"ಒಂದು ನೂರು ಪಾರ್ಸೆಲ್, ಮತ್ತೊಂದು ನೂರು ಸರ್ವಿಸ್,"
ಆ ಮಾತನ್ನು ಕೇಳಿ ಆಕೆಯತ್ತ ನೋಡಿದೆ. ಮಧ್ಯ ವಯಸ್ಸು ದಾಟಿದ್ದರೂ ನೋಡಲು ಲಕ್ಷಣವಾಗಿದ್ದಳು ಆಕೆ. ಚಟಪಟ ಅಂತ ಮಾತಾಡುತ್ತಾ, ಕಣ್ಣಲ್ಲೇ ಎಲ್ಲರನ್ನೂ ಗಮನಿಸುತ್ತಾ, ಮಾರು ದೂರದಲ್ಲಿ ನಿಂತು ತಿಂದು ಮುಗಿಸಿದವನು ಹಣ ಕೊಡುತ್ತಾನಾ, ಇಲ್ಲವಾ ಅಂತ ಗಮನಿಸುತ್ತಾ, ತನ್ನ ಪಕ್ಕ ನಿಂತು ಬಾಣಲೆಯ ಎಣ್ಣೆಯಲ್ಲಿ ಮೀನಿನ ಕಬಾಬ್ ಮತ್ತು ಅದರ ಪಕ್ಕ ಮತ್ತೊಂದು ಕಪ್ಪುಬಣ್ಣದ ಕಾವಲಿಯಲ್ಲಿ ಮೀನು ಪ್ರೈ ಮಾಡುತ್ತಿದ್ದ ಗಂಡನ ಕಡೆಗೆ ಆಗಾಗ ಹೀಗೆ ಆರ್ಡರ್ ಮಾಡುತ್ತಿದ್ದಳು ಅವಳು.
ಮತ್ತೆ ಅವಳ ಬಾಯಿಂದ ಅದೇ ಮಾತು. "ನಾಲ್ಕು ನೂರು ಪಾರ್ಸೆಲ್, ಕಾಲ್ ಪ್ರೈ ಪಾರ್ಸೆಲ್, ನಿಮಗೇನಣ್ಣ, ಸ್ವಲ್ಪ ಇರಿ, ಅರ್ಜೆಂಟ್ ಮಾಡಿದ್ರೆ ಹೇಗೆ, ಮೀನು ಚೆನ್ನಾಗಿ ಬೇಯಬೇಕಲ್ವ, ಅರ್ಜೆಂಟ್ ಮಾಡಬೇಡ್ರಿ,"
ಮತ್ತೆ ಗಂಡನತ್ತ ತಿರುಗಿ "ನಾಲ್ಕು ನೂರು ಕಬಾಬ್ ಪಾರ್ಸೆಲ್, ಕಾಲ್ ಪ್ರೈ ಪಾರ್ಸೆಲ್," ಅನ್ನುತ್ತಾ ಈಗ ಮೀನನ್ನು ತೆಗೆದುಕೊಂಡು ತಿನ್ನುತ್ತಿರುವವರ ಕಡೆ ಒಂದು ಸುತ್ತು ಗಮನ ಹರಿಸಿದಳು.
ನನಗಂತೂ ಇದು ನಿಜಕ್ಕೂ ಕುತೂಹಲವೆನ್ನಿಸಿತ್ತು. ಆತ ಬಾಣಲೆಗೆ ಹಾಕುವ ಮುನ್ನ ತೂಕದ ತಕ್ಕಡಿಯಲ್ಲಿ ನೂರು ಗ್ರಾಮ್ ಮೀನಿನ ತುಣುಕುಗಳನ್ನು ಹಾಕಿದ. ಸ್ವಲ್ಪ ಕಡಿಮೆ ಬಂತು. ಆಗ ದೂರದಿಂದಲೇ ಒಂದು ಮೀನಿನ ತುಂಡನ್ನು ತಕ್ಕಡಿಗೆ ಎಸೆದಾಗ ಅದು ಕೆಳಗೆ ಬಂತು. ತಕ್ಷಣ ಅದನ್ನು ತೆಗೆದು ಎಣ್ಣೆ ಕಾಯುತ್ತಿರುವ ಬಾಣಲೆಗೆ ಹಾಕಿದ. ಆಗ ನನಗನ್ನಿಸಿತು ಒಂದು ನೂರು ಅಂದರೆ ಒಂದು ಪ್ಲೇಟ್, ನಾಲ್ಕು ನೂರು ಅಂದರೆ ನಾಲ್ಕು ಪ್ಲೇಟ್ ಅಂತ.
"ಅರೆರೆ..ಇವನೇನು ಇಷ್ಟು ಕರೆಕ್ಟ್ ಆಗಿ ತೂಕ ಹಾಕುತ್ತಾನಲ್ಲ, ಅಂದುಕೊಳ್ಳುತ್ತಾ ಅವನೆಡೆಗೆ ನೋಡಿದೆ. ಆತ ತನ್ನ ಕೆಲಸದಲ್ಲಿ ಮಗ್ನ. ಹೆಂಡತಿಗೆ ತಕ್ಕ ಗಂಡ ಅಂದುಕೊಂಡು ನನ್ನ ಜೊತೆಯಲ್ಲಿ ಬಂದವನ ಕಡೆಗೆ ತಿರುಗಿ "ನಿನಗೇನು ಬೇಕೋ ತೆಗೆದುಕೊ" ಅಂದೆ. ಅವನು ತುಸು ನಾಚುತ್ತಾ, ಚೊತೆಯಲ್ಲಿಯೇ ಅತಿ ನಾಚಿಕೆ ಪಟ್ಟುಕೊಂಡರೆ ನನಗೆ ಸಿಗಬೇಕಾದ್ದು ಸಿಗಲಾರದು ಅಂತಲೂ ಅನ್ನಿಸಿ,
"ನೋಡಿ ಸರ್, ಇಲ್ಲಿ ಮೀನಿನ ಕಬಾಬ್ ತುಂಬಾ ಚೆನ್ನಾಗಿ ಮಾಡುತ್ತಾರೆ, ಫ್ರೈ ಕೂಡ ತುಂಬಾ ಚೆನ್ನಾಗಿರುತ್ತೆ. ಮೊದಲು ಫ್ರೈ ತಿಂದುಬಿಡುತ್ತೇನೆ ನಂತರ ಕಬಾಬ್ ಟೇಸ್ಟ್ ಮಾಡೋಣ" ಅಂದವನೇ ಎರಡು ಪ್ಲೇಟ್ ಕಬಾಬ್ ಅಂದ.
ಅರೆರೆ...ನನಗೂ ಸೇರಿಸಿ ಹೇಳುತ್ತಾನಲ್ಲ ಇವನು ಅನ್ನಿಸಿ,
"ನನಗೆ ಬೇಡ ನೀನು ತಗೋ" ಅಂದೆ.
"ಇರಲಿ ತಗೊಳ್ಳಿ" ಅಂದ. ಮತ್ತೆ ನನಗೆ ಬೇಡವೆಂದು ಒಂದು ಪ್ಲೇಟ್ ಮಾತ್ರ ಅಂತ ಆ ಹೆಂಗಸಿಗೆ ನಾನೇ ಹೇಳಿದೆ. ಐದೇ ನಿಮಿಷದಲ್ಲಿ ಆತ ಕೇಳಿದ ಹೊಗೆಯಾಡುತ್ತಿರುವ ಮೀನಿನ ಫ್ರೈ, ಈರುಳ್ಳೀ ಮತ್ತು ನಿಂಬೆಹಣ್ಣಿನ ಚೂರಿನ ಜೊತೆಗೆ ಬಂತು. ಆತನ ನೋಡಿ ನನಗೆ ತುಂಬಾ ಖುಷಿಯಾಯ್ತು. ಏಕೆಂದರೆ ಅದನ್ನು ತಿನ್ನುವಾಗ ಅದೇನು ಆನಂದವೋ ಅವನಿಗೆ. ಮತ್ತೊಂದು ಪ್ಲೇಟ್ ಮೀನು ಫ್ರೈ ಕೇಳಿ ತಿಂದ.
"ಅಣ್ಣಾ ಇದು ಯಾವ ಮೀನು ಗೊತ್ತಾ"
"ಗೊತ್ತಿಲ್ಲಪ್ಪ"
"ಇದೇ ಅಣ್ಣಾ ಪಾಂಪ್ಲೆಟ್ ಮೀನು. ನಾವೇ ಹಿಡಿದ ಮೀನನ್ನು ಇಲ್ಲಿ ಇಷ್ಟು ರುಚಿಯಾಗಿ ಮಸಾಲೆ ಹಾಕಿ ಮಾಡುತ್ತಾರೆ. ಎರಡು ಪೆಗ್ ಹಾಕಿಕೊಂಡು ಇಲ್ಲಿ ಬಂದುಬಿಟ್ಟರೆ ಇಲ್ಲಿನ ವಾಸನೆಯೇ ಸ್ವರ್ಗಸುಖ ಗೊತ್ತಣ್ಣ" ಅಂದ ಅವನ ಕಣ್ಣುಗಳಲ್ಲಿ ತೃಪ್ತಿಯ ಕುರುಹು ಕಾಣುತ್ತಿತ್ತು. ಅವನ ಮಾತಿಗೆ ನಾನು ಉತ್ತರ ಕೊಡದೆ ಸುಮ್ಮನೆ ನಸುನಕ್ಕೆ. ನಾನು ಮಾತಾಡದಿರುವುದು ನೋಡಿ ಅವನೇ ಮುಂದುವರಿಸಿದ.
"ಇಲ್ಲಿ ನೋಡಿಣ್ಣಾ, ನಾನು ಪ್ರತಿದಿನ ಇಂಥ ನೂರಾರು ಮೀನುಗಳನ್ನು ನನ್ನ ಬಲೆಯಲ್ಲಿ ಹಿಡಿದುಹಾಕ್ತೇನೆ. ಆದ್ರೆ ಅದನ್ನು ತಿನ್ನುವ ಯೋಗವಿಲ್ಲ. ಯಾರೋ ಎಲ್ಲವನ್ನು ಕೊಂಡುಕೊಳ್ಳುತ್ತಾರೆ, ನಂತರ ಎಲ್ಲ ಮೀನುಗಳನ್ನು ವಿಂಗಡಿಸಿ, ಮಾರುತ್ತಾರೆ. ಇಲ್ಲಿ ಹೀಗೆ ಎಣ್ಣೆಯಲ್ಲಿ ಕುದಿಯುವ ಹೊತ್ತಿಗೆ ಅದರ ಬೆಲೆಯ ಹತ್ತರಷ್ಟು ಕೊಡಬೇಕೆಂದಾಗ ಮನಸ್ಸಿಗೆ ನೋವಾಗುತ್ತಣ್ಣ" ಅಂದಾಗ ಅವನ ಮನಸ್ಸಿನ ನೋವು ಕಣ್ಣುಗಳಲ್ಲಿ ಕಾಣುತ್ತಿತ್ತು.
"ನಿನಗಿಷ್ಟವಾದ ಈ ಮೀನನ್ನು ನೀನೆ ಬಲೆ ಹಾಕಿ ಹಿಡಿದಿರುವೆ ಅಂದ ಮೇಲೆ ನಿನಗೆ ಬೇಕಾದ್ದನ್ನು ಆರಿಸಿಕೊಂಡು ಮನೆಯಲ್ಲಿ ನಿನ್ನ ಹೆಂಡತಿಗೆ ಕೊಟ್ಟು ನಿನಗೆ ಬೇಕಾದ ಹಾಗೆ ಮಾಡಿಸಿಕೊಂಡು ತಿನ್ನಬಹುದಲ್ವಾ? ಅವನೆಡೆಗೆ ಪ್ರಶ್ನೆ ಎಸೆದೆ.
ಆತ ತಕ್ಷಣ ತಿನ್ನುತ್ತಿದ್ದವನು ನಿಲ್ಲಿಸಿದ. ನನ್ನಡೆಗೆ ನೋಡಿದ. ಅವನ ನೋಟ ನನಗೆ ಆ ಕ್ಷಣಕ್ಕೆ ಭಯವೆನ್ನಿಸಿತು. "
"ಯಾಕೆ ಹಾಗೆ ನೋಡ್ತೀಯಾ" ಅಂದೆ.
"ಅಣ್ಣಾ ನನಗೆಲ್ಲಿ ಹೆಂಡತಿ ಇದ್ದಾಳೆ, ಅವಳು ತೀರಿಹೋಗಿ ಐದು ವರ್ಷಗಳಾದವು."
ಆತ ತಲೆ ಎತ್ತದೇ ಮೆತ್ತನೆ ದ್ವನಿಯಲ್ಲಿ ಹೇಳಿದಾಗ ನನಗೆ ಒಂದು ಕ್ಷಣ ಶಾಕ್ ಆಗಿತ್ತು. ಅವನೆಡೆಗೆ ನೋಡಿದೆ. ಕಂಡರೂ ಕಾಣದ ಹಾಗೆ ಅವನ ಕಣ್ಣಂಚಲ್ಲಿ ನೀರು ಇಣುಕಿತ್ತು.
ನನ್ನ ಮನಸ್ಸಿಗೆ ಒಂಥರ ಕಸಿವಿಸಿ ಉಂಟಾಯಿತು. ನಾನು ಈ ವಿಚಾರವನ್ನು ಕೇಳಬಾರದಿತ್ತು ಅನ್ನಿಸಿತು. ಹೋಗಲಿ ಬಿಡು ಅಂತ ಸಮಾಧಾನಿಸಿ, ಅವನು ಬೇಡವೆಂದರೂ ಮತ್ತೊಂದು ಮೀನಿನ ಕಬಾಬ್ ಹೇಳಿದೆ. ನನ್ನ ಕಡೆಗೆ ನೋಡದೇ ಬಗ್ಗಿ ಕಣ್ಣಂಚಿನ ನೀರನ್ನು ಒರಸಿಕೊಳ್ಳುತ್ತಿದ್ದ. ಎರಡು ಪೆಗ್ ಕುಡಿದಿದ್ದಕ್ಕೋ ಏನೋ ಕಣ್ಣು ಬೇಗನೇ ಕೆಂಪಾಗಿತ್ತು.
ಅಲ್ಲಿಂದ ಇಬ್ಬರೂ ಹೊರಟೆವು. ಅವನಿಗಿಷ್ಟವಾದ ಹೋಟಲ್ಲಿಗೆ ಹೋಗಿ ಊಟ ಕೊಡಿಸಿದೆ. ಮತ್ತದೇ ಮೀನಿನ ಕೆಂಪುಬಣ್ಣದ ಸಾರು, ಕೆಂಪುಬಣ್ಣದ ದಪ್ಪಕ್ಕಿ ಅನ್ನವನ್ನು ಇಷ್ಟಪಟ್ಟು ತಿಂದು ಮುಗಿಸಿದ. ಅವನು ತೃಪ್ತನಾಗಿದ್ದು ಕಂಡು ನನಗೆ ಖುಷಿಯಾಯ್ತು.
ನನಗೆ ಆತ ಸಿಕ್ಕಿದ ಮೇಲೆ ಒಂದೇ ಸಮ ಹರಳು ಹುರಿದಂತೆ ಮಾತಾಡುತ್ತಿದ್ದವನು ಇವನೇನಾ ಅನ್ನುವಷ್ಟರ ಮಟ್ಟಿಗೆ ಸುಮ್ಮನಾಗಿದ್ದ ಅವನನ್ನು ಮತ್ತೆ ಮಾತಾಡಿಸಬೇಕೆನ್ನಿಸಲ್ಲಿಲ್ಲ. ಒಂದು ಫರ್ಲಾಂಗು ದೂರದ ಅವನ ಮನೆ ಕಡೆಗೆ ಇಬ್ಬರು ಸುಮ್ಮನೆ ನಡೆಯುತ್ತಿದ್ದೆವು. ನಮ್ಮ ನಡುವೆ ಮಾತಿರಲಿಲ್ಲ. ಅವನ ಮನೆಗೆ ಹೋಗುವ ಮೊದಲು ಒಂದು ದೊಡ್ಡ ಸೇತುವೆ ಬರುತ್ತದೆ. ಅದೇ ಉಡುಪಿಗೆ ಐದು ಕಿಲೋಮೀಟರ್ ದೂರದ ಉದ್ಯಾವರ ಸೇತುವೆ. ಕೆಳಗೆ ನೇತ್ರಾವತಿ ಜನವರಿಯ ತಿಂಗಳ ಅಮವಾಸ್ಯೆಯಲ್ಲಿ ತೆಳ್ಳಗೆ ಹರಿಯುತ್ತಿದ್ದಳು. ಸೇತುವೆಯ ಕೆಳಗೆ ಇಳಿದು ಹೋದರೆ ದೂರದಲ್ಲಿ ಸಣ್ಣದಾಗಿ ಕಾಣುತ್ತದೆ ಆತನ ಹೆಂಚಿನ ಮನೆ. ಎರಡು ಕಡೆ ನೀರು. ಮಧ್ಯದಲ್ಲಿ ನಾಲ್ಕು ಮನೆ. ಅದರಲ್ಲಿ ಒಂದು ಮನೆ ಈತನದು.
"ಕತ್ತಲಲ್ಲಿ ಏನು ಕಾಣಿಸುತ್ತಿಲ್ಲ ಹೇಗೆ ಹೋಗುತ್ತೀಯಾ" ನನಗೆ ಆತಂಕ.
"ಅಯ್ಯೋ ಇದ್ಯಾವ ಕತ್ತಲು ಬಿಡಿಣ್ಣಾ, ಇಂಥ ಕತ್ತಲೆಯ ಅಮಾವಾಸ್ಯೆಯಲ್ಲಿ ನೀರು ಇಳಿದಿರುವಾಗಲೇ ನೀರಿನೊಳಗೆ ಬಲೆಯನ್ನು ಇಳಿಬಿಟ್ಟಿರುತ್ತೇವೆ. ಮಧ್ಯರಾತ್ರಿಯ ಹೊತ್ತಿಗೆ ರಾಶಿ ರಾಶಿ ಮೀನು ಗೊತ್ತಾ? ಅಂಥವನ್ನೇ ಮಾಡಿರುವಾಗ ಇದ್ಯಾವ ಲೆಕ್ಕ. ನೀವು ಹೋಗಿ ನಾಳೆ ಬೆಳಿಗ್ಗೆ ಸಿಗುತ್ತೇನೆ" ಅಂದವನು ನಿಧಾನವಾಗಿ ಆ ಕತ್ತಲೆಯಲ್ಲಿ ನಡೆಯತೊಡಗಿದ.
ನನಗೆ ಒಂಥರ ಆತಂಕವಿದ್ದರೂ ಆತನ ತೆಳ್ಳಗಿನ ಆಕೃತಿ ಕತ್ತಲೆಯಲ್ಲಿ ಮರೆಯಾಗುವವರೆಗೂ ನೋಡುತ್ತಿದ್ದೆ. ಅಂಚಿಕಡ್ಡಿಯಂತೆ ತೆಳ್ಳಗಿದ್ದ ಇವನು ಯಾವ ರೀತಿ ಅಷ್ಟು ದೊಡ್ಡ ಮೀನಿನ ಬಲೆಯನ್ನು ಎಸೆಯಬಲ್ಲ? ಅನ್ನುವ ಪ್ರಶ್ನೆಯೂ ಮಿಂಚಂತೆ ಬಂದು ಆ ಕತ್ತಲಲ್ಲಿ ಹಾಗೆ ಮಾಯವಾಗಿತ್ತು. ನೋಡನೋಡುತ್ತಿದ್ದಂತೆ ಆತನ ಆಕೃತಿಯೂ ಕತ್ತಲೆಯೊಳಗೆ ಒಂದಾಗಿತ್ತು. ನಾನು ಉದ್ಯಾವರ ಬಸ್ ನಿಲ್ದಾಣದ ಕಡೆಗೆ ಹೆಜ್ಜೆ ಹಾಕಿದೆ. "ಆರೆರೆ ಅವನ ಫೋನ್ ನಂಬರ್ ತೆಗೆದುಕೊಳ್ಳಲೇ ಇಲ್ಲವಲ್ಲ., ಎಂಥ ಕೆಲಸವಾಯಿತು. ವಾಪಾಸ್ ಹೋಗೋಣವೆಂದರೆ ಪೂರ್ಣ ಕತ್ತಲು ಏನು ಮಾಡುವುದು" ಒಳ್ಳೇ ಫಜೀತಿಯಾಯಿತಲ್ಲ, ನಾಳೆ ಇವನನ್ನು ಹುಡುಕುವುದು ಹೇಗೆ, ಒಳ್ಳೇ ಯಡವಟ್ಟು ಕೆಲಸ ಮಾಡಿಕೊಂಡುಬಿಟ್ಟೆನಲ್ಲ" ಅಂದುಕೊಳ್ಳುವ ಹೊತ್ತಿಗೆ ಉಡುಪಿಗೆ ಹೋಗುವ ಬಸ್ ಬಂತು.
ದಾರಿಯುದ್ದಕ್ಕೂ ಅವನ ಸಂಸಾರದ ಕತೆಯನ್ನು ಮೆಲುಕು ಹಾಕುವ ಹೊತ್ತಿಗೆ ಉಡುಪಿ ಬಸ್ ನಿಲ್ದಾಣ ಬಂತು. ನಿದಾನವಾಗಿ ನಾನು ಉಳಿದುಕೊಂಡಿರುವ ಹೋಟಲ್ಲಿನ ಕಡೆಗೆ ಹೆಜ್ಜೆ ಹಾಕತೊಡಗಿದೆ.
____ ______ _____
ನಾನು ಮತ್ತು ಮಲ್ಲಿಕಾರ್ಜುನ್ ಇಬ್ಬರೂ ಸೇರಿ ಬರೆಯುತ್ತಿರುವ ನಮ್ಮ ಮುಂದಿನ ಪುಸ್ತಕ "ಫೋಟೊ ಹಿಂದಿನ ಕತೆಗಳು" ಅದರಲ್ಲಿ ನನ್ನ ಮೆಚ್ಚಿನ ಚಿತ್ರವಾದ "ಮೀನಿನ ಬಲೆ" ಫೋಟೊ ತೆಗೆದಿದ್ದು ಹೇಗೆ, ಅದಕ್ಕೂ ಮೊದಲು ಆ ಚಿತ್ರದ ಕಲ್ಪನೆ ಹೇಗೆ ಬಂತು? ಅದರ ಹಿಂದೆ ಬಿದ್ದು ಸಾಗುತ್ತಾ............ಕ್ಲಿಕ್ಕಿಸುವವರೆಗೆ ನಡುವೆ ನಡೆದ ವಿಭಿನ್ನ ಆನುಭವದಲ್ಲಿ ಇಲ್ಲಿ ಹಾಕಿರುವುದು ಲೇಖನದ ನಡುವಿನ ತುಣುಕು ಮಾತ್ರ. ನೀವು ಓದಿದ ಮೇಲೆ ನಿಮ್ಮ ಅಭಿಪ್ರಾಯ ತಿಳಿಸಿ.
ಸಧ್ಯ ಇಬ್ಬರು ಕೆಲವು ಚಿತ್ರಗಳನ್ನು ಆರಿಸಿಕೊಂಡು ಅವುಗಳನ್ನು ಕ್ಲಿಕ್ಕಿಸುವಾಗಿನ ಹಿಂದಿನ ಕತೆಗಳನ್ನು ಬರೆಯಲು ಕುಳಿತಿದ್ದೇವೆ.
ಚಿತ್ರ ಮತ್ತು ಲೇಖನ.
ಶಿವು.ಕೆ.