Thursday, December 2, 2010

ಬೇಸರಗೊಂಡು ಜಿಗುಪ್ಸೆಯಿಂದ ಕಪ್ಪುಬಣ್ಣಕ್ಕೆ ತಿರುಗಿ.....

         

             ಆಗಷ್ಟೇ ಕಾಫಿ ಪುರಾಣದ ಲೇಖನವನ್ನು ಬರೆಯಲು ಕುಳಿತಿದ್ದೆ.  ಐದಾರು ಸಾಲು ಬರೆಯುವಷ್ಟರಲ್ಲಿ ಅದ್ಯಾಕೋ ತಟ್ಟನೆ ನಿಂತು ಹೋಯಿತು. ಏನೇ ಪ್ರಯತ್ನಿಸಿದರೂ ಸರಾಗವಾಗಿ ಸಾಗುತ್ತಿಲ್ಲ. ಅಂತ ಸಮಯದಲ್ಲಿ ಕಂಪ್ಯೂಟರ್ ಬಿಟ್ಟು ಹೊರಗೆ ಬಂದು ಐದು ನಿಮಷ ರಸ್ತೆಯನ್ನು ನೋಡುತ್ತಾ ನಿಂತುಬಿಡುತ್ತೇನೆ. ಸ್ವಲ್ಪ ರಿಲ್ಯಾಕ್ಸ್ ಸಿಕ್ಕಿತು ಅನ್ನಿಸಿದಾಗ ಮತ್ತೆ ಒಳಗೆ ಬಂದು ಕುಳಿತು ಬರೆಯಲು ಪ್ರಾರಂಭಿಸಿದರೆ ಎಂದಿನಂತೆ ಸಹಜವಾಗಿ ಬರವಣಿಗೆಯ ಅಕ್ಷರಗಳು ನೀರಿನಂತೆ ಹರಿಯಲಾರಂಭಿಸುತ್ತವೆ.  ಇದು ನಾನು ಕಂಡುಕೊಂಡ ಒಂದು ಸಣ್ಣ ಬರಹದ ಯುರೇಕ.  ಆದ್ರೆ ಅವತ್ತು ಅದ್ಯಾಕೋ ಈ ವಿಧಾನದಿಂದಲೂ ಬರಹ ವೇಗ ಪಡೆಯಲಿಲ್ಲ. ಸರಿ ಟೀ ಅಥವ ಕಾಫಿ ಕುಡಿದರೆ ಎಲ್ಲಾ ಸರಿಹೋಗುತ್ತದೆ ಎಂದುಕೊಂಡು ಅಡುಗೆ ಮನೆ ಕಡೆ ನೋಡಿದ್ರೆ ಹೇಮಾಶ್ರೀ ಇಲ್ಲ. ಅವಳು ಅಕ್ಕನ ಮನೆಗೆ ತುಮಕೂರಿಗೆ ಹೋಗಿದ್ದಾಳಲ್ಲ...ಅದು ಮರೆತೇಹೋಗಿತ್ತು. ಸರಿ ನಾನೇ ಹೋಗಿ ಮಾಡಿಕೊಳ್ಳೋಣವೆಂದುಕೊಂಡು ಅಡುಗೆಮನೆಗೆ ಹೋದೆ.   ನಮ್ಮ ಮನೆಯ ಕಾಫಿ ನನಗಿಷ್ಟವಾದರೂ ನನಗೆ ಹೇಮಾಶ್ರೀಯಷ್ಟು ಚೆನ್ನಾಗಿ ಮಾಡಲು ಬರುವುದಿಲ್ಲ.  ಬಿಸಿನೀರು ಕಾಯಿಸಿ ಅದಕ್ಕೆ ಸರಿಯಾದ ಅಳತೆಯ ಕಾಫಿಪುಡಿ ಹಾಕಿ ಫಿಲ್ಟರ್ ತೆಗೆದು ಸರಿಯಾದ ಪ್ರಮಾಣದಲ್ಲಿ ಸಕ್ಕರೆ ಮಿಶ್ರಿತ ಹಾಲನ್ನು ಹಾಕಿ ಹಬೆಯಾಡುವ ಕಾಫಿ ಮಾಡುವುದೇನಿದ್ದರೂ ಅವಳಿಗೆ ಸರಿ. ನನಗೆ ಅಷ್ಟೆಲ್ಲಾ ಮಾಡಿಕೊಳ್ಳುವ ತಾಳ್ಮೆಯೂ ಇರಲಿಲ್ಲವಾದ್ದರಿಂದ ಟೀ ಮಾಡಿಕೊಂಡು ಕುಡಿಯೋದು ಒಳ್ಳೆಯದು ಅಂದುಕೊಂಡೆ. ಮತ್ತೊಂದು ವಿಚಾರವೆಂದರೆ ನಾನು ತುಂಬಾ ಚೆನ್ನಾಗಿ ಟೀ ಮಾಡುತ್ತೇನೆ. ನನಗೇ ಬೇಕಾದ ಹಾಗೆ ಎರಡು ಅಥವ ಮೂರು ವಿಧಾನದ ಟೀ ಪುಡಿಗಳನ್ನು ತಂದಿಟ್ಟುಕೊಂಡು ಹೇಮಾಶ್ರೀ ಇಲ್ಲದಾಗ ನನಗೆ ಬೇಕಾದ ಹಾಗೆ ಸೊಗಸಾಗಿ ಅದ್ಬುತ ರುಚಿಯುಳ್ಳ ಟೀ ಮಾಡಿಕೊಂಡು ಕುಡಿಯುತ್ತಾ ಅನಂದಿಸುತ್ತೇನೆ. ಈ ವಿಚಾರದಲ್ಲಿ ನನ್ನನ್ನು ಹೊಗಳಿಕೊಳ್ಳುತ್ತಿಲ್ಲ. ಏಕೆಂದರೆ ನನ್ನ ಮನೆಗೆ ಅನೇಕ ಫೋಟೊಗ್ರಫಿ ಗೆಳೆಯರು ಮತ್ತು ಬ್ಲಾಗ್ ಗೆಳೆಯರು ಬಂದಾಗ ನಾನು ಮಾಡಿದ ಟೀ ರುಚಿಯನ್ನು ನೋಡಿರುವುದರಿಂದ ನೀವು ಅವರನ್ನು ಕೇಳಿ ನನಗೆ ಸರ್ಟಿಫಿಕೆಟ್ ಕೊಡಬಹುದು.


              ಗ್ಯಾಸ್ ಸ್ಟವ್ ಹತ್ತಿಸಿ ಹಾಲಿನ ಪಾತ್ರೆಯನ್ನು ಇಟ್ಟು ನನಗಿಷ್ಟವಾದ ಆಯುರ್ವೇದದ ಅನೇಕ ದ್ರವ್ಯಗಳನ್ನು ಸೇರಿಸಿ ತಯಾರಿಸಿದ ರೆಡ್ ಲೇಬಲ್ಲಿನ ನೇಚರ್ ಕೇರ್ ಟೀ ಪುಡಿಯನ್ನು ಸ್ವಲ್ಪ ಗಟ್ಟಿಹಾಲು, ನನಗೆ ಬೇಕಷ್ಟು ಸಕ್ಕರೆಯನ್ನು ಹಾಕಿ ಕುದಿಯಲು ಬಿಟ್ಟು ಕಂಪ್ಯೂಟರಿನ ಮುಂದೆ ಬಂದು ಕುಳಿತೆ. ಅದ್ಯಾವ ಮಾಯದಲ್ಲಿ ಕಾಫಿಯ ಅರೋಮ ತಲೆಗೇರಿತೋ ಗೊತ್ತಿಲ್ಲ. ಲೇಖನ ಹರಿಯುವ ನದಿಯಂತೆ ಅಡೆತಡೆಯಿಲ್ಲದೆ ಸಾಗಿ ಸರಿಸುಮಾರು ಒಂದು ತಾಸು ಅಲುಗಾಡದೇ ಬರೆದುಮುಗಿಸಿದ್ದೆ.


          ಒಂದು ಲೇಖನವನ್ನು ಬರೆದು ಮುಗಿಸಿ ಒಮ್ಮೆ ಎರಡು ಕೈಗಳನ್ನೆತ್ತಿ ಮೈಯನ್ನೆಲ್ಲಾ ಅತ್ತ ಇತ್ತ ಅಲುಗಾಡಿಸಿ ಮೈಮುರಿದು ರೆಲ್ಯಾಕ್ಸ್ ಆಗುವುದಿದೆಯಲ್ಲಾ ಅದು ಮತ್ತು ಮುಗಿಸಿದಾಗಿನ ಅನುಭವದಲ್ಲಿ ತೇಲಿಹೋಗುವುದಿದೆಯಲ್ಲಾ ಅದನ್ನು ಅನುಭವಿಸಿಯೇ ತೀರಬೇಕು. ಇಲ್ಲೂ ಹಾಗೆ ಮಾಡಿ ಒಂದು ಕ್ಷಣ ಹಾಗೆ ಕುಳಿತಲ್ಲಿಯೇ ಕಣ್ಣು ಮುಚ್ಚಿದೆನಲ್ಲಾ! ಎಷ್ಟು ಹೊತ್ತು ಹಾಗೆ ಇದ್ದೆನೋ ಗೊತ್ತಿಲ್ಲ ಎಚ್ಚರವಾದಾಗ ಯಾವುದೋ ಒಂದು ವಾಸನೆ ಮೂಗಿಗೆ ನಿದಾನವಾಗಿ ತಾಕುತ್ತಿದೆ! ಕಾಫಿಯ ಲೇಖನದಿಂದಾಗಿ ಕಾಫಿಯ ನೊರೆನೊರೆ ಮತ್ತು ಅದರ ಸ್ವಾದವನ್ನು ಮಾನಸಿಕವಾಗಿ ಅನುಭವಿಸುತ್ತಿದ್ದವನಿಗೆ ಇದ್ಯಾವುದೋ ಹೊಸ ವಾಸನೆ ಕಾಫಿಯ ಸುವಾಸನೆಯ ನಡುವೆ ಜಾಗಮಾಡಿಕೊಂಡು ಬಂದು ಮೂಗಿಗೆ ತೊಂದರೆ ಕೊಡುತ್ತಿದ್ದೆಯಲ್ಲಾ!  ಒಂಥರ ಸುಟ್ಟ ಕಮಟು ವಾಸನೆಯಂತಿದೆ! ಏನಿರಬಹುದು ಯೋಚಿಸಿದೆ. ಗೊತ್ತಾಗಲಿಲ್ಲ. ಸುಟ್ಟವಾಸನೆಯೆಂದರೆ ನಮ್ಮ ಓಣಿಯಲ್ಲಿ ಯಾರೋ ಸ್ಟವ್ ಮೇಲೆ ಏನನ್ನೋ ಬೇಯಿಸಲು ಇಟ್ಟು ಮರೆತಿರುವುದರಿಂದ ಈ ವಾಸನೆ ಬರುತ್ತಿರಬಹುದು ಇರಲಿಬಿಡಿ ನಮಗ್ಯಾಕೆ ಪಕ್ಕದ ಮನೆಯ ಚಿಂತೆ ಎಂದುಕೊಂಡು ಈಗ ಒಂದು ಸೊಗಸಾದ ಟೀ ಮಾಡಿಕೊಂಡು ಕುಡಿಯೋಣ ಎಂದು ಎದ್ದೆ. 


              ಓಹ್! ಟೀ ಮತ್ತೆ ಮಾಡುವುದೇನು ಬಂತು! ಆಗಲೇ ಟೀ ಮಾಡಲು ಸ್ಟವ್ ಮೇಲೆ ಇಟ್ಟಿದ್ದ ಪಾತ್ರೆ ನೆನಪಾಯಿತು. ಸಮಯ ನೋಡಿಕೊಂಡೆ. ಸರಿಸುಮಾರು ಒಂದುವರೆಗಂಟೆ ದಾಟಿಹೋಗಿದೆ! ತಕ್ಷಣ ಎದ್ದೆನೋ ಬಿದ್ದೆನೋ ಎನ್ನುವಂತೆ ಆಡುಗೆ ಮನೆಗೆ ನುಗ್ಗಿದೆ. ಏನು ಆಗಬಾರದಿತ್ತೋ ಅದು ಆಗಿಹೋಗಿತ್ತು. ಅರ್ಧ ಸ್ಪೂನ್ ಟೀಪುಡಿ ಮತ್ತು ಒಂದು ಸ್ಪೂನ್ ಸಕ್ಕರೆ ಬೆರೆತ ನೂರೈವತ್ತು ಎಂಎಲ್ ಹಾಲಿದ್ದ ಆ ಪುಟ್ಟ ಟೀ ಮಾಡುವ ಪಾತ್ರೆ ಒಂದುವರೆಗಂಟೆಗೂ ಹೆಚ್ಚುಕಾಲ  ಹೈ ವಾಲ್ಯೂಮ್ ಸಿಮ್‍ನಲ್ಲಿ ಬೆಂದು ಬೇಸತ್ತು ಸಿಟ್ಟಿನಿಂದ ಅನೇಕ ಬಾರಿ ಕುದ್ದು ಕೊನೆಗೆ ಅದರ ಸಿಟ್ಟನ್ನು ಗಮನಿಸುವವರು ಯಾರು ಇಲ್ಲದಿರುವಾಗ ಬೇಸರಗೊಂಡು ಜಿಗುಪ್ಸೆಯಿಂದ ಕಪ್ಪುಬಣ್ಣಕ್ಕೆ ತಿರುಗಿ ತಳಸೇರುವುದರ ಜೊತೆಗೆ ಪಾತ್ರೆಯ ಒಳಸುತ್ತೆಲ್ಲಾ ಕಾಂಕ್ರೀಟಿನಂತೆ ಮೆತ್ತಿಕೊಂಡುಬಿಟ್ಟಿದೆ!  ಟೀ ಸುಟ್ಟು ಕರಕಲಾದ ವಾಸನೆಯಂತೂ ಇಡೀ ಮನೆಯನ್ನು ಅವರಿಸಿಬಿಟ್ಟಿದೆ! ಅಯ್ಯೋ ಎಂಥ ಪ್ರಮಾದವಾಯಿತು!  ಏನು ಮಾಡುವುದು?  ಆಗ ತಕ್ಷಣ ಹೊಳೆದ ಉಪಾಯ ಪಾತ್ರೆಗೆ ನೀರು ಹಾಕುವುದು. ಹಾಕಿದೆ. ಇದರಿಂದಾಗಿ ಕಮಟು ಮತ್ತಷ್ಟು ಹೆಚ್ಚಾಗಿ ಮನೆಯಲ್ಲಾ ಮತ್ತಷ್ಟು ಆವರಿಸಿತೋ ವಿನಃ ಕಡಿಮೆಯಾಗಲಿಲ್ಲ. ಆ ಪಾತ್ರೆಯನ್ನು ಮನೆಯ ಹಾಲಿಗೆ ತಂದಿಟ್ಟು ಫ್ಯಾನ್ ಜೋರಾಗಿ ಹಾಕಿದೆ.


            ಅರ್ಧ ಗಂಟೆ ನಾನು ಚೇರಿನಲ್ಲಿ ಕುಳಿತಿದ್ದರೂ ಆ ಪಾತ್ರೆ ನನ್ನ ಮುಂದೆ ಪ್ಯಾನ್ ಕೆಳಗಿದ್ದರೂ ವಾತವರಣದಲ್ಲಿ ಎಳ್ಳಷ್ಟು ಬದಲಾವಣೆಯಾಗಲಿಲ್ಲ. ಇರಲಿ ಸವಾಲುಗಳು ನಮಗೆ ಬರದೇ ಇನ್ಯಾರಿಗೆ ಬರಲು ಸಾಧ್ಯ! ಎನ್ನುವ ಒಂದು ಅದ್ಯಾತ್ಮದ ಮಾತನ್ನು ನೆನೆಸಿಕೊಂಡು ಮನೆಯಲ್ಲಿರುವ ಎಲ್ಲಾ ತರಹದ ಪುಡಿಗಳಿಂದ ಉಜ್ಜಿ ತಿಕ್ಕಿ ತೊಳದು ಒಪ್ಪ ಮಾಡಿ ಯಾವುದಾದರೂ ಒಂದು ಸೆಂಟ್  ಹೊಡೆದುಬಿಟ್ಟರೆ ಮುಗೀತು ಇದು ಖಂಡಿತ ನನ್ನ ಶ್ರೀಮತಿಗೆ ಗೊತ್ತಾಗುವುದಿಲ್ಲವೆಂದುಕೊಂಡು ಒಂದೊಂದೇ ಪುಡಿಯನ್ನು ಹಾಕುವುದು ಚೆನ್ನಾಗಿ ಉಜ್ಜುವುದು ತಿಕ್ಕುವುದು ಪ್ರಾರಂಭಿಸಿದೆ.  ಅದು ಯಾವ ಪರಿ ಮೆತ್ತಿಕೊಂಡಿತ್ತೆಂದರೆ ಗೋಡೆಗೆ ಹಾಕಿದ ಕಾಂಕ್ರೀಟನ್ನಾದರೂ ಕೆತ್ತಿ ಹಾಕಬಹುದಿತ್ತೇನೋ! ಆದ್ರೆ ಇದು ಮಾತ್ರ ಅದಕ್ಕಿಂತ ಗಟ್ಟಿಯಾಗಿ ಪಾತ್ರೆಯ ಒಳಭಾಗಕ್ಕೆ ಅಂಟಿಕೊಂಡುಬಿಟ್ಟಿತ್ತು.  ಕೊನೆಗೆ ಮನೆಯಲ್ಲಿದ್ದ ಚಾಕು ಕತ್ತರಿ ಇನ್ನಿತರ ಆಯುಧಗಳಿಂದ ಉಜ್ಜಿ ಕೆತ್ತಿ ಬಿಡಿಸಲೆತ್ನಿಸಿದೆ.  ಉಹೂಂ! ಜಪ್ಪಯ್ಯ ಅಂದರೂ ಬಿಡಲಿಲ್ಲ. ಸ್ವಲ್ಪ ಜೋರಾಗಿ ಶಕ್ತಿಪ್ರಯೋಗ ಮಾಡಿದಾಗ ಪಾತ್ರೆಯು ಅಲ್ಲಲ್ಲಿ ತಗ್ಗಾಯಿತೋ ವಿನಃ "ನಾನಿನ್ನ ಬಿಡಲಾರೆ" ಅಂತ ಗಟ್ಟಿಯಾಗಿ ಅಂಟಿಕೊಂಡುಬಿಟ್ಟಿತ್ತು. 


         ಇಷ್ಟೆಲ್ಲಾ ಅವಾಂತರದ ನಡುವೆ ಹೇಮಾಶ್ರೀ ನೆನಪಾದಳಲ್ಲ!  ಮೊದಲಿಂದಲೂ ಅವಳಿಗೆ ಅಡುಗೆ ಮನೆ ವಿಚಾರದಲ್ಲಿ ನನ್ನ ಬಗ್ಗೆ ಸಣ್ಣ ಗುಮಾನಿ ಇದ್ದೆ ಇತ್ತು.  ಅವಳು ಪ್ರತಿ ಭಾರಿ ಊರಿಗೆ ಹೋಗುವಾಗಲು ವಿಧವಿಧವಾದ ತರಾವರಿ ಎಚ್ಚರಿಕೆ ಕೊಟ್ಟೇ ಹೋಗುತ್ತಿದ್ದಳು.  ಅಷ್ಟು ಎಚ್ಚರಿಕೆ ಕೊಟ್ಟರೂ ನಾನು ಇಂಥ ಎಡವಟ್ಟು ಮಾಡಿಕೊಂಡುಬಿಟ್ಟೆನಲ್ಲಾ!  ಅವಳಿಗಂತೂ ಅಡುಗೆ ಮನೆಯ ಪಾತ್ರೆಗಳನ್ನು ಕಂಡರೇ ವಿಶೇಷ ಒಲವು ಮತ್ತು ಪ್ರೀತಿ. ತನಗಿಷ್ಟವಾದದ್ದನ್ನು ಹುಡುಕಿ ತಂದು ಇಟ್ಟುಕೊಳ್ಳುವವಳು. ಒಂದು ಚಮಚ ಕಣ್ಣಿಗೆ ಕಾಣಿಸದಿದ್ದರು ಅದು ಸಿಗುವವರೆಗೂ ಬಿಡುವುದಿಲ್ಲ ಹುಡುಕಾಟ ನಡೆಸುತ್ತಾಳೆ.  ಈಗ ಅವಳ ಕಣ್ಣಿಗೆ ಈ ತಳತಳ ಹೊಳೆಯುವ ಬೆಳ್ಳಿಯ ಹೊಳಪುಳ್ಳ  ಟೀಪಾತ್ರೆಗೆ ಬಂದಿರುವ ಸ್ಥಿತಿ ನೋಡಿದರೆ ನನ್ನ ಗತಿ ಏನು?  ಇದಕ್ಕೆ ಏನಾದರೂ ಪರಿಹಾರ ಕಂಡುಹಿಡಿಯಲೇ ಬೇಕು ಅಂತ ಯೋಚಿಸಿದಾಗ ಹೊಳೆದಿದ್ದು ಇದನ್ನು ಯಾರಿಗೂ ಕಾಣದಂತೆ ಹೊರಗೆ ಹೋಗಿ ಬಿಸಾಡಿಬರುವುದು ಅಂತ.  ಸರಿ ಅದರಂತೆ ಕಾರ್ಯೋನ್ಮುಖನಾದೆ.
       
     
        ಕಪ್ಪು ಬಣ್ಣದ ಪ್ಲಾಸ್ಟಿಕ್ ಕವರಿನೊಳಗೆ ಅದನ್ನು ಹಾಕಿಕೊಂಡು ಮನೆಯಿಂದ ಹೊರಬಂದಾಗ ನಮ್ಮ ಓಣಿಯವರು ಯಾರು ಕಾಣಲ್ಲಿಲ್ಲ. ಮನೆಯಲ್ಲಿ ನಾನೊಬ್ಬನೇ ಇದ್ದಿದ್ದರಿಂದ ಮನೆಗೆ ಬೀಗಹಾಕಿಕೊಂಡು ಹೊರಬಂದು ನಿದಾನವಾಗಿ ಓಣಿಯಲ್ಲಿ ನಡೆಯತೊಡಗಿದೆ. ಕವರಿನೊಳಗಿದ್ದ ವಸ್ತುವಿನಿಂದ ಬರುತ್ತಿದ್ದ ವಾಸನೆ ಎಷ್ಟು ದಟ್ಟವಾಗಿತ್ತೆಂದರೆ ಖಂಡಿತ ಇಷ್ಟು ಹೊತ್ತಿಗೆ ನಮ್ಮ ಓಣಿಯ ಹೆಂಗಸರ ನಾಸಿಕಕ್ಕೆ ತಲುಪಿ ಯಾರಾದರೂ ಬಂದು ಕೇಳುತ್ತಾರೇನೋ ಅಂದುಕೊಂಡೆ. ಸದ್ಯ ಯಾರು ಬರಲಿಲ್ಲ ಮತ್ತು ಕೇಳಲಿಲ್ಲವಾದ್ದರಿಂದ ಬಚಾವಾದೆನೆಂದುಕೊಂಡು ಮುಖ್ಯ ಗೇಟ್ ದಾಟಿ ರಸ್ತೆ ತಲುಪಿ ಸುತ್ತಲೂ ನೋಡಿದೆ ಯಾರೂ ಇರಲಿಲ್ಲ.  ಇಲ್ಲೇ ರಸ್ತೆಯಲ್ಲೇ ಹಾಕಿಬಿಡಲಾ? ಏಕೆಂದರೆ ನಮ್ಮ ರಸ್ತೆಯ ಎಲ್ಲಾ ಮನೆಯವರು ಬೆಳಿಗ್ಗೆ ಏಳುಗಂಟೆಗೆ ಸರಿಯಾಗಿ ತಮ್ಮ ಮನೆಯ ಕಸದ ಡಬ್ಬ ಅಥವ ಪ್ಲಾಸ್ಟಿಕ್ ಪೇಪರಿನಲ್ಲಿ ತುಂಬಿದ ಕಸವನ್ನು ರಸ್ತೆಯ ಬದಿಯಲ್ಲಿ ಇಟ್ಟುಬಿಡುತ್ತಾರೆ. ನಿತ್ಯ ಬೆಳಿಗ್ಗೆ ಏಳುಗಂಟೆಗೆ ಬಿಬಿಎಂಪಿಯ ಕೆಲಸದವರು ಗಂಟೆ ಬಾರಿಸುತ್ತ ಅದನ್ನೆಲ್ಲಾ ಒಂದು ಆಟೋದಲ್ಲಿ ತುಂಬಿಸಿಕೊಂಡು ಹೋಗಿಬಿಡುತ್ತಾರೆ. ನಾನು ಮಾಡುತ್ತಿರುವುದು ಸರಿಯಾಗಿದೆ ಎನಿಸಿ ನಾವು ಟೂವೀಲರುಗಳನ್ನು ಪಾರ್ಕ್ ಮಾಡುವ ಜಾಗದಲ್ಲಿಯೇ ಕಸವೆನ್ನುವ ರೀತಿಯಲ್ಲಿ ನೆಲದ ಮೇಲೆ ಇಟ್ಟು ನಮ್ಮ ಗೇಟಿನ ಬಳಿಬಂದು ಸಹಜವಾಗಿ ರಸ್ತೆಯಲ್ಲಿ ಹೋಗಿಬರುವ ಜನರನ್ನು ನೋಡತೊಡಗಿದೆ.  ಸ್ವಲ್ಪ ಹೊತ್ತಿಗೆ ಒಂಥರ ದಿಗಿಲಾಗತೊಡಗಿತ್ತು. ಏಕೆಂದರೆ ಅದು ಕಸವಲ್ಲ. ಕಸವನ್ನು ಮೀರಿದ ಒಂದು ಪಾತ್ರೆಯಿದೆ. ಅದರೊಳಗೆ ಕಮಟು ವಾಸನೆ ಬರುತ್ತಿದೆ. ನಮ್ಮ ಓಣಿಯ ಅಥವ ರಸ್ತೆಯ ಹಿರಿಯರು ತಮ್ಮ ತಮ್ಮ ಕೆಲಸದಲ್ಲಿ ಮಗ್ನರಾಗಿ ಇದರ ಕಡೆ ಗಮನ ಕೊಡದಿದ್ದರೂ ನಮ್ಮ ಓಣಿಯ ಮಕ್ಕಳು ಸಾಮಾನ್ಯರಲ್ಲ. ಇಂಥವನ್ನು ಕಂಡುಹಿಡಿಯುವುದೇ ಅವರ ಕೆಲಸ. ಹೊಸ ವಾಸನೆ ಬಂತೆಂದರೆ ಸಾಕು ಅದೆಲ್ಲಿಂದ ಬಂತು ಹೇಗೆ ಬಂತು? ಅದರ ಕಾರಣಕರ್ತರು ಯಾರೂ? ಹೀಗೆ ಸಣ್ಣ ಹುಡುಕಾಟ ನಡೆಸುತ್ತಾ, ತಮ್ಮೊಳಗೆ ಕುತೂಹಲವನ್ನು ಬೆಳೆಸಿಕೊಳ್ಳುತ್ತಾ...ಅದರ ಬಗ್ಗೆ ಗಾಸಿಪ್ ಹಬ್ಬಿಸಿ ದೊಡ್ಡವರ ಗಮನವನ್ನು ಸೆಳೆದು ಕೊನೆಗೆ ಸುಮ್ಮನಾಗಿಬಿಡುತ್ತಾರೆ.

            ಅಲ್ಲಿಗೆ ಮುಗಿಯುತು. ದೊಡ್ಡವರು ಇದು ಎಲ್ಲಿಂದ ಬಂತು ಯಾರಮನೆಯದು? ಇತ್ಯಾದಿ ತಲಾಸು ಮಾಡಲು ಶುರುಮಾಡಿದರೆ! ಅಯ್ಯಯ್ಯೋ ಬೇಡವೇ ಬೇಡ! ...........

          ಮುಂದೇನಾಯಿತು.. ಇನ್ನುಳಿದ ತರಲೇ ತಾಪತ್ರಯಗಳು ಮುಂದಿನ ಭಾಗದಲ್ಲಿ ಅಲ್ಲಿಯವರೆಗೆ ಸುಟ್ಟ ಟೀ ಕಮಟುವಾಸನೆಯನ್ನು ಆನಂದಿಸುತ್ತಿರಿ...


ಲೇಖನ : ಶಿವು.ಕೆ