Sunday, September 29, 2013

ಕೊಲ್ಕತ್ತ-ದಿಘಾ ನಾಲ್ಕು ದಿನದ ಪ್ರವಾಸ (ಭಾಗ 2)

[ಮೊದಲ ಭಾಗಕ್ಕಾಗಿ ಈ ಲಿಂಕ್ ಕ್ಲಿಕ್ಕಿಸಿ.]
.http://chaayakannadi.blogspot.in/2013/09/blog-post.html

    ಮೊದಲ ಭಾರಿಗೆ ಅಲ್ಲಿನ ಲೋಕಲ್ ರೈಲು ನಿಲ್ದಾಣದೊಳಗೆ ಕಾಲಿಟ್ಟಿದ್ದೆ. ಎಷ್ಟೊಂದು ಜನ ಅಂತೀರಿ! ನೂರಾರು ಸಾವಿರಾರು ಜನರು ತಮ್ಮ ಕೆಲಸ ಕಾರ್ಯಗಳಿಗೆ ಸಿದ್ದರಾಗಿ ಬರುವ ರೈಲುಗಾಡಿಗಳಿಗೆ ಕಾಯುತ್ತಿದ್ದರು. ಆ ಕ್ಷಣದಲ್ಲಿ ಮಲ್ಲೇಶ್ವರಂ ರೈಲು ನಿಲ್ದಾಣ ನೆನಪಾಯ್ತು. ಸದಾ ಶಾಂತವಾಗಿರುವ ನಮ್ಮ ಮಲ್ಲೇಶ್ವರಂ ರೈಲು ನಿಲ್ದಾಣವೆಲ್ಲಿ! ಗಿಜಿಗುಟ್ಟುವ ಈ ನಿಲ್ದಾಣವೆಲ್ಲಿ! ಖಂಡಿತ ಹೋಲಿಸಕೊಳ್ಳಬಾರದು ಸುಮ್ಮನೆ ಇಲ್ಲಿನ ದೃಶ್ಯಗಳನ್ನು ಕಣ್ತುಂಬಿಕೊಳ್ಳುತ್ತಾ ಆಸ್ವಾದಿಸಬೇಕೆಂದುಕೊಂಡು ಅಭಿಜಿತ್ ಡೆ ಮತ್ತು ಇತರರೊಂದಿಗೆ ನಾನು ರೈಲು ನಿಲ್ದಾಣದ ಪ್ಲಾಟ್ ಫಾರಂ ಕಡೆಗೆ ನಡೆದೆ. ಆಗಲೇ ಒಂದು ರೈಲು ಬಂದು ನಿಂತಿತ್ತು. ನಾನು ಈ ರೈಲು ಹತ್ತೋಣವೇ ಎಂದು ಕೇಳಿದರೆ ಅಭಿಜಿತ್ ಬೇಡ ತುಂಬಾ ರಷ್ ಇದೆ. ಎಂದರು. ನಾನು ಒಳಗೆ ಇಣುಕಿ ನೋಡಿದೆ. ಆಶ್ಚರ್ಯವಾಯ್ತು. ಒಂದೊಂದು ಬೋಗಿಯಲ್ಲೂ ಕಡಿಮೆಯೆಂದರೆ ಮುನ್ನೂರಕ್ಕೂ ಹೆಚ್ಚು ಪ್ರಯಾಣಿಕರಿದ್ದರು. ನಿಲ್ಲಲು ಜಾಗವಿಲ್ಲದಷ್ಟು ತುಂಬಿಹೋಗಿತ್ತು. "ಶಿವು, ಚಿಂತಿಸಬೇಡಿ, ಇದು ಹೊರಟ ನಂತರ ಹತ್ತು ನಿಮಿಷಕ್ಕೆ ಮತ್ತೊಂದು ರೈಲು ಬರುತ್ತದೆ ಅದರಲ್ಲಿ ಹೋಗೋಣ ಎಂದರು. ಆ ರೈಲು ತುಂಬಿದ ಬಸುರಿಯಂತೆ ಸಾವಿರಾರು ಪ್ರಯಾಣಿಕರನ್ನು ಹೊತ್ತು ಹೊರಟಿತು. ನನ್ನಪಕ್ಕದಲ್ಲಿಯೇ ಒಬ್ಬ ಶೂ ಪಾಲೀಶ್ ಮಾಡುವವ ಒಬ್ಬ ಅಧಿಕಾರಿಗೆ ಪಾಲೀಶ್ ಮಾಡುತ್ತಿದ್ದ, ಪಕ್ಕದಲ್ಲಿ ಒಬ್ಬ ಹಣ್ಣು ಮಾರುತ್ತಿದ್ದ, ದೂರದಲ್ಲಿ ಕಾಲೇಜು ಹುಡುಗಿ ತನ್ನ ಮೊಬೈಲ್ ಫೋನಿನಲ್ಲಿ ಮಗ್ನನಾಗಿದ್ದಳು. ಪಕ್ಕದಲ್ಲಿಯೇ ವಯಸ್ಸಾದವರೊಬ್ಬರು ಕನ್ನಡ ಸರಿಮಾಡಿಕೊಳ್ಳುತ್ತಿದ್ದರು. ಹೀಗೆ ತರಾವರಿ ದೃಶ್ಯಗಳನ್ನು ನೋಡುತ್ತಾ ಅವುಗಳೆಲ್ಲದರ ಫೋಟೊ ತೆಗೆಯುತ್ತಿದ್ದಂತೆ ದೂರದಲ್ಲಿ ಮತ್ತೊಂದು ರೈಲು ಹಾರ್ನ್ ಮಾಡುತ್ತ ಬರುತ್ತಿತ್ತು. ’ಶಿವು, ನಿಮ್ಮ ಕ್ಯಾಮೆರ ಆಫ್ ಮಾಡಿ ನಿಮ್ಮ ಲಗ್ಗೇಜು ನನ್ನ ಕೈಲಿ ಕೊಡಿ, ಆ ರೈಲು ನಿಲ್ಲುತ್ತಿದ್ದಂತೆ ಮೊದಲು ಒಳಗೆ ಹೋಗಿ ಸೀಟ್ ಹಿಡಿದು ಕುಳಿತುಕೊಳ್ಳಿ, ಒಂದು ಕ್ಷಣ ತಡವಾದರೂ ನಿಂತುಕೊಂಡೇ ಹೋಗಬೇಕು ಎಂದರು. ಅವರ ಮಾತಿನಂತೆ ನಾನು ಸಿದ್ದನಾದೆ. ಆ ರೈಲು ನಿಲ್ಲುತ್ತಿದ್ದಂತೆ ಒಂದೇ ಸಮನೆ ಜನ ನುಗ್ಗಿದರು. ನಾನು ಕೂಡ ಅವರೊಂದಿಗೆ ನುಗ್ಗಿ ಸೀಟ್ ಗಿಟ್ಟಿಸಿದ್ದೆ. ಆಷ್ಟರಲ್ಲಿ ನಮ್ಮ ಗೆಳೆಯರಲ್ಲೆರೂ ಬಂದು ಸೀಟು ಹಿಡಿದರು. ಸೀಟು ಸಿಕ್ಕಿತ್ತಲ್ಲ ಎಂದು ಖುಷಿ ಸ್ವಲ್ಪ ಹೊತ್ತಿಗೆ ಮರೆಯಾಯ್ತು. ಆ ಬೋಗಿಯೊಳಗೆ ಜನರು ಇನ್ನೂ ಬರುತ್ತಲೇ ಇದ್ದಾರೆ! ಕೊನೆಗೆ ಎರಡು ಸೀಟುಗಳ ನಡುವೆಯೂ ಹತ್ತಾರು ಜನರು ನಿಂತು ನಮಗೆ ಒಂದು ಕ್ಷಣವೂ ಅಲುಗಾಡಲು ಸಾಧ್ಯವಾಗದಂತೆ ಆಗಿಹೋಗಿತ್ತು. ಬಹುಶಃ ಈ ರೈಲುಗಾಡಿ ಹತ್ತಾರು ಬೋಗಿಗಳಲ್ಲಿ ಅದೆಷ್ಟು ಸಾವಿರಜನರಿರಬಹುದು ಎಂದುಕೊಂಡೆ. ಮೊದಲ ಭಾರಿಗೆ ಕೊಲ್ಕತ್ತದ ಲೋಕಲ್ ರೈಲಿನ ಅನುಭವವಾಗಿತ್ತು. ಕೊಲ್ಕತ್ತದಲ್ಲಿ ಪ್ರತಿಯೊಂದು ಸ್ಥಳಕ್ಕೂ ಲೋಕಲ್ ರೈಲು ಇದೆ. ಬೆಳಗಿನ ಮತ್ತು ಸಂಜೆ ಹೊತ್ತಿನಲ್ಲಿ ಐದು ಮತ್ತು ಹತ್ತು ನಿಮಿಷಕ್ಕೊಂದು ರೈಲು ಬರುತ್ತದೆ. ಅಷ್ಟು ರೈಲುಗಳಿದ್ದರೂ ಎಲ್ಲವೂ ತುಂಬಿಹೋಗುತ್ತವೆ. ಮಧ್ಯಾಹ್ನದ ಸಮಯದಲ್ಲಿ ಸ್ವಲ್ಪ ಕಡಿಮೆ ಇರುತ್ತದೆ. ಈ ರೈಲು ಪ್ರಯಾಣದ ದರವೂ ತುಂಬಾ ಕಡಿಮೆ ಇಪ್ಪತ್ತು-ಮುವತ್ತು ಕಿಲೋಮೀಟರ್ ದೂರಕ್ಕೆ ಕೇವಲ ಐದು-ಆರು ರೂಪಾಯಿಗಳು ಮಾತ್ರ. ಇಲ್ಲಿನ ಲಕ್ಷಾಂತರ ಜನರು ತಮ್ಮ ಉದ್ಯೋಗದ ಸ್ಥಳಗಳಿಗೆ ತಲುಪಲು ಈ ರೈಲುಗಳನ್ನೇ ಅವಲಂಬಿಸಿದ್ದಾರೆ. ನಮ್ಮ ರೈಲು ಹೊರಟಿತಲ್ಲ, ಕಿಟಕಿಬಳಿ ಸೀಟುಹಿಡಿದಿದ್ದ ನಾನು ಅಲ್ಲಿನ ದೃಶ್ಯಗಳನ್ನು ವಿಡಿಯೋ ಮತ್ತು ಫೋಟೊಗಳ ಮೂಲಕ ಸೆರೆಹಿಡಿಯುತ್ತಿದ್ದೆ. ಅಲ್ಲಿ ರೈಲು ಕಂಬಿಗಳ ನಡುವೆಯೇ ಬಟ್ಟೆಗಳನ್ನು ಒಣಗಿಸಲು ಹಾಕಿರುತ್ತಾರೆ ಅಕ್ಕಪಕ್ಕದ ಮನೆಯವರು. ಅವೆಲ್ಲವನ್ನು ಫೋಟೊ ಸೆರೆಹಿಡಿಯುತ್ತಾ, ಒಂದಾದ ಮೇಲೆ ಮೇಲೆ ಒಂದು ನಿಲ್ದಾಣಗಳು ಕೊನೆಗೆ ನಾವು ಇಳಿಯುವ ಸೆಲ್ಡಾ ರೈಲು ನಿಲ್ದಾಣ ಬಂತು. ಅಲ್ಲಿಂದ ಹೊರಬರುತ್ತಿದ್ದಂತೆ ಹೊರಗೆ ಮಳೆ ಸುರುವಾಗಿತ್ತು. ಪಕ್ಕದಲ್ಲಿಯೇ ಬಸ್ ನಿಲ್ದಾಣ ಅಲ್ಲಿಂದ ನಮ್ಮ ಪ್ರಯಾಣ ಹೌರ ರೈಲು ನಿಲ್ದಾಣದ ಕಡೆಗೆ ಅಲ್ಲಿನ ಲೋಕಲ್ ಬಸ್ ಹತ್ತಿದೆವು. ಮಳೆ ಜೋರಾಯ್ತು. ಕಿಟಕಿಯಲ್ಲಿ ಕಂಡ ಜೋರು ಮಳೆ ಅದರ ನಡುವೆ ಓಡಾಡುವ ಜನಗಳು, ಅಲ್ಲಲ್ಲಿ ಕುಳಿತು ಬಿಸಿ ಟೀ ಕುಡಿಯುವ ಜನ, ಮಳೆ ಜೋರಾಗಿ ರಸ್ತೆಗಳಲ್ಲಿ ನೀರು ಹರಿಯತೊಡಗಿತ್ತು. ನಾನು ಅವುಗಳ ಚಿತ್ರಗಳನ್ನು ಸೆರೆಯಿಡಿಯುತ್ತಿದ್ದಾಗಲೇ "ಶಿವು, ಮುಂದೆ ಹೌರ ಬ್ರಿಡ್ಜ್ ಬರುತ್ತದೆ. ಅದನ್ನು ವಿಡಿಯೋ ಮಾಡಿ" ಎಂದರು ಅಭಿಜಿತ್. ಮೊದಲ ಬಾರಿಗೆ ಎಂಬತ್ತು ವರ್ಷಗಳಷ್ಟು ಹಳೆಯದಾದ ಹೌರಾ ಬ್ರಿಡ್ಜ್‍ನೊಳಗೆ ಪ್ರಯಾಣಿಸಿದಾಗ ತುಂಬಾ ಖುಷಿಯಾಗಿತ್ತು. ಮುಂದೆ ಭಾರತದಲ್ಲಿ ಬಹುದೊಡ್ಡದೆನ್ನಬಹುದಾಗ ಹೌರ ರೈಲು ನಿಲ್ದಾಣ ತಲುಪಿದೆವು.
                             
   ಅಲ್ಲಿ ನಮಗಾಗಿ ಭಾರತದಲ್ಲಿಯೇ ದೊಡ್ಡ ಹೆಸರು ಮಾಡಿರುವ ಮಾಸ್ಟರ್ ಅಫ್ ಫೋಟೊಗ್ರಫಿ ಮನ್ನಣೆ ಪಡೆದಿರುವ ಬಿ.ಕೆ ಸಿನ್ಹ ಸರ್, ಸುಶಾಂತ ಬ್ಯಾನರ್ಜಿ, ಎಕ್ಸಲೆನ್ಸಿ ಅಫ್ ಫೋಟೊಗ್ರಫಿ ಮನ್ನಣೆ ಪಡೆದಿರುವ ಅಮಿತಾಬ್ ಸಿಲ್ ಸರ್, ಇನ್ನೂ ಅನೇಕ ದೊಡ್ಡ ಫೋಟೊಗ್ರಫಿ ಸಾಧಕರನ್ನು ಬೇಟಿಯಾಗಿದ್ದು ನನ್ನ ಬದುಕಿನ ಬಹುದೊಡ್ಡ ಮತ್ತು ಮರೆಯಲಾಗದ ಅನುಭವ. ಅವರೆಲ್ಲರ ಜೊತೆಯಲ್ಲಿ ನಾನು ಕೂಡ ಅಂತರರಾಷ್ಟ್ರೀಯ ಫೋಟೊಗ್ರಫಿ ಸ್ಪರ್ಧೆಯಲ್ಲಿ ಜ್ಯೂರಿಯಾಗಿದ್ದೇನೆನ್ನುವ ವಿಚಾರ ಆ ಕ್ಷಣದಲ್ಲಿ ಸ್ವಲ್ಪ ಸಂಕೋಚ ಮತ್ತು ಮುಜುಗರವುಂಟುಮಾಡಿತ್ತು.  ಆದ್ರೆ ಸ್ವಲ್ಪ ಹೊತ್ತಿಗೆ ಅವರೆಲ್ಲರೂ ನನಗೆ ತುಂಬಾ ಆತ್ಮೀಯರಾಗಿಬಿಟ್ಟಿದ್ದರಿಂದ ಮುಜುಗರ ಮಾಯವಾಯ್ತು.  ನಮಗಾಗಿ ದುರಂತೋ ಎಕ್ಸ್‍ಪ್ರೆಸ್ ರೈಲು ದಿಘಾ ಗೆ ಹೊರಡಲು ಕಾಯುತ್ತಿತ್ತು. ನಮಗಾಗಿ ಕಾಯ್ದಿರಿಸಿದ್ದ ಸೀಟುಗಳಲ್ಲಿ ಆಸೀನರಾದೆವು. ಲೋಕಲ್ ರೈಲಿನಲ್ಲಿ ಬಂದ ನನಗೆ ಈ ರೈಲು ಸಂಫೂರ್ಣ ವಿಭಿನ್ನವೆನಿಸಿತ್ತು. ನೂರತೊಂಬತ್ತು ಕಿಲೋಮೀಟರ್ ದೂರದ ಪ್ರಯಾಣದಲ್ಲಿ ಎಲ್ಲಿಯೂ ನಿಲ್ಲದೇ ಹೋಗುವ ಈ ರೈಲಿನಲ್ಲಿ ನಾವು ಕುಳಿತ ಜಾಗಕ್ಕೆ ಊಟ ತಿಂಡಿ ನೀರು ಇತ್ಯಾದಿ ಎಲ್ಲ ಸೇವೆಗಳನ್ನು ನೀಡುತ್ತಾರೆ ಈ ರೈಲಿನ ಪರಿಚಾರಕರು. ನನ್ನ ಪಕ್ಕದಲ್ಲಿ ದೇಬಸಿಸ್ ಬುನಿಯ ಕುಳಿತಿದ್ದರು. ಅವರೊಂದಿಗೆ ನಾನು ಬೆಂಗಳೂರು ಮತ್ತು ಕರ್ನಾಟಕದ ಪರಿಚಯ ಬೆಳವಣಿಗೆ, ರಾಜಕೀಯ ಹೀಗೆ ಇತ್ಯಾದಿ ವಿಚಾರಗಳನ್ನು ಹಂಚಿಕೊಂಡೆ.  ಅವರು ಬಂಗಾಲ ಮತ್ತು ಕೊಲ್ಕತ್ತ ನಗರದ ಇಂದಿನ ಪರಿಸ್ಥಿತಿ ಮತ್ತು ರಾಜಕೀಯ ವ್ಯವಸ್ಥೆ ಇತ್ಯಾದಿಗಳನ್ನು ಹಂಚಿಕೊಂಡರು. ಅಷ್ಟರಲ್ಲಿ ನಮ್ಮ ರೈಲಿಗೆ ಮೂವರು ಬಂದೂಕುಧಾರಿ ಗಾರ್ಡುಗಳು ಹತ್ತಿದರು. ನಾವು ಪಯಣಿಸುವ ಪೂರ್ವ ಮಿಡ್ನಪುರ ಜಿಲ್ಲೆಯಲ್ಲಿ ನಕ್ಸಲಿಯರ ಕಾಟವಿದೆ. ಅದಕ್ಕಾಗಿ ಈ ಸೆಕ್ಯುರಿಟಿ ಎಂದರು. ಮಧ್ಯಾಹ್ನ ಎರಡುವರೆಗೆ ಗಂಟೆಗೆ ನಾವು ಸಮುದ್ರ ಕಿನಾರೆಯ ದಿಘಾ ಪಟ್ಟಣವನ್ನು ತಲುಪಿದೆವು. 

   ದಿಘಾ ಒಂದು ಸಮುದ್ರ ಕಿನಾರೆಗೆ ಅಂಟಿಕೊಂಡಿರುವ ಪಶ್ಚಿಮ ಬಂಗಾಲದ ಪೂರ್ವ ಮಿಡ್ನಪುರ್‍ ಜಿಲ್ಲೆಯ ಒಂದು ಪುಟ್ಟ ಪಟ್ಟಣ. ಮಂಗಳೂರು ಉಡುಪಿಯಂತೆ ಸಮುದ್ರ ಮತ್ತು ಬೀಚುಗಳಿದ್ದರೂ ಅವುಗಳಷ್ಟು ದೊಡ್ಡ ನಗರವಲ್ಲ...ಬಹುಷಃ ನಮ್ಮ ಕುಂದಾಪುರದಷ್ಟಿರಬಹುದು. ಮೂರು ದಿನ ದಿಘದಲ್ಲಿ ನಡೆಯುವ ಅಂತರರಾಷ್ಟ್ರೀಯ ಫೋಟೊಗ್ರಫಿ ಸ್ಪರ್ಧೆಯ ಪ್ರಮುಖ ವ್ಯವಸ್ಥಾಪಕರಾದ ಸಂತೋಷ್ ಕುಮಾರ್ ಜನ ನಮಗಾಗಿ ಅಲ್ಲಿ ಕಾಯುತ್ತಿದ್ದರು. ನಮಗಾಗಿ ವ್ಯವಸ್ಥೆಯಾಗಿದ್ದ ಹೋಟಲ್ ರೂಮುಗಳಲ್ಲಿ ಸೇರ್‍ಇಕೊಂಡು ಸ್ವಲ್ಪ ವಿಶ್ರಾಂತಿ ತೆಗೆದುಕೊಂಡೆವು. ಸಂಜೆ ನಾಲ್ಕು ಗಂಟೆಯ ಹೊತ್ತಿಗೆ ಫೋಟೊಗ್ರಫಿ ಸ್ಪರ್ಧೆಯ ಜಡ್ಜಿಂಗ್ ಪ್ರಾರಂಭವಾಗಿ ರಾತ್ರಿ ಹತ್ತು ಗಂಟೆ ಮುಗಿಯಿತು. ಮರುದಿನ ಬೆಳಿಗ್ಗೆ ಒಂಬತ್ತು ಗಂಟೆಗೆ ಪ್ರಾರಂಭವಾಗಿ ಮಧ್ಯಾಹ್ನ ಎರಡು ಗಂಟೆಗೆ, ನಂತರ ಲಂಚ್ ಬ್ರೇಕ್ ಹಾಗೂ ಸ್ವಲ್ಪ ವಿಶ್ರಾಂತಿ, ಮತ್ತೆ ನಾಲ್ಕು ಗಂಟೆ ಪ್ರಾರಂಭವಾಗಿ ರಾತ್ರಿ ಒಂಬತ್ತು ಗಂಟೆಗೆ...ಮರುದಿನ ಬೆಳಿಗ್ಗೆ ಒಂಬತ್ತು ಗಂಟೆಯಿಂದ ಒಂದು ಗಂಟೆಯವರೆಗೆ ಹೀಗೆ ಮೂರು ದಿನ ಸತತವಾಗಿ ಮೂರು ವಿಭಾಗಗಳ ಒಂಬತ್ತು ಸಾವಿರ ಫೋಟೊಗಳನ್ನು ನೋಡಿ ಅತ್ಯುತ್ತುಮವಾದವುಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆಯಂತೂ ಅದ್ಬುತವಾದ ಅನುಭವವನ್ನು ನೀಡಿತ್ತು. 

ಪೂರ್ವ ಮಿಡ್ನಪುರದಲ್ಲಿರುವ ಒಂದು ಪುಟ್ಟ ಹಳ್ಳಿಯಲ್ಲಿರುವ ಸಂತೋಷ್ ಕುಮಾರ್ ಜನ ನನ್ನಂತೆ ಮದುವೆ ಫೋಟೊಗ್ರಫಿ ಮತ್ತು ವಿಡಿಯೋಗ್ರಫಿ ಮಾಡುವಂತವರು. ತಕ್ಷಣಕ್ಕೆ ನೋಡಿದರೆ ಒಬ್ಬ ಪಕ್ಕಾ ಹಳ್ಳಿ ಹೈದನಂತೆ ಕಾಣುತ್ತಾರೆ. ಮತ್ತು ಹಾಗೆ ಸರಳವಾಗಿ ಸಹಜವಾಗಿ ಇರುವಂತವರು. ಹೀಗಿದ್ದು ಇವರು ಮಾಡಿರುವ ಫೋಟೊಗ್ರಫಿ ಸಾಧನೆ ನಿಜಕ್ಕೂ ದೊಡ್ಡದು. ದೇಶವಿದೇಶಗಳಲ್ಲಿ ಇವರ ಚಿತ್ರಗಳು ಪ್ರದರ್ಶನವಾಗಿವೆ. ಕಳೆದ ಹದಿನೈದು ವರ್ಷಗಳಿಂದ ನೂರಾರು ರಾಷ್ಟ್ರೀಯ ಮತ್ತು ಅಂತರ ರಾಷ್ಟ್ರೀಯ ಪ್ರಶಸ್ತಿಗಳನ್ನು, ಚಿನ್ನದ ಪದಕಗಳನ್ನು ಗಳಿಸಿರುವ ಇವರು ಪೂರ್ವ ಮಿಡ್ನಪುರದಲ್ಲಿ ಒಂದು ಫೋಟೊಗ್ರಫಿ  ಕ್ಲಬ್ ಸದಸ್ಯರು. ಈ ಕ್ಲಬ್ ಮೂಲಕ ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಸ್ಪರ್ಧೆಗಳನ್ನು ಏರ್ಪಡಿಸಿದ್ದಾರೆ ಮತ್ತು ಯಶಸ್ವಿಯಾಗಿದ್ದಾರೆ. ರಾಷ್ಟ್ರಮಟ್ಟದ್ ಸ್ಪರ್ಧೆ ನಡೆಸುವುದು ತುಂಬಾ ಕಷ್ಟಕರವಾಗಿರುವಾಗ, ಇನ್ನೂ ಅಂತರರಾಷ್ಟ್ರೀಯ ಮಟ್ಟದ ಫೋಟೊಗ್ರಫಿ ಸ್ಪರ್ಧೆ ಅದರಲ್ಲೂ ಫೋಟೊಗ್ರಫಿ ಸರ್ಕ್ಯುಟುಗಳನ್ನು ನಡೆಸುತ್ತಾ ವಿಶ್ವದಾದ್ಯಂತ ಇರುವ ಛಾಯಾಕಲಾವಿದರ ಜೊತೆ ತಾಂತ್ರಿಕವಾಗಿ ಸಂಪರ್ಕವಿಟ್ಟುಕೊಳ್ಳುತ್ತಾ ಮುಂದುವರಿಯುವ ಇಂಥ ಸ್ಪರ್ಧೆಗಳನ್ನು ಆಯೋಜಿಸಲು ನಡೆಸಬೇಕಾದರೆ ನಿಜಕ್ಕೂ ದೊಡ್ಡ ಆತ್ಮಸ್ಥೈರ್ಯವೇ ಬೇಕು. ಅಂತ ಒಂದು ಸವಾಲಿನ ಕೆಲಸವನ್ನು ಅದ್ಬುತವಾಗಿ ನಿರ್ವಹಿಸುವ ಮೂಲಕ ಯಶಸ್ವಿಯಾಗುತ್ತಿದ್ದಾರೆ. ಇವರನ್ನೆಲ್ಲಾ ನೋಡಿದಾಗ ನಾವು ಕಲಿಯುವುದು ಇನ್ನೂ ತುಂಬಾ ಎನ್ನಿಸಿದ್ದು ಸತ್ಯ.

   ಸ್ಪರ್ಧೆಗಳ ನಡುವೆ ಕಾರ್ಯಕ್ರಮದ ಆಯೋಜಕರು ತೀರ್ಪುಗಾರರಿಗೆ ಒಂದು ಗಂಟೆ ಎರಡು ಗಂಟೆಗಳ ಕಾಲ ಬಿಡುವು ಕೊಡುತ್ತಿದ್ದರು. ಆ ಸಮಯದಲ್ಲಿ ಉಳಿದ ತೀರ್ಪುಗಾರರು ತಮ್ಮ ಏಸಿ ರೂಮಿನಲ್ಲಿ ವಿಶ್ರಾಂತಿ ತೆಗೆದುಕೊಳ್ಳಲು ಹೋಗುತ್ತಿದ್ದರೆ ನಾನು ಮಾತ್ರ ನನ್ನ ಪುಟ್ಟ ಕ್ಯಾಮೆರವನ್ನಿಡಿದುಕೊಂಡು ಒಂದರ್ಧ ಗಂಟೆ "ದಿಘಾ" ಸುತ್ತಾಡಿಬರಲು ಹೊರಡುತ್ತಿದ್ದೆ.  ಕೊಲ್ಕತ್ತಗೆ ಮತ್ತು ಅಲ್ಲಿ ಇತರ ನಗರಗಳಿಗೆ ಹೋಲಿಸಿಕೊಂಡರೆ ಅವುಗಳಷ್ಟು ವೇಗವನ್ನು ಪಡೆದುಕೊಂಡಿಲ್ಲ ದಿಘಾ. ಒಂದು ರೀತಿಯಲ್ಲಿ ಶಾಂತವಾಗಿದೆ. ಜನಗಳೂ ಕೆಲಸ ಮತ್ತು ಇನ್ನಿತರ ಒತ್ತಡದಲ್ಲಿ ಸಿಲುಕಿ ಗಡಿಬಿಡಿಯಿಂದ ಓಡಾಡುವುದಿಲ್ಲ. ಬುದ್ದಿವಂತರಾದರೂ ಆರಾಮವಾಗಿದ್ದಾರೆ ಮತ್ತು ಇನ್ನು ಹಳ್ಳಿಯವರಾಗಿಯೇ ಇದ್ದಾರೆ. ಸಮುದ್ರದಲ್ಲಿನ ಮೀನುಗಾರಿಕೆಯಲ್ಲಿ ದಿಘಾ ಪಟ್ಟಣ ಪೂರ್ತಿ ಪಶ್ಚಿಮ ಬಂಗಾಲಕ್ಕೆ ದೊಡ್ಡದೆನಿಸುತ್ತದೆ. ಒಂದು ಕಿಲೋಮೀಟರ್ ನಡಿಗೆಯಷ್ಟು ದೊಡ್ಡದಾದ ದಿಘಾ ಮೀನು ಮಾರುಕಟ್ಟೆಯನ್ನು ನೋಡಲು ಎರಡನೇ ದಿನ ಮುಂಜಾನೆ ನಾನು ಗೆಳೆಯರೊಂದಿಗೆ ಹೋಗಿದ್ದೆ. ನೂರಾರು ತರಾವರಿ ಮೀನುಗಳು, ಏಡಿಗಳು, ಹಾವುಮೀನುಗಳು..ಹೀಗೆ ಒಂದೇ ಎರಡೇ ಎಲ್ಲವನ್ನು ಆಗತಾನೆ ಹಿಡಿದು ಪ್ರೆಶ್ ಆಗಿ ಮಾರಾಟ ಮಾಡುತ್ತಿದ್ದರು. ದೊಡ್ದ ದೊಡ್ಡ ಗಾತ್ರದ ಬಣ್ಣ ಬಣ್ಣದ ಸಮುದ್ರ ಸೀಗಡಿಗಳನ್ನು ನಮ್ಮ ಬೆಂಗಳೂರಿನ ಮಾಲ್‍ಗಳು ಮತ್ತು ಮೆಟ್ರೋಗಳಲ್ಲಿ ಮಾತ್ರ ನೋಡಿ, ಒಂದು ಕೇಜಿಗೆ ಆರುನೂರು, ಎಂಟುನೂರು, ಒಂದುವರೆಸಾವಿರ ರೂಪಾಯಿಗಳ ಬೆಲೆ ಕೇಳಿ ಬೆಚ್ಚಿ ಬೆರಗಾಗಿದ್ದ ನಾನು  , ನಮ್ಮ ಯಶವಂತಪುರ ಮೀನು ಮಾರುಕಟ್ಟೆಯಂತೆ ರಸ್ತೆಬದಿಯಲ್ಲಿ ಇವುಗಳನ್ನೆಲ್ಲ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿರುವುದನ್ನು ನೋಡುವ ಅವಕಾಶ ನಮ್ಮ ಕಾರ್ಯಕ್ರಮದ ಆಯೋಜಕರಿಂದಾಗಿ ಸಿಕ್ಕಿತ್ತು.  ಪಶ್ಚಿಮ ಬಂಗಾಲದಲ್ಲಿಯೇ ಪ್ರಸಿದ್ಧವೆನಿಸುವ ಮತ್ತು ದುಬಾರಿ ಬೆಲೆಯ "ಇಲಿಶಾ" ಮೀನಿನ್ನು ರುಚಿ ನೋಡುವ ಅವಕಾಶ ಸಿಕ್ಕಿತ್ತು.  ನಮ್ಮ ಪಾಂಪ್ಲೆಟ್ ಮೀನಿನಂತೆ ಬಾಯಲ್ಲಿಟ್ಟರೇ ಹಾಗೆ ಕರಗುವ "ಇಲಿಷಾ" ಪಶ್ಚಿಮ ಬಂಗಾಲದ ಒಂದು ಅದ್ಬುತವಾದ ಡಿಷ್.
        

ದಿಘಾದಲ್ಲಿ ಕೊಲ್ಕತ್ತ ಮತ್ತು ಇತರ ನಗರಗಳಂತೆ ಅಲ್ಲಿ ಸೈಕಲ್ ರಿಕ್ಷಾಗಳಿಲ್ಲ. ಅದರ ಬದಲಾಗಿ ಅದಕ್ಕಿಂತ ಸ್ವಲ್ಪ ದೊಡ್ಡದಾದ ಪುಟ್ಟ ಇಂಜಿನ್ ಮೋಟರ್ ಅಳವಡಿಸಿದ ನಮ್ಮ ಮೋಟರ್ ಬೈಕಿನ ಟೈರುಗಳನ್ನು ಆಳವಡಿಸಿದ ಮೂರು ಚಕ್ರದ ವಾಹನಗಳೂ ಚಲಿಸುತ್ತಿರುತ್ತವೆ. ಜನರನ್ನು ಒಂದು ಕಡೆಯಿಂದ ಮತ್ತೊಂದು ಕಡೆಗೆ ಸಾಗಿಸಲು, ಲಗ್ಗೇಜು ಸಾಗಿಸಲು ಎರಡಕ್ಕೂ ಇದೊಂದೇ ವಾಹನ. ಇದರಲ್ಲಿ ಕುಳಿತ ಪ್ರಯಾಣಿಕರನ್ನು ನೋಡಿದಾಗ ನಮ್ಮಲ್ಲಿ ಹಳ್ಳಿ ಮತ್ತು ಇತರ ಪಟ್ಟಣಗಳಲ್ಲಿ ಓಡಾಡುವ ಟಂಟಂನ ಸೊಂಟದ ಮೇಲ್ಬಾಗವನ್ನು ತೆಗೆದುಬಿಟ್ಟರೆ ಹೇಗೆ ಕಾಣುತ್ತದೋ ಹಾಗೆ ಇದು ಕಾಣುತ್ತದೆ.

ಮುಂದುವರಿಯುತ್ತದೆ....

ಚಿತ್ರಗಳು ಮತ್ತು ಲೇಖನ:
ಶಿವು.ಕೆ

Monday, September 23, 2013

ಕೊಲ್ಕತ್ತ-ಡಿಘಾ ನಾಲ್ಕು ದಿನದ ಪ್ರವಾಸ


                    ಕೊಲ್ಕತ್ತ ವಿಮಾನ ನಿಲ್ದಾಣದ ೩ಎ ಗಾಜಿನ ಬಾಗಿಲಿಂದ ಹೊರಬರುತ್ತಿದ್ದಂತೆ ಸಣ್ಣಗೆ ಮಳೆ.  ನನಗಾಗಿ ಕಾಯುತ್ತಿದ್ದ "ಅಭಿಜಿತ್ ಡೆ" ಹೆಸರಿನ ನನಗಿಂತ ಸ್ವಲ್ಪ ಹೆಚ್ಚೇ ವಯಸ್ಸಿನ, ಹೆಚ್ಚೇ ಗಾತ್ರದ ಮತ್ತು ಜಾಸ್ತಿ ಬೆಳ್ಳಗಿನ ವ್ಯಕ್ತಿಯೊಬ್ಬ, "ಹಾಯ್ ಶಿವುಜೀ, ಕೆಸಾ ಹೇ, ಪ್ಲೇನ್ ನೇ ಕೊಯಿ ಪ್ರಾಬ್ಲಂ ನಂ ತಾ:  ಸಬ್ ಕುಚ್ ಟೀಕ್ ಹೇನಾ," ಎಂದು ನನ್ನನ್ನು ಗಟ್ಟಿಯಾಗಿ ಬಿಗಿದಪ್ಪಿಕೊಂಡನಲ್ಲ, ಅಲ್ಲಿಗೆ ನನ್ನ ಮನಸ್ಸಿನ ಚಿಂತೆಗಳಲ್ಲಿ ಅರ್ಧದಷ್ಟು ದೂರವಾಗಿತ್ತು. ಮೊದಲ ಬಾರಿಗೆ ನನ್ನ ಮಟ್ಟಿಗೆ ತುಂಬಾ  ದೂರದ ಕೊಲ್ಕತ್ತಗೆ ಪ್ರಯಾಣ ಹೊರಟಿದ್ದೇನಲ್ಲ ಅದಕ್ಕಾಗಿ ಏನನ್ನು ಮರೆಯಬಾರದೆಂದುಕೊಂಡು, ಎರಡು ದಿನದ ಮೊದಲೇ  ನಾನು ತೆಗೆದುಕೊಂಡು ಹೋಗುವ ವಸ್ತುಗಳ ಪಟ್ಟಿಯನ್ನು ಮಾಡಿದ್ದೆ. ಎರಡು ಲಗೇಜ್ ಬ್ಯಾಗುಗಳು. ಒಂದರಲ್ಲಿ ಐದು ದಿನಕ್ಕಾಗುವ ಬಟ್ಟೆಗಳು, ಇನ್ನೊಂದು ಪುಟ್ಟಬ್ಯಾಗಿನಲ್ಲಿ ವಿಮಾನದ ಟಿಕೆಟ್, ನನ್ನ ವೈಯಕ್ತಿಕ ವಿಳಾಸ ತೋರಿಸುವ ಓಟರ್ ಐಡಿ, ಮೊಬೈಲ್ ಚಾರ್ಚರ್, ಪುಟ್ಟ ಕ್ಯಾಮೆರ ಅದರ ಚಾರ್ಚರ್, ನಾನು ಬೆಳ್ಳಗೆ ಕಾಣಲು ಫೇಸ್ ವಾಸ್, ಪೌಡರ್, ಅಲ್ಲಿ ಪ್ರಯಾಣಿಸುವ ರೈಲಿನಲ್ಲಿ ಬಿಡುವಾದರೆ ಓದಲು ಒಂದೆರಡು ಪುಸ್ತಕಗಳು, ಅಲ್ಲಿನವರಿಗೆ ಕೊಡಲು ನನ್ನ ಪುಸ್ತಕಗಳು ಮತ್ತು ಕಿರುಚಿತ್ರ "ಬೆಳಗಾಯ್ತು ಇನ್ನೂ ನ್ಯೂಸ್ ಪೇಪರ್ ಬಂದಿಲ್ವ" ಸಿಡಿ,......ಹೀಗೆ ಪ್ರತಿಯೊಂದನ್ನು ಮೊದಲೇ ಪಟ್ಟಿ ಮಾಡಿ ಸಿದ್ದಪಡಿಸಿಟ್ಟುಕೊಂಡು ಎಲ್ಲವನ್ನು ಸರಿಯಾಗಿ ಪರೀಕ್ಷಿಸಿಕೊಂಡು ಹೊರಟಿದ್ದರೂ, ಅಲ್ಲಿ ಅಚಾನಕ್ಕಾಗಿ ಎರಡರಲ್ಲಿ ಒಂದು ಬ್ಯಾಗ್ ಕಳೆದುಹೋದರೆ ಅಥವ ವಿಮಾನದಲ್ಲಿ ಹೋಗುವಾಗ ಏನಾದರೂ ತೊಂದರೆಯಾದರೆ ಇರಲಿ ಎಂದುಕೊಂಡು ನನ್ನನ್ನು ಕರೆದ ಕೊಲ್ಕತ್ತದ ಅನೇಕರ ಫೋನ್ ನಂಬರುಗಳನ್ನು ಬರೆದು ನನ್ನ ಶ್ರೀಮತಿಯ ಕೈಗೆ ಕೊಟ್ಟು ಅಲ್ಲಿಂದ ಹೊರಟಿದ್ದೆ.

                               ಪ್ರಖ್ಯಾತ ಹೌರಾ ಸೇತುವೆ

    ವಿಮಾನ ನಿಲ್ದಾಣದಿಂದ ಟ್ಯಾಕ್ಸಿಯಲ್ಲಿ  ಹೊರಟೆವಲ್ಲ, ಅಲ್ಲಿಂದ ಶುರುವಾಯ್ತು ನಮ್ಮಿಬ್ಬರ ಮಾತು. ದಾರಿಯಲ್ಲಿ ಸಾಗಿದ ಒಂದುಕಾಲು ಗಂಟೆಯಲ್ಲಿ, ತುಂಬಾ ವರ್ಷಗಳ ನಂತರ ಮತ್ತೆ ಬೇಟಿಯಾಗಿದ್ದೇವೆ ಎನ್ನುವಂತೆ, ನಮ್ಮ ನಡುವೆ ಫೋಟೋಗ್ರಫಿ, ಮನೆ ವಿಚಾರ, ಹೀಗೆ ಎಲ್ಲವನ್ನು ಹಂಚಿಕೊಳ್ಳುತ್ತ ಕೊಲ್ಕತ್ತದ ಹೃದಯ ಭಾಗದಿಂದ ದಕ್ಷಿಣ ೩೫ ಕಿಲೋಮೀಟರ್ ಮೂಲೆಯಲ್ಲಿರುವ ಭಾರಕ್ ಪುರ್‌ನ ಅಭಿಜಿತ್ ಡೆ ಮನೆ ತಲುಪುವ ಹೊತ್ತಿಗೆ, ನಾವಿಬ್ಬರೂ ಬಾಲ್ಯದ ಗೆಳೆಯರು ಮತ್ತೆ ಬೇಟಿಯಾಗುತ್ತಿದ್ದೇವೇನೋ ಎನ್ನುವಂತ ಒಂದು ನಮಗರಿಯದಂತ ಆತ್ಮೀಯತೆ ನಮ್ಮೊಳಗೆ ಮೂಡಿತ್ತು. ನನಗಂತೂ ಅವರ ಮನೆ ತಲುಪುತ್ತಿದ್ದಂತೆ ಉಳಿದಿದ್ದ ಅರ್ಧ ಚಿಂತೆಯೂ ಸಂಪೂರ್ಣ ಮಾಯವಾಗಿ ತಂದಿರುವ ಎಲ್ಲವೂ ಕಳೆದು ಹೋದರೂ ಇಲ್ಲಿ ನೆಮ್ಮದಿಯಾಗಿ ಇರಬಹುದು ಎನಿಸಿತ್ತು.

 "ಶಿವು ನಿಮಗೆ ಏನೂ ಅಭ್ಯಂತರವಿಲ್ಲದಿದ್ದಲ್ಲಿ ನಮ್ಮ ಮನೆಯಲ್ಲಿ ಇರಬಹುದು" ನಿಮಗೆ ಇಷ್ಟವಿಲ್ಲದಿದ್ದಲ್ಲಿ ನಮ್ಮ ಇತರ ಜ್ಯೂರಿಗಳಿಗೆ ಹೋಟಲ್ಲಿನಲ್ಲಿ ರೂಂ ವ್ಯವಸ್ಥೆ ಮಾಡಿದಂತೆ ನಿಮಗೆ ವ್ಯವಸ್ಥೆ ಮಾಡುತ್ತೇವೆ" ಎಂದು ಅಭಿಜಿತ್ ಡೇ ಫೋನಿನಲ್ಲಿ ಕೇಳಿದಾಗ, "ನಾನು ನಿಮ್ಮ ಮನೆಯಲ್ಲಿ ಇರುತ್ತೇನೆ" ಎಂದಿದ್ದೆ. ಅದಕ್ಕವರು ಸಂಕೋಚದಿಂದ "ನಮ್ಮಂತಹ ಬಡವನ ಮನೆ, ನಿಮಗೆ ತೊಂದರೆಯಾಗಬಹುದು"

   ನೋಡಿ ಅಭಿಜಿತ್ ಡೇ ಸರ್, ನಾವು ಯಾವುದೇ ಪ್ರವಾಸಕ್ಕೆ ಹೋದರೂ ಅಲ್ಲೆಲ್ಲಾ ಹೋಟಲ್ ರೂಮಿನಲ್ಲಿಯೆ ಉಳಿದುಕೊಳ್ಳುತ್ತೇವಾದ್ದರಿಂದ ಅದರಲ್ಲಿ ಏನು ವಿಶೇಷವಿಲ್ಲ. ಆದ್ರೆ ಮೊದಲ ಭಾರಿಗೆ ಕಲ್ಕತ್ತದಂತ ದೊಡ್ದ ನಗರಕ್ಕೆ ಬರುತ್ತಿದ್ದೇನೆ. ಅಲ್ಲಿ ನಿಮ್ಮ ಮನೆಯಲ್ಲಿ ನಿಮ್ಮ ಕುಟುಂಬದ ಜೊತೆ ಒಂದೆರಡು ದಿನ ಕಳೆಯುವುದು ನನ್ನ ಸೌಭಾಗ್ಯವೆಂದುಕೊಳ್ಳುತ್ತೇನೆ. ನಮ್ಮಿಬ್ಬರ ನಡುವೆ ಬಡತನ-ಸಿರಿತನವೆಂಬ ಬೇಧಭಾವಗಳಿಲ್ಲ. ನಾನು ಕೂಡ ಒಬ್ಬ ಸಾಮಾನ್ಯ ದಿನಪತ್ರಿಕೆ ವಿತರಕನಷ್ಟೆ., ಮತ್ತೆ ಇದು ನನ್ನ ಬದುಕಿನ ಮದುರವಾದ ನೆನಪಿನ ಕ್ಷಣಗಳಾಗಬಹುದು. ಎಂದು ಅವರ ಮನೆಯಲ್ಲಿಯೇ ಉಳಿದುಕೊಳ್ಳಲು ಒಪ್ಪಿಕೊಂಡಿದ್ದೆ.
      
ಕೊಲ್ಕತ್ತದಿಂದ ಮುವತ್ತೈದು ಕಿಲೋಮೀಟರ್ ದೂರದ ಭರಕ್‍ಪುರದಲ್ಲಿರುವ ಪ್ರಖ್ಯಾತ ಛಾಯಾಗ್ರಾಹಕ ಗೆಳೆಯ "ಅಭಿಜಿತ್ ಡೇ" ಮನೆಯಲ್ಲಿ ಇತರ ಛಾಯಾಗ್ರಾಹಕರೊಂದಿಗೆ..

ಯಾವುದೇ ಒಂದು ಹಳ್ಳಿ, ಪಟ್ಟಣ, ನಗರಕ್ಕೆ ಹೋದಾಗ ನಮ್ಮ ಪುಟ್ಟ ಕಣ್ಣುಗಳ ಹೊರನೋಟಕ್ಕೆ ಅವು ಬಹು ಸುಂದರವಾಗಿ ಅಥವ ಕೊಳಕಾಗಿ ಕಾಣಿಸಬಹುದು. ಆದರೆ ಅವುಗಳ ನಿಜವಾದ ಆತ್ಮದ ಒಂದು ಕೋಲ್ಮಿಂಚು, ಭಾವನಾತ್ಮಕ ಅಭಿವ್ಯಕ್ತಿಯ ತುಣುಕನ್ನು ಆಸ್ವಾದಿಸಬೇಕಾದರೆ ಖಂಡಿತವಾಗಿ ಅವುಗಳಲ್ಲಿನ ಒಂದು ಮನೆಯಲ್ಲಿ ಒಂದೆರಡು ದಿನಗಳ ಮಟ್ಟಿಗಾದರೂ ಇದ್ದು ಬರಬೇಕು ಎಂದು ಎಲ್ಲಿಯೋ ಓದಿದ್ದು ನೆನಪಾಗಿತ್ತು ಮತ್ತು ನನ್ನ ಉದ್ದೇಶವೂ ಅದೇ ಆಗಿತ್ತು. "ಹಾವ್ ಜೀ" ಎಂದು ಅವರ ಶ್ರೀಮತಿಯವರು ನನ್ನನ್ನು ಸ್ವಾಗತಿಸಿದಾಗ ಮೊಟ್ಟ ಮೊದಲ ಭಾರಿಗೆ ಕೊಲ್ಕತ್ತದ ಒಂದು ಟಿಪಿಕಲ್ ಮದ್ಯಮ ವರ್ಗದ ಮನೆಯೊಳಕ್ಕೆ ಕಾಲಿಟ್ಟಿದ್ದೆ. ಅಭಿಜಿತ್, ಅವರ ಶ್ರೀಮತಿ, ಒಬ್ಬಳು ಪುಟ್ಟ ಮಗಳು, ಕೆಲಸದವಳಾದರೂ ಮನೆ ಮಗಳೇ ಆಗಿಬಿಟ್ಟಿರುವ ನಮಿತ. ಈ ನಾಲ್ವರ ಪುಟ್ಟ ಮದ್ಯಮ ವರ್ಗದ ಕುಟುಂಬವದು. ಬಿಸಿ ಬಿಸಿ ಟೀ ಕುಡಿದ ನಂತರ ಪುಟ್ಟದಾಗಿ ಸ್ನಾನ ಮಾಡಿ ಸಿದ್ದನಾದೆನಲ್ಲ...ಸಂಕೋಚದಿಂದ ಮಾತಾಡುವ ಅವರ ಶ್ರೀಮತಿ, ಮುಗ್ದತೆಯಿಂದ ತಾನು ಬಿಡಿಸಿದ ಚಿತ್ರವನ್ನು ತೋರಿಸುವ ಅವರ ಮಗಳು, ನಮಗಿಷ್ಟದ ಅಡುಗೆಯನ್ನು ಉತ್ಸಾಹದಿಂದ ಮಾಡುವ ನಮಿತ, ಮನಪೂರ್ವಕವಾಗಿ ನಗುತ್ತ ಮಾತಾಡುವ ಅಭಿಜಿತ್, ಕೇವಲ ಒಂದೇ ಗಂಟೆಯಲ್ಲಿ ಎಲ್ಲರೂ ಆತ್ಮೀಯರಾಗಿ ನಮ್ಮ ಮನೆಯಲ್ಲಿಯೇ ಇರುವಂತೆ ಅನ್ನಿಸತೊಡಗಿತ್ತು. ಕೆಲ ನಿಮಿಷಗಳ ನಂತರ ಅಭಿಜಿತ್ ಡೇ ತಮ್ಮ ಇಪ್ಪತ್ತು ವರ್ಷಗಳ ಅನುಭವದಲ್ಲಿ ಕಲಿತ ಫೋಟೊಗ್ರಫಿ, ಹೇಳಿಕೊಟ್ಟ ಗುರುಗಳು, ನಡೆದು ಬಂದ ದಾರಿ ಎಲ್ಲವನ್ನು ಅವರ ಅದ್ಬುತ ಚಿತ್ರಗಳ ಮೂಲಕ ವಿವರಿಸಿದಾಗ ಅವರ ಬಗ್ಗೆ ಹೆಮ್ಮೆಯೆನಿಸಿತ್ತು. ವಿಭಿನ್ನವಾದ ಅಲೋಚನೆ, ಚಿಂತನೆ ಮತ್ತು ಪ್ರಯೋಗಗಳಿಂದ ಮೂಡಿಸುವ ಅವರ ಫೋಟೊಗ್ರಫಿ ಕಲಾಕೃತಿಗಳು, ಅದರಿಂದ ಗಳಿಸಿದ ಪ್ರಶಸ್ತಿಗಳು, ಇತ್ಯಾದಿಗಳನ್ನು ನೋಡಿದ ಮೇಲೆ ಇವರಿಂದ ನಾವೆಲ್ಲ ಕಲಿಯುವುದು ಬಹಳಷ್ಟಿದೆ ಎನಿಸಿತು. ನಮ್ಮ ದಕ್ಷಿಣ ಭಾರತದ ಛಾಯಾಗ್ರಾಹಕರ ಫೋಟೊಗ್ರಫಿ ವಿಧಾನ, ತಯಾರಿ ರೂಪುರೇಷೆಗಳು ಒಂದು ರೀತಿಯಾದರೆ, ಉತ್ತರ ಭಾರತದ ಅದರಲ್ಲೂ ಪಶ್ಚಿಮ ಬಂಗಾಲದವರ ಫೋಟೊಗ್ರಫಿ ವಿಧಾನ, ರೂಪುರೇಷೆಗಳು ಬೇರೆ ತರನದ್ದು. ಅವರ ಚಿತ್ರಗಳನ್ನು ನೋಡಿದಾಗ ಅವರು ಕಲಾತ್ಮಕ ಛಾಯಾಗ್ರಾಹಣದಲ್ಲಿ ನಮಗಿಂತ ಮುಂದಿದ್ದಾರೆ ಅನಿಸುತ್ತದೆ. ನಡುವೆ ಬೆಂಗಾಲದ ಟಿಪಿಕಲ್ ಶೈಲಿಯ ದಹೀ ಮಸಾಲಪುರಿ ಬಂತು. ಆಹಾ ಎಂಥ ರುಚಿ ಅಂತೀರಿ, ಅದನ್ನು ಸವಿಯುತ್ತಾ, ಅಭಿಜಿತ್ ಫೋಟೊಗಳನ್ನು ನೋಡುತ್ತಾ, ಅವರ ಅನುಭವವನ್ನು ಕೇಳುತ್ತಾ, ವಾಹ್! ಸಮಯ ಹೋಗಿದ್ದೇ ತಿಳಿಯಲಿಲ್ಲ. ನಡುವೆ ಅವರ ಫೋಟೊಗ್ರಫಿ ಕ್ಲಬ್‍ನ ಅಧ್ಯಕ್ಷರು, ಇತರ ಸದಸ್ಯರು, ವಿಧ್ಯಾರ್ಥಿಗಳ ಬಂದಾಗ ಅವರ ಪರಿಚಯವೂ ಆಯ್ತು.  ರಾತ್ರಿ ಊಟದ ಸಮಯವಾಯ್ತು ಬನ್ನಿ ಎಂದು ಕರೆದಾಗಲೇ ಗೊತ್ತಿಗಿದ್ದು ಆಗಲೇ ರಾತ್ರಿ ಒಂಬತ್ತು ಗಂಟೆ ದಾಟಿದೆಯೆಂದು. ಎಲ್ಲರೂ ಒಟ್ಟಿಗೆ ಊಟಕ್ಕೆ ಕುಳಿತೆವು. ನನಗಿಷ್ಟವೆಂದು ಪರೋಟ, ಅಲುಗಡ್ಡೆಯ ಪಲ್ಯ, ಚಿಕನ್ ಮಸಾಲ, ಪಾಯಸ ಮತ್ತು ರಸಗುಲ್ಲ,.ಒಟ್ಟಾರೆಯಾಗಿ ರಾತ್ರಿ ಭರ್ಜರಿ ಊಟವೇ ಆಗಿಹೋಯ್ತು. ಈ ನಡುವೆ ಮಧ್ಯಾಹ್ನ ನಾನು ಬರುವ ಹೊತ್ತಿಗೆ ಶುರುವಾದ ಜಡಿ ಮಳೆ ಆಗಾಗ ಬಿಡುವುದು ಮತ್ತೆ ಶುರುವಾಗುವುದು ಥೇಟ್ ನಮ್ಮ ಬೆಂಗಳೂರಿನ ಮಳೆಯಂತೆ ಕಣ್ಣುಮುಚ್ಚಾಲೆಯಾಡುತ್ತಿತ್ತು. ಹೊರಗೆ ಸ್ವಲ್ಪ ಜೋರು ಮಳೆ ಶುರುವಾದರೂ ನನಗಂತೂ ಪ್ರಯಾಣದ ಆಯಾಸದಿಂದ ಮಲಗಿದ ತಕ್ಷಣವೆ ನಿದ್ರೆ ಆವರಿಸಿತ್ತು.

                               ಕೊಲ್ಕತ್ತ ಎಂದರೆ ಸೈಕಲ್ ರಿಕ್ಷಾ....

        
   ಮರುದಿನ ಬೆಳಿಗ್ಗೆ ಎಚ್ಚರವಾದಾಗ ಹೊರಗೆ ಸಂಪೂರ್ಣ ಬೆಳಕಾಗಿತ್ತು. ಬಹುಶಃ ನಾನು ಎಂಟುಗಂಟೆಯವರೆಗೂ ಚೆನ್ನಾಗಿ ಮಲಗಿಬಿಟ್ಟಿದ್ದೇನೆ ಅಂದುಕೊಂಡು ಕೈಗಡಿಯಾರವನ್ನು ನೋಡಿಕೊಂಡರೆ ಐದು ಗಂಟೆ ತೋರಿಸುತ್ತಿದೆ! ಇದೇನಿದು ಹೊರಗೆ ನೋಡಿದರೆ ಅಷ್ಟೊಂದು ಬೆಳಕಾಗಿದೆ, ಆದ್ರೆ ಮೊಬೈಲಿನಲ್ಲೂ ಕೂಡ ಐದುಗಂಟೆ ತೋರಿಸುತ್ತಿದೆ! ಕುತೂಹಲದಿಂದ ಎದ್ದು ಬಾಲ್ಕನಿಗೆ ಬಂದು ನೋಡಿದರೆ, ನಿಜವಾಗಿಯೂ ಬೆಳಿಗ್ಗೆ ಐದು ಗಂಟೆಗೆ ಸಂಪೂರ್ಣ ಬೆಳಕಾಗಿಬಿಟ್ಟಿದೆ! ನಮ್ಮ ಬೆಂಗಳೂರಿನಲ್ಲಿ ಬೆಳಗ್ಗೆ ಎಂಟು ಗಂಟೆಯ ಹೊತ್ತಿಗೆ ಆಗುವಷ್ಟು ಬೆಳಕಾಗಿಬಿಟ್ಟಿದೆ. ಸೂರ್ಯೋದಯ ಕಾಣಬಹುದಾ ಎಂದು ಪೂರ್ವದತ್ತ ನೋಡಿದರೆ ದಟ್ಟವಾದ ಮೋಡದ ವಾತಾವರಣ, ಈ ಮಳೆಗಾಲದಲ್ಲಿ ಹೀಗಾದರೆ ಮೋಡಗಳಿಲ್ಲದ ಬೇಸಿಗೆ ಹೇಗಿರಬಹುದು ಎಂದು ಕಲ್ಪಿಸಿಕೊಂಡರೆ ಬಹುಶಃ ನಮ್ಮ ಬೆಂಗಳೂರಿನ ಒಂಬತ್ತು-ಹತ್ತು ಗಂಟೆಯಲ್ಲಿ ಕಾಣುವ ಬೆಳಕು ಇಲ್ಲಿ ಮುಂಜಾನೆ ನಾಲ್ಕು-ಐದು ಗಂಟೆಗೆ ಕಾಣಬಹುದೇನೊ! ಈ ಸಮಯದಲ್ಲಿ ಬೆಂಗಳೂರು ಹೇಗಿರಬಹುದು? ನಮ್ಮ ದಿನಪತ್ರಿಕೆ ಹಂಚುವ ಹುಡುಗರು ಏನು ಮಾಡುತ್ತಿರಬಹುದೆಂದು ನೆನಪಿಸಿಕೊಂಡರೆ, ಕತ್ತಲಲ್ಲಿ ಸಪ್ಲಿಮೆಂಟರ್ ಹಾಕುವ ನಂತರ ಜೋಡಿಸಿಕೊಳ್ಳುತ್ತಾ, ತಲೆಹರಟೆ ಮಾಡುತ್ತಾ, ಸಿದ್ದವಾಗುತ್ತಿರುವ ಅನೇಕ ಪುಟ್ಟ ಪುಟ್ಟ ಚಿತ್ರಗಳು ಮನಸ್ಸಿನಲ್ಲಿ ಹಾದು ಹೋದವು. ಇಷ್ಟು ಬೇಗ ಎದ್ದು ಏನು ಮಾಡುವುದು ಎಂದು ಮತ್ತೆ ಮಲಗಿದೆ. ಎಚ್ಚರವಾದಾಗ ಏಳುಗಂಟೆ. ನಾವು ಕೊಲ್ಕತ್ತದಿಂದ ನೂರತೊಂಬತ್ತು ಕಿಲೋಮೀಟರ್ ದೂರದಲ್ಲಿ ಸಮುದ್ರ ಕಿನಾರೆಗೆ ಅಂಟಿಕೊಂಡಿರುವ ಸುಂದರ ಮತ್ತು ಪುಟ್ಟ ದಿಘ ಟೌನಿಗೆ ಹೋಗಬೇಕಿತ್ತು. ಅಲ್ಲಿಯೇ ನಮ್ಮ ಅಂತರರಾಷ್ಟ್ರೀಯ ಛಾಯಾಚಿತ್ರ ಸ್ಪರ್ಧೆಯ ತೀರ್ಪುಗಾರಿಕೆಗಳು ನಡೆಯುವುದು ನಿಗದಿಯಾಗಿತ್ತು. ನಾನು ಮತ್ತು ಅಭಿಜಿತ್ ಬೆಳಿಗ್ಗೆ ಒಂಬತ್ತು ಗಂಟೆಯ ಹೊತ್ತಿಗೆ ಬೆಳಗಿನ ತಿಂಡಿ ಮುಗಿಸಿ ಸಿದ್ದರಾಗುವ ಹೊತ್ತಿಗೆ ಅವರ ಕ್ಲಬ್ಬಿನ ಇನ್ನಿತರ ಸದಸ್ಯರು ನಮ್ಮನ್ನು ಕೂಡಿಕೊಂಡರು. ನಮ್ಮ ಲಗ್ಗೇಜುಗಳನ್ನು ಹೊತ್ತು ರೈಲು ನಿಲ್ದಾಣದ ಕಡೆಗೆ ಹೊರಟೆವು. ಛಾಯಗ್ರಾಹಕ ಗೆಳೆಯ ಅಭಿಜಿತ್ ಮನೆಯಿಂದ ಒಂದು ಕಿಲೋಮೀಟರ್ ದೂರ ರೈಲು ನಿಲ್ದಾಣಕ್ಕೆ ಹೋಗಲು ಸೈಕಲ್ ರಿಕ್ಷಾ ಹತ್ತಿದೆವು. ಸ್ವಲ್ಪ ದೂರದ ಮುಖ್ಯರಸ್ತೆಗೆ ಹೋಗುತ್ತಿದ್ದಂತೆ ಒಂದರ ಹಿಂದೆ ಒಂದು ಎದುರಿಗೆ ಪಕ್ಕದಲ್ಲಿ ಹೀಗೆ ಎಲ್ಲೆಂದರಲ್ಲಿ ಬೆಲ್ ಹೊಡೆಯುತ್ತಾ ಸಾಗುವ ಸೈಕಲ್ ರಿಕ್ಷಾಗಳು ಆ ಕ್ಷಣದಿಂದ ನನಗೆ ಕುತೂಹಲದ ವಸ್ತುಗಳಾದವು.  ನೂರಾರು ವರ್ಷಗಳ ಇತಿಹಾಸವುಳ್ಳ ಕೊಲ್ಕತ್ತದ ಪಳಯುಳಿಕೆಯ ಭಾಗವಾಗಿರುವ ಇಲ್ಲಿನ ಸೈಕಲ್ ರಿಕ್ಷಾಗಳು ಮುಂಜಾನೆ ಐದು ಗಂಟೆಗೆ ಪ್ರಾರಂಭವಾದರೆ ರಾತ್ರಿ ಹನ್ನೊಂದುಗಂಟೆಯವರೆಗೆ ನಿಮ್ಮನ್ನು ಒಂದು ಕಿಲೋಮೀಟರಿನಿಂದ ಐದಾರು ಕಿಲೋಮೀಟರ್ ದೂರದವರೆಗೆ ಲಗ್ಗೇಜು ಸಮೇತ ನಿಮ್ಮನ್ನು ಸಾಗಿಸುತ್ತವೆ. ಇಪ್ಪತ್ತರೊಳಗಿನ ಯುವಕರಿಂದ ಹಿಡಿದು ಎಪ್ಪತ್ತು ದಾಟಿದ ವಯಸ್ಸಾದ ಮುದುಕರವರೆಗೂ ಅನೇಕರಿಗೆ ಜೀವನಕ್ಕೆ ದಾರಿಯಾಗಿರುವ ಇವುಗಳನ್ನು ಎತ್ತರದ ಕಟ್ಟಡದ ತುದಿಯಿಂದ ಕೆಳಗೆ ಇಣುಕಿ ನೋಡಿದರೆ ಹದಿನೈದು ಅಡಿ ಅಗಲದ ಪುಟ್ಟ ಪುಟ್ಟ ರಸ್ತೆಯಲ್ಲಿ ಬೆಲ್ ಮಾಡುತ್ತಾ ಸಾಗುವಾಗುತ್ತಿದ್ದರೆ ನೆಲದ ಮೇಲೆ ಬ್ಯುಸಿಯಾಗಿ ಹರಿದಾಡುವ ಇರುವೆಗಳನ್ನು ನೆನಪಿಸುತ್ತವೆ. ಎಲ್ಲೆಂದರಲ್ಲಿ ಕೈತೋರಿಸಿದರೆ ನಿಲ್ಲಿಸಿ ನಮ್ಮನ್ನು ಕರೆದೊಯ್ಯುವ ಈ ಸೈಕಲ್ ರಿಕ್ಷಾವಾಲಗಳು ಶ್ರಮಜೀವಿಗಳು. ಒಂದೆರಡು ಕಿಲೋಮೀಟರ್ ಸಾಗಿದರೂ ಅವರು ಪಡೆದುಕೊಳ್ಳುವ ಹಣ ಐದರಿಂದ ಹತ್ತು ರೂಪಾಯಿ ಅಷ್ಟೆ. ನಮ್ಮಲ್ಲಿ ಕಾಣುವ ಆಟೋರಿಕ್ಷಾಗಳಿಗೆ ಪರ್ಯಾಯವಾಗಿರುವ ಅವು ಇಡೀ ಕೊಲ್ಕತ್ತ ನಗರದಲ್ಲಿ ಲಕ್ಷಾಂತರವಿರಬಹುದೆಂದುಕೊಳ್ಳುವಾಗಲೇ ಭಾರಕ್‍ಪುರ್ ರೈಲು ನಿಲ್ದಾಣ ಬಂತು. ಕೊಲ್ಕತ್ತ ನಗರದ ಭಾಗವಾಗಿರುವ ಭಾರಕ್‍ಪುರ ಪೂರ್ವದ ಕೊನೆಯಲ್ಲಿದೆ.
             
  ಕೊಲ್ಕತ್ತದ ಲೋಕಲ್ ರೈಲು ನಿಲ್ದಾಣ.

ಮುಂದುವರಿಯುತ್ತದೆ......

ಚಿತ್ರಗಳು ಮತ್ತು ಲೇಖನ
ಶಿವು.ಕೆ.