ಸಂಜೆ ೪ ಗಂಟೆಗೆ ಒಳಗೆ ಹೋಗಿ ೬ಕ್ಕೆ ನವರಂಗ್ ತಿಯೇಟರಿನಿಂದ ಭಟ್ಟರ ಪಂಚರ್ ಅಂಗಡಿ ಅಲ್ಲಲ್ಲ ಪಂಚರಂಗಿ ಸಿನಿಮಾವನ್ನು ನಾನು ಮತ್ತು ಹೇಮಾಶ್ರೀ ನೋಡಿ ಹೊರಬಂದಾಗ ಸಣ್ಣಗೆ ಮಳೆ. ಸಿನಿಮಾ ಹೇಗನ್ನಿಸಿತು ಅಂತ ನಾನವಳನ್ನು ಕೇಳಿದೆ. "ಸಿನಿಮಾ ತೀರಾ ಚಿಕ್ಕದಾಯ್ತು ಕಣ್ರಿ, ಹಾಗ್ ಹೋಗಿ ಹೀಗ್ ಬಂದಂಗೆ ಆಯ್ತು" ಅಂದಳು. ಅವಳ ಪ್ರಕಾರ್‍ಅ ಸಿನಿಮಾ ದೊಡ್ಡದಿರಬೇಕು. ಅವಳ ಚಿಕ್ಕಂದಿನಲ್ಲಿ ಅವರ ಮನೆಯಲ್ಲಿ ಯಾರಾದರೂ ಸಿನಿಮಾಗೆ ಕರೆದುಕೊಂಡು ಹೋಗುತ್ತಾರೆಂದರೆ ಬೆಳಿಗ್ಗೆ ಎಂಟುಗಂಟೆಯಿಂದಲೇ ಸಿನಿಮಾ ದ್ಯಾನ. ಮಕ್ಕಳೆಲ್ಲಾ ಸೇರಿ ನಾವು ಸಿನಿಮಾ ಹೋಗುತ್ತಿದ್ದೇವೆಂದು ಒಂದು ರೌಂಡ್ ಡಂಗುರ ಬಾರಿಸಿ, ಮಧ್ಯಾಹ್ನವಾಗುತ್ತಿದ್ದಂತೆ ಊಟ ಮಾಡಿ ಒಂದಷ್ಟು ಚಕ್ಕಲಿ,ಕೋಡುಬಳೆ, ನುಪ್ಪಟ್ಟು, ಬಾಳೆಹಣ್ಣು ಬುತ್ತಿ ಮಾಡಿಕೊಂಡು ಹೊರಟರೆ ಸಿನಿಮಾನೋಡಿ ಸಂಜೆ ಮನೆಗೆ ಬರುತ್ತಾ ಹೋಟಲ್ಲಿನಲ್ಲಿ ಮಸಾಲೆ ದೋಸೆ, ಕಾಫಿ...ಹೀಗೆ ಎಲ್ಲಾ ಮುಗಿಯುವ ಹೊತ್ತಿಗೆ ಕತ್ತಲಾಗಿರುತ್ತಿತ್ತು. ಅದು ಕಣ್ರಿ ಸಿನಿಮಾ ನೋಡಾಟ ಎಂದು ಆಗಾಗ ಹೇಳುತ್ತಿರುತ್ತಾಳೆ. ಅವಳ ಮಾತು ಕೇಳಿ ನನಗೂ ಬಾಲ್ಯದ ನೆನಪಾಯಿತಾದರೂ ಬಾ ಒಂದು ಒಳ್ಳೇ ಕಾಫಿ ಕೊಡಿಸುತ್ತೇನೆ ಅಂತ ಪಕ್ಕದಲ್ಲೇ ಹೊಸದಾಗಿ ತೆರೆದುಕೊಂಡಿದ್ದ "ಹಟ್ಟಿ ಕಾಫಿ"ಗೆ ಕರೆದುಕೊಂಡು ಹೋದೆ. ಇತ್ತೀಚೆಗೆ ಯಾವುದೇ ಟ್ರೆಂಡ್ ಶುರುವಾದರೂ ಅದು ರಿವರ್ಸ್ ಆರ್ಡರಿನಲ್ಲಿ ಬಂದಂತೆ ನನಗನ್ನಿಸುತ್ತದೆ. ಏಕೆಂದರೆ ಮೊದಲೆಲ್ಲಾ ಹಳೆಯದನ್ನು ಮುಚ್ಚಿಹಾಕಿ ಹೊಸದಾಗಿ ಕೆಪೆಚಿನೋ, ಚೈನೀಸ್, ಕಾಫಿಡೇ...ಹೀಗೆ ಅಧುನಿಕವಾದ ಟ್ರೆಂಡ್ ಬರುತ್ತಿತ್ತು. ಕೆಲವೇ ವರ್ಷಗಳಲ್ಲಿ ಅದು ನಮ್ಮ ಜನಗಳಿಗೆ ಬೇಸರವಾಯಿತೇನೋ...ಮತ್ತೆ ನಮ್ಮ ಸಂಸ್ಕೃತಿಯ ಹಳ್ಳಿ ಮನೆ, ಹಳ್ಳಿ ತಿಂಡಿ, ತಾಯಿಮನೆ ಊಟ, ಮನೆಯೂಟ, ನಳಪಾಕ, ಹಟ್ಟಿಕಾಫಿ...ಹೀಗೆ ಶುರುವಾಗಿರುವುದು ರಿವರ್ಸ್ ಆರ್ಡರಿನಲ್ಲಿ ಅಲ್ಲವೇ....
ನನಗೆ "ಹಟ್ಟಿ ಕಾಫಿ" ತುಂಬಾ ಇಷ್ಟ. ಮೊದಲು ನಾನು ಕುಡಿದಿದ್ದು ಮಂತ್ರಿ ಮಾಲ್‍ನ ಸ್ಪಾರ್ ಮಾರುಕಟ್ಟೆಯಲ್ಲಿ. ಅಂತಾ ಮಾಲಾಮಾಲ್‍ನಲ್ಲಿ ಐದು ರೂಪಾಯಿಗೆ ಕಾಫಿ ಸಿಕ್ಕಾಗ ನಾನು ಅಲ್ಲಿ ನಿಂತು ಕೂತು ಖುಷಿಯಿಂದ ಕುಡಿದಿದ್ದೆ. ಆಗ ಅದರ ರುಚಿಯನ್ನು ಮರೆಯಲಾಗಿರಲಿಲ್ಲ. ಕಾಫಿ ಅಷ್ಟು ಚೆನ್ನಾಗಿದ್ದರೂ ಪ್ರತೀ ದಿನ ಮಂತ್ರಿ ಮಾಲ್‍ಗೆ ಹೋಗಿ ಕುಡಿಯಲಾಗುವುದಿಲ್ಲವಲ್ಲ. ಅದರಲ್ಲೂ ಅರ್ಧ ಕಾಫಿ ಕುಡಿಯಲು ಮಂತ್ರಿ ಮಾಲ್‍ಗೇಕೆ ಹೋಗಬೇಕು. ರಸ್ತೆಬದಿಯ ಪುಟ್ಟ ಅಂಗಡಿಯಲ್ಲಿ ಸಿಗುವ ಕಾಫಿ ಕಪ್ಪನ್ನು ಕೈಯಲ್ಲಿಡಿದು ಸುತ್ತ ಹೋಗಿಬರುವ ಸುಂದರ ಬೆಡಗಿಯರನ್ನು ನೋಡುತ್ತಾ ಕುಡಿಯುತ್ತಿದ್ದರೇ ಅದೊಂತರ ಪುಟ್ಟ ಬೊಗಸೆಯಲ್ಲಿ ಬ್ರಹ್ಮಾಂಡ ತುಂಬಿಕೊಂಡಂತ ದೊಡ್ಡ ಸಂತೋಷ. ಅಂತದ್ದೇ ಪುಟ್ಟ ಹಟ್ಟಿ ಕಾಫಿ ಅಂಗಡಿ ನವರಂಗ್ ಬಳಿ ತೆರೆದುಕೊಂಡಿತಲ್ಲ. ನವರಂಗ್ ಬಳಿಯ ಅಜಂತ ಕಲರ್ ಲ್ಯಾಬಿಗೆ ಫೋಟೊ ಪ್ರಿಂಟ್‍ಗಾಗಿ ಹೋದಾಗಲೆಲ್ಲಾ ಹಟ್ಟಿ ಕಾಫಿಗೆ ವಿಸಿಟ್ ಕೊಡುತ್ತಿದ್ದೆ. ಇಷ್ಟಕ್ಕೂ ಆ ಕಾಫಿಯಲ್ಲೇನು ವಿಶೇಷ ಅಂತೀರಾ, ಹೇಳ್ತೀನಿ ಕೇಳಿ, ಅದಕ್ಕೂ ಮೊದಲು ಬೇರೆ ಜಾಗಗಳಲ್ಲಿ ಕಾಫಿಗಳನ್ನು ಒಮ್ಮೆ ಗ್ಲಾನ್ಸ್ ಮಾಡಿಬಿಡೋಣ.
ಬೆಂಗಳೂರೆಲ್ಲಾ ಸುತ್ತಿ ಹುಡುಕಿ ತಂದಿದ್ದು ಈ ಗಾಜಿನ ಲೋಟ. ಸದ್ಯ ನಾನು ಮನೆಯಲ್ಲಿ ಕಾಫಿ ಕುಡಿಯುತ್ತಿರುವುದು ಇದರಲ್ಲಿ.
ನೀವು ಸ್ವಲ್ಪ ಅನುಕೂಲವಾದ ಏಸಿ-ಗೀಸಿ ಇರುವ ಹೋಟಲ್ಲಿಗೆ ಹೋಗಿ ಅರಾಮವಾಗಿ ಕುಳಿತು ಕಾಫಿಗೆ ಆರ್ಡರ್ ಮಾಡಿದರೆ ಚೀನಿ ಪಿಂಗಾಣಿ ಬಟ್ಟಲುಗಳಲ್ಲಿ ಕಾಫಿ ತಂದಿಟ್ಟು ದುಬಾರಿ ಬಿಲ್ಲು ಇಟ್ಟು ಹೋಗುತ್ತಾರೆ. ಕಾಫಿ ಚೆನ್ನಾಗಿದ್ದರೂ ಅದರ ಬಟ್ಟಲು ಪಿಂಗಾಣಿಯಾದ್ದರಿಂದ ಅದೇನೋ ನಮ್ಮದಲ್ಲವೆನ್ನುವ ಭಾವನೆಯಿಂದಲೇ ಕಾಫಿ ಕುಡಿದು ಎದ್ದು ಬಂದಿರುತ್ತೇವೆ. ತ್ರಿ ಸ್ಟಾರ್-ಫ಼ೈವ್ ಸ್ಪಾರ್ ಹೋಟಲ್ಲುಗಳಲ್ಲಿ ಹಾಲಿನಪುಡಿ-ಸಕ್ಕರೆ ರಹಿತ ಸಕ್ಕರೆ-ನೆಸ್‍ಕೆಪೆ-ಅಥವ-ದಾರ್ಜಿಲಿಂಗ್ ಟೀ ಇತ್ಯಾದಿಗಳನ್ನು ಪೊಟ್ಟಣಗಳಲ್ಲಿ ಇಟ್ಟು ಬಿಸಿನೀರನ್ನು ಒಂದು ದೊಡ್ಡ ಪಿಂಗಾಣಿಯಲ್ಲಿ ಇಟ್ಟು ಅದರ ಪಕ್ಕ ಮತ್ತದೇ ಚಿತ್ತಾರವಾದ ಪಿಂಗಾಣಿ ಬಟ್ಟಲು ಅದರ ಪಕ್ಕ ಎಲ್ಲವನ್ನು ಮಿಕ್ಸ್ ಮಾಡಿಕೊಂಡ ಮೇಲೆ ರುಬ್ಬಲು ಅಲ್ಲಲ್ಲ ತಿರುಗಿಸಲು ಚಮಚ. ಇಷ್ಟೆಲ್ಲಾ ಮಾಡಿಕೊಂಡು ಕಾಫಿ ಕುಡಿಯುವಾಗ ನಮ್ಮ ಕಣ್ಣು ಬೇರೆಯವರು ಯಾವ ರೀತಿ ಕಾಫಿ ಕುಡಿಯುತ್ತಿದ್ದಾರೆ ಅಂತ ಗಮನಿಸುತ್ತಾ ಆ ಚೆನ್ನಾಗಿಲ್ಲದ ಸ್ವಾದವನ್ನು ಅನುಭವಿಸದೇ ಅಲ್ಲಿಯೂ ಕೂಡ ಪರರಿಗಾಗಿ ಕಾಫಿ ಕುಡಿಯಾಟವಾಗಿಬಿಟ್ಟಿರುತ್ತದೆ. ಹೋಗಲಿ ಇತ್ತ ನಮ್ಮ ಇರಾನಿ ಛಾಯ್ ಅಂಗಡಿಗಳಿಗೆ ಬರೋಣ. ಕೆಳಗೆ ಸೌದೆ ಉರಿ ಅದರ ಮೇಲೆ ಮದ್ಯಮ ಗಾತ್ರದ ಹಿತ್ತಾಳೆ ಪಾತ್ರೆ ಬೆಳಿಗ್ಗೆ ಹಾಲಿನ ಪುಡಿ ಹಾಕಿ ಕುದಿಸಲು ಪ್ರಾರಂಭಿಸಿದರೆ ರಾತ್ರಿ ಹತ್ತು-ಹನ್ನೊಂದು ಗಂಟೆಗೂ ನಿಮಗೆ ಕಾಫಿ-ಟೀ ಸಿಗುತ್ತದೆ. ಅಲ್ಲಿ ಸಕ್ಕರೆ ಮಿಶ್ರಿತ ಗಟ್ಟಿಹಾಲು ಜೊತೆಗೆ ನೆಸ್‍ಕೆಪೆ ಪುಡಿ ಬೆರೆಸಿ ಪ್ಲಾಸ್ಟಿಕ್ ಲೋಟಕ್ಕೆ ಹಾಕಿ ನಮ್ಮ ಕೈಗೆ ಒಂದು ಮುಗುಳ್-ನಗೆ ಸೇರಿಸಿ ಕೊಡುತ್ತಾನೆ. ಮೊದಲ ಸಿಪ್ ಓಕೆ. ಕೊನೆ ಕೊನೆಯಲ್ಲಿ ಬೇಡವೆನ್ನಿಸುವಷ್ಟರ ಮಟ್ಟಿಗೆ ಬೇಸರವಾಗಿ ಅರ್ಧ ಕುಡಿದು ಸ್ಟೈಲಾಗಿ ಹಣಕೊಟ್ಟು ಬಂದುಬಿಡುತ್ತೇವೆ. ಹೋಗಲಿ ನಮ್ಮ ಮಲ್ಲೇಶ್ವರಂನ ಹಳ್ಳಿಮನೆಯಲ್ಲಿ ಕಾಫಿ ತುಂಬಾ ಚೆನ್ನಾಗಿರುತ್ತದೆಯೆಂದು ಅಲ್ಲಿ ಕುಡಿಯೋಣವೆಂದರೆ ಅವರು ಅತ್ತ ಪ್ಲಾಸ್ಟಿಕ್ ಲೋಟವೂ ಅಲ್ಲದ, ಸ್ಟೈನ್‍ಲೆಸ್ ಸ್ಟೀಲಿನ ಪುಟಾಣಿ ಲೋಟವನ್ನು ಕೊಡದೇ ಪಿಂಗ್ ಪಾಂಗ್ ಪಿಂಗಾಣಿಯನ್ನು ಕೊಡದೆ ಪೇಪರ್ ಲೋಟದಲ್ಲಿ ಕೊಡುತ್ತಾರೆ. ಅದೊಂದರ ಚೆನ್ನಾಗಿದೆಯೆಂದು ನಾವು ಕಾಫಿಯನ್ನು ಅಸ್ವಾದಿಸಿದರೂ ನಮ್ಮ ಹಿರಿಯ ದಿನಪತ್ರಿಕೆಯ ವೆಂಡರ್ ಬೋರೇಗೌಡರಿಗೆ ಅದ್ಯಾಕೋ ಇಷ್ಟವಾಗುವುದಿಲ್ಲ. ಪೇಪರ್ ಲೋಟದಲ್ಲಿ ಕೊಟ್ಟ ಕಾಫಿಯನ್ನು ತಂದು ಟೇಬಲ್ಲಿನ ಮೇಲಿಟ್ಟು ಕುಡಿಯುವ ನೀರಿನ ಬಳಿಹೋಗಿ ಅಲ್ಲಿಟ್ಟಿರುವ ಉದ್ದುದ್ದದ ನೀರು ಕುಡಿಯುವ ಸ್ಟೀಲ್ ಲೋಟದ ತುಂಬ ನೀರು ಕುಡಿದು ಅದೇ ಲೋಟಕ್ಕೆ ಪೇಪರ್ ಲೋಟದ ಕಾಫಿಯನ್ನು ಬಗ್ಗಿಸಿಕೊಂಡು ನಿದಾನವಾಗಿ ಕುಡಿದರೆ ಅವರಿಗೇ ಅವರದೇ ಮನೆಯಲ್ಲಿ ಕುಡಿದಷ್ಟೇ ಆನಂದವಂತೆ. ಅವರು ಹೇಳಿದ ಮೇಲೆ ಅವರ ಮಾತು ನಮಗೆ ಯಾವ ಪರಿ ಭ್ರಮೆಯನ್ನು ಆವರಿಸಿತೆಂದರೆ ಅಷ್ಟು ದಿನ ಮನೆ ಕಾಫಿಯಂತೆ ರುಚಿಯಾಗಿದ್ದ ಅದು ನಂತರ ಕೇವಲ ಹಳ್ಳೀಮನೆ ಕಾಫಿಯಾಗಿಬಿಟ್ಟಿತ್ತು.
ಈಗ ಹಟ್ಟಿ ಕಾಫಿಗೆ ವಾಪಸ್ ಬರೋಣ. ಅಲ್ಲಿ ಒಂದು ಕಾಫಿ ಅಂತ ನಾನು ಕೇಳಿದ ತಕ್ಷಣ ಆರು ರೂಪಾಯಿ ಕೊಡಿ ಅನ್ನುತ್ತಾನೆ ಕ್ಯಾಶ್ ಕೌಂಟರಿನ ಹಿಂದೆ ಕುಳಿತಿರುವಾತ. ಅರೆರೆ.....ಬೇರೆ ಕಡೆ ಕಾಫಿ ಬೆಲೆ ೮-೯-೧೦-೧೨ ಆಗಿರುವಾಗ ಇಲ್ಲಿ ಕೇವಲ ಆರು ರೂಪಾಯಿಗೆ ಸಿಗುತ್ತಲ್ಲ ಎಂದು ಮೊದಲಿಗೆ ಖುಷಿಯಾಗುತ್ತದೆ. ಈಗ ಪ್ರತಿಭಾರಿ ಕಾಫಿ ಕುಡಿಯಲು ಅಲ್ಲಿಗೆ ಹೋದಾಗಲೂ ಹೀಗೆ ಅನ್ನಿಸುವುದರಿಂದ ಖುಷಿ ಉಚಿತ. ಟೋಪಿ ಹಾಕಿಕೊಂಡ ಮಾಣಿ ನಮ್ಮ ಕಣ್ಣ ಮುಂದೆ ಒಂದು ಗಾಜಿನ ಲೋಟವನ್ನು ಇಡುತ್ತಾನೆ. ಅದನ್ನು ನೋಡಿದ ತಕ್ಷಣ ಮತ್ತೆ ನನ್ನ ಬಾಲ್ಯದ ನೆನಪು ಗರಿಗೆದರುತ್ತದೆ. ಆಗೆಲ್ಲಾ ಸ್ಟೀಲ್ ಲೋಟಗಳಲ್ಲಿ ಕಾಫಿ ಕೊಡುತ್ತಿರಲಿಲ್ಲ. ಕೊಟ್ಟರೂ ದೊಡ್ಡ ದೊಡ್ಡ ಹೋಟಲ್ಲುಗಳಲ್ಲಿ ಮಾತ್ರ. ಪಿಂಗಾಣಿಯೂ ಇನ್ನೂ ಬಂದಿರಲಿಲ್ಲ. ಪ್ಲಾಸ್ಟಿಕ್ ಲೋಟ ಕಾಲಿಟ್ಟಿರಲಿಲ್ಲ. ಆಗೆಲ್ಲಾ ಕೆಲಸಗಾರರು ಸುಲಭವಾಗಿ ಸಿಕ್ಕುತ್ತಿದ್ದರಿಂದ ಈ ಗಾಜಿನ ಲೋಟಗಳದೇ ದರ್ಭಾರು. ನಾವು ಶ್ರೀರಾಮಪುರಂನ ಐದನೇ ಮುಖ್ಯರಸ್ತೆಯಲ್ಲಿರುವ ಮಂಗಳೂರು ಕೆಫೆಯಲ್ಲಿ ಬೈಟು ಕಾಫಿ ಎಂತ ಹೇಳಿ ಒಂದುವರೆ ರೂಪಾಯಿ ಕೊಟ್ಟರೆ ಮುಗೀತು. ಆರ್ಡರ್ ತೆಗೆದುಕೊಂಡ ಹೋಟಲ್ ಓನರ್ ಒಂದು ಬೈಟು ಕಾಫಿ..ಎಂದು ಹೇಳುತ್ತಿದ್ದ. ಮತ್ತೊಬ್ಬರು ಬಂದಾಗ ಇನ್ನೊಂದು ಬೈಟು.........ಎಂದು ರಾಗವಾಗಿ ಎಳೆಯುತ್ತಿದ್ದ. ಹೀಗೆ ಹತ್ತಾರು ಬೈಟುಗಳ ಆರ್ಡರ್ ಬಂದರೂ ಇನ್ನೊಂದು ಬೈಟು.........ಎನ್ನುವ ಅವನ ರಾಗದಲ್ಲಿ ವ್ಯತ್ಯಾಸವಾಗುತ್ತಿರಲಿಲ್ಲ. ಅಷ್ಟರಲ್ಲಿ ಒಳಗೆ ಗಳಗಳ ಸದ್ದು. ಲೋಟಗಳನ್ನು ಜೋರು ಬರುವ ನೀರಿನಲ್ಲಿ ತೊಳೆದು ದೊಡ್ಡದಾದ ಟ್ರೇನ ಈ ತುದಿಯಿಂದ ಆ ತುದಿಗೆ ತಲೆಕೆಳಕಾಗಿ ಮಾಡಿದ ಒಂದೊಂದೇ ಲೋಟಗಳನ್ನು ತಳ್ಳುವಾಗಿನ ದೃಶ್ಯವನ್ನು ನೋಡುವಾಗಲೇ ಕಾಫಿ ಸ್ವಾದದ ಅಮಲು. ಕೆಲವೊಮ್ಮೆ ನಾವು ಹೊರಗಿದ್ದು ಆ ದೃಶ್ಯ ಕಾಣದಿದ್ದರೂ ತೊಳದ ನಂತರದ ಟ್ರ್‍ಏನಲ್ಲಿ ಒಂದೊಂದು ಲೋಟವನ್ನು ತಳ್ಳುವಾಗಿನ ಶಬ್ದವೂ ಕೂಡ ಮುಂದೆ ಅದೇ ಲೋಟದಲ್ಲಿ ಬರುವ ಕಾಫಿಯ ರುಚಿಯಲ್ಲಿ ತೇಲುವಂತೆ ಮಾಡುತ್ತಿತ್ತು. ಕಣ್ಣಿಗೆ ಕಾಣಿಸಿದ ಈ ದೃಶ್ಯಗಳಿಗೂ ಮತ್ತು ಕಿವಿಗೆ ಕೇಳಿಸಿದ ಸರರ್..ರ್....ಎನ್ನುವ ಗಾಜಿನ ಲೋಟದ ಶಬ್ದಕ್ಕೂ ನಾಲಗೆಗೆ ಸೋಕುವ ಕಾಫಿಯ ರುಚಿಗೂ ಅದೆಂಥ ಕನೆಕ್ಷನ್ ಇತ್ತೋ ನನಗೆ ಗೊತ್ತಿಲ್ಲ. ಇಷ್ಟೆಲ್ಲಾ ಆದ ಮೇಲೆ ಗಾಜಿನ ಲೋಟಕ್ಕೆ ಕಾಲು ಭಾಗ ಡಿಕಾಕ್ಷನ್ ಇನ್ನುಳಿದ ಮುಕ್ಕಾಲು ಭಾಗಕ್ಕೆ ನಿದಾನವಾಗಿ ಬಿಸಿಹಾಲನ್ನು ಹಾಕುತ್ತಿದ್ದರೆ ಕೊನೆಯಲ್ಲಿ ಉಕ್ಕಿದ ನೊರೆಯನ್ನು ಬ್ಯಾಲೆನ್ಸ್ ಮಾಡುತ್ತಾ ಲೋಟದ ತುಂಬಾ ಕಾಫಿಯನ್ನು ತುಂಬಿಸುತ್ತಲೇ ನೊರೆಯ ಕಲಾಕೃತಿಯ ಗೋಪುರವನ್ನು ಮಾಡಿ ನಮ್ಮ ಕೈಗೆ ಕೊಡುತ್ತಾನಲ್ಲಾ! ಆ ಚಳಿಗಾಲದ ಚಳಿಯಲ್ಲಿ ನಿದಾನವಾಗಿ ನೊರೆಯನ್ನು ಹೀರುತ್ತಾ..........ಕಾಫಿಯ ಮೊದಲ ಗುಟುಕು ನಾಲಗೆಗೆ ಸೋಕುವಾಗ ಆಹಾ! ಆ ಸ್ವರ್ಗ ಸುಖ! ಇಲ್ಲಿ ಹಟ್ಟಿ ಕಾಫಿಯ ಮಾಣಿ ಕೊಡುವ ಗಾಜಿನ ಲೋಟವೂ ತನ್ನ ಹಳೆಯ ತಾತ ಮುತ್ತಾತಂದಿರುಗಳಾದ ಪಟ್ಟಿ ಗಾಜಿನ ಲೋಟಗಳನ್ನು ನೆನಪಿಸುತ್ತದೆ.
ಹಟ್ಟಿ ಕಾಫಿ ಕುಡಿದು ಮುಗಿಸುತ್ತಿದ್ದಂತೆ ಹೇಮಾಶ್ರೀಗೂ ಆ ಲೋಟ ಇಷ್ಟವಾಗಿಬಿಟ್ಟಿತ್ತು. ಇಂಥದ್ದೇ ಗಾಜಿನ ಲೋಟವನ್ನು ಮನೆಗೆ ತನ್ನಿ ಅಂದುಬಿಟ್ಟಳು. ಇತ್ತ ನಮ್ಮ ಮನೆಯಲ್ಲೂ ಅನೇಕ ಹೇಮಾ ತುಂಬಾ ಚೆನ್ನಾದ ಕಾಫಿ ಮಾಡಿ ಕೊಡುತ್ತಾಳೆ. ಅಷ್ಟು ಚೆನ್ನಾದ ಕಾಫಿಗಾಗಿ ನಾವು ಹುಡುಕಿದ ಕಾಫಿಪುಡಿ ಅಂಗಡಿಗಳು ಒಂದೆರಡಲ್ಲ..ಕೊತಾಸ್, ಬಾಯರ್ಸ್,.......ಕೊನೆಗೆ ಮಲ್ಲೇಶ್ವರಂನ ಒಂಬತ್ತನೇ ಕ್ರ್‍ಆಸಿನಲ್ಲಿರುವ ನಾಯಕ್ ಕಾಫಿ ಅಂಗಡಿಯಲ್ಲಿನ ಕಾಫಿಪುಡಿಯು ನಮಗೆ ಚೆನ್ನಾಗಿ ಹೊಂದಿಕೆಯಾಗಿಬಿಟ್ಟಿತ್ತು. ಮೊದಲೆರಡು ದಿನ ಹದ ತಪ್ಪಿದರೂ ನಂತರ ಕಾಫಿ ಫಿಲ್ಟರಿಗೆ ಎಷ್ಟು ಬಿಸಿನೀರು ಮತ್ತು ಎಷ್ಟು ಕಾಫಿಪುಡಿಹಾಕಿದರೆ ಸರಿಯಾದ ಅರ್‍ಓಮದ ಫೀಲ್ ಬರುವ ಡಿಕಾಕ್ಷನ್ ಬರುತ್ತದೆ ಎನ್ನುವುದನ್ನು ಚೆನ್ನಾಗಿ ಅರಿತಿರುವುದರಿಂದ ನನಗೆ ಮನೆಯಲ್ಲಿನ ಕಾಫಿ ತುಂಬಾ ಇಷ್ಟ. [ಟೀಯನ್ನು ನಾನು ಅವಳಿಗಿಂತ ಚೆನ್ನಾಗಿ ಮಾಡುತ್ತೇನಾದ್ದರಿಂದ ನನ್ನ ಬ್ಲಾಗ್ ಮತ್ತು ಇತರ ಗೆಳೆಯರು ಮನೆಗೆ ಬಂದಾಗ ಅದರ ರುಚಿಯನ್ನು ನೋಡಿರುತ್ತಾರೆ ಸದ್ಯ ಆ ಇಲ್ಲಿ ಟೀ ವಿಚಾರ ಬೇಡ.] ನಾನು ಆ ಗಾಜಿನ ಕಾಫಿಲೋಟಗಳಿಗಾಗಿ ನಮ್ಮ ಸುತ್ತ ಮುತ್ತ ಹತ್ತಾರು ಕಡೆ ಹುಡುಕಿದೆ ಸಿಗಲಿಲ್ಲ. ಕೇಳಿದರೆ ಸಿಟಿಯಲ್ಲಿ ಸಿಗುತ್ತದೆ ಎಂದರು. ಒಂದು ದಿನ ಬಿಡುವು ಮಾಡಿಕೊಂಡು ಸಿಟಿಮಾರ್ಕೆಟ್, ಬಿವಿಕೆ ಆಯಂಗಾರ್ ರೋಡ್ ಎಲ್ಲಾ ಓಡಾಡಿದಾಗ ನನಗೆ ಬೇಕಾದ ಆ ಗ್ಲಾಸುಗಳು ಸಿಕ್ಕವು. ಅದನ್ನು ನೋಡಿದ ಹೇಮಾಶ್ರೀ ಕೂಡ ತುಂಬಾ ಖುಷಿಪಟ್ಟಳು. ಅವತ್ತಿನಿಂದ ನಮ್ಮ ಮನೆಯಲ್ಲಿ ಗಾಜಿನ ಲೋಟದಲ್ಲಿ ಕಾಫಿಯ ಸ್ವಾದ...ನಾದ....ಭಾವಾನಾತ್ಮಕ ಆನಂದ.
ಒಂದೆರಡು ದಿನಗಳಲ್ಲೇ ನನ್ನಲ್ಲಿ ಸೊಗಸಾದ ದುರಾಸೆ ಹುಟ್ಟಿಕೊಂಡಿತ್ತು. ಅದಕ್ಕೆ ಕಾರಣವೂ ಉಂಟು. ಹಟ್ಟಿ ಕಾಫಿಯಲ್ಲಿ ಆರು ರೂಪಾಯಿಗೆ ಆ ಗಾಜಿನ ಲೋಟದ ಮುಕ್ಕಾಲು ಭಾಗವನ್ನು ಮಾತ್ರ ಕಾಫಿ ಕೊಡುವುದು! ನಾವು ಕೊಡುವ ಹಣಕ್ಕೆ ಅಷ್ಟು ಸಾಕು, ಅದು ಅರೋಗ್ಯಕ್ಕೂ ಒಳ್ಳೆಯದು ಎನ್ನುವುದು ಅವರ ಭಾವನೆಯಿರಬಹುದು. ಅದೇ ಭಾವನೆ ಹೇಮಾಶ್ರೀಗೂ ಬಂದುಬಿಟ್ಟಿರಬೇಕು ಅದಕ್ಕೆ ಮನೆಯಲ್ಲೂ ಕೂಡ ಗಾಜಿನ ಲೋಟದಲ್ಲಿ ಅಷ್ಟೇ ಪ್ರಮಾಣದ ಕಾಫಿ ಕೊಡುತ್ತಾಳೆ.
"ಇದರ ತುಂಬಾ ಕೊಡು" ಎಂದೆ.
"ಕೊಡೊಲ್ಲಾ ಕಣ್ರಿ, ನಿಮಗೆ ಇಷ್ಟು ಸಾಕು ಸುಮ್ಮನೇ ಕುಡೀರಿ" ಅಂದಳು.
"ಅಲ್ಲಾ ಕಣೇ, ಈ ಲೋಟದಲ್ಲಿ ಕುಡಿಯುವ ಆನಂದವೇ ಬೇರೆ, ಅದಕ್ಕಾಗಿಯೇ ಅಲ್ಲವೇ ಸಿಟಿಯೆಲ್ಲಾ ಹುಡುಕಿ ತಂದಿದ್ದು., ಇದರ ತುಂಬಾ ಕಾಫಿಯನ್ನು ಹಾಕಿದಾಗ ನೋಡಲು ತುಂಬಾ ಚೆನ್ನಾಗಿರುತ್ತದೆ. ಮತ್ತೆ ಪೂರ್ತಿ ಕುಡಿದಾಗ ಸಿಗುವ ಸಂತೃಪ್ತಿಯನ್ನು ಬೇರೆ" ಅದಕ್ಕಾಗಿ ಪ್ಲೀಸ್ ನನಗೆ ಇನ್ನು ಮುಂದೆ ಲೋಟದ ತುಂಬ ಕಾಫಿ ಕೊಡು" ಎಂದೆ.
"ನೀವು ಈ ಗಾಜಿನ ಲೋಟಗಳನ್ನು ತಂದಿದ್ದು ಈ ಕಾರಣಕ್ಕೋ? ನೋಡುವುದಕ್ಕೆ ಚೆಂದ ಕಾಣುತ್ತದೆ ಎನ್ನುವ ಮಾತ್ರಕ್ಕೆ ಲೋಟ ತುಂಬಾ ಕಾಫಿ ಕೊಡುವುದಕ್ಕಾಗುವುದಿಲ್ಲ. ಬೇಕಾದರೆ ಒಮ್ಮೆ ಪೂರ್ತಿ ಕೊಡುತ್ತೇನೆ, ಅದರ ಫೋಟೊ ತೆಗೆದು ಕಂಪ್ಯೂಟರಿಗೆ ಸ್ಕ್ರೀನ್ ಸೇವರ್ ಮಾಡಿಕೊಂಡು ನೋಡುತ್ತಾ ಆನಂದಪಡಿ, ಬೇಡ ಅಂದೋರು ಯಾರು? ಮತ್ತೆ ಪೂರ್ತಿ ಬೇಕು ಅಂತ ಹಟ ಮಾಡಿದ್ರೆ ಈ ಲೋಟವನ್ನು ಬಾಕ್ಸಿಗೆ ಹಾಕಿಟ್ಟು ಮೇಲೆ ಇಟ್ಟುಬಿಡುತ್ತೇನೆ. ಅಥವ ಯಾರಿಗಾದ್ರು ಕೊಟ್ಟುಬಿಡುತ್ತೇನೆ ಅಷ್ಟೇ" ಅಂತ ಅಂದುಬಿಟ್ಟಳಲ್ಲ!
ವಿಧಿಯಿಲ್ಲದೇ ಅತಿಯಾಸೆ ಗತಿಗೇಡು ಅಂದುಕೊಳ್ಳುತ್ತಾ ಮುಕ್ಕಾಲು ಕಾಫಿ ಕಾಲು ಭಾಗ ನೊರೆತುಂಬಿದ ಆ ಗಾಜಿನ ಲೋಟದಲ್ಲಿ ಕಾಫಿ ಕುಡಿಯುತ್ತಾ ಆನಂದಿಸುತ್ತಿದ್ದೇನೆ.
ಚಿತ್ರಗಳು ಮತ್ತು ಲೇಖನ.
ಶಿವು.ಕೆ
Without love...
2 days ago