Showing posts with label ರೈಲು ಸಂಭಾಷಣೆ. Show all posts
Showing posts with label ರೈಲು ಸಂಭಾಷಣೆ. Show all posts

Sunday, April 18, 2010

ದೇವರಿಗೆ ಇರಿಸುಮುರಿಸಾಗಬಹುದು, ಬೇಡ ಸುಮ್ಮನಿರ್ರೀ.....

ಯಶವಂತಪುರ-ಮಂಗಳೂರು ರೈಲು ಹತ್ತಿ ನಮ್ಮ ಸೀಟು ಹುಡುಕುವಷ್ಟರಲ್ಲಿ ಸರಿಯಾಗಿ ಬೆಳಗ್ಗಿನ ೭.೩೦ಕ್ಕೆ ಹೊರಟೇಬಿಟ್ಟಿತ್ತು. ನನ್ನ ಸೀಟ್ ನಂಬರ್ ೧೯ ಆದರೆ ನನ್ನಾಕೆಯದು ಅದೇ ಬೋಗಿಯಲ್ಲಿ ೯೨ನೇ ನಂಬರಿನದು. ಇಡೀ ಬೋಗಿಯಲ್ಲಿ ಹೊರಟಿದ್ದವರೆಲ್ಲಾ ಕುಕ್ಕೆ ಸುಬ್ರಮಣ್ಯ ದೇವಾಸ್ಥಾನಕ್ಕೆ ಹೊರಟಿದ್ದರು. ಎಲ್ಲಾ ತರಹದ ಜನರಿದ್ದರೂ ಅರವತ್ತು ದಾಟಿದವರು ಹೆಚ್ಚಿನ ಸಂಖ್ಯೆಯಲ್ಲಿದ್ದರು. ನನ್ನ ಸೀಟು ಸೇರಿದಂತೆ ಮೂರು ಸೀಟಿನಲ್ಲಿ ೬೦ ಪ್ಲಸ್ ಮೂವರು ಹಿರಿಯರು ಅರಾಮವಾಗಿ ಕುಳಿತುಬಿಟ್ಟಿದ್ದಾರೆ.

"ಸರ್ ೧೯ ನನ್ನ ಸೀಟು" ಅಂತ ಟಿಕೆಟ್ಟು ತೋರಿಸಿದೆ.
ಅವರ ಮಾತುಕತೆಗೆ ಭಂಗವಾಯಿತೇನೋ, ನನ್ನನ್ನೊಮ್ಮೆ ನೋಡಿ
"ನೀವು ಫ್ಯಾಮಿಲಿ ಜೊತೆ ಬಂದಿದ್ದೀರಾ" ಅಂತ ಒಬ್ಬರು ಕೇಳಿದರು. ನಾನು "ಹೌದು" ಅಂದೆ.
"ನೋಡಪ್ಪ ಬೇಸರ ಮಾಡಿಕೊಳ್ಳಬೇಡ...ನಾವು ಮೂವರು ಬ್ಯಾಚುಲರ್ಸು, ಅರಾಮವಾಗಿ ಎಂಜಾಯ್ ಮಾಡಲು ಬಂದಿದ್ದೇವೆ.ನಮ್ಮ ಸೀಟು ಅಲ್ಲಿದೆ,ನೀವು ಸಂಸಾರಿಕರು,ಹೊಂದಾಣಿಕೆಮಾಡಿಕೊಳ್ಳುವ ಮನಸ್ಥಿತಿಯಿದೆಯೆಂದುಕೊಳ್ಳುತ್ತೇನೆ..ಸಹಕರಿಸುತ್ತೀರಾ? ಅಂದರು.

ಅರವತ್ತು ದಾಟಿದರು ಬ್ಯಾಚುಲರ್ಸು ಅಂತ ಹೇಳಿದ ಮಾತು ಕೇಳಿ ಸುತ್ತಲಿದ್ದವರೆಲ್ಲಾ ಗೊಳ್ಳೆಂದು ನಕ್ಕರು. ನನಗೂ ನಗು ತಡೆಯಲಾಗಲಿಲ್ಲ. ಕೊನೆಗೆ ಅವರ ಸೀಟು ೮೮ರಲ್ಲಿ ಹೋಗಿ ಕುಳಿತುಕೊಂಡೆ. ಅದರ ಹಿಂದೆಯೇ ನನ್ನಾಕೆ ಸೀಟು ಇತ್ತು. ನಮ್ಮ ಸಂಸಾರವನ್ನು ಕೊನೇ ಪಕ್ಷ ಅಷ್ಟು ಹತ್ತಿರವಾದರೂ ಮಾಡಿದ ಆ ಬ್ಯಾಚುರರ್ಸುಗಳಿಗೆ ಮನಸ್ಸಿನಲ್ಲಿಯೇ ಥ್ಯಾಂಕ್ಸ್ ಹೇಳುತ್ತಾ ಕುಳಿತುಕೊಂಡೆ.


ಸಿನಿಮಾ ಹಾಲಿನಲ್ಲಿ ಸೀಟು ಬದಲಾವಣೆ ಮಾಡಿ ಹೊಂದಾಣಿಕೆ ಮಾಡಿಕೊಳ್ಳುವಂತೆ ಇಲ್ಲಿಯೂ ಹಾಗೇ ಅನೇಕರು ಸೀಟು ಬದಲಾಯಿಸಿಕೊಂಡು ಕುಳಿತುಕೊಳ್ಳುವ ಹೊತ್ತಿಗೆ ನಮ್ಮ ರೈಲು ಸೋಲದೇವನಹಳ್ಳಿ ದಾಟಿತ್ತು. ಈ ರೈಲಿನಲ್ಲಿ ಬೋಗಿಗಳೆಲ್ಲಾ ನಡುವೆ ಬಾಗಿಲ ಮುಖಾಂತರ ಕನೆಕ್ಟ್ ಆಗಿದ್ದರಿಂದ ಒಮ್ಮೇ ಎಲ್ಲಾ ಬೋಗಿಗಳನ್ನು ನೋಡಿಬರೋಣವೆಂದು ಹೊರಟೆ. ಮೂರನೇ ಬೋಗಿಗೆ ಹೋಗುವಷ್ಟರಲ್ಲಿ ಅಲ್ಲಲ್ಲಿ ಒಬ್ಬೊಬ್ಬರು ಪ್ರಾಯಾಣಿಕರು. ನಂತರದ ಬೋಗಿಗಳಲ್ಲಿ ಒಬ್ಬರೋ ಇಬ್ಬರೋ ಕುಳಿತಿದ್ದರು. ಇವೆಲ್ಲಾ ಕಾದಿರಿಸಿದ ಬೋಗಿಗಳಾದಾರೂ ಪ್ರಯಾಣಿಕರೇ ಇರಲ್ಲಿಲ್ಲ. ನಾವ್ಯಾಕೆ ಸುಮ್ಮನೆ ಮೊದಲನೇ ಬೋಗಿಯಲ್ಲಿ ಸೀಟಿಗಾಗಿ ರಾಜಕೀಯದವರಂತೆ ಹೊಂದಣಿಕೆ ಮಾಡಿಕೊಳ್ಳಲು ತಲೆಬಿಸಿಮಾಡಿಕೊಂಡವಲ್ಲ ಅನ್ನಿಸಿತು. ನಾನು ವಾಪಸು ಬಂದು ಈ ವಿಚಾರವನ್ನು ನನ್ನ ಶ್ರೀಮತಿಗೆ ಹೇಳಿದೆ. ಇಬ್ಬರು ಮುಂದೆ ಖಾಲಿಇರುವ ಬೋಗಿಗಳಲ್ಲಿ ಅರ್‍ಆಮವಾಗಿ ಕುಳಿತೆವು.

ನನ್ನ ಕ್ಯಾಮೆರಾ ನೋಡಿ ದೂರದಿಂದಲೇ ರೈಲ್ವೇ ನೌಕರರು ಫೋಸು ಕೊಟ್ಟಿದ್ದು ಹೀಗೆ!

ಆ ಹುಡುಗ ಕೈತುಂಬ, ಬ್ಯಾಗ್ ತುಂಬಾ ಪುಸ್ತಕಗಳನ್ನು ಹಿಡಿದು ಪ್ರತಿಸೀಟಿನಲ್ಲೂ ಅಷ್ಟಷ್ಟೂ ಪುಸ್ತಕಗಳನ್ನು ಇಟ್ಟು ಹೋಗುತ್ತಿದ್ದ. ನಮ್ಮ ಬಳಿ ಇಟ್ಟಿದ್ದ ಪುಸ್ತಕಗಳನ್ನು ಒಮ್ಮೆ ನೋಡಿದೆ. ಪಂಚತಂತ್ರ, ಈಸೋಪನಕತೆಗಳು, ಜೋಕ್ಸ್, ಆರೋಗ್ಯ ದೇವರನಾಮ, ಮಂತ್ರಗಳು ಮಕ್ಕಳ ಚಿತ್ರಕಲೆ ಹೀಗೆ ಎಲ್ಲಾ ವಿಧದ ಪುಸ್ತಕಗಳು ಇದ್ದವು ಇಂಥ ಪುಸ್ತಕಗಳನ್ನು ಓದಿ ತುಂಬಾ ದಿನವಾದ್ದರಿಂದ ಐದಾರು ಪುಸ್ತಕಗಳನ್ನು ಕೊಂಡುಕೊಂಡೆ. ನಾನು ಓದಿದ ನಂತರ ನಮ್ಮ ಓಣಿಯ ಪುಟ್ಟಮಕ್ಕಳಿಗೆ ಕೊಟ್ಟರೆ ಅವರಿಗೂ ನಮ್ಮ ಹಳ್ಳಿಕತೆಗಳು, ಜಾನಪದ ಸೊಗಡಿನ ಕತೆಗಳ ಪರಿಚಯವಾಗುತ್ತದೆ. ಈ ಮಟ್ಟಿಗಾದರೂ ನಮ್ಮ ಟಿ.ವಿ ನೋಡುವ ಚಟದಿಂದ ಸ್ವಲ್ಪಮಟ್ಟಿಗಾದರೂ ಹೊರಬರುತ್ತಾರೆನ್ನುವುದು ನನ್ನ ಪುಟ್ಟ ಆಸೆ. ಅವನಿಗೆ ಇಲ್ಲಿಂದ ಹೊರಡುವ ಪ್ರತಿಯೊಂದು ರೈಲಿನ ಸಮಯಯೂ ಗೊತ್ತಿರುವುದರಿಂದ ಎಲ್ಲಾ ರೈಲಿನ ಪ್ರಯಾಣಿಕರಿಗೂ ಬೆಳಿಗ್ಗೆಯಿಂದ ಸಂಜೆಯವರೆಗೆ ಪುಸ್ತಕವನ್ನು ಮಾರುತ್ತೇನೆ ಅಂದ.


"ಅದಾಯ ಪರ್ವಾಗಿಲ್ಲವಾ?" ನಾನು ಕೇಳಿದೆ.

"ಪರ್ವಾಗಿಲ್ಲ ಸರ್ ಆದ್ರೆ, ರೈಲ್ವೇ ಪೋಲಿಸ್, ಟೆಕೆಟ್ ಕಲೆಕ್ಟರುಗಳು ಬಂದು ನಮ್ಮ ಮೇಲೆ ಕೇಸು ಹಾಕುತ್ತಾರೆ. ನಾವು ವರ್ಷ ಪೂರ್ತಿ ದುಡಿದ ಹಣದಲ್ಲಿ ಅರ್ಧಕ್ಕಿಂತ ಹೆಚ್ಚು ಹಣ ಕೋರ್ಟಿನಲ್ಲಿ ದಂಡಕಟ್ಟಲಿಕ್ಕೆ ಹೋಗಿಬಿಡುತ್ತದೆ" ಅಂದ.

"ನೀನ್ಯಾಕೆ ಇದನ್ನು ಟೆಂಡರ್ ಪಡೆದು ಅಧಿಕೃತವಾಗಿಯೇ ಮಾರಾಟಮಾಡಬಾರದು?" ನಾನು ಕೇಳಿದೆ.

"ಅದೆಲ್ಲಾ ನಮ್ಮ ಕೈಲಿ ಆಗುತ್ತಾ ಸರ್, ಲಕ್ಷಾಂತರ ರೂಪಾಯಿ ಟೆಂಡರಿಗೆ ಕಟ್ಟಬೇಕು, ಅದು ನಮ್ಮಂತ ಬಡವರಿಗೆ ಸಾದ್ಯವಾ ಹೇಳಿ?" ಅಂತ ನನಗೆ ಮರುಪ್ರಶ್ನೆ ಹಾಕಿದಾಗ ನನ್ನಲ್ಲಿ ಉತ್ತರವಿರಲಿಲ್ಲ.


"ನೀನು ಏನು ಓದಿದ್ದೀಯಾ?" ಪ್ರಶ್ನೆಯನ್ನು ಬದಲಿಸಿದೆ.


"ಎಸ್.ಎಸ್.ಎಲ್.ಸಿವರೆಗೆ" ಅಂದ. ಆದನ್ನು ಹೇಳುವಾಗ ಅವನಿಗೆ ಅಳುಕಿರಲಿಲ್ಲ.

"ಮುಂದೆ ಏಕೆ ಓದಲಿಲ್ಲ"

"ಓದಬೇಕು ಅಂದುಕೊಂಡರೂ ನಮ್ಮ ಮನೆ ಪರಿಸ್ಥಿತಿ ಅದಕ್ಕೆ ಸಹಕರಿಸಲಿಲ್ಲ ಸರ್, ಅದಕ್ಕೆ ಈ ಉದ್ಯೋಗವನ್ನು ಆರಿಸಿಕೊಂಡೆ"

"ಹೋಗಲಿ ಈ ವ್ಯಾಪಾರ ಮಾಡುವುದರಲ್ಲಿ ನಿನಗೆ ಖುಷಿ ಸಿಗುತ್ತದೆಯೇ,"

"ಖಂಡಿತ ಸರ್, ಚಲಿಸುವ ರೈಲಿನಲ್ಲಿ ಚಲಿಸುವ ಸಾವಿರಾರು ಪ್ರಯಾಣರನ್ನು ಬೇಟಿಯಾಗುವ ಅನುಭವ, ಮಾತು ಚರ್ಚೆ, ಇವೆಲ್ಲಾ ನಿಜಕ್ಕೂ ಖುಷಿಕೊಡುತ್ತವೆ. ಸರ್ ಒಂದು ವಿಚಾರ ಗೊತ್ತಾ ನಿಮಗೆ, ನಿಮ್ಮೆಲ್ಲರ ಬದುಕು ನಿಂತಲ್ಲೇ ಚಲಿಸಿದರೆ, ನಮ್ಮದು ಮಾತ್ರ ಚಲಿಸುತ್ತಲೇ ಬದಕನ್ನು ಕಟ್ಟಿಕೊಳ್ಳುವ, ಕಟ್ಟಿಕೊಳ್ಳುತ್ತಲೇ ಚಲಿಸುವ ಬದುಕು. ಇಂಥವುಗಳನ್ನು ಪುಸ್ತಕಗಳು ಕಲಿಸಿಕೊಡುವುದಿಲ್ಲವೆಂದು ನನ್ನ ಭಾವನೆ ಸರ್"


"ಹತ್ತನೇ ತರಗತಿಯವರೆಗೆ ಓದಿದ ಮಾತ್ರಕ್ಕೆ ಚೆನ್ನಾಗಿ ಓದಿದವರಂತೆ, ಸಂಸ್ಕಾರವಂತರಂತೆ ನಿನ್ನ ಭಾಷೆ ಚೆನ್ನಾಗಿದೆಯಲ್ಲಾ? ಕೇಳಿದೆ.

ನನ್ನ ಮಾತಿಗೆ ಅವನು ಸುಮ್ಮನೇ ನಕ್ಕ. ನಮ್ಮ ಮಾತುಕತೆ ನಡುವೆಯೇ ತುಮಕೂರು ಬಂದೇ ಬಿಟ್ಟಿತ್ತು.

"ಸರ್, ಮತ್ತೊಂದು ರೈಲಿಗೆ ಹೋಗಬೇಕು. ವಾಪಸ್ ಬರುವಾಗ ಮತ್ತೆ ಸಿಗುತ್ತೇನೆ" ಅಂದವನೇ ಇಳಿದು ಬೇರೊಂದು ರೈಲು ಹತ್ತಿ, ನನ್ನ ಕಡೆಗೆ ಕೈಯಾಡಿಸಿದ. ನಾನು ಅವನೆಡೆಗೆ ಕೈಯಾಡಿಸಿದೆ. ಅವನ ಮಾತು, ತಿಳುವಳಿಕೆಗೆ ನನ್ನ ಮನದಲ್ಲಿ ಮೆಚ್ಚುಗೆಯಿತ್ತು. ಕೇವಲ ಐವತ್ತೇ ನಿಮಷದಲ್ಲಿ ತುಮಕೂರಿಗೆ ತಲುಪಿದ ಈ ರೈಲಿಗೊಂದು ಮೆಚ್ಚುಗೆ ವ್ಯಕ್ತಪಡಿಸುತ್ತಾ ತಿಂಡಿ ತಿಂದು ಮುಗಿಸಿದೆವು.

ಎಡಕು ಮೇರಿ ಹತ್ತಿರ ಬರುತ್ತಿದ್ದಂತೆ ಎಲ್ಲೂ ಹಸಿರೋ ಹಸಿರು


ಹಸಿರು ವಾತಾರವಣವನ್ನು ಸೀಳಿಕೊಂಡು ಹೋಗುತ್ತಿರುವ ನಮ್ಮ ರೈಲು

ಸಕಲೇಶಪುರ ದಾಟಿ ಬಾಳ್ಳುಪೇಟೆ ಸಿಗುವ ನಡುವೆ ಸಿಗುವ ಹಸಿರು ದೃಶ್ಯಾವಳಿ

ರೈಲ್ವೇ ಗ್ಯಾಂಗ್ ಮೆನ್ ಈತನ ಕೆಲಸವೇ ಎಲ್ಲರಿಗಿಂತ ಮುಖ್ಯವಾದದು. ರೈಲು ಹಳಿ ಪರೀಕ್ಷೆ ಮಾಡುತ್ತಾ ಮೈಲುಗಟ್ಟಲೇ ಬಿಸಿಲು ಮಳೆ ಚಳಿ ಎನ್ನದೇ ದುಡಿಯುತ್ತಾನೆ.

ಸ್ವಲ್ಪ ಹೊತ್ತಿನಲ್ಲೇ ನಿದಾನವಾಗಿ ಕಡ್ಲೆ ಕಾಯಿ, ಚುರುಮುರಿ, ಹಣ್ಣುಗಳು, ನೀರಿನ ಬಾಟಲ್ ಪೆಪ್ಸಿ, ಕಾಫಿ ಟೀ ಒಂದೊಂದಾಗಿ ಬರತೊಡಗಿದವು. ಹೂ ಮಾರುವ ಹೆಂಗಸು ಬಂದಾಗ ನನ್ನ ಶ್ರೀಮತಿಯೂ ಸೇರಿದಂತೆ ಅಲ್ಲಿದ್ದ ಮಹಿಳಾ ಪ್ರಯಾಣಿಕರೆಲ್ಲಾ ಹೂ ಕೊಂಡುಕೊಂಡು ಕುಳಿತಲ್ಲೇ ಕಟ್ಟತೊಡಗಿದರು. ನನ್ನ ಶ್ರೀಮತಿ ಹೇಮಾಶ್ರಿ ಹೂಕಟ್ಟುವುದರ ನಡುವೆ ಮೂರ್ನಾಲ್ಕು ಮಲ್ಲಿಗೆ ಹೂವುಗಳನ್ನು ಕೆಳಕ್ಕೆ ಎಸೆದಳು.
"ಏಕೆ ಆ ಮಲ್ಲಿಗೆ ಹೂಗಳು ಚೆನ್ನಾಗಿದ್ದರೂ ಕೆಳಗೆ ಬಿಸಾಡುತ್ತಿರುವೆಯಲ್ಲ" ಕೇಳಿದೆ.

"ರೀ ಅದರೊಳಗೆ ಹುಳುಗಳಿವೆ ಕಣ್ರಿ ಅದಕ್ಕೆ ಬಿಸಾಡಿದೆ" ಅಂದಳು.

"ಹೂವಿನೊಳಗೆ ಹುಳುಗಳಿದ್ದರೇ ಏನಂತೆ, ನೀನು ಕಟ್ಟಿದ ಮೇಲೆ ದೇವಾಸ್ಥಾನಕ್ಕೆ ತೆಗೆದುಕೊಂಡು ಹೋಗುತ್ತೀಯಲ್ಲ ಅದನ್ನು ದೇವರ ಮೇಲೆ ಹಾಕುತ್ತಾರೆ ಅದರಿಂದ ಯಾರಿಗೆ ತೊಂದರೆಯಾಗೋಲ್ಲವಲ್ಲ ಇರಲಿಬಿಡು" ಅಂತ ಕೆಳಗೆ ಬಿದ್ದಿದ ಹೂಗಳನ್ನು ಎತ್ತಿಕೊಳ್ಳಲು ಬಗ್ಗಿದೆ.

"ರೀ ಬೇಡ ಸುಮ್ಮನಿರಿ, ದೇವರ ಮೇಲೆ ಹೂ ಹಾಕಿದಾಗ ಅದರಲ್ಲಿನ ಹುಳುಗಳು ಆಚೆಬಂದು ದೇವರ ಮೈ ಮೇಲೆಲ್ಲಾ ಹರಿದಾಡುವಾಗ ದೇವರಿಗೆ ಇರಿಸುಮುರಿಸಾಗಿ ಬೇಸರವಾಗಬಹುದು" ಅಂದಳು.

"ಹೂವಿನೊಳಗಿರುವ ಹುಳುಗಳು ದೇವರ ಸನ್ನಿದಿಗೆ ತಲುಪಿ ಅವಕ್ಕೂ ಪುಣ್ಯ ಲಭಿಸಿ ಅವುಗಳ ಜೀವನವೂ ಪಾವನವಾಗುತ್ತದಲ್ಲವೇ" ಅಂತ ನನಗನ್ನಿಸಿದರೂ ಅವಳ ಮಾತಿಗೆ ಉತ್ತರ ಕೊಡದೆ ಸುಮ್ಮನಾದೆ. ಬಹುಶಃ ಪ್ರಾಣಿ, ಪಕ್ಷಿ, ಹುಳುಗಳ ಮೇಲೆ ನನಗೆ ವಿಶೇಷ ಪರಿಸರಪ್ರೇಮವಿರುವುದರಿಂದ ಹೀಗೆ ಅನ್ನಿಸಿರಲೂಬಹುದು ಅಂದುಕೊಂಡು ಸುಮ್ಮನಾದೆ. ಅಷ್ಟರಲ್ಲಾಗಲೇ ಸಮಯ ೧೦-೩೦ ನಮ್ಮ ರೈಲು ಅರಸೀಕೆರೆ ತಲುಪಿತ್ತು.
ಇಪ್ಪತ್ತು ನಿಮಿಷಗಳ ನಂತರ ರೈಲು ಹಿಂದಕ್ಕೆ ವಾಪಸ್ಸು ಹೊರಟಾಗ ಮುಂದಿನ ಸೀಟಿನಲ್ಲಿ ಕುಳಿತಿದ್ದ ಹಳ್ಳಿ ಹೆಂಗಸರಲ್ಲಿ ಗುಸುಗುಸು ಗಾಬರಿ ಪ್ರಾರಂಭವಾಯಿತು.

"ರೈಲು ಮತ್ತೆ ಬೆಂಗ್ಳೂರಿಗೆ ಹೋಯ್ತಾಯಿದೆಯಾ? ಏನು ತೊಂದರೆಯಂತೆ? ಮುಂದೆ ರೈಲು ಹಳಿಗೇನಾದರೂ ಹೆಚ್ಚುಕಮ್ಮಿ ಆಗವಾ? " ಅಯ್ಯೋ ಕೊನೆಗಾಲದಲ್ಲಿ ಸುಬ್ರಮಣ್ಯ ಸ್ವಾಮಿಯ ದರ್ಶನ ಮಾಡಬೇಕಂತ ಈ ರೈಲಲ್ಲಿ ಬಂದ್ರೆ ಇದು ವಾಪಸ್ ಹೋಯ್ತಾ ಇದೆಯಲ್ಲಾ? ಕೊನೆಗಾಲದಲ್ಲಿ ನನ್ನಾಸೆಯೂ ಪೂರೈಸಕಾಗದಂಗೆ ಆಯ್ತಾಲ್ಲಾ?" ಅಂತ ವಯಸ್ಸಾದ ಮುದುಕಿಯೊಬ್ಬಳು ಪಕ್ಕದಲ್ಲಿದ್ದ ಗೆಳೆತಿಗೆ ಹೇಳುತ್ತಾ ಅವಲತ್ತುಕೊಳ್ಳುತ್ತಿದ್ದಳು.

"ನೋಡಮ್ಮಿ ಎಂಥ ಕೆಲಸವಾಯ್ತು"..ಸ್ವಲ್ಪ ತಡೆದು ಅತ್ತ ಇತ್ತಾ ನೋಡಿ....."ನಾನು ಈ ಬೆಳಿಗ್ಗೆ ಈ ರೈಲು ಹತ್ತುವಾಗ ಬಾಗಿಲಿಗೆ ಅಡ್ಡವಾಗಿ ಕುಳಿತಿದ್ದ ಬಿಕ್ಷುಕ ಹೆಂಗ್ಸಿನ ಮುಖ ನೋಡಿದ್ದಕ್ಕೆ ಇಂಗಾಯ್ತೋ ಏನೋ..." ಈಕೆ ಅನುಮಾನ ವ್ಯಕ್ತಪಡಿಸಿದಳು.

"ಅದಕ್ಕೆ ನಾನು ಯೋಳದು ದೇವರ ಮುಖ ನೋಡಿ ಬರಬೇಕು ಅಂತ..."
ಹೀಗೆ ಸಾಗುತ್ತಿದ್ದ ಇವರ ಮಾತುಗಳನ್ನು ಕೇಳಿ ನನಗೆ ನಗು ಬಂದರೂ ಅದ್ಯಾರು ಬಾಗಿಲಲ್ಲಿ ಕುಳಿತಿರುವವರೋ ನೋಡಿ ಬರೋಣವೆಂದು ಕ್ಯಾಮೆರಾವನ್ನು ಹೆಗಲಿಗೇರಿಸಿ ಹೊರಟೆ. ಇವರು ಹೇಳಿದಂತೆ ಆ ಬಿಕ್ಷುಕಿ ಅಲ್ಲೇ ಕುಳಿತಿದ್ದಳು. ನಾನು ಯಾರನ್ನೇ ನೋಡಿದರೂ ಕುತೂಹಲವೆನಿಸಿದರೆ ಮಾತಾಡಿಸುವುದು ನನ್ನ ಚಟ. ಅದೇ ರೀತಿ ಆಕೆಯನ್ನು ಮಾತಾಡಿಸಿದೆ. ಅವಳಿಗೆ ನನ್ನ ಭಾಷೆ ಅರ್ಥವಾಗಲಿಲ್ಲ. ತಮಿಳು, ತೆಲುಗು, ಹಿಂದಿ ಭಾಷೆ ಪ್ರಯತ್ನಿಸಿದೆ. ಅವಳು ಹಿಂದಿಯಲ್ಲೇ ಉತ್ತರಿಸಿದಳು.
ಆಕೆಯಿಂದ ತಿಳಿದಿದ್ದೇನೆಂದರೆ, ಅವಳು ಪಶ್ಚಿಮ ಬಂಗಾಲದಿಂದ ಹೀಗೆ ಒಂದೊಂದೇ ರೈಲು ಹತ್ತಿ ಹೋಗುತ್ತಿದ್ದಾಳೆ ಅಲ್ಲಲ್ಲಿ ಬಿಕ್ಷೆ ಬೇಡಿ ಹೊಟ್ಟೆ ಹೊರೆಯುತ್ತಳಂತೆ...

"ಮುಂದೆ ಎಲ್ಲಿಗೆ ಹೋಗುತ್ತೀಯಾ" ನಾನು ಕೇಳಿದೆ.

ನನಗೇ ಗೊತ್ತಿಲ್ಲವೆಂದು ಎರಡು ಕೈಗಳನ್ನು ಮೇಲಕ್ಕೆತ್ತಿ ತೋರಿಸಿದಳು. ಅವಳನ್ನು ಇನ್ನೂ ಮಾತಾಡಿಸಿದರೆ ಪ್ರಯೋಜನವಿಲ್ಲವೆಂದುಕೊಂಡೆ. ನಾವೆಲ್ಲಾ ಬದುಕಿನಲ್ಲಿ ಸರಿಯಾದ ದಿಕ್ಕಿನಲ್ಲೇ ಪ್ರಯಾಣಿಸುತ್ತಿದ್ದೇವೆಂದು ಅಂದುಕೊಂಡಿದ್ದೇವಲ್ಲ....ಆದ್ರೆ ಈಕೆಗೆ ಮುಂದಿನ ಬದುಕು, ಪ್ರಯಾಣದ ದಾರಿಯೇ ತಿಳಿದಿಲ್ಲವೆಂದುಕೊಂಡಾಗ ಮನಸ್ಸಿನಲ್ಲೇ ಒಂದು ರೀತಿಯ ವಿಷಾದ ಭಾವ ತುಂಬಿತ್ತು. ನಮ್ಮ ಬೋಗಿಗೆ ವಾಪಸ್ಸು ಬಂದೆ. ಹಳ್ಳಿ ಹೆಂಗಸರ ಚರ್ಚೆ ಹಾಗೇ ಮುಂದುವರಿದಿತ್ತು.

ರೈಲಿನಲ್ಲೇ ಗೊತ್ತುಗುರಿಯಿಲ್ಲದೇ ಸಾಗುತ್ತಿರುವ ಬೆಂಗಾಲಿ ಬಿಕ್ಷುಕಿ.
"ಅಯ್ಯೋ ಹೌದಾ....ಈ ರೈಲಿನಲ್ಲೇ ಬರಬಾರದಿತ್ತು ಕಣಮ್ಮಿ" ಕೊನೆಗೆ ಅವರಿಬ್ಬರೂ ಬೇಸರದಿಂದ ಈ ರೀತಿಯ ತೀರ್ಮಾನ ತೆಗೆದುಕೊಂಡಾಗ ನನಗೆ ನಗುಬಂತು. ಇಷ್ಟಕ್ಕೂ ಇಲ್ಲಿಂದ ಹಾಸನಕ್ಕೆ ಹೋಗಬೇಕಾದರೆ ರೈಲಿಗೆ ಮುಂಭಾಗದ ಇಂಜಿನ್ ಹಿಂಭಾಗಕ್ಕೆ ತಗುಲಿಸುವುದರಿಂದ ಆ ಹಳ್ಳಿ ಹೆಂಗಸರಿಗೆ ಹಾಗೆ ಅನ್ನಿಸಿತ್ತು.
ಮುಂದುವರಿಯುವುದು.....

ವಿಶೇಷ ಸೂಚನೆ: [ಈ ಬಾರಿಯ "ಸಖಿ" ಕನ್ನಡ ಪಾಕ್ಷಿಕ ಪತ್ರಿಕೆಯಲ್ಲಿ ಪ್ರವಾಸ ವಿಶೇಷಾಂಕ ಪ್ರಯುಕ್ತ "ಕುಕ್ಕೆ ಕ್ಲಿಕ್" ಹೆಸರಲ್ಲಿ ಈ ಚಿತ್ರಸಹಿತ ಲೇಖನ ಪ್ರಕಟವಾಗಿದೆ.]
ಚಿತ್ರಗಳು ಮತ್ತು ಲೇಖನ.
ಶಿವು.ಕೆ