Sunday, November 24, 2013

ಆಕಾಶದಲ್ಲಿ ಹಾರಾಡುವ ಮೊಲಗಳನ್ನು ಹಿಡಿಯಲು ಸಾಧ್ಯವೇ?

ಆಕಾಶದಲ್ಲಿ ಹಾರಾಡುವ ಮೊಲಗಳನ್ನು ಹಿಡಿಯಲು ಸಾಧ್ಯವೇ? ಈ ಮಾತು ಕೇಳಿ ನಿಮಗೆ ಆಶ್ಚರ್ಯವಾಗಬಹುದು. ಏಕೆಂದರೆ ಮೊದಲಿಗೆ ಆಕಾಶದಲ್ಲಿ ಮೊಲಗಳು ಹಾರಾಡಲು ಸಾಧ್ಯವೇ ಇಲ್ಲವೆನ್ನುವುದು ನಿಮ್ಮ ಮತ್ತು ಎಲ್ಲರ ಭಾವನೆಯೂ ಕೂಡ. ಏಕೆಂದರೆ ಅವುಗಳಿಗೆ ರೆಕ್ಕೆಗಳಿಲ್ಲವಲ್ಲ. ಬಹುಶಃ ಅವುಗಳಿಗೆ ರೆಕ್ಕೆ ಬಂದುಬಿಟ್ಟರೆ! ರೆಕ್ಕೆಗಳಿಲ್ಲದಿದ್ದರೂ ನೆಲದ ಮೇಲೆ ಚಂಗನೆ ಜಿಗಿದು ನಮ್ಮ ಕೈಗೆ ಸಿಗದಂತೆ ತಪ್ಪಿಸಿಕೊಳ್ಳುವ, ಕ್ಷಣಮಾತ್ರದಲ್ಲಿ ಮಾಯವಾಗುವ ಇವುಗಳನ್ನು ನೆಲದ ಮೇಲೆ ನಿಂತು ಹಿಡಿಯುವುದು ಹರಸಾಹಸವೇ ಸರಿ. ಅಂತದ್ದರಲ್ಲಿ ಅವುಗಳಿಗೆ ರೆಕ್ಕೆ ಬಂದು ಆಕಾಶದಲ್ಲಿ ಹಾರಾಡುತ್ತ ನಮ್ಮನ್ನು ಅಣಕಿಸಿದರೆ!….ಇಂಥ ಅಣಕಿಯಾಟದಲ್ಲಿ ನಾನು ಅವುಗಳನ್ನು ಹಿಡಿಯುವ ಪ್ರತಿಸ್ಪರ್ಧಿಯಾಗಿದ್ದೆ ಕಳೆದವಾರ. ನಾನು ಹಾರಾಡುವ ಮೊಲಗಳನ್ನು ಹಿಡಿದೆನಾ? ಅಥವ ವಿಫಲನಾದೆನಾ ಎನ್ನುವ ವಿಚಾರವನ್ನು ಮುಂದೆ ನಿಮಗೆ ಹೇಳುತ್ತೇನೆ.

ಮೊದಲಿಗೆ ನಾನು ದೀಪಾವಳಿ ಹಬ್ಬದಲ್ಲಿ ಹೊಡೆಯುವ ಅಥವ ಊದುಬತ್ತಿಯಿಂದ ಅಂಟಿಸುವ, ಢಂ ಢಂ ಎಂದು ಕಿವಿಗಡಚಿಕ್ಕುವ ಪಟಾಕಿಗಳ ವಿಚಾರಕ್ಕೆ ಖಂಡಿತ ಬರುವುದಿಲ್ಲ. ಏಕೆಂದರೆ ಅವುಗಳನ್ನು ನಾನು ಅಥವ ನೀವು ಹುಟ್ಟಿದಾಗಿನಿಂದ ಇವತ್ತಿನವರೆಗೆ ಪ್ರತಿವರ್ಷದ ದೀಪಾವಳಿಯಲ್ಲಿ, ರಾಜಕೀಯ ವ್ಯಕ್ತಿಗಳು ಗೆದ್ದಾಗ, ಕೆಲವೊಮ್ಮೆ ಇನ್ಯಾರೋ ಸತ್ತಾಗ [ಸತ್ತ ಮೇಲೆ ಶವವನ್ನು ಸ್ಮಶಾನಕ್ಕೆ ಹೊತ್ತೊಯ್ಯುವಾಗಲೂ ದೊಡ್ಡ ದೊಡ್ಡ ಪಟಾಕಿಗಳನ್ನು ಸಿಡಿಸುತ್ತಾರೆ ಶ್ರೀರಾಮಪುರಂನ ತಮಿಳಿನವರು], ಅಣ್ಣಮ್ಮ, ಜಲದಿಗೇರಮ್ಮ, ಕನ್ನಡ ರಾಜ್ಯೋತ್ಸವ, ಗಣೇಶ ಹಬ್ಬ ಹೀಗೆ ಅನೇಕ ಸಂದರ್ಭಗಳಲ್ಲಿ ದೇವರುಗಳನ್ನು ತರುವಾಗ ಮತ್ತು ವಾಪಸ್ಸು ಮೆರವಣಿಗೆಯಲ್ಲಿ ತೆಗೆದುಕೊಂಡು ಹೋಗುವಾಗ ಇಂಥ ದೊಡ್ಡ ದೊಡ್ಡ ಕಿವಿಗಡಚಿಕ್ಕುವ ಪಟಾಕಿಗಳ ಸದ್ದು ಖಚಿತ ಮತ್ತು ಉಚಿತವಾದ್ದರಿಂದ ಅವುಗಳಲ್ಲಿ ವಿಶೇಷವೇನೋ ಇದೆಯೆಂದು ನನಗನ್ನಿಸುವುದಿಲ್ಲ. ಬದಲಾಗಿ ತುಂಬಾ ಮುಖ್ಯವಾದ ವಿಚಾರವಾಗಿ ಎಲ್ಲಿಗೋ ಹೋಗುತ್ತಿರುವಾಗ ಅನಿರೀಕ್ಷಿತವಾಗಿ ನಮ್ಮ ಪಕ್ಕದಲ್ಲಿಯೇ ಇಂಥ ದೊಡ್ಡ ಪಟಾಕಿಗಳು ಸಿಡಿಯುವುದರಿಂದ ಖುಷಿಯ ಬದಲಿಗೆ ಸಿಟ್ಟು ಮತ್ತು ಬೇಸರ ಉಂಟಾಗುವುದೇ ಹೆಚ್ಚು. ಇದೆಲ್ಲಕ್ಕಿಂತ ಹೆಚ್ಚಾಗಿ ಇವುಗಳೆಲ್ಲವೂ ನೆಲದ ಮೇಲೆ ಘಟಿಸಿ ನಮ್ಮನ್ನು ಬೆಚ್ಚಿಬೀಳಿಸುವುದರಿಂದ ಕುತೂಹಲವೆನ್ನುವುದು ಖಂಡಿತ ಉಂಟಾಗುವುದಿಲ್ಲ. ಹಾಗಾದರೆ ನಿಜವಾದ ಕುತೂಹಲವೆಲ್ಲಿದೆ! 
ಆಕಾಶದಲ್ಲಿ!
ಹೌದು ನನಗೆ ತಿಳುವಳಿಕೆ ಬಂದಂತೆ ಪಟಾಕಿ ಎನ್ನುವ ಈ ಪಟಾಕಿ ನನಗೆ ಕುತೂಹಲ ಅರಳಿಸಿದ್ದು ನೆಲಕ್ಕಿಂತ ಆಕಾಶದಲ್ಲಿ. ನಾನು ಪಟಾಕಿಗೆ ಊದುಬತ್ತಿಯನ್ನು ತಗುಲಿಸಿ ಸುಮಾರು ಇಪ್ಪತ್ತೈದು ವರ್ಷಗಳೇ ಅಯ್ತು. ಆಗಿನಿಂದ ಇವತ್ತಿನವರೆಗೂ ನಾನು ಒಂದೇ ಒಂದು ಪಟಾಕಿಗೂ ಬೆಂಕಿಯಿರುವ ಊದುಬತ್ತಿಯನ್ನು ತಗುಲಿಸಿಲ್ಲ. ಏಕಿರಬಹುದೆಂದು ನೀವು ಕಾರಣವನ್ನು ಕೇಳಿದರೆ ವಾಯು ಮಾಲಿನ್ಯ, ಶಬ್ದ ಮಾಲಿನ್ಯ, ಪರಿಸರ ಸಂರಕ್ಷಣೆ….ಹೀಗೆ ಎಲ್ಲರೂ ಹೇಳುವ ಕಾರಣಗಳನ್ನು ನಾನು ಹೇಳಬಹುದು. ಅಥವ ಆಗ ಚಿಕ್ಕಂದಿನಲ್ಲಿ ನನ್ನ ಅಪ್ಪ ಹಣವಿಲ್ಲದೇ ಪಟಾಕಿಗಳನ್ನು ಕೊಡಿಸಲಿಲ್ಲವಾದ್ದರಿಂದ ಅಕ್ಕ ಪಕ್ಕದ ಮನೆಯವರು ಸಿಡಿಸುವ ಪಟಾಕಿಗಳನ್ನು ನೋಡಿ ನನಗೂ ಹೀಗೆ ಪಟಾಕಿಗಳನ್ನು ಸಿಡಿಸಿ ಆನಂದಿಸುವ ಅವಕಾಶವಿಲ್ಲವಾಗಿದ್ದರಿಂದ ಆ ಪಟಾಕಿಗಳಿಂದ ಹಣ ಪೋಲು, ಪಟಾಕಿ ಹಬ್ಬದ ಸಮಯದಲ್ಲಿ ನಾನು ಕ್ರಿಕೆಟ್ ಆಡುವ ಮೈದಾನವನ್ನೆಲ್ಲಾ ಅಗೆದು ಅಂಗಡಿಗಳನ್ನಿಟ್ಟು ನಮಗೆ ಕ್ರಿಕೆಟ್ ಆಡದಂತೆ ಮಾಡುಬಿಡುತ್ತಾರೆ, ಪಟಾಕಿ ಹೊಡೆಯುವ ಸಮಯದಲ್ಲಿ ನನ್ನ ಗೆಳೆಯನ ಕೈ ಚರ್ಮ ಸುಟ್ಟು ಹೋಯ್ತು..ಹೀಗೆ ಹತ್ತಾರು ಕಾರಣಗಳನ್ನಿಟ್ಟುಕೊಂಡು ಕೈಗೆ ಸಿಗದ ದ್ರಾಕ್ಷಿ ಹುಳಿಯೆಂದುಕೊಂಡು ಹೊರಟ ನರಿಯಂತೆ ನಾನು ಕೂಡ ದೀಪಾವಳಿ ದಿನ ನನ್ನ ಕೈಗೆ ದಕ್ಕದ ಪಟಾಕಿಗಳನ್ನು ಹುಳಿ ಪಟಾಕಿಗಳೆಂದುಕೊಂಡು ಅದರೆಡೆಗಿನ ಬೇಸರದ ಜೊತೆಗೆ ತಿರಸ್ಕರಿಸಿದ್ದು ಸತ್ಯ.
ನನಗೆ ಬುದ್ದಿ ಬಂದಮೇಲೆ[ಹಾಗೆ ಅಂದುಕೊಂಡಿದ್ದೇನೆ]ಇವುಗಳನ್ನು ಸಿಡಿಸುವುದರಿಂದ ಶಬ್ದ ಮಾಲಿನ್ಯ, ವಾಯು ಮಾಲಿನ್ಯ, ಪ್ರಾಣಿಪಕ್ಷಿಗಳಿಗೆ ತೊಂದರೆಗಳಾಗುತ್ತವೆಯೆಂದು ನಾನು ಹೇಳಿದರೂ,ನನಗಿಂತ ಚೆನ್ನಾಗಿ ನೀವು ಹೇಳಿದರೂ, ಪರಿಸರವಾದಿಗಳು ವೈಜ್ಞಾನಿಕ ಲೆಕ್ಕಾಚಾರವನ್ನು ಕೊಟ್ಟು ಆಗುವ ತೊಂದರೆಗಳನ್ನು ವಿವರಿಸಿದರೂ ಆ ಮೂಲಕ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಪಟಾಕಿ ಸಿಡಿಸಬೇಡಿ ಎಂದು ತಿಳಿಹೇಳಿದರೂ, ಪತ್ರಿಕೆಗಳಲ್ಲಿ ಬರೆದರೂ, ಟಿವಿ, ಫೇಸ್‍ಬುಕ್, ಬ್ಲಾಗ್ ಇನ್ನಿತರ ಎಲ್ಲಾ ಮಾಧ್ಯಮಗಳಲ್ಲಿ ಚಿತ್ರಸಹಿತ ಆಗಿರುವ ತೊಂದರೆಗಳನ್ನು ಹೇಳಿದರೂ ಕೂಡ ಅವತ್ತಿನಿಂದ ಇವತ್ತಿನವರೆಗೂ ಪಟಾಕಿ ಹೊಡೆಯುವರು ಹೊಡೆಯುತ್ತಲೇ ಇದ್ದಾರೆ. ಅದನ್ನು ಯಾರಿಂದಲೂ ತಪ್ಪಿಸಲಾಗಿಲ್ಲ.
ಹಾಗಾದರೆ ಮುಂದೇನು ಮಾಡಬಹುದು?
ನಿಮಗೆ ಬೇಸರವಾಗಿ ದೂರದ ರಿಸಾರ್ಟ್‍ಗೆ ಹೋಗಿ ರಿಲ್ಯಾಕ್ಸ್ ಮಾಡಬಹುದು, ಯುವಕ ಯುವತಿಯರು ಕೊಡಚಾದ್ರಿ, ಕುಮಾರ ಪರ್ವತ, ಪಶ್ಚಿಮ ಘಟ್ಟಗಳು, ಹಿಮವದ್ ಗೋಪಾಲಸ್ವಾಮಿ ಬೆಟ್ಟ, ಸುಬ್ರಮಣ್ಯ ರೈಲ್ವೇ ಲೈನು… ಹೀಗೆ ಅನೇಕ ಕಡೆ ಟ್ರಕ್ಕಿಂಗ್ ಹೋಗಿರಬಹುದು, ಇನ್ನೂ ಕೆಲವರು ಯಾವುದು ಬೇಡವೆಂದು ಪಟಾಕಿ ಶಬ್ದ ಕೇಳಿಸದಂತೆ ಕಿಟಕಿ ಬಾಗಿಲುಗಳನ್ನು ಬಂದ್ ಮಾಡಿ ಟಿವಿ ನೋಡುತ್ತಾ ಸಿಹಿತಿಂಡಿಮಾಡಿಕೊಂಡು ತಿಂದುಂಡು ಸುಖವಾಗಿ ಮಲಗಬಹುದು. ಕಳೆದ ಇಪ್ಪತ್ತೈದು ವರ್ಷಗಳಿಂದ ನನಗೂ ಇವರಂತೆ ಪಟಾಕಿ ಶಬ್ದ ಇಷ್ಟವಿಲ್ಲದಿದ್ದರೂ ಇವು ಯಾವುದು ಸಾಧ್ಯವಾಗಲಿಲ್ಲ. ಇಂಥ ಪರಿಸರ ಮಾಲಿನ್ಯದಿಂದ ದೂರವಾಗಿ ದೂರದ ಊರಿಗೆ ಅಥವ ರಿಸಾರ್ಟುಗಳಿಗೆ ಅಥವ ಟ್ರಕ್ಕಿಂಗ್ ಇತ್ಯಾದಿಗಳಿಗೆ ಹೋಗಿ ಅಲ್ಲಿ ಏಕಾಂಗಿಯಾಗಿ ಟೆಂಟ್ ನೊಳಗೆ ಮಲಗುವುದು ಅಥವ ರಾತ್ರಿಯಿಡೀ ಯಾವುದೇ ಶಬ್ದವಿಲ್ಲದ ನಿರ್ಮಲ ಆಕಾಶವನ್ನು ನೋಡುತ್ತಾ ರಾತ್ರಿಗಳನ್ನು ಕಳೆಯುವುದು ನನ್ನದೇ ಕೆಲಸ ಮತ್ತು ಇನ್ನಿತರ ಕಾರಣಗಳಿಂದ ಸಾಧ್ಯವಾಗಿಲ್ಲ. ಹಾಗಾದರೆ ನನ್ನಂಥ ಬಡಪಾಯಿ ಏನು ಮಾಡಲಿಕ್ಕಾಗುತ್ತದೆ?
ಏನು ಮಾಡಲಿಕ್ಕಾಗದಿದ್ದರೂ ದೀಪಾವಳಿಯ ಮೂರು ದಿನಗಳೂ ಕೂಡ ರಾತ್ರಿ ಆಕಾಶವನ್ನು ನೋಡುತ್ತ ಮೈಮರೆಯುತ್ತೇನೆ. ಆಕಾಶ ಯಾರ ಸ್ವತ್ತು ಕೂಡ ಅಲ್ಲ. ನಮ್ಮ ಕಣ್ಣಿಗೆ ನಿಲುಕುವಷ್ಟೇ ಮನಸ್ಸಿಗೂ ದಕ್ಕುತ್ತದೆ. ಅದರಲ್ಲೂ ದೀಪಾವಳಿಯ ರಾತ್ರಿಗಳಂದೂ ನನಗೆ ಕಾಣುವ ಆಕಾಶವೇ ಬೇರೆ. ನೀವು ಎತ್ತ ತಲೆ ಎತ್ತಿ ನೋಡಿದರೂ ಕೂಡ ಸಿನಿಮಾ ಸ್ಕೋಪ್, ೭೦ ಎಂಎಂಗಳಿಗಿಂತ ಹತ್ತಾರು, ನೂರಾರು ಪಟ್ಟು ದೊಡ್ಡದಿರುವ ಆಕಾಶದೊಳಗಿನ ದೊಡ್ಡ ಸಿನಿಮಾ ಪರದೆಯಲ್ಲಿ ಬಣ್ಣ ಬಣ್ಣದ ರಾಕೆಟ್ಟುಗಳು ಅರ್ಧಾತ್ ಕನ್ನಡದ ಆಕಾಶ ಬಾಣಗಳು ಸೃಷ್ಠಿಸುವ, ಕನಸಿನಲ್ಲೂ ಕಾಣಲಾಗದ ರಂಗು ರಂಗಿನ ಕಲ್ಪಿಸಿಕೊಳ್ಳಲಾಗದ ಬೆಳಕಿನ ಚಿತ್ತಾರಗಳನ್ನು ನೋಡುತ್ತ ನಿಂತುಬಿಡುತ್ತೇನೆ. ಆ ಸಮಯದಲ್ಲಿ ನೆಲದಿಂದ ಹಾರಿಸುವ ಇಂಥ ತರಾವರಿ ರಾಕೆಟ್ಟುಗಳಿಂದ ವಾಯುಮಾಲಿನ್ಯವಾಗುವುದಿಲ್ಲವೇ ಎಂದು ನೀವು ನನ್ನನ್ನು ಕೇಳಿದರೇ ಅದಕ್ಕೆ ನನ್ನಲ್ಲಿ ಉತ್ತರವಿಲ್ಲ. ಏಕೆಂದರೆ ವಾಯುಮಾಲಿನ್ಯವಾಗುತ್ತದೆಯೆಂದು ನನಗೆ ಮತ್ತು ನಿಮಗೆ ಗೊತ್ತಿದ್ದರೂ ಅದನ್ನು ನಿಲ್ಲಿಸಲು ನಿಮಗಾಗಲಿ ಅಥವ ನನಗಾಗಲಿ ಸಾಧ್ಯವಾಗಿಲ್ಲ. ಅದರ ಬದಲು ಇಂಥ ಕೈಗೆ ಸಿಗದ ಹುಳಿದ್ರಾಕ್ಷಿಯಂತ ನೆಲದ ಮೇಲೆ ಅಬ್ಬರಿಸುವ ಪಟಾಕಿಗಳನ್ನು ಮರೆತು ಸುಲಭವಾಗಿ ಕೈಗೆಟುಕುವ, ಸ್ವಲ್ಪ ಸಿಹಿ, ಸ್ವಲ್ಪ ಒಗರು, ಸ್ವಲ್ಪ ಸಪ್ಪೆ….ಇದ್ದರೂ ನೋಡಿದ ತಕ್ಷಣ ಇಷ್ಟವಾಗುವ ಗೋಲಿಗಿಂತ ಸಣ್ಣ ಆಕಾರದ ಗಸಗಸೆ ಹಣ್ಣುಗಳಂತೆ ಅನ್ನಿಸುತ್ತವೆ ಆಕಾಶದಲ್ಲಿ ಹಾರಿ ಮರೆಯಾಗುವ ಆಕಾಶಬಾಣಗಳು.
ಪ್ರತಿ ವರ್ಷ ಹೀಗೆ ಆಕಾಶದಲ್ಲಿ ಹಾರಾಡುವ ಬೆಳಕಿನ ಚಿತ್ತಾರದ ತರಾವರಿ ಆಕಾಶ ಬಾಣಗಳನ್ನು ದೀಪಾವಳಿ ದಿನಗಳಂದೂ ನೋಡಿ ಕಣ್ತುಂಬಿಕೊಳ್ಳುತ್ತಿದ್ದೆನಾದರೂ ಅದಕ್ಕಿಂತ ಹೆಚ್ಚೇನು ನನಗೆ ಮಾಡಲಾಗುತ್ತಿರಲಿಲ್ಲ. ಏಕೆಂದರೆ ಕಳೆದ ಹದಿನೈದು ವರ್ಷಗಳಲ್ಲಿ ಬದಲಾಯಿಸಿದ ಮನೆಗಳಲ್ಲಿ ಮೊದಲ ಮನೆಯ ಎರಡನೇ ಮಹಡಿಯಲ್ಲಿ ಟೆರೆಸ್ ಇದ್ದರೂ ಅದರ ಸುತ್ತ ಒಂದು ಕಡೆ ಮರ, ಮೂರು ಕಡೆ ನಮ್ಮ ಮನೆಗಿಂತ ದೊಡ್ಡ ಮನೆಗಳಿದ್ದು ಅಲ್ಲಿ ನನಗೆ ಕಾಣುತ್ತಿದ್ದ ಆಕಾಶ ಬಾವಿಯೊಳಗಿರುವ ಕಪ್ಪೆಗೆ ಕಂಡ ಆಕಾಶವಷ್ಟೆ. ನಾಲ್ಕು ವರ್ಷಗಳ ನಂತರ ಮತ್ತೊಂದು ಮನೆಗೆ ಬಂದರೂ ಅದು ಇದಕ್ಕಿಂತ ಕಳಪೆ. ಮೊದಲ ಮಹಡಿಯಲ್ಲಿ ನಮ್ಮ ಮನೆ. ಆಕಾಶ ನೋಡಬೇಕಾದಲ್ಲಿ ಮತ್ತೆರಡು ಮಹಡಿಯನ್ನು ಹತ್ತಬೇಕು. ಹಾಗೆ ಮೇಲೆ ಹೋದರೂ ನನ್ನ ಕಣ್ಣಿಗೆ ಪೂರ್ತಿ ಆಕಾಶ ದಕ್ಕುವುದು ಕಷ್ಜವೇ ಸರಿ.
ಹೇಳಿಕೊಳ್ಳಲು ನಮ್ಮ ಮನೆಯ ಪಕ್ಕದಲ್ಲಿ ರಾಧಿಕ ಪಂಡಿತ್ ಎನ್ನುವ ಪ್ರಖ್ಯಾತ ಕನ್ನಡ ಸಿನಿಮ ನಟಿಯ ಮನೆಯಿದೆ ಎನ್ನುವುದು ಸುಮ್ಮನೆ ಹೆಗ್ಗಳಿಕೆಯಷ್ಟೆ. ಹಾಗೆ ಸುಮ್ಮಸುಮ್ಮನೇ ಆಕಾಶವನ್ನು ನೋಡುತ್ತ ನಿಂತುಕೊಂಡಾಗ ನಮ್ಮ ಅಕ್ಕ ಪಕ್ಕದ ಮನೆಯವರು ನನ್ನನ್ನು ನೋಡಿ ಇವನಿಗೆ ತಲೆ ಕೆಟ್ಟಿರಬೇಕು ಎಂದುಕೊಳ್ಳುತ್ತಾರೆಂದೇ ನನಗೆ ಇಷ್ಟವಿದ್ದರೂ ಅನೇಕ ದೀಪಾವಳಿ ರಾತ್ರಿಗಳಲ್ಲಿ ಆಕಾಶ ನೋಡದೇ ತಪ್ಪಿಸಿಕೊಂಡಿದ್ದೇನೆ.
ಆದ್ರೆ ಈಗ ನಾಲ್ಕು ತಿಂಗಳ ಹಿಂದೆ ಮತ್ತೆ ಮನೆ ಬದಲಾಯಿಸಿ ಹೊಸ ಮನೆಗೆ ಬಂದಿದ್ದೆನಲ್ಲ ಈ ಮನೆ ಉಳಿದೆಲ್ಲಾ ನಮ್ಮ ಹಳೆಯ ಮನೆಗಳಿಗಿಂತ ಸ್ವಲ್ಪ ವಿಭಿನ್ನವೆನಿಸಿದೆ. ನಾವಿರುವ ಮೂರನೇ ಮಹಡಿಯಿಂದ ಮೇಲೆ ಹೋದಲ್ಲಿ ನಾಲ್ಕನೇ ಮಹಡಿ ಟೆರಸ್. ವಿಶಾಲವಾದ ಅದರಲ್ಲಿ ನಿಂತುಬಿಟ್ಟರೆ ಅರ್ಧ ಬೆಂಗಳೂರು ಕಾಣುತ್ತದೆ. ಮತ್ತೆ ಈಗ ಮೆಟ್ರೋ ರೈಲುಗಳಿಗಾಗಿ ಸಿದ್ದವಾಗಿ ದೊಡ್ಡ ಪಿಲ್ಲರುಗಳಿರುವ ರೈಲು ದಾರಿಯೂ ಸಿದ್ದವಾಗುತ್ತಿರುವ ಸಮಯದಲ್ಲಿ ದಿನಕ್ಕೆರಡು ಮೂರು ಭಾರಿ ಕೆಲವೊಮ್ಮೆ ಇನ್ನೂ ಹೆಚ್ಚು ಸಲ ಪ್ರಯೋಗಿಕವಾಗಿ ಚಲಿಸುತ್ತಿರುವ ಹಸಿರು ಬಣ್ಣದ ಮೂರು ಬೋಗಿಗಳ ಮೆಟ್ರೋ ರೈಲುಗಳನ್ನು ನೋಡುವುದೇ ಒಂದು ಚಂದ. ನಮ್ಮ ಅಕ್ಕಪಕ್ಕದ ಮನೆಗಳ ಪುಟ್ಟ ಮಕ್ಕಳಿಗೆಲ್ಲಾ ಮೆಟ್ರೋ ರೈಲು ಈಗ ಚೆನ್ನಾಗಿ ಪರಿಚಯ. ನಮ್ಮ ಪಕ್ಕದ ಮನೆಯ ಒಂದುವರೆ ವರ್ಷದ ಲಿಕಿತ್ ಎನ್ನುವ ಮಗುವಿಗೂ ಕೂಡ ಮೆಟ್ರೋ ರೈಲು ಬರುವಾಗ ಹಾರ್ನ್ ಮಾಡಿದರೇ ಸಾಕು ಅವನು “ಮೆಟ್ರೋ ರೈಲು ಬಂತು’ ಎಂದು ತೊದಲು ನುಡಿಯಲ್ಲಿ ಹೇಳುವಷ್ಟು ನಮ್ಮ ಟೆರಸ್ ಫೇಮಸ್ ಆಗಿದೆ. ಇಂಥ ಟೆರಸ್‌ನಲ್ಲಿ ದೀಪಾವಳಿಯ ರಾತ್ರಿ ನಿಂತರೆ ಹೇಗೆ ಕಾಣುಬಹುದು ಎನ್ನುವ ಅದಮ್ಯ ಕುತೂಹಲದಿಂದಿದ್ದ ನನಗೆ “ಆ ದಿನಗಳು” ಬಂದೇ ಬಿಟ್ಟಿತ್ತು.
ನರಕ ಚತುರ್ದಶಿಯ ರಾತ್ರಿ ಏಳುಗಂಟೆಗೆ ಬಂದವನು ಸುಮ್ಮನೇ ಆಕಾಶ ನೋಡುತ್ತಾ ನಿಂತೆನಷ್ಟೆ. “ರೀ….ಊಟಕ್ಕೆ ಬನ್ನಿ ಆಗಲೇ ಒಂಬತ್ತು ಗಂಟೆ ದಾಟಿದೆ” ಎಂದಾಗಲೇ ನನಗೆ ಗೊತ್ತಾಗಿದ್ದು. ಸುಮಾರು ಎರಡು ಗಂಟೆಗಳ ಕಾಲ ಮೈಮರೆತು ಮೊದಲ ದಿನದ ದೀಪಾವಳಿಯ ರಾತ್ರಿ ಏಕಾಂಗಿಯಾಗಿ ಸುತ್ತ ಕಾಣುವ ಆಕಾಶದಲ್ಲಿ ತಲೆ ಮೇಲೆ ಹಾರಿ ಮರೆಯಾಗುವ ರಾಕೆಟ್ಟುಗಳನ್ನು ನೋಡುತ್ತಾ ಮೈಮರೆತಿದ್ದೆ. ಊಟ ಮಾಡುವ ಸಮಯದಲ್ಲೂ ಆಕಾಶದಲ್ಲಿ ಕಂಡ ಬೆಳಕಿನ ರಾಕೆಟ್ಟುಗಳದೇ ನೆನಪು. ನಾಳೆ ಹೇಗಾದರೂ ಮಾಡಿ ಅವುಗಳನ್ನು ಕ್ಯಾಮೆರ ಕಣ್ಣಿನ ಮೂಲಕ ನೋಡಬೇಕು ಸಾಧ್ಯವಾದರೆ ಫೋಟೊಗ್ರಫಿ ಮಾಡಬೇಕು ಎಂದುಕೊಂಡು ತೀರ್ಮಾನಿಸಿ ಮಲಗಿದ್ದೆ. 
ಮರುದಿನ ಬ್ಲಾಗಿಗರ ಪುಸ್ತಕ ಬಿಡುಗಡೆ ಕಾರ್ಯಕ್ರಮ ಮುಗಿಸಿ ಬಂದವನು ರಾತ್ರಿ ಕ್ಯಾಮೆರ ಮತ್ತು ಲೆನ್ಸುಗಳೊಂದಿಗೆ ಏಳುಗಂಟೆಗೆ ಸಿದ್ದನಾಗಿದ್ದೆ. ಇವತ್ತು ರಾತ್ರಿ ಹೊಸ ಅದ್ಬುತವನ್ನು ಫೋಟೋಗ್ರಫಿಯಲ್ಲಿ ಸಾಧಿಸಿಬಿಡುತ್ತೇನೆ ಎಂದುಕೊಂಡು ರಾಕೆಟ್ಟುಗಳೊಂದಿಗೆ ಹಾರುತ್ತಿದ್ದ ಮನಸ್ಸು ಸ್ವಲ್ಪ ಹೊತ್ತಿಗೆ ಟುಸ್ ಪಟಾಕಿಯಾಗಿಬಿಟ್ಟಿತ್ತು. ಸುಮಾರು ಅರ್ಧಗಂಟೆಯಾದರೂ ಒಂದೇ ಒಂದು ರಾಕೆಟ್ ಪಟಾಕಿ ಬಿಡಿಸುವ ಚೆಲುವಿನ ಬೆಳಕಿನ ಚಿತ್ತಾರವನ್ನು ಕ್ಲಿಕ್ಕಿಸಲು ಸಾಧ್ಯವಾಗಲಿಲ್ಲ. ನನ್ನ ಸುತ್ತ ಇರುವ ಎಂಟು ದಿಕ್ಕುಗಳಲ್ಲಿಯೂ ಮೇಲೆ ಹಾರುತ್ತಿದ್ದ ಬೆಳಕಿನ ಚಿತ್ತಾರಗಳನ್ನು ಕ್ಲಿಕ್ಕಿಸಲು ಎಷ್ಟು ಪ್ರಯತ್ನಿಸಿದರೂ ವಿಫಲಯತ್ನವಾದಾಗ ಅನಿಸಿದ್ದು ಇವು ಖಂಡಿತವಾಗಿಯೂ ಆಕಾಶದಲ್ಲಿ ಹಾರಾಡುವ ಮೊಲಗಳು. ಅವುಗಳನ್ನು ಹಿಡಿಯಲು ಸಾಧ್ಯವೇ? ಅಂತ ಆ ಕ್ಷಣದಲ್ಲಿ ಅವು ಆಕಾಶದಲ್ಲಿ ಹಾರಾಡುವ ಮೊಲಗಳೇ ಅನ್ನಿಸಿದವು.
ಎದುರಿಗೆ ಹಾರಿದ ರಾಕೆಟ್ಟಿನ ಬೆಳಕನ್ನು ಕ್ಲಿಕ್ ಮಾಡಲು ಕ್ಯಾಮೆರವನ್ನು ಅತ್ತ ತಿರುಗಿಸುವಷ್ಟರಲ್ಲಿ ಮಿಂಚಿ ಮರೆಯಾಗುತ್ತಿದ್ದ ಅದನ್ನು ಶಪಿಸಿ ಬಲಭಾಗದಲ್ಲಿ ಹಾರಿದ ಇನ್ನೊಂದರ ಕಡೆ ಗಮನಿಸಿ ಕ್ಷಣಮಾತ್ರದಲ್ಲಿ ಅತ್ತ ಕ್ಯಾಮೆರ ತಿರುಗಿಸುವಷ್ಟರಲ್ಲಿ, ನನ್ನ ತಲೆಯ ಮೇಲೆ ದೊಡ್ಡದಾದ ಕೊಡೆಯಂತೆ ಚದುರಿದ ನಕ್ಷತ್ರಗಳನ್ನು ಕಂಡು ಮೇಲೆ ನೋಡಿದರೆ ಅದು ದಕ್ಕಿದ್ದು ಕಣ್ಣಿಗೆ ಮಾತ್ರ. ಕ್ಯಾಮೆರಕ್ಕೆ ಅದರ ಒಂದು ಕಿಡಿಯೂ ನಿಲುಕಲಿಲ್ಲ. ಹೋಗಲಿ ಇನ್ನಾದರೂ ಹುಷಾರಾಗಿ ಕ್ಯಾಮೆರವನ್ನು ಸ್ಟಡಿಯಾಗಿ ಇಟ್ಟುಕೊಂಡು ನೋಡೋಣವೆಂದುಕೊಂಡು ಸಿದ್ದನಾದೆ. ಅದೋ ದೂರದಲ್ಲಿ ಒಂದು ರಾಕೆಟ್ ಮೇಲೇರಿ ಚದುರಿತ್ತು. ಅದರ ಹಿಂದೆ ಮತ್ತೆರಡು ರಾಕೆಟ್ಟುಗಳು ಮಿಂಚಿ ಮರೆಯಾದವು. ಓಹ್! ಇಲ್ಲಿ ಒಂದರ ಹಿಂದೆ ಒಂದು ರಾಕೆಟ್ಟುಗಳು ಮೇಲೆ ಮೇಲೆ ಬರುತ್ತಿವೆ. ಇನ್ನಷ್ಟು ಬರಬಹುದು. ನಾನು ಮೊದಲೇ ಅಲ್ಲಿನ ಒಂದು ಜಾಗಕ್ಕೆ ಫೋಕಸ್ ಮಾಡಿ ಸಿದ್ದನಾಗಿರಬೇಕು. ಮತ್ತು ಸ್ವಲ್ಪ ತಾಂತ್ರಿಕವಾಗಿಯೂ ಉತ್ತಮವಾಗಿ ಕ್ಯಾಮೆರವನ್ನು ಸೆಟ್ ಮಾಡಿಕೊಳ್ಳಬೇಕು ಎಂದು ತಯಾರಾಗಿ ಅದನ್ನೇ ಕಾಯುತ್ತಾ ತದೇಕ ಚಿತ್ತದಿಂದ ಅಲುಗಾಡದೇ ತಪಸ್ವಿಯಂತೆ ಅದೊಂದೇ ದೃಶ್ಯದತ್ತ ಧ್ಯಾನಾಸಕ್ತನಂತೆ ಕಾಯುತ್ತಾ, ಕ್ಯಾಮೆರ ಕಣ್ಣಿನೊಳಗೆ ನೋಡುತ್ತಾ ನಿಂತೆ. ಆ ಕ್ಷಣದಲ್ಲಿ ಮತ್ತೊಂದು ತೀರ್ಮಾನವನ್ನು ಮಾಡಿದ್ದೆ. ಅಕ್ಕ ಪಕ್ಕ ಎಷ್ಟೆ ರಾಕೆಟ್ಟುಗಳು ಹಾರಿದರೂ ಅದನ್ನು ಗಮನಿಸಬಾರದು ಕೇವಲ ಇದೊಂದನ್ನೇ ಗಮನಿಸಿ ಸಾಧ್ಯವಾದಷ್ಟು ಉತ್ತಮವಾದ ಫೋಟೊವನ್ನು ಕ್ಲಿಕ್ಕಿಸಲೇಬೇಕು ಎನ್ನುವ ಖಚಿತ ತೀರ್ಮಾನದೊಂದಿಗೆ ಸಿದ್ಧನಾಗಿ ನಿಂತಿದ್ದೆ. ಒಂದು ನಿಮಿಷ ಎರಡು ನಿಮಿಷ, ಐದು ನಿಮಿಷ, ಕೊನೆಗೆ ಹತ್ತು ನಿಮಿಷವಾದರೂ ಒಂದೇ ಒಂದು ರಾಕೆಟ್ಟು ಕೂಡ ಅತ್ತ ಕಡೆ ಹಾರಲಿಲ್ಲ. ಬದಲಾಗಿ ನನ್ನ ಎಡಬಲದಲ್ಲಿ ನಿಮಿಷಕ್ಕೆ ಹತ್ತು ಹದಿನೈದು ರಾಕೆಟ್ಟುಗಳು ಬೆಳಕಿನ ಚಿತ್ತಾರವನ್ನು ಮೂಡಿಸಿ ನನ್ನನ್ನು ಅಣಕಿಸಿದಂತೆ ಆಗಿತ್ತು.
ತತ್…ಎದುರಿಗಿರುವವರು ಮತ್ತು ಅವರು ಬಿಡುತ್ತಿರುವ ರಾಕೆಟ್ಟುಗಳು ನನ್ನನ್ನು ಯಾಮಾರಿಸುತ್ತಿವೆ…ಅವರ ಸಹವಾಸವೇ ಬೇಡ ಇತ್ತ ಎಡಬದಿಯಲ್ಲಿ ಒಂದರ ಮೇಲೊಂದರಂತೆ ಮೇಲೇರುತ್ತಿರುವ ರಾಕೆಟ್ಟುಗಳನ್ನು ಸುಲಭವಾಗಿ ಫೋಟೊ ಕ್ಲಿಕ್ಕಿಸಬಹುದು ಅಂತ ಅತ್ತ ಕ್ಯಾಮೆರ ತಿರುಗಿಸಿದೆ. ಅವು ನನ್ನ ಕಣ್ಣಿಗೆ ಚೆನ್ನಾಗಿ ಕಂಡು ಅತ್ತ ಕ್ಯಾಮೆರ ತಿರುಗಿಸಿ ಸತತವಾಗಿ ಫೋಟೊಗಳನ್ನು ಕ್ಲಿಕ್ಕಿಸಿದೆನಾದರೂ ನಂತರ ನೋಡಿದಾಗ ಒಂದೂ ಕೂಡ ಫೋಕಸ್ ಆಗಿರಲಿಲ್ಲ. ಎಲ್ಲವೂ ಬ್ಲರ್ ಆಗಿತ್ತು. ಮತ್ತೆ ಫೋಕಸ್ ಎಲ್ಲ ಸರಿಮಾಡಿಕೊಂಡು ಅತ್ತ ಕ್ಯಾಮೆರ ತಿರುಗಿಸಿ ಸಿದ್ದನಾದೆ. ಹದಿನೈದು ನಿಮಿಷವಾದರೂ ಒಂದೇ ರಾಕೆಟ್ ಆ ದಿಕ್ಕಿನಲ್ಲಿ ಮತ್ತೆ ಮೇಲೆ ಹಾರಲಿಲ್ಲ. ಬಹುಷ: ಆ ದಿಕ್ಕಿನಲ್ಲಿರುವವರ ಬಳಿ ರಾಕೆಟ್ಟುಗಳು ಖಾಲಿಯಾಯ್ತ? ಇನ್ನೊಂದೆರಡಾದರೂ ನನ್ನ ಫೋಟೊಗ್ರಫಿಗಾಗಿ ಹಾರಿಸಬಾರದಾ? ಎಂದುಕೊಂಡರೂ ನಾನು ಇಲ್ಲಿ ಫೋಟೊ ತೆಗೆಯುತ್ತಿದ್ದೇನೆಂದು ಅವರಿಗಾದರೂ ಹೇಗೆ ಗೊತ್ತಾಗಬೇಕು? ಹೋದರೆ ಹೋಗಲಿ ಪರ್ವಾಗಿಲ್ಲ ಇತ್ತ ನನ್ನ ಹಿಂಬದಿಯಲ್ಲಿ ಒಂದರ ಮೇಲೆ ಒಂದು ರಾಕೆಟ್ಟುಗಳು ಬರುತ್ತಿವೆ ಎಂದು ಅತ್ತ ಕ್ಯಾಮೆರವನ್ನು ತಿರುಗಿಸಿದೆ. ಈ ಭಾರಿ ಸರಿಯಾಗಿ ಎಲ್ಲವನ್ನು ಸಿದ್ದ ಮಾಡಿಕೊಂಡು ಅವುಗಳನ್ನು ನೋಡುತ್ತಾ ಸತತವಾಗಿ ಫೋಟೊಗಳನ್ನು ಕ್ಲಿಕ್ಕಿಸಿದ್ದೆ. ಈ ಭಾರಿಯಾದರೂ ಕೆಲವು ಉತ್ತಮವಾದ ಚಿತ್ರಗಳು ನನ್ನ ಕ್ಯಾಮೆರದೊಳಗೆ ಸೆರೆಯಾಗಿರಬಹುದು ಎಂದುಕೊಂಡು ನೋಡಿದರೆ ಮತ್ತೊಂದು ಹೊಸ ನಿರಾಶೆ.
ಈ ಭಾರಿ ತೊಂದರೆ ಕೊಟ್ಟಿದ್ದು ನನ್ನ ಕ್ಯಾಮೆರವಲ್ಲ ಅಥವ ಅಲ್ಲಿ ಹಾರಿದ ಆಕಾಶಬಾಣಗಳಲ್ಲ. ಬದಲಾಗಿ ಸಹಸ್ರಾರು ಬೆಳಕಿನ ಕಿಡಿಗಳ ಎದುರು ಬೆದರು ಬೊಂಬೆಗಳಂತೆ ಅಡ್ಡಬಂದಿದ್ದು ಏರ್‌ಟೆಲ್, ವಡಾಫೋನ್, ಎಂಟಿಎಸ್, ಐಡಿಯ ಇನ್ನಿತರ ಮೊಬೈಲ್ ಫೋನ್ ಟವರುಗಳು….ಛೇ ಎಂಥ ಕೆಲಸವಾಯ್ತು. ಈ ಟವರುಗಳು ಎಲ್ಲಾ ಸಮಯದಲ್ಲೂ ಹೀಗೆ ಅಡ್ಡ ಬರುವುದೇ ಆಯ್ತು…ಈ ದೀಪಾವಳಿ ಸಮಯದಲ್ಲಾದರೂ ಕೂಡ ಸ್ವಲ್ಪ ಹೊತ್ತು ಮಲಗಿರಬಾರದೇ…..ಅನ್ಯಾಯವಾಗಿ ಒಳ್ಳೊಳ್ಳೆಯ ಫೋಟೊಗಳು ಹಾಳಾಗಿ ಹೋದವು” ಎಂದು ಅವುಗಳನ್ನು ಶಪಿಸುತ್ತಾ, ಫೋಟೊಗ್ರಫಿ ಮಾಡಲೇ ಸಾಧ್ಯವಾಗುತ್ತಿಲ್ಲವಲ್ಲ? ಇವು ನಿಜಕ್ಕೂ ಆಕಾಶದಲ್ಲಿ ಹಾರಾಡುವ ಮೊಲಗಳೇ ಅನ್ನಿಸಿತ್ತು. ಅಷ್ಟರಲ್ಲಿ ದೀಪಾವಳಿಯ ಎರಡನೇ ರಾತ್ರಿಯೂ ಮುಗಿದಿತ್ತು.
ಮೂರನೆ ದಿನ ಬಲಿಪಾಡ್ಯಮಿ. ಬಲಿಚಕ್ರವರ್ತಿಯನ್ನು ಬಲಿ ತೆಗೆದುಕೊಂಡಂತೆ ಇವತ್ತು ನನ್ನ ಕ್ಯಾಮೆರದೊಳಗೆ ಆಕಾಶಬಾಣಗಳನ್ನು ಬಲಿ ಹಾಕಬೇಕು ಎನ್ನುವ ದೃಡ ನಿರ್ಧಾರದಿಂದ ಸಿದ್ದನಾಗಿ ರಾತ್ರಿ ಸ್ವಲ್ಪ ತಡವಾಗಿ ಎಂಟುಗಂಟೆಯ ಹೊತ್ತಿಗೆ ಕ್ಯಾಮೆರ ಸಹಿತ ಟೆರಸ್ ಸೇರಿಕೊಂಡಿದ್ದೆ. ಫೋಟೊ ತೆಗೆಯುವ ಮೊದಲು ನಮ್ಮ ಸುತ್ತ ಎತ್ತ ಕಡೆ ಹೆಚ್ಚಾಗಿ ಫೋಟೊಗ್ರಫಿ ಮಾಡಲು ಸುಲಭವಾಗುವಂತೆ ಆಕಾಶ ಬಾಣಗಳನ್ನು ಹಾರಿಸುತ್ತಿದ್ದಾರೆಂದು ಸ್ವಲ್ಪ ಹೊತ್ತು ಗಮನಿಸಿ ಅತ ಕಡೆ ಕ್ಯಾಮೆರವನ್ನು ಸಿದ್ದಮಾಡಿಕೊಂಡು ನಿಂತಿದ್ದೆ. ಬಲಬದಿಯಲ್ಲಿ ಉತ್ತರದ ಕಡೆ ಹೆಚ್ಚು ಆಕಾಶ ಬಾಣಗಳು ಬರುತ್ತಿವೆ…ಅವನ್ನು ಸೆರೆಹಿಡಿಯಲೇಬೇಕು ಎಂದುಕೊಂಡು ತದೇಕ ದೃಷ್ಠಿಯಿಂದ ಸತತವಾಗಿ ಫೋಟೊ ಕ್ಲಿಕ್ಕಿಸತೊಡಗಿದೆ. ಸ್ವಲ್ಪ ಹೊತ್ತಿನ ನಂತರ ಫೋಟೊಗಳು ಸೆರೆಯಾದವಾದರೂ ನನಗೆ ಬೇಕಾದ ಹಾಗೆ ನಿಖವಾಗಿ ಫೋಕಸ್, ಎಕ್ಸ್‍ಪೋಸರ್ ಇತ್ಯಾದಿಗಳು ಚೆನ್ನಾಗಿಲ್ಲದೇ ತೆಗೆದ ಫೋಟೊಗಳು ಸಪ್ಪೆ ಸಪ್ಪೆ ಎನಿಸಿತ್ತು. ಕಳೆದ ಮೂರುದಿನಗಳಿಂದ ಹೀಗೆ ಫೋಟೊಗ್ರಫಿಯಲ್ಲಿ ವಿಫಲನಾಗುತ್ತಿದ್ದೇನಲ್ಲ, ನನಗೆ ಇವುಗಳನ್ನು ಕ್ಯಾಮೆರ ಮೂಲಕ ಖಚಿತವಾಗಿ ಸೆರೆಹಿಡಿಯಲು ಸಾಧ್ಯವಾಗುತ್ತಿಲ್ಲವಲ್ಲ? ಏನು ಮಾಡುವುದು? ಸ್ವಲ್ಪ ಹೊತ್ತು ಕ್ಯಾಮೆರವನ್ನು ಬಗಲಿಗಿರಿಸಿ ಆಕಾಶವನ್ನೇ ನೋಡುತ್ತಾ ನಿದಾನವಾಗಿ ಯೋಚಿಸಿದೆ. ಮೇಲೆ ಸತತವಾಗಿ ಆಕಾಶಬಾಣಗಳು ಎಲ್ಲಾ ದಿಕ್ಕುಗಳಿಂದಲೂ ಆಕಾಶವನ್ನು ಸೀಳುತ್ತಾ…ಕೊನೆಯಲ್ಲಿ ಚಿತ್ತಾರದ ಬಣ್ಣಗಳ ನಕ್ಷತಗಳನ್ನು ಚೆಲ್ಲಿ ಮರೆಯಾಗುತ್ತಿದ್ದವು.
ಹೊಳೆಯಿತೊಂದು ಹೊಸ ಐಡಿಯ! 
“ಇಷ್ಟಪಟ್ಟಿದ್ದು ದಕ್ಕದಿರುವಾಗ,
ದಕ್ಕಿದ್ದನ್ನೇ ಇಷ್ಟಪಡಬೇಕು!”
ಈ ವಿಚಾರ ತಲೆಯಲ್ಲಿ ಬರುತ್ತಿದ್ದಂತೆ ನನ್ನ ನಿರೀಕ್ಷೆಗಳು ಕಲ್ಪನೆಗಳನ್ನೆಲ್ಲಾ ಮರೆತು, ಆಕಾಶದಲ್ಲಿ ಹಾರಾಡುವ ಎಲ್ಲಾ ರೀತಿಯ ಆಕಾಶಬಾಣಗಳನ್ನು ಸುಮ್ಮನೇ ನೋಡುತ್ತಾ ನಿಂತೆ. ಸ್ವಲ್ಪ ಹೊತ್ತಿಗೆ ಅವು ಪುಟ್ಟ ಪುಟ್ಟ ಮಕ್ಕಳಂತೆ ಕಾಣತೊಡಗಿದವು. ಒಂದಕ್ಕಿಂತ ಒಂದು ಚೆಂದವೆನಿಸತೊಡಗಿದವು. ಪುಟ್ಟ ಮಕ್ಕಳು ಅತ್ತರೆ, ನಕ್ಕರೆ, ಅಂಬೆಗಾಲಿಟ್ಟರೆ, ತೊದಲು ನುಡಿದರೆ, ಕೀಟಲೆ ಮಾಡಿದರೆ, ಕಳ್ಳಾಟ ಗುಮ್ಮನಾಟವಾಡಿದರೆ, ನಮ್ಮನ್ನೇ ಅಣಕಿಸಿದರೆ, ಕೈಗೆ ಸಿಗದಂತೆ ತಪ್ಪಿಸ್ಕೊಂಡು ಓಡಿದರೆ, ಮಾಡಿದ ತಪ್ಪನ್ನು ಅರಿತು ದೇವರೇ ಪ್ರತ್ಯಕ್ಷವಾಗಿ ನಮ್ಮೆದುರಿಗೆ ಸಾರಿ ಕೇಳಿದಂತೆ ಸಾರಿ ಕೇಳಿದರೆ, ಸುಖವಾಗಿ ಮಲಗಿದರೆ, ನಿದ್ರೆಯಲ್ಲಿ ಮುಗುಳ್ನಕ್ಕರೆ,…ಇನ್ನೂ ಏನೇನೋ ಮಾಡಿದರೂ ಕೂಡ ನಮಗೆ ಇಷ್ಟವೇ. ಅದೇ ರೀತಿ ಒಂದು ಆಕಾಶ ಬಾಣ ಸದ್ದು ಮಾಡದೇ ಮೇಲೆ ಮೇಲೆ ಸದ್ದಿಲ್ಲದೇ ಹೋಗಿ ಅಲ್ಲಿ ದೊಡ್ಡದಾಗಿ ಸಿಡಿದು ತನ್ನ ನೂರಾರು ಕೈಗಳಿಂದ ಸುತ್ತಲೂ ಮಿಣಮಿಣಕುವ ನಕ್ಷತ್ರಗಳನ್ನು ಚೆಲ್ಲಿದಂತೆ ಕಾಣಿಸಿತ್ತು. ಅದೋ ಮತ್ತೊಂದು ಮೇಲೆ ಮೇಲೆ ಹೋಗುತ್ತಿದೆ!
 ಇನ್ನೇನು ಸಿಡಿದು ಹಿಂದಿನದರಂತೆ ಮಾಡುತ್ತದೆ ಎಂದುಕೊಂಡರೆ ಹೂಂ…ಇದು ಬೇರೆಯದನ್ನೇ ಮಾಡಿತು. ಸಿಡಿದ ತಕ್ಷಣ ತನ್ನೊಳಗಿಂದ ತೆಂಗಿನ ಮರದ ಗರಿಗಳಂತೆ ಚದುರಿ ಉದ್ದುದ್ದದ ಚಿನ್ನದ ಬೆಳಕಿನ ಪುಟ್ಟ ಪುಟ್ಟ ಕೋಲುಗಳನ್ನು ಚೆಲ್ಲುತ್ತಾ ಮಾಯವಾಯ್ತು…

ಮಗದೊಂದು ಇವೆರಡಕ್ಕಿಂತ ಬೇರೆಯ ರೀತಿಯಲ್ಲಿ ನೇರಳೆ ಬಣ್ಣದ ಬೆಳಕಿನೊಳಗೆ ನೂರಾರು ನಕ್ಷತ್ರಗಳನ್ನು ಸುತ್ತಲು ಲಯಬದ್ಧವಾಗಿ ಎಸೆದ ಮೇಲೆ ಅವು ಲಯಬದ್ಧವಾಗಿ ಪ್ಯಾರಚ್ಯೂಟುಗಳಂತೆ ಕೆಳಗಿಳಿಯುವಾಗ ನನ್ನ ಕಣ್ಣಿಗೆ ಕಂಡಷ್ಟು ಆಕಾಶಕ್ಕೆ ರಂಗೋಲಿ ಇಟ್ಟು ಮಾಯವಾಯ್ತೇನೋ ಅನ್ನಿಸಿತ್ತು. ಇವುಗಳನ್ನು ಫೋಟೊಗ್ರಫಿ ಮಾಡಬೇಕಾದರೆ ಈಗ ಫೋಕಸ್, ಸರಿಯಾದ ತಾಂತ್ರಿಕತೆ, ಇತ್ಯಾದಿಗಳನ್ನು ಗಮನಿಸದೆ ಅವು ಹೇಗಿದೆಯೋ ಹಾಗೆ ಫೋಟೊಗಳನ್ನು ಕ್ಲಿಕ್ಕಿಸಿಬಿಡೋಣವೆಂದುಕೊಂಡು ಸುಮ್ಮನೇ ಕ್ಲಿಕ್ಕಿಸತೊಡಗಿದೆ. …ಕೆಲ ಸಮಯದ ಹೊತ್ತಿಗೆ ಫೋಕಸ್ ಆಗಿರದ ಆಕಾಶ ಬಾಣಗಳೆಲ್ಲಾ, ಚಿನ್ನದ ಕೋಲುಗಳಂತೆ, ಇಳಿಬಿಸಿಲಿನ ನಡುವೆ ಬಿದ್ದ ತುಂತುರು ಮಳೆಯಲ್ಲಿ ಕಾಣುವ ಬೆಳಕಿನ ಕೋಲುಗಳಂತೆ, ಕೆಲವು ಮಿಣಕು ಹುಳುಗಳಂತೆ, ಕೆಲವೊಂದು ಆಗಾದ ಬೆಳಕಿನ ಸಾಗರದಂತೆ…ಹೀಗೆ ಎಲ್ಲವನ್ನು ಕ್ಲಿಕ್ಕಿಸತೊಡಗಿದ್ದೆ.
ಇದೇ ರೀತಿ ತಲ್ಲೀನನಾಗಿ ಮೈಮರೆತು ಫೋಟೊಗ್ರಫಿ ಮಾಡುತ್ತಿದ್ದವನಿಗೆ ಅರಿವಿಲ್ಲದಂತೆ ಕೆಲವೊಂದು ಆಕಾಶಬಾಣಗಳ ಚಿತ್ರಗಳು ನನಗೆ ಗೊತ್ತಿಲ್ಲದಂತೆ ಫೋಕಸ್ ಆಗಿ ಒಂದರ ಹಿಂದೆ ಒಂದರಂತೆ ಮೋಟರ್ ಡ್ರೈವ್ ಮೋಡ್‍ನಲ್ಲಿ ಕ್ಲಿಕ್ಕಿಸುತ್ತಿರುವಾಗ ದೊಡ್ಡ ನಕ್ಷತ್ರವೊಂದು ಸಿಡಿದು ಅದರ ಎಲ್ಲಾ ದಿಕ್ಕುಗಳಿಗೂ ಚದುರಿದ ಬಣ್ಣ ಬಣ್ಣದ ನಕ್ಷತ್ರಗಳು, ಮತ್ತೊಂದರಲ್ಲಿ ಹಸಿರಾಗಿ ಸಿಡಿದು ಚದುರಿದ ಆಕಾರಗಳಲ್ಲಿ ಲವ್ ಸಿಂಬಲು.

 ತೇಲುವ ಬೆಲೂನು. ಕೆಲವಂತೂ ಹುಣ್ಣಿಮೆಯಲ್ಲಿ ಸಾಗರದಲ್ಲಿ ತೇಲುವ ದೋಣಿಗಳಂತೆ ಕಂಡು ತೇಲಿಕೊಂಡು ಕಂಡು ಮಾಯವಾದವು.

 ಮಗದೊಂದರಲ್ಲಿ ಚಿಮ್ಮಿದ ಕಿತ್ತಳೆ ಬಣ್ಣದ ಚಿತ್ತಾರದೊಳಗಿಂದ ಬಿಲ್ಲಿನ ಆಕಾರದಲ್ಲಿ ಚಿಮ್ಮಿದ ಕೋಲುಗಳು ಆಗ ತಾನೆ ತಾನೆ ಹರಳಿದ ದಾಸವಾಳ ಹೂವಿನ ಪಕಳೆಗಳ ನಡುವೆ ಅದರೊಳಗೆ ನಿಂತ ಕೆಂಪು ಕೆಂಪು ಕೋಲುಗಳ ತಲೆಯ ಮೇಲೆ ಬೆಳಕಿನ ಕಿರೀಟವನ್ನು ತೊಟ್ಟ ಕೋಲುಗಳಂತೆ ಕಂಡು ಮಾಯವಾದವು. ಕೆಲವಂತೂ ಥೇಟ್ ನಾಚಿಕೆ ಮುಳ್ಳಿನಲ್ಲಿ ಹರಳಿದ ಕೆಂಪು ಮಿಶ್ರಿತ ನೇರಳ ಬಣ್ಣದ ಹೂವುಗಳ ಪತಿಬಿಂಬವನ್ನು ತೋರಿಸುತ್ತ ಮರೆಯಾದವು.
 ಒಂದಂತೂ ತನ್ನ ಎಂಟು ಬಾಹುಗಳಲ್ಲಿ ಬೆಂಕಿಯನ್ನು ತುಂಬಿಕೊಂಡು ಮಿಂಚುತ್ತಾ ಸಾಗುವ ಸಾಗರದಾಳದ ಆಕ್ಟೋಪಸ್ ನಂತೆ ಕಂಡು ಮರುಕ್ಷಣದಲ್ಲಿ ತನ್ನೆಲ್ಲಾ ಬೆಂಕಿಯ ಬಾಹುಗಳಲ್ಲಿನ ಕೊಂಡಿ ಕಳಚಿಕೊಂಡು ದಿಗಂತದಲ್ಲಿ ಮರೆಯಾಯ್ತು. ಮಗದೊಂದು ಹಾರಿ ಕೆಳಗೆ ಬೀಳುವಾಗ ಅವಮಾಸ್ಯೆಯ ನಾಲ್ಕು ದಿನಗಳ ಹಿಂದಿನ ಚಂದ್ರಾಕೃತಿಗಳ ಹತ್ತಾರು ನೂರಾರು ತದ್ರೂಪುಗಳನ್ನು ಸೃಷ್ಠಿಸಿದರೆ, ಅದರೊಳಗೆ ಕೆಲವೊಂದು ಬೆಳಕನ್ನು ಚಿನ್ನದ ಬಣ್ಣವನ್ನು ಮೈಗೆ ಸವರಿಕೊಂಡ ಅರ್ಧ ಕೋಡುಬಳೆಗಳಂತೆ, ನಮ್ಮ ವಾಹನಗಳ ಷಾಕ್ ಅಬ್ಸರ್ವರುಗಳ ಸ್ಪ್ರಿಂಗುಗಳಂತೆ ಕಂಡು ಕಣ್ಮರೆಯಾದವು.

 ಅಗೋ ಅಲ್ಲೊಂದು ನನ್ನ ಕಣ್ಣ ಮುಂದೆಯೇ ಲೈಪ್ ಅಫ್ ಪೈ ಸಿನಿಮಾದಲ್ಲಿ ಕಂಡಂತೆ ರಾತ್ರಿ ಸಮಯದಲ್ಲಿ ಸಾಗರದಲ್ಲಿ ತೇಲುತ್ತಾ ನನ್ನ ಮುಂಭಾಗದಲ್ಲೇ ಹಾರಿ ನಿದಾನವಾಗಿ ಸಾಗರ ತಳದಲ್ಲಿ ತನ್ನ ಬಣ್ಣ ಬಣ್ಣದ ರೆಕ್ಕೆಗಳನ್ನು ಹರಡಿಕೊಂಡು ಚಲಿಸುವ ಸುಂದರ ನೂರಾರು ಮೀನುಗಳಂತೆ ಕಂಡು ನಿದಾನವಾಗಿ ಮರೆಯಾಯ್ತು.


“ರೀ….ಎಲ್ಲಿದ್ದೀರಿ.. ಒಹ್! ಇಲ್ಲಿದ್ದೀರಾ!…ಈಗ ಟೈಮ್ ಎಷ್ಟು ಗೊತ್ತಾ? ರಾತ್ರಿ ಹತ್ತುಗಂಟೆ. ಮಾಡಿದ ಅಡುಗೆಯೆಲ್ಲಾ ತಣ್ಣಗಾಯ್ತು. ಇನ್ನೂ ಊಟಕ್ಕೆ ಬರುತ್ತೀರೋ ಅಥವ ಇಲ್ವೋ? ಎಂದು ನನ್ನ ಶ್ರೀಮತಿ ಕರೆದಾಗಲೇ ನಾನು ಈ ಬೆಳಕಿನ ನಕ್ಷತ್ರ ಲೋಕದಿಂದ ಹೊರಬಂದಿದ್ದು. ಊಟ ಮಾಡಿ ಮಲಗಿದ್ದಷ್ಟೆ. ಸ್ವಲ್ಪ ಹೊತ್ತಿಗೆ ಎಚ್ಚರವಾಗಿತ್ತು. ಹೇಮ ಮಲಗಿದ್ದಳು ನಾನು ನಿದಾನವಾಗಿ ಹೊರಗೆ ಬಂದು ಟೆರೆಸ್ ಮೇಲೆ ನಿಂತೆ. ಸ್ವಲ್ಪ ಹೊತ್ತಿಗೆ ಒಂದು ದೊಡ್ಡ ಆಕಾಶ ಬಾಣ ಸಿಡಿದು ಅದರೊಳಗೆ ನೂರಾರು ಬೆಳಕಿನ ಬಣ್ಣ ಬಣ್ಣದ ಕೊಡೆಗಳು ಪ್ಯಾರಚ್ಯೂಟುಗಳಂತೆ ಕೆಳಗಿಳಿಯತೊಡಗಿದವು. ನನ್ನ ಪಕ್ಕದಲ್ಲಿಯೇ ಬರುತ್ತಿದ್ದ ಕೊಡೆಯನ್ನು ಹಾರಿ ಹಿಡಿದುಕೊಳ್ಳುವಷ್ಟರಲ್ಲಿ ಅದು ನಿದಾನವಾಗಿ ಮತ್ತೆ ಮೇಲೆ ತೇಲತೊಡಗಿತು. ಆ ತೇಲುವಿಕೆಯಲ್ಲಿ ಎಂಥ ಮಜವಿತ್ತು ಗೊತ್ತಾ!

  
ಸ್ವಲ್ಪ ಹೊತ್ತಿಗೆ ಕೆಳಗೆ ನೋಡಿದರೆ ಭೂಮಿಯೆಂಬ ಭೂಮಿಯೆಲ್ಲ ಮಿಣುಕುಹುಳ ಬೆಳಕಿನಲ್ಲಿ ಮಿಣುಕುತ್ತಿದೆ! ಕೊಡೆ ನನ್ನನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯುತ್ತಿದೆ….ಇವುಗಳನ್ನು ನೋಡುತ್ತಾ ಅದೆಷ್ಟು ಹೊತ್ತು ಮೈಮರೆತಿದ್ದೆನೋ ಗೊತ್ತಿಲ್ಲ ಹಾಗೆ ನಿದ್ರೆ ಬಂದಿತ್ತು. ಎಚ್ಚರವಾದಾಗ ನೋಡುತ್ತೇನೆ ಇಡೀ ಪ್ರಪಂಚವೇ ಕತ್ತಲು. ನಾನೆಲ್ಲಿದ್ದೇನೆ ಎಂದುಕೊಂಡು ಸುತ್ತಲು ನೋಡಿದರೆ ಬರೀ ಕತ್ತಲು. ನನಗೆ ಗೊತ್ತಿಲ್ಲದಂತೆ ಹಿಡಿದಿದ್ದ ಕೊಡೆಯ ಕೈಬಿಟ್ಟೆನಲ್ಲ, ದಪ್ ಎಂದು ಕೆಳಗೆ ಬಿದ್ದಿದಷ್ಟೇ ಗೊತ್ತು.. “ರೀ..ರೀ….ಆವಾಗಿನಿಂದ ಮೊಬೈಲ್ ಆಲರಂ ಹೊಡೆದುಕೊಳ್ಳುತ್ತಿರುವುದು ನಿಮಗೆ ಕೇಳಿಸುತ್ತಿಲ್ಲವಾ….ಟೈಮ್ ನಾಲ್ಕುವರೆ..ಪೇಪರ್ ಕೆಲಸಕ್ಕೆ ಹೋಗೋಲ್ವಾ..” ಎಂದು ನನ್ನನ್ನು ಅಲುಗಾಡಿಸಿ ಎಬ್ಬಿಸಿದಾಗ ಕನಸಿನಿಂದ ಎಚ್ಚರವಾಗಿದ್ದೆ. ಪೇಪರ್ ಏಜೆನ್ಸಿ ಕೆಲಸವನ್ನು ಮುಗಿಸಿ ಮನೆಗೆ ಬಂದು ರಾತ್ರಿ ತೆಗೆದ ಫೋಟೊಗಳನ್ನು ನೋಡಿದಾಗ ಅನ್ನಿಸಿದ್ದು.
“ಕೊನೆಗೂ ಆಕಾಶದಲ್ಲಿ ಹಾರಾಡುವ ಮೊಲಗಳನ್ನು ಹಿಡಿದೆ”
(ಚಿತ್ರಗಳು ಮತ್ತು ಲೇಖನ)
ಕೆ ಶಿವು

Wednesday, November 13, 2013

ಒಪ್ಪಿಕೊಳ್ಳಬೇಕಷ್ಟೆ


     
   
vÀ¥ÀÅöà ºÀtªÀ£ÀÄß PÉÆlÖ JnJA AiÀÄAvÀæªÀ£ÀÄß

KPÉAzÀÄ ¥Àæ²ß¸À¯ÁUÀĪÀÅ¢®è

D PÀëtzÀ°è K£ÀÆ ªÀiÁqÉÆÃPÉ DUÉÆîè

M¦àPÉƼÀî¨ÉÃPÀµÉÖ....



¨ÉÃqÀzÀ PÉA¥ÀÅ ºÀ¼À¢ ªÀÄ¼É ¸ÀÄj¹zÀ ªÉÆÃqÀUÀ½UÉ

CzÀ£ÀÄß ªÁ¥À¸ï PÀ½¸À¯ÁUÀĪÀÅ¢®è

D PÀëtzÀ°è K£ÀÆ ªÀiÁqÉÆÃPÉ DUÉÆîè

M¦àPÉƼÀî¨ÉÃPÀµÉÖ....



ªÀÄÄAeÁ£É £Ámï jÃZÀ§¯ï DzÀ ¥ÉÃ¥Àgï ©Ãmï ºÀÄqÀÄUÀgÀ£ÀÄß

ºÀÄqÀÄQzÀgÉ ¹UÀĪÀÅ¢®è

D PÀëtzÀ°è K£ÀÆ ªÀiÁqÉÆÃPÉ DUÉÆîè

M¦àPÉƼÀî¨ÉÃPÀµÉÖ...



vÀ¥ÀÅöà vÀ¥ÀÅöà CPÀëgÀUÀ¼À EAPÀ£ÀÄß ¨Á¯ï ¥É¤ßUÉ

PÁUÀzÀ¢AzÀ ªÁ¥À¸ï PÀ½¸À¯ÁUÀĪÀÅ¢®è

D PÀëtzÀ°è K£ÀÆ ªÀiÁqÉÆÃPÉ DUÉÆîè

M¦àPÉƼÀî¨ÉÃPÀµÉÖ...



¨Á¬ÄAzÀ ºÉÆgÀ©zÀÝ PÉlÖ ªÀiÁvÀÄUÀ¼À CzÉà G¹gÀ£ÀÄß

ªÁ¥À¸ï ¨Á¬ÄUÉ vÉUÉzÀÄPÉƼÀî¯ÁUÀĪÀÅ¢®è

D PÀëtzÀ°è K£ÀÆ ªÀiÁqÉÆÃPÉ DUÉÆîè

M¦àPÉƼÀî¨ÉÃPÀµÉÖ...



eÉÆÃgÀĪÀļÉAiÀÄ°è ªÉÄÊ°UÀlÖ¯É mÁæ¦üPÀ°è D¥sï DzÀ ¸ÀÆÌlgï

D£ï DUÀzÉà MA¢AZÀÄ PÀzÀ®¯ÁUÀÄwÛ®è

D PÀëtzÀ°è K£ÀÆ ªÀiÁqÉÆÃPÉ DUÉÆîè

M¦àPÉƼÀî¨ÉÃPÀµÉÖ...



PÉÆ®ÌvÀÛzÀ°è  w£ÀÄߪÀ C£ÀßzÀ §tÚ ºÀ¼À¢

¨ÉAUÀ¼ÀÆj£À°è w£ÀÄߪÀ C£ÀßzÀ §tÚ ©½

C°è UÀAUÁ E°è PÁªÉÃj

D PÀëtzÀ°è K£ÀÆ ªÀiÁqÉÆÃPÉ DUÉÆîè

M¦àPÉƼÀî¨ÉÃPÀµÉÖ...


ಚಿತ್ರ ಮತ್ತು ಕವನ

²ªÀÅ.PÉ

Sunday, October 6, 2013

ಕೊಲ್ಕತ್ತ-ದಿಘಾ ನಾಲ್ಕು ದಿನದ ಪ್ರವಾಸ (ಕೊನೆಯ ಭಾಗ)

 [ಮೊದಲ ಎರಡು ಭಾಗವನ್ನು ಓದಲು ಈ ಕೆಳಗಿನ ಲಿಂಕ್ ಕ್ಲಿಕ್ಕಿಸ]

 http://chaayakannadi.blogspot.in/2013/09/blog-post.html

http://chaayakannadi.blogspot.in/2013/09/2.html

                 ಅಂತರ ರಾಷ್ಟ್ರೀಯ ಛಾಯಚಿತ್ರ ಸ್ಪರ್ಧೆಗಳ ತೀರ್ಪುಗಾರಿಕೆ ಪ್ರಾರಂಭವಾಗುವ ಮೊದಲು

                    ನಮ್ಮ ಕುಂದಾಪುರದಷ್ಟೇ ಚಿಕ್ಕದಾಗಿರುವ "ದಿಘಾ" ಪಟ್ಟಣ ರಾತ್ರಿಯಲ್ಲಿ

                            ರಾತ್ರಿ ಸಮಯದಲ್ಲಿ "ದಿಘಾ" ರಸ್ತ

                       
   ಮೂರನೇ ದಿನ ಸಂಜೆ ಮತ್ತೆ ದುರಂತೋ ರೈಲಿನಲ್ಲಿ ಹೊರಟು ಹೌರಾ ತಲುಪುವ ಹೊತ್ತಿಗೆ ಸಂಜೆ ಏಳುಗಂಟೆ.  ಹೂಗ್ಲಿ ನದಿಯ ಮೇಲೆ ಒಂದು ಕಡೆಯಿಂದ ಮತ್ತೊಂದು ಕಡೆಗೆ ಹೋಗಲು ಅಲ್ಲಿ ದೊಡ್ದ ದೊಡ್ದ ಬೋಟುಗಳ ವ್ಯವಸ್ಥೆಯಿದೆ.  ನಾವು ಆ ಬೋಟಿನೊಳಗೆ ಸೇರಿಕೊಂಡೆವು. ಬೋಟ್ ನಿದಾನವಾಗಿ ಚಲಿಸುತ್ತಾ ದೊಡ್ದದಾದ ಹೌರ ಬ್ರಿಡ್ಜ್ ಕೆಳಗೆ ಸಾಗುತ್ತಾ...ಅದನ್ನು ದಾಟಿ ಮುಂದೆ ರವಿಂದ್ರ ನಾಥ್ ಠಾಕೂರ್ ಸಮಾಧಿ, ಧಾಟಿಕೊಂಡು ಮುಂದೆ ಸಾಗಿದಾಗ ನಾವೆಲ್ಲ ಬಲಗಡೆಗೆ ಇಳಿದುಕೊಂಡೆವು. ಅಲ್ಲಿಗೆ ನಮ್ಮ ಜೊತೆಯಲ್ಲಿ ಬಂದಿದ್ದ ಪಶ್ವಿಮ ಬಂಗಾಲದ ನಾನಾಕಡೆಯಿಂದ ಬಂದಿದ್ದ ಫೋಟೋಗ್ರಫಿ ಜ್ಯೂರಿಗಳು, ಛಾಯಾಗ್ರಾಹಕರು ಮತ್ತು ಕೆಲವು ಆಯೋಜಕರು ಅವರವರ ಊರುಗಳಿಗೆ ತೆರಳುವ ಸಮಯವಾಗಿತ್ತು. ನಮಗೆಲ್ಲಾ ವಿಶ್ ಮಾಡಿ ಅವರೆಲ್ಲ ಅತ್ತ ಹೊರಟರು. ನಾವು ಪಕ್ಕದಲ್ಲಿಯೇ ಇದ್ದ ಲೋಕಲ್ ರೈಲು ನಿಲ್ದಾಣದ ಕಡೆಗೆ ಹೊರಟೆವು. ಮುಂದೆ ನಮ್ಮ ಪ್ರಯಾಣ ನೇರವಾಗಿ ಗೆಳೆಯ ಅಭಿಜಿತ್ ಮನೆಗೆ.  ಅವತ್ತು ರಂಜಾನ್ ರಜಾದಿನ ಮತ್ತು ಮತ್ತು ರಾತ್ರಿ ಏಳುವರೆಯಾಗಿದ್ದರಿಂದ ಪ್ರಯಾಣಿಕರು ಕಡಿಮೆ ಇದ್ದರು. ಮುಕ್ಕಾಲು ಗಂಟೆಯಲ್ಲಿ ಗೆಳೆಯ ಅಭಿಜಿತ್ ಡೇಯ ಬರಕ್ ಪುರ್‍ಅ ಮನೆ ತಲುಪಿದೆವು. 

                              "ದಿಘಾ" ಸಮುದ್ರ ಕಿನಾರ

                         ಆಭಿಜಿತ್ ಡೆ ಮನೆಯಲ್ಲಿ ಅವರ ಕುಟುಂಬದ ಜೊತ

          ನ್ನ ಗಮನವನ್ನು ಸೆಳೆದ ಅಭಿಜಿತ್ ಡೇ ಮನೆಯಲ್ಲಿರುವ ಕಲಾತ್ಮಕ ಚಿತ್ರವಿರುವ ಟೀ ಕಪ್


    ರಾತ್ರಿ ಊಟಕ್ಕೆ ನನಗಾಗಿ ಮನೆಯಲ್ಲಿ ವಿಶೇಷ ಅಡುಗೆಯ ತಯಾರಿಯಲ್ಲಿದ್ದ ಅಭಿಜಿತ್ ಡೇ ಮನೆಗೆ ಫೋನ್ ಮಾಡಿ ನನಗೆ ಸ್ವಲ್ಪ ಇಲ್ಲಿಯ ಊಟ ಸೆಟ್ ಆಗಿಲ್ಲ., ಮಧ್ಯಾಹ್ನ ಎರಡು ಭಾರಿ ವಾಂತಿಯಾಗಿದೆ. ಅದಕ್ಕೆ ಕಾರಣ ಇಲ್ಲಿ ಬಳಸುವ ಸಾಸುವೆ ಎಣ್ಣೆ ಇರಬಹುದು. ಈಗ ರಾತ್ರಿಗೆ ನನಗೆ ಹೆಚ್ಚೇನು ಬೇಡ ಸ್ಪಲ್ಪ ಮೊಸರನ್ನ ಮಾತ್ರ ಸಾಕು ಎಂದು ಹೇಳಿದ್ದೆ. ಹಾಗೆ ಅಭಿಜಿತ್ ಮನೆಗೆ ಫೋನ್ ಮಾಡಿ ಹೇಳಿದರು. ಕೊನೆಯ ದಿನದ ರಾತ್ರಿ ರುಚಿರುಚಿಯಾದ ಅಡುಗೆಯನ್ನು ಮಾಡಬೇಕೆನ್ನುವ ತಯಾರಿಯಲ್ಲಿದ್ದ ಅವರಿಗೆ ಈ ಮಾತನ್ನು ಸ್ವಲ್ಪ ನಿರಾಶೆಯಾಗಿತ್ತು. ಇಲ್ಲಿನ ಊಟದ ವಿಚಾರವನ್ನು ಸ್ವಲ್ಪ ಹೇಳಲೇಬೇಕು. ಇಲ್ಲಿ ಎಲ್ಲ ಆಡುಗೆಗೂ ಸಾಸುವೆ ಎಣ್ಣೆಯನ್ನು ಬಳಸುತ್ತಾರೆ. ವೆಚ್ ಅಥವ ನಾನ್‍ವೆಜ್, ಮೀನು ಹೀಗೆ ಯಾವುದೇ ತರಹದ ಖಾದ್ಯಕ್ಕೂ ಸಾಸುವೆ  ಎಣ್ಣೇ ಅವರಿಗೆ ಬೇಕೇ ಬೇಕು. ಮೊದಲೆರಡು ದಿನ ನಾನು ಅದರ ಬಗ್ಗೆ ಗಮನಿಸಿದೆ ಹೊಂದಿಕೊಂಡಿದ್ದೆ.  ನನ್ನ ಮನಸ್ಸು ಫೋಟೊಗ್ರಫಿ ಮತ್ತು ಊರು ಸುತ್ತುವ ಮತ್ತು ನೋಡುವ ನೆಪದಲ್ಲಿ ಹೊಂದಿಕೊಂಡರೂ ದೇಹ ಹೊಂದಿಕೊಳ್ಳಬೇಕಲ್ಲವೇ...ಅದಕ್ಕೆ ಸಾಧ್ಯವಾಗಲಿಲ್ಲ. ಮೂರನೇ ದಿನಕ್ಕೆ ಸಾಸುವೆ ಎಣ್ಣೆ ನನ್ನ ದೇಹಕ್ಕೆ ಬೇಡ ಎಂದು ರೆಜೆಕ್ಟ್ ಮಾಡಿತ್ತು. ಆ ಕಾರಣದಿಂದಾಗಿ ಮೂರನೇ ದಿನ ದಿಘದಲ್ಲಿ ವಾಂತಿಯಾಗಿತ್ತು. ಅವತ್ತು ರಾತ್ರಿ ನನಗೊಬ್ಬನಿಗೆ ಮೊಸರನ್ನ ಕಾದಿತ್ತು.  ಆ ಮೊಸರನ್ನವಾದರೂ ಹೇಗಿತ್ತು ಗೊತ್ತಾ......ಅನ್ನ ಪಶ್ಚಿಮದ ಕಡೆ, ಮೊಸರು ಪೂರ್ವದ ಕಡೆ, ಬಿಸಿಬಿಸಿಯಾದ ಹಾಲು ನನ್ನ ಕಡೆ. ಹೀಗೆ ತ್ರಿಕೋನ ಆಕಾರದಲ್ಲಿ ಮೂರು ಬಟ್ಟಲುಗಳಲ್ಲಿ ಮಿಕ್ಸ್ ಆಗದ ಮೊಸರನ್ನ ಸಿದ್ದವಾಗಿತ್ತು. ಪಾಪ ಅವರಿಗೇನು ಗೊತ್ತು ಮೊಸರನ್ನ ಹೇಗಿರುತ್ತದೆಂದು.  ಊಟಕ್ಕೆ ಕುಳಿತಾಗ ಮೊಸರನ್ನಕ್ಕೆ ಹಾಲು ಆಗತ್ಯವಿಲ್ಲ, ಅನ್ನ ಮೊಸರು ಎರಡೇ ಬೇಕು, ಸ್ವಲ್ಪ ಸಾಲ್ಟ್ ಸಾಕು ಎಂದು ಅವರಿಗೆ ವಿವರಿಸಿ ಮೂರನ್ನು ಹದವಾಗಿ ಮಿಕ್ಸ್ ಮಾಡಿ ತಿನ್ನುತ್ತಿದ್ದರೇ ಅವರಿಗೆಲ್ಲಾ ನನ್ನ ರಾತ್ರಿ ಊಟ ಆಶ್ಚರ್ಯವಾಗಿತ್ತು.  ಅಕ್ಕಿ ಮತ್ತು ಅನ್ನದ ವಿಚಾರಕ್ಕೆ ಬಂದರೆ ಅಲ್ಲಿ ಬೆಳೆಯುವ ಭತ್ತದಿಂದ ಬರುವ ಅಕ್ಕಿ ದಪ್ಪದಾದ ಹಳದಿ ಬಣ್ಣದ್ದು.  ಅದರ ರುಚಿಯೂ ಅಷ್ಟಕಷ್ಟೆ. ನಮ್ಮ ದಕ್ಷಿಣ ಭಾರತದಲ್ಲಿ ಬೆಳೆಯುವ ಶ್ವೇತಬಣ್ಣದ ಅಕ್ಕಿ ಮತ್ತು ಅದರಿಂದಾಗುವ ಅನ್ನ, ಅದರ ರುಚಿ!..ಆಹಾ! ನಾವು ನಿಜಕ್ಕೂ ಅದೃಷ್ಟವಂತರೆ ಸರಿ.  ನಿಮ್ಮಲ್ಲಿ ಬೆಳೆಯುವ ಭತ್ತದೊಳಗಿನ ಅಕ್ಕಿಯ ಹಳದಿ ಬಣ್ಣಕ್ಕೆ ಕಾರಣವೇನೆಂದು ಕೇಳಿದರೆ ಅವರು ಗಂಗಾ ನದಿಯತ್ತ ಕೈ ತೋರಿಸುತ್ತಾರೆ. ನಮ್ಮ ಗಂಗಾ ನದಿ ನೀರು ಇಂಥ ಬೆಳೆಯನ್ನು ಕೊಡುತ್ತದೆ ನಾವೇನು ಮಾಡೋಣ ಹೇಳಿ" ಎಂದು ಅವರು ನಗುತ್ತಾ ಹೇಳುವಾಗ ಅವರಿಗಿಂತ ಉತ್ತಮವಾದ ಮತ್ತು ರುಚಿಯಾದ ಅನ್ನವನ್ನು ತಿನ್ನುವ ನಮಗೆ ಅವರ ಬಗ್ಗೆ ವಿಷಾಧ ವ್ಯಕ್ತವಾಗುತ್ತದೆ. ನಾವು ಇಲ್ಲಿ ಕಾವೇರಿ, ಕೃಷ್ಣಾ, ಮಹಾದಾಯಿ, ಇನ್ನೂ ಅನೇಕ ನದಿಗಳ ನೀರಿಗೆ ಕಿತ್ತಾಡಿದರೂ, ಪ್ರವಾಹವಲ್ಲದಿದ್ದರೂ ಹರಿದಷ್ಟೇ ನೆಲದಲ್ಲಿ ಚಿನ್ನದಂತ ಅನ್ನವನ್ನು ಉಣ್ಣುವ ನಾವು, ದೂರದಿಂದ ಮತ್ತು ಹೊರಗಿನಿಂದ ನೋಡಿದಾಗ ಇವುಗಳ ಮಹತ್ವವೇನೆಂಬುದು ಅರಿವಾಗಿತ್ತು. ಬೆಳೆಯುವ ತರಕಾರಿಗಳಲ್ಲಿ ಆಲುಗಡ್ಡೆಗೆ ಆಗ್ರಸ್ಥಾನ, ಹಾಗೆ ನಿತ್ಯ ಬಳಕೆಯಲ್ಲೂ ಕೂಡ. ಕೊಲ್ಕತ್ತ, ಬರಕ್‍ಪುರ, ದಿಘಾ, ಹೌರಾ, ಹೀಗೆ ಎಲ್ಲಿಗೇ ಹೋಗಿ ಬೆಳಿಗ್ಗೆ ನಿಮಗೆ ಪೂರಿ ಮತ್ತು ಅಲುಗಡ್ಡೆಯಿಂದ ಮಾಡಿದ ಪಲ್ಯ ಎಲ್ಲಾ ಪುಟ್ಟ ಹೋಟಲುಗಳು ಮತ್ತು ಮನೆಗಳಲ್ಲಿ ಸಿದ್ಧವಾಗಿರುತ್ತದೆ. ಮಧ್ಯಾಹ್ನ ಮತ್ತು ರಾತ್ರಿ ಊಟಕ್ಕೂ ಆಲುಗಡ್ಡೆ ಸಾಗು ಅಥವ ಪಲ್ಯ ಸಿದ್ದವಿರುತ್ತದೆ. ಬೆಂಗಾಲಿಗಳು ರಾತ್ರಿ ಹೊತ್ತು ಅನ್ನವನ್ನು ತಿನ್ನುವುದಿಲ್ಲ. ಆದ್ರೆ ರೋಟಿ, ಚಪಾತಿ ಜೊತೆಗೆ ಆಲುಗಡ್ಡೆ ಪಲ್ಯ ಅಥವ ಸಾಗು ಇದ್ದೇ ಇರಬೇಕು. ಇತರೆಲ್ಲ ತರಕಾರಿಗಳಿಗಿಂತ ಮೂರು ರೂಪಾಯಿಗೆ ಒಂದು ಕಿಲೋ ಆಲುಗಡ್ಡೆ ಅಲ್ಲಿ ದೊರೆಯುತ್ತದೆ. ರಾತ್ರಿ ಊಟ ಮುಗಿಯುತ್ತಿದ್ದಂತೆ ಪ್ರಯಾಣದ ಆಯಾಸದಿಂದಾಗಿ ನನಗೆ ಬೇಗನೇ ನಿದ್ರೆ ಆವರಿಸಿತ್ತು.

             ಕೊಲ್ಕತ್ತದ ಉಪನಗರ ಭಾರಕ್‍ಪುರದ ಒಂದು ಪುಟ್ಟ ರಸ್ತ


   ಮರುದಿನ ಬೆಳಿಗ್ಗೆ ಬೇಗ ಆರುಗಂಟೆಗೆ ಎದ್ದು ಒಂದು ವಾಕ್ ಹೋಗಬೇಕೆನ್ನುವ ಆಸೆಯಿಂದ ಅಭಿಜಿತ್‍ಗೆ ಹೇಳಿದರೆ...ಅರೆರೆ...ಶಿವುಜೀ, ಅಮಾರ ಶಹರ್ ತುಮ್‍ಕೋ ಮಾಲುಮ್ ನಹೀ, ತುಮ್ ಬಹರ್  ಐಸೇ ಮಿಸ್ ಹೋಗಯಾ ತೋ, ತುಮಾರ ಪ್ಲೈಟ್ ಬಿ ಮಿಸ್ ಹೋತಾಹೇ" ಎಂದು ತಮಾಷೆ ಮಾಡಿದರು.  ಇಲ್ಲ ಇಲ್ಲ ನನಗೆ ಗೊತ್ತು ಎರಡು ಮೂರು ಕಿಲೋಮೀಟರ್ ಮಾತ್ರ ಗೊತ್ತಿರುವ ರಸ್ತೆಯಲ್ಲಿಯೇ ಹೋಗಿಬರುತ್ತೇನೆ ಎಂದು ಹೇಳಿ ಹೊರಟೆ. ಮತ್ತೆ ಬೆಳಗಿನ ಭರಕ್ ಪುರ ಎಂದಿನಂತೆ ಚುರುಕಾಗಿತ್ತು. ಅಷ್ಟುಹೊತ್ತಿಗಾಗಲೇ ನೂರಾರು ಸೈಕಲ್ ರಿಕ್ಷಾಗಳಲ್ಲಿ ರೈಲು ನಿಲ್ದಾಣಕ್ಕೆ ಸಾಗುವ ಸರ್ಕಾರಿ ಮತ್ತು ಖಾಸಗಿ ಉದ್ಯೋಗಿಗಳು, ಕಾಲೇಜು ಹುಡುಗ ಹುಡುಗಿಯರು,.....ಸಾಗುತ್ತಿದ್ದರು. ಸುಮಾರು ಮೂರು ಕಿಲೋಮೀಟರ್ ದೂರದವರೆಗೆ ನಡೆಯುತ್ತಾ ಅಲ್ಲಿ ಸಾಗುವ ಈ ಸೈಕಲ್ ರಿಕ್ಷಾಗಳು, ಜನರು, ಸ್ಕೂಲಿಗೆ ಹೋಗುವ ಮಕ್ಕಳು...ಎಲ್ಲರನ್ನು ನೋಡುತ್ತಾ ಮತ್ತೆ ವಾಪಸ್ ಬರುವ ವೇಳೆಗೆ ಎಂಟುಗಂಟೆ.   ಅವತ್ತು ಮೂರು ಗಂಟೆಯ ವಿಮಾನಕ್ಕೆ ಬೆಂಗಳೂರಿಗೆ ನನ್ನ ಟಿಕೆಟ್ ನಿಗದಿಯಾಗಿತ್ತು.  ಅವತ್ತು ಕೊನೆಯ ದಿನವಾದ್ದರಿಂದ ಅಭಿಜಿತ ಮಗಳಾದ ಆದ್ರಿತಾ ಡೆ ಅರ್ಥಾತ್ ಅವರು ಪ್ರೀತಿಯಿಂದ "ರೂಪು" ಜೊತೆ ತುಂಬಾ ಹೊತ್ತು ಕಳೆದೆ. ಅವಳ ಆಸಕ್ತಿಕರ ವಿಚಾರ ಡ್ರಾಯಿಂಗ್ ಮತ್ತು ಪೈಂಟಿಂಗ್, ನನ್ನ ವೆಂಡರ್ ಕಣ್ಣು ಪುಸ್ತಕದಲ್ಲಿ ನಾನು ಬರೆದ ಕೆಲವು ಚಿತ್ರಗಳನ್ನು ಅವಳು ನೋಡಿ ತುಂಬಾ ಇಷ್ಟಪಟ್ಟಳು. ಅವಳು ಬರೆದ ಹತ್ತಾರು ಚಿತ್ರಗಳನ್ನು ನನಗೆ ತೋರಿಸಿದಳು. ಕೊನೆಯಲ್ಲಿ ಅವರ ಮನೆಯಲ್ಲಿ ಎಲ್ಲರ ಜೊತೆ ಫೋಟೊ ತೆಗೆಸಿಕೊಂಡು ಮಧ್ಯಾಹ್ನ ಹನ್ನೆರಡುವರೆಗೆ ಎಲ್ಲರಿಗೂ ಬೈ ಹೇಳಿ ಅವರಿಂದ ಬೀಳ್ಕೊಡುವಾಗ ಮತ್ತೆ ಮತ್ತೆ ಬರುತ್ತಿರಿ ಎಂದರು ಅವರ ಶ್ರೀಮತಿ. ಅವರ ಪ್ರೀತಿಪೂರ್ವಕ ಅತಿಥ್ಯವನ್ನು ಅನುಭವಿಸಿದ ನನಗೆ ಅಲ್ಲಿಂದ ಹೊರಡುವಾಗ ಮನಸ್ಸು ವಿಶಾಧಕ್ಕೊಳಗಾಗಿತ್ತು.

                     

ಕೊಲ್ಕತ್ತದ ವಿಮಾನ ನಿಲ್ದಾಣ. ಇದನ್ನು ಲೋಕಲ್ ರೈಲಿನಲ್ಲಿ ಕುಳಿತು ಕ್ಲಿಕ್ಕಿಸಿದ್ದು. ವಿಮಾನ ನಿಲ್ಡಾಣದ  ಕಾಂಪೌಂಡಿನವರೆಗೆ ಲೋಕಲ್ ರೈಲು ಸೌಕರ್ಯವಿದೆ.



    ಭರಕ್ ಪುರ ರೈಲು ನಿಲ್ದಾಣದಲ್ಲಿ ನನಗಾಗಿ ರೈಲು ಟಿಕೆಟ್ ತೆಗೆದುಕೊಂಡ ಅಭಿಜಿತ್ ಅದನ್ನು ತೋರಿಸಿದರು. ಅದರೊಳಗಿನ ಟಿಕೆಟ್ ಮೊತ್ತವನ್ನು ನೋಡಿ ನನಗೆ ಆಶ್ಚರ್ಯವಾಗಿತ್ತು. ಮಧ್ಯಾಹ್ನವಾದ್ದರಿಂದ ಲೋಕಲ್ ರೈಲು ಕಾಲಿಯಿತ್ತು. ಅರ್ಧಗಂಟೆಯಲ್ಲಿ ಡಂಡಂ ನಿಲ್ದಾಣ ತಲುಪಿದೆವು. ಮತ್ತು ಅಲ್ಲಿಂದ ಮತ್ತೊಂದು ರೈಲು ನೇರವಾಗಿ ಕೊಲ್ಕತ್ತ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ. ಅದರ ಟಿಕೆಟ್‍ನ ಮೊತ್ತವನ್ನು ನೋಡಿದಾಗಲೂ ಅದೇ ಆಶ್ಚರ್ಯವಾಗಿತ್ತು. ಮುಂದೇ ಹದಿನೈದೇ ನಿಮಿಷದಲ್ಲಿ ನಾವು ಪ್ರಯಾಣಿಸುತ್ತಿರುವ ಲೋಕಲ್ ರೈಲು ವಿಮಾನ ನಿಲ್ದಾಣದ ಕೌಂಪೌಂಡಿನ ಪಕ್ಕದಲ್ಲಿಯೇ ನಮ್ಮನ್ನು ಇಳಿಸಿತ್ತು. ಕೇವಲು ಮುಕ್ಕಾಲು ಗಂಟೆಯ ಅವಧಿಯಲ್ಲಿ ಭರಕ್‍ಪುರದಿಂದ ಐದು ರೂಪಾಯಿ ಟಿಕೆಟಿನಲ್ಲಿ ಇಪ್ಪತ್ತೆರಡು ಕಿಲೋಮೀಟರ್ ದೂರದ ಒಂದು ನಿಲ್ದಾಣ, ಅಲ್ಲಿಂದ್ ಮುಂದಕ್ಕೆ ನಾಲ್ಕು ರುಪಾಯಿ ಟಿಕೆಟ್‍ನಲ್ಲಿ ಹತ್ತು ಕಿಲೋಮೀಟರ್ ದೂರದಲ್ಲಿರುವ ಡಂಡಂ ವಿಮಾನ ನಿಲ್ದಾಣವನ್ನು ತಲುಪಿದ್ದೆವು.  ಬೆಂಗಳೂರಿನಲ್ಲಿ ನಮ್ಮ ಮನೆಯಿಂದ ಬೆಂಗಳೂರು ವಿಮಾನ ನಿಲ್ದಾಣ ಇಷ್ಟೇ ದೂರದಲ್ಲಿದೆ. ಮಲ್ಲೇಶ್ವರಂ ಅಥವ ಮೆಜೆಸ್ಟಿಕ್‍ನಿಂದ ಮುವತ್ತೆರಡು ಕಿಲೋಮೀಟರ್ ದೂರದ ವಿಮಾನ ನಿಲ್ದಾಣ ತಲುಪಲು ನಮ್ಮ ಬಿಎಂಟಿಸಿಯ ವಾಯುವಜ್ರದಲ್ಲಿ ಇನ್ನೂರು ರೂಪಾಯಿಗಳನ್ನು ಮನಸ್ಸಿಲ್ಲದ ಮನಸ್ಸಿನಿಂದ ಕೊಡಬೇಕು. ಆದ್ರೆ ಕೊಲ್ಕತ್ತದಲ್ಲಿ ಇಷ್ಟೇ ಮುವತ್ತೆರಡು ಕಿಲೋ ಮೀಟರ್ ದೂರದ ವಿಮಾನ ನಿಲ್ದಾಣ ತಲುಪಲು ಕೇವಲ ಒಂಬತ್ತು ರೂಪಾಯಿ ಸಾಕು! ಬೆಂಗಳೂರಿನಲ್ಲಿ ಇನ್ನೂರು ರೂಪಾಯಿಗಳನ್ನು ಕೊಟ್ಟರೂ ಟ್ರಾಫಿಕ್ ಜಾಮ್‍ನಲ್ಲಿ ಸಿಕ್ಕಿಕೊಳ್ಳುವ ಭಯದಿಂದಾಗಿ ಮೂರು ತಾಸು ಮೊದಲೇ ಮನೆ ಬಿಡಬೇಕು. ಇಲ್ಲಿ ಮುವತ್ತು ಕಿಲೋಮೀಟರ್ ದೂರದ ವಿಮಾನ ನಿಲ್ದಾಣ ತಲುಪಲು ಒಂದುವರೆ ತಾಸು ಮೊದಲು ಮನೆಯನ್ನು ಬಿಟ್ಟರೆ ಸಾಕಾಗುತ್ತದೆ. ಅಲ್ಲಿ ನಲವತ್ತು ಕಿಲೋಮೀಟರ್ ದೂರದ ಪ್ರತಿನಿತ್ಯದ ಓಡಾಟಕ್ಕೆ ತಿಂಗಳಿಗೆ ನೂರೈವತ್ತರಿಂದ ಇನ್ನೂರು ರೂಪಾಯಿ ಪಾಸ್ ತೆಗೆದುಕೊಂಡರೆ ಸಾಕು ದಿನದಲ್ಲಿ ಎಷ್ಟು ಸಲ ಬೇಕಾದರೂ ಎಲ್ಲಿಗೆ ಬೇಕಾದರೂ ಲೋಕಲ್ ರೈಲಿನಲ್ಲಿ ಪ್ರಯಾಣಿಸಬಹುದು.  ನಮ್ಮ ಬೆಂಗಳೂರಿನಲ್ಲಿ ಲೋಕಲ್ ರೈಲು ಸೌಕರ್ಯವಿಲ್ಲ. ಇರುವ ಬಿಎಂಟಿಸಿಯಲ್ಲಿ ಒಂದು ದಿನಕ್ಕೆ ಓಡಾಡಲು ನಲವತ್ತೈದು ರೂಪಾಯಿಗಳ ಟಿಕೆಟ್ ಪಡೆಯಬೇಕು. ಇನ್ನೂ ಪುಸ್ಪಕ್, ಓಲ್ವೋ, ಇನ್ನಿತರ ಬಸ್ಸುಗಳಲ್ಲಿ ಓಡಾಡಬೇಕಾದರೆ ತಿಂಗಳಿಗೆ ಸಾವಿರಾರು ರೂಪಾಯಿಗಳಾದರೂ ಬೇಕು. ನೋಡಿದ್ರಾ ನಮ್ಮ ಬೆಂಗಳೂರು ಈ ವಿಚಾರದಲ್ಲಿ ಇಷ್ಟೊಂದು ಮುಂದುವರಿದಿದೆ ಎನ್ನಲು ನನಗೆ ನಾಚಿಕೆಯಾಗುತ್ತದೆ.

                   ಕೊಲ್ಕತ್ತದ ವಿಮಾನ ನಿಲ್ದಾಣದಲ್ಲಿ  ವಿಮಾನ ಇಳಿಯುವ ಮೊದಲು ಸಿಕ್ಕ ಚಿತ್ರವಿದ


   ಒಟ್ಟಾರೆಯಾಗಿ ಕೊಲ್ಕತ್ತದಲ್ಲಿ ನನಗಿಷ್ಟವಾದ ಸಂಗತಿಗಳೆಂದರೆ, ಅಲ್ಲಿನ ಜನರ ಕಷ್ಟ ಸಹಿಷ್ಣುತೆ, ಸೈಕಲ್ ರಿಕ್ಷಾ, ಲೋಕಲ್ ರೈಲು, ಹಣವೇ  ಮುಖ್ಯವಲ್ಲವೆಂದು ಬದುಕುವ ಜನರು, ಕಲಾತ್ಮಕ ಫೋಟೊಗ್ರಫಿಯಲ್ಲಿ ಅವರು ಸಾಧಿಸಿರುವ ಸಾಧನೆ, ರಸಗುಲ್ಲ, ಜಾಮೂನು, ಕೊನೆಯಲ್ಲಿ ನಮ್ಮ ಕನ್ನಡ ನಾಡಿನವರಾಗಿ ಪಶ್ಚಿಮ ಬಂಗಾಲದ ಜಲಪೈಗುರಿಯಲ್ಲಿ ಕೆಲಸ ಮಾಡುತ್ತಿರುವ ಸೋದರ ಡಾ.ಎಂ.ನಟರಾಜ್ ಮತ್ತು ಕೊಲ್ಕತ್ತದ ಐಐಎಂ ನಲ್ಲಿ ಓದುತ್ತಿರುವ  ದಿನಪತ್ರಿಕೆ ಹಾಕುತ್ತಲೇ ಆ ಮಟ್ಟಕ್ಕೆ ಮೇಲೆ ಬಂದ ನಮ್ಮ ಹುಡುಗ ಶಿವಪ್ರಕಾಶ್‍, ಇಬ್ಬರನ್ನು ಬೇಟಿಯಾಗಬೇಕೆನ್ನುವ ಆಸೆಯಿತ್ತು. ಆದರೆ ನನಗಿರುವ ಟೈಟ್ ಶೆಡ್ಯೂಲ್‍ನಿಂದಾಗಿ ಆಗದಿದ್ದರೂ ಅಲ್ಲಿ ಅವರೊಂದಿಗೆ ಫೋನಿನಲ್ಲಿ ಮಾತಾಡಿದ್ದು ಕೂಡ ಸಂತೋಷವಾಗಿತ್ತು.  ಇಷ್ಟೆಲ್ಲಾ ಇಷ್ಟಗಳ ನಡುವೆ ನನ್ನ ದೇಹಸ್ಥಿತಿ ರಿಜೆಕ್ಟ್ ಮಾಡಿದ ಸಾಸುವೆ ಎಣ್ಣೆ ಮಾತ್ರ ನನಗೆ ಕಷ್ಟದ ಸಂಗತಿಯಾಗಿತ್ತು.

    ರೈಲು ಇಳಿದು ನಿದಾನವಾಗಿ ವಿಮಾನ ನಿಲ್ದಾಣದ ಕಡೆಗೆ ನಾನು ಮತ್ತು ಅಭಿಜಿತ್ ಹೆಜ್ಜೆ ಹಾಕುತ್ತಿದ್ದರೆ ನಮ್ಮ ಹೆಜ್ಜೆಗಳು ಭಾರವಾಗುತ್ತಿವೆಯೇನೋ ಅನ್ನಿಸತೊಡಗಿತ್ತು. ಇನ್ನೇನು ಕೆಲವೇ ನಿಮಿಷಗಳಲ್ಲಿ ನಾವು ಒಬ್ಬರೊನ್ನಬ್ಬರು ಬಿಟ್ಟು ತಮ್ಮ ಸ್ಥಳಗಳಿಗೆ ಹೋಗಿಬಿಡುತ್ತೇವೆ, ಮೊದಲ ದಿನ  ಇದೇ ವಿಮಾನ ನಿಲ್ದಾಣದಲ್ಲಿ ನನ್ನನ್ನು ಸ್ವಾಗತಿಸಿ ಕರೆದುಕೊಂಡು ಹೋದ ಇದೇ ಅಭಿಜಿತ್ ಡೇ ಎನ್ನುವ ಒಬ್ಬ ಛಾಯಾಗ್ರಾಹಕ ಎರಡು ದಿನ ಮನೆಯಲ್ಲಿ ನನ್ನ ಮಟ್ಟಿಗೆ ಅದ್ಬುತವೆನಿಸುವ ಅತಿಥಿ ಸತ್ಕಾರದ ಜೊತೆಗೆ ಅಣ್ಣನಂತೆ ಪ್ರೀತಿ ವಾತ್ಸಲ್ಯ ಹಿರಿಯ ಛಾಯಾಗ್ರಾಹಕ ಗೆಳೆಯನಂತೆ ಫೋಟೊ ವಿಚಾರವಾಗಿ ನನಗೆ ನೀಡಿದ ಸಲಹೆ ಮತ್ತು ಟಿಫ್ಸ್‍ಗಳು......ಈಗ ಮತ್ತೆ ನನ್ನನ್ನು ಬೀಳ್ಕೊಡಲು ವಿಮಾನ ನಿಲ್ದಾಣದಲ್ಲಿ ನನ್ನೊಂದಿಗೆ ಹೆಜ್ಜೆ ಹಾಕುತ್ತಿದ್ದಾರೆ. ನಾಲ್ಕು ದಿನದಲ್ಲಿ ಬದುಕು, ಬವಣೆ, ಕೆಲಸ, ಮನೆ, ಹೆಂಡತಿ, ಉದ್ಯೋಗ, ಫೋಟೊಗ್ರಫಿ ಇತ್ಯಾದಿ ವಿಚಾರವಾಗಿ ಬಿಡುವಿಲ್ಲದಂತೆ ಮಾತಾಡಿದ್ದೆವು....ಈಗ ಕೊನೆಯ ಕ್ಷಣಗಳಲ್ಲಿ ಇಬ್ಬರ ನಡುವೆ ನಮಗೆ ಅರಿಯದಂತ ವಿವರಿಸಲಾಗದಂತಹ ಭಾವುಕತೆ ತುಂಬಿಕೊಂಡು ಮಾತುಗಳಿಗೆ ಜಾಗವಿಲ್ಲವಾಗಿತ್ತು.

    "ಶಿವುಜೀ ನೀವು ಅನುಮತಿಯನ್ನು ಕೊಟ್ಟರೆ ನಾನು ಹೊರಡುತ್ತೇನೆ" ಎಂದು ನನ್ನನ್ನೇ ನೋಡುತ್ತಾ ಅಭಿಜಿತ್ ಹೇಳಿದಾಗ ಅವರ ಕಣ್ಣುಗಳಲ್ಲಿ ಕಂಡರೂ ಕಾಣದ ಹಾಗೆ ಹನಿಗೂಡುತ್ತಿತ್ತು.  ಅದನ್ನೂ ನೋಡುತ್ತಿದ್ದ ನನಗೂ ಕೂಡ ಕಣ್ಣುಗಳು ತುಂಬಿಕೊಂಡಂತಾಗಿ ಇಬ್ಬರೂ ಗಟ್ಟಿಯಾಗಿ ಅಪ್ಫಿಕೊಂಡೆವು. ಕೆಲವು ದಿನಗಳ ಹಿಂದೆ ಯಾವುದೇ ರೀತಿಯಲ್ಲಿ ಸಂಭಂದವಿಲ್ಲದ, ಎರಡೂವರೆ ಸಾವಿರ ಕಿಲೋಮೀಟರ್ ದೂರದಲ್ಲಿ ಇರುವ ವ್ಯಕ್ತಿಯೊಬ್ಬ ನಾಲ್ಕೇ ದಿನಕ್ಕೆ ನನಗೆ ಗೆಳೆಯನಾಗಿ, ಅಣ್ಣನಾಗಿ, ಆತ್ಮೀಯನಾಗಿ ಹಿತೈಸಿಯಾಗಿ, ಹೀಗೆ ಬೀಳ್ಕೊಡುವುದಿದೆಯಲ್ಲ....

       ಹಾಗೇ ನಿದಾನವಾಗಿ ಸ್ವಲ್ಪ ಸ್ವಲ್ಪ ವೇಗವಾಗಿ ಹೋಗುತ್ತಿರುವ ಅಭಿಜಿತ್‍ರನ್ನು ನೋಡುತ್ತಿದ್ದೆ. ಆತ ಮತ್ತೆ ತಿರುಗಿ ನೋಡದೇ ಹಾಗೆ ಮರೆಯಾಗುತ್ತಿದ್ದಾಗ ನನ್ನ ಕಣ್ಣಂಚಿಗೆ ಬಂದ ಹನಿಯನ್ನು ತಡೆಯಲಾಗಲಿಲ್ಲ. 

       ವಿಮಾನ ನಿಲ್ದಾಣದ ವಿಧಿ ವಿಧಾನಗಳನ್ನು ಅರ್ಧಗಂಟೆಯೊಳಗೆ  ಬೆಂಗಳೂರಿಗೆ ಹೊರಡುವ ವಿಮಾನವನ್ನು ಕಾಯುತ್ತ ಕುಳಿತಿದ್ದಾಗ ಫೋನ್ ರಿಂಗಣಿಸಿತ್ತು. "ಶಿವುಜೀ, ಈಗ ನಿಮ್ಮಿಂದ ಬೇಗ ಹೊರಟು ಬಂದೆನೆಂದು ಬೇಸರಿಸಬೇಡಿ,, ನಾನು ಸ್ವಲ್ಪ ಹೆಚ್ಚೇ ಭಾವುಕ. ಇನ್ನು ಸ್ವಲ್ಪ ಹೆಚ್ಚೇ ಇದ್ದಿದ್ದರೆ ನನ್ನೊಳಗಿನ ಭಾವುಕತೆ ತಡೆದುಕೊಳ್ಳಲಾಗದೆ ಕಣ್ತುಂಬಿಬಿಡುತ್ತಿತ್ತು.  ಅದನ್ನು ತಪ್ಪಿಸಿಕೊಳ್ಳಲಿಕ್ಕಾಗಿ ನಿಮ್ಮಿಂದ ಹೊರಟು ಹಿಂದೆ ತಿರುಗಿ ನೋಡದೇ ಹೊರಟು ಬಂದೆನಾದರೂ ಮನಸ್ಸಿಗೆ ಸಮಧಾನವಾಗಲಿಲ್ಲ.  ವಿಮಾನ ನಿಲ್ದಾಣದಲ್ಲಿ ನಿಮ್ಮೆ ಎಲ್ಲಾ ಕ್ಲಿಯರೆನ್ಸ್ ಸರಿಯಾಗಿ ಆಯ್ತಲ್ಲ...ಬೆಂಗಳೂರು ತಲುಪಿದ ತಕ್ಷಣ ಫೋನ್ ಮಾಡುವುದು ಮರೆಯಬೇಡಿ...ಬೈ...ಬೈ..."ಅಭಿಜಿತ್ ಮತ್ತೆ ಫೋನ್ ಮಾಡಿದಾಗ ನನಗೆ ಏನೆಂದು ಉತ್ತರಿಸಬೇಕೆಂದು ಗೊತ್ತಾಗಲಿಲ್ಲ. ರನ್‍ವೇನಲ್ಲಿ ಬೆಂಗಳೂರಿಗೆ ಹೊರಡುವ ವಿಮಾನ ಸಿದ್ಧವಾಗಿತ್ತು.

 ವಿಮಾನ ಮೇಲೇರಿದ ಕೆಲವೆ ಕ್ಷಣಗಳಲ್ಲಿ ಕೊಲ್ಕತ್ತದ ಪಕ್ಷಿನೋಟ ಕಂಡಿದ್ದ   ಹೀಗ

 

                    ಕೊಲ್ಕತ್ತದ ಲೋಕಲ್ ರೈಲು [ವೃತ್ತಕಾರದ ಒಳಗೆ] ವಿಮಾನದಿಂದ ನನ್ನ ಕ್ಯಾಮೆರಕ್ಕೆ ಸೆರೆ ಸಿಕ್ಕಿದ್ದು ಹೀಗೆ..

                              

ವಿಮಾನ ಮೇಲೇರಿದ ಮೇಲೆ ಕಂಡ ಕೊಲ್ಕತ್ತದ ಮತ್ತೊಂದು ಪಕ್ಷಿನೋಟ

                ಬಂಗಾಲ ಕೊಲ್ಲಿ ಸಮುದ್ರ ಮೇಲೆ ಹತ್ತಿಯಂತ ಮೋಡಗಳು..ವಿಮಾನದಿಂದ ಒಂದು ಪಕ್ಷಿನೋಟ

                         ಮತ್ತೊಂದು ಪಕ್ಷಿನೋಟ

                       ಬೆಂಗಳೂರಿನಲ್ಲಿ ವಿಮಾನ ಇಳಿಯುವ ಹತ್ತು ನಿಮಿಷದ ಮೊದಲು

ಬೆಂಗಳೂರಿನಲ್ಲಿ ವಿಮಾನ ಇಳಿಯುವ ಐದು ನಿಮಿಷದ ಮೊದಲು                              

ಚಿತ್ರಗಳು ಮತ್ತು ಲೇಖನ:

ಶಿವು.ಕೆ.

ಬೆಂಗಳೂರು

Sunday, September 29, 2013

ಕೊಲ್ಕತ್ತ-ದಿಘಾ ನಾಲ್ಕು ದಿನದ ಪ್ರವಾಸ (ಭಾಗ 2)

[ಮೊದಲ ಭಾಗಕ್ಕಾಗಿ ಈ ಲಿಂಕ್ ಕ್ಲಿಕ್ಕಿಸಿ.]
.http://chaayakannadi.blogspot.in/2013/09/blog-post.html

    ಮೊದಲ ಭಾರಿಗೆ ಅಲ್ಲಿನ ಲೋಕಲ್ ರೈಲು ನಿಲ್ದಾಣದೊಳಗೆ ಕಾಲಿಟ್ಟಿದ್ದೆ. ಎಷ್ಟೊಂದು ಜನ ಅಂತೀರಿ! ನೂರಾರು ಸಾವಿರಾರು ಜನರು ತಮ್ಮ ಕೆಲಸ ಕಾರ್ಯಗಳಿಗೆ ಸಿದ್ದರಾಗಿ ಬರುವ ರೈಲುಗಾಡಿಗಳಿಗೆ ಕಾಯುತ್ತಿದ್ದರು. ಆ ಕ್ಷಣದಲ್ಲಿ ಮಲ್ಲೇಶ್ವರಂ ರೈಲು ನಿಲ್ದಾಣ ನೆನಪಾಯ್ತು. ಸದಾ ಶಾಂತವಾಗಿರುವ ನಮ್ಮ ಮಲ್ಲೇಶ್ವರಂ ರೈಲು ನಿಲ್ದಾಣವೆಲ್ಲಿ! ಗಿಜಿಗುಟ್ಟುವ ಈ ನಿಲ್ದಾಣವೆಲ್ಲಿ! ಖಂಡಿತ ಹೋಲಿಸಕೊಳ್ಳಬಾರದು ಸುಮ್ಮನೆ ಇಲ್ಲಿನ ದೃಶ್ಯಗಳನ್ನು ಕಣ್ತುಂಬಿಕೊಳ್ಳುತ್ತಾ ಆಸ್ವಾದಿಸಬೇಕೆಂದುಕೊಂಡು ಅಭಿಜಿತ್ ಡೆ ಮತ್ತು ಇತರರೊಂದಿಗೆ ನಾನು ರೈಲು ನಿಲ್ದಾಣದ ಪ್ಲಾಟ್ ಫಾರಂ ಕಡೆಗೆ ನಡೆದೆ. ಆಗಲೇ ಒಂದು ರೈಲು ಬಂದು ನಿಂತಿತ್ತು. ನಾನು ಈ ರೈಲು ಹತ್ತೋಣವೇ ಎಂದು ಕೇಳಿದರೆ ಅಭಿಜಿತ್ ಬೇಡ ತುಂಬಾ ರಷ್ ಇದೆ. ಎಂದರು. ನಾನು ಒಳಗೆ ಇಣುಕಿ ನೋಡಿದೆ. ಆಶ್ಚರ್ಯವಾಯ್ತು. ಒಂದೊಂದು ಬೋಗಿಯಲ್ಲೂ ಕಡಿಮೆಯೆಂದರೆ ಮುನ್ನೂರಕ್ಕೂ ಹೆಚ್ಚು ಪ್ರಯಾಣಿಕರಿದ್ದರು. ನಿಲ್ಲಲು ಜಾಗವಿಲ್ಲದಷ್ಟು ತುಂಬಿಹೋಗಿತ್ತು. "ಶಿವು, ಚಿಂತಿಸಬೇಡಿ, ಇದು ಹೊರಟ ನಂತರ ಹತ್ತು ನಿಮಿಷಕ್ಕೆ ಮತ್ತೊಂದು ರೈಲು ಬರುತ್ತದೆ ಅದರಲ್ಲಿ ಹೋಗೋಣ ಎಂದರು. ಆ ರೈಲು ತುಂಬಿದ ಬಸುರಿಯಂತೆ ಸಾವಿರಾರು ಪ್ರಯಾಣಿಕರನ್ನು ಹೊತ್ತು ಹೊರಟಿತು. ನನ್ನಪಕ್ಕದಲ್ಲಿಯೇ ಒಬ್ಬ ಶೂ ಪಾಲೀಶ್ ಮಾಡುವವ ಒಬ್ಬ ಅಧಿಕಾರಿಗೆ ಪಾಲೀಶ್ ಮಾಡುತ್ತಿದ್ದ, ಪಕ್ಕದಲ್ಲಿ ಒಬ್ಬ ಹಣ್ಣು ಮಾರುತ್ತಿದ್ದ, ದೂರದಲ್ಲಿ ಕಾಲೇಜು ಹುಡುಗಿ ತನ್ನ ಮೊಬೈಲ್ ಫೋನಿನಲ್ಲಿ ಮಗ್ನನಾಗಿದ್ದಳು. ಪಕ್ಕದಲ್ಲಿಯೇ ವಯಸ್ಸಾದವರೊಬ್ಬರು ಕನ್ನಡ ಸರಿಮಾಡಿಕೊಳ್ಳುತ್ತಿದ್ದರು. ಹೀಗೆ ತರಾವರಿ ದೃಶ್ಯಗಳನ್ನು ನೋಡುತ್ತಾ ಅವುಗಳೆಲ್ಲದರ ಫೋಟೊ ತೆಗೆಯುತ್ತಿದ್ದಂತೆ ದೂರದಲ್ಲಿ ಮತ್ತೊಂದು ರೈಲು ಹಾರ್ನ್ ಮಾಡುತ್ತ ಬರುತ್ತಿತ್ತು. ’ಶಿವು, ನಿಮ್ಮ ಕ್ಯಾಮೆರ ಆಫ್ ಮಾಡಿ ನಿಮ್ಮ ಲಗ್ಗೇಜು ನನ್ನ ಕೈಲಿ ಕೊಡಿ, ಆ ರೈಲು ನಿಲ್ಲುತ್ತಿದ್ದಂತೆ ಮೊದಲು ಒಳಗೆ ಹೋಗಿ ಸೀಟ್ ಹಿಡಿದು ಕುಳಿತುಕೊಳ್ಳಿ, ಒಂದು ಕ್ಷಣ ತಡವಾದರೂ ನಿಂತುಕೊಂಡೇ ಹೋಗಬೇಕು ಎಂದರು. ಅವರ ಮಾತಿನಂತೆ ನಾನು ಸಿದ್ದನಾದೆ. ಆ ರೈಲು ನಿಲ್ಲುತ್ತಿದ್ದಂತೆ ಒಂದೇ ಸಮನೆ ಜನ ನುಗ್ಗಿದರು. ನಾನು ಕೂಡ ಅವರೊಂದಿಗೆ ನುಗ್ಗಿ ಸೀಟ್ ಗಿಟ್ಟಿಸಿದ್ದೆ. ಆಷ್ಟರಲ್ಲಿ ನಮ್ಮ ಗೆಳೆಯರಲ್ಲೆರೂ ಬಂದು ಸೀಟು ಹಿಡಿದರು. ಸೀಟು ಸಿಕ್ಕಿತ್ತಲ್ಲ ಎಂದು ಖುಷಿ ಸ್ವಲ್ಪ ಹೊತ್ತಿಗೆ ಮರೆಯಾಯ್ತು. ಆ ಬೋಗಿಯೊಳಗೆ ಜನರು ಇನ್ನೂ ಬರುತ್ತಲೇ ಇದ್ದಾರೆ! ಕೊನೆಗೆ ಎರಡು ಸೀಟುಗಳ ನಡುವೆಯೂ ಹತ್ತಾರು ಜನರು ನಿಂತು ನಮಗೆ ಒಂದು ಕ್ಷಣವೂ ಅಲುಗಾಡಲು ಸಾಧ್ಯವಾಗದಂತೆ ಆಗಿಹೋಗಿತ್ತು. ಬಹುಶಃ ಈ ರೈಲುಗಾಡಿ ಹತ್ತಾರು ಬೋಗಿಗಳಲ್ಲಿ ಅದೆಷ್ಟು ಸಾವಿರಜನರಿರಬಹುದು ಎಂದುಕೊಂಡೆ. ಮೊದಲ ಭಾರಿಗೆ ಕೊಲ್ಕತ್ತದ ಲೋಕಲ್ ರೈಲಿನ ಅನುಭವವಾಗಿತ್ತು. ಕೊಲ್ಕತ್ತದಲ್ಲಿ ಪ್ರತಿಯೊಂದು ಸ್ಥಳಕ್ಕೂ ಲೋಕಲ್ ರೈಲು ಇದೆ. ಬೆಳಗಿನ ಮತ್ತು ಸಂಜೆ ಹೊತ್ತಿನಲ್ಲಿ ಐದು ಮತ್ತು ಹತ್ತು ನಿಮಿಷಕ್ಕೊಂದು ರೈಲು ಬರುತ್ತದೆ. ಅಷ್ಟು ರೈಲುಗಳಿದ್ದರೂ ಎಲ್ಲವೂ ತುಂಬಿಹೋಗುತ್ತವೆ. ಮಧ್ಯಾಹ್ನದ ಸಮಯದಲ್ಲಿ ಸ್ವಲ್ಪ ಕಡಿಮೆ ಇರುತ್ತದೆ. ಈ ರೈಲು ಪ್ರಯಾಣದ ದರವೂ ತುಂಬಾ ಕಡಿಮೆ ಇಪ್ಪತ್ತು-ಮುವತ್ತು ಕಿಲೋಮೀಟರ್ ದೂರಕ್ಕೆ ಕೇವಲ ಐದು-ಆರು ರೂಪಾಯಿಗಳು ಮಾತ್ರ. ಇಲ್ಲಿನ ಲಕ್ಷಾಂತರ ಜನರು ತಮ್ಮ ಉದ್ಯೋಗದ ಸ್ಥಳಗಳಿಗೆ ತಲುಪಲು ಈ ರೈಲುಗಳನ್ನೇ ಅವಲಂಬಿಸಿದ್ದಾರೆ. ನಮ್ಮ ರೈಲು ಹೊರಟಿತಲ್ಲ, ಕಿಟಕಿಬಳಿ ಸೀಟುಹಿಡಿದಿದ್ದ ನಾನು ಅಲ್ಲಿನ ದೃಶ್ಯಗಳನ್ನು ವಿಡಿಯೋ ಮತ್ತು ಫೋಟೊಗಳ ಮೂಲಕ ಸೆರೆಹಿಡಿಯುತ್ತಿದ್ದೆ. ಅಲ್ಲಿ ರೈಲು ಕಂಬಿಗಳ ನಡುವೆಯೇ ಬಟ್ಟೆಗಳನ್ನು ಒಣಗಿಸಲು ಹಾಕಿರುತ್ತಾರೆ ಅಕ್ಕಪಕ್ಕದ ಮನೆಯವರು. ಅವೆಲ್ಲವನ್ನು ಫೋಟೊ ಸೆರೆಹಿಡಿಯುತ್ತಾ, ಒಂದಾದ ಮೇಲೆ ಮೇಲೆ ಒಂದು ನಿಲ್ದಾಣಗಳು ಕೊನೆಗೆ ನಾವು ಇಳಿಯುವ ಸೆಲ್ಡಾ ರೈಲು ನಿಲ್ದಾಣ ಬಂತು. ಅಲ್ಲಿಂದ ಹೊರಬರುತ್ತಿದ್ದಂತೆ ಹೊರಗೆ ಮಳೆ ಸುರುವಾಗಿತ್ತು. ಪಕ್ಕದಲ್ಲಿಯೇ ಬಸ್ ನಿಲ್ದಾಣ ಅಲ್ಲಿಂದ ನಮ್ಮ ಪ್ರಯಾಣ ಹೌರ ರೈಲು ನಿಲ್ದಾಣದ ಕಡೆಗೆ ಅಲ್ಲಿನ ಲೋಕಲ್ ಬಸ್ ಹತ್ತಿದೆವು. ಮಳೆ ಜೋರಾಯ್ತು. ಕಿಟಕಿಯಲ್ಲಿ ಕಂಡ ಜೋರು ಮಳೆ ಅದರ ನಡುವೆ ಓಡಾಡುವ ಜನಗಳು, ಅಲ್ಲಲ್ಲಿ ಕುಳಿತು ಬಿಸಿ ಟೀ ಕುಡಿಯುವ ಜನ, ಮಳೆ ಜೋರಾಗಿ ರಸ್ತೆಗಳಲ್ಲಿ ನೀರು ಹರಿಯತೊಡಗಿತ್ತು. ನಾನು ಅವುಗಳ ಚಿತ್ರಗಳನ್ನು ಸೆರೆಯಿಡಿಯುತ್ತಿದ್ದಾಗಲೇ "ಶಿವು, ಮುಂದೆ ಹೌರ ಬ್ರಿಡ್ಜ್ ಬರುತ್ತದೆ. ಅದನ್ನು ವಿಡಿಯೋ ಮಾಡಿ" ಎಂದರು ಅಭಿಜಿತ್. ಮೊದಲ ಬಾರಿಗೆ ಎಂಬತ್ತು ವರ್ಷಗಳಷ್ಟು ಹಳೆಯದಾದ ಹೌರಾ ಬ್ರಿಡ್ಜ್‍ನೊಳಗೆ ಪ್ರಯಾಣಿಸಿದಾಗ ತುಂಬಾ ಖುಷಿಯಾಗಿತ್ತು. ಮುಂದೆ ಭಾರತದಲ್ಲಿ ಬಹುದೊಡ್ಡದೆನ್ನಬಹುದಾಗ ಹೌರ ರೈಲು ನಿಲ್ದಾಣ ತಲುಪಿದೆವು.
                             
   ಅಲ್ಲಿ ನಮಗಾಗಿ ಭಾರತದಲ್ಲಿಯೇ ದೊಡ್ಡ ಹೆಸರು ಮಾಡಿರುವ ಮಾಸ್ಟರ್ ಅಫ್ ಫೋಟೊಗ್ರಫಿ ಮನ್ನಣೆ ಪಡೆದಿರುವ ಬಿ.ಕೆ ಸಿನ್ಹ ಸರ್, ಸುಶಾಂತ ಬ್ಯಾನರ್ಜಿ, ಎಕ್ಸಲೆನ್ಸಿ ಅಫ್ ಫೋಟೊಗ್ರಫಿ ಮನ್ನಣೆ ಪಡೆದಿರುವ ಅಮಿತಾಬ್ ಸಿಲ್ ಸರ್, ಇನ್ನೂ ಅನೇಕ ದೊಡ್ಡ ಫೋಟೊಗ್ರಫಿ ಸಾಧಕರನ್ನು ಬೇಟಿಯಾಗಿದ್ದು ನನ್ನ ಬದುಕಿನ ಬಹುದೊಡ್ಡ ಮತ್ತು ಮರೆಯಲಾಗದ ಅನುಭವ. ಅವರೆಲ್ಲರ ಜೊತೆಯಲ್ಲಿ ನಾನು ಕೂಡ ಅಂತರರಾಷ್ಟ್ರೀಯ ಫೋಟೊಗ್ರಫಿ ಸ್ಪರ್ಧೆಯಲ್ಲಿ ಜ್ಯೂರಿಯಾಗಿದ್ದೇನೆನ್ನುವ ವಿಚಾರ ಆ ಕ್ಷಣದಲ್ಲಿ ಸ್ವಲ್ಪ ಸಂಕೋಚ ಮತ್ತು ಮುಜುಗರವುಂಟುಮಾಡಿತ್ತು.  ಆದ್ರೆ ಸ್ವಲ್ಪ ಹೊತ್ತಿಗೆ ಅವರೆಲ್ಲರೂ ನನಗೆ ತುಂಬಾ ಆತ್ಮೀಯರಾಗಿಬಿಟ್ಟಿದ್ದರಿಂದ ಮುಜುಗರ ಮಾಯವಾಯ್ತು.  ನಮಗಾಗಿ ದುರಂತೋ ಎಕ್ಸ್‍ಪ್ರೆಸ್ ರೈಲು ದಿಘಾ ಗೆ ಹೊರಡಲು ಕಾಯುತ್ತಿತ್ತು. ನಮಗಾಗಿ ಕಾಯ್ದಿರಿಸಿದ್ದ ಸೀಟುಗಳಲ್ಲಿ ಆಸೀನರಾದೆವು. ಲೋಕಲ್ ರೈಲಿನಲ್ಲಿ ಬಂದ ನನಗೆ ಈ ರೈಲು ಸಂಫೂರ್ಣ ವಿಭಿನ್ನವೆನಿಸಿತ್ತು. ನೂರತೊಂಬತ್ತು ಕಿಲೋಮೀಟರ್ ದೂರದ ಪ್ರಯಾಣದಲ್ಲಿ ಎಲ್ಲಿಯೂ ನಿಲ್ಲದೇ ಹೋಗುವ ಈ ರೈಲಿನಲ್ಲಿ ನಾವು ಕುಳಿತ ಜಾಗಕ್ಕೆ ಊಟ ತಿಂಡಿ ನೀರು ಇತ್ಯಾದಿ ಎಲ್ಲ ಸೇವೆಗಳನ್ನು ನೀಡುತ್ತಾರೆ ಈ ರೈಲಿನ ಪರಿಚಾರಕರು. ನನ್ನ ಪಕ್ಕದಲ್ಲಿ ದೇಬಸಿಸ್ ಬುನಿಯ ಕುಳಿತಿದ್ದರು. ಅವರೊಂದಿಗೆ ನಾನು ಬೆಂಗಳೂರು ಮತ್ತು ಕರ್ನಾಟಕದ ಪರಿಚಯ ಬೆಳವಣಿಗೆ, ರಾಜಕೀಯ ಹೀಗೆ ಇತ್ಯಾದಿ ವಿಚಾರಗಳನ್ನು ಹಂಚಿಕೊಂಡೆ.  ಅವರು ಬಂಗಾಲ ಮತ್ತು ಕೊಲ್ಕತ್ತ ನಗರದ ಇಂದಿನ ಪರಿಸ್ಥಿತಿ ಮತ್ತು ರಾಜಕೀಯ ವ್ಯವಸ್ಥೆ ಇತ್ಯಾದಿಗಳನ್ನು ಹಂಚಿಕೊಂಡರು. ಅಷ್ಟರಲ್ಲಿ ನಮ್ಮ ರೈಲಿಗೆ ಮೂವರು ಬಂದೂಕುಧಾರಿ ಗಾರ್ಡುಗಳು ಹತ್ತಿದರು. ನಾವು ಪಯಣಿಸುವ ಪೂರ್ವ ಮಿಡ್ನಪುರ ಜಿಲ್ಲೆಯಲ್ಲಿ ನಕ್ಸಲಿಯರ ಕಾಟವಿದೆ. ಅದಕ್ಕಾಗಿ ಈ ಸೆಕ್ಯುರಿಟಿ ಎಂದರು. ಮಧ್ಯಾಹ್ನ ಎರಡುವರೆಗೆ ಗಂಟೆಗೆ ನಾವು ಸಮುದ್ರ ಕಿನಾರೆಯ ದಿಘಾ ಪಟ್ಟಣವನ್ನು ತಲುಪಿದೆವು. 

   ದಿಘಾ ಒಂದು ಸಮುದ್ರ ಕಿನಾರೆಗೆ ಅಂಟಿಕೊಂಡಿರುವ ಪಶ್ಚಿಮ ಬಂಗಾಲದ ಪೂರ್ವ ಮಿಡ್ನಪುರ್‍ ಜಿಲ್ಲೆಯ ಒಂದು ಪುಟ್ಟ ಪಟ್ಟಣ. ಮಂಗಳೂರು ಉಡುಪಿಯಂತೆ ಸಮುದ್ರ ಮತ್ತು ಬೀಚುಗಳಿದ್ದರೂ ಅವುಗಳಷ್ಟು ದೊಡ್ಡ ನಗರವಲ್ಲ...ಬಹುಷಃ ನಮ್ಮ ಕುಂದಾಪುರದಷ್ಟಿರಬಹುದು. ಮೂರು ದಿನ ದಿಘದಲ್ಲಿ ನಡೆಯುವ ಅಂತರರಾಷ್ಟ್ರೀಯ ಫೋಟೊಗ್ರಫಿ ಸ್ಪರ್ಧೆಯ ಪ್ರಮುಖ ವ್ಯವಸ್ಥಾಪಕರಾದ ಸಂತೋಷ್ ಕುಮಾರ್ ಜನ ನಮಗಾಗಿ ಅಲ್ಲಿ ಕಾಯುತ್ತಿದ್ದರು. ನಮಗಾಗಿ ವ್ಯವಸ್ಥೆಯಾಗಿದ್ದ ಹೋಟಲ್ ರೂಮುಗಳಲ್ಲಿ ಸೇರ್‍ಇಕೊಂಡು ಸ್ವಲ್ಪ ವಿಶ್ರಾಂತಿ ತೆಗೆದುಕೊಂಡೆವು. ಸಂಜೆ ನಾಲ್ಕು ಗಂಟೆಯ ಹೊತ್ತಿಗೆ ಫೋಟೊಗ್ರಫಿ ಸ್ಪರ್ಧೆಯ ಜಡ್ಜಿಂಗ್ ಪ್ರಾರಂಭವಾಗಿ ರಾತ್ರಿ ಹತ್ತು ಗಂಟೆ ಮುಗಿಯಿತು. ಮರುದಿನ ಬೆಳಿಗ್ಗೆ ಒಂಬತ್ತು ಗಂಟೆಗೆ ಪ್ರಾರಂಭವಾಗಿ ಮಧ್ಯಾಹ್ನ ಎರಡು ಗಂಟೆಗೆ, ನಂತರ ಲಂಚ್ ಬ್ರೇಕ್ ಹಾಗೂ ಸ್ವಲ್ಪ ವಿಶ್ರಾಂತಿ, ಮತ್ತೆ ನಾಲ್ಕು ಗಂಟೆ ಪ್ರಾರಂಭವಾಗಿ ರಾತ್ರಿ ಒಂಬತ್ತು ಗಂಟೆಗೆ...ಮರುದಿನ ಬೆಳಿಗ್ಗೆ ಒಂಬತ್ತು ಗಂಟೆಯಿಂದ ಒಂದು ಗಂಟೆಯವರೆಗೆ ಹೀಗೆ ಮೂರು ದಿನ ಸತತವಾಗಿ ಮೂರು ವಿಭಾಗಗಳ ಒಂಬತ್ತು ಸಾವಿರ ಫೋಟೊಗಳನ್ನು ನೋಡಿ ಅತ್ಯುತ್ತುಮವಾದವುಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆಯಂತೂ ಅದ್ಬುತವಾದ ಅನುಭವವನ್ನು ನೀಡಿತ್ತು. 

ಪೂರ್ವ ಮಿಡ್ನಪುರದಲ್ಲಿರುವ ಒಂದು ಪುಟ್ಟ ಹಳ್ಳಿಯಲ್ಲಿರುವ ಸಂತೋಷ್ ಕುಮಾರ್ ಜನ ನನ್ನಂತೆ ಮದುವೆ ಫೋಟೊಗ್ರಫಿ ಮತ್ತು ವಿಡಿಯೋಗ್ರಫಿ ಮಾಡುವಂತವರು. ತಕ್ಷಣಕ್ಕೆ ನೋಡಿದರೆ ಒಬ್ಬ ಪಕ್ಕಾ ಹಳ್ಳಿ ಹೈದನಂತೆ ಕಾಣುತ್ತಾರೆ. ಮತ್ತು ಹಾಗೆ ಸರಳವಾಗಿ ಸಹಜವಾಗಿ ಇರುವಂತವರು. ಹೀಗಿದ್ದು ಇವರು ಮಾಡಿರುವ ಫೋಟೊಗ್ರಫಿ ಸಾಧನೆ ನಿಜಕ್ಕೂ ದೊಡ್ಡದು. ದೇಶವಿದೇಶಗಳಲ್ಲಿ ಇವರ ಚಿತ್ರಗಳು ಪ್ರದರ್ಶನವಾಗಿವೆ. ಕಳೆದ ಹದಿನೈದು ವರ್ಷಗಳಿಂದ ನೂರಾರು ರಾಷ್ಟ್ರೀಯ ಮತ್ತು ಅಂತರ ರಾಷ್ಟ್ರೀಯ ಪ್ರಶಸ್ತಿಗಳನ್ನು, ಚಿನ್ನದ ಪದಕಗಳನ್ನು ಗಳಿಸಿರುವ ಇವರು ಪೂರ್ವ ಮಿಡ್ನಪುರದಲ್ಲಿ ಒಂದು ಫೋಟೊಗ್ರಫಿ  ಕ್ಲಬ್ ಸದಸ್ಯರು. ಈ ಕ್ಲಬ್ ಮೂಲಕ ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಸ್ಪರ್ಧೆಗಳನ್ನು ಏರ್ಪಡಿಸಿದ್ದಾರೆ ಮತ್ತು ಯಶಸ್ವಿಯಾಗಿದ್ದಾರೆ. ರಾಷ್ಟ್ರಮಟ್ಟದ್ ಸ್ಪರ್ಧೆ ನಡೆಸುವುದು ತುಂಬಾ ಕಷ್ಟಕರವಾಗಿರುವಾಗ, ಇನ್ನೂ ಅಂತರರಾಷ್ಟ್ರೀಯ ಮಟ್ಟದ ಫೋಟೊಗ್ರಫಿ ಸ್ಪರ್ಧೆ ಅದರಲ್ಲೂ ಫೋಟೊಗ್ರಫಿ ಸರ್ಕ್ಯುಟುಗಳನ್ನು ನಡೆಸುತ್ತಾ ವಿಶ್ವದಾದ್ಯಂತ ಇರುವ ಛಾಯಾಕಲಾವಿದರ ಜೊತೆ ತಾಂತ್ರಿಕವಾಗಿ ಸಂಪರ್ಕವಿಟ್ಟುಕೊಳ್ಳುತ್ತಾ ಮುಂದುವರಿಯುವ ಇಂಥ ಸ್ಪರ್ಧೆಗಳನ್ನು ಆಯೋಜಿಸಲು ನಡೆಸಬೇಕಾದರೆ ನಿಜಕ್ಕೂ ದೊಡ್ಡ ಆತ್ಮಸ್ಥೈರ್ಯವೇ ಬೇಕು. ಅಂತ ಒಂದು ಸವಾಲಿನ ಕೆಲಸವನ್ನು ಅದ್ಬುತವಾಗಿ ನಿರ್ವಹಿಸುವ ಮೂಲಕ ಯಶಸ್ವಿಯಾಗುತ್ತಿದ್ದಾರೆ. ಇವರನ್ನೆಲ್ಲಾ ನೋಡಿದಾಗ ನಾವು ಕಲಿಯುವುದು ಇನ್ನೂ ತುಂಬಾ ಎನ್ನಿಸಿದ್ದು ಸತ್ಯ.

   ಸ್ಪರ್ಧೆಗಳ ನಡುವೆ ಕಾರ್ಯಕ್ರಮದ ಆಯೋಜಕರು ತೀರ್ಪುಗಾರರಿಗೆ ಒಂದು ಗಂಟೆ ಎರಡು ಗಂಟೆಗಳ ಕಾಲ ಬಿಡುವು ಕೊಡುತ್ತಿದ್ದರು. ಆ ಸಮಯದಲ್ಲಿ ಉಳಿದ ತೀರ್ಪುಗಾರರು ತಮ್ಮ ಏಸಿ ರೂಮಿನಲ್ಲಿ ವಿಶ್ರಾಂತಿ ತೆಗೆದುಕೊಳ್ಳಲು ಹೋಗುತ್ತಿದ್ದರೆ ನಾನು ಮಾತ್ರ ನನ್ನ ಪುಟ್ಟ ಕ್ಯಾಮೆರವನ್ನಿಡಿದುಕೊಂಡು ಒಂದರ್ಧ ಗಂಟೆ "ದಿಘಾ" ಸುತ್ತಾಡಿಬರಲು ಹೊರಡುತ್ತಿದ್ದೆ.  ಕೊಲ್ಕತ್ತಗೆ ಮತ್ತು ಅಲ್ಲಿ ಇತರ ನಗರಗಳಿಗೆ ಹೋಲಿಸಿಕೊಂಡರೆ ಅವುಗಳಷ್ಟು ವೇಗವನ್ನು ಪಡೆದುಕೊಂಡಿಲ್ಲ ದಿಘಾ. ಒಂದು ರೀತಿಯಲ್ಲಿ ಶಾಂತವಾಗಿದೆ. ಜನಗಳೂ ಕೆಲಸ ಮತ್ತು ಇನ್ನಿತರ ಒತ್ತಡದಲ್ಲಿ ಸಿಲುಕಿ ಗಡಿಬಿಡಿಯಿಂದ ಓಡಾಡುವುದಿಲ್ಲ. ಬುದ್ದಿವಂತರಾದರೂ ಆರಾಮವಾಗಿದ್ದಾರೆ ಮತ್ತು ಇನ್ನು ಹಳ್ಳಿಯವರಾಗಿಯೇ ಇದ್ದಾರೆ. ಸಮುದ್ರದಲ್ಲಿನ ಮೀನುಗಾರಿಕೆಯಲ್ಲಿ ದಿಘಾ ಪಟ್ಟಣ ಪೂರ್ತಿ ಪಶ್ಚಿಮ ಬಂಗಾಲಕ್ಕೆ ದೊಡ್ಡದೆನಿಸುತ್ತದೆ. ಒಂದು ಕಿಲೋಮೀಟರ್ ನಡಿಗೆಯಷ್ಟು ದೊಡ್ಡದಾದ ದಿಘಾ ಮೀನು ಮಾರುಕಟ್ಟೆಯನ್ನು ನೋಡಲು ಎರಡನೇ ದಿನ ಮುಂಜಾನೆ ನಾನು ಗೆಳೆಯರೊಂದಿಗೆ ಹೋಗಿದ್ದೆ. ನೂರಾರು ತರಾವರಿ ಮೀನುಗಳು, ಏಡಿಗಳು, ಹಾವುಮೀನುಗಳು..ಹೀಗೆ ಒಂದೇ ಎರಡೇ ಎಲ್ಲವನ್ನು ಆಗತಾನೆ ಹಿಡಿದು ಪ್ರೆಶ್ ಆಗಿ ಮಾರಾಟ ಮಾಡುತ್ತಿದ್ದರು. ದೊಡ್ದ ದೊಡ್ಡ ಗಾತ್ರದ ಬಣ್ಣ ಬಣ್ಣದ ಸಮುದ್ರ ಸೀಗಡಿಗಳನ್ನು ನಮ್ಮ ಬೆಂಗಳೂರಿನ ಮಾಲ್‍ಗಳು ಮತ್ತು ಮೆಟ್ರೋಗಳಲ್ಲಿ ಮಾತ್ರ ನೋಡಿ, ಒಂದು ಕೇಜಿಗೆ ಆರುನೂರು, ಎಂಟುನೂರು, ಒಂದುವರೆಸಾವಿರ ರೂಪಾಯಿಗಳ ಬೆಲೆ ಕೇಳಿ ಬೆಚ್ಚಿ ಬೆರಗಾಗಿದ್ದ ನಾನು  , ನಮ್ಮ ಯಶವಂತಪುರ ಮೀನು ಮಾರುಕಟ್ಟೆಯಂತೆ ರಸ್ತೆಬದಿಯಲ್ಲಿ ಇವುಗಳನ್ನೆಲ್ಲ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿರುವುದನ್ನು ನೋಡುವ ಅವಕಾಶ ನಮ್ಮ ಕಾರ್ಯಕ್ರಮದ ಆಯೋಜಕರಿಂದಾಗಿ ಸಿಕ್ಕಿತ್ತು.  ಪಶ್ಚಿಮ ಬಂಗಾಲದಲ್ಲಿಯೇ ಪ್ರಸಿದ್ಧವೆನಿಸುವ ಮತ್ತು ದುಬಾರಿ ಬೆಲೆಯ "ಇಲಿಶಾ" ಮೀನಿನ್ನು ರುಚಿ ನೋಡುವ ಅವಕಾಶ ಸಿಕ್ಕಿತ್ತು.  ನಮ್ಮ ಪಾಂಪ್ಲೆಟ್ ಮೀನಿನಂತೆ ಬಾಯಲ್ಲಿಟ್ಟರೇ ಹಾಗೆ ಕರಗುವ "ಇಲಿಷಾ" ಪಶ್ಚಿಮ ಬಂಗಾಲದ ಒಂದು ಅದ್ಬುತವಾದ ಡಿಷ್.
        

ದಿಘಾದಲ್ಲಿ ಕೊಲ್ಕತ್ತ ಮತ್ತು ಇತರ ನಗರಗಳಂತೆ ಅಲ್ಲಿ ಸೈಕಲ್ ರಿಕ್ಷಾಗಳಿಲ್ಲ. ಅದರ ಬದಲಾಗಿ ಅದಕ್ಕಿಂತ ಸ್ವಲ್ಪ ದೊಡ್ಡದಾದ ಪುಟ್ಟ ಇಂಜಿನ್ ಮೋಟರ್ ಅಳವಡಿಸಿದ ನಮ್ಮ ಮೋಟರ್ ಬೈಕಿನ ಟೈರುಗಳನ್ನು ಆಳವಡಿಸಿದ ಮೂರು ಚಕ್ರದ ವಾಹನಗಳೂ ಚಲಿಸುತ್ತಿರುತ್ತವೆ. ಜನರನ್ನು ಒಂದು ಕಡೆಯಿಂದ ಮತ್ತೊಂದು ಕಡೆಗೆ ಸಾಗಿಸಲು, ಲಗ್ಗೇಜು ಸಾಗಿಸಲು ಎರಡಕ್ಕೂ ಇದೊಂದೇ ವಾಹನ. ಇದರಲ್ಲಿ ಕುಳಿತ ಪ್ರಯಾಣಿಕರನ್ನು ನೋಡಿದಾಗ ನಮ್ಮಲ್ಲಿ ಹಳ್ಳಿ ಮತ್ತು ಇತರ ಪಟ್ಟಣಗಳಲ್ಲಿ ಓಡಾಡುವ ಟಂಟಂನ ಸೊಂಟದ ಮೇಲ್ಬಾಗವನ್ನು ತೆಗೆದುಬಿಟ್ಟರೆ ಹೇಗೆ ಕಾಣುತ್ತದೋ ಹಾಗೆ ಇದು ಕಾಣುತ್ತದೆ.

ಮುಂದುವರಿಯುತ್ತದೆ....

ಚಿತ್ರಗಳು ಮತ್ತು ಲೇಖನ:
ಶಿವು.ಕೆ

Monday, September 23, 2013

ಕೊಲ್ಕತ್ತ-ಡಿಘಾ ನಾಲ್ಕು ದಿನದ ಪ್ರವಾಸ


                    ಕೊಲ್ಕತ್ತ ವಿಮಾನ ನಿಲ್ದಾಣದ ೩ಎ ಗಾಜಿನ ಬಾಗಿಲಿಂದ ಹೊರಬರುತ್ತಿದ್ದಂತೆ ಸಣ್ಣಗೆ ಮಳೆ.  ನನಗಾಗಿ ಕಾಯುತ್ತಿದ್ದ "ಅಭಿಜಿತ್ ಡೆ" ಹೆಸರಿನ ನನಗಿಂತ ಸ್ವಲ್ಪ ಹೆಚ್ಚೇ ವಯಸ್ಸಿನ, ಹೆಚ್ಚೇ ಗಾತ್ರದ ಮತ್ತು ಜಾಸ್ತಿ ಬೆಳ್ಳಗಿನ ವ್ಯಕ್ತಿಯೊಬ್ಬ, "ಹಾಯ್ ಶಿವುಜೀ, ಕೆಸಾ ಹೇ, ಪ್ಲೇನ್ ನೇ ಕೊಯಿ ಪ್ರಾಬ್ಲಂ ನಂ ತಾ:  ಸಬ್ ಕುಚ್ ಟೀಕ್ ಹೇನಾ," ಎಂದು ನನ್ನನ್ನು ಗಟ್ಟಿಯಾಗಿ ಬಿಗಿದಪ್ಪಿಕೊಂಡನಲ್ಲ, ಅಲ್ಲಿಗೆ ನನ್ನ ಮನಸ್ಸಿನ ಚಿಂತೆಗಳಲ್ಲಿ ಅರ್ಧದಷ್ಟು ದೂರವಾಗಿತ್ತು. ಮೊದಲ ಬಾರಿಗೆ ನನ್ನ ಮಟ್ಟಿಗೆ ತುಂಬಾ  ದೂರದ ಕೊಲ್ಕತ್ತಗೆ ಪ್ರಯಾಣ ಹೊರಟಿದ್ದೇನಲ್ಲ ಅದಕ್ಕಾಗಿ ಏನನ್ನು ಮರೆಯಬಾರದೆಂದುಕೊಂಡು, ಎರಡು ದಿನದ ಮೊದಲೇ  ನಾನು ತೆಗೆದುಕೊಂಡು ಹೋಗುವ ವಸ್ತುಗಳ ಪಟ್ಟಿಯನ್ನು ಮಾಡಿದ್ದೆ. ಎರಡು ಲಗೇಜ್ ಬ್ಯಾಗುಗಳು. ಒಂದರಲ್ಲಿ ಐದು ದಿನಕ್ಕಾಗುವ ಬಟ್ಟೆಗಳು, ಇನ್ನೊಂದು ಪುಟ್ಟಬ್ಯಾಗಿನಲ್ಲಿ ವಿಮಾನದ ಟಿಕೆಟ್, ನನ್ನ ವೈಯಕ್ತಿಕ ವಿಳಾಸ ತೋರಿಸುವ ಓಟರ್ ಐಡಿ, ಮೊಬೈಲ್ ಚಾರ್ಚರ್, ಪುಟ್ಟ ಕ್ಯಾಮೆರ ಅದರ ಚಾರ್ಚರ್, ನಾನು ಬೆಳ್ಳಗೆ ಕಾಣಲು ಫೇಸ್ ವಾಸ್, ಪೌಡರ್, ಅಲ್ಲಿ ಪ್ರಯಾಣಿಸುವ ರೈಲಿನಲ್ಲಿ ಬಿಡುವಾದರೆ ಓದಲು ಒಂದೆರಡು ಪುಸ್ತಕಗಳು, ಅಲ್ಲಿನವರಿಗೆ ಕೊಡಲು ನನ್ನ ಪುಸ್ತಕಗಳು ಮತ್ತು ಕಿರುಚಿತ್ರ "ಬೆಳಗಾಯ್ತು ಇನ್ನೂ ನ್ಯೂಸ್ ಪೇಪರ್ ಬಂದಿಲ್ವ" ಸಿಡಿ,......ಹೀಗೆ ಪ್ರತಿಯೊಂದನ್ನು ಮೊದಲೇ ಪಟ್ಟಿ ಮಾಡಿ ಸಿದ್ದಪಡಿಸಿಟ್ಟುಕೊಂಡು ಎಲ್ಲವನ್ನು ಸರಿಯಾಗಿ ಪರೀಕ್ಷಿಸಿಕೊಂಡು ಹೊರಟಿದ್ದರೂ, ಅಲ್ಲಿ ಅಚಾನಕ್ಕಾಗಿ ಎರಡರಲ್ಲಿ ಒಂದು ಬ್ಯಾಗ್ ಕಳೆದುಹೋದರೆ ಅಥವ ವಿಮಾನದಲ್ಲಿ ಹೋಗುವಾಗ ಏನಾದರೂ ತೊಂದರೆಯಾದರೆ ಇರಲಿ ಎಂದುಕೊಂಡು ನನ್ನನ್ನು ಕರೆದ ಕೊಲ್ಕತ್ತದ ಅನೇಕರ ಫೋನ್ ನಂಬರುಗಳನ್ನು ಬರೆದು ನನ್ನ ಶ್ರೀಮತಿಯ ಕೈಗೆ ಕೊಟ್ಟು ಅಲ್ಲಿಂದ ಹೊರಟಿದ್ದೆ.

                               ಪ್ರಖ್ಯಾತ ಹೌರಾ ಸೇತುವೆ

    ವಿಮಾನ ನಿಲ್ದಾಣದಿಂದ ಟ್ಯಾಕ್ಸಿಯಲ್ಲಿ  ಹೊರಟೆವಲ್ಲ, ಅಲ್ಲಿಂದ ಶುರುವಾಯ್ತು ನಮ್ಮಿಬ್ಬರ ಮಾತು. ದಾರಿಯಲ್ಲಿ ಸಾಗಿದ ಒಂದುಕಾಲು ಗಂಟೆಯಲ್ಲಿ, ತುಂಬಾ ವರ್ಷಗಳ ನಂತರ ಮತ್ತೆ ಬೇಟಿಯಾಗಿದ್ದೇವೆ ಎನ್ನುವಂತೆ, ನಮ್ಮ ನಡುವೆ ಫೋಟೋಗ್ರಫಿ, ಮನೆ ವಿಚಾರ, ಹೀಗೆ ಎಲ್ಲವನ್ನು ಹಂಚಿಕೊಳ್ಳುತ್ತ ಕೊಲ್ಕತ್ತದ ಹೃದಯ ಭಾಗದಿಂದ ದಕ್ಷಿಣ ೩೫ ಕಿಲೋಮೀಟರ್ ಮೂಲೆಯಲ್ಲಿರುವ ಭಾರಕ್ ಪುರ್‌ನ ಅಭಿಜಿತ್ ಡೆ ಮನೆ ತಲುಪುವ ಹೊತ್ತಿಗೆ, ನಾವಿಬ್ಬರೂ ಬಾಲ್ಯದ ಗೆಳೆಯರು ಮತ್ತೆ ಬೇಟಿಯಾಗುತ್ತಿದ್ದೇವೇನೋ ಎನ್ನುವಂತ ಒಂದು ನಮಗರಿಯದಂತ ಆತ್ಮೀಯತೆ ನಮ್ಮೊಳಗೆ ಮೂಡಿತ್ತು. ನನಗಂತೂ ಅವರ ಮನೆ ತಲುಪುತ್ತಿದ್ದಂತೆ ಉಳಿದಿದ್ದ ಅರ್ಧ ಚಿಂತೆಯೂ ಸಂಪೂರ್ಣ ಮಾಯವಾಗಿ ತಂದಿರುವ ಎಲ್ಲವೂ ಕಳೆದು ಹೋದರೂ ಇಲ್ಲಿ ನೆಮ್ಮದಿಯಾಗಿ ಇರಬಹುದು ಎನಿಸಿತ್ತು.

 "ಶಿವು ನಿಮಗೆ ಏನೂ ಅಭ್ಯಂತರವಿಲ್ಲದಿದ್ದಲ್ಲಿ ನಮ್ಮ ಮನೆಯಲ್ಲಿ ಇರಬಹುದು" ನಿಮಗೆ ಇಷ್ಟವಿಲ್ಲದಿದ್ದಲ್ಲಿ ನಮ್ಮ ಇತರ ಜ್ಯೂರಿಗಳಿಗೆ ಹೋಟಲ್ಲಿನಲ್ಲಿ ರೂಂ ವ್ಯವಸ್ಥೆ ಮಾಡಿದಂತೆ ನಿಮಗೆ ವ್ಯವಸ್ಥೆ ಮಾಡುತ್ತೇವೆ" ಎಂದು ಅಭಿಜಿತ್ ಡೇ ಫೋನಿನಲ್ಲಿ ಕೇಳಿದಾಗ, "ನಾನು ನಿಮ್ಮ ಮನೆಯಲ್ಲಿ ಇರುತ್ತೇನೆ" ಎಂದಿದ್ದೆ. ಅದಕ್ಕವರು ಸಂಕೋಚದಿಂದ "ನಮ್ಮಂತಹ ಬಡವನ ಮನೆ, ನಿಮಗೆ ತೊಂದರೆಯಾಗಬಹುದು"

   ನೋಡಿ ಅಭಿಜಿತ್ ಡೇ ಸರ್, ನಾವು ಯಾವುದೇ ಪ್ರವಾಸಕ್ಕೆ ಹೋದರೂ ಅಲ್ಲೆಲ್ಲಾ ಹೋಟಲ್ ರೂಮಿನಲ್ಲಿಯೆ ಉಳಿದುಕೊಳ್ಳುತ್ತೇವಾದ್ದರಿಂದ ಅದರಲ್ಲಿ ಏನು ವಿಶೇಷವಿಲ್ಲ. ಆದ್ರೆ ಮೊದಲ ಭಾರಿಗೆ ಕಲ್ಕತ್ತದಂತ ದೊಡ್ದ ನಗರಕ್ಕೆ ಬರುತ್ತಿದ್ದೇನೆ. ಅಲ್ಲಿ ನಿಮ್ಮ ಮನೆಯಲ್ಲಿ ನಿಮ್ಮ ಕುಟುಂಬದ ಜೊತೆ ಒಂದೆರಡು ದಿನ ಕಳೆಯುವುದು ನನ್ನ ಸೌಭಾಗ್ಯವೆಂದುಕೊಳ್ಳುತ್ತೇನೆ. ನಮ್ಮಿಬ್ಬರ ನಡುವೆ ಬಡತನ-ಸಿರಿತನವೆಂಬ ಬೇಧಭಾವಗಳಿಲ್ಲ. ನಾನು ಕೂಡ ಒಬ್ಬ ಸಾಮಾನ್ಯ ದಿನಪತ್ರಿಕೆ ವಿತರಕನಷ್ಟೆ., ಮತ್ತೆ ಇದು ನನ್ನ ಬದುಕಿನ ಮದುರವಾದ ನೆನಪಿನ ಕ್ಷಣಗಳಾಗಬಹುದು. ಎಂದು ಅವರ ಮನೆಯಲ್ಲಿಯೇ ಉಳಿದುಕೊಳ್ಳಲು ಒಪ್ಪಿಕೊಂಡಿದ್ದೆ.
      
ಕೊಲ್ಕತ್ತದಿಂದ ಮುವತ್ತೈದು ಕಿಲೋಮೀಟರ್ ದೂರದ ಭರಕ್‍ಪುರದಲ್ಲಿರುವ ಪ್ರಖ್ಯಾತ ಛಾಯಾಗ್ರಾಹಕ ಗೆಳೆಯ "ಅಭಿಜಿತ್ ಡೇ" ಮನೆಯಲ್ಲಿ ಇತರ ಛಾಯಾಗ್ರಾಹಕರೊಂದಿಗೆ..

ಯಾವುದೇ ಒಂದು ಹಳ್ಳಿ, ಪಟ್ಟಣ, ನಗರಕ್ಕೆ ಹೋದಾಗ ನಮ್ಮ ಪುಟ್ಟ ಕಣ್ಣುಗಳ ಹೊರನೋಟಕ್ಕೆ ಅವು ಬಹು ಸುಂದರವಾಗಿ ಅಥವ ಕೊಳಕಾಗಿ ಕಾಣಿಸಬಹುದು. ಆದರೆ ಅವುಗಳ ನಿಜವಾದ ಆತ್ಮದ ಒಂದು ಕೋಲ್ಮಿಂಚು, ಭಾವನಾತ್ಮಕ ಅಭಿವ್ಯಕ್ತಿಯ ತುಣುಕನ್ನು ಆಸ್ವಾದಿಸಬೇಕಾದರೆ ಖಂಡಿತವಾಗಿ ಅವುಗಳಲ್ಲಿನ ಒಂದು ಮನೆಯಲ್ಲಿ ಒಂದೆರಡು ದಿನಗಳ ಮಟ್ಟಿಗಾದರೂ ಇದ್ದು ಬರಬೇಕು ಎಂದು ಎಲ್ಲಿಯೋ ಓದಿದ್ದು ನೆನಪಾಗಿತ್ತು ಮತ್ತು ನನ್ನ ಉದ್ದೇಶವೂ ಅದೇ ಆಗಿತ್ತು. "ಹಾವ್ ಜೀ" ಎಂದು ಅವರ ಶ್ರೀಮತಿಯವರು ನನ್ನನ್ನು ಸ್ವಾಗತಿಸಿದಾಗ ಮೊಟ್ಟ ಮೊದಲ ಭಾರಿಗೆ ಕೊಲ್ಕತ್ತದ ಒಂದು ಟಿಪಿಕಲ್ ಮದ್ಯಮ ವರ್ಗದ ಮನೆಯೊಳಕ್ಕೆ ಕಾಲಿಟ್ಟಿದ್ದೆ. ಅಭಿಜಿತ್, ಅವರ ಶ್ರೀಮತಿ, ಒಬ್ಬಳು ಪುಟ್ಟ ಮಗಳು, ಕೆಲಸದವಳಾದರೂ ಮನೆ ಮಗಳೇ ಆಗಿಬಿಟ್ಟಿರುವ ನಮಿತ. ಈ ನಾಲ್ವರ ಪುಟ್ಟ ಮದ್ಯಮ ವರ್ಗದ ಕುಟುಂಬವದು. ಬಿಸಿ ಬಿಸಿ ಟೀ ಕುಡಿದ ನಂತರ ಪುಟ್ಟದಾಗಿ ಸ್ನಾನ ಮಾಡಿ ಸಿದ್ದನಾದೆನಲ್ಲ...ಸಂಕೋಚದಿಂದ ಮಾತಾಡುವ ಅವರ ಶ್ರೀಮತಿ, ಮುಗ್ದತೆಯಿಂದ ತಾನು ಬಿಡಿಸಿದ ಚಿತ್ರವನ್ನು ತೋರಿಸುವ ಅವರ ಮಗಳು, ನಮಗಿಷ್ಟದ ಅಡುಗೆಯನ್ನು ಉತ್ಸಾಹದಿಂದ ಮಾಡುವ ನಮಿತ, ಮನಪೂರ್ವಕವಾಗಿ ನಗುತ್ತ ಮಾತಾಡುವ ಅಭಿಜಿತ್, ಕೇವಲ ಒಂದೇ ಗಂಟೆಯಲ್ಲಿ ಎಲ್ಲರೂ ಆತ್ಮೀಯರಾಗಿ ನಮ್ಮ ಮನೆಯಲ್ಲಿಯೇ ಇರುವಂತೆ ಅನ್ನಿಸತೊಡಗಿತ್ತು. ಕೆಲ ನಿಮಿಷಗಳ ನಂತರ ಅಭಿಜಿತ್ ಡೇ ತಮ್ಮ ಇಪ್ಪತ್ತು ವರ್ಷಗಳ ಅನುಭವದಲ್ಲಿ ಕಲಿತ ಫೋಟೊಗ್ರಫಿ, ಹೇಳಿಕೊಟ್ಟ ಗುರುಗಳು, ನಡೆದು ಬಂದ ದಾರಿ ಎಲ್ಲವನ್ನು ಅವರ ಅದ್ಬುತ ಚಿತ್ರಗಳ ಮೂಲಕ ವಿವರಿಸಿದಾಗ ಅವರ ಬಗ್ಗೆ ಹೆಮ್ಮೆಯೆನಿಸಿತ್ತು. ವಿಭಿನ್ನವಾದ ಅಲೋಚನೆ, ಚಿಂತನೆ ಮತ್ತು ಪ್ರಯೋಗಗಳಿಂದ ಮೂಡಿಸುವ ಅವರ ಫೋಟೊಗ್ರಫಿ ಕಲಾಕೃತಿಗಳು, ಅದರಿಂದ ಗಳಿಸಿದ ಪ್ರಶಸ್ತಿಗಳು, ಇತ್ಯಾದಿಗಳನ್ನು ನೋಡಿದ ಮೇಲೆ ಇವರಿಂದ ನಾವೆಲ್ಲ ಕಲಿಯುವುದು ಬಹಳಷ್ಟಿದೆ ಎನಿಸಿತು. ನಮ್ಮ ದಕ್ಷಿಣ ಭಾರತದ ಛಾಯಾಗ್ರಾಹಕರ ಫೋಟೊಗ್ರಫಿ ವಿಧಾನ, ತಯಾರಿ ರೂಪುರೇಷೆಗಳು ಒಂದು ರೀತಿಯಾದರೆ, ಉತ್ತರ ಭಾರತದ ಅದರಲ್ಲೂ ಪಶ್ಚಿಮ ಬಂಗಾಲದವರ ಫೋಟೊಗ್ರಫಿ ವಿಧಾನ, ರೂಪುರೇಷೆಗಳು ಬೇರೆ ತರನದ್ದು. ಅವರ ಚಿತ್ರಗಳನ್ನು ನೋಡಿದಾಗ ಅವರು ಕಲಾತ್ಮಕ ಛಾಯಾಗ್ರಾಹಣದಲ್ಲಿ ನಮಗಿಂತ ಮುಂದಿದ್ದಾರೆ ಅನಿಸುತ್ತದೆ. ನಡುವೆ ಬೆಂಗಾಲದ ಟಿಪಿಕಲ್ ಶೈಲಿಯ ದಹೀ ಮಸಾಲಪುರಿ ಬಂತು. ಆಹಾ ಎಂಥ ರುಚಿ ಅಂತೀರಿ, ಅದನ್ನು ಸವಿಯುತ್ತಾ, ಅಭಿಜಿತ್ ಫೋಟೊಗಳನ್ನು ನೋಡುತ್ತಾ, ಅವರ ಅನುಭವವನ್ನು ಕೇಳುತ್ತಾ, ವಾಹ್! ಸಮಯ ಹೋಗಿದ್ದೇ ತಿಳಿಯಲಿಲ್ಲ. ನಡುವೆ ಅವರ ಫೋಟೊಗ್ರಫಿ ಕ್ಲಬ್‍ನ ಅಧ್ಯಕ್ಷರು, ಇತರ ಸದಸ್ಯರು, ವಿಧ್ಯಾರ್ಥಿಗಳ ಬಂದಾಗ ಅವರ ಪರಿಚಯವೂ ಆಯ್ತು.  ರಾತ್ರಿ ಊಟದ ಸಮಯವಾಯ್ತು ಬನ್ನಿ ಎಂದು ಕರೆದಾಗಲೇ ಗೊತ್ತಿಗಿದ್ದು ಆಗಲೇ ರಾತ್ರಿ ಒಂಬತ್ತು ಗಂಟೆ ದಾಟಿದೆಯೆಂದು. ಎಲ್ಲರೂ ಒಟ್ಟಿಗೆ ಊಟಕ್ಕೆ ಕುಳಿತೆವು. ನನಗಿಷ್ಟವೆಂದು ಪರೋಟ, ಅಲುಗಡ್ಡೆಯ ಪಲ್ಯ, ಚಿಕನ್ ಮಸಾಲ, ಪಾಯಸ ಮತ್ತು ರಸಗುಲ್ಲ,.ಒಟ್ಟಾರೆಯಾಗಿ ರಾತ್ರಿ ಭರ್ಜರಿ ಊಟವೇ ಆಗಿಹೋಯ್ತು. ಈ ನಡುವೆ ಮಧ್ಯಾಹ್ನ ನಾನು ಬರುವ ಹೊತ್ತಿಗೆ ಶುರುವಾದ ಜಡಿ ಮಳೆ ಆಗಾಗ ಬಿಡುವುದು ಮತ್ತೆ ಶುರುವಾಗುವುದು ಥೇಟ್ ನಮ್ಮ ಬೆಂಗಳೂರಿನ ಮಳೆಯಂತೆ ಕಣ್ಣುಮುಚ್ಚಾಲೆಯಾಡುತ್ತಿತ್ತು. ಹೊರಗೆ ಸ್ವಲ್ಪ ಜೋರು ಮಳೆ ಶುರುವಾದರೂ ನನಗಂತೂ ಪ್ರಯಾಣದ ಆಯಾಸದಿಂದ ಮಲಗಿದ ತಕ್ಷಣವೆ ನಿದ್ರೆ ಆವರಿಸಿತ್ತು.

                               ಕೊಲ್ಕತ್ತ ಎಂದರೆ ಸೈಕಲ್ ರಿಕ್ಷಾ....

        
   ಮರುದಿನ ಬೆಳಿಗ್ಗೆ ಎಚ್ಚರವಾದಾಗ ಹೊರಗೆ ಸಂಪೂರ್ಣ ಬೆಳಕಾಗಿತ್ತು. ಬಹುಶಃ ನಾನು ಎಂಟುಗಂಟೆಯವರೆಗೂ ಚೆನ್ನಾಗಿ ಮಲಗಿಬಿಟ್ಟಿದ್ದೇನೆ ಅಂದುಕೊಂಡು ಕೈಗಡಿಯಾರವನ್ನು ನೋಡಿಕೊಂಡರೆ ಐದು ಗಂಟೆ ತೋರಿಸುತ್ತಿದೆ! ಇದೇನಿದು ಹೊರಗೆ ನೋಡಿದರೆ ಅಷ್ಟೊಂದು ಬೆಳಕಾಗಿದೆ, ಆದ್ರೆ ಮೊಬೈಲಿನಲ್ಲೂ ಕೂಡ ಐದುಗಂಟೆ ತೋರಿಸುತ್ತಿದೆ! ಕುತೂಹಲದಿಂದ ಎದ್ದು ಬಾಲ್ಕನಿಗೆ ಬಂದು ನೋಡಿದರೆ, ನಿಜವಾಗಿಯೂ ಬೆಳಿಗ್ಗೆ ಐದು ಗಂಟೆಗೆ ಸಂಪೂರ್ಣ ಬೆಳಕಾಗಿಬಿಟ್ಟಿದೆ! ನಮ್ಮ ಬೆಂಗಳೂರಿನಲ್ಲಿ ಬೆಳಗ್ಗೆ ಎಂಟು ಗಂಟೆಯ ಹೊತ್ತಿಗೆ ಆಗುವಷ್ಟು ಬೆಳಕಾಗಿಬಿಟ್ಟಿದೆ. ಸೂರ್ಯೋದಯ ಕಾಣಬಹುದಾ ಎಂದು ಪೂರ್ವದತ್ತ ನೋಡಿದರೆ ದಟ್ಟವಾದ ಮೋಡದ ವಾತಾವರಣ, ಈ ಮಳೆಗಾಲದಲ್ಲಿ ಹೀಗಾದರೆ ಮೋಡಗಳಿಲ್ಲದ ಬೇಸಿಗೆ ಹೇಗಿರಬಹುದು ಎಂದು ಕಲ್ಪಿಸಿಕೊಂಡರೆ ಬಹುಶಃ ನಮ್ಮ ಬೆಂಗಳೂರಿನ ಒಂಬತ್ತು-ಹತ್ತು ಗಂಟೆಯಲ್ಲಿ ಕಾಣುವ ಬೆಳಕು ಇಲ್ಲಿ ಮುಂಜಾನೆ ನಾಲ್ಕು-ಐದು ಗಂಟೆಗೆ ಕಾಣಬಹುದೇನೊ! ಈ ಸಮಯದಲ್ಲಿ ಬೆಂಗಳೂರು ಹೇಗಿರಬಹುದು? ನಮ್ಮ ದಿನಪತ್ರಿಕೆ ಹಂಚುವ ಹುಡುಗರು ಏನು ಮಾಡುತ್ತಿರಬಹುದೆಂದು ನೆನಪಿಸಿಕೊಂಡರೆ, ಕತ್ತಲಲ್ಲಿ ಸಪ್ಲಿಮೆಂಟರ್ ಹಾಕುವ ನಂತರ ಜೋಡಿಸಿಕೊಳ್ಳುತ್ತಾ, ತಲೆಹರಟೆ ಮಾಡುತ್ತಾ, ಸಿದ್ದವಾಗುತ್ತಿರುವ ಅನೇಕ ಪುಟ್ಟ ಪುಟ್ಟ ಚಿತ್ರಗಳು ಮನಸ್ಸಿನಲ್ಲಿ ಹಾದು ಹೋದವು. ಇಷ್ಟು ಬೇಗ ಎದ್ದು ಏನು ಮಾಡುವುದು ಎಂದು ಮತ್ತೆ ಮಲಗಿದೆ. ಎಚ್ಚರವಾದಾಗ ಏಳುಗಂಟೆ. ನಾವು ಕೊಲ್ಕತ್ತದಿಂದ ನೂರತೊಂಬತ್ತು ಕಿಲೋಮೀಟರ್ ದೂರದಲ್ಲಿ ಸಮುದ್ರ ಕಿನಾರೆಗೆ ಅಂಟಿಕೊಂಡಿರುವ ಸುಂದರ ಮತ್ತು ಪುಟ್ಟ ದಿಘ ಟೌನಿಗೆ ಹೋಗಬೇಕಿತ್ತು. ಅಲ್ಲಿಯೇ ನಮ್ಮ ಅಂತರರಾಷ್ಟ್ರೀಯ ಛಾಯಾಚಿತ್ರ ಸ್ಪರ್ಧೆಯ ತೀರ್ಪುಗಾರಿಕೆಗಳು ನಡೆಯುವುದು ನಿಗದಿಯಾಗಿತ್ತು. ನಾನು ಮತ್ತು ಅಭಿಜಿತ್ ಬೆಳಿಗ್ಗೆ ಒಂಬತ್ತು ಗಂಟೆಯ ಹೊತ್ತಿಗೆ ಬೆಳಗಿನ ತಿಂಡಿ ಮುಗಿಸಿ ಸಿದ್ದರಾಗುವ ಹೊತ್ತಿಗೆ ಅವರ ಕ್ಲಬ್ಬಿನ ಇನ್ನಿತರ ಸದಸ್ಯರು ನಮ್ಮನ್ನು ಕೂಡಿಕೊಂಡರು. ನಮ್ಮ ಲಗ್ಗೇಜುಗಳನ್ನು ಹೊತ್ತು ರೈಲು ನಿಲ್ದಾಣದ ಕಡೆಗೆ ಹೊರಟೆವು. ಛಾಯಗ್ರಾಹಕ ಗೆಳೆಯ ಅಭಿಜಿತ್ ಮನೆಯಿಂದ ಒಂದು ಕಿಲೋಮೀಟರ್ ದೂರ ರೈಲು ನಿಲ್ದಾಣಕ್ಕೆ ಹೋಗಲು ಸೈಕಲ್ ರಿಕ್ಷಾ ಹತ್ತಿದೆವು. ಸ್ವಲ್ಪ ದೂರದ ಮುಖ್ಯರಸ್ತೆಗೆ ಹೋಗುತ್ತಿದ್ದಂತೆ ಒಂದರ ಹಿಂದೆ ಒಂದು ಎದುರಿಗೆ ಪಕ್ಕದಲ್ಲಿ ಹೀಗೆ ಎಲ್ಲೆಂದರಲ್ಲಿ ಬೆಲ್ ಹೊಡೆಯುತ್ತಾ ಸಾಗುವ ಸೈಕಲ್ ರಿಕ್ಷಾಗಳು ಆ ಕ್ಷಣದಿಂದ ನನಗೆ ಕುತೂಹಲದ ವಸ್ತುಗಳಾದವು.  ನೂರಾರು ವರ್ಷಗಳ ಇತಿಹಾಸವುಳ್ಳ ಕೊಲ್ಕತ್ತದ ಪಳಯುಳಿಕೆಯ ಭಾಗವಾಗಿರುವ ಇಲ್ಲಿನ ಸೈಕಲ್ ರಿಕ್ಷಾಗಳು ಮುಂಜಾನೆ ಐದು ಗಂಟೆಗೆ ಪ್ರಾರಂಭವಾದರೆ ರಾತ್ರಿ ಹನ್ನೊಂದುಗಂಟೆಯವರೆಗೆ ನಿಮ್ಮನ್ನು ಒಂದು ಕಿಲೋಮೀಟರಿನಿಂದ ಐದಾರು ಕಿಲೋಮೀಟರ್ ದೂರದವರೆಗೆ ಲಗ್ಗೇಜು ಸಮೇತ ನಿಮ್ಮನ್ನು ಸಾಗಿಸುತ್ತವೆ. ಇಪ್ಪತ್ತರೊಳಗಿನ ಯುವಕರಿಂದ ಹಿಡಿದು ಎಪ್ಪತ್ತು ದಾಟಿದ ವಯಸ್ಸಾದ ಮುದುಕರವರೆಗೂ ಅನೇಕರಿಗೆ ಜೀವನಕ್ಕೆ ದಾರಿಯಾಗಿರುವ ಇವುಗಳನ್ನು ಎತ್ತರದ ಕಟ್ಟಡದ ತುದಿಯಿಂದ ಕೆಳಗೆ ಇಣುಕಿ ನೋಡಿದರೆ ಹದಿನೈದು ಅಡಿ ಅಗಲದ ಪುಟ್ಟ ಪುಟ್ಟ ರಸ್ತೆಯಲ್ಲಿ ಬೆಲ್ ಮಾಡುತ್ತಾ ಸಾಗುವಾಗುತ್ತಿದ್ದರೆ ನೆಲದ ಮೇಲೆ ಬ್ಯುಸಿಯಾಗಿ ಹರಿದಾಡುವ ಇರುವೆಗಳನ್ನು ನೆನಪಿಸುತ್ತವೆ. ಎಲ್ಲೆಂದರಲ್ಲಿ ಕೈತೋರಿಸಿದರೆ ನಿಲ್ಲಿಸಿ ನಮ್ಮನ್ನು ಕರೆದೊಯ್ಯುವ ಈ ಸೈಕಲ್ ರಿಕ್ಷಾವಾಲಗಳು ಶ್ರಮಜೀವಿಗಳು. ಒಂದೆರಡು ಕಿಲೋಮೀಟರ್ ಸಾಗಿದರೂ ಅವರು ಪಡೆದುಕೊಳ್ಳುವ ಹಣ ಐದರಿಂದ ಹತ್ತು ರೂಪಾಯಿ ಅಷ್ಟೆ. ನಮ್ಮಲ್ಲಿ ಕಾಣುವ ಆಟೋರಿಕ್ಷಾಗಳಿಗೆ ಪರ್ಯಾಯವಾಗಿರುವ ಅವು ಇಡೀ ಕೊಲ್ಕತ್ತ ನಗರದಲ್ಲಿ ಲಕ್ಷಾಂತರವಿರಬಹುದೆಂದುಕೊಳ್ಳುವಾಗಲೇ ಭಾರಕ್‍ಪುರ್ ರೈಲು ನಿಲ್ದಾಣ ಬಂತು. ಕೊಲ್ಕತ್ತ ನಗರದ ಭಾಗವಾಗಿರುವ ಭಾರಕ್‍ಪುರ ಪೂರ್ವದ ಕೊನೆಯಲ್ಲಿದೆ.
             
  ಕೊಲ್ಕತ್ತದ ಲೋಕಲ್ ರೈಲು ನಿಲ್ದಾಣ.

ಮುಂದುವರಿಯುತ್ತದೆ......

ಚಿತ್ರಗಳು ಮತ್ತು ಲೇಖನ
ಶಿವು.ಕೆ.

Wednesday, May 29, 2013

ನಿದ್ರಾವತಾರ

     ಅನೇಕ ವರ್ಷಗಳಿಂದ ನನ್ನನ್ನು ಕಾಡುತ್ತಿರುವ ವಿಚಾರವೆಂದರೆ ನಿದ್ರೆ. ಅರೆರೆ...ಹಾಗಂತ ನಾನು ಆಗಿನಿಂದ ಸರಿಯಾಗಿ ನಿದ್ರೆ ಮಾಡುತ್ತಿಲ್ಲವೆಂದುಕೊಳ್ಳಬೇಡಿ. ನಾನು ತುಂಬಾ ಚೆನ್ನಾಗಿ, ಸುಖವಾಗಿ ಮತ್ತು ನೆಮ್ಮದಿಯಾಗಿ ನಿದ್ರಿಸುತ್ತಿದ್ದೇನೆ.  ಮತ್ರೇನ್ರಿ ಚಿಂತೆ ನಿಮಗೆ ಸುಮ್ಮನೆ ಮಲಗೋದು ಬಿಟ್ಟು ಎನ್ನುತ್ತೀರಲ್ಲವೇ...ಸ್ವಲ್ಪ ತಾಳಿ ನನ್ನನ್ನು ಕಾಡುತ್ತಿರುವುದು ಕಣ್ಣು ಮುಚ್ಚಿ ಸುಖಿಸುವ ಪ್ರಾಕ್ಟಿಕಲ್ ನಿದ್ರೆಯಲ್ಲ.  "ನಿದ್ರೆ" ಎನ್ನುವ ವಿಚಾರ ನನ್ನ ಮನಸ್ಸಿನಲ್ಲಿ ಹತ್ತಾರು ಗೊಂದಲಗಳನ್ನು, ಪ್ರಶ್ನೆಗಳನ್ನು ಸೃಷ್ಟಿಸುತ್ತಿದೆ.  ಕೆಲವೊಮ್ಮೆ ಇದರ ಬಗ್ಗೆ ಸಂಶೋಧನೆ ಮಾಡಿ ಡಾಕ್ಟರೇಟ್ ತೆಗೆದುಕೊಳ್ಳಬಹುದೇನೋ ಎನ್ನುವಷ್ಟರ ಮಟ್ಟಿಗೆ ಈ ನಿದ್ರೆ ಎನ್ನುವ ವಿಚಾರ ಗಾಢತೆಗೆ ತೆಗೆದುಕೊಂಡು ಹೋಗುತ್ತದೆ. ಆದ್ರೆ ನಾನು ಅಷ್ಟು ಬುದ್ಧಿವಂತನಲ್ಲ ಮತ್ತು ತಾಳ್ಮೆಯು ಕಡಿಮೆಯಿರುವುದರಿಂದ ನನ್ನ ಮನಸ್ಸಿನಲ್ಲಿ ಆಗಿನಿಂದ ಮೂಡಿದ ಕುತೂಹಲ ಮತ್ತು ಕೌತುಕತೆಯನ್ನು, ಬೇರೆಯವರ ಅಭಿಪ್ರಾಯ ಮತ್ತು ನನ್ನದೇ ಬದುಕಿನ "ನಿದ್ರೆ"ಯ ಅನುಭವವನ್ನು ಅವಲೋಕಿಸುತ್ತಾ ಮನಸ್ಸಿನ ಆಳದಲ್ಲಿ ಹೊಕ್ಕಿರುವ ಈ ವಿಚಾರವನ್ನು ಹೀಗೆ ಬರೆದು ನಿರಾಳವಾಗುತ್ತಿದ್ದೇನೆ ಎಂದುಕೊಳ್ಳುತ್ತ ಲೇಖನವನ್ನು ಮುಂದುವರಿಸುತ್ತೇನೆ.
 
    ನಿದ್ರೆಯಲ್ಲಿ ನಿಮ್ಮ ಪ್ರಕಾರ ಎಷ್ಟು ವಿಧಗಳಿವೆಯೋ ಗೊತ್ತಿಲ್ಲ. ಆದ್ರೆ ನನ್ನ ಅನಿಸಿಕೆ ಪ್ರಕಾರ ನೂರಾರು ವಿಧಗಳಿರಬಹುದು. ಅವುಗಳಲ್ಲಿ ಕಿರುನಿದ್ರೆ, ಮರುನಿದ್ರೆ, ಮಗುನಿದ್ರೆ, ನಗುನಿದ್ರೆ, ಚುಟುಕು ನಿದ್ರೆ, ಚಿನಕುರಳಿ ನಿದ್ರೆ, ಮಲಗಿ ನಿದ್ರೆ, ಮಲಗದೇ ಕುಂತು ನಿದ್ರೆ, ನಿಂತು ನಿದ್ರೆ, ನಡೆದಾಡುವ ನಿದ್ರೆ, ತೂಕಡಿಕೆ ನಿದ್ರೆ, ಆಕಳಿಕೆ ನಿದ್ರೆ, ಕಣ್ಣುಮುಚ್ಚಿ ನಿದ್ರೆ, ಕಣ್ಣ ತೆರೆದೇ ನಿದ್ರೆ, ಧ್ಯಾನದ ನಿದ್ರೆ, ಧ್ಯಾನದೊಳಗೊಂದು ನಿದ್ರೆ, ಬಸ್ಸಿನಲ್ಲಿ ನಿಂತು ಅಲುಗಾಡದೇ ನಿದ್ರೆ, ಕೂತಲ್ಲಿ ಉರುಳಿಬೀಳುವ ನಿದ್ರೆ, ಸ್ಕೂಲು ಕಾಲೇಜುಗಳಲ್ಲಿ ಮಾಸ್ತರ ಕಣ್ತಪ್ಪಿಸಿ ಮಾಡುವ ನಿಮಿಷಕ್ಕೊಮ್ಮೆ ನಿದ್ರೆ, ದಿನಪೂರ್ತಿ ಹಗಲು ಹೊತ್ತೇ ಮಲಗಿರುವ ಸೋಮಾರಿ ನಿದ್ರೆ, ಪ್ರಾಜೆಕ್ಟ್ ಮುಗಿಸಬೇಕೆಂದು ನಮ್ಮ ಸಾಪ್ಟವೇರಿಗಳು ವಾರದ ಐದು ದಿನ ಹಗಲು ರಾತ್ರಿ ಕೆಲಸ ಮಾಡಿ ಕೊನೆ ಎರಡು ದಿನ ಹಗಲು ರಾತ್ರಿ ಪೂರ್ತಿ ಮಲಗುವ ಕುಂಬಕರ್ಣ ನಿದ್ರೆ, ನಿದ್ರೆಯಲ್ಲೂ ಮಾತಾಡುತ್ತಲೇ ಇರುವ ನಿದ್ರೆ, ಹಾಸಿಗೆ ಮೇಲೆ ಎಚ್ಚರದಿಂದ ಒದ್ದಾಡುತ್ತಿದ್ದರೂ ನಿದ್ರಿಸುತ್ತಿದ್ದೇನೆಂದು ಭ್ರಮಿಸುವ ನಿದ್ರೆ,  ಸತ್ತಂತೆ ಮಲಗಿರುವ ನಿದ್ರೆ, ಆಲ್ಕೋಹಾಲ್ ಮತ್ತಿನ ನಿದ್ರೆ, ಸುಪ್ಪತ್ತಿಗೆಯ ನಿದ್ರೆ, ಋಷಿಗಳ ಮುಳ್ಳಿನ ಹಾಸಿಗೆಯ ನಿದ್ರೆ, ಕೋಳಿ ನಿದ್ರೆ, ಪ್ರೀತಿಯಿಂದ ಅಪ್ಪಿಕೊಂಡ ಹೆಂಡತಿಯೊಂದಿಗೆ ಚಳಿಗಾಲದ ಬೆಚ್ಚನೆ ಸಿಹಿ ನಿದ್ರೆ, ಜಗಳವಾಡಿದ ಹೆಂಡತಿ ಕಡೆಗೆ ಬೆನ್ನುತಿರುಗಿಸಿ ಮಲಗಿದ ಕಹಿ ನಿದ್ರೆ, ಮುಂಜಾನೆಯ ಕಲ್ಲು ಸಕ್ಕರೆ ನಿದ್ರೆ, ಕಲ್ಲು ಬಡಿದು ಎದ್ದೇಳಿಸಿದಂತೆ ಆಲರಾಂ ಗಂಟೆ ಬಡಿದು ಎಚ್ಚರಗೊಳ್ಳುವಾಗಿನ ಪೇಪರ್ ಮತ್ತು ಹಾಲು ಹಾಕುವ ಹುಡುಗರ ನಿದ್ರೆ, ಎಣ್ಣೆ ಸ್ನಾನದ ನಂತರ ಗಡದ್ದಾಗಿ ಉಂಡು ಮಲಗಿದಾಗ ಹಗುರವಾಗಿ ಆಕಾಶದಲ್ಲಿ ತೇಲಾಡುವ ನಿದ್ರೆ, ವಿಷಾದ-ಜಿಗುಪ್ಸೆ-ನೋವು-ಬೇಸರಗಳು ಮನದೊಳಗೆ ಹೊಕ್ಕು ಮಲಗಿದಾಗ ಬಂದರೂ ಬಾರದಂತಿರುವ ಭಾರವಾದ ನಿದ್ರೆ, ಲವರ್ ನೆನಪಿನ ರೋಮಾಂಚನದ ನಿದ್ರೆ, ಲವರ್ ಕೈಕೊಟ್ಟಾಗ ದೇವದಾಸ ವಿರಹಿ ನಿದ್ರೆಯಲ್ಲದ ನಿದ್ರೆ, .......ಸತ್ತ ಮೇಲೆ ಚಿರನಿದ್ರೆ, ಅಬ್ಬಬ್ಬ ಇನ್ನೂ ಎಷ್ಟಿವೆಯೋ?

     ಈ ನಿದ್ರೆಯ ಚಿಂತೆಯನ್ನು ನಿಮ್ಮ ಮನಸ್ಸಿನ ಆಳಕ್ಕೆ ತೆಗೆದುಕೊಂಡು ಈ ರೀತಿ ಯಾಕೆ ಒದ್ದಾಡುತ್ತೀರಿ, ಸುಮ್ಮನೇ ಅದರ ಚಿಂತೆಯನ್ನು ಬಿಟ್ಟು ಚಿಂತೆಯಿಲ್ಲದವನಿಗೆ ಸಂತೆಯಲ್ಲೂ ನಿದ್ರೆ ಎನ್ನುವಂತೆ ಇರಬಾರದೇ ಅಂತ ನೀವು ನನಗೆ ಹೇಳಬಹುದು.  ನಾನು ಹಾಗೆ ಅನೇಕ ಬಾರಿ ಅದರ ಚಿಂತೆಯನ್ನು ಬಿಟ್ಟು ಸಂತೆಯಂತಹ ಸ್ಥಳಗಳಲ್ಲೂ ಸುಖವಾಗಿ ನಿದ್ರೆ ಮಾಡಿದ್ದೇನೆ. ಆದ್ರೆ ಆ ನಿದ್ರೆಯಿಂದ ಎದ್ದಮೇಲು "ಉಂಡಮೇಲೆ ಸುಂಕ ಕಟ್ಟಿಹೋಗು" ಎನ್ನುವಂತೆ ಮತ್ತೆ ಇದೇ ಚಿಂತೆ ಆವರಿಸಿಕೊಂಡರೆ ಏನು ಮಾಡೋಣ?  ಹೀಗೆ ಪದೇ ಪದೇ ಈ ನಿದ್ರೆಯ ಅಲೋಚನೆ ಮನಸ್ಸಿಗೆ ಬರಲು ಮೂಲ ಕಾರಣವೇನೆಂದು ಹುಡುಕಲಾರಂಭಿಸಿದೆ.


      ಬಾಲ್ಯದಲ್ಲಿ ಆಟ ಪಾಠ ಊಟಗಳ ಜೊತೆಗೆ ನಿದ್ರೆಯೂ ಚೆನ್ನಾಗಿತ್ತು. ಪ್ರಾಥಮಿಕ ಮತ್ತು ಮಿಡ್ಲ್ ಸ್ಕೂಲ್ ಸಮಯದ ಪರೀಕ್ಷೆಗಳಲ್ಲಿ ನಿದ್ರೆಗೆಟ್ಟು ಓದಿದ್ದು ನೆನಪಿಲ್ಲ. ಪರೀಕ್ಷೆಯ ಹಿಂದಿನ ದಿನ ಗಡದ್ದಾಗಿ ನಿದ್ರೆ ಮಾಡಿ, ಮರುದಿನ ಚೆನ್ನಾಗಿ ಪರೀಕ್ಷೆಯನ್ನು ಬರೆದ ನೆನಪು.  ಹೈಸ್ಕೂಲು ಮತ್ತು ಕಾಲೇಜು ದಿನಗಳಲ್ಲಿ ಪರೀಕ್ಷೆಗಳ ಹಿಂದಿನ ದಿನಗಳಲ್ಲಿ ಓದುವ ಸಲುವಾಗಿ ಪೂರ್ತಿ ರಾತ್ರಿ ನಿದ್ರೆಗೆಟ್ಟಿರುವುದು, ಆಗ ನಮ್ಮ ಏರಿಯಗಳಲ್ಲಿ ರಾಜ ಸತ್ಯವೃತ, ನಳದಮಯಂತಿ, ಶನಿಮಹಾದೇವರ ಮಹಾತ್ಮೆ, ಮಹಾಭಾರತ, ರಾಮಾಯಣ, ಇವಲ್ಲದೇ ತೊಗಲು ಬೊಂಬೆಯಾಟಗಳು.... ಹೀಗೆ ಇನ್ನೂ ಅನೇಕ ನಾಟಕಗಳನ್ನು ರಾತ್ರಿ ಪೂರ್ತಿ ನಿದ್ರೆಗೆಟ್ಟು ನೋಡಿದ್ದು ನೆನಪಿದೆ. ಈ ಕಾರಣಗಳನ್ನು ಬಿಟ್ಟರೆ ನಾನು ನಿದ್ರೆಯನ್ನು ಕಳಕೊಂಡಿದ್ದು ನೆನಪಿಲ್ಲ. ಈ ವಿಚಾರವಾಗಿ ಸೊಗಸಾಗಿ ಮತ್ತು ಸುಖವಾಗಿದ್ದೆ.  ಆದ್ರೆ ಹದಿನಾಲ್ಕು ವರ್ಷಗಳ ಹಿಂದೆ ಫೋಟೊಗ್ರಫಿ ಕಲಿತ ಮೇಲೆ ಮದುವೆ ಫೋಟೊಗ್ರಫಿಗಾಗಿ ಬೆಂಗಳೂರು ಮಾತ್ರವಲ್ಲದೇ ಬೇರೆ ಬೇರೆ ನಗರ ಊರುಗಳಿಗೆ ಹೋಗಬೇಕಾಗಿ ಬಂತಲ್ಲ., ಅಲ್ಲಿಗೆ ಹೋದಾಗಲೆಲ್ಲಾ ರಾತ್ರಿ ಸರಿಯಾಗಿ ನಿದ್ರೆ ಬರುತ್ತಿರಲಿಲ್ಲ. ನಮ್ಮ ಮನೆಯಲ್ಲಿ ಚೆನ್ನಾಗಿ ನಿದ್ರೆ ಬರುತ್ತದೆ, ಆದ್ರೆ ಹೀಗೆ ಬೇರೆ ಊರುಗಳಿಗೆ ಹೋದಾಗ ಮಾತ್ರ ಏಕೆ ನಿದ್ರೆ ಬರುವುದಿಲ್ಲ? ಎನ್ನುವ ಪ್ರಶ್ನೆ ಮನದಲ್ಲಿ ಕಾಡತೊಡಗಿತ್ತು. ಇದೇ ಈ ನಿದ್ರೆ ಎನ್ನುವ ಆಲೋಚನೆ ಮನಸ್ಸಿಗೆ ಬರಲು ಮೂಲ. 

    ನೀವು ಹೇಳಬಹುದು ಪರಸ್ಥಳಕ್ಕೆ ಹೋದಾಗ ಹೊಸ ಜಾಗಕ್ಕೆ ಹೊಂದಿಕೊಳ್ಳಲು ಸ್ವಲ್ಪ ಕಷ್ಟವಾಗುವುದರಿಂದ ಪ್ರಾರಂಭದಲ್ಲಿ ನಿದ್ರೆ ಬರುವುದಿಲ್ಲವೆಂದು.  ಆ ಮಾತನ್ನು ನಾನು ಒಪ್ಪುತ್ತೇನೆ. ಮೊದಲ ಬಾರಿ ಮೈಸೂರಿಗೆ ಹೋದಾಗ ಅವತ್ತು ರಾತ್ರಿ ನಿದ್ರೆ ಬಂದಿಲ್ಲವಾದರೆ ನಿಮ್ಮ ಮಾತು ಸರಿ.  ಆದ್ರೆ ನಂತರ ಮೈಸೂರಿಗೆ ಇಪ್ಪತ್ತು ಬಾರಿ ಹೋದಾಗಲೂ ಅಷ್ಟು ಸಲವೂ ಅಲ್ಲಿ ಮಲಗಿದಾಗ ನಿದ್ರೆ ಬರದಿದ್ದರೆ ಹೇಗೆ? ಇದೇ ರೀತಿ ಬೇರೆ ಬೇರೆ ಊರುಗಳಿಗೆ ಹತ್ತಾರು ಸಲ ಹೋಗಿದ್ದರೂ ಅಷ್ಟು ಸಲವೂ ಆ ರಾತ್ರಿಗಳಲ್ಲಿ ಸರಿಯಾಗಿ ನಿದ್ರೆ ಬರದಿದ್ದರೆ ಕಾರಣವೇನು? ಮದುವೆ ಫೋಟೊಗ್ರಫಿ ಕೆಲಸದಲ್ಲಿ ಹೋಗಿದ್ದಾಗ ಅಲ್ಲಿನ ಕಲ್ಯಾಣ ಮಂಟಪಗಳಲ್ಲಿ, ಮದುವೆ ಕಡೆಯವರ ಮನೆಗಳಲ್ಲಿ ಉಳಿದುಕೊಂಡಾಗ ಅಲ್ಲಿನ ವ್ಯವಸ್ಥೆ ಸರಿಯಾಗಿರುವುದಿಲ್ಲ.  ಆ ಕಾರಣಕ್ಕಾಗಿಯೂ ಸರಿಯಾಗಿ ನಿದ್ರೆ ಬಂದಿಲ್ಲದಿರಬಹುದು ಎಂದುಕೊಂಡರೂ ಅನೇಕ ಕಡೆ ನಮಗೆ ಉತ್ತಮ ಲಾಡ್ಜಿಂಗ್ ವ್ಯವಸ್ಥೆಯಿದ್ದು ಕೂಡ ಸರಿಯಾಗಿ ನಿದ್ರೆ ಮಾಡಲು ಸಾಧ್ಯವಾಗಿಲ್ಲವಲ್ಲ?

    ಈ ಮದುವೆ ಫೋಟೋಗ್ರಫಿಯೆನ್ನುವುದು ದುಡಿಮೆಯ ವಿಚಾರವಾಗಿರುವುದರಿಂದ ಅಲ್ಲಿ ಅದೇ ಮುಖ್ಯವಾಗಿ ಉಳಿದೆಲ್ಲವೂ ಗೌಣವೆಂದೆನಿಸಿ ನಮ್ಮ ಸಂಪೂರ್ಣವಾದ ಅಲೋಚನೆ, ಶ್ರಮ, ಚಿಂತೆ, ಚಿಂತನೆಗಳೆಲ್ಲವೂ ಅದರ ಕಡೆಗೆ ಇರುವುದರಿಂದಲೂ ಅಲ್ಲಿನ ಜಾಗಗಳಲ್ಲಿ ಸರಿಯಾಗಿ ನಿದ್ರೆಬರುವುದಿಲ್ಲವೆನ್ನುವ ವಿಚಾರವನ್ನು ಒಪ್ಪಿಕೊಂಡರೂ ಇವೆಲ್ಲ ಟೆನ್ಷನ್ ಬದಿಗಿಟ್ಟು ಸುಮ್ಮನೇ ಎರಡು-ಮೂರು ದಿನ ಫೋಟೊಗ್ರಫಿ ಪ್ರವಾಸ ಹೋಗಿ ಬರೋಣ, ಅಥವ ಹೆಂಡತಿಯೊಂದಿಗೆ ನಾಲ್ಕು ದಿನ ಎಲ್ಲವನ್ನು ಮರೆತು ಪ್ರವಾಸ ಹೋಗಿಬರೋಣವೆಂದು ಹೊರಟಾಗಲೂ ಅಲ್ಲಿ ಈ ನಿದ್ರೆ ನನಗೆ ಕೈಕೊಟ್ಟಿದೆ. ಅವುಗಳಲ್ಲಿ ಕೆಲವು ಉದಾಹರಣೆಗಳು ಇಲ್ಲಿವೆ.

    ಹೊಸದಾಗಿ ಆಗತಾನೆ ಫೋಟೊಗ್ರಫಿ ಕಲಿಯುತ್ತಿದ್ದ ಸಮಯ. ಪ್ರಾರಂಭದಲ್ಲಿ ಬಂಡಿಪುರಕ್ಕೆ ಹೋಗಿದ್ದೆ. ಅಲ್ಲಿನ ಕಾಟೇಜ್ ಉತ್ತಮವಾಗಿ ಮಲಗುವ ವ್ಯವಸ್ಥೆಯಿದ್ದರೂ ನಿದ್ರೆ ಬಂದಿರಲಿಲ್ಲ. ಇದಲ್ಲದೇ ಗೆಳೆಯರ ಜೊತೆ ಫೋಟೊಗ್ರಫಿಗಾಗಿ ನಾಗರಹೊಳೆ, ಕುಶಾಲನಗರ, ಮಡಿಕೇರಿ, ಮೈಸೂರು.........ಅಲ್ಲದೇ ಕಬಿನಿ ಜಂಗಲ್ ಲಾಡ್ಜ್ ನಂತ ಏಷ್ಯದಲ್ಲೇ ಅತ್ಯುತ್ತಮವೆನಿಸುವ ರೆಸಾರ್ಟ್ನಲ್ಲಿ ಉತ್ತಮವಾದ ಹಸಿರು ವಾತಾವರಣ, ಪಂಚತಾರ ಸೌಲಭ್ಯದ ವೈಭೋಗವಿದ್ದರೂ ಅಲ್ಲಿ ಮಲಗಿದ್ದ ರಾತ್ರಿ ನಿದ್ರೆಯಿಲ್ಲದೇ ಒದ್ದಾಡಿದ್ದೆ.  ಊಟಿ, ಕೊಡೈಕನಲ್, ಗೋವ ಏರ್ಕಾಡ್, ಮುನ್ನಾರ್, ಪಾಂಡಿಚೇರಿ ಇನ್ನೂ ಅನೇಕ ಕಡೆ ಪ್ರವಾಸ ಹೋಗಿದ್ದು ಅಲ್ಲಿ ಅತ್ಯುತ್ತಮ ಸೌಲಭ್ಯಗಳು ವಿಲಾಸಿ ರೆಸಾರ್ಟ್ ಕಾಟೇಜುಗಳಲ್ಲಿ ಇದ್ದರೂ ನಾನು ಅಲ್ಲೆಲ್ಲ ರಾತ್ರಿ ನಿದ್ರೆಯಿಲ್ಲದೇ ಒದ್ದಾಡಿದ್ದೇನೆ.  ಭದ್ರಾ ಜಲಶಯದ ಬಳಿ ಇರುವ "ರೆವರ್ ಟರ್ನ್ ಜಂಗಲ್ ಲಾಡ್ಜ್" ಒಂದು ಅತ್ಯುತ್ತಮ ವಾದ ಜಂಗಲ್ ರಿಸಾರ್ಟ್ ಅಲ್ಲಿಯೂ ಫೋಟೊಗ್ರಫಿ ಪ್ರವಾಸದಲ್ಲಿ ಎರಡು ರಾತ್ರಿ ನಿದ್ರೆಯಿಲ್ಲದೇ ಒದ್ದಾಡಿದ್ದೇನೆ.

    ’ಆರೆಂಜ್ ಕೌಂಟಿ" ರೆಸಾರ್ಟ್ ನಿಜಕ್ಕೂ ವಿಶಿಷ್ಟ, ವಿಭಿನ್ನ ಮತ್ತು ದುಬಾರಿಯಾದ ಒಂದು ಅದ್ಬುತವಾದ ಲೋಕವೆನಿಸುವ ಪಂಚತಾರ ರೆಸಾರ್ಟ್. ಅಲ್ಲಿರುವಷ್ಟು ದಿನ ನಾವು ಪ್ರಪಂಚವನ್ನೇ ಮರೆತುಹೋಗುತ್ತೇವೆ. ಆ ಮಟ್ಟಿಗಿನ ಸಕಲ ಸೌಕಲ್ಯಗಳುಳ್ಳಂತದ್ದು.  ಆ ರಿಸಾರ್ಟ್ ಮತ್ತು ಅದರ ಸುತ್ತಮುತ್ತಲಿನ ಪರಿಸರವನ್ನು ಫೋಟೊಗ್ರಫಿ ಮಾಡಲು ನನಗೆ ಅವರ ಕಡೆಯಿಂದ ಅಸೈನ್ ಮೆಂಟ್ ಸಿಕ್ಕಿತ್ತು. ಅಲ್ಲಿ ಬೆಳಿಗ್ಗೆ ಆರುಗಂಟೆಯಿಂದ ರಾತ್ರಿ ಎಂಟು ಗಂಟೆಯವರೆಗೆ ನಿರಂತರವಾಗಿ ಫೋಟೊಗ್ರಫಿಯನ್ನು ಮಾಡಬೇಕಾಗಿದ್ದರಿಂದ ರಾತ್ರಿ ಹೊತ್ತಿಗೆ ಸುಸ್ತಾಗಿಬಿಡುತ್ತಿತ್ತು. ಪಂಚತಾರ ರೀತಿಯ ಊಟ ಮತ್ತು ವ್ಯವಸ್ಥೆ, ಅಲ್ಲಿನ ಕಾಡಿನ ವಾತಾವರಣದಿಂದಾಗಿ ರಾತ್ರಿ ಮಲಗಿದ್ದ ತಕ್ಷಣ ನಿದ್ರೆ ಬರಬೇಕಿತ್ತು.  ಆದ್ರೆ ಅಂತ ಸ್ಥಳದಲ್ಲೂ ನಿದ್ರೆಯಿಲ್ಲದೇ ಒದ್ದಾಡಿದ್ದರಿಂದಾಗಿ ಈ ನಿದ್ರೆ ವಿಚಾರ ಮನದೊಳಗೆ ಆಳವಾಗಿ ಬೇರೂರಿ ಇದಕ್ಕೆ ಕಾರಣವನ್ನು ಕಂಡು ಹಿಡಿಯಲೇಬೇಕೆಂದು ತೀರ್ಮಾನಿಸಿದ್ದೆ.



     ಕೆಲವು ದಿನಗಳ ಹಿಂದೆ ಮದುವೆ ಫೋಟೊಗ್ರಫಿಗಾಗಿ ಭದ್ರಾವತಿಗೆ ಹೋಗಿದ್ದೆ. ಮದುವೆ ಮನೆಯವರು ನನಗೆ ಮತ್ತು ನನ್ನ ವಿಡಿಯೋಗ್ರಾಫರ್ ಇಬ್ಬರಿಗೂ  ಕಲ್ಯಾಣಮಂಟಪದ ಪಕ್ಕದಲ್ಲಿಯೇ ಇದ್ದ ಹೋಟಲ್ಲಿನಲ್ಲಿ ನಮಗಾಗಿ ಒಂದು ರೂಮ್ ಕಾದಿರಿಸಿದ್ದರು. ನಮ್ಮ ಲಗ್ಗೇಜು ಬಟ್ಟೆ ಇತ್ಯಾದಿಗಳನ್ನು ಅಲ್ಲಿಯೇ ಇರಿಸಿ ರಾತ್ರಿ ಅರತಕ್ಷತೆ ಫೋಟೊಗ್ರಫಿ ವಿಡಿಯೋಗ್ರಫಿ ಕೆಲಸ ಮುಗಿದು ಊಟವಾದ ಮೇಲೆ ನಾವು ಮಲಗುವ ವ್ಯವಸ್ಥೆಯಾಗಿತ್ತು. ಆದರೆ ನಮಗೆ ಹಾಗೆ ಸುಲಭವಾಗಿ ಮತ್ತು ಸುಖವಾಗಿ ನಿದ್ರೆ ಮಾಡುವ ಸದವಕಾಶ ಒದಗಿಬರಲಿಲ್ಲ. ಏಕೆಂದರೆ ಅವತ್ತು ಮದ್ಯರಾತ್ರಿ ಹೊತ್ತಿಗೆ ಅರಿಸಿನ ಬೆರೆಸಿದ ಎಣ್ಣೆಯನ್ನು ವದುವರರಿಗೆ ಹಚ್ಚುವ ಕಾರ್ಯಕ್ರಮವಿತ್ತು. ಈ ಶಾಸ್ತ್ರವು ಕೆಲವು ಸಂಪ್ರದಾಯಗಳಲ್ಲಿ ಹಗಲು ಹೊತ್ತಿನಲ್ಲಿ ನಡೆದರೆ ಇನ್ನು ಕೆಲವು ಸಂಪ್ರದಾಯಗಳಲ್ಲಿ ಮದ್ಯರಾತ್ರಿ ಹೊತ್ತಲ್ಲಿ ನಡೆಯುತ್ತದೆ. ಛಾಯಾಗ್ರಾಹಕರಿಗೆ ಮತ್ತು ವಿಡಿಯೋಗ್ರಾಫರುಗಳಿಗೆ ಮದ್ಯರಾತ್ರಿಯ ಫೋಟೊಗ್ರಫಿಯೆಂದರೆ ಸಹಜವಾಗಿ ಕಷ್ಟ ಕಷ್ಟ. ಮದುವೆ ಮನೆಯವರಿಗೆ ಅದು ಅಪರೂಪದ ಸಂಭ್ರಮವಾದರೆ ನಮ್ಮಂತ ಛಾಯಾಗ್ರಾಹಕ-ವಿಡಿಯೋಗ್ರಾಹಕರಿಗೆ ಅದು ನಿದ್ರೆಗೆಟ್ಟು ಮಾಡುವ ಮಾಡಬೇಕಾದ ಅನಿವಾರ್ಯ ಸಂಗತಿಯಾದ್ದರಿಂದ ಬೇಸರವಾದರೂ ಸಹಿಸಿಕೊಂಡು ಮಾಡಲೇಬೇಕು. ಏಕೆಂದರೆ ಅದೇ ನಮ್ಮ ವೃತ್ತಿಯಾಗಿದೆಯಲ್ಲ! ಅವತ್ತು ಆ ಕಾರ್ಯಕ್ರಮ ಮದ್ಯರಾತ್ರಿ ಹನ್ನೆರಡು ಗಂಟೆಗೆ ಶುರುವಾಗಿ ಅದು ಮುಗಿಯುವ ಹೊತ್ತಿಗೆ ಮಧ್ಯರಾತ್ರಿ ಎರಡು ಗಂಟೆಯಾಗಿತ್ತು. ನಮಗೆ ಕಾದಿರಿಸಿದ್ದ ರೂಮಿಗೆ ಬಂದು ನೋಡುತ್ತೇವೆ! ಆಗಲೇ ಅದರಲ್ಲಿ ಐದುಜನ ಮದುವೆ ಮನೆಯ ಅತಿಥಿಗಳು ನಿದ್ರಿಸುತ್ತಿದ್ದಾರೆ. ಅದು ಎರಡು ಬೆಡ್ ರೂಮಿನ ಕೊಠಡಿ. ಮಂಚದ ಮೇಲೆ ಮೂವರು ನಿದ್ರೆಯ ಕನಸಿನಲ್ಲಿದ್ದರೆ, ನೆಲದಲ್ಲಿ ಇಬ್ಬರು ಹೆಚ್ಚುವರಿ ಪಡೆದುಕೊಂಡ ಹಾಸಿಗೆ ಮೇಲೆ ಒದ್ದಾಡುತ್ತಿದ್ದಾರೆ. ನಾನು ಮತ್ತು ನನ್ನ ಗೆಳೆಯ ವಿಡಿಯೋಗ್ರಾಫರ್ ಮುಖ-ಮುಖ ನೋಡಿಕೊಂಡೆವು. ಏಕೆಂದರೆ ನಮಗೆ ಮೀಸಲಿದ್ದ ನಿದ್ರಾಸ್ಥಳ ಬೇರೆಯವರ ಪಾಲಾಗಿತ್ತು. ವಿಧಿಯಿಲ್ಲದೇ ನಮ್ಮ ಕಾರ್ಯಕ್ರಮದ ಆಯೋಜಕರಿಗೆ ಫೋನಾಯಿಸಿದೆ. ತಕ್ಷಣ ಅಲ್ಲಿಂದ ಬಂತು ಉತ್ತರ. "ನಿಮಗಾಗಿ ಎರಡು ಹೆಚ್ಚುವರಿ ಹಾಸಿಗೆಯನ್ನು ಅಲ್ಲಿಡಲಾಗಿದೆ. ಸ್ವಲ್ಪ ಅಡ್ಜೆಸ್ಟ್ ಮಾಡಿಕೊಂಡು ಸ್ಥಳವನ್ನು ಹೊಂದಿಸಿಕೊಳ್ಳಿ. ನಾಳೆ ಬೆಳಿಗ್ಗೆ ಏಳುಗಂಟೆಗೆ ನೀವು ಸಿದ್ದರಾಗಿ ಬಂದುಬಿಡಬೇಕು. ಈಗ ಸುಖವಾಗಿ ನಿದ್ರೆಮಾಡಿ. ತೊಂದರೆಗಾಗಿ ಕ್ಷಮೆಯಿರಲಿ. ಗುಡ್ ನೈಟ್ " ಎಂದರು. ಮರುಕ್ಷಣವೇ ಫೋನ್ ಕಟ್ ಆಯ್ತು. ನನ್ನ ವಿಡಿಯೋಗ್ರಾಫರ್ ಗೆಳೆಯ ಒಂದು ಹಾಸಿಗೆಯನ್ನು ಹಾಕಿಕೊಂಡು ಎರಡೇ ನಿಮಿಷದಲ್ಲಿ ನಿದ್ರೆಹೋದ. ನಾನು ಜಾಗ ಹುಡುಕುತ್ತೇನೆ ಎಲ್ಲಿಯೂ ಕಾಣಿಸುತ್ತಿಲ್ಲ! ಆ ಪುಟ್ಟದಾದ ಕೋಣೆಯಲ್ಲಿ ನನಗೆ ಕಾಣಿಸಿದ್ದು ಒಂದೇ ಸ್ಥಳ . ಮೇಕಪ್ ಮಾಡಿಕೊಳ್ಳಲು ಒಂದು ಪುಟ್ಟ ಕಪಾಟಿಗೆ ಹೊಂದಿಕೊಂಡ ದೊಡ್ಡ ಕನ್ನಡಿ. ಅದರ ಕೆಳಗೆ ಮೂರು ಅಡಿ ಅಂತರದಲ್ಲಿರುವ ನೆಲದ ಮೇಲೆ ಮಾತ್ರ ಜಾಗವಿತ್ತು. ಗೋಡೆಯ ಪಕ್ಕದ ಆ ಜಾಗ ಅಗಲ ಕಡಿಮೆಯಿದ್ದರೂ ಉದ್ದ ಹೆಚ್ಚಿತ್ತು. ಸದ್ಯ ಇಷ್ಟಾದರೂ ಸಿಕ್ಕಿತಲ್ಲ ಎಂದುಕೊಂಡು ನನಗಾಗಿ ಉಳಿದಿದ್ದ ಹಾಸಿಗೆಯನ್ನು ಹಾಕಿಕೊಂಡು ಬಲಬದಿಯ ಗೋಡೆಗೆ ಒರಗಿಕೊಂಡಂತೆ ಮಲಗಿದೆನಷ್ಟೆ. ಮರುಕ್ಷಣದಲ್ಲಿ ಮಾಯದಂತ ನಿದ್ರೆ ಆವರಿಸಿತ್ತು. ಬೆಳಿಗ್ಗೆ ಏಳುಗಂಟೆಗೆ ಮದುವೆ ಮನೆಯವರು ಎಚ್ಚರಗೊಳಿಸದಿದ್ದಲ್ಲಿ ಅವತ್ತು ಮದ್ಯಾಹ್ನದವರೆಗೆ ಮಲಗಿಬಿಡುತ್ತಿದ್ದೆನೇನೋ, ಅಂತ ಅದ್ಬುತವೆನಿಸುವ ನಿದ್ರೆ.  ರಾತ್ರಿ ಯಾವುದಾದರೂ ಕನಸು ಬಿತ್ತಾ ಅಂತ ನೆನಪಿಸಿಕೊಂಡೆ. ಯಾವ ಕನಸು ಬರಲಿಲ್ಲ. ಕನಸುಗಳೇ ಬರದ ಅಪರೂಪದ ಸುಖವಾದ ಮತ್ತು ನೆಮ್ಮದಿಯಾದ ನಿದ್ರೆ ಅದಾಗಿತ್ತು. ನಂತರ ಸಿದ್ದನಾಗಿ ಮದುವೆ ಫೋಟೊಗ್ರಫಿಗೆ ಹೊರಟರೂ ಕೂಡ ನನ್ನ ಮನೆಯಲ್ಲಿ ಮಾಡುವಷ್ಟರ ಮಟ್ಟಿಗೆ ಇಷ್ಟು ಚೆನ್ನಾದ ನಿದ್ರೆಗೆ ಕಾರಣವೇನಿರಬಹುದು ಎನ್ನುವ ವಿಚಾರ ಮನಸ್ಸಿನಲ್ಲಿ ಕೊರೆಯುತ್ತಿತ್ತು. ಕೆಲವೇ ನಿಮಿಷಗಳಲ್ಲಿ ಅದಕ್ಕೆ ಉತ್ತರ ಸಿಕ್ಕಿತ್ತು. ಹತ್ತಾರು ಪ್ರವಾಸಗಳಲ್ಲಿ ಅತ್ಯುತ್ತಮ ಮತ್ತು ಸಕಲ ಸೌಕರ್ಯವುಳ್ಳ, ತ್ರಿತಾರ, ಪಂಚತಾರ ಹೋಟಲ್ಲುಗಳು, ರಿಸಾರ್ಟುಗಳಲ್ಲಿ ಬರದ ನಿದ್ರೆ ನಿನ್ನೆ ರಾತ್ರಿ ಇಷ್ಟು ಚೆನ್ನಾಗಿ ಬಂದಿರುವುದಕ್ಕೆ ಕಾರಣ ನಾನು ಗೋಡೆಗೆ ಒರಗಿಕೊಂಡು ಮಲಗಿರುವುದು!  ಮನೆಯಲ್ಲಿಯೂ ಕೂಡ ನಾನು ಗೋಡೆಗೆ ಒರಗಿಕೊಂಡು ಮಲಗಿವುದರಿಂದಲೇ ಚೆನ್ನಾಗಿ ನಿದ್ರೆ ಮಾಡುವುದು! ಈ ಫೋಟೊಗ್ರಫಿ ಮಾಡಲು ಪ್ರಾರಂಭಿಸಿದ ಹದಿನಾಲ್ಕು ವರ್ಷದ ನಂತರ ಮೊಟ್ಟ ಮೊದಲ ಬಾರಿಗೆ ಸುಖವಾಗಿ ನಿದ್ರೆ ಮಾಡುವ ರಹಸ್ಯವನ್ನು ತಿಳಿದಂತೆ ಜ್ಞಾನೋದಯವಾಯ್ತು!

    ನನಗೇನೋ ಗೋಡೆಗೆ ತಾಗಿಕೊಂಡು ಮಲಗಿದರೆ ಸುಖನಿದ್ರೆ ಬರುತ್ತದೆನ್ನುವುದು ಖಚಿತವಾಗಿ ಜ್ಞಾನೋದಯವಾಯ್ತು. ಅಲ್ಲಿಂದ ಮುಂದೆ ನಾನು ಯಾವ ಊರಿನಲ್ಲಿಯೇ ಉಳಿದುಕೊಳ್ಳಲಿ, ನನ್ನ ಹಾಸಿಗೆ ಅಥವ ಮಂಚವನ್ನು ಗೋಡೆ ಬದಿಗೆ ಮೊದಲು ಸರಿಸಿಬಿಡುತ್ತೇನೆ. ಮಂಚ ಹಾಸಿಗೆ ಏನೂ ಇಲ್ಲದಿದ್ದಲ್ಲಿ ಕೊನೇ ಪಕ್ಷ ಒಂದು ಚಾಪೆ ಮತ್ತು ತಲೆದಿಂಬು ಕೊಟ್ಟು ಗೋಡೆ ಬದಿ ಎರಡು ಅಡಿಯಷ್ಟು ಅಗಲ, ಆರು ಆಡಿಯಷ್ಟು ಉದ್ದದ ಜಾಗವನ್ನು ಕೊಟ್ಟುಬಿಡ್ಟರೆ ಸಾಕು ನನ್ನ ಸುಖನಿದ್ರೆಗೆ.  ನನ್ನ ಚೆಂದದ ನಿದ್ರೆಗೆ ಗೋಡೆಯೇ ಆಧಾರವಾದರೆ, ಈ ಭೂಮಂಡಲದಲ್ಲಿರುವ ೮೦೦ ಕೋಟಿ ಜನರಿಗೂ ನನ್ನಂತೆ ಏನಾದರೂ ಅಧಾರವಿರಬಹುದೇನೋ. ಇದು ಕೇವಲ ನನ್ನ ಅನಿಸಿಕೆ ಮಾತ್ರ. ಆದರೂ ನನ್ನ ಬುದ್ಧಿಗೆ ತಿಳಿದಂತೆ ಅನುಭವಕ್ಕೆ ದಕ್ಕಿದಂತೆ ಬೇರೆಯವರ ನಿದ್ರೆಯ ಬಗ್ಗೆ ಹೇಳಬಹುದಾದರೆ, ಕೆಲವರಿಗೆ ಹಾಸಿಗೆ ತುದಿಯಲ್ಲಿ ಮಲಗಿದರೆ ನಿದ್ರೆ, ಒಬ್ಬರಿಗೆ ಮಕಾಡೆ ಮಲಗಿದರೆ ನಿದ್ರೆ, ಇನ್ನೊಬ್ಬರಿಗೆ ಅಂಗಾತ ಮಲಗಿದರೆ ನಿದ್ರೆ, ಮಗದೊಬ್ಬರಿಗೆ ಹಾಸಿಗೆ ತುದಿಯಲ್ಲಿ ಕೈಕಾಲುಗಳನ್ನು ಇಳಿಬಿಟ್ಟುಕೊಂಡು ಮಲಗಿದರೆ ನಿದ್ರೆ. ಹಾಸಿಗೆಯನ್ನು ಬಿಟ್ಟು ನೆಲಕ್ಕೆ ಬಂದರೆ, ಅನೇಕರಿಗೆ ನೆಲಕ್ಕೆ ಹಾಸಿದ ಚಾಪೆಯ ಮೇಲೆ ಸುಖನಿದ್ರೆ, ಮತ್ತೊಬ್ಬರಿಗೆ ಈ ಭೂಮಿಯೇ ಹಾಸಿಗೆ ಆಕಾಶವೇ ಹೊದಿಕೆಯೆನ್ನುವಂತೆ ಬರಿನೆಲದ ಮೇಲೆ ಮಲಗಿದರೆ ಸಕತ್ ನಿದ್ರೆ.  ಇಲ್ಲೊಬ್ಬನಿಗೆ ತಲೆದಿಂಬಿದ್ದರೆ ನಿದ್ರೆ, ಅಲ್ಲೊಬ್ಬನಿಗೆ ತಲೆದಿಂಬಿಲ್ಲದಿದ್ದರೆ ನಿದ್ರೆ, ಇವನಿಗೆ ಪುಸ್ತಕವನ್ನು ಓದುತ್ತಾ ಮಲಗಿದರೆ ನಿದ್ರೆ, ಆತನಿಗೆ ಎಫ್ ಎಂ ನಲ್ಲಿ ಹಳೆಯ ಸುಮಧುರ ಹಾಡುಗಳನ್ನು ಕೇಳುತ್ತಿದ್ದರೆ ನಿದ್ರೆ, ಒಬ್ಬನಿಗೆ ಫ್ಯಾನ್ ಇದ್ದರೆ ನಿದ್ರೆ ಮತ್ತೊಬ್ಬನಿಗೆ ಫ್ಯಾನ್ ಇಲ್ಲದಿದ್ದಲ್ಲಿ ಒಳ್ಳೆಯ ನಿದ್ರೆ. ಹಾಸಿಗೆ, ದಿಂಬು, ನೆಲ ಚಾಪೆಯನ್ನು ದಾಟಿ ನೋಡಿದರೆ ಅದೋ ಅವಳಿಗೆ ಟಿವಿಯಲ್ಲಿ ಬರುವ ಅತ್ತೆ ಸೊಸೆ ಕಿತ್ತಾಟದ ಧಾರವಾಹಿಯನ್ನು ತಪ್ಪದೇ ನೋಡಿದರೆ ನಿದ್ರೆ, ಇವನಿಗೆ ರಾತ್ರಿ ಮಲಗುವ ಮುನ್ನ ಕ್ರೈಂ ಧಾರಾವಾಹಿಯನ್ನು ಟಿವಿಯಲ್ಲಿ ನೋಡಿದರೆ ನಿದ್ರೆ, ಆ ಹುಡುಗನಿಗೆ ಮಿಡ್ ನೈಟ್ ಮಸಾಲವನ್ನು ನೋಡಿದರೆ ನಿದ್ರೆ, ಈ ಮಗುವಿಗೆ ಅಜ್ಜಿಯ ಕೈತುತ್ತು ತಿಂದ ಮೇಲೆ ನಿದ್ರೆ, ಆ ಮಗುವಿಗೆ ಅಜ್ಜನ ಕತೆ ಕೇಳುತ್ತಲೇ ನಿದ್ರೆ, ಈಗೀನ ಮಕ್ಕಳಿಗೆ ಕಾರ್ಟೂನ್ ನೋಡುತ್ತಲೇ ನಿದ್ರೆ. ಅದೋ ನೋಡಿ ಅವನಿಗೆ ರಾತ್ರಿ ಹನ್ನೊಂದುಗಂಟೆಗೆ ತನ್ನ ಪೋಸ್ಟಿಂಗಿಗೆ ಬಂದ ಕಾಮೆಂಟುಗಳು ಮತ್ತು ಲೈಕುಗಳನ್ನು ನೋಡಿದ ಮೇಲೆ ನಿದ್ರೆ. ಅವನೊಬ್ಬನಿಗೆ ರಾತ್ರಿ ಬ್ಲಾಗಿನಲ್ಲಿ ಹಾಕಿದ ಲೇಖನಕ್ಕೆ ಎಷ್ಟು ಕಾಮೆಂಟುಗಳು ಬಂದಿವೆ ಎಂದು ನೋಡಿದ ಮೇಲೆ ನಿದ್ರೆ. ಈತನೊಬ್ಬನಿಗೆ ರಾತ್ರಿ ಮಲಗುವ ಮುನ್ನ ಒಂದು ಲೇಖನವೋ, ಕವನವೋ ಬರೆದು ಬ್ಲಾಗಿಗೆ ಹಾಕಿದ ಮೇಲೆ ಸಮಾಧಾನದ ನಿದ್ರೆ ಬಂದರೆ ಅವನೊಬ್ಬನಿಗೆ ಕಂಫ್ಯೂಟರ್ ಗೇಮ್ ಆಡಿದ ಮೇಲೆ ನಿದ್ರೆ. ಟೆರಸ್ಸಿನಲ್ಲಿ ಕುಳಿತು ಸಿಗರೇಟು ಸೇದಿ ಬಿಡುವ ಹೊಗೆಯ ನಡುವೆ ಕಣ್ಣುಮುಚ್ಚಾಲೆಯಾಡುವ ಆಕಾಶದ ನಕ್ಷತ್ರಗಳನ್ನು ನೋಡುತ್ತಿದ್ದರೆ ನಿದ್ರೆ, ಹಳ್ಳಿಯಲ್ಲಿ ರಾತ್ರಿ ಬೇಗ ಊಟ ಮುಗಿಸಿ ಹೊರಾಂಡದಲ್ಲಿ ಚಾಪೆ ಹಾಸಿಕೊಂಡು ಅಂಗಾತ ಮಲಗಿ ಆಕಾಶದಲ್ಲಿರುವ ನಕ್ಷತ್ರಗಳನ್ನು ಎಣಿಸಿ ಅದರ ಕತೆಯನ್ನು ಹೇಳುತ್ತಾ ನಿದ್ರೆಹೋದರೆ ಆತನ ಎದೆಯ ಮೇಲೆ ಕುಳಿತ ಮೊಮ್ಮಗನಿಗೆ ಒಮ್ಮೆ ಆಕಾಶದಲ್ಲಿರುವ ನಕ್ಷತ್ರಗಳನ್ನು ಮಗದೊಮ್ಮೆ ಅಜ್ಜನ ಎದೆಯ ಮೇಲೆ ಹರಡಿಕೊಂಡ ಕೂದಲು ಎಣಿಸುತ್ತಲೇ ನಿದ್ರೆ, ಪಕ್ಕದಲ್ಲಿಯೇ ಕುಳಿತ ಅಜ್ಜಿ ಬೊಕ್ಕಬಾಯಲ್ಲಿ ಎಲೆಅಡಿಕೆ ಹಾಕಿಕೊಂಡು ಮುಟಿಗೆಯಷ್ಟು ತಂಬಾಕು ಹಾಕಿ ಜಗಿಯುತ್ತಾ ಅಜ್ಜ ಮಗನ ಆಟವನ್ನು ನೋಡುತ್ತಾ ನಿದ್ರೆ, ಅತ್ತ ಸೊಸೆ ಗಂಡನಿಗೆ ಹೊಟ್ಟೆತುಂಬ ಊಟಕ್ಕಿಟ್ಟು ಗಂಡ ಮಲಗಿದ ಮೇಲೆ ಆಕೆಗೆ ನೆಮ್ಮದಿಯ ನಿದ್ರೆ. ಮಗ ಸೊಸೆ ಇಬ್ಬರೂ ಸುಖವಾಗಿ ಮಲಗಿದರೆಂದು ತಿಳಿದ ಅತ್ತೆ ಎಲ್ಲವನ್ನು ಒಪ್ಪ ಓರಣ ಮಾಡಿ ತನ್ನ ಗಂಡನ ಜೊತೆ ಒಂದಷ್ಟು ದಿನನಿತ್ಯದ ಕತೆಗಳನ್ನು ಹಂಚಿಕೊಂಡ ಮೇಲೆ ನಿದ್ರೆ. ಅಜ್ಜನಿಗೂ ಅಷ್ಟೆ. ತನ್ನ ಮಗ ಸೊಸೆಯನ್ನು ಸುಖವಾಗಿ ಮಲಗಿಸಿ ಬಂದ ಹೆಂಡತಿಯ ಮುಖವನ್ನು ನೋಡಿ, ಅವಳ ಕೈಯಿಂದ ಹದವಾಗಿ ಬೆರೆಸಿದ ಎಲೆ ಅಡಿಕೆ ಸುಣ್ಣವನ್ನು ಪಡೆದು ಬಾಯಲ್ಲಿ ಇಟ್ಟುಕೊಂಡು ಜಗಿಯುತ್ತಾ...ಆಕೆಯ ತೊಡೆಯ ಮೇಲೆ ಮಗುವಿನಂತೆ ಮಲಗಿ...ಇವತ್ತು ಏನಾಯ್ತು...ಗೊತ್ತಾ...ಅಂತ ಅಂದಿನ ಪೂರ್ತಿ ದಿನಚರಿಯ ಕಷ್ಟಸುಖವನ್ನು ಹೇಳುತ್ತಲೆ ನಿದ್ರೆ...
   ಅಯ್ಯೋ ಇವನ್ಯಾಕೋ ನಿದ್ರೆಯ ವಿಚಾರವಾಗಿ ಇಷ್ಟೊಂದು ಬೋರ್ ಹೊಡೆಸುತ್ತಿದ್ದಾನಲ್ಲ ಅಂತ ನಿಮಗೂ ಆಕಳಿಕೆ ಬಂತೇ? ಹಾಗಾದರೆ ಅದೇ ನಿಮ್ಮ ಸುಖ ನಿದ್ರೆಯ ರಹಸ್ಯವಾಗಿರಬಹುದು ಎಂದುಕೊಳ್ಳುತ್ತಾ ಈ ನಿದ್ರಾವತಾರ ಲೇಖನವನ್ನು ಬರೆದು ಮುಗಿಸುತ್ತಿದ್ದೇನೆ.......ಅಯ್ಯೋ ನನಗೂ ಕೂಡ ಆಕಳಿಕೆ ಬಂತು...ಸ್ವಲ್ಪ ಮಲಗುತ್ತೇನೆ......ಅಹಹ...

ಪ್ರೀತಿಯಿಂದ..
ಶಿವು.ಕೆ