ಒಂದು ವರ್ಷದಲ್ಲಿ ನಾನು ತಪ್ಪಿಸಕೊಳ್ಳಲೇಬಾರದೆಂದು ಪ್ಲಾನ್ ಮಾಡುವ ಹತ್ತು ಕಾರ್ಯಕ್ರಮಗಳ ಪಟ್ಟಿಮಾಡಿದರೆ ಮೊದಲ ಸ್ಥಾನ ಚಿತ್ರಸಂತೆಗೆ. ಎರಡನೇಯದು ಎರಡು ವರ್ಷಕ್ಕೊಮ್ಮೆ ನಡೆಯುವ "ಏರ್ ಷೋ"[ಮುಂದಿನ ತಿಂಗಳ 9 ರಿಂದ 13ರವರೆಗೆ ಬೆಂಗಳೂರಿನಲ್ಲಿ ನಡೆಯುತ್ತದೆ.] ನಂತರ ಫೋಟೊಗ್ರಫಿ ಪ್ರವಾಸಗಳು,.....ಹೀಗೆ ಮುಂದುವರಿಯುತ್ತವೆ.
ನಿನ್ನೆ ಬೆಂಗಳೂರಿನಲ್ಲಿ ನಡೆದ ಚಿತ್ರಸಂತೆಯಲ್ಲಿ ನನ್ನದು ಕೆಲವು ಫೋಟೊಗಳನ್ನು ತರಕಾರಿ, ಸೊಪ್ಪುಗಳಂತೆ ಮಾರಾಟಕ್ಕೆ ಇಟ್ಟಿದ್ದೆ. ವ್ಯಾಪಾರದಲ್ಲಿ ಚೆನ್ನಾಗಿ ಲಾಭವೆ ಆಯ್ತು. ಇನ್ನುಳಿದಂತೆ ಚಿತ್ರ ಕಲಾವಿದರೂ, ನನ್ನಂಥ ಛಾಯಾ ಕಲಾವಿದರಲ್ಲಾ ಹೀಗೆ ಚೌಕಾಸಿ ವ್ಯಾಪರದಲ್ಲಿ ತೊಡಗಿ ಕೊನೆಗೆ ನೀಟ್ ಆಗಿ ಪೇಪರ್ ಅಥವ ಕವರಿನಲ್ಲಿ ಕವರಿನಲ್ಲಿ ಹಾಕಿ ಪ್ಯಾಕ್ ಮಾಡಿ ಕೊಡುತ್ತಿದ್ದರು. ಅಲ್ಲದೆ ಕೊಳ್ಳಲು ಬಂದ ಕಲಾಸ್ತಕರು, ಬರೀ ಕಲೆಯನ್ನೇ ನೋಡಿ ಖುಷಿಪಡಲು ಬಂದ ಕಲಾಸಕ್ತರು, ಇವರನ್ನೆಲ್ಲಾ ಸೆರೆಯಿಡಿಯಲು, ಹಿಡಿದು ಬರೆಯಲು ಬಂದಿದ್ದ ಟಿವಿ ಕ್ಯಾಮೆರಾಮ್ಯಾನುಗಳು, ಪತ್ರಕರ್ತರು, [ಸಣ್ಣಕ್ಯಾಮೆರಾದಲ್ಲಿ ನನ್ನ ಚಿತ್ರಗಳ ಫೋಟೊ ತೆಗೆಯತ್ತಿದ್ದ ಪ್ರಜಾವಾಣಿ ಪತ್ರಕರ್ತರಿಗೆ "ಸಾರ್ ಫೋಟೊ ತೆಗೆಯಬೇಡಿ ಸರ್ ಅದರ ಉಪಯೋಗವಿಲ್ಲ" ಅಂದೆ ಅದಕ್ಕೆ ಅವರು ನಮ್ಮ ಜರ್ನಲಿಸ್ಟ್ ಬುದ್ದಿ ಸರ್ ಎಲ್ಲಾ ಫೋಟೊ ತೆಗೆಯಬೇಕೆನಿಸುತ್ತದೆ ಅಷ್ಟೇ": ಅಂದರು, ಅದಕ್ಯಾಕೆ ಸರ್ ಹೀಗೆ ಫೋಟೊ ತೆಗೀತೀರಿ, ನಿಮ್ಮ ಪ್ರಜಾವಾಣಿಅಫೀಸಿನಲ್ಲೇ ಯಾರನ್ನಾದರೂ ಕೇಳಿದರೆ ನನ್ನ ಚಿತ್ರಗಳು ಹೈ ರೆಸಲ್ಯೂಷನಲ್ಲಿ ಸಿಗುತ್ತದೆ" ಅಂದೆ] ಜೊತೆಗೆ ಸುತ್ತಾಡಲು ಬಂದ ಸುಂದರ ಹುಡುಗಿಯರು, ಅವರನ್ನು ನೋಡಲು ಬಂದ ಹುಡುಗರು, ಅವರ ಜೇಬು ಕಾಲಿಮಾಡಲೆಂದೇ ಸಿದ್ದರಾಗಿದ್ದ ಐಸ್‍ಕ್ರೀಮ್, ಟೀ, ಕಡ್ಲೇಬೀಜ, ಚುರುಮುರಿ, ಕೈಗಾಡಿ ಹೋಟಲ್ಲುಗಳು[ಇವರೆಲ್ಲಾ ನೆನ್ನೆ ತಿನ್ನುವ ಪದಾರ್ಥಗಳನ್ನು ನ್ನು ದುಬಾರಿಬೆಲೆಗೆ ಮಾರಿದರು] , ಹಿತವಾದ ಬಿಸಿಲು ಇದೆಲ್ಲವೂ ಪ್ರತಿವರ್ಷವೂ ಇರುತ್ತದೆಯಾದ್ದರಿಂದ ಇವು ಯಾವುದು ನನಗೆ ವಿಶೇಷವೆನಿಸಲಿಲ್ಲ. ಇಂಥ ಸಮಯದಲ್ಲಿ ನನ್ನ ಕಣ್ಣಿಗೆ ವಿಶೇಷವೆನಿಸಿದ್ದೇ ಪುಟ್ಟ ಮಕ್ಕಳು.
ಚಿತ್ರಸಂತೆಯಲ್ಲಿ ಕಲಾವಿದರಿಗೆ ತಮ್ಮ ಕಲಾಕೃತಿಯನ್ನು ಉತ್ತಮಬೆಲೆಗೆ ಮಾರಬೇಕೆನ್ನುವ ಆಸೆಯಿದ್ದರೆ,. ಅದನ್ನು ಕೊಳ್ಳುವವರಿಗೆ ಅತೀ ಕಡಿಮೆಬೆಲೆಯಲ್ಲಿ ಉತ್ತಮ ಕಲಾಕೃತಿಯನ್ನು ಕೊಳ್ಳುವ ತವಕ, ಉಳಿದಂತೆ ಪತ್ರಕರ್ತರು, ಕ್ಯಾಮರಾಮೆನ್ನುಗಳು, ಹುಡುಗ-ಹುಡುಗಿಯರು, ದಂಪತಿಗಳು, ವ್ಯಾಪರಿಗಳು ಇವರೆಲ್ಲಾರಿಗೂ ಒಂದಲ್ಲ ಒಂದು ಉದ್ದೇಶ ಚಿತ್ರಸಂತೆಯಲ್ಲಿ ಇದ್ದೇ ಇರುತ್ತದೆ. ಆದ್ರೆ ಅವರ ಸೊಂಟದ ಮೇಲೆ, ಹೆಗಲಮೇಲೆ, ಹೊಟ್ಟೆಯ ಮೇಲೆ[ಬಸುರಿ ಹೊಟ್ಟೆಯಲ್ಲ ಗಂಡಸರ ಹೊಟ್ಟೆಯ ಮೇಲೆ ನೇತಾಡುವ ಮಕ್ಕಳು. ಮತ್ತೆ ಐದಾರು ಬಸುರಿ ಹೆಂಗಸರು ಬಂದಿದ್ದರು ಅನ್ನಿ] ಇದ್ದ ಮಕ್ಕಳಿಗೆಲ್ಲಾ ಏನು ಉದ್ದೇಶವಿರಬಹುದು? ಇಂಥ ಒಂದು ಪ್ರಶ್ನೆ ಆ ಕ್ಷಣದಲ್ಲಿ ಮೂಡಿತಲ್ಲ! ಅದನ್ನು ತಿಳಿಯುವ ಉದ್ದೇಶವಾಗಿ ಅವರ ಫೋಟೊ ತೆಗೆಯಲು ಪ್ರಯತ್ನಿಸಿದೆ. ಕೆಲವೊಂದರ ಉದ್ದೇಶವನ್ನು ನಾನು ನನಗನ್ನಿಸಿದಂತೆ ಕೊಟ್ಟಿದ್ದೇನೆ. ನೀವು ಆ ಮಕ್ಕಳ ಚಿತ್ರಗಳನ್ನು ನೋಡಿದಾಗ ಅದನ್ನು ಮೀರಿದ ಬೇರೆ ಭಾವನೆಗಳು ನಿಮಗೆ ಬರಬಹುದು ಅಂದುಕೊಂಡಿದ್ದೇನೆ. ಈಗ ಚಿತ್ರಸಂತೆಯಲ್ಲಿನ ಮಕ್ಕಳ ಚಿತ್ರಗಳನ್ನು ನೋಡೋಣ ಬನ್ನಿ.
ನಾನು ಮನೆಯಲ್ಲೇ ಚೆನ್ನಾಗಿ ನಿದ್ದೆ ಮಾಡುತ್ತಿದ್ದೆ, ಇದರ ಮದ್ಯೆ ನಮ್ಮಪ್ಪ ಮೊಬೈಲ್ ಬೇರೆ
ಇಲ್ಲಿರುವ ಕಲಾವಿದರಿಗೆಲ್ಲಾ ನನ್ನ ಕಡೆಯಿಂದ ಹ್ಯಾಟ್ಸಪ್!
ಯಾರೋ ನನ್ ಫೋಟೊ ತೆಗಿತಾವರಲ್ಲ!
ವಾಹ್! ಈ ಚಿತ್ರ ಸೂಪರ್!
ಯಾರದು!
ಅಯ್ಯೋ, ನಮ್ಮ ಅಪ್ಪ ಅಮ್ಮನಿಗೆ ಬುದ್ದಿಯಿಲ್ಲ, ಇಲ್ಲೆಲ್ಲೋ ಕರೆದುಕೊಂಡು ಬಂದಿದ್ದಾರೆ, ಮನೆಯಲ್ಲಿದ್ದಾರೆ ಮೊಬೈಲಿನಲ್ಲಿ ಗೇಮ್ ಅಥ್ವ ಕಾರ್ಟೂನ್ ಚಾನಲ್ ನೋಡಬಹುದಿತ್ತು!
ಚಿತ್ರಪಟ ತಗೊಳ್ಳಕ್ಕೆ ಬಂದ ನಮ್ಮಪ್ಪನಿಗೆ ಅಲ್ಲಿರುವ ಐಸ್ ಕ್ರೀಮ್ ಕೊಡಿಸಬೇಕು ಅನ್ನಿಸುತ್ತಿಲ್ಲವಲ್ಲ!
ನೀನು ಎಲ್ಲಿಗೆ ಕರೆದುಕೊಂಡು ಹೋದ್ರೂ ನಾನು ನಿದ್ರೆ ಮಾಡೋದು ಹೀಗೇನೇ
ನಾನು ಚೆನ್ನಾಗಿ ಕಾಣುತ್ತಿದ್ದಿನಲ್ವಾ? ಬೇಗ ಫೋಟೊ ತೆಗಿ
ಕುರಿ ಓಡಿಸಿಕೊಂಡು ಹೋಗುವ ಈ ಚಿತ್ರ ಸಕ್ಕತ್ ಆಗಿದೆ!
ಈ ರೀತಿ ಮೇಲೆ ಕುಳಿತುಕೊಂಡು ಲಾಲಿಪಪ್ ತಿನ್ನುತ್ತಿದ್ದರೇ......
ನಾನು ಬೀಳದಂತೆ ಗಟ್ಟಿಯಾಗಿ ಅಪ್ಪನ ತಲೆಯನ್ನು ಹೀಗೆ ಹಿಡಿದುಕೊಳ್ಳಬೇಕು
ನನ್ನ ತರ ಇರೋ ಆ ಪಾಪು ಫೋಟೊ ಎಷ್ಟು ಚೆನ್ನಾಗಿದೆ!
ಕೊನೆಯಲ್ಲಿ ಮತ್ತೊಂದು ವಿಚಾರ ನನ್ನ ಹಾಸನದ ಗೆಳೆಯನಾದ ಚಿತ್ರಕಲಾವಿಧ ಆರುಣ್ ಒಂದು ವರ್ಷದ ಹಿಂದೆ ನಮ್ಮ ಮನೆಗೆ ಬಂದು ನಾನು ತೆಗೆದ ಅನೇಕ ಹಳ್ಳಿ ಜೀವನದ ಚಿತ್ರಗಳನ್ನು ತೆಗೆದುಕೊಂಡು ಹೋಗಿದ್ದ. ಅದರಲ್ಲಿ ಈ ಬಾರಿ ಚಿತ್ರಿಸಿದ್ದ ಮೇಕೆಗಳನ್ನು ಓಡಿಸಿಕೊಂಡು ಬರುತ್ತಿರುವ ಹುಡುಗನ ಚಿತ್ರ "ಗೋಧೂಳಿ" ಮುವತ್ತೊಂದು ಸಾವಿರಕ್ಕೆ ಮಾರಾಟವಾಗಿದ್ದು ನಿಜಕ್ಕೂ ಖುಷಿಯ ವಿಚಾರ ಆತನಿಗೆ ಅಭಿನಂದನೆಗಳು.
ಹಾಸನದ ಗೆಳೆಯ ಮತ್ತು ಚಿತ್ರಕಲೆಗಾರ ಬಿಡಿಸಿದ "ಗೋಧೂಳಿ ಚಿತ್ರ"
ಮುಂದಿನ ಲೇಖನದಲ್ಲಿ ಚಿತ್ರಸಂತೆ ವಿಭಿನ್ನ ಕ್ಯಾಮೆರಾಗಳ ಆಟಗಳನ್ನು ಬ್ಲಾಗಿನಲ್ಲಿ ಹಾಕುತ್ತೇನೆ.
ಚಿತ್ರಗಳು ಮತ್ತು ಲೇಖನ
ಶಿವು.ಕೆ