Friday, March 25, 2011

ಮೂರುಮುಕ್ಕಾಲು ಅಕ್ಷರಗಳ ಹೆಸರಿನ ಈ ಊರಿನ ಸಾಧನೆ ನಿಮಗೆ ಗೊತ್ತೆ.?


            ನಾನು ಮತ್ತು ಮಲ್ಲಿಕಾರ್ಜುನ್ ಮೊದಲ ಭಾರಿಗೆ ಕಾನ್ಸೂರಿನಲ್ಲಿ ಬಸ್ಸಿಳಿದಾಗ ಮುಂಜಾನೆ ೫-೩೦.  ಕತ್ತಲು  ಏನು ಕಾಣುತ್ತಿಲ್ಲ. ಜನವರಿ ತಿಂಗಳಾದ್ದರಿಂದ  ಹಿಮದಿಂದ ಕೂಡಿದ ಚಳಿ. ೬-೩೦ರವರೆಗೆ ಫೋಟೋಗ್ರಫಿ ದೃಷ್ಠಿಯಿಂದ ಇಷ್ಟಪಟ್ಟು, ವೈಯಕ್ತಿಕವಾಗಿ ಕಷ್ಟಪಟ್ಟು ಅದನ್ನು ಅನುಭವಿಸುತ್ತಿದ್ದೆವು.  ನಾಗೇಂದ್ರ ಜೊತೆಗೆ ನಾಲ್ಕು ಕಿಲೋಮೀಟರ್ ದೂರ ಪಕ್ಕಾ ಮಣ್ಣಿನ ಪುಟ್ಟ ರಸ್ತೆಯಲ್ಲಿ ಮುತ್ಮುರ್ಡು ಅನ್ನುವ  ಎಂಟೇ ಮನೆ ಇರುವ ಊರು ತಲುಪುವ ಹೊತ್ತಿಗೆ ೭ ಗಂಟೆ.  ಡಿಲಕ್ಸ್ ಬಸ್ಸು ಸಿಗದೇ ಸರ್ಕಾರಿ ಆರ್ಡಿನರಿ ಎಕ್ಸ್‌ಪ್ರೆಸ್ಸಿನ  ಕೊನೆ  ಸೀಟಿನಲ್ಲಿ ರಾತ್ರಿ ಪ್ರಯಾಣ, ಮತ್ತು ಈ ಮಣ್ಣಿನ ರಸ್ತೆಗಳು  ನಮ್ಮ  ಮೂಳೆಗಳ ಜಾಗ ಬದಲಿಸಿದ್ದವು.

ಮುತ್ಮರ್ಡುಗೆ ಹೋಗುವ ಏರಿಳಿತದ ಮಣ್ಣಿನ ದಾರಿ

 ನಂತರ ನಾಗೇಂದ್ರ ಮನೆಯಲ್ಲಿ ಬಿಸಿಬಿಸಿ ಸ್ನಾನಮಾಡಿ "ತುಪ್ಪ ಮತ್ತು ಜೋನಿಬೆಲ್ಲದ ಜೊತೆಗೆ ತೆಳ್ಳೇವು"  ತಿನ್ನುವಲ್ಲಿ ಪ್ರಾರಂಭವಾಗಿ ಅಲ್ಲಿದ್ದ ಮೂರು ದಿನದಲ್ಲಿ ನಮ್ಮ ಫೋಟೋಗ್ರಫಿ, ಊರಿನ ಜನರ ಒಡನಾಟ ಮಕ್ಕಳೊಂದಿಗೆ ಮಕ್ಕಳಾಗಿದ್ದು,  ದೊರತ ಮುಗ್ದ ಪ್ರೀತಿ, ಮರುವರ್ಷ  ಮಲ್ಲಿಕಾರ್ಜುನ್ ಕುಟುಂಬ ಸಮೇತರಾಗಿ ಹೊರಟು ನಿಂತಾಗ ನಾನು ಹೇಮಾಶ್ರೀಯನ್ನು ಕರೆದುಕೊಂಡು ಹೋಗಿದ್ದು ಇದ್ದ ಮೂರುದಿನ  ಮಜ ಅನುಭವ, ಇತ್ಯಾದಿಗಳನ್ನು  ಚೆನ್ನಾಗಿ ಅನುಭವಿಸಿದರೂ  ಅದನ್ನು ಬರೆಯದೇ  ಮೂರುಮುಕ್ಕಾಲು ಅಕ್ಷರಗಳ ಮುತ್ಮುರ್ಡು ಎಂಬ ಊರು, ಊರಿನ ಜನರ ಸಾಧನೆ ಬಗ್ಗೆ ಕಿರು ಪರಿಚಯ ಮಾಡಿಕೊಡಲೆತ್ನಿಸುತ್ತೇನೆ.

ದಟ್ಟ ಕಾಡಿನ ನಡುವೆ ಕಾಣುವ ಹೆಂಚಿನ ಮನೆಗಳೇ ಮುತ್ಮರ್ಡು ಎನ್ನುವ ಊರು.
            
 ಮೊದಲಿಗೆ ಅರವತ್ತು ವರ್ಷಗಳ ಹಿಂದೆ ಕೇವಲ ಮೂರು ಮನೆಗಳಿದ್ದ  ಈ ಊರಿನ  ಫೋಟೋವನ್ನು ಮನಸ್ಸಿನಲ್ಲೇ ಕ್ಲಿಕ್ಕಿಸಿಕೊಳ್ಳಿ.   ಆಗ ವಿದ್ಯುತ್  ಇರಲಿಲ್ಲ[ಈಗ ಇದ್ದರೂ  ಇಲ್ಲದಂತಿದೆ]. ಸೀಮೆಯೆಣ್ಣೆ, ಅಥವ  ಎಳ್ಳೆಣ್ಣೆ ದೀಪಗಳೇ  ರಾತ್ರಿಯ  ಕತ್ತಲು ನಿವಾರಿಸುವ  ಬೆಳಕುಗಳು.  ಆಗ  ಓದು ಬರಹ ಬರದ ಹೆಬ್ಬೆಟ್ಟು ಸಹಿಯ ಈ ಊರಿನ  "ಗಣೇಶ್ ಹೆಗಡೆ" ಎಂಬುವರು  ದೂರದ  ಶರಾವತಿ ವಿದ್ಯುತ್ ಕಾರ್ಯಗಾರಕ್ಕೆ  ಹೋಗಿ,  ಅಲ್ಲಿನ  ವಿದ್ಯುತ್ ಉತ್ಪಾದಿಸುವ ದೊಡ್ಡ ದೊಡ್ಡ ಟರ್ಬೈನುಗಳನ್ನು ನೋಡಿದರಂತೆ.  ಮತ್ತೆ  ಮತ್ತೆ  ಹೋಗಿ  ಅವುಗಳನ್ನು ಚೆನ್ನಾಗಿ ಅಧ್ಯಾಯನ ಮಾಡಿ, ನಂತರ ಸಿರಸಿಯ  ಮರಗೆಲಸದವರ ಬಳಿ  ತಮಗೇ ಬೇಕಾದ ಹಾಗೆ  ಆಡಿಕೆ ಮರದ ತುಂಡುಗಳಿಂದ  ಚಿಕ್ಕ ಚಿಕ್ಕ ಟರ್ಬೈನುಗಳನ್ನು ಮಾಡಿಸಿಕೊಂಡರಂತೆ.  ಊರಿನ ಪಕ್ಕದ ಬೆಟ್ಟದಲ್ಲಿ  ಹರಿಯುತ್ತಿದ್ದ  ನೀರಿನ ಝರಿಗೆ  ಒಂದು ದೊಡ್ಡ ಕೊಳವೆಯನ್ನು  ಹೊಂದಿಸಿ,  ಕೆಳಮುಖದಲ್ಲಿ  ಕೊಳವೆಯ ಮುಖಾಂತರ  ವೇಗವಾಗಿ  ಈ ಮರದ ಟರ್ಬೈನುಗಳ ಮೇಲೆ ನೀರು ಬೀಳುವಂತೇ ಮಾಡಿ ಅದರಿಂದ  ವಿದ್ಯುತ್ಚಕ್ತಿ ಉತ್ಪಾದಿಸುತ್ತಿದ್ದರಂತೆ.  ಅದನ್ನು ತಮ್ಮ  ಮನೆಯ  ಸಂಪೂರ್ಣ ಬೆಳಕಿಗೆ, ತೋಟದ ಕೆಲಸಕ್ಕೆ, ಹೀಗೆ  ಇಪ್ಪತ್ತು ವರ್ಷಗಳವರೆಗೆ   ಉಪಯೋಗಿಸುತ್ತಿದ್ದರಂತೆ. ಇಷ್ಟೇ ಅಲ್ಲದೇ  ಕಾಡಿನಲ್ಲಿ ಸಿಗುವ ಗಿಡಮೂಲಿಕೆ ಗಿಡಗಳಿಂದ ಮದ್ದು ಮಾಡುವುದನ್ನು ಕಲಿತು ಸುತ್ತಮುತ್ತಲಿನ ಊರಿನ ಜನರಿಗೆ ಉಚಿತವಾಗಿ ಚಿಕಿತ್ಸೆ ಮಾಡುವುದು  ಹೀಗೆ  ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿದ್ದರಂತೆ.

ಐವತ್ತು ವರ್ಷಗಳ ಹಿಂದೆಯೇ ಹರಿಯುವ ನೀರಿನಿಂದ ಜಲವಿದ್ಯುತ್ ಉತ್ಪಾದಿಸಿ ಮನೆ ಬಳಕೆಗೆ ಬಳಸಿಕೊಂಡ ಗಜಾನನ ಹೆಗಡೆ ದಂಟಕಲ್

 ಈಗ ಎಂಟು ಮನೆಗಳಿವೆ.  ಈ ಬೆರಳೆಣಿಕೆಯ ಮನೆಯಲ್ಲಿರುವ  ಪುಟ್ಟ ಮಕ್ಕಳಿಗೆ ಒಂದು ಸ್ಕೂಲು. ಗಾಂಧಿ ಜನ್ಮ ಶತಾಬ್ಧಿ ವತಿಯಿಂದ ಈ ಊರಿಗೆ ಸ್ಕೂಲು ಬಂದಿದೆ.  ಊರಿನಿಂದ ಒಂದು ಕಿಲೋ ಮೀಟರ್ ದೂರದಲ್ಲಿ ಪುಟ್ಟ ಗುಡ್ಡದ ಮೇಲಿರುವ ಈ ಸ್ಕೂಲು ಕೂಡ ವಿಶೇಷವಾದುದ್ದೇ.   ವಿಕಾಶ, ಜಯಂತ, ಅಶ್ವಿನಿ, ಮಧುರ, ಭರತ, ಸ್ವಾತಿ, ........ಇಷ್ಟೇ ಜನ  ಆ ಶಾಲೆಯ ವಿದ್ಯಾರ್ಥಿಗಳು. 

 ಮುತ್ಮರ್ಡು ಪಾಠಶಾಲೆ

ಈ ಸ್ಕೂಲಿನ ಸ್ಥಾಪಕರಾದ ಸುಬ್ರಾಯ ಹೆಗಡೆ

ಜಯಂತ ದೊಡ್ಡಬಿನ್ನೆತ್ತಿ[ಯುಕೆಜಿ]ಆದರೆ ಆಶ್ವಿನಿ ಚಿಕ್ಕ ಬಿನ್ನೆತ್ತಿ[ಎಲ್‌ಕೆಜಿ]. ವಿಕಾಶ ಎರಡನೇ ತರಗತಿಯಾದರೇ, ಭರತ ನಾಲ್ಕನೇ ತರಗತಿ. ಸ್ವಾತಿ ಹಾಗೂ ಮಧುರ ಐದನೇ ತರಗತಿ.  ಈ ಆರು ಜನಕ್ಕೆ  ಒಬ್ಬ  ಉಪದ್ಯಾಯರು  ಹಾಗೂ  ಬಿಸಿಊಟಕ್ಕಾಗಿ ಒಬ್ಬರು ಆಡಿಗೆಯವರು ಕೇಳುವುದಕ್ಕೆ  ತುಂಬಾ ಚೆನ್ನಾಗಿದೆಯಲ್ಲವೇ...ನಾವು  ಈ ಶಾಲೆ ನೋಡಲು ಹೋದಾಗ  ಈ ಆರು ಜನ  ಜನರು ಒಂದೇ ಮಣೆಯಲ್ಲಿ ಕುಳಿತು ಓದುತ್ತಿದ್ದರು.

ಎಲ್‍ಕೆಜಿಯಿಂದ....ಆರನೇ ತರಗತಿ....ಒಂದೇ ಕೊಟಡಿಯಲ್ಲಿ ಅದರಲ್ಲೂ ಒಂದೇ ಬೆಂಚಿನಲ್ಲಿ ಕುಳಿತಿದ್ದಾರೆ
ಹೀಗೆ ಒಟ್ಟಿಗೆ ಕೂರುವುದರಿಂದ ಚಿಕ್ಕಬಿನ್ನೆತ್ತಿ[ಎಲ್‍ಕೆಜಿ]ಆಶ್ವಿನಿ ಸೇರಿದಂತೆ ಉಳಿದವರು   ಐದನೇ ತರಗತಿ ಪಾಠ ಕೇಳಬಹುದು...ಹಾಗೇ  ಸ್ವಾತಿ ಮತ್ತು ಮಧುರ ಇಬ್ಬರೂ  ಒಂದನೇ, ಎರಡನೇ,[ಮೂರನೇ ತರಗತಿಗೆ ಮಕ್ಕಳೇ ಇಲ್ಲ]ನಾಲ್ಕನೇ ತರಗತಿಯ ಪಾಠಗಳನ್ನು ಕೇಳಬಹುದು...ಇಂಥ  ಆವಕಾಶ  ಎಲ್ಲಾದರೂ ಉಂಟೇ....ಇದನ್ನೆಲ್ಲಾ  ನೋಡಿ  ನಮಗಂತೂ ಅಚ್ಚರಿ..

ಮುತ್ಮರ್ಡು ಊರಿನ ಮಕ್ಕಳು..ಆಶ್ವಿನಿ, ಜಯಂತ, ವಿಕಾಸ, ಸುಹಾಸ, ಭರತ,  ಆಶ್ವಿನಿ ಅಣ್ಣ...ನಡುವೆ ಇರುವವನು ಮಲ್ಲಿಕಾರ್ಜುನ್ ಮಗ "ಓಂ" ಅವನೊಬ್ಬ ಮಾತ್ರ ಮುತ್ಮರ್ಡು ಊರಿನವನಲ್ಲ.

ಈ ಮಕ್ಕಳು  ಪ್ರತಿದಿನ ಸಂಜೆ ಮನೆಗೆ ಬರುವಾಗ  ಕಾಡುಕೋಣದಂತ  ವನ್ಯಜೀವಿಗಳು ಎದುರಾಗುತ್ತವೆ.  ಅವುಗಳು  ಎದುರಾದಾಗ ಅವುಗಳ ತಂಟೆಗೆ ಹೋಗದೆ  ಸುಮ್ಮನೇ ನಿಂತು ಬಿಟ್ಟರೇ  ತಮ್ಮ ಪಾಡಿಗೆ ಅವು ಹೊರಟು ಹೋಗುತ್ತವೆ ಎನ್ನುವ ಪಾಠವನ್ನು  ಎಲ್ಲರ ಮನೆಯಲ್ಲೂ ಹೇಳಿಕೊಟ್ಟಿರುವುದರಿಂದ  ಈ ಮಕ್ಕಳು ಕಾಡುಪ್ರಾಣಿಗಳ ಜೊತೆ ಹೊಂದಿಕೊಂಡುಬಿಟ್ಟಿವೆ.

    ಮುಂದಿನ ವರ್ಷಗಳಲ್ಲಿ  ಈಗಿರುವ ಮಕ್ಕಳು ಪಾಸಾಗಿ ಮುಂದಿನ ತರಗತಿ ಹೋಗಿಬಿಟ್ಟರೇ ಆ ಶಾಲೆಗೆ ಮಕ್ಕಳೇ ಇರುವುದಿಲ್ಲ  ಈಗ  ಊರಿನ ಯುವಕರೆಲ್ಲಾ ದುಡಿಮೆಗಾಗಿ ನಾಡಿಗೆ ಬರುತ್ತಿರುವುದರಿಂದ  ಮುಂದಿನ ವರ್ಷಗಳಲ್ಲಿ  ಅಲ್ಲಿರುವವರು  ವಯಸ್ಸಾದ ಹಿರಿಯರು ಮಾತ್ರ.  ಆಗ ಈ ಸ್ಕೂಲಿನ ಗತಿ  ಏನಾಗುತ್ತದೋ ನೋಡಬೇಕು.   ಕಾನ್ಸೂರು..ಸಿರಸಿ  ಈ ಊರಿಗೆ ತುಂಬಾ ದೂರವಿರುವುದರಿಂದ  ಊರಿನ ಜನ ಅದಕ್ಕೆ ತಕ್ಕಂತೆ  ಹೊಂದಿಕೊಂಡುಬಿಟ್ಟಿದ್ದಾರೆ.  ಊರಿನಲ್ಲಿ  ಮದುವೆ, ಮುಂಜಿ...ಇತ್ಯಾದಿ ಏನೇ ದೊಡ್ಡ ಕಾರ್ಯಕ್ರಮಗಳಾಗಲಿ, ಹೊರಗಿನವರ ಸಹಾಯವಿಲ್ಲದೇ  ಇಡೀ ಊರಿನ  ಎಂಟು ಮನೆಗಳವರು ತಮ್ಮದೇ ಮನೆಯ ಕಾರ್ಯಕ್ರಮವೆನ್ನುವಂತೆ ಆತ್ಮೀಯವಾಗಿ ಒಂದಾಗುವುದರಿಂದ  ತುಂಬಾ ಚೆನ್ನಾಗಿ ನಡೆಯುತ್ತವೆ

ಊರಿನ ಹಿರಿಯರೆಲ್ಲಾ  ಆಡಿಕೆ ಕೃಷಿಯನ್ನು ಹೆಚ್ಚಾಗಿ  ಅವಲಂಬಿಸಿರುವುದರಿಂದ  ಇಡೀ ಮನೆಯ ಜನಕ್ಕೆ  ದಿನದ ೨೪ ಗಂಟೆಯೂ ಕೆಲಸ. ಕೆಲವರಿಗೆ ಓದು ಬರಹ ಬರದಿದ್ದರೂ  ಇನ್ನೊಬ್ಬರ ಮೇಲೆ ಅವಲಂಬಿಸದೇ ಬದುಕುವುದನ್ನು ಕಲಿತಿರುವುದರಿಂದ  ಇಲ್ಲಿರುವ ಪ್ರತಿಯೊಂದು ವಸ್ತುವನ್ನು ಉಪಯೋಗದ ವಸ್ತುವನ್ನಾಗಿ ಪರಿವರ್ತಿಸಿಕೊಂಡಿದ್ದಾರೆ.  ಊದಾ: ಹಸುಗಳಿಂದ ಹಾಲು ಮೊಸರು  ಮತ್ತು ಅವುಗಳ ಸಗಣಿಯಿಂದ  ಪ್ರತಿಯೊಂದು ಮನೆಯವರು ತಮ್ಮ ಮನೆಗೆ ಬೇಕಾದ ಗೋಬರ್ ಗ್ಯಾಸ್  ಮಾಡಿಕೊಂಡು  ಆಡಿಗೆ ಅನಿಲವನ್ನು  ತಾವೆ ಸ್ವತಃ ತಯಾರಿಸಿಕೊಳ್ಳುತ್ತಾರೆ.  ಇನ್ನೂ  ತಮಗೆ ಬೇಕಾದ ತರಕಾರಿಗಳು, ಹೂ ಹಣ್ಣುಗಳನ್ನು ತಮ್ಮ ಮನೆಯ ಅಂಗಳದಲ್ಲೇ ಬೆಳೆಯುತ್ತಾರೆ.  ಹಿರಿಯರು ಮತ್ತು ಮನೆಯ ಹೆಣ್ಣುಮಕ್ಕಳು ತಮಗೆ ಬೇಕಾದ ಔಷದೀಯ ಗಿಡಗಳನ್ನು ತಮ್ಮ  ತೋಟ, ಅಂಗಳದಲ್ಲಿಯೇ ಬೆಳೆಸುವುದರಿಂದ ಮಕ್ಕಳಿಂದ ಹಿರಿಯರಾದಿಯಾಗಿ ಯಾರಿಗೂ ಖಾಯಿಲೆಯ ಸಮಸ್ಯೆಯಿಲ್ಲ.  ಬಂದರೂ  ವೈದ್ಯರ ಸಹಾಯವಿಲ್ಲದ  ಮನೆಮದ್ದು ಮಾಡುವುದರಲ್ಲಿ  ಆನುಭವವುಳ್ಳವರಾಗಿದ್ದಾರೆ. ಪರಿಶುದ್ಧಗಾಳಿ,  ಸದಾ ಹಸಿರಾಗಿರುವ  ಇಂಥ ವಾತಾವರಣದಲ್ಲಿ ಬೆಳೆಯುವವರಿಗೆ ರೋಗವೆಲ್ಲಿ ಬರುತ್ತದೇ ಹೇಳಿ...!

     ರಾತ್ರಿ ಹನ್ನೊಂದು ಗಂಟೆಗೆ ನಿಮಗೆ ನಿದ್ದೆ ಬರದಿದ್ದಲ್ಲಿ  ಎದ್ದು ಒಮ್ಮೆ  ಮಂದಬೆಳಕಿನತ್ತ  ಕಣ್ಣು ಹಾಯಿಸಿ  ಆತ  ಅಲ್ಲೇನೋ ಆಡಿಕೆ ಕೆಲಸ ಮಾಡುತ್ತಿರುತ್ತಾರೆ.  ಮತ್ತೆ  ಬೆಳಿಗ್ಗೆ  ಐದುಗಂಟೆಗೆ  ನಿಮಗೆ ಎಚ್ಚರವಾಗಿಬಿಟ್ಟಿರೇ  ಮತ್ತದೇ ಮಬ್ಬುಗತ್ತಲ  ಚಳಿಯ ಮುಂಜಾವಿನಲ್ಲಿ  ಈತ  ಹಸುವಿನ  ಕೊಟ್ಟಿಗೆಯಲ್ಲಿ  ಸಗಣಿ ತೆಗೆಯುವುದು..ಹಾಲುಕರೆಯುವುದು ಏನೋ ಮಾಡುತ್ತಿರುತ್ತಾರೆ.  ಎದ್ದು ಎಷ್ಟೋ ಹೊತ್ತಾಗಿರಬಹುದು ಅಂತ ಅವರನ್ನು ನೋಡಿದರೆ  ಅನ್ನಿಸುತ್ತದೆ.  ಇವೆಲ್ಲಾ ಕೆಲಸ ಮುಗಿಸಿ,  ಯೋಗ, ಪ್ರಾಣಾಯಾಮ, ಸ್ನಾನ  ಸಂದ್ಯಾ ವಂದನೆ, ದೇವರ ಪೂಜೆ ಮುಗಿಸುವ ಹೊತ್ತಿಗೆ  ಬೆಳಿಗ್ಗೆ ಏಳುಗಂಟೆ...ಬಿಸಿಬಿಸಿ  ನೀರು ದೋಸೆ ತಿಂದು, ಕಸಾಯ ಕುಡಿದು  ತೋಟಕ್ಕೆ ಹೊರಟರೆಂದರೇ...ಮತ್ತೆ ಬರುವುದು  ಮದ್ಯಾಹ್ನದ ಊಟದ ಹೊತ್ತಿಗೆ.  ಮತ್ತೆ ತೋಟದ ಕೆಲಸ ಸಂಜೆ ಮಕ್ಕಳೊಂದಿಗೆ ಆಟ...ರಾತ್ರಿ ಮತ್ತೆ  ಮೊಮ್ಮಕ್ಕಳಿಗೆ  ಉಪನಿಷತ್, ದೇವರ ಪೂಜ ಮಂತ್ರಗಳನ್ನು ಹೇಳಿಕೊಡುತ್ತಾರೆ. ಪೂಜಾ ವಿಧಾನಗಳನ್ನು ಕಲಿಸುತ್ತಾರೆ. ರಾತ್ರಿ ಒಟ್ಟಿಗೆ ಊಟ....ನಂತರ  ತಾವೇ ಬೆಳೆದ ಆಡಿಕೆ, ಎಲೆ ಸೇವನೆ,...ಜೊತೆಯಲ್ಲೇ ಮೊಮ್ಮಕ್ಕಳ ಜೊತೆ  ಆಟ...ಮಾಯಾ ಮಂತ್ರದ ಕತೆಗಳು, ಹೀಗೆ  ಅವರು  ಮತ್ತೆ  ಮಲಗುವ ಹೊತ್ತಿಗೆ  ರಾತ್ರಿ ಹನ್ನೆರಡು ದಾಟಿರುತ್ತದೆ.  ಯುವಕರು  ನಾಚಿಸುವಂತೆ ಸದಾ  ಒಂದಲ್ಲ  ಒಂದು ಕೆಲಸವನ್ನು ಮಾಡುತ್ತಿರುವ  ಇವರು ನೋಡುವವರ ಕಣ್ಣಿಗೆ ಯಾವಾಗ ನಿದ್ರೆ ಮಾಡುತ್ತಾರಪ್ಪ  ಅನ್ನಿಸದೇ ಇರದು.  ಇಷ್ಟಕ್ಕೂ  ಇವರು ವಯಸ್ಸು ಕೇವಲ  ೭೩.  ಹೆಸರು ಗಜಾನನ ಹೆಗಡೆ. ನಾಗೇಂದ್ರ ಅವರ ತಂದೆ.

ಮಕ್ಕಳೊಂದಿಗೆ ಕ್ರಿಕೆಟ್ ಆಡುತ್ತಿರುವ  ನಾಗೇಂದ್ರ ತಂದೆ ಗಜಾನನ ಹೆಗಡೆ                                 
    ಅವರೆಂದು  ತಮ್ಮ  ಮಕ್ಕಳಿಗಾಗಲಿ, ಮೊಮ್ಮಕ್ಕಳಿಗಾಗಲಿ,  ಹೀಗೆ ಮಾಡಿ, ಹಾಗೆ ಮಾಡಿ ಅಂತ ಹೇಳಿದವರಲ್ಲ......ಎಲ್ಲರೂ ಸ್ವತಂತ್ರವಾಗಿ ಅವರಿಷ್ಟಬಂದದ್ದು  ಮಾಡಿಕೊಂಡು  ಚೆನ್ನಾಗಿರಲಿ  ಅಂತ ಬಯಸಿದವರು. ಅವರು  ಏನಾದರೂ  ಪ್ರತಿಯೊಬ್ಬರಿಗೂ ಹೀಗೆ ಮಾಡಿ ಹಾಗೆ ಮಾಡಿ  ಅಂತ ಹೇಳಿದ್ದರೇ ನಾವು ಮಾಡುತ್ತಿರಲಿಲ್ಲವೇನೋ....ಹಾಗೇ ಹೇಳುವ ಬದಲು  ತಾವೆ  ಮಾಡುತ್ತಿರುವುದರಿಂದ  ಅವರನ್ನು  ನಮಗರಿವಿಲ್ಲದಂತೆ ನಾವು ಅನುಸರಿಸುತ್ತಿದ್ದೇವೆ" ಎಂದು  ತಮ್ಮ ಕರ್ಮಯೋಗಿ ಅಪ್ಪ ಗಜಾನನ ಹೆಗಡೆ ಬಗ್ಗೆ ಅಭಿಪ್ರಾಯ ಪಟ್ಟರು ನಾಗೇಂದ್ರ.

ಸಂಜೆಯಾಯಿತೆಂದರೆ ಊರಿನ ಹೆಣ್ಣುಮಕ್ಕಳು, ಮತ್ತು ಪುಟ್ಟ ಮಕ್ಕಳು  ಎಲ್ಲರೂ  ಒಟ್ಟಾಗಿ ಆ ಮನೆಯಲ್ಲಿ  ಸಂಗೀತ ಅಭ್ಯಾಸ ಮಾಡುತ್ತಿರುತ್ತಾರೆ...ಎಲ್ಲರೂ ಎಷ್ಟು ಉತ್ಸಾಹದಿಂದ ಹಾಡುತ್ತಾರೆಂದರೇ ಅವರಿಗೆ ಹೇಳಿಕೊಡುವ ಗುರುವನ್ನು ನೋಡುವ ಮನಸ್ಸಾಗದೇ ಇರದು. ಇಷ್ಟಕ್ಕೂ  ಅವರಿಗೆ ಇಷ್ಟು ಸೊಗಸಾಗಿ ಸಂಗೀತ ಹೇಳಿಕೊಡುವವರು ಮಹಾದೇವಿ ಸುಬ್ರಾಯ ಹೆಗಡೆ ಅನ್ನುವ  ಹಿರಿಯಜ್ಜಿ. ಹಾರ್ಮೊನಿಯಂ ನುಡಿಸುತ್ತಾ  ಹೇಳಿಕೊಡುವ  ಅವರ ವಯಸ್ಸು  ಈಗ ಕೇವಲ ೮೦ ಮಾತ್ರ.

ಸಂಗೀತಗಾರ್ತಿ ಮಹಾದೇವಿ ಸುಬ್ರಾಯ ಹೆಗಡೆ...

ಮುತ್ಮರ್ಡು ಅನ್ನುವ ಊರಿನ ಹಿಂಬಾಗವೇ  ಒಂದು  ಸೊಗಸಾದ  ಪುಟ್ಟ ಹೊಳೆಯಿದೆ.  ಆ  ಹೊಳೆಯಲ್ಲಿ  ಗಂಟೆ ಗಟ್ಟಲೇ  ನೀರಮೇಲೆ  ತೇಲುವ ವ್ಯಕ್ತಿಯನ್ನು ನೀವು ನೋಡಿದರೇ  ನಿಮಗೆ ಆಶ್ಚರ್ಯವಾಗುವುದು ಖಂಡಿತ.  ಯಾಕೆಂದರೇ ಅವರ  ವಯಸ್ಸು ಈಗ ಕೇವಲ  ೮೦ ವರ್ಷ ಮಾತ್ರ.  ಈ  ಸಾಧನೆಯನ್ನು  ಚಿಕ್ಕಂದಿನಿಂದ ಮಾಡಿಕೊಂಡು ಬಂದಿರುವವರು ಇದೇ ಊರಿನ  ನರಸಿಂಹ ಹೆಗಡೆ.

 ನೀರಿನ ಮೇಲೆ ತೇಲುವ ನರಸಿಂಹ ಹೆಗಡೆ....

ಆ  ಊರಿನ ಆಷ್ಟು ಜನ ಆರೋಗ್ಯವಾಗಿರಲು ಏನಾದರೂ ಒಂದು ಗುಟ್ಟು ಇರಲೇ ಬೇಕಲ್ಲ. ಇಲ್ಲೊಬ್ಬ  ಮಂಜುನಾಥ ಎಸ್ ಹೆಗಡೆ ಎನ್ನುವ  ಗಿಡಮೂಲಿಕೆ ತಜ್ಞರಿದ್ದಾರೆ.  ಊರಿನಲ್ಲಿರುವ ಯಾರಿಗೆ ಆಗಲಿ ಸಣ್ಣ ಪುಟ್ಟ ಕಾಯಿಲೆಗಳಿಗೆ  ಇವರೇ ವೈದ್ಯರು.   ಇವರಿಗೆ ತಿಳಿದಿರುವ  ಗಿಡಮೂಲಿಕೆಗಳಿಂದಾಗಿ  ಎಲ್ಲ ರೋಗಕ್ಕೂ ಮದ್ದುಂಟು.  ಇವರ  ಸಹವಾಸದಿಂದಾಗಿ  ಹಳ್ಳಿಯ  ಎಲ್ಲರಿಗೂ  ಯಾವ ಗಿಡಮೂಲಿಕೆಯಿಂದ  ಯಾವ ರೋಗ ವಾಸಿಮಾಡಬಹುದು  ಅನ್ನುವುದು  ಚೆನ್ನಾಗಿ ಕರಗತವಾಗಿಬಿಟ್ಟಿದೆ.  ಇನ್ನೂ  ಔಷದಕ್ಕಾಗಿ  ಸಿರಸಿಗೆ ಏಕೆ ಹೋಗಬೇಕು ಹೇಳಿ. 

ಮಂಜುನಾಥ್ ಹೆಗಡೆ..ಸಕಲಕಲವಲ್ಲಭ

ಮತ್ತೆ  ಈ  ಮಂಜುನಾಥ ಎಸ್ ಹೆಗಡೆ  ಜ್ಯೋತಿಷ್ಯ ಹೇಳುತ್ತಾರೆ.   ಸೊಗಸಾಗಿ  ಚಿತ್ರಬಿಡಿಸುತ್ತಾರೆ. ಮತ್ತೆ  ಮಣ್ಣಿನಲ್ಲಿ  ಕಲಾಕೃತಿ ಮಾಡುವುದರಲ್ಲಿ  ಇವರು ಸಿದ್ಧಹಸ್ತರು. ಗಣಪತಿ ಹಬ್ಬಕ್ಕೆ  ಊರಿನ ಎಲ್ಲರಿಗೂ  ಇವರೇ ಮಣ್ಣಿನ ಗಣಪತಿಯನ್ನು ಮಾಡಿ ಅದಕ್ಕೆ  ಸೊಗಸಾಗಿ ಬಣ್ಣವನ್ನು  ಹಾಕುತ್ತಾರೆ. ಮತ್ತು ಆ ಕಲೆಯನ್ನು ಊರಿನ ಜನರಿಗೂ ಕಲಿಸಿದ್ದಾರೆ.  ನಾಗೇಂದ್ರರ ತಂದೆ, ನಾಗೇಂದ್ರ, ಮಗ ಸುಹಾಸ್  ಇವರೆಲ್ಲಾ  ತಾವೇ ಮಣ್ಣಿನಿಂದ  ಗಣಪತಿಯನ್ನು ಮಾಡುವುದನ್ನು ಕಲಿತಿದ್ದು  ಇವರಿಂದಲೇ  ಅಂತೆ.  ನಾಗೇಂದ್ರ ಮನೆಯಲ್ಲಿ ಇಟ್ಟಿದ್ದ ಗಣಪತಿಯನ್ನು  ಸುಹಾಸ್ ಮತ್ತು ನಾಗೇಂದ್ರ ಸೇರಿ ಮಾಡಿದ್ದಂತೆ.  ಅದು ನಮ್ಮ  ಬೆಂಗಳೂರಿನಲ್ಲಿ ಮಾರಾಟಕ್ಕಿಂತ ಗಣೇಶ ವಿಗ್ರಹಗಳನ್ನು ನಾಚಿಸುವಂತಿತ್ತು.  ಅದೇ  ಹಾಗಿರಬೇಕಾದರೇ  ಇವರಿಗೆ ಕಲಿಸಿದ ಗುರುವಾದ ಮಂಜುನಾಥ ಎಸ್ ಹೆಗಡೆ ಕೈಚಳಕ ಹೇಗಿರಬಹುದು...ಅಲ್ವಾ....ಜೊತೆಗೆ ಇವರು ಪೌರಾಣಿಕ ನಾಟಕಗಳನ್ನು ಬರೆದಿದ್ದಾರೆ, ನಟಿಸುತ್ತಾರೆ, ನಿರ್ದೇಶನ ಮಾಡುತ್ತಾರೆ...ಹೀಗೆ ಇವರೊಬ್ಬರು ಸಕಲಕಲವಲ್ಲಭರೆಂದೇ ಹೇಳಬಹುದು..

        ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎನ್ನುವಂತೆ ಊರಿನ ಮತ್ತು ಊರಿನಲ್ಲಿರುವ ಸಾಧಕರ ಇನ್ನು ಇದೆ.  ಅದು ಮುಂದಿನ ಭಾಗದಲ್ಲಿ

ಚಿತ್ರಗಳು: 
ನಾಗೇಂದ್ರ ಮುತ್ಮರ್ಡು, 
ಶಿವು.ಕೆ,  ಮಲ್ಲಿಕಾರ್ಜುನ್. ಡಿ.ಜಿ
ಲೇಖನ:   ಶಿವು.ಕೆ

Monday, March 14, 2011

ಕೆರೆನೀರಿನ ಕೊಚ್ಚೆಯೂ-ಬೆಂಜ್ ಕಾರಿನ ಸೀಟೂ............


                  ಏರ್ ಷೋ ಬಗ್ಗೆ ಎಲ್ಲಾ ಟಿವಿ ಚಾನಲ್ಲುಗಳು, ದಿನಪತ್ರಿಕೆಗಳಲ್ಲಿ ತರಾವರಿ ಸುದ್ಧಿಗಳು ವೈವಿಧ್ಯಮಯ ಚಿತ್ರಚಿತ್ತಾರಗಳು ಪ್ರಕಟವಾಗುತ್ತಿದ್ದದ್ದು ನೋಡಿ ನಾನು ಏರ್ ಷೋ ಬಗ್ಗೆಯಾಗಲಿ ಅಥವ ಚಿತ್ರಗಳನ್ನಾಗಲಿ ಬ್ಲಾಗಿಗೆ ಹಾಕುವ ಅವಶ್ಯಕತೆಯಿಲ್ಲವೆಂದು ಸುಮ್ಮನಾಗಿದ್ದೆ.  ಯಾವಾಗ ಹೇಮಾ

                     ಆಹಾ! ಅಕಾಶವೆಂಬ ತಂಪು
                     ನೀಲಾಕಾಶವೆಂಬ ಎಣ್ಣೆ ಬಾಣಲಿಯೊಳಗೆ
                     ಜೀಲೇಬಿ ಹಾಕುತ್ತಿರುವ
                     ಯೂರೋ ಟೈಪೂನೂ ಪ್ಲೇನು.......

         ಆ ಫೋಟೊವನ್ನು ನೋಡಿ ಅಚ್ಚರಿಗೊಂಡು ಹೇಳಿದಾಗ ಅರೆರೆ! ಹೌದಲ್ವಾ...ಅನ್ನಿಸಿತ್ತು.  ಮತ್ತೆ ಪತ್ರಿಕೆಯಲ್ಲಿ ಎಲ್ಲೂ ಪ್ರಕಟವಾಗದ ಮತ್ತು ಸ್ಪರ್ಧಾತ್ಮಕವಾಗಿ ಕ್ಲಿಕ್ಕಿಸಿದ ಚಿತ್ರಗಳ ಬಗ್ಗೆ ಬ್ಲಾಗಿನಲ್ಲಿ ಬರೆದು ಹಾಕಬಾರದೇಕೆ ಅನ್ನಿಸಿದರ ಪರಿಣಾಮ ಈ ಲೇಖನ.                
ಎಣ್ಣೆಯಲ್ಲಿ ಜಿಲೇಬಿ ಹಾಕುವಂತೆ ನೀಲಾಕಾಶಕ್ಕೆ ಹೊಗೆಯಿಂದ ಜಿಲೇಬಿ ಹಾಕುತ್ತಿರುವ ಯೂರೋ ಟೈಪೂನ್ ವಿಮಾನ


         ಪ್ರತಿಭಾರಿಯ ಏರ್ ಷೋನಲ್ಲಿ ಅದೇ ವಿಮಾನಗಳಿರುತ್ತವೆ ಹಾರಾಡುತ್ತವೆ ಅಂದುಕೊಳ್ಳುತ್ತಾ ಈ ಭಾರಿ ಏರ್ ಷೋಗೆ ಹೋಗೋದು ಬೇಡವೆಂದುಕೊಂಡಿದ್ದ ನನಗೆ ದೂರದ ದಾವಣಗೆರೆಯಿಂದ ಗೆಳೆಯ ಹೇಮಚಂದ್ರ ಜೈನ್ ಫೋನ್ ಮಾಡಿ ಏರ್ ಷೋ ಫೋಟೋ ತೆಗೆಯಲು ಬರುತ್ತಿದ್ದೇನೆ. ನಿಮ್ಮ ಸಹಾಯ ಬೇಕು ಎಂದಾಗ ಇಲ್ಲವೆನ್ನಲಾಗಲಿಲ್ಲ.  ಒಂಬತ್ತನೇ ತಾರೀಖು ಬೆಳಿಗ್ಗೆ ಹತ್ತು ಗಂಟೆಗೆ ಯಲಹಂಕದಿಂದ  ಹತ್ತು ಕಿಲೋಮೀಟರ್ ದೂರದ ಭಾರತೀಯ ವಾಯುಸೇನ ವಿಮಾನ ನಿಲ್ದಾಣದ ಕಾಂಪೌಂಡ್ ಆಚೆಬದಿಯಲ್ಲಿದ್ದ ಆ ಕೆರೆ ದಂಡೆಯ ಮೇಲೆ ನಿಂತಿದ್ದೆವು.   ಮೊದಲ ದಿನ ಜನರಿನ್ನೂ ಸೇರಿರಲಿಲ್ಲವಾದ್ದರಿಂದ ಪೋಲೀಸರ ಕಾಟವೂ ಇರಲಿಲ್ಲ.  ಆಗಲೇ ಬಿಸಿಲು ಜೋರಾಗಿದ್ದರೂ ಬೆಳಗಿನ ಸೆಷನ್ ಏರೋಪ್ಲೇನುಗಳ ಹಾರಾಟದ ಫೋಟೋಗಳನ್ನು ತೆಗೆಯುವಲ್ಲಿ ನಾವಿಬ್ಬರೂ ತಲ್ಲೀನರಾದೆವು.  ನಿದಾನವಾಗಿ ಅಲ್ಲಿಗೆ ಐಸ್‍ಕ್ರೀಮ್, ಚುರುಮುರಿ, ಕಡ್ಲೆಬೀಜ, ಇತ್ಯಾದಿಗಳು ಬರತೊಡಗಿದವು. ಜೊತೆಗೆ ಜನರೂ ಕೂಡ ಸೇರತೊಡಗಿದರು.

ಆಕಾಶ ನೋಡಲು ಕೊಡೆಹಿಡಿದು ಬಂದಿದ್ದ ಪುಟ್ಟ ಬಾಲಕ
                 
      ಇದೇ ಮೊದಲ ಭಾರಿಗೆ ಜೆಕ್ ಗಣರಾಜ್ಯದ ನಾಲ್ಕು ರೆಡ್ ಬುಲ್ ವಿಮಾನಗಳು ತಮ್ಮ ಪ್ರದರ್ಶನವನ್ನು ಪ್ರಾರಂಭಿಸಿದವಲ್ಲ...ನಾವು ನಮ್ಮ ಉದ್ದದ ಲೆನ್ಸ್ ಮೂಲಕ ಫೋಟೊ ತೆಗೆಯುತ್ತಿರುವಾಗ ನಮ್ಮ ಪಕ್ಕ ನಿಂತಿದ್ದ ಹಳ್ಳಿಯ ಸ್ಕೂಲ್ ಹುಡುಗರು ನಮ್ಮ ಕ್ಯಾಮೆರಾದ ಪುಟ್ಟಪರಧೆಯನ್ನು ಕುತೂಹಲದಿಂದ ನೋಡುತ್ತಿದ್ದರು.


 "ಅಲ್ಲಿನೋಡೋ ಆ ಪ್ಲೇನ್ ಎಷ್ಟು ಜೆನ್ನಾಗಿ ಹೊಗೆಯಿಂದಲೇ ಡ್ರಾಯಿಂಗ್ ಮಾಡ್ತು ಅಲ್ವಾ",


"ಹೌದು ಕಣ್ಲಾ, ಅದು ಇಲಿಜೆಟ್ಟು.  ಮೂಗಿಲಿ ತರ ಮೂಗು ಉದ್ದ ಮಾಡಿಕೊಂಡು ಹೋಯ್ತದೆ ನೋಡು"

ಅದಾದ ನಂತರ ಸುಖೋಯ್ ೩೦ ಜೆಟ್ ಪ್ಲೇನ್ ಆಕಾಶದೆತ್ತರಕ್ಕೆ ಹಾರಿತಲ್ಲಾ ಅದನ್ನು ಕಂಡ ಈ ಹುಡುಗರು,


"ಹೇ ಈ ಪ್ಲೇನು ಹೊಗೆ ಬಿಡೋಲ್ದು ಒಂಥರ ಒಳ್ಳೆ ಮನುಷ್ಯಿದ್ದಾಗೆ"  ಅಂದ.


ಆತನ ಮಾತನ್ನು ಕೇಳಿಸಿಕೊಂಡ ನಾನು  "ಇಲ್ಲಕಣೋ ಈ ಭಾರಿ ಅದು ಹೊಗೆಬಿಡುತ್ತಿಲ್ಲ ಕಳೆದ ವರ್ಷವೆಲ್ಲಾ ಹೊಗೆ ಬಿಡುತ್ತಿತ್ತು" ಅಂದೆ

  " ಹೌದಾ ಸರ್, ಮೊದಲು ಸಿಗರೇಟ್ ಅಬ್ಯಾಸವಾಗಿ ಹೊಗೆ ಬಿಡುತ್ತಿತ್ತೇನೋ ಈಗ ನಿಕೋಟಿನ್ ಮಾತ್ರೆ ನುಂಗಿ ಸಿಗರೇಟು ಸೇದೋದು ಬಿಟ್ಟಿರಬೇಕು ಅದಕ್ಕೆ ಈಗ ಹೊಗೆ ಬರೊಲ್ಲ" ಅಂದ.


 ಅವುಗಳ ಪ್ರದರ್ಶನವಾದ ನಂತರ ಬಂದಿದ್ದು ಸೂರ್ಯಕಿರಣಗಳು.

 "ಈ ಪ್ಲೇನುಗಳು ಟಿವಿ ಸೀರಿಯಲ್ಲಿನ ಗ್ಲಾಮರ್ ಹೆಂಗಸರಿದ್ದಂತೆ.  ಒಟ್ಟಿಗೆ ಹೋಗುತ್ತವೆ ಹಾರಾಡುತ್ತಿರುತ್ತವೆ, ನಮ್ಮ ಟಿವಿ ಸೀರಿಯಲ್ಲಿನ ಹೆಂಗಸರ ಮನಸ್ಸು ಯಾವಾಗ ಚಂಚಲವಾಗಿ ಎಲ್ಲರನ್ನೂ ದೂರಮಾಡಿಬಿಡುತ್ತಾರೋ ಹಾಗೇ ಇವು ಕೂಡ ಇದ್ದಕ್ಕಿದ್ದಂತೆ ದೂರವಾಗಿ ಎಲ್ಲೆಲ್ಲೋ ಹೋಗಿಬಿಡುತ್ತವೆ ಮತ್ತೆ ಅವುಗಳಲ್ಲಿ ಲವ್ ಉಂಟಾಗಿ ಆಕಾಶದಲ್ಲಿ ಹೊಗೆಬಿಟ್ಟು ಲವ್ ಬರೆಯುತ್ತವೆ ಒಟ್ಟಾರೆ ಅವುಗಳ ಚಂಚಲ ಮನಸ್ಸು ಹೇಗಿರುತ್ತೋ ಹೇಳಲಿಕ್ಕೆ ಬರೋಲ್ಲ"  ಮತ್ತೊಬ್ಬ ಹಳ್ಳಿ ಅಜ್ಜ ಈ ಮಾತನ್ನು ಹೇಳಿದಾಗ ಅಲ್ಲಿನ ವಾತಾವರಣವೆಲ್ಲಾ ನಗೆಗಡಲಿನಲ್ಲಿ ತೇಲಿತ್ತು. ಮತ್ತೆ ನಾವು ಇಡೀ ದಿನ ಬಿಸಿಲಿನಲ್ಲಿ ಬೆಂದು ಫೋಟೊಗ್ರಫಿ ಮಾಡಿಕೊಂಡು ಮನೆಗೆ ಬಂದೆವು. ಮರುದಿನ ನಮ್ಮ ಜೊತೆಗೆ  ಮುಂಡರಗಿಯ ಸಲೀಂ ಸೇರಿಕೊಂಡರು.
ನಮ್ಮ ಸೂರ್ಯಕಿರಣ ವಿಮಾನಗಳು ಆಕಾಶವನ್ನು  ಪ್ರೇಮಿಸಿದ್ದು ಹೀಗೆ.

  ಎರಡನೇ ದಿನ ಅದೇ ಜಾಗಕ್ಕೆ ಹೋದರೆ ಅಲ್ಲಿ ಅಕಾಶವನ್ನು ನೋಡಲಿಕ್ಕೆ ಒಬ್ಬನೂ ಇಲ್ಲ.  ಈ ಕೆರದಂಡೆಯ ಮೇಲೆ ನಿಲ್ಲುವ ಜನಗಳಿಂದ ತುಂಬಾ ತೊಂದರೆಯಾಗುತ್ತದೆ ಅಂತ ಮೇಲಧಿಕಾರಿಗಳಿಂದ ದೂರು ಬಂದು ಅಲ್ಲಿ ಯಾರನ್ನು ಬಿಡಬಾರದೆಂದು ಹೆಜ್ಜೆಗೊಬ್ಬರಂತೆ ಪೋಲೀಸರನ್ನು ನೇಮಿಸಿಬಿಟ್ಟಿದ್ದರು. ನಮ್ಮ ದೊಡ್ಡ ಲೆನ್ಸು ಕ್ಯಾಮೆರಗಳನ್ನು ತೋರಿಸಿ ನಮಗೆ ಇಲ್ಲಿಯೇ ಫೋಟೊಗ್ರಫಿ ಮಾಡಲಿಕ್ಕೆ ಹೇಳಿದ್ದಾರೆ ಎಂದು ಸುಳ್ಳುಹೇಳಿ ಸಲೀಂ ಬಳಿಯಿರುವ ಪ್ರೆಸ್ ಕಾರ್ಡನ್ನು ಅಲ್ಲಿನ ಇನ್ಸ್‍ಪೆಕ್ಟರಿಗೆ ತೋರಿಸಿದ ಮೇಲೆ ಕೊನೆಗೆ ಒಪ್ಪಿ ನಮ್ಮನ್ನು ಬೇರೆ ದಾರಿಯಿಂದ ಆ ಕೆರೆ ಬದಿಗೆ ಹೋಗಲು ಹೇಳಿದರು. ನಾವು ಖುಶಿಯಿಂದ ಹೊರಟೆವಲ್ಲ ಅದು ಒಂಥರ ಕಡಿದಾದ ದಾರಿ ಕೆಳಗೆ ಒಂದರಿಂದ ಎರಡು ಅಡಿಯಷ್ಟು ಕೊಚ್ಚೆ ನೀರು ಉದ್ದಕ್ಕೂ ಇತ್ತು. ಅದನ್ನು ದಾಟದೇ ನಿನ್ನೆ ನಾವು ನಿಂತಿದ್ದ ಜಾಗವನ್ನು ತಲುಪಲು ಸಾಧ್ಯವಾಗುತ್ತಿರಲಿಲ್ಲ. ಕ್ಯಾಮೆರಾ ಬ್ಯಾಗುಗಳನ್ನು ಬೆನ್ನಿಗೇರಿಸಿಕೊಂಡು ಮಂಡಿಯವರೆಗೆ ಪ್ಯಾಂಟುಗಳನ್ನು ಮಡಿಚಿಕೊಂಡು ಶೂ ಕಾಲಿನೊಳಗೆ ಆ ಕೊಚ್ಚೆನೀರಿನೊಳಗೆ ನಡೆದು ನಮ್ಮ ಜಾಗ ತಲುಪುವಷ್ಟರಲ್ಲಿ ನಮಗಂತೂ ಸಾಕುಬೇಕಾಗಿತ್ತು. 

ಮಧ್ಯಾಹ್ನದ ಉರಿಬಿಸಿಲಲ್ಲಿ ಫೋಟೊಗ್ರಫಿ ಮಾಡುವಾಗ ಸುಸ್ತಾಗಿ ಅದೇ ಕೆರೆ ದಂಡೆಯಲ್ಲಿ ನನಗರಿವಿಲ್ಲದಂತೆ ನಿದ್ರೆ ಹೋದಾಗ ಅವರ ಕ್ಯಾಮೆರಾದಲ್ಲಿ ಹೀಗೆ ನನ್ನ ಫೋಟೊ ತೆಗೆದಿದ್ದರು ಮುಂಡರಗಿಯಂದ ಬಂದಿದ್ದ ಮತ್ತೊಬ್ಬ ಫೋಟೊಗ್ರಫಿ ಗೆಳೆಯ ಸಲೀಂ
                   
     ಇಷ್ಟಾದರೂ ಎರಡನೆ ದಿನ ನಮ್ಮ ಫೋಟೊಗ್ರಫಿ ಮೊದಲ ದಿನಕ್ಕಿಂತ ಏನು ವಿಶೇಷವೆನಿಸಲಿಲ್ಲ. ಸಂಜೆ ಮನೆಗೆ ಬಂದಾಗ ಕೊಚ್ಚೆ ನೀರಿನಲ್ಲಿ ನಡೆದಾಡಿದ ಪರಿಣಾಮ ಕಾಲುಗಳಲ್ಲಿ ನವೆಯುಂಟಾಗಿ ಕೆರೆತ ಪ್ರಾರಂಭವಾಗಿತ್ತು. . ಅವತ್ತು ರಾತ್ರಿ ಹೇಮಚಂದ್ರ ಜೈನ್ ದಾವಣಗೆರೆ ಹೊರಟರು.


       ಮರುದಿನ ಅಂದರೆ ಮೂರನೆ ನನ್ನ ಅದೃಷ್ಟ ಕುಲಾಯಿಸಿತೆಂದೇ ಹೇಳಬೇಕು. ಏಕೆಂದರೆ ನಮ್ಮ ಪ್ರಖ್ಯಾತ ಛಾಯಾಗ್ರಾಹಕರಾದ  ಸಿ.ಅರ್.ಸತ್ಯನಾರಾಯಣರವರು ಅವರ ಆತ್ಮೀಯ ಗೆಳಯರೊಬ್ಬರಿಂದ  ಐದು ವಿವಿಐಪಿ ಪಾಸುಗಳನ್ನು ಹೇಗೋ ಗಿಟ್ಟಿಸಿಕೊಂಡಿದ್ದರು..  ಎರಡು ಕಾರುಗಳಲ್ಲಿ  ಅವರು ಸೇರಿದಂತೆ ನಾನು  ದೇವೆಂದ್ರ, ಶೈಲೇಶ್, ಮಾರ್ಟಿನ್ ಹೊರಟೆವು.  ಈ ಪಾಸು ಸುಲಭವಾಗಿ ಸಿಗುವುದಿಲ್ಲ ಸಿಕ್ಕರೆ ಅದರಿಂದ ಸಿಗುವ ರಾಜಯೋಗದ ಅನುಭವವೇ ಬೇರೆ. ಇಂಥ ಪಾಸುಗಳನ್ನು ಹೊಂದಿದವರ ಕಾರುಗಳಿಗೆ ವಿಶೇಷ ಪಾರ್ಕಿಂಗ್ ಉಂಟು.  ಅಲ್ಲಿ ನಮ್ಮನ್ನು ರಾಜಮರ್ಯಾದೆಯಿಂದ ಕರೆದೊಯ್ದು ಸೆಕ್ಯುರಿಟಿ ಚೆಕ್ ಎಲ್ಲಾ ಆದ ಮೇಲೆ ಏರ್ ಶೋ ಪ್ರದರ್ಶನಕ್ಕೆ ಒಳಗೆ ಹೋಗಲು ನಮಗಾಗಿ ವಿಶೇಷ ಬಸ್ಸುಗಳ ವ್ಯವಸ್ಥೆಯಾಗಿತ್ತು. ಅದು ಸುರಂಗಮಾರ್ಗದಲ್ಲಿ ಒಳಗೆ ಹೋದಮೇಲೆ ಮತ್ತೆ ಅಲ್ಲಿ ಮುಖ್ಯವಾದ ತಪಾಸಣೆ. ಅಲ್ಲಿ ನಮ್ಮ ಐಡಿಂಟಿಟಿ ಕಾರ್ಡನ್ನು ಈ ಪಾಸ್ ಜೊತೆಗೆ ಕಡ್ಡಾಯವಾಗಿ ತೋರಿಸಬೇಕು. ಅವರನ್ನು ದಾಟಿ ಒಳಗೆ ಹೋಗುತ್ತಿದ್ದಂತೆ ಪಾಸುಕೊಟ್ಟಿದ್ದವರು ನಮಗಾಗಿ ಕಳಿಸಿದ್ದ ಬೆಂಜ್ ಕಾರು ಕಾಯುತ್ತಿತ್ತು.  ಎಸ್ ಕ್ಲಾಸಿನ ಬೆಂಜ್ ಕಾರಿನಲ್ಲಿ ಮೊದಲ ಭಾರಿ ಕುಳಿತುಕೊಳ್ಳುತ್ತಿರುವುದಕ್ಕೆ ನಮಗೆಲ್ಲಾ ಅತೀವ ಆನಂದವಾಗಿತ್ತು. ಅಲ್ಲಿಂದ ಒಂದುವರೆ ಕಿಲೋಮೀಟರ್‍ ಸಾಗಿ ಮುಖ್ಯ ಪ್ರದರ್ಶನದ ಜಾಗಕ್ಕೆ ಬಂದೆವು ಅಲ್ಲಿ ಮತ್ತೊಂದು ತಪಾಸಣೆ.  ಅವರನ್ನು ದಾಟಿದ ನಂತರ ನಾವು ಪ್ರದರ್ಶನಕ್ಕೆ ಎಷ್ಟು ಹತ್ತಿರವಿದ್ದೆವೆಂದರೆ ನಮ್ಮ ಮುಂದೆಯೇ ರನ್‍ವೇನಲ್ಲಿ ವಿಮಾನಗಳು ಏರುತ್ತಿದ್ದವು ಮತ್ತು ಇಳಿಯುತ್ತಿದ್ದವು..

            ನಮ್ಮ ಫೋಟೊಗ್ರಫಿ ತಂಡ ಸಿ.ಅರ್ ಸತ್ಯನಾರಾಯಣ, ನಾನು,  ದೇವೆಂದ್ರ, ಶೈಲೇಶ್, ಮಾರ್ಟಿನ್ ಮತ್ತು ಎಸ್. ಮಲ್ಲಿಕಾರ್ಜುನ್.
          
          ನಮ್ಮ ಮುಂದೆಯೇ ಸಾಲಾಗಿ ಎಲ್ಲಾ ವಿಮಾನಗಳನ್ನು ನಿಲ್ಲಿಸಿದ್ದರು.  ವಿಮಾನಗಳು ತಮ್ಮ ಎಲ್ಲಾ ಹಾರಾಟ, ಏರುವುದು, ಇಳಿಯುವುದು, ಲಗಾಟಿ ಹೊಡೆಯುವುದು, ತಲೆಕೆಳಗು, ಉಲ್ಟಾಪಲ್ಟಾ.......ಇತ್ಯಾದಿ ಪ್ರದರ್ಶನಗಳನ್ನು ಇದೇ ಜಾಗದಲ್ಲಿ ಮಾಡುತ್ತಿದ್ದವು.  ಅವು ಇಲ್ಲೇ ಮಾಡಲು ಕಾರಣವೇನೆಂದರೆ ದೇಶವಿದೇಶಗಳಿಂದ ಬಂದಿದ್ದ ವ್ಯಾಪಾರಿಗಳು, ಅಧಿಕಾರಿಗಳು, ಸಚಿವರು, ರಾಜತಾಂತ್ರಿಕವರ್ಗದವರು ಒಟ್ಟಾರೆ ವಿವಿಐಪಿ ಅನ್ನುವವರೆಲ್ಲಾ ನಮ್ಮ ಎಡಪಕ್ಕದ ಕಟ್ಟಡಗಳಲ್ಲಿ ಕುಳಿತು ಈ ಪ್ರದರ್ಶನವನ್ನು ನೋಡುತ್ತಿದ್ದರಿಂದ  ಅವರನ್ನು ಮೆಚ್ಚಿಸಲು ಅದ್ಬುತ ಪ್ರದರ್ಶನವನ್ನು ತೋರಿಸುತ್ತಿದ್ದ ವಿಮಾನಗಳು ನಮ್ಮ ಕ್ಯಾಮೆರಾಗಳಲ್ಲಿ ಸುಲಭವಾಗಿ ಸೆರೆಯಾದವು.


          ಮಧ್ಯಾಹ್ನ ಊಟವಾದನಂತರ ನಾನು ಏನಾದರೂ ಸ್ವಲ್ಪ ವಿಭಿನ್ನವಾದ ಫೋಟೊಗ್ರಫಿ ಮಾಡಬೇಕೆಂದು ತೀರ್ಮಾನಿಸಿಕೊಂಡೆ. ಆಗ ಕಂಡಿತು ನನಗೆ ಅಲ್ಲಲ್ಲಿ ಎತ್ತರದಲ್ಲಿ ಕಾಣುತ್ತಿದ್ದ ಬಾವುಟಗಳು. ಅವುಗಳ ಹಿನ್ನೆಲೆಯನ್ನು ಮಾಡಿಕೊಂಡು ಫೋಟೊಗ್ರಫಿ ಮಾಡಿದರೆ ಹೇಗೆ ಅನ್ನಿಸಿತು.  ನೆಲ್ಲಿಕಾಯಿಗೂ ಸಮುದ್ರದ ಉಪ್ಪಿಗೂ ಎಲ್ಲಿಯ ಸಂಭಂದ ಅಂದುಕೊಂಡರೂ ಅವೆರಡೂ ಕೂಡಿದರೇ ಎಂಥ ಅದ್ಭುತವಲ್ಲವೇ! ಹಾಗೆ ನಾನು ಕೂಡ ಅಲ್ಲಿ ಹಾರಾಡುವ ವಿಮಾನ ಯಾವುದೆಂದು ಮೊದಲು ತಿಳಿಯಬೇಕು. ಆನಂತರ ಅದಕ್ಕೆ ಸಂಭಂದಿಸಿದ ಬಾವುಟ, ಚಿಹ್ನೆ, ಗೋಪುರ ಇತ್ಯಾದಿಗಳನ್ನು ಹುಡುಕಿಕೊಂಡು  ಇದರ ಹಿನ್ನೆಲೆಯಲ್ಲಿ ಅದೇ ದೇಶದ ವಿಮಾನಗಳ ಹಾರಾಟದ ಫೋಟೊಗ್ರಫಿ ಮಾಡಬೇಕೆಂದು ಪ್ಲಾನ್ ಮಾಡಿದೆನಲ್ಲಾ...ತಲೆಗೆ ಈ ಯೋಚನೆ ಬಂದ ತಕ್ಷಣ ನನ್ನ ಫೋಟೊಗ್ರಫಿ ಗೆಳೆಯರ ಗುಂಪಿನಿಂದ ಮಾಯವಾಗಿಬಿಟ್ಟಿದ್ದೆ.


         ಅಲ್ಲಿಂದ ಏಕೆ ಮಾಯವಾದೆನೆಂದರೆ ಹೀಗೊಂದು ಹೊಸ ರೀತಿಯ ಫೋಟೋಗ್ರಫಿಯ ಉಪಾಯವನ್ನು ಅವರಿಗೆ ಹೇಳಿದೆನೆಂದುಕೊಳ್ಳಿ. ಇಂಥ ಸುಡು ಬಿಸಿಲಲ್ಲಿ ಭಾರವಾದ ಕ್ಯಾಮೆರ ಲಗ್ಗೇಜುಗಳನ್ನು ಹೊತ್ತು ನಿಂತುಕೊಂಡು ಆಕಾಶದಲ್ಲಿ ದೂರದಲ್ಲೆಲ್ಲೋ ಹಾರಾಡುತ್ತಾ ಕ್ಷಣಮಾತ್ರದಲ್ಲಿ ಕಣ್ಮರೆಯಾಗುವ ವಿಮಾನಗಳನ್ನು  ನಮ್ಮ ಕ್ಯಾಮೆರಾಗಳಲ್ಲಿ ಸೆರೆಯಿಡಿಯುವುದೇ ದೊಡ್ಡ ಸಾಹಸ. ಅದರಲ್ಲೂ ನಾವು ಕ್ಲಿಕ್ಕಿಸಿದ ನೂರಾರು ಫೋಟೊಗಳಲ್ಲಿ  ವಿಮಾನಗಳ ವೇಗದ ಚಲನೆಗೆ ನಮ್ಮ ಕ್ಯಾಮೆರಗಳು ಕ್ಷಣಮಾತ್ರದಲ್ಲಿ ಫೋಕಸ್ ಮಾಡಿ ಶಾರ್ಪ್ ಆಗಿ ಫೋಟೊಗ್ರಫಿ ತೆಗೆದರೆ ಅದೇ ನಮ್ಮ ದೊಡ್ಡ ಸಾಧನೆ.  ಅಂತದ್ದರಲ್ಲಿ  ಮೇಲೆ ವಿವಿಧ ದೇಶಗಳ ಬಾವುಟಗಳನ್ನು ಹುಡುಕಿ ಕ್ಷಣಮಾತ್ರದಲ್ಲಿ ಕಂಡು ಕಣ್ಮರೆಯಾಗುವ ಆ ದೇಶದ ವಿಮಾನಗಳನ್ನು  ಇವುಗಳ ಹಿನ್ನೆಲೆಯಲ್ಲಿ ಫೋಟೊಗ್ರಫಿ ಮಾಡುವುದೆಂದರೆ ಅಸಾಧ್ಯವೆಂದುಕೊಂಡು ನನ್ನ ಯೋಜನೆಯನ್ನು ಹುಚ್ಚುತನವೆಂದುಬಿಟ್ಟರೆ!  ಅದಕ್ಕೆ ಅಲ್ಲಿಂದ ತಪ್ಪಿಸಿಕೊಂಡಿದ್ದೆ.

  ಸಂಜೆ ಫೋಟೊಗ್ರಫಿಯೆಲ್ಲಾ ಮುಗಿದ ಮೇಲೆ ಎಲ್ಲರೂ ಮತ್ತೆ ಸೇರಿದೆವು. ನಮ್ಮ ಸಿ.ಅರ್ ಸತ್ಯನಾರಾಯಣರವರು ಪಾಸ್ ಕೊಟ್ಟ ಗೆಳೆಯರಿಗೆ ಫೋನ್ ಮಾಡಿದರು. ನಮ್ಮ ಫೋನಿಗೆ ಕಾಯುತ್ತಿರುವಂತೆ ಬೆಂಜ್ ಕಾರಿನ ಡ್ರೈವರ್ ನಮಗಾಗಿ ಕಾಯುತ್ತಿದ್ದ.  ನಾವೆಲ್ಲಾ ಮತ್ತೊಮ್ಮೆ ಬೆಂಜ್ ಕಾರಿನ ಸೀಟುಗಳನ್ನು ಅಲಂಕರಿಸಿದೆವು.  ಏರ್ ಷೋ ನಡೆಯುವ ಸ್ಥಳದಿಂದ ಮುಖ್ಯದ್ವಾರಕ್ಕೆ ಒಂದುವರೆ ಕಿಲೋಮೀಟರ್.

 "ಈ ಒಂದುವರೆ ಕಿಲೋಮೀಟರ್ ಟ್ರಾಫಿಕ್ ಜಾಮ್ ಆಗಿ ನಮ್ಮ ಕಾರು ನಿದಾನವಾಗಿ ಹೋಗುವಂತಾಗಲಿ’ ಅಂದರು  ದೇವೇಂದ್ರ. 


"ಯಾಕಪ್ಪ ಬೇಗ ಮನೆಗೆ ಹೋಗಬೇಕು ಅನ್ನುವ ಆಸೆಯಿಲ್ವಾ" ಮಾರ್ಟಿನ್ ಕೇಳಿದರು.


 "ಟ್ರಾಫಿಕ್ ಜಾಮ್ ಆದ್ರೆ ಈ ಕಾರಿನಲ್ಲಿ ಜಾಸ್ತಿ ಹೊತ್ತು ಕೂರಬಹುದಲ್ವಾ"  ನಗುತ್ತಾ ಹೇಳಿದರು ದೇವೇಂದ್ರ.

     ಅವರ ಮಾತನ್ನು ಕೇಳಿ ಎಲ್ಲರೂ ಜೋರಾಗಿ ನಕ್ಕೆವು.  ಖುಷಿಯಿಂದ್ ಆ ಡ್ರೈವರಿಗೆ ಟಿಪ್ಸ್ ಕೊಟ್ಟು  ನಮ್ಮ ಮನೆ ಕಡೆಗೆ ಹೊರಟಾಗ ಸಂಜೆ ಆರುಗಂಟೆ. 
 ---------------------------------------------------
 ---------------------------------------------------
--------------------------------------------------
              ಮತ್ತೆ ಈಗ ಯಾವ ವಿಮಾನ ಈಗ ಹಾರಾಟ ಪ್ರಾರಂಭಿಸುತ್ತದೆ, ಆ ದೇಶಕ್ಕೆ ಸಂಭಂದಪಟ್ಟ ಬಾವುಟ ಇತ್ಯಾದಿಗಳು ಎಲ್ಲಿರುತ್ತವೆ, ಆ ವಿಮಾನದ ಹಾರಾಟ ಪ್ರದರ್ಶನ ಎಷ್ಟು ಹೊತ್ತು ಇರುತ್ತದೆ, ಅಷ್ಟರೊಳಗೆ ಆಕಾಶದ ಯಾವ ದಿಕ್ಕಿನಲ್ಲಿ ಇವೆರಡನ್ನು ಸೇರಿಸಿ ಫೋಟೊಗ್ರಫಿ ಮಾಡಬೇಕು ಎಷ್ಟು ವೇಗವಾಗಿ ಮಾಡಬೇಕು? ತಾಂತ್ರಿಕವಾಗಿ ಹೇಗೆ ಕ್ಯಾಮೆರ ಮತ್ತು ಲೆನ್ಸುಗಳನ್ನು ಬಳಸಬೇಕು ಇತ್ಯಾದಿ ವಿಚಾರ್‍ಅಗಳನ್ನು ಇಲ್ಲಿ ಬರೆದರೆ ಈ ಲೇಖನ ಮಾರುದ್ದವಾಗುತ್ತದೆ. ಅದೆಲ್ಲಾ ತರಲೇ ತಾಪತ್ರಯ ನನಗಿರಲಿ. ಅದರ ಬದಲಾಗಿ ಮಿಂಚಿನಂತೆ ಕಣ್ಮುಂದೆ ಹಾರಿ ಮಾಯವಾಗುವ ವೈವಿಧ್ಯಮಯ ವಿಮಾನಗಳು ಮಾತ್ರ ನಿಮಗಿರಲಿ ಅಂದುಕೊಂಡು ನೀವು ಅವುಗಳ ಫೋಟೊಗಳನ್ನು ಮಾತ್ರ ಹಾಕಿದ್ದೇನೆ ನೋಡಿ ಆನಂದಿಸಿ. ಖುಷಿಯಾದರೆ ನಿಮ್ಮ ಪ್ರತಿಕ್ರಿಯೆ ತಿಳಿಸಿ.


ಸೂರ್ಯ ಕಿರಣಗಳು ನೆಲದಿಂದ ಟೇಕ್ ಅಪ್ ಆಗುವಾಗ ಈ ಪುಟ್ಟ ಬಾಲಕ ಕುತೂಹಲದಿಂದ ನೋಡುವ ಪರಿಯನ್ನು  ನೋಡಿದರೆ ಮುಂದೆ ಈತ ಪೈಲಟ್ ಆಗಬಹುದೇ?


ನನಗೆ ಇದು ತುಂಬಾ ಇಷ್ಟದ ಫೋಟೊ. ಸೂರ್ಯಕಿರಣಗಳು ಆಕಾಶದಲ್ಲಿ ಬಣ್ಣದ ಚಿತ್ತಾರವನ್ನು ಬಿಡಿಸಿ ಕೆಳಮುಖವಾಗಿ ಇಳಿಯುವಾಗ ನಮ್ಮ  ದೇಶದ ಬಾವುಟವನ್ನು ಉತ್ಸಾಹದಿಂದ ಹಾರಿಸುತ್ತಿದ್ದಾರೆ.


ಆಕಾಶದಲ್ಲಿ ಬಣ್ಣದ ಚಿತ್ತಾರ ಬಿಡಿಸಿದ ಸೂರ್ಯಕಿರಣಗಳು ನಮ್ಮ  ಮತ್ತೊಂದು ಯುದ್ದ ವಿಮಾನದಲ್ಲಿರುವ ನಮ್ಮ ದೇಶದ ಧ್ವಜದ ಹಿನ್ನೆಲೆಯಲ್ಲಿ


ಇದು "ಯೋರೋ ಟೈಫೂನ್ ಯುದ್ದವಿಮಾನ"  ಇದನ್ನು ಯುರೋಪಿನ ಐದು ರಾಷ್ಟ್ರಗಳಾದ ಸ್ಪೈನ್, ಜರ್ಮನಿ, ಇಟಲಿ, ಆಷ್ಟ್ರೀಯ, ಪ್ರಾನ್ಸ್, ಮತ್ತು  ಏಷ್ಯಾದ ಸೌದಿ ಆರೇಬಿಯ ಒಟ್ಟಾಗಿ  ಸೇರಿ ನಿರ್ಮಿಸಿದ ಯುದ್ದ  ವಿಮಾನ. ನನಗೆ ಮೂರು ರಾಷ್ಟ್ರಗಳ ಬಾವುಟಗಳು ಹಿನ್ನೆಲೆಯಲ್ಲಿ ಮಾತ್ರ ಫೋಟೊಗ್ರಫಿ ಮಾಡಲು ಸಾಧ್ಯವಿತ್ತು ಉಳಿದ ಮೂರು ಮತ್ತೊಂದು ಬದಿಯಲ್ಲಿದ್ದವು.


 ಬೆಳಿಗ್ಗೆ ರೆಡ್ ಬುಲ್ ವಿಮಾನಗಳು ಅದರದೇ ದೊಡ್ಡ ಕೊಡೆಯ ಹಿನ್ನೆಯಲ್ಲಿ ಸೆರೆ ಸಿಕ್ಕಿದ್ದು ಹೀಗೆ.


ರೆಡ್ ಬುಲ್ ನಾಲ್ಕು ವಿಮಾನ ತಲೆಕೆಳಕಾಗಿ ಹಾರುವಾಗ ಛತ್ರಿಯಾಕಾರದ ಅವರ ದೇಶದ ದೊಡ್ಡ ಛತ್ರಿಯ ಹಿನ್ನೆಲೆಯಲ್ಲಿ ಸಂಜೆಗೆ ಸಿಕ್ಕ ಫೋಟೊ


ತಲೆಕೆಳಗಾಗಿ ವೇಗವಾಗಿ ಇಳಿಯುತ್ತಿರುವ ಸ್ವೀಡನ್ ದೇಶದ ಗ್ರೀಫಿನ್ ಯುದ್ದ ವಿಮಾನ ಅದೇ ದೇಶದ ದ್ವಜದ ಹಿನ್ನೆಲೆಯಲ್ಲಿ 


ನಮ್ಮ ಹೆಮ್ಮೆಯ ಲಘು  ಯುದ್ದ ವಿಮಾನ "ತೇಜಸ್"  ನಮ್ಮ ದೇಶದ  ಯುದ್ದ ವಿಮಾನದ ಬಾವುಟದ ಹಿನ್ನೆಲೆಯಲ್ಲಿ


ನಾಲ್ಕು  ದಿಕ್ಕಿಗೆ ಒಂದೇ ಕ್ಷಣದಲ್ಲಿ ಹಾರಿದ ಜೆಕೋಸ್ಲೋವಾಕಿಯಾದ ರೆಡ್ ಬುಲ್ ವಿಮಾನಗಳು


ಸೂರ್ಯಕಿರಣಗಳು ಆಕಾಶದಲ್ಲಿ ಬರೆದ  ತಿರುಪತಿ ತಿಮ್ಮಪ್ಪನ ಮೂರು ನಾಮ


ಚಿತ್ರಗಳು ಮತ್ತು ಲೇಖನ
ಶಿವು.ಕೆ