Wednesday, April 17, 2013

ಕೊಲ್ಕತ್ತದಿಂದ ಬಂದ ಆ ಫೋನ್ ಕರೆ

                
   ಕೊಲ್ಕತ್ತದಿಂದ ಆ ಫೋನ್ ಕರೆ ಬಂದಾಗ ಏನು ಉತ್ತರಿಸಬೇಕೆಂದು ನನಗೆ ಗೊತ್ತಾಗಲಿಲ್ಲ. ಆ ಕ್ಷಣ ನಾನು ಆಕಾಶದಲ್ಲಿ ತೇಲುತ್ತಿದ್ದೇನೇನೋ ಅನ್ನಿಸಿತ್ತು. ಆ ಕೆಲವು ಕ್ಷಣಗಳಲ್ಲಿ ನನಗಾದ ಖುಷಿಯನ್ನು ಇಲ್ಲಿ ವರ್ಣಿಸಲು ಸಾಧ್ಯವಿಲ್ಲ.  ಒಂದು ಕ್ಷಣ ಮಗುವಿನಂತೆ ಕುಣಿದಾಡಿದೆ. "ಹೇಮಾ, ಹೇಮಾ" ಎಂದು ನನ್ನ ಶ್ರೀಮತಿಯನ್ನು ಕೂಗಿದಾಗ ಅದ್ಯಾಕೆ ಅಷ್ಟು ಜೋರಾಗಿ ಕಿರುಚುತ್ತೀರಿ, ನಾನು ಇಲ್ಲೇ ಇದ್ದೀನಲ್ಲ, ಅದೇನು ಹೇಳಿ ಎಂದಳು. ಅವಳಿಗೆ ವಿಚಾರವನ್ನು ತಿಳಿಸಿದೆ...ಅವಳ ಕಣ್ಣುಗಳು ಅರಳಿತು.  "ನಾನು ಕಲ್ಕತ್ತಗೆ ಬರಬಹುದಾ" ಅಂದಳು. ಅದನ್ನು ಅಮೇಲೆ ಹೇಳುತ್ತೇನೆ ಮೊದಲು ಅವರೊಂದಿಗೆ ಮಾತಾಡುತ್ತೇನೆ ಎಂದು ವಾಸ್ತವಕ್ಕೆ ಬಂದೆ.

 "ಶಿವೂಜಿ, ನಾನು ಸಂತೋಷ್ ಕುಮಾರ್ ಜನ, ಕಲ್ಕತ್ತದಿಂದ ಮಾತಾಡುತ್ತಿದ್ದೇನೆ. ಹೇಗಿದ್ದೀರಿ"
ಹೀಗೊಂದು ಮೊಬೈಲ್ ಕರೆ ಬಂದಾಗ ಸಹಜವಾಗಿ ಎಂದಿನಂತೆ "ನಾನು ಚೆನ್ನಾಗಿದ್ದೇನೆ, ನೀವು ಹೇಗಿದ್ದೀರಿ, ಕಲ್ಕತ್ತ ಹೇಗಿದೆ, ನಿಮ್ಮ ಛಾಯಾಗ್ರಾಹಕ ಗೆಳೆಯರೆಲ್ಲಾ ಹೇಗಿದ್ದಾರೆ?" ಹೀಗೆ ನಾನು ಅವರ ಮಾತಿಗೆ ಹಿಂದಿಯಲ್ಲೇ ಉತ್ತರಿಸಿದ್ದೆ. ಇದು ಎಂದಿನಂತೆ ಕಲ್ಕತ್ತ, ಲಕ್ನೊ, ಪಾಟ್ನ, ಮುಂಬೈ, ವಿಜಯವಾಡ ಇನ್ನಿತರ ಕಡೆಗಳಿಂದ ನನ್ನ ಛಾಯಾಗ್ರಾಹಕ ಗೆಳೆಯರಾದ ದೇಭಸಿಸ್ ತರಫ್ದಾರ್, ಅಭಿಜಿತ್ ಡೆ ಸರ್, ಸಂತೋಷ್ ಕುಮಾರ್ ಜನ, ಋತ್ವಿಕ್ ಚರ್ಕವರ್ತಿ, ಶ್ಯಾಮಲ ದಾಸ್ ಸರ್, ಬಿ.ಕೆ ಸಿನ್ಹ ಸರ್, ಬಬೂತಿ ಭೂಷನ್ ನಂದಿ, ಪರೋಮಿತ್ರ, ನಾಗೇಶ್ ಸಕ್ಪಾಲ್, ತಮ್ಮ ಶ್ರೀನಿವಾಸ್ ರೆಡ್ಡಿ, ಇನ್ನೂ ಅನೇಕರು ಪ್ರೀತಿಯಿಂದ ನನಗೆ ಫೋನ್ ಮಾಡುತ್ತಾರೆ. ಫೋಟೊಗ್ರಫಿ ಬಗ್ಗೆ ಮಾತಾಡುತ್ತಾರೆ. ಅನುಭವಗಳು ವಿನಿಮಯವಾಗುತ್ತಿರುತ್ತವೆ. ನಿಜಕ್ಕೂ ಹೇಳಬೇಕೆಂದರೆ ಫೋನಿನಲ್ಲಿ ಮಾತಾಡುವಾಗ ಎರಡು ಕಡೆಯೂ ಸಂತೋಷವೆನ್ನುವ ವಿಚಾರ ನಲಿದಾಡುತ್ತಿರುತ್ತದೆ.

 ಆದ್ರೆ ಈಗ ಉಬಯಕುಶಲೋಪರಿ ನಂತರ ಸಂತೋಷ್ ಕುಮಾರ್ ಜನ ಅವರಿಂದ ಕೇಳಿದ ವಿಚಾರವೇ ನನ್ನ ಬದುಕಿನ ಆ ಕ್ಷಣದಲ್ಲಿ ನಿಜಕ್ಕೂ ಥ್ರಿಲ್ ಕೊಟ್ಟಿತ್ತು.

   "ನೀವು ನಮ್ಮ ನಗರ ಕಲ್ಕತ್ತಕ್ಕೆ ಬರಬೇಕು" ಎಂದು ಹಿಂದಿಯಲ್ಲಿ ಸಂತೋಷ್ ಕುಮಾರ್ ಜನ ಹೇಳಿದಾಗ "ಹೌದಾ ಏಕೆ ಏನು ವಿಚಾರ" ಎಂದು ನಾನು ಸಹಜವಾಗಿ ಕೇಳಿದ್ದೆ. "ನಮ್ಮ ಫೋಟೊಗ್ರಫಿ ಕಮಿಟಿಯವರು ನಡೆಸುವ "ಇಂಡಿಯನ್ ಗೋಲ್ಡನ್ ಇಂಟರ್‍ನಾಷನಲ್ ಡಿಜಿಟಲ್ ಸರ್ಕ್ಯುಟ್" ಅಂತರರಾಷ್ಟ್ರೀಯ ಸ್ಪರ್ಧೆಗೆ ನಿಮ್ಮನ್ನು ಜ್ಯೂರಿಯಾಗಿ ಆಯ್ಕೆ ಮಾಡಿದ್ದಾರೆ. ಆ ವಿಚಾರವನ್ನು ನಿಮಗೆ ತಿಳಿಸಿ ನಿಮ್ಮ ಒಪ್ಪಿಗೆ ಪಡೆಯಲು ಫೋನ್ ಮಾಡಿದ್ದೇನೆ" ಎಂದರು.

 ನಾನು ಮರು ಮಾತಾಡದೇ ಒಪ್ಪಿಗೆ ಸೂಚಿಸಿದ್ದೆ. ಏಕೆಂದರೆ ಇದು ನನ್ನ ಬದುಕಿನ ಬಹುದೊಡ್ಡ ಕನಸು. ಒಮ್ಮೆ ಕಲ್ಕತ್ತಾಗೆ ಹೋಗಬೇಕು. ಸುಮ್ಮನೇ ಸುತ್ತಾಡಿ ಊರು ನೋಡುವುದಕ್ಕಲ್ಲ.....ಈಗ ಸಧ್ಯಕ್ಕೆ ಪಿಕ್ಟೋರಿಯಲ್ ಫೋಟೊಗ್ರಫಿಯಲ್ಲಿ ಅದ್ಬುತ ಸಾಧನೆಯನ್ನು ಮಾಡಿರುವ ಪಶ್ಚಿಮ ಬಂಗಾಲ ಅದರಲ್ಲೂ ಕಲ್ಕತ್ತ ನಗರದ ಛಾಯಾಗ್ರಾಹಕರನ್ನು ಬೇಟಿಯಾಗಬೇಕು ಎನ್ನುವುದು ನನ್ನ ದೊಡ್ದ ಕನಸು.  ಆದ್ರೆ ಈಗ ಅದನ್ನೂ ಮೀರಿ ಅಲ್ಲಿ ಪ್ಯಾರಿಸ್ಸಿನ "ಪೆಡರೇಶನ್ ಇಂಟರ್‌ನ್ಯಾಷನಲ್ ಡಿ ಲ ಆರ್ಟ್" ಅಮೇರಿಕಾದ "ಫೋಟೊಗ್ರಫಿ ಸೊಸೈಟಿ ಅಪ್ ಅಮೇರಿಕಾ" ಮತ್ತು ನಮ್ಮ ದೇಶದ "ಪೆಡರೇಷನ್ ಅಪ್ ಇಂಡಿಯನ್ ಫೋಟೊಗ್ರಫಿ" ಮನ್ನಣೆಗಳನ್ನು ಪಡೆದಿರುವ "ಇಂಡಿಯನ್ ಗೋಲ್ಡನ್ ಇಂಟರ್‌ನ್ಯಾಷನಲ್ ಡಿಜಿಟಲ್ ಸರ್ಕ್ಯುಟ್ ೨೦೧೩’ ನಂತ ಅಂತರರಾಷ್ಟ್ರೀಯ ಮಟ್ಟದ ಛಾಯಾಚಿತ್ರ ಸ್ಪರ್ಧೆಯಲ್ಲಿ ನಾನು ಒಬ್ಬ ಜ್ಯೂರಿಯಾಗುತ್ತೇನೆಂದು ಕನಸು ಮನಸಿನಲ್ಲೂ ನೆನಸಿರಲಿಲ್ಲ. ವಿಶ್ವದಾದ್ಯಂತ ನೂರಾರು ದೇಶಗಳ ಪ್ರತಿಭಾನ್ವಿತ ಛಾಯಾಗ್ರಾಹಕರ ಕಲಾತ್ಮಕ ಛಾಯಾಚಿತ್ರಗಳನ್ನು ನೋಡಿ ಅವುಗಳಲ್ಲಿ ಉತ್ತಮವಾದುದನ್ನು ಪ್ರಶಸ್ತಿಗೆ ಆಯ್ಕೆ ಮಾಡಬೇಕಾದ ಪ್ರಕ್ರಿಯೆಯಲ್ಲಿ ನಾನು ಒಬ್ಬನಾಗಿದ್ದೇನೆಂಬ ವಿಚಾರ ನನ್ನ ಫೋಟೋಗ್ರಫಿ ಜೀವನದಲ್ಲಿ ನಿಜಕ್ಕೂ ಮರೆಯಲಾಗದ ಕ್ಷಣ.

 ನನ್ನ ಸಂಪೂರ್ಣ ಬಯೋಡಾಟವನ್ನು ಕೇಳಿದರು. ಅದನ್ನು ಮೇಲ್ ಮಾಡಿದೆ. ಹೀಗೆ ಆಯ್ಕೆಯಾದ ಜ್ಯೂರಿಗಳೆಲ್ಲರ ಬಯೋಡಾಟ ಮತ್ತು ಫೋಟೊಗ್ರಫಿ ಸಾಧನೆಯನ್ನು ಅವರು ಪ್ಯಾರಿಸ್ಸಿನ "ಪೆಡರೇಶನ್ ಇಂಟರ್‌ನ್ಯಾಷನಲ್ ಡಿ ಲ ಆರ್ಟ್" ಮತ್ತು ಅಮೇರಿಕಾದ "ಫೋಟೊಗ್ರಫಿ ಸೊಸೈಟಿ ಅಪ್ ಅಮೇರಿಕಾ" ಕಳಿಸುತ್ತಾರೆ. ಅಲ್ಲಿಂದ ಈ ಜ್ಯೂರಿಗಳೆಲ್ಲರೂ ಅಪ್ರೂವಲ್ ಆದಮೇಲೆ ಅವರೆಲ್ಲರೂ ಜ್ಯೂರಿಯಾಗಿ ಕಾರ್ಯ ನಿರ್ವಹಿಸಬಹುದು. ಇದು ನಿಯಮವೆಂದು ಅವರು ತಿಳಿಸಿದಾಗ ನನಗೆ ಹೊಸ ವಿಚಾರವೊಂದನ್ನು ಕಲಿತಂತಾಗಿತ್ತು.

 ಯಶವಂತಪುರ ರೈಲು ನಿಲ್ದಾಣದಲ್ಲಿ ಸಂತೋಷ್ ಕುಮಾರ್ ಜನ ಜೊತೆ

 ಗೆಳೆಯ ಸಂತೋಷ್ ಕುಮಾರ್ ಜನ ಈ ವಿಚಾರದಲ್ಲಿ ನನ್ನೊಂದಿಗೆ ಆಗಾಗ ಸಂಪರ್ಕದಲ್ಲಿದ್ದರು. ಕಳೆದ ಮಾರ್ಚ್ ತಿಂಗಳ ಹನ್ನೆರಡರಂದು ನಾನು ಬೆಂಗಳೂರಿಗೆ ಬರುತ್ತೇನೆ. ನಂತರ ಮಾರ್ಚ್ ಹತ್ತೊಂಬತ್ತರವರೆಗೆ ಫೋಟೊಗ್ರಫಿಗಾಗಿ ಮೈಸೂರು, ಕಬಿನಿ, ರಂಗನತಿಟ್ಟು ಸುತ್ತಾಡುತ್ತಿರುತ್ತೇವೆ, ನಮಗೆ ಅ ಸ್ಥಳಗಳ ಮಾಹಿತಿ, ಇವಲ್ಲದೇ ರೈಲುಗಾಡಿಗಳ ವಿವರ, ಬಸ್ ಓಡಾಟ, ಉಳಿದುಕೊಳ್ಳುವ ಸ್ಥಳ ಇತ್ಯಾದಿಗಳಿಗಾಗಿ ಸ್ವಲ್ಪ ಮಾಹಿತಿ ಕೊಡಿ ಎಂದಿದ್ದರು. ನನಗೆ ತಿಳಿದ ಮಟ್ಟಿಗೆ ಎಲ್ಲಾ ವಿವರವನ್ನು ಅವರಿಗೆ ಒದಗಿಸಿದ್ದೆ. ಆ ಪ್ರಕಾರ ಅವರ ಕರ್ನಾಟಕ ಅದರಲ್ಲೂ ಮೈಸೂರು, ಕಬಿನಿ, ರಂಗನತಿಟ್ಟು ಫೋಟೊಗ್ರಫಿ ಯಶಸ್ವಿಯಾಯ್ತು ಎಂದು ನನಗೆ ಫೋನ್ ಮಾಡಿ ತಿಳಿಸಿದಾಗ ನನಗೂ ಖುಷಿಯಾಗಿತ್ತು.  ನಿಮ್ಮ ಪ್ರವಾಸದಲ್ಲಿ ಬಿಡುವು ಮಾಡಿಕೊಂಡು ನಮ್ಮ ಮನೆಗೆ ಬನ್ನಿ ಎಂದು ಅಹ್ವಾನಿಸಿದ್ದೆ.  ಸಂತೋಷ್ ಒಪ್ಪಿಗೆಯನ್ನು ನೀಡಿದ್ದರು.  ಆದ್ರೆ ಅವರ ಟೈಟ್ ಫೋಟೊಗ್ರಫಿ ಶೆಡ್ಯೂಲ್‍ನಿಂದಾಗಿ ಅದು ಸಾಧ್ಯವಾಗಲಿಲ್ಲ. ಆದ್ರೆ ಬೆಂಗಳೂರಿನ ಯಶವಂತಪುರ ರೈಲು ನಿಲ್ದಾಣದಲ್ಲಿ ಅವರೊಂದಿಗೆ ಒಂದು ಗಂಟೆ ಕಳೆಯುವ ಅವಕಾಶವಂತೂ ಸಿಕ್ಕಿತ್ತು.  ಸಂತೋಷ್ ಕುಮಾರ್ ಜನರನ್ನು ಅದೇ ಮೊದಲು ನೋಡಿದ್ದು. ನನ್ನಂತೆ ಸುಮಾರಾದ ಎತ್ತರ, ನನ್ನದೇ ವಯಸ್ಸಿನ ಆತ ಸೀದ ಸಾದ ಸರಳವೆನಿಸಿದ್ದು ಅವರನ್ನು ನೇರವಾಗಿ ನೋಡಿದಾಗಲೇ...

   "ಇಂಡಿಯನ್ ಗೋಲ್ಡನ್ ಇಂಟರ್‌ನ್ಯಾಷನಲ್ ಡಿಜಿಟಲ್ ಸರ್ಕ್ಯುಟ್ ೨೦೧೩" ಗೆ ಆಯ್ಕೆದಾರರು ಮತ್ತು ಸ್ಪರ್ಧೆಗೆ ಎರಡು ಅಂತರರಾಷ್ಟ್ರೀಯ ಛಾಯಚಿತ್ರ ಸಂಸ್ಥೆಗಳಿಂದ ಮನ್ನಣೆ ದೊರಕಿದೆ. ನಮ್ಮ ವೆಬ್‍ಸೈಟಿನಲ್ಲಿ ಏಪ್ರಿಲ್ ಹದಿನೈದನೇ ತಾರೀಖಿನಂದು ಎಲ್ಲವನ್ನು ಅಧಿಕೃತವಾಗಿ ಹಾಕುತ್ತೇವೆ. ಮತ್ತು ನಿಮಗೆ ಅಧಿಕೃತವಾಗಿ ಪತ್ರವನ್ನು ಕಳಿಸುತ್ತೇವೆ ಎಂದಿದ್ದರು.

  ಇದೇ ಏಪ್ರಿಲ್ ಹದಿನೈದರಿಂದ ಅವರ ವೆಬ್ ಸೈಟಿನಲ್ಲಿ ಸ್ಪರ್ಧೆಗ ಕಳಿಸಲು ಬೇಕಾದ ಮಾಹಿತಿ, ನಿಯಮಗಳು, ಹೇಗೆ ಕಳಿಸಬೇಕು ಇತ್ಯಾದಿ ವಿವರಗಳು ಪ್ರಕಟವಾಗಿವೆ.

    ವೆಬ್ ಸೈಟ್ ಗಾಗಿ ಇಲ್ಲಿ ಕ್ಲಿಕ್ಕಿಸಿ :  
http://www.goldencircuit.org/Information.aspx
 ಮಾಸ್ಟರ್ ಆಫ್ ಫೋಟೊಗ್ರಫಿ ಮನ್ನಣೆ ಪಡೆದಿರುವ ಡಾ.ಬಿ.ಕೆ. ಸಿನ್ಹ ಸರ್, ಶುಶಾಂತ ಬ್ಯಾನರ್ಜಿ ಸರ್, ಅನುಪ್ ಪಾಲ್ ಸರ್,  ಇವರ ಜೊತೆಗೆ ಎಕ್ಸಲೆನ್ ಅಫ್ ಫೋಟೊಗ್ರಫಿ ಮನ್ನಣೆ ಪಡೆದಿರುವ ಡಾ. ಆಶೋಕ್ ಘೋಷ್, ಸುಬ್ರತಾ ದಾಸ್, ಅಮಿತಾಬ ಸಿಲ್, ಅಭಿಜಿತ್ ಡೆ, ಡಾ.ದೇಬದಾಸ್ ಬುನಿಯಾ ರಂಥ ಅತಿರಥ ಮಹಾರಥರೆಲ್ಲಾ ಪಶ್ಚಿಮ ಬಂಗಾಲ, ಬಿಹಾರ ರಾಜ್ಯಗಳಂಥ ಈಶಾನ್ಯ ಭಾರತದವರು.  ದಕ್ಷಿಣ ಭಾರತದಿಂದ ನಾನು ಅವರಿಗೆ ಜೊತೆಯಾಗುತ್ತಿದ್ದೇನೆ. 

                                     ದಿಘ ನಗರದ ಸಮುದ್ರ ಕಿನಾರೆ


ಮೂರು ಕಡೆ ನಡೆಯುವ ಈ ಆಯ್ಕೆ ಪ್ರಕ್ರಿಯೆಯಲ್ಲಿ ಮೊದಲನೆಯದಾಗಿ ಪಶ್ಚಿಮ ಬಂಗಾಲ ದಕ್ಷಿಣದ ತುತ್ತತುದಿಯಲ್ಲಿ ಸಮುದ್ರಕ್ಕೆ ಹೊಂದಿಕೊಂಡಂತಿರುವ "ದಿಘಾ" ನಗರದಲ್ಲಿ ಪ್ರಾರಂಭವಾಗುತ್ತದೆ. ಆಗಸ್ಟ್ ಆರರಂದು ಬೆಂಗಳೂರಿನಿಂದ ೧೨ ಗಂಟೆಯ ವಿಮಾನದಲ್ಲಿ ಹೊರಟು ಕೊಲ್ಕತ್ತ ತಲುಪಿ ಅಲ್ಲಿಂದ ನೂರ ತೊಂಬತ್ತು ಕಿಲೋ ಮೀಟರ್ ದೂರದ ದಿಘ ತಲುಪಬೇಕು. ಏಳು, ಎಂಟು, ಒಂಬತ್ತು ಮೂರು ದಿನದ ಆಯ್ಕೆ ಪ್ರಕ್ರಿಯೆ ಮುಗಿದ ನಂತರ ಮತ್ತೆ ನಾನು ಕೊಲ್ಕತ್ತ ತಲುಪಿ ಅಲ್ಲಿಂದ ಮಧ್ಯಾಹ್ನ ಮೂರುವರೆಗೆ ವಿಮಾನದಲ್ಲಿ ಬೆಂಗಳೂರಿಗೆ ವಾಪಸ್.  ಈಗಾಗಲೇ ನನ್ನ ಪ್ರಯಾಣದ ಟಿಕೆಟ್ಟುಗಳೆಲ್ಲಾ ತಲುಪಿವೆ. ಇನ್ನು ನಾನು ಆಗಸ್ಟ್ ಆರು ದಿನಾಂಕವನ್ನು ಕಾಯುತ್ತಿದ್ದೇನೆ.

   ನನ್ನ ಮಟ್ಟಿಗೆ ಇದು ದೊಡ್ಡದಾದ ಖುಷಿಯ ವಿಚಾರ ನಿಮ್ಮೊಂದಿಗೆ ಹಂಚಿಕೊಳ್ಳಬೇಕೆನಿಸಿತು.

   ಪ್ರೀತಿಯಿಂದ..

   ಶಿವು.ಕೆ