Thursday, November 4, 2010

ಒಂದೂವರೆದಿನದ ಧಾರವಾಡ ಅನುಭವ

        

        ನಾನು ದೂರದ ಪ್ರಯಾಣಕ್ಕಾಗಿ ಅದೆಷ್ಟೇ ವೇಗದ ರೈಲಿನ ಟಿಕೆಟ್ ಕಾಯ್ದಿರಿಸಿದರೂ ಅದ್ಯಾಕೋ ನಿದಾನವಾಗಿ ಪಕ್ಕಾ ಪ್ಯಾಸಿಂಜರ್ ಆಗಿಬಿಡುತ್ತದೆ. ಇಲ್ಲೂ ಹಾಗೇ ಆಯಿತು. ನಮ್ಮ ಅತ್ಯಂತ ವೇಗದ ರೈಲಾದ ಬೆಂಗಳೂರು-ಧಾರವಾಡ ಇಂಟರ್ ಸಿಟಿ ರೈಲನ್ನು ಮಧ್ಯಾಹ್ನ ಒಂದುಗಂಟೆಗೆ ಹತ್ತಿ ಕುಳಿತಾಗ ಅದು ರಾತ್ರಿ ಒಂಬತ್ತು ಗಂಟೆಗೆ ತಲುಪುತ್ತದೆ. ನಾನು ಬೇಗ ಹೋಟಲ್ ರೂಮ್ ಸೇರಿ ಲಗ್ಗೇಜ್ ಇಟ್ಟು ಊಟ ಮುಗಿಸಿ ರಾತ್ರಿ ಒಂದು ಸುತ್ತು ಧಾರವಾಡವನ್ನು ಕ್ಯಾಮೆರಾ ಸಮೇತ ಸುತ್ತೋಣವೆಂದು ಮಾಸ್ಟರ್ ಪ್ಲಾನ್ ಮಾಡಿದ್ದೆ.  ಆದ್ರೆ ಈ ರೈಲು ರಾತ್ರಿ ಹತ್ತುಮುವತ್ತೈದಕ್ಕೆ ಧಾರವಾಡ ತಲುಪಿ ನನ್ನ ಲೆಕ್ಕಚಾರವನ್ನೆಲ್ಲಾ ತಲೆಕೆಳಗಾಗಿಸಿತ್ತು.  ನಾನು ರೈಲಿಳಿದು ಆಟೋ ಏರಿ ಅವರೇ ವ್ಯವಸ್ಥೆ ಮಾಡಿದ್ದ ಬೃಂದಾವನ ಲಾಡ್ಜ್ ಸೇರುವ ಹೊತ್ತಿಗೆ ಹನ್ನೊಂದು ಗಂಟೆಯಾಗಿದ್ದರಿಂದ ಕ್ಯಾಮೆರಾದೊಂದಿಗೆ ಸುತ್ತುವ ಆಸೆಯನ್ನು ಕೈಬಿಟ್ಟಿದ್ದೆ. ರೈಲಿನಲ್ಲಿ ಏನು ತಿಂದಿರಲಿಲ್ಲ.  ಹೊರಗೆ ಬಂದು ನೋಡಿದರೆ ಜನರ ಓಡಾಟವೇ ಇಲ್ಲ. ಧಾರವಾಡ ಆಗಲೇ ನಿದ್ರಿಸುತ್ತಿದೆ. ಹೊಟ್ಟೆ ಚುರುಗುಟ್ಟುತ್ತಿದ್ದರಿಂದ ತಿನ್ನಲು ಏನಾದರೂ ಸಿಗುತ್ತದೋ ಅಂತ ಹೋಟಲಿನ ಬಲಬದಿಯ ರಸ್ತೆಯ ಉದ್ದಕ್ಕೆ ಒಂದು ಪರ್ಲಾಂಗ್ ನಡೆದೆ. ಅಂಗಡಿ ಹೋಟಲ್ಲುಗಳೆಲ್ಲಾ ಮುಚ್ಚಿವೆ. ಮತ್ತೆ ಬಲಕ್ಕೆ ತಿರುಗಿ ಸ್ವಲ್ಪ ದೂರ ನಡೆದರೂ ಏನೂ ಪ್ರಯೋಜನವಿಲ್ಲ. ಮತ್ತೊಂದು ತಿರುವು ಬಲಕ್ಕೆ ಕಾಣಿಸಿತು. ತಿರುಗಿದೆ. ಅಲ್ಲಿ ರಸ್ತೆಯಲ್ಲಿ ಇಬ್ಬರು ಬೈಕ್ ಮೇಲೆ ಕುಳಿತು ಮಾತಾಡುತ್ತಿದ್ದರು. ಅವರನ್ನೇ ದೈರ್ಯಮಾಡಿ ಕೇಳಿದೆ. "ಇಲ್ಲಿ ಊಟದ ಹೋಟಲ್, ಖಾನವಾಳಿ ಏನಾದ್ರು ತೆರೆದಿದೆಯಾ" ಅಂತ.  ಅವರು "ಸ್ವಲ್ಪ ಮುಂದಕ್ಕೆ ಹೋಗಿ ಬಲಕ್ಕೆ ತಿರುಗಿ ಅಲ್ಲೊಂದು ಖಾನಾವಳಿ ಇದೆ. ನಿಮ್ಮ ಅದೃಷ್ಟವನ್ನು ಪರೀಕ್ಷಿಸಿ" ಎಂದರು.  ಸಣ್ಣ ಆಸೆಯಿಂದ ಅಲ್ಲಿಗೆ ಹೋದೆ. ಅರ್ಧ ಬಾಗಿಲು ಮುಚ್ಚಿದ್ದ ಖಾನಾವಳಿಯ ಒಳಗೆ ಹೋಟಲ್ಲಿನವರೇ ಊಟ ಮಾಡುತ್ತಿದ್ದರು.  


 "ಊಟ ಸಿಗುತ್ತಾ" ಕೇಳಿದೆ.

 "ಎಲ್ಲಾ ಖಾಲಿಯಾಯ್ತಲ್ಲ" ಅಂದ ಒಬ್ಬ.


"ಹೌದಾ, ಛೇ ಎಂಥ ಕೆಲಸವಾಯ್ತು, ರೈಲು ತಡವಾಗಿದ್ದರಿಂದ ನನ್ನ ಊಟ ತಪ್ಪಿ ಹೋಯ್ತಲ್ಲ" ಅಂದ ನನ್ನಲ್ಲೇ ಗೊಣಗಿಕೊಂಡೆ.

"ಸ್ವಲ್ಪ ದೂರ ಅಲ್ಲಿ ಒಂದು ಖಾನಾವಳಿ ತೆರೆದಿದೆ ಅಲ್ಲಿ ಹೋಗಿ ನಿಮಗೆ ಊಟ ಸಿಗುತ್ತದೆ" ಅಂತ ಕೈತೋರಿಸುತ್ತ ಹೇಳಿದ ಮಗದೊಬ್ಬ.

 "ಆ ಖಾನಾವಳಿ ತುಂಬಾ ದೂರನಾ?" ನಾನು ಅರೆಮನಸ್ಸಿನಿಂದ ಕೇಳಿದೆ. ನನ್ನ ಅಷ್ಟು ದೂರ ಹೋಗಬೇಕಲ್ಲ ಅನ್ನುವ ಚಿಂತೆಯಿಂದ ಅಲ್ಲೇ ಅತ್ತಿತ್ತ ನೋಡುತ್ತಾ ನಿಂತೆ.

        "ಎಲ್ಲಿಂದ ಬಂದ್ರಿ"  ಹೋಟಲ್ ಒಡತಿ ಕೇಳಿದಳು.

"ಬೆಂಗಳೂರಿನಿಂದ" ಹೇಳಿದೆ.  "ರೊಟ್ಟಿ ಇಲ್ಲ ಚಪಾತಿ ಆಗುತ್ತಾ" ಕೇಳಿದಳು. ಪರ್ವಾಗಿಲ್ಲ ಏನಿದ್ದರೂ ಕೊಡಿ. ಎಂದೆ. ಸ್ವಲ್ಪ ಅನ್ನವೂ ಉಂಟು ಅಂದಳು. "ಚಪಾತಿ ಜೊತೆಗೆ ಅನ್ನವೂ ಸಿಗುತ್ತಾ"  ಹಸಿವನ್ನು ಅದುಮಿಟ್ಟುಕೊಂಡಿದ್ದ ನನಗೆ ಮತ್ತಷ್ಟು ಹಸಿವು ಹೆಚ್ಚಾಯಿತು. ಒಂದು ಊಟ ಪಾರ್ಸೆಲ್ ಕೊಟ್ಟುಬಿಡುತ್ತೇನೆ ಎಂದಳು. ಸದ್ಯ ಅಷ್ಟಾದರೂ ಸಿಕ್ಕಿತಲ್ಲ ನಿಮಗೆ ಪುಣ್ಯಬರಲಿ ಎಂದುಕೊಳ್ಳುತ್ತಾ "ಆಗಲಿ ಕೊಡಿ ಎಂದು ಹೇಳಿದೆನಾದರೂ ಅವರಿಗೆ ಉಳಿಸಿಕೊಂಡಿರುವ ಊಟವನ್ನು ನಾನು ದೂರದಿಂದ ಬಂದಿದ್ದೇನೆ ಅಂತ ನನಗೆ ಕೊಟ್ಟು ಅವರು ಅರೆಹೊಟ್ಟೆ ತಿಂದು ಮಲಗಬಹುದಾ ಅಂತ ಒಮ್ಮೆ ಅನ್ನಿಸಿತು. "ತಗೊಳ್ಳಿ ಸರ, ಪಲ್ಯ ಉಪ್ಪಿನಕಾಯಿ ಹಾಕಿದ್ದೇನೆ. ಚಟ್ನಿ ಹಪ್ಪಳ ಖಾಲಿಯಾಗಿದೆ, ಇಪ್ಪತ್ತೈದು ರೂಪಾಯಿ ಕೊಡ್ರಿ" ಅಂದಳು.


ನಮ್ಮ ಬೆಂಗಳೂರಿನಲ್ಲಿ ಇಂಥ ಹೊತ್ತಿನಲ್ಲಿ ಇಂಥ ಸಂದರ್ಭ ಬಂದಿದ್ದಲ್ಲಿ ಹೋಟಲ್ಲಿನ ಒಡೆಯ ಅಥವ ಕೆಲಸ ಮಾಡುವವರು ಹೀಗೆ ತಮ್ಮ ಊಟವನ್ನು ದೂರದವರೊಂದಿಗೆ ಹಂಚಿಕೊಳ್ಳುತ್ತಿದ್ದರೆ? ಖಂಡಿತ ಇಲ್ಲ. ಧಾರವಾಡದಲ್ಲಿ ಇನ್ನೂ ಮುಗ್ದತೆಯಿರುವುದರಿಂದ ಅಲ್ಲಿನ ಜನಗಳಿಗೆ ಹೊರಗಿನವರ ಮೇಲೆ ತುಂಬುಪ್ರೀತಿಯಿದೆ. ಅದರ ಪಲಿತಾಂಶವೇ ನನಗೆ ಊಟ ಸಿಕ್ಕಿರಬಹುದು ಎಂದುಕೊಳ್ಳುತ್ತಾ ನನ್ನ ರೂಮು ಸೇರುವ ಹೊತ್ತಿಗೆ ಸಮಯ ಹನ್ನೊಂದುವರೆಯಾಗಿತ್ತು.

ಲಾಡ್ಜಿನ ರೆಸೆಪ್ಟನ್‍ನಲ್ಲಿ ಒಂದು ಊಟದ ತಟ್ಟೆ ಮತ್ತು ನೀರಿನ ಲೋಟವನ್ನು ನನ್ನ ರೂಮಿಗೆ ಕಳಿಸಿ ಎಂದು ಹೇಳಿ ರೂಮಿಗೆ ಹೋದೆ. ಎರಡೂ ಬರಲಿಲ್ಲ. ಸಮಯವಾಗಲೇ ಮೀರಿಹೋಗುತ್ತಿದೆ. ನನ್ನ ರೂಮಿನ ಎದುರಿಗೆ ರೂಮ್ ಬಾಯ್‍ನ ರೂಮ್ ಇತ್ತು. ಅಲ್ಲಿ ಊಟದ ತಟ್ಟೆಗಳು, ಗಾಜಿನ ಲೋಟಗಳು ಹಾಸಿಗೆ ದಿಂಬು ಟವಲ್ಲುಗಳು ಎಲ್ಲಾ ಇದ್ದರೂ ರೂಮ್ ಬಾಯ್ ಇರಲಿಲ್ಲ. ನಾನೇ ಹೋಗಿ ಒಂದು ತಟ್ಟೆಯನ್ನು ಮತ್ತು ಲೋಟವನ್ನು ತೆಗೆದುಕೊಂಡು ಬಂದು ಊಟದ ಪಾರ್ಸೆಲ್ ತೆಗೆಯುತ್ತೇನೆ!  ಇಬ್ಬರು ಊಟಮಾಡುವಷ್ಟನ್ನು ಪಾರ್ಸೆಲ್ ಮಾಡಿಬಿಟ್ಟಿದ್ದಾರೆ.  ನನ್ನ ಊಟ ಮುಗಿದು ಮಲಗುವ ಹೊತ್ತಿಗೆ ರಾತ್ರಿ ಹನ್ನೆರಡು ದಾಟಿತ್ತು. ಅದ್ಯಾವ ಮಾಯದಲ್ಲಿ ನಿದ್ರೆ ಬಂತೋ ಬೆಳಿಗ್ಗೆ ಎಚ್ಚರವಾದಾಗ ಆರುವರೆಯಾಗಿತ್ತು


ಎದ್ದು ಕೈಕಾಲು ಮುಖ ತೊಳೆದುಕೊಂಡು ಕ್ಯಾಮೆರಾ ಬ್ಯಾಗ್ ಹೆಗಲಿಗೇರಿಸಿ ರೂಮಿನಿಂದ ಹೊರಬಿದ್ದೆ.  ಧಾರವಾಡ ಎದ್ದಿತ್ತಾದರೂ ಪೂರ್ತಿ ಎದ್ದಿರಲಿಲ್ಲ. ಸ್ವಲ್ಪ ದೂರ ನಡೆಯುವಷ್ಟರಲ್ಲಿ  ಒಂದು ಕಾಂಪ್ಲೆಕ್ಸ ಕೆಳಗೆ ನನ್ನ ವೃತ್ತಿ ಭಾಂದವರಾದ ದಿನಪತ್ರಿಕೆ ವಿತರಕರು ಅವರ ಬೀಟ್ ಹುಡುಗರು ಸೈಕಲ್ಲಿಗೆ ಕ್ಯಾರಿಯರಿಗೆ ಪೇಪರುಗಳನ್ನು ಜೋಡಿಸಿಕೊಳ್ಳುತ್ತಿದ್ದರು.


 ನಮ್ಮ  ವೃತ್ತಿ ಭಾಂದವರು ಎಲ್ಲಿದ್ದರೂ ನನ್ನ ಕಣ್ಣಿಗೆ ಕಾಣಲೇಬೇಕು!


 ಮಂಜು ಮುಸುಕಿದ ದಟ್ಟಮರಗಳ ಧಾರವಾಡ ರಸ್ತೆ!


 ಮುಂಜಾವಿನ ಧಾರವಾಡ ರಸ್ತೆ
  ಆಗಾಗ ಕಾಣುವ ದೂರದ ಊರಿನ ಬಸ್ಸುಗಳ ಜೊತೆಗೆ ಸಿಟಿಬಸ್ಸುಗಳು ಒಂದೊಂದಾಗಿ ಕಾಣತೊಡಗಿದವು. ರಸ್ತೆಗಳ ಎರಡೂ ಬದಿಯಲ್ಲೂ ದಟ್ಟಮರಗಳು ನಮ್ಮ ಹದಿನೈದು ವರ್ಷದ ಬೆಂಗಳೂರನ್ನು ನೆನಪಿಸಿದವು. ಅದ್ಯಾಕೋ ಖುಷಿಯಿಂದ ಒಂದಷ್ಟು ಮರಗಳ ಸಮೇತ ರಸ್ತೆಗಳ ಪೋಟೊಗಳನ್ನು ಕ್ಲಿಕ್ಕಿಸಿದೆ. ಹಾಗೇ ಸಾಗುತ್ತಿದ್ದಂತೆ ಆರ್.ಎನ್ ಸೆಟ್ಟಿ ಮೈದಾನ ಕಾಣಿಸಿತು. ಒಳಗೆ ಹೋದೆ. ಯುವಕ ಯುವತಿಯರು ಜಾಗಿಂಗ್ ಮಾಡುತ್ತಿದ್ದರು, ಬಾಲಕರು ಪುಟ್‍ಬಾಲ್ ಆಡುತ್ತಿದ್ದರು. ವಯಸ್ಸಾದವರು ವಾಕ್ ಮಾಡುತ್ತಿದ್ದರು. ದೂರದಲ್ಲೊಬ್ಬ ಪ್ರಾಣಯಾಮ ಮಾಡುತ್ತಾ ಉಸಿರು ಎಳೆದುಬಿಡುತ್ತಿದ್ದಾನೆ.  ಇದೆಲ್ಲವೂ ಏನು ವಿಶೇಷವಿಲ್ಲವೆಂದುಕೊಳ್ಳುವಷ್ಟರಲ್ಲಿ ಪಕ್ಕದಿಂದ ಕೆಲವು ವಯಸ್ಕ ಮಹಿಳೆಯರ ದ್ವನಿಗಳು ಕೇಳಿಬರತೊಡಗಿದವಲ್ಲ! ನಾನು ಅತ್ತ ತಿರುಗದೇ ಹಾಗೆ ಕೇಳಿಸಿಕೊಂಡೆ!
" ಅಲ್ಲ ಕಣ್ರಿ, ಈ ರಾಜಕೀಯ್ದೋವ್ರಿಗೆ ಏನು ಬಂದು ಸಾಯಲ್ವಾ? ನಮ್ಮ ದುಡ್ಡಲ್ಲಿ ರಿಸಾರ್ಟ್‍ನಲ್ಲಿ ಕೂತು ಮಜಮಾಡುತ್ತಾರಲ್ವಾ?
"ಹೌದು ಬಾಯೆರ್ರ...ಇವರಿಗೆ ದೊಡ್ಡ ರೋಗಬಡಿಬೇಕು ನೋಡ್ರಿ..’ ಹೇಳಿದಳು ಈಕೆ.

ಹೂ ಕಣ್ರಿ..ಇವರಿಗೆ ಚಿಕನ್ ಗುನ್ಯಗಿಂತ ದೊಡ್ಡದು ಅದೇನೋ ಮಟನ್ ಗುನ್ಯ ಅಂತ ಬಂದಿದೆಯಂತೆ ಅದು ಬಂದವರಿಗೆ ಆರುತಿಂಗಳು ನರಕದರ್ಶನವಂತೆ! ಅದು ಇವರಿಗಾದ್ರು ಬರಬಾರದಾ? ಶಾಪ ಹಾಕಿದಳು ಆಕೆ.


ಮತ್ತೆ ಇದು ಮುಂದುವರಿದು ಯಡಿಯೂರಪ್ಪ, ಕುಮಾರಸ್ವಾಮಿ,............ರೇಣುಕಾಚಾರ್ಯ....ಸಾಗುತ್ತಿತ್ತು.  ಹಾಗೆ ಮೈದಾನದಿಂದ ಹೊರಗೆ ಬಂದು ರಸ್ತೆಯಲ್ಲಿ ನಡೆಯತೊಡಗಿದೆ. ಕಾಲೇಜಿಗೆ ಹೋಗುವ ಸುಂದರ ಹುಡುಗಿಯರು ಕಾಣಿಸತೊಡಗಿದರು.

 ರಸ್ತೆ ಬದಿಯ ಹೋಟಲ್ ಹಿಂಭಾಗದಲ್ಲಿ ಮುಂಜಾವಿನಲ್ಲಿ ನೀರು ಕಾಯಿಸುತ್ತಿರುವ ವಯಸ್ಕ ಮಹಿಳೆಅವರನ್ನೆಲ್ಲಾ ಹಾಗೆ ನೋಡಿ ಕಣ್ಣುತುಂಬಿಕೊಳ್ಳುತ್ತಾ, ಕನ್ನಡ ಸಂಸ್ಕೃತಿ ಇಲಾಖೆ ಕಟ್ಟಡ, ಮಂದಾರ ಹೋಟಲ್ ಸಾಗಿ ದಾರಿಯಲ್ಲಿ ಸಿಕ್ಕ ಒಂದು ಪುಟ್ಟ ಹೋಟಲ್ಲಿ ಚಾ ಕುಡಿದು ಹೋಟಲ್ಲಿಗೆ ಬರುವ ಹೊತ್ತಿಗೆ ಯಾರೋ ದೂರದಿಂದ ಕೈಯಾಡಿಸುತ್ತಿರುವುದು ಕಾಣಿಸಿತು. ಹತ್ತಿರ ಬರುವಷ್ಟರಲ್ಲಿ ಆತ ಚಿದಾನಂದ ಸಾಲಿ ಅಂತ ಗೊತ್ತಾಯಿತು.  ಕಳೆದ ನಾಲ್ಕು ತಿಂಗಳಿಂದ ಬರೀ ಫೋನಿನಲ್ಲಿ ನಮ್ಮ ಗೆಳೆತನ ಬೆಳೆದಿದ್ದರಿಂದ ನಾನು ಅವರನ್ನು ನೋಡಿರದಿದ್ದರೂ ಆತ ನನ್ನ ಬ್ಲಾಗಿನಲ್ಲಿ ನನ್ನ ಫೋಟೊ ನೋಡಿದ್ದರಿಂದ ಹತ್ತಿರ ಬಂದವರೇ ನನ್ನ ಅಪ್ಪಿಕೊಂಡುಬಿಟ್ಟರು.  ಮತ್ತೆ ಮಾತಾಡಿ ಪರಿಚಯಮಾಡಿಕೊಂಡ ಮೇಲೆ ಜೊತೆಗಿದ್ದವರು ಆರೀಪ್ ರಾಜ ಅಂತ ಪರಿಚಯ ಮಾಡಿಕೊಂಡರು.  ಅಲ್ಲಿಂದ ಮತ್ತೆ ನಮ್ಮ ರೂಮ್ ಸೇರಿ ಸಿದ್ದರಾಗಿ ಹೊರಬರುವ ಹೊತ್ತಿಗೆ ಸಮಯ ಒಂಬತ್ತುವರೆಯಾಗಿತ್ತು.
            
ಈ ಫೋಟೊ ಚೆನ್ನಾಗಿದೆಯಲ್ವಾ.....


ಮತ್ತೆ ಸ್ವಲ್ಪ ಹೊತ್ತಿನಲ್ಲೇ  ಮುಂಡರಗಿಯ ಸಲೀಂ ಮತ್ತು ಬಾಗಲಕೋಟದ ಇಂದ್ರಕುಮಾರ್ ಕೂಡಿಕೊಂಡರು. ಅವರು ನನ್ನ ವೆಂಡರ್ ಕಣ್ಣು ಪುಸ್ತಕಕ್ಕೆ ಬಹುಮಾನ ಬಂದ ಸಂತೋಷಕ್ಕೆ  ನನ್ನ ಮೇಲಿನ ಪ್ರೀತಿಯಿಂದ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಂದಿದ್ದರು. ಎಲ್ಲರೂ ಒಟ್ಟಿಗೆ ಬೆಳಗಿನ ಉಪಹಾರ ಮುಗಿಸಿ ದ.ರಾ.ಬೇಂದ್ರೆ ಭವನವನ್ನು ಸೇರುವ ಹೊತ್ತಿಗೆ ಹತ್ತುವರೆಯಾಗಿತ್ತು.

ಅರೀಫ್ ರಾಜರ "ಪಕೀರ ಜಂಗಮ ಜೋಳಿಗೆ, ಮತ್ತು ನನ್ನ ವೆಂಡರ್ ಕಣ್ಣು ಪುಸ್ತಕದ ಬಗ್ಗೆ ಅವಲೋಕಿಸಿದವರು ಡಾ.ರಂಗರಾಜ ವನದುರ್ಗ. ಸಂದೀಪ್ ನಾಯಕ್‍ರ "ಗೋಡೆಗೆ ಬರೆದ ನವಿಲು" ಚಿದಾನಂದ ಸಾಲಿಯವರ "ಯಜ್ಞ" ಅನುವಾದ ಕೃತಿ, ಮಾರ್ತಾಂಡಪ್ಪ ಕತ್ತಿಯವರ "ಬಸವರಾಜ ಮನ್ಸೂರರ ಜೀವನ ಚರಿತೆ" ಶ್ರೀಧರ ಹೆಗಡೆ ಭದ್ರನ್‍ರವರ "ವಿಸ್ತರಣೆ" ಕೃತಿಗಳ ಬಗ್ಗೆ ಜಗದೀಶ ಮಂಗಳೂರ್ ಮಠ್‍ರವರು ಮಾತಾಡಿದರು. ನಂತರ ಇಡೀ ಕಾರ್ಯಕ್ರಮವನ್ನು ಉದ್ದೇಶಿಸಿ ಮತ್ತು ಪುಸ್ತಕಗಳ ಬಗ್ಗೆ ಇಂದಿನ ಸಾಹಿತ್ಯದ ಬಗ್ಗೆ ಲವಲವಿಕೆಯಿಂದ ಮಾತಾಡಿದವರು ಜಯಂತ್ ಕಾಯ್ಕಿಣಿ.


ಕಾರ್ಯಕ್ರಮದ ನಡುವೆ ಪುಸ್ತಕ ಮಾರಾಟ ಹೊರಗೆ ನಡೆಯುತ್ತಿತ್ತು. ನಾನು ತೆಗೆದುಕೊಂಡು ಹೋಗಿದ್ದ ಹದಿನೈದು "ವೆಂಡರ್ ಕಣ್ಣು ಪುಸ್ತಕಗಳು ಮಾರಾಟವಾಗಿದ್ದು ನನಗೆ ಖುಷಿಯಾಗಿತ್ತು.  ಮದ್ಯಾಹ್ನ ಸಂಸ್ಥೆಯವರ ಜೊತೆ ಜಯಂತ್ ಕಾಯ್ಕಿಣಿ ಮತ್ತು ಬಹುಮಾನ ಪುರಸ್ಕೃತರಾದ ನಾವೆಲ್ಲಾ ಸಹಜವಾದ ಮಾತು, ಹರಟೆ, ತಮಾಷೆಗಳೊಂದಿಗೆ ಒಟ್ಟಿಗೆ ಊಟ ಮಾಡಿದ್ದು ಮರೆಯಲಾಗದ ಅನುಭವ.

ಸಂಜೆ ಧಾರವಾಡ ವಿಶ್ವವಿದ್ಯಾಲಯವನ್ನು ಸಲೀಂ ಮತ್ತು ಇಂದ್ರಕುಮಾರ್ ಜೊತೆ ನೋಡಲು ಹೋದಾದ ಅದರ ಆಗಾದವಾದ ಕ್ಯಾಂಪಸನ್ನು ನೋಡುವುದೇ ಒಂದು ಆನಂದ. ದಟ್ಟ ಮರಗಳ ನಡುವೆ ಅಲ್ಲಲ್ಲಿ ಇರುವ ವಿಭಾಗಗಳು, ಕಾಲೇಜು ಮತ್ತು ಸ್ನಾತಕೋತ್ತರ ವಿಭಾಗದ ವಿದ್ಯಾರ್ಥಿ ವಿದ್ಯಾರ್ಥಿನಿಯರು,..........ಈಗ ಹತ್ತು ವರ್ಷ ಚಿಕ್ಕವನಾಗಿದ್ದರೆ ಇಲ್ಲಿ ಸ್ನಾತಕೋತ್ತರ ಪದವಿಗೆ ಸೇರಿಕೊಳ್ಳುವ ಆಸೆ ಮನದಲ್ಲಿ ಮೂಡಿತ್ತು.

 ಸೂರ್ಯ ಮುಳುಗುವ ಹೊತ್ತಿನಲ್ಲಿ ಧಾರವಾಡ ವಿಶ್ವವಿದ್ಯಾಲಯ ಮುಖ್ಯ ಕಟ್ಟಡ. ದಟ್ಟ ಮರಗಳಿಂದ ಕೂಡಿದ ಕ್ಯಾಂಪಸಿನ ರಸ್ತೆ...


    ಸಂಜೆ ಹೊತ್ತಿನಲ್ಲಿ ಧಾರವಾಡ ವಿಶ್ವವಿದ್ಯಾಲಯದ ಕ್ಯಾಂಪಸ್.


ಅಲ್ಲಿಂದ ಹೊರಬಂದು ಬಸ್ ಹತ್ತಿ ನಮ್ಮ ಸಂಜೆ ಕಾರ್ಯಕ್ರಮವಿದ್ದ ಸೃಜನ ರಂಗಮಂದಿರಕ್ಕೆ ಬಂದೆವು ಅಲ್ಲಿ ನಮಗಾಗಿ ಸುನಾಥ್‍ರವರು ಕಾಯುತ್ತಿದ್ದರು. ಅವರನ್ನು ಬೇಟಿಯಾಗಿದ್ದು ಒಂದು ವಿಭಿನ್ನ ಅನುಭವ. ಸಂಜೆ ಕಾರ್ಯಕ್ರಮ ಮುಗಿದು ಎಲ್ಲರಿಂದಲೂ ಬೀಳ್ಕೊಡುವಾಗ ಎಲ್ಲರ ಮನತುಂಬಿಬಂದಿತ್ತು.  ವಾಪಸ್ಸು ರೂಮಿಗೆ ಬಂದು ನಮ್ಮ ಲಗ್ಗೇಜುಗಳನ್ನು ಪ್ಯಾಕ್ ಮಾಡಿಕೊಂಡು ಒಂದು ದೊಡ್ಡ ಮಿಶ್ರ ಪೇಡ ಅಂಗಡಿಯಲ್ಲಿ ಧಾರವಾಡ ಪೇಡವನ್ನು ಕೊಂಡು ಪಕ್ಕದಲ್ಲಿಯೇ ಇದ್ದ ೯೦ ವರ್ಷ ಹಳೆಯದಾದ ಬಸಪ್ಪ ಖಾನಾವಳಿಯಲ್ಲಿ ಊಟಮಾಡಿ ರೈಲು ನಿಲ್ದಾಣದ ಬಳಿಗೆ ಬರುವ ಹೊತ್ತಿಗೆ ೯-೩೦.  ನಾನು ಬೆಂಗಳೂರಿಗೆ ಬರುವ ರಾಣಿಚೆನ್ನಮ್ಮ ಎಕ್ಸ್‍ಪ್ರೆಸ್ ಬಂದುನಿಂತಿತ್ತು.

ಇಡೀ ದಿನದ ಧಾರವಾಡದ ಅನುಭವವನ್ನು ಮೆಲುಕು ಹಾಕುತ್ತಿರುವಾಗಲೇ ಅದ್ಯಾವಾಗ ನಿದ್ರೆ ಬಂತೊ ಗೊತ್ತಿಲ್ಲ.  ಬೆಳಿಗ್ಗೆ ಕಣ್ಣು ಬಿಟ್ಟಾಗ ರೈಲು ತುಮಕೂರು ದಾಟಿ ಬೆಂಗಳೂರಿನ ಕಡೆ ವೇಗವಾಗಿ ಚಲಿಸುತ್ತಿತ್ತು.


ಚಿತ್ರಗಳು ಮತ್ತು ಲೇಖನ:
ಶಿವು.ಕೆ

46 comments:

ಮಹೇಶ ಭಟ್ಟ said...

ತುಂಬಾ ಮನೋಹರವಾಗಿ ಚಿತ್ರಗಳು ಮೂಡಿಬಂದಿವೆ. ಖಂಡಿತ ಆ ಮಹಿಳೆ ಇಂದಿನ ರಾಜಕೀಯ ವ್ಯವಸ್ಥೆಯ ಬಗ್ಗೆ ಚೆನ್ನಾಗಿ ಹೇಳಿದ್ದಾಳೆ. ಅವರ ಚಿತ್ರವೊಂದನ್ನು ಹಾಕಬೇಕಿತ್ತು

shivu.k said...

ಮನೋಹರ್ ಭಟ್ ಸರ್,

ಆ ಮಹಿಳೆಯ ಚಿತ್ರ ತೆಗೆಯಲು ಪ್ರಯತ್ನಿಸಿದೆ. ಆಗಲಿಲ್ಲ. ನಾವು ಕಣ್ಣು ಮತ್ತು ಕಿವಿತೆರೆದುಕೊಂಡಾಗ ಇವೆಲ್ಲಾ ಸಹಜವಾಗಿ ಸಿಗುತ್ತವೆ. ಚಿತ್ರಗಳನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್.

ಚುಕ್ಕಿಚಿತ್ತಾರ said...

yaavaaginante sundara niroopaneyondige nimma anubhavagalannu hanchikondiddeera.. thanks

nimagellarigoo deepaavaliya shubha haaraikegalu

shivu.k said...

ಚುಕ್ಕಿಚಿತ್ತಾರ ಮೇಡಮ್,

ಚಿತ್ರಗಳು ಮತ್ತು ಅನುಭವವನ್ನು ಮೆಚ್ಚಿಕೊಂಡಿದ್ದಕ್ಕೆ ಥ್ಯಾಂಕ್ಸ್. ನಿಮಗೂ ಮತ್ತು ನಿಮ್ಮ ಕುಟುಂಬಕ್ಕೂ ದೀಪಾವಳಿಯ ಶುಭಾಶಯಗಳು.

ಹಳ್ಳಿ ಹುಡುಗ ತರುಣ್ said...

sir nimma dhaaravaaDada pravasada lekhana chennagide.. ದನ್ಯವಾದಗಳು
ಮತ್ತು ದೀಪಾವಳಿಯ ಶುಭಾಶಯಗಳು

ಹಳ್ಳಿ ಹುಡುಗ ತರುಣ್ said...

sir maretidde photo's super..

sunaath said...

ಶಿವು,
ನಿಮ್ಮ ಅಂತರಂಗದಲ್ಲಿ ಸ್ನೇಹವಿದೆ. ಬಹಿರಂಗದಲ್ಲಿ ಫೋಟೋ-ಕಣ್ಣುಗಳಿವೆ. ಹೀಗಾಗಿ ಧಾರವಾಡ ಶಹರವು ನಿಮಗೆ ಆನಂದ ತಂದದ್ದು ಸಹಜವೇ ಆಗಿದೆ. ಅಲ್ಲಿಯ ದೃಶ್ಯಗಳನ್ನು ಸುಂದರವಾಗಿ ಸೆರೆ ಹಿಡಿದದ್ದೂ ಸಹ ಸಹಜವೇ ಆಗಿದೆ.

shivu.k said...

ಹಳ್ಳಿ ಹುಡುಗ ತರುಣ್,

ನಿಮ್ಮ ಅಭಿಪ್ರಾಯಕ್ಕೆ ಥ್ಯಾಂಕ್ಸ್..

shivu.k said...

ತರುಣ್,

ಫೋಟೊಗಳನ್ನು ಮೆಚ್ಚಿದ್ದಕ್ಕೂ ಥ್ಯಾಂಕ್ಸ್.

shivu.k said...

ಸುನಾಥ್ ಸರ್,

ನಿಮ್ಮ ಮಾತು ನಿಜ. ನಾನು ಯಾವುದೇ ಹೊಸ ಜಾಗಕ್ಕೆ ಹೋದರೂ ಅಲ್ಲಿ ನನ್ನ ಕಣ್ಣು, ಕಿವಿ ಮತ್ತು ಮನಸ್ಸನ್ನು ತೆರೆದುಕೊಳ್ಳುತ್ತೇನೆ. ಮತ್ತೆ ಯಾವುದೇ ಪೂರ್ವಗ್ರಹ ಪೀಡಿತನಾಗದೇ ಹೊಸದಾಗಿ ನೋಡಲು ಅಂತರಂಗದಲ್ಲಿ ಸ್ನೇಹವನ್ನು ಬೆಳೆಸಿಕೊಳ್ಳುತ್ತೇನೆ. ಆಗ ನನಗೆ ಅದೆಲ್ಲವೂ ಇಷ್ಟವಾಗಿ ಹೊಸತಾಗಿ ಕಾಣುತ್ತದೆ.
ನಿಮ್ಮ ಅನಿಸಿಕೆಗೆ ಧನ್ಯವಾದಗಳು.

jithendra hindumane said...

ನಿಮ್ಮಫೋಟೋ, ಲೇಖನ ನೋಡಿ ಒಮ್ಮೆ ಧಾರವಾಡ ಸುತ್ತುವ ಆಸೆ ಆಗಿದೆ. ಆ ಮರ ಗಿಡಗಳು ಹಾಗೇ ಇರಲಿ ಅಲ್ಲಿವರೆಗೆ...!
ಬರಹಕ್ಕೆ ಧನ್ಯವಾದಗಳು

shivu.k said...

ಜಿತೇಂದ್ರ ಹಿಂದ್‍ಮನೆ,

ನಿಮ್ಮ ಆಸೆ ಈಡೇರುವುದು ಖಂಡಿತ. ಸದ್ಯ ಅಲ್ಲಿಗೆ ಯಾವುದೇ ದೊಡ್ಡ ಉದ್ಯಮಗಳು ಕಾಲಿಟ್ಟಿಲ್ಲವಾದ್ದರಿಂದ ಅಲ್ಲಿನ ಮರಗಳಿಗೆ ಅಂತ ಅನಾಹುತಗಳಾಗುವುದಿಲ್ಲ. ಖಂಡಿತ ಹೋಗಿಬನ್ನಿ. ಖುಷಿಪಡಿ..

Nivedita Thadani said...

ಶಿವೂ ಅವರೇ,
ನೀವು ನನ್ನ ಊರಿಗೆ ಬಂದು ನಮ್ಮ ಊರನ್ನು ಇಷ್ಟ ಪಟ್ಟಿದ್ದಕ್ಕೆ ತುಂಬಾ ಖುಷಿ ಆಯಿತು. ಮತ್ತೆ ಬನ್ನಿ.
ಫೋಟೋಗಳು ತುಂಬಾ ಚೆನ್ನಾಗಿ ಬಂದಿವೆ.
I am proud to be from a place like Dharwad.

ಜಲನಯನ said...

ಶಿವು ನಿಮ್ಮ ಗುಬ್ಬಿ ಎಂಜಲು -ಇದೇ ರೀತಿಯ ಪುರ್ಸ್ಕಾರಕ್ಕೆ ಭಾಜನವಾಗಲಿ ಎನ್ನುವುದು ನನ್ನ ಹಾರೈಕೆ...ನಿಮ್ಮ ಪ್ರವಾಸ ಕಥನ ನಿಮ್ಮ ಹಿಂದಿನ ಪುರಸ್ಕಾರ ಸಮಾರಂಭದ ಲೇಖನಕ್ಕೆ ಮ್ಮೊದಲಿಗೆ ಹಾಕಬೇಕಿತ್ತು...ಹಹಹ ಆದ್ರೂ ಎರ್ಡನ್ನೂ ಓದಿದೆ...

ಸೀತಾರಾಮ. ಕೆ. / SITARAM.K said...

ನನ್ನ ಜೀವನದ ಅದ್ಭುತ ಕ್ಷಣಗಳೆಂದರೆ ಧಾರವಾಡದ ಪರಿಸರದಲ್ಲಿ ೮ ವರ್ಷವಿದ್ದದ್ದು ಎಂದು ತಡಬಡಿಸದೆ ಹೇಳುತ್ತೇನೆ.
ನನ್ನ ಮುದ್ದಿನ ಧಾರವಾಡವನ್ನ ಚಿತ್ರ ಸಹಿತ ನೆನಪಿಸಿದ್ದಕ್ಕೆ ಧನ್ಯವಾದಗಳು.
ತಮ್ಮ ಚಿತ್ರಗಳು ನನ್ನ ಕಣ್ಣಲ್ಲಿ ತುಂಬಿರುವ ಧಾರವಾಡದಷ್ಟು ಮುದ್ದಾಗಿಲ್ಲ ಎಂದು ಹೇಳುತ್ತಿರುವದಕ್ಕೆ ಕ್ಷಮಿಸಿ.

balasubramanya said...

ಶಿವೂ ನಿಮ್ಮ ಧಾರವಾಡ ಪಯಣದ ಅನುಭವಗಳು ಚೆನ್ನಾಗಿಮೂಡಿಬಂದಿವೆ.ಬಹುಷಃ ಕಾರ್ಯಕ್ರಮದ ಒತ್ತಡ ದಿಂದ ನೀವು ಧಾರವಾಡ ಪೇಡ ಸವಿದು ಸಾಧನ ಕೇರಿ ನೋಡಲಿಲ್ಲವೆಂದು ಕೊಳ್ಳುತ್ತೇನೆ.ಮಂಜು ಮುಸುಕಿದ ಧಾರವಾಡ ನಗರದ ರಸ್ತೆ ಹಳೆಯ ನೆನಪು ಮೂಡಿಸಿತು,ನಿಮಗೆ ಧನ್ಯವಾದಗಳು.

balasubramanya said...

ದೀಪಗಳ ಹಬ್ಬದ ಹಾರ್ದಿಕ ಶುಭಾಶಯಗಳು.

umesh desai said...

ಶಿವು ಅವರೆ ನಮ್ಮ ಧಾರವಾಡ ತಮಗೆ ಹಿಡಿಸಿತು ಅಂತ ಕೇಳಿ ಸಂತೋಷ ಆತು.ನಿಜ ಧಾರವಾಡ ಪ್ರಶಾಂತ ಊರು ಅಲ್ಲಿ ತಡ ಆದ್ರೆ ಊಟ ಸಿಗೋಲ್ಲ.ನಿಮ್ಮ ಫೋಟೋನೂ ಚೆನ್ನಾಗಿವೆ. ಒಂದು ಮಾತಿದೆ ನನ್ನ ಬ್ಲಾಗ್ ಕಡೆ ತಾವು ಬರದೇ
ಭಾಳ ದಿನ ಆದ್ವು...

prabhamani nagaraja said...

@ ಸುನಾಥ್ ರವರೆ,
ಧಾರವಾಡದಲ್ಲಿಯ ನಿಮ್ಮ ಅನುಭವಗಳನ್ನು ನಮ್ಮೊ೦ದಿಗೆ ಹ೦ಚಿಕೊ೦ಡದ್ದಕ್ಕಾಗಿ ಧನ್ಯವಾದಗಳು.ನನ್ನ ಬ್ಲಾಗ್ ನಲ್ಲಿಯೂ ಧಾರವಾಡ ಕ್ಕೆ ಮೊದಲ ಸಲ ಹೋದಾಗ ವರಕವಿ ಬೆ೦ದ್ರೆಯವರನ್ನು ಕ೦ಡ ನೆನಪುಗಳಿವೆ.ಒಮ್ಮೆ ಭೇಟಿ ನೀಡಿ.

ದಿನಕರ ಮೊಗೇರ said...

shivu sir,
dharavaaDada nimma anubhava kathana odi nanagu nanna allina dinagaLa nenapaayitu...

tumbaa chennaagi vivaraNe koTTIddiraa....

ಭಾಶೇ said...

chennagide!!

Dharawada sundara! haage irali bhagavantha...!!!

ತೇಜಸ್ವಿನಿ ಹೆಗಡೆ said...

ಮತ್ತೊಮ್ಮೆ ಅಭಿನಂದನೆಗಳು. ವಿವರಣೆಯನ್ನು ಚಿತ್ರಗಳ ಮೂಲಕ ಚೆನ್ನಾಗಿ ನೀಡಿದ್ದೀರಿ. ಆದರೆ ಕಾರ್ಯಕ್ರಮದ ಬಗ್ಗೆ ತೀರಾ ಕ್ಲುಪ್ತವಾಗಿ ವಿವರಿಸಿದ್ದೀರಿ. ಕಾರ್ಯಕ್ರಮದಲ್ಲಿ ಪುಸ್ತಕಗಳ ವಿಮರ್ಶೆ, ವಿವರಣೆಗಳನ್ನು ಯಾರು ಹೇಗೆ ನೀಡಿದರು... ಅವರ ಅಭಿಪ್ರಾಯಗಳೇನಾಗಿದ್ದವು ಎಂಬುದನ್ನೂ ಸ್ವಲ್ಪ ವಿವರವಾಗಿ ನೀಡಿದ್ದರೆ ಚೆನ್ನಾಗಿತ್ತು. ಪುಸ್ತಕಗಳ ಪರಿಚಯ ಮತ್ತೂ ಚೆನ್ನಾಗಿ ಆಗುತ್ತಿತ್ತು.

ಧನ್ಯವಾದಗಳು.

Gubbachchi Sathish said...

ಧಾರವಾಡದ ಮನಸ್ಸಿನ ಪರಿಚಯ ಸಚಿತ್ರಗಳೊಂದಿಗೆ ಚೆನ್ನಾಗಿದೆ.

b.saleem said...

ಶಿವು ಸರ್,
ನಿವು ಧಾರವಾಡ ರಾತ್ರಿ ೧೦ ಗಂಟೆಗೆ ಮುಟ್ಟಿದಾಗ ಊಟ ಸಿಗೊ ಬಗ್ಗೆ ನನಗೆ ಸಂಶಯವಿತ್ತು. ಆದ್ರೆ ಊಟ ಸಿಕ್ಕು ನಿಮಗೆ ಒಳ್ಳೆಯ ಅನುಭವ ಆಗಿದೆ. ಪುಸ್ತಕಕ್ಕೆ ಬಂದ ಪ್ರಶಸ್ತಿ ನನಗೆ ಬಂದಷ್ಟೆ ಖುಷಿಯಾಗಿತ್ತು. ಪುಸ್ತಕದ ಬಗ್ಗೆ ಹಿರಿಯರು ಮಾತು, ನಿಮ್ಮ ಮಾತಿನಲ್ಲಿ ಪುಸ್ತಕವನ್ನು ವೆಂಡರಗಳಿಗೆ ಅರ್ಪೀಸಿರುವುದನ್ನು ಹೇಳಿದಾಗ ಸಭೆಯಲ್ಲಿ ಮೂಡಿದ ಹರ್ಷ ಎಲ್ಲವೂ ಅದ್ಬುತವಗಿತ್ತು.ಮತ್ತೆ ಧಾರವಾಡದ ಮುಂಜಾನೆ ಅಲ್ಲಿಯ ಪರಿಸರ ನಿಮ್ಮ್ ಫೋಟೊಗಳಿಂದ ಮತ್ತೆ ಮತ್ತೆ ನೆನಪಿಸುತ್ತೆ...........

shravana said...

ಚೆನ್ನಾಗಿದೆ ಆ ದಿನದ ಮೆಲುಕು.. ಚಿತ್ರಗಳು ತುಂಬಾನೆ ಸುಂದರವಾಗಿವೆ..:)

V.R.BHAT said...

ಧಾರವಾಡ ಒಂದುಕಾಲಕ್ಕೆ ಧಾರಾನಗರಿ ಎಂದೇ ಖ್ಯಾತವಾದದ್ದು.ಕಾಳೀದಾಸನ ಮಿತ್ರ ಭೋಜರಾಜನ ಆಡಳಿತ ಇಲ್ಲಿತ್ತು ಎಂದೂ ಹೇಳುತ್ತಾರೆ! ಧಾರವಾಡ ವಿದ್ಯಾಕೇಂದ್ರ. ಮೈಸೂರಿಗರಂತೇ ಧಾರವಾಡದ ಜನ ಬಹಳ ಸುಸಂಸ್ಕೃತರು, ಸಭ್ಯರು, ನಿಸ್ಪೃಹರು. ತಮಗಿಲ್ಲದಿದ್ದರೂ ಎತ್ತಿಕೊಡುವ ಧಾರಾಳತನ ಅವರಲ್ಲಿದೆ. ನಾನೂ ಧಾರವಾಡದಲ್ಲಿ ಇದ್ದೆ. ಅಲ್ಲಿನ ಆಡು ಭಾಷೆ ಕೂಡ ನನಗೆ ಬರುತ್ತದೆ. ಅಲ್ಲಿರುವಾಗಿನ ದಿನಗಳು ಅವಿಸ್ಮರಣೀಯ. ವಿಶ್ವವಿದ್ಯಾನಿಲಯ, ಕಿತ್ತೊರು ಚೆನ್ನಮ್ಮ ಪಾರ್ಕ್ ಹೀಗೇ ಹಲವು ಪ್ರದೇಶಗಳಲ್ಲಿ ಓಡಾಡಿದ್ದು ನೆನಪಿದೆ. ಕೆಲಕಾಲ ನಾನು ಅಲ್ಲಿಯೇ ಕೆಲಸಮಾಡಿದ್ದೆ. ನಿಮ್ಮ ಅನುಭವ ಚೆನ್ನಾಗಿದೆ, ಆದ್ರೆ ಚಿತ್ರಗಳು ಅಷ್ಟು ಸರಿಯಾಗಿ ಬರಲಿಲ್ಲ. ವರಕವಿ ಬೇಂದ್ರೆ "ಹೂಬಳ್ಳಿಯ ಹೂ ಧಾರವಾಡದ ದಾರ ಅಂಬಿಕಾತನಯದತ್ತ ಸೂಜಿ " ಎನ್ನುತ್ತಿದ್ದರಂತೆ. ಬೇಂದ್ರೆಯವರ ಮನೆಯ ಬಾಗಿಲವರೆಗೂ ಹೋಗಿ ಬಂದಿದ್ದೇನೆ. ಎಲ್ಲವೂ ಮನದಲ್ಲಿ ಹಸಿರು ಹಸಿರು, ನಿಮಗೆ ಶುಭಕೋರುತ್ತೇನೆ

ಸುಧೇಶ್ ಶೆಟ್ಟಿ said...

naanu dhaarawaadakke ondhu sala hogidde... avellavannu nenapisidavu nimma baraha... thumba chennagittu...

innashtu vivaragaLiddare chennagiruttittu antha anisitu...!

ಕ್ಷಣ... ಚಿಂತನೆ... said...

ಸರ್‍, ಚಿತ್ರ ಮತ್ತು ಧಾರವಾಡದಲ್ಲಿನ ಅನುಭವಗಳ ಬರಹ ಚೆನ್ನಾಗಿದೆ. ನಾವೂ ಒಮ್ಮೆಯಾದರೂ ಭೇಟಿಕೊಡೋಣವೆನಿಸಿದೆ.
ಧನ್ಯವಾದಗಳು.

ಬಾಲು said...

ನೀವು ಪ್ರವಾಸ ಕಥನ ವನ್ನು ಚೆನ್ನಾಗಿ ಬರೆದಿದ್ದೀರಿ, ಇದನ್ನು ಓದಿ ನನಗೆ ಕಾರಂತರ ಪಶ್ಚಿಮದ ಪ್ರವಾಸ ಕಥನ ನೆನಪಿಗೆ ಬಂತು. ಊರು, ಅಲ್ಲಿನ ಜನ, ಅಲ್ಲಿನ ಜೀವನ ಪದ್ಧತಿ ಕೊನೆಗೆ ಅಲ್ಲಿನ ಊಟದ ವಿಚಾರ ಕೂಡ ಮನ ಮುಟ್ಟುವ ಹಾಗೆ ವರ್ಣಿಸಿದ್ದೀರಿ.

ಬರಹ ತುಂಬಾ ಮೆಚ್ಚುಗೆ ಆಯಿತು. (ಫೋಟೋ ಗಳೂ ಕೂಡ )

shivu.k said...

ನಿವೇದಿತ ಮೇಡಮ್,

ನಿಮ್ಮ ಊರು ತುಂಬಾ ಇಷ್ಟವಾಯ್ತು. ಸಮಯ ಸಿಕ್ಕಾಗಲೆಲ್ಲಾ ಅಲ್ಲಿಗೆ ಬರುವ ಆಸೆ.

ಧನ್ಯವಾದಗಳು.

shivu.k said...

ಅಜಾದ್,

ನಮ್ಮ ಪ್ರವಾಸ ಕಥನದ ಮೊದಲ ಪೋಸ್ಟ್ ಇದನ್ನು ಹಾಕಬೇಕೆನಿಸಿದರೂ ಇದನ್ನು ಮೊದಲು ಬರೆದಿರಲಿಲ್ಲವಲ್ಲ...ಮೊದಲು ಫೋಟೊಗಳನ್ನು ಹಾಕಿದ್ದು ಅದಕ್ಕಾಗಿ. ಮತ್ತೆ ನನ್ನ ಗುಬ್ಬಿ ಎಂಜಲು ಪುಸ್ತಕವನ್ನು ಮತ್ತೆ ಇಲ್ಲಿಗೆ ಕಳಿಸಲು ಸಾಧ್ಯವಿಲ್ಲ. ಏಕೆಂದರೆ ಒಮ್ಮೆ ಬಹುಮಾನ ಪಡೆದವರಿಗೆ ಮುಂದಿನ ಮೂರು ವರ್ಷ ಇಲ್ಲಿ ಬಹುಮಾನ ಕೊಡುವುದಿಲ್ಲವಂತೆ. ಆಗಾಗಿ ನಾನು ಗುಬ್ಬಿ ಎಂಜಲು ಪುಸ್ತಕಕ್ಕಿಂತ ನಿಮ್ಮ ಜಲನಯನವನ್ನು ಕಳಿಸುತ್ತೇನೆ. ನಿಮಗೆ ಬಹುಮಾನ ಬಂದು ನೀವು ಧಾರವಾಡಕ್ಕೆ ಬರುವಂತಾಗಲಿ. ಅದರಿಂದ ಮತ್ತೊಂದು ಬ್ಲಾಗ್ ಬರಹಕ್ಕೆ ಬಹುಮಾನ ಬರಲಿ ಎಂದು ಆಶಿಸುತ್ತೇನೆ.

ಧನ್ಯವಾದಗಳು.

shivu.k said...

ಸೀತಾರಾಂ ಸರ್,

ನನ್ನ ಲೇಖನದಿಂದಾಗಿ ನಿಮಗೆ ಧಾರವಾಡ ಜೀವನದ ಅದ್ಬುತ ಕ್ಷಣಗಳು ಮರುಕಳಿಸಿದ್ದು ನನಗೂ ಖುಷಿ. ಮತ್ತೆ ನಿಮ್ಮ ಧಾರವಾಡ ಹೇಗಿತ್ತೋ ನನಗೆ ಗೊತ್ತಿಲ್ಲ. ಆದ್ರೆ ನನಗೆ ಸಿಕ್ಕಾ ಒಂದು ದಿನದಲ್ಲಿ ಸಾಧ್ಯವಾದಷ್ಟು ಫೋಟೊಗಳನ್ನು ಕ್ಲಿಕ್ಕಿಸಿದ್ದೇನೆ.

ಧನ್ಯವಾದಗಳು.

shivu.k said...

ಬಾಲು ಸರ್,

ಧಾರವಾಡದ ಅನುಭವದಲ್ಲಿ ಅಲ್ಲಿನ ಪೇಡವನ್ನು ಸವಿದಿದ್ದೇನೆ. ಇದ್ದ ಒಂದು ದಿನದಲ್ಲಿ ಸಾಧನಕೇರಿಗೆ ಹೋಗಲಾಗಲಿಲ್ಲ. ಮುಂದಿನ ಭಾರಿ ಹೋದಾಗ ಮೂರು ನಾಲ್ಕು ದಿನವಿದ್ದು ಸಾಧ್ಯವಾದಷ್ಟು ಮುದ್ದಾದ ಚಿತ್ರಗಳನ್ನು ತೆಗೆಯಲು ಪ್ರಯತ್ನಿಸುತ್ತೇನೆ. ಮತ್ತೆ ನಿಮಗೂ ದೀಪಾವಳಿಯ ಶುಭಾಶಯಗಳು.

shivu.k said...

ಉಮೇಶ್ ದೇಸಾಯ್ ಸರ್,

ಧಾರವಾಡ ನನಗೆ ಮಾತ್ರವಲ್ಲ. ಎಲ್ಲರಿಗೂ ಇಷ್ಟವಾಗುತ್ತದೆ. ಏಕೆಂದರೆ ಅದಿನ್ನು ಕಲುಶಿತವಾಗಿಲ್ಲ. ಶಾಂತವಾಗಿದೆ. ಮತ್ತೆ ನಾನು ತಡವಾಗಿ ಹೋದರೂ ಊಟ ಕೊನೆಗೂ ಸಿಕ್ಕಿತು. ಹಾಗೆ ಕೆಲಸದ ಒತ್ತಡದಿಂದಾಗಿ ನಾನು ಯಾರಬ್ಲಾಗಿಗೂ ಹೋಗಲಾಗಿಲ್ಲ. ಈಗ ಬಿಡುವು ಮಾಡಿಕೊಂಡು ಎಲ್ಲರ ಬ್ಲಾಗುಗಳನ್ನು ಓದುತ್ತಿದ್ದೇನೆ. ನಿಮ್ಮ ಬ್ಲಾಗನ್ನು ಓದಿದ್ದೇನೆ.
ಧನ್ಯವಾದಗಳು.

shivu.k said...

ಪ್ರಭಾಮಣಿ ನಾಗರಾಜ್,

ನೀವು ನನ್ನ ಬ್ಲಾಗಿಗೆ ಬಂದು ಸುನಾಥ್ ಅಂದಿದ್ದೀರಿ. ನನ್ನ ಹೆಸರು ಶಿವು ಅಂತ. ಧಾರವಾಡದ ಅನುಭವವನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್. ಖಂಡಿತ ನಿಮ್ಮ ಬ್ಲಾಗಿಗೆ ಬೇಟಿಕೊಡುತ್ತೇನೆ.

shivu.k said...

ದಿನಕರ್ ಸರ್,

ನನ್ನ ಧಾರವಾಡ ಅನುಭವ ನಿಮ್ಮ ಅನುಭವವನ್ನು ಮರುಕಳಿಸಿದ್ದು ಸಂತೋಷ. ಇದೊಂತರ ಕೊಕ್ಕೊ ಆಟದಲ್ಲಿ ಕೊಕ್ ಕೊಟ್ಟಂತೆ ಅನುಭವಗಳ ಕೊಕ್ ಕೊಟ್ಟಂತೆ. ಲೇಖನ ಮೆಚ್ಚಿದ್ದಕ್ಕೆ ಥ್ಯಾಂಕ್ಸ್.

shivu.k said...

ಭಾಶೇ,

ಧಾರವಾಡ ಸುಂದರ..ಸತ್ಯ. ಆ ಸತ್ಯ ಎಲ್ಲರ ಕಣ್ಣು ಕುಕ್ಕದಿರಲಿ..ಎನ್ನುವ ನಿಮ್ಮ ಆಶಯವೇ ನನ್ನದೂ ಕೂಡ...

ಧನ್ಯವಾದಗಳು.

shivu.k said...

ತೇಜಸ್ವಿನಿ ಮೇಡಮ್,

ಧಾರವಾಡ ಅನುಭವವನ್ನು ಬರೆಯವಾಗ ಬೇಕಂತಲೇ ಕಾರ್ಯಕ್ರಮದ ವಿವರವನ್ನು ಹಾಕಿಲ್ಲ. ಏಕೆಂದರೆ ನನ್ನ ಗೆಳೆಯ ಸಲೀಂ ಕಾರ್ಯಕ್ರಮದ ವಿಡಿಯೋ ತೆಗೆದಿರುವುದರಿಂದ ಅದನ್ನು ಬ್ಲಾಗಿನಲ್ಲಿ ಹಾಕುವವನಿದ್ದೇನೆ. ಅಲ್ಲಿಯವರೆಗೆ ದಯವಿಟ್ಟು ಕಾಯಿರಿ. ಪುಸ್ತಕಗಳ ಪರಿಚಯ ಅವಲೋಖನ, ಇತ್ಯಾದಿಗಳನ್ನು ಬರಹಕ್ಕಿಂತ ವಿಡಿಯೋ ಚೆಂದವೆಂದು ನನ್ನ ಭಾವನೆ.
ನಿಮ್ಮ ಅಭಿನಂದನಗೆ ಧನ್ಯವಾದಗಳು.

shivu.k said...

ಗುಬ್ಬಚ್ಚಿ ಸತೀಶ್

ಥ್ಯಾಂಕ್ಸ್.

shivu.k said...

ಸಲೀಂ,

ಧಾರವಾಡ ಸೇರುವ ಮೊದಲು ರಾತ್ರಿ ಹತ್ತು ಗಂಟೆಗೆ ನಿಮಗೆ ಫೋನ್ ಮಾಡಿದಾಗ ಅಲ್ಲಿ ಊಟ ಸಿಗುತ್ತೆ ತೊಂದರೆಯಿಲ್ಲ ಎಂದಿದ್ದಿರಿ. ಆದ್ರೆ ನಾನು ಹೋಗುವ ಹೊತ್ತಿಗೆ ಎಲ್ಲಾ ಬಾಗಿಲು ಮುಚ್ಚಿತ್ತು. ಆದ್ರೂ ನಿಮ್ಮ ಮಾತಿನಂತೆ ಊಟ ಸಿಕ್ಕಿತ್ತು.
ಮತ್ತೆ ನನಗಾಗಿ ನನ್ನ ಪುಸ್ತಕಕ್ಕಾಗಿ ನೀವು ದೂರದ ಮುಂಡರಗಿಯಿಂದ ಬಂದು ಫೋಟೊ ಮತ್ತು ವಿಡಿಯೋ ತೆಗೆದುಕೊಟ್ಟಿದ್ದಕ್ಕೆ ನಾನು ಅಭಾರಿಯಾಗಿದ್ದೇನೆ. ನನ್ನ ಬಹುಮಾನಕ್ಕಿಂತ ನಿಮ್ಮ ಅಭಿಮಾನ ದೊಡ್ಡದೆಂದು ನನ್ನ ಭಾವನೆ. ನನ್ನ ಜೊತೆ ನೀವು ಮತ್ತು ಇಂದ್ರಕುಮಾರ ಧಾರವಾಡ ವಿಶ್ವವಿದ್ಯಾಲಯದಲ್ಲಿ ಜೊತೆಗೆ ಓಡಾಡಿದ್ದು ನನಗೆ ಮರೆಯಲಾಗದ ಅನುಭವ.
ಮತ್ತೊಮ್ಮೆ ಧನ್ಯವಾದಗಳು.

shivu.k said...
This comment has been removed by the author.
shivu.k said...

Sravana,

ನನ್ನ ಬ್ಲಾಗಿಗೆ ಸ್ವಾಗತ. ಧಾರವಾಡದ ಮೆಲುಕು ಮೆಚ್ಚಿದ್ದಕ್ಕೆ ಥ್ಯಾಂಕ್ಸ್.

shivu.k said...

ವಿ.ಅರ್ ಭಟ್ ಸರ್,

ಧಾರವಾಡ ಖಂಡಿತ ಮೈಸೂರಿನಂತೆ ಸುಸಂಸ್ಕೃತ. ಇನ್ನೂ ಮುಗ್ದತೆಯಿದೆ. ಹೊರಗಿನವರನ್ನು ಪ್ರೀತಿಯಿಂದ ಮಾತಾಡಿಸುತ್ತಾರೆ. ಮತ್ತೆ ಅಲ್ಲಿ ಹುಡುಗರು ಅಥವ ಹುಡುಗಿಯರು ಬೆಂಗಳೂರಿನವರಂತೆ ಆರ್ಟಿಫಿಷಿಯಲ್ ಆಗಿ ಇರುವುದಿಲ್ಲವಾದ್ದರಿಂದ ಇಷ್ಟವಾಗುತ್ತಾರೆ.
ನಿಮಗೆ ಧಾರವಾಡ ಭಾಷೆ ಬರುವ ವಿಚಾರ ಒಳ್ಳೆಯದು. ನಿಮ್ಮ ಧಾರವಾಡ ಅನುಭವವನ್ನು ಬರೆಯಿರಿ. ಬೇಂದ್ರೆಯವರ ಸಾಧನ ಕೇರಿಗೆ ಹೋಗಲು ಸಮಯಭಾವವಿದ್ದರಿಂದ ಅದರ ಬಗ್ಗೆ ಫೋಟೊ ಅಥವ ಬರಹವಿಲ್ಲ. ಮತ್ತೆ ಇದ್ದ ಒಂದು ದಿನದಲ್ಲಿ ಸಿಕ್ಕ ಫೋಟೊಗಳಿವು. ಜೊತೆಗೆ ನಾನು ಕಾರ್ಯಕ್ರಮದಲ್ಲಿ ಭಾಗವಹಿಸಬೇಕಾದ್ದರಿಂದ ಕ್ಯಾಮೆರ ಹೆಚ್ಚಾಗಿ ಹಿಡಿದಿರಲಿಲ್ಲ. ಮುಂದೆ ಹೋದಾಗ ಒಂದೆರಡು ದಿನ ಹೆಚ್ಚು ಇದ್ದು ಸೊಗಸಾದ ಧಾರವಾಡ ಫೋಟೊ ತೆಗೆಯಲು ಪ್ರಯತ್ನಿಸುತ್ತೇನೆ.
ನಿಮ್ಮ ನೇರ ಅಭಿಪ್ರಾಯ ಇಷ್ಟವಾಯಿತು. ಧನ್ಯವಾದಗಳು.

shivu.k said...

ಸುಧೇಶ್,

ನೀವು ಧಾರವಾಡಕ್ಕೆ ಹೋಗಿದ್ದ ಅನುಭವ ಬರೆಯಿರಿ. ಸದ್ಯ ನೀನಡೆವ ದಾರಿಯಲ್ಲಿ ಸಿಕ್ಕಿಕೊಂಡಿರುವುದರಿಂದ ನಡುವೆ ಒಂದು ರಿಲ್ಯಾಕ್ಸ್ ಗಾಗಿ ಇಂಥ ಅನುಭವವನ್ನು ಬರೆದರೆ ಚೆನ್ನಾಗಿರುತ್ತದೆ.
ಮತ್ತೆ ಇನ್ನಷ್ಟು ವಿವರವನ್ನು ಕೊಟ್ಟರೆ ಬ್ಲಾಗ್ ಲೇಖನ ತುಂಬಾ ದೊಡ್ಡದಾಗಿ ಬೋರ್ ಆಗಿಬಿಡಬಹುದು ಅಂದುಕೊಂಡು ಚಿಕ್ಕದು ಮಾಡಿದ್ದೇನೆ.
ಮುಂದಿನ ಭಾರಿ ವಿಡಿಯೋ ಹಾಕಿದಾಗ ನಿಮಗೆ ಮತ್ತಷ್ಟು ಕಾರ್ಯಕ್ರಮದ ವಿವರ ಸಿಗಬಹುದು..
ಧನ್ಯವಾದಗಳು.

shivu.k said...

ಚಂದ್ರು ಸರ್,

ನೀವು ಒಮ್ಮೆ ಧಾರವಾಡಕ್ಕೆ ಬೇಟಿಕೊಡಿ. ಚೆನ್ನಾಗಿರುತ್ತದೆ. ಮತ್ತೆ ಚಿತ್ರ ಮತ್ತು ಲೇಖನವನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್.

shivu.k said...

ಬಾಲುರವರೆ,
ಅಪರೂಪಕ್ಕೆ ಬ್ಲಾಗಿಗೆ ಬಂದಿದ್ದೀರಿ ಥ್ಯಾಂಕ್ಸ್. ಮತ್ತೆ ನನ್ನ ಲೇಖನದಿಂದಾಗಿ ನಿಮಗೆ ಕಾರಂತ ಬರಹ ನೆನಪಾಗಿದ್ದು ನನ್ನ ಬರಹ ಸಾರ್ಥಕವೆನಿಸುತ್ತದೆ. ಬರಹ ಮತ್ತು ಚಿತ್ರಗಳನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್.