ಆತ ಬಸ್ ನಿಲ್ದಾಣಕ್ಕೆ ಕಾಲಿಟ್ಟೊಡನೆ ಆಶ್ಚರ್ಯಗೊಂಡಿದ್ದ. ಎರಡು ಹಳ್ಳಿ ಬಸ್ಸುಗಳು ಅನಾಥವಾಗಿ ನಿಂತಿದ್ದು ಬಿಟ್ಟರೆ ಇಡೀ ಬಸ್ ನಿಲ್ದಾಣದಲ್ಲಿ ಒಬ್ಬ ಮನುಷ್ಯ ಪ್ರಾಣಿಯೂ ಕಾಣದಿರುವುದು! ಮಂಡ್ಯದಂತ ಮಂಡ್ಯ ಬಸ್ ನಿಲ್ದಾಣದಲ್ಲಿ ರಾತ್ರಿ ಹನ್ನೊಂದುವರೆಗೆ ಒಂದು ನರಪಿಳ್ಳೆಯೂ ಇಲ್ಲವಲ್ಲ ಛೇ ಇದ್ಯಾಕೆ ಹಿಂಗಾಯ್ತು ಅಂದುಕೊಳ್ಳುತ್ತಿರುವಂತೆ ಎಡಪಕ್ಕದಲ್ಲಿ ಒಬ್ಬ ಪೋಲಿಸಪ್ಪ ಚೇರಿನಲ್ಲಿ ಕುಳಿತಿದ್ದವನು ಆತನ ಕಡೆಗೆ ನೋಡಿದ. ಏನ್ ಸರ್, ಯಾರು ಇಲ್ಲ? ಈಗ ಬೆಂಗಳೂರಿಗೆ ಯಾವುದೂ ಬಸ್ ಬರುವುದಿಲ್ಲವ? ಫೋಲಿಸಪ್ಪನನ್ನು ಕೇಳಿದ. ರಾತ್ರಿ ಹತ್ತು ಗಂಟೆಯನಂತರ ಬಸ್ ನಿಲ್ದಾಣದಲ್ಲಿ ಯಾರು ಇರುವಂತಿಲ್ಲ, ನಿಮಗೆ ಮೇನ್ ರೋಡಿನಲ್ಲಿ ಬಸ್ ಸಿಗುತ್ತದೆ" ಅಂತ ಹೇಳಿ ಛೇರಿನ ಮುಂದಿನ ಟೇಬಲ್ ಮೇಲೆ ನಿದ್ರೆಗಾಗಿ ಮತ್ತೆ ತಲೆಹಾಕಿದ.
ಮೇನ್ ರೋಡಿನಲ್ಲಿ ಆಟೋಗಳು ಮತ್ತು ಆಟೋಡ್ರೈವರುಗಳನ್ನು ಬಿಟ್ಟರೆ ಮತ್ಯಾರು ಕಾಣಿಸಲಿಲ್ಲ. ಆತ ಮೇನ್ ರೋಡಿನಲ್ಲಿ ಬಸ್ಸಿಗೆ ಕಾಯಲು ನಿಂತಿದ್ದು ನೋಡಿ ಇದು ಮಾಮೂಲು ಅಂದುಕೊಂಡು ತಮ್ಮ ಜೇಬಿನಿಂದ ಬೀಡಿ ಹೊರತೆಗೆದು ಕಡ್ಡಿ ಗೀರಿದರು. ಹದಿನೈದು ನಿಮಿಷ ಕಳೆಯಿತು. ಬಸ್ ಬರಲಿಲ್ಲ ಬದಲಿಗೆ ಹತ್ತಾರು ಲಾರಿಗಳು, ಕಾರುಗಳು ಜೀಪುಗಳು, ಅವಕ್ಕೆ ವಿರುದ್ಧ ದಿಕ್ಕಿನಲ್ಲಿ ಬೆಂಗಳೂರಿನಿಂದ ಮೈಸೂರಿನಕಡೆಗೆ ಸುಮಾರು ಇಪ್ಪತ್ತಕ್ಕೂ ಹೆಚ್ಚು ರಾಜಹಂಸ, ವೋಲ್ವೋ ಸರ್ಕಾರಿ ಮತ್ತು ಖಾಸಗಿ ಬಸ್ಸುಗಳು ಸಾಗಿದ್ದವು. ಈತ ಸಮಯ ನೋಡಿದ ಹನ್ನೆರಡು ಗಂಟೆಗೆ ಹದಿನೈದು ನಿಮಿಷ ಬಾಕಿಇದೆ. ರಸ್ತೆಯುದ್ದಕ್ಕೂ ಇದ್ದ ಮರಗಳಿಗೆ ಮತ್ತಷ್ಟು ಕತ್ತಲು ಆವರಿಸಿ ಒಂಥರ ದಿಗಿಲುಂಟಾಗಿ ಬಸ್ಸು ಸಿಗದಿದ್ದರೇ ಮುಂದೇನು ಗತಿ ಅಂತ ಈತ ಚಿಂತೆಗೊಳಗಾಗುತ್ತಿರುವಾಗಲೇ ಅಯ್ಯಪ್ಪ ಮಾಲೆ ಹಾಕಿಕೊಂಡಿದ್ದ ಆಟೋ ಡ್ರೈವರ್ "ಎಲ್ಲಿಗೆ ಹೋಗಬೇಕು ಸಾಮಿ" ಅಂತ ಕೇಳಿದ. ರಾತ್ರಿ ಹನ್ನೆರಡು ಗಂಟೆಯಲ್ಲಿ ಬ್ಯಾಗಿನಲ್ಲಿ ಲಕ್ಷಾಂತರ ರೂಪಾಯಿ ಬೆಲೆಬಾಳುವ ವಸ್ತುಗಳನ್ನು ಇಟ್ಟುಕೊಂಡಿದ್ದರಿಂದಲೇ ಈತ ಭಯದಿಂದಲೇ "ಬೆಂಗಳೂರಿಗೆ" ಅಂತ ಉತ್ತರಿಸಿದ. "ಇತ್ತೀಚಿಗೆ ನೈಟ್ ಬಸ್ಸುಗಳು ಕಡಿಮೆ ಸಾಮಿ, ಇನ್ನು ಸ್ವಲ್ಪ ಹೊತ್ತು ನೋಡಿ ಬರದಿದ್ದಲ್ಲಿ ಇಲ್ಲೇ ಲಾಡ್ಜ್ ಮಾಡಿಕೊಂಡು ಇದ್ದು ಬೆಳಿಗ್ಗೆ ಹೋಗಿ ಅಂತ ಬಿಟ್ಟಿ ಐಡಿಯವನ್ನು ಬೇರೆ ಕೊಟ್ಟ. ಈತನಂತೂ ಅಲ್ಲಿ ಉಳಿಯುವಂತಿರಲಿಲ್ಲ, ಹೇಗಾದರೂ ಬೆಂಗಳೂರು ತಲುಪಲೇ ಬೇಕಾಗಿತ್ತು. ಅಷ್ಟರಲ್ಲಿ ಒಂದು ಕೆಂಪು ಬಸ್ ಬಂತು. ಈತನಿಗೆ ಹೋದ ಜೀವ ಬಂದಂತೆ ಆಗಿ ಬಸ್ ಹತ್ತಿದ. ಇಡೀ ಬಸ್ಸಿನಲ್ಲಿ ಹತ್ತು ಜನ ಪ್ರಯಾಣಿಕರಿದ್ದರೆ ಹೆಚ್ಚು. ಈತನಿಗೆ ಬೇಕಾಗಿದ್ದು ಆದೇ. ಬೆಂಗಳೂರಿಗೆ ಟಿಕೆಟ್ ತೆಗೆದುಕೊಂಡು ಮೂರು ಜನರು ಕುಳಿತುಕೊಳ್ಳುವ ಸೀಟಿನ ಒಂದು ಮೂಲೆಯಲ್ಲಿ ಬೆಲೆಬಾಳುವ ವಸ್ತುವಿರುವ ಬ್ಯಾಗನ್ನು ತಲೆದಿಂಬಿನಂತೆ ಹಾಕಿಕೊಂಡು ಮಲಗಿದ. ಸುಸ್ತಾಗಿದ್ದರಿಂದ ಸಹಜವಾಗಿ ನಿದ್ರೆ ಬರಬೇಕಿತ್ತು ಆದ್ರೆ ತಲೆದಿಂಬಾಗಿರುವ ಬ್ಯಾಗಿನಲ್ಲಿರುವ ವಸ್ತುಗಳಿಂದಾಗಿ ನಿದ್ರೆ ಬರಲಿಲ್ಲ. ಬಸ್ ಟ್ರಾಫಿಕ್ ಇಲ್ಲದ್ದರಿಂದ ಮದ್ಯರಾತ್ರಿ ಎರಡು ಗಂಟೆಯ ಹೊತ್ತಿಗೆ ಬೆಂಗಳೂರಿನ ಬಸ್ ನಿಲ್ದಾಣ ತಲುಪಿತ್ತು.
ಬಸ್ ಇಳಿದ ತಕ್ಷಣ ತನ್ನನ್ನು ಸುತ್ತುವರಿಯುವ ಆಟೋದವರಿಂದ ಹೇಗಪ್ಪ ತಪ್ಪಿಸಿಕೊಳ್ಳುವುದು ಅಂದುಕೊಳ್ಳುತ್ತ ಕೆಳಗಿಳಿದ ಆತನಿಗೆ ಯಾವ ಆಟೋದವರು ಕೂಡ ಎಲ್ಲಿಗೆ ಸರ್, ಬನ್ನಿ ಸಾರ್, ಇಂದ್ರನಗರನಾ, ವೈಟ್ ಫೀಲ್ಡಾ, ಪೀಣ್ಯಾನ, ಅಂತೇನು ಕೇಳದೆ ತಮ್ಮ ಪಾಡಿಗೆ ತಾವಿದ್ದಿದ್ದು ನೋಡಿ ಅವನಿಗೆ ಸ್ವಲ್ಪ ಸಮಾಧಾನವಾಗಿತ್ತು. ಬಸ್ ಇಳಿದ ಜಾಗದಲ್ಲಿ ಮಬ್ಬುಗತ್ತಲು ಇದ್ದಿದ್ದರಿಂದ ನಿದಾನವಾಗಿ ಮುಖ್ಯ ನಿಲ್ಡಾಣಕ್ಕೆ ಬರುತ್ತಿದ್ದಂತೆ ಅಲ್ಲಿ ಹತ್ತಾರು ಬಸ್ಸುಗಳು ಅದರ ಡೈವರುಗಳು, ಕಂಡಕ್ಟರುಗಳು ತಮ್ಮ ಬಸ್ಸುಗಳಿಗೆ ಗಿರಾಕಿಗಳನ್ನು ಹುಡುಕುವುದರಲ್ಲಿ ಮಗ್ನರಾಗಿದ್ದರು. ಅಲ್ಲಲ್ಲಿ ಒಂದಷ್ಟು ಪ್ರಯಾಣಿಕರು ಕುಳಿತಿದ್ದರೆ ಕೆಲವರು ಮಲಗಿದ್ದರು. ತಲೆಗೆ ಮಪ್ಲರುಗಳನ್ನು ಸುತ್ತಿಕೊಂಡ ಮಪ್ತಿ ಪೋಲಿಸರು ಬರುವ ಹೋಗುವ ಜನರನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದರು. ಜನಗಳನ್ನು ನೋಡಿ ಈತನಿಗೆ ಸ್ವಲ್ಪ ಸಮಾಧಾನವಾದರೂ ಅಲ್ಲಿ ಹೆಚ್ಚು ಹೊತ್ತು ಇರುವಂತಿಲ್ಲ. ಏಕೆಂದರೆ ಈತ ರೈಲ್ವೆ ನಿಲ್ಡಾಣಕ್ಕೆ ಹೋಗಲೇಬೇಕಾಗಿತ್ತು.
ಮೈಸೂರು ಕಡೆಗೆ ಹೋಗುವ ಬಸ್ಸೊಳಗಿನಿಂದ ಬನ್ನಿ ಬನ್ನಿ ಮೈಸೂರು ಅಂತ ಡ್ರೈವರ್ ಕೂಗುತ್ತಿದ್ದರಿಂದ ಈ ಮದ್ಯರಾತ್ರಿ ಎರಡು ಗಂಟೆಗೆ ಮೈಸೂರಿಗೆ ಹೋಗುವ ಬಸ್ಸು ಅದರಲ್ಲಿ ಪ್ರಯಾಣಿಸುವವರು ಇದ್ದಾರಲ್ಲ ಅಂದುಕೊಂಡು ನಿದಾನವಾಗಿ ರೈಲು ನಿಲ್ದಾಣದ ಕಡೆಗೆ ಹೊರಟ.
ರಸ್ತೆ ದಾಟಿ ರೈಲು ನಿಲ್ದಾಣದ ಮುಖ್ಯದ್ವಾರದ ಕಡೆಗೆ ಈತನ ಹೆಜ್ಜೆ ಸಾಗುತ್ತಿದ್ದಂತೆ ಅಲ್ಲಿಂದ ಚಿತ್ರಣವೇ ಬೇರೆಯಿತ್ತು. ನೂರ್‍ಆರು ಜನರು ಅಕಾಶವೇ ಹೊದಿಕೆ ಭೂಮಿಯೇ ಹಾಸಿಗೆಯೆನ್ನುವಂತೆ ಮಲಗಿದ್ದರು. ತಲೆಗೆ ತಮ್ಮ ಲಗ್ಗೇಜುಗಳನ್ನೇ ದಿಂಬುಗಳನ್ನಾಗಿಸಿಕೊಂಡಿದ್ದರು. ಹೆಚ್ಚಿನವರು ಉತ್ತರ ಭಾರತ ಪ್ರಯಾಣ ಬೆಳೆಸುವವರು, ಟಿಬೆಟ್ಟಿಯನ್ನರು, ಹಳ್ಳಿ ಜನಗಳು, ಹೀಗೆ ತರಾವರಿ ಜನರು ಮೈಮರೆತು ಮಲಗಿದ್ದರು. ತಮ್ಮ ಲಗ್ಗೇಜುಗಳನ್ನು ಯಾರಾದರೂ ಕದ್ದುಕೊಂಡು ಹೋಗಿಬಿಟ್ಟರೆ ಎನ್ನುವ ಭಯವೂ ಇಲ್ಲದಂತೆ ಅರಾಮವಾಗಿ ಹೀಗೆ ಮಲಗಿಕೊಂಡಿದ್ದಾರಲ್ಲ ಇಂಥ ಚಳಿಯಲ್ಲಿ ಅಂದುಕೊಳ್ಳುತ್ತಾ ಅವರ ನಡುವೆ ಸಾಗುತ್ತಿದ್ದಂತೆ ಈತನ ಕಾಲು ಸಪ್ಪಳಕ್ಕೆ ಮಲಗಿದ್ದರೂ ಎಚ್ಚರವಾಗಿದ್ದಂತೆ ಅರೆನಿದ್ರೆಯಲ್ಲಿದ್ದ ಒಬ್ಬ ಮಲಗಿದ್ದಲ್ಲಿಂದಲೇ ಅರ್ಥಕಣ್ಣು ತೆರೆದು ನೋಡಿದ. ಮುಂದೆ ಅನೇಕರು ಹಾಗೆ ಅರೆಗಣ್ಣು ತೆರೆಯುತ್ತಿದ್ದುದ್ದನ್ನು ಕಂಡು ಇವರು ಯಾರು ಮೈಮರೆತು ಮಲಗಿಲ್ಲ! ಎಂದುಕೊಂಡು ನಿಧಾನವಾಗಿ ಪ್ಲಾಟ್‍ಫಾರಂನೊಳಗೆ ಸಾಗಿ ನಾಲ್ಕಾರು ರೈಲುಹಳಿಗಳನ್ನು ದಾಟಿಕೊಂಡು ಟೂವೀಲರ್ ಪಾರ್ಕಿಂಗ್ ಸ್ಥಳಕ್ಕೆ ಬಂದ.
ತನ್ನ ಟೂವೀಲರ್ ಕಾಣಿಸಲಿಲ್ಲ. ಪಾರ್ಕಿಂಗ್ ಕಾವಲು ಕಾಯುವವರು ಯಾರು ಕಾಣಲಿಲ್ಲ. ಪಾರ್ಕಿಂಗ್‍ನವರು ಇಪ್ಪತ್ತನಾಲ್ಕು ಗಂಟೆಯೂ ಇರುತ್ತೇವೆ ಎಂದು ಹೇಳಿದವರು ಇವರೇನಾ? ಅಂದುಕೊಂಡನಾದರೂ ಇಂಥ ಎರಡು ಗಂಟೆ ಹದಿನೈದುನಿಮಿಷದಂತ ಮದ್ಯರಾತ್ರಿಯಲ್ಲಿ ಅವರು ನಿದ್ರೆಯನ್ನು ಮಾಡುತ್ತಿರಬೇಕು ಅಂದುಕೊಂಡು ನಿದಾನವಾಗಿ ಮತ್ತೊಮ್ಮೆ ತನ್ನ ಗಾಡಿಯನ್ನು ಹುಡುಕತೊಡಗಿದ. ಸುಮಾರು ಹತ್ತು ನಿಮಿಷ ಹುಡುಕುವಷ್ಟರಲ್ಲಿ ಈತನ ಟೂವೀಲರ್ ಕಾಣಿಸಿತ್ತು. ತಾನು ನಿಲ್ಲಿಸಿದ್ದು ಎಲ್ಲಿ ಈಗ ಇದು ಇರುವುದು ಎಲ್ಲಿ? ಈ ಪಾರ್ಕಿಂಗ್‍ನವರು ಎಂಥ ಕೆಲಸ ಮಾಡುತ್ತಾರಪ್ಪ ಅಂದುಕೊಂಡು ಕೀ ತೆಗೆದು ತನ್ನ ಬ್ಯಾಗನ್ನು ಗಾಡಿಯ ಕಾಲಿಡುವ ನಡುವೆ ಇಟ್ಟು ಗಾಡಿಯನ್ನು ಸ್ಟಾರ್ಟ್ ಮಾಡಿದ. ಶಬ್ದ ಕೇಳಿದ ತಕ್ಷಣ ಯಾರದು? ಕೂಗು ಕೇಳಿತು ದೂರದಿಂದ. ಓಹ್! ಇವರು ಎದ್ದಿದ್ದಾರೆ? ಅಂದುಕೊಂಡು ನಿದಾನವಾಗಿ ಅವರ ಬಳಿಗೆ ಹೋಗಿ ತನ್ನ ಚೀಟಿ ತೋರಿಸಿ ಅವರು ಹೇಳಿದಷ್ಟು ಹಣವನ್ನು ಕೊಟ್ಟು ಅಲ್ಲಿಂದ ಹೊರಟು ಮನೆ ಸೇರಿದಾಗ ಸರಿಯಾಗಿ ಎರಡುವರೆಗಂಟೆ.
ತನ್ನ ಟೂವೀಲರ್ ಕಾಣಿಸಲಿಲ್ಲ. ಪಾರ್ಕಿಂಗ್ ಕಾವಲು ಕಾಯುವವರು ಯಾರು ಕಾಣಲಿಲ್ಲ. ಪಾರ್ಕಿಂಗ್‍ನವರು ಇಪ್ಪತ್ತನಾಲ್ಕು ಗಂಟೆಯೂ ಇರುತ್ತೇವೆ ಎಂದು ಹೇಳಿದವರು ಇವರೇನಾ? ಅಂದುಕೊಂಡನಾದರೂ ಇಂಥ ಎರಡು ಗಂಟೆ ಹದಿನೈದುನಿಮಿಷದಂತ ಮದ್ಯರಾತ್ರಿಯಲ್ಲಿ ಅವರು ನಿದ್ರೆಯನ್ನು ಮಾಡುತ್ತಿರಬೇಕು ಅಂದುಕೊಂಡು ನಿದಾನವಾಗಿ ಮತ್ತೊಮ್ಮೆ ತನ್ನ ಗಾಡಿಯನ್ನು ಹುಡುಕತೊಡಗಿದ. ಸುಮಾರು ಹತ್ತು ನಿಮಿಷ ಹುಡುಕುವಷ್ಟರಲ್ಲಿ ಈತನ ಟೂವೀಲರ್ ಕಾಣಿಸಿತ್ತು. ತಾನು ನಿಲ್ಲಿಸಿದ್ದು ಎಲ್ಲಿ ಈಗ ಇದು ಇರುವುದು ಎಲ್ಲಿ? ಈ ಪಾರ್ಕಿಂಗ್‍ನವರು ಎಂಥ ಕೆಲಸ ಮಾಡುತ್ತಾರಪ್ಪ ಅಂದುಕೊಂಡು ಕೀ ತೆಗೆದು ತನ್ನ ಬ್ಯಾಗನ್ನು ಗಾಡಿಯ ಕಾಲಿಡುವ ನಡುವೆ ಇಟ್ಟು ಗಾಡಿಯನ್ನು ಸ್ಟಾರ್ಟ್ ಮಾಡಿದ. ಶಬ್ದ ಕೇಳಿದ ತಕ್ಷಣ ಯಾರದು? ಕೂಗು ಕೇಳಿತು ದೂರದಿಂದ. ಓಹ್! ಇವರು ಎದ್ದಿದ್ದಾರೆ? ಅಂದುಕೊಂಡು ನಿದಾನವಾಗಿ ಅವರ ಬಳಿಗೆ ಹೋಗಿ ತನ್ನ ಚೀಟಿ ತೋರಿಸಿ ಅವರು ಹೇಳಿದಷ್ಟು ಹಣವನ್ನು ಕೊಟ್ಟು ಅಲ್ಲಿಂದ ಹೊರಟು ಮನೆ ಸೇರಿದಾಗ ಸರಿಯಾಗಿ ಎರಡುವರೆಗಂಟೆ.
ಈತ ಮನೆಯ ಬಾಗಿಲು ತಟ್ಟಿ ಹೆಂಡತಿಯನ್ನು ಮೆಲ್ಲಗೆ ಕೂಗಿದ. ಅವಳಿಗೆ ಮೊದಲೇ ಗೊತ್ತಿದ್ದರಿಂದ ಬಾಗಿಲು ತೆಗೆದು ಬಂದು ಎಲ್ಲಾ ಚೆನ್ನಾಗಿ ಆಯ್ತ? ಬನ್ನಿ ಅರಾಮವಾಗಿ ನಿದ್ರೆ ಮಾಡಿ ಎಂದಳು. ಒಳಗೆ ಬಂದು ಬಾಗಿಲು ಹಾಕಿ ".ಮದ್ಯಾಹ್ನ ಮನೆಯಲ್ಲಿ ಊಟಮಾಡಿಕೊಂಡು ಹೊರಟವನು ಅಲ್ಲಿ ತಲುಪುವ ಹೊತ್ತಿಗೆ ಆರುಗಂಟೆ. ಹೋಗುತ್ತಿದ್ದಂತೆ ಕಾರ್ಯಕ್ರಮ ಶುರುವಾಗಿಬಿಟ್ಟಿತ್ತು. ನಡುವೆ ಎಲ್ಲೂ ಬಿಡುವಾಗದೇ ಇದ್ದಿದ್ದರಿಂದ ಏನು ತಿನ್ನಲಾಗಲಿಲ್ಲ. ಹೊಟ್ಟೆ ತುಂಬಾ ಹಸಿವು ಊಟ ಏನಾದರೂ ಉಳಿಸಿದ್ದೀಯಾ? ಕೇಳಿದ. ನನಗೆ ಗೊತ್ತಿತ್ತು ನೀವು ಹಿಂಗೆ ಮಾಡಿಕೊಳ್ಳುತ್ತೀರಿ ಅಂತ ಅದಕ್ಕೆ ಉಳಿಸಿದ್ದೇನೆ ಕೈತೊಳೆದುಕೊಳ್ಳಿ ಅಂದು ಒಂದು ತಟ್ಟೆಯಲ್ಲಿ ಸ್ವಲ್ಪ ಅನ್ನ ಮತ್ತು ಸಾರು ತಂದುಕೊಟ್ಟಳು.
ಎಷ್ಟು ದಿನವಾಗಿತ್ತೋ ಇಂಥ ಹಸಿವನ್ನು ಅನುಭವಿಸಿ. ಖುಷಿ ಮತ್ತು ತೃಪ್ತಿಯಿಂದ ಊಟ ಮಾಡಿದ. ಉಪ್ಪು ಹುಳಿ ಖಾರ ಏನನ್ನು ಗಮನಿಸದೇ ಇಷ್ಟಪಟ್ಟು ತಿಂದ. ಎಲ್ಲಾ ಮುಗಿದು ಮಲಗುವ ಹೊತ್ತಿಗೆ ಮೂರು ಗಂಟೆ ಮೀರಿತ್ತು. ಮರುಕ್ಷಣವೇ ಗಾಡ ನಿದ್ರೆ ಆವರಿಸಿತ್ತು.
ಈಟಿವಿಯವರು ಅಯೋಜಿಸಿ ರವಿಬೆಳಗೆರೆಯವರು ನಡೆಸಿಕೊಡುವ "ಎಂದು ಮರೆಯದ ಹಾಡು" ಕಾರ್ಯಕ್ರಮದ ಫೋಟೋಗ್ರಫಿಗಾಗಿ ನನಗೆ ಬುಲಾವ್ ಬಂದಿತ್ತು. ಇದು ಮಾಮೂಲಿ ಕಾರ್ಯಕ್ರಮಗಳಂತೆ ಫೋಟೊಗ್ರಫಿಗೆ ಪ್ಲಾಶ್ ಲೈಟ್ ಉಪಯೋಗಿಸುವಂತಿರಲಿಲ್ಲ. ಉಪಯೋಗಿಸಿದರೆ ಕಾರ್ಯಕ್ರಮದ ವಿಡಿಯೋ ರೆಕಾರ್ಡಿಂಗ್ ತೊಂದರೆಯಾಗುತ್ತದೆಯೆನ್ನುವ ಕಾರಣಕ್ಕೆ ಪ್ಲಾಶ್ ಬಳಕೆಯನ್ನು ನಿರ್ಭಂದಿಸಿದ್ದರು. ಇಂಥ ಒಳಾಂಗಣ ಕಾರ್ಯಕ್ರಮಗಳಲ್ಲಿ ಅವರು ವ್ಯವಸ್ಥೆ ಮಾಡಿದ್ದ ನೆರಳು ಮತ್ತು ಬೆಳಕಿನ ವಿಶಿಷ್ಟ ಸ್ಟುಡಿಯೋ ಲೈಟಿಂಗಿನಲ್ಲಿ ಪ್ಲಾಶ್ ಇಲ್ಲದ ಫೋಟೋಗ್ರಫಿ ನಿಜಕ್ಕೂ ಸವಾಲಿನದು. ಮತ್ತೆ ಇಂಥ ಕಾರ್ಯಕ್ರಮಕ್ಕೆ ಅತ್ಯುತ್ತಮ ಕ್ಯಾಮೆರ, ಕಡಿಮೆ ಅಪಾರ್ಚರ್ ಹೊಂದಿರುವ ಲೆನ್ಸುಗಳು, ಟೆಲಿ ಲೆನ್ಸು ಹೈಸ್ಪೀಡ್ ಮೆಮೋರಿಕಾರ್ಡುಗಳು...ಹೀಗೆ ಸುಮಾರು ಒಂದುಮುಕ್ಕಾಲು ಲಕ್ಷರೂಪಾಯಿಗಳಷ್ಟು ಬೆಲೆ ಕ್ಯಾಮೆರ ವಸ್ತುಗಳನ್ನು ತೆಗೆದುಕೊಂಡು ಹೋಗಿದ್ದೆ. ಕಾರ್ಯಕ್ರಮ ಮುಗಿಯುವ ಹೊತ್ತಿಗೆ ರಾತ್ರಿ ಹನ್ನೊಂದುವರೆಯಾಗಿತ್ತು. ಅನಂತರ ನನ್ನ ದುಬಾರಿ ಕ್ಯಾಮೆರ ವಸ್ತುಗಳ ಜೊತೆಗೆ ಮದ್ಯ ರಾತ್ರಿಯ ಪ್ರಯಾಣ, ಮನೆಗೆ ತಲುಪುವವರೆಗಿನ ನನ್ನ ಅನುಭವವನ್ನೇ ಒಂದು ಕಥೆಯಂತೆ ಬರೆದಿದ್ದೇನೆ. ನಿಮಗೆ ಏನನ್ನಿಸಿತು. ಅಭಿಪ್ರಾಯವನ್ನು ತಿಳಿಸಿ.
ಲೇಖನ
ಶಿವು.ಕೆ