Monday, April 26, 2010

ಅವು ಕಿಟಕಿ ಮೂಲಕ ಒಳಗೆ ಬರಬಹುದು!

ಮೊದಲ ಭಾಗವನ್ನು ಓದಿಲ್ಲದವರು ಇಲ್ಲಿ ಕ್ಲಿಕ್ಕಿಸಿ ದೇವರಿಗೆ ಇರಿಸುಮುರಿಸಾಗಬಹುದು, ಬೇಡ ಸುಮ್ಮನಿರ್ರೀ..... ಇದನ್ನು ಓದಿದ ನಂತರ ಎರಡನೆ ಭಾಗವನ್ನು ಓದಿದರೆ ನಿಮಗೂ ಆ ರೈಲಿನಲ್ಲಿ ಕುಳಿತು ಪ್ರಯಾಣಿಸಿದ ಅನುಭವವಾಗಬಹುದು!]

[ಬೆಂಗಳೂರು-ಮಂಗಳೂರು ರೈಲು ಪ್ರಯಾಣ ಅನುಭವ ಭಾಗ-2

ಇದುವರೆಗೆ ಉತ್ತಮ ವೇಗದಲ್ಲಿ ಸಾಗುತ್ತಿದ್ದ ರೈಲು ಇಲ್ಲಿಂದಾಚೆಗೆ ನಿದಾನಗತಿಯಲ್ಲಿ ಚಲಿಸಲಾರಂಭಿಸಿ ಎಲ್ಲರ ತಾಳ್ಮೆಯನ್ನು ಪರೀಕ್ಷಿಸುತ್ತದೆ. ಅನೇಕ ಕಡೆ ತೆವಳುತ್ತದೆ, ಕೆಲವೊಮ್ಮೆ ಸುಮಾರು ಹೊತ್ತು ನಿಂತೇ ಬಿಡುತ್ತದೆ. ಆಗ ಒಳಗಿದ್ದ ಪ್ರಯಾಣಿಕರಿಗೆಲ್ಲಾ ಇದರ ಸಹವಾಸವೇ ಬೇಡವೆಂದು ಅರಾಮವಾಗಿ ನಿದ್ರೆಹೋಗಿಬಿಡುತ್ತಾರೆ. ಮಧ್ಯಾಹ್ನ ಒಂದು ಗಂಟೆಯ ಹೊತ್ತಿಗೆ ಸಕಲೇಶಪುರ ದಾಟಿ ಬಾಳ್ಳುಪೇಟೆ ತಲುಪುವ ಹೊತ್ತಿಗೆ ನಿದಾನವಾಗಿ ನಮ್ಮ ಶಿರಾಡಿ ಘಾಟಿನ ವಿವಿಧ ಮಜಲುಗಳು ತೆರೆದುಕೊಳ್ಳಲಾರಂಭಿಸುತ್ತವೆ. ನಿದಾನವಾಗಿ ತೆವಳುವ ರೈಲು ಹಾವಿನಂತೆ ಚಲಿಸುತ್ತದೆ. ನೂರಾರು ಅಡಿ ಎತ್ತರದ ಸೇತುವೆ ಮೇಲೆ ಸಾಗುವಾಗ ನಮ್ಮ ಬೋಗಿಯಿಂದ ಕೆಳಗೆ ಇಣುಕಿದರೆ ಹೃದಯ ಬಾಯಿಗೆ ಬಂದಂತೆ ಆಗುತ್ತದೆ. ಇಂಥ ಐವತ್ತಕ್ಕೂ ಹೆಚ್ಚು ಸೇತುವೆಗಳ ಮೇಲೆ ಸಾಗುವಾಗ ಒಂದು ಬದಿಯಲ್ಲಿ ದೊಡ್ಡಬೆಟ್ಟಗಳಿದ್ದರೇ ಮತ್ತೊಂದು ಕಡೆ ಹತ್ತಾರು ಕಿಲೋಮೀಟರುಗಟ್ಟಲೇ ಹರಡಿಕೊಂಡಿರುವ ಶಿರಾಡಿಘಾಟು ದಟ್ಟ ಹಸಿರಿನ ಕಾಡು ನಮ್ಮ ಕಣ್ತುಂಬಿಕೊಳ್ಳುತ್ತದೆ. ಮತ್ತೆ ಇಲ್ಲಿನ ಸುರಂಗದಲ್ಲಿ ಸಾಗುವಾಗ ಸಿಗುವ ಅನುಭವ ಅನುಭೂತಿಯೇ ಬೇರೆ ರೀತಿಯದು. ಕೆಲವು ಸುರಂಗಗಳಂತೂ ಅರ್ಧಕ್ಕೂ ಹೆಚ್ಚು ಕಿಲೋಮೀಟರ್ ದೂರವಿರುವುದುಂಟು. ಕೆಲವು ಸುರಂಗದಲ್ಲಿ ನಮ್ಮ ರೈಲು ಯೂ ಆಕಾರದಲ್ಲಿ ಚಲಿಸುವಾಗ ನಮ್ಮ ಕಣ್ಣಗಲಿಸಿದರೆ ಹೆಬ್ಬಾವಿನ ಹೊಟ್ಟೆಯೊಳಗೆ ಚಲಿಸುತ್ತಿರುವಂತೆ ಭಾಸವಾಗುತ್ತದೆ.


ಬೃಹಾದಾಕಾರದ ಸೇತುವೆಯ ಮೇಲೆ ಚಲಿಸುವ ನಮ್ಮ ರೈಲಿನ ಫೋಟೊವನ್ನು ಸುಲಭವಾಗಿ ಕ್ಲಿಕ್ಕಿಸಿದೆನಾದರೂ ಸುರಂಗದಲ್ಲಿ ಫೋಟೊಗ್ರಫಿ ಒಂದು ಸವಾಲು. ನಮ್ಮ ಕಣ್ಣು ಕತ್ತಲಿಗೆ ಹೊಂದಿಕೊಂಡಷ್ಟು ಸುಲಭವಾಗಿ ಕ್ಯಾಮೆರಾ ಕಣ್ಣು ಹೊಂದಿಕೊಳ್ಳುವುದಿಲ್ಲ. ಆದರೂ ಅದರದೇ ಭಾಷೆಯಲ್ಲಿ ತಾಂತ್ರಿಕವಾಗಿ ಲೆಕ್ಕಚಾರಮಾಡಿ ಒಂದಷ್ಟು ಫೋಟೊಗಳನ್ನು ಕ್ಲಿಕ್ಕಿಸಿದ್ದೆ. ಕೆಲವು ಸುರಂಗಗಳಿಗೆ ಒಳಗಿನಿಂದ ಸಿಮೆಂಟ್ ಪ್ಲಾಸ್ಟರಿಂಗ್ ಮಾಡಿದರೆ ಇನ್ನೂ ಕೆಲವು ರಾಕ್ಷಸಾಕಾರದ ಬಂಡೆಗಳನ್ನು ಕೊರೆದು ಮಾಡಿರುವುದರಿಂದ ಸಿಮೆಂಟ್ ಪ್ಲಾಸ್ಟರಿಂಗ್ ಮಾಡದೇ ಹಾಗೆ ಬಿಟ್ಟಿದ್ದಾರೆ. ಸುರಂಗದ ಫೋಟೊ ಕ್ಲಿಕ್ಕಿಸಲು ರೈಲಿನ ಬಾಗಿಲಲ್ಲಿ ಕುಳಿತು ಸರ್ಕಸ್ ಮಾಡುತ್ತಿರಬೇಕಾದರೆ ನನ್ನ ತಲೆ ಮತ್ತು ಕ್ಯಾಮೆರಾ ಮೇಲೆ ತುಂತುರು ಹನಿಗಳ ಹಾಗೆ ನೀರು ಬಿದ್ದಿದ್ದು ನನಗೆ ಆಶ್ಚರ್ಯವಾಯಿತು. ತಲೆಯೆತ್ತಿ ನೋಡಿದೆ. ಈ ಮಟಮಟ ಉರಿಬೇಸಿಗೆಯಲ್ಲಿ ರೈಲಿನ ಮೇಲ್ಬಾಗದಿಂದ ನೀರು ಬೀಳಲು ಹೇಗೆ ಸಾಧ್ಯ? ಮತ್ತೊಂದು ಸುರಂಗದಲ್ಲೂ ಹೀಗೆ ನೀರು ಬಿತ್ತು. ಇದ್ಯಾಕೋ ಸರಿಬರುತ್ತಿಲ್ಲವೆಂದು ಕ್ಯಾಮೆರವನ್ನು ಬ್ಯಾಗಿನೊಳಗೆ ಇಟ್ಟು ಮತ್ತೊಂದು ಸುರಂಗ ಬಂದಾಗ ಬಾಗಿಲಲ್ಲಿ ನಿಂತೆ. ಆಗ ಮೈಮೇಲೆ ಬಿದ್ದ ನೀರು ಬೇಸಿಗೆಯಲ್ಲಿ ಹಾಯ್ ಎನಿಸಿ ಅದನ್ನು ಆನಂದಿಸತೊಡಗಿದೆ. ಇಷ್ಟಕ್ಕೂ ಈ ನೀರು ಎಲ್ಲಿಂದ ಬರುತ್ತದೆಂದರೇ ಬೆಟ್ಟದ ತುದಿಯ ಮೇಲಿಂದ ಹರಿವ ಸಣ್ಣ ಸಣ್ಣ ಜರಿಗಳ ಕೆಳಗೆ ಪರ್ಲಾಂಗುಗಳಷ್ಟು ದೂರ ಸುರಂಗಗಳನ್ನು ಕೊರೆದು ರೈಲು ಹಳಿಗಳನ್ನು ಹಾಕಿರುವುದರಿಂದ ಅಂತ ಬೃಹತ್ ಬಂಡೆಗಳ ನಡುವೆ ಝರಿನೀರು ಜಿನುಗುತ್ತಿರುತ್ತದೆ. ನಾವು ರೈಲಿನಲ್ಲಿ ಹೋಗುವಾಗ ಬಾಗಿಲಲ್ಲಿ ಹುಷಾರಾಗಿ ನಿಂತುಕೊಂಡರೆ ನಮ್ಮ ಮೇಲೂ ಬಿದ್ದು ತಂಪನ್ನೆರೆಯುತ್ತವೆ.

ಬಂಡೆಗಳ ಒಳಗಿಂದ ಜಿನುಗುವ ನೀರು ನನ್ನ ಕ್ಯಾಮೆರಾ ಕಣ್ಣಿಗೆ!



ಸಕಲೇಶಪುರ ದಾಟುತ್ತಿದ್ದಂತೆ ಸುಬ್ರಮಣ್ಯ ರೋಡ್ ನಿಲ್ದಾಣದವರೆಗೆ ಮೂರು ಗಂಟೆಯ ಪ್ರಯಾಣದಲ್ಲಿ ತಿನ್ನಲು ಚುರುಮುರಿ, ಕಡ್ಲೆಕಾಯಿ, ಕಾಫಿ,ಟೀ ಇತ್ಯಾದಿಗಳೇನು ಬರದಿರುವುದರಿಂದ ವಯಸ್ಸಾದವರೆಲ್ಲಾ ಮಲಗಿದ್ದರು. ಆದ್ರೆ ಯುವಕ-ಯುವತಿಯವರು, ಮಕ್ಕಳು ಅದರ ಪರಿವೇ ಇಲ್ಲದೇ "ಯು" ಆಕಾರದಲ್ಲಿ "ಎಸ್ " ಆಕಾರದಲ್ಲಿ ಸಿಗುವ ಸುರಂಗಗಳು ಮತ್ತು ಸೇತುವೆಗಳನ್ನು ನೋಡಿ ಆನಂದಿಸುತ್ತಿದ್ದರು. ಪ್ರಾರಂಭದಲ್ಲಿ ಸೀಟಿಗಾಗಿ ಟಿಕೆಟ್ ಹೊಂದಾಣಿಕೆ ಮಾಡಿಕೊಂಡು ಶಿರಾಡಿ ಘಾಟ್ ದೃಶ್ಯವನ್ನೇ ನೋಡಲು ರೈಲುಹತ್ತಿದ್ದ ಹಿರಿಯರು ಉತ್ಸಾಹದಿಂದ ರೈಲಿನ ಎಮರ್ಜೆನ್ಸಿ ಕಿಟಕಿಗಳಲ್ಲಿ ಜಾಗ ಹಿಡಿದು ಸುರಂಗಗಳು ಮತ್ತು ಸೇತುವೆಗಳು ಬಂದಾಗ ತಲೆಹೊರಗೆ ಹಾಕಿ ನೋಡಿ ಮಕ್ಕಳಂತೆ ಅನಂದಿಸುತ್ತಿದ್ದರು.

ಬೃಹತ್ ಸೇತುವೆ, ಹಸಿರು ಕಾಡಿನ ನಡುವೆ ಹಾವಿನಂತೆ ಚಲಿಸುವ ನಮ್ಮ ರೈಲು

ಸೇತುವೆ ದಾಟುತ್ತಿದ್ದಂತೆ ಸಿಗುವ ಸುರಂಗ ಮಾರ್ಗ!

ಎಡಕುಮೇರಿ ರೈಲು ನಿಲ್ದಾಣದ ನಂತರ ಕಾಣಸಿಗುವ ಹಸಿರು ಕಾಡು!

ಸುರಂಗದೊಳಗಿನ ಬಂಡೆಗಳಿಗೆ ಸಿಮೆಂಟ್ ಪ್ಲಾಸ್ಟರಿಂಗ್.

ಬಲಭಾಗದಲ್ಲಿ ಸುರಂಗ ಮಾರ್ಗದೊಳಗಿನ ಬಂಡೆಗಳ ಚಿತ್ರ
ಎಡಭಾಗದ ಸುರಂಗ ಮಾರ್ಗದಲ್ಲಿ ಬಂಡೆಗಳ ಚಿತ್ರ

ಹಸಿರೊಳಗೆ ನುಗ್ಗುತ್ತಿರುವಂತೆ ಭಾಷವಾಗುತ್ತಿದೆಯಲ್ಲವೇ!

ಇಳಿಜಾರು ಬೆಟ್ಟ ಕೊರೆದು ಮಾಡಿದ ಸೇತುವೆ ಮೇಲೆ ನಮ್ಮ ರೈಲು


"ಬೆಳಿಗ್ಗೆ ಹತ್ತು ಗಂಟೆಗೆ ಕೆಲಸ ಶುರುಮಾಡಿದರೆ ಸಂಜೆ ನಾಲ್ಕುಗಂಟೆಯ ಹೊತ್ತಿಗೆ ಕೆಲಸ ನಿಲ್ಲಿಸಬೇಕಾಗಿತ್ತಂತೆ, ನಂತರವೂ ಕೆಲಸಗಾರರು ಅಲ್ಲೇ ಇದ್ದರೆ ಕಾಡಿನ ಆನೆಗಳು ಇವರನ್ನು ಸೊಂಡಿಲಿನಿಂದ ಎತ್ತಿ ಪುಟ್‍ಬಾಲಿನಂತೆ ಕಣಿವೆಯೊಳಕ್ಕೆ ಬಿಸಾಡುತ್ತಿದ್ದವಂತೆ, ಹೀಗೆ ಪ್ರಾಣ ಕಳೆದುಕೊಂಡವರೆಷ್ಟೋ ಜನ", ಅಂತ ಒಬ್ಬ ಹಿರಿಯ ಹೇಳಿದರೆ,

"ಹೌದಪ್ಪ ಅವರ ತ್ಯಾಗದಿಂದಾಗಿಯೇ ನಾವೆಲ್ಲಾ ಇಷ್ಟು ಸುಖವಾಗಿ ಇಂಥ ದೃಶ್ಯಗಳನ್ನು ನೋಡುತ್ತಿರುವುದು" ಅಂತ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದರು ಮತ್ತೊಬ್ಬರು.

"ಇಲ್ಲಿ ಹಾವುಗಳು ಹೆಚ್ಚಂತೆ. ಇಲ್ಲಿ ರಾತ್ರಿ ಮತ್ತು ಹಗಲು ಎರಡೇ ರೈಲು ಓಡಾಡುವುದರಿಂದ ಉಳಿದ ಸಮಯದಲ್ಲಿ ಸುರಂಗದಲ್ಲಿ ನಾಗರಹಾವು ಕೋಬ್ರ ಸೇರಿದಂತೆ ಎಲ್ಲಾ ರೀತಿಯ ಹಾವುಗಳು ಹರಿದಾಡುತ್ತಿರುತ್ತವೆ" ಅಂದರು ಒಬ್ಬರು.

"ಹೌದಾ ಹಾಗಾದರೆ ನಾವು ಇಲ್ಲಿ ಹುಷಾರಾಗಿರಬೇಕು ಅಲ್ವಾ" ಮತ್ತೊಬ್ಬರು ಭಯದಿಂದ ಉತ್ತರಿಸಿದರು. ಅವರ ಮಾತನ್ನು ಕೇಳುತ್ತಿದ್ದ ಉಳಿದವರಿಗೂ ಒಂದು ರೀತಿಯ ಭಯದ ಛಾಯೆ ಮುಖದಲ್ಲಿ ಮೂಡಿತ್ತು.
"ನಾವು ಚಲಿಸುತ್ತಿರುವ ರೈಲು ಸುರಂಗದಲ್ಲಿ ನಿದಾನವಾಗಿ ಸಾಗುತ್ತಿದೆ. ಇದೇ ಸಮಯದಲ್ಲಿ ಸುರಂಗದ ಒಳಬದಿಯ ಪೊಟರೆಗಳಲ್ಲಿರುವ ಹಾವುಗಳು ರೈಲು ಹೀಗೆ ನಿದಾನವಾಗಿ ಸಾಗುತ್ತಿರುವಾಗ ನಮ್ಮ ಬೋಗಿಯ ಮೇಲ್ಬಾಗಕ್ಕೆ ಬಿದ್ದು ಅಲ್ಲಿಂದ ಕಿಟಕಿಗಳ ಮೂಲಕ ಬೋಗಿಯೊಳಕ್ಕೆ ಬರಲೂಬಹುದು" ಅಂದರು.
ಅವರ ಮಾತನ್ನು ಕೇಳಿದ ತಕ್ಷಣ ಎಮರ್ಜೆನ್ಸಿ ಕಿಟಕಿಯಿಂದ ತಲೆ ಹೊರಹಾಕಿ ಉತ್ಸಾಹದಿಂದ ನೋಡುತ್ತಿದ್ದ ಹಿರಿಯರೆಲ್ಲಾ ಭಯದಿಂದ ತಲೆಯನ್ನು ಒಳಗೆ ಎಳೆದುಕೊಂಡು ಕಿಟಕಿಗಳನ್ನು ಮುಚ್ಚಿದರು. ಆ ಮಾತು ಎಲ್ಲಾ ಬೋಗಿಗಳಿಗೂ ಹರಡಿ ಎಲ್ಲರ ಮನದೊಳಗೂ ಒಂಥರ ಭಯ ಮತ್ತು ದಿಗಿಲು ಮುಖದಲ್ಲಿ ಆವರಿಸಿ ಕಿಟಕಿಗಳನ್ನು ಮುಚ್ಚಿದರು. ಅಲ್ಲಿಯವರೆಗೆ ತಮ್ಮ ತಮ್ಮ ಗಂಡಸರ ಉತ್ಸಾಹವನ್ನು ಹತೋಟಿಗೆ ತರಲಾಗದೆ ಒಳಗೊಳಗೆ ಸಿಟ್ಟಿನಿಂದಿದ್ದ ಮಹಿಳಾಮಣಿಗಳಂತೂ ಉತ್ಸಾಹದಿಂದಿದ್ದ ತಮ್ಮ ತಮ್ಮ ಯಜಮಾನರಿಗೆ "ತಲೆಹೊರಹಾಕದೆ ಕಿಟಕಿಗಳನ್ನು ಬಂದು ಮಾಡಿ ತೆಪ್ಪಗೆ ಕುಳಿತುಕೊಳ್ಳಿ" ಅಂತ ಬುದ್ಧಿವಾದ ಹೇಳಿ ತಮ್ಮ ಮಾಂಗಲ್ಯದ ಸುರಕ್ಷತೆಯನ್ನು ಕಾಯ್ದುಕೊಂಡರು. ಮತ್ತೆ ಅಲ್ಲಿದ್ದ ಹೆಂಗಸರಿಗೆಲ್ಲಾ ಇಂಥ ಭಯದ ವಾತಾವರಣದ ವಿಚಾರ ಚರ್ಚಿಸಲು ಸಿಕ್ಕಿದ್ದರಿಂದ ಮತ್ತೊಮ್ಮೆ ಅವರಲ್ಲೇ ಗುಸುಗುಸು ಪ್ರಾರಂಭವಾಗಿತ್ತು. "ತಮ್ಮ ದುರಾದೃಷ್ಟಕ್ಕೆ ಕಿಟಕಿ ಬಾಗಿಲುಗಳಿಂದ ನುಗ್ಗಿದ ಹಾವು ಕಾಲ ಕೆಳಗೆ ಬಂದುಬಿಟ್ಟರೆ " ಎನ್ನುವ ಭಯದ ಕಾರಣಕ್ಕೆ ತಮ್ಮ ತಮ್ಮ ಕಾಲುಗಳನ್ನು ಮೇಲೆತ್ತಿ ಸೀಟಿನಲ್ಲಿ ಚಕ್ಕಳಬಕ್ಕಳ ಹಾಕಿ ಕೂತರು. ಈ ವಿಚಾರದ ಚರ್ಚೆಯಂತೂ ಅವರ ಪ್ರಯಾಣದ ಅವಧಿ ಮುಗಿಯುವವರೆಗೂ ನಡೆದೇ ಇತ್ತು. ಇದೆಲ್ಲದರ ನಡುವೆಯೂ ನನ್ನಂತೆ ಹತ್ತಾರು ಪ್ರಯಾಣಿಕರು ಇವ್ಯಾದಕ್ಕೂ ತಲೆಕೆಡಿಸಿಕೊಳ್ಳದೇ ಫೋಟೊ ವಿಡಿಯೋ ಮಾಡಿ ಆನಂದಿಸಿದರು. ಅವರ ಮಾತುಗಳನ್ನು ಕೇಳುತ್ತಲೇ ಸುರಂಗ ಫೋಟೊಗಳನ್ನು ಕ್ಲಿಕ್ಕಿಸುತ್ತಿದ್ದ ನನಗೆ ಆ ಕತ್ತಲ್ಲಲ್ಲಿ ಸುರಂಗದೊಳಗೆ ಕೆಲಸ ಮಾಡುವ ರೈಲ್ವೇ ಕೆಲಸಗಾರ ಅವನ ಬಿಟ್ಟಿದ್ದ ಟಾರ್ಚ್ ಬೆಳಕಿನಿಂದಾಗಿ ಕಾಣಿಸಿದ. ದೂರದಿಂದಲೇ ಆ ಕತ್ತಲಲ್ಲಿ ಅವನೆಡೆಗೆ ನನ್ನ ಕ್ಯಾಮೆರಾ ಫೋಕಸ್ ಮಾಡಿದೆ. ನನ್ನ ಕ್ಯಾಮೆರಾ ಬೆಳಕನ್ನು ನೋಡಿ ಅದಕ್ಕೆ ಉತ್ತರವಾಗಿ ತನ್ನ ಟಾರ್ಚನ್ನು ಬಿಟ್ಟು ಪ್ರತಿಕ್ರಿಯಿಸಿದ. ಅಷ್ಟರಲ್ಲಿ ಅವನಿಗೆ ಹತ್ತಿರವಾಗಿದ್ದರಿಂದ ಅವನ ಫೋಟೊ ಕ್ಲಿಕ್ಕಿಸಿದ್ದೆ. ಆ ಕತ್ತಲೆಯಲ್ಲೂ ಚಲಿಸುವ ರೈಲಿನಲ್ಲಿರುವ ನನ್ನ ಕ್ಯಾಮೆರಾಗೆ ನಗುತ್ತಾ ಕೆಲಸ ಮಾಡುತ್ತಿದ್ದುದ್ದು ನನ್ನ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಒಳಗಿದ್ದವರೆಲ್ಲಾ ಭ್ರಮೆಯ ಹಾವುಗಳನ್ನು ಸೃಷ್ಟಿಸಿಕೊಂಡು ದಿಗಿಲಿನಿಂದ ಮಾತಾಡುತ್ತಿದ್ದರೇ...ಸುರಂಗದಲ್ಲಿ ಹಾವುಗಳು ಇರುವ ಜಾಗದಲ್ಲಿ ನಗುತ್ತಾ ಕೆಲಸ ಮಾಡುವ ಅವನ ಬದುಕು ನಿಜಕ್ಕೂ ಶ್ಲಾಘನೀಯವೆನಿಸಿತ್ತು. ಕೊನೆಗೂ ಸುಬ್ರಮಣ್ಯ ರೋಡ್ ರೈಲುನಿಲ್ದಾಣವನ್ನು ನಮ್ಮ ರೈಲು ತಲುಪಿದಾಗ ಸಂಜೆಯ ನಾಲ್ಕುಗಂಟೆ ದಾಟಿತ್ತು.

ಸುರಂಗದೊಳಗೆ ಕೆಲಸ ಈ ಕೆಲಸಗಾರನಿಗೆ ಹಾವುಗಳ ಭಯವಿಲ್ಲವೇ?

ಇಲ್ಲಿಂದ ಸುಬ್ರಮಣ್ಯ ದೇವಸ್ಥಾನ ೧೨ ಕಿಲೋಮೀಟರ್ ದೂರದಲ್ಲಿದೆ. ಆಟೋದಲ್ಲಿ ಹೋದರೆ ೧೫೦ ರೂಪಾಯಿ. ಜೀಪಿನಲ್ಲಿ ಒಬ್ಬರಿಗೆ ೨೦ ರೂಪಾಯಿ. ಐದುಜನರು ಕೂತು ಪ್ರಯಾಣಿಸುವ ಜೀಪಿನಲ್ಲಿ ಹನ್ನೊಂದು ಜನರನ್ನು ಕೂರಿಸಿಕೊಳ್ಳುವ ಇಲ್ಲಿನ ಡ್ರೈವರುಗಳು ತಮ್ಮ ಡ್ರೈವಿಂಗ್ ಜಾಗವನ್ನು ಮತ್ತೊಬ್ಬರಿಗೆ ಸೀಟುಮಾಡಿಕೊಟ್ಟು ಬಲಬದಿಯ ತುದಿಯಲ್ಲಿ ದೇಹವನ್ನು ಪೂರ್ತಿಹೊರಹಾಕಿ ಒಂದೇ ಕುಂಡಿಯಲ್ಲಿ ಕುಳಿತು ಜೀಪು ಓಡಿಸುವ ಪರಿ ನೋಡಿದಾಗ ನಿಜಕ್ಕೂ ಮೊದಲಿಗೆ ನಮಗೆ ದಿಗಿಲಾಗುತ್ತದೆ. ಆದ್ರೆ ಸ್ವಲ್ಪ ಹೊತ್ತಿಗೆ ಅವರ ಪ್ರತಿಭೆ, ಪರಿಣತಿ, ಚಾಕಚಕ್ಯತೆಯನ್ನು ಗಮನಿಸಿದಾಗ ಅವರ ಮೇಲೆ ನಂಬಿಕೆಯುಂಟಾಗುತ್ತದೆ. ಸುಬ್ರಮಣ್ಯ ದೇವಸ್ಥಾನ ತಲುಪುವುದು ನಾಲ್ಕು ಕಿಲೋಮೀಟರ್ ಇದೆಯೆನ್ನುವಾಗ ಸಡನ್ನಾಗಿ ರಸ್ತೆಯಲ್ಲಿ ವೇಗವಾಗಿ ದಾಟುತ್ತಿದ್ದ ಹಾವೊಂದರ ಮೇಲೆ ನಾವು ಕುಳಿತಿದ್ದ ಜೀಪಿನ ಮುಂದಿನ ಚಕ್ರ ಹತ್ತೇ ಬಿಟ್ಟಿತು ಅಂದುಕೊಳ್ಳುವಷ್ಟರಲ್ಲಿ ಒಂದೇ ಕುಂಡಿಯಲ್ಲಿ ಕುಳಿತು ಡ್ರೈವ್ ಮಾಡುವ ನಮ್ಮ ಡ್ರೈವರ್ ಚಾಕಚಕ್ಯತೆಯಿಂದಾಗಿ ಹಾವು ಬಚಾವಾಗಿತ್ತು.
ಮರುದಿನ ಬೆಳಿಗ್ಗೆ ಇದೇ ರೈಲು ಮಂಗಳೂರಿನಿಂದ ಹೊರಡುತ್ತದೆ. ಇಲ್ಲಿ ಸರಿಯಾಗಿ ಹತ್ತುಗಂಟೆಗೆ ಬರುತ್ತದೆ ಅಂತ ಸಮಯವನ್ನು ಕೊಟ್ಟಿರುತ್ತಾರೆ ಆದ್ರೆ ಅರ್ಧ ಅಥವ ಮುಕ್ಕಾಲು ಗಂಟೆ ತಡವಾಗಿಯೇ ಬರುತ್ತದೆ. ಮತ್ತದೇ ಸುರಂಗಗಳು ಸೇತುವೆಗಳು, ಅಲ್ಲಲ್ಲಿ ಕೆಲಸ ಮಾಡುವ ರೈಲ್ವೇ ಕೆಲಸಗಾರರು, ಕೂಲಿಕಾರರು, ಹೀಗೆ ಸಾಗಿ ಎಡಕುಮೇರಿ ಸಕಲೇಶಪುರ, ಹಾಸನ, ಅರಸೀಕೆರೆ ತಲುಪುವವರೆಗೆ ನಿದಾನವಾಗಿ ಸಾಗುವ ರೈಲು ಅಲ್ಲಿಂದ ಮತ್ತೆ ವೇಗವನ್ನು ಪಡೆದುಕೊಳ್ಳುತ್ತದೆ. ಇದೇ ರೈಲಿನಲ್ಲಿ ಒಮ್ಮೆ ಹೋಗಿಬಂದಾಗ ನಿಮಗೆ ಮ್ಯಾರಥಾನ್ ಓಟಗಾರನ ನೆನಪಾಗುತ್ತದೆ. ಮ್ಯಾರಥಾನ್ ಓಟಗಾರನಂತೆ ಈ ರೈಲು ಪ್ರಾರಂಭದಲ್ಲಿ ವೇಗವಾಗಿ ಅರಸೀಕೆರೆಯವರೆಗೆ ಚಲಿಸಿ, ಅಲ್ಲಿಂದಾಚೆಗೆ ನಿದಾನವಾಗಿಬಿಡುತ್ತದೆ. ಮತ್ತೆ ವಾಪಸು ಬರುವಾಗ ಗುರಿ ಹತ್ತಿರವಾಗುತ್ತಿದ್ದಂತೆ ವೇಗ ಪಡೆದುಕೊಳ್ಳುವ ಓಟಗಾರನಂತೆ ವೇಗ ಹೆಚ್ಚಿಸಿಕೊಳ್ಳುತ್ತದೆ. ತುಮಕೂರಿನಿಂದ ಯಶವಂತಪುರಕ್ಕೆ ಒಂದೇ ಉಸುರಿಗೆ ಓಡಿಬಂದಂತೆ ಭಾಷವಾಗುತ್ತದೆ.
ನಮ್ಮ ರೈಲು ಸುರಂಗದೊಳಗೆ ನುಗ್ಗುತ್ತಿರುವಾಗ...

ಮತ್ತೊಂದು ಕೋನದಲ್ಲಿ ಬೆಂಗಾಲಿ ಬಿಕ್ಷುಕಿಯ ಚಿತ್ರ!

ಸಕಲೇಶಪುರ ರೈಲುನಿಲ್ದಾಣದಲ್ಲಿ ಕೋತಿಗಳ ಚೆಲ್ಲಾಟ!


ಒಟ್ಟಾರೆ ನನಗೆ ಈ ಪ್ರಯಾಣದಲ್ಲಿ ಇಷ್ಟೆಲ್ಲಾ ಅನುಭವಗಳ ನಡುವೆ ತೇಜಸ್ವಿಯವರ ಎರಡು ಪುಸ್ತಕಗಳನ್ನು ಓದಿಮುಗಿಸಿದ್ದು ಒಂಥರ ಖುಷಿಕೊಟ್ಟಿತ್ತು.

ಚಿತ್ರಗಳು ಮತ್ತು ಲೇಖನ.
ಶಿವು.ಕೆ.

Sunday, April 18, 2010

ದೇವರಿಗೆ ಇರಿಸುಮುರಿಸಾಗಬಹುದು, ಬೇಡ ಸುಮ್ಮನಿರ್ರೀ.....

ಯಶವಂತಪುರ-ಮಂಗಳೂರು ರೈಲು ಹತ್ತಿ ನಮ್ಮ ಸೀಟು ಹುಡುಕುವಷ್ಟರಲ್ಲಿ ಸರಿಯಾಗಿ ಬೆಳಗ್ಗಿನ ೭.೩೦ಕ್ಕೆ ಹೊರಟೇಬಿಟ್ಟಿತ್ತು. ನನ್ನ ಸೀಟ್ ನಂಬರ್ ೧೯ ಆದರೆ ನನ್ನಾಕೆಯದು ಅದೇ ಬೋಗಿಯಲ್ಲಿ ೯೨ನೇ ನಂಬರಿನದು. ಇಡೀ ಬೋಗಿಯಲ್ಲಿ ಹೊರಟಿದ್ದವರೆಲ್ಲಾ ಕುಕ್ಕೆ ಸುಬ್ರಮಣ್ಯ ದೇವಾಸ್ಥಾನಕ್ಕೆ ಹೊರಟಿದ್ದರು. ಎಲ್ಲಾ ತರಹದ ಜನರಿದ್ದರೂ ಅರವತ್ತು ದಾಟಿದವರು ಹೆಚ್ಚಿನ ಸಂಖ್ಯೆಯಲ್ಲಿದ್ದರು. ನನ್ನ ಸೀಟು ಸೇರಿದಂತೆ ಮೂರು ಸೀಟಿನಲ್ಲಿ ೬೦ ಪ್ಲಸ್ ಮೂವರು ಹಿರಿಯರು ಅರಾಮವಾಗಿ ಕುಳಿತುಬಿಟ್ಟಿದ್ದಾರೆ.

"ಸರ್ ೧೯ ನನ್ನ ಸೀಟು" ಅಂತ ಟಿಕೆಟ್ಟು ತೋರಿಸಿದೆ.
ಅವರ ಮಾತುಕತೆಗೆ ಭಂಗವಾಯಿತೇನೋ, ನನ್ನನ್ನೊಮ್ಮೆ ನೋಡಿ
"ನೀವು ಫ್ಯಾಮಿಲಿ ಜೊತೆ ಬಂದಿದ್ದೀರಾ" ಅಂತ ಒಬ್ಬರು ಕೇಳಿದರು. ನಾನು "ಹೌದು" ಅಂದೆ.
"ನೋಡಪ್ಪ ಬೇಸರ ಮಾಡಿಕೊಳ್ಳಬೇಡ...ನಾವು ಮೂವರು ಬ್ಯಾಚುಲರ್ಸು, ಅರಾಮವಾಗಿ ಎಂಜಾಯ್ ಮಾಡಲು ಬಂದಿದ್ದೇವೆ.ನಮ್ಮ ಸೀಟು ಅಲ್ಲಿದೆ,ನೀವು ಸಂಸಾರಿಕರು,ಹೊಂದಾಣಿಕೆಮಾಡಿಕೊಳ್ಳುವ ಮನಸ್ಥಿತಿಯಿದೆಯೆಂದುಕೊಳ್ಳುತ್ತೇನೆ..ಸಹಕರಿಸುತ್ತೀರಾ? ಅಂದರು.

ಅರವತ್ತು ದಾಟಿದರು ಬ್ಯಾಚುಲರ್ಸು ಅಂತ ಹೇಳಿದ ಮಾತು ಕೇಳಿ ಸುತ್ತಲಿದ್ದವರೆಲ್ಲಾ ಗೊಳ್ಳೆಂದು ನಕ್ಕರು. ನನಗೂ ನಗು ತಡೆಯಲಾಗಲಿಲ್ಲ. ಕೊನೆಗೆ ಅವರ ಸೀಟು ೮೮ರಲ್ಲಿ ಹೋಗಿ ಕುಳಿತುಕೊಂಡೆ. ಅದರ ಹಿಂದೆಯೇ ನನ್ನಾಕೆ ಸೀಟು ಇತ್ತು. ನಮ್ಮ ಸಂಸಾರವನ್ನು ಕೊನೇ ಪಕ್ಷ ಅಷ್ಟು ಹತ್ತಿರವಾದರೂ ಮಾಡಿದ ಆ ಬ್ಯಾಚುರರ್ಸುಗಳಿಗೆ ಮನಸ್ಸಿನಲ್ಲಿಯೇ ಥ್ಯಾಂಕ್ಸ್ ಹೇಳುತ್ತಾ ಕುಳಿತುಕೊಂಡೆ.


ಸಿನಿಮಾ ಹಾಲಿನಲ್ಲಿ ಸೀಟು ಬದಲಾವಣೆ ಮಾಡಿ ಹೊಂದಾಣಿಕೆ ಮಾಡಿಕೊಳ್ಳುವಂತೆ ಇಲ್ಲಿಯೂ ಹಾಗೇ ಅನೇಕರು ಸೀಟು ಬದಲಾಯಿಸಿಕೊಂಡು ಕುಳಿತುಕೊಳ್ಳುವ ಹೊತ್ತಿಗೆ ನಮ್ಮ ರೈಲು ಸೋಲದೇವನಹಳ್ಳಿ ದಾಟಿತ್ತು. ಈ ರೈಲಿನಲ್ಲಿ ಬೋಗಿಗಳೆಲ್ಲಾ ನಡುವೆ ಬಾಗಿಲ ಮುಖಾಂತರ ಕನೆಕ್ಟ್ ಆಗಿದ್ದರಿಂದ ಒಮ್ಮೇ ಎಲ್ಲಾ ಬೋಗಿಗಳನ್ನು ನೋಡಿಬರೋಣವೆಂದು ಹೊರಟೆ. ಮೂರನೇ ಬೋಗಿಗೆ ಹೋಗುವಷ್ಟರಲ್ಲಿ ಅಲ್ಲಲ್ಲಿ ಒಬ್ಬೊಬ್ಬರು ಪ್ರಾಯಾಣಿಕರು. ನಂತರದ ಬೋಗಿಗಳಲ್ಲಿ ಒಬ್ಬರೋ ಇಬ್ಬರೋ ಕುಳಿತಿದ್ದರು. ಇವೆಲ್ಲಾ ಕಾದಿರಿಸಿದ ಬೋಗಿಗಳಾದಾರೂ ಪ್ರಯಾಣಿಕರೇ ಇರಲ್ಲಿಲ್ಲ. ನಾವ್ಯಾಕೆ ಸುಮ್ಮನೆ ಮೊದಲನೇ ಬೋಗಿಯಲ್ಲಿ ಸೀಟಿಗಾಗಿ ರಾಜಕೀಯದವರಂತೆ ಹೊಂದಣಿಕೆ ಮಾಡಿಕೊಳ್ಳಲು ತಲೆಬಿಸಿಮಾಡಿಕೊಂಡವಲ್ಲ ಅನ್ನಿಸಿತು. ನಾನು ವಾಪಸು ಬಂದು ಈ ವಿಚಾರವನ್ನು ನನ್ನ ಶ್ರೀಮತಿಗೆ ಹೇಳಿದೆ. ಇಬ್ಬರು ಮುಂದೆ ಖಾಲಿಇರುವ ಬೋಗಿಗಳಲ್ಲಿ ಅರ್‍ಆಮವಾಗಿ ಕುಳಿತೆವು.

ನನ್ನ ಕ್ಯಾಮೆರಾ ನೋಡಿ ದೂರದಿಂದಲೇ ರೈಲ್ವೇ ನೌಕರರು ಫೋಸು ಕೊಟ್ಟಿದ್ದು ಹೀಗೆ!

ಆ ಹುಡುಗ ಕೈತುಂಬ, ಬ್ಯಾಗ್ ತುಂಬಾ ಪುಸ್ತಕಗಳನ್ನು ಹಿಡಿದು ಪ್ರತಿಸೀಟಿನಲ್ಲೂ ಅಷ್ಟಷ್ಟೂ ಪುಸ್ತಕಗಳನ್ನು ಇಟ್ಟು ಹೋಗುತ್ತಿದ್ದ. ನಮ್ಮ ಬಳಿ ಇಟ್ಟಿದ್ದ ಪುಸ್ತಕಗಳನ್ನು ಒಮ್ಮೆ ನೋಡಿದೆ. ಪಂಚತಂತ್ರ, ಈಸೋಪನಕತೆಗಳು, ಜೋಕ್ಸ್, ಆರೋಗ್ಯ ದೇವರನಾಮ, ಮಂತ್ರಗಳು ಮಕ್ಕಳ ಚಿತ್ರಕಲೆ ಹೀಗೆ ಎಲ್ಲಾ ವಿಧದ ಪುಸ್ತಕಗಳು ಇದ್ದವು ಇಂಥ ಪುಸ್ತಕಗಳನ್ನು ಓದಿ ತುಂಬಾ ದಿನವಾದ್ದರಿಂದ ಐದಾರು ಪುಸ್ತಕಗಳನ್ನು ಕೊಂಡುಕೊಂಡೆ. ನಾನು ಓದಿದ ನಂತರ ನಮ್ಮ ಓಣಿಯ ಪುಟ್ಟಮಕ್ಕಳಿಗೆ ಕೊಟ್ಟರೆ ಅವರಿಗೂ ನಮ್ಮ ಹಳ್ಳಿಕತೆಗಳು, ಜಾನಪದ ಸೊಗಡಿನ ಕತೆಗಳ ಪರಿಚಯವಾಗುತ್ತದೆ. ಈ ಮಟ್ಟಿಗಾದರೂ ನಮ್ಮ ಟಿ.ವಿ ನೋಡುವ ಚಟದಿಂದ ಸ್ವಲ್ಪಮಟ್ಟಿಗಾದರೂ ಹೊರಬರುತ್ತಾರೆನ್ನುವುದು ನನ್ನ ಪುಟ್ಟ ಆಸೆ. ಅವನಿಗೆ ಇಲ್ಲಿಂದ ಹೊರಡುವ ಪ್ರತಿಯೊಂದು ರೈಲಿನ ಸಮಯಯೂ ಗೊತ್ತಿರುವುದರಿಂದ ಎಲ್ಲಾ ರೈಲಿನ ಪ್ರಯಾಣಿಕರಿಗೂ ಬೆಳಿಗ್ಗೆಯಿಂದ ಸಂಜೆಯವರೆಗೆ ಪುಸ್ತಕವನ್ನು ಮಾರುತ್ತೇನೆ ಅಂದ.


"ಅದಾಯ ಪರ್ವಾಗಿಲ್ಲವಾ?" ನಾನು ಕೇಳಿದೆ.

"ಪರ್ವಾಗಿಲ್ಲ ಸರ್ ಆದ್ರೆ, ರೈಲ್ವೇ ಪೋಲಿಸ್, ಟೆಕೆಟ್ ಕಲೆಕ್ಟರುಗಳು ಬಂದು ನಮ್ಮ ಮೇಲೆ ಕೇಸು ಹಾಕುತ್ತಾರೆ. ನಾವು ವರ್ಷ ಪೂರ್ತಿ ದುಡಿದ ಹಣದಲ್ಲಿ ಅರ್ಧಕ್ಕಿಂತ ಹೆಚ್ಚು ಹಣ ಕೋರ್ಟಿನಲ್ಲಿ ದಂಡಕಟ್ಟಲಿಕ್ಕೆ ಹೋಗಿಬಿಡುತ್ತದೆ" ಅಂದ.

"ನೀನ್ಯಾಕೆ ಇದನ್ನು ಟೆಂಡರ್ ಪಡೆದು ಅಧಿಕೃತವಾಗಿಯೇ ಮಾರಾಟಮಾಡಬಾರದು?" ನಾನು ಕೇಳಿದೆ.

"ಅದೆಲ್ಲಾ ನಮ್ಮ ಕೈಲಿ ಆಗುತ್ತಾ ಸರ್, ಲಕ್ಷಾಂತರ ರೂಪಾಯಿ ಟೆಂಡರಿಗೆ ಕಟ್ಟಬೇಕು, ಅದು ನಮ್ಮಂತ ಬಡವರಿಗೆ ಸಾದ್ಯವಾ ಹೇಳಿ?" ಅಂತ ನನಗೆ ಮರುಪ್ರಶ್ನೆ ಹಾಕಿದಾಗ ನನ್ನಲ್ಲಿ ಉತ್ತರವಿರಲಿಲ್ಲ.


"ನೀನು ಏನು ಓದಿದ್ದೀಯಾ?" ಪ್ರಶ್ನೆಯನ್ನು ಬದಲಿಸಿದೆ.


"ಎಸ್.ಎಸ್.ಎಲ್.ಸಿವರೆಗೆ" ಅಂದ. ಆದನ್ನು ಹೇಳುವಾಗ ಅವನಿಗೆ ಅಳುಕಿರಲಿಲ್ಲ.

"ಮುಂದೆ ಏಕೆ ಓದಲಿಲ್ಲ"

"ಓದಬೇಕು ಅಂದುಕೊಂಡರೂ ನಮ್ಮ ಮನೆ ಪರಿಸ್ಥಿತಿ ಅದಕ್ಕೆ ಸಹಕರಿಸಲಿಲ್ಲ ಸರ್, ಅದಕ್ಕೆ ಈ ಉದ್ಯೋಗವನ್ನು ಆರಿಸಿಕೊಂಡೆ"

"ಹೋಗಲಿ ಈ ವ್ಯಾಪಾರ ಮಾಡುವುದರಲ್ಲಿ ನಿನಗೆ ಖುಷಿ ಸಿಗುತ್ತದೆಯೇ,"

"ಖಂಡಿತ ಸರ್, ಚಲಿಸುವ ರೈಲಿನಲ್ಲಿ ಚಲಿಸುವ ಸಾವಿರಾರು ಪ್ರಯಾಣರನ್ನು ಬೇಟಿಯಾಗುವ ಅನುಭವ, ಮಾತು ಚರ್ಚೆ, ಇವೆಲ್ಲಾ ನಿಜಕ್ಕೂ ಖುಷಿಕೊಡುತ್ತವೆ. ಸರ್ ಒಂದು ವಿಚಾರ ಗೊತ್ತಾ ನಿಮಗೆ, ನಿಮ್ಮೆಲ್ಲರ ಬದುಕು ನಿಂತಲ್ಲೇ ಚಲಿಸಿದರೆ, ನಮ್ಮದು ಮಾತ್ರ ಚಲಿಸುತ್ತಲೇ ಬದಕನ್ನು ಕಟ್ಟಿಕೊಳ್ಳುವ, ಕಟ್ಟಿಕೊಳ್ಳುತ್ತಲೇ ಚಲಿಸುವ ಬದುಕು. ಇಂಥವುಗಳನ್ನು ಪುಸ್ತಕಗಳು ಕಲಿಸಿಕೊಡುವುದಿಲ್ಲವೆಂದು ನನ್ನ ಭಾವನೆ ಸರ್"


"ಹತ್ತನೇ ತರಗತಿಯವರೆಗೆ ಓದಿದ ಮಾತ್ರಕ್ಕೆ ಚೆನ್ನಾಗಿ ಓದಿದವರಂತೆ, ಸಂಸ್ಕಾರವಂತರಂತೆ ನಿನ್ನ ಭಾಷೆ ಚೆನ್ನಾಗಿದೆಯಲ್ಲಾ? ಕೇಳಿದೆ.

ನನ್ನ ಮಾತಿಗೆ ಅವನು ಸುಮ್ಮನೇ ನಕ್ಕ. ನಮ್ಮ ಮಾತುಕತೆ ನಡುವೆಯೇ ತುಮಕೂರು ಬಂದೇ ಬಿಟ್ಟಿತ್ತು.

"ಸರ್, ಮತ್ತೊಂದು ರೈಲಿಗೆ ಹೋಗಬೇಕು. ವಾಪಸ್ ಬರುವಾಗ ಮತ್ತೆ ಸಿಗುತ್ತೇನೆ" ಅಂದವನೇ ಇಳಿದು ಬೇರೊಂದು ರೈಲು ಹತ್ತಿ, ನನ್ನ ಕಡೆಗೆ ಕೈಯಾಡಿಸಿದ. ನಾನು ಅವನೆಡೆಗೆ ಕೈಯಾಡಿಸಿದೆ. ಅವನ ಮಾತು, ತಿಳುವಳಿಕೆಗೆ ನನ್ನ ಮನದಲ್ಲಿ ಮೆಚ್ಚುಗೆಯಿತ್ತು. ಕೇವಲ ಐವತ್ತೇ ನಿಮಷದಲ್ಲಿ ತುಮಕೂರಿಗೆ ತಲುಪಿದ ಈ ರೈಲಿಗೊಂದು ಮೆಚ್ಚುಗೆ ವ್ಯಕ್ತಪಡಿಸುತ್ತಾ ತಿಂಡಿ ತಿಂದು ಮುಗಿಸಿದೆವು.

ಎಡಕು ಮೇರಿ ಹತ್ತಿರ ಬರುತ್ತಿದ್ದಂತೆ ಎಲ್ಲೂ ಹಸಿರೋ ಹಸಿರು


ಹಸಿರು ವಾತಾರವಣವನ್ನು ಸೀಳಿಕೊಂಡು ಹೋಗುತ್ತಿರುವ ನಮ್ಮ ರೈಲು

ಸಕಲೇಶಪುರ ದಾಟಿ ಬಾಳ್ಳುಪೇಟೆ ಸಿಗುವ ನಡುವೆ ಸಿಗುವ ಹಸಿರು ದೃಶ್ಯಾವಳಿ

ರೈಲ್ವೇ ಗ್ಯಾಂಗ್ ಮೆನ್ ಈತನ ಕೆಲಸವೇ ಎಲ್ಲರಿಗಿಂತ ಮುಖ್ಯವಾದದು. ರೈಲು ಹಳಿ ಪರೀಕ್ಷೆ ಮಾಡುತ್ತಾ ಮೈಲುಗಟ್ಟಲೇ ಬಿಸಿಲು ಮಳೆ ಚಳಿ ಎನ್ನದೇ ದುಡಿಯುತ್ತಾನೆ.

ಸ್ವಲ್ಪ ಹೊತ್ತಿನಲ್ಲೇ ನಿದಾನವಾಗಿ ಕಡ್ಲೆ ಕಾಯಿ, ಚುರುಮುರಿ, ಹಣ್ಣುಗಳು, ನೀರಿನ ಬಾಟಲ್ ಪೆಪ್ಸಿ, ಕಾಫಿ ಟೀ ಒಂದೊಂದಾಗಿ ಬರತೊಡಗಿದವು. ಹೂ ಮಾರುವ ಹೆಂಗಸು ಬಂದಾಗ ನನ್ನ ಶ್ರೀಮತಿಯೂ ಸೇರಿದಂತೆ ಅಲ್ಲಿದ್ದ ಮಹಿಳಾ ಪ್ರಯಾಣಿಕರೆಲ್ಲಾ ಹೂ ಕೊಂಡುಕೊಂಡು ಕುಳಿತಲ್ಲೇ ಕಟ್ಟತೊಡಗಿದರು. ನನ್ನ ಶ್ರೀಮತಿ ಹೇಮಾಶ್ರಿ ಹೂಕಟ್ಟುವುದರ ನಡುವೆ ಮೂರ್ನಾಲ್ಕು ಮಲ್ಲಿಗೆ ಹೂವುಗಳನ್ನು ಕೆಳಕ್ಕೆ ಎಸೆದಳು.
"ಏಕೆ ಆ ಮಲ್ಲಿಗೆ ಹೂಗಳು ಚೆನ್ನಾಗಿದ್ದರೂ ಕೆಳಗೆ ಬಿಸಾಡುತ್ತಿರುವೆಯಲ್ಲ" ಕೇಳಿದೆ.

"ರೀ ಅದರೊಳಗೆ ಹುಳುಗಳಿವೆ ಕಣ್ರಿ ಅದಕ್ಕೆ ಬಿಸಾಡಿದೆ" ಅಂದಳು.

"ಹೂವಿನೊಳಗೆ ಹುಳುಗಳಿದ್ದರೇ ಏನಂತೆ, ನೀನು ಕಟ್ಟಿದ ಮೇಲೆ ದೇವಾಸ್ಥಾನಕ್ಕೆ ತೆಗೆದುಕೊಂಡು ಹೋಗುತ್ತೀಯಲ್ಲ ಅದನ್ನು ದೇವರ ಮೇಲೆ ಹಾಕುತ್ತಾರೆ ಅದರಿಂದ ಯಾರಿಗೆ ತೊಂದರೆಯಾಗೋಲ್ಲವಲ್ಲ ಇರಲಿಬಿಡು" ಅಂತ ಕೆಳಗೆ ಬಿದ್ದಿದ ಹೂಗಳನ್ನು ಎತ್ತಿಕೊಳ್ಳಲು ಬಗ್ಗಿದೆ.

"ರೀ ಬೇಡ ಸುಮ್ಮನಿರಿ, ದೇವರ ಮೇಲೆ ಹೂ ಹಾಕಿದಾಗ ಅದರಲ್ಲಿನ ಹುಳುಗಳು ಆಚೆಬಂದು ದೇವರ ಮೈ ಮೇಲೆಲ್ಲಾ ಹರಿದಾಡುವಾಗ ದೇವರಿಗೆ ಇರಿಸುಮುರಿಸಾಗಿ ಬೇಸರವಾಗಬಹುದು" ಅಂದಳು.

"ಹೂವಿನೊಳಗಿರುವ ಹುಳುಗಳು ದೇವರ ಸನ್ನಿದಿಗೆ ತಲುಪಿ ಅವಕ್ಕೂ ಪುಣ್ಯ ಲಭಿಸಿ ಅವುಗಳ ಜೀವನವೂ ಪಾವನವಾಗುತ್ತದಲ್ಲವೇ" ಅಂತ ನನಗನ್ನಿಸಿದರೂ ಅವಳ ಮಾತಿಗೆ ಉತ್ತರ ಕೊಡದೆ ಸುಮ್ಮನಾದೆ. ಬಹುಶಃ ಪ್ರಾಣಿ, ಪಕ್ಷಿ, ಹುಳುಗಳ ಮೇಲೆ ನನಗೆ ವಿಶೇಷ ಪರಿಸರಪ್ರೇಮವಿರುವುದರಿಂದ ಹೀಗೆ ಅನ್ನಿಸಿರಲೂಬಹುದು ಅಂದುಕೊಂಡು ಸುಮ್ಮನಾದೆ. ಅಷ್ಟರಲ್ಲಾಗಲೇ ಸಮಯ ೧೦-೩೦ ನಮ್ಮ ರೈಲು ಅರಸೀಕೆರೆ ತಲುಪಿತ್ತು.
ಇಪ್ಪತ್ತು ನಿಮಿಷಗಳ ನಂತರ ರೈಲು ಹಿಂದಕ್ಕೆ ವಾಪಸ್ಸು ಹೊರಟಾಗ ಮುಂದಿನ ಸೀಟಿನಲ್ಲಿ ಕುಳಿತಿದ್ದ ಹಳ್ಳಿ ಹೆಂಗಸರಲ್ಲಿ ಗುಸುಗುಸು ಗಾಬರಿ ಪ್ರಾರಂಭವಾಯಿತು.

"ರೈಲು ಮತ್ತೆ ಬೆಂಗ್ಳೂರಿಗೆ ಹೋಯ್ತಾಯಿದೆಯಾ? ಏನು ತೊಂದರೆಯಂತೆ? ಮುಂದೆ ರೈಲು ಹಳಿಗೇನಾದರೂ ಹೆಚ್ಚುಕಮ್ಮಿ ಆಗವಾ? " ಅಯ್ಯೋ ಕೊನೆಗಾಲದಲ್ಲಿ ಸುಬ್ರಮಣ್ಯ ಸ್ವಾಮಿಯ ದರ್ಶನ ಮಾಡಬೇಕಂತ ಈ ರೈಲಲ್ಲಿ ಬಂದ್ರೆ ಇದು ವಾಪಸ್ ಹೋಯ್ತಾ ಇದೆಯಲ್ಲಾ? ಕೊನೆಗಾಲದಲ್ಲಿ ನನ್ನಾಸೆಯೂ ಪೂರೈಸಕಾಗದಂಗೆ ಆಯ್ತಾಲ್ಲಾ?" ಅಂತ ವಯಸ್ಸಾದ ಮುದುಕಿಯೊಬ್ಬಳು ಪಕ್ಕದಲ್ಲಿದ್ದ ಗೆಳೆತಿಗೆ ಹೇಳುತ್ತಾ ಅವಲತ್ತುಕೊಳ್ಳುತ್ತಿದ್ದಳು.

"ನೋಡಮ್ಮಿ ಎಂಥ ಕೆಲಸವಾಯ್ತು"..ಸ್ವಲ್ಪ ತಡೆದು ಅತ್ತ ಇತ್ತಾ ನೋಡಿ....."ನಾನು ಈ ಬೆಳಿಗ್ಗೆ ಈ ರೈಲು ಹತ್ತುವಾಗ ಬಾಗಿಲಿಗೆ ಅಡ್ಡವಾಗಿ ಕುಳಿತಿದ್ದ ಬಿಕ್ಷುಕ ಹೆಂಗ್ಸಿನ ಮುಖ ನೋಡಿದ್ದಕ್ಕೆ ಇಂಗಾಯ್ತೋ ಏನೋ..." ಈಕೆ ಅನುಮಾನ ವ್ಯಕ್ತಪಡಿಸಿದಳು.

"ಅದಕ್ಕೆ ನಾನು ಯೋಳದು ದೇವರ ಮುಖ ನೋಡಿ ಬರಬೇಕು ಅಂತ..."
ಹೀಗೆ ಸಾಗುತ್ತಿದ್ದ ಇವರ ಮಾತುಗಳನ್ನು ಕೇಳಿ ನನಗೆ ನಗು ಬಂದರೂ ಅದ್ಯಾರು ಬಾಗಿಲಲ್ಲಿ ಕುಳಿತಿರುವವರೋ ನೋಡಿ ಬರೋಣವೆಂದು ಕ್ಯಾಮೆರಾವನ್ನು ಹೆಗಲಿಗೇರಿಸಿ ಹೊರಟೆ. ಇವರು ಹೇಳಿದಂತೆ ಆ ಬಿಕ್ಷುಕಿ ಅಲ್ಲೇ ಕುಳಿತಿದ್ದಳು. ನಾನು ಯಾರನ್ನೇ ನೋಡಿದರೂ ಕುತೂಹಲವೆನಿಸಿದರೆ ಮಾತಾಡಿಸುವುದು ನನ್ನ ಚಟ. ಅದೇ ರೀತಿ ಆಕೆಯನ್ನು ಮಾತಾಡಿಸಿದೆ. ಅವಳಿಗೆ ನನ್ನ ಭಾಷೆ ಅರ್ಥವಾಗಲಿಲ್ಲ. ತಮಿಳು, ತೆಲುಗು, ಹಿಂದಿ ಭಾಷೆ ಪ್ರಯತ್ನಿಸಿದೆ. ಅವಳು ಹಿಂದಿಯಲ್ಲೇ ಉತ್ತರಿಸಿದಳು.
ಆಕೆಯಿಂದ ತಿಳಿದಿದ್ದೇನೆಂದರೆ, ಅವಳು ಪಶ್ಚಿಮ ಬಂಗಾಲದಿಂದ ಹೀಗೆ ಒಂದೊಂದೇ ರೈಲು ಹತ್ತಿ ಹೋಗುತ್ತಿದ್ದಾಳೆ ಅಲ್ಲಲ್ಲಿ ಬಿಕ್ಷೆ ಬೇಡಿ ಹೊಟ್ಟೆ ಹೊರೆಯುತ್ತಳಂತೆ...

"ಮುಂದೆ ಎಲ್ಲಿಗೆ ಹೋಗುತ್ತೀಯಾ" ನಾನು ಕೇಳಿದೆ.

ನನಗೇ ಗೊತ್ತಿಲ್ಲವೆಂದು ಎರಡು ಕೈಗಳನ್ನು ಮೇಲಕ್ಕೆತ್ತಿ ತೋರಿಸಿದಳು. ಅವಳನ್ನು ಇನ್ನೂ ಮಾತಾಡಿಸಿದರೆ ಪ್ರಯೋಜನವಿಲ್ಲವೆಂದುಕೊಂಡೆ. ನಾವೆಲ್ಲಾ ಬದುಕಿನಲ್ಲಿ ಸರಿಯಾದ ದಿಕ್ಕಿನಲ್ಲೇ ಪ್ರಯಾಣಿಸುತ್ತಿದ್ದೇವೆಂದು ಅಂದುಕೊಂಡಿದ್ದೇವಲ್ಲ....ಆದ್ರೆ ಈಕೆಗೆ ಮುಂದಿನ ಬದುಕು, ಪ್ರಯಾಣದ ದಾರಿಯೇ ತಿಳಿದಿಲ್ಲವೆಂದುಕೊಂಡಾಗ ಮನಸ್ಸಿನಲ್ಲೇ ಒಂದು ರೀತಿಯ ವಿಷಾದ ಭಾವ ತುಂಬಿತ್ತು. ನಮ್ಮ ಬೋಗಿಗೆ ವಾಪಸ್ಸು ಬಂದೆ. ಹಳ್ಳಿ ಹೆಂಗಸರ ಚರ್ಚೆ ಹಾಗೇ ಮುಂದುವರಿದಿತ್ತು.

ರೈಲಿನಲ್ಲೇ ಗೊತ್ತುಗುರಿಯಿಲ್ಲದೇ ಸಾಗುತ್ತಿರುವ ಬೆಂಗಾಲಿ ಬಿಕ್ಷುಕಿ.
"ಅಯ್ಯೋ ಹೌದಾ....ಈ ರೈಲಿನಲ್ಲೇ ಬರಬಾರದಿತ್ತು ಕಣಮ್ಮಿ" ಕೊನೆಗೆ ಅವರಿಬ್ಬರೂ ಬೇಸರದಿಂದ ಈ ರೀತಿಯ ತೀರ್ಮಾನ ತೆಗೆದುಕೊಂಡಾಗ ನನಗೆ ನಗುಬಂತು. ಇಷ್ಟಕ್ಕೂ ಇಲ್ಲಿಂದ ಹಾಸನಕ್ಕೆ ಹೋಗಬೇಕಾದರೆ ರೈಲಿಗೆ ಮುಂಭಾಗದ ಇಂಜಿನ್ ಹಿಂಭಾಗಕ್ಕೆ ತಗುಲಿಸುವುದರಿಂದ ಆ ಹಳ್ಳಿ ಹೆಂಗಸರಿಗೆ ಹಾಗೆ ಅನ್ನಿಸಿತ್ತು.
ಮುಂದುವರಿಯುವುದು.....

ವಿಶೇಷ ಸೂಚನೆ: [ಈ ಬಾರಿಯ "ಸಖಿ" ಕನ್ನಡ ಪಾಕ್ಷಿಕ ಪತ್ರಿಕೆಯಲ್ಲಿ ಪ್ರವಾಸ ವಿಶೇಷಾಂಕ ಪ್ರಯುಕ್ತ "ಕುಕ್ಕೆ ಕ್ಲಿಕ್" ಹೆಸರಲ್ಲಿ ಈ ಚಿತ್ರಸಹಿತ ಲೇಖನ ಪ್ರಕಟವಾಗಿದೆ.]
ಚಿತ್ರಗಳು ಮತ್ತು ಲೇಖನ.
ಶಿವು.ಕೆ

Monday, April 12, 2010

"ಯಾವ ವಾರದ ಸುತ್ತಳತೆ ಹೇಳಲಿ ಹೇಳು"

ದೃಶ್ಯ-೧

"ಸರ್, ಕ್ಯಾನ್ ಐ ಹೆಲ್ಪ್ ಯೂ"....ಆತ ನನ್ನನ್ನು ನೋಡುತ್ತಾ ಕೇಳಿದ...
"ಇಟ್ಸ್ ಓಕೆ. ಐ ವಿಲ್ ಟೆಲ್ ಲೇಟರ್"...ನಾನಂದೆ.
"ಮೇಡಮ್, ನಿಮ್ಮ ಮನೆಗೆ ಇದು ತುಂಬಾ ಚೆನ್ನಾಗಿರುತ್ತೆ" ಅಂದ.
"ಇದು ನಮ್ಮ ಮನೆಯಲ್ಲಿದೆ ನಾನು ಬೇರೆಯದನ್ನು ನೋಡಲಿಕ್ಕೆ ಬಂದಿದ್ದೇನೆ." ನನ್ನಾಕೆ ಹೇಳಿದಳು.

ಸ್ವಲ್ಪ ಮುಂದೆ ಸಾಗಿ ಬಟ್ಟೆಗಳ ಬಳಿ ಬಂದೆವು. ತಕ್ಷಣ ಅಲ್ಲಿದವನೊಬ್ಬ,
"ಸರ್, ಯುವರ್ ವೇಸ್ಟ್ ಸೈಜ್ ಪ್ಲೀಸ್" ಕೇಳಿದ.

ಅರೆರೆ ನನ್ನ ಸೊಂಟದ ಸೈಜು ನನಗೇ ಗೊತ್ತಾಗದ ಹಾಗೆ ವ್ಯತ್ಸಾಸವಾಗುತ್ತಿರುತ್ತದೆ? ಅಂತದ್ದರಲ್ಲಿ ಇವನಿಗೆ ಹೇಗೆ ಸರಿಯಾಗಿ ಹೇಳುವುದು? ಅಂದುಕೊಂಡು, ನೋಡಪ್ಪ ನನ್ನ ಸೊಂಟದ ಸುತ್ತಳತೆ ಪ್ರತಿವಾರ ವ್ಯತ್ಯಾಸವಾಗುತ್ತಿರುತ್ತದೆ. "ಯಾವ ವಾರದ ಸುತ್ತಳತೆ ಹೇಳಲಿ ಹೇಳು" ಕೇಳಿದೆ.

ನನ್ನ ಮಾತಿಗೆ ಅವನಿಗೆ ನಗು ಬಂದರೂ ನಗುವಂತಿರಲಿಲ್ಲ. ಒಂದು ಮುಗುಳ್ನಗು ನಕ್ಕು ಸುಮ್ಮನಾದ.

ದೃಶ್ಯ-೨

ಅಲ್ಲೊಬ್ಬ ಉರಿಬಿಸಿಲನ್ನು ಲೆಕ್ಕಿಸದೆ ಹತ್ತಕ್ಕೆ ಒಂದುವರೆ, ಹತ್ತಕ್ಕೆ ಒಂದುವರೆ ಎಂದು ರಾಗವಾಗಿ ಕೂಗಿ ಈರುಳ್ಳಿ ಮಾರುತ್ತಿದ್ದ. ಹತ್ತಕ್ಕೆ ಒಂದುವರೆ ಎಂದರೇನು ಅಂತ ನನಗೆ ಗೊತ್ತಾಗಲಿಲ್ಲ. ಅವನ ಬಳಿಯೇ ಹೋಗಿ ಕೇಳಬೇಕೆನಿಸಿ ಕೇಳಿದೆ. ಅವನು ನನ್ನ ಅಪಾದಮಸ್ತಕ ನೋಡಿ,

"ಸಾರ್ ಅದು ನಿಮಗೆ ಗೊತ್ತಾಗೊಲ್ಲ ಬಿಡಿ, ಹೆಂಗಸರಿಗೆ ಬೇಗ ಗೊತ್ತಾಗಿಬಿಡುತ್ತೆ" ಅಂತ ನಕ್ಕ.

"ಅದಕ್ಕೆ ಕಣ್ರೀ ಕೇಳೀದ್ದು ಗೊತ್ತಾಗಿದ್ದರೆ ಯಾರು ಕೇಳುತ್ತಿದ್ದರು ಹೇಳಿ?" ನನ್ನನ್ನು ಸಮರ್ಥಿಸಿಕೊಳ್ಳುತ್ತಾ ಮರು ಪ್ರಶ್ನೆ ಹಾಕಿದೆ.

"ಒಂದುವರೆ ಕೇಜಿಗೆ ಹತ್ತು ರೂಪಾಯಿ ಅಷ್ಟೇ ಎಷ್ಟು ಕೊಡಲಿ?" ಅಂದ. ಅಷ್ಟರಲ್ಲಿ ನನ್ನ ಪಕ್ಕ ಒಂದು ವಯಸ್ಕ ಹೆಂಗಸು " ಕಡಿಮೆ ಮಾಡಿಕೊಳ್ಳಪ್ಪ ಸ್ವಲ್ಪ" ಅಂದಳು.

"ಓ ಇದಕ್ಕಿಂತ ಕಡಿಮೇನಾ., ನಾನು ಇಬ್ಬರು ಹೆಂಡ್ತೀ ನಾಲ್ಕು ಹೆಣ್ಣುಮಕ್ಕಳು ಸಾಕಬೇಕು. ಇನ್ನೂ ಕಡಿಮೆ ಮಾಡಿದ್ರೆ ಅಷ್ಟೆ" ತಕ್ಷಣವೇ ಅವನಿಂದ ಉತ್ತರ ಬಂತು. ಅಲ್ಲಿದ್ದವರೆಲ್ಲಾ ಅವನ ಮಾತು ಕೇಳಿ ಗೊಳ್ಳೆಂದು ನಕ್ಕರು.

"ಹೋಗ್ಲಿ ಬಿಡಪ್ಪ, ಹತ್ತು ರೂಪಾಯಿಗೆ ಒಂದುವರೆ ಕೆಜಿ ಕೊಟ್ಟು ನಿಮ್ಮ ಹೆಂಡ್ತಿ ಮಕ್ಕಳನ್ನ ಮಹಾರಾಜನಂತೆ ಸಾಕು" ಮರು ಉತ್ತರ ನೀಡಿ ಈರುಳ್ಳಿ ಕೊಂಡು ವಯಸ್ಸಾದ ಮಹಿಳೆ ಹೊರಟುಹೋದಳು.

" ಬನ್ನಿ ಅಕ್ಕ, ಬನ್ನಿ ಅಮ್ಮ....ಹತ್ತಕ್ಕೆ ಒಂದುವರೆ, ನಮ್ಮ ಈರುಳ್ಳಿ ತಿಂದವರ ಮನೆಯಲ್ಲಿ ದೀಪಾವಳಿ ಹಬ್ಬ ಬನ್ನಿ ತಂಗಿ" ಒಂದೇ ಸಮನೇ ಕೂಗುತ್ತಿದ್ದ. ಎಲಾ ಇವನ ಬರೀ ಅಮ್ಮ, ಅಕ್ಕ, ತಂಗಿ ಅಂತ ಕೇವಲ ಹೆಂಗಸರನ್ನೇ ಕರೀತಾನಲ್ಲ, ಕೇಳಿಯೇ ಬಿಡೋಣವೆನ್ನಿಸಿ, "ಏನಪ್ಪ ವ್ಯಾಪಾರಕ್ಕೆ ಹೆಂಗಸರನ್ನು ಮಾತ್ರ ಕರೀತೀಯಲ್ಲ....ನಮ್ಮಂತವರು ನಿಮಗೆ ಗಿಟ್ಟೋದಿಲ್ವೇ" ಅಂದೆ.

"ಸಾರ್ ನೀವು ಅಪರೂಪಕ್ಕೆ ಒಮ್ಮೆ ಬರುತ್ತೀರಿ, ಬೆಲೆ ಕೇಳದೆ ತೆಗೆದುಕೊಂಡು ಹೋಗಿಬಿಡುತ್ತೀರಿ. ಮತ್ತೆ ನೀವು ಬರುವುದು ಮುಂದಿನ ಯುಗಾದಿಗೋ, ಮಾರನವಮಿಗೋ...ಆದ್ರೆ ಹೆಣ್ಮಕ್ಕಳು ಪ್ರತಿ ವಾರ ಬರುತ್ತಾರೆ. ಅವರು ಚೌಕಾಸಿ ಮಾಡಿದರೂ ಯಾಪಾರ ಮಾಡೋರು ಅವರೇ ತಾನೇ! ಅವರು ಚೌಕಾಸಿ ಮಾಡಿದರೂ ಅವರಿಂದಲೇ ನಮ್ಮ ಜೀವನ. ಅವರೇ ಮುಖ್ಯ ಸಾಮಿ ನೀವಲ್ಲ.." ಅಂದ. ಅವನ ಮಾತಿಗೆ ನನ್ನಲ್ಲಿ ಉತ್ತರವಿರಲಿಲ್ಲ.

ಇವರಡು ದೃಶ್ಯಗಳಲ್ಲಿ ಮೊದಲನೆಯದು ಸಂಪಿಗೆ ರಸ್ತೆಯಲ್ಲಿರುವ ಮಂತ್ರಿ ಸ್ಕ್ವೈರ್‍ನ ಸ್ಪಾರ್ ಮಾರ್ಕೆಟಿನದು. ಎರಡನೆಯದು ಯಶವಂತಪುರ ತರಕಾರಿ ಮಾರುಕಟ್ಟೆಯದು.

ಮಂತ್ರಿ ಸ್ಕ್ವೇರ್ ಕಡೆಯಿಂದ ಸಂಪಿಗೆ ರಸ್ತೆ.

ಮಲ್ಲೇಶ್ವರಂ ಕಡೆಯಿಂದ ನೋಡಿದಾಗ ನಮ್ಮ ಸಂಪಿಗೆ ರಸ್ತೆ ಕಾಣುವುದು ಹೀಗೆ!

ಸಂಪಿಗೆ ರಸ್ತೆ ನನ್ನ ಮೆಚ್ಚಿನ ರಸ್ತೆ. ಎರಡೂ ಕಡೇ ರೆಂಬೆಕೊಂಬೆಗಳಲ್ಲಿ ಹಸಿರನ್ನು ತುಂಬಿಕೊಂಡು ಇಡೀ ರಸ್ತೆಗೆ ಹಸಿರುಚತ್ರಿ ಹಿಡಿದಂತೆ ಕಾಣುವ ದೊಡ್ಡ ದೊಡ್ಡ ಸಾಲುಮರಗಳು, ಪಕ್ಕದಲ್ಲಿನ ಉದ್ಯಾನವನ. ನನ್ನ ಹೈಸ್ಕೂಲು ಮತ್ತು ಕಾಲೇಜುದಿನಗಳ ಎಂಟುವರ್ಷಗಳು ಈ ರಸ್ತಯಲ್ಲಿ ನಡೆದಿದ್ದೇನೆ. ಆಗ ಈ ನಡುರಸ್ತೆಯಲ್ಲಿ ಆಯಾಗಿ ಸೈಕಲ್ ತುಳಿದಿದ್ದೇನೆ. ಬೇಸಿಗೆಯಲ್ಲಿ ನೆರಳಿನ ತಂಪನ್ನು, ಚಳಿಗಾಲದಲ್ಲಿ ಬೆಳಗಿನ ಚುಮುಚುಮು ಚಳಿಯ ಇಬ್ಬನಿ ವಾತಾವರಣದಲ್ಲಿ ಚತ್ರಿಗಳಂತಿರುವ ಈ ಮರಗಳ ಎಲೆಗಳ ನಡುವೆ ತೂರಿ ಬರುವ ಬಿಸಿಲಕೋಲನ್ನು ನೋಡಿ ಅಸ್ವಾದಿಸಿದ್ದೇನೆ. ಈಗಲೂ ನಿತ್ಯ ನನ್ನ ಬೆಳಗಿನ ದಿನಪತ್ರಿಕೆ ವಿತರಣೆ ಕೆಲಸದ ಓಡಾಟ ಈ ರಸ್ತೆಯಲ್ಲೇ. ಅಂತ ರಸ್ತೆಯಲ್ಲಿ ಮಾಲ್‍ಗಿಂತ ದೊಡ್ಡದು ಅಂತ ಹೇಳುವ ಮಂತ್ರಿ ಸ್ಕ್ವೇರ್ ಬಂದಿದೆ. ಜೊತೆಗೆ ಬೆಂಗಳೂರಿಗೆ ಮತ್ತೊಂದು ಟ್ರಾಫಿಕ್ ಜಾಮ್ ಸಮಸ್ಯೆಯನ್ನು ಜೊತೆಯಲ್ಲಿಯೇ ಕರೆತಂದಿದೆ. ಆಗೆಲ್ಲಾ ನಿಮಿಷದಲ್ಲಿ ಈ ರಸ್ತೆಯಲ್ಲಿ ಸಾಗುತ್ತಿದ್ದ ನಾವು ಈಗ ಈ ಪುಟ್ಟ ರಸ್ತೆಯನ್ನು ಕ್ರಮಿಸಲು ಹತ್ತು ಹದಿನೈದು ನಿಮಿಷಗಳಾಗುತ್ತಿವೆ. ವಾರಾಂತ್ಯದಲ್ಲಂತೂ ವಾಹನಚಾಲಕರ ಕತೆ ಕೇಳುವುದೇ ಬೇಡ. ಮುಂದೆ ಏನಾಗಬಹುದು? ನಮ್ಮ ಸರ್ಕಾರಕ್ಕೆ ಗೊತ್ತಿರುವುದು ಒಂದೇ ರಸ್ತೆ ಅಗಲ ಮಾಡಲು ಮರಗಳನ್ನು ಕತ್ತರಿಸಿ ಬಿಸಾಡುವುದು. ಇಲ್ಲೂ ಮುಂದೆ ಅದು ಆಗುತ್ತದೆ. ಅದಕ್ಕಾಗಿ ಈ ಸುಂದರ ರಸ್ತೆಯ ಮರಗಳ ಸಮೇತ ಮಳೆಗಾಲ ಚಳಿಗಾಲ ಬೇಸಿಗೆ ಎಲ್ಲಾ ಕಾಲದಲ್ಲಿಯೂ ಫೋಟೊ ತೆಗೆದಿಟ್ಟುಕೊಂಡಿದ್ದೇನೆ. ಮುಂದೆ ಈ ರಸ್ತೆಯಲ್ಲಿ ಮರಗಳು ಇಲ್ಲವಾಗಿ ಈ ರಸ್ತೆಯೂ ಬೋಳಾಗಿಬಿಟ್ಟರೆ ಅನ್ನುವ ಭಯ ಈಗಲೇ ನನಗೆ ಕಾಡುತ್ತಿದೆ. ನಮ್ಮ ಸರ್ಕಾರಕ್ಕೆ ಅಂತ ಆಲೋಚನೆ ಬರದೇ ಟ್ರಾಫಿಕ್ಕಿಗಾಗಿ ಬೇರೆ ದಾರಿ ಹುಡುಕಿಕೊಳ್ಳಲಿ ಅಂತ ದೇವರಲ್ಲಿ ಪ್ರಾರ್ಥಿಸುತ್ತಿದ್ದೇನೆ.

ಈ ಟ್ರಾಫಿಕ್ ಮಂತ್ರಿ ಸ್ಕ್ವೇರ್ ಎಫೆಕ್ಟ್!


ಮಾಲ್ ಸಂಸ್ಕೃತಿ ನಮ್ಮ ಕಡೆ[ಮಲ್ಲೇಶ್ವರಂ, ರಾಜಾಜಿನಗರ, ವೈಯ್ಯಾಲಿಕಾವಲ್, ಶೇಷಾದ್ರಿಪುರಂ, ಇತ್ಯಾದಿ..]ಇರಲಿಲ್ಲ. ಇತ್ತೀಚೆಗೆ ಒಂದು ಬಿಗ್ ಬಜಾರ್, ಅದರ ಪಕ್ಕ ಪ್ಯಾಕ್ಟರಿ ಔಟ್‍ಲೆಟ್, ಸಂಪಿಗೆ ರಸ್ತೆಯಲ್ಲಿ ಮಂತ್ರಿ ಸ್ಕ್ವೇರ್....ದೊಡ್ದದಾದ ರೀತಿಯಲ್ಲಿ ತೆರೆದುಕೊಂಡಿವೆ. ಎಲ್ಲೆಲ್ಲೂ ದೊಡ್ಡ ದೊಡ್ಡ ಜಾಹಿರಾತಿನ ದೊಡ್ದಪಲಕಗಳು, ಟಿ.ವಿ ಮತ್ತು ಎಪ್. ಎಮ್ ರೇಡಿಯೋದಲ್ಲಿ ನಿಮಿಷಕೊಮ್ಮೆ ಜಾಹಿರಾತುಗಳು, ಪತ್ರಿಕೆಗಳಲ್ಲಿ ಪುಟಗಟ್ಟಲೇ ಜಾಹಿರಾತುಗಳನ್ನು, ನಮ್ಮ ಓಣಿಯ ಪುಟ್ಟ ಮಕ್ಕಳು ಈ ಮಾಲ್, ಬಜಾರುಗಳ ಬಗ್ಗೆ ಮಾತಾಡುವುದನ್ನು ನೋಡಿ ನನ್ನ ಶ್ರೀಮತಿ ನಾವು ಹೋಗಿಬರೋಣವೆಂದು ಒತ್ತಾಯ ಮಾಡಿದಳು. ಮೊದಲು ಪ್ಯಾಕ್ಟರಿ ಔಟ್‍ಲೆಟ್, ಬಿಗ್ ಬಜಾರ್...ನಂತರ ಮಂತ್ರಿ ಸ್ಕ್ವೇರ್. ಒಳಗೆ ಹೋಗುತ್ತಿದ್ದಂತೆ ಆಹಾ.....ತರಾವರಿ ಬಣ್ಣ ಬಣ್ಣದ ವಸ್ತುಗಳು, ಮನೆಗೆ ಬೇಕಾದ ಸಕಲವೂ ಇಲ್ಲಿ ಸಿಕ್ಕೇ ಸಿಗುತ್ತವೆ. ನುಣುಪಾದ ಕನ್ನಡಿಯಂತ ನೆಲ, ಮೇಲೇರಿ ಕೆಳಗಿಳಿಯುವ ಎಸ್ಕಲೇಟರುಗಳು, ಸುತ್ತಾಡಿ ಸುಸ್ತಾಗುವಷ್ಟು ದೊಡ್ಡ ಮಾಲುಗಳು ಎಲ್ಲ ಏಸಿ. ಪೂರ್ತಿ ಓಸಿ. ನೋಡುತ್ತಿದ್ದರೇ ಕಾಮನಬಿಲ್ಲಿನ ಎಲ್ಲಾ ಬಣ್ಣಗಳೂ ಇಲ್ಲೇ ಮೇಳೈಸಿದಂತೆ ಅನುಭವ.

ಒಳಗೆ ಜೀನ್ಸ್ ಪ್ಯಾಂಟುಗಳನ್ನು ಒಪ್ಪವಾಗಿ ಜೋಡಿಸಿಟ್ಟಿದ್ದ ಮಂತ್ರಿ ಸ್ಕ್ವೇರಿನ ಒಂದು ಮಾಲ್‍ನೊಳಗೆ ಹೋಗಿ ನೋಡುತ್ತಿದ್ದೆ. ಎಲ್ಲದರ ಬೆಲೆಯೂ ಸಹಜವಾಗಿ ಹೆಚ್ಚೇ ಇತ್ತು. ಯಾವ ಬಟ್ಟೆಯನ್ನು ನೋಡಿದರೂ ಬೆಲೆ ಹೆಚ್ಚಾಗಿಯೇ ಇತ್ತು. ಆಗ ನಮ್ಮ ರಾಮಚಂದ್ರಪುರದ ಟೈಲರ್ ನೆನಪಿಗೆ ಬಂದ. "ಸರ್, ನಿಮಗೆ ಬೇಕಾದ ಬಟ್ಟೆ ಇಲ್ಲಿದೆ ನೋಡಿ ಅಯ್ಕೆ ಮಾಡಿ. ನಿಮಗೆ ಬೇಕಾದ ಪಕ್ಕಾ ಅಳತೆಯಲ್ಲಿ ಬಟ್ಟೆ ಮತ್ತು ಹೊಲೆಯುವ ಕೂಲಿ ಸೇರಿ ಕೇವಲ ಮುನ್ನೂರು ರೂಪಾಯಿಗೆ ಚೆನ್ನಾಗಿ ಹೊಲಿದುಕೊಡುತ್ತೇನೆ" ಅಂತ ಆತ ಹೇಳಿದ್ದು ನೆನಪಿಗೆ ಬಂತು. ಇಂಥ ಮಾಲ್‍ನಲ್ಲಿ ದುಬಾರಿ ಬೆಲೆಯನ್ನು ಕೊಟ್ಟು ನಮ್ಮಂಥ ಮದ್ಯಮ ವರ್ಗದವರು ಬಟ್ಟೆಗಳನ್ನು ಕೊಳ್ಳಲು ಪ್ರಾರಂಭಿಸಿದರೆ ಆ ಟೈಲರುಗಳ ಗತಿಯೇನು? ಅವನ ಹೆಂಡತಿ ಮತ್ತು ಮಕ್ಕಳ ಕತೆಯೇನು? ಯಾವಾಗ ಹೋದರು ಪ್ರೀತಿಯಿಂದ ಮನಃಪೂರ್ವಕವಾಗಿ ಮಾತಾಡಿಸುವ ಆತ ಚೌಕಾಸಿ ಮಾಡಿದರೂ ಬೇಸರಗೊಳ್ಳುವುದಿಲ್ಲ. ಆದ್ರೆ ಇಲ್ಲಿ ಎಲ್ಲವೂ ನಿಗದಿತ ಬೆಲೆ. ತರಕಾರಿ ಆಹಾರ ಪದಾರ್ಥಗಳು, ಖಾದ್ಯಗಳು ಇನ್ನಿತರ ವಿಚಾರದಲ್ಲಿ ಬೆಲೆಗಳು ಸ್ವಲ್ಪ ಕಡಿಮೆಯಿದೆ ಅನ್ನೋದು ನನ್ನ ಶ್ರೀಮತಿಯ ಅಭಿಪ್ರಾಯ. ಕೆಲವು ಉತ್ತಮ ಗುಣಮಟ್ಟದ ವಸ್ತುಗಳ ಬೆಲೆಯೂ ಗುಣಮಟ್ಟಕ್ಕೆ ತಕ್ಕಂತೆ ಇರುವುದರಿಂದ ಗುಣಮಟ್ಟ ನಿರೀಕ್ಷಿಸುವವರು ದಾರಾಳವಾಗಿ ಕೊಂಡುಕೊಳ್ಳುತ್ತಿದ್ದರು. ಮತ್ತೆ ಎಲ್ಲ ವಸ್ತುಗಳಿಗೂ ನಿಗದಿತ ಬೆಲೆ. ಚೌಕಾಸಿಯ ಮಾತೇ ಇಲ್ಲ. ಅದಕ್ಕಿಂತ ಮೊದಲಿಗೆ ಎಲ್ಲಾ ಲೆಕ್ಕಾಚಾರ. ಬ್ರೆಡ್ಡಿನ ಮೇಲೆ ಬೆಣ್ಣೆ ಸವರಿದಂತೆ ಮೇಲುನೋಟಕ್ಕೆ ಎಲ್ಲವೂ ತಳುಕುಬಳುಕು.

ಆದ್ರೂ ಮಂತ್ರಿ ಸ್ಕ್ವೇರಿಗೆ ಬರಬೇಕು ಕಣ್ರಿ... ಏನನ್ನು ಕೊಂಡುಕೊಳ್ಳದಿದ್ದರೂ ಚೆಂದದ ಬಟ್ಟೆ ತೊಟ್ಟ ಬಣ್ಣ ಬಣ್ಣದ ಹುಡುಗಿಯರನ್ನು ನೋಡಲು ಬರಬೇಕು. ಮನೆಯಲ್ಲಿ, ಕಾಲೇಜಿನಲ್ಲಿ, ಅಫೀಸಿನಲ್ಲಿ ಜೈಲುಹಕ್ಕಿಗಳಾಗಿದ್ದರೇನೋ ಅನ್ನುವಷ್ಟರ ಮಟ್ಟಿಗೆ ಹುಡುಗರು ಮತ್ತು ಹುಡುಗಿಯರು ಮೈಮರೆತು ನಲಿಯುವುದನ್ನು ನೋಡಲು ಬರಲೇಬೇಕು. ನುಣುಪಾದ ನೆಲದಲ್ಲಿ ಆಗಾಗ ನಮ್ಮ ಮುಖ ನೋಡಿಕೊಳ್ಳಬೇಕು. ಬಣ್ಣ ಬಣ್ಣದ ಗೋಡೆಗಳು ಅದಕ್ಕೊಪ್ಪುವಂತ ಕಣ್ಕುಕ್ಕುವಂತ ಜಾಹಿರಾತುಗಳುಗಳನ್ನೆಲ್ಲಾ ನೋಡುತ್ತಾ ಮೆಟ್ಟಿಲು ಹತ್ತಿಳಿಯಬೇಕು. ಇಡೀ ಮಾಲನ್ನು ಲೆನ್ಸಿನ ವೈಡ್ ಆಂಗಲಿನಂತೆ ಕಣ್ಣಗಲಿಸಿ ನೋಡಿ ಕಣ್ತುಂಬಿಕೊಳ್ಳಬೇಕು. ಡಾಕ್ಟರು ವಾಕಿಂಗ್ ಮಾಡಿ ಅಂತ ಹೇಳಿದಾಗ ಬೇಸರಗೊಳ್ಳದೆ ಇಲ್ಲಿ ಬಂದು ದಿನಕ್ಕೆ ಎರಡುಗಂಟೆ ಇಡೀ ಮಾಲ್ ತುಂಬಾ ವಾಕ್ ಮಾಡಿ ಮೆಟ್ಟಿಲು ಹತ್ತಿಳಿಯಿರಿ. ಅಂತ ಏಸಿ ಮಾಲಿನಲ್ಲಿ ಕಣ್ಣು ಮತ್ತು ಮನಸ್ಸು ತಂಫು ಮಾಡಿಕೊಳ್ಳೂತ್ತಾ ಉಚಿತವಾಗಿ ದೇಹದ ತೂಕವನ್ನು ಇಳಿಸಿಕೊಳ್ಳಲು ಇದಕ್ಕಿಂತ ಒಳ್ಳೇ ದಾರಿ ಬೇರೊಂದಿಲ್ಲ.

ಮೂರನೆ ಮಹಡಿಯಲ್ಲಿರುವ ಫುಡ್ ಕಾಂಪ್ಲೆಕ್ಸು

ನನ್ನ ಈ ಉಪಾಯವನ್ನು ಕೆಲವು ವಯಸ್ಕರು ಆಗಲೇ ಕಾರ್ಯೋನ್ಮುಖರಾಗಿಬಿಟ್ಟಿದ್ದಾರೆ. ನಾನು ಪರೀಕ್ಷೆಮಾಡಲು ಮೂರು ದಿನ ಸತತವಾಗಿ ಹೋಗಿದ್ದೆ. ಮೂರು ದಿನವೂ ಸಂಜೆಯ ವೇಳೆಯಲ್ಲಿ ಆರು ವಯಸ್ಕರು ಹಾಜರಾಗಿದ್ದಾರೆ. ಅವರು ಸ್ಪಾರ್ ಮಾರ್ಕೆಟ್ಟಿನ ವೈನ್ ಸೆಕ್ಷನ್ನಿನಲ್ಲಿ ತಮ್ಮ ಆಡ್ಡ ಮಾಡಿಕೊಂಡಿದ್ದರು. ಒಬ್ಬ ಹಿರಿಯ ಅಲ್ಲಿರುವ ದುಬಾರಿ ವಿದೇಶಿ ವೈನನ್ನು ತೋರಿಸಿ ’ಫಾರೀನ್‍ನಿಂದ ಬಂದ ನನ್ನ ಅಳಿಯ ಇದೇ ವೈನನ್ನು ನನಗಾಗಿ ತಂದುಕೊಟ್ಟಿದ್ದ, ಅದನ್ನು ಜೋಪಾನವಾಗಿಟ್ಟು ನನ್ನ ಗೆಳೆಯನ ಮದುವೆ ವಾರ್ಷಿಕೋತ್ಸವಕ್ಕೆ ಗಿಫ್ಟ್ ಮಾಡಿದೆ ಕಣಯ್ಯ", ಅಂತ ಹೇಳಿದರೇ, "ನನಗೆ ಐದುನೂರು ವರ್ಷದಷ್ಟು ಹಳೆಯದಾದ ಫಾರಿನ್ನಿನ ವೈನೊಂದು ಗಿಪ್ಟ್ ಬಂದಿತ್ತು ಕಣಯ್ಯ, ಎಂಥ ಪ್ಲೇವರ್ ಅಂತೀಯಾ, ವರ್ಷಾನುಗಟ್ಟಲೇ ಅದರ ವಾಸನೆ ಎಳೆದುಕೊಂಡೇ ಖುಷಿಪಟ್ಟಿದ್ದೆ. ಅದೊಂದು ರಾತ್ರಿ ಸಿಂಗ್ ಜೊತೆಸೇರಿ ಕುಡಿದು ಖಾಲಿಮಾಡಿದ್ದೆ." ಅಂತ ಮತ್ತೊಬ್ಬರು ಹೇಳಿದ್ದು ಕೇಳಿ ನನಗೆ ನಗು ಬಂತು. ಹೀಗೆ ವಯಸ್ಕರು ಏನನ್ನು ಕೊಳ್ಳದೇ ಹೀಗೆ ಅಡ್ದಾಡಿ ವಸ್ತುಗಳ ಮುಂದೆ ನಿಂತು ತಮ್ಮ ಗತಕಾಲದ ನೆನಪುಗಳ ಸುರುಳಿಯನ್ನು ಬಿಚ್ಚಲು ಇದಕ್ಕಿಂತ ಒಳ್ಳೇ ಜಾಗ ಎಲ್ಲಿದೆ ಹೇಳಿ?

ಬೃಹತ್ ಗಾತ್ರ ಜಾಹಿರಾತು ಫಲಕಗಳು ಮಾಲುಗಳಲ್ಲಿ

ನಾನು ಗಮನಿಸಿದ ಮತ್ತೊಂದು ವಿಚಾರವೆಂದರೆ ನಿತ್ಯ ಗಾಂಪರ ಹಾಗೆ ದಿನಪತ್ರಿಕೆ ಹಂಚಲು ಬರುವ ನಮ್ಮ ಬೀಟ್ ಹುಡುಗರು ಮತ್ತು ಯುವಕರು ಇದೇ ಮಾಲುಗಳಲ್ಲಿ ಸಮವಸ್ತ್ರ ಧರಿಸಿ ಸೇಲ್ಸ್ ಬಾಯ್ಸ್ ಆಗಿರುವುದು ಕಾಣಿಸಿತು. ಮತ್ತೆ ದಿನಪತ್ರಿಕೆ ವಸೂಲಿಗೆ ಹೋದಾಗ ಒಂದು ರೂಪಾಯಿ ಮತ್ತು ಐವತ್ತು ಪೈಸೆಗೆ ನನ್ನ ಜೊತೆಗೆ ಚೌಕಾಸಿ ಮಾಡುವ ಅನೇಕ ಗ್ರಾಹಕರು ಮಾಲ್‍ನ ಮೂರನೇ ಮಹಡಿಯಲ್ಲಿರುವ ಪುಡ್ ಕಾಂಪ್ಲೆಕ್ಸುಗಳಿಗೆ ಲಗ್ಗೆ ಹಾಕಿದ್ದರು. ಅದಕ್ಕೆ ನನ್ನ ಅಭ್ಯಂತರವೇನು ಇಲ್ಲ. ಆದ್ರೆ ಇಲ್ಲಿರುವ ಪ್ರತಿಯೊಂದು ತಿಂಡಿಯ ಬೆಲೆಯೂ ನೂರನ್ನೂ ದಾಟುತ್ತದೆ. ಅದನ್ನು ಕ್ಯೂನಲ್ಲಿ ಮಕ್ಕಳ ಜೊತೆ ನಿಂತಿರುವುದು ನೋಡಿ ನನಗೆ ನಗುಬಂತು. ಇಷ್ಟೆಲ್ಲಾ ನೋಡಿದ ಮೇಲೆ ಎಲ್ಲೋ ಒಂದು ಕಡೆ ನಮಗೆ ಗೊತ್ತಿಲ್ಲದ ಹಾಗೆ ಬೇಸರವಾಗುತ್ತದೆ. ಅದ್ಯಾಕೆ ಬೇಸರವಾಗುತ್ತದೆ ಅಂತ ನಿಮ್ಮನ್ನು ನೀವು ಪ್ರಶ್ನಿಸಿಕೊಂಡರೇ ಉತ್ತರ ತಕ್ಷಣಕ್ಕೆ ಹೊಳೆಯುವುದಿಲ್ಲ. ಸ್ವಲ್ಪ ಯೋಚಿಸಿದಾಗ ಹೊಳೆಯಿತು. ಅಲ್ಲಿಗೆ ಬಂದಿರುವ ಪ್ರತಿಯೊಬ್ಬರೂ ಸಹಜವಾಗಿ ಇದ್ದಂತೆ ಕಾಣಲಿಲ್ಲ. ಜೊತೆಗೆ ನಾನು ಕೂಡ ನನಗಾಗಿ ಮಾಲ್‍ನಲ್ಲಿ ಸಹಜವಾಗಿ ಇರಲಿಲ್ಲವಲ್ಲ ಅನ್ನಿಸತೊಡಗಿತು. ಪ್ರತಿಯೊಬ್ಬರೂ ಆಧುನಿಕ ಬಟ್ಟೆಗಳನ್ನು ಧರಿಸಿದ್ದರೂ ಅದು ಅವರಿಗಾಗಿ ಹಾಕಿರಲಿಲ್ಲವೇನೋ, ಬೇರೆಯವರು ಅವರನ್ನು ನೋಡಿ ಮೆಚ್ಚಿಕೊಳ್ಳಲಿ ಎನ್ನುವ ಹಾಗೆ ಅವರ ನಡುವಳಿಕೆಯಿತ್ತು. ಮತ್ತೆ ಕ್ಷಣಕೊಮ್ಮೆ ತಮ್ಮನ್ನು ಯಾರಾದರೂ ಗಮನಿಸುತ್ತಿದ್ದಾರೆಯೇ ಅಂತ ವಾರೆನೋಟದಲ್ಲಿ ನೋಡುವವರೇ ಇದ್ದರು. ಒಟ್ಟಾರೆ ಇಡೀ ಮಾಲ್‍ನಲ್ಲಿ ತಮ್ಮ ಸಹಜಗುಣವನ್ನು ಮರೆತು ಬೇರೆಯವರಿಗಾಗಿ ಹೀಗೆಲ್ಲಾ ವರ್ತಿಸುತ್ತಿದ್ದಾರೇನೋ ಅನ್ನಿಸಿದ್ದು ನಿಜ. ಅವರಿಗೇ ತಮ್ಮ ಮನಸ್ಸಿಗೆ ಬಂದಂತೆ ಹೃದಯಪೂರ್ವಕವಾಗಿ ಬಂದ ಭಾವನೆಗಳನ್ನು ಸಹಜವಾಗಿ ಯಾರೊಂದಿಗೂ ಹಂಚಿಕೊಳ್ಳದೇ ಪ್ರತಿಯೊಬ್ಬರೂ ತೋರಿಕೆಗೆ ಒಬ್ಬರನ್ನೊಬ್ಬರೂ ಮೆಚ್ಚುತ್ತಾ ಮಾಲ್ ಕಾಂಪ್ಲೆಕ್ಸನ್ನು ಹೊಗಳುತ್ತಾ ಕೃತಕವಾಗಿ ಮುಗುಳ್ನಗು ಮಾತ್ರ ಚಿಮ್ಮಿಸುತ್ತಿದ್ದರು.

ಬಣ್ಣದ ದೀಪಗಳಿಂದ ಅಲಂಕೃತವಾದ ಮಾಲ್

ಮತ್ತೊಂದು ವಿಚಾರವೆಂದರೆ ಇಡೀ ಮಾಲ್‍ನಲ್ಲಿ ಎಲ್ಲೂ ನಾವು ಮನ:ಪೂರ್ವಕವಾಗಿ ನಗುವಂತಿಲ್ಲ. ಜೋರಾಗಿ ನಗಬಾರದೆಂದು ಎಲ್ಲೂ ಬೋರ್ಡು ಹಾಕಿಲ್ಲ. ಆದ್ರೂ ಯಾರು ಮನಸೋ ಇಚ್ಚೇ ನಕ್ಕು ಸಂತೋಷಪಡುವಂತಿಲ್ಲ. "ಹಾಗಾದರೆ ಇಂಥ ಮಾಲುಗಳಿಗೆ ಸುಖಾಸುಮ್ಮನೇ ಬರುವುದಕ್ಕೆ ಜನರಿಗೇನು ತಲೆಕೆಟ್ಟಿದೆಯೇ?" ಅಂತ ನಿಮಗನ್ನಿಸಬಹುದು. ನಾನು ಇದೇ ಪ್ರಶ್ನೆಯನ್ನು ಕೇಳಿಕೊಂಡಾಗ ಸಿಕ್ಕ ಉತ್ತರವೇನೆಂದರೆ, ಅವರು ಇಲ್ಲಿಗೆ ಬಂದಾಗ ತುಂಬಾ ಖುಷಿಯಾಗುತ್ತದೆ, ಅದಕ್ಕಾಗಿಯೇ ಬರುತ್ತಾರೆ. ಆದ್ರೆ ಅದನ್ನು ಹೊರಗಡೆ ಮಗುವಿನಂತೆ ಆನಂದಿಸಲು ಅವರಿಗೆ ನಮ್ಮ ಆಧುನಿಕ ನಗರೀಕರಣದ ಗಾಂಭೀರ್ಯ ಸಂಸ್ಕೃತಿ ಆಡ್ಡಬರುತ್ತಿದೆ. ಅಲ್ಲಿ ಮಕ್ಕಳು ಮಕ್ಕಳಂತೆ ಆನಂದಿಸಲು ಅವರ ತಂದೆತಾಯಿಗಳು ಬಿಡುವುದಿಲ್ಲ. ಅವರ ಮೇಲು ಇದೇ ಸಂಸ್ಕೃತಿಯನ್ನು ಹೇರಿಬಿಡುತ್ತಾರೆ. ಇನ್ನೂ ಅದರಲ್ಲಿ ಕೆಲಸ ಮಾಡುವ ಕೆಲಸಗಾರರಿಗೂ ಹಾಗೆ ನೀತಿ ನಿಯಮಗಳಿರುವುದರಿಂದ, ಅವರು ಕೂಡ ಒಳಗೊಳಗೆ ನಗಬೇಕು.

ಯಶವಂತಪುರ ತರಕಾರಿ ಮಾರುಕಟ್ಟೆ.

ಅದೇ ನಮ್ಮ ಮಲ್ಲೇಶ್ವರಂ ೮ನೇ ಆಡ್ಡರಸ್ತೆಗೆ ಬನ್ನಿ. ಅಲ್ಲಿ ರಸ್ತೆಯಲ್ಲಿ ಹೂ ಮಾರುವ ಹುಡುಗಿಯ ಬಳಿ ನಗುತ್ತಾ ಚೌಕಾಸಿ ಮಾಡಬಹುದು. ಕೈಗಾಡಿಯ ಹಣ್ಣಿನವನು ಹೇಳುವ ಅವನ ಸ್ವಂತ ಕತೆಯನ್ನು ಹಿತವಾಗಿ ಕೇಳಬಹುದು. ಉಗುರಿಗೆ ಹಾಕುವ ನೇಲ್ ಪಾಲಿಸ್ ಒಮ್ಮೆ ಹಾಕಿ ನೋಡಿ ಚೆನ್ನಾಗಿಲ್ಲವೆಂದರೆ ವಾಪಸ್ಸು ಕೊಡಬಹುದು, ತರಕಾರಿ ಮಾರುವವಳ ಬಳಿ ಅಮಟೇಕಾಯಿ ಕೊಳ್ಳುತ್ತಾ ಆದರಿಂದ ತಂಬುಳಿ ಮಾಡುವುದನ್ನು ಚರ್ಚಿಸಬಹುದು. ಯಶವಂತಪುರ ತರಕಾರಿ ಮಾರುಕಟ್ಟೆಯಲ್ಲಿ ಮತ್ತಷ್ಟು ಹಳ್ಳಿ ಸೊಗಡು ಭಾಷೆ ಮುಗ್ದತೆಯನ್ನು ನೋಡುತ್ತಾ, ಮನಃಪೂರ್ವಕವಾಗಿ ನಗುತ್ತಾ ವ್ಯಾಪಾರ ಮಾಡಬಹುದು. ಅಲ್ಲಿ ಎಲ್ಲವೂ ಮುಕ್ತ ಮುಕ್ತ. [ಯಶವಂತಪುರ ಸಂತೆಯನ್ನು ಆನಂದಿಸಬೇಕಾದರೆ ನನ್ನ ಈ ವಾರಕೊಮ್ಮೆ ಯಶವಂತಪುರ ಸಂತೆ. ಓದಿ.]
ಮಲ್ಲೇಶ್ವರಂ ಎಂಟನೇ ಆಡ್ಡರಸ್ತೆಯ ರಸ್ತೆ ಮಾರುಕಟ್ಟೆ
ಇಂಥ ಮಾಲುಗಳಲ್ಲಿ ಪ್ರತಿಯೊಂದು ವಸ್ತುವನ್ನು ಪ್ಲಾಸ್ಟಿಕ್ ಪೇಪರಿನಲ್ಲಿ ತುಂಬಿ ತೂಕ ಹಾಕಿ ಸೀಲ್ ಮಾಡಿಟ್ಟಿರುತ್ತಾರೆ. ನನ್ನ ಶ್ರೀಮತಿ ಐದುನೂರು ರೂಪಾಯಿ ಬೆಲೆಯ ವಸ್ತುಗಳನ್ನು ತಂದು ಮನೆಯ ಡಬ್ಬಗಳಿಗೆ ತುಂಬಿದ ನಂತರ ಎಲ್ಲ ಪ್ಲಾಸ್ಟಿಕ್ ಕವರುಗಳನ್ನು ತೂಕ ಮಾಡಿದಾಗ ೨೫೦ ಗ್ರಾಂಗಿಂತಲೂ ಹೆಚ್ಚು ತೂಗುತ್ತಿತ್ತು. ನಮ್ಮಂತೆ ಸಾವಿರಾರು ಗ್ರಾಹಕರು ಸಾವಿರಾರು ರೂಪಾಯಿ ಬೆಲೆಯ ಖರೀದಿಗಳನ್ನು ಮಾಡಿದಾಗ ಅವರಿಗೆ ಕಡಿಮೆಯೆಂದರೂ ಅರ್ಧ ಕೇಜಿ ಪ್ಲಾಸ್ಟಿಕ್ ಅವರ ಮನೆ ಸೇರುತ್ತದೆ. ಇದೇ ಲೆಕ್ಕಾಚಾರದಲ್ಲಿ ಒಂದು ಮಾಲ್ ದಿನಕ್ಕೆ ಅರ್ಧ ಟನ್‍ಗಿಂತಲೂ ಅಧಿಕ ಪ್ಲಾಸ್ಟಿಕ್ ಅನ್ನು ಮನೆಗೆ ಮನೆಗೆ ಕಳಿಸುವುದರಿಂದ ಇಂಥ ಹತ್ತಾರು ಮಾಲುಗಳಿಂದ ಅದೆಷ್ಟು ಟನ್ ಪ್ಲಾಸ್ಟಿಕ್ ಹೊರಬರಬಹುದು. ಇಷ್ಟು ಪ್ಲಾಸ್ಟಿಕ್ ಬೇಡಿಕೆಯನ್ನು ಪರೋಕ್ಷವಾಗಿ ಸೃಷ್ಟಿಸುವ ಮಾಲುಗಳಿಗೆ ಹೋಲಿಸಿದರೆ ಈ ವಿಚಾರದಲ್ಲಿ ನಮ್ಮ ರಸ್ತೆ ಮಾರುಕಟ್ಟೆಗಳೇ ಉತ್ತಮ. ನಾವು ಮಲ್ಲೇಶ್ವರಂ ಅಥವ ಯಶವಂತ ಮಾರುಕಟ್ಟೆಗೆ ಹೊರಟರೆ ಕೈಯಲ್ಲಿ ಒಂದು ದೊಡ್ಡ ಬಟ್ಟೆ ಬ್ಯಾಗುಗಳನ್ನು ತೆಗೆದುಕೊಂಡೇ ಹೊರಡುವುದು. ಕೊಂಡ ಎಲ್ಲಾ ತರಕಾರಿ ರೇಷನ್ ಇತ್ಯಾದಿಗಳನ್ನು ಅದೇ ಬ್ಯಾಗಿನಲ್ಲಿ ತುಂಬಿಸಿಕೊಳ್ಳುತ್ತೇವೆ. ಪ್ಲಾಸ್ಟಿಕ್ ಬಳಕೆ ಇದ್ದರೂ ತೀರ ಕಡಿಮೆ. ಪರೀಕ್ಷೆಗಾಗಿ ಐದುನೂರು ಬೆಲೆಯ ವಸ್ತುಗಳನ್ನು ಮಲ್ಲೇಶ್ವರಂನಲ್ಲಿ ಕೊಂಡು ತಂದಾಗ ನಮಗೆ ಬಂದ ಪ್ಲಾಸ್ಟಿಕ್ ೫೦ ಗ್ರ್‍ಆಂಗಿಂತಲೂ ಕಡಿಮೆಯೆಂದರೇ ನೀವು ನಂಬಲೇ ಬೇಕು. ಹಾಗೆ ಈ ಮಾಲ್‍ಗಳಲ್ಲಿ ನಿತ್ಯ ಉಪಯೋಗಿಸುವ ವಿದ್ಯುತ್ ಲೆಕ್ಕಕ್ಕೆ ಸಿಗುವುದಿಲ್ಲ. ದಿನದ ಹದಿನಾಲ್ಕು ಗಂಟೆ ಲಕ್ಷಾಂತರ ದೀಪಗಳು, ಏಸಿ, ಎಸ್ಕಲೇಟರುಗಳು, ಒಂದೇ ಎರಡೇ......ನಮ್ಮ ಸರ್ಕಾರ ಉತ್ಪಾದಿಸುವ ವಿದ್ಯುತ್ ಇಂಥ ಮಾಲುಗಳಿಗೆ ಸಿಂಹ ಪಾಲು ಸಿಗುವುದರಿಂದ ನಮ್ಮ ಮನೆಗಳಿಗೆ ಗಂಟೆಗೊಮ್ಮೆ ಲೋಡ್ ಸೆಡ್ಡಿಂಗ್. ಅದೆಲ್ಲಾ ಖರ್ಚನ್ನು ಕೊನೆಗೆ ನಮ್ಮ ತಲೆಗೆ ಕಟ್ಟುವುದರಿಂದ ಸಹಜವಾಗಿ ವಸ್ತುಗಳ ಬೆಲೆ ಹೆಚ್ಚೇ ಇರುತ್ತದೆ. ಅದರ ಬದಲಾಗಿ ನಮ್ಮ ರಸ್ತೆಬದಿಯಲ್ಲಿ ಹಗಲೆಲ್ಲಾ ಸೂರ್ಯನಬೆಳೆಕು ರಾತ್ರಿ ಬೀದಿ ದೀಪಗಳಲ್ಲಿ ವ್ಯಾಪಾರ ಮಾಡುವವರೊಂದಿಗೆ ಖುಷಿಯಿಂದ ಚೌಕಾಸಿ ವ್ಯಾಪಾರ ಮಾಡಿ ಸರ್ಕಾರಕ್ಕೆ ಲಕ್ಷಾಂತರ ಯೂನಿಟ್ ವಿದ್ಯುತ್ ಉಳಿಸಬಹುದಲ್ಲವೇ?
ಇವೆಲ್ಲಾ ನನ್ನ ಮನಸ್ಸಿಗೆ ಅನ್ನಿಸಿದ ಭಾವನೆಗಳು ಅಷ್ಟೇ. ಬಡವರ, ಬಡ ಮದ್ಯಮ ವರ್ಗದವರ ದೃಷ್ಟಿಕೋನದ ಅಲೋಚನೆಗಳಷ್ಟೆ. ಶ್ರೀಮಂತರ ದೃಷ್ಟಿಕೋನದಲ್ಲಿ ನೋಡಿದಾಗ ಇದಕ್ಕಿಂತ ಭಿನ್ನ ಚಿತ್ರಗಳೇ ಮೂಡಬಹುದು. ನೀವು ಮಾಲ್‍ಗಳಿಗೆ ಬೇಟಿಕೊಟ್ಟರೆ ನಿಮ್ಮ ಅನುಭವವೂ ಬೇರೆಯಾಗಬಹುದು. ದಿನ ಬದಲಾದಂತೆ ಭಾವನೆಗಳು ಬದಲಾಗಬಹುದು. ಬದಲಾವಣೆ ಜಗದ ನಿಯಮ. ಆದ್ರೆ ಅದು ಪರಿಸರಕ್ಕೆ ಸಂಬಂದಿಸಿದಂತೆ ದಿಡೀರ್ ಬದಲಾವಣೆಯಾಗಬಾರದು, ನಮ್ಮ ಸುಂದರ ಸಾಲುಮರಗಳ ಸಂಪಿಗೆ ರಸ್ತೆಯ ವಾತಾವರಣ ಬದಲಾಗಬಾರದು. ಹಸಿರಿಂದ ನಳನಳಿಸುವ ಮರಗಳು ಮರೆಯಾಗಬಾರದು ಅಲ್ಲವೇ....

ಚಳಿಗಾಲದಲ್ಲಿ ಸಂಪಿಗೆ ರಸ್ತೆ...ಮುಂದೆಯೂ ಈ ಹಸಿರು ಹೀಗೆ ಉಳಿಯುವುದೇ?

ಚಿತ್ರಗಳು ಮತ್ತು ಲೇಖನ.
ಶಿವು.ಕೆ

Tuesday, April 6, 2010

ಬ್ಲಾಗ್ ಲೋಕದ ಮನಸ್ಸು ದೊಡ್ಡದು.

ಫೋನಿಗೆ ಅಥವ ಎದುರಿಗೆ ಸಿಕ್ಕಾಗ ಮನಃಪೂರ್ವಕವಾಗಿ ಶಿವಣ್ಣ ಅಂತಲೇ ಕರೆಯುವ ನವೀನ್ ಅದೊಂದು ಮದುವೆ ಮನೆಯಲ್ಲಿ ದೊಡ್ಡ ಮಟ್ಟದ ಚೆಕ್ [ನನಗೆ, ನವೀನ್‍ಗೆ ಮತ್ತು ಅಪಘಾತಕೊಳ್ಳಗಾದ ವಿಶ್ವನಾಥನಿಗಂತೂ ದೊಡ್ದಮೊತ್ತ]ನನ್ನ ಕೈಗಿತ್ತಾಗ ಅಚ್ಚರಿಯ ಜೊತೆಗೆ ಹೀಗಾಗನ್ನಿಸಿದ್ದು ನಿಜ. ಈ ಲೇಖನವನ್ನು ನಾನು ಬರೆಯಬಾರದೆಂದುಕೊಂಡು ಅದೆಷ್ಟೋ ಬಾರಿ ಮುಂದೂಡಿದರೂ ನವೀನ್ ನನ್ನ ಕೈಗೆ ಆ ಚೆಕ್ ಕೊಟ್ಟಾಗ ಬರೆಯಲೇ ಬೇಕೆನಿಸಿತ್ತು.

ದಿನಪತ್ರಿಕೆಯ "ವೆಂಡರ್" ವಿಶ್ವನಾಥನಿಗೆ ಅಪಘಾತವಾದಾಗ ನಾನು ಸಹಜವಾದ ಕಾಳಜಿಯಿಂದ ಒಂದು ಪುಟ್ಟ ಲೇಖನವನ್ನು ಬರೆದು ಬ್ಲಾಗಿನಲ್ಲಿ ಹಾಕಿದೆ. ಆಗ ನನಗೆ ಕೇವಲ ಒಂದು ಸಣ್ಣ ಕಾಳಜಿಯುಕ್ತ ಸುದ್ದಿಯಾಗಿ ಬ್ಲಾಗಿನಲ್ಲಿ ಹಾಕಬೇಕೆನ್ನುವುದಷ್ಟೇ ನನ್ನ ಉದ್ದೇಶವಾಗಿತ್ತು. ಆತನ ವಿವರಗಳನ್ನು ಪಡೆದು ಬ್ಲಾಗಿನಲ್ಲಿ ಹಾಕಿದ ಮರುಕ್ಷಣವೇ ಶ್ವೇತರವರು ಮೊದಲು ಪ್ರತಿಕ್ರಿಯಿಸಿದ್ದು ಹೀಗೆ. ವಿಶ್ವನಾಥನಿಗೆ ನನ್ನ ಕೈಲಾದ ಸಹಾಯ ಮಾಡುತ್ತೇನೆ ಅವರ ಬ್ಯಾಂಕ್ ಅಕೌಂಟ್ ನಂಬರ್ ಪಡೆದು ಬ್ಲಾಗಿನಲ್ಲಿ ಹಾಕಿ ಅಂತ. ಇದನ್ನು ನಿರೀಕ್ಷಿಸದಿದ್ದರೂ ಅವರ ಪ್ರತಿಕ್ರಿಯೆಯಿಂದಾಗಿ ಕೂಡಲೇ ಆತ ಆಡ್ಮಿಟ್ ಆಗಿದ್ದ ಪ್ರಿಸ್ಟೇನ್ ಆಸ್ಪತ್ರೆಗೆ ಹೋಗಿ ಆತನ ಬ್ಯಾಂಕ್ ಅಕೌಂಟ್ ನಂಬರ್ ಮತ್ತು ಇತರ ಪುಟ್ಟ ವಿವರಗಳನ್ನು ಹಾಕಿದೆ. ಆಮೇಲೆ ನಡೆದಿದ್ದು ಅಚ್ಚರಿಯ ಸಂಗತಿ. ಹತ್ತಾರು ಮೇಲ್‍ಗಳು ಬಂದವು. ಮೊದಲಿಗೆ ಹೊಸಪೇಟೆಯ ಬ್ಲಾಗ್ ಗೆಳೆಯರಾದ ಸೀತಾರಾಂ ಸರ್ ಅವನ ಬ್ಯಾಂಕ್ ಖಾತೆಗೆ ಹಣ ತುಂಬಿದರು. ಕುವೈಟಿನಿಂದ ಗೆಳೆಯ ಡಾ.ಆಜಾದ್ ಹಣ ಸಹಾಯದ ಜೊತೆಗೆ ವಿಶ್ವನ ಬಗ್ಗೆ ಚಾಟಿನಲ್ಲಿ ವಿಚಾರಿಸಿಕೊಳ್ಳುತ್ತಿದ್ದರು. ಉಮೇಶ್ ದೇಸಾಯಿ, ಕೊಪ್ಪಳದ ಸಲೀಮ್, ಮೈಸೂರಿನಿಂದ ಜಿ.ಮಾದವ್, ಲೋಕೇಶ್ ಲಕ್ಷ್ಮಿದೇವಿ, ಬೆಂಗಳೂರಿನಿಂದ ಸುರೇಶ್, ಹೀಗೆ ಅನೇಕರು ಅವನ ಖಾತೆ ಹಣ ಹಾಕಿದರು. ಮತ್ತೆ ನೂರಾರು ನನ್ನ ಬ್ಲಾಗ್ ಗೆಳೆಯರು ಅವನ ಅರೋಗ್ಯವನ್ನು ನಿತ್ಯ ವಿಚಾರಿಸಿ ಮೇಲ್ ಮಾಡುತ್ತಿದ್ದರು. ಫೋನ್ ಮಾಡುತ್ತಿದ್ದರು. ಅವನು ಬೇಗ ಗುಣಮುಖನಾಗಲಿ ಅಂತ ಆರೈಸುತ್ತಿದ್ದರು. ಇವೆಲ್ಲದರ ಪ್ರತಿಫಲವೇ ಏನೋ ಸದ್ಯ ವಿಶ್ವ ಗುಣಮುಖನಾಗಿದ್ದಾನೆ. ಆವನ ಶಸ್ತ್ರಚಿಕಿತ್ಸೆ, ಆಸ್ಪತ್ರೆ ಖರ್ಚಿನ ನಾಲ್ಕನೇ ಒಂದು ಭಾಗವನ್ನು ನಮ್ಮ ಬ್ಲಾಗ್ ಗೆಳೆಯರ ಬಳಗ ತುಂಬಿದೆ. ಇನ್ನೂ ಕೆಲವೇ ದಿನಗಳಲ್ಲಿ ಮೊದಲಿನಂತೆ ಆಗುತ್ತಾನೆ ತನ್ನ ನಿತ್ಯ ಕೆಲಸದಲ್ಲಿ ತೊಡಗಿಕೊಳ್ಳುತ್ತಾನೆ. ಇಂಥ ಇಷ್ಟು ಒಳ್ಳೆಯ ಮನಸಿನ, ಕಾಳಜಿಯುತ, ಮನಃಪೂರ್ವಕವಾಗಿ ತನು,ಮನ, ಧನ ಸಹಾಯ ಹೊರಗಿನ ಯಾವ ಮಾದ್ಯಮದಲ್ಲಿದೆ ತೋರಿಸಿ ಸ್ವಾಮಿ!

ಇದೇ ವಿಚಾರವಾಗಿ ಮೊದಲಿಗೆ ಪತ್ರಿಕೆ ಮಾದ್ಯಮಗಳಿಗೆ ಸುದ್ಧಿ ಮುಟ್ಟಿಸಿದೆ. ನನಗೆ ಗೊತ್ತಿರುವ ಎಲ್ಲಾ ಪತ್ರಿಕಾ ಪ್ರತಿನಿಧಿಗಳು, ವರದಿಗಾರರು, ಡೆಸ್ಕ್ ಆಪರೇಟರುಗಳು, ಹೀಗೆ ಪ್ರತಿಯೊಬ್ಬರಿಗೂ ಮೆಸೇಜ್ ಮಾಡಿದೆ. ಮೇಲ್ ಮಾಡಿದೆ. ಯಾರೊಬ್ಬರಿಂದಲೂ ಸರಿಯಾದ ಪ್ರತಿಕ್ರಿಯೆಯಿಲ್ಲ, ಉತ್ಸಾಹವಿಲ್ಲ. ಮೊದಲಿಗೆ ಕಾಳಜಿಯಂತೂ ಇಲ್ಲವೇ ಇಲ್ಲ. ಏಕೆಂದರೆ ನಮ್ಮ ವಿಶ್ವನೇನು ದೊಡ್ಡ ಸೆಲಬ್ರಟಿಯೇ, ಸಿನಿಮಾನಟನೇ, ಪ್ರಖ್ಯಾತ ಕ್ರೀಡಾಪಟುವೆ, ಅಥವ ರಾಜ್ಯ, ರಾಷ್ಟ್ರಮಟ್ಟದ ರಾಜಕಾರಣಿಯೇ! ಯಾವುದ ಅಲ್ಲವಲ್ಲ. ಕರ್ನಾಟಕದ ಆರು ಕೋಟಿ ಜನಸಂಖ್ಯೆಯಲ್ಲಿ ಒಬ್ಬನಾದ ಬಡ ದಿನಪತ್ರಿಕೆ ವಿತರಕ. ಆತನಿಗೆ ಸಹಾಯ ನೀಡದಿದ್ದರೂ ತೊಂದರೆಯಿಲ್ಲ. ದಿನಪತ್ರಿಕೆ ವಿತರಿಸುವ "ವೆಂಡರ್" ಆಗಿರುವುದರಿಂದ ಪತ್ರಿಕಾ ಮಾದ್ಯಮವೆನ್ನುವ ಅವಿಭಕ್ತ ಕುಟುಂಬದ ಸದಸ್ಯನೇ ತಾನೇ!. ಅದಕ್ಕಾಗಿಯಾದರೂ ಕೊನೇ ಪಕ್ಷ ಒಂದು ಕಾಳಜಿಯುಕ್ತ, ಸಹಾನುಭೂತಿಯ ಸುದ್ಧಿಯನ್ನು ಸಣ್ಣಕಾಲಂನಲ್ಲಿ ನಮ್ಮ ಪ್ರಖ್ಯಾತ ಪತ್ರಿಕೆಗಳು ಹಾಕಬಹುದಿತ್ತು. ಕನ್ನಡಪ್ರಭ ಮತ್ತು ಇಂಗ್ಲೀಷಿನ ಡಿ.ಎನ್.ಎ ಪತ್ರಿಕೆಗಳು ಮಾತ್ರ ವಿಶ್ವನ ವಿಚಾರವಾಗಿ ಸಣ್ಣ ಕಾಲಂನಲ್ಲಿ ಪ್ರಕಟಿಸಿದ್ದು ಬಿಟ್ಟರೆ ಉಳಿದ ಬೆಂಗಳೂರಿನ ಪತ್ರಿಕೆಗಳ್ಯಾವುವು ಕೂಡ ವಿಶ್ವನ ಬಗ್ಗೆ ಕಾಳಜಿವಹಿಸಲಿಲ್ಲ. ನಿಮಗೆ ತಿಳಿದಿರಲಿ ಅಂತ ಒಂದು ವಿಚಾರವನ್ನು ತಿಳಿಸುತ್ತೇನೆ. ಈ ವಿಚಾರವನ್ನು ನಾನು ಇಂಗ್ಲೀಷಿನ ನಂಬರ್ ಒನ್ ಪತ್ರಿಕೆಯೆಂದು ಸ್ವಘೋಷಿತ ಪತ್ರಿಕೆಗೆ ಇಂಥ ವಿಚಾರವನ್ನು ಹಾಕಬೇಕಾದರೆ ನಾವೇ ಹಣಕೊಡಬೇಕಂತೆ! ಅವರದು ಪ್ರತಿ ಆಕ್ಷರಕ್ಕೂ ಹಣದ ಲೆಕ್ಕಚಾರವಿದೆಯಂತೆ! ಆ ಪತ್ರಿಕೆ ಸಂಪಾದಕೀಯ ವಿಭಾಗಕ್ಕೆ ಹೊರಗಿನವರಿಗೆ ಹೋಗಲು ಸಾಧ್ಯವೇ ಇಲ್ಲ. ಏಕೆಂದರೆ ಅದು ಒಂಥರ ಸಾಪ್ಟ್ ವೇರ್ ಕಂಪನಿಯ ರೀತಿಯ ಸೆಕ್ಯುರಿಟಿ ಇದೆ. ಇರಲಿಬಿಡಿ ಅಷ್ಟು ದೊಡ್ಡ ಕಛೇರಿಗೆ ಬೇಕು ಒಪ್ಪಿಕೊಳ್ಳುತ್ತೇನೆ. ಆದ್ರೆ ನಾವು ಯಾವುದೇ ಸುದ್ಧಿಯ ಕವರನ್ನು ಅಲ್ಲಿ ಹೊರಗೆ ಕುಳಿತಿರುವ ಸೆಕ್ಯುರಿಟಿ ಗಾರ್ಡ್ ಕೈಗೆ ಕೊಟ್ಟುಬರಬೇಕು. ಅವನೇ ಸಂಪಾದಕನಂತೆ ನಮ್ಮ ಬಳಿ ಎಲ್ಲಾ ವಿಚಾರಿಸುತ್ತಾನೆ. ಕೊನೆಗೆ ತಲುಪಿಸುತ್ತೇನೆ ಎಂದು ಹೇಳುತ್ತಾನೆ. ಕಳೆದ ನಾಲ್ಕು ವರ್ಷಗಳಿಂದ ನಾನು ತಲುಪಿಸಿದ ಯಾವ ಸುದ್ಧಿಯೂ ಆ ಪತ್ರಿಕೆಯಲ್ಲಿ ಬರಲಿಲ್ಲ ಏಕೆಂದರೆ ನಾನು ಸುದ್ಧಿಯನ್ನು ಹಾಕಲು ಹಣಕೊಡಲಿಲ್ಲ. ಸದ್ಯದ ಪರಿಸ್ಥಿತಿಯಲ್ಲಿ ನಮ್ಮ ವಿಶ್ವ ಅದೇ ದಿನಪತ್ರಿಕೆಯನ್ನು ನೂರಕ್ಕೂ ಹೆಚ್ಚು ಮನೆಗಳಿಗೆ ಮುಟ್ಟಿಸುತ್ತಾನೆ. ಇನ್ನುಳಿದ ದಿನಪತ್ರಿಕೆಗಳ ಕಚೇರಿಗಳಲ್ಲಿ ಒಳಗೆ ಹೋಗಿ ವಿಚಾರವಿನಿಮಯ, ಸುದ್ಧಿಗಳನ್ನು ನೇರವಾಗಿ ಮುಟ್ಟಿಸುವ ಅವಕಾಶವಿದೆಯಾದರೂ ಇಂಥ ಸುದ್ಧಿಗಳು ಬರುವುದಿಲ್ಲ. ಏಕೆಂದರೆ ಅಲ್ಲಿರುವ ವರದಿಗಾರರನ್ನು, ಡೆಸ್ಕ್ ಆಪರೇಟರುಗಳನ್ನು, ಉಪಸಂಪಾದಕರನ್ನು ಮರ್ಜಿ ಮಾಡಬೇಕು. ಇದು ಸುದ್ಧಿ ವಿಚಾರಕ್ಕೆ ಮಾತ್ರ ನಿಲ್ಲುವುದಿಲ್ಲ. ನೀವು ಪ್ರತಿಭಾವಂತರಾಗಿ ಒಳ್ಳೆಯ ಲೇಖನ, ಫೋಟೊ ಚಿತ್ರ ಇತ್ಯಾದಿಗಳನ್ನು ಇಷ್ಟಪಟ್ಟು ಕಷ್ಟಪಟ್ಟು ಮಾಡಿದ್ದರೆ ಅದನ್ನು ಪತ್ರಿಕೆಯಲ್ಲಿ ಪ್ರಕಟವಾಗಬೇಕಾದರೆ ಅದು ಸುಲಭವಲ್ಲ. ಏಕೆಂದರೆ ಅಲ್ಲಿ ನಿಮಗೆ ಪರಿಚಯವಿರಬೇಕು. ನಿಮ್ಮಿಂದ ಅವರಿಗೆ ಉಪಯೋಗವಾಗಬೇಕು. ನೀವೆಷ್ಟೇ ಪ್ರತಿಭಾವಂತರಾದರೂ ಸುಮ್ಮಸುಮ್ಮನೇ ಪತ್ರಿಕೆಯಲ್ಲಿ ನಿಮ್ಮ ಲೇಖನ, ಫೋಟೋಗಳನ್ನು ಪ್ರಕಟಿಸಲು ಅವರೇನು ದಡ್ಡರೇ! ಹಾಗೂ ಹೀಗೂ ನಿಮ್ಮ ಲೇಖನ, ಫೋಟೊಗಳನ್ನು ಅನೇಕ ಬಾರಿ ಹಾಕುತ್ತಾರೆ ಅಂದುಕೊಂಡರೂ ನೀವು ಜನಪ್ರಿಯರಾಗಿಬಿಟ್ಟರೇ ಅವರನ್ನು ಮೀರಿಸಿ ಜನಪ್ರಿಯರಾಗಿಬಿಟ್ಟರೆ ಮುಂದೆ ನಿಮ್ಮ ಯಾವ ಲೇಖನಗಳು, ಚಿತ್ರಗಳು, ವ್ಯಂಗ್ಯಚಿತ್ರಗಳು ಪ್ರಕಟವಾಗುವುದಿಲ್ಲ. ಆದರೂ ನೀವು ಹೋದರೆ ಚೆನ್ನಾಗಿ ಮಾತಾಡಿಸುತ್ತಾರೆ. ಹೊಸ ಲೇಖನವನ್ನು ಕೊಟ್ಟರೆ ನಮ್ಮ ಕಚೇರಿಯವರೇ, ವರದಿಗಾರರೇ ಮಾಡುತ್ತಾರಲ್ಲ ಅಂತ ನಿಮ್ಮನ್ನು ನಿರಾಸೆಗೊಳಿಸುತ್ತಾರೆ. ಅದು ಯಾವ ಮಟ್ಟದ ಪರಿಣಾಮ ಬೀರುತ್ತದೆಂದರೆ ನೀವು ಬರೆಯುವುದನ್ನೇ ನಿಲ್ಲಿಸುತ್ತೀರಿ. ನನ್ನ ಅನೇಕ ಪ್ರತಿಭಾವಂತ ಗೆಳೆಯರು ಸದ್ಯ ಇದೇ ಕಾರಣದಿಂದಾಗಿ ಬರೆಯುವುದನ್ನು ನಿಲ್ಲಿಸಿದ್ದಾರೆ.

ನೀವೇ ಪತ್ರಿಕೆಯಲ್ಲಿ ಓದಿರುವಂತೆ ಎಷ್ಟು ಜನ ದಿನಪತ್ರಿಕೆ ಹಂಚುವ ಹುಡುಗರು, ವೆಂಡರುಗಳು ಅಪಘಾತದಲ್ಲಿ ಸತ್ಯ ಸುದ್ಧಿ ಬಂದಿದೆ ಹೇಳಿ. ಅದೇ ಯಡಿಯೂರಪ್ಪನವರು ಸೈಕಲ್ಲಿನಿಂದ ಬೀಳುವ ದೃಶ್ಯ ರಾಷ್ಟ್ರವ್ಯಾಪಿ ಸುದ್ಧಿಯಾಗುತ್ತದೆ. ಇಷ್ಟೆಲ್ಲಾ ಹೇಳಿದ ಮೇಲೆ ನಮ್ಮ ವಿಶ್ವನಂಥವರಿಗೆ ಪತ್ರಿಕಾ ಮಾದ್ಯಮದಿಂದ ಸಹಾಯ ಸಾಧ್ಯವೇ? ಇನ್ನೂ ಟಿ.ವಿ ಮಾಧ್ಯಮವೂ ಇದಕ್ಕಿಂತ ಬೇರೆಯಲ್ಲ. ಅವರಿಗೆ ಟಿ ಆರ್ ಪಿ ಹೆಚ್ಚುತ್ತಿರಬೇಕು. ನಮ್ಮ ವಿಶ್ವನಿಗೆ ಚಾನಲ್ಲುಗಳ ಟಿ ಅರ್ ಪಿ ಹೆಚ್ಚಿಸಲು ಸಾಧ್ಯವೇ?

ನಿಮಗೆ ತಿಳಿದಿರಲಿ ಅಂತ ಮತ್ತೊಂದು ವಿಚಾರವನ್ನು ತಿಳಿಸುತ್ತೇನೆ. ನನ್ನಂಥ ವಿಶ್ವನಂಥ ಸಾವಿರಾರು "ವೆಂಡರುಗಳು" ನಿತ್ಯ ಬೆಳಗಿನ ದಿನಪತ್ರಿಕೆ ವಿತರಣೆ ಕೆಲಸದಲ್ಲಿ ತೊಡಗಿ ನಮ್ಮದೇ ಟೆನ್ಷನ್‍ನಲ್ಲಿರುವಾಗ ಆ ಕ್ಷಣ ಹಾಜರಾಗುತ್ತಾರೆ ಇದೇ ಪತ್ರಿಕೆಗಳ ಸರ್ಕುಲೇಷನ್ ವಿಭಾಗದ ಪ್ರತಿನಿಧಿಗಳು. ನಮ್ಮನ್ನೂ ಯಾವ ರೀತಿ ಓಲೈಸುತ್ತಾರೆಂದರೆ ಬೇರೆಲ್ಲಾ ಪತ್ರಿಕೆಗಳನ್ನು ನಿಲ್ಲಿಸಿ ಅವರ ಪತ್ರಿಕೆಯನ್ನೇ ಗ್ರಾಹಕರಿಗೆ ಮುಟ್ಟಿಸಬೇಕಂತೆ. ಅದಕ್ಕೆ ಏನೆಲ್ಲಾ ತಂತ್ರ ಪ್ರತಿತಂತ್ರ. ಒಟ್ಟಾರೆ ಮುಂಜಾನೆ ಲೋಕದಲ್ಲಿ ಒಬ್ಬರ ಕಾಲೆಳೆದು ಬೀಳಿಸಿ ಇವರು ಎದ್ದು ನಿಲ್ಲಲೂ ಇವರು ಮಾಡದಿದ್ದ ಕುತಂತ್ರವೇ ಇಲ್ಲ. ಆದ್ರೆ ನಮ್ಮಲ್ಲಿ ಯಾರಿಗೆ ಅಪಘಾತವಾಗಲಿ, ತೊಂದರೆಯಾಗಲಿ, ವಿಚಾರ ತಿಳಿದ ತಕ್ಷಣ "ಅರೆರೆ...ಅಯ್ಯೋ ಪಾಪ ತುಂಬಾ ಒಳ್ಳೆ ಹುಡುಗ ಕಣ್ರೀ..ಹೀಗಾಗಬಾರದಿತ್ತು" ಅಂತ ಸಹಾನುಭೂತಿ ವ್ಯಕ್ತಪಡಿಸಿ ಸುಮ್ಮನಾಗಿಬಿಡುತ್ತಾರೆ. ಮರುದಿನ ಆತ ಏನಾದನೆಂದು ಯಾರಿಗೂ ತಿಳಿದುಕೊಳ್ಳುವ ಕಾಳಜಿಯಿಲ್ಲ. ಇದೇ ಪ್ರತಿನಿಧಿಗಳಿಗೆ ವಿಶ್ವನ ವಿಚಾರವನ್ನು ಮೊದಲು ಮುಟ್ಟಿಸಿದ್ದು. ಒಬ್ಬೊಬ್ಬರದು ಒಂದೊಂದು ರೀತಿ. ಒಬ್ಬ ವಿಶ್ವನಿಂದ ಒಂದು ಲೆಟರ್ ತರಲು ಸಾಧ್ಯವೇ ಅಂತ ಕೇಳಿದರೆ, ಮತ್ತೊಬ್ಬ ತಕ್ಷಣವೇ ಹೋಗಿ ಸಹಾಯ ಮಾಡುವಂತೆ ಮಾತಾಡುತ್ತಾನೆ. ಆದ್ರೆ ಪಲಿತಾಂಶ ಮಾತ್ರ ಸೊನ್ನೆ.

ಈ ಲೇಖನದಲ್ಲಿ ನನ್ನ ವೈಯಕ್ತಿಕ ಅನುಭವಗಳನ್ನು ಅನಿಸಿಕೆಗಳನ್ನು ಹೇಳಿದ್ದೇನೆ. ಮತ್ತೆ ಎಲ್ಲಾ ದಿನಪತ್ರಿಕೆಗಳು ಕೆಟ್ಟವಲ್ಲ. ಅಲ್ಲಿಯೂ ಒಳ್ಳೆಯ ಮನಸ್ಸಿನ ವರದಿಗಾರರಿದ್ದಾರೆ. ಎಲ್ಲರ ಬಗೆಗೂ ಕಾಳಜಿಯುಳ್ಳ ಸಂಪಾದಕರು ಇದ್ದಾರೆ. ಸಮಾಜದ ಸ್ವಾಸ್ಥ ಸುಧಾರಿಸಲು ಸಹಕರಿಸುತ್ತಿದ್ದಾರೆ.

ಈಗ ಹೇಳಿ ಯಾವ ಮಾದ್ಯಮದಲ್ಲಿ ಆತ್ಮೀಯವಾದ ಒಳ್ಳೆಯ ಹೃದಯವಂತಿಕೆಯ ಮನಸ್ಸಿದೆ? ನಮ್ಮ ಬ್ಲಾಗ್ ಲೋಕವಲ್ಲವೇ....ವಿಶ್ವನ ವಿಚಾರವಾಗಿ ತನು, ಮನ ಧನವನ್ನು ಹೃದಯಪೂರ್ವಕವಾಗಿ ಸಹಾಯ ಮಾಡಿದ ನಮ್ಮ ಪರಿಶುದ್ಧ ಬ್ಲಾಗ್ ಲೋಕಕ್ಕೆ ಬ್ಲಾಗ್ ಗೆಳೆಯರಿಗೆ ವಿಶ್ವನ ಪರವಾಗಿ ನಮ್ಮ ದಿನಪತ್ರಿಕೆ ವಿತರಕರ ಪರವಾಗಿ, ಬೀಟ್ ಹುಡುಗರ ಪರವಾಗಿ ಹೃತ್ಪೂರ್ವಕವಾದ ಧನ್ಯವಾದಗಳನ್ನು ಮತ್ತೊಮ್ಮೆ ತಿಳಿಸುತ್ತೇನೆ.

ವಿಶ್ವನಿಗೆ ಅವನ ಬ್ಯಾಂಕ್ ಅಕೌಂಟಿಗೆ ಬಂದ ಹಣವನ್ನು ನಾನು ಖುದ್ದಾಗಿ ತಂದು ಹಾಕಿದ್ದೇನೆಂದು ಕಲೆಕ್ಟ್ ಮಾಡಿದ್ದೇನೆಂದು ಆತ ತಿಳಿದುಕೊಂಡಿದ್ದ. ಅವನಿಗೆ ಈ ಬ್ಲಾಗ್ ಲೋಕದ ಬಗ್ಗೆ ವಿವರಿಸಿ, ಹಣವೆಲ್ಲಾ ಅವನ ಅಕೌಂಟಿಗೆ ಹೇಗೆ ಬಂತು ಅಂತ ಅವನಿಗೆ ವಿವರಿಸಿದೆ. ಅವನಿಗೆ ಆಶ್ಚರ್ಯವಾಗಿ ಇದೆಲ್ಲವೂ ನಿಜವಾ? ಅಂತ ಕೇಳಿದ. ನಾನು ನಿಜವೆಂದೆ. ಹಾಗೆ ನೋಡಿದರೆ ನನಗೆ ಇದೆಲ್ಲಾ ಆಗಿರುವುದು ನಿಜವಾ? ಅಂತ ಅನೇಕ ಬಾರಿ ಅನ್ನಿಸಿದ್ದು ಉಂಟು.

ವಿಶ್ವನಿಗೆ ಹಣ ಯಾವ ಯಾವ ಬ್ಯಾಂಕ್ ನಂಬರುಗಳ ಮೂಲಕ ಬಂದಿದೆ ಎನ್ನುವುದನ್ನು ಕೆಳಗೆ ಬರೆದಿದ್ದೇನೆ. ಇದನ್ನು ಇಲ್ಲಿ ಅಂಕಿಅಂಶ ಸಮೇತ ಕೊಡುವ ಉದ್ದೇಶ ಬೇರೇನು ಅಲ್ಲ. ಒಳ್ಳೆಯ ಮನಸ್ಸಿನಿಂದ ನೀವು ಕಳಿಸಿರುವ ಹಣ ವಿಶ್ವನ ಬ್ಯಾಂಕ್ ಖಾತೆ ಸರಿಯಾಗಿ ಜಮೆಯಾಗಿದೆಯೆನ್ನುವದನ್ನು ತಿಳಿಸಲಿಕ್ಕಾಗಿ ಅದರ ವಿವರಣೆಯನ್ನು ಕೊಡುತ್ತಿದ್ದೇನೆ..
೧] NEFT customer payment inwa ref:SBINH10056032305:---Rs.150
2] By ABB DEP-HOSPET.Dep.slip NO. 0000000/ABB S-------Rs.2480-00
3] By ABB Dep-Bangalore-J.Umesh Desai----------------------Rs.500-00
4] By ABB Dep-Ranibennur By Cash Nanda--------------------RS.101-00
5]By Shivu.k Cheque.7820---೦೧-೦೩-೨೦೧೦--------------------Rs. 3000-00
6]By ABB cheque Dep at 022 Thrru Inst.0088875-26-2-2010.Rs. 1001-00
7]By NEFT Customer payment inwa.
Ref:CITIN10006705947 Date:3-3-2010---------------- Rs. 300-00
8] By ABB Dep-Bangalore-S Cash by suresh-------------------Rs.1480-00
9]By Cash-----------------------------------------------------Rs-500-00
10]By NEFI Customer payment Inwa
Ref: AMBR4060310X4K1---Date:8-3-2010--------------- Rs.5000-00
11] By ABB Dep-Mysore-K B Lokesh
Dep.slip no.0000000/ABB S------------------------------ Rs. 480-00
12]By Inst.no: 468672 on SYNDICATE BANK-
Lakshmi Devi--------------------------------------------- Rs. 100-00
13] By Inst.no.:311894 on Vijaya Bank-------------------------Rs.1000-00
14] Cheque by Navin Indian------Date:5-4-2010--------------Rs.5000-00

ಇಲ್ಲಿರುವ ವಿವರಣೆಗಳೆಲ್ಲಾ ವಿಶ್ವನ ಬ್ಯಾಂಕ್ ಪಾಸ್‍ಬುಕ್‍ನಲ್ಲಿರುವಂತದ್ದು. ಅದನ್ನು ಹಾಗೇ ಇಲ್ಲಿ ಬರೆದಿದ್ದೇನೆ. ಆತನ ಆಸ್ಪತ್ರೆಯ ಖರ್ಚು ವೆಚ್ಚದ ನಾಲ್ಕನೇ ಒಂದು ಭಾಗದ ಹಣವನ್ನು ತುಂಬಿರುವ ನಮ್ಮ ಬ್ಲಾಗ್ ಲೋಕಕ್ಕೆ ಸಾವಿರ ಪ್ರಣಾಮಗಳು ಅಂತ ವಿಶ್ವನಾಥ ಧನ್ಯವಾದಗಳನ್ನು ಹೇಳಿದ್ದಾನೆ.

ಅಪಘಾತಕ್ಕೊಳಗಾಗಿ ಚೇತರಿಸಿಕೊಂಡಿರುವ ವಿಶ್ವ. ಈ ಫೋಟೋ ಎರಡು ದಿನಗಳ ಹಿಂದೆ ಕ್ಲಿಕ್ಕಿಸಿದ್ದು. ಈಗ ಎಂದಿನಂತೆ ಮತ್ತೆ ದಿನಪತ್ರಿಕೆ ವಿತರಣೆ ಕೆಲಸಕ್ಕೆ ಹೋಗುತ್ತಿದ್ದಾನೆ.

----------------------------------------
----------------------------------------

ಕೊನೆಯದಾಗಿ ಮತ್ತೊಂದು ವಿಚಾರವೇನೆಂದರೆ ನನ್ನ ಛಾಯಾಕನ್ನಡಿಯಲ್ಲಿ ಇದು ನೂರನೇ ಲೇಖನ. "ಛಾಯಾಕನ್ನಡಿ"ಯಲ್ಲಿ ನನ್ನ ನೂರನೇ ಲೇಖನ ಬರುತ್ತಿದೆಯೆಂದರೆ ಅದಕ್ಕೆ ನೀವು ನೀಡುತ್ತಿರುವ ತುಂಬು ಹೃದಯದ ಪ್ರೋತ್ಸಾಹ. ನೀವು ಛಾಯಾಕನ್ನಡಿಗೆ ಬಂದು ನೋಡಿ, ಓದಿಖುಷಿಪಟ್ಟು ಈ ಮಟ್ಟದ ಪ್ರೋತ್ಸಾಹ ನೀಡುತ್ತಿದ್ದೀರಿ. ಆಗಾಗ ನಡೆಯುವ ತಪ್ಪುಗಳನ್ನು ತಿದ್ದುತ್ತಿದ್ದೀರಿ. ಅದಕ್ಕಾಗಿ ನನ್ನ ಬ್ಲಾಗ್ ಗೆಳೆಯರಿಗೆಲ್ಲಾ ಹೃತ್ಪೂರ್ವಕ ನಮನಗಳು. ನಿಮ್ಮ ಪ್ರೋತ್ಸಾಹ ಹೀಗೆ ಇರಲಿ...

ಶಿವು.ಕೆ