Friday, February 25, 2011

ರಾಗಿಮುದ್ದೆ


                                                                        
" ಇದು ಕಷ್ಟ ಕಣ್ರೀ, ನನ್ನ ಕೈಯಲ್ಲಿ ಆಗೋಲ್ಲ"

   "ಅರೆರೆ ಅದ್ಯಾಕೆ ಭಯ ಪಡುತ್ತೀರಿ, ಇದು ನೀರು ಕುಡಿದಷ್ಟೇ ಸುಲಭ"


"ನೀರು ಬೇಕಾದ್ರೆ ಹಾಗೆ ಕುಡಿಯಬಹುದು, ಬೇಕಾದ್ರೆ ನುಂಗಿಬಿಡಬಹುದು, ಆದ್ರೆ ಇದು ಮಾತ್ರ ನನ್ನ ಕೈಯಲ್ಲಿ ನುಂಗಲು ಸಾಧ್ಯವೇ ಇಲ್ಲ"   ಖಡಾಖಂಡಿತವಾಗಿ ಹೇಳಿಬಿಟ್ಟರು.

ಆದ್ರೆ ಇಷ್ಟಕ್ಕೆ ನಾನು ಬಿಡುತ್ತೇನೆಯೇ? ನನ್ನ ಪ್ರಯತ್ನವನ್ನು ಮುಂದುವರಿಸಿದೆ.

"ನೋಡ್ರಿ ಉದಯ್ ನಾವು ಇದನ್ನು ಜಾಮೂನ್ ಗಾತ್ರ ಮಾಡಿಕೊಂಡು ಸುಲಭವಾಗಿ ನುಂಗುತ್ತೇವೆ. ನೀವು ಕೊನೇ ಪಕ್ಷ ಗೋಲಿ ಗಾತ್ರ ಮಾಡಿಕೊಂಡು ಆದ್ರೂ ನುಂಗಲೇಬೇಕು" 

"ನೋಡಿ ಇದೊಂದು ಬಿಟ್ಟು ಬೇರೆ ಏನು ಬೇಕಾದ್ರು ಹೇಳಿ ಮಾಡುತ್ತೇನೆ. ಬೇಕಾದ್ರೆ ನಿಮಗೆ ಎಂಥ ಸಾಪ್ಟ್  ವೇರ್ ಬೇಕು ಹೇಳಿ ಸಿದ್ಧಮಾಡಿಕೊಟ್ಟುಬಿಡುತ್ತೇನೆ. ಇದನ್ನು ನುಂಗಲು ಮಾತ್ರ ಒತ್ತಾಯಮಾಡಬೇಡಿ"  ಹೀಗೆ ಹೇಳುತ್ತಾ ಬಂದ ಉದಯ ಹೆಗ್ಡೆ  ಕೊನೆಗೂ ನನ್ನ ಮಾತನ್ನು ಒಪ್ಪಲೇ ಇಲ್ಲ.

ಈ ಸಂಭಾಷಣೆ ನಡೆದಿದ್ದು ನನ್ನ ಮನೆಯಲ್ಲಿ ಉದಯ ಹೆಗ್ಡೆ ಜೊತೆ.  ಉದಯ ಹೆಗ್ಡೆ ಪರಿಚಯವಾಗಿ ಎಂಟು ತಿಂಗಳಾಗಿರಬಹುದು.  ಅವರು ವೃತ್ತಿಯಲ್ಲಿ ಸಾಪ್ಟ್ ವೇರಿ.  ನಾನೇ ಸದಾ ಏನಾದರೂ ಮಾಡುತ್ತಿರುವವನು ಅಂದುಕೊಂಡರೇ ಇವರು ನನ್ನನ್ನೂ ಮೀರಿಸಿದ ಸಾಹಸ ಪ್ರವೃತ್ತಿಯವರು.  ಊರು ಸಿರಸಿಯ ಹತ್ತಿರ ಹಳ್ಳಿಯಲ್ಲೇ ಹುಟ್ಟಿ ಬೆಳೆದವರು.  ಅವರಿಗೆ ಫೋಟೊಗ್ರಫಿ ಹವ್ಯಾಸವಿದ್ದುದರಿಂದ ನನ್ನ ಮತ್ತೊಬ್ಬ ಗೆಳೆಯ ವಿ.ಡಿ.ಭಟ್ ಕಡೆಯಿಂದ ಪರಿಚಯವಾದವರು. ಅವರಿಗೊಂದು ಕ್ಯಾಮೆರಾ, ಅದಕ್ಕ ತಕ್ಕಂತ ಒಂದು ಟೆಲಿ ಲೆನ್ಸ್, ಚಿಟ್ಟೆ ಮತ್ತು ಕೀಟಗಳ ಫೋಟೋಗ್ರಫಿ ತುಂಬಾ ಇಷ್ಟವಾದ್ದರಿಂದ ಇತ್ತೀಚೆಗೆ ಒಂದು ಮ್ಯಾಕ್ರೋ ಲೆನ್ಸ್ ಕೂಡ ಕೊಂಡುಕೊಂಡಿದ್ದಾರೆ.  ಅವರಿಗೆ ನನ್ನ ಶೈಲಿಯ ಫೋಟೊಗ್ರಫಿ ತುಂಬಾ ಇಷ್ಟ. ನನ್ನ ಶೈಲಿಯೆಂದರೆ ಅದರಲ್ಲೇನು ವಿಶೇಷವಿಲ್ಲ. ಇದ್ದಕ್ಕಿದ್ದಂತೆ ಎಲ್ಲಿಗಾದರೂ ಹೋಗಬೇಕೆನಿಸಿದರೆ ಹೊರಟುಬಿಡುವುದು, ನನಗೆ ಇಂಥದ್ದೇ ಫೋಟೊ ತೆಗೆಯಬೇಕೆನ್ನುವ ಗುರಿಯಿಲ್ಲ. ಸುಮ್ಮನೇ ರಸ್ತೆಯಲ್ಲೋ, ಕಾಡಿನಲ್ಲೋ ಹೋಗುತ್ತಿರುವುದು, ನಡುವೆ ಹೊಸತೆನಿಸುವುದು ಫೋಟೊ ತೆಗೆಯಲು ಸಿಕ್ಕರೆ ಕ್ಲಿಕ್ಕಿಸುವುದು  ಇಲ್ಲದಿದ್ದಲ್ಲಿ ಸುಮ್ಮನೇ ಖುಷಿಯಿಂದ ಓಡಾಡಿಬರುವುದು. ಇದು ನನ್ನ ಫೋಟೊಗ್ರಫಿ ಶೈಲಿ. ಅದು ಅವರಿಗೆ ಇಷ್ಟವಾಗಿದ್ದರಿಂದ ಒಮ್ಮೆ ಇಬ್ಬರೂ ಮಾಗಡಿ ಕಡೆ ಹೋಗಿ ಅರ್ಧದಿನ ಸುತ್ತಾಡಿ ಬಂದವು. ಒಂದಷ್ಟು ಫೋಟೊಗ್ರಫಿಯನ್ನು ಮಾಡಿ ನಮ್ಮ ಮನೆಗೆ ಬರುವ ಹೊತ್ತಿಗೆ ರಾತ್ರಿ ಎಂಟಾಗಿತ್ತು.  ಅದು ನಮಗೆ ಊಟದ ಸಮಯ.  ನನ್ನ ಶ್ರೀಮತಿ ಊಟಕ್ಕೆ ಸಿದ್ಧವಾಯಿತು ಕೈತೊಳೆದುಕೊಳ್ಳಿ ಅಂದಳು. ಬನ್ನಿ ನಮ್ಮ ಮನೆಯ ರಾಗಿಮುದ್ದೆ ರುಚಿನೋಡಿ ಅಂತ ಅವರನ್ನು ಊಟಕ್ಕೆ ಕರೆದೆ.




 ರಾಗಿಮುದ್ದೆಯೆಂದ ತಕ್ಷಣ ಅದನ್ನು ನುಂಗಬೇಕಲ್ಲ ಅದಕ್ಕಾಗಿ ನಮ್ಮಿಬ್ಬರ ನಡುವೆ ಇಷ್ಟೆಲ್ಲಾ ಸಂಭಾಷಣೆ ನಡೆಯಿತು.  ಅಷ್ಟರಲ್ಲಿ ನಮ್ಮ ಬಳಿಗೆ ಬಂದ ಹೇಮಾಶ್ರೀ,

 "ನೋಡಿ ಉದಯ್,  ನಮ್ಮನೆ ರಾಗಿಮುದ್ದೆ ತುಂಬಾ ಡಿಫರೆಂಟು, ತೆಳ್ಳಗೆ ಬಿಸಿಬಿಸಿಯಾಗಿ ಮಾಡಿದ್ದೇನೆ.  ಅದಕ್ಕೆ  ಕಾಂಬಿನೇಷನ್ ಆಗಿ ಸೊಪ್ಪಿನ ಬಸ್ಸಾರು ಮಾಡಿದ್ದೇನೆ. ಎರಡರದೂ ಸೂಪರ್ ಕಾಂಬಿನೇಷನ್ ನೀವು ರುಚಿ ನೋಡಲೇಬೇಕು" ಅಂದಳು

 "ಇಲ್ಲ ಬಿಡ್ರೀ, ಖಂಡಿತ ಸಾಧ್ಯವಾಗೋಲ್ಲ. ನೀವು ಅದ್ಯಾಗೆ ನುಂಗುತ್ತೀರೊ ನನಗೆ ಗೊತ್ತಿಲ್ಲ. ನೋಡ್ರಿ ಬಾಯಿಗೆ ಹಾಕಿಕೊಂಡ ಯಾವುದೇ ತಿನ್ನುವ ವಸ್ತುವು ಸಹಜವಾಗಿ ಅಗಿಯಲೆ ಬೇಕೆನ್ನುವುದು ಇರೋ ಕಾನ್ಸೆಪ್ಟ್. ಅದು ಬಿಟ್ಟು ಅದ್ಯಾಗೆ ನೇರವಾಗಿ ನುಂಗಲು ಸಾಧ್ಯ"?

 "ಅಯ್ಯೋ ಅದು ತುಂಬಾ ಸುಲಭ, ನೋಡಿ ನಿಮಗೆ ಕಷ್ಟವೆನಿಸಿದ್ರೆ ರುದ್ರಾಕ್ಷಿಮಣಿಯಷ್ಟು ಸಣ್ಣ ಸಣ್ಣ ತುತ್ತುಗಳನ್ನು ಮಾಡಿಕೊಂಡು ಸುಲಭವಾಗಿ ನುಂಗಬಹುದು?" 

 ವಂಡರ್ ಲಾದಲ್ಲಿ ಮೇಲೆ ಕುಳಿತು ಜಾರಿದರೆ ಸರ್ರನೆ ಜಾರಿ ನೀರಿಗೆ ಬೀಳುವ ರಾಕ್ಷಸಗಾತ್ರದ ಪೈಪುಗಳಂತೆ ನಮ್ಮ ಗಂಟಲ ವಿನ್ಯಾಸವಿರುವುದರಿಂದ ನಾವು ರಾಗಿಮುದ್ದೆಯನ್ನಷ್ಟೆ ಅಲ್ಲ ಏನನ್ನು ಬೇಕಾದರೂ ನುಂಗಿ ಹಾಕಬಹುದು ಎನ್ನುವುದು ಎಲ್ಲಾ ರಾಗಿಮುದ್ದೆ ತಿನ್ನುವವರ ಅಲ್ಲಲ್ಲ ನುಂಗುವವರ ಕಾನ್ಸೆಪ್ಟ್. ನಾವು ಇದನ್ನೆಲ್ಲಾ ವರ್ಣಿಸಿದಮೇಲೆ ನಮ್ಮ ಒತ್ತಾಯದ ಮೇರೆಗೆ ಕೊನೆಯ ಪ್ರಯತ್ನವೆನ್ನುವಂತೆ ಗೋಲಿಗಾತ್ರದ ರಾಗಿಮುದ್ದೆಯನ್ನು ಸೊಪ್ಪಿನ ಬಸ್ಸಾರಿನಲ್ಲಿ ಉರುಳಾಡಿಸಿ ಕೈಗೆತ್ತಿಕೊಂಡು ಬಾಯಿ ತೆಗೆದು ಕಣ್ಣುಮುಚ್ಚಿ ನೇರವಾಗಿ ಗಂಟಲೊಳಗೆ ಇಳಿಬಿಟ್ಟರು. ಓಹ್! ಸೂಪರ್ ಸಕ್ಸಸ್ ಕಣ್ರಿ! ಅಂತ ಖುಷಿಯಿಂದ ಮತ್ತೊಂದು ನುಂಗಲು ಹೇಳಿದೆವು. ಆದ್ರೆ ಅವರ ಮುಖವಾಗಲೇ ಕಿವುಚಿಕೊಂಡಿತ್ತು. ಯಾಕೆಂದರೆ ಅದು ಗಂಟಲ ಬಳಿ ಜಾರಿಬಿಟ್ಟರೂ ಇಳಿಜಾರಿನಲ್ಲಿ ಜಾರಿಹೋಗದೆ ಅದ್ಯಾಗೋ ವಾಪಸ್ ಬಂದು ಹಲ್ಲುಗಳ ಮದ್ಯೆ ಸಿಕ್ಕಿಕೊಂಡುಬಿಟ್ಟಿದೆ!  ಅರೆರೆ ಅದು ಹೇಗೆ ವಾಪಸ್ ಬರಲು ಸಾಧ್ಯ?  ವಂಡರ್ ಲಾ ಕಾನ್ಸೆಪ್ಟ್ ಇವರಿಗೆ ವರ್ಕೌಟ್ ಆಗಲಿಲ್ಲ.

 "ಬಾಯಲ್ಲೇ ಸಿಕ್ಕಿಕೊಂಡು ಹಲ್ಲಿನ ನಡುವೆ ಅಂಟಿಕೊಂಡುಬಿಟ್ಟಿದೆ ಕಣ್ರೀ, ಏನ್ ಮಾಡೋದು ಈಗ ಅಂತ ಯಾವುದೋ ರಿಯಾಲಿಟಿ ಷೋನಲ್ಲಿ ಟಾಸ್ಕಲ್ಲಿ ಸಿಕ್ಕಿಹಾಕಿಕೊಂಡಂತೆ" ಅನ್ನುತ್ತಾ ಮುಖಮಾಡಿಕೊಂಡರು.   

   "ಹೋಗಲಿಬಿಡಿ, ಒಂದೆರಡು ಚಮಚ ಸಾಂಬಾರು ಬಾಯಿಗೆ ಬಿಟ್ಟುಕೊಳ್ಳಿ, ಹಲ್ಲಿಗೆ ಅಂಟಿಕೊಳ್ಳುವುದು ತಪ್ಪುತ್ತದೆ, ಕೊನೆಪಕ್ಷ ಅಗಿದು ನಿಂಗಿಬಿಡಿ"  ಐಡಿಯ ಕೊಟ್ಟೆ.  ನಾನು ಹೇಳಿದ್ದನ್ನೂ ಹೇಗೋ ಕಷ್ಟಪಟ್ಟು ಮಾಡಿ, "ಇದರ ಸಹವಾಸ ಬೇಡಪ್ಪ" ಎಂದರು.

 ಇವರ ಕತೆ ಇಷ್ಟಾದರೇ ಮೂರು ವರ್ಷದ ಹಿಂದೆ ಕುಟುಂಬ ಸಮೇತ ನಮ್ಮ ಮನೆಗೆ ಬಂದಿದ್ದ ನಾಗೇಂದ್ರ ಮತ್ಮರ್ಡು ಕುಟುಂಬದವರಿಗೂ ರಾಗಿಮುದ್ದೆ ರಸ್ತೆಗಳಲ್ಲಿನ ಹಂಪ್ಸುಗಳಂತೆ ಕಾಡಿತ್ತು.  ಅವತ್ತು ನಮ್ಮ ಮನೆಯಲ್ಲಿ ಹೇಮಾಶ್ರೀ ಮತ್ತು ನಾಗೇಂದ್ರ ಶ್ರೀಮತಿ ಇಬ್ಬರೂ ಸೇರಿಕೊಂಡು ಅವರ ಇಷ್ಟದ ಸಿರಸಿ ಕಡೆಯ ಅಡುಗೆಯನ್ನೇ ಸಿದ್ದಮಾಡಿದ್ದರು.  ಜೊತೆಗೆ ರಾಗಿಮುದ್ದೆಯೂ ಊಟದಲ್ಲಿರಲಿ ಅಂತ ಅವರು ಆಸೆಪಟ್ಟಾಗ ಹೇಮಾ ಅದನ್ನು ಮಾಡಿದ್ದಳು. ಸಹಜವಾಗಿ ಊಟದಲ್ಲಿ ಮುದ್ದೆಯನ್ನೇ ಮೊದಲು ಮುಗಿಸಿಬೇಕು ಎನ್ನುವುದು ಆಗಿನಕಾಲದಿಂದ ನಡೆದುಬಂದ ಪದ್ದತಿ. ಎಲ್ಲರೂ ಒಟ್ಟಾಗಿ ಊಟಕ್ಕೆ ಕುಳಿತೆವಲ್ಲ  ನನ್ನ ತಟ್ಟೆಯಲ್ಲಿ ರಾಗಿಮುದ್ದೆ ತಿರುಪತಿ ಲಾಡುಗಾತ್ರದಲ್ಲಿದ್ದರೇ ಅವರಿಗೆ ಬೆಂಗಳೂರ್‍ಇನ ಸ್ವೀಟ್ ಅಂಗಡಿಗಳಲ್ಲಿ ಸಿಗುವ ಲಾಡುಗಳಷ್ಟು ಗಾತ್ರದ್ದು ಮಾತ್ರ ಹೇಮಾ ಬಡಿಸಿದ್ದಳು. ಸಾಂಬಾರಿನೊಳಗೆ ಉಂಡೆಮಾಡಿದ ಮುದ್ದೆ ಗೋಲಿಗಳನ್ನು ನಾಲಗೆಯ ರುಚಿಗಾಗಿ ತುಪ್ಪದಲ್ಲಿಯೂ ಒಮ್ಮೆ ಹೊರಳಾಡಿಸಿ ಬಾಯೊಳಗೆ ಹಾಕಿಕೊಂಡರೆ ಅವರಿಗೆ ಇಷ್ಟವಾಗಬಹುದು ಎಂದುಕೊಂಡು ಅವರೆಲ್ಲರ ತಟ್ಟೆಯಲ್ಲಿಯೂ ಸಾಕಷ್ಟು ತುಪ್ಪವನ್ನು ಬಡಿಸಲಾಗಿತ್ತು. ಮೊದಲಿಗೆ ಎಲ್ಲರಿಗೂ ಹೇಗೆ ಅದನ್ನು ತಿನ್ನಬೇಕು ಅಲ್ಲಲ್ಲ ನುಂಗಬೇಕು ಮತ್ತು ನುಂಗುವುದರ ನಡುವೆ ಸಿಗುವ ರುಚಿಯ ಅಹ್ಲಾದವನ್ನು ಹೇಗೆ ಸವಿಯಬೇಕು ಎನ್ನುವುದನ್ನು ನಾನು ಮುಖದಲ್ಲಿ ಭಾವನೆಗಳನ್ನು ವ್ಯಕ್ತಪಡಿಸುತ್ತಾ ಮಾಡಿ ತೋರಿಸಿದ್ದೆ. ಒಹ್! ಇದು ಇಷ್ಟ ಸುಲಭ ಅಂತ ಗೊತ್ತೇ ಇರಲಿಲ್ಲವೆಂದುಕೊಂಡು  ಊಟ ಪ್ರಾರಂಭಿಸಿದರು.  ನಾಗೇಂದ್ರನ ಮೊದಲ ಮಗ ಸುಹಾಸ ಖುಷಿಯಿಂದ ಬಾಯಿಗೆ ಹಾಕಿಕೊಂಡ. ಈ ವಿಚಾರದಲ್ಲಿ ಮೊದಲ ಬ್ಯಾಟ್ಟ್ ಮ್ಯಾನ್ ಆಗಿ ಅವನು ಆತ್ಮವಿಶ್ವಾಸದಿಂದ ಮೈದಾನಕ್ಕೆ ಪ್ರವೇಶ ಮಾಡಿದ್ದು ನಮಗೆಲ್ಲಾ ಖುಷಿಯಾಗಿತ್ತು.  ಆವನನ್ನು ನೋಡಿ ಬಹುಶಃ ಈತ ನುಂಗುವ ಮುದ್ದೆ ಗೋಲಿಗಳು ಶತಕ ಬಾರಿಸಬಹುದು ಅಂತ ಮಾತಾಡಿಕೊಂಡೆವು. ಅಷ್ಟರಲ್ಲಿ "ಅಪ್ಪಾಜಿ" ಅಂತ ಜೋರಾಗಿ ಕೂಗಿದ.

 "ಎಂತ ಆತು?  ನಾಗೇಂದ್ರ ಮಗನ ಕಿವುಚಿಕೊಂಡ ಮುಖ ನೋಡುತ್ತ ಕೇಳಿದರು!"

 "ಇದು ನುಂಗಕ್ಕೆ ಬರ್ತಿಲ್ಲೇ....ಬಾಯಲ್ಲೇ ಉಳಿದೋಯ್ತು..." ಅಂದ ಸುಹಾಸ.

 "ಬಾಯಿಗೆ ಸ್ವಲ್ಪ ಸಾಂಬಾರು ಮತ್ತು ತುಪ್ಪವನ್ನು ಹಾಕಿಕೋ..ಅದರ ರುಚಿಯನ್ನು ಸವಿಯುತ್ತಾ ಅದರ ಬ್ಯಾಲೆನ್ಸಿನಲ್ಲೇ ನುಂಗಿಬಿಡು" ಅಂದಳು ಹೇಮಾ.

" ಹೌದೋ ಸುಹಾಸ್, ನೋಡು ನಿನಗೆ ನಿಮ್ಮೂರಿನ ಇಷ್ಟದ ಪ್ರಸಂಗವನ್ನು ನೆನೆಸಿಕೊಂಡು ಜೊತೆಗೆ ಬೇಕಾದರೆ ಮಜ್ಜಿಗೆ ಉಳಿಯನ್ನು ಸ್ವಲ್ಪ ಕುಡಿದು ಹಾಗೆ ನಿದಾನವಾಗಿ ನುಂಗು" ಅಂದೆ.


 "ಇಲ್ಲ ಶಿವು ಮಾಮ, ಏನನ್ನು ನೆನಸಿಕೊಂಡರೂ ಆಗುತ್ತಿಲ್ಲ! ಬಾಯೊಳಗಿನ ರಾಗಿಮುದ್ದೆಯನ್ನು ಬಿಟ್ಟು ಬೇರೇನು ನೆನಪಾಗುತ್ತಿಲ್ಲ" ಅಂದ.

 "ನೋಡುತಮ್ಮ ನಿನಗೆ ಜ್ವರ ಬಂದಾಗ ಗುಳಿಗಿ ನುಂಗಿ ನೀರು ಕುಡಿಯುತ್ತೀಯಲ್ಲ ಹಾಗೆ ನುಂಗಿಬಿಡು" ಹೊಸ ಐಡಿಯ ಕೊಟ್ಟರು ನಾಗೇಂದ್ರ ಶ್ರೀಮತಿಯವರು. 

 "ಆತಿಲ್ಲೇ ಹೋಗೇ, ಇದು ಕಷ್ಟ ಗೊತ್ತಾ, ನೀನು ಒಂದು ನುಂಗಿ ತೋರಿಸೆ" ಅಂದ

 ಇದುವರೆಗೂ ಮಗನಿಗೆ ತಿಳುವಳಿಕೆ ಕೊಡುತ್ತಿದ್ದ ಆಕೆಗೆ ತಾನೇ ಫೀಲ್ಡಿಗೆ ಇಳಿಯಬೇಕಾದ ಅನಿರೀಕ್ಷಿತ ಪ್ರಸಂಗ ಬಂದಿದ್ದರಿಂದ ಸಂದಿಗ್ಧಕ್ಕೆ ಒಳಗಾದರೂ ಅದನ್ನು ಮುಖದಲ್ಲಿ ತೋರಿಸಿಕೊಳ್ಳದೇ ನಮ್ಮ ಕಡೆಗೊಮ್ಮೆ ನೋಡಿದರು.  ಒಮ್ಮೆ ದೇಸಾವರಿ ನಗು ನಕ್ಕು ಸಣ್ಣ ಗೋಲಿಗಾತ್ರದ ರಾಗಿ ಮುದ್ದೆಯನ್ನು ತುಪ್ಪ ಮತ್ತು ಸೊಪ್ಪಿನ ಸಾರಿನಲ್ಲಿ ಒಮ್ಮೆ ಮುಳುಗಿಸಿ, ಉರುಳಿಸಿ, ತಲೆಕೆಳಗು ಮಾಡಿ,  ಹಾಗೆ ಬಾಯಿಗೆ ಹಾಕಿಕೊಂಡರು.  ಒಂದೆರಡು ಕ್ಷಣ ಎಲ್ಲರೂ ಅವರನ್ನೇ ನೋಡುತ್ತಾ ಯಾರು ಮಾತಾಡಲಿಲ್ಲ.  ನಾಗೇಂದ್ರನಿಗಂತೂ ತಮ್ಮ ಶ್ರೀಮತಿ ಮೊದಲ ಬಾರಿಗೆ ರಾಗಿ ಮುದ್ದೆಯನ್ನು ನುಂಗುವುದನ್ನು ಬಿಟ್ಟ ಕಣ್ಣು ಬಿಟ್ಟಂತೆ ನೋಡುತ್ತಿದ್ದರು. ನುಂಗುವುದರಲ್ಲಿ ಫೇಲ್ ಆದ ಸುಹಾಸ ಅಮ್ಮ ಯಶಸ್ವಿಯಾಗುವಳೇ ಅಂತ ಆಕೆಯನ್ನೇ ನೋಡುತ್ತಿದ್ದ. ಎರಡನೆ ಮಗ ವಿಕಾಸನಂತೂ ತನ್ನಮ್ಮ ಕಡೆಗೆ ಅಚ್ಚರಿಯಿಂದ ನೋಡುತ್ತಲೇ ಇದ್ದ.

" ಜಾರಿಹೋಯ್ತ?" ಕುತೂಹಲದಿಂದ ಕೇಳಿದಳು ಹೇಮಾ.

ಅವರು ಮಾತಾಡಲಿಲ್ಲ.  ನಮ್ಮ ಕಡೆಗೊಮ್ಮೆ ಹುಸಿನಗೆ ಬೀರುತ್ತಾ ತಲೆಅಲ್ಲಾಡಿಸಿದರು.

"ಹಾಗಾದರೆ ಮತ್ತೆಲ್ಲಿ ಹೋಯ್ತು" ನಾನು ಕೇಳಿದೆ.

           "ಬೆಂಗಳೂರಿನ ಟ್ರಾಫಿಕ್ ಜಾಮಿನಲ್ಲಿ ಸಿಕ್ಕಿಕೊಂಡಂತೆ ಬಾಯಲ್ಲೇ ಇರಬೇಕು!" ನಾಗೇಂದ್ರ ನಗುತ್ತಾ ಹೇಳಿದಾಗ ನಮಗೆಲ್ಲಾ ನಗು.  ನಾಗೇಂದ್ರ ಮುದ್ದೆ ನುಂಗುವ ಸರಧಿ ಬಂತಲ್ಲ,  ನನಗೂ ಮತ್ತು ಹೇಮಾಗೂ ಇದೊಂತರ ತಮಾಷೆಯ ಪ್ರಸಂಗವಾದರೆ,  ಉಳಿದವರಿಗೆಲ್ಲಾ ಇದೊಂದರ ನೂರಹತ್ತು ಮೀಟರ್ ರನ್ನಿಂಗ್ ರೇಸಿನಲ್ಲಿ ನಡುನಡುವೆ ಸಿಗುವ ಹರ್ಡಲ್ಸುಗಳನ್ನು ಹಾರಿ ಗುರಿ ಮುಟ್ಟಬೇಕಾದ ಪರಿಸ್ಥಿತಿ.  ವಿಕಾಸನಂತೂ ನಮ್ಮಲ್ಲೆರನ್ನು ಮುಗ್ದವಾಗಿ ನೋಡುತ್ತಾ ಎಲ್ಲರ ಪ್ರಯತ್ನ, ಯಶಸ್ಸು ವಿಫಲತೆಯನ್ನು ಸೂಕ್ಷ್ಮವಾಗಿ ಮಾತಾಡದೇ ಗಮನಿಸುತ್ತಿದ್ದ.  ಎಲ್ಲರ ಪ್ರಯತ್ನವೂ ವಿಫಲವಾಗಿದ್ದು ನೋಡಿ ಇದೊಳ್ಳೆ ಭಯಂಕರ ಸಾಹಸವಿರಬಹುದು ಅಂತ ಊಹಿಸಿಕೊಳ್ಳುತ್ತಿದ್ದ. ತನ್ನ ಮನೆಯವರೆಲ್ಲಾ ರಾಗಿ ಮುದ್ದೆ ಬಾಯೊಳಗಿನ ಹಲ್ಲುಗಳ ನಡುವೆ ಸಿಕ್ಕಿಹಾಕಿಕೊಂಡು ಒದ್ದಾಡುತ್ತಿರುವುದನ್ನು ನೋಡಿದ ವಿಕಾಸನಿಗೆ ತನ್ನ ಹಲ್ಲುಗಳ ನಡುವೆ ಹೀಗೆ ಫೆವಿಕಾಲ್ ತರ ಅಂಟಿಕೊಂಡು ಮುಂದೆ ನಾನು ಬಾಯನ್ನು ಬಿಡದ ಪರಿಸ್ಥಿತಿ ಬಂದುಬಿಟ್ಟರೆ ಮತ್ತೆ ಚಾಕ್‍ಲೇಟು ತಿನ್ನಲಾಗದಂತೆ ಬಾಯಿ ಸೀಲ್ ಆಗಿಬಿಟ್ಟರೆ.......ಇಂಥ ಭಯಂಕರ ಕಲ್ಪನೆಯಿಂದಾಗಿ ಅವನು ರಾಗಿಮುದ್ದೆಯನ್ನು ನುಂಗುವ ಪ್ರಯತ್ನವನ್ನೇ ಮಾಡಲಿಲ್ಲ.

      ಕೊನೆಗೆ ಅವತ್ತಿನ ಊಟದಲ್ಲಿ ಅವರ್ಯಾರು ರಾಗಿಮುದ್ದೆಯನ್ನು ಉಣ್ಣಲಿಲ್ಲ, ಅದರ ರುಚಿಯನ್ನು ಸವಿಯಲಿಲ್ಲ ಕೊನೆಯ ಪಕ್ಷ ನುಂಗಲಿಲ್ಲ.  ಸಿರಸಿಯ ಗೆಳೆಯರು ನಮ್ಮ ಮನೆಗೆ ಬಂದಾಗಲೆಲ್ಲಾ ಹೀಗೆ ವೈವಿಧ್ಯಮಯವಾದ ರಾಗಿಮುದ್ದೆ ಪ್ರಸಂಗಗಳು ನಡೆಯುತ್ತಿರುತ್ತವೆ. ಬರೆದರೆ ಪ್ರಕಾಶ್ ಹೆಗಡೆ ಸೇರಿದಂತೆ ನನ್ನ ಅನೇಕ ಸಿರಸಿ ಗೆಳೆಯರು ರಾಗಿ ಮುದ್ದೆ ನುಂಗುವುದರ ಬಗ್ಗೆ ಹೊಂದಿರುವ ಅಭಿಪ್ರಾಯವನ್ನೆಲ್ಲಾ ಬರೆದರೆ ಲೇಖನ ದೊಡ್ಡದಾಗಿ ಅದನ್ನೆಲ್ಲಾ ಓದಿ ಮುಗಿಸುವ ಹೊತ್ತಿಗೆ ರಾಗಿಮುದ್ದೆ ನುಂಗುವುದು ನಿಮಗೆಲ್ಲಾ ನುಂಗಲಾರದ ತುತ್ತಾಗಿ ಪರಿಣಾಮ ಬೀರಬಾರದೆಂದು ಇಲ್ಲಿಗೆ ಮುಗಿಸುತ್ತಿದ್ದೇನೆ. ಓದಿದ ನಂತರ ನೀವು ನಿಮ್ಮ ನುಂಗುವ ಪ್ರಸಂಗಗಳನ್ನು ನೆನಪಿಸಿಕೊಂಡು ಪ್ರತಿಕ್ರಿಯಿಸಬಹುದು.

ಚಿತ್ರಗಳ ಕೃಪೆ: ಅಂತರ್ಜಾಲ.
ಲೇಖನ : ಶಿವು.ಕೆ


  

Friday, February 11, 2011

ರಾಷ್ಟ್ರಮಟ್ಟದ ಛಾಯಾಚಿತ್ರ ಪ್ರದರ್ಶನ ಮಿಸ್ ಮಾಡಿಕೊಳ್ಳಬೇಡಿ


ಬೆಂಗಳೂರಿನ  ಯೂತ್ ಫೋಟೊಗ್ರಫಿ ಸೊಸೈಟಿಯ 32ನೇರಾಷ್ಟ್ರಮಟ್ಟದ ಛಾಯಾಚಿತ್ರ ಪ್ರದರ್ಶನವು ಇದೇ ಫೆಬ್ರವರಿ 10 ರಿಂದ 14ರವರೆಗೆ ವೆಂಕಟಪ್ಪ ಆರ್ಟ್ ಗ್ಯಾಲರಿಯಲ್ಲಿ ನಡೆಯುತ್ತಿದೆ.  ಕಳೆದ ಬಾರಿ ಮೂರು ವಿಭಾಗದ ಪಲಿತಾಂಶವನ್ನು ಬ್ಲಾಗಿನಲ್ಲಿ ಹಾಕಿದ್ದೆ. ಉಳಿದ ಪ್ರಕೃಯಿ ಮತ್ತು ಕ್ರಿಯೇಟೀವ್ ವಿಭಾಗದ ಪ್ರಶಸ್ತಿ ವಿಜೇತ ಛಾಯಾಚಿತ್ರಗಳು ನಿಮಗಾಗಿ


ನೇಚರ್ ಪ್ರಿಂಟ್ ವಿಭಾಗದ ಬಹುಮಾನ ವಿಜೇತ ಚಿತ್ರಗಳು.
ಮೊದಲ ಬಹುಮಾನ ಬಿ.ಸಿ ಮಂಜಪ್ಪ. ಬೆಂಗಳೂರು
ಚಿತ್ರ: ಮಕ್ಕಳೊಂದಿಗೆ ಹೆಣ್ಣು ಹುಲಿ.


ಎರಡನೇ ಬಹುಮಾನ ಬೆಂಗಳೂರಿನ ಪ್ರದೀಪ್ ಕುಮಾರ್
ಚಿತ್ರ: ನೈಟ್ ಹೆರಾನ್ ಜೊತೆಯಲ್ಲಿ ಮರಿ


ಮೂರನೆ ಬಹುಮಾನ ವಿ ಡಿ ಭಟ್ ಸುಗಾವಿ
ಚಿತ್ರ: ಮೊಟ್ಟೆಯಿಡುತ್ತಿರುವ ಪೆಂಟಟಾಮಿ ಬಗ್


ಅತ್ಯುತ್ತಮ ಪ್ರಾಣಿಗಳ ಚಿತ್ರ ಬಹುಮಾನ ವಿಜೇತರು ಸಿದ್ಧಾರ್ಥ ಮಲ್ಲಿಕ್ ಬೆಂಗಳೂರು
 ಚಿತ್ರ:  ಕಾಡುನಾಯಿಯನ್ನು ಅಟ್ಟಿಸಿಕೊಂಡು ಹೋಗುತ್ತಿರುವ ಕಾಡುಹಂದಿ


ಅತ್ಯುತ್ತಮ ಕೀಟ ವಿಭಾಗದ ಬಹುಮಾನ ವಿಜೇತರು ವಿ.ಡಿ ಭಟ್ ಸುಗಾವಿ
 ಚಿತ್ರ : ಮೊಟ್ಟೆಯಿಡುತ್ತಿರುವ ಬಗ್


ಅರ್ಹತ ಪತ್ರ ಪಡೆದವರು: ಬೆಂಗಳೂರಿನ ಇಮ್ತಿಯಾಜ್ ಖಾನ್
  ಚಿತ್ರ ಆಹಾರದ ಜೊತೆ ಹ್ಯಾರಿಯರ್ ಹದ್ದು



ಸೃಜನಶೀಲ ಛಾಯಾಚಿತ್ರ ವಿಭಾಗದಲ್ಲಿ ಬಹುಮಾನ ವಿಜೇತ ಚಿತ್ರಗಳು.

ಮೊದಲನೆ ಬಹುಮಾನ ಶಿವು ಕೆ. AFIAP, ARPS. ಬೆಂಗಳೂರು
ಚಿತ್ರ: ಇರುವೆಗಳ ಒಗ್ಗಟ್ಟು


ಎರಡನೆ ಬಹುಮಾನ :ದೃತಿಮಾನ್ ಹೋರ. ಕೋಚ್ ಬಿಹಾರ್
ಚಿತ್ರ: ಡಿವೈನಿಟಿ


ಮೂರನೆ ಬಹುಮಾನ ಎ.ಜಿ ಲಕ್ಷ್ಮಿನಾರಾಯಣ್ EFIAP  ಶಿವಮೊಗ್ಗ
ಚಿತ್ರ: ವಾಚ್‍ಮೆನ್



ಆರ್ಹತ ಪತ್ರ ಪಡೆದವರು ಗೌತಮ ಚಟರ್ಜಿ EFIAP. ಕೊಲ್ಕಟ್ಟ
ಚಿತ್ರ: ಆಟಮನ್ ಡ್ರೀಮ್


                     ಎರಡನೆ ಆರ್ಹತ ಪತ್ರ ಪಡೆದವರು ಸೃಜನ್ ಸಾಕರ್. ಕೋಚ್ ಬಿಹಾರ್
                                                                ಚಿತ್ರ: ಸಸ್ಟೇನ್ 



ಆರನೆ ಮತ್ತು ಹೊಸ ವಿಭಾಗವಾದ ಡಿಜಿಟಲ್ ನೇಚರ್ ವಿಭಾಗದ ಬಹುಮಾನ ವಿಜೇತ ಚಿತ್ರಗಳು.
ಮೊದಲ ಬಹುಮಾನ: ಕಿರಣ್ ಪೂಣಚ್ಚ ಬೆಂಗಳೂರು.
ಚಿತ್ರ: ಹ್ಯಾರಿಯರ್ ಲ್ಯಾಂಡಿಂಗ್



ದ್ವಿತೀಯ ಬಹುಮಾನ ಕೆ.ಪಿ. ಮಾರ್ಟಿನ್ ಬೆಂಗಳೂರು
 ಚಿತ್ರ: ಮರಿಗಳೊಂದಿಗೆ ಪ್ಲೇನ್ ರನ್ ಹಕ್ಕಿ


ಮೂರನೆ ಬಹುಮಾನ: ತಪಸ್ ಕುಮಾರ್ ನಂದ, ಕೋಚ್ ಬಿಹಾರ್
ಚಿತ್ರ: ಬ್ಲಾಕ್ ವಿಂಗಡ್ ಕೈಟ್


ಅತ್ಯುತ್ತಮ ಕೀಟ ಪ್ರಶಸ್ತಿ ಪಡೆದವರು ವಿಧ್ಯಾದರ್ ಶಿಲ್ಕೆ. ಬೆಳಗಾವಿ
 ಚಿತ್ರ: ರಾಬರ್ ಪ್ಲೆ ಮೇಟಿಂಗ


ಮೊದಲ ಅರ್ಹತ ಪತ್ರ ಪಡೆದವರು ವಿ.ಡಿ.ಭಟ್ ಸುಗಾವಿ
ಚಿತ್ರ ಮರಿಗಳೊಂದಿಗೆ ಬಗ್



ಎರಡನೇ ಅರ್ಹತಪತ್ರ ಪಡೆದವರು: ಕಿರಣ್ ಪೂಣಚ್ಚ: ಬೆಂಗಳೂರು
 ಚಿತ್ರ: ಬೇಟೆಯೊಂದಿಗೆ ಹದ್ದು

ಇವುಗಳಲ್ಲದೇ ನೂರಾರು ಅತ್ಯುತ್ತಮವೆನಿಸುವ ಪ್ರದರ್ಶನಕ್ಕೆ ಆಯ್ಕೆಯಾಗಿರುವ ಚಿತ್ರಗಳನ್ನು ನೋಡಲು ಅವಕಾಶ ಸಂಜೆಯ ವೆಂಕಟಪ್ಪ ಆರ್ಟ್ ಗ್ಯಾಲರಿಗೆ ಸಂಜೆ  ಸಮಯದಲ್ಲಿ ಹೋದರೆ ಪ್ರದರ್ಶನಗೊಂಡ ಚಿತ್ರಗಳೊಂದಿಗೆ ಪ್ರೊಜೆಕ್ಟೆಡ್ ವಿಭಾಗದ ಚಿತ್ರಗಳನ್ನು ನೋಡುವ ಅವಕಾಶ ತಪ್ಪದೇ ನೋಡಿ ಆನಂದಿಸಿ..

 ಲೇಖನ: ಶಿವು.ಕೆ