ರು ನೇರವಾಗಿ ಐದಂಕಿ ಸಂಬಳಕ್ಕೆ ಕರೆದಾಗ ಅಲ್ಲಿಗೆ ಸೇರಿಕೊಂಡುಬಿಟ್ಟ.
ಮೊನ್ನೆ ತೆಗೆದಶರವಣನ ಫೋಟೋ
ಮುಂದೆ ಇದೇ ಶರವಣ ತನ್ನ ಕೆಲಸದಲ್ಲಿ ಎಷ್ಟು ಪರಿಣತಿ ಹೊಂದಿದನೆಂದರೆ, ಟ್ರಾವಲ್ ಏಜೆನ್ಸಿ ಗ್ರಾಹಕರ ಏರೋಪ್ಲೇನ್ ಟಿಕೆಟ್ ಬುಕಿಂಗ್‍ನಿಂದ ಹಿಡಿದು ಆ ಅಫೀಸಿನ ಎಲ್ಲಾ ಕೆಲಸಗಳನ್ನು ಮಾಡುವಷ್ಟು ಪರಿಣತನಾಗಿಬಿಟ್ಟಿದ್ದ. ಸಹಜವಾಗಿ ಅವನ ಕೆಲಸದ ಬದ್ಧತೆಯನ್ನು ಗುರುತಿಸಿ ಪ್ರಖ್ಯಾತ ತಾಮಸ್ ಕುಕ್ ಕಂಪನಿ ಮತ್ತಷ್ಟು ಹೆಚ್ಚಿನ ಸಂಬಳಕ್ಕೆ ಸೆಳೆದುಕೊಂಡಿತು. ನಡುವೆ ಎರಡು ಕೆಲಸ ಮಾಡಲಾಗುತ್ತಿಲ್ಲವೆಂದು ದಿನಪತ್ರಿಕೆ ವಿತರಣೆಯನ್ನು ಬೇರೆಯವರಿಗೆ ಬಿಟ್ಟುಕೊಟ್ಟು ಪೂರ್ಣಮಟ್ಟದಲ್ಲಿ ಹೊಸ ಕೆಲಸದಲ್ಲಿ ತೊಡಗಿಸಿಕೊಂಡುಬಿಟ್ಟ. ಇಷ್ಟೇಲ್ಲಾ ಬೆಳವಣಿಗೆಯ ಬದಲಾವಣೆಗಳನ್ನು ನನಗೆ ಸಿಕ್ಕಿದಾಗಲೆಲ್ಲಾ ಹೇಳಿ ನನ್ನಿಂದ ಸಲಹೆ ಸೂಚನೆಗಳನ್ನು ಸ್ವೀಕರಿಸುತ್ತಿದ್ದ. ಕೆಲಸದ ಎಲ್ಲಾ ಆಗುಹೋಗುಗಳನ್ನು ನನ್ನೊಂದಿಗೆ ಹಂಚಿಕೊಳ್ಳದಿದ್ದರೆ ಅವನಿಗೆ ಸಮಾಧಾನವಿರುತ್ತಿರಲಿಲ್ಲ. ಕಳೆದ ಆರುತಿಂಗಳಿಂದ ಇಬ್ಬರೂ ನಿತ್ಯವೂ ಮಲ್ಲೇಶ್ವರದ ಹಳ್ಳಿಮನೆ ಹೋಟಲಿನಲ್ಲಿ ಕಾಫಿಗಾಗಿ ಸಿಕ್ಕುತ್ತಿದ್ದೇವೆ. ಈ ನಡುವೆ ಒಂದು ದಿನ ನನಗೆ ಮಸ್ಕಾಟ್ ಕಂಪನಿಯ ಟ್ರಾವಲ್ ಸಿಟಿ ಎನ್ನುವ ಕಂಪನಿಯಲ್ಲಿ ಕೆಲಸ ಮಾಡಲು ಅಫರ್ ಬಂದಿದೆ ಏನು ಮಾಡಲಿ? ನನ್ನನ್ನು ಕೇಳಿದ. ಮತ್ತು ಈಗ ಬರುತ್ತಿರುವ ಸಂಪಾದನೆಗಿಂತ ಮೂರರಷ್ಟು ಗಳಿಸಬಹುದು ಅಂದ. ಆತನ ಸದ್ಯದ ಕೆಲಸ, ಅವನ ಮನೆಯಲ್ಲಿನ ಜವಾಬ್ದಾರಿಗಳು, ವಿದೇಶದ ಕಂಪನಿಯಲ್ಲಿ ಸೇರಿದರೆ ಆಗುವ ಅನುಕೂಲವನ್ನು ಪ್ರತಿಯೊಂದನ್ನು ನನ್ನೊಂದಿಗೆ ಚರ್ಚಿಸಿ ಕೊನೆಗೆ ವಿದೇಶಕ್ಕೆ ಕೆಲಸಕ್ಕೆ ಹೋಗುವುದೇ ಒಳ್ಳೆಯದು ಅಂತ ತೀರ್ಮಾನಿಸಿದ. ಅದಕ್ಕಾಗಿ ಬೇಕಾದ ಪಾಸ್‍ಪೋರ್ಟ್, ಇತ್ಯಾದಿಗಳನ್ನು ಮಾಡಿಸಿಕೊಂಡಿದ್ದಾನೆ. ಹತ್ತು ವರ್ಷಗಳ ಹಿಂದೆ ನನ್ನ ದಿನಪತ್ರಿಕೆ ಹಂಚುವ ಹುಡುಗನಾಗಿದ್ದವನು ಇವತ್ತು ವಿದೇಶದಲ್ಲಿ ದೊಡ್ಡ ಮೊತ್ತದ ಸಂಬಳಕ್ಕಾಗಿ ಇದೇ ಫೆಬ್ರವರಿ ತಿಂಗಳ ೨೮ನೇ ತಾರೀಖು ವಿಮಾನದಲ್ಲಿ ಮಸ್ಕಾಟ್‍ಗೆ ಹಾರುತ್ತಾನೆ. ಅವನಿಗೆ ಮೊದಲಿನಿಂದ ನನ್ನ ಕಡೆಯಿಂದಲೇ ಫೋಟೊ ತೆಗೆಸಿಕೊಳ್ಳಬೇಕೆಂದು ಆಸೆಯಿದ್ದರೂ ಕಾರಣಾಂತರಗಳಿಂದ ಆಗಿರಲಿಲ್ಲ. ಕಳೆದ ಭಾನುವಾರ ನನ್ನ ಕೈಯಿಂದ ಫೋಟೊ ತೆಗೆಸಿಕೊಂಡವನಿಗೆ ಏನು ಒಂಥರ ಸಮಾಧಾನ. ಅಲ್ಲಿಗೆ ತಲುಪಿದ ಮೇಲೆ ವಾರಕ್ಕೆ ಒಂದೆರಡು ಬಾರಿಯಾದರೂ ಚಾಟಿಂಗ್ ಸಿಗುತ್ತೇನೆ ಬಿಡುವಾದಾಗಲೆಲ್ಲಾ ಮೇಲ್ ಮಾಡುತ್ತೇನೆ ಅಂದಿದ್ದಾನೆ. ಆತ ನನ್ನ ದಿನಪತ್ರಿಕೆಯ ಬೀಟ್ ಬಾಯ್ ಆಗಿ, ನನಗಿಂತ ಚಿಕ್ಕವಯಸ್ಸಿನ ಗೆಳಯನಾಗಿ ಈ ಮಟ್ಟಕ್ಕೆ ತಲುಪಿರುವುದನ್ನು ನಿಮ್ಮೊಂದಿಗೆ ಹಂಚಿಕೊಳ್ಳಬೇಕೆನಿಸಿತು. ಅವನಿಗೆ ನೀವು ಶುಭಾಶಯ ಹೇಳಿ.
ಇದು ಒಬ್ಬ ದಿನಪತ್ರಿಕೆ ಹುಡುಗನ ಬೆಳವಣಿಗೆಯ ಕತೆ. ಖುಷಿಯಾಗುತ್ತಲ್ವಾ! ಸ್ವಲ್ಪ ಇರಿ ಮತ್ತೊಂದು ಕತೆಯನ್ನು ಹೇಳಿಬಿಡುತ್ತೇನೆ.
ಶರವಣನಂತೆ ಮತ್ತೊಬ್ಬ ಹುಡುಗ ಮಂಜು ಕೂಡ ಬೆಳಗಿನ ಬೀಟ್ ಬಾಯ್ ಆಗಿ ಅದೇ ವರ್ಷ ಸೇರಿಕೊಂಡಿದ್ದ. ಇವನು ಕೂಡ ಶರವಣನಂತೆ ಮೈಬಗ್ಗಿಸಿ ದುಡಿಯುತ್ತಿದ್ದ. ನಾನಾಗ ಬೆಳಗಿನ ದಿನಪತ್ರಿಕೆಯಲ್ಲದೇ ಮದ್ಯಾಹ್ನ ಮುಂಬೈನಿಂದ ಬರುವ "ಹಿಂದಿ, ಗುಜರಾತಿ ಪತ್ರಿಕೆಗಳನ್ನು ವಿತರಿಸುತ್ತಿದ್ದೆ. ಈ ಮಂಜು ಬೆಳಗಿನ ಕೆಲಸವಲ್ಲದೇ ಮದ್ಯಾಹ್ನದ ಆ ಕೆಲಸಕ್ಕೂ ಬರುತ್ತಿದ್ದ. ಮೂರು ವರ್ಷಗಳಲ್ಲಿ ಮದ್ಯಾಹ್ನದ ದಿನಪತ್ರಿಕೆ ವಿತರಣೆ ನೋಡಿಕೊಳ್ಳಲಾಗದಷ್ಟು ದೊಡ್ಡದಾಗಿ ಮುಂಜಾನೆ ಪತ್ರಿಕೆ ಕೆಲಸ ದೊಡ್ಡದಾಗಿದ್ದರಿಂದ ಅದನ್ನು ಮಂಜುವಿಗೆ ಬಿಟ್ಟುಕೊಟ್ಟಿದ್ದೆ. ಮೂರು ವರ್ಷಗಳಲ್ಲಿ ಮಂಜು ಕೂಡ ವೆಂಡರ್ ಆಗಿ ಬೆಳಗಿನ ಮತ್ತು ಮಧ್ಯಾಹ್ನದ ದಿನಪತ್ರಿಕೆ ವಿತರಣೆಯನ್ನು ಚೆನ್ನಾಗಿ ನಿರ್ವಹಿಸುವ ಮಟ್ಟಕ್ಕೆ ಬೆಳೆದಿದ್ದ. ಆಗ ಅವನ ಬಳಿಗೆ ವಿಶ್ವ ಎನ್ನುವ ಹುಡುಗ ಬೀಟ್ ಬಾಯ್ ಆಗಿ ಕೆಲಸಕ್ಕೆ ಸೇರಿಕೊಂಡ. ಬಡತನದಲ್ಲೇ ಬೆಳೆದ ಹುಡುಗನಾದ್ದರಿಂದ ದಿನಪತ್ರಿಕೆಯ ಕೆಲಸದಿಂದಲೇ ನನ್ನ ನೆಲೆ ಕಂಡುಕೊಳ್ಳುತ್ತೇನೆ ಅಂತ ತೀರ್ಮಾನಿಸಿದ್ದ. ಏಕೆಂದು ಕೇಳಿದರೆ ಮಂಜು, ಶರವಣ, ನನ್ನನ್ನು ಉದಾಹರಿಸಿ ನಿಮ್ಮಂತೆ ಆಗಬೇಕು ಅಂತ ಖುಷಿಯಿಂದ ಹೇಳುವಾಗ ಅವನಲ್ಲಿ ಆತ್ಮವಿಶ್ವಾಸ ತುಂಬಿತುಳುಕುತ್ತಿತ್ತು. ಆರು ತಿಂಗಳ ಹಿಂದೆ ಅವನು ಕೂಡ ಐವತ್ತು ದಿನಪತ್ರಿಕೆಗಳನ್ನು ವಿತರಿಸುವ ಸಣ್ಣ ವೆಂಡರ್ ಆಗಿದ್ದ. ಮಂಜುವಿನ ಜೊತೆ ಸೇರಿ ಮಧ್ಯಾಹ್ನದ ಹಿಂದಿ, ಗುಜರಾತಿ ದಿನಪತ್ರಿಕೆಗಳ ವಿತರಣೆಯನ್ನು ಮಾಡುತ್ತಿದ್ದ. ನನ್ನದು ಶೇಷಾದ್ರಿಪುರಂ ವಿತರಣೆ ಕೇಂದ್ರವಾದರೇ, ಮಂಜು ಮತ್ತು ವಿಶ್ವ ಇಬ್ಬರೂ ರಾಜಾಜಿನಗರದ ಕಡೆ ಏಜೆನ್ಸಿ ಪಡೆದುಕೊಂಡು ಅಲ್ಲಿ ವೆಂಡರ್ ಆಗಿದ್ದರು. ಅವರು ಉದ್ಯೋಗ ನಿಮಿತ್ತ ದೂರದಲ್ಲಿದ್ದರೂ ಪ್ರತಿಯೊಂದು ವಿಚಾರವನ್ನು ನನ್ನೊಂದಿಗೆ ಚರ್ಚಿಸುತ್ತಿದ್ದರು. ಆ ಮಟ್ಟಿಗೆ ನನ್ನ ಬಗ್ಗೆ ಅವರಿಗೆ ಆತ್ಮೀಯತೆ ಮತ್ತು ಗೌರವವಿತ್ತು.
ಹೀಗೆ ಎಲ್ಲಾ ಚೆನ್ನಾಗಿದೆ ಅನ್ನುವಾಗಲೇ ಒಂದು ಅನಿರೀಕ್ಷಿತ ಘಟನೆ ನಾಲ್ಕು ದಿನದ [ಶುಕ್ರವಾರ] ಹಿಂದೆ ನಡೆದುಹೋಯಿತು. ಇದೇ ವಿಶ್ವ ಎಂದಿನಂತೆ ಮುಂಜಾನೆ ಸೈಕಲೇರಿ ದಿನಪತ್ರಿಕೆ ಹಂಚುವ ಸಮಯದಲ್ಲಿ ವೇಗವಾಗಿ ನುಗ್ಗಿಬಂದ ಮೋಟರ್ ಬೈಕ್ ಇವನ ಮೇಲೆ ಹತ್ತಿ ದೊಡ್ಡ ಮಟ್ಟದ ಅಫಘಾತವಾಗಿಬಿಟ್ಟಿದೆ. ಅಂತ ಮುಂಜಾನೆಯಲ್ಲಿ ಯಾರೋ ಪರ್ಕಿ ಹುಡುಗರು ಮೈಮರೆತು ಇವನ ಮೇಲೆ ಬೈಕ್ ಹತ್ತಿಸಿದ್ದರಿಂದ ಮುಖದ ಅರ್ಧಬಾಗದ ಮೂಳೆಗಳೆಲ್ಲಾ ಪುಡಿಪುಡಿಯಾಗಿಬಿಟ್ಟಿವೆ. ಅಪಘಾತವಾದ ಮರುಕ್ಷಣದಲ್ಲಿ ಪ್ರಜ್ಞೆ ತಪ್ಪಿ ರಸ್ತೆಯಲ್ಲಿ ಅನಾಥವಾಗಿ ಬಿದ್ದಿದ್ದಾನೆ. ಆಗ ಅಲ್ಲಿದ ಇತರ ಬೀಟ್ ಬಾಯ್ಸುಗಳು ಹತ್ತಿರದ ಅಸ್ಪತ್ರೆಗೆ ಸೇರಿಸಿ ಮನೆಗೆ ವಿಚಾರವನ್ನು ಮುಟ್ಟಿಸಿದ್ದಾರೆ. ಅಲ್ಲಿಂದ ನೇರವಾಗಿ ನಿಮ್ಹಾನ್ಸಿಗೆ ಹೋಗಿದ್ದಾರೆ. ಕೆನ್ನೆ, ಮೂಗು, ಮತ್ತು ಮುಖದ ಅರ್ಧಭಾಗ ಮೂಲೆಗಳು ಪುಡಿಪುಡಿಯಾಗಿಬಿಟ್ಟಿದ್ದರಿಂದ ನಮ್ಮಲ್ಲಿ ಆಗುವುದಿಲ್ಲವೆಂದು ನಿಮ್ಹಾನ್ಸ್ ನವರು ರಾಜಾಜಿನಗರದ ಪೆನೆಸಿಯ ಅಸ್ಪತ್ರೆಗೆ ಕಳಿಸಿದ್ದಾರೆ. ವಿಶ್ವನಿಗೆ ತಾಯಿಯಿಲ್ಲ. ತಂದೆ ಗಾರೆ ಕೆಲಸ ಮಾಡಿ ಜೀವನ ಸಾಗಿಸುತ್ತಾರೆ. ಇಂಥ ಪರಿಸ್ಥಿತಿಯಲ್ಲಿ ಈಗ ಆಗಿರುವ ಅಪಘಾತದಿಂದಾಗಿ ದೊಡ್ದ ಮಟ್ಟದ್ ಆಪರೇಷನ್ ಮಾಡಬೇಕೆಂದು ಡಾಕ್ಟರುಗಳು ಹೇಳಿದ್ದಾರೆ. ಅದರ ಖರ್ಚು ಒಂದುವರೆ ಲಕ್ಷ ಆಗಬಹುದು ಅಂತ ಹೇಳಿದ್ದಾರೆ. ಏನಾಗುತ್ತೋ ಗೊತ್ತಿಲ್ಲ. ಮುಂದೆ ಅವನ ಭವಿಷ್ಯವೇನು? ನಾವು ವೆಂಡರುಗಳೆಲ್ಲಾ ಸ್ವಲ್ಪ ಹಣವನ್ನು ಕಲೆಹಾಕಿ ಕೊಟ್ಟಿದ್ದೇವೆ. ಅದರೂ ಅದು ಏನೇನು ಸಾಲದು. ವಿಶ್ವ ಆಸ್ಪತ್ರೆಯಲ್ಲಿ ಪ್ರಜ್ಞಾಸೂನ್ಯನಾಗಿ ಬಿದ್ದಿದ್ದರೆ ಒಂದೇ ಸಮನೆ ಬೆಳಿಗ್ಗೆಯಿಂದ ಸಂಜೆಯವರೆಗೆ ಗಿರಾಕಿಗಳಿಂದ ಫೋನ್ ಕಾಲ್ ಬರುತ್ತಲೇ ಬರುತ್ತಲೇ ಇತ್ತು. ಕಾರಣ ಇವತ್ತಿನ ದಿನಪತ್ರಿಕೆ ಬಂದಿಲ್ಲ ಏನೆಂದು?
ಸದ್ಯ ಈ ಚಿತ್ರದಲ್ಲಿ ತೋರಿಸಿರುವಂತೆ ವಿಶ್ವನ ಬಲಮುಖದ ಮೂಳೆಗಳೆಲ್ಲಾ ಪುಡಿಯಾಗಿದ್ದು ಎಲ್ಲೆಲ್ಲಿ ಅಫರೇಷನ್ ಮಾಡಬೇಕೆಂದು ಡಾಕ್ಟರುಗಳು ಮಾರ್ಕ್ ಮಾಡಿದ ಸ್ಲಿಪ್ ಸಿಕ್ಕಿದೆ. ಅದನ್ನೇ ಇಲ್ಲಿ ಬ್ಲಾಗಿನಲ್ಲಿ ಹಾಕಿದ್ದೇನೆ. ವಿಶ್ವನ ಫೋಟೊ ತೆಗೆಯುವ ಮಟ್ಟದಲ್ಲಿದ್ದರಿಂದ ಫೋಟೊ ತೆಗೆಯದೇ ಹಾಗೆ ಬಂದಿದ್ದೇನೆ...
್ಗೆಳೆಯರೆ, ಈಗ ಹೇಳಿ ಶರವಣನ ಕತೆ ಕೇಳಿ ಖುಷಿ ಪಡುವುದೋ, ವಿಶ್ವನ ಕತೆ ಕೇಳಿ......................
ಬ್ಲಾಗಿನ ಆತ್ಮೀಯ ಗೆಳೆಯರೆ, ನನ್ನ ಲೇಖನಕ್ಕೆ ನೀವು ಸ್ಪಂದಿಸಿದ ರೀತಿಯಿಂದಾಗಿ ನಾನು ಆಸ್ಪತ್ರೆ ಹೋಗಿ ಅಲ್ಲಿಂದ ವಿಶ್ವನ ಭ್ಯಾಂಕ್ ಅಕೌಂಟ್ ನಂಬರ್ ತಂದಿದ್ದೇನೆ.
ಆತನ ಬ್ಯಾಂಕಿನ ವಿವರ ಹೀಗಿದೆ.
VISHWANATHA.P
CORPORATION BANK. MALLESWARAM MAIN BRANCH. BENGALORE.
ACCOUNT NO: 0056/SB/01/037125
for RTGS/NEFT Mention Account Number As: SB01037125
Online account number: RTGS IFSC CODE: CORP0000056
ಆತ್ಮೀಯ ಬ್ಲಾಗ್ ಗೆಳೆಯರೆ, ಮೇಲೆ ತಿಳಿಸಿರುವ ಬ್ಯಾಂಕ್ ಅಕೌಂಟ್ ನಂಬರು ಅಪಘಾತವಾಗಿರುವ ವಿಶ್ವನಾಥನದು. ನಿಮ್ಮ ಸಹಾಯವನ್ನು ಅದರ ಮೂಲಕ ಮಾಡಬಹುದು.
ನಮ್ಮ ಮುಂಜಾನೆ ದಿನಪತ್ರಿಕೆ ವಿತರಣೆಯಲ್ಲಿದ್ದ ಎರಡು ಜೀವಗಳನ್ನು ಮತ್ತು ಜೀವನವನ್ನು ದೇವರು ಹೇಗೆ ವಿರುದ್ಧ ದಿಕ್ಕಿನಲ್ಲಿ ಸಾಗಿಸಿದ್ದಾನೆ ನೋಡಿ.
ಚಿತ್ರ ಮತ್ತು ಲೇಖನ.
ಶಿವು.ಕೆ