Monday, December 21, 2009

"ಅಣ್ಣಾ ಇದು ಯಾವ ಮೀನು ಗೊತ್ತಾ"



"ಒಂದು ನೂರು ಪಾರ್ಸೆಲ್, ಮತ್ತೊಂದು ನೂರು ಸರ್ವಿಸ್,"

ಆ ಮಾತನ್ನು ಕೇಳಿ ಆಕೆಯತ್ತ ನೋಡಿದೆ. ಮಧ್ಯ ವಯಸ್ಸು ದಾಟಿದ್ದರೂ ನೋಡಲು ಲಕ್ಷಣವಾಗಿದ್ದಳು ಆಕೆ. ಚಟಪಟ ಅಂತ ಮಾತಾಡುತ್ತಾ, ಕಣ್ಣಲ್ಲೇ ಎಲ್ಲರನ್ನೂ ಗಮನಿಸುತ್ತಾ, ಮಾರು ದೂರದಲ್ಲಿ ನಿಂತು ತಿಂದು ಮುಗಿಸಿದವನು ಹಣ ಕೊಡುತ್ತಾನಾ, ಇಲ್ಲವಾ ಅಂತ ಗಮನಿಸುತ್ತಾ, ತನ್ನ ಪಕ್ಕ ನಿಂತು ಬಾಣಲೆಯ ಎಣ್ಣೆಯಲ್ಲಿ ಮೀನಿನ ಕಬಾಬ್ ಮತ್ತು ಅದರ ಪಕ್ಕ ಮತ್ತೊಂದು ಕಪ್ಪುಬಣ್ಣದ ಕಾವಲಿಯಲ್ಲಿ ಮೀನು ಪ್ರೈ ಮಾಡುತ್ತಿದ್ದ ಗಂಡನ ಕಡೆಗೆ ಆಗಾಗ ಹೀಗೆ ಆರ್ಡರ್ ಮಾಡುತ್ತಿದ್ದಳು ಅವಳು.

ಮತ್ತೆ ಅವಳ ಬಾಯಿಂದ ಅದೇ ಮಾತು. "ನಾಲ್ಕು ನೂರು ಪಾರ್ಸೆಲ್, ಕಾಲ್ ಪ್ರೈ ಪಾರ್ಸೆಲ್, ನಿಮಗೇನಣ್ಣ, ಸ್ವಲ್ಪ ಇರಿ, ಅರ್ಜೆಂಟ್ ಮಾಡಿದ್ರೆ ಹೇಗೆ, ಮೀನು ಚೆನ್ನಾಗಿ ಬೇಯಬೇಕಲ್ವ, ಅರ್ಜೆಂಟ್ ಮಾಡಬೇಡ್ರಿ,"

ಮತ್ತೆ ಗಂಡನತ್ತ ತಿರುಗಿ "ನಾಲ್ಕು ನೂರು ಕಬಾಬ್ ಪಾರ್ಸೆಲ್, ಕಾಲ್ ಪ್ರೈ ಪಾರ್ಸೆಲ್," ಅನ್ನುತ್ತಾ ಈಗ ಮೀನನ್ನು ತೆಗೆದುಕೊಂಡು ತಿನ್ನುತ್ತಿರುವವರ ಕಡೆ ಒಂದು ಸುತ್ತು ಗಮನ ಹರಿಸಿದಳು.

ನನಗಂತೂ ಇದು ನಿಜಕ್ಕೂ ಕುತೂಹಲವೆನ್ನಿಸಿತ್ತು. ಆತ ಬಾಣಲೆಗೆ ಹಾಕುವ ಮುನ್ನ ತೂಕದ ತಕ್ಕಡಿಯಲ್ಲಿ ನೂರು ಗ್ರಾಮ್ ಮೀನಿನ ತುಣುಕುಗಳನ್ನು ಹಾಕಿದ. ಸ್ವಲ್ಪ ಕಡಿಮೆ ಬಂತು. ಆಗ ದೂರದಿಂದಲೇ ಒಂದು ಮೀನಿನ ತುಂಡನ್ನು ತಕ್ಕಡಿಗೆ ಎಸೆದಾಗ ಅದು ಕೆಳಗೆ ಬಂತು. ತಕ್ಷಣ ಅದನ್ನು ತೆಗೆದು ಎಣ್ಣೆ ಕಾಯುತ್ತಿರುವ ಬಾಣಲೆಗೆ ಹಾಕಿದ. ಆಗ ನನಗನ್ನಿಸಿತು ಒಂದು ನೂರು ಅಂದರೆ ಒಂದು ಪ್ಲೇಟ್, ನಾಲ್ಕು ನೂರು ಅಂದರೆ ನಾಲ್ಕು ಪ್ಲೇಟ್ ಅಂತ.

"ಅರೆರೆ..ಇವನೇನು ಇಷ್ಟು ಕರೆಕ್ಟ್ ಆಗಿ ತೂಕ ಹಾಕುತ್ತಾನಲ್ಲ, ಅಂದುಕೊಳ್ಳುತ್ತಾ ಅವನೆಡೆಗೆ ನೋಡಿದೆ. ಆತ ತನ್ನ ಕೆಲಸದಲ್ಲಿ ಮಗ್ನ. ಹೆಂಡತಿಗೆ ತಕ್ಕ ಗಂಡ ಅಂದುಕೊಂಡು ನನ್ನ ಜೊತೆಯಲ್ಲಿ ಬಂದವನ ಕಡೆಗೆ ತಿರುಗಿ "ನಿನಗೇನು ಬೇಕೋ ತೆಗೆದುಕೊ" ಅಂದೆ. ಅವನು ತುಸು ನಾಚುತ್ತಾ, ಚೊತೆಯಲ್ಲಿಯೇ ಅತಿ ನಾಚಿಕೆ ಪಟ್ಟುಕೊಂಡರೆ ನನಗೆ ಸಿಗಬೇಕಾದ್ದು ಸಿಗಲಾರದು ಅಂತಲೂ ಅನ್ನಿಸಿ,

"ನೋಡಿ ಸರ್, ಇಲ್ಲಿ ಮೀನಿನ ಕಬಾಬ್ ತುಂಬಾ ಚೆನ್ನಾಗಿ ಮಾಡುತ್ತಾರೆ, ಫ್ರೈ ಕೂಡ ತುಂಬಾ ಚೆನ್ನಾಗಿರುತ್ತೆ. ಮೊದಲು ಫ್ರೈ ತಿಂದುಬಿಡುತ್ತೇನೆ ನಂತರ ಕಬಾಬ್ ಟೇಸ್ಟ್ ಮಾಡೋಣ" ಅಂದವನೇ ಎರಡು ಪ್ಲೇಟ್ ಕಬಾಬ್ ಅಂದ.

ಅರೆರೆ...ನನಗೂ ಸೇರಿಸಿ ಹೇಳುತ್ತಾನಲ್ಲ ಇವನು ಅನ್ನಿಸಿ,

"ನನಗೆ ಬೇಡ ನೀನು ತಗೋ" ಅಂದೆ.

"ಇರಲಿ ತಗೊಳ್ಳಿ" ಅಂದ. ಮತ್ತೆ ನನಗೆ ಬೇಡವೆಂದು ಒಂದು ಪ್ಲೇಟ್ ಮಾತ್ರ ಅಂತ ಆ ಹೆಂಗಸಿಗೆ ನಾನೇ ಹೇಳಿದೆ. ಐದೇ ನಿಮಿಷದಲ್ಲಿ ಆತ ಕೇಳಿದ ಹೊಗೆಯಾಡುತ್ತಿರುವ ಮೀನಿನ ಫ್ರೈ, ಈರುಳ್ಳೀ ಮತ್ತು ನಿಂಬೆಹಣ್ಣಿನ ಚೂರಿನ ಜೊತೆಗೆ ಬಂತು. ಆತನ ನೋಡಿ ನನಗೆ ತುಂಬಾ ಖುಷಿಯಾಯ್ತು. ಏಕೆಂದರೆ ಅದನ್ನು ತಿನ್ನುವಾಗ ಅದೇನು ಆನಂದವೋ ಅವನಿಗೆ. ಮತ್ತೊಂದು ಪ್ಲೇಟ್ ಮೀನು ಫ್ರೈ ಕೇಳಿ ತಿಂದ.

"ಅಣ್ಣಾ ಇದು ಯಾವ ಮೀನು ಗೊತ್ತಾ"

"ಗೊತ್ತಿಲ್ಲಪ್ಪ"

"ಇದೇ ಅಣ್ಣಾ ಪಾಂಪ್ಲೆಟ್ ಮೀನು. ನಾವೇ ಹಿಡಿದ ಮೀನನ್ನು ಇಲ್ಲಿ ಇಷ್ಟು ರುಚಿಯಾಗಿ ಮಸಾಲೆ ಹಾಕಿ ಮಾಡುತ್ತಾರೆ. ಎರಡು ಪೆಗ್ ಹಾಕಿಕೊಂಡು ಇಲ್ಲಿ ಬಂದುಬಿಟ್ಟರೆ ಇಲ್ಲಿನ ವಾಸನೆಯೇ ಸ್ವರ್ಗಸುಖ ಗೊತ್ತಣ್ಣ" ಅಂದ ಅವನ ಕಣ್ಣುಗಳಲ್ಲಿ ತೃಪ್ತಿಯ ಕುರುಹು ಕಾಣುತ್ತಿತ್ತು. ಅವನ ಮಾತಿಗೆ ನಾನು ಉತ್ತರ ಕೊಡದೆ ಸುಮ್ಮನೆ ನಸುನಕ್ಕೆ. ನಾನು ಮಾತಾಡದಿರುವುದು ನೋಡಿ ಅವನೇ ಮುಂದುವರಿಸಿದ.

"ಇಲ್ಲಿ ನೋಡಿಣ್ಣಾ, ನಾನು ಪ್ರತಿದಿನ ಇಂಥ ನೂರಾರು ಮೀನುಗಳನ್ನು ನನ್ನ ಬಲೆಯಲ್ಲಿ ಹಿಡಿದುಹಾಕ್ತೇನೆ. ಆದ್ರೆ ಅದನ್ನು ತಿನ್ನುವ ಯೋಗವಿಲ್ಲ. ಯಾರೋ ಎಲ್ಲವನ್ನು ಕೊಂಡುಕೊಳ್ಳುತ್ತಾರೆ, ನಂತರ ಎಲ್ಲ ಮೀನುಗಳನ್ನು ವಿಂಗಡಿಸಿ, ಮಾರುತ್ತಾರೆ. ಇಲ್ಲಿ ಹೀಗೆ ಎಣ್ಣೆಯಲ್ಲಿ ಕುದಿಯುವ ಹೊತ್ತಿಗೆ ಅದರ ಬೆಲೆಯ ಹತ್ತರಷ್ಟು ಕೊಡಬೇಕೆಂದಾಗ ಮನಸ್ಸಿಗೆ ನೋವಾಗುತ್ತಣ್ಣ" ಅಂದಾಗ ಅವನ ಮನಸ್ಸಿನ ನೋವು ಕಣ್ಣುಗಳಲ್ಲಿ ಕಾಣುತ್ತಿತ್ತು.

"ನಿನಗಿಷ್ಟವಾದ ಈ ಮೀನನ್ನು ನೀನೆ ಬಲೆ ಹಾಕಿ ಹಿಡಿದಿರುವೆ ಅಂದ ಮೇಲೆ ನಿನಗೆ ಬೇಕಾದ್ದನ್ನು ಆರಿಸಿಕೊಂಡು ಮನೆಯಲ್ಲಿ ನಿನ್ನ ಹೆಂಡತಿಗೆ ಕೊಟ್ಟು ನಿನಗೆ ಬೇಕಾದ ಹಾಗೆ ಮಾಡಿಸಿಕೊಂಡು ತಿನ್ನಬಹುದಲ್ವಾ? ಅವನೆಡೆಗೆ ಪ್ರಶ್ನೆ ಎಸೆದೆ.

ಆತ ತಕ್ಷಣ ತಿನ್ನುತ್ತಿದ್ದವನು ನಿಲ್ಲಿಸಿದ. ನನ್ನಡೆಗೆ ನೋಡಿದ. ಅವನ ನೋಟ ನನಗೆ ಆ ಕ್ಷಣಕ್ಕೆ ಭಯವೆನ್ನಿಸಿತು. "

"ಯಾಕೆ ಹಾಗೆ ನೋಡ್ತೀಯಾ" ಅಂದೆ.

"ಅಣ್ಣಾ ನನಗೆಲ್ಲಿ ಹೆಂಡತಿ ಇದ್ದಾಳೆ, ಅವಳು ತೀರಿಹೋಗಿ ಐದು ವರ್ಷಗಳಾದವು."

ಆತ ತಲೆ ಎತ್ತದೇ ಮೆತ್ತನೆ ದ್ವನಿಯಲ್ಲಿ ಹೇಳಿದಾಗ ನನಗೆ ಒಂದು ಕ್ಷಣ ಶಾಕ್ ಆಗಿತ್ತು. ಅವನೆಡೆಗೆ ನೋಡಿದೆ. ಕಂಡರೂ ಕಾಣದ ಹಾಗೆ ಅವನ ಕಣ್ಣಂಚಲ್ಲಿ ನೀರು ಇಣುಕಿತ್ತು.

ನನ್ನ ಮನಸ್ಸಿಗೆ ಒಂಥರ ಕಸಿವಿಸಿ ಉಂಟಾಯಿತು. ನಾನು ಈ ವಿಚಾರವನ್ನು ಕೇಳಬಾರದಿತ್ತು ಅನ್ನಿಸಿತು. ಹೋಗಲಿ ಬಿಡು ಅಂತ ಸಮಾಧಾನಿಸಿ, ಅವನು ಬೇಡವೆಂದರೂ ಮತ್ತೊಂದು ಮೀನಿನ ಕಬಾಬ್ ಹೇಳಿದೆ. ನನ್ನ ಕಡೆಗೆ ನೋಡದೇ ಬಗ್ಗಿ ಕಣ್ಣಂಚಿನ ನೀರನ್ನು ಒರಸಿಕೊಳ್ಳುತ್ತಿದ್ದ. ಎರಡು ಪೆಗ್ ಕುಡಿದಿದ್ದಕ್ಕೋ ಏನೋ ಕಣ್ಣು ಬೇಗನೇ ಕೆಂಪಾಗಿತ್ತು.

ಅಲ್ಲಿಂದ ಇಬ್ಬರೂ ಹೊರಟೆವು. ಅವನಿಗಿಷ್ಟವಾದ ಹೋಟಲ್ಲಿಗೆ ಹೋಗಿ ಊಟ ಕೊಡಿಸಿದೆ. ಮತ್ತದೇ ಮೀನಿನ ಕೆಂಪುಬಣ್ಣದ ಸಾರು, ಕೆಂಪುಬಣ್ಣದ ದಪ್ಪಕ್ಕಿ ಅನ್ನವನ್ನು ಇಷ್ಟಪಟ್ಟು ತಿಂದು ಮುಗಿಸಿದ. ಅವನು ತೃಪ್ತನಾಗಿದ್ದು ಕಂಡು ನನಗೆ ಖುಷಿಯಾಯ್ತು.

ನನಗೆ ಆತ ಸಿಕ್ಕಿದ ಮೇಲೆ ಒಂದೇ ಸಮ ಹರಳು ಹುರಿದಂತೆ ಮಾತಾಡುತ್ತಿದ್ದವನು ಇವನೇನಾ ಅನ್ನುವಷ್ಟರ ಮಟ್ಟಿಗೆ ಸುಮ್ಮನಾಗಿದ್ದ ಅವನನ್ನು ಮತ್ತೆ ಮಾತಾಡಿಸಬೇಕೆನ್ನಿಸಲ್ಲಿಲ್ಲ. ಒಂದು ಫರ್ಲಾಂಗು ದೂರದ ಅವನ ಮನೆ ಕಡೆಗೆ ಇಬ್ಬರು ಸುಮ್ಮನೆ ನಡೆಯುತ್ತಿದ್ದೆವು. ನಮ್ಮ ನಡುವೆ ಮಾತಿರಲಿಲ್ಲ. ಅವನ ಮನೆಗೆ ಹೋಗುವ ಮೊದಲು ಒಂದು ದೊಡ್ಡ ಸೇತುವೆ ಬರುತ್ತದೆ. ಅದೇ ಉಡುಪಿಗೆ ಐದು ಕಿಲೋಮೀಟರ್ ದೂರದ ಉದ್ಯಾವರ ಸೇತುವೆ. ಕೆಳಗೆ ನೇತ್ರಾವತಿ ಜನವರಿಯ ತಿಂಗಳ ಅಮವಾಸ್ಯೆಯಲ್ಲಿ ತೆಳ್ಳಗೆ ಹರಿಯುತ್ತಿದ್ದಳು. ಸೇತುವೆಯ ಕೆಳಗೆ ಇಳಿದು ಹೋದರೆ ದೂರದಲ್ಲಿ ಸಣ್ಣದಾಗಿ ಕಾಣುತ್ತದೆ ಆತನ ಹೆಂಚಿನ ಮನೆ. ಎರಡು ಕಡೆ ನೀರು. ಮಧ್ಯದಲ್ಲಿ ನಾಲ್ಕು ಮನೆ. ಅದರಲ್ಲಿ ಒಂದು ಮನೆ ಈತನದು.
"ಕತ್ತಲಲ್ಲಿ ಏನು ಕಾಣಿಸುತ್ತಿಲ್ಲ ಹೇಗೆ ಹೋಗುತ್ತೀಯಾ" ನನಗೆ ಆತಂಕ.

"ಅಯ್ಯೋ ಇದ್ಯಾವ ಕತ್ತಲು ಬಿಡಿಣ್ಣಾ, ಇಂಥ ಕತ್ತಲೆಯ ಅಮಾವಾಸ್ಯೆಯಲ್ಲಿ ನೀರು ಇಳಿದಿರುವಾಗಲೇ ನೀರಿನೊಳಗೆ ಬಲೆಯನ್ನು ಇಳಿಬಿಟ್ಟಿರುತ್ತೇವೆ. ಮಧ್ಯರಾತ್ರಿಯ ಹೊತ್ತಿಗೆ ರಾಶಿ ರಾಶಿ ಮೀನು ಗೊತ್ತಾ? ಅಂಥವನ್ನೇ ಮಾಡಿರುವಾಗ ಇದ್ಯಾವ ಲೆಕ್ಕ. ನೀವು ಹೋಗಿ ನಾಳೆ ಬೆಳಿಗ್ಗೆ ಸಿಗುತ್ತೇನೆ" ಅಂದವನು ನಿಧಾನವಾಗಿ ಆ ಕತ್ತಲೆಯಲ್ಲಿ ನಡೆಯತೊಡಗಿದ.

ನನಗೆ ಒಂಥರ ಆತಂಕವಿದ್ದರೂ ಆತನ ತೆಳ್ಳಗಿನ ಆಕೃತಿ ಕತ್ತಲೆಯಲ್ಲಿ ಮರೆಯಾಗುವವರೆಗೂ ನೋಡುತ್ತಿದ್ದೆ. ಅಂಚಿಕಡ್ಡಿಯಂತೆ ತೆಳ್ಳಗಿದ್ದ ಇವನು ಯಾವ ರೀತಿ ಅಷ್ಟು ದೊಡ್ಡ ಮೀನಿನ ಬಲೆಯನ್ನು ಎಸೆಯಬಲ್ಲ? ಅನ್ನುವ ಪ್ರಶ್ನೆಯೂ ಮಿಂಚಂತೆ ಬಂದು ಆ ಕತ್ತಲಲ್ಲಿ ಹಾಗೆ ಮಾಯವಾಗಿತ್ತು. ನೋಡನೋಡುತ್ತಿದ್ದಂತೆ ಆತನ ಆಕೃತಿಯೂ ಕತ್ತಲೆಯೊಳಗೆ ಒಂದಾಗಿತ್ತು. ನಾನು ಉದ್ಯಾವರ ಬಸ್ ನಿಲ್ದಾಣದ ಕಡೆಗೆ ಹೆಜ್ಜೆ ಹಾಕಿದೆ. "ಆರೆರೆ ಅವನ ಫೋನ್ ನಂಬರ್ ತೆಗೆದುಕೊಳ್ಳಲೇ ಇಲ್ಲವಲ್ಲ., ಎಂಥ ಕೆಲಸವಾಯಿತು. ವಾಪಾಸ್ ಹೋಗೋಣವೆಂದರೆ ಪೂರ್ಣ ಕತ್ತಲು ಏನು ಮಾಡುವುದು" ಒಳ್ಳೇ ಫಜೀತಿಯಾಯಿತಲ್ಲ, ನಾಳೆ ಇವನನ್ನು ಹುಡುಕುವುದು ಹೇಗೆ, ಒಳ್ಳೇ ಯಡವಟ್ಟು ಕೆಲಸ ಮಾಡಿಕೊಂಡುಬಿಟ್ಟೆನಲ್ಲ" ಅಂದುಕೊಳ್ಳುವ ಹೊತ್ತಿಗೆ ಉಡುಪಿಗೆ ಹೋಗುವ ಬಸ್ ಬಂತು.

ದಾರಿಯುದ್ದಕ್ಕೂ ಅವನ ಸಂಸಾರದ ಕತೆಯನ್ನು ಮೆಲುಕು ಹಾಕುವ ಹೊತ್ತಿಗೆ ಉಡುಪಿ ಬಸ್ ನಿಲ್ದಾಣ ಬಂತು. ನಿದಾನವಾಗಿ ನಾನು ಉಳಿದುಕೊಂಡಿರುವ ಹೋಟಲ್ಲಿನ ಕಡೆಗೆ ಹೆಜ್ಜೆ ಹಾಕತೊಡಗಿದೆ.

____ ______ _____


ನಾನು ಮತ್ತು ಮಲ್ಲಿಕಾರ್ಜುನ್ ಇಬ್ಬರೂ ಸೇರಿ ಬರೆಯುತ್ತಿರುವ ನಮ್ಮ ಮುಂದಿನ ಪುಸ್ತಕ "ಫೋಟೊ ಹಿಂದಿನ ಕತೆಗಳು" ಅದರಲ್ಲಿ ನನ್ನ ಮೆಚ್ಚಿನ ಚಿತ್ರವಾದ "ಮೀನಿನ ಬಲೆ" ಫೋಟೊ ತೆಗೆದಿದ್ದು ಹೇಗೆ, ಅದಕ್ಕೂ ಮೊದಲು ಆ ಚಿತ್ರದ ಕಲ್ಪನೆ ಹೇಗೆ ಬಂತು? ಅದರ ಹಿಂದೆ ಬಿದ್ದು ಸಾಗುತ್ತಾ............ಕ್ಲಿಕ್ಕಿಸುವವರೆಗೆ ನಡುವೆ ನಡೆದ ವಿಭಿನ್ನ ಆನುಭವದಲ್ಲಿ ಇಲ್ಲಿ ಹಾಕಿರುವುದು ಲೇಖನದ ನಡುವಿನ ತುಣುಕು ಮಾತ್ರ. ನೀವು ಓದಿದ ಮೇಲೆ ನಿಮ್ಮ ಅಭಿಪ್ರಾಯ ತಿಳಿಸಿ.

ಸಧ್ಯ ಇಬ್ಬರು ಕೆಲವು ಚಿತ್ರಗಳನ್ನು ಆರಿಸಿಕೊಂಡು ಅವುಗಳನ್ನು ಕ್ಲಿಕ್ಕಿಸುವಾಗಿನ ಹಿಂದಿನ ಕತೆಗಳನ್ನು ಬರೆಯಲು ಕುಳಿತಿದ್ದೇವೆ.

ಚಿತ್ರ ಮತ್ತು ಲೇಖನ.
ಶಿವು.ಕೆ.

Monday, December 14, 2009

ಬೆಂಗಳೂರಲ್ಲಿ ಬಣ್ಣದ ಚಿಟ್ಟೆಗಳಿಲ್ವಾ?

ಯಾಕಿಲ್ಲ? ಬೆಂಗಳೂರಿನಲ್ಲಿ ಬಣ್ಣ ಬಣ್ಣದ ತರಾವರಿ ಧಿರಿಸುಗಳನ್ನು ಹಾಕಿಕೊಂಡು ಓಡಾಡುವ ಬಣ್ಣದ ಚಿಟ್ಟೆಗಳು ಕಾಲೇಜು, ಆಫೀಸು, ರಸ್ತೆ ರಸ್ತೆಗಳು, ಮಾಲಾಮಾಲುಗಳು ಎಲ್ಲಾ ಕಡೆ ಇವೆಯಲ್ರೀ ಅಂತೀರಾ!

ಹೌದು ನೀವು ಹೇಳೋದು ಸರಿ ಖಂಡಿತವಾಗಿ ನಮ್ಮ ಬೆಂಗಳೂರಿನಲ್ಲಿ ಅದರಲ್ಲೂ ಈ ಚಳಿಗಾಲದಲ್ಲಿ ಪ್ರೆಶ್ಶಾಗಿ ಲವಲವಿಕೆಯಿಂದ ಓಡಾಡುವ ಹುಡುಗಿಯರಿಗೇನು ಕಡಿಮೇಯೇ? ಪ್ರತಿಯೊಬ್ಬರೂ ಬಣ್ಣಬಣ್ಣದ ಬಟ್ಟೆಗಳನ್ನು ಹಾಕಿಕೊಂಡು ಓಡಾಡುತ್ತಾ, ಬಸ್ ಸ್ಟಾಪಿನಲ್ಲಿ ಕಾಯುತ್ತಾ, ಆಫೀಸಿನಲ್ಲಿ ಕಾಯಕಮಾಡುತ್ತಾ ಅವರವರದೇ ಲೋಕದಲ್ಲಿರುತ್ತಾರೆ. ಆ ವಿಚಾರ ಬಿಡಿ, ನಾನು ಹೇಳುತ್ತಿರುವುದು ನಿಜವಾದ ಚಿಟ್ಟೆಗಳ, ನಾವು ಕಾಣದ ಲೋಕದ ಬಗ್ಗೆ. ಹೌದು ಕಣ್ರೀ, ಬೆಂಗಳೂರಲ್ಲಿನ್ನು ಚಿಟ್ಟೆಗಳಿವೆ. ಸಾವಿರಾರು ಮರಗಳನ್ನು ಕಡಿದು ರಸ್ತೆಗಳನ್ನು ಮಾಡುತ್ತಿದ್ದರೂ, ಅವುಗಳ ಸೂರುಗಳನ್ನು ಕಿತ್ತುಕೊಂಡಿದ್ದರೂ, ಕೆಲವು ಚಿಟ್ಟೆಗಳು, ಪತಂಗಗಳು ನಮ್ಮ ಅಕ್ಕಪಕ್ಕದಲ್ಲೇ ನಮಗೆ ಕಾಣದಂತೆ ದಂಪತಿಗಳಾಗುತ್ತವೆ, ಮೊಟ್ಟೆಯಿಡುತ್ತವೆ, ಹುಳುವಾಗಿ ಹೊರಬಂದು, ಬೆಳೆದು ಪ್ಯೂಪಗಳಾಗಿ ತದ ನಂತರ ಸುಂದರ ಚಿಟ್ಟೆಯಾಗಿ ಬರುತ್ತವೆ, ಹಾರಾಡುತ್ತವೆ, ನಮಗೆ ಕಂಡೂ ಕಾಣದಂತೆ. ಎಲೆಮರೆಕಾಯಿಯಂತೆ. ಈ ವಿಚಾರದಲ್ಲಿ ಇತ್ತೀಚೆಗೆ ಆದ ಅನುಭವ, ಅದರ ಹಿಂದೆ ಬಿದ್ದು ನನಗಾದ ಗೊಂದಲ, ಭಯ, ಕಾಳಜಿ, ನಂತರ ಕ್ಲಿಕ್ಕಿಸಿದ ಚಿತ್ರಗಳು. ಇವುಗಳನ್ನೆಲ್ಲಾ ನಿಮ್ಮೊಂದಿಗೆ ಹಂಚಿಕೊಳ್ಳಬೇಕೆನಿಸಿದೆ.

ಕಳೆದ ವಾರ ಹಿಂದು ದಿನಪತ್ರಿಕೆ ಕಛೇರಿಯ ಪಕ್ಕದಲ್ಲಿರುವ ವಾರ್ತಾ ಇಲಾಖೆಗೆ[ಇನ್‍ಫೆಂಟ್ರಿ ರಸ್ತೆ]ಕೆಲಸ ನಿಮಿತ್ತ ಹೋಗಿದ್ದೆ. ಹೊರಬಂದಾಗ ಎರಡು ಬದಿಯಲ್ಲಿ ಹಾಕಿದ್ದ ಪಾಮ್ ಟ್ರಿ ಗಿಡಗಳು ಕಂಡು ಬಂದವು. ನಾನು ಬೆಂಗಳೂರಿನ ಯಾವುದೇ ಕಚೇರಿಗೆ ಹೋದರೂ ಅಲ್ಲಿ ಕಟ್ಟಿರುವ ಸುಂದರ ವಿನ್ಯಾಸದ ಕಟ್ಟಡದ ಜೊತೆಗೆ ಕೆಲವು ಗಿಡಗಳಿಗೆ ಜಾಗವಿದೆಯಾ? ಅವುಗಳನ್ನು ಬೆಳೆಸಿದ್ದಾರಾ? ಇತ್ಯಾದಿಗಳನ್ನು ನೋಡುತ್ತೇನೆ. ಇದ್ದ ಮರಗಳನ್ನು ಕಡಿದು ಅದೇ ಜಾಗದಲ್ಲಿ ಬಿಲ್ಡಿಂಗ್ ಹಬ್ಬಿಸಿದ್ದರೂ ಪರಿಹಾರವಾಗಿ ಕೆಲವು ಗಿಡಗಳನ್ನು ಹಾಕಬಹುದಲ್ವಾ ಅನ್ನೋದು ನನ್ನ ಆಸೆ. ಮುಂಭಾಗ ಅಥವ ಹಿಂಬಾಗ ಜಾಗ ಬಿಟ್ಟಿದ್ದರೆ ಅದು ವಾಹನಗಳ ನಿಲುಗಡೆಗೆ ಮೀಸಲಾಗಿರುತ್ತದೆಯೋ ಹೊರತು ಗಿಡಗಳಿಗೆ ಜಾಗವಿಲ್ಲ. ನನಗೆ ಹೆಚ್ಚಾಗಿ ಈ ವಿಚಾರದಲ್ಲಿ ನಿರಾಸೆಯೇ ಆಗುತ್ತದೆ. ಆದರೂ ಕೆಲವು ಕಡೆ ಅಲಂಕಾರಿಕ ಗಿಡಗಳನ್ನು ಬೆಳೆಸಿರುತ್ತಾರೆ. ಅವು ಬೆಳೆಸಿದವರಿಗೆ ಖುಷಿ ಕೊಡಬಹುದು. ನನಗಾಗುವುದಿಲ್ಲ. ಮನೆಯಲ್ಲಿ ಅಥವ ಹೊರಗೆಲ್ಲೂ ಕೆಲಸ ಕಾರ್ಯ ಮಾಡದೇ ಸದಾ ಮೇಕಪ್ ಮಾಡಿಕೊಳ್ಳುತ್ತಾ, ಕೃತಕ ಫೋಸು ಕೊಡುತ್ತಾ, ಹೆತ್ತವರಿಗೂ, ಭೂಮಿಗೂ ಭಾರವಾಗಿರುವ ಒಂಥರ ಬೆಡಗಿನ ಬಿನ್ನಾಣಗಿತ್ತಿ ಹುಡುಗಿಯರ ಹಾಗೆ.

ಇರಲಿ ಈ ಪಾಮ್ ಟ್ರೀ ಗಿಡಗಳು ಅದೇ ರೀತಿ ಅಲಂಕಾರಿಕವಾದರೂ ಇತ್ತೀಚೆಗೆ ಉಪಯೋಗಕ್ಕೆ ಬರುತ್ತಿವೆ. ಹೇಗೆಂದರೇ ಒಂದು ಜಾತಿಯ ಚಿಟ್ಟೆಗಳಿಗೆ ವರ್ಷಪೂರ್ತಿ ಅತಿಥೇಯರಾಗಿ[Host plant] ಆಶ್ರಯ ಕೊಡುತ್ತವೆ. ಇಂಡಿಯನ್ ಜೈಂಟ್ ರೆಡ್ ಹೈ ಎನ್ನುವ ಬಣ್ಣದ ಚಿಟ್ಟೆಗಳು ಎಲ್ಲೆಲ್ಲೋ ಹನಿಮೂನ್ ಮಾಡಿದರೂ ಇದೇ ಗಿಡದ ಮೇಲೆ ಕುಳಿತು ಮೊಟ್ಟೆ ಇಡುತ್ತವೆ. ಕೆಲವು ದಿನಗಳ ನಂತರ ಮೊಟ್ಟೆಯೊಡೆದು ದೇಹ ಪೂರ್ತಿ ಫ್ರಿಲ್ಲುಗಳೇ ತುಂಬಿರುವ ಬಿಳಿ ವಸ್ತ್ರ ಧರಿಸಿದಂತೆ ಸುಂದರ ಹುಳು ಹೊರಬರುತ್ತದೆ.
ಬಿಳಿದಾರದಿಂದ ಸುತ್ತಿದ ಬಟ್ಟೆ ಧರಿಸಿದ ಜೈಂಟ್ ರೆಡ್ ಹೈ ಹುಳು.

ಇಲ್ಲೊಂದು ವಿಚಾರವನ್ನು ನಾನು ಹೇಳಲೇಬೇಕು. ನಮ್ಮಲ್ಲಿ[ಮನುಷ್ಯರಲ್ಲಿ]ಮಕ್ಕಳು ಹುಟ್ಟಿದ ಮೇಲೆ ಅವುಗಳನ್ನು ಪೋಷಿಸಿ, ಬೆಳೆಸಿ, ಓದಿಸಿ, ಸುಸಂಶ್ಕೃತರನ್ನಾಗಿ[೧೮-೨೦ ವರ್ಷಗಳವರೆಗೆ] ಮಾಡಿ ನಿನ್ನ ಬದುಕು ನೀನು ನೋಡಿಕೊ ಅನ್ನುತ್ತೇವೆ. ಪ್ರಾಣಿ-ಪಕ್ಷಿಗಳಲ್ಲಿ ನಮ್ಮಷ್ಟಿಲ್ಲದಿದ್ದರೂ ಇದೇ ಮಟ್ಟದ ಲಾಲನೆ ಪಾಲನೆ ಇದ್ದೇ ಇರುತ್ತದೆ. ಆದ್ರೆ ಈ ಚಿಟ್ಟೆಗಳ ಲೋಕದಲ್ಲಿ ಇದೆಲ್ಲಾ ಇರುವುದಿಲ್ಲ. ಹನಿಮೂನ್ ಮುಗಿಸಿದ ಮೇಲೆ ಸರಿಯಾದ ಗಿಡದ ಮೇಲೆ ಮೊಟ್ಟೆ ಇಟ್ಟುಬಿಟ್ಟರೆ ಅವುಗಳ ಜವಾಬ್ದಾರಿ ಮುಗಿಯಿತು. ನಂತರ ಮೊಟ್ಟೆಯೊಡೆದು ಹೊರಬರುವ ಹುಳುವೇ ತನ್ನ ಆಹಾರವನ್ನು ಹುಡುಕಿಕೊಂಡು ತಿಂದುಂಡು ಬೆಳೆದು ತನಗೊಂದು ತಾತ್ಕಾಲಿಕ ಗೂಡನ್ನು ಕಟ್ಟಿಕೊಂಡು[ಪ್ಯೂಪ], ಅದರೊಳಗೆ ತನ್ನ ದೇಹಪರಿವರ್ತನೆಯಾಗಿ ಹೊರಬರುವಾಗ ಸುಂದರ ಚಿಟ್ಟೆಯಾಗಿರುತ್ತದೆ.


ಜೈಂಟ್ ರೆಡ್ ಹೈ[joint red eye] ಚಿಟ್ಟೆ ಆಗ ತಾನೆ ತನ್ನ ಪ್ಯೂಪದಿಂದ ಹೊರಬಂದು ಕುಳಿತಿದೆ.


ನೀವು ಈ ಲೇಖನವನ್ನು ಓದಿದ ಮೇಲೆ ನಿಮ್ಮ ಮನೆ, ಕಛೇರಿ ಎಲ್ಲೇ ಆಗಲಿ ನೀವೊಮ್ಮೆ ಪಾಮ್ ಟ್ರೀ ಕಡೆ ಗಮನವಿಟ್ಟು ಕಣ್ಣಾಯಿಸಿ. ನಿಮಗೆ ಇಂಥ ಹುಳು ಅಥವ ಪ್ಯೂಪ ಕಂಡುಬರುತ್ತದೆ. ಆ ಹುಳು, ತೆಂಗಿನ ಗರಿಯಂತಿದ್ದರೂ ಅದಕ್ಕಿಂತ ಚಿಕ್ಕದಾಗಿರುವ ಇದರ ಎಲೆಗಳನ್ನು ತಿಂದು ಬೆಳೆದು ನಂತರ ಅದೇ ಎಲೆಗಳ ನಡುವೆ ತನ್ನ ದೇಹದಿಂದಲೇ ಸ್ರವಿಸಿದ ಅಂಟು ಮತ್ತು ದಾರದಿಂದ ಹೆಣೆದು ಮಳೆ, ಗಾಳಿ, ಬಿಸಿಲು ಯಾವುದರಿಂದಲೂ ತೊಂದರೆಯಾಗದಂತ ಕೊನೆಗೆ ಪಕ್ಷಿಗಳ ಕಣ್ಣಿಗೂ ಕಾಣದಂತೆ ತಲೆಕೆಳಕಾಗಿ ತೋರು ಬೆರಳು ಗಾತ್ರದ ಗೂಡನ್ನು ಕಟ್ಟಿಕೊಳ್ಳುತ್ತದೆ. ಅದರೊಳಗೆ ಸೇರಿಕೊಂಡು ಪ್ಯೂಪವಾಗಿಬಿಡುತ್ತದೆ. ಸುಮಾರು ಹದಿನೈದು ದಿನಗಳ ನಂತರ ಪ್ಯೂಪದಿಂದ ಕಂದು ಮಿಶ್ರಿತ ಬಣ್ಣದ ಪತಂಗವಾಗಿ ಹೊರಬರುತ್ತದೆ. ಇದನ್ನೆಲ್ಲಾ ಗಮನಿಸಿ ಅದರ ಹಿಂದೆ ಬಿದ್ದು ಇದರ ಎಲ್ಲಾ ಚಿತ್ರಗಳನ್ನು ಕ್ಲಿಕ್ಕಿಸಿದ್ದರಿಂದ ಈ ಆಲಂಕಾರಿಕ ಗಿಡ ಈ ಚಿಟ್ಟೆಗಳಿಗೆ [Host plant]ಅತಿಥೇಯವಾಗಿದೆಯಲ್ಲ ಅಂತ ಖುಷಿಯಾಗಿತ್ತು.

ಇದೇ ರೀತಿ ನಾನು ವಾರ್ತಾ ಇಲಾಖೆಯ ಎರಡು ಬದಿಯ ಗಿಡಗಳನ್ನು ನೋಡಿದಾಗ ಹೊಸದೊಂದು ಆಶ್ಚರ್ಯ ಕಾದಿತ್ತು. ಇಲ್ಲಿ ಜೈಂಟ್ ರೆಡ್ ಹೈ ಚಿಟ್ಟೆಗಳ ಬದಲಿಗೆ ಬೇರೆ ಪ್ಯೂಪಗಳು ಕಾಣಿಸಬೇಕೆ.! ನನ್ನ ಆನಂದಕ್ಕೆ ಪಾರವೇ ಇಲ್ಲ. ಇದು ಹೇಗೆ ಸಾಧ್ಯ? ಒಂದು ಚಿಟ್ಟೆಗೆ ಅತಿಥೇಯವಾಗಿದ್ದು ಮತ್ತೊಂದು ಬೇರೆ ಜಾತಿಯ ಹುಳುವಿಗೂ ಜಾಗ ಮತ್ತು ಆಹಾರ ಕೊಡುವ ಸಾಧ್ಯತೇ ಇದೆಯಾ ಅಂತ ಮೊದಲು ಅನ್ನಿಸಿದರೂ ಕಾಗೆ ಗೂಡಿನಲ್ಲಿ ಕೋಗಿಲೆ ಮೊಟ್ಟೆ ಇಟ್ಟಂತೆ, ನಾವು ಮನೆ, ಅಪಾರ್ಟ್‍ಮೆಂಟ್ ಕಟ್ಟಿಸಿ ಬೇರೆಯವರಿಗೆ ಬಾಡಿಗೆಗೆ ಕೊಡುವಂತೆ ಇಲ್ಲಿಯೂ ಜೈಂಡ್ ರೆಡ್ ಹೈ ಚಿಟ್ಟೆಗಳು ಈ ಹೊಸ ಹುಳುಗಳಿಗೆ ಆ ರೀತಿ ಬಾಡಿಗೆ ಕೊಟ್ಟಿರಬಹುದೇ ಅನ್ನಿಸಿತು. ಇರಲಿ ಹೇಗೂ ಪ್ಯೂಪ ಕಾಣಿಸಿದೆ, ಅದರಲ್ಲಿ ಯಾವ ರೀತಿಯ ಚಿಟ್ಟೆಯೋ ಅಥವ ಪತಂಗವೋ ಹೊರಬರುವುದಂತೂ ಖಂಡಿತ. ಅದನ್ನು ನೋಡಿಯೇ ಬಿಡೋಣ ಅಂದುಕೊಂಡು ಒಂದು ಪ್ಯೂಪವಿರುವ ಎಲೆಯನ್ನು[ನನ್ನ ಜೇಬಿನಲ್ಲಿ ಒಂದು ಸಣ್ಣ ಕಟ್ಟರ್ ಇದ್ದೇ ಇರುತ್ತದೆ]ಕಟ್ ಮಾಡಿಕೊಂಡೆ.

ಪ್ಯೂಪವಿರುವ ಎಲೆಯನ್ನು ತೆಗೆದುಕೊಂಡ ಮೇಲೆ ಅದನ್ನು ಸುರಕ್ಷಿತವಾಗಿ ನಮ್ಮ ಮನೆಗೆ ತರಬೇಕಲ್ವ. ಅದು ಒಂಥರ ಭಯ ಭಕ್ತಿಯ ಕೆಲಸ. ಹೇಗೆಂದರೆ ಏಳು ತಿಂಗಳ ಬಸುರಿಯನ್ನು ನಿದಾನವಾಗಿ ಸುರಕ್ಷಿತವಾಗಿ ಆಸ್ಪತ್ರೆಗೆ ಕರೆದೊಯ್ಯುವಂತೆ. ಇಂಥವು ಸಿಗುತ್ತವೆ ಎಂದು ನನಗೆ ಗೊತ್ತಿರುವುದರಿಂದ ನನ್ನ ಸ್ಕೂಟಿಯ ಡಿಕ್ಕಿಯಲ್ಲಿ ಅದಕ್ಕಾಗಿ ಪುಟ್ಟ ಜಾಗ ಮಾಡಿರುತ್ತೇನೆ. ಗಿಡದಲ್ಲಿ ಯಾವ ಸ್ಥಿತಿಯಲ್ಲಿ ಇರುತ್ತದೋ ಅದೇ ಸ್ಥಿತಿಯಲ್ಲಿಯೇ ನನ್ನ ಡಿಕ್ಕಿಯಲ್ಲಿಟ್ಟುಕೊಳ್ಳಬೇಕು.[ಬಸುರಿಯನ್ನು ತಲೆಕೆಳಕಾಗಿ ಮಲಗಿಸಿ ಆಟೋ ಅಥವ ಕಾರಿನಲ್ಲಿ ಕರೆದೊಯ್ಯಲು ಸಾಧ್ಯವೇ?]. ಇದೆಲ್ಲಾ ಮುಗಿದ ನಂತರ ನನ್ನ ಇನ್ನುಳಿದ ಕೆಲಸವನ್ನೆಲ್ಲಾ ನಿಲ್ಲಿಸಿ ತುರ್ತುಪರಿಸ್ಥಿತಿಯ ವಾಹನದಂತೆ ಮನಸ್ಸಿನಲ್ಲೇ ಅಲಾರಾಂ ಬಾರಿಸಿಕೊಂಡು ನಿದಾನವಾಗಿ ನನ್ನ ಸ್ಕೂಟಿಯನ್ನು ಓಡಿಸಿಕೊಂಡು ಬರುತ್ತೇನೆ. ಈ ಸಮಯದಲ್ಲಿ ಯಾವುದಾದರೂ ಹಂಪ್ಸ್ ಮೇಲೆ ಜಗ್ಗಿದಾಗ, ಹಳ್ಳದೊಳಗೆ ಕುಲುಕಿದಾಗ ನಾನೇ ಪ್ಯೂಪ ಸ್ಥಿತಿಯಲ್ಲಿದ್ದಂತೆ ಭಾಸವಾಗಿ ಮನಸ್ಸಿನಲ್ಲೇ ನಲುಗಿಬಿಡುತ್ತೇನೆ.

ಕೊನೆಗೂ ಮನೆಗೆ ಸುರಕ್ಷಿತವಾಗಿ ತಲುಪಿ ಆ ಪ್ಯೂಪವಿರುವ ಎಲೆಗಳನ್ನು ಅದೇ ಸ್ಥಿತಿಯಲ್ಲಿ ಒಂದು ಹೂಕುಂಡದ ಮೇಲೆ ಇಟ್ಟುಬಿಟ್ಟರೆ ಅಲ್ಲಿಗೆ ದೊಡ್ಡ ಸಾಧನೆ ಮಾಡಿದಂತೆ.

ಇಂಡಿಯನ್ ಪಾಮ್ ಬಾಬ್ ಚಿಟ್ಟೆಯ ಪ್ಯೂಪ


ಈ ವಿಚಾರದಲ್ಲಿ ನನ್ನ ಮನೆ ಒಂದು ರೀತಿ ಆಸ್ಪತ್ರೆಯಿದ್ದಂತೆ. ಹೊರಗಿನ ಜಾಗಕ್ಕಿಂತ ಹೆಚ್ಚು ಸುರಕ್ಷಿತ. ಹೇಗೆಂದರೆ ಹೊರಗೆ ಪ್ರಕೃತಿಯ ಜೊತೆಗಿದ್ದರೂ ಇವುಗಳು ಪಕ್ಷಿಗಳಿಗೆ, ಕೆಲವು ಜೇಡಗಳಿಗೆ, ಅಥವ ಪ್ರೈಯಿಂಗ್ ಮಾಂಟಿಸ್, ಕ್ರಿಕೆಟ್ ಇತ್ಯಾದಿ ಹುಳುಗಳಿಗೆ ಆಹಾರವಾಗುವುದೇ ಹೆಚ್ಚು. ನೂರಕ್ಕೆ ಐದರಷ್ಟು ಪ್ಯೂಪಗಳು ಮಾತ್ರ ಸುರಕ್ಷಿತವಾದ ಚಿಟ್ಟೆಗಳಾಗಿ ಹೊರಬರುತ್ತವೆ. ನಮ್ಮ ಮನೆಯಲ್ಲಿ ಇವ್ಯಾವುದರ ಕಾಟವಿಲ್ಲ. ಮತ್ತೆ ಜಿರಲೆಗಳಿಲ್ಲ[ಅದಕ್ಕಾಗಿ ಜಿರಲೆ ಕತೆ ಓದಿ] ಹಲ್ಲಿಗಳಂತೂ ಇಲ್ಲವೇ ಇಲ್ಲವಾದ್ದರಿಂದ ಖಂಡಿತ ಪ್ರತಿಯೊಂದು ಚಿಟ್ಟೆಗಳು ನಮ್ಮ ಮನೆಯಲ್ಲಿ ಸುರಕ್ಷಿತವಾಗಿ ಸಂದರವಾಗಿಯೇ ಹುಟ್ಟುತ್ತವೆ. [ಈವರೆಗೆ ಈ ರೀತಿ ಹದಿಮೂರು ಜಾತಿಯ ಚಿಟ್ಟೆಗಳು ಮತ್ತು ಪತಂಗಗಳು ಹುಟ್ಟಿವೆ ಅವುಗಳಲ್ಲಿ ಮೂರನ್ನು ನನ್ನ ಬ್ಲಾಗಿನಲ್ಲಿ ಆಗಲೇ ಬರೆದಿದ್ದೇನೆ.]

ಇರಲಿ ಮತ್ತೆ ಈ ಪ್ಯೂಪ ವಿಚಾರಕ್ಕೆ ಬರೋಣ. ಈ ಪ್ಯೂಪದಿಂದ ಯಾವ ಚಿಟ್ಟೆ ಹೊರಬರಬಹುದು. ಇಷ್ಟಕ್ಕೂ ಈ ಪ್ಯೂಪ ಚಿತ್ರ ನನ್ನಲ್ಲಿರುವ ಚಿಟ್ಟೆಗಳ ಪುಸ್ತಕದಲ್ಲಿದೆಯಾ ಅಂತ ಹುಡುಕಿದೆ. ಅಲ್ಲೆಲ್ಲೂ ಕಾಣಸಿಗಲಿಲ್ಲ. ಪ್ರತಿದಿನ ಬೆಳಿಗ್ಗೆ ಮಧ್ಯಾಹ್ನ, ಸಂಜೆ ಇದನ್ನು ಗಮನಿಸುತ್ತಿದ್ದೆ. ರಾತ್ರಿ ಸಮಯದಲ್ಲಿ ಚಿಟ್ಟೆಗಳು ಪ್ಯೂಪದಿಂದ ಹೊರಬರುವುದಿಲ್ಲ. ಏಕೆಂದರೆ ಹೊರಬಂದ ತಕ್ಷಣ ಅವುಗಳ ರೆಕ್ಕೆಗಳಿಗೆ ಸೂರ್ಯನ ಕಿರಣದ ಶಾಖದಿಂದ ಶಕ್ತಿ ಬರುತ್ತದೆಯಾದ್ದರಿಂದ ಅವು ಬೆಳಗಿನ ಜಾವ ಮಾತ್ರ ಹೊರಬಂದು ಸೂರ್ಯನಿಗಾಗಿ ಕಾಯುತ್ತಿರುತ್ತವೆ. ಆದ್ರೆ ಎಲ್ಲಾ ಚಿಟ್ಟೆಗಳು ಹೀಗಾಲ್ಲ, ಕೆಲವು ಆಡ್ನಾಡಿ ಬುದ್ಧಿಯ ಚಿಟ್ಟೆಗಳು ರಾತ್ರಿಯೇ ಹೊರಬಂದು ಒದ್ದಾಡಿ ಮನೆಯಲ್ಲೆಲ್ಲಾ ಹಾರಾಡಿ, ಮುಂಜಾನೆ ಬಾಗಿಲು ತೆಗೆಯುತ್ತಿದ್ದಂತೆ ಹಾರಿ ಹೋಗಿದ್ದು ಉಂಟು. ಇಷ್ಟೆಲ್ಲಾ ಮಾಡಿ ಆ ಚಿಟ್ಟೆಯ ಫೋಟೋ ತೆಗೆಯಲಾಗಲ್ಲಿಲ್ಲವಲ್ಲ ಅಂತ ನಿರಾಸೆಯಾಗಿದ್ದು ಉಂಟು.

ಹತ್ತನೇ ದಿನ ಸಂಜೆ ಈ ಪ್ಯೂಪದ ಬಣ್ಣ ಬದಲಾಗತೊಡಗಿತು. ಅಂದರೆ ನಾಳೆ ಬೆಳಿಗ್ಗೆ ಖಂಡಿತ ಹೊರಬರುತ್ತದೆ ಅನ್ನುವ ಸೂಚನೆ. ಮರುದಿನ ಬೆಳಿಗ್ಗೆ ಬೇಗ ದಿನಪತ್ರಿಕೆ ಕೆಲಸ ಮುಗಿಸಿ ಮನೆಗೆ ಓಡಿಬಂದೆ. ರಾತ್ರಿಯೇ ಕ್ಯಾಮೆರವನ್ನು ಸ್ಟ್ಯಾಂಡಿಗೆ ಹಾಕಿ ಸೆಟ್ ಮಾಡಿದ್ದೆ. ಆದರೂ ನಾನು ಬರುವ ಹೊತ್ತಿಗೆ ಹೊರಬಂದು ಅದೇ ಪ್ಯೂಪವನ್ನು ಹಿಡಿದು ಕೂತಿದೆ. ಅದನ್ನು ನಮ್ಮ ಟೆರಸ್ಸಿನ ಮೇಲೆ ಒಯ್ದು ಸೂರ್ಯನ ಶಾಖಕ್ಕೆ ಅಭಿಮುಖವಾಗಿ ಪ್ಯೂಪ ಮತ್ತು ಚಿಟ್ಟೆಯಿರುವ ಪಾಮ್ ಟ್ರೀ ಎಲೆಯನ್ನು ಮತ್ತೊಂದು ಗಿಡಕ್ಕೆ ಕೂರಿಸಿ ನನಗೆ ಬೇಕಾದ ರೀತಿಯಲ್ಲಿ ಫೋಟೊಗಳನ್ನು ಕ್ಲಿಕ್ಕಿಸತೊಡಗಿದೆ. ಈ ಚಿಟ್ಟೆ ಸಂಪೂರ್ಣವಾಗಿ ವಿಭಿನ್ನವಾಗಿತ್ತು. ಪ್ಲೇನ್ ಟೈಗರ್ ಚಿಟ್ಟೆಯಷ್ಟೆ ದೊಡ್ಡದಾಗಿದ್ದರೂ ರೆಕ್ಕೆಗಳ ಬಣ್ಣ ಬೇರೆಯಾಗಿತ್ತು. ಎಂಟು ಗಂಟೆಯ ಹೊತ್ತಿಗೆ ಒಂದೆರಡು ಬಾರಿ ರೆಕ್ಕೆ ಬಡಿದು ಹೊಸ ಜೀವನವನ್ನು ಅರಸುತ್ತಾ ಹಾರಿಹೋಯಿತು. ತೆಗೆದ ಚಿತ್ರವನ್ನು ಕಂಪ್ಯೂಟರಿಗೆ ಹಾಕಿ ನೋಡಿದಾಗ ಗೊತ್ತಾಯಿತು. ಇದರ ಹೆಸರು ಇಂಡಿಯನ್ ಪಾಮ್ ಬಾಬ್ ಅಂತ.

ಆಗತಾನೆ ಹೊರಬಂದು ತನ್ನದೇ ಪ್ಯೂಪವನ್ನು ಹಿಡಿದು ಬಿಸಿಲು ಕಾಯಿಸಿಕೊಳ್ಳುತ್ತಿರುವ ಇಂಡಿಯನ್ ಪಾಮ್ ಬಾಬ್[Indian pom bob] ಚಿಟ್ಟೆ.

ಆಲಂಕಾರಿಕ ಗಿಡವಾದರೂ ಎರಡು ಚಿಟ್ಟೆಗಳಿಗೆ ಆಹಾರ ಮತ್ತೆ ಮನೆ ಮನೆಯಾಗಿದೆಯೆಲ್ಲಾ ಅಂತ ಪಾಮ್ ಟ್ರೀ ಬಗ್ಗೆ ಹೆಮ್ಮೆಯೆನಿಸಿತ್ತು.

ಚಿತ್ರಗಳು ಮತ್ತು ಲೇಖನ.

ಶಿವು.ಕೆ


Monday, December 7, 2009

ನೀವೇಕೆ ಹೀಗೆ




ಓ ಭಾವಗಳೇ... ನೀವೇಕೆ ಹೀಗೆ
ಕುಂತಲ್ಲಿ ಕೂರದೆ ನಿಂತಲ್ಲಿ ನಿಲ್ಲದೆ
ಹಾರುತ್ತಾ ಜಾರುತ್ತಾ ಮೋಡದ
ಮರೆಯ ಚಂದ್ರಮನ ಹಾಗೆ.

ಏನು ಅರಿಯದ
ಮನವೇನು ನಿಮ್ಮಪ್ಪನ ಸ್ವತ್ತೇ?
ನಿಮ್ಮೀ ಕಿತ್ತಾಟದಿಂದಾಗಿ
ಒಮ್ಮೆ ಆತ್ಮಹತ್ಯೆಗೆ ಯತ್ನಿಸಿದ್ದೆ ಗೊತ್ತೆ?

ಸೋತಾಗ ಸೊರಗಿ, ಗೆದ್ದಾಗ ಜಿನುಗಿ
ಕರುಣೆಗೆ ಕರಗಿ ಕರುಳಿಗೆ ಮರುಗಿ
ಬಣ್ಣ ಬದಲಿಸೋ ಗೋಸುಂಬೆಗಳು
ಜಿಗಣೆಯಂತೆ ಹಿಂಬಾಲಿಸೋ ನೆರಳುಗಳು.

ಒಬ್ಬರ ದ್ವೇಷಕ್ಕೆ ನೂಕಿ
ಮತ್ತೊಬ್ಬರ ಒಲವಲ್ಲಿ ಜೀಕಿ
ಹಗಲೆಲ್ಲಾ ಕಾಲ್ಚೆಂಡಾಯ್ತು ಮನಸ್ಸು
ಇರುಳಂಕಣವಾಯ್ತು ನಿದ್ರೆಯ ಕನಸು.

ನಿನ್ನೆಯದು ಇಂದಿಗೆ ಹಳತಾದರೂ
ಇಂದಿನದು ನಾಳೆಗೆ ಕೊಳೆತುಹೋದರೂ
ಮತ್ತೆ ಹುಟ್ಟಿ ನಿಮ್ಮ ಆಸ್ಥಿತ್ವಕ್ಕಾಗಿ
ನನ್ನ ಆಸ್ಥಿತ್ವವನ್ನೇ ಅಲುಗಾಡಿಸುತ್ತಿರೇಕೆ?

ಬದುಕೆಲ್ಲಾ ಇಷ್ಟೊಂದು ಕಾಡುವಿರೇಕೆ?
ಖಾತ್ರಿಯೇನು? ಸತ್ತ ಮೇಲಾದರೂ ಬಿಡುತ್ತೀರೆನ್ನುವುದಕ್ಕೆ
ಓ ಭಾವಗಳೇ...ನೀವೇಕೆ ಹೀಗೆ
ಬೆಂಕಿ ಇಲ್ಲದಿದ್ದರೂ ಹೊಗೆಯೇಳುವ ಹಾಗೆ.
ಶಿವು.ಕೆ

Saturday, November 28, 2009

ಜೀವನೋತ್ಸಾಹವೆಂದರೆ ಹೀಗಿರಬೇಕು.

ಪುಸ್ತಕ ಬಿಡುಗಡೆಯಾದ ಖುಷಿಯಲ್ಲಿ, ಮಾರಾಟ ಉತ್ತಮಗೊಳ್ಳುತ್ತಿರುವ ಆನಂದದಲ್ಲಿ ತೇಲುತ್ತಿದ್ದ ನನಗೆ ಇವತ್ತಿಗೆ ಸರಿಯಾಗಿ[ಕಳೆದ ಶನಿವಾರ]ಒಂದು ವಾರದ ಹಿಂದೆ ಜ್ವರವೆಂಬ ಜ್ವರ ನನ್ನನ್ನು ಆಕ್ರಮಿಸಿ ಹಾಸಿಗೆ ಬಿಟ್ಟು ಏಳದಂತೆ ಮಾಡಿತ್ತು. ಸದಾ ಮೈಮೇಲೆ ರಾಶಿ ಕೆಲಸವನ್ನು ಏರಿಕೊಂಡು ಓಡಾಡುತ್ತಿರುವ ನನಗೆ ಒಮ್ಮೇಲೆ ಗರಬಡಿದಂತಾಗಿತ್ತು. ಹೊರಗಿನ ವೇಗದ ಪ್ರಪಂಚದ ನಡುವೆ ನನ್ನನ್ನು ಕೈಕಾಲು ಕಟ್ಟಿಹಾಕಿದಂತೆ ಆಗಿತ್ತು. ಮನಸ್ಸು ಏನೆಲ್ಲಾ ಮಾಡಬೇಕು ಅಂದರೂ ದೇಹ ಮಾತ್ರ ನನ್ನ ಮಾತು ಕೇಳುತ್ತಿಲ್ಲ. ನನ್ನ ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಬಂದಿದ್ದ ಗೆಳೆಯರಾದ ಡಾ.ದೇವರಾಜ್ " ಶಿವು, ಕಳೆದೊಂದು ತಿಂಗಳಿಂದ ಸಿಕ್ಕಾಪಟ್ಟೆ ಓಡಾಡಿ ಸುಸ್ತಾಗಿದ್ದೀರಿ, ನಿಮ್ಮ ಮನಸ್ಸು ಉತ್ಸಾಹದಿಂದಿದ್ದರೂ ದೇಹಕ್ಕೆ ನಿಮ್ಮ ಮಾತನ್ನು ಕೇಳುತ್ತಿಲ್ಲ. ನಾಲ್ಕೈದು ದಿನ ರೆಸ್ಟ್ ತೆಗೆದುಕೊಂಡು ಬಿಡಿ ಅಂದಾಗ ನಾನು ಮರುಮಾತಾಡದೇ ಅವರು ಹೇಳಿದಂತೆ ಮಾಡಿದ್ದೆ.


ಈ ರೆಸ್ಟ್ ಅನ್ನುವುದರ ನಡುವೆ ಒಂದೆರಡು ಪುಸ್ತಕಗಳನ್ನು ಓದಿ ಮುಗಿಸಿದೆ. ನಾಲ್ಕು ದಿನ ಕಳೆಯುವಷ್ಟರಲ್ಲಿ ಇದು ನನಗೆ ಆಗಿಬರುವುದಿಲ್ಲ. ನಾನು ಹೀಗೆ ಬೆಡ್‍ರೂಮಿನಲ್ಲಿ ಬಿದ್ದಿದ್ದರೇ ಕಳೆದುಹೋಗುತ್ತೇನೆ ಅನ್ನಿಸಲಾರಂಭಿಸಿತ್ತು. ಕೊನೆಗೆ ಮೊನ್ನೆ ಸ್ವಲ್ಪ ಸುಸ್ತು ಇದ್ದರೂ ಹೊರಗೆಲ್ಲಾದರೂ ಹೋಗೋಣ ಎನ್ನಿಸಿದಾಗ ಕಣ್ಣಿಗೆ ಬಿದ್ದಿದ್ದು ಅಂತರಾಷ್ಟ್ರೀಯ ಅಂಗವಿಕಲರ ಕ್ರೀಡಾಕೂಟ. ದೇವರಾಜ್ ನಾನು ಸ್ವಲ್ಪ ಹುಷಾರಾಗಿದ್ದೇನೆ. ನಾನು ಸ್ವಲ್ಪ ಈ ಕ್ರೀಡಾಕೂಟವನ್ನು ನೋಡಿ ಬರಲೇ ಅಂದೆ. ಅದಕ್ಕೆ ಅವರು "ನಿಮ್ಮ ಕಣ್ಣಿಗೆ ಅದು ಬಿದ್ದಿದೆಯೆಂದಮೇಲೆ ಮುಗೀತು. ನಾನು ಬೇಡವೆಂದರೂ ನಿಮ್ಮ ಮನಸ್ಸು ಬೇಡವೆನ್ನುತ್ತಾ, ಹೋಗಿಬನ್ನಿ ಎಂದರು. ಅಷ್ಟು ಸಾಕಿತ್ತು ನನಗೆ.


ಕ್ರೀಡಾಕೂಟಕ್ಕೆ ಹೋದಾಗ ಅಲ್ಲಿನ ವಾತವರಣ ನನಗೆ ಹಿತಕರವೆನಿಸಿತ್ತು. ಅಲ್ಲಿ ಭಾಗವಹಿಸಿದ್ದ ಕ್ರೀಡಾ ಭಾಂದವರೆಲ್ಲರ ಸ್ಪೂರ್ತಿಯನ್ನು ನೋಡಿದಾಗ, ಅವರ ಬದುಕಿನಲ್ಲಿ ಅವರಿಗೆ ಆಗಿರುವ ಅಂಗವೈಕಲ್ಯತೆಯನ್ನು ಮೀರಿ ಅವರ ಜೀವನೋತ್ಸಾಹವನ್ನು ಗಮನಿಸಿದಾಗ ಅವರಿಂದ ನಾವು ಕಲಿಯಬೇಕಾದ್ದು ತುಂಬಾ ಎನಿಸಿತ್ತು. ಅವರ ಬಗ್ಗೆ ಬರೆಯುವುದಕ್ಕಿಂತ ಅವರ ಜೀವನೋತ್ಸಾಹವನ್ನು, ಕ್ರೀಡಯಲ್ಲಿ ಮತ್ತು ಬದುಕಿನಲ್ಲಿ ಗೆಲ್ಲಬೇಕೆನ್ನುವ ಚಲ, ಇತ್ಯಾದಿಗಳನ್ನು ಫೋಟೊಗಳ ಮೂಲಕ ಸೆರೆಯಿಡಿಯಲು ಪ್ರಯತ್ನಿಸಿದ್ದೇನೆ. ನೀವು ಒಮ್ಮೆ ನೋಡಿಬಿಡಿ.

ನೀನು ಗೆದ್ದೆಯಲ್ಲಾ! ಇರು ನಿನ್ನದೊಂದು ಫೋಟೊ ತೆಗೆಯುತ್ತೇನೆ!


ನಾರ್ವೆಯ ಈ ಜಾವೆಲಿನ್ ಆಟಗಾರ ಓಡಿಬಂದು ಜಾವೆಲಿನ್ ಎಸೆಯುವ ಪರಿಯನ್ನು ನೋಡುವುದೇ ಒಂದು ಸಂಭ್ರಮ!

ಆಟಗಾರರನ್ನು ಇವರು ಹುರಿದುಂಬಿಸುತ್ತಾ, ಸಂಭ್ರಮಿಸುವ ಪರಿ ನೋಡಿ!

ಢಂ ಢಂ....ಬಡಿಯುತ್ತಾ ಎಲ್ಲಾ ದೇಶದ ಆಟಗಾರರನ್ನು ಪ್ರೋತ್ಸಾಹಿಸುತ್ತಿರುವ ಥೈಲ್ಯಾಂಡ್ ಪ್ರಜೆ.

ನೋಡು ನೀನು ಹೀಗೆ ಬ್ಯಾಲೆನ್ಸ್ ಮಾಡಬೇಕು ಗೊತ್ತಾ![ಬ್ರೆಜಿಲ್ ರಗ್ಬಿ ಆಟಗಾರರ ತಯಾರಿ]

ನಾನು ಕೈಯಿಲ್ಲದಿದ್ದರೂ ಚೆನ್ನಾಗಿ ಟೇಬಲ್ ಟೆನ್ನಿಸ್ ಆಡಬಲ್ಲೆ![ಪಿಲಿಫೈನ್ಸ್ ಆಟಗಾರ್ತಿ]

ನಾನು ಕಾಲಿಲ್ಲದಿದ್ದರೂ ಇನ್ನೂ ಚೆನ್ನಾಗಿ ಟೇಬಲ್ ಟೆನ್ನಿಸ್ ಆಡಬಲ್ಲೆ![ಥೈಲ್ಯಾಂಡ್ ಆಟಗಾರ್ತಿ]

ಹಲೋ! ಕೊರಿಯಾದಿಂದ ಯಾರು ಮಾತಾಡುತ್ತಿರುವುದು! ನಮ್ಮ ಹುಡುಗ ಚಿನ್ನದ ಪದಕ ಗೆದ್ದಿದ್ದಾನೆ! ಈ ಕೊರಿಯಾ ಹುಡುಗಿ ಅವರ ದೇಶಕ್ಕೆ ಫೋನ್ ಹಚ್ಚಿರಬಹುದೇ!

ನಗಬೇಕೆನ್ನುವ ಮನಸ್ಸಿದ್ದರೆ ಸಾಕು ಈ ರೀತಿ ನಕ್ಕುಬಿಡಬಹುದು. ನಗುವಿಗೆ ಬಣ್ಣ ಅಕಾರಗಳುಂಟೆ!

ಈ ಮುಖಾರವಿಂದದಲ್ಲಿ ಅದೆಷ್ಟು ಮುಗ್ಧತೆಯುಂಟು ಅಲ್ವಾ!

ಆಟದ ನಡುವೆಯೂ ಒಂದಷ್ಟು ವಿರಾಮ, ಓದು.

ಓಟದ ಟ್ರ್ಯಾಕಿನಲ್ಲಿ ಓಡಲು ಎಲ್ಲರೂ ಸಿದ್ಧರಾಗಿರುವಾಗ ಈ ಕುಳ್ಳ ಹೀಗೆ ನಡೆದಾಡುತ್ತಿರುವುದೇಕೆ ಅನ್ನಿಸಿತೆ! ಆತ ನಡೆದಾಡುತ್ತಿರುವುದು ನಿಜವಾದರೂ ಆ ಓಟದ ಟ್ರ್ಯಾಕ್ ನಿಜವಲ್ಲ. ಅದು ದೂರದರ್ಶನದ ದೊಡ್ಡ ಟಿ.ವಿ. ಪರದೆ!

ಒಂದು ಕೈಯಿಲ್ಲದಿದ್ದರೂ ನಾನು ಹೀಗೆ ದೂರ ಹಾರಿ ನೆಗೆಯಬಲ್ಲೆ!

ನನಗೊಂದು ಕಾಲಿಲ್ಲದಿದ್ದರೂ ನಿಮ್ಮಂತೆ ಓಡಬಲ್ಲೆ, ಹಾರಬಲ್ಲೆ, ನೆಗೆಯಬಲ್ಲೆ, ಪದಕ ಗೆಲ್ಲಬಲ್ಲೆ!
ಲಾಂಗ್ ಜಂಪ್‍ನಲ್ಲಿ ನಾನೇ ಚಾಂಪಿಯನ್ ಗೊತ್ತಾ![ಜರ್ಮನಿಯ ಈ ಆಟಗಾರ್ತಿಗೆ ಎರಡೂ ಕಾಲಿಲ್ಲ]

ನೂರು ಮೀಟರ್ ಓಟದಲ್ಲಿ ಜರ್ಮನಿಯ ಈ ಆಟಗಾರ[ಒಂದು ಕಾಲಿಲ್ಲ] ಗೆಲ್ಲಬೇಕೆಂಬ ಗುರಿಯಿಂದ ಅಂತಿಮ ಗೆರೆಯ ಬಳಿ ಬಿದ್ದರೂ ಚಿನ್ನದ ಪದಕ ಗೆದ್ದುಬಿಟ್ಟ! ಆತನ ಛಲಕ್ಕೆ ಮತ್ತು ಬದುಕಿಗೆ ಒಂದು ಸಲಾಂ!

ಎರಡು ಕಾಲಿಲ್ಲದಿದ್ದರೇನಂತೆ, ಗಂಟೆಗೆ ೬೦ ಕಿಲೋಮೀಟರ್ ವೇಗದಲ್ಲಿ ಇವರ ಚಲನೆ ನೋಡುಗರನ್ನು ಖಂಡಿತ ಬೆರಗುಗೊಳಿಸುತ್ತದೆ!

ಜಪಾನಿ ಆಟಗಾರರು ಈ ಆಟದಲ್ಲೂ ಮುಂದು. ಈತ ಎರಡು ಚಿನ್ನದ ಪದಕ ಗೆದ್ದುಬಿಟ್ಟ.

ಬ್ರೆಜಿಲ್ ದೇಶದ ಈ ಆಟಗಾರನ ಹುರುಪು ಮತ್ತು ಗೆಲ್ಲಬೇಕೆನ್ನುವ ಛಲ ನೋಡಿ!

ಚಿತ್ರಗಳು ಮತ್ತು ಲೇಖನ.
ಶಿವು.ಕೆ

Monday, November 16, 2009

ಧನ್ಯವಾದಗಳು!

ನಿನ್ನೆ ಬಿಡುಗಡೆಯಾದ ನಮ್ಮ ಮೂರು ಪುಸ್ತಕಗಳಿಗೆ ಸಿಕ್ಕ ಅಭೂತಪೂರ್ವ ಪ್ರತಿಕ್ರಿಯೆ ಸೇರಿದ್ದ ಗಣ್ಯರು, ಬ್ಲಾಗ್ ಗೆಳೆಯರು, ಬಂಧುಮಿತ್ರರು, ವೃತ್ತಿಭಾಂದವರು, ಪುಟ್ಟಮಕ್ಕಳು, ಅವರಿಂದ ಬಂದ ಹಾರೈಕೆಗಳು! ಇವೆಲ್ಲಾ ನಡೆಯುತ್ತಿದೆಯಾ! ಅನ್ನುವ ಭ್ರಮೆಯಲ್ಲಿಯೇ ನಾನಿದ್ದೆ. ಇದೊಂದು ನಿರೀಕ್ಷೆ ಮೀರಿ ಯಶಸ್ವಿಯಾದ ಕಾರ್ಯಕ್ರಮ ನಾನು ಎಂದಿನಂತೆ ಅನೇಕ ಪುಸ್ತಕ ಕಾರ್ಯಕ್ರಮಗಳಿಗೆ ಹೋಗಿದ್ದಾಗ ಹೊಸಬರ ಪುಸ್ತಕಗಳಿಗೆ ನೂರಕ್ಕಿಂತ ಕಡಿಮೆ ಜನರು ಸೇರಿರುತ್ತಿದ್ದರು. ಇಲ್ಲಿ ನಾನು ಮತ್ತುಪ್ರಕಾಶ್ ಹೆಗಡೆಯವರಿಬ್ಬರಿಗೂ ಇದು ಚೊಚ್ಚಲ ಪುಸ್ತಕ ಸಂಭ್ರಮ. ಕೆಲ ಕಾರ್ಯಕ್ರಮಗಳಲ್ಲಂತೂ ಮುವತ್ತು, ನಲವತ್ತು, ಐವತ್ತು ದಾಟುತ್ತಿರಲಿಲ್ಲ. ನಾವು ನಮ್ಮ ಪುಸ್ತಕಗಳ ಬಿಡುಗಡೆಗೆ ನಮ್ಮ ಮೂರು ಜನರಿಂದ ಸೇರಿ ಒಟ್ಟಾರೆ ನೂರರಿಂದ ನೂರೈವತ್ತು ಗೆಳೆಯರು ಬರಬಹುದು ಅಂದುಕೊಂಡಿದ್ದೆವು. ಮತ್ತು ಪುಸ್ತಕಗಳು ಅಲ್ಲೇ ಏನೇ ಡಿಸ್ಕೌಂಟ್ ಕೊಟ್ಟರೂ ಒಬ್ಬೊಬ್ಬರದೂ ಐವತ್ತು ಮೀರಿ ಮಾರಲಾಗದು ಅಂದುಕೊಂಡಿದ್ದೆವು. ನಮ್ಮ ಪ್ರಕಾಶಕರಾದ ಸೀತಾರಾಮ ಹೆಗಡೆಯವರು ಅಷ್ಟು ಮಾರಾಟವಾದರೆ ಅಡ್ಡಿಯಿಲ್ಲ ಒಬ್ಬೊಬ್ಬರದು ನೂರು ಮಾರಾಟವಾದರೆ ನನಗದು ಬಂಪರ್ ಅಂದಷ್ಟೇ ಹೇಳಿದ್ದರು.

ಬೆಳಿಗ್ಗೆ ನಾನು ಸ್ವಲ್ಪ ತಡವಾಗಿ ಬಂದೆನಾದರೂ ದಿವಾಕರ್ ಹೆಗಡೆ ಮತ್ತು ಪ್ರಕಾಶ್ ಹೆಗಡೆ, ಮತ್ತು ಬಂಧುಗಳು ಮೊದಲೇ ಬಂದು ಕೆಲವು ವ್ಯವಸ್ಥೆಗಳನ್ನು ನೋಡಿಕೊಳ್ಳುತ್ತಿದ್ದರು.

ನಂತರ ಮುಖ್ಯ ಅತಿಥಿಗಳು, ಗೆಳೆಯರು ಬರಲಾರಂಭಿಸಿದರು. ಕಾರ್ಯಕ್ರಮ ಶುರುವಾಯಿತು. ಅದರ ವಿವರಗಳನ್ನು ಬರೆಯಲು ನಾನು ಇಷ್ಟಪಡುವುದಿಲ್ಲ. ಅದೆಲ್ಲ ಬರೆದರೆ ಅದು ವರದಿಯಾಗಿಬಿಡುತ್ತದೆ. ಅದೆಲ್ಲಾ ಬಿಟ್ಟು ಬೇರೆ ಕೆಲವೊಂದು ವಿಚಾರಗಳನ್ನು ಹೇಳಲಿಚ್ಚಿಸುತ್ತೇನೆ.

ಮೊದಲಿಗೆ ನಾನು ದಿವಾಕರ್ ಹೆಗಡೆ, ಪ್ರಕಾಶ್ ಹೆಗಡೆ ಮೂವರು ವೇದಿಕೆ ಮೇಲೆ ಕೂರಬಾರದು ಅಂತ ತೀರ್ಮಾನಿಸಿದ್ದೆವು. ಮತ್ತು ಮೂರು ಜನರ ಪರವಾಗಿ ದಿವಾಕರ ಹೆಗಡೆ ಚುಟುಕಾಗಿ ಮಾತಾಡಬೇಕೆಂದು ಹೇಳಿದ್ದರಿಂದ ಅವರಷ್ಟೇ ಮಾಡಿದ್ದು. ಮತ್ತೆ ನಮ್ಮ ಪುಸ್ತಕಗಳು ಎಂದಿನ ಸಂಪ್ರಧಾಯದಂತೆ ಒಟ್ಟಿಗೆ ಬಿಡುಗಡೆಯಾದವು. ಬಿಡುಗಡೆಯ ಸಮಯದಲ್ಲಿ ನಾಗೇಶ್ ಹೆಗಡೆಯವರು ಅವರಿಗಿಂತ ಸ್ವಲ್ಪ ದೂರ ನಿಂತಿದ್ದ ನನಗೆ ನನ್ನ ವೆಂಡರ್ ಕಣ್ಣು ಪುಸ್ತಕವನ್ನು "ಶಿವು ಕ್ಯಾಚ್" ಅಂದು ಪಟ್ಟಂತ ಎಸೆದೇ ಬಿಟ್ಟರು. ನನಗೆ ಅನಿರೀಕ್ಷಿತವಾಗಿ ಬಂದ ಅವರ ಮಾತು ಕೇಳುವಷ್ಟರಲ್ಲಿ ನನ್ನ ಪುಸ್ತಕ ನನ್ನೆಡೆಗೆ ಹಾರಿಬಂತು. ತಕ್ಷಣ ನಾನು ಅಷ್ಟೇ ವೇಗವಾಗಿ ಅದನ್ನು ಕ್ಯಾಚ್ ಹಿಡಿದಿದ್ದೆ.[ನಾನು ಹೈಸ್ಕೂಲ್ ಮತ್ತು ಕಾಲೇಜಿನಲ್ಲಿ ಒಳ್ಳೆ ಕ್ರಿಕೆಟರು ಆಗಿದ್ದರಿಂದ]. ಅದನ್ನು ವೇದಿಕೆಯಲ್ಲಿದ್ದ ಎಲ್ಲರು ಸಿನಿಮಾ ದೃಶ್ಯದಂತೆ ನೋಡುತ್ತಿರುವುದನ್ನು ಮಲ್ಲಿಕಾರ್ಜುನ್ ಕ್ಯಾಮೆರಾದಲ್ಲಿ ಸೆರೆಹಿಡಿದೇ ಬಿಟ್ಟಿದ್ದರು. ನಂತರ "ಶಿವು ನೀವು ನಿತ್ಯ ದಿನಪತ್ರಿಕೆಗಳನ್ನು ಮಹಡಿ ಮನೆಗಳಿಗೆ ಎಸೆದು ಬಿಡುಗಡೆ ನ್ಯೂಸುಗಳನ್ನು ಬಿಡುಗಡೆ ಮಾಡುತ್ತೀರಲ್ವ. ಹಾಗೆ ನಾನು ನಿಮ್ಮ ವೆಂಡರ್ ಕಣ್ಣು ಪುಸ್ತಕವನ್ನು ಹಾಗೆ ಸಾಂಕೇತಿಕವಾಗಿ ಎಸೆದು ಲೋಕಾರ್ಪಣೆ ಮಾಡಿದೆ ಅಂದರು.

ನಡುವೆ ದೂರದ ಲಿಬಿಯದಿಂದ ಬಿಸಿಲಹನಿ ಬ್ಲಾಗಿನ ಉದಯ್ ಸರ್ ಫೋನ್ ಮಾಡಿ ನನಗೂ ಮತ್ತು ಪ್ರಕಾಶ್ ಹೆಗಡೆಯವರಿಗೂ ಅಭಿನಂದಿಸಿದ್ದು ಮರೆಯಲಾಗದ ಕ್ಷಣಗಳು. ಇದರ ನಡುವೆ ನನ್ನಕಡೆಯಿಂದ ದಿನಪತ್ರಿಕೆ ಕೊಳ್ಳುವ ಗ್ರ್‍ಆಹಕರೂ ನನ್ನ ಮೇಲಿನ ಪ್ರೀತಿಯಿಂದಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಪುಸ್ತಕಗಳನ್ನು ಖರೀದಿಸಿದರೂ ನಡುವೆ ಗುಜರಾತಿ ಗ್ರ್‍ಆಹಕನೊಬ್ಬ ನನ್ನ ನಾನು ಬರೆದ ವೆಂಡರ್ ಕಣ್ಣು ಪುಸ್ತಕವನ್ನು ಖರೀದಿಸಲು ಬಂದಿದ್ದು ವಿಶೇಷ. ಆತನನ್ನು ಅನೇಕರಿಗೆ ಪರಿಚಯಿಸಿದಾಗ ಆತ ಕನ್ನಡವನ್ನು ಒಂದೊಂದೆ ಆಕ್ಷರವನ್ನು ಕೂಡಿಸಿ ಓದುತ್ತೇನೆ ಅರ್ಥಮಾಡಿಕೊಳ್ಳುತ್ತೇನೆ. ಶಿವುರವರ ಬ್ಲಾಗಿನ ಲೇಖನಗಳನ್ನು ಓದಿ ಅರ್ಥಮಾಡಿಕೊಳ್ಳುತ್ತೇನೆ. ಓದುವಾಗ ತುಂಬಾ ನಗುಬರುತ್ತದೆ ಅಂದಾಗ ನನಗಂತೂ ತುಂಬಾ ಖುಷಿಯಾಗಿತ್ತು. ಒಬ್ಬ ಗುಜರಾತಿ ಗ್ರಾಹಕ ಕನ್ನಡ ಬ್ಲಾಗ್ ಲೇಖನಗಳನ್ನು ಓದಿ ಇಷ್ಟಪಟ್ಟು ಕನ್ನಡ ಪುಸ್ತಕವನ್ನು ಖರೀದಿಸಲು ಬಂದಿದ್ದು ನಮ್ಮ ಕಾರ್ಯಕ್ರಮದ ವಿಶೇಷವೇ ಸರಿ.

ಇನ್ನೂರು ಜನಕ್ಕೆ ತಿಂಡಿಯ ವ್ಯವಸ್ಥೆಯಾಗಿದ್ದರೂ ನಮ್ಮೂರ ಹೋಟಲಿನವರು ೨೨೫ ಪ್ಲೇಟ್ ತಂದಿದ್ದರಂತೆ. ಅಷ್ಟು ಪ್ಲೇಟುಗಳು ಹನ್ನೊಂದು ಮುವತ್ತರ ಹೊತ್ತಿಗೆ ಕಾಲಿಯಾಗಿಬಿಟ್ಟವಂತೆ. ಅದರ ನಂತರ ಸುಮಾರು ಜನರು ಬಂದರು ಬಾಗಿಲಲ್ಲೇ ನಿಂತು ಕಾರ್ಯಕ್ರಮವನ್ನು ಪೂರ್ತಿಯಾಗಿ ವೀಕ್ಷಿಸಿದರು. ಕೊನೆಯಲ್ಲಿ ದೂರದ ಗದಗದಿಂದ ಬ್ಲಾಗ್ ಗೆಳೆಯ ಶಿವಶಂಕರ ಯಳವತ್ತಿ ಬರುವ ಹೊತ್ತಿಗೆ ಸಮಯ ಒಂದುಗಂಟೆ ಇಪ್ಪತ್ತು ನಿಮಿಷ. ಅವರು ಫೋನ್ ಮಾಡಿದಾಗ ಅಷ್ಟು ದೂರದಿಂದ ನಮ್ಮ ಪುಸ್ತಕ ಕಾರ್ಯಕ್ರಮಕ್ಕೆ ಬಂದಿರುವುದು, ದೂರದ ಸಿರಸಿ ಸಿದ್ಧಾಪುರ, ಧಾರವಾಡದಿಂದ ಪುಸ್ತಕಪ್ರೇಮಿಗಳು ಬಂದಿದ್ದನ್ನು ನೋಡಿ ನನಗಾದ ಆನಂದವನ್ನು ಪದಗಳಲ್ಲಿ ವರ್ಣಿಸಲಾರೆ. ಒಟ್ಟಾರೆ ನಾನೂರಕ್ಕೂ ಹೆಚ್ಚು ಪುಸ್ತಕಪ್ರ್‍ಏಮಿಗಳು ಹೊಸಬರ ಪುಸ್ತಕ ಬಿಡುಗಡೆ ಸಂಭ್ರಮದಲ್ಲಿ ಭಾಗಿಯಾಗಿದ್ದಂತೂ ನನಗೆ ಅಚ್ಚರಿ ಉಂಟು ಮಾಡಿತ್ತು.

ದಿವಾಕರ್ ಹೆಗಡೆಯವರ "ಉದ್ಧಾರ ಮತ್ತು ಸಂತೆ’ ನೂರೈವತ್ತಕ್ಕೂ ಹೆಚ್ಚು ಮಾರಾಟವಾಗಿತ್ತು. ಪ್ರಕಾಶ್ ಹೆಗಡೆಯವರ ಇನ್ನೂರೈವತ್ತಕ್ಕೂ ಹೆಚ್ಚು ಪುಸ್ತಕಗಳು ಬಿಸಿದೋಸೆಯಂತೆ ಮಾರಾಟವಾಗಿದ್ದು ಮತ್ತೆ ಅವರ ಬಂದ ಈಮೇಲ್ ಪ್ರಕಾರ ನೂರ ಎಪ್ಪತೈದು ಪುಸ್ತಕಗಳು ಬೇರೆ ಊರಿನವರಿಗೆ ಬೇಕಿವೆಯೆಂದು ಹೇಳಿದ್ದಾರೆ. ಮತ್ತೆ ನನ್ನ "ವೆಂಡರ್ ಕಣ್ಣು" ಕೂಡ ಇನ್ನೂರ ಎಂಬತ್ತು ಪುಸ್ತಕಗಳು ಅಲ್ಲೇ ಮಾರಾಟವಾಗಿದೆಯೆಂತೆ. ಅದಲ್ಲದೇ ಇವತ್ತು ಬೆಳಿಗ್ಗೆಯಿಂದ ಈ ಲೇಖನ ಬರೆಯುವವರೆಗೆ ನನ್ನ ವೃತ್ತಿಭಾಂದವರು, ಗ್ರಾಹಕರು, ಗೆಳೆಯರು ಇಷ್ಟಪಟ್ಟು ಖರೀದಿಸಿರುವುದರಿಂದ ಇದುವರೆಗೆ ಮುನ್ನೂರ ಮುವತ್ತು "ವೆಂಡರ್ ಕಣ್ಣು" ಪ್ರತಿಗಳು ಮಾರಾಟವಾಗಿಬಿಟ್ಟಿವೆ. ಮತ್ತೆ ನನಗೆ ಮೇಲ್ ಮಾಡಿ ವಿಳಾಸ ಕೊಟ್ಟ ಹೊರ ಊರಿನವರಿಗೆ ಕಳಿಸಬೇಕಾದ ಪ್ರತಿಗಳು ಸದ್ಯ ೨೦ ದಾಟಿದೆ.

ನಮ್ಮ ಪುಟ್ಟಕಾರ್ಯಕ್ರಮ ಯಶಸ್ವಿಯಾಗಲು ಕಾರಣಕರ್ತರಾದ ಪ್ರಕಾಶಕರಾದ ಸೀತಾರಾಮ್ ಹೆಗಡೆಯವರಿಗೂ, ನಮ್ಮೂರ ಹೋಟಲ್ ಮಾಲೀಕರಾದ ಕೃಷ್ಣ ಹೆಗಡೆಯವರಿಗೂ, ಕಾರ್ಯಕ್ರಮದ ಪ್ರಾಯೋಜಕರಾದ ಸತ್ಯಹೆಗಡೆಯವರಿಗೂ, ನನಗಿಂತ ಮೊದಲೇ ಬಂದು ಫೋಟೊಗಳನ್ನು ತೆಗೆಯಲಾರಂಭಿಸಿ ಇಡೀ ಕಾರ್ಯಕ್ರಮದಲ್ಲಿ ಯಾರು ತಪ್ಪಿಸಕೊಳ್ಳದಂತೆ ಕ್ಯಾಮೆರಾದಲ್ಲಿ ಸೆರೆಯಿಡಿದ ಮಲ್ಲಿಕಾರ್ಜುನ್‍ಗೂ, ಸೊಗಸಾಗಿ ನಿರೂಪಣೆ ಮಾಡಿದ ಭಾರತಿಹೆಗಡೆಯವರಿಗೂ, ಅಚ್ಚುಕಟ್ಟಾದ ದ್ವನಿವ್ಯವಸ್ಥೆ ಮಾಡಿ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಇಷ್ಟು ಚೆನ್ನಾದ ಕಾರ್ಯಕ್ರಮ ನಡೆಸಲು ಅವಕಾಶ ಮಾಡಿಕೊಟ್ಟ ಕಾರ್ಯಕತ್ರರಿಗೂ, ಮತ್ತು ಕಾರ್ಯಕ್ರಮದ ಯಶಸ್ಸಿಗೆ ಕಾರಣರಾದ ಪುಸ್ತಕಪ್ರೇಮಿಗಳಿಗೆ ನನ್ನ ಅನಂತಾನಂತ ಧನ್ಯವಾದಗಳು.

ಇಲ್ಲಿ ಕೆಲವು ಫೋಟೊಗಳನ್ನು ಮಾತ್ರ ಹಾಕಿದ್ದೇವೆ. ಮತ್ತಷ್ಟು ಫೋಟೊಗಳನ್ನು ಪ್ರಕಾಶ ಹೆಗಡೆಯವರು ಅವರ ಇಟ್ಟಿಗೆ ಸಿಮೆಂಟು ಬ್ಲಾಗಿನಲ್ಲಿ ಹಾಕುತ್ತಾರೆ.

ನೀವು ಒಳಗೆ ಕೂತು ಬರೆದು ಪ್ರಿಂಟ್ ಮಾಡಿ ಕಳಿಸಿದ್ದನ್ನು ನಾನು ಹೊರಗೆಲ್ಲಾ ಹಂಚುತ್ತೇವೆ. ನನ್ನ ದಿನಪತ್ರಿಕೆ ವಿತರಕರ ಜೊತೆ ಶ್ರೀದೇವಿ ಕಳಸದ.

ಪರಂಜಪೆ ಮತ್ತು ಡಾ.ಬಿ.ವಿ.ರಾಜಾರಾಂ ಪುಸ್ತಕಗಳ ಲೋಕದಲ್ಲಿ

ಪ್ರಕಾಶ್ ಹೆಗಡೆಯವರ ಜೊತೆ ಕ್ಷಣಚಿಂತನೆ ಚಂದ್ರು ಸರ್, ನವೀನ್.

ಬ್ಲಾಗ್ ಗೆಳೆಯರಾದ ಡಾ. ಸತ್ಯನಾರಯಣ ರಾವ್ ಗೆಳೆಯರೊಂದಿಗೆ


ಗಣ್ಯರ ನಡುವಿನ ಮಾತುಕತೆ.

ಬ್ಲಾಗ್ ಗೆಳೆಯರ ಜೊತೆ ಫೋಟೊಗ್ರಫಿ ಗೆಳೆಯರು.

ವಸುದೇಂಧ್ರರವರ ಜೊತೆ ನಾನು ಮತ್ತು ಪ್ರಕಾಶ್ ಹೆಗಡೆ.

"ಶಿವು, ನಿನ್ನ ವೆಂಡರ್ ಕಣ್ಣು ಕ್ಯಾಚ್"
ಹೆಸರೇ...ಬೇಡ ಮತ್ತು ಉದ್ಧಾರ ಮತ್ತು ಸಂತೆ ಪುಸ್ತಕಗಳಿಗೆ ಸುಂದರವಾದ ಮುಖಪುಟಗಳನ್ನು ರಚಿಸಿಕೊಟ್ಟ ಅಪಾರರವರಿಗೆ ಸನ್ಮಾನ.

ನನ್ನ ವೆಂಡರ್ ಕಣ್ಣಿನ ಕೆಲವು ಚಿತ್ರಗಳು ಮತ್ತು ಪ್ರಕಾಶ್ ಹೆಗಡೆಯವರ ಹೆಸರೇ ಬೇಡ ಪುಸ್ತಕಕ್ಕೆ ತನ್ನದೇ ಶೈಲಿಯ ಚಿತ್ರಗಳನ್ನು ಬರೆದುಕೊಟ್ಟ ಅಜಿತ್ ಕೌಂಡಿನ್ಯಗೆ ಸನ್ಮಾನ.
ನನ್ನ ವೆಂಡರ್ ಕಣ್ಣು ಚಿತ್ರಕ್ಕೆ ಮುಖಪುಟ ಚಿತ್ರದ ಜೊತೆಗೆ ಒಳಚಿತ್ರಗಳನ್ನು ರಚಿಸಿದ ಪಿ.ಟಿ.ಪ್ರಮೋದ್‍ರಿಗೆ ಸನ್ಮಾನ.

ಪ್ರಕಾಶ ಹೆಗಡೆಯವರ ಹೆಸರೇ..ಬೇಡ ಪುಸ್ತಕದ ಬಗ್ಗೆ ಮಾತಾಡುತ್ತಿರುವ ಜಿ.ಎನ್.ಮೋಹನ್.

ಫೋಟೊ ತೆಗೆಯುತ್ತಲೇ ಅತಿಥಿಗಳ ಮಾತು ಕೇಳಲು ಕುಳಿತ ಮಲ್ಲಿಕಾರ್ಜುನ್.

ಒಂದೂ ಸೀಟು ಖಾಲಿಯಿಲ್ಲ!

ದಿವಾಕರ ಹೆಗಡೆಯವರ ಮಾತುಗಾರಿಕೆ.

ಯಶವಂತ್ ಸರದೇಶ್ ಪಾಂಡೆಯವರ ಮಾತಿನ ಶೈಲಿ.

ಸೀತಾರಾಂ ಹೆಗಡೆಯವರಿಂದ ಸ್ವಾಗತ ಭಾಷಣ.

ಪ್ರಕಾಶಕರಾದ ಸೀತಾರಾಮ ಹೆಗಡೆಯವರಿಂದ ಡಾ.ಬಿ.ವಿ ರಾಜರಾಂರವರಿಗೆ ಸನ್ಮಾನ.
ಪ್ರಕಾಶ್ ಹೆಗಡೆಯವರ ಪರಿವಾರ.
ಈಗ ಸದ್ಯ ನಮ್ಮ ಪುಸ್ತಕಗಳು ನವಕರ್ನಾಟಕದ ಎಲ್ಲಾ ಮಳಿಗೆಗಳಲ್ಲಿ ಸಿಗುತ್ತವೆ. ನಂತರ ಮೇಪ್ಲವರ್ ಮೀಡಿಯಾ ಹೌಸ್‍ನಲ್ಲಿ ಕೂಡ ನಾಳೆಯಿಂದ ಸಿಗುತ್ತವೆ.
ಚಿತ್ರಗಳು ಮಲ್ಲಿಕಾರ್ಜುನ್.
ಲೇಖನ. ಶಿವು.ಕೆ

Wednesday, November 11, 2009

ನೀವು ಅವತ್ತು ನಮ್ಮೊಂದಿಗೆ ಇದ್ದರೆ ಚೆನ್ನ. ಬರುತ್ತಿರಲ್ವಾ....

ಅವತ್ತು ಬೆಳಿಗ್ಗೆಯಿಂದಲೇ ಏನೋ ಒಂಥರ ಹೇಳಲಾಗದ ಖುಷಿ. ಮೊಗ್ಗೊಳಗೆ ಆಗ ತಾನೆ ಕೋಟ್ಯಾಂತರ ಜೀವಕೋಶಗಳು ಒಂದರ ಹಿಂದೊಂದು ಸಾಲಾಗಿ ಸಾಗುತ್ತಾ ಒಬ್ಬರನ್ನೊಬ್ಬರು ಅಪ್ಪಿಕೊಳ್ಳುತ್ತಾ ಸೇರಿಕೊಳ್ಳುತ್ತಾ ಮಕರಂದವಾದಂತೆ. ನಾನೊಂದು ಪೋನನ್ನು ನಿರೀಕ್ಷಿಸುತ್ತಿದ್ದೆ. ಬಂತಲ್ಲ. ಹತ್ತೇ ನಿಮಿಷದಲ್ಲಿ ಸಿದ್ಧನಾಗಿ ಹೊರಟೇ ಬಿಟ್ಟೆ. ಹೊರಗೆ ಬಿಟ್ಟು ಬಿಡದ ಚಂಡಮಾರುತದ ಮಳೆ. ನಿದಾನವಾಗಿ ನನ್ನ ಸ್ಕೂಟಿಯಲ್ಲಿ ಆ ಜಡಿಮಳೆಯಲ್ಲಿ ಹೋಗುತ್ತಿದ್ದಾಗ ಅಕ್ಕ ಪಕ್ಕ ಹತ್ತಾರು ವಾಹನಗಳು ಚಲಿಸುತ್ತಿದ್ದರೂ ನನಗೆ ಮೊದಲ ಭಾರಿಗೆ ನಾನೊಬ್ಬನೇ ಹೋಗುತ್ತಿದ್ದೇನೆ ಅನ್ನಿಸಿತ್ತು.


ಮಳೆ ಜೋರಾಯಿತು. ಸಹಜವಾಗಿ ಗಾಡಿ ನಿಲ್ಲಿಸಿ ಯಾವುದಾದರೂ ಸೂರು ನೋಡಿಕೊಳ್ಳುತ್ತಿದ್ದ ನಾನು ಅವತ್ತು ಹಾಗೆ ಮಾಡಲಿಲ್ಲ. ಸಾದ್ಯವಾದಷ್ಟು ಬೇಗ ಅಲ್ಲಿಗೆ ತಲುಪಬೇಕು ಅನ್ನುವ ಕಾತುರ. ಸುಮಾರು ಅರ್ಧಗಂಟೆಯ ಚಲಿಸುವ ರಸ್ತೆಗಳಲ್ಲಿ ಅದೇ ಯೋಚನೆ, ಕನಸು, ಕಲ್ಪನೆ, ಇನ್ನೂ ಏನೇನೋ.......ಸ್ಕೂಟಿಯಂತ ಪುಟ್ಟ ಗಾಡಿಯಲ್ಲಿ ಹೋಗುತ್ತಿದ್ದರೂ ತುಂಬಾ ಸರಾಗವಾಗಿ ಹಾರುತ್ತಾ ಸಾಗುತ್ತಿದ್ದೇನೆ ಅನ್ನುವ ಕಲ್ಪನೆ ಮನಸ್ಸಿಗೆ ಬಂದಾಗ ಅದು ನಿಜವಾ ಅಂತ ಸುತ್ತ ಮುತ್ತ ಒಮ್ಮೆ ನೋಡಿದೆ ಕೂಡ. ಇದೆಲ್ಲಾ ಕತೆ ಮುಗಿಯುವಷ್ಟರಲ್ಲಿ ನಾನು ತಲುಪಬೇಕಾದ ಜಾಗವನ್ನು ಸುರಕ್ಷಿತವಾಗಿ ತಲುಪಿದ್ದೆ.


ಕರೆಂಟ್ ಇರಲಿಲ್ಲ. ಬಾಗಿಲು ತಟ್ಟಿದೆ. ಒಂದೆರಡು ಕ್ಷಣಗಳ ನಂತರ ಬಾಗಿಲು ತೆರೆಯಿತು. ಬನ್ನಿ ಬನ್ನಿ ಅಂತ ಕರೆದರು ಸೀತರಾಮ್ ಹೆಗಡೆಯವರು. ಕುಳಿತ ತಕ್ಷಣ ತಗೊಳ್ಳಿ ನಿಮ್ಮ ಪುಸ್ತಕ ಎಂದು ಕೈಗೆ ಕೊಟ್ಟರು. ಅದನ್ನು ಕೈಗೆತ್ತಿಕೊಂಡೆ. ಮೊದಲ ಭಾರಿಗೆ ಒಂಥರ ವಿಭಿನ್ನ ಆನುಭವ. ನನ್ನದೇ ಪುಟ್ಟ ಮಗುವನ್ನು ಕೈಯಲ್ಲಿ ತಡವಿದಾಗ ಅದಂತ ಭಾವ. ಆಗಲೂ ನನಗೆ ನಂಬಲೂ ಆಗುತ್ತಿಲ್ಲ. ಇದು ಕನಸು ಅನ್ನಿಸಿದ್ದೆ ಹೆಚ್ಚು. ಈ ಮೊದಲು ಮನಸ್ಸಿಗೆ ಬಂದಂತೆ ಫೋಟೊಗಳನ್ನು ಕ್ಲಿಕ್ಕಿಸುತ್ತಾ, ಅದನ್ನು ಹಾಗೆ ಕ್ಲಿಕ್ ಮಾಡಿದೆ, ಹೀಗೆ ಕ್ಲಿಕ್ ಮಾಡಿದೆ ಅಂತ ನಾಲ್ಕಕ್ಷರ ಗೀಜುತ್ತಾ ಅದರಲ್ಲೇ ಖುಷಿಯಾಗಿರುತ್ತಿದ್ದ ನನಗೆ ಇದನ್ನೆಲ್ಲಾ ಮೀರಿ ಬರೆಯಲೇಬೇಕು ಅಂತ ಬರೆಸಿಕೊಂಡ, ಪುಟ್ಟಮಕ್ಕಳು ಪುಟ್ಟ ಪುಟ್ಟ ಫ್ರಾಕ್ ಹಾಕಿಸಿಕೊಂಡಂತೆ, ಹೊತ್ತಲ್ಲದ ಹೊತ್ತಿನಲ್ಲಿ ಮನದಲ್ಲಿ ಮೂಡಿದ ಚಿತ್ರಗಳು ಹೀಗೆ ಬರಹದ ಫ್ರಾಕ್ ಹಾಕಿಸಿಕೊಂಡವು.


ಸದ್ಯ ಅಂತ ನೂರಾರು ಚಿತ್ರಗಳಿಗೆ ಹೀಗೆ ಫ್ರಿಲ್ಲುಗಳಿಂದ ಕೂಡಿದ ಬಣ್ಣ ಬಣ್ಣದ ಫ್ರಾಕಿನ ಬರಹಗಳ ಹದಿನೇಳು ಲೇಖನಗಳ ಪುಟ್ಟ ಪುಸ್ತಕ ’ವೆಂಡರ್ ಕಣ್ಣು" ನನ್ನ ಕೈಯಲ್ಲಿದೆ. ಹೆತ್ತವರಿಗೆ ಹೆಗ್ಗಣ ಮುದ್ದು ಅನ್ನುವ ಹಾಗೆ ನಾನು ಬರೆದಿದ್ದು ನನಗೆ ಚಂದವೇ ಅನ್ನಿಸಿದರೂ ಒಮ್ಮೆ ಹಿಂದಿನದೆಲ್ಲಾ ಮರೆತು ಮೂರನೆ ವ್ಯಕ್ತಿಯ ಹಾಗೆ, ಹತ್ತನೇ ವ್ಯಕ್ತಿಯ ಹಾಗೆ, ಕೊನೆಗೆ ನೂರನೆ ವ್ಯಕ್ತಿಯ ಹಾಗೆ ಯಾವುದೇ ಪೂರ್ವಗ್ರಹ ಪೀಡಿತನಾಗದೆ ಬೇರೆಯವರ ಪುಸ್ತಕವನ್ನು ಓದುವಂತೆ ಓದಿದೆ. ಬ್ಲಾಗು, ಕಂಪ್ಯೂಟರುಗಳಲ್ಲಿ ಓದುವುದಕ್ಕಿಂತ ಪುಸ್ತಕ ರೂಪದಲ್ಲಿ ಓದುವ ಮಜವೇ ಬೇರೆ ಅಂತ ಮತ್ತೊಮ್ಮೆ ಅನ್ನಿಸಿತ್ತು. ಹೊಸ ಪುಸ್ತಕಗಳನ್ನು ತಂದು ಓದಿದಾಗ ಪ್ರತಿಭಾರಿಯೂ ಹೀಗೆ ಅನ್ನಿಸುತ್ತದೆ. ನನ್ನ ಪುಸ್ತಕ ನಿಮಗೆ ನಿರಾಶೆಗೊಳಿಸೊಲ್ಲವೆಂಬ ಭಾವನೆ, ಆತ್ಮವಿಶ್ವಾಸ ನನ್ನಲ್ಲಿದೆ. ದಿನಾಂಕ 15-11-2009ರ ಭಾನುವಾರ ಬೆಳಗ್ಗೆ ಹತ್ತು ಗಂಟೆಗೆ ನೀವೆಲ್ಲಾ ನಿಮ್ಮ ಗೆಳೆಯರೊಂದಿಗೆ, ಕುಟುಂಬದೊಂದಿದೆ ಒಟ್ಟಾಗಿ ಬನ್ನಿ. ಅಲ್ಲಿ ನನ್ನ "ವೆಂಡರ್ ಕಣ್ಣು" ಪುಸ್ತಕದ ಜೊತೆಗೆ, ಪ್ರಕಾಶ್ ಹೆಗಡೆಯವರ "ಹೆಸರೇ...ಬೇಡ" ದಿವಾಕರ್ ಹೆಗಡೆಯವರ "ಉದ್ಧಾರ ಮತ್ತು ಸಂತೆ" ನಿಮಗೆಲ್ಲಾ ಸಿಗಲಿದೆ.


ನಿಮ್ಮ ಪುಸ್ತಕದ ಅಭಿರುಚಿಗೆ ತಕ್ಕಂತೆ ರುಚಿಯಾದ ಕಾಫಿ ತಿಂಡಿ, ಜಿ.ಎನ್.ಮೋಹನ್‍ರವರ ಅವರದೇ ಶೈಲಿಯ ಮಾತು, ನಾಗೇಶ್ ಹೆಗಡೆಯವರ ತಿಳುವಳಿಕೆಯ ಕಾಳಜಿಯುಕ್ತ ಮಾತುಗಳು, ಡಾ.ಬಿ.ವಿ.ರಾಜರಾಂರವರ ನಾಟಕದ ನುಡಿಗಳು, ಯಶವಂತ್ ಸರ್‍ದೇಶ್ ಪಾಂಡೆಯವರ ಹಾಸ್ಯಚಟಾಕಿಗಳು, ಅನೇಕ ಸಾಹಿತಿಗಳು, ಗಣ್ಯರು, ನನ್ನ ವೃತ್ತಿಭಾಂದವರು, ಬ್ಲಾಗ್ ಗೆಳೆಯರು, ಎಲ್ಲರೂ ಸಿಗುತ್ತಾರೆ. ಭಾವ ಭಾಷೆಗಳನ್ನು ಹಂಚಿಕೊಳ್ಳುತ್ತಾರೆ. ನಾವೆಲ್ಲಾ ಒಟ್ಟಾಗಿ ಪಡೆದುಕೊಳ್ಳೋಣ. ಎಂದಿನ ಭಾನುವಾರವನ್ನು ವಿಭಿನ್ನವಾಗಿ ನಮ್ಮದು ಮಾಡಿಕೊಳ್ಳೋಣ. ನೀವು ಅವತ್ತು ನಮ್ಮೊಂದಿಗೆ ಇದ್ದರೆ ಚೆನ್ನ. ಬರುತ್ತಿರಲ್ವಾ....

ಗೆಳೆಯರೊಂದಿಗೆ ಕಾಯುತ್ತಿರುತ್ತೇನೆ.

ಪ್ರೀತಿಯಿಂದ.....

ಶಿವು.ಕೆ




ನನ್ನ "ವೆಂಡರ್ ಕಣ್ಣು" ಮುಖಪುಟ.


ಪ್ರಕಾಶ್ ಹೆಗಡೆಯವರ "ಹೆಸರೇ...ಬೇಡ" ಪುಸ್ತಕದ ಮುಖಪುಟ.

ದಿವಾಕರ್ ಹೆಗಡೆಯವರ "ಉದ್ಧಾರ ಮತ್ತು ಸಂತೆ" ಪುಸ್ತಕದ ಮುಖಪುಟ.


Tuesday, October 27, 2009

ಅದೊಮ್ಮೆ ಉಗಿಯೋವರ್ಗೂ ತಡಕೊಳ್ರೀ.....


"ಹೇಮ ಗೀಸರಿನಿಂದ ತಣ್ಣೀರು ಬರುತ್ತಿದೆ, ಬಿಸಿನೀರು ಬರುತ್ತಿಲ್ಲ"..ಗೀಸರ್ ನಲ್ಲಿ ತಿರುಗಿಸುತ್ತಾ ಕೇಳಿದೆ.

"ಎಷ್ಟು ದಿನಾನ್ರೀ ನಿಮಗೆ ಹೇಳಿಕೋಡೋದು. ಇನ್ನು ಗೊತ್ತಾಗಲಿಲ್ಲವಲ್ರಿ ನಿಮಗೆ" ಅಂತ ಆಡಿಗೆ ಮನೆಯಿಂದ ಗೊಣಗುತ್ತಾ ಬಂದಳು. ನಾನು ತಿರುಗಿಸಿದ್ದ ಟ್ಯಾಂಕ್ ನಲ್ಲಿ ಹಾಗೂ ಪಕ್ಕದಲ್ಲಿದ್ದ ಗೀಸರ್ ನಲ್ಲಿಯನ್ನು ನಿಲ್ಲಿಸಿದಳು. ಅವೆರಡಕ್ಕಿಂತ ಸ್ವಲ್ಪ ದೂರದಲ್ಲಿ ಮತ್ತೊಂದು ನಲ್ಲಿ[ಅದು ಟಾಯ್ಲೆಟ್ ನೀರಿಗಾಗಿ ಇದ್ದಂತದ್ದು]ತಿರುಗಿಸಿದಳು. ಅದರಿಂದ ನೀರು ನಿದಾನವಾಗಿ ಬರತೊಡಗಿತು. ಆರೆರೆ.....ಇದೇನು ನಾನು ಬಿಸಿನೀರಿಗಾಗಿ ಗೀಸರ್ ನಲ್ಲಿ ತಿರುಗಿಸಿದರೆ ಇವಳು ಅದನ್ನು ಬಂದ್ ಮಾಡಿ ಟಾಯ್ಲೆಟ್ ನಲ್ಲಿಯಲ್ಲಿ ನೀರು ಬರುವಂತೆ ಮಾಡಿದ್ದಾಳಲ್ಲ ಅಂತ ನನಗೆ ಆಶ್ಚರ್ಯವಾಗಿತ್ತು.

"ಇದೇನೇ ಇದು ಗ್ಯಾಸ್ ಗೀಸರ್ ಆನ್ ಆಗದೆ ಬಿಸಿನೀರು ಬರ್ತಿಲ್ಲ ಅಂದರೆ, ನೀನು ಬಕೆಟ್ಟು ಇಟ್ಟು ಆ ನಲ್ಲಿ ತಿರುಗಿಸಿದ್ದಿಯಲ್ಲ...ಏನು ತಣ್ಣೀರು ಸ್ನಾನ ಮಾಡಿಕೊಂಡು ಹೋಗಬೇಕಾ" ಅಂದೆ.

"ರೀ....ಸ್ವಲ್ಪ ತಡಕೊಳ್ರಿ"...ಅಂತ ನೇರ ಆಡಿಗೆ ಮನೆಗೆ ಹೋದಳು. ಅವಳ ಉದ್ದೇಶವೇನೆಂದು ನನಗೆ ಅರ್ಥವಾಗಲಿಲ್ಲ.

"ನೀವು ಹೊರಗೆ ಎಷ್ಟೋ ಜನರ ಬಳಿ ನಯ ನಾಜೂಕಾಗಿ ವ್ಯವಹರಿಸಬಹುದು, ಪ್ರಾಣಿ ಪಕ್ಷಿಗಳು, ಮನುಷ್ಯರು ಹೀಗೆ ಜೀವವಿರುವಂತ ಎಲ್ಲರನ್ನು ಏಮಾರಿಸಿ ಫೋಟೋ ತೆಗೆಯಬಹುದು, ಆದ್ರೆ ನಿರ್ಜೀವವಿರುವ ಈ ನಲ್ಲಿಗಳು ಹೇಗೆ ವರ್ತಿಸುತ್ತವೆ ಅಂತ ತಿಳಿದು ಅವುಗಳ ಜೊತೆ ವ್ಯವಹಾರ ಮಾಡೋಕೆ ಕಲಿತುಕೊಳ್ಳಲಿಲ್ಲ ನೀವು, ಕೊನೆ ಪಕ್ಷ ಅವುಗಳ ನಡುವಳಿಕೆ ಏನು ಅಂತ ತಿಳಿದುಕೊಳ್ಳಲಿಕ್ಕೆ ಹಾಗಲಿಲ್ಲವಲ್ರೀ"....ನಯವಾಗಿ ಕುಟುಕಿದಳು.

ಆವಳ ಮಾತು ಸತ್ಯವೆನಿಸಿತ್ತು. ಈ ಮನೆಗೆ ಬಂದಾಗಿನಿಂದ ನಮ್ಮ ಆಡಿಗೆ ಮನೆಯ ಮೂರು ನಲ್ಲಿಗಳು, ಮತ್ತು ಬಚ್ಚಲು ಮನೆಯ ಮೂರು ನಲ್ಲಿಗಳು ನನ್ನನ್ನು ಚೆನ್ನಾಗಿ ಆಟವಾಡಿಸುತ್ತಿವೆ. ಅವುಗಳನ್ನು ನಾನು ಇವತ್ತಿನವರೆಗೂ ಅರಿತುಕೊಳ್ಳಲು ಆಗುತ್ತಿಲ್ಲ. ನಾನು ಏನು ನಿರೀಕ್ಷೆ ಮಾಡುತ್ತೇನೊ ಅದಕ್ಕೆ ತದ್ವಿರುದ್ಧವಾಗಿ ನಡೆದುಕೊಳ್ಳುವುದು ಅವುಗಳ ಜನ್ಮಸಿದ್ಧ ಹಕ್ಕು ಎಂದುಕೊಂಡು ಬಿಟ್ಟಿವೆಯೇನೋ...ಆಷ್ಟರಲ್ಲಿ ಅಲ್ಲಿಟ್ಟಿದ್ದ ಬಕೆಟ್ಟಿನ ತುಂಬಾ ನೀರು ತುಂಬಿತ್ತು.

"ಹೇಮಾ ಬಕೆಟ್ಟು ತುಂಬಿತು. ಹೀಗೇನು ಮಾಡಲಿ"

"ಮತ್ತೊಂದು ಬಕೆಟ್ಟು ಇಡಿ"

ನನಗೆ ಇವತ್ತು ತಣ್ಣೀರೆ ಗತಿ ಎಂದುಕೊಂಡು "ಅಲ್ಲಾ ಕಣೇ ನಾನು ಕೇಳಿದ್ದು ಬಿಸಿನೀರು, ಗೀಸರಿನಿಂದ ಬರುತ್ತಿಲ್ಲ ಅಂದ್ರೆ ಹೋಗ್ಲಿ ಆಡಿಗೆ ಮನೆಯಲ್ಲಿ ಎರಡು ದೊಡ್ಡ ಪಾತ್ರೆಯಲ್ಲಿ ಕಾಯಿಸಿಕೊಡು, ನಾನು ತಣ್ಣೀರು ಸ್ನಾನ ಮಾಡಿದರೆ ನೆಗಡಿ ಗ್ಯಾರಂಟಿ"

"ಸ್ವಲ್ಪ ತಡಕೊಳ್ರೀ....ಅದ್ಯಾಕೆ ಆತುರ ಪಡುತ್ತೀರಿ, ಆ ಕೊಳಯಿ ಒಮ್ಮೆ ಜೋರಾಗಿ ಉಗಿಯಲಿ"

ಆಹಾಂ! ಕೊಳಾಯಿ ಉಗಿಯಬೇಕಾ? ವಿಚಾರವೇ ಹೊಸತಲ್ಲ. ಮನುಷ್ಯರಿಗೆ ಮಾತ್ರ ಉಗಿದು ಉಪ್ಪು ಹಾಕುವುದು ಗೊತ್ತು ಆದ್ರೆ ಈ ನಲ್ಲಿಗಳು ಉಗಿಯೋದು ಅಂದ್ರೆ ಏನು? ನಾನು ಚಿಂತೆಗೆ ಬಿದ್ದೆ. ಆಷ್ಟರಲ್ಲಿ,

"ರೀ ನೋಡ್ರೀ...ಉಗಿಯಿತು ನೋಡ್ರೀ....ಇನ್ನು ಒಂದೆರಡು ಬಾರಿ ಚೆನ್ನಾಗಿ ಉಗಿಯಲಿ ನಂತರ ನಿಮಗೆ ಬೇಕಾದ ಬಿಸಿನೀರು ಸಿಗುತ್ತೆ" ಅಂದಳು.

ನಾನು ನಲ್ಲಿ ಕಡೆ ನೋಡಿದೆ. ಒಂದುವರೆ ಬಕೆಟ್ ತುಂಬಿದ ಮೇಲೆ ನಲ್ಲಿಯಿಂದ ನೀರು ಜೋರಾಗಿ ಬರುತ್ತಿದೆ! ನಿದಾನವಾಗಿ ಬರುತ್ತಿದ್ದ ನೀರು ವೇಗವಾಗಿ ಬರುವುದಕ್ಕೆ ಮೊದಲು ಕೆಲವು ಜೋರಾದ ಶಬ್ದಮಾಡಿ ಒಳಗಿನ ಗಾಳಿಯನ್ನು ಹೊರಹಾಕುವಾಗ ಕ್ಯಾ....ಶೂ....ಟಪ್...ಗರರ್.ಡ್ರೂರ್......ಹುಷ್..........ಇನ್ನೂ ಏನೇನೋ ಶಬ್ದಮಾಡುತ್ತಿದೆ. ಹೇಮಾಶ್ರೀ ಪ್ರಕಾರ ಅದು ಈಗ ಚೆನ್ನಾಗಿ ಉಗಿಯುತ್ತಿದೆ! ಹೌದು! ವೇಗವಾಗಿ ನೀರು ಕ್ಯಾಕರಿಸಿ, ಕೆಮ್ಮಿ ಉಗಿದಂತೆ ನಲ್ಲಿಯಿಂದ ಜೋರಾಗಿ ಬರುತ್ತಿದೆಯಲ್ಲಾ ! ಮುಂದೇನು?

"ಈಗ ಹೋಗಿ ಅದನ್ನು ನಿಲ್ಲಿಸಿ. ನಂತರ ಗ್ಯಾಸ್ ಗೀಸರ್ ನಲ್ಲಿಯನ್ನೂ ತಿರುಗಿಸಿ ಬಿಸಿನೀರು ತಕ್ಷಣ ಬರುತ್ತೆ" ಎಂದಳು. ಅವಳು ಹೇಳಿದಂತೆ ಮಾಡಿದೆ, ಹೌದು! ಈಗ ಖಂಡಿತ ಬಿಸಿನೀರು ಬರುತ್ತಿದೆ. ಖುಷಿಯಾಯ್ತು. ನೋಡ್ರೀ.. ಮೊದಲು ನೀರು ಪೋರ್ಸ್ ಇರಲಿಲ್ಲವಾದ್ದರಿಂದ ಗೀಸರುನಲ್ಲಿ ನೀರು ಬರಲು ಪ್ರೆಶ್ಶರ್ ಸಾಕಾಗುತ್ತಿರಲಿಲ್ಲ. ಅದಕ್ಕಾಗಿ ಪಕ್ಕದ ಆ ನಲ್ಲಿಯಲ್ಲಿ ನೀರು ಬಿಟ್ಟಾಗ ಸ್ವಲ್ಪಹೊತ್ತಿನ ನಂತರ ಪ್ರೆಶರ್ ಹೆಚ್ಚಾಗುತ್ತಿದ್ದಂತೆ ಅದು ಹೀಗೆ ಕ್ಯಾಕರಿಸಿ ಉಗಿಯುತ್ತಾ, ಅನೇಕ ಶಬ್ದಮಾಡಿ ನೀರು ಜೋರಾಗಿ ನಮಗೆ ಪೋರ್ಸ್ ಸಿಗುತ್ತದೆ. ಆಗ ತಕ್ಷಣ ಅದನ್ನು ನಿಲ್ಲಿಸಿ ಗೀಸರ್ ನಲ್ಲಿ ತಿರುಗಿಸಿದರೆ ನಾಲ್ಕೇ ಸೆಕೆಂಡುಗಳಲ್ಲಿ ಬಿಸಿನೀರು ಬರುತ್ತದೆ. ಈ ಮನೆಗೆ ಬಂದು ಎಂಟು ತಿಂಗಳಾದ್ರೂ ನಿಮಗೆ ಗೊತ್ತಾಗಲಿಲ್ಲವಲ್ರೀ....ಹೋಗಿ ಸ್ನಾನಮಾಡಿಕೊಳ್ಳಿ, ಅಂಗಿಸುತ್ತಾ ಮತ್ತೆ ಆಡುಗೆ ಮನೆಗೆ ಹೋದಳು.

"ಆದ್ರೆ ಇದೇ ನಲ್ಲಿಯಲ್ಲೇ ಪೋರ್ಸ್ ಇದೆಯೋ ಇಲ್ಲವೋ ಅಂತ ನೀರು ಬಿಟ್ಟು ಕಂಡುಕೊಳ್ಳಬಹುದಲ್ವೇನೇ?

"ಅದಕ್ಕೆ ಹೇಳೋದು ನಿಮಗೆ ಗೊತ್ತಾಗೊಲ್ಲ ಅಂತ. ನೇರವಾಗಿ ಟ್ಯಾಂಕಿನಿಂದ ನೀರು ಈ ನಲ್ಲಿಗೆ ಬರುತ್ತದೆ. ಅಂದ್ರೆ ಟ್ಯಾಂಕಿನೊಳಗೆ ಏನೇನು ಆಗುತ್ತೆ ಅಂತ ಮೊದಲು ಈ ನಲ್ಲಿಗೆ ಗೊತ್ತಾಗುತ್ತೆ. ಅದಕ್ಕೆ ತಕ್ಕಂತೆ ಹೀಗೆ ವರ್ತಿಸಿ ನಮಗೆ ಸೂಚನೆ ಕೊಡುತ್ತೆ. ಇದು ಒಂಥರ ಟ್ರೈಯಲ್ ವರ್ಷನ್. ಅದನ್ನು ನೋಡಿ ನಾವು ಹೀಗೆ ನೀರಿನ ವಿಚಾರದಲ್ಲಿ ತಣ್ಣೀರು ಮತ್ತು ಬಿಸಿನೀರನ್ನು ಅನಲೈಸ್ ಮಾಡಬೇಕು ಗೊತ್ತಾಯ್ತ" ಅಂದಳು.

ಎಲಾ! ನಲ್ಲಿಯೇ....ನಿನ್ನೊಳಗೆ ಏನೆಲ್ಲಾ ಆಟ ಉಂಟು! ಅಂದುಕೊಳ್ಳುತ್ತಾ ಸ್ನಾನ ಮುಗಿಸಿದ್ದೆ.

"ಸ್ನಾನ ಆಯ್ತೇನ್ರೀ....ಆಗಿದ್ರೆ ಬನ್ನಿ ಇಲ್ಲಿ, ಆಡುಗೆ ಮನೆಯ ನಲ್ಲಿಗಳ ವಿಚಾರ ತಿಳಿಸಿಕೊಡುತ್ತೇನೆ" ಅಂತ ಕರೆದಳು.

ಇಷ್ಟಕ್ಕೂ ಈ ವಿಚಾರದಲ್ಲಿ ದೊಡ್ಡ ಕತೆಯೇ ಇದೆ. ನಮ್ಮ ಮನೆಯ ನಲ್ಲಿಗಳೆಲ್ಲಾ ಬುಗುರಿಯಂತೆ ಗುಂಡಾದ ತಿರುಗಣೆಗಳನ್ನು ಹೊಂದಿರುವಂತವು. ನನಗೂ ನಮ್ಮ ಮನೆಯ ನಲ್ಲಿಗಳಿಗೂ ಆಗಿಬರುವುದಿಲ್ಲ. ಯಾಕಂದ್ರೆ ನಮ್ಮ ಮನೆಯ ನಲ್ಲಿಗಳಿಗೆ ಯಾವಾಗ ಜೀವ ಬರುತ್ತೆ ಮತ್ತು ಜೀವ ಹೋಗುತ್ತೆ ಅನ್ನುವುದು ಗೊತ್ತಾಗೋದೆ ಇಲ್ಲ. ಹೇಮಾಶ್ರೀ ನನ್ನೂರಿಗೆ ಅಥವ ಅವಳ ತವರು ಮನೆಗೋ ಮೂರ್ನಾಲ್ಕು ದಿನದ ಮಟ್ಟಿಗೆ ಹೋದರೂ ಅವಳಿಗೆ ಈ ನಲ್ಲಿಗಳು, ಗ್ಯಾಸ್ ಸಿಲಿಂಡರ್, ಮನೆಯ ದೀಪದ ಸ್ವಿಚ್ಚುಗಳ ಬಗ್ಗೆ, ಮತ್ತು ಇವೆಲ್ಲಕ್ಕೂ ಹೊಂದಿಕೊಳ್ಳಲಾಗದ ನನ್ನ ಬಗ್ಗೆ ಚಿಂತಿಸುತ್ತಿರುತ್ತಾಳೆ. ಏಕೆಂದರೆ ಈ ಮೂರು ವಸ್ತುಗಳ ಬಗ್ಗೆ ನನ್ನ ಗಮನ ಎಳ್ಳಷ್ಟು ಇರುವುದಿಲ್ಲವೆಂದು ಅವಳಿಗೆ ನೂರಕ್ಕೆ ನೂರರಷ್ಟು ಖಚಿತವಾಗಿ ಗೊತ್ತು.

ಮೂರು ತಿಂಗಳ ಹಿಂದೆ ಅವರ ಊರಿನ ಹಬ್ಬಕ್ಕೆ ನನಗೆ ಕೆಲಸದ ಒತ್ತಡದಿಂದಾಗಿ ಹೋಗಲಾಗದೆ ಹೇಮಾಶ್ರೀಯನ್ನು ಮಾತ್ರ ಕಳುಹಿಸಿದ್ದೆ. ಆಗ ಮಳೆ ಕಡಿಮೆಯಾಗಿದ್ದರಿಂದ ನಮಗೆ ದಿನಕ್ಕೆ ಆರೇಳು ಗಂಟೆ ವಿದ್ಯುತ್ ತೆಗೆದುಬಿಡುತ್ತಿದ್ದರು. ಮನೆಯಲ್ಲಿ ಹೆಂಡತಿ ಇದ್ದಾಗ ಇಂಥವೆಲ್ಲಾ ನಮಗೆ ಗೊತ್ತಾಗೊಲ್ಲ. ಅವರು ಹೇಗೋ ಎಲ್ಲವನ್ನು ಹೊಂದಿಸಿಕೊಂಡು ನಮಗೆ ಸಮಯಕ್ಕೆ ಬೇಕಾದ ಹಾಗೆ ಎಲ್ಲಾ ತಯಾರು ಮಾಡಿಕೊಡುತ್ತಾರಾದ್ದರಿಂದ ನಮಗೆ ಗೊತ್ತಾಗುತ್ತಿರಲಿಲ್ಲ. ಆ ಸಮಯದಲ್ಲಿ ಅವತ್ತು ಬೆಳಗಿನ ದಿನಪತ್ರಿಕೆ ಕೆಲಸ ಮುಗಿಸಿ ಬೆಳಿಗ್ಗೆ ಏಳು ಗಂಟೆಗೆ ಮನೆಗೆ ಬಂದಾಗ ಕರೆಂಟು ಇರಲಿಲ್ಲ. ಮನೆಗೆ ಬಂದ ಕೂಡಲೆ ಸ್ನಾನ ಮಾಡಲೆಂದು ನಲ್ಲಿ ತಿರುಗಿಸಿದೆ. ನೀರು ಬರಲಿಲ್ಲ. ಸರಿ ಕರೆಂಟು ಬಂದ ಮೇಲೆ ನೋಡೋಣ ಅಂದುಕೊಂಡು ಸ್ವಲ್ಪ ಹೊತ್ತು ಕುಳಿತು ಪೇಪರ್ ಓದುತ್ತಿದ್ದೆ. ಆಗ ಶುರುವಾಯಿತಲ್ಲ ಮಲಮೂತ್ರ ವಿಷರ್ಜನೆಯ ಒತ್ತಡ. ಬಚ್ಚಲು ಮನೆಗೆ ಹೋದೆ ಅಲ್ಲಿ ಒಂದು ತೊಟ್ಟು ನೀರಿಲ್ಲ. ಆಡುಗೆ ಮನೆಯೊಳಗೆ ನೋಡಿದರೆ ಅಲ್ಲಿಯೂ ಒಂದು ಚಿಕ್ಕ ಪಾತ್ರೆಯಲ್ಲಿ ಮೂರು ಗ್ಲಾಸ್ ಆಗುವಷ್ಟು ನೀರು ಮಾತ್ರ ಇದೆ. ಮನೆಯಲ್ಲಿ ನೀರಿಲ್ಲ. ನೀರನ್ನು ಮೊದಲೇ ತುಂಬಿಸಿಟ್ಟುಕೊಳ್ಳಿ ಅಂತ ಹೇಮಾಶ್ರೀ ಕಿವಿಮಾತು ಹೇಳಿದ್ದರೂ ನಾನು ಕೆಲಸದ ಒತ್ತಡದಲ್ಲಿ ಮತ್ತು ಕಂಪ್ಯೂಟರ್ ಮುಂದೆ ಕೂತು ಮೈಮರೆತು ನೀರು ತುಂಬಿಸಿಕೊಳ್ಳುವುದು ಮರೆತುಬಿಟ್ಟಿದ್ದೆ. ಈಗ ಏನು ಮಾಡುವುದು ? ಕಾವೇರಿ ನೀರು ಬರುವ ಸಮಯ ಇದಲ್ಲ. ಮತ್ತೆ ಮನೆಯ ಬೋರ್‌ವೆಲ್ ನೀರನ್ನು ಟ್ಯಾಂಕಿಗೆ ತುಂಬಿಸಿ ನಂತರ ನಮ್ಮ ಮನೆಗೆ ಬಿಟ್ಟುಕೊಳ್ಳಬೇಕಾದರೆ ಕರೆಂಟು ಬೇಕೇ ಬೇಕು. ಅದು ಬರುವವರೆಗೂ ಕಾಯಲೇಬೇಕು. ಎದುರುಗಡೆಯ ಓನರ್ ಮನೆಯಲ್ಲಿ ಒಂದೆರಡು ಬಿಂದಿಗೆ ನೀರು ಕೇಳೋಣವೆಂದರೆ ಒಂಥರ ನಾಚಿಕೆ! ಹೋಗಿ ಹೋಗಿ ನೀರು ಕೇಳುವುದಾ ಅಂತ. ಹೊರಗೆ ರಸ್ತೆಯಲ್ಲಿರುವ ಬೋರ್‌ವೆಲ್ ನೀರನ್ನು ತರೋಣವೆಂದು ಹೋದರೆ ಅಲ್ಲಿಯೂ ಇದೇ ಕರೆಂಟು ತೊಂದರೆಯಿಂದಾಗಿ ನೀರೇ ಇಲ್ಲ. ಕೊನೆಗೆ ಮನೆಯಲ್ಲೇ ಕುಳಿತರೆ ಸರಿಹೋಗಲ್ಲ, ಹೊರಗೆ ಹೋಗಿ ಒಂದು ಸುತ್ತು ಹಾಕಿಕೊಂಡು ಬಂದರೇ ಆ ಒತ್ತಡದ ಗಮನದಿಂದ ಮನಸ್ಸನ್ನು ಬೇರೆಡೆ ಸೆಳೆಯಬಹುದೆಂದುಕೊಂಡು ಅರ್ಧಗಂಟೆ ಸುತ್ತಾಡಿಕೊಂಡು ಮನೆಗೆ ಬಂದರೆ ಆಗಲೂ ಕರೆಂಟು ಬಂದಿರಲಿಲ್ಲ. ಕೊನೆಗೆ ವಿಧಿಯಿಲ್ಲದೇ ಇರುವ ವಿಚಾರವನ್ನು ಅವರಿಗೆ ಹೇಳಿ ಎರಡು ಬಕೆಟ್ ನೀರು ಕೊಡಿ ಎಂದು ಓನರ ಮನೆಯವರನ್ನು ಕೇಳಬೇಕಾಯಿತು. ಅದಕ್ಕವರು ನಾವು ನೀರು ತುಂಬಿಸಿಕೊಂಡಿರಲಿಲ್ಲವಾದ್ದರಿಂದ ನಮಗೂ ನೀರಿಲ್ಲ ತೊಗೊಳ್ಳಿ ಒಂದೇ ಬಕೆಟ್ ಇರೋದು ಅಂತ ಕೊಟ್ಟರು. ಇಷ್ಟಾದರೂ ಸಿಕ್ಕಿತಲ್ಲ ಅಂದುಕೊಂಡು ಮೊದಲು ಮಲಮತ್ತು ಜಲಭಾದೆಯನ್ನು ತೀರಿಸಿಕೊಂಡಾಗ ಸ್ವರ್ಗಸುಖ! ಉಳಿದ ನೀರಿನಲ್ಲಿ ಮುಖ ತೊಳೆದ ಶಾಸ್ತ್ರಮಾಡಿ ಹೊರಗೆ ಹೋಗಿ ಹೋಟಲ್ಲಿನಲ್ಲಿ ತಿಂಡಿ ತಿಂದು ಬರುವಷ್ಟರಲ್ಲಿ ೯ ಗಂಟೆ. ಇದೆಲ್ಲದ ನಡುವೆ ಮತ್ತೊಂದು ಆಚಾತುರ್ಯ ನಡೆದಿತ್ತು. ಮುಖ ತೊಳೆದ ನಂತರ ಟೀ ಕುಡಿಯಲೆಂದು ಮನೆಯಲ್ಲಿದ್ದ ಹಾಲಿಗೆ ಟೀ ಪುಡಿ, ಸಕ್ಕರೆ ಹಾಕಿದ ಹಾಲಿನ ಪಾತ್ರೆಯನ್ನು ಗ್ಯಾಸ್ ಸ್ಟವ್ ಮೇಲಿಟ್ಟವನು ಯಾವುದೋ ಫೋನ್ ಬಂದ ನೆಪದಲ್ಲಿ ಹಾಗೆ ಮರೆತು ಹೋಟಲ್ಲಿಗೆ ಬಂದು ಬಿಟ್ಟಿದ್ದೆ. ಮನೆಗೆ ಬರುವ ಹೊತ್ತಿಗೆ ಟೀ ಎಲ್ಲಾ ಉಕ್ಕಿ ಪಾತ್ರೆಯಿಂದ ಹೊರಬಿದ್ದು ಗ್ಯಾಸ್ ಸ್ವವ್ ಮೇಲೆಲ್ಲಾ ಹರಡಿ ಅದರ ಕೆಳಗಿನ ಕಪ್ಪು ಕಡಪ ಕಲ್ಲಂತೂ ಕಜ್ಜಿ ಬಂದು ಬಿಳಚಿಕೊಂಡಂತೆ ಬಿಳಿ ಬಣ್ಣಕ್ಕೆ ಬದಲಾಗಿಬಿಟ್ಟಿತ್ತು. ಅಷ್ಟೇ ಅಲ್ಲಾ ಅಂತ ಮಳೆಯಿಲ್ಲದ ಕಾಲದಲ್ಲೂ ಕಡಪ ಕಲ್ಲನ್ನು ದಾಟಿ ಕೋಡಿಹರಿದಂತೆ ಆಗಿ ನೆಲವೆಲ್ಲಾ ಚಿತ್ತಾರವಾಗಿಬಿಟ್ಟಿತ್ತು.

ಒಹ್! ಎಂಥ ಪ್ರಮಾದವಾಗಿಬಿಡ್ತು, ಎಷ್ಟು ಚೆನ್ನಾಗಿದ್ದ ಆಡುಗೆ ಮನೆಯನ್ನು ನಾನು ಮೈಮರೆತು ಎಂತ ಪರಿಸ್ಥಿತಿಗೆ ತಂದುಬಿಟ್ಟೆ. ಇದನ್ನು ನೋಡಿದರೆ ಹೇಮಾಶ್ರೀ ನನಗೊಂದು ಗತಿ ಕಾಣಿಸುತ್ತಾಳೆ ಅಂದುಕೊಳ್ಳುತ್ತಾ ಅದನ್ನೆಲ್ಲಾ ತೊಳೆಯಲು ಸಿದ್ದನಾಗಿ ನೀರಿನ ಪಾತ್ರೆಗೆ ಕೈಹಾಕಿದರೆ ಎಲ್ಲಿದೆ ನೀರು? ಕರೆಂಟು ಇನ್ನೂ ಬಂದಿಲ್ಲವಾದ್ದರಿಂದ ನೀರು ಇಲ್ಲ. ಆಗ ಏನು ಮಾಡಲಿಕ್ಕಾಗದೇ ಸುಮ್ಮನೆ ಕುಳಿತುಬಿಟ್ಟೆ. ಆಗ ನನ್ನ ಪರಿಸ್ಥಿತಿಯಂತೂ ಅದೋಗತಿಯಾಗಿತ್ತು. ಅವತ್ತು ಹತ್ತು ಗಂಟೆಯಾದರೂ ಕರೆಂಟು ಬರಲಿಲ್ಲವಾದ್ದರಿಂದ ಮದ್ಯಾಹ್ನದ ಮೇಲೆ ಬಂದು ನೋಡಿಕೊಳ್ಳೋಣವೆಂದು ಮನೆಯಿಂದ ಹೊರಬಿದ್ದಿದ್ದೆ. ಮದ್ಯಾಹ್ನ ಮನೆಗೆ ಬಂದು ನೋಡುತ್ತೇನೆ! ಓನರ್ ನನಗಾಗಿ ಕಾಯುತ್ತಿದ್ದಾರೆ.

"ಏನ್ರೀ ಶಿವು, ನಲ್ಲಿಗಳನ್ನು ತಿರುಗಿಸಿಬಿಟ್ಟಿದ್ದೀರಲ್ಲ....ಕರೆಂಟು ಬಂದು ನಾವು ಮೋಟರ್ ಹಾಕಿ ಟ್ಯಾಂಕಿನಲ್ಲಿ ನೀರು ತುಂಬಿಸಿದ ಮೇಲೆ ಆ ನೀರೆಲ್ಲಾ ನಿಮ್ಮ ಮನೆಯ ನಲ್ಲಿ ಮೂಲಕ ಹರಿದು ಹೋಗುತ್ತಿದೆ, ಅದನ್ನು ನಿಲ್ಲಿಸೋಣವೆಂದರೆ ನೀವು ಮನೆಯನ್ನು ಲಾಕ್ ಮಾಡಿಕೊಂಡು ಹೋಗಿಬಿಟ್ಟಿದ್ದೀರಿ. ಎಷ್ಟು ನೀರು ಪೋಲಾಗಿಹೋಯ್ತು. ಬೇಗ ಬಾಗಿಲು ತೆಗೆದು ನಲ್ಲಿಗಳನ್ನು ನಿಲ್ಲಿಸ್ರೀ" ಅಂದಾಗ ನನ್ನ ಪರಿಸ್ಥಿತಿ ಹೇಗಾಗಿತ್ತು ಅಂದರೆ ಅದನ್ನು ಇಲ್ಲಿ ವರ್ಣಿಸಲಾರೆ!

ಆಗ ಅನ್ನಿಸಿದ್ದು ಈ ನಲ್ಲಿಗಳಿಗೇ ಯಾವಾಗ ಜೀವ ಬರುತ್ತೋ ಆ ದೇವರಿಗೇ ಗೊತ್ತು. ಅವು ಬುಗುರಿಯಾಕಾರವಾದ್ದರಿಂದ ತಿರುಗಿಸಿ ಟೈಟ್ ಮಾಡಿದಾಗ ಟೈಟ್ ಆದಂತೆ ವರ್ತಿಸಿದರೂ ಇದ್ದಕ್ಕಿದ್ದಂತೆ ಯಾವಾಗಲೋ ಲೂಸ್ ಆಗಿ ನೀರನ್ನು ಕ್ಯಾಕರಿಸಿ ಕೆಮ್ಮಿ, ಕಕ್ಕುತ್ತಾ, ಉಗಿಯುತ್ತಾ, ನಮ್ಮ ತಲೆಯೆಲ್ಲಾ ತಿರುಗುವಂತೆ ಮಾಡಿಬಿಡುತ್ತವೆ!

ಈ ಸಮುದ್ರದ ಮರಳ ಮೇಲಿನ ನಲ್ಲಿ[ಏಡಿ]ಗಳಿಗೂ ಬಚ್ಚಲು ಮನೆಯ ನಲ್ಲಿಗಳಿಗೂ ಏನಾದರೂ ಸಂಭಂದವಿದೆಯಾ, ಇಲ್ಲಾ ಹೋಲಿಕೆಯಿದೆಯಾ ಅಂತ ನೋಡಿದಾಗ ಸಂಭಂದವಿರದಿದ್ದರೂ ಹೋಲಿಕೆಯಂತೂ ಖಂಡಿತ ಇದೆ. ನಾವು ಸಮುದ್ರದ ಮರಳಿನಲ್ಲಿ ನಡೆಯುವ ಮೊದಲು ಆ ನಲ್ಲಿ[ಏಡಿ]ಗಳು ಆರಾಮವಾಗಿ ಓಡಾಡಿಕೊಂಡಿರುತ್ತವೆ. ಯಾವಾಗ ನಮ್ಮ ಹೆಜ್ಜೆ ಸದ್ದುಗಳು ಕೇಳಿಸುತ್ತವೋ ಪುಳಕ್ಕನೇ ಆ ಮರಳಿನಲ್ಲಿ ಮಾಯವಾಗಿಬಿಡುತ್ತವೆ. ಮತ್ತೆ ಅವು ಹೊರಗೆ ಕಾಣಿಸಿಕೊಳ್ಳುವುದು ಯಾರು ಇಲ್ಲದಾಗಲೇ. ಅದೇ ರೀತಿ ಇಲ್ಲಿ ಬಚ್ಚಲು ಮನೆಯ ನಲ್ಲಿಗಳು ನಾವು ಮನೆಯಲ್ಲಿದ್ದು ನೀರು ಬೇಕೆಂದು ತಿರುಗಣೆ ತಿರುಗಿಸಿದಾಗ ನೀರನ್ನು ಕಕ್ಕುವುದಿಲ್ಲ, ಆದ್ರೆ ನಮಗೆ ಬೇಡದ ಸಮಯದಲ್ಲಿ ಕುಡಿದವರಂತೆ ಶಬ್ದ ಮಾಡುತ್ತಾ ನೀರನ್ನು ಕ್ಯಾಕರಿಸಿ ಉಗಿಯುತ್ತವೆಯಾದ್ದರಿಂದ ಇವೆರಡರ ನಡಾವಳಿಯಲ್ಲಿ ಹೋಲಿಕೆಯಂತೂ ಇದ್ದೇ ಇದೆ.

ಒಂದೆರಡು ದಿನ ಕಳೆಯಿತು. ಊರಿನಿಂದ ಫೋನ್ ಮಾಡಿದಳು.

"ರೀ.......ಏನ್ಸಮಚಾರ......ನಲ್ಲಿ ನಿಲ್ಲಿಸಿದ್ದೀರಾ? ಗ್ಯಾಸ್ ಆಪ್ ಮಾಡಿದ್ದೀರಾ? ಎಲ್ಲಾ ಲೈಟುಗಳ ಸ್ವಿಚ್ ಆಪ್ ಮಾಡಿದ್ದೀರಾ?"

"ಏನೇ ಇದು ನನ್ನನ್ನು ವಿಚಾರಿಸಿಕೊಳ್ಳುವುದು ಬಿಟ್ಟು ಮೊದಲು ನಲ್ಲಿ, ಲೈಟು, ಗ್ಯಾಸ್ ಅಂತ ಕೇಳುತ್ತಿದ್ದೀಯಾ?"

"ಹೌದ್ರೀ....ಅವಕ್ಕೆಲ್ಲಾ ಏನು ಹೆಚ್ಚು ಕಮ್ಮಿಯಾಗದಿದ್ದರೇ ನೀವು ಖಂಡಿತ ಚೆನ್ನಾಗಿರುತ್ತೀರಿ ಅಂತ ನನಗೆ ಗೊತ್ತು"

ಅವಳು ನನ್ನನ್ನು ವಿಚಾರಿಸಿಕೊಳ್ಳುವ ಪರಿ ಈ ರೀತಿಯದಾಗಿತ್ತು.

ಅದಕ್ಕಾಗಿ ಈಗ ಅವಳು ಊರಿಗೆ ಹೋಗಿ ಅಲ್ಲಿಂದ ಫೋನ್ ಮಾಡಿದಾಗಲೆಲ್ಲಾ ನನ್ನಿಂದ ಬೇರೆ ರೀತಿ ಉತ್ತರವನ್ನು ಕೊಡುವ ಅಬ್ಯಾಸ ಮಾಡಿಕೊಂಡುಬಿಟ್ಟಿದ್ದೆ.

ಈ ಬಾರಿಯ ಗೌರಿಹಬ್ಬಕ್ಕೆ ಊರಿಗೆ ಹೋಗಿದ್ದಳಲ್ಲ...ಅಲ್ಲಿಂದ ಫೋನ್ ಮಾಡಿದಳು.

"ರೀ....ಹೇಗಿದ್ದೀರಿ....ಬೆಳಿಗ್ಗೆ ತಿಂಡಿ ಏನು ಮಾಡಿಕೊಂಡ್ರಿ?

"ಹೇಮ ನಾನು ಗ್ಯಾಸ್ ಸ್ಟವ್ ಹಚ್ಚಲೇ ಇಲ್ಲ. ಮತ್ತೆ ಹೋಟಲ್ಲಿಗೆ ಹೋಗಿ ದೋಸೆ ತಿಂದೆ."

"ಮತ್ತೆ ಸ್ನಾನ ಮಾಡಿದ್ರಾ?"

"ಸ್ನಾನಾನು ಮಾಡಲಿಲ್ಲ. ಕೊಳಾಯಿಯ ಸಹವಾಸಕ್ಕೆ ಹೋಗಲಿಲ್ಲ. ನೀನು ಊರಿಗೆ ಹೋಗುವಾಗ ದೊಡ್ಡ ಡ್ರಮ್ಮಿನಲ್ಲಿ ತುಂಬಿಸಿದ ತಣ್ಣಿರಲ್ಲೇ ಸ್ನಾನ ಮಾಡಿದೆ."

"ಅಯ್ಯೋ ತಣ್ಣೀರಾ...ನಿಮಗೆ ನೆಗಡಿಯಾಗಿಬಿಡುತ್ತೇ"

"ಆದ್ರೂ ಪರ್ವಾಗಿಲ್ಲ ನಲ್ಲಿ ಸಹವಾಸಕ್ಕಿಂತ ನೆಗಡೀನೇ ಬೆಟರ್ರೂ.....

"ಮತ್ತೆ ಲೈಟ್ ಸ್ವಿಚ್ ಆಪ್ ಮಾಡುತ್ತಿದ್ದೀರಿ ತಾನೆ?

"ಇಲ್ಲಾ ಕಣೇ"

"ಮತ್ತೆ ಹಾಗೆ ಬಿಟ್ಟು ಹೋಗುತಿದ್ರಾ?" ಅವಳ ಮಾತಿನ ದ್ವನಿಯಲ್ಲಿ ಗಾಬರಿಯಿತ್ತು.

"ನಾನು ಲೈಟ್ ಬೆಳಕನ್ನೇ ಉಪಯೋಗಿಸಲಿಲ್ಲವಾದ್ದರಿಂದ ಸ್ವಚ್ಚನ್ನು ಮುಟ್ಟುವ ಪ್ರಮೇಯವೇ ಬರಲಿಲ್ಲವಲ್ಲಾ"

"ಮತ್ತೆ ಕತ್ತಲಲ್ಲಿ ಹೇಗೆ ಇದ್ರೀ...."

"ಮೇಣದ ಬತ್ತಿಯನ್ನು ಹೊತ್ತಿಸಿ ಅದರ ಬೆಳಕಿನಲ್ಲಿ ಆದಿವಾಸಿಯಂತೆ ಕಾಲ ಕಳೆಯುತ್ತಿದ್ದೆ"

ಇಷ್ಟೆಲ್ಲಾ ಮಾತಾಡುವ ಹೊತ್ತಿಗೆ ನಾನು ಹೇಳಿದ್ದೆಲ್ಲಾ ಸುಳ್ಳು ಅಂತ ಗೊತ್ತಾಗಿ ಇನ್ನೇನಾದ್ರು ಕೇಳಿದ್ರೆ ಇವರು ಮತ್ತಷ್ಟು ಸಿನಿಮಾ ಕತೆಯನ್ನು ಹೇಳುವುದು ಗ್ಯಾರಂಟಿ ಅಂತ ಸುಮ್ಮನಾಗಿಬಿಡುತ್ತಿದ್ದಳು.

ಇನ್ನೂ ನಮ್ಮ ಮನೆಯ ಮೋಟರ್ ಸ್ವಿಚ್ ಮತ್ತು ಪೈಪುಗಳ ಕತೆಯೇ ಬೇರೊಂದು ತೆರನಾದ್ದು. ಕರೆಂಟು ಬಂತಲ್ಲ ಅಂತ ಸ್ವಿಚ್ ಹಾಕಿಬಿಟ್ಟರೆ ನೀರು ನೇರವಾಗಿ ನಮ್ಮ ಮನೆಯ ಟ್ಯಾಂಕಿಗೆ ತುಂಬುವುದಿಲ್ಲ. ಮಾಲೀಕರ ಮನೆಯ ಓವರ್ ಹೆಡ್ ಟ್ಯಾಂಕ್ ತುಂಬಿ ಹರಿದಿರುತ್ತದೆ[ನಮ್ಮ ಬಿಲ್ಡಿಂಗಿನಲ್ಲಿ ಮೂರು ಓವರ್‌ಹೆಡ್ ವಾಟರ್ ಟ್ಯಾಂಕುಗಳಿವೆ ಅವಕ್ಕೆಲ್ಲಾ ಒಂದೇ ಮೋಟರ್ ಸ್ವಿಚ್ಚಿದೆ]. ಅಥವ ನಮ್ಮ ಪಕ್ಕದ ಮನೆಯ ಟ್ಯಾಂಕು ಉಕ್ಕಿಹರಿದು ಕೋಡಿ ಬಿದ್ದಿರುತ್ತದೆ. ಇದನ್ನೆಲ್ಲಾ ತಪ್ಪಿಸಲು ನಮ್ಮ ಹದಿಮೂರು ಮನೆಯ ಬಿಲ್ಡಿಂಗಿನಲ್ಲಿ ಚಕ್ರವ್ಯೂಹದಂತ ನೀರಿನ ಪೈಪುಗಳ ಲಿಂಕುಗಳಿವೆ. ಮೋಟರ್ ಸ್ವಿಚ್ ಹಾಕುವ ಮೊದಲು ಯಾವುದೋ ಪೈಪಿನ ವಾಲ್ ಮೇಲಕ್ಕೆ ಎತ್ತಬೇಕು. ಎದುರಿಗಿರುವ ಪೈಪಿನ ವಾಲನ್ನು ಕೆಳಕ್ಕೆ ಮಾಡಬೇಕು. ಮತ್ಯಾವುದೋ ತಿರುಪಣೆಯನ್ನು ಬಲಕ್ಕೆ ತಿರುಗಿಸಿ ಟೈಟ್ ಮಾಡಬೇಕು. ಇಲ್ಲಿಯೂ ಕೆಲವೊಮ್ಮೆ ಬಲವೋ ಎಡವೊ ಗೊಂದಲವುಂಟಾಗಿ ನೀರು ಯಾವುದೋ ಟ್ಯಾಂಕಿಗೆ ಹರಿದು ಒಂದು ಕಡೆ ಅತೀವೃಷ್ಟಿ ಮತ್ತೊಂದು ಕಡೆ ಆನಾವೃಷ್ಟಿಯಾಗಿಬಿಟ್ಟಿರುತ್ತದೆ.

ಇಂಥ ಚಕ್ರವ್ಯೂಹವನ್ನೆಲ್ಲಾ ಅಧ್ಯಾಯನ ಮಾಡಿ ಅದರೊಳಗೆ ನುಗ್ಗಿ ಜಯಿಸಲು ನಾನೇನು ಅಭಿಮನ್ಯುವೇ? ಇದರ ಸಹವಾಸವೇ ಬೇಡವೆಂದು ಸುಮ್ಮನಾಗಿಬಿಡುತ್ತೇನೆ. ಮನೆಯಲ್ಲಿ ತುಂಬಿಸಿಟ್ಟ ನೀರನ್ನೇ ರೇಷನ್ ತರಹ ಬಿಂದಿಗೆಯಷ್ಟು ನೀರಿನ ಅವಶ್ಯಕತೆಯಿರುವಾಗ ಚೆಂಬಿನಷ್ಟು ಉಪಯೋಗಿಸುತ್ತಾ, ಚೆಂಬಿನಷ್ಟು ಅವಶ್ಯಕತೆಯಿರುವಾಗ ಲೋಟದಷ್ಟೇ ಉಪಯೋಗಿಸುತ್ತಾ...ನನ್ನ ಶ್ರೀಮತಿ ಬರುವವರೆಗೂ ಕಾಲಹಾಕುತ್ತೇನೆ. ಇನ್ನೂ ವಿದ್ಯುತ್ ಸ್ವಿಚ್ಚುಗಳ ಬಗ್ಗೆ ಬರೆದರೇ ನಿಮಗೆ ಅದೊಂದು ದೊಡ್ಡ ಕತೆಯಾಗುತ್ತದೆಂಬ ಭಯದಿಂದ ಇಲ್ಲಿಗೆ ನಿಲ್ಲಿಸಿದ್ದೇನೆ.

ಚಿತ್ರ ಮತ್ತು ಲೇಖನ.
ಶಿವು.ಕೆ
__________________________________________________

ಮತ್ತೊಂದು ಸುದ್ಧಿ.

ನವೆಂಬರ್ ೧೫ನೇ ೨೦೦೯ ಭಾನುವಾರದಂದು ನನ್ನ ಬರವಣಿಗೆಯ ಹೊಸ ಪುಸ್ತಕ "ವೆಂಡರ್ ಕಣ್ಣು" ಪ್ರಕಾಶ್ ಹೆಗಡೆ ಮತ್ತು ದಿವಾಕರ ಹೆಗಡೆಯವರ ಪುಸ್ತಕಗಳ ಜೊತೆಗೆ ಚಾಮರಾಜಪೇಟೆಯಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಲೋಕರ್ಪಣೆಯಾಗಲಿದೆ. ಆ ಪುಸ್ತಕಕ್ಕಾಗಿ ಗೆಳೆಯ ಪಿ.ಟಿ ಪ್ರಮೋದ್ ರಚಿಸಿಕೊಟ್ಟ ಅನೇಕ ಚಿತ್ರಗಳಲ್ಲಿ ಇದು ಒಂದು.

ಜೊತೆಗೆ ನನ್ನ ಬರವಣಿಗೆಯನ್ನು ಭಾವನಾತ್ಮಕವಾಗಿ ಮತ್ತು ವಸ್ತುನಿಷ್ಟವಾಗಿ ತಿದ್ದಿತೀಡಿ ಪ್ರೋತ್ಸಾಹಿಸಿ, ಬೆನ್ನುಡಿಯನ್ನು ಬರೆದುಕೊಟ್ಟಿದ್ದಾರೆ ಅನಂತಪುರದ ಶ್ರೀಕೃಷ್ಣ ದೇವರಾಯ ವಿಶ್ವವಿದ್ಯಾಲಯದಲ್ಲಿ ಪ್ರೊಫೆಶರ್ ಆಗಿರುವ ಡಾ. ಆರ್. ಶೇಷಾಶಾಸ್ತ್ರಿಗಳು. ಅದನ್ನು ಹಾಗೆ ನೇರವಾಗಿ ಇಲ್ಲಿ ಬ್ಲಾಗಿಗೆ ಹಾಕಿದ್ದೇನೆ.

ಕನ್ನಡ ಸಾಹಿತ್ಯವನ್ನು ತಮ್ಮ ವಿಶಿಷ್ಟ ಅನುಭವ ಮತ್ತು ಅಭಿವ್ಯಕ್ತಿಯಿಂದ ಶ್ರೀಮಂತಗೊಳಿಸುತ್ತಿರುವ ಯುವಕರ ಪಡೆಯಲ್ಲಿ ಶ್ರೀ ಶಿವು ಅವರದು ವಿಶಿಷ್ಟ ಸ್ಥಾನ. ಶಿವು ಅವರ ಅಭಿವ್ಯಕ್ತಿ ಮಾಧ್ಯಮಗಳು ಎರಡು. ಒಂದು ಭಾಷೆ ಎರಡನೆಯದು ಕ್ಯಾಮೆರಾ. ಈ ಎರಡರ ಮೂಲಕವೂ ಅವರು ಸೆರೆಹಿಡಿಯುತ್ತಿರುವುದು ಈ ಮನುಷ್ಯರ ಚಹರೆಗಳನ್ನು ಸ್ವಭಾವಗಳನ್ನು. ಶಿವು ಸ್ವಭಾವತಃ ಸಾತ್ವಿಕ ಆದ್ದರಿಂದ ಆತನಿಗೆ ಬದುಕಿನ ಪಾಸಿಟೀವ್ ಅಂಶಗಳೇ ಕಾಣುತ್ತವೆಯೇ ಹೊರತು ನೆಗಟೀವ್ ಅಂಶಗಳಿಲ್ಲ. ಬದುಕಿನಲ್ಲಿ ಸ್ವಯಂಕೃಷಿಯಿಂದ ಮೇಲೇರುತ್ತಿರುವ ಶಿವು "ಸಹನೆ" ಒಂದು ಉತ್ತಮೋತ್ತಮ ಗುಣ ಎಂಬುದನ್ನೇ ಅರಿತವರು. ಅದನ್ನು ರೂಢಿಸಿಕೊಂಡವರು. ಪ್ರತಿಯೊಂದು ಘಟನೆಯನ್ನು ಒಂದು ಚೌಕಟ್ಟಿನಲ್ಲಿಟ್ಟು ನೋಡಬಲ್ಲರು. ತಾವು ಕಂಡಿದ್ದನ್ನು ಮಾತಿನ ಮೂಲಕವೋ, ಕ್ಯಾಮೆರಾ ಮೂಲಕವೋ ನಮಗೆ ತೋರಿಸಬಲ್ಲವರು. ಅವರವರ ಬದುಕು ಅವರಿಗೆ ದೊಡ್ಡದು, ಪ್ರಯೋಗಶೀಲವಾದದು. ಆ ಬದುಕಿನ ಮೂಲಕ ಅವರು ಕಂಡುಕೊಂಡ ದರ್ಶನ ಅವರಿಗೆ ವಿಶಿಷ್ಟವಾದುದು. ಈ ರೀತಿ ವಿಶಿಷ್ಟ ದರ್ಶನಗಳ ಸಮಾಹಾರವೇ ಸಂಸ್ಕೃತಿ. ಊರೆಲ್ಲರಿಗೂ ನಸುಕು ಹರಿಯುತ್ತಿರುವಂತೆ ಪ್ರಪಂಚದ ಮೂಲೆ ಮೂಲೆಯಲ್ಲಿನ ಸುದ್ಧಿಗಳನ್ನು ಹಂಚುವ ವಿತರಕರ, ಹುಡುಗರ ಬದುಕಿನ ಹಲವಾರು ಸಂಗತಿಗಳನ್ನು ನಮ್ಮ ಮುಂದಿಟ್ಟಿದ್ದಾರೆ. "ಇಲ್ಲಿನ ಪ್ರತಿಯೊಂದು ಬರಹವೂ ತನ್ನ ತಾಜಾತನದಿಂದ, ಸರಳತನದಿಂದ ಓದಿಸಿಕೊಂಡು ಹೋಗುತ್ತದೆ. ಮಿತ್ರ ಶಿವು ಅವರ ಲೇಖನದಿಂದ ಇನ್ನೂ ಇಂಥ ಹಲವಾರು ಬರಹಗಳು ಬರಲಿ"


ಡಾ. ಆರ್. ಶೇಷಶಾಸ್ತ್ರಿ.

ಪುಸ್ತಕದ ಇನ್ನಷ್ಟು ವಿಚಾರಗಳನ್ನು ಮುಂದಿನ ಪೋಷ್ಟಿಂಗ್‍ನಲ್ಲಿ ತಿಳಿಸುತ್ತೇನೆ.