು ಮಾಡಬೇಕಾದ ಕೆಲಸಗಳನ್ನು ಬ್ಲಾಗುಗಳು ಮಾಡುತ್ತಿರುವುದು ಇದರಿಂದ ಗೊತ್ತಾಗುತ್ತಿವೆ.
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.

shivu.k said...

Anonymous,

ಮೊದಲಿಗೆ ನಿಮಗೆ ಉತ್ತರ ಕೊಡುವ ಅಗತ್ಯ ನನಗಿಲ್ಲ. ಆದ್ರೂ ಕೊಡುತ್ತಿದ್ದೇನೆ. ಏಕೆಂದರೆ ನಾನು ಆ ಲೇಖನದ ವಿರುದ್ಧ ನೇರವಾಗಿ ಎದುರಲ್ಲಿ ವಿರೋಧಿಸಿದ್ದೇನೆ. ನಿಮ್ಮಂತೆ ಅನಾನಿಮಿಯಸ್ ಆಗಿ ಅಲ್ಲ. ನಾನು ಹೆಗಲು ಮುಟ್ಟಿನೋಡಿಕೊಂಡಿದ್ದೇನೆ ಅಂದುಕೊಂಡರೂ ನನ್ನಂತೆ ಹತ್ತಾರು ಛಾಯಾಗ್ರಾಹಕರು ಹೀಗೆ ಹೆಗಲು ಮುಟ್ಟಿನೋಡಿಕೊಂಡು ಸಂಪಾದಕರಿಗೆ ಪತ್ರ ಬರೆದಿದ್ದಾರೆ. ಅದನ್ನು ತಿಳಿದುಕೊಳ್ಳಲು ನೀವು ಸಂಪಾದಕರನ್ನು ಸಂಪರ್ಕಿಸುವುದು ಒಳಿತು. ನಿಮ್ಮ ಮೇಲ್ ಐಡಿಯನ್ನೋ ಅಥವ ಹೆಸರನ್ನೋ ತಿಳಿಸಿದರೆ ಅವರಿಗೆಲ್ಲಾ ತಿಳಿಸುತ್ತೇನೆ. ಅವರಿಗೆಲ್ಲಾ ಉತ್ತರಿಸಬೇಕಾಗುತ್ತದೆ. ಫೋನ್ ನಂಬರ್ ಕೊಟ್ಟರೆ ತುಂಬಾ ಒಳ್ಳೆಯದು.

ಮತ್ತೆ ಇಲ್ಲಿ ಚರ್ಚೆಯಾಗುತ್ತಿರುವುದು ಹಕ್ಕಿಗಳ ಫೋಟೊಗ್ರಫಿ ಬಗ್ಗೆ. ನೀವು ಹೇಳುತ್ತಿರುವುದು ನನ್ನ ಪಿಕ್ಟೋರಿಯಲ್ ಫೋಟೊಗ್ರಫಿ ಬಗ್ಗೆ. ನಾನು ಹಾಗೆ ಮಾಡಿ ತೆಗೆದ ಫೋಟೊಗ್ರಫಿಗೆ ಲಂಡನ್ನಿನ "ರಾಯಲ್ ಫೋಟೊಗ್ರಫಿ ಸೊಸೈಟಿ" ಮತ್ತು ಪ್ಯಾರಿಸ್ಸಿನ "ಫೆಡರೇಷನ್ ಇಂಟರ್‍ನ್ಯಾಷನಲ್ ಡಿ ಲ ಆರ್ಟ್ ಫೋಟೊಗ್ರಫಿ" ಎನ್ನುವ ಅಂತರರಾಷ್ಟ್ರಿಯ ಫೋಟೊಗ್ರಫಿ ಸಂಸ್ಥೆಗಳಿಂದ ಮನ್ನಣೆ ದೊರಕಿದೆ. ನೀವು ಹೀಯಾಳಿಸಿರುವ ನನ್ನ ಫೋಟೊಗ್ರಫಿಗೆ ಡಿಷ್ಟಿಂಕ್ಷನ್ ಕೊಟ್ಟ ಇವೆರಡು ಸಂಸ್ಥೆಗಳಿಗೆ ಬುದ್ಧಿಯಿಲ್ಲ ಎಂದಾಯಿತು. ಇರಲಿ ಇವೆರಡರ ವ್ಯತ್ಯಾಸವನ್ನು ಮೊದಲು ತಿಳಿದುಕೊಳ್ಳಿ. ಒಮ್ಮೆ ಯಾವಾಗಾಲಾದರೂ ಸಿಕ್ಕರೆ ಇವೆರಡನ್ನು ತಿಳಿಸಿಕೊಡಲು ನಾನು ಸಿದ್ದ. ಯಾವಾಗ ಸಿಗುತ್ತೀರಿ ಹೇಳಿ..

shivu.k said...

Anonymous,

ಅನಾನಿಮಿಯಸ್ ಆಗಿ ಪ್ರತಿಕ್ರಿಯಿಸುತ್ತಿರುವ ನೀವು ಯಾರೋ ತಿಳಿಯದು. ನಿಮಗೂ ಉತ್ತರಿಸಬಾರದು ಎಂದುಕೊಂಡರೂ ನೀವು ಕೇಳಿರುವ ರೀತಿಯನ್ನು ಇಷ್ಟವಾಯಿತು..
ನೀವು ಹೇಳಿದಂತೆ ಅವರನ್ನು ಒಂದೇ ತಕ್ಕಡಿಯಲ್ಲಿ ಕೂರಿಸಿಲ್ಲವಾದಲ್ಲಿ ಅದನ್ನು ಸ್ಪಷ್ಟೀಕರಿಸಬೇಕಿತ್ತು. ಮತ್ತೆ ಇಂಥ ಲೇಖನಗಳನ್ನು ಬರೆಯುವಾಗ ದಾಖಲೆ ಮತ್ತು ಮಾಹಿತಿ ಪಕ್ಕಾ ಅಗಿದ್ದಲ್ಲಿ ಎಲ್ಲರೂ ಒಪ್ಪಬಹುದು. ಇಡೀ ಲೇಖನದಲ್ಲಿ ಎಲ್ಲೂ ಯಾವುದೇ ದಾಖಲೆಗಳಿಲ್ಲ.
ಮತ್ತೆ ಬೇಕಾದ ಹಾಗೆ ಬೇರೆಯವರ ಪುಸ್ತಕದಿಂದಲೋ ಅಥವ ಇಂಟರ್‍ನೆಟ್‍ನಿಂದಲೋ ಮಾಹಿತಿ ಪಡೆದುಕೊಂಡು ಬೇಕಾದಷ್ಟು ಟಿಪ್ಸ್ ಕೊಡಲಿ ಬೇಡವೆಂದವರು ಯಾರು. ಅದರ ಬಗ್ಗೆ ನಾನು ಪ್ರತಿಕ್ರಿಯಿಸಿಲ್ಲ.
ಹಕ್ಕಿ ಗೂಡಿನ ಫೋಟೊಗ್ರಫಿ ಮಾಡಬಾರದು ಅಂತ ಲೇಖನದಲ್ಲಿ ಬರೆದು ಅವತ್ತೇ ಪತ್ರಿಕೆಯಲ್ಲಿ ಪ್ರಕಟವಾದ ಹಕ್ಕಿಗೂಡು ಫೋಟೊಗೇ ಅವರಿಂದ ಉತ್ತರವಿಲ್ಲವಲ್ಲ. ಇದೆಲ್ಲಾ ನಿಮ್ಮ ಗಮನಕ್ಕೆ ಬಂದಿಲ್ಲವೇ...ಒಮ್ಮೆ ನೀವು ಸಂಪಾದಕರನ್ನು ಕೇಳಬಹುದು..
ಮತ್ತೆ ನೀವು ಅನಾನಿಮಿಯಸ್ ಅಗಿ ಪ್ರತಿಕ್ರಿಯಿಸಿದರೆ ನಾನು ಉತ್ತರಿಸಲಾರೆ. ನೇರವಾಗಿ ನಿಮ್ಮ ಮೇಲ್ ಐಡಿ ಅಥ್ವ ಹೆಸರಿದ್ದಲ್ಲಿ ಉತ್ತರಿಸುವೆನು..
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.

Anonymous said...

shivu . Ganashayma avara lekhana vannu artha maadikolli . nimage gottiRuvanthe yesto wildlife photographers yendu KaresiKolluva Janara chitraGalannu NOdidare VanyaGiviGala Pidaka RaagiDdare Yendu GottaguvudiLLave...? JAana Kurudu YAKE ? Ghana shama avaru PURAVE turisa bekilla KELAVARA chitra Ge helutave PURAVEgalannu...!!!!
LOKESH MOSALE

shivu.k said...
This comment has been removed by the author.
shivu.k said...

ಲೋಕೇಶ್ ಮೊಸಳೆಯವರೆ,

ಲೇಖನ ನನಗೆ ಅರ್ಥವಾಗಿದೆ. ನೀವು ಒಮ್ಮೆ ಸಾಮಾನ್ಯ ಓದುಗನಾಗಿ ಈ ಸಾಲುಗಳ ಅರ್ಥಮಾಡಿಕೊಳ್ಳಿ.

"ಪಕ್ಷಿಗಳ ಮಟ್ಟಿಗೆ ಹೆಸರು ಮಾಡುವ ಏಕೈಕ ಉದ್ದೇಶದಿಂದ ಬರುವ ಫೋಟೊಗ್ರಾಫರುಗಳೇ ದೊಡ್ಡ ಅಪತ್ತು. ಫೋಟೊ ಕ್ಲಿಕ್ಕಿಸುವ ಭರದಲ್ಲಿ ಇವರು ಮಾಡುವ ಅವಾಂತರ ಒಂದೆರಡಲ್ಲ, ನೇಚರ್ ಹಿಸ್ಟರಿ ಮತ್ತು ಪಕ್ಷಿಗಳ ಬದುಕಿನ ಮೂಲ ಜ್ಞಾನವನ್ನು ಸಂಪಾದಿಸಿಕೊಳ್ಳುವ ವ್ಯವಧಾನವಿಲ್ಲದ ಇಂಥವರಿಂದ ಪಕ್ಷಿಜಗತ್ತಿಗೆ ಆಪತ್ತು ಕಟ್ಟಿಟ್ಟ ಬುತ್ತಿ."

ಯಾವುದೇ ಮಾಹಿತಿ ಮತ್ತು ಆಧಾರವಿಲ್ಲದೆ ಸಾರ್ವಜನಿಕವಾಗಿ ಬರೆದಿರುವ ಈ ಸಾಲುಗಳು ಸಹಜವಾಗಿ ಸಾರ್ವಜನಿಕರಲ್ಲಿ ವನ್ಯ ಛಾಯಾಗ್ರಹಕರ ಬಗ್ಗೆ ಕೆಟ್ಟ ಅಭಿಪ್ರಾಯವನ್ನು ರೂಪಿಸುವುದಿಲ್ಲವೇ?

lokesh mosale said...

"ಪಕ್ಷಿಗಳ ಮಟ್ಟಿಗೆ ಹೆಸರು ಮಾಡುವ ಏಕೈಕ ಉದ್ದೇಶದಿಂದ ಬರುವ ಫೋಟೊಗ್ರಾಫರುಗಳೇ ದೊಡ್ಡ ಅಪತ್ತು. ಫೋಟೊ ಕ್ಲಿಕ್ಕಿಸುವ ಭರದಲ್ಲಿ ಇವರು ಮಾಡುವ ಅವಾಂತರ ಒಂದೆರಡಲ್ಲ, ನೇಚರ್ ಹಿಸ್ಟರಿ ಮತ್ತು ಪಕ್ಷಿಗಳ ಬದುಕಿನ ಮೂಲ ಜ್ಞಾನವನ್ನು ಸಂಪಾದಿಸಿಕೊಳ್ಳುವ ವ್ಯವಧಾನವಿಲ್ಲದ ಇಂಥವರಿಂದ ಪಕ್ಷಿಜಗತ್ತಿಗೆ ಆಪತ್ತು ಕಟ್ಟಿಟ್ಟ ಬುತ್ತಿ."
edu nijavaagide . hanavide yendu dodda dodda lense kondu wildlife photographers yendu pose koduva....ನೇಚರ್ ಹಿಸ್ಟರಿ ಮತ್ತು ಪಕ್ಷಿಗಳ ಬದುಕಿನ ಮೂಲ ಜ್ಞಾನ gotillade tirugutiruva nuRaaru poseVIraru sadaa nodutillave .? ಪಕ್ಷಿಜಗತ್ತಿಗೆ ಆಪತ್ತು ಕಟ್ಟಿಟ್ಟ ಬುತ್ತಿ." edu nijavallave....? ondu photoGraphs gaagi obba forest OFFICER Kokkare Bellurinalli Nest pakka MAchan kattisiralillave...? aaga nest bittu pelicans nest bittu hogiddavalla....? Madduru samepa photographs maadalu machan katti kombeyannu kadisi ddanne nimma friends gale photographs maadiddare....!!! ನೈಜ ಕಾಳಜಿ, ಕಳಕಳಿ ಇರುವ ಛಾಯಾಚಿತ್ರಗ್ರಾಹಕರು ಬಹಳಷ್ಟಿದ್ದಾರೆ. aadare Parisara pritiYinda kelasa maadutiruva photographers...galesthu....? award gaagi eruvavarestu...? Just relax mood photographers yestiddare...? Nimagee... gotide. Tigers den nalli photos tegeda...Leopard Kill hattira Barutade yendu edi dina kaada forest officer ....kate nimage gotirabekalla forest adikaarigale ondu photo kagi hage nadedu kondare...."just for change....HOBBy relax...photographer galige kaadu hakki imp aagide . allava...?
lokesh mosale

ಜಲನಯನ said...

ಶಿವು, ನಿಮ್ಮ ಮತ್ತು ಹಲವಾರು ಫೋಟೋಗ್ರಾಫಿ ಆಸಕ್ತ ಮಿತ್ರರ ಕಾಳಜಿಯ ಮಾತು ..ಕೇವಲ ಅಪವಾದಗಳನ್ನು ವೈಭವೀಕರಿಸಿ ಎಲ್ಲರೂ ಹಾಗೇ ಎನ್ನುವುದೂ ತಪ್ಪು ಎಂದಿರುವುದು ಒಪ್ಪತಕ್ಕ ಮಾತು. ವನ್ಯಜೀವಿ ಬಗ್ಗೆ ಕಾಳಜಿ ಬೇಕು..ಅವುಗಳ ಬಗ್ಗೆ ತಿಳಿದುಕೊಳ್ಳಬೇಕು...ಆ ಕಾರ್ಯ ಮಾಡುವುದು ನಿಮ್ಮಂಥವರ್ ಫೋಟಗಳು... ಹೌದು ನನಗೆ ಒಬ್ಬ ಮಿತ್ರನ ಶೂಟರ್ ಮೀನಿನ ಚಿತ್ರಕ್ಕಾಗಿ ಅವನು ಸುಮಾರು ಒಂದು ವಾರ ನದಿ ತಟದಲ್ಲಿ ಘಂಟೆಗಟ್ಟಲೆ ಕಾದಿದ್ದ ಅನುಭವದ ಕಥನ ನೆನಪಾಗುತ್ತೆ....ಕಾಳಜಿಯ ಚಿತ್ರಗ್ರಾಹಕರು ಪೀಡನೆಯನ್ನು ಖಂಡಿತಾ ಮಾಡರು..., ಪೀಡಿಸಿ ತೆಗೆಯುವ ಚಿತ್ರ ಖಂಡಿತಾ ವನ್ಯಜೀವಿಗಳಿಗೆ ಹಿಂಸೆ...ಆದರೆ ಯಾರೋ ಬೆರಳೆಣಿಕೆಯವರ ಈ ಕೃತ್ಯಕ್ಕೆ ಜನರಲೈಸ್ ಮಾಡಿ ಆ ಮುಖ ನೀಡುವ ಅಗತ್ಯ್ವಿರಲಿಲ್ಲ...ಆದ್ರೂ ಅವರ ಕಾಳಜಿಗೆ ಮೆಚ್ಚುಗೆ ಇದೆ...ಬೆಂಗಳೂರಲ್ಲಿ ಕಾಣೆಯಾಗುತ್ತಿರುವ ಗುಬ್ಬಚ್ಚಿಗಳ ಸಂರಕ್ಷಣೆಗೆ ಇಂತಹ ಕಾಳಜಿಯಿರುವ ಗಣ್ಯರು ಮುಂದಾದ್ರೆ ಈ ಕ್ರಿಯೆಗೆ ಒಂದು ಆಂದೋಲನದ ರೂಪ ಸಿಗುತ್ತೆ,,, ಅದು ಹೆಚ್ಚು ರಚನಾತ್ಮಕವಾಗುತ್ತೆ...

shivu.k said...

ಅಜಾದ್,

ಈ ವಿಚಾರವನ್ನು ಎಷ್ಟು ಹೇಳಿದ ಘನಶ್ಯಾಮ್ ಪರವಾಗಿ ಬೇರೆಯವರು ವಾದಿಸುತ್ತಿದ್ದಾರೆ. ಅವರ ಈ ವಿಚಾರವನ್ನು ಜನರಲೈಸ್ ಮಾಡಿ ಬರೆದಿರುವುದು ತಪ್ಪು ಎಂದು ಮಾತ್ರ ನಾನು ಹೇಳುತ್ತಿರುವುದು. ಅದನ್ನು ಅವರು ಒಪ್ಪುತ್ತಿಲ್ಲ. ಅದಕ್ಕೆ ಬೇಕಾದಷ್ಟು ಉದಾಹರಣೆಗಳನ್ನು ಕೊಡುತ್ತಾರೆ. ಅದರ ಬದಲು ಅದನ್ನೇ ಪಕ್ಕಾ ಮಾಹಿತಿ ಮತ್ತು ದಾಖಲೆ ಸಮೇತ ಬರೆದರೆ ಅದಕ್ಕೆ ನಮ್ಮ ಸಹಕಾರವಿದೆ. ಅಷ್ಟು ಮಾಡಲು ಅವರಿಗೆ ದೈರ್ಯವಿಲ್ಲ. ಏಕೆಂದರೆ ಅರಣ್ಯ ಅಧಿಕಾರಿಗಳು...ಇತ್ಯಾದಿಗಳು ಮಾಡಿರುವ ತಪ್ಪುಗಳು ಅವರಿಗೆ ಗೊತ್ತಿದೆಯೆಂದ ಮೇಲೆ ಅವರ ಹೆಸರನ್ನು ನಮೂದಿಸಿ ದಾಖಲೆಯನ್ನು ಕೊಟ್ಟರೆ ಇಷ್ಟೆಲ್ಲಾ ರಾಧ್ದಾಂತ ಆಗುತ್ತಿರಲಿಲ್ಲ. ಅವರನ್ನು ಮುಟ್ಟಿದರೆ ಇವರಿಗೆ ತೊಂದರೆಯಾಗಬಹುದು. ಅದಕ್ಕೆ ಹೀಗೆ ಬರೆಯುತ್ತಿರುವುದು. ..

ಪರಿಸರ ಕಾಳಜಿ ಯಾರಿಂದ ಆಗುತ್ತಿದೆ ಮತ್ತು ಹಾಳಾಗುತ್ತಿದೆಯೆನ್ನುವುದನ್ನು ನಾವು ಇವರಿಂದ ತಿಳಿದುಕೊಳ್ಳಬೇಕಿಲ್ಲ. ಅವರ ತಪ್ಪು ತಿಳಿದರೂ ಹೀಗೆ ಸುಮ್ಮನೆ ವಿತಂಡವಾದ ನಡೆಯುತ್ತಿರುವುದು ಯಾರಿಗೂ ಉಪಯೋಗವಿಲ್ಲ. ಅದಕ್ಕೆ ಇದನ್ನು ಚರ್ಚಿಸುವ ಬದಲು ಸುಮ್ಮನಾಗುತ್ತೇನೆ. ಮತ್ತೆ ಅದನ್ನು ಸಮರ್ಥಿಸಿಕೊಂಡು ಯಾರು ಪ್ರತಿಕ್ರಿಯಿಸಿದರೂ ನಾನು ಉತ್ತರಿಸುವುದಿಲ್ಲ. ಒಟ್ಟಾರೆ ಅವರ ತಪ್ಪು ಅರಿವಾದರೆ ಸಾಕು..
ನಿಮ್ಮ ಕಾಳಜಿ ಪೂರ್ವ ಲೇಖನಕ್ಕೆ ಧನ್ಯವಾದಗಳು.

shivu.k said...

ಲೋಕೇಶ್ ಮೊಸಳೆಯವರೆ,

ಈ ವಿಚಾರ ಸುಮ್ಮನೆ ಹಾದಿ ತಪ್ಪುತ್ತಿದೆಯೆನಿಸುತ್ತಿದೆ. ನಾನು ಹೇಳುತ್ತಿರುವುದು ನಿಮಗೆ ಅರ್ಥವಾಗುತ್ತಿಲ್ಲ. ನೀವು ಈಗ ಹೇಳುವ ಹೊಸ ವಿಚಾರದ ಪಕ್ಕಾ ಮಾಹಿತಿ ಮತ್ತು ದಾಖಲೆ ನಿಮ್ಮಲ್ಲಿ ಇದ್ದರೆ ಅದನ್ನು ನೀವಾಗಲಿ ಅಥವ ಘನಶ್ಯಾಂ ಕೈಯಲ್ಲಿ ಬರೆಸಿ ಪತ್ರಿಕೆಯಲ್ಲಿ ಪ್ರಕಟಿಸಿದರೆ ಅದಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ. ನನ್ನ ಜೊತೆ ಅನೇಕ ಪರಿಸರ ಪ್ರೇಮಿ ಬ್ಲಾಗಿಗರೂ ಬೆಂಬಲ ಸೂಚಿಸಬಹುದು. ಆ ವಿಚಾರದಲ್ಲಿ ನೀವು ಮುಂದೆ ನಿಂತರೆ ಪರಿಸರವನ್ನು ಹಾಳುಮಾಡುತ್ತಿರುವವರ ವಿರುದ್ಧ ಹೋರಾಟಕ್ಕೆ ನಾವು ಸಿದ್ಧರಿದ್ದೇವೆ. ನಮಗೂ ಛಾಯಾಗ್ರಾಹಕರಾಗಿ ಆತ್ಮಗೌರವವಿರುವ ಇಷ್ಟೆಲ್ಲಾ ಚರ್ಚೆ ನಡೆದಿದ್ದು. ನನಗೆ ಘನಶ್ಯಾಂ ಬಗ್ಗೆ ಯಾವುದೇ ವೈಯಕ್ತಿಕ ದ್ವೇಷವಿಲ್ಲ. ನಮ್ಮ ಕಾಳಜಿ ನಿಮಗೆ ಅರ್ಥವಾದರೆ ಸಾಕು. ಮತ್ತೆ ಈ ವಿಚಾರವನ್ನು ಚರ್ಚಿಸಿದರೆ ಉಪಯೋಗವಿಲ್ಲ. ನನಗೂ ಮಾಡಲು ಬೇಕಾದಷ್ಟು ಕೆಲಸವಿದೆ ಅದ್ದರಿಂದ ಈ ವಿಚಾರವನ್ನು ಮುಂದುವರಿಸಲು ನಾನು ಇಷ್ಟಪಡುವುದಿಲ್ಲ.

ಧನ್ಯವಾದಗಳು.

Amanda said...

ಬಾಲು ಸರ್, ಲೇಖನವನ್ನು ಪ್ರಕಟಿಸುವ ಮೊದಲು ಪರಾಮರ್ಶಿಸದೆ ಇರುವುದು ಇಡೀ ಲೇಖನದಲ್ಲಿ ಎದ್ದು ಕಾಣುತ್ತದೆ. ಖಂಡಿತ ನಾಡಿನ ಛಾಯಾಗ್ರಹಕರ ಬಗ್ಗೆ ಅರಿವಿದ್ದಲ್ಲಿ ಇಂಥ ಲೇಖನ ಪ್ರಕಟವಾಗುತ್ತಿರಲಿಲ್ಲ. ನನ್ನ ಪ್ರತಿಕ್ರಿಯೆಯನ್ನು ಪ್ರಜಾವಾಣಿಗೆ ಕಳಿಸಿದ್ದೇನೆ. ಅವರಿಂದ ಉತ್ತರವೂ ಬಂದಿದೆ. ಅದನ್ನು ಇಲ್ಲಿ ಹಾಕುತ್ತೇನೆ..