ಬಾಯಲ್ಲಿರುವ ನೊಣವನ್ನು ಗಿಫ್ಟ್ ಕೊಟ್ಟು ಗೆಳತಿಯನ್ನು ಒಲಿಸಿಕೊಳ್ಳುವ ಕಲೆ!!
ಬಹುಶಃ ಇಲ್ಲೇ ಹತ್ತಿರದಲ್ಲಿ ಅವುಗಳ ಗೂಡಿರಬೇಕು ಅಂದುಕೊಳ್ಳುತ್ತಿದ್ದಂತೆ ಅವು ಅತ್ತಿತ್ತ ಹಾರಾಡಿದವು. ನಾನು ಬೇಕಂತಲೇ ನನ್ನ ಗಮನವನ್ನು ಬೇರೆಡೆಗೆ ಹರಿಸಿದೆ... ಅವು ಸ್ವಲ್ಪ ಹೊತ್ತು ಸುತ್ತ ಮುತ್ತ ನೋಡಿ ನಾನು ಕಣ್ಣು ಮಿಟುಕುವಷ್ಟರಲ್ಲಿ..ಬೇಲಿಯಾಚೆಗಿದ್ದ ನೆಲಮಟ್ಟದಿಂದ ಒಂದು ಆಡಿ ಎತ್ತರದಲ್ಲಿ ತೂತು ಕೊರೆದು ಮಾಡಿದ್ದ ಗೂಡಿಗೆ ರಾಕೆಟಿನಂತೆ ಗಂಡು ಹಕ್ಕಿ ನುಗ್ಗಿತ್ತು. ಅದರ ಹಿಂದೆಯೇ...ಹೆಣ್ಣು ಕೂಡ ಹೋಯಿತು. ಒಳಗೆ ಇನ್ನೇನು ಸರಸ ಸಲ್ಲಾಪ ನಡೆದಿದೆಯೋ ನಮಗ್ಯಾಕೆ "ಮಾಡಿದವರ ಪಾಪ ನೋಡಿದವರ ಕಣ್ಣಲ್ಲಿ" ಅಂದುಕೊಂಡು ಗೂಡನ್ನು ಕಂಡುಹಿಡಿದ ಖುಷಿಯಲ್ಲಿ ವಾಪಸು ಬಂದುಬಿಟ್ಟೆ.
ಹಕ್ಕಿಗೂಡು ಒಂದು...ಮುದ್ದು ಮುದ್ದಾಗಿ ಒಳಗೇನು ನಡೆದಿದೆಯೋ...!!
ನಂತರ ಪ್ರತಿವಾರಕ್ಕೊಮ್ಮೆ ಹೋಗಿ ಅವುಗಳ ಚಲನವಲನವನ್ನು ವೀಕ್ಷಿಸುತ್ತಿದ್ದೆ. ಸರಿಯಾಗಿ ೩೫ ನೇ ದಿನ ಹೆಣ್ಣು ಕಳ್ಳಿಪೀರ ಬಾಯಲ್ಲಿ ಸಣ್ಣ ಹುಳುವನ್ನು ಹಿಡಿದುಕೊಂಡು ಗೂಡಿನ ಹತ್ತಿರದಲ್ಲೇ ಸಣ್ಣ ಕಡ್ಡಿಯ ಮೇಲೆ ಕುಳಿತಿತ್ತು. ಗಂಡು ಮರದ ಮೇಲೆ ಕುಳಿತಿತ್ತು. ನಾನು ಬೈನಾಕ್ಯೂಲರ್‌ನಲ್ಲಿ ನೋಡಿದ ಆ ಮೂರು ತಾಸಿನಲ್ಲಿ ಹೆಣ್ಣು ಹಕ್ಕಿ ಮಾತ್ರ ಆಹಾರವನ್ನು ಬಾಯಲ್ಲಿ ಹಿಡಿದುತಂದು ಗೂಡಿಗೆ ಹೋಗಿ ಮರಿಗಳಿಗೆ ಕೊಟ್ಟು ಬರುತ್ತಿತ್ತು.
ಆಹಾರ ಬೇಟೆಗೆ ಈಗ ಹಾರಬೇಕು...!!
ಈ ಗಂಡು ಹಕ್ಕಿಗೆ ಇತ್ತೀಚಿನ ಸಾಮಾಜಿಕ ನ್ಯಾಯದ ಅರಿವಿಲ್ಲವೇ ? ಒಂದು ಮನೆ, ಮಕ್ಕಳು ಸಂಸಾರ ಚೆನ್ನಾಗಿ ನಡೆಯಬೇಕಾದರೆ ಈಗಿನ ಕಾಲದಲ್ಲಿ ಇಬ್ಬರೂ ದುಡಿಯಬೇಕು ಎನ್ನುವ ಸೂಕ್ಷ್ಮ ತಿಳಿವಳಿಕೆಯೂ ಈ ಗಂಡು ಹಕ್ಕಿಗೆ ಬೇಡವೇ ಎಂದು ನನ್ನ ಮನಸ್ಸಿಗೆ ಖೇದವಾಯಿತು.
ನಿಮ್ಮ ವಿಮಾನಗಳಿಗೆ ನನ್ನಂತೆ ಲ್ಯಾಂಡ್ ಆಗಲಿಕ್ಕೆ ಬರುತ್ತಾ..!!
ಸರಿಯಾಗಿ ೪೦ನೇ ದಿನಕ್ಕೆ ನಾನು ನನ್ನ ಛಾಯಾಗ್ರಹಣದ ಪರಿಕರಗಳಾದ ಕ್ಯಾಮೆರಾ, ಲೆನ್ಸ್, ಸ್ಟ್ಯಾಂಡ್, ನನಗೆ ಬೇಕಾದ ಆಹಾರ,ನೀರು ಇನ್ನಿತರ ಪರಿಕರಗಳೊಂದಿಗೆ ಸಿದ್ದನಾಗಿಹೋಗಿದ್ದೆ.
ಸ್ವಲ್ಪ ಹೊತ್ತು ಅತ್ತ ಇತ್ತ ನೋಡಬೇಕು....ನಂತರ ಗೂಡಿಗೆ ಹೋಗೋಣ...
ಅಲ್ಲೇ ಪೊದೆಯ ಮರೆಯಲ್ಲಿ ನನ್ನ ಕ್ಯಾಮೆರಾವನ್ನು ಅಣಿಗೊಳಿಸಿ ರಿಮೋಟ್ ಕೇಬಲ್ ಎಳೆದು ದೂರದಲ್ಲಿ ಮರೆಯಾಗಿ ಕುಳಿತುಬಿಟ್ಟೆ. ಮೊದಲಿಗೆ ಮರಿಗಳು ಚಿಕ್ಕದಾಗಿದ್ದರಿಂದ ಹೆಣ್ಣು ಹಕ್ಕಿ ಸಣ್ಣ ಸಣ್ಣ ಹುಳುಗಳನ್ನು ಹಿಡಿದು ತರುತ್ತಿತ್ತು. ಕಡ್ಡಿಯ ಮೇಲೆ ಕುಳಿತು ಸ್ವಲ್ಪ ಹೊತ್ತು ಅತ್ತ ಇತ್ತ ನೋಡಿ ಗೂಡಿಗೆ ಹಾರಿ ಮರಿಗಳಿಗೆ ಗುಟುಕು ಕೊಟ್ಟು ಬರುತ್ತಿತ್ತು. ನಾನು ಒಂದೇ ಸಮನೆ ಕ್ಲಿಕ್ಕಿಸುತ್ತಿದ್ದೆ.
ನನ್ನನ್ನೂ ನೋಡಿಯೇ ತಾನೇ ನಿಮ್ಮ ಸುಕೋಯ್..ಮೀರಜ್ ಹಾರೋದು ಕಲಿತದ್ದು....!!
ಆರನೇ ದಿನ ನನ್ನ ಸಮಾಜಿಕ ನ್ಯಾಯದ ಲೆಕ್ಕಾಚಾರ ತಲೆಕೆಳಗಾಯಿತು. ಎಂದಿನಂತೆ ಹೆಣ್ಣು ಕಳ್ಳಿಪೀರ ಒಂದು ಏರೋಪ್ಲೇನ್ ಚಿಟ್ಟೆಯನ್ನು ಹಿಡಿದು ತಂದಿತ್ತು. ನಾನು ಅದನ್ನು ಕ್ಲಿಕ್ಕಿಸಬೇಕೆನ್ನುವಷ್ಟರಲ್ಲಿ ಅದೆಲ್ಲಿಂದಲೋ ಇನ್ನೂ ದೊಡ್ಡದಾದ ಹುಳುವನ್ನು ಹಿಡಿದುಕೊಂಡು ಬಂದ ಗಂಡು ಕಳ್ಳಿಪೀರ ತನ್ನ ಶ್ರೀಮತಿಯ ಪಕ್ಕದಲ್ಲೇ ಕಡ್ಡಿಯ ಮೇಲೆ ಕುಳಿತುಕೊಂಡಿತು.
ಗಂಡು ಹಕ್ಕಿಯ ಬಾಯಲ್ಲಿ ದೊಡ್ಡ ಚಿಟ್ಟೆ....
ನನಗೆ ಒಂದು ಕ್ಷಣ ಖುಷಿ, ಗಲಿಬಿಲಿ, ಆಶ್ಚರ್ಯ ಒಟ್ಟೊಟ್ಟಿಗೆ ಆಗಿ ಕ್ಲಿಕ್ಕಿಸುವುದು ಮರೆತೇ ಹೋಯಿತು. ಏಕೆಂದರೆ ಇದುವರೆಗೆ ಗಂಡು ಕಳ್ಳೀಪೀರವನ್ನು ಮನಸ್ಸಿನಲ್ಲೇ ಹೀಯಾಳಿಸಿ, ಅದರ ಸೋಮಾರಿತನವನ್ನು ಖಂಡಿಸಿದ್ದೆನಲ್ಲಾ....ಮರಿಗಳು ದೊಡ್ಡದಾಗಿರುವುದರಿಂದ ಗಂಡಿಗೆ ತನ್ನ ಜವಾಬ್ದಾರಿ ಅರಿತಿದ್ದಕ್ಕೆ ನನಗೆ ಖುಷಿಯಾಯಿತು. ಇದೆಲ್ಲಾ ಅಂದುಕೊಳ್ಳುತ್ತಿರುವಾಗಲೇ ಎರಡು ಒಂದರ ನಂತರ ಮತ್ತೊಂದು ಗೂಡಿಗೆ ಹಾರಿ ಮರಿಗಳಿಗೆ ಆಹಾರಕೊಟ್ಟು ಹೊರ ಹಾರಿಹೋಗಿದ್ದವು. ಆರೆರೆ...... ಎಂಥ ಒಳ್ಳೇ ಅವಕಾಶವನ್ನು ಕ್ಲಿಕ್ಕಿಸಲು ಮರೆತನಲ್ಲಾ.. ಈ ರೀತಿ ಬೇರೆಯವರ ಬಗ್ಗೆ ಯೋಚಿಸಿದರೆ ಹೀಗೆ ತಾನೆ ಆಗುವುದು ಅಂತ ಸಂಕಟವಾಗಿ ಇನ್ನಾದರೂ ಅಂಥ ಮತ್ತೊಂದು ಅಂಥ ಕ್ಷಣ ಸಿಗುವುದೋ ಅಂತ ಕಾಯತೊಡಗಿದೆ..
ನಾನು ಇಳಿಯುವಾಗ ನನ್ನ ರೆಕ್ಕೆಗಳ ಅಂದ ನೋಡು....
ಹದಿಮೂರನೇ ದಿನ ಮತ್ತೆ ದಂಪತಿಗಳಿಬ್ಬರೂ ದೊಡ್ಡ ಮಿಡತೆ ಮತ್ತು ಚಿಟ್ಟೆಯನ್ನು ಬಾಯಿಯಲ್ಲಿ ಹಿಡಿದು ಒಟ್ಟಿಗೆ ಕುಳಿತ ದೃಶ್ಯ ನನ್ನ ಕ್ಯಾಮೆರಾದಲ್ಲಿ ಸೆರೆಯಾಯಿತು. ನಂತರದ ದಿನಗಳಲ್ಲಿ ಎಲ್ಲಾ ರೀತಿಯ ದೊಡ್ಡ ದೊಡ್ಡ ಚಿಟ್ಟೆಗಳು, ಹುಳುಗಳು, ದುಂಬಿಗಳು, ಡ್ರ್ಯಾಗನ್ ಪ್ಲೈಗಳು, ಗೆದ್ದಲು ಹುಳುಗಳು....ಹಿಡಿದು ತರುತ್ತಿದ್ದವು. ಇತ್ತೀಚೆಗೆ ನಾನು ಕ್ಲಿಕ್ಕಿಸಿದ ಮಡಿವಾಳ ಹಕ್ಕಿ, ಚಿಟ್ಟು ಮಡಿವಾಳ ಹಕ್ಕಿ, ಬೇಲಿ ಚಟುಕಗಳಂತೆ ಒಮ್ಮೆಯೂ ಹಣ್ಣು ಇನ್ನಿತರ ಸಸ್ಯಹಾರವನ್ನು ಇವು ತರಲಿಲ್ಲವಲ್ಲ. ಪಕ್ಕಾ ವಿದೇಶಿ ಆಹಾರಪದ್ದತಿಯನ್ನು[ನಾನ್‌ವೆಜ್]ಮೈಗೂಡಿಸಿಕೊಂಡಿವೆಯಲ್ಲ...ಅನ್ನಿಸಿದರೂ ಬೇರೆಯವರ ಸಮಾಚಾರ ನಮಗೇಕೆ ಅಂದುಕೊಂಡು ಸುಮ್ಮನೆ ಕ್ಲಿಕ್ಕಿಸತೊಡಗಿದೆ.
ಕೂಡಿ ಬಾಳಿದರೆ ಸ್ವರ್ಗ ಸುಖ....ನನಗೂ ಸ್ವಲ್ಪ ಜಾಗ ಕೊಡೆ...!!
ಅವು ಆಕಾಶದಲ್ಲೇ ಹುಳುಗಳನ್ನು ಬೇಟೆಯಾಡುವ ಪರಿ, ಉಲ್ಟಾ ಲಾಗ ಹಾಕುವುದು, ಲಗಾಟಿ ಹೊಡೆಯುವುದು, ಕೆಳಮುಖ ಹಾರುವುದು, ಇಳಿಯುವಾಗ ಮತ್ತು ಹಾರುವಾಗ ದೇಹದ ಮುಂಭಾಗ ಮೇಲೆತ್ತಿ ಬ್ಯಾಲೆನ್ಸ್ ಮಾಡುವುದು, ತಲೆಕೆಳಕಾಗಿ ಹಾರುತ್ತಾ ತಕ್ಷಣವೇ ತಿರುವು ತೆಗೆದುಕೊಂಡು ಮೇಲ್ಮುಖವಾಗುವುದು, ರೆಕ್ಕೆ ಕದಲಿಸದೇ ನೇರವಾಗಿ ಗೂಡಿಗೆ ಗುರಿತಪ್ಪದೆ ಹೋಗುವಲ್ಲಿನ ನಿಖರತೆ, ಚಾಕಚಕ್ಯತೆಗಳೆಲ್ಲಾ ನಮ್ಮ ಯುದ್ದವಿಮಾನಗಳಾದ ಜಾಗ್ವಾರ್, ಸುಖೋಯ್, ಮೀರಜ್, ಸೂರ್ಯಕಿರಣಗಳನ್ನು ನೆನಪಿಸಿತ್ತು.
ನಾನು ನೀನು ಜೋಡಿ...ಈ ಜೀವನ ಎತ್ತಿನ ಗಾಡಿ....!!
ಈ ಮದ್ಯ ಮತ್ತೊಂದು ವಿಚಿತ್ರ ಘಟನೆ ನಡೆಯಿತು. ಒಬ್ಬ ಹುಡುಗ ತನ್ನಲ್ಲಿ ಆಡಗಿಸಿಕೊಂಡಿದ್ದ ಚಾಟರಬಿಲ್ಲಿನಿಂದ ಈ ಕಳ್ಳೀ ಪೀರ ಹಕ್ಕಿಗಳಿಗೆ ಗುರಿಯಿಟ್ಟಿದ್ದ. ನಾನು ಅದನ್ನು ಗಮನಿಸಿ "ಏನು ಮಾಡುತ್ತಿದ್ದೀಯಾ" ಅಂದೆ. ಅದಕ್ಕವನು "ಸುಮ್ಮನೆ " ಅಂದ. ತಕ್ಷಣ ಅವನದೊಂದು ಫೋಟೊ ತೆಗೆದು ನೋಡಿಲ್ಲಿ "ನೀನು ಪಕ್ಷಿಗಳನ್ನು ಸಾಯಿಸುತ್ತೀಯಾ ಅಂತ ಹೇಳಿ ನಿನ್ನ ಅರಣ್ಯ ಇಲಾಖ ಪೋಲಿಸರಿಗೆ ಕೊಟ್ಟರೆ ನಿನ್ನನ್ನು ಹಿಡಿದು ಜೈಲಿಗೆ ಹಾಕುತ್ತಾರೆ ಗೊತ್ತಾ.. ನಿನ್ನಂತೆ ಅವುಗಳಿಗೂ ಸ್ವತಂತ್ರವಾಗಿ ಜೀವಿಸುವ ಆಸೆಯಿರುತ್ತೆ...ಅಲ್ವಾ..."ಅಂತ ಬುದ್ದಿ ಹೇಳಿ ಕಳಿಸಿದ್ದಾಯಿತು.
ಈ ಹಕ್ಕಿಗಳ ಛಾಯಾಗ್ರಹಣ ಇಪ್ಪತ್ತಮೂರನೇ ದಿನಕ್ಕೆ ಕೊನೆಗೊಂಡಿತ್ತು. ಅವತ್ತು ಹೇಮಾಶ್ರಿಯೂ ಬಂದಿದ್ದಳು.., ಬೈನಾಕ್ಯೂಲರನಲ್ಲಿ ಹಕ್ಕಿಗಳ ಆಟ ಪಾಠಗಳ ಚಟುವಟಿಕೆಯೆಲ್ಲಾ ನೋಡಿ ಬೆರಗಾಗಿದ್ದಳು...
ಎರಡು ತಿಂಗಳ ಹಿಂದೆ ರೋಮ್ಯಾನ್ಸ್‌ನಿಂದ ಪ್ರಾರಂಭವಾದ ಕಳ್ಳಿಪೀರ ಸಂಸಾರ ಕತೆ., ಈಗ ಮರಿಗಳು ದೊಡ್ಡವಾಗಿ ಗೂಡಿನಿಂದ ಹಾರಿಹೋಗುವಲ್ಲಿಗೆ ಮುಗಿದಿತ್ತು.
[ಈ ಮೊದಲು ಇದೇ ಜಾತಿಗೆ ಸೇರಿದ blue tailed green bee eater ಪಕ್ಷಿಯ ಸಂಪೂರ್ಣ ದಿನಚರಿಯನ್ನು "ಪಕ್ಷಿ ಲೇಕದ ಸಂದೇಶ" http://chaayakannadi.blogspot.com/2008/09/blog-post_20.html ಅನ್ನುವ ಶೀರ್ಷಿಕೆಯಲ್ಲಿ ಚಿತ್ರ-ಲೇಖನವನ್ನು ಬರೆದಿದ್ದೆ. ಅದರ ಸಂಪೂರ್ಣ ಚಿತ್ರಣವನ್ನು ಕ್ಲಿಕ್ಕಿಸಿದ್ದು ಮೈಸೂರಿನ ನಗುವನಹಳ್ಳಿ ಎಂಬ ಊರಿನಲ್ಲಿ....ಅದೇ ಜಾತಿಯ ಈ " Small green bee eater" ಹಕ್ಕಿಯ ಚಿತ್ರಗಳನ್ನು ಕ್ಲಿಕ್ಕಿಸಿದ್ದು..ಹೆಸರಘಟ್ಟದ ಸಮೀಪ..ಇವು ಗಾತ್ರದಲ್ಲಿ ಅವುಗಳಿಗಿಂತ ಸ್ವಲ್ಪ ಚಿಕ್ಕದಾಗಿದ್ದು ಬಾಲ ನೀಲಬಣ್ಣವಾಗಿರುವುದಿಲ್ಲ..]
ವಿಶೇಷ ಸೂಚನೆ:
ಬ್ಲಾಗ್ ಗೆಳೆಯರೆ....
ಕಳೆದೊಂದು ವಾರದಿಂದ ಈ ತಿಂಗಳ ಅಂತ್ಯದವರೆಗೆ ಮದುವೆಗಳನ್ನು ಮಾಡಿಸುವ ಅಲ್ಲಲ್ಲ .. ಮದುವೆ ಫೋಟೋ ತೆಗೆಯುವ ಕಾಯಕದಲ್ಲಿ ತೊಡಗಿಕೊಂಡಿದ್ದೇನೆ...[ನಾವು ಬದುಕಬೇಕಲ್ಲಾ ಸ್ವಾಮಿ] ಈ ಕಾರಣದಿಂದಾಗಿ ಬ್ಲಾಗ್ ಲೋಕಕ್ಕೆ ಕಾಲಿಡಲು ಸಮಯವಾಗುತ್ತಿಲ್ಲ....ಮುಗಿದ ಕೂಡಲೇ ಎಲ್ಲರ ಲೇಖನಗಳನ್ನು ಚಿತ್ರಗಳನ್ನು ನೋಡುವ ಹಂಬಲವಿದೆ. ಅಲ್ಲಿಯವರೆಗೆ ಸಹಕರಿಸಿ...ಸಾಧ್ಯವಾದರೆ ಮದುವೆ ಮನೆಗಳಲ್ಲಿ ನಮ್ಮ ಫೋಟೊ ಮತ್ತು ವಿಡಿಯೋಗ್ರಫಿ ಗೆಳೆಯರ ಕಥೆ...ವ್ಯಥೆ....ಹಾಸ್ಯಗಳನ್ನು ಹೊತ್ತು ತರಲೆತ್ನಿಸುತ್ತೇನೆ.....ಧನ್ಯವಾದಗಳು..
ಚಿತ್ರ-ಲೇಖನ.
ಶಿವು.ಕೆ ARPS.