Saturday, September 7, 2019





ಸೆಪ್ಟಂಬರ್ ೪ರ "Venders day" ಪ್ರಯುಕ್ತ, ಇವತ್ತಿನ ಉದಯವಾಣಿಯಲ್ಲಿ ನನ್ನದೊಂದು ಲೇಖನ ಬಂದಿದೆ. ಅವರದೇ ಕಾರಣಗಳಿಂದಾಗಿ ಲೇಖನವನ್ನು ಚಿಕ್ಕದಾಗಿ ಹಾಕಿದ್ದಾರೆ. ಅದರ ಪೂರ್ತಿ ಲೇಖನ ನಿಮಗಾಗಿ.

ಸೆಪ್ಟಂಬರ್ ನಾಲ್ಕು ವೆಂಡರ್ಸ್ ಡೇ ದಿನ.

ಈ ದಿನದ ಸವಿನೆನಪಿನ ಆಚರಣೆಗಾಗಿ ನನ್ನ ಎಪ್ಪತ್ತೈದು ವರ್ಷಗಳು ದಾಟಿದ ಹಿರಿಯ ದಿನಪತ್ರಿಕೆ ಕೊಳ್ಳುವ ಗ್ರಾಹಕರೊಂದಿಗಿನ ನೈಜ ಅನುಭವವನ್ನು ಹಂಚಿಕೊಳ್ಳಬೇಕೆನಿಸಿತು.

ನೈಜ ಅನುಭವ ೧

ನಾನು ಬೆಲ್ ಮಾಡಿದ ಕೆಲವೇ ಸೆಕೆಂಡುಗಳಲ್ಲಿ “ಯಾರು” ಅಂತ ಹೆಣ್ಣಿನ ಸೊರಗಿದ ಕೀರಲು ದ್ವನಿಯೊಂದು ಕೇಳಿತು. “ನಾನು ಶಿವು” ಅಂದೆ. ೨೫ ವರ್ಷಗಳ ಹಿಂದೆ ಇದೇ ರೀತಿ ಮೊದಲ ಸಲ ನಾನು ದಿನಪತ್ರಿಕೆ ವಸೂಲಿಗೆ ಇದೇ ಮನೆ ಬಾಗಿಲ ಮುಂದೆ ನಿಂತು ಬೆಲ್ ಮಾಡಿದ್ದಾಗ . ಆಕೆ ಬಾಗಿಲು ತೆಗೆದು ನನಗೆ ದಿನಪತ್ರಿಕೆ ಹಣವನ್ನು ಕೊಟ್ಟಿದ್ದರು ಆಗ ಮನೆಯಲ್ಲಿ ಮಗ, ಸೊಸೆಯೂ ಇದ್ದರು. ಆಕೆ ಸ್ಕೂಲಿನ ಹೆಡ್ ಮೇಡಮ್ ಆಗಿ ನಿವೃತ್ತಿ ಹೊಂದಿದವರು. ಅಲ್ಲಿಂದ ಹೀಗೆ ನನ್ನ ದಿನಪತ್ರಿಕೆ ತಲುಪಿಸುವ ಕೆಲಸ ಸಾಗುತ್ತಿರುವಂತೆ ಮಗ ಮತ್ತು ಸೊಸೆ ಅವರ ಮಕ್ಕಳ ಕೆಲಸದ ನಿಮಿತ್ತ ಅವರ ಜೊತೆ ವಿದೇಶದಲ್ಲಿ ನೆಲೆಸಿದ್ದರು. ಅಲ್ಲಿಯವರೆಗೆ ಗಟ್ಟಿ ಜೀವ ಮತ್ತು ಜೀವನವಾಗಿದ್ದ ಇವರದು ನಂತರ ಒಂಟಿ ಜೀವನವಾಯ್ತು. ಪತಿ ದಿವಂಗತರಾದ ಮೇಲೆ, ಅವರ ಹತ್ತಿರವಿದ್ದರೇ ನನಗೇನು ಲಾಭ ಎನ್ನುವ ಲೆಕ್ಕಚಾರದ ಈ ಕಾಲದಲ್ಲಿ ಮಗ, ಸೊಸೆ, ಮೊಮ್ಮೊಕ್ಕಳು, ಸಂಭಂದಿಗಳೂ ದೂರ ದೂರ. ವಯಸ್ಸು ಹೆಚ್ಚಾದಂತೆಲ್ಲ ಮನಸ್ಸು ಮಾಗತೊಡಗಿದರೂ ಹೃದಯ ಮಾಗುವುದಿಲ್ಲವಲ್ಲ! ಬದಲಾಗಿ ಮಗುವಾಗುತ್ತಾ ಹೋಗುತ್ತದೆ. ಆಗ ಎಲ್ಲರೂ ಮತ್ತೆ ಜೊತೆಗಿರಬೇಕು ಅನ್ನಿಸಿದರೂ, ಅರಗಿಸಿಕೊಳ್ಳಲಾಗದ ವಾಸ್ತವ ಸ್ಥಿತಿ ಮತ್ತು ಏಕಾಂಗಿತನದಿಂದಾಗಿ ಅದೂ ಕುಗ್ಗತೊಡಗಿತಲ್ಲ! ಜೊತೆ ಜೊತೆಗೆ ಗಟ್ಟಿಯಾಗಿದ್ದ ಬೆನ್ನು ಕೂಡ ಬಾಗತೊಡಗಿತ್ತು. ಈಗ ಅದೇ ಬಾಗಿಲು ತೆಗೆಯಿತು. “ ಹೇಗಿದ್ದೀರಿ, ಚೆನ್ನಾಗಿದ್ದೀರಾ...ಈಗ ಚಳಿಗಾಲ ಅಲ್ವ, ನನ್ನ ಕೈಕಾಲುಗಳೆಲ್ಲಾ ಹಿಡಿದುಕೊಂಡಂತೆ ಆಗಿಬಿಡುತ್ತೆ, ಮತ್ತೆ ಹಣವನ್ನು ನಿಮಗಾಗಿ ಎತ್ತಿಟ್ಟಿದ್ದರೂ ಮರೆತುಹೋಗುತ್ತದೆ, ನೀವು ಬಂದು ಬೆಲ್ ಮಾಡುತ್ತಿದ್ದಂತೆ ಮತ್ತೆ ನೆನಪಾಗಿ ಹುಡುಕಿಕೊಂಡು ತರುವಷ್ಟರಲ್ಲಿ ತಡವಾಯಿತು ಸಾರಿ...” ಎಂದು ಆ ಹಿರಿಯ ಒಂಟಿ ಜೀವ ಹೇಳುವಾಗ ಆ ಹಳೆಯ ನೆನಪಿನ ಸುಳಿಯಿಂದ ಹೊರಬಂದು ಆಕೆಯನ್ನೇ ನೋಡಿದೆ. ಬಾಗಿದ ಬೆನ್ನಿನಿಂದಾಗಿ ಈಗ ಮೂರಡಿ ಎತ್ತರವಿರಬಹುದು ಅವರು. ಅವರ ಮಾತನ್ನು ಕೇಳಿಸಿಕೊಳ್ಳುತಾ ನನ್ನ ಮುಂದೆ ಪುಟ್ಟ ಮಗುವೊಂದು ನಿಂತು ದೈನ್ಯತೆಯಿಂದ ವಿನಂತಿಸಿಕೊಂಡಂತೆ ಅನಿಸಿ ಏಕೋ ನನ್ನ ಮನಸ್ಸಿನೊಳಗೆ ಹೇಳಿಕೊಳ್ಳಲಾಗದ ವೇದನೆಯಾಗುತ್ತದೆ. ಇನ್ನೂರರ ನೋಟೊಂದನ್ನು ಕೊಟ್ಟರು. ೨೫ ವರ್ಷಗಳ ಹಿಂದೆ ಪ್ರೀತಿಯಿಂದಲೇ ಗಟ್ಟಿದ್ವನಿಯಲ್ಲಿ ದಬಾಯಿಸುತ್ತಿದ್ದ ಆಕೆಯ ಹಳೆಯ ನಾಲ್ಕುವರೆ ಅಡಿ ಎತ್ತರವನ್ನು ನೆನಪಿಸಿಕೊಳ್ಳುತ್ತಲೇ ನಾನು ಐವತ್ತು ರುಪಾಯಿ ವಾಪಸ್ಸು ಕೊಟ್ಟೆ. ಮೊದಲಿನಂತೆ ಆ ಬಾಗಿಲ ಮುಂದೆ ದಿನಪತ್ರಿಕೆ ಹಾಕಿ ಹೋದರೆ ಆಕೆಗೆ ಬಗ್ಗಿ ಎತ್ತಿಕೊಳ್ಳಲಾಗುವುದಿಲ್ಲ. ಈಗ ಹಾಲು ಮತ್ತು ದಿನಪತ್ರಿಕೆಗಾಗಿಯೇ ಬಾಗಿಲ ಪಕ್ಕದಲ್ಲಿಯೇ ಎರಡು ಅಡಿ ಎತ್ತರದಲ್ಲಿ ಒಂದು ಕಬ್ಬಿಣದ ಹಲಗೆಯನ್ನು ಹಾಕಿದ್ದಾರೆ ಅದರ ಮೇಲೆಯೇ ದಿನಪತ್ರಿಕೆಯನ್ನು ಇಡಬೇಕು. ನಮ್ಮ ಹುಡುಗ ಮರೆತು ನೆಲದ ಮೇಲೆ ಹಾಕಿಬಿಟ್ಟರೆ ಪೋನ್ ಮಾಡಿ “ದಯಮಾಡಿ ಕಬ್ಬಿಣದ ಹಲಗೆ ಮೇಲೆ ಇಡಲು ನಿಮ್ಮ ಹುಡುಗನಿಗೆ ಹೇಳಿ” ಅಂತ ವಿನಂತಿಸಿಕೊಳ್ಳುತ್ತಾರೆ. ಅವರ ಮನೆಯಲ್ಲಿ ಮನೆಕೆಲಸದವಳು ಬಂದು ಎಲ್ಲಾ ಕೆಲಸವನ್ನು ಮಾಡಿ ಅಡುಗೆ ಮಾಡಿ ಇಟ್ಟು ಹೋಗುತ್ತಾಳೆ. ಉಳಿದ ಸಮಯದಲ್ಲಿ ಆಕೆಯ ನಿತ್ಯದ ಒಂಟಿತನವನ್ನು ಕೊನೆಯ ಪಕ್ಷ ಎರಡು ಮೂರು ಗಂಟೆಯಾದರೂ ನಾನು ತಲುಪಿಸುವ ದಿನಪತ್ರಿಕೆ ಮತ್ತು ಅದರೊಳಗಿನ ಅಕ್ಷರಗಳು ಓದಿಸಿಕೊಳ್ಳುವ ಮೂಲಕ ಗೆಳೆಯರಾಗುತ್ತವೆ. ಆಕೆಯ ಭಾವನೆಯೊಳಗೆ ಒಂದಾಗುತ್ತವೆ.

ನೈಜ ಅನುಭವ ೨

ಅದೊಂದು ಅಪಾರ್ಟ್ ಮೆಂಟು ಬೆಲ್ ಮಾಡಿದೆ. ಎರಡು ನಿಮಿಷದಲ್ಲಿ ತೆರೆಯಿತು. “ ಬಾರಯ್ಯ ಶಿವು, ಕುಳಿತುಕೋ, ಬಿಸಿ ಬಿಸಿ ಕಾಫಿ ಮಾಡುತ್ತೇನೆ ಕುಡಿಯುತ್ತಿಯಾ? ಅಂತ ಕೇಳಿದರು ಆತ. ನನಗೆ ಸಂಕೋಚ ಮತ್ತು ಮುಜುಗರ ಒಟ್ಟಿಗೆ ಆಗಿ “ಬೇಡ ಸರ್ ನಿಮಗ್ಯಾಕೆ ತೊಂದರೆ” ಅಂದೆ. “ಅಯ್ಯೋ ತೊಂದರೆ ಏನು ಬಂತು, ನಾನು ಕೂಡ ಕಾಫಿ ಕುಡಿಯಬೇಕು, ಜೊತೆಗೆ ನಿನಗೂ ಮಾಡುತ್ತೇನೆ ಅಷ್ಟೆ” ಅಂತ ಅಡಿಗೆ ಮನೆಗೆ ಹೋದರು. ಆ ದೊಡ್ಡ ಹಾಲಿಗೆ ಹೊಂದಿಕೊಂಡಂತೆ ತೆರೆದ ಅಡುಗೆ ಮನೆಯಾದ್ದರಿಂದ ನನಗೆ ಅವರು ಕಾಫಿ ಮಾಡುವುದು ಕಾಣಿಸುತ್ತಿತ್ತು. ಐದೇ ನಿಮಿಷದಲ್ಲಿ ಬಿಸಿಬಿಸಿಯಾದ ಹಬೆಯಾಡುವ ಕಾಫಿಯ ಲೋಟವನ್ನು ನನಗೆ ಕೊಟ್ಟು ಅವರು ಕುಡಿಯತೊಡಗಿದರು. “ಇಷ್ಟು ರುಚಿಯಾದ ಕಾಫಿಯನ್ನು ನಾನು ಇತ್ತೀಚೆಗೆ ಎಲ್ಲೂ ಕುಡಿದಿರಲಿಲ್ಲ ಸರ್, ಎಷ್ಟು ಚೆನ್ನಾಗಿ ಮಾಡುತ್ತೀರಿ ನೀವು” ಅಂದೆ ನಾನು. “ನೋಡಯ್ಯ ಈ ಕಾಫಿ ಮಾಡುವುದು ಒಂದು ಕಲೆ, ಮೊದಲಿಗೆ ನಾವು ಯಾವ ಕಾಫಿ ಪುಡಿಯನ್ನು ಉಪಯೋಗಿಸುತ್ತೇವೆನ್ನುವುದರಿಂದ ಪ್ರಾರಂಭವಾಗುತ್ತದೆ. ರೊಬಸ್ಟಗಿಂತ ಅರೇಬಿಕ ಕಾಫಿ ಪುಡಿ ಉತ್ತಮ, ಅದಕ್ಕೆ ಉರಿದು ಪುಡಿ ಮಾಡುವ ರೀತಿಯಿಂದ ಹಿಡಿದು ಅದಕ್ಕೆ ಎಷ್ಟರ ಮಟ್ಟಿಗೆ ಅಳತೆಯಲ್ಲಿ ಚಿಕೋರಿಯನ್ನು ಬಳಸಿ ಮಿಕ್ಸ್ ಮಾಡುತ್ತೇವೆ, ಇತ್ತ ಕಾಫಿ ಮಾಡುವಾಗ ಬಿಸಿಯಾಗಿ ಕುದಿಸಿದ ನೀರನ್ನು ಪಿಲ್ಟರ್ ಮಾಡುವ ಪಾತ್ರೆಗೆ ಯಾವ ಪ್ರಮಾಣದಲ್ಲಿ ಹಾಕಬೇಕು ಅದಕ್ಕೆ ಎಷ್ಟು ಈ ಕಾಫಿಪುಡಿಯನ್ನು ಹಾಕಬೇಕು, ಅದು ಫಿಲ್ಟರ್ ಆಗಿ ಇಳಿಯುವಾಗ ಎಷ್ಟು ಗಟ್ಟಿ ಡಿಕಾಕ್ಷನ್ ಇಳಿಯುತ್ತದೆ. ನಂತರ ಅದಕ್ಕೆ ಯಾವ ಹಾಲನ್ನು ಬಳಸಿ ಕಾಫಿ ಮಾಡುತ್ತೇವೆ ಇವೆಲ್ಲವೂ ಒಂದು ಕಾಫಿಯ ಸ್ವಾದಕ್ಕೆ ತುಂಬಾ ಮುಖ್ಯವಾಗುತ್ತವೆ. ನಾನು ಕರೆದ ಹಾಲನ್ನು ಮಾತ್ರ ಬಳಸುತ್ತೇನೆ. ಎಂದಿಗೂ ಪಾಕೆಟ್ ಹಾಲನ್ನು ಬಳಸುವುದಿಲ್ಲವೆಂದು ವಿವರಿಸಿದರು. ಈ ಕಾಫಿ ಪುಡಿಯನ್ನು ಒಂದು ಗೊತ್ತಾಗ ಅಂಗಡಿಗೆ ಹೋಗಿ ಅವರಿಗೆ ಬೇಕಾದ ಹಾಗೆ ಚಿಕೋರಿ ಮಿಕ್ಸ್ ಮಾಡಿಸಿಕೊಂಡು ತರುತ್ತಾರೆ. ಒಂದು ರುಚಿಯಾದ ಸ್ವಾಧಬರಿತ ಕಾಫಿ ತಯಾರಿಸಲು ಇವರಲ್ಲಿ ಎಷ್ಟೊಂದು ಶ್ರದ್ಧೆ ಮತ್ತು ಇಛ್ಛಾಶಕ್ತಿಯಿದೆ ಅನ್ನಿಸಿ ಕಾಫಿ ಕುಡಿಯುತ್ತಿದ್ದೆ. ಅಷ್ಟರಲ್ಲಿ ಎದುರು ಮನೆಯವರು ಬಂದು ಹುಟ್ಟು ಹಬ್ಬದ ಶುಭಾಶಯಗಳು ಅಂತ ಅವರಿಗೆ ವಿಷ್ ಮಾಡಿ ಹೋದರು. ಓಹ್! ಇವತ್ತು ನಿಮ್ಮ ಹುಟ್ಟು ಹಬ್ಬದ ದಿನವಾ ಸರ್, ನಿಮ್ಮ ಹುಟ್ಟು ಹಬ್ಬಕ್ಕೆ ನನ್ನ ಶುಭಾಶಯಗಳು” ಅಂತ ನಾನು ವಿಶ್ ಮಾಡಿ. ಅಂದಹಾಗೆ ನಿಮ್ಮ ಈಗಿನ ವಯಸ್ಸೆಷ್ಟು ಸರ್” ಅಂದೆ. ನಿನ್ನೆಗೆ ಎಪ್ಪತ್ತೇಳು ತುಂಬಿ ಇವತ್ತಿನಿಂದ ಎಪ್ಪತ್ತೆಂಟು ಪ್ರಾರಂಭವಾಯ್ತು ಕಣಯ್ಯ” ಅಂದ್ರು “ಕಳೆದ ಇಪ್ಪತ್ತೈದು ವರ್ಷಗಳಿಂದ ನಿಮಗೆ ದಿನಪತ್ರಿಕೆ ಕೊಡುತ್ತಿದ್ದೇನೆ. ಅವತ್ತಿನಿಂದ ಇವತ್ತಿನವರೆಗೂ ನಿಮ್ಮ ಜೀವನೋತ್ಸಾಹ ಹಾಗೆ ಇದೆ ಸರ್...ಏನಿದರ ಗುಟ್ಟು” ಕೇಳಿದೆ. ಏನಯ್ಯ ಇದರಲ್ಲಿ ಗುಟ್ಟು, ಮನುಷ್ಯನ ಆಯಸ್ಸು ಈಗ ೬೫-೭೦ ಅಲ್ಲಿಯವರೆಗೆ ಚೆನ್ನಾಗಿ ಬದುಕಿಬಿಡಬೇಕು, ಆ ನಂತರ ಬದುಕಿನಲ್ಲಿ ಎಲ್ಲವೂ ಬೋನಸ್, ನಿನಗೆ ಬರುವ ಸಂಬಳಕ್ಕಿಂತ ಬೋನಸ್ ಸಿಕ್ಕಾಗ ತಾನೇ ಜಾಸ್ತಿ ಖುಷಿಪಡುವುದು, ನಾನು ಹಾಗೆ ಈ ಬೋನಸ್ ಜೀವನದಲ್ಲಿ ಎಲ್ಲವನ್ನು ಸಂತೋಷದಿಂದ ಅನುಭವಿಸುತ್ತೇನೆ. ನನಗಿಷ್ಟ ಬಂದ ರೀತಿ ಅಡುಗೆ ಮಾಡಿಕೊಳ್ಳುತ್ತೇನೆ ಕಾಫಿ ಮಾಡಿಕೊಳ್ಳುತ್ತೇನೆ, ವಾಕಿಂಗ್ ಮಾಡುತ್ತೇನೆ. ಸಂಜೆ ಗೆಳೆಯರ ಜೊತೆ ಸೇರುತ್ತೇನೆ. ಪುಸ್ತಕಗಳನ್ನು ಓದುತ್ತೇನೆ. ನೀನು ದಿನಪತ್ರಿಕೆ ಹಾಕಿಕೊಂಡೇ ಏನೆಲ್ಲಾ ಮಾಡುತ್ತೀಯಾ, ಅವನು ಹಾಲು ಹಾಕಿಕೊಂಡೆ ಸಿ.ಎ ಓದುತ್ತಿದ್ದಾನೆ. ನಿನ್ನ ಪುಸ್ತಕಗಳನ್ನೆಲ್ಲಾ ಓದಿದ್ದೇನಲ್ಲ...ನೀನು ಮತ್ತು ಹಾಲು ಕೊಡುವ ಹುಡುಗ ಇಬ್ಬರೂ ಇಷ್ಟವಾಗುತ್ತೀರಿ” ಅಂತ ಖುಷಿಯಿಂದ ಹೇಳಿದರು. ಕಳೆದ ಹದಿನೈದು ವರ್ಷಗಳ ಹಿಂದೆ ಅವರ ಹೆಂಡತಿ ದಿವಂಗತರಾದ ಮೇಲೂ ನೋಡುತ್ತಿದ್ದೇನೆ. ಅಂದಿನಿಂದ ಮನೆಯಲ್ಲಿ ಒಂಟಿ ಜೀವನ ನಡೆಸುತ್ತಿದ್ದಾರೆ. ಆರೋಗ್ಯವಾಗಿ ಗಟ್ಟಿಯಾಗಿದ್ದಾರೆ. ಅವರು ಬದುಕುವ ರೀತಿಯನ್ನು ನೋಡಿದಾಗ ಅವರದೆಂದೂ ಒಂಟಿ ಜೀವದ ಜೀವನ ಅಂತ ನನಗನ್ನಿಸಲೇ ಇಲ್ಲ. ನನ್ನ ನಿತ್ಯ ಬದುಕಿಗೆ ಅವರು ಕೂಡ ಸ್ಪೂರ್ತಿ. ನಾನಾಗಲಿ ಅಥವ ನನ್ನ ಹೆಂಡತಿಯಾಗಲಿ ಸ್ವಾಧಭರಿತ ಒಳ್ಳೆಯ ಫಿಲ್ಟರ್ ಕಾಫಿಯನ್ನು ಮಾಡಲು ಕಲಿತಿದ್ದೇವೆಂದರೆ ಅದಕ್ಕೆ ಅವರೇ ಕಾರಣ. ಅವರು ಹೇಳಿದ ಹಾಗೆ ಹುಡುಕಿಕೊಂಡು ಹೋಗಿ ಕಾಫಿ ಪುಡಿ ತರುತ್ತೇನೆ. ಅಂದಹಾಗೆ ಅವರೆಂದು ನನ್ನ ದಿನಪತ್ರಿಕೆ ಬರದಿರುವ ದಿನಗಳಲ್ಲಿ ನಮ್ಮ ಹುಡುಗರು ಮಾಡುವ ತಪ್ಪುಗಳ ಬಗ್ಗೆ ಇವತ್ತಿಗೂ ಹೇಳಿಲ್ಲ.

ನೈಜ ಅನುಭವ ೩

ಅಪರೂಪಕ್ಕೆ ಅವರ ಮನೆಯಿಂದ ಫೋನ್ ಬರುತ್ತದೆ. “ಇವತ್ತು ನಿಮ್ಮ ಹುಡುಗ ಪೇಪರ್ ಹಾಕಿಲ್ಲ ನೋಡಿ” ನಾನು ಆ ಕ್ಷಣ ಅವರ ಮನೆಗೆ ಹತ್ತಿರವಿದ್ದಲ್ಲಿ ಅಥವ ನಾನು ನನ್ನ ಮನೆಗೆ ಬಂದುಬಿಟ್ಟಿದ್ದರೂ ಮತ್ತೆ ಹೋಗಿ ಅವರಿಗೆ ಪೇಪರ್ ಹಾಕಿ ಬರುತ್ತೇನೆ. ಅವರಿಗೆ ಹೀಗೆ ತಕ್ಷಣವೇ ಹೋಗಿ ದಿನಪತ್ರಿಕೆಯನ್ನು ಕೊಡಲು ಕಾರಣವಿದೆ. ಮೊದಲಿಗೆ ಅವರು ದಿನದಲ್ಲಿ ಹತ್ತು ಗಂಟೆಗೂ ಹೆಚ್ಚು ಹೊತ್ತು ಓದುತ್ತಲೇ ಇರುತ್ತಾರೆ. ಅದು ಬಿಟ್ಟು ಬೇರೇನು ಮಾಡಲು ಆಗುವುದಿಲ್ಲ. ಏಕೆಂದರೆ ಕಳೆದ ಆರು ವರ್ಷಗಳಿಂದ ಅವರು ಹಾಸಿಗೆಯಲ್ಲಿಯೇ ಮಲಗಿದ್ದಾರೆ. ಮೊದಲಿಗೆ ಎದ್ದು ಕೂರುತ್ತಾರಾದರೂ ಈಗ ಎದ್ದು ಕೂರಲು ಆಗುವುದಿಲ್ಲ. ಮಲಗಿರಲೇಬೇಕು. ದೇಹ ಮತ್ತು ಕಾಲುಗಳು ಸ್ವಾದೀನವಿಲ್ಲ. ಕೈಗಳು ಸ್ವಲ್ಪ ಮಟ್ಟಿಗೆ ಚಲನೆಯಲ್ಲಿವೆ. ಕಣ್ಣು ಕಾಣಿಸುತ್ತದೆ. ತಕ್ಕಮಟ್ಟಿಗೆ ಕಿವಿಯು ಕೇಳಿಸುತ್ತದೆ. ಮನೆಯಲ್ಲಿ ಮಗಳು ಮತ್ತು ಅಳಿಯ ಅವರನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೆ. ಅವರೆಷ್ಟೆ ಚೆನ್ನಾಗಿ ನೋಡಿಕೊಂಡರೂ ಇವರು ಎದ್ದು ಎಲ್ಲಿಯೂ ಓಡಾಡಲಾಗುವುದಿಲ್ಲ. ಈ ಕಾರಣಕ್ಕೆ ಅವರ ಸಮಯ ಕಳೆಯಲು ಓದುವುದೊಂದೇ ದಾರಿ. ನಾನು ನಿತ್ಯವೂ ಹಾಕುವೆ ದಿನಪತ್ರಿಕೆ, ವಾರಪತ್ರಿಕೆಗಳಾದ ತರಂಗ ಮತ್ತು ಸುಧಾಗಳನ್ನು ಮೊದಲ ಪುಟದಿಂದ ಕೊನೆಯ ಪುಟದ ಜಾಹೀರಾತುಗಳ ಸಮೇತ ಒಂದಕ್ಷರವೂ ಬಿಡದೆ ಓದುತ್ತಾರೆ. ಸೊಡಕು ಮಾಡುತ್ತಾರೆ. ಪದಬಂಧ ಬಿಡಿಸುತ್ತಾರೆ. ನಾನು ಅವರಿಗೆ ದಿನಪತ್ರಿಕೆಗಳಲ್ಲದೇ ನನ್ನಲ್ಲಿರುವ ಅನೇಕ ಪುಸ್ತಕಗಳನ್ನು ಒಂದು ಓದಿ ಮುಗಿಸಿದ ನಂತರ ಮತ್ತೊಂದು ಓದಲು ಕೊಟ್ಟಿದ್ದೇನೆ ಮತ್ತು ಈಗಲೂ ಕೊಡುತ್ತಿದ್ದೇನೆ. ಅಂದಹಾಗೆ ಅವರಿಗೆ ಈಗ ವಯಸ್ಸು ಕೇವಲ ಎಂಬತ್ತಾರು. ಈ ಮಲಗೇ ಇರುವ ಅವರಿಗೆ ಪುಸ್ತಕಗಳ, ದಿನಪತ್ರಿಕೆಗಳ ವಾರಪತ್ರಿಕೆಗಳ ಅಕ್ಷರಗಳೇ ಗೆಳೆಯರು.

ನೈಜ ಅನುಭವ ೪

ಹೊಸದಾಗಿ ಕಟ್ಟಿದ ದೊಡ್ಡ ದೊಡ್ಡ ಅಪಾರ್ಟ್ಮೆಂಟುಗಳು, ಮನೆಗಳ ನಡುವೆ ಅದೊಂದು ಹಳೆಯ ಮನೆಯ. ಮನೆಯ ಮುಂದೆ ಒಂದಷ್ಟು ಜಾಗದಲ್ಲಿ ಸೀಬೆಯ ಮರ ಇನ್ನಿತರ ಸಣ್ಣ ಸಣ್ಣ ಗಿಡಗಳು. ಈ ಮನೆಯಲ್ಲಿ ಎಪ್ಪತ್ತೈದು ದಾಟಿದ ಇಬ್ಬರು ವೃದ್ಧ ದಂಪತಿಗಳು. ಪ್ರತಿ ತಿಂಗಳ ಮೊದಲ ದಿನ ನನಗಾಗಿ ದಿನಪತ್ರಿಕೆ ಹಣವನ್ನು ಎತ್ತಿಟ್ಟಿರುತ್ತಾರೆ. ಒಂದೆರಡು ದಿನ ತಡವಾಗಿ ಹೋದರೂ ಏಕೆ ಈ ಸಲ ಲೇಟು ಅಂತ ಪ್ರೀತಿಯಿಂದ ಕೇಳುತ್ತಾರೆ. . ಕಳೆದ ಇಪ್ಪತ್ತೈದು ವರ್ಷಗಳಿಂದ ಅವರಿಗೆ ದಿನಪತ್ರಿಕೆಯನ್ನು ಕೊಡುತ್ತಿದ್ದೇನೆ. ಅವತ್ತಿನಿಂದ ಇವತ್ತಿನವರೆಗೆ ಅವರ ಮನೆಯಲ್ಲಿ ಮನೆ ಕೆಲಸದವರನ್ನು ಬಿಟ್ಟರೆ ಅವರ ಮಗ, ಮಗಳು, ಮೊಮ್ಮಕ್ಕಳು ಯಾರನ್ನು ಇದುವೆರೆಗೂ ನೋಡಿಲ್ಲ. ಇಷ್ಟಾಗಿಯೂ ನಾನು ಕುತೂಹಲದಿಂದ ನಿಮ್ಮ ಮಗ, ಅಥವ ಮಗಳು ಏನು ಕೆಲಸ ಮಾಡುತ್ತಿದ್ದಾರೆ, ಎಲ್ಲಿದ್ದಾರೆ ಅವರಿಗೆ ಮಕ್ಕಳೆಷ್ಟು ಅಂತ ಒಮ್ಮೆಯೂ ಇದುವರೆಗೆ ವಿಚಾರಿಸಲಿಲ್ಲ. ಹಾಗೆ ನನಗೆ ವಿಚಾರಿಸಬೇಕೆನ್ನಿಸಲೂ ಇಲ್ಲ. ಮೂರು ವರ್ಷಗಳ ಹಿಂದೆ ಮನೆಯಲ್ಲಿ ಜಾರಿಬಿದ್ದು ಆ ಹಿರಿಯ ವೃದ್ಧ ಗಂಡ ಆಸ್ಪತ್ರೆ ಸೇರಿದ ಮೇಲೆ ವೃದ್ಧ ಹೆಂಡತಿ ನಾನು ದಿನಪತ್ರಿಕೆ ಹಣ ವಸೂಲಿಗೆ ಹೋದಾಗ ಎಲ್ಲಾ ವಿಚಾರವನ್ನು ಹೇಳಿಕೊಂಡು ಗೋಳಾಡಿದರು. ಮುಂದಿನ ತಿಂಗಳು ಮತ್ತೆ ಹಣ ವಸೂಲಿಗೆ ಹೋದಾಗ ಆ ವೃದ್ಧ ಹುಷಾರಾಗಿದ್ದರೂ ಮೊದಲಿನಂತೆ ಆಕ್ಟೀವ್ ಆಗಿರಲಿಲ್ಲ. ನನಗೆ ಸಿಕ್ಕಾಗ ಚೆನ್ನಾಗಿ ಮಾತಾಡಿಸುತ್ತಿದ್ದ ಅವರ ಮಾತು ಕೂಡ ಕಡಿಮೆಯಾಗಿತ್ತು. ಈ ವ್ಯಕ್ತಿಯೇ ನನ್ನ ಕಿರುಚಿತ್ರ “ಬೆಳಗಾಯ್ತು ಇನ್ನು ಪೇಪರ್ ಬಂದಿಲ್ವಾ” ದಲ್ಲಿ ಒಬ್ಬ ಗ್ರಾಹಕನಾಗಿ ರಸ್ತೆಯಲ್ಲಿ ಹಣಕೊಟ್ಟು ಪೇಪರ್ ಕೊಳ್ಳುವ ದೃಶ್ಯದಲ್ಲಿದ್ದಾರೆ. ದಿನಕಳೆದಂತೆ ಪೂರ್ತಿ ಜವಾಬ್ದಾರಿ ಹೆಂಡತಿ ಮೇಲೆ. ಇತ್ತೀಚೆಗೆ ನಾನು ತಿಂಗಳಿಗೊಮ್ಮೆ ಹಣ ವಸೂಲಿಗೆ ಹೋದರೆ ಸಾಕು ಸ್ಕೂಲಿನಿಂದ ಬಂದ ಚಿಕ್ಕಮಗು ಎಲ್ಲವನ್ನು ವಿವರಿಸುವಂತೆ ನನಗೆ ಅವರ ಮನೆಯ ಸ್ಥಿತಿಯನ್ನು ವಿವರಿಸುತ್ತಾರೆ. ನಾನು ಕೇಳಿಸಿಕೊಳ್ಳುವುದು ಬಿಟ್ಟು ಬೇರೇನು ಹೇಳಲಿ. ಅವರಿಗೆ ಸಾಂತ್ವಾನ ಹೇಳುವಷ್ಟು ವಯಸ್ಸಿನಲ್ಲಿ ಹಿರಿಯನಲ್ಲ ನಾನು. ಅವತ್ತೊಂದು ದಿನ ಎಂದಿನಂತೆ ಹಣ ವಸೂಲಿಗೆ ಹೋದಾಗ ಆಕೆಯ ಬದಲು ಆಕೆಯ ವೃದ್ಧ ಗಂಡ ಹಣವನ್ನು ಕೊಟ್ಟು ಮುಂದಿನ ತಿಂಗಳಿಂದ ನಮಗೆ ದಿನಪತ್ರಿಕೆ ನಿಲ್ಲಿಸಿಬಿಡಿ” ಎಂದರು. ನಾನು ಏಕೆ ಸರ್ ಏನಾಯ್ತು..ನಮ್ಮ ಹುಡುಗ ಏನಾದರೂ ನಿಮಗೆ ಸರಿಯಾಗಿ ಪೇಪರ್ ಕೊಡುತ್ತಿಲ್ಲವಾ” ಅಂತ ಕೇಳಿದೆ. ಅದಕ್ಕೆ ಅವರು “ನೋಡಿ ಶಿವು, ನಿಮ್ಮ ಹುಡುಗ ಸರಿಯಾಗಿ ನಮಗೆ ಪೇಪರ್ ಕೊಡುತ್ತಿದ್ದಾನೆ. ನೀವು ಕಳೆದ ಇಪ್ಪತ್ತೈದು ವರ್ಷಗಳಿಂದ ಎಷ್ಟು ಕಷ್ಟಪಟ್ಟಿದ್ದೀರಿ ಅಂತ ನಿಮ್ಮ ವೆಂಡರ್ ಕಣ್ಣು ಓದಿ ನನಗೆ ಗೊತ್ತಾಗಿದೆ. ವಿಷಯ ಅದಲ್ಲ, ನನ್ನ ಹೆಂಡತಿಗೆ ಕಳೆದ ಹದಿನೈದು ದಿನದಿಂದ ಮೈ ಹುಶಾರಿಲ್ಲವಾಗಿ ಆಸ್ಪತ್ರೆಗೆ ಅಡ್ಮಿಟ್ ಮಾಡಿದ್ದೆ. ಈಗ ಸ್ವಲ್ಪ ಬೆಟರ್, ಚೇತರಿಸಿಕೊಳ್ಳುತ್ತಿದ್ದಾಳೆ. ನನಗೀಗ ೮೩, ಆಕೆಗೆ ೭೮ ವಯಸ್ಸು, ನಮಗೆ ಮಕ್ಕಳಿಲ್ಲ. ಈ ವಯಸ್ಸಿನಲ್ಲಿ ನಮಗೆ ಏನಾದರೂ ಆದರೆ ನಮ್ಮನ್ನು ನೋಡಿಕೊಳ್ಳುವವರು ಯಾರು? ಅದಕ್ಕೆ ನಾವು ಮನೆ ಖಾಲಿ ಮಾಡಿ ಯಲಹಂಕದ ಬಳಿ ನಮಗೆ ಗೊತ್ತಿರುವ ಒಂದು ವೃದ್ಧಾಶ್ರಮವನ್ನು ಸೇರಿಕೊಳ್ಳುತ್ತೇವೆ. ದಯವಿಟ್ಟು ಬೇಸರಗೊಳ್ಳಬೇಡಿ. ಕಳೆದ ಇಪ್ಪತ್ತೈದು ವರ್ಷಗಳಿಂದ ನಿಮ್ಮ ದಿನಪತ್ರಿಕೆ ಹಂಚುವಿಕೆಯ ಸೇವೆಯನ್ನು ನಾವು ಮರೆಯುವುದಿಲ್ಲ. ಎಂದು ಹೇಳಿ ಹಣವನ್ನು ಕೊಟ್ಟರು. ಬೇರೆ ವಯಸ್ಸಾದ ಹಿರಿಯರ ಮನೆಯಲ್ಲಿ ಮಕ್ಕಳಿದ್ದರೂ ಅವರನ್ನು ಬಿಟ್ಟು ಹೋಗಿರುವ ಅನೇಕ ಸಂಧರ್ಭಗಳು ನೆನಪಾಗಿ, ಇಷ್ಟು ವಯಸ್ಸಾದ ಈ ದಂಪತಿಗಳಿಗೆ ಮಕ್ಕಳಿದ್ದರೂ ಇಲ್ಲದಿದ್ದರೂ ಒಂದೇ ಅನ್ನಿಸಿತ್ತು. ಈಗವರು ವೃದ್ಧಾಶ್ರಮ ಸೇರುವ ನಿರ್ಧಾರಕ್ಕೆ ನಿರುತ್ತರನಾಗಿದ್ದೆ.
ಶಿವು.ಕೆ.
ದಿನಪತ್ರಿಕೆ ವೆಂಡರ್.