ಇಷ್ಟೆಲ್ಲಾ ನೋಡುವಷ್ಟರಲ್ಲಿ ಅದೊಂದು ಬಣ್ಣದ ಚಿಟ್ಟೆ ಅಂತ ಗೊತ್ತಾಗಿಬಿಡುತ್ತದೆ ನಿಮಗೆ. ಅಷ್ಟು ದೊಡ್ಡ ಬೆಳ್ಳಿ ಪರಧೆಯಲ್ಲಿ ಅದರ ದೇಹದ ಪ್ರತಿಯೊಂದು ಭಾಗವನ್ನು ರಾಕ್ಷಸಾಕಾರದಲ್ಲಿ ನೋಡುತ್ತಾ ಮೈಮರೆಯುತ್ತಿರುತ್ತೀರಿ..ಅಲ್ಲವೇ...
ಮೊದಲ ಭಾರಿ ಒಂದು ಇಂಚು ಸುತ್ತಳತೆಯ ಬಣ್ಣದ ಚಿಟ್ಟೆಯನ್ನು ಮ್ಯಾಕ್ರೋ ಲೆನ್ಸ್ ಮೂಲಕ ನೋಡಿ ಕ್ಯಾಮೆರಾದಲ್ಲಿ ಕ್ಲಿಕ್ಕಿಸಿದಾಗ ನನಗೂ ನಿಮ್ಮಂತೆ ಅನುಭವವಾಗಿತ್ತು. ಮ್ಯಾಕ್ರೋ ಲೆನ್ಸ್ ಅನ್ನುವ ಆ ಅದ್ಭುತ ಲೆನ್ಸಿನ ತಾಕತ್ತೇ ಅಂತಹುದು. ಒಂದು ಕಣ್ಣನ್ನು ಮುಚ್ಚಿ ಮತ್ತೊಂದು ಕಣ್ಣಿನಲ್ಲಿ ಮ್ಯಾಕ್ರೋ ಲೆನ್ಸ್ ಹಾಕಿರುವ ಕ್ಯಾಮೆರಾ ಕಿಂಡಿಯಲ್ಲಿ ಕಾಣುವ ದೃಶ್ಯವನ್ನು ನೀವೊಮ್ಮೆ ನೋಡಬೇಕು. ಚಿಟ್ಟೆಯಾಗಲಿ, ಪುಟ್ಟ ಹೂವಾಗಲಿ, ಅರ್ದ ಇಂಚಿನಷ್ಟು ಉದ್ದದ ಹುಳುವಾಗಲಿ, ಮಿಡಿತೆಯಾಗಲಿ, ಜೀರುಂಡೆಯಾಗಲಿ, ಜೇಡವಾಗಲಿ, ಇರುವೆಗಳಾಗಲಿ, ಇಬ್ಬನಿಗಳಾಗಲಿ, ಜೇನುನೊಣವಾಗಲಿ, ಕೊನೆಗೆ ಮನೆನೊಣವಾಗಲಿ, ಪ್ರತಿಯೊಂದು ರಾಕ್ಷಸಕಾರದಲ್ಲಿ ಕಾಣುತ್ತವೆ. ಅದರ ಮೈಮೇಲಿನ ಸಣ್ಣ ಸಣ್ಣ ರೋಮಗಳು ನಮ್ಮ ಮನೆಯ ಕೊಳಾಯಿ ಪೈಪುಗಳಷ್ಟು ದೊಡ್ಡದಾಗಿ ಕಾಣುತ್ತಾ ನಮ್ಮನ್ನು ಬೆರಗಾಗಿಸುತ್ತವೆ.
ಹೀಗೆ ಮೊದಲು ನಾನು ಚಿಟ್ಟೆಯನ್ನು ಈ ರೀತಿ ನೋಡಿದ್ದು ನನ್ನ ಹಿರಿಯ ಛಾಯಾಗ್ರಾಹಕರ ಕ್ಯಾಮೆರಾ ಮತ್ತು ಅವರ ಮ್ಯಾಕ್ರೋ ಲೆನ್ಸ್ ಮುಖಾಂತರ. ಆಗ ನನ್ನ ಬಳಿ ಮ್ಯಾಕ್ರೋ ಲೆನ್ಸು ಇರಲಿಲ್ಲ. ನಮ್ಮ ಹಿರಿಯ ಛಾಯಾಗ್ರಾಹಕ ಗೆಳೆಯರ ಜೊತೆ ಚಳಿಗಾಲದ ಮುಂಜಾನೆ ಚಿಟ್ಟೆ ಫೋಟೊಗ್ರಫಿಗೆ ಹೋದಾಗ ಅವರ ಕ್ಯಾಮೆರಾ ಜೊತೆಗಿದ್ದ ಮ್ಯಾಕ್ರೋ ಲೆನ್ಸ್ ಮೂಲಕ ಆ ಅದ್ಭುತ ಲೋಕವನ್ನು ನೋಡಿ ಮನತುಂಬಿಸಿಕೊಳ್ಳುತ್ತಿದ್ದೆ. ಮೈಮರೆಯುತ್ತಿದ್ದೆ. ಆ ನಂತರವೇ ನಾನು ಇಂಥ ಒಂದು ಮ್ಯಾಕ್ರೋ ಲೆನ್ಸ್ ತೆಗೆದುಕೊಳ್ಳಬೇಕು ಅನ್ನಿಸಿತ್ತು. ನೋಡಲು ಪುಟ್ಟದಾದರೂ ಇದು ದುಬಾರಿ ಲೆನ್ಸ್. [ಒಂದು ಒಳ್ಳೆಯ ಅತಿ ಕಡಿಮೆ ಬೆಲೆಯದ್ದು ಬೇಕೆಂದರೂ ಇಪ್ಪತ್ತು ಸಾವಿರ ರೂಪಾಯಿಗಳಂತೂ ಬೇಕೇ ಬೇಕು]. ಹೇಗೋ ಒಂದು ವರ್ಷದಲ್ಲಿ ಹಣಕೂಡಿಸಿ ಒಂದು ಉತ್ತಮ ಮ್ಯಾಕ್ರೋ ಲೆನ್ಸ್ ಕೊಂಡುಕೊಂಡೆ. ನನ್ನ ಜೊತೆಗಾರನಾಗಿದ್ದ ಹಿಂದು ದಿನಪತ್ರಿಕೆಯಲ್ಲಿ ಛಾಯಾಗ್ರಾಹಕನಾಗಿ ಕೆಲಸ ಮಾಡುವ ಮುರಳಿ ಕೂಡ ಮ್ಯಾಕ್ರೋ ಲೆನ್ಸ್ ತೆಗೆದುಕೊಂಡ ಮೇಲೆ ಇಬ್ಬರೂ ಚಿಟ್ಟೆ ಫೋಟೊಗ್ರಫಿಗೆ, ಹೆಸರಘಟ್ಟ, ಬನ್ನೇರುಘಟ್ಟ,........ಹೀಗೆ ಬೆಂಗಳೂರು ದಾಟಿ ೨೫-೩೦ ಕಿಲೋಮೀಟರ್ ದಾಟಿ ಹೋಗುತ್ತಿದ್ದೆವು.
ನಾನು ಒಮ್ಮೆ ಹೀಗೆ ಚಳಿಗಾಲದ ಮುಂಜಾನೆ ಚಿಟ್ಟೆ ಫೋಟೋ ಕ್ಲಿಕ್ಕಿಸುವಾಗಲೇ ನನಗೆ ಫೋನ್ ಬಂತು.
"ಶಿವು, ಏನು ಮಾಡುತ್ತಿದ್ದೀರಿ"
"ನನಗೂ ಗೊತ್ತಿಲ್ಲ ಸರ್"
"ಹೋಗಲಿ ಬಿಡಿ, ನೀವು ಮನೆಗೆ ಹೋದ ಮೇಲೆ ಅದು ಯಾವ ಚಿಟ್ಟೆ, ಹೇಗೆ ಕ್ಲಿಕ್ಕಿಸಿದಿರಿ, ನಿಮ್ಮ ವಾತಾವರಣ ಇತ್ಯಾದಿಗಳನ್ನು ಹಾಗೆ ಬರೆದು, ಫೋಟೊ ಸಮೇತ ನನಗೆ ಕಳಿಸಿ" ಎಂದರು.
"ಸರಿ ಸರ್" ಅಂದವನ್ನು ಮತ್ತೆ ಕ್ಲಿಕ್ಕಿಸತೊಡಗಿದೆ.
[ನಾನು ಅವತ್ತು ಮುಂಜಾನೆ ಕ್ಲಿಕ್ಕಿಸುತ್ತಿದ್ದ ಚಿಟ್ಟೆ. ಇದರ ಹೆಸರು ಗೊತ್ತಿರಲಿಲ್ಲ. ಅವರ ಪುಸ್ತಕವನ್ನು ನೋಡಿದಾಗ ಅದು ಲೈಮ್ ಬಟರ್ ಪ್ಲೈ ಅಂತ ಗೊತ್ತಾಯಿತು.]
ಇಷ್ಟಾದರೂ ನಮ್ಮ ಮ್ಯಾಕ್ರೋ ಫೋಟೋಗ್ರಫಿ ಅಂತ ಹೇಳಿಕೊಳ್ಳುವಂತಿರಲಿಲ್ಲ. ಕಾರಣ ನಮಗೂ ಗೊತ್ತಿರಲಿಲ್ಲ. ಹೊಸ ಹುಮ್ಮಸ್ಸಿನಿಂದ ಹೋಗಿ ಆ ಚಳಿಯಲ್ಲಿ ಚಿಟ್ಟೆಗಳು, ಹುಳುಗಳನ್ನು ಹುಡುಕಿ ಕ್ಲಿಕ್ಕಿಸುತ್ತಿದ್ದೆವು. ನಾವು ಕ್ಲಿಕ್ಕಿಸಿದ ಚಿತ್ರಗಳನ್ನೆಲ್ಲಾ ದೇಶದಲ್ಲಿಯೇ ಅತ್ಯುತ್ತಮ ಮ್ಯಾಕ್ರೋ ಫೋಟೊಗ್ರಫಿಯಲ್ಲಿ ಪರಿಣತರಾದ ಟಿ.ಎನ್.ಎ ಪೆರುಮಾಳ್‍ರವರಿಗೆ ಏಕೆ ತೋರಿಸಬಾರದು ಅಂತ ನಾನು ಮುರುಳಿ ಅಂದುಕೊಂಡು ಅವರ ಮನೆಗೆ ಹೋದೆವು. ನಮ್ಮ ಫೋಟೊಗ್ರಫಿ ಮತ್ತು ನಮ್ಮ ಹುಮ್ಮಸ್ಸು, ಉತ್ಸಾಹವನ್ನು ನೋಡಿದ ಅವರು,
"ನೋಡಿ, ನಿಮ್ಮ ಉತ್ಸಾಹಕ್ಕೆ ನನ್ನ ಮೆಚ್ಚುಗೆಯಿದೆ. ಆದ್ರೆ ನೀವು ಕ್ಯಾಮೆರಾದಲ್ಲಿ ಕೆಲವೊಂದು ತಾಂತ್ರಿಕ ವಿಚಾರಗಳನ್ನು ಗಮನಿಸಬೇಕು ಎಂದು ಕೆಲವು ಟಿಪ್ಸ್ ಕೊಟ್ಟರು. ಮತ್ತು ಚಿಟ್ಟೆ ಮತ್ತು ಇನ್ನಿತರ ಹುಳುಗಳ ಫೋಟೋ ತೆಗೆಯುವ ಮೊದಲು ನೀವು ಕೆಲವೊಂದು ವಿಚಾರಗಳನ್ನು ಮೊದಲು ಅರಿತುಕೊಳ್ಳಬೇಕು. ಯಾವುದೇ ಚಿಟ್ಟೆಯ ಫೋಟೊ ತೆಗೆಯಬೇಕಾದರೆ, ಅದರ ಸಂಪೂರ್ಣ ಮಾಹಿತಿಯನ್ನು ನೀವು ತಿಳಿದಿರಬೇಕು. ಅದಕ್ಕಾಗಿ ನಿಮಗೊಂದು ಪುಸ್ತಕವನ್ನು ತರಿಸಿಕೊಡುತ್ತೇನೆ" ಅಂದರು.
ಫೀಲ್ಡ್ ಗೈಡ್ ಅಫ್ ಸೌತ್ ಇಂಡಿಯನ್ ಬಟರ್ ಪ್ಲೈಸ್ ಪುಸ್ತಕದ ಮುಖಪುಟ
ಫೀಲ್ಡ್ ಗೈಡ್ ಅಫ್ ಸೌತ್ ಇಂಡಿಯನ್ ಬಟರ್ ಪ್ಲೈಸ್ ಪುಸ್ತಕ ಹಿಂಬದಿ ರಕ್ಷಾ ಪುಟ
ಈಗ ಮುಖ್ಯ ವಿಚಾರ ಬರೋಣ. ಚಿಟ್ಟೆಗಳ ಪುಸ್ತಕವಾಯಿತು. ಈಗ ಭಾರತದಾಧ್ಯಂತ ಮಣ್ಣಿನೊಳಗೆ ಮತ್ತು ಮಣ್ಣ ಮೇಲೆ ಕಾಣಸಿಗುವ ವೈವಿಧ್ಯಮಯ ಹುಳುಗಳು ಮತ್ತು ಕಾಡುಹೂಗಳ ಬಗ್ಗೆ ಪುಸ್ತಕ ಮಾಡಲು ಹೊರಟಿದ್ದಾರೆ ಇದೇ ತಂಡದವರು. ಒಂದು ದಿನ ನನಗೆ ಇದೇ ಪೆರುಮಾಳ್ ಸರ್ ಅವರಿಂದ ಫೋನ್ ಕರೆಬಂತು.
"ಶಿವು, ನಿಮ್ಮ ಬಳಿ ಇರುವ ಎಲ್ಲಾ ಹುಳುಗಳ ಫೋಟೋ ಸಿಡಿ ಕಳಿಸಿ" ಅಂದರು. ನನ್ನ ಮ್ಯಾಕ್ರೋ ಫೋಟೊಗ್ರಫಿಗೆ ಗುರು ಸಮಾನರಾದ ಅವರು ಕೇಳಿದಾಗ ನಾನು ಮರು ಮಾತಾಡದೇ ನನ್ನಲ್ಲಿರುವ ಎಲ್ಲಾ ಹುಳುಗಳ ಚಿತ್ರಗಳನ್ನು ಸಿಡಿಯಲ್ಲಿ ಹಾಕಿ ಅವರಿಗೆ ಪೋಸ್ಟ್ ಮಾಡಿದೆ. ಮರುದಿನ ಪೆರುಮಾಳ ಸರ್ ಮತ್ತೆ ಫೋನ್ ಮಾಡಿದರು. "ಶಿವು, ನಾವು ಮತ್ತೆ ಒಂದು ಹೊಸ ಪುಸ್ತಕವನ್ನು ಹೊರತರಲು ಸಿದ್ಧತೆ ನಡೆಸಿದ್ದೇವೆ. ಈ ಬಾರಿಯ ಪುಸ್ತಕ ನಮ್ಮ ದೇಶದ ಭೂಮಿಯ ಮೇಲೆ ಮತ್ತು ಭೂಮಿಯೊಳಗಿರುವ ಹುಳು, ಹುಪ್ಪಟೆಗಳಿಗೆ ಸಂಭಂದಿಸಿದ್ದು. ನೀವು ತೆಗೆದ ಕೆಲವು ಹುಳುಗಳ ಚಿತ್ರಗಳನ್ನು ನಮ್ಮ ಪುಸ್ತಕಕ್ಕೆ ಬಳಸಿಕೊಳ್ಳಲು ನಿರ್ಧರಿಸಿದ್ದೇವೆ, ಅದಕ್ಕಾಗಿ ನಿಮ್ಮಿಂದ ಫೋಟೊಗಳನ್ನು ತರಿಸಿಕೊಂಡಿದ್ದು" ಅಂದರು. ನನ್ನ ಆನಂದಕ್ಕೆ ಪಾರವೇ ಇರಲಿಲ್ಲ. ಏಕೆಂದರೆ ಅವರದೇ ಪುಸ್ತಕವನ್ನು ಓದಿ ಕಲಿತು ಅಬ್ಯಾಸಮಾಡಿ ಕ್ಲಿಕ್ಕಿಸಿದ ಚಿತ್ರಗಳು ಕೆಲವು ವರ್ಷಗಳ ನಂತರ ಅವರದೇ ಪ್ರಕಾಶನದ ಮತ್ತೊಂದು ಪುಸ್ತಕಕ್ಕೆ ಬಳಕೆಯಾಗುವುದು, ಅದರ ಮೂಲಕ ಸಾವಿರಾರು ಜನರಿಗೆ ತಲುಪುವ ವಿಚಾರವೇ ಒಂದು ರೀತಿ ನನಗೆ ಥ್ರಿಲ್ ಎನ್ನಿಸುತ್ತಿದೆ.
ಇಂಡಿಯನ್ ಇನ್‍ಸೆಕ್ಟ್ಸ್ ಅಂಡ್ ಆರ್ಕಿಡ್ಸ್ ಪುಸ್ತಕದ ಮುಖಪುಟ
ನಿಮಗೆಲ್ಲರಿಗೂ ಇದು ಅಹ್ವಾನ ಪತ್ರಿಕೆ.
ಇದೇ ಜೂನ್ ಐದರಂದು, ರೇಸ್ ಕೋರ್ಸ್ ರಸ್ತೆಯಲ್ಲಿರುವ ಭಾರತೀಯ ವಿಧ್ಯಾಭವನದ ESV Hall ನಲ್ಲಿ ಬಿಡುಗಡೆಯಾಗುತ್ತಿದೆ. ಈ ಪುಸ್ತಕದಲ್ಲಿ ನಾನು ಕ್ಲಿಕ್ಕಿಸಿದ ಹುಳುಗಳ ಫೋಟೊಗಳು, ಅವುಗಳ ವಿವರಗಳಷ್ಟೇ ಅಲ್ಲದೇ ದೇಶದ ಪ್ರಖ್ಯಾತ ಮ್ಯಾಕ್ರೋ ಛಾಯಾಗ್ರಾಹಕರು ಕ್ಲಿಕ್ಕಿಸಿದ ನೂರಾರು ಹುಳುಗಳ ಫೋಟೊಗಳು ಮತ್ತು ಅದರ ವಿವರಗಳು ಈ ಪುಸ್ತಕದಲ್ಲಿವೆ. ಪುಸ್ತಕದ ಹೆಸರು "ಫೀಲ್ಡ್ ಗೈಡ್ ಅಫ್ ಇಂಡಿಯನ್ ಇನ್‍ಸೆಕ್ಟ್". ಇದು ನಿಜಕ್ಕೂ ಒಂದು ಅದ್ಭುತ ಪುಸ್ತಕ. ನೂರಾರು ಹುಳಗಳ ವಿವರ ಸಹಿತ ಚಿತ್ರಗಳಿರುವ ಇದು ನಿಜಕ್ಕೂ ಅದ್ಭುತ ಪುಸ್ತಕ.ಪ್ರತಿಯೊಬ್ಬರ ಮನೆಯಲ್ಲೂ ಇರಬೇಕಾದಂತವುದು. ಇಂಥ ಪುಸ್ತಕವೊಂದು ಮನೆಯಲ್ಲಿದ್ದರೇ ಮಕ್ಕಳು ಸೇರಿದಂತೆ ವಯಸ್ಸಾದ ಹಿರಿಯರಲ್ಲೂ ಪ್ರಕೃತಿ ಬಗ್ಗೆ ಸಹಜವಾಗಿ ಆಸಕ್ತಿ ಹುಟ್ಟಿಸುತ್ತದೆ. ಇನ್ನೂ ಇಂಥ ವಿಚಾರಗಳಲ್ಲಿ ಆಸಕ್ತಿಯಿರುವ ಛಾಯಾಗ್ರಾಹಕರಲ್ಲಿ ಇರಲೇ ಬೇಕಾದ ಪುಸ್ತಕ.
ಈ ಪುಸ್ತಕ ಇದೇ ಜೂನ್ ೫ನೇ ತಾರೀಖಿನಂದು ಸಂಜೆ ೪-೩೦ ಕ್ಕೆ ಬಿಡುಗಡೆಯಾಗುತ್ತಿದೆ. ಬನ್ನಿ ನಾವೆಲ್ಲಾ ಹುಳುಗಳು, ಕಾಡುಹೂಗಳ ಲೋಕಕ್ಕೆ ಜೊತೆಯಾಗಿ ಸಾಗೋಣ.
ಚಿತ್ರಗಳು ಮತ್ತು ಲೇಖನ.
ಶಿವು.ಕೆ