"ಅಯ್ಯೋ ಇವನ್ನು ಮೊದಲು ತೆಗೆದುಕೊಂಡು ಹೋಗು ಶಿವು...ಸುಮ್ಮನೆ ನಂದಿಬಟ್ಟಲು ಗಿಡದ ಎಲೆಗಳನ್ನು ತಿಂದು ಇಡೀ ಮರವನ್ನೇ ಬೋಳು ಮಾಡಿಬಿಡ್ತವೆ" ಅಂತ ಗೆಳತಿ ಸುನಿತಾ ಮತ್ತೊಮ್ಮೆ ಹೇಳಿದಾಗ ನನಗೆ ನಗು ಬಂತು.
ಪಾಪ ! ಅವಳಿಗೇನು ಗೊತ್ತು ? ಈ ಹುಳುಗಳಿಗೆ ನಂದಿಬಟ್ಟಲು ಗಿಡದ ಎಲೆಗಳೇ ಆಹಾರವೆಂದು..
"ಶಿವು ಅನ್ನೋ ಛಾಯಾಗ್ರಾಹಕನೇ ಎಲ್ಲಿದ್ದಿಯೋ...ನೀನು ಇವತ್ತೇ ನಮ್ಮನೆಗೆ ಬರಬೇಕು. ಇಲ್ಲಿ ನನಗೆ ನಂದಿಬಟ್ಟಲು ಗಿಡದ ಎಲೆಗಳನ್ನೆಲ್ಲಾ ಬಕಾಸುರರಂತೆ ತಿಂದು ಮುಗಿಸುವ ಹುಳುಗಳು, ಅವುಗಳನ್ನು ಬೇಟೆಯಾಡಲು ನಮ್ಮೆ ಮನೆಯ ಟೆರಸ್ ಮೇಲೆ ಗುಂಪು ಗೂಡಿರುವ ಕಾಗೆಗಳ ಕಾಟ ನಮಗಂತು ಸಹಿಸಲಾಗುತ್ತಿಲ್ಲ. ಬೇಗ ಬಂದು ಇವುಗಳಿಗೆ ಒಂದು ಗತಿ ಕಾಣಿಸು. ನೀನು ಇವತ್ತು ಬರದಿದ್ದಲ್ಲಿ ನಾನೇ ನಿನಗೊಂದು ಗತಿ ಕಾಣಿಸುತ್ತೀನಿ" ಅಂತ ಸುನೀತಾ ಒಂದೇ ಸಮನೆ ಫೋನಿನಲ್ಲಿ ಬಡಬಡಿಸಿದಾಗ ಇರುವ ಕೆಲಸವನ್ನೇಲ್ಲಾ ಬಿಟ್ಟು ಅವಳ ಮನೆಗೆ ಹೋಗಿದ್ದೆ.
ನಂದಿಬಟ್ಟಲು ಗಿಡದ ಕಾಂಡ ಮತ್ತು ಎಲೆಗಳು
ಇಷ್ಟಕ್ಕೂ ಈ ಮೊದಲು ಅವಳ ಮನೆಗೆ ಹೋಗಿದ್ದಾಗ ಅವಳ ಮನೆಯ ಕಾಂಪೌಂಡಿನೊಳಗಿದ್ದ ನಂದಿಬಟ್ಟಲು ಗಿಡ, ಅದರ ಎಲೆಗಳು, ಒಲಿಯಾಂಡರ್ ಹಾಕ್ ಮಾತ್ ಎನ್ನುವ ಪತಂಗ ರಾತ್ರಿ ಸಮಯದಲ್ಲಿ ಆ ಗಿಡದ ಎಲೆಗಳ ಮೇಲೆ ಕೂತು ಮೊಟ್ಟೆ ಇಡುವುದು, ಜೋಳದ ಕಾಳಿನ ಗಾತ್ರದ ಮೊಟ್ಟೆಯಿಂದ ಹುಳು ಹೊರಬಂದು ಅದೇ ಎಲೆಯನ್ನು ತಿನ್ನುವುದು, ನಂತರ ಅದು ತೋರುಬೆರಳು ಗಾತ್ರದ ಹುಳುವಾಗಿ ಬೆಳೆಯುವ ವಿಚಾರವನ್ನೆಲ್ಲಾ ಅವಳಿಗೆ ಉಪನ್ಯಾಸ ಕೊಟ್ಟು ಬಂದಿದ್ದೆ. ಆಗ ನಾನು ಹೇಳಿದ್ದನ್ನೆಲ್ಲಾ ನಂಬಿದ್ದಳು. ಈಗ ಅವುಗಳ ಕಾಟ ತಡೆಯಲಾಗದೆ ನನ್ನನ್ನು ತರಾಟೆಗೆ ತೆಗೆದುಕೊಂಡಿದ್ದಳು.
ಮರುದಿನ ಪ್ರಾರಂಭವಾಯಿತು ನನ್ನ ಮನೆಯಲ್ಲಿ ಅದರ ಲಾಲನೆ ಪಾಲನೆ. ಒಂದು ಹೂ ಕುಂಡದಲ್ಲಿ ಏಳೆಂಟು ಎಲೆಗಳಿರುವ ನಂದಿಬಟ್ಟಲು ಗಿಡದ ಕಾಂಡವನ್ನು ಇಟ್ಟು ಅದರ ಎಲೆಗಳ ಮೇಲೆ ಈ ಹುಳುವನ್ನು ಬಿಟ್ಟೆ. ಸ್ವಲ್ಪ ಸಮಯದ ನಂತರ ಹುಳು ಎಲೆಯನ್ನು ತಿನ್ನತೊಡಗಿತು. ಒಂದು ತಾಸಿಗೆ ಒಂದು ಎಲೆಯನ್ನು ಹಾಕಿತು. ಜೊತೆಗೆ ಹಿಕ್ಕೆ ಹಾಕುವುದು, ಹೀಗೆ ಮೊದಲನೇ ದಿನವೇ ಐದಾರು ಎಲೆಗಳನ್ನು ತಿಂದು ಮುಗಿಸಿತ್ತು. ಓಹ್ ಇದು ಬೇರೆ ಚಿಟ್ಟೆಗಳಂತಲ್ಲ ಇದಂತೂ ಬಕಾಸುರ ವಂಶಕ್ಕೆ ಸೇರಿದಂತೆ ಕಾಣುತ್ತೆ...ಇದನ್ನು ಸಂಭಾಳಿಸುವುದು ಚಿಟ್ಟೆಗಳಷ್ಟು ಸುಲಭವಲ್ಲ ಅಂದುಕೊಂಡು ಪ್ರತೀದಿನ ಆರು ಕಿಲೋ ಮೀಟರ್ ದೂರದಲ್ಲಿರುವ ಗೆಳತಿ ಸುನಿತಾ ಮನೆಗೆ ಹೋಗಿ ನಂದಿಬಟ್ಟಲು ಗಿಡದ ಹತ್ತಾರು ಎಲೆಗಳು ತುಂಬಿದ ಕಾಂಡವನ್ನು ತರುವ ಕಾಯಕ ನನ್ನದಾಯಿತು.
ಒಲಿಯಾಂಡರ್ ಹಾಕ್ ಪತಂಗದ ಹುಳು [ oleander hawk moth caterpillar] ಇದರ ತಲೆ ಮತ್ತು ಬುಡ ಎಲ್ಲಿ ಅಂತ ಗೊತ್ತಾಗುತ್ತಿಲ್ಲ ಅಲ್ಲವೇ..!
ಹೀಗೆ ಒಂದು ವಾರದ ನಂತರ ಅದರ ಆಕಾರ ಮತ್ತು ವರ್ತನೆಯಲ್ಲಿ ಬದಲಾವಣೆಯುಂಟಾಯಿತು. ತೋರುಬೆರಳ ಗಾತ್ರದ ಹುಳು ಎಲೆ ತಿನ್ನುವುದನ್ನು ನಿಲ್ಲಿಸಿತ್ತು. ಅದಕ್ಕೂ ಮೊದಲು ತನ್ನ ದೇಹದ ಹೊರಪದರವನ್ನು ಹಾವಿನಂತೆ ಕಳಚಿ ಸಣ್ಣದಾಗಿತ್ತು. ನಾನು ಅದನ್ನೇ ಗಮನಿಸತೊಡಗಿದೆ. ಎಲೆ, ಕಾಂಡ, ಹೂಕುಂಡ ಎಲ್ಲಾ ಕಡೆ ಹರಿದಾಡತೊಡಗಿತು. ಬಹುಶಃ ತನ್ನ ಆಕಾರ ಬದಲಿಸಿ ಪ್ಯೂಪ ಆಗಲು, ಅದಕ್ಕಾಗಿ ಸುರಕ್ಷಿತ ಸ್ಥಳದ ಪರಿಶೀಲನೆಗಾಗಿ ಈ ಪರಿಯ ಗಡಿಬಿಡಿಯಿರಬಹುದೆಂದುಕೊಂಡೆ.
ಎಂದಿನಂತೆ ಮುಂಜಾನೆ ನಾನು ಬೆಳಿಗ್ಗೆ ದಿನಪತ್ರಿಕೆಯ ಕೆಲಸದಲ್ಲಿರುವಾಗ ನನ್ನಾಕೆ ಫೋನ್ ಮಾಡಿ "ಬೇಗ ಮನೆಗೆ ಬನ್ನಿ" ಎಂದಳು
"ಏನ್ ಸಮಾಚಾರ" ಕೇಳಿದೆ.
"ಬನ್ನಿ ಹೇಳ್ತೀನಿ"...ಅಂದಳು. ನಾನು ಎಂಟು ಗಂಟೆಯ ಹೊತ್ತಿಗೆಲ್ಲಾ ಮನೆಗೆ ಹೋದೆ.
"ಮೊದಲು ಈ ಹುಳುವನ್ನು ಎತ್ತಿ ಬಿಸಾಕಿ.....ನನಗಂತೂ ಅದರ ಕಾಟ ತಡೆಯೋಕಾಗೊಲ್ಲ...ಬೆಳಿಗ್ಗೆ ಆರು ಗಂಟೆಗೆ ಎದ್ದಾಗ ನಾನು ಹೊದ್ದಿದ್ದ ಕಂಬಳಿ ಮೇಲೆ ಮಲಗಿತ್ತು. ನಾನು ಕಣ್ಣು ಬಿಟ್ಟು ನೋಡಿದ ತಕ್ಷಣ ಭಯದಿಂದ ದಿಗಿಲಾಗಿ ಜೋರಾಗಿ ಕಂಬಳಿ ಕೊಡವಿ ಮಲಗಿಬಿಟ್ಟೆ. ಮತ್ತೆ ಈಗ ಎದ್ದು ಮನೆ ಕಸ ಗುಡಿಸಲು ಬಾಗಿಲ ಕಾರ್ಪೆಟ್ ತೆಗೆಯುತ್ತೇನೆ ಸುರುಳಿ ಸುತ್ತಿಕೊಂಡು ಮಲಗಿದೆ. ಕಾರ್ಪೆಟ್ ತೆಗೆದೆ. ಪಣ್ಣನೇ ನೆಗೆದು ಮತ್ತೆ ಸುರುಳಿ ಸುತ್ತಿಕೊಂಡಾಗ ನನಗಂತೂ ಸಿಕ್ಕಾಪಟ್ಟೆ ದಿಗಿಲಾಗಿಬಿಟ್ಟಿತು" ಅಂದಳು.
ನಾನು ಅವಳಿಗೆ ಸಮಾಧಾನ ಹೇಳಿ ಅದನ್ನು ಸಣ್ಣ ಕಡ್ಡಿಯಿಂದ ಮುಟ್ಟಿದೆ. ಪಣ್ ಎಂದು ನೆಗೆದು ಮತ್ತೆ ಸುರುಳಿ ಸುತ್ತಿಕೊಂಡಿತ್ತು. ತಿಳಿಹಸಿರು ಬಣ್ಣದಿಂದ ಕಂದು ಬಣ್ಣಕ್ಕೆ ತಿರುಗಿತ್ತು. ಹಾಗೆ ಅದರ ಸ್ಥಳವೂ ಬದಲಾಗಿತ್ತು.
ಓಹ್ ! ಇದು ರಾತ್ರೋ ರಾತ್ರಿ ಟಿ.ವಿ. ಸ್ಟ್ಯಾಂಡ್ ಮೇಲಿಟ್ಟಿದ್ದ ಹೂಕುಂಡದಿಂದ ಕೆಳಮುಖವಾಗಿ ಟಿ.ವಿ, ಡಿವಿಡಿ ಪ್ಲೆಯರ್, ಟೇಪರೆಕಾರ್ಡರ್, ಮೇಲೆಲ್ಲಾ ನಿದಾನವಾಗಿ ತೆವಳಿಕೊಂಡು ನೆಲದ ಮೇಲೆ ಸಾಗಿ ನಮ್ಮ ಬೆಡ್ ರೂಂ ಸೇರಿಕೊಂಡುಬಿಟ್ಟಿದೆ. ನನ್ನಾಕೆ ಹೆದರಿ ಬ್ಲಾಂಕೆಟ್ ಕೊಡವಿದಾಗ ಹಾಗೆ ನೆಲದ ಮೇಲೆ ತೆವಳಿಕೊಂಡು ಮುಂಬಾಗಿಲ ಕಾರ್ಪೇಟ್ ಕೆಳಗೆ ಸೇರಿಕೊಂಡುಬಿಟ್ಟಿದೆ.
ಮುಂದಿನ ಸ್ಥಿತಿಗತಿ ತಿಳಿಯಲು ಪುಸ್ತಕದ ಮೊರೆ ಹೋದೆ. ಈ ಹುಳು ಪ್ಯೂಪ ಆಗಲು ಭೂಮಿಯ ಮಣ್ಣಿನಲ್ಲಿ ಸೇರಿಕೊಳ್ಳುತ್ತದೆ ಎನ್ನುವ ವಿಷಯ ತಿಳಿಯಿತು. ಕೊನೆಗೆ ಹೊರಗಿನಿಂದ ಮರಳು ಮಿಶ್ರಿತ ಮಣ್ಣನ್ನು ತಂದು ಒಂದು ಪಾದರಕ್ಷೆ ಬಾಕ್ಸ್‌ನಲ್ಲಿ ಅರ್ಧ ತುಂಬಿ ಅದರೊಳಗೆ ಈ ಹುಳುವನ್ನು ಬಿಟ್ಟೆ. ಈ ಹಂತದಲ್ಲಿ ಒಂದು ಸಣ್ಣ ಕಡ್ಡಿಯನ್ನು ಮುಟ್ಟಿದರೂ ಪಣ್ ಅಂತ ನೆಗೆಯುತ್ತಿದ್ದ ಹುಳು ಮಣ್ಣು ತುಂಬಿದ ಬಾಕ್ಸಿನೊಳಗೆ ಬಿಟ್ಟಾಗ ಸುಮ್ಮನಾಯಿತು.
ಹತ್ತನೇ ದಿನ ಹುಳು ಆಗಲೇ ಬಾದಮಿ ಬಣ್ಣದ ಪ್ಯೂಪ ರಚಿಸಿಕೊಂಡಿದೆ. ಮತ್ತೆ ಮೇಲ್ಪದರದಲ್ಲಿ ಜೇಡರಬಲೆಯಂತೆ ಜಾಲರಿಯನ್ನು ರಕ್ಷಣ ಕೋಟೆಯಂತೆ ರಚಿಸಿಕೊಂಡಿದೆ. ಅಲ್ಲಿಗೆ ಇನ್ನು ಮುಂದೆ ಪತಂಗವಾಗಿ ಹೊರಬಂದಾಗ ಫೋಟೋ ತೆಗೆಯುವುದಷ್ಟೇ ನನ್ನ ಕೆಲಸ ಅಂದುಕೊಂಡು ಸುಮ್ಮನಾದೆ.
ಇದುವರೆಗೂ ಅದರ ಕಾಟ ತಡೆಯಲಾರದೇ ಗೊಣಗುತ್ತಿದ್ದ ನನ್ನಾಕೆ ಅದು ಪ್ಯೂಪ ಆದ ನಂತರ [ನನ್ನನ್ನೂ ಮತ್ತು ಹುಳುವನ್ನು ಚೆನ್ನಾಗಿ ಬೈದುಕೊಂಡು]ನಿಟ್ಟುಸಿರುಬಿಟ್ಟಳು.
ಈ ಮದ್ಯೆ ಗೆಳೆಯ ಮಲ್ಲಿಕಾರ್ಜುನ್ "ಎಲ್ಲಾದರೂ ಪ್ರವಾಸ ಹೋಗೋಣವೇ" ಕೇಳಿದರು. ಒಂದು ವಾರದ ನಂತರ ಇಬ್ಬರೂ ಚಿತ್ರದುರ್ಗಕ್ಕೆ ಹೊರಟೆವು.
ಹೊರಡುವ ಹಿಂದಿನ ದಿನ ಬಾದಾಮಿ ಬಣ್ಣಕ್ಕೆ ತಿರುಗಿದ್ದ ಈ ಪ್ಯೂಪ ನೆನಪಾಯಿತು. ಅದನ್ನು ಹೇಗೆ ಬಿಟ್ಟು ಹೋಗುವುದು ? ಬಿಟ್ಟು ಹೋದ ಮೇಲೆ ಅದು ಪತಂಗವಾಗಿ ಹೊರಬಂದುಬಿಟ್ಟರೆ ಅದರ ಫೋಟೋ ತೆಗೆಯುವ ಅವಕಾಶ ತಪ್ಪಿಹೋಗುತ್ತದಲ್ಲ.! ಕೊನೆಗೆ ನಮ್ಮ ಲಗ್ಗೇಜುಗಳ ಜೊತೆಗೆ ಪ್ಯೂಪ ಇರುವ ಪಾದರಕ್ಷೆ ಬಾಕ್ಸನ್ನು ತೆಗೆದುಕೊಂಡು ಹೊರಟೆವು.
ಪತಂಗ ಹೊರಬರುವ ಮೊದಲು ಮಣ್ಣಿನ ಬಣ್ಣದ ಪ್ಯೂಪ ಕಿರುಬೆರಳಷ್ಟು ದಪ್ಪವಿತ್ತು.
ಚಿತ್ರದುರ್ಗದ ಕೋಟೆಯ ಫೋಟೊಗ್ರಫಿಗಾಗಿ ಎರಡು ದಿನವಿದ್ದೆವು. ಅಲ್ಲಿದ್ದ ಪ್ರತಿ ಗಂಟೆಗೊಮ್ಮೆ ಬಾಕ್ಸ್ ತೆಗೆದು ಪತಂಗ ಡೆಲಿವರಿ ಆಗಿದೆಯಾ ಅಂತ ನೋಡುವುದು ಮತ್ತು ಮುಚ್ಚುವುದು ನಡೆದಿತ್ತು. ಆದ್ರೆ ಕೋಟೆಯ ಮೇಲೆ ಡೆಲಿವರಿ ಅದಕ್ಕೇ ಇಷ್ಟವಿರಲಿಲ್ಲವೆನಿಸುತ್ತೆ. ಹೇಗೆ ತೆಗೆದುಕೊಂಡು ಹೋಗಿದ್ದೆವೋ ಹಾಗೆ ವಾಪಸ್ಸು ಬಾಕ್ಸ್ ತೆಗೆದುಕೊಂಡು ಬಂದೆವು. ನಮ್ಮ ಜೊತೆ ಪ್ಯೂಪ ಕೂಡ ೪೫೦ ಕಿ.ಮಿ. ದೂರ ಪ್ರಯಾಣ ನಡೆಸಿದಂತಾಗಿತ್ತು.
ಈ ಘಟನೆಗಳು ನಡೆದ ಮತ್ತೊಂದು ವಾರಕ್ಕೆ ನಾನು ಮತ್ತು ನನ್ನ ಶ್ರೀಮತಿ ಈ ಮೊದಲೇ ಮುಂಗಡ ಕಾದಿರಿಸಿದ್ದ ಗೋವಾಗೆ ಹೊರಡುವ ಸಮಯ ಬಂತು. ಈ ಒಂದು ವಾರದಲ್ಲಿ ಪ್ಯೂಪದಿಂದ ಪತಂಗ ಹೊರಬರಲೇ ಇಲ್ಲ. ಆದರೆ ನಿದಾನವಾಗಿ ಅದರ ಬಣ್ಣ ಮಣ್ಣಿನ ಬಣ್ಣಕ್ಕೆ ತಿರುಗಿತ್ತು. ಪ್ಯೂಪದೊಳಗೆ ಹುಳು ಬದುಕಿದೆಯೋ ಅಥವ ಸತ್ತುಹೋಗಿದೆಯೋ, ಇಲ್ಲಾ ಪತಂಗವಾಗಿ ಅದರ ದೇಹ ಬೆಳೆಯುತ್ತಿದೆಯೋ ಅನ್ನುವ ಅನುಮಾನ ಶುರುವಾಗಿ ನನ್ನ ಕಿರುಬೆರಳಿನಿಂದ ಲಗುವಾಗಿ ಮುಟ್ಟಿದೆ. ತಟ್ಟನೇ ಒಂದು ಕ್ಷಣ ಅಲುಗಾಡಿತು. ಆ ಕ್ಷಣ ನನಗೂ ಬೆಚ್ಚಿದಂತಾಗಿತ್ತು. ಬಹುಶಃ ಹೊರಗಿನ ಆಕ್ರಮಣವನ್ನು ತಪ್ಪಿಸಿಕೊಳ್ಳಲು ಈ ರೀತಿ ನಡೆದುಕೊಳ್ಳುತ್ತಿರಬಹುದು ಅನ್ನಿಸಿತು.
ಅಂದು ಹುಳು ಪ್ಯೂಪವಾಗಿ ಹದಿನೆಂಟನೇ ದಿನ. ನಾವು ಗೋವಾಗೆ ಹೋಗುವ ದಿನವೂ ಅದೇ ಆಗಿತ್ತು. ಕೊನೇ ಪ್ರಯತ್ನ ನಡೆದೇ ತೀರಲಿ ಎಂದು ಸಂಜೆ ಗೋವಾಗೆ ಹೊರಡುವ ರೈಲಿನಲ್ಲಿ ಈ ಪ್ಯೂಪ ಬಾಕ್ಸನ್ನು ಜೊತೆಯಲ್ಲಿರಿಸಿಕೊಂಡೆವು.
ಪ್ಯೂಪದಿಂದ ಹೊರಬಂದ ಪರಿಪೂರ್ಣ ಬೆಳವಣಿಗೆ ಹೊಂದಿದ ಒಲಿಯಾಂಡರ್ ಹಾಕ್ ಮಾತ್[oliender hawk moth]
ಬೆಳಿಗ್ಗೆ ಐದು ಗಂಟೆಗೆ ಮಡ್‍ಗಾಂ ನಿಲ್ದಾಣದಲ್ಲಿ ರೈಲು ನಿಂತಾಗ ಬಾಕ್ಸ್ ತೆಗೆದು ನೋಡಿದೆ...... ಆಶ್ಚರ್ಯ !! ಹಸಿರು ಬಣ್ಣದ ಒಂದೆರಡು ದಪ್ಪ ಪಟ್ಟೆಗಳನ್ನು ಹೊಂದಿರುವ ಹೋಲಿಯೆಂಡರ್ ಹಾಕ್ ಮಾತ್ ಎನ್ನುವ ಪತಂಗ ಪ್ಯೂಪದಿಂದ ಹೊರಬಂದಿದೆ. ಬಿಟ್ಟ ಕಣ್ಣುಗಳಿಂದ ನನ್ನನೇ ನೋಡುತ್ತಿದೆ.॒! ತಕ್ಷಣವೇ ಬಾಕ್ಸ್ ಮುಚ್ಚಿಬಿಟ್ಟೆ, ಅದು ಹಾರಿಹೋಗಿಬಿಡಬಹುದು ಅಂತ. ಅಮೇಲೆ ಅನ್ನಿಸಿತು ಅದಕ್ಕೆ ಕಣ್ಣು ಕಾಣಿಸುವುದಿಲ್ಲವಾದ್ದರಿಂದ ಹಗಲು ಹೊತ್ತಿನಲ್ಲಿ ಹಾರಾಡುವುದಿಲ್ಲವೆಂದು ಪುಸ್ತಕದಲ್ಲಿ ಓದಿದ್ದ ನೆನಪಾಯಿತು.
ಪತಂಗ ಹೊರಬಂದ ನಂತರ ಪ್ಯೂಪದ ಪರಿಸ್ಥಿತಿ...!
ನಮ್ಮ ಲಗ್ಗೇಜುಗಳ ಜೊತೆ ಪತಂಗದ ಬಾಕ್ಸನ್ನು ಹೊತ್ತು ನಾವು ತಲುಪಬೇಕಿದ್ದ ಕಲಂಗುಟ್ ಪಟ್ಟಣದ ಬಾಗ ಬೀಚ್ ಬಳಿಯಿದ್ದ ಸನ್ ವಿಲೇಜ್ ರೆಸಾರ್ಟ್ ತಲುಪುವ ಹೊತ್ತಿಗೆ ಬೆಳಗಿನ ಹತ್ತುಗಂಟೆ. ದಾರಿ ಮದ್ಯೆ ಸಿಗುವ ಹೊಲದ ಬಯಲಿನ ಫೊದೆಯೊಂದರಲ್ಲಿ ಬಿಡಬೇಕೆಂದು ತೀರ್ಮಾನಿಸಿದ್ದೆವು. ಇದಕ್ಕೆ ಕಣ್ಣು ಕಾಣುವುದಿಲ್ಲವಾದ್ದರಿಂದ ಹೊರಗೆ ಬಯಲಿನಲ್ಲಿ ಬಿಟ್ಟರೆ ಕಾಗೆ ಇನ್ನಿತರ ಪಕ್ಷಿಗಳಿಗೆ ಆಹಾರವಾಗುವುದು ಖಚಿತವೆಂದು ಪೊದೆಯೊಳಗೆ ಬಿಟ್ಟೆವು.
ನೋಡಲು ಕಣ್ಣು ತೆರೆದಂತೆ ಕಾಣುವ ರೀತಿ ರಚನೆಯಾಗಿರುವುದು ಇತರ ಅಕ್ರಮಣಕಾರಿ ವೈರಿಗಳಿಗೆ ಏಮಾರಿಸಲು ಆ ರೀತಿ ರಚನೆಯಾಗಿತ್ತದೆ. ಮತ್ತು ಅದೇ ಕಾರಣಕ್ಕೆ ಹಗಲು ಹೊತ್ತಿನಲ್ಲಿ ಕೂತಲ್ಲೇ ಕುಳಿತಿರುತ್ತದೆ. ಪತಂಗಕ್ಕೂ ಚಿಟ್ಟೆಗೂ ಏನು ವ್ಯತ್ಯಾಸವೆಂದರೆ ಚಿಟ್ಟೆಯ ರೆಕ್ಕೆಗಳು ದೊಡ್ಡದಾಗಿರುತ್ತವೆ ದೇಹ ಚಿಕ್ಕದಾಗಿರುತ್ತದೆ..ಆದ್ರೆ ಪತಂಗಕ್ಕೆ ದೇಹ ದೊಡ್ಡದಾಗಿದ್ದು ರೆಕ್ಕೆಗಳು ಗಾತ್ರದಲ್ಲಿ ಚಿಕ್ಕದಾಗಿರುತ್ತವೆ. ಚಿಟ್ಟೆಗಳು ಹಗಲಿನಲ್ಲಿ ಹಾರಾಟ ನಡೆಸಿದರೆ, ಪತಂಗಗಳು ರಾತ್ರಿ ಸಮಯದಲ್ಲಿ ಹಾರಾಡುತ್ತವೆ. ಚಿಟ್ಟೆಗಳಷ್ಟು ಆಕರ್ಷಕ ಬಣ್ಣಗಳನ್ನು ಪತಂಗಗಳು ಹೊಂದಿರುವುದಿಲ್ಲವಾದ್ದರಿಂದ ಚಿಟ್ಟೆಯಷ್ಟು ಸುಂದರವಾಗಿರುವುದಿಲ್ಲ.
ನಂತರ ನನಗೆ ಬೇಕಾದ ಹಾಗೆ ಅದರ ಫೋಟೋಗಳನ್ನು ಕ್ಲಿಕ್ಕಿಸಿ ರೆಸಾರ್ಟ್ ಕಡೆಗೆ ಹೆಜ್ಜೆ ಹಾಕುವಾಗ ನಮ್ಮ ಮನಸ್ಸು ಏನೋ ಕಳೆದುಕೊಂಡಂತೆ ಅನಿಸಿತ್ತು. ಆದರೇನು ಮಾಡುವುದು ಅದಕ್ಕೂ ಸ್ವತಂತ್ರವಾಗಿ ಬದುಕುವ ಹಕ್ಕಿದೆಯಲ್ಲವೇ? ಸರಿ ಸುಮಾರು ಹತ್ತು ದಿನ ಹುಳುವಾಗಿ, ಪ್ಯೂಪವಾಗಿ ಹದಿನೆಂಟು ದಿನ ನಮ್ಮ ಜೊತೆ ಇದ್ದು ಗೋವದಲ್ಲಿ ತನ್ನ ಬದುಕನ್ನು ಹರಸ ಹೊರಟ ಪತಂಗಕ್ಕೆ ಹಾಗೂ ಇಂಥ ಅಧ್ಬುತ ಸೃಷ್ಠಿ ವೈವಿಧ್ಯವನ್ನು ನೋಡುವ ಆನಂದಿಸುವ ಅವಕಾಶ ಕಲ್ಪಿಸಿದ ಪ್ರಕೃತಿ ಮಾತೆಗೆ ನಮಸ್ಕರಿಸಿ ಮುನ್ನಡೆದಾಗ ರೆಸಾರ್ಟ್ ತಲುಪಿಯಾಗಿತ್ತು.
[ಪ್ಯೂಪವಾಗುವ ಮೊದಲು ಕಂದುಬಣ್ಣವಾಗಿದ್ದ ಚಿತ್ರ, ಪ್ಯೂಪವಾದ ನಂತರ ಬಾದಾಮಿ ಬಣ್ಣ ಪಡೆದುಕೊಂಡಿದ್ದು, ಮರಳಿಗೆ ಬಿಟ್ಟ ಮೇಲೆ ತನ್ನ ದೇಹದ ಮೇಲೆ ಸೂರಿನಂತೆ ಒಂದು ರಕ್ಷಣ ಜಾಲರಿಯನ್ನು ಕಟ್ಟಿಕೊಂಡಿದ್ದ ಚಿತ್ರಗಳು ನನ್ನಿಂದ ತಪ್ಪಿಸಿಕೊಂಡಿರುವುದರಿಂದ ವಿಷಾದಿಸುತ್ತೇನೆ...]
----------------------- ೦ -------------------
ಮತ್ತೊಂದು ವಿಚಾರವನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಬಯಸುತ್ತೇನೆ..ನನ್ನ "ಛಾಯಾಕನ್ನಡಿ" ಬ್ಲಾಗ್ ಪ್ರಾರಂಬಿಸಿದ್ದು ದಿನಾಂಕ 24-8-2008 ರಂದು. ವಿಶ್ವದಾದ್ಯಂತ ನಮ್ಮ ಬ್ಲಾಗ್ ಗೆಳೆಯರು ನನ್ನ ಛಾಯಾಕನ್ನಡಿ ಬ್ಲಾಗಿನ ಬಾಗಿಲನ್ನು ದಿನಕ್ಕೆ ಎಷ್ಟು ಬಾರಿ ತೆರೆಯಬಹುದು ಅನ್ನುವ ಕುತೂಹಲಕ್ಕಾಗಿ ಆರು ತಿಂಗಳ ನಂತರ ಪ್ರೇಮಿಗಳ ದಿನವಾದ ದಿನಾಂಕ 14-2-2009 ರಂದು ಗೆಳೆಯ ರಾಜೇಶ್ ಸಹಾಯದಿಂದ ನನ್ನ ಬ್ಲಾಗಿನಲ್ಲಿ ಕ್ಲಿಕ್ಕಿಂಗ್ಸ್ ಸೆಟ್ ಮಾಡಿಕೊಂಡೆ. ಮತ್ತೆ ಈಗ ದಿನಾಂಕ 25-6-2009 ಹೊತ್ತಿಗೆ ಸರಿಯಾಗಿ 132 ದಿನಗಳಲ್ಲಿ 10,000 ಕ್ಲಿಕ್ಕಿಂಗ್ಸ್ ದಾಟಿದೆ. ಪ್ರತಿದಿನ ವಿಶ್ವದಾದ್ಯಂತ ನಮ್ಮ ಕನ್ನಡ ಬ್ಲಾಗ್ ಗೆಳೆಯರು ಛಾಯಾಕನ್ನಡಿ ಬ್ಲಾಗನ್ನು ಸರಾಸರಿ "76" ಬಾರಿ ತೆರೆದು ನೋಡಿ ಪ್ರೋತ್ಸಾಹಿಸುತ್ತಿರುವುದು ನನಗಂತೂ ಖುಷಿಯಾಗುತ್ತಿದೆ. ನಿಮ್ಮ ಪ್ರೋತ್ಸಾಹ ಹೀಗೆ ಇರಲಿ...ಧನ್ಯವಾದಗಳು.
ಚಿತ್ರ ಮತ್ತು ಲೇಖನ.
ಶಿವು.ಕೆ