Tuesday, December 25, 2012

ಒಂದು ಪುಟ್ಟ ಕತೆ


      

        ಅದು ಹತ್ತು ಅಂತಸ್ತಿನ ಕಛೇರಿ ಅದರಲ್ಲಿ ಎರಡು ಲಿಫ್ಟುಗಳಿರುತ್ತವೆ. ಎರಡು ಲಿಫ್ಟುಗಳು ಹತ್ತನೇ ಮಹಡಿಯಲ್ಲಿರುವಾಗ ಕೆಳಗೆ ನೆಲಮಹಡಿಯಲ್ಲಿ ಒಬ್ಬೊಬ್ಬರಾಗಿ ಬಂದು  ಲಿಪ್ಟ್ ಗಾಗಿ  ಕಾಯುತ್ತಾರೆ. ಆಗಲೇ ಹನ್ನೆರಡು ಜನರಾಗಿಬಿಟ್ಟಿದ್ದಾರೆ. ಹದಿಮೂರನೆಯವನಾಗಿ ಸೂರ್ಯ ಬರುತ್ತಾನೆ. ಈಗ ಲಿಫ್ಟುಗಳು ಕೆಳಗಡೆಗೆ ಬರಲಾರಂಭಿಸುತ್ತವೆ. ಮೊದಲನೆ ಲಿಫ್ಟು ಎಂಟನೇ ಮಹಡಿಗೆ ಬರುತ್ತಿದ್ದರೆ ಎರಡನೇ ಲಿಫ್ಟು ಒಂಬತ್ತನೇ ಮಹಡಿಗೆ ಬರುತ್ತಿರುತ್ತದೆ. ಹಾಗೆ ನೋಡುತ್ತಿದ್ದಂತೆ ಮೊದಲ ಲಿಫ್ಟು ಆರನೇ ಮಹಡಿಗೆ ಬಂದಿರುತ್ತದೆ. ಅದೇ ಸಮಯಕ್ಕೆ ಎರಡನೇ ಲಿಫ್ಟು ಎಂಟನೆ ಮಹಡಿ ಬಂದಿರುತ್ತದೆ. ಈಗ ಎಲ್ಲರ ಗಮನ ಮೊದಲ ಲಿಪ್ಟ್ ನತ್ತ.  ಏಕೆಂದರೆ ಅದು ಬೇಗ ಬರುತ್ತಿರುತ್ತದೆಯಲ್ಲ!  ಮರು ನಿಮಿಷದಲ್ಲಿ ಮೊದಲ ಲಿಫ್ಟ್ ಮೂರನೆ ಮಹಡಿ ಬರುವಷ್ಟರಲ್ಲಿ ಎರಡನೇ ಲಿಫ್ಟು ಐದನೇ ಮಹಡಿ ಬಂದಿರುತ್ತದೆ. ಈಗ ಅಲ್ಲಿರುವ ಎಲ್ಲಾ ಹನ್ನೆರಡು ಜನರು ಬೇಗ ನೆಲಮಹಡಿಗೆ ಬರುವ ಮೊದಲ ಲಿಪ್ಟ್ ಬಳಿ ಕಾಯುತ್ತಾರೆ. ಮತ್ತರ್ಧ ನಿಮಿಷದಲ್ಲಿ ಮೊದಲ ಲಿಫ್ಟ್ ನೆಲಮಹಡಿಗೆ ಬರುತ್ತದೆ. ಅದೇ ಸಮಯಕ್ಕೆ ಎರಡನೇ ಲಿಫ್ತು ಮೂರನೆ ಮಹಡಿಗೆ ಬಂದಿರುತ್ತದೆ. ಮೊದಲ ಲಿಫ್ಟ್ ನೆಲಮಹಡಿಯಲ್ಲಿ ನಿಂತು ಅದರಲ್ಲಿರುವ ಜನರು ಹೊರಬರುತ್ತಿದ್ದಂತೆ ನಿಂತಿದ್ದ ಅಷ್ಟು ಜನರು ಮೊದಲ ಲಿಪ್ಟ್  ನೊಳಗೆ ನುಗ್ಗುತ್ತಾರೆ.   ಅಷ್ಟು ಜನರು ಹೋದರೂ ಸೂರ್ಯ ಮಾತ್ರ ಮೊದಲ ಲಿಪ್ಟ್ನ ಲ್ಲಿ ಹೋಗುವುದಿಲ್ಲ.  ಲಿಪ್ಟ್ ಬಾಗಿಲು ಹಾಕಿಕೊಳ್ಳುತ್ತಿದ್ದಂತೆ ಎರಡು, ನಾಲ್ಕು, ಐದು, ಆರು, ಏಳು, ಎಂಟು, ಒಂಬತ್ತು, ಹತ್ತು ಹೀಗೆ ತಾವು ಹೋಗಬೇಕಾದ ಎಲ್ಲಾ ಮಹಡಿಗಳ ನಂಬರುಗಳನ್ನು ಒಳಗಿರುವವರು ಬಟನ್ ಹೊತ್ತುತ್ತಾರೆ. ಲಿಫ್ಟ್ ನಿದಾನವಾಗಿ ಮೇಲಿನ ಮಹಡಿಗಳಿಗೆ ಚಲಿಸುತ್ತದೆ. ಮೊದಲನೆಯದು ಮೊದಲ ಮಹಡಿ ತಲುಪುವ ಹೊತ್ತಿಗೆ ಎರಡನೇ ನೆಲಮಹಡಿಗೆ ಬರುತ್ತದೆ. ಹಾಗಾದರೆ ಇನ್ನೂ ನೆಲಮಹಡಿಯಲ್ಲಿ ನಿಂತಿರುವ ಸೂರ್ಯನಿಗೆ ಉಳಿದವರಂತೆ ತಾನು ಮೇಲಿನ ಮಹಡಿಗೆ ಹೋಗಲು ಅವಸರವಿರಲಿಲ್ಲವಾ?  ಸೂರ್ಯನಿಗೂ ಕೂಡ ಅವರಷ್ಟೇ ಬೇಗ ತಾನು ಕೂಡ ಹತ್ತನೆ ಮಹಡಿಯ ಕಛೇರಿಗೆ ಹೋಗಬೇಕಾಗಿರುತ್ತದೆ. ಮೊದಲ ಲಿಫ್ಟ್ ನಲ್ಲಿ ಹದಿಮೂರು ಜನರಿಗೆ ಆವಕಾಶವಿದ್ದರೂ ಸೂರ್ಯ ಹೋಗಿರುವುದಿಲ್ಲ. ಏಕೆಂದರೆ ಅವನ ಲೆಕ್ಕಾಚಾರವೇ ಬೇರೆಯಾಗಿರುತ್ತದೆ. ಮತ್ತು ಆತ ಮೊದಲ ಲಿಫ್ಟ್ ಹತ್ತಿದ್ದ ಹನ್ನೆರಡು ಜನರಿಗಿಂತ ಮೊದಲು ಹತ್ತನೇ ಮಹಡಿಯನ್ನು ಎರಡನೇ ಲಿಫ್ಟ್ ನಲ್ಲಿ ತಲುಪುತ್ತಾನೆ. ಅದು ಹೇಗೆಂದು ನೋಡೋಣ.

 

   ಸೂರ್ಯ ಸ್ವಲ್ಪ ತಡವಾದರೂ ಎರಡನೇ ಲಿಫ್ಟಿನಲ್ಲಿ ಹೋಗಲು ಕಾರಣವೇನೆಂದರೆ ಅವನು ಬಿಟ್ಟರೆ ಇನ್ಯಾರೂ ಕೂಡ ಇಲ್ಲ. ಲಿಫ್ಟ್ ಹತ್ತಿದ ಕೂಡಲೇ ಆತನೊಬ್ಬನೇ ಇರುವುದರಿಂದ ನೇರವಾಗಿ ತಾನು ತಲುಪಬೇಕಾದ ಹತ್ತನೆ ಮಹಡಿ ಬಟನ್ ಪ್ರೆಸ್ಮಾ ಡಿದರೆ ಸಾಕು ಅದು ನಡುವಿನ ಯಾವ ಮಹಡಿಯಲ್ಲೂ ನಿಲ್ಲದೇ ವೇಗವಾಗಿ ಹತ್ತನೆ ಮಹಡಿಗೆ ತಲುಪುತ್ತದೆ. ಆದ್ರೆ ಪಕ್ಕದ ಮೊದಲ ಲಿಪ್ಟ್  ಅದೊಳಗಿರುವ ಹನ್ನೆರಡು ಜನರಿಗಾಗಿ ಒಂದು, ಎರಡು, ನಾಲ್ಕು, ಐದು, ಆರು, ಏಳು, ಎಂಟು, ಒಂಬತ್ತು ಹತ್ತು ಹೀಗೆ ನಿಂತು ಅ ಮಹಡಿಗೆ ಹೋಗಬೇಕಾದವರು ಹೊರಬಂದಮೇಲೆ ಮತ್ತೆ ಮೇಲಕ್ಕೆ ಚಲಿಸುತ್ತದೆ. ಹೀಗೆ ಇದು ಅನೇಕ ಸಲ ನಿಂತು ನಿಂತು ಚಲಿಸುವುದರಿಂದ ಎರಡನೇ ಲಿಫ್ಟಿಗಿಂತಲೂ ಎಷ್ಟೋ ಹೊತ್ತಾದ ಮೇಲಿನ ಹತ್ತನೆ ಮಹಡಿಯನ್ನು ತಲುಪುತ್ತದೆ.  ಸೂರ್ಯ ಮತ್ತು ಉಳಿದ ಹನ್ನೆರಡು ಜನರು ಬೇಗ ಮೇಲಿನ ಮಹಡಿಗಳಿಗೆ ತಲುಪಬೇಕೆಂದುಕೊಂಡಿದ್ದರೂ ಹನ್ನೆರಡು ಜನರು ಒಂದೇ ರೀತಿಯಲ್ಲಿ ಯೋಚಿಸಿ ಒಂದೇ ಲಿಪ್ಟಲ್ಲಿ ಹೋಗುತ್ತಾರೆ. ಆದ್ರೆ ಸೂರ್ಯ ಸ್ವಲ್ಪ ವಿಭಿನ್ನವಾದ ಲೆಕ್ಕಾಚಾರ ಮತ್ತು ಅಲೋಚನೆಯಿಂದಾಗಿ ತಡವಾಗಿ ಎರಡನೇ ಲಿಫ್ಟ್ ಆಯ್ಕೆ ಮಾಡಿಕೊಂಡರೂ ಅವರಿಗಿಂತ ಮೊದಲು ಹತ್ತನೆ ಮಹಡಿ ತಲುಪುತ್ತಾನೆ.

   ಇದು ನನ್ನ ಮುಂದಿನ ಫೋಟೊಗ್ರಫಿ ಪುಸ್ತಕದ ಒಂದು ಅಧ್ಯಾಯದ ನಡುವಿನ ಒಂದು ಪುಟ್ಟ ಭಾಗ. ನಿಮಗೆ ಹೇಗನ್ನಿಸಿತು ದಯವಿಟ್ಟು ತಿಳಿಸಿ

ಲೇಖನ : ಶಿವು.ಕೆ

Saturday, October 27, 2012

"ಬಾಲ್‍ಪೆನ್" ಸಿನಿಮಾ ಬಗ್ಗೆ ನಾನು ಬರೆದ ವಿಮರ್ಶೆ "ಹಾಯ್ ಬೆಂಗಳೂರ್‍" ನಲ್ಲಿ

  


"ಇರ್ಲಿ ಬಿಡೋ., ನನಗೆ ಅಮ್ಮ ಇಲ್ವಲ್ವಾ"  -

 ನಸುಕಿನಲ್ಲಿ ಪೇಪರುಗಳೊಳಗೆ ಸ್ಪಪ್ಲಿಮೆಂಟರಿಗಳನ್ನು ಹಾಕುವುದು, ಬಂಡಲ್ ಕಟ್ಟುವುದು, ಸೈಕಲ್ ಮೇಲೆ ಜೋಡಿಸುವುದು, ಸೈಕಲೇರಿ ಮನೆಮನೆಗೆ ಪೇಪರ್ ಹಾಕುವುದು ಇದೆಲ್ಲ ದೃಶ್ಯಗಳಿಂದ ಚಿತ್ರ ಪ್ರಾರಂಭವಾಗುತ್ತಿದ್ದಂತೆ ಹದಿನೆಂಟು ವರ್ಷಗಳ ಹಿಂದೆ ನಾನು ಪೇಪರ್ ಹಾಕುವ ಹುಡುಗನಾಗಿದ್ದ  ಹಿಂದಿನ ಬಾಲ್ಯದ ನೆನಪುಗಳು ಮರುಕಳಿ ಇದು ನನ್ನದೇ ಬದುಕಿನ ಕತೆಯಲ್ಲವೇ ಅನ್ನಿಸಿತ್ತು. ಮುಂದೆ ಅದು ಅನಾಥ ಆಶ್ರಮ, ಅಲ್ಲಿನ ಪುಟ್ಟ ಪುಟ್ಟ ಮಕ್ಕಳು, ಅವರ ಆಟ ಪಾಠ ನೋವು-ನಲಿವು, ಅನಾಥಪ್ರಜ್ಞೆಗಳನ್ನೆಲ್ಲಾ ನೋಡಿದಾಗ ಇದು ಆನಾಥ ಮಕ್ಕಳ ಚಿತ್ರವೆನಿಸಿತ್ತು. ಮುಂದೆ ಕತೆ ಅನೇಕ ತಿರುವು ಪಡೆದು ಕೊಪ್ಪಳ ಒಂದು ಹಳ್ಳಿಗೆ ಲಿಂಕ್ ಆಗಿ ಅಲ್ಲಿನ ರೈತರ ಬದುಕಿನ ಕಷ್ಟಗಳು, ಮೂಡನಂಬಿಕೆ, ಎಳೆಮಕ್ಕಳನ್ನು ಬಲಿಪಶುವಾಗಿಸುವುದು ಹೀಗೆ ವಿಸ್ತಾರವಾದ ಕಥಾ ಹಂದರವನ್ನು ಹೊಂದಿರುವ ಈ ಚಿತ್ರವನ್ನು ನೋಡಿ ಹೊರಬರುವಾಗ ಇದು ನಮ್ಮೆಲ್ಲದ ಬದುಕಿನ ಕತೆ, ರೈತರ ಕತೆ, ಎಳೆಹಸುಗೂಸುಗಳ ಕತೆಯೆನ್ನಿಸಿ ಹೊರಬಂದ ಎಷ್ಟೋ ಹೊತ್ತಿನವರೆಗೂ ಕಾಡಲಾರಂಭಿಸಿತ್ತು. ದಿನಪತ್ರಿಕೆ ಹಂಚುವ ಹುಡುಗರ ಪುಟ್ಟ ಬದುಕುನ್ನು ಮೊದಲ ಬಾರಿಗೆ ಚಲನಚಿತ್ರವೆಂಬ ಮುಖ್ಯವಾಹಿನಿಯಲ್ಲಿ ತೋರಿಸಿದ್ದಕ್ಕೆ ನಾನು ಒಬ್ಬ ದಿನಪತ್ರಿಕೆ ಹಂಚುವ ಹುಡುಗನಾಗಿ, ನಂತರ ವೆಂಡರ್ ಆಗಿ "ಬಾಲ್‍ಪೆನ್" ಚಿತ್ರದ ನಿರ್ಧೇಶಕ ಶಶಿಕಾಂತ್‍ರಿಗೆ, ನಿರ್ಮಾಪಕರಾದ ಶ್ರೀನಗರ ಕಿಟ್ಟಿ ಮತ್ತು ಭಾವನ ಬೆಳಗೆರೆಯವರಿಗೆ  ಧನ್ಯವಾದಗಳನ್ನು ಅರ್ಪಿಸುತ್ತೇನೆ.     ಎಂದಿನ ಅದೇ ಮಚ್ಚು, ಲಾಂಗು, ಗನ್, ಹೊಡೆದಾಟ ಬಡಿದಾಟ, ಅಥವ ದೋಸೆಗಳನ್ನು ತಿರುಗಿಸಿ, ಮಗುಚಿ ಹಾಕಿದಂತೆ ಮಗುಚಿ-ತಿರುಚುವ ಲವ್ ಸ್ಟೋರಿಗಳು ಬರುತ್ತಿರುವ ಪ್ರಸ್ತುತ ಸ್ಥಿತಿಯಲ್ಲಿ "ಬಾಲ್‍ಪೆನ್’ ಎನ್ನುವ ಮಕ್ಕಳ ಚಿತ್ರ ನಿಜಕ್ಕೂ ವಿಭಿನ್ನವೆನಿಸುತ್ತದೆ.  ಮದರ್ ತೆರೆಸ ಆಶ್ರಮದ ಅನಾಥ ಹುಡುಗನೊಬ್ಬ ಪೇಪರ್ ಹಾಕುವ ಹುಡುಗನಿಂದ ಸ್ಪೂರ್ತಿಪಡೆಯುವ ರೀತಿಯನ್ನು ಅದ್ಬುತವಾಗಿ ಕಟ್ಟಿಕೊಟ್ಟಿರುವ ನಿರ್ಧೇಶಕ ಶಶಿಕಾಂತ್ ಅಲ್ಲಿಂದಲೇ ವೀಕ್ಷಕರಲ್ಲಿ ಕುತೂಹಲವನ್ನು ಅರಳಿಸಿಬಿಡುತ್ತಾರೆ. ಮುಂದೆ ಆದೇ ಕೇಶವ ತನ್ನ ಇನ್ನಿಬ್ಬರು ಅನಾಥ ಗೆಳೆಯರೊಡಗೂಡಿ ಅವರು ಕೂಡ ಸರ್ಕಾರಿ ಕಚೇರಿಗಳಿಗೆ ದಿನಪತ್ರಿಕೆಗಳನ್ನು ಹಾಕುವುದು,  ಅಧಿಕಾರಿಗಳ ಕಚೇರಿಗೆ ಪೇಪರುಗಳನ್ನು ಹಾಕುವಾಗ ಅಲ್ಲಿ ಬಂದಿದ್ದ ಕಾಗದಗಳನ್ನು ಓದುತ್ತಾ ಪತ್ರಗಳಲ್ಲಿ ವ್ಯಕ್ತವಾದ ಕಷ್ಟಗಳು, ನೋವುಗಳನ್ನು ಓದಿತಿಳಿದು ಆ ಪುಟ್ಟ ಮನಸ್ಸು ನಲುಗುವುದು, ಹೀಗೆ ನಿತ್ಯವೂ ನಡೆಯುತ್ತಿರುತ್ತದೆ. ಅದೊಂದು ದಿನ ಆತನ ಕೈಗೆ ಸಿಕ್ಕ ಹೀಗೆ ಸರ್ಕಾರಿ ಕಚೇರಿಯ ಬಾಗಿಲ ಹೊರಗೆ ಬಿದ್ದಿದ್ದ ಒಂದು ಪತ್ರವನ್ನು ನೋಡಿದವನೇ ಪೇಪರ್ ಹಾಕುವುದನ್ನು ಬಿಟ್ಟು ಆಶ್ರಮಕ್ಕೆ ಓಡಿಬರುತ್ತಾನೆ. ತನ್ನ ಇನ್ನಿಬ್ಬರು ಗೆಳೆಯರ ಜೊತೆಗೂಡಿ ಆ ಪತ್ರ ಬಂದ ಊರ್‍ಇಗೆ ಯಾರಿಗೂ ಗೊತ್ತಾಗದ ಹೋಗುತ್ತಾರೆ. ಮುಂದೇನಾಯ್ತು ಎನ್ನುವುದನ್ನು ನೀವು ಚಿತ್ರ ನೋಡಿ ಆನಂದಿಸಬಹುದು.    "ಹುಂಡಿಯಲ್ಲಿರುವ ಹಣದಲ್ಲಿ ಎಷ್ಟು ಲಾಡು ಬರುತ್ತವೆ" "ಒಂದು ಲಕ್ಷ ಕೋಟಿಗೆ ಎಷ್ಟು ಸೊನ್ನೆಗಳು ಅಪ್ಪಾಜಿ" "ನನ್ನ ತಲೆಗಿಂತ ಟಿಫನ್ ಚೆನ್ನಾಗಿರುತ್ತೆ ಹೋಗಿ ತಿನ್ನು", ನಾನು ಬಾಗಿಲು ಹಾಕ್ತಿನಿ ನಿನ್ನ ಬಾಗಿಲು ಹಾಕ್ಕೋ, ಇಂಥ ಅನೇಕ ಸಂಭಾಷಣೆಗಳು ಚಿಕ್ಕಂದಿನಲ್ಲಿ ಬಡತನದ ನಡುವೆ, ನಗು, ಖುಷಿ, ದುಃಖ, ಮಗುಮನಸ್ಸಿನ ಗೆಳೆತನ, ಇವೆಲ್ಲವನ್ನು ಮುಗ್ದ ಮನಸ್ಸಿನಲ್ಲಿ ಅನುಭವಿಸುತ್ತಿದ್ದ ಸವಿ ಸವಿ ನೆನಪುಗಳು ಮರುಕಳಿಸುತ್ತವೆ. ಇಂಥ ಸಂಭಾಷಣೆಗಳ ಮೂಲಕ ನಮ್ಮ ಕಿವಿ ಮತ್ತು ಮನಸ್ಸು ಪುಳಕಗೊಂಡರೆ, ಬಾಲ ಲಾಡು ತಿನ್ನುವ ದೃಶ್ಯ, ಕೇಶವ ಪೇಪರ್ ಕಟಿಂಗ್, ಕಣ್ಣಲ್ಲೇ ಮಾತಾಡುವ ರೀಟಾ, ಸಮರ್ಥ್, ಹುಂಡಿ ಹೊಡೆದು ಹಾಗೆ ಹಣವನ್ನು ಟವಲ್ಲಿನಲ್ಲಿ ಎತ್ತಿಕೊಂಡು ಮರೆಯಾಗುವ ದೃಶ್ಯ, ಹೀಗೆ ಇಂಥ ಹತ್ತಾರು ದೃಶ್ಯಾವಳಿಗಳ ಝಲಕ್‍ಗಳು ಇವೆ. ಪತ್ರದಲ್ಲಿನ ವಿಚಾರವನ್ನು ಓದಿ ಯಾರಿಗೂ ಹೇಳಲಾಗದೆ, ಇರಲೂ ಆಗದೆ, ಒಬ್ಬನೇ ಕುಳಿತು ಕೇಶವ ಅನುಭವಿಸುವ ನೋವು,  ಅಪ್ಪಾಜಿಯನ್ನು ಕಂಡೊಡನೆ ಈ ವಿಚಾರವನ್ನು ಹೇಳಲಾಗದೆ ನನಗೆ ಅಪ್ಪನ ನೆನಪಾಯ್ತು" ನಮ್ಮೊಲ್ಲರ ಅಮ್ಮ ಮದರ್ ತೆರೆಸಾ" ಇಂಥ ಸನ್ನಿವೇಶಗಳು ನಮ್ಮ ಕಣ್ಣುಗಳನ್ನು ಒದ್ದೆಯಾಗಿಸುತ್ತವೆ.  "ಇರ್ಲಿಬಿಡು ನನಗೆ ಅಮ್ಮ ಇಲ್ವಾಲ್ಲ" ತಿಂಡಿ ಪೋತ ಬಾಲನ ಮಾತನ್ನು ಕೇಳಿದಾಗಲಂತೂ ನಮಗರಿವಿಲ್ಲದಂತೆ ಕಣ್ಣಂಚಲ್ಲಿ ಹನಿ.

 ಒಂದು ಕ್ಯಾನನ್ ೫ಡಿ ಮಾರ್ಕ್ ೨ ಕ್ಯಾಮೆರ, ಕೇವಲ ಎಲ್ ಇ ಡಿ ದೀಪಗಳನ್ನು ಬಳಸಿ ನೆರಳು ಬೆಳಕು ಹೊಂದಾಣಿಕೆ, ಹೀಗೆ ಇಂಥ ಅದ್ಬುತ ದೃಶ್ಯಾವಳಿಗಳನ್ನು ಕಟ್ಟಿಕೊಟ್ಟಿರುವ ಛಾಯಾಗ್ರಾಹಕ .........ಮತ್ತು ಅದ್ಬುತವೆನಿಸುವ ಹಾಡು ಮತ್ತು ಹಿನ್ನೆಲೆ ಸಂಗೀತವನ್ನು ನೀಡಿದ ಮಣಿಕಾಂತ್ ಕದ್ರಿ ಇಬ್ಬರಿಗೂ ಹ್ಯಾಟ್ಸಪ್ ಎನ್ನಲೇಬೇಕು.

   ಚಿತ್ರದಲ್ಲಿ ನಟಿಸಿರುವ ಮುಖ್ಯ ಪಾತ್ರಧಾರಿ ಕೇಶವನ ನಟನೆಯಂತೂ ತುಂಬಾ ಸಹಜವೆನಿಸುತ್ತದೆ. ಅತಿಥಿನಟನಾಗಿ ಬರುವ ಶ್ರೀನಗರ ಕಿಟ್ಟಿ, ತಿಂಡಿಪೋತ ಬಾಲನ ಮುಗ್ಧತೆ, ಕಣ್ಣುಗಳಲ್ಲೇ ಮುಂಚು ಹರಿಸುವ ರೀಟಾ, ಕೆಂಪ ಪಾತ್ರಧಾರಿ ಸಂಫೂರ್ಣ ಹೊಸಬರಾದರೂ ಅದ್ಬುತವಾಗಿ ನಟಿಸಿದ್ದಾರೆ.  ಯಾವ ಪಾತ್ರೆಗೆ ಹಾಕಿದರೂ ಸಲ್ಲುವಂತಿರುವ ಹಿರಿಯ ನಟರಾದ ಸುಚ್ಯೇಂದ್ರಪ್ರಸಾದ್ ಆಶ್ರಮದ ನಿರ್ವಾಹಕನಾಗಿ ಸಹಜಾಭಿನಯ. ಕುಡುಕ ತಂದೆ, ಆತನ ಹೆಂಡತಿ ಮತ್ತು ಮಗಳು, ಪೋಸ್ಟ್ ಮ್ಯಾನ್, ಮಾರಪ್ಪ, ಆಶ್ರಮದ ಆಡುಗೆ ಭಟ್ಟ, ಪೇಪರ್ ಹಾಕುವ ಹುಡುಗ ಹೀಗೆ ಎಲ್ಲರೂ ಚೆನ್ನಾಗಿ ನಟಿಸಿದ್ದಾರೆ.

 ಎಂದಿನ ದೃಶ್ಯವಳಿಗಿಂತ ವಿಭಿನ್ನವಾದ ಮತ್ತು ಕಂಡರೂ ಕಾಣದಂತಿರುವ ನಿತ್ಯ ಸತ್ಯ ಸಂಗತಿಗಳ ಕುತೂಹಲಕಾರಿ ದೃಶ್ಯಗಳಿಂದ ಕೂಡಿರುವ "ಬಾಲ್ ಪೆನ್" ಎನ್ನುವ ಚಿತ್ರ ಮಕ್ಕಳ ಚಿತ್ರವೆನಿಸಿದರೂ ಸಕುಟುಂಬ ಸಮೇತರಾಗಿ ನೋಡುವಂತ ಮತ್ತು ಸಮಾಜಕ್ಕೆ ಮಕ್ಕಳ ವಿಚಾರವಾಗಿ ಒಂದು ಸಂದೇಶವನ್ನು ಕೊಡುವ ಚಿತ್ರ. ಕೋಟಿ ಕೋಟಿ ಬಂಡವಾಳ ಹಾಕಿ ಸ್ಟಾರ್ ನಟ-ನಟಿಯನ್ನು ಹಾಕಿಕೊಂಡು ಕತೆಯಿಲ್ಲದ ಸಿನಿಮಾ ಮಾಡುವ ಬದಲು ತೀರ ಕಡಿಮೆ ಬಜೆಟ್‍ನಲ್ಲಿ ಒಂದು ಉತ್ತಮ ಕತೆಯನ್ನಿಟ್ಟುಕೊಂಡು ಒಂದು ಸದಭಿರುಚಿಯ ಎಲ್ಲರೂ ನೋಡುವಂತ ಚಿತ್ರ ಬೇಕೆನ್ನುವವರಿಗೆ "ಬಾಲ್ ಪೆನ್" ಒಂದು ಉತ್ತಮ ಉದಾಹರಣೆ.  ನೋಡಲು ಮಿಸ್ ಮಾಡಬೇಡಿ.

ಶಿವು.ಕೆ.
ಬೆಂಗಳೂರು   

Monday, October 8, 2012

My Photography Interview
The Man behind the Camera Focused  

Shivu.k is a renounced photographer from the garden city Bengaluru who bagged 32 International awards and 92 National awards.
ARPS Distinction from Royal photography society from London.  
EFIAP Distinction from Federation De la Art photography from Luxemburg.  
AFIAP Distinction from Federation De La Art photography Paris. 
His photography subjects are pictorial, wild life, macro etc. 

 He is a vender of newspaper and dramatically he turned out as a great photographer as well as photojournalist. He also wrote two books, "Vender Kannu" and "Gubbi enjalu".  This is a small interview of Shivu k in spite of his hectic schedule in Mangalore. 


-----------------------------

Kishore K.V :Sir many heard that, you jumped into photography through a rather uncommon door. So when and how your instincts said that to you having the sense of photography? 

Shivu K  :It was 20 years back I had a holy touch of camera in my life. It was just a time pass and curiosity I bought a camera of 60RS. A use and throw roll camera which was very minute in size. Prior to this moment I was a painter. I used to draw many paintings and pencil sketches. I also had an internal urge to convey something which is uncommon. This uncommon urge somehow took a perfect shape with camera I touched.  I started telling my unique feelings which I frame in my brain and retina by camera. And a serious enquiry about photography itself gave a great appraisal to me to continue with it till today.

 Kishore K.V : What elements make photos so much alluring?

Shivu K   :According to me a photographer must go to seize a picture with empty mind. One must not hang in his earlier captures. A hangover always hinders the creativity of a man who stands behind the camera. He must frame the frame before he look into the view finder. Impact is the basic element which attracts the viewer. So one should glue the center of attraction of the subject what I call as impact in the picture. Another important element is placement or alignment of a subject. A subject must be placed one third in the frame and also it is left to the creativity of a photographer. The major spot light in the capture is balancing light and playing with light. Light is like a soul of a capture. Light gives life to photo. And photo must be understood to the viewer. These are some of the basic elements to make picture attractive.   

Kishore K.V :What is the difference between Good and bad photos? Can you render a critical analysis?

Shivu K   :I give an example of two photos taken in one context to answer this query. If two professional  photographers are challenged to grab the scene in rain, one takes the photo from inside the building with secured protection to him and to his camera with optimum condition and minimum risk and another captures it amidst of filed holding the umbrella having supplementary concentration and attention to his camera and pays the same creativity and technique as like the first one. Then according to my reading the 2nd one stands above to first. Which means you got the answer.

Kishore K.V :What is the standard set by you for your capture?

Shivu K   :It’s nothing other than practice and experience I indulge in my every captures to set standard. Since I bagged some international awards I cannot produce photos below to that level. Sometimes if I feel like I cannot balance my imagined frame in the camera I preferably don’t entertain myself to capture it. This is how I maintain my standard. You have released lots of wedding photographs recently in your website. It looks like rather than a subject, a photographer is enjoying the scenario. 

Kishore K.V :How do you enjoy taking wedding photographs behind the camera? 

 Shivu K : A smile. You know I cannot take the photos without enjoying the moment. May be there lays my success. So what I do when I take wedding photographs is I alert them with key advice that please do enjoy naturally in the auspicious moment. When they start enjoying the moment unknowingly my heart jumps with farthest gratification and I start my business. That’s why you felt, a person behind the camera is enjoying the moment more. The most loved genre in photography by you, It’s none other than pictorial photography.

Kishore K.V :Sir, can you share the frustrating moment you experienced when you were pressing the shutter button?

 Shivu K   :I had lot. But I cannot spell it now very exactly. I always feel frustrated when people disturb my frame. And also I do go into that feeling if at all people deviate me when my eye was into view finder. If the subject doesn’t behave in a proper position also then I am frustrated.
Kishore K.V : How was your parents’ reaction when you said you want to end up with photography as a profession?
Since I took the profession to earn my daily livelihood I started to lend some amount of money to my house which gave a much secured feeling towards my passion to my parents. So they never asked me why you bought a camera and why are you always spending time on it. I very tactfully balanced my passion and my parents’ chaos.

Kishore K.V :How is photography profession and professionals in Karnataka?

  Shivu K  :He with tedious face, to be frank we are very much behind in comparison with Kolkata even though we have maximum number of professionals. It has quite sad reason to this scenario.  But in Kolkata they encourage many who just jumped into the field. This made wide difference between Karnataka and Kolkata. Kolkata itself have 15 international standard clubs where as we have only 2. So now I am writing the book which gives a complete picture of photography just to overcome the problem of Karnataka. 

Kishore K.V  :Sir how you learnt techniques of camera like shutter speed, aperture ISO when bought first DSLR?

  Shivu K :I am really blessed to have teachers like Late Shri Raj gopal, B.Srinivasa .T.N.A Perumal C.R Satyanarana and other Seniors.  I learnt each and every techniques of camera by them. And also they taught me how to be creative when one captures the photo. When we glimpse at your photos we find your silent murmur in each click. 

Kishore K.V :How is that possible for you to render your voice in your captures?

 Shivu K   :I feel very intimacy with the moment before I capture it. What I do is, me and my moment we both talk each other very swiftly. And later if the moment is convinced with me I start capturing the moment by enjoying its intimacy. That might be the strong reason to my silent murmur in my photos.

Kishore K.V :You don’t capture photos without a play of light. How do you play with light?

 Shivu K   :I study the light a lot. Light moves from one place to another in various frequency of time. I love to give an example of my capture on fisherman, boat and fishnet. For that capture I studied two years by frequently visiting the place to study the angles of light when they sue the net into the water. At last I understood the play of sun in the fixed frame and ended up with good click. It’s always an intense enquiry arms us with success.

Kishore K.V :A last question for you.  Each and every human have his own strength and weakness. In the similar way, which is your strength and which is your weakness?

  Shivu K  :My strength is curiosity to searching new thing which is very special.  My weakness is I have less dedication now than earlier. 
                                                  
Interview by :  Kishor.K.V and his friend.

 Thanks to Kishore K.V and his friend. Ujire SDM College, South Kenara Karnataka, Sharing My Photography Experience..

Shivu K


Thursday, September 27, 2012

ನಿಮ್ಮ ಮಕ್ಕಳಿಗೆ ಆಡಲು ಇಟ್ಟುಕೊಳ್ಳಿ..........

         ಅದು ಇದಕ್ಕೆ ಮುತ್ತಿಟ್ಟಿದ್ದು ನೋಡಿ ಮುಂದೇನಾಗಬಹುದು ಎನ್ನುವ ಕುತೂಹಲದಿಂದ ಅವನ್ನೇ ನೋಡುತ್ತಿದ್ದೆ. ಮತ್ತೊಮ್ಮೆ ಇದರ ಬಾಯನ್ನು ಅದರ ಬಳಿಗೆ ತಂದಿತಲ್ಲ...ಇನ್ನೊಮ್ಮೆ ಮುತ್ತಿಡಬಹುದು ಎಂದುಕೊಂಡಿದ್ದವನಿಗೆ ಮುತ್ತಿಡುವ ಬದಲು ಬಾಯಿ ತೆಗೆದು ತನ್ನ ಚೂಪಾದ ಹಲ್ಲುಗಳಿಂದ ಇದರ ಕಾಲು ಭಾಗದ ತಲೆಯನ್ನೇ ಕಚ್ಚಿ ಎಳೆದು ತಿನ್ನತೊಡಗಿತು. ಮೊದಲ ಸಾರಿ ಇದು  ಪ್ರೀತಿಯಿಂದ ಮುತ್ತಿಡುತ್ತಿರಬಹುದು ಎಂದುಕೊಂಡಿದ್ದು ನನ್ನ ಭ್ರಮೆಯಷ್ಟೆ. ಬಹುಶ: ತಲೆಯನ್ನೊಮ್ಮೆ ನೆಕ್ಕಿ ರುಚಿ ನೋಡಿರಬಹುದೇನೋ...ಒಮ್ಮೆ ನನ್ನ  ಕಡೆಗೆ ನೋಡಿತು. ಮತ್ತೆ ನನ್ನ ವಿರುದ್ಧ ದಿಕ್ಕಿಗೊಮ್ಮೆ ನೋಡಿ, ನಂತರ ತಲೆಯ ಭಾಗವನ್ನು ಚೂರು ಚೂರೇ ತನ್ನ ಹರಿತವಾದ ಹಲ್ಲುಗಳಿಂದ ಕಚ್ಚಿ ಎಳೆದು ತಿನ್ನುತ್ತಾ ಅದರ ತಲೆಯನ್ನೇ ತಿಂದು ಮುಗಿಸಿತ್ತು. ತಲೆಯನ್ನು ಕಳೆದುಕೊಂಡ ಇದರ ಮುಂಡ ಹಾಗೇ ಒದ್ದಾಡತೊಡಗಿತ್ತು.

   ಅರೆರೆ... ಇದೇನಿದು ಇವನು ಯಾವುದೋ ಹಾಲಿಹುಡ್ ಸಿನಿಮಾ ಕತೆಯನ್ನು ಹೇಳುತ್ತಿದ್ದಾನೆ ಎಂದುಕೊಂಡಿರಾ? ಖಂಡಿತ ಇಲ್ಲ. ಒಂದು ಗಿಡದ ಎಲೆಯ  ಮರೆಯಲ್ಲಿ ಎಲೆಯ ಬಣ್ಣಕ್ಕೆ ಹೊಂದಿಕೊಂಡಂತೆ ಕಾಯುತ್ತಾ ಕುಳಿತಿದ್ದ ಒಂದು ಪ್ರೈಯಿಂಗ್ ಮಾಂಟಿಸ್ ಎನ್ನುವ ಎಲೆಯ ಬಳ್ಳಿ ಬಣ್ಣದ ಹುಳು ತನ್ನ ಹತ್ತಿರ ಹಾರಿಬಂದು ಕುಳಿತ ಒಂದು ಗ್ಲಾಸ್ ಟೈಗರ್ ಚಿಟ್ಟೆಯನ್ನು ತನ್ನೆರಡು ಬಲಿಷ್ಟ ಕೈಗಳಿಂದ ಹಿಡಿದು ನಂತರ ನಿದಾನವಾಗಿ ಅದರ ತಲೆಯನ್ನು ಒಮ್ಮೆ ನೆಕ್ಕಿದಾಗ ಅದು ಮುತ್ತಿಡುತ್ತಿರಬಹುದು ಎನ್ನುವುದನ್ನು ನನ್ನ ಹೊಸ ಟ್ಯಾಮರಾನ್ ೯೦ಎಮ್ ಎಮ್ ಮ್ಯಾಕ್ರೋ ಲೆನ್ಸ್ ಹಾಕಿದ ೫ಡಿ ಕ್ಯಾಮೆರದ ವ್ಯೂ ಪೈಂಡರ್‍ಉನೊಳಗೆ ನೋಡಿದಾಗ ಅನ್ನಿಸಿತ್ತು. ಮ್ಯಾಕ್ರೋ ಲೆನ್ಸಿನ ಮೂಲಕ ಕಾಣುವ ದೃಶ್ಯವಳಿಗಳು ಕೊಡುವ ಅನುಭವ ಮತ್ತು ಅನುಭೂತಿಯೇ ಬೇರೆಯದು.  ಚಿಟ್ಟೆಯನ್ನು ಬೇಟೆಯಾಡಿದ್ದ ಪ್ರೈಯಿಂಗ್ ಮಾಂಟಿಸ್ ಮಿಡತೆಯ ಉದ್ದವಾದ ಹಲ್ಲುಗಳು  ಸಿನಿಮಾ ಟಾಕೀಸಿನ ದೊಡ್ಡ ತೆರೆಯ ಮೇಲೆ ಕಾಣಿಸುವ ಡೈನೋಸಾರ್‌ನ ಹಲ್ಲುಗಳಂತೆ ಕಂಡು ಚಿಟ್ಟೆಯ ತಲೆ ಮಾಂಸವನ್ನು ತನ್ನ ಹರಿತವಾದ ಹಲ್ಲುಗಳಿಂದ ಕಚ್ಚಿ ಎಳೆದು ತಿನ್ನುತ್ತಿರುವುದನ್ನು ನೋಡುತ್ತಾ ಫೋಟೊ ಕ್ಲಿಕ್ಕಿಸುವುದನ್ನೇ ಮರೆತಿದ್ದೆ.
    
ಇನ್ನೂ ಹೀಗೆ ಬಿಟ್ಟರೆ ಕೆಲವೇ ಕ್ಷಣಗಳಲ್ಲಿ ಚಿಟ್ಟೆಯ ದೇಹವನ್ನು ಪೂರ್ತಿ ತಿಂದುಹಾಕಿ ರೆಕ್ಕೆಯನ್ನು ನಿಮ್ಮ ಮಕ್ಕಳಿಗೆ ಆಡಲು ಇಟ್ಟುಕೊಳ್ಳಿ ಅಂತ ಈ ಪ್ರೈಯಿಂಗ್ ಮಾಂಟಿಸ್ ತನ್ನ ದೊಡ್ಡ ಕುಂಡಿ ತೋರಿಸಿ ಹೋಗುವುದು ಗ್ಯಾರಂಟಿ ಎಂದುಕೊಂಡು ತಡಮಾಡದೆ ಸತತವಾಗಿ ಕ್ಲಿಕ್ಕಿಸತೊಡಗಿದೆ. ಈ ಸನ್ನಿವೇಶವನ್ನು ನಾನೊಬ್ಬನೇ ಕ್ಲಿಕ್ಕಿಸುತ್ತಿರಲಿಲ್ಲ. ನನ್ನ ಜೊತೆಗೆ ಸಮ್ಮಿಲನ ಶೆಟ್ಟಿ, ರಾಕೇಶ್ ಕುಮಾರ್ ಕೊಣಜೆ, ಗುರು ಕಾಪು, ರತ್ನಾಕರ, ರವಿರಾಜರಾವ್, ಇರ್ಷಾದ್ ಅಕ್ಬರ್, ತಮ್ಮದೇ ಕೋನಗಳಿಂದ ಫೋಟೊ ತೆಗೆಯುತ್ತಿದ್ದರು.

             ಇನ್ನೂ ಸ್ವಲ್ಪ ಹತ್ತಿರದಿಂದ ಕ್ಲಿಕ್ಕಿಸಿದಾಗ

ನಾವಿಷ್ಟೂ ಜನ ಛಾಯಗ್ರಾಹಕರು ಅದರ ಸುತ್ತ ನಿಂತು ಅದು ತಿನ್ನುತ್ತಿರುವ ದೃಶ್ಯಗಳನ್ನು ಸತತವಾಗಿ ಕ್ಲಿಕ್ಕಿಸುತ್ತಿದ್ದರೂ ನಮ್ಮನ್ನು ನೋಡಿಯೂ ನೋಡದಂತೆ ಮೈಮರೆತು ಗಬಗಬನೆ ಅನಾಗರೀಕನಂತೆ ತಿನ್ನುತ್ತಿದೆಯಲ್ಲ! ನಾವು ಮನುಷ್ಯರಾದರೆ ಒಬ್ಬರೇ ಇದ್ದಾಗ ಅನೇಕ ಸಾರಿ ಹೀಗೆ ಗಬಗಬನೆ ತಿಂದರೂ ಎದುರಿಗೆ ಗೆಳೆಯರು, ನೆಂಟರು, ಬಂಧುಗಳು, ನಮ್ಮ ಕಚೇರಿಯ ಬಾಸುಗಳು, ಕೊನೆಯ ಪಕ್ಷ ಹೆಂಡತಿ ಮಕ್ಕಳು ಎದುರಿಗಿದ್ದಾಗಲೂ ಸ್ವಲ್ಪ ನಯ ನಾಜೂಕು, ಶಿಸ್ತುನಿಂದ ತಿನ್ನುತ್ತೇವಲ್ಲವೇ...ಕೆಲವೊಂದು ಪಾರ್ಟಿಗಳಲ್ಲಿ ಎಲ್ಲರೆದುರು ಸ್ವಲ್ಪವೇ ತಿಂದ ಶಾಸ್ತ್ರ ಮಾಡಿ ಶೋ ಅಪ್ ಮಾಡುತ್ತೇವೆ ಏಕೆ? ಪ್ರಕೃತಿಯೊಳಗಿಂದ ಬಂದು ಪ್ರಕೃತಿಯೊಳಗೆ ಒಂದಾಗಿರುವ ಈ ಪ್ರೈಯಿಂಗ್ ಮಾಂಟಿಸ್ ಪ್ರಕೃತಿ ಸಹಜವಾದ ಗುಣವನ್ನು ಹೊಂದಿದೆ ಅಂತ ಅಂದುಕೊಂಡರೂ, ನಾವು ಕೂಡ ಪ್ರಕೃತಿಯಿಂದಲೇ ಬಂದವರು. ಆದರೂ ಈ ರೀತಿ ಏಕೆ ವರ್ತಿಸುತ್ತೇವೆ? ಅತಿವಿನಯವಂತಿಕೆ, ತಿನ್ನುವ ಉಣ್ಣುವ ವಿಚಾರದಲ್ಲಿ ಕೆಲವೊಂದು ಲೆಕ್ಕಾಚಾರ, ಶಿಷ್ಟಾಚಾರ, ಎದುರಿಗೆ ಯಾರಾದರೂ ನೋಡುತ್ತಿದ್ದಾರೆ ಎನ್ನುವುದು ತಿಳಿದರೆ ಮುಗೀತು. ನಾವು ಗಬಗಬನೆ ತಿನ್ನುವ ಆಸೆಯಿದ್ದರೂ ಅವರೆದುರು ಬೇಕಂತಲೇ ಕೇವಲ ಮೂರು ಬೆರಳುಗಳನ್ನು ಬಳಸಿಕೊಂಡು ಪುಟ್ಟ ತುತ್ತುಗಳನ್ನು ಬಾಯಿಗಿಟ್ಟುಕೊಳ್ಳುತ್ತೇವೆ. ಚೆನ್ನಾಗಿ ಅಗಿದು ರುಚಿಯನ್ನು ಸವಿಯಬೇಕೆನ್ನುವ ಆಸೆಯಿದ್ದರೂ, ಬಾಯೊಳಗೆ ಕಂಡರೂ ಕಾಣದ ಹಾಗೆ ಅಗಿದು ನುಂಗುತ್ತೇವಲ್ಲ ಏಕೆ? ಅದಕ್ಕಿಲ್ಲದ ಸಂಸ್ಕಾರ ನಮಗ್ಯಾಕೆ? ನಾವು ಮನುಷ್ಯರು ನಮಗೆ ದೇವರು ಕೊಟ್ಟ ಬುದ್ದಿವಂತಿಕೆಯಿದೆ. ಆಲೋಚನೆ ಮಾಡುವ ಶಕ್ತಿಯಿದೆ, ಸಂಸ್ಕಾರವಂತರಾಗಿರುವುದು ಬದುಕಿನಲ್ಲಿ ಮುಖ್ಯವೆಂದುಕೊಂಡರೂ ಈ ಕೀಟಗಳಿಗೂ ಬುದ್ದಿವಂತಿಕೆಯಿದೆಯಲ್ಲ, ಅಲೋಚನೆ ಮಾಡುವ ಶಕ್ತಿಯಿದೆಯಲ್ಲಾ...ಇರಲೇಬೇಕು ಏಕೆಂದರೆ ನಮಗೆ ಬುದ್ದಿ ಮತ್ತು ಆಲೋಚನೆ ಮಾಡುವ ಶಕ್ತಿ, ಕೀಟಗಳಿಗಿಂತ ಸಾವಿರ ಪಟ್ಟು ದೊಡ್ಡ ಗಾತ್ರದ ದೇಹ ನೀಳವಾದ ಕೈಗಳು, ನೋಡುವ ದೃಷ್ಠಿ, ಓಡಲು ಬೇಕಾದ ಬಲಿಷ್ಟವಾದ ಕಾಲುಗಳೆಲ್ಲಾ ಇದ್ದರೂ ಹೀಗೆ ಕುಳಿತಿರುವ ಚಿಟ್ಟೆಯನ್ನು ನಾವು ಬರಿಕೈಯಲ್ಲಿ ಹಿಡಿಯಲು ಆಗುವುದಿಲ್ಲ. ಆದ್ರೆ ಹಾರಾಡದ ಇದೇ ಪ್ರೈಯಿಂಗ್ ಮಾಂಟಿಸ್ ನಮಗಿಂತ ಗಾತ್ರದಲ್ಲಿ ಸಾವಿರ ಪಟ್ಟು ಚಿಕ್ಕದಿದ್ದರೂ ಮರೆಯಲ್ಲಿ ಕಾಯ್ದು ಕುಳಿತು ಹಾರಾಡುವ ಚಿಟ್ಟೆ ಕುಳಿತ ತಕ್ಷಣ ಕ್ಷಣಮಾತ್ರದಲ್ಲಿ ಹಿಡಿದುಬಿಡುತ್ತದಲ್ಲ..ಇಷ್ಟೆಲ್ಲಾ ಮಾಡುವುದಕ್ಕೆ ಅದಕ್ಕೆ  ಬುದ್ಧಿವಂತಿಕೆ, ಮುಂದಾಲೋಚನೆ ಇರಲೇಬೇಕಲ್ಲವೇ?....ಹೀಗೆ ನನ್ನದೇ ಅಲೋಚನೆಯಲ್ಲಿ ಮಗ್ನನಾಗುವ ಹೊತ್ತಿಗೆ ಪ್ರೈಯಿಂಗ್ ಮಾಂಟಿಸ್, ಗ್ಲಾಸ್ ಟೈಗರ್ ಚಿಟ್ಟೆಯ ಪೂರ್ತಿ ದೇಹವನ್ನು ತಿಂದು ರೆಕ್ಕೆಯನ್ನು ಕೆಳಕ್ಕೆ ಬೀಳಿಸಿತ್ತು.

     ಅದು ತಿನ್ನುವ ಪರಿಯನ್ನು ನೋಡಲು ಮತ್ತಷ್ಟು ಹತ್ತಿರದಿಂದ ನೋಡಿದಾಗ...ಕಂಡಿದ್ದು ಹೀಗೆ..
 

     ಜೊತೆಗಿದ್ದವರೆಲ್ಲಾ ಇವತ್ತಿನ ಮಟ್ಟಿಗೆ ಇದು ನಮಗೆ ಅದ್ಬುತ ಫೋಟೊ, ನಮಗಿಷ್ಟು ಸಾಕು ಎಂದು ಬೇರೆ ಚಿಟ್ಟೆಗಳನ್ನು ಹುಡುಕುತ್ತಾ ಹೋದರು. ಆದ್ರೆ ನನಗೆ ಈ ಪ್ರೈಯಿಂಗ್ ಮಾಂಟಿಸ್ ತಿಂದ ಮೇಲೆ ಏನು ಮಾಡಬಹುದು ಎನ್ನುವುದನ್ನು ನೋಡುವ ಕುತೂಹಲ. ಮತ್ತೆ ಕ್ಯಾಮೆರ ವ್ಯೂಪೈಂಡರ್ ಮೂಲಕ ನೋಡತೊಡಗಿದೆ. ಆಷ್ಟರಲ್ಲಿ ಸಮ್ಮಿನಲ ಶೆಟ್ಟಿಯವರ ಅಮ್ಮ ನಮ್ಮನ್ನೆಲ್ಲ ತಿಂಡಿಗೆ ಕರೆದರು. ಈಗ ಬಂದೆವು ಎಂದುಕೊಂಡು ಮತ್ತೆ ತಮ್ಮ ಕಾರ್ಯದಲ್ಲಿ ಎಲ್ಲರೂ ಮಗ್ನರಾದೆವು. ಚಿಟ್ಟೆಯನ್ನು ತಿಂದು ಆಯ್ತಲ್ಲ...ಹಿಂಭಾಗವೊಂದು ಬಿಟ್ಟು ಸುಲಭವಾಗಿ ಎಲ್ಲ ದಿಕ್ಕಿಗೂ ತನ್ನ ಕತ್ತನ್ನು ತಿರುಗಿಸುವ ಅವಕಾಶವಿರುವುದರಿಂದ ಈ ಪ್ರೈಯಿಂಗ್ ಮಾಂಟಿಸ್ ಸುಮ್ಮನೆ ಸುತ್ತಲೂ ತನ್ನ ವಿ ಆಕಾರದ ತಲೆಯನ್ನು ಎಲ್ಲಾ ಕಡೆ ನಿದಾನವಾಗಿ ತಿರುಗಿಸಿ ನೋಡಿತು.

ತನ್ನೆದುರಿದ್ದವರೆಲ್ಲಾ ಜಾಗ ಖಾಲಿಮಾಡಿ ನಾನೊಬ್ಬನಿರುವುದು ಅದಕ್ಕೆ ಕಾಣಿಸರಬೇಕು. ಎಲ್ಲರೂ ಎದ್ದು ಹೋದ ಮೇಲೆ ಇವನದೇನು ವಿಶೇಷ..ಎದುರಿಗಿದ್ದರೇ ಇದ್ದುಕೊಳ್ಳಲಿ..ನನ್ನ ಊಟವನ್ನು ಕಿತ್ತುಕೊಳ್ಳಲಿಲ್ಲವಾದ್ದರಿಂದ ಈಗ ನನಗೆ ಸ್ಪರ್ಧಿಯಲ್ಲ...ಇದುವರೆಗೂ ನನಗೇನು ತೊಂದರೆಯನ್ನು ಕೊಟ್ಟಿಲ್ಲವಲ್ಲವಾದ್ದರಿಂದ ವೈರಿಯಂತೂ ಅಲ್ಲವೇ..ಅಲ್ಲ. ಮಾಡಲು ಬೇರೆ ಕೆಲಸವಿಲ್ಲದ್ದರಿಂದ ಹೀಗೆ ನನ್ನನ್ನೇ ನೋಡುತ್ತ ಕುಳಿತಿರುವ ಸೋಮಾರಿ ಇರಬೇಕು ಎಂದುಕೊಂಡಿತ್ತೇನೋ...ನನ್ನನ್ನು ಗಮನಿಸದೇ ತನ್ನ ತಲೆಯನ್ನು ಅದರ ಕೈಗಳಿಂದ ಉಜ್ಜಿಕೊಳ್ಳತೊಡಗಿತು.

 ಒಂದೈದು ನಿಮಿಷ ಹೀಗೆ ಮಾಡಿ, ಇದುವರೆಗೂ ತಲೆಕೆಳಕಾಗಿ ನೇತಾಡಿಕೊಂಡೇ ಚಿಟ್ಟೆಯನ್ನು ತಿಂದುಹಾಕಿದ್ದ ಇದು ಈಗ ನಿದಾನವಾಗಿ ಕೆಳಗಿನಿಂದ ಮೇಲ್ಮುಖವಾಗಿ ಎಲೆಗಳ ಮೇಲೆ ಸರಿಯತೊಡಗಿತು. ಅದನ್ನು ಗಮನಿಸಿ ಫೋಟೊ ಕ್ಲಿಕ್ಕಿಸುತ್ತಿದ್ದ ನಾನು ಅದು ಮೇಲ್ಮುಖವಾಗಿ ಹೋಗುತ್ತಿದ್ದಂತೆ ನನ್ನ ಕ್ಯಾಮೆರವನ್ನು ಹಿಂದೆ ಸರಿಸಿ ಸ್ಟ್ಯಾಂಡ್ ಎತ್ತರಿಸಿಕೊಳ್ಳುವಷ್ಟರಲ್ಲಿ ಅದು ತನ್ನ ಎಂದಿನ ಟಿಪಿಕಲ್ ಶೈಲಿಯಲ್ಲಿ ತನ್ನೆರಡು ಕೈಗಳಿಂದ ಶರಣಾಗತಿಯಲ್ಲಿ ಕೈಮುಗಿಯುವಂತೆ ನಿಂತು ತಲೆಯನ್ನು ಎಡಭಾಗದಲ್ಲೊಮ್ಮೆ ನೋಡಿ ಆ ಕಡೆ ಮತ್ತೊಂದು ಹುಳುವೋ ಅಥವ ಚಿಟ್ಟೆಯೋ ಕಂಡಿರಬೇಕು. ನಿದಾನವಾಗಿ ಅತ್ತ ಚಲಿಸತೊಡಗಿತ್ತು. ಅದು ಕೈಮುಗಿದು ನಿಲ್ಲುವ ಸಹಜ ಶೈಲಿಯ ಫೋಟೊವನ್ನು ತೆಗೆಯಲಿಕ್ಕೆ ಆಗಲಿಲ್ಲ.

 ಸಮಯವನ್ನು ನೋಡಿಕೊಂಡೆ. ಆಗಲೇ ಬೆಳಗಿನ ಒಂಬತ್ತು ಕಾಲು ಆಗಿತ್ತು. ಅರೆರೆ....ಕಾಲುಗಂಟೆಗೆ ಮುಂಚೆಯೇ ಇಲ್ಲಿಂದ ನಾವು ಮಂಗಳೂರಿನ ತೊಕ್ಕಟ್ಟು ಕಡೆಗೆ ಹೊರಟಿರಬೇಕಿತ್ತು. ತಡವಾಗಿ ಹೋಯ್ತಲ್ಲ ಅಂದುಕೊಳ್ಳುತ್ತಾ ಗಡಿಬಿಡಿಯಿಂದ ಕ್ಯಾಮೆರ ಮತ್ತು ಲೆನ್ಸುಗಳನ್ನು ಬ್ಯಾಗಿನೊಳಗೆ ಹಾಕಿ ಫ್ಯಾಕ್ ಮಾಡಿ ಸಮ್ಮಿಲನ ಶೆಟ್ಟಿಯವರ ತಾಯಿಯವರು ರುಚಿಯಾಗಿ ಮಾಡಿದ್ದ ಇಡ್ಲಿ ಮತ್ತು ಚಟ್ನಿಯನ್ನು ತಿನ್ನತೊಡಗಿದೆವು.

ಹಾಗೆ ನೋಡಿದರೆ ನಾನು ಇಲ್ಲಿಗೆ ಬಂದಿದ್ದ ಉದ್ದೇಶವೇ ಬೇರೆ. ರಾಕೇಶ್ ಕುಮಾರ್ ಕೊಣಜೆ ಆಗಾಗ ಬೆಳ್ವಾಯಿಯ ಸಮ್ಮಿಲನ ಶೆಟ್ಟಿ ಮತ್ತು ಅವರ ತಾಯಿಯವರ ಸಹಕಾರದಿಂದ ಯಾವುದೇ ಸ್ವಾರ್ಥವಿಲ್ಲದೇ ಕೇವಲ ಹವ್ಯಾಸಕ್ಕಾಗಿ ಚಿಟ್ಟೆ ಪಾರ್ಕು ಮಾಡಿರುವುದನ್ನು ಹೇಳಿದ್ದರು.  ಅದಕ್ಕಾಗಿ ಅವರು ಚಿಟ್ಟೆಗಳು, ಅವುಗಳ ಜೀವನಕ್ರಮ, ಅವುಗಳಿಗೆ ಬೇಕಾದ ಆಹಾರದ ಗಿಡ ಮತ್ತು ಮರಗಳು, ಅವುಗಳ ವೈಜಾನಿಕ ಹೆಸರುಗಳು...ಹೀಗೆ ಪ್ರತಿಯೊಂದನ್ನು ಹಗಲು ರಾತ್ರಿಯೆನ್ನದೇ ಅಧ್ಯಾಯನ ಮಾಡುತ್ತಿರುವುದು ಮತ್ತು ತಮ್ಮ ಮನೆಯ ಸುತ್ತಲಿನ ಜಾಗದಲ್ಲಿಯೇ ಚಿಟ್ಟೆಗಳಿಗಾಗಿಯೇ ಉದ್ಯಾನವನ್ನು ನಿರ್ಮಿಸಿರುವುದನ್ನು ತಿಳಿದು ನಾನು ಒಬ್ಬ ಛಾಯಗ್ರಾಹಕನಾಗಿ ಮತ್ತು ಅದಕ್ಕೂ ಮೀರಿ ಈ ಚಿಟ್ಟೆಗಳ ಜೀವನಕ್ರಮದ ಬಗ್ಗೆ ಮತ್ತಷ್ಟು ಅರಿಯಲು ಮತ್ತು ಚರ್ಚಿಸಲು ಸಮ್ಮಿಲನ ಶೆಟ್ಟಿಯವರ ಚಿಟ್ಟೆಗಳ ಉದ್ಯಾನವನಕ್ಕೆ ಬೇಟಿಕೊಡುವ ಪ್ಲಾನ್ ಮಾಡಿದ್ದೆ.

      ಹಿಂದಿನ ರಾತ್ರಿ ಆಭಿಲಾಶ್ ಮನೆಯಲ್ಲಿ ಭೂರಿ ಬೋಜನವನ್ನು ಮಾಡಿ ಅಲ್ಲಿಯೇ ತಂಗಿದ್ದು ಮರುದಿನ ಮುಂಜಾನೆ ಐದುಗಂಟೆಗೆ ಎದ್ದು ಸಿದ್ದರಾಗಿ ಆರುವರೆಯ ಹೊತ್ತಿಗೆ ಎಂಟು ಕಿಲೋಮೀಟರ್ ದೂರದ ಬೆಳ್ವಾಯಿ ಎಂಬ ಪುಟ್ಟ ಊರಿನ ಒಳಭಾಗದಲ್ಲಿರುವ ಶಮ್ಮಿಲನ ಶೆಟ್ಟಿಯವರ ಮನೆಗೆ ನಾನು ರಾಕೇಶ್ ಮತ್ತು ಅಭಿಲಾಶ್ ಕಾರಿನಲ್ಲಿ ಹೊರಟೆವು. ಹಿಂದಿನ ದಿನದ ಮಳೆಯಿಂದಾಗಿ ಮುಂಜಾವು ಹಿತವಾಗಿ ತಂಪಾಗಿತ್ತು. ನಾವು ಅಲ್ಲಿ ತಲುಪುವ ಮೊದಲೇ ಮಂಗಳೂರು ಮತ್ತು ಉಡುಪಿಯಿಂದ ರವಿರಾಜರಾವ್, ಗುರುಕಾಪು, ರತ್ನಕರ್, ಇರ್ಷಾದ್ ಅಕ್ಬರ್ ಬಂದಿದ್ದರು. ಮೊದಲ ಬೇಟಿಯಾದ್ದರಿಂದ ಪರಿಚಯ ಮಾಡಿಕೊಂಡೆವು. ಇಂಥ ಹವ್ಯಾಸ ಅದಕ್ಕೆ ಅವರ ತಾಯಿಯವರ ಸಹಕಾರ, ಪಕ್ಕಾ ಹಳ್ಳಿಯವಾತವರಣದಂತಿರುವ ಅವರ ಮನೆ, ಸುತ್ತಲಿನ ಅವರ ಕೈತೋಟದ ವಾತಾವರಣ, ಇಷ್ಟೆಲ್ಲ ಶ್ರಮ, ಶ್ರದ್ಧೆ ಅದಕ್ಕೆ ತಕ್ಕಂತ ತಾಳ್ಮೆಯಿಂದ ಒಂದು ಸೊಗಸಾದ ಚಿಟ್ಟೆ ಉಧ್ಯಾನವನ್ನು ಸೃಷ್ಟಿಸಿರುವ ಸಮ್ಮಿಲನ ಶೆಟ್ಟಿ ನಿಜಕ್ಕೂ ಸಾಧಕರು ಎನಿಸಿತ್ತು. ಒಂದು ಸಂಸ್ಥೆ ಅಥವ ಸರ್ಕಾರ ಮಾಡಬೇಕಾದ ಕೆಲಸವನ್ನು ಒಬ್ಬ ಯುವಕ ಅದು ತನ್ನ ಸ್ವಂತ ಬದುಕಿನ ಕನಸುಗಳನ್ನು ಮತ್ತು ಬದುಕನ್ನು ರೂಪಿಸಿಕೊಳ್ಳುವ ವಯಸ್ಸಿನಲ್ಲಿ ಇಂಥದೊಂದ್ದು ಸಾಧನೆಯ ದಾರಿಯಲ್ಲಿರುವ ಅವರನ್ನು ಮೊದಲ ಸಲ ಬೇಟಿಯಾದಾಗ ಅವರ ಮೇಲೆ ಮತ್ತು ಮಗನಿಗೆ ಸಂಪೂರ್ಣ ಸಹಕಾರ ನೀಡುತ್ತಿರುವ ಅವರ ತಾಯಿಯವರ ಮೇಲೆ ಅಭಿಮಾನ ಮತ್ತು ಗೌರವ ಉಂಟಾಗಿತ್ತು.


ಒಂದಷ್ಟು ಮಾತುಕತೆಯ ನಂತರ ಅವರ ಮನೆಯ ವರಾಂಡದಲ್ಲಿ ನಮ್ಮೆಲ್ಲರ ಗ್ರೂಪ್ ಫೋಟೊ.  ನಂತರ ಚಿಟ್ಟೆಗಳನ್ನು ನೋಡಲು ಕ್ಯಾಮೆರ ಸಹಿತ ಹೊರಟೆವು. ಆಗಲೇ ಅನೇಕ ಚಿಟ್ಟೆಗಳು ಪುಟ್ಟದಾಗಿ ಗಿಡದಿಂದ ಗಿಡಕ್ಕೆ ಹಾರಾಟ ನಡೆಸಿದ್ದವು. ಕಣ್ಣಿಗೆ ಕಾಣುವ ಪ್ರತಿಯೊಂದು ಚಿಟ್ಟೆಯ  ಸಾಮಾನ್ಯ ಹೆಸರು ಮತ್ತು ವೈಜ್ಞಾನಿಕ ಹೆಸರುಗಳನ್ನು ತಟ್ಟಂತೆ ಹೇಳುತ್ತಾ ದಾರಿಯುದ್ದಕ್ಕೂ ಅಲ್ಲಿಲ್ಲಿ ಕಾಣುವ ಪುಟ್ಟ ಪುಟ್ಟ ಗಿಡಗಳನ್ನು ತೋರಿಸುತ್ತಾ " ಇದು ಗ್ಲಾಸ್ ಟೈಗಸ್‍ಗೆ ಹೋಸ್ಟ್ ಪ್ಲಾಂಟ್, ಕಾಮನ್ ಮರಮಾನ್ ಇದರ ಎಲೆಯನ್ನೇ ತಿನ್ನುವುದು, ಈ ಒಣಗಿದ ಎಲೆಯನ್ನೇ  ಒಂದು ಜಾತಿಯ ಚಿಟ್ಟೆಯ ಕ್ಯಾಟರ್ ಪಿಲ್ಲರ್ ತಿನ್ನುತ್ತದೆ..." ಇದು ನೋಡಿ ಸ್ಕಿಪ್ಪರ್, ಈ ವರ್ಷ ಮುನ್ನೂರು ರೀತಿಯ ಚಿಟ್ಟೆಯ ಅಹಾರವಾಗು ಪುಟ್ಟ ಪುಟ್ಟ ಸಸಿಗಳನ್ನು ಈ ವರ್ಷ ಹಾಕಿದ್ದೇವೆ. ಇವೆಲ್ಲ ದೊಡ್ಡದಾಗಲು ಒಂದು ವರ್ಷ ಬೇಕು. ಈ ದಾರಿಗೆ ಬನ್ನಿ ಆ ದಾರಿಯಲ್ಲಿ ಇನ್ನಷ್ಟು ಹೋಸ್ಟ್ ಪ್ಲಾಂಟುಗಳನ್ನು ಹಾಕಿದ್ದೇವೆ. ನೋಡಿ ಎಂದು ಎಂದು ಸಮ್ಮಿಲನ ಶೆಟ್ಟಿ ವಿವರಿಸುತ್ತ ತೋರಿಸತೊಡಗಿದರು. ನಾನು ತನ್ಮಯತೆಯಿಂದ ಆವರ ಮಾತುಗಳನ್ನು ಕೇಳುತ್ತಾ ನನ್ನೊಳಗೆ ಮೂಡಿದ ಪ್ರಶ್ನೆಗಳನ್ನು ಅವರೊಂದಿಗೆ ಚರ್ಚಿಸುತ್ತಿರುವಾಗ ಗುರು, ರತ್ನಕರ್ ಸರ್, ಇರ್ಷಾದ್ ಆಗಲೇ ಕಣ್ಣಿಗೆ ಕಂಡ ಚಿಟ್ಟೆಗಳ ಫೋಟೊಗ್ರಫಿಯಲ್ಲಿ ತೊಡಗಿದ್ದರು. ಅಷ್ಟರಲ್ಲಿ ಒಂದೆರಡು ಚಿಕ್ಕ ಸ್ಕಿಪ್ಪರ್ ಚಿಟ್ಟೆಗಳು ಒಂದು ಹುಲ್ಲುಕಡ್ಡಿಯಿಂದ ಮತ್ತೊಂದು ಹುಲ್ಲುಕಡ್ಡಿಗೆ ಹಾರುತ್ತಬಂದು ಕುಳಿತುಕೊಳ್ಳುತ್ತಿದ್ದವು.

       "ಇದರ ಫೋಟೊ ತೆಗೆಯೋಣವಾ" ನಾನು ಉಳಿದವರನ್ನು ಕೇಳಿದೆ.

   "ಹೋ ಇವುಗಳಾ ಸರ್, ಅವನ್ನು ತೆಗೆಯಲು ಸಾಧ್ಯವಾಗುವುದಿಲ್ಲ. ನಮ್ಮ ಕ್ಯಾಮೆರ ಹತ್ತಿರ ಹೋಗುತ್ತಿದ್ದಂತೆ ಅವು ಹಾರಿಹೋಗುತ್ತವೆ" ಎಂದರು ಸಮ್ಮಿಲನ ಶೆಟ್ಟಿ.

ಪ್ರಯತ್ನಿಸೋಣ ಎಂದುಕೊಂಡು ರಾಕೇಶ್‍ರ ಕ್ಯಾಮೆರ ಸ್ಯಾಂಡಿಗೆ ನನ್ನ ಕ್ಯಾಮೆರ ಮತ್ತು ಮ್ಯಾಕ್ರೋ ಲೆನ್ಸ್ ತಗುಲಿಸಿ ಚಿಟ್ಟೆಗಿಂತ ನಾಲ್ಕು ಆಡಿ ದೂರದಲ್ಲಿ ನೆಲಮಟ್ಟಕ್ಕೆ ಇಟ್ಟು ಒದ್ದೆಯಾಗಿದ್ದ ಹುಲ್ಲಿನ ನೆಲದ ಮೇಲೆ ಕುಳಿತು ಕ್ಯಾಮೆರವಿದ್ದ ಸ್ಟ್ಯಾಂಡನ್ನು ಅರ್ಧರ್ಧ ಅಡಿ ಮುಂದಕ್ಕೆ ಸರಿಸುತ್ತ ಹೋದೆ. ಐದು ನಿಮಿಷದಲ್ಲಿ ಆ ಸ್ಕಿಪ್ಪರ್ ಚಿಟ್ಟೆಗೆ  ನನ್ನ ಕ್ಯಾಮೆರ ಒಂದು ಅಡಿ ದೂರದಲ್ಲಿತ್ತು.  ಈ ಮೊದಲು ಕ್ಯಾಮೆರವನ್ನು ಸ್ಟ್ಯಾಂಡಿಗೆ ಹಾಕುವ ಮೊದಲೇ ಕ್ಯಾಮೆರ ಸೆಟ್ಟಿಂಗ್ ಮಾಡಿಕೊಂಡಿದ್ದೆನಾದ್ದರಿಂದ ನಿದಾನವಾಗಿ ಫೋಕಸ್ ಮಾಡಿ ಒಂದು ಫೋಟೊ ತೆಗೆದೆ. ಸ್ವಲ್ಪ ಅಪಾರ್ಚರ್ ಜಾಸ್ತಿ ಮಾಡಿಕೊಂಡು ಇನ್ನೊಂದು ಫೋಟೊ ತೆಗೆಯಬೇಕೆನ್ನುವಷ್ಟರಲ್ಲಿ ಅದು ಬೇರೆ ಕಡೆಗೆ ಹಾರಿಹೋಯ್ತು.

      ಪುಟ್ಟ ಸ್ಕಿಪ್ಪರ್  ಚಿಟ್ಟೆ.[ ಫೋಟೊಶಾಫ್ ಸಂಸ್ಕರಣದ ನಂತರ]


ಫೋಟೊ ಶಾಪ್‍ನಲ್ಲಿ ಸಂಸ್ಕರಣ ಮಾಡುವ ಮೊದಲ ಚಿತ್ರ.
     
        ಆ ಚಿಟ್ಟೆಯ ಹತ್ತಿರ ಸಾಗಲು ನಾನು ಮಾಡಿದ ಸರ್ಕಸ್ ನೋಡಿ ಉಳಿದವರಿಗೆ ಆಶ್ಚರ್ಯವಾಗಿತ್ತು. ಇಷ್ಟೊಂದು ತಾಳ್ಮೆ ನಮಗಿಲ್ಲ ಸರ್ ಎಂದರು.  ಇದೇನು ಇಲ್ಲ ಹೀಗೆ ಗಂಟೆಗಟ್ಟಲೇ ಅಲುಗಾಡದೇ ಕುಳಿತುಕೊಳ್ಳುವ ಪ್ರಮೇಯ ಬರುತ್ತದೆ ಅದಕ್ಕೆ ಸಿದ್ದರಾಗಿ ಎಂದಾಗ ಎಲ್ಲರೂ ನಕ್ಕರು. ಅಲ್ಲೊಂದು ಎಲೆಯ ಮೇಲೆ ಕಾಮನ್ ಮರ್ಮಾನ್ ಚಿಟ್ಟೆಯ ಕ್ಯಾಟರ್ ಪಿಲ್ಲರ್ ಕಾಣಿಸಿತು. ಹಾಗೆ ಕ್ಲಿಕ್ಕಿಸಿಕೊಂಡೆ.


 ಹೀಗೆ ಹುಡುಕಾಟ ಮತ್ತು ಫೋಟೊಗಳ ಕ್ಲಿಕ್ಕಾಟ ನಡೆಯುತ್ತಿರುವಾಗಲೇ ಸರ್ ಇಲ್ಲಿ ನೋಡಿ ಅಂತ ಗುರು ತೋರಿಸಿದರು. ಅದೊಂದು ಹಳದಿಬಣ್ಣದ ಕಿರುಬೆರಳಿಗಿಂತ ಚಿಕ್ಕದಾಗಿರುವ ಒಂದು ಅಪರೂಪದ ಕಪ್ಪೆ ಹಸಿರೆಲೆಯ ಮೇಲೆ ಕುಳಿತಿತ್ತು. ಅದನ್ನು ತಮ್ಮ ಟೆಲಿ ಲೆನ್ಸುಗಳಿಂದ ಕ್ಲಿಕ್ಕಿಸಿಕೊಂಡರು.

ನೋಡಲು ಸುಂದರವಾಗಿ ವಿಭಿನ್ನ ಬಣ್ಣದ್ದು ಆಗಿದ್ದ ಅದನ್ನು ಕ್ಯಾಮೆರದಲ್ಲಿ ವಿಧ ವಿಧ ತಾಂತ್ರಿಕ ಬದಲಾವಣೆ ಮಾಡಿಕೊಂಡು ಕ್ಲಿಕ್ಕಿಸಿದೆ. "ನೀವು ಇದನ್ನು ಕ್ಯಾಮೆರ ಮೂಲಕ ನೋಡುವುದಾದರೆ ನೋಡಬಹುದು. ಬೇಕಾದರೆ ಫೋಟೊ ತೆಗೆಯಬಹುದು" ಅಂದಾಗ ಒಬ್ಬೊಬ್ಬರಾಗಿ ನೋಡಿದರು.  ನನ್ನ ಕ್ಯಾಮೆರದಲ್ಲಿಯೇ ಫೋಟೊ ತೆಗೆದರು. ಮ್ಯಾಕ್ರೋ ಲೆನ್ಸು ಮೂಲಕ ಆ ಹಳದಿ ಬಣ್ಣದ ಕಪ್ಪೆಯನ್ನು ಮೊದಲ ಬಾರಿ ನೋಡಿ ಅಚ್ಚರಿಪಟ್ಟರು.  ಅದರ ಫೋಟೊಗ್ರಫಿ ಮಾಡುತ್ತಿರುವಾಗಲೇ ಪಕ್ಕದಲ್ಲೊಂದು ಪುಟ್ಟ ಕಂದು ಬಣ್ಣದ ಪ್ರೈಯಿಂಗ್ ಮಾಟಿಂಗ್ ಇತ್ತಲ್ಲ! ಅದನ್ನು ಫೋಟೊಗ್ರಫಿ ಮಾಡಬೇಕೆಂದು ಸಿದ್ದನಾಗುತ್ತಿರುವಾಗಲೇ..."ಸರ್ ಅಲ್ಲಿ ನೋಡಿ ಅಲ್ಲೊಂದು ಪ್ರೈಯಿಂಗ್ ಮಾಂಟಿಸ್ ಒಂದು ಚಿಟ್ಟೆಯನ್ನು  ಬೇಟೆಯಾಡಿದೆ"  ಅಂದಾಗ ನಾವೆಲ್ಲ ಈ ಪುಟ್ಟ ಪ್ರೈಯಿಂಗ್ ಮಾಂಟಿಸ್ ಬಿಟ್ಟು ಅದನ್ನು ನೋಡಲು  ಹೊರಟೆವು. ಅಲ್ಲಿಂದ ಶುರುವಾಯ್ತು ಚಿಟ್ಟೆಯನ್ನು ತಿನ್ನುವ ಪ್ರೈಯಿಂಗ್ ಮಾಂಟಿಸ್ ಮ್ಯಾಕ್ರೋ ಫೋಟೊಗ್ರಫಿ. ಅದರ ಫೋಟೊ ತೆಗೆಯುವ ಅನುಭವವೇ ಮೇಲಿನ ವಿವರಣೆ.

   ಮ್ಯಾಕ್ರೋ ಫೋಟೊಗ್ರಫಿ ಕಲಿಕೆಯ ಅನುಭವ...

     

              ಮೂಡುಬಿದ್ರಿಗೆ ಹನ್ನೆರಡು ಕಿಲೋಮೀಟರ್ ದೂರದಲ್ಲಿರುವ ಬೆಳ್ವಾಯಿ ಒಂದು ಪುಟ್ಟ ಪಟ್ಟಣ. ಅದರ ಒಳಭಾಗಕ್ಕೆ ಅರ್ಧಕಿಲೋಮೀಟರ್ ದೂರಕ್ಕೆ ಇರುವುದು ಸಮ್ಮಿಲನ ಶೆಟ್ಟಿಯವರ ಮನೆ ಮತ್ತು ಅವರ ಚಿಟ್ಟೆ ಉದ್ಯಾನವನ. ಮುಂದಿನ ದಿನಗಳಲ್ಲಿ ಇದೊಂದು ಉತ್ತಮ ಚಿಟ್ಟೆಗಳ ಆಶ್ರಯ ತಾಣವಾಗುವುದರಲ್ಲಿ ಸಂಶಯವಿಲ್ಲ. ಅದನ್ನು ಸಾರ್ವಜನಿಕರಿಗೆ ಮತ್ತು ಮಕ್ಕಳಿಗೆ ತೆರೆದುಕೊಳ್ಳುವ ಮೊದಲು ಕೆಲವೊಂದು ವ್ಯವಸ್ಥೆಗಳು ಆಗಬೇಕೆನ್ನುವುದು ನನ್ನ ಅನಿಸಿಕೆ. ಮೊದಲಿಗೆ ಸಾರ್ವಜನಿಕರು ಮತ್ತು ಮಕ್ಕಳು ಇಲ್ಲಿಗೆ ಚಿಟ್ಟೆಗಳನ್ನು ನೋಡಿ ಆನಂದಿಸಲು ಬರುತ್ತಾರೆ. ಈ ಸಂದರ್ಭದಲ್ಲಿ ಚಿಟ್ಟೆಗಳ ಸಂತಾನಕ್ಕಾಗಿ ಹಾಕಿರುವ ಪುಟ್ಟ ಪುಟ್ಟ ಗಿಡಗಳು, ಎಲೆಗಳನ್ನು ತಿಳಿಯದೇ ತುಳಿದು ನಾಶ ಮಾಡುವ ಸಾಧ್ಯತೆಗಳು ಹೆಚ್ಚು. ಎಲ್ಲೆಂದರಲ್ಲಿ ಖುಷಿಯಿಂದ ಓಡಾಡುವಾಗ, ನೆಲದ ಮೇಲೆ, ಎಲೆಗಳ ಕೆಳಗೆ ಹರಿದಾಡುವ ಚಿಟ್ಟೆಗಳ ಲಾರ್ವಗಳು, ಕ್ಯಾಟರ್ ಪಿಲ್ಲರುಗಳು, ಪ್ಯೂಪಗಳನ್ನು ಗೊತ್ತಿಲ್ಲದೇ ತುಳಿದು ಹಾಳು ಮಾಡುವ ಸಾಧ್ಯತೆಗಳು ಹೆಚ್ಚು. ಇದರಿಂದ ಕೆಲವೇ ತಿಂಗಳುಗಳಲ್ಲಿ ಇಲ್ಲಿ ಸೃಷ್ಟಿಯಾಗುತ್ತಿರುವ ಚಿಟ್ಟೆಗಳ ಪ್ರಪಂಚ ನಶಿಸಿಹೋಗಬಹುದು. ಶಮ್ಮಿಲನ ಶೆಟ್ಟಿಯವರು ಈಗಾಗಲೇ ನೂರಾರು ಚಿಟ್ಟೆಗಳ ಹೆಸರು, ವೈಜ್ಞಾನಿಕ ಹೆಸರುಗಳು, ಅವುಗಳ ಜೀವನ ಸರಣಿ, ಆಹಾರ, ಸಂಯೋಗ, ಇತ್ಯಾದಿ ವಿಚಾರಗಳ ಬಗ್ಗೆ ವಿವರಿಸುವ ರೀತಿ ಮತ್ತು ಅದಕ್ಕೆ ಬೇಕಾದ ರೀತಿ ತಮ್ಮದೇ ಸ್ಥಳದಲ್ಲಿ ಅದೆಲ್ಲವನ್ನು ನೋಡಿಕೊಳ್ಳುವ ಪರಿಯನ್ನು ನೊಡಿದಾಗ ಈ ವಿಚಾರದಲ್ಲಿ ಅವರ ಶ್ರದ್ಧೆ ಮತ್ತು ಶ್ರಮ, ಆಸಕ್ತಿ, ಇವೆಲ್ಲವನ್ನೂ ಮೀರಿ ಪ್ರಪಂಚಕ್ಕೆ ಇಂಥದೊಂದು ಸೇವೆ ನಿಜಕ್ಕೂ ಶ್ಲಾಘನೀಯ. ಸದ್ಯಕ್ಕೆ ಇದನ್ನು ಸಾರ್ವಜನಿಕ ಪ್ರವಾಸಿ ತಾಣವನ್ನಾಗಿ ಪರಿವರ್ತಿಸುವ ಬದಲು ಚಿಟ್ಟೆ ಮತ್ತು ಹುಳುಗಳ ಅಧ್ಯಾಯನ, ಅದಕ್ಕೆ ಪೂರಕವಾದ ಛಾಯಾಗ್ರಾಹಣ, ಅದರ ಬಗ್ಗೆ ತಿಳುವಳಿಕೆಗಳು ಇತ್ಯಾದಿಗಳಲ್ಲಿ ಆಸಕ್ತಿಯಿರುವವರಿಗೆ ಮಾತ್ರ ಅವಕಾಶ ಮಾಡಿಕೊಟ್ಟರೆ ಒಳ್ಳೆಯದೆಂದು ನನ್ನ ಭಾವನೆ. ಇದರಿಂದಾಗಿ ಅಲ್ಲಿನ ಚಿಟ್ಟೆಗಳು ಮತ್ತು ಕೀಟಲೋಕವು ಭವಿಷ್ಯದಲ್ಲಿ ಹತ್ತಾರು ಪುಸ್ತಕಗಳು, ಅಧ್ಬುತವಾದ ಛಾಯಚಿತ್ರಗಳು, ಡಿಸ್ಕವರಿ, ಅನಿಮಲ್ ಪ್ಲಾನೆಟ್, ನ್ಯಾಷನಲ್ ಜಿಯಾಗ್ರಫಿ ಚಾನಲ್ಲಿನಲ್ಲಿ ಬರುವಂತ ಅಧ್ಬುತವಾದ ವಿಡಿಯೋ ಡಾಕ್ಯುಮೆಂಟರಿಗಳು ಪೀಳಿಗೆಗೆ ಲಭ್ಯವಾಗುವಂತೆ ಮಾಡುವುದರಲ್ಲಿ ಸಾರ್ಥಕತೆಯಿದೆಯೆಂದು ನನಗೆ ಅನ್ನಿಸುತ್ತದೆ. ಸಾರ್ವಜನಿಕರಿಗೆ ಇದು ನೋಡಲು ಸಿಗಬಾರದು ಎನ್ನುವುದು ನನ್ನ ಮಾತಿನ ಉದ್ದೇಶವಲ್ಲ. ಮೊದಲು ಅಲ್ಲಿ ಸಾರ್ಜಜನಿಕರಿಗೆ ಓಡಾಡಲು ವಿಶೇಷವಾದ ಕಾಲುದಾರಿ, ಚಿಟ್ಟೆಗಳನ್ನು ಪರಿಚಯಿಸುವಂತ ಪ್ರಾತಕ್ಷಿಕೆಗಳು, ಯಾವ ಸಂದರ್ಭದಲ್ಲಿ ಬೇಟಿಯಾಗಬೇಕೆನ್ನುವ ನಿಗದಿತ ಸಮಯ, ಇವೆಲ್ಲವನ್ನು ಸರಿಯಾಗಿ ಪ್ಲಾನ್ ಮಾಡಿ ರೂಪಿಸಿದಲ್ಲಿ ಚಿಟ್ಟೆಗಳ ಅಧ್ಯಾಯನ ಮಾಡುವವರಿಗೂ ಮತ್ತು ನೋಡುವವರು ಇಬ್ಬರಿಗೂ ದಕ್ಕುವಂತೆ ಮಾಡಬಹುದು. ಇಲ್ಲದಿದ್ದಲ್ಲಿ ಬೆಂಗಳೂರು ಮತ್ತು ಮೈಸೂರಿನಲ್ಲಿರುವ ಚಿಟ್ಟೆ ಪಾರ್ಕುಗಳು ಸಾರ್ವಜನಿಕರಿಗೆ ನೋಡಲು ಸಿಕ್ಕಿ ಅವರು ಸಂತೋಷ ಪಟ್ಟರೂ, ಅವು ಇದುವರೆಗೂ ಅಧ್ಯಾಯನ ಕೇಂದ್ರಗಳಾಗಿ ದಾಖಲಾಗಿಲ್ಲ. ಮುಂದಿನ ಪೀಳಿಗೆಯವರಿಗಾಗಿ ಇದುವರೆಗೂ ಏನೊಂದು ದಾಖಲಾಗಿಲ್ಲ. ಏಕೆಂದರೆ ಇವರೆಡೂ ಚಿಟ್ಟೆ ಪಾರ್ಕುಗಳು ಛಾಯಗ್ರಾಹಕರಿಗೆ ಮತ್ತು ಅಧ್ಯಾಯನ ಮಾಡುವವರಿಗೆ ಸರಿಯಾಗಿ ಲಭ್ಯವಾಗಿಲ್ಲದಿರುವುದೇ ಮುಖ್ಯ ಕಾರಣ. ಈ ಸಮ್ಮಿಲನ ಶೆಟ್ಟಿಯವರ ಚಿಟ್ಟೆ ಪಾರ್ಕು ಹಾಗಾಗದಿರಲಿ ಎಂಬ ಆಶಯ ನನ್ನದು.

    ಸಮ್ಮಿಲನ ಶೆಟ್ಟಿಯವರ ಉದ್ಯಾನವನದಲ್ಲಿ ಪ್ರೈಯಿಂಗ್ ಮಾಂಟಿಸ್  ಬೇಟೆಯ ಪ್ರಕರಣ ಮತ್ತು ಅದರ ಫೋಟೊಗ್ರಫಿಯಿಂದಾಗಿ ನಾವು ಅಲ್ಲಿಂದ ಹೊರಡುವಾಗ ಮುಕ್ಕಾಲು ಗಂಟೆ ತಡವಾಗಿತ್ತು. ನಾವು ಸರಿಯಾಗಿ ಹನ್ನೊಂದು ಗಂಟೆಗೆ ನಲವತ್ತೇದು ಕಿಲೋಮೀಟರ್ ದೂರದ ಮಂಗಳೂರಿನ ತೊಕ್ಕಟ್ಟುವಿನ ಮಾಧ್ಯಮ ಕೇಂದ್ರದಲ್ಲಿರಬೇಕಿತ್ತು. ಎಲ್ಲರಿಗೂ ವಿಷ್ ಮಾಡಿ ಮತ್ತೊಮ್ಮೆ ಬರುತ್ತೇವೆ ಎಂದು ಹೇಳಿ ಹೊರಟೆವು. 

ಮುಂದಿನ ಭಾಗದಲ್ಲಿ ಮಂಗಳೂರು, ಉಡುಪಿಯಲ್ಲಿ ಸ್ಪಂದನ ಟಿವಿಯಲ್ಲಿ ಫೋಟೊಗ್ರಫಿ ಸಂದರ್ಶನ, ದಾರಿಯುದ್ದಕ್ಕೂ ಜೊತೆಯಾದ ಮಳೆ.....

ಚಿತ್ರಗಳು: ರಾಕೇಶ್, ಗುರು ಕಾಪ್, ಶಿವು.ಕೆ
  ಲೇಖನ ; ಶಿವು.ಕೆ


Friday, September 21, 2012

ಏಕದಂ ತಲೆಮೇಲೆ ಹಂಡೆ ನೀರು ಬಗ್ಗಿಸಿದಂತೆ!


      "ಎದ್ದೇಳು ಮಂಜುನಾಥ...ಎದ್ದೇಳು...ಬೆಳಗಾಯಿತು.".ಹಾಡು ನಿದಾನವಾಗಿ ಕೇಳತೊಡಗಿದಾಗ ಎಚ್ಚರವಾಗಿತ್ತು. ಸಮಯ ನೋಡಿಕೊಂಡೆ. ಇನ್ನೂ ಮುಂಜಾನೆ ನಾಲ್ಕು ಇಪ್ಪತ್ತು.  ಇನ್ನೂ ಐದುವರೆಯವರೆಗೆ ಸಮಯವಿದೆ ಅಂತ ಮಲಗಿಕೊಂಡೆ. ನನ್ನ ಅಕ್ಕಪಕ್ಕದಲ್ಲಿದವರೆಲ್ಲಾ ಎದ್ದು ತಮ್ಮ ಲಗ್ಗೇಜು ಚಪ್ಪಲಿಗಳನ್ನು ಎತ್ತಿಕೊಳ್ಳುತ್ತಾ ಬಸ್ಸಿನಿಂದ ಇಳಿಯಲು ಸಿದ್ದರಾಗುತ್ತಿದ್ದರು. ನನಗೆ ಇನ್ನಷ್ಟು ನಿದ್ರೆ ಮಾಡುವ ಆಸೆಯಿದ್ದರೂ ಯಾಕೋ ಸಂದೇಹವಾಗಿ ಪಕ್ಕದವರನ್ನು ಕೇಳಿದೆ. "ಧರ್ಮಸ್ಥಳ ಬಂತಾ" ಹೌದು" ಅಂತ ಉತ್ತರ ಬಂತು.  ಅರೆರೆ..ಇದೇನಿದೂ ಈ ನಮ್ಮ ಕೆ.ಎಸ್. ಅರ್.ಟಿ.ಸಿ ಸ್ಲೀಪರ್ ಕೋಚ್ ಬಸ್ಸು ನಿಗದಿತ ಸಮಯಕ್ಕಿಂತ ಒಂದು ಗಂಟೆ ಮೊದಲೇ ಬಂದುಬಿಟ್ಟಿದ್ದಾನಲ್ಲ ಅಂದುಕೊಂಡು ನನ್ನ ಕ್ಯಾಮೆರ ಬ್ಯಾಗ್ ಮತ್ತು ಬಟ್ಟೆಗಳಿರುವ ಲಗ್ಗೇಜುಗಳನ್ನು ಎತ್ತಿಕೊಂಡು ಕೆಳಗಿಳಿದವನು ಇರ್ಷಾದ್‍ಗೆ ಫೋನ್ ಮಾಡಿದೆ. "ಆಗಲೇ ಧರ್ಮಸ್ಥಳಕ್ಕೆ ಬಂದುಬಿಟ್ರಾ...ಐದೇ ನಿಮಿಷದಲ್ಲಿ ಅಲ್ಲಿರುತ್ತೇನೆ" ಅಂತ ಹೇಳಿ ಫೋನ್ ಕಟ್ ಮಾಡಿದರು. ನನ್ನ ಕರೆಗಾಗಿ ಕಾಯುತ್ತಾ ರಾತ್ರಿಯೆಲ್ಲಾ ನಿದ್ರೆಗೆಟ್ಟು ಕೂತಿರಬಹುದೇನೋ ಈ ಇರ್ಷಾದ್.  ನನ್ನ ಅದೃಷ್ಟಕ್ಕೆ ಮಳೆಯಿರಲಿಲ್ಲ. ಆದ್ರೆ ರಾತ್ರಿ ಜೋರಾಗಿ ಮಳೆ ಬಂದಿರುವ ಕುರುಹಾಗಿ ನೆಲವೆಲ್ಲಾ ಒದ್ದೆಯಾಗಿ ಅಲ್ಲಲ್ಲಿ ನೀರು ನಿಂತು ವಾತಾವರಣ ತಂಪಾಗಿತ್ತು.

     ದೂರದಿಂದ ಬೈಕಿನಲ್ಲಿ ಒಬ್ಬ ವ್ಯಕ್ತಿ ಬರುತ್ತಿರುವುದನ್ನು ನೋಡಿ ಕೈಸನ್ನೆ ಮಾಡಿದೆ. ಅತ್ತಲಿಂದಲೂ ಆತ ಕೈಸನ್ನೆ ಮಾಡಿ ತಮ್ಮ ಯಮಾಹ ಬೈಕನ್ನು ನಿಲ್ಲಿಸಿದರು.  "ನಾನೇ ಇರ್ಷಾದ್ ಅಂತ ಹೇಗೆ ಗುರುತಿಸಿದ್ರಿ ಸರ್" ಅಂತ ಕೇಳಿದರು.  "ಅಂದಾಜು ಮಾಡಿ ನೀವೆ ಇರಬಹುದು ಅಂತ ಅಂದುಕೊಂಡು ಕೈ ತೋರಿಸಿದೆ".  ನಮ್ಮಿಬ್ಬರ ಪರಿಚಯ ಕೇವಲ ಬ್ಲಾಗ್, ಫೇಸ್ ಬುಕ್, ಫೋನ್ ಮೂಲಕ ಮಾತ್ರವಾಗಿದ್ದರೂ ಮುಖತ: ಬೇಟಿಯಾಗುತ್ತಿರುವುದು ಇಬ್ಬರಿಗೂ ಇದೇ ಮೊದಲಾಗಿದ್ದರಿಂದ  ಅ ಕತ್ತಲಲ್ಲಿ ಇಬ್ಬರೂ ಒಬ್ಬರನ್ನೊಬ್ಬರು ಸರಿಯಾಗಿ ಗುರುತಿಸಿದ್ದೂ ಇಬ್ಬರಿಗೂ ಆಶ್ಚರ್ಯವನ್ನು ತಂದಿತ್ತು.

    "ಹೋಗೋಣವಾ ಸರ್" ತನ್ನ ಬೈಕನ್ನು ಚಾಲು ಮಾಡಿದರು ಇರ್ಷಾದ್. ಇದೇ ಮೊದಲ ಬಾರಿಗೆ ನಸುಕಿನ ಐದುಗಂಟೆಯಲ್ಲಿ ಧರ್ಮಸ್ಥಳದಿಂದ ಎಂಟು ಕಿಲೋಮೀಟರ್ ದೂರದಲ್ಲಿರುವ ಉಜಿರೆಗೆ ಬೈಕಿನಲ್ಲಿ ಹೋಗುವಾಗ ಎರಡೂ ಕಡೆಯ ದಟ್ಟ ಮರಗಳು ಸೊಗಸಾದ ರಸ್ತೆ, ಮೇಲೆ ಚಂದ್ರನ ಅಹ್ಲಾದಕರ ಬೆಳಕು, ಸಾಗುವಾಗ ಹಿತವಾದ ಗಾಳಿ ಮೈಸೋಕಿ ರಾತ್ರಿ ಬಸ್ ಪ್ರಯಾಣದ ಅಯಾಸವೆಲ್ಲಾ ಮಾಯವಾದಂತೆ ಅನಿಸಿ ಒಂಥರ ಹಾಯ್ ಎನ್ನಿಸತೊಡಗಿತು. ಮಾತಾಡುತ್ತಾ ಬೈಕಿನಲ್ಲಿ ಸಾಗುತ್ತಿದ್ದಂತೆ ಉಜಿರೆಯ ಕಾಲೇಜು ಬಂತು. ಇರ್ಷಾದ್‍ಗೆ ತಾನು ಓದಿದ ಕಾಲೇಜು ಊರು ಎಂದರೆ ತುಂಬಾ ಅಭಿಮಾನ. ಅವರಿಗೆ ಮಾತ್ರವಲ್ಲ ಎಲ್ಲರಿಗೂ ಅವರವರ ಕಾಲೇಜು ಊರು ಕಂಡರೆ ಅಭಿಮಾನವಿದ್ದೇ ಇರುತ್ತದೆ. ದಾರಿಯ ನಡುವೆ ಕಾಣುವ ರುಡ್‍ಸೆಟ್, ಉಜಿರೆ ಪೇಟೆ, ಕಾಲೇಜು, ಇತ್ಯಾದಿಗಳನ್ನು ಖುಷಿಯಿಂದ ತೋರಿಸುತ್ತಾ ಬರುವ ಹೊತ್ತಿಗೆ ನಾವು ತಲುಪಬೇಕಾದ ಕಾಲೇಜಿನ ಪಿ.ಜಿ.ಹಾಸ್ಟೆಲ್ಲಿನ ರೂಮ್ ಬಂತು. ನನಗಾಗಿ ಅಲ್ಲೊಂದು ರೂಮ್ ಎಸ್.ಡಿ.ಎಂ. ಉಜಿರೆ ಕಾಲೇಜಿನವರು ಕಾಯ್ದಿರಿಸಿದ್ದರು. "ನೀವು ಸ್ವಲ್ಪ ರೆಸ್ಟ್ ಮಾಡಿ" ನಾನು ಸರಿಯಾಗಿ ಏಳುವರೆಯ ಹೊತ್ತಿಗೆ ಬರುತ್ತೇನೆ" ಅಂತ ಮತ್ತೆ ಹೊರಟೇಬಿಟ್ಟರು ಇರ್ಷಾದ್. ಸ್ವಲ್ಪ ಕುಳ್ಳಗೆ ದಪ್ಪವಾಗಿ ಕಾಣುವ ಇರ್ಷಾದ್ ಗಾತ್ರಕ್ಕೂ ಆತನ ಲವಲವಿಕೆಯ ಚಟುವಟಿಕೆಗಳಿಗೂ ಒಂದಕ್ಕೊಂದು ಸಂಭಂದವೇ ಇಲ್ಲವೇನೋ ಎನ್ನುವಂತೆ ಆತ ನನ್ನೊಂದಿಗೆ ಇಡೀ ದಿನ ಇದ್ದರು. ಹಾಗೆ ನೋಡಿದರೆ ನನ್ನನ್ನು ಕಾಲೇಜಿಗೆ ಪರಿಚಯಿಸಿ, ನನ್ನ ಬಗ್ಗೆ ಎಲ್ಲವನ್ನು ತಿಳಿಸಿ ಉಜಿರೆಯ "ಎಸ್ ಡಿ ಎಂ ಕಾಲೇಜಿನ ಫೋಟೊ ಜರ್ನಲಿಸ್ಟ್ ವಿಧ್ಯಾರ್ಥಿಗಳಿಗಾಗಿ ಕಾಲೇಜಿನ ವ್ಯವಸ್ಥಾಪಕರ ಮೂಲಕವೇ ನನ್ನ ಕಡೆಯಿಂದ ಒಂದು ಸಂವಾದವನ್ನು ವ್ಯವಸ್ಥಿತಗೊಳಿಸಿದ್ದು ಇದೇ ಇರ್ಷಾದ್.

 ನಾನು ಏಳುವರೆಯ ಹೊತ್ತಿಗೆ ಸಿದ್ದನಾಗುವಷ್ಟರಲ್ಲಿ ಮಂಗಳೂರಿನ ರಾಕೇಶ್ ಕುಮಾರ್ ಕೊಣಾಜೆ ಜೊತೆ ಇರ್ಷಾದ್ ಹಾಜರ್. ರಾಕೇಶ್ ಕುಮಾರ್ ಕೊಣಾಜೆಯನ್ನು ಕೂಡ ಬ್ಲಾಗ್, ಫೇಸ್ ಬುಕ್ ಮತ್ತು ಫೋನ್ ಮೂಲಕ ಮಾತ್ರವೇ ಪರಿಚಯವಿದ್ದಿದ್ದು. ಮುಖತ: ಮೊದಲ ಬೇಟಿಯಾಗಿದ್ದು ಕೂಡ ಅವತ್ತು.  ಬೆಳಗಿನ ತಿಂಡಿ ಮುಗಿಸಿದ ಮೇಲೆ ನೇರವಾಗಿ ಕಾಲೇಜಿಗೆ. ಉಜಿರೆಯ ಎಸ್.ಡಿ.ಎಮ್ ಕಾಲೇಜು ಕರ್ನಾಟಕದಲ್ಲೇ ಅತ್ಯುತ್ತಮವಾದುದು. ಅಷ್ಟು ದೊಡ್ದ ಕಾಲೇಜು ಕ್ಯಾಂಪಸ್‍ನೊಳಗೆ ನಾನು ಕಾಲಿಟ್ಟಾಗ ಮುಜುಗರ ಉಂಟಾಯಿತು. ನಾನು ಕಲಿಯಲು ಬರುವ ವಿಧ್ಯಾರ್ಥಿಯಾಗಿದ್ದಲ್ಲಿ ನನಗೆ ಹಾಗೆ ಅನ್ನಿಸುತ್ತಿರಲಿಲ್ಲ. ನನ್ನೆತ್ತರಕ್ಕೆ ಬೆಳೆದ ವಿಧ್ಯಾರ್ಥಿಗಳಿಗೆ ನಾನು "ವಿಭಿನ್ನವಾದ ಫೋಟೊ ಜರ್ನಲಿಸಂ" ವಿಚಾರವಾಗಿ ಮೂರು ಗಂಟೆಗಳ ಕಾಲ ನನ್ನ ಅನುಭವವನ್ನು ಹಂಚಿಕೊಳ್ಳಬೇಕಿತ್ತು. ಇರ್ಷಾದ್ ನೇರವಾಗಿ ಅಲ್ಲಿನ ಹೆಡ್ ಅಪ್ ದಿ ಜರ್ನಲಿಸಂ ವಿಭಾಗದ ಭಾಸ್ಕರ್ ಹೆಗಡೆಯರ ಬಳಿ ಕರೆದುಕೊಂಡು ಹೋದರು. ಪಕ್ಕದಲ್ಲಿಯೇ ಇದ್ದ ನೂರಕ್ಕೂ ಹೆಚ್ಚು ಜನರು ಕೂರುವಂತ ಸೆಮಿನಾರ್ ಹಾಲ್ ನಲ್ಲಿ ವಿಧ್ಯಾರ್ಥಿಗಳು ಆಸೀನರಾಗಿದ್ದರು. ಕಾಲೇಜು ಮಕ್ಕಳಲ್ಲವೇ...ಅವರಿಗೆ ಹೇಳಿಕೊಡುವುದು ಸುಲಭವೆಂದುಕೊಂಡಿದ್ದವನಿಗೆ ಜರ್ನಲಿಸ್ಟುಗಳಾದ ಲಕ್ಷ್ಮಿ ಮಚ್ಚಿನ, ಉಜಿರೆಯ ಛಾಯಗ್ರಾಹಕ ವಸಂತ್ ಶರ್ಮ, ಮಂಗಳೂರಿನಿಂದ ಮೋಹನ್ ಕುತ್ತಾರ್, ಸುಭಾಶ್ ಸಿದ್ದಮೂಲೆ, ಅಪುಲ್ ಅಳ್ವಾ ಇರ, ರವಿ ಪರಕ್ಕಜೆ.. ಇನ್ನೂ ಅನೇಕ ಫೋಟೊ ಜರ್ನಲಿಸ್ಟುಗಳು ಬಂದಿದ್ದು ನೋಡಿ ನನಗೆ ಸ್ವಲ್ಪ ದಿಗಿಲುಂಟಾಗಿತ್ತು.

 ಹತ್ತು ಗಂಟೆಗೆ ಸರಿಯಾಗಿ ಕಾರ್ಯಕ್ರಮ ಪ್ರಾರಂಭವಾಯ್ತು. ಸ್ವಾಗತ ಭಾಷಣದ ನಂತರ ಫೋಟೊ ತೆಗೆಯುವ ಮೂಲಕ ಕಾರ್ಯಕ್ರಮದ ಉದ್ಘಾಟನೆ, ಪರಿಚಯ ಇತ್ಯಾದಿಗಳೆಲ್ಲ ಆಗಿ ಇಡೀ ವೇದಿಕೆಯನ್ನು ನನಗೊಪ್ಪಿಸಿಬಿಟ್ಟರು ಬಾಸ್ಕರ್ ಹೆಗಡೆ ಸರ್. ಅಲ್ಲಿಂದ ಮುಂದೆ ಛಾಯಚಿತ್ರಗಳ ಪ್ರದರ್ಶನದ ಜೊತೆಗೆ ಜೊತೆಗೆ ಸಂವಾದ, ಅನುಭವಗಳ ಹಂಚಿಕೆ, ಅಭಿಪ್ರಾಯಗಳು, ಪ್ರಶ್ನೋತ್ತರ ಕಾರ್ಯಕ್ರಮ....ಇವುಗಳ ಕೆಲವು ಫೋಟೊಗಳನ್ನು ಇರ್ಷಾದ್ ಎಂ.ವೇಣೂರು ಮತ್ತು ರಾಕೇಶ್ ಕುಮಾರ್ ಕೊಣಾಜೆ ಕ್ಲಿಕ್ಕಿಸಿದ್ದಾರೆ. ಅವೆಲ್ಲವೂ ನಿಮಗಾಗಿ.

        ಇರ್ಷಾದ್‍ರಿಂದ ಸ್ವಾಗತ


  
ಫೋಟೊ ತೆಗೆಯುವ ಮೂಲಕ ಕಾರ್ಯಕ್ರಮ ಉದ್ಘಾಟನೆ. ಯಾವ ಫೋಟೊ ಕ್ಲಿಕ್ಕಿಸಲಿ...

ಉದ್ಘಾಟನೆಯ ಫೋಟೊ ತೆಗೆಯಲು ಸಿದ್ದರಾಗಿದ್ದ ನನ್ನ ಕ್ಯಾಮೆರ ಕಣ್ಣಿಗೆ ಕಂಡಿದ್ದು ಹೀಗೆ..

ಸಂವಾದ ಕಾರ್ಯಕ್ರಮ ಪ್ರಾರಂಭ

ಸಂವಾದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು enjoy ಮಾಡಿದ್ದು ಹೀಗೆ...
 
ಕಾರ್ಯಕ್ರಮದ ನಡುವೆ ಛಾಯಪತ್ರಕರ್ತರಿಂದ ಪ್ರಶ್ನೆಗಳು...

  
 ಮಂಗಳೂರಿನ ರಾಕೇಶ್ ಕುಮಾರ್ ಕೊಣಜೆ
  
ಕಾಲೇಜು ವಿದ್ಯಾರ್ಥಿ ಅಭಿಲಾಶ್

ಪಾಠದ ಜೊತೆಗೆ ಆಟವೂ ಇದ್ದರೆ ಚೆಂದ ತಾನೆ...ಇವು ಇರ್ಷಾದ್ ಕ್ಯಾಮೆರ ಕೈಚಳಕ
 
  

 ಸಂವಾದ ಕಾರ್ಯಕ್ರಮದ ಸಮಯ ಹತ್ತು ಗಂಟೆಯಿಂದ ಹನ್ನೆರಡು ಗಂಟೆಯವರೆಗೆ ಅಂತ ತಿಳಿಸಿದ್ದರು. ಆದ್ರೆ ಪೂರ್ತಿ ಮುಗಿಯುವ ಹೊತ್ತಿಗೆ ಮಧ್ಯಾಹ್ನ ಒಂದುವರೆ ಗಂಟೆಯಾಗಿತ್ತು.  ಮೂರು ಕಾಲು ಗಂಟೆಗಳ ಕಾಲದಲ್ಲಿ ನಡುವೆ ಹತ್ತು ನಿಮಿಷದ ಟೀ ಬ್ರೇಕ್ ಬಿಟ್ಟರೆ ವಿಧ್ಯಾರ್ಥಿಗಳ ಸಹಿತ ಇತರ ಫೋಟೊ ಜರ್ನಲಿಸ್ಟುಗಳು ಕೂಡ ಸಂವಾದ ಕಾರ್ಯಕ್ರಮದಲ್ಲಿ ಸಂಪೂರ್ಣವಾಗಿ ತಮ್ಮ ಅನುಭವಗಳನ್ನು ಸಹಜವಾಗಿ ಹಂಚಿಕೊಂಡಿದ್ದು ಖುಷಿಯೆನಿಸಿತ್ತು. ಲಗ್ಗೇಜು ಹೆಚ್ಚು  ಅಂದುಕೊಂಡು ನನ್ನೆರಡು ಪುಸ್ತಕಗಳನ್ನು ಹೆಚ್ಚು ತೆಗೆದುಕೊಂಡು ಹೋಗಿರಲಿಲ್ಲ. ಆದ್ರೆ ತೆಗೆದುಕೊಂಡು ಹೋಗಿದ್ದ ೩೦ ವೆಂಡರ್ ಕಣ್ಣು ಮತ್ತು ಇಪ್ಪತ್ತು ಗುಬ್ಬಿ ಎಂಜಲು ಪುಸ್ತಕಗಳು ಹತ್ತೇ ನಿಮಿಷದಲ್ಲಿ ಕಾಲಿಯಾಗಿದ್ದು ಕಂಡು ನನಗಂತೂ ಅಚ್ಚರಿಯಾಗಿತ್ತು.

   

      ನಂತರ ಊಟ ಮಾಡಿ. ರೂಮಿನ ಕಡೆಗೆ ಹೊರಟೆವು.  ಅಲ್ಲಿ ಕಾಲೇಜಿನ ಇಬ್ಬರು ವಿಧ್ಯಾರ್ಥಿಗಳಿಂದ ಫೋಟೊಗ್ರಫಿ ವಿಚಾರವಾಗಿ ಸಂದರ್ಶನ. ನಂತರ ಸ್ವಲ್ಪ ವಿಶ್ರಾಂತಿ. ಸಂಜೆ ಉಜಿರೆಯಿಂದ ೪೬ ಕಿಲೋಮೀಟರ್ ದೂರದ ಮೂಡಬಿದ್ರಿಗೆ ಬಂದೆವು. ಅಲ್ಲಿ ನಮಗಾಗಿ ಅಭಿಲಾಶ್ ತಂದೆ ಕಾರಿನಲ್ಲಿ ತಮ್ಮ ಊರಾದ ಕೊಡ್ಯಡ್ಕಾಗೆ ಕರೆದುಕೊಂಡು ಹೋಗಲು ಸಿದ್ದರಾಗಿದ್ದರು. ಅದು ಹದಿನಾಲ್ಕು ಕಿಲೋಮೀಟರ್ ಪ್ರಯಾಣ. ಅಲ್ಲಿಯೇ ನನಗೆ ಆ ಕಡೆಯ ಜೋರು ಮಳೆಯ ಅನುಭವವಾಗಿದ್ದು.  ಎರಡು ಕಿಲೋಮೀಟರ್ ದಾಟಿಲ್ಲ ಇದ್ದಕ್ಕಿದ್ದಂತೆ ತಲೆಯ ಮೇಲೆ ಹಂಡೆಯ ನೀರನ್ನು ಸುರಿದಾಗ ಹೇಗಾಗುತ್ತದೊ ಹಾಗೆ ಇದ್ದಕ್ಕಿದ್ದಂತೆ ಊರಿನ ಹತ್ತರಷ್ಟು ದೊಡ್ಡದಾದ ಹಂಡೆಯಲ್ಲಿ ಒಂದೇ ಸಮನೆ ಆಕಾಶದಿಂದ ಆ ಊರಿನ ಮೇಲೆ ನೀರು ಸುರಿದಂತೆ ಮಳೆ ಸುರಿದು ಕೆಲವೇ ಕ್ಷಣಗಳಲ್ಲಿ ನಮ್ಮ ಕಣ್ಣ ಮುಂದೆ ಏನು ಕಾಣದಂತಾಗಿತ್ತು. ಈ ನಡುವೆ ಬೈಕಿನಲ್ಲಿ ಕಾರಿನ ಹಿಂದೆಯೇ ಬರುತ್ತಿದ್ದ ಇರ್ಷಾದ್‍ನನ್ನು ನೆನೆಸಿಕೊಂಡ ಮೇಲಂತೂ ನಮಗೆ ದಿಗಿಲಾಯ್ತು...ಕಾರನ್ನು ನಿಲ್ಲಿಸಿ ಆತನಿಂದ ಕ್ಯಾಮೆರವನ್ನು ಪಡೆದು ಕಾರಿನಲ್ಲಿಟ್ಟುಕೊಂಡೆವು. ಆತ ನಡುರಸ್ತೆಯಲ್ಲಿ ತನ್ನ ಬೈಕ್ ಬಿಟ್ಟು ಬರುವಂತಿರಲಿಲ್ಲ ಸಧ್ಯ ಒಳ್ಳೆಯ ಮಳೆಯ  ಜರ್ಕಿನ್ ಹಾಕಿದ್ದರಿಂದ ಆತ ಹೇಗೋ ತನ್ನನ್ನು ಅಂತ ಮಳೆಯಿಂದ ಕಾಪಾಡಿಕೊಳ್ಳುವಂತಾಯಿತು. ಐದೇ ನಿಮಿಷ ಹಂಡೆಯ ನೀರು ಕಾಲಿಯಾದ ಮೇಲೆ ನೀರೆಲ್ಲಿರುತ್ತದೆ? ಹಾಗೆ ಇಲ್ಲಿಯೂ ತಕ್ಷಣಕ್ಕೆ ಮಳೆನಿಂತು ಇನ್ನೆರಡು ನಿಮಿಷದಲ್ಲಿ ಅಲ್ಲಿ ಮಳೆಯೇ ಬಂದಿಲ್ಲವೇನೋ ಎನ್ನುವಂತೆ ಸೆಕೆಯುಂಟಾಯಿತು. ಇಂಥ ವಿಭಿನ್ನ ಅನುಭವ ಪಡೆದುಕೊಂಡು ಕೊಡ್ಯಡ್ಕಗೆ ತಲುಪಿದಾಗ ರಾತ್ರಿ ಏಳುವರೆ. ಅವರ ಮನೆ ವಾತಾವರಣ ಮಲೆನಾಡಿನಂತೆ. ಸುತ್ತ ಕಾಡು, ಇವರ ಮನೆಯ ಸುತ್ತ ಕೈತೋಟ. ಅವರ ಮನೆಯಲ್ಲಿ ನಮಗಾಗಿ ಸೊಗಸಾದ ಊಟ. ಅಭಿಲಾಶ್ ತಂದೆ ತಾಯಿಯವರ ಅತಿಥ್ಯ ನಿಜಕ್ಕೂ ನಮಗೆ ಮರೆಯಲಾಗದ ಅನುಭವ. ಒಳ್ಳೆಯ ಊಟವಾದ್ದರಿಂದ ರಾತ್ರಿ ಚೆನ್ನಾಗಿ ನಿದ್ರೆ ಬಂತು.


 ಮರುದಿನ ಬೆಳಿಗ್ಗೆ ಐದು ಗಂಟೆಗೆ ಎದ್ದು ಸಿದ್ದರಾಗಿ ಅಲ್ಲಿಂದ ಆರು ಕಿಲೋಮೀಟರ್ ದೂರದ ಬೆಳ್ವಾಯಿಯಲ್ಲಿರುವ ಸಮ್ಮಿಲನ ಶೆಟ್ಟಿಯವರ ಪರಿಶ್ರಮದಿಂದ ಹುಟ್ಟಿಕೊಂಡಿರುವ ಚಿಟ್ಟೆಗಳ ಉದ್ಯಾನವನಕ್ಕೆ ಹೊರಟೆವು. ಅಲ್ಲಿನ ಫೋಟೊಗ್ರಫಿ ಅನುಭವ ಮುಂದಿನ ಭಾಗದಲ್ಲಿ.

    ಅಂದಹಾಗೆ ನನ್ನ ಛಾಯಾಕನ್ನಡಿ ಬ್ಲಾಗಿಗೆ ಕಳೆದ ತಿಂಗಳಿಗೆ ನಾಲ್ಕು ವರ್ಷ ತುಂಬಿತು. ಈಗ ಐದನೇ ವರ್ಷಕ್ಕೆ ಕಾಲಿಟ್ಟಿದೆ.. ನಿಮ್ಮ ಪ್ರೋತ್ಸಾಹ ಹೀಗೆ ಇರಲಿ...

ಲೇಖನ : ಶಿವು.ಕೆ
ಚಿತ್ರಗಳು. ಇರ್ಷಾದ್ ಎಂ.ವೇಣೂರು ಮತ್ತು ರಾಕೇಶ್ ಕುಮಾರ್ ಕೊಣಜೆ

Friday, September 7, 2012

ಕೈಯಿಂದ ಜಾರುವ ತೇಜಸ್ವಿಯವರ ಪುಸ್ತಕಗಳು!

ಸೆಪ್ಟಂಬರ್ 8 ಅಂದರೆ ಇವತ್ತು ನನ್ನ ಮೆಚ್ಚಿನ ಲೇಖಕ ಪೂರ್ಣಚಂದ್ರ ತೇಜಸ್ವಿಯವರ ಹುಟ್ಟುಹಬ್ಬ.  ಅವರ ಕತೆ, ಲೇಖನ, ಪ್ರಕೃತಿ ಅನ್ವೇಷಣೆ, ಫೋಟೊಗ್ರಫಿಯಿಂದಾಗಿ ಈಗಲೂ ನಮ್ಮೊಂದಿಗೆ ಇದ್ದಾರೆ.  ಕಳೆದ ನಾಲ್ಕು ದಿನದಲ್ಲಿ ನಮ್ಮ ಮನೆಯಲ್ಲಿಯೇ ನಡೆದ ಘಟನಾವಳಿಗಳನ್ನು ಆಧರಿಸಿ ಬರೆದ  ಈ ಲಲಿತಪ್ರಬಂಧ ಅವರಿಗೆ ಸಮರ್ಪಣೆ.
                                -----------------------------

    ನಮ್ಮ ಮಂಚದ ಕೆಳಗಿದ್ದ ಒಂದೊಂದೇ ವಸ್ತು ಹೊರತೆಗೆಯತೊಡಗಿದ್ದೆ. ಹಳೆಯ ಕ್ಯಾಮೆರ ಬ್ಯಾಗು, ಹಳೆಯ ಗೋಣಿ ಚೀಲ, ನನ್ನ ಒಂದಷ್ಟು ಪೇಪರ್ ಬ್ಯಾಗುಗಳು ಅದರೊಳಗೆ ಬೇಡದ ಹಳೆಯ ಪುಸ್ತಕಗಳು, ನಾನು ವ್ಯಾಯಾಮ ಮಾಡಲು ಇಟ್ಟುಕೊಂಡಿದ್ದ ಕಬ್ಬಿಣದ ಡಂಬಲ್ಸುಗಳು, ಡಿಪ್ಸುಗಳು, ಊರಿಂದ ತಂದ ಸುಲಿದ ತೆಂಗಿನ ಕಾಯಿಗಳು, ನಾವು ತೂಕ ನೋಡಿಕೊಳ್ಳಲು ಇಟ್ಟುಕೊಂಡಿರುವ ತೂಕದ ಯಂತ್ರ, ಹಳೆಯ ನೀರಿನ ಪೈಪು, ಮಂಚದ ಪಕ್ಕದಲ್ಲೇ ನೀರು ಕಾಯಿಸುವ ಹಳೆಯ ವಿದ್ಯುತ್ ಬಾಯ್ಲರ್, ಅದರ ಮೇಲೆ ಕಾಲೊರಿಸಿಕೊಳ್ಳಲು ಬೇಕಾಗುವ ಹೊಸ ಹೊಸ ಕಾರ್ಪೆಟ್ಟುಗಳು, ಅವುಗಳ ಮೇಲೆ ನನ್ನ ಹೆಲ್ಮೆಟ್ಟು, ಅದರ ಪಕ್ಕದಲ್ಲೇ ನನ್ನ ಸಮಕ್ಕೆ ನಿಲ್ಲಿಸಿದ್ದ ಎರಡು ಹಳೆಯ ಒಂದು ಹೊಸ ಚಾಪೆಗಳು, ಅದರ ಪಕ್ಕದಲ್ಲೇ ಅದರ ತಮ್ಮನಂತೆ ನಿಂತಿದ್ದ ಊಟದ ಚಾಪೆ....ಒಂದೇ ಎರಡೇ ಎಷ್ಟು ತೆಗೆದರೂ ಮುಗಿಯದ ಈ ವಸ್ತುಗಳನ್ನು ಕಂಡು ಹೇಮಳ ಮೇಲೆ ನನಗೆ ಕೋಪ ಬಂತು. 

"ಏನಿದು ಹೇಮ, ಇದು ಇಷ್ಟೊಂದು  ಸಾಮಾನುಗಳು, ಇವನ್ನೆಲ್ಲಾ ಇಡಲು ಬೇರೆ ಜಾಗ ಇರಲಿಲ್ಲವಾ?

   ಅಯ್ಯೋ ಅದಕ್ಯಾಕೆ ನನ್ನ ಬಯ್ಯುತ್ತೀರಿ ಎಲ್ಲವನ್ನು ನಾನೇ ಇಟ್ಟಿಲ್ಲ. ನಾನು ಇಟ್ಟಿರುವುದು ಕೇವಲ ಒಂದೆರಡು ತೆಂಗಿನ ಕಾಯಿ, ಪೈಪು, ಚಾಪೆ ಕಾರ್ಪೆಟ್ಟುಗಳು. ಉಳಿದವೆಲ್ಲಾ ನಿಮ್ಮವೇ, ಕ್ಯಾಮೆರ ಬ್ಯಾಗು, ವ್ಯಾಯಾಮದ ವಸ್ತುಗಳು, ತೂಕದ ಯಂತ್ರ ಪೇಪರ್ ಬ್ಯಾಗು ಅದರೊಳಗಿನ ಪುಸ್ತಕಗಳು, ಇವುಗಳೆಲ್ಲವನ್ನು ಮೀರಿ ನೀವು ಪ್ರತಿ ರಾತ್ರಿ ಓದುತ್ತಲೇ ನಿದ್ರೆಹೋಗುವಾಗ ಕೈಯಿಂದ ಜಾರಿ ಮಂಚದ ಸಂದಿನಿಂದ ಕೆಳಗೆ ಬಿದ್ದ ಪುಸ್ತಕಗಳು ಬೇರೆ! ಎಂದು ಶಾಂತವಾಗಿ ಪ್ರತಿಕ್ರಿಯಿಸಿದಾಗ ನನ್ನ ಕೋಪ ನನಗೆ ತಿರುಮಂತ್ರವಾಗಿತ್ತು. ಹೌದಲ್ಲವಾ? ಇವೆಲ್ಲವನ್ನು ನಾನೇ ಇಟ್ಟಿದ್ದು, ಮೇಲಿಟ್ಟಿದ ಅನೇಕ ವಸ್ತುಗಳನ್ನು ಯಾವುದ್ಯಾವುದೋ ಕಾರಣಕ್ಕೆ ಕೆಳಗೆ ತೆಗೆದುಕೊಂಡು ಮತ್ತೆ ಸೋಮಾರಿತನದಿಂದ ಮೇಲಿಡಲಾಗದೆ ಮಂಚದ ಕೆಳಗೆ ತಳ್ಳಿದ್ದೆ. ಅದಕ್ಕೆ ತಕ್ಕಂತೆ ಇವಕ್ಕೆಲ್ಲ ಕಿರೀಟವಿಟ್ಟಂತೆ ರಾತ್ರಿ ನಿದ್ರೆಹೋಗುವ ಮೊದಲು ಕೈಯಿಂದ ಜಾರುವ ಪೂರ್ಣಚಂದ್ರ ತೇಜಸ್ವಿಯವರ ಪುಸ್ತಕಗಳು!    ಇಷ್ಟೆಲ್ಲಾ ಸಾಮಾನುಗಳನ್ನು ಮಂಚದ ಕೆಳಗಿನಿಂದ ಹೊರತೆಗೆದಿದ್ದಕ್ಕೆ ಕಾರಣವೇನು ಗೊತ್ತಾ? ಒಂದು ಇಲಿ ನಮ್ಮ ಮನೆಯನ್ನು ಸೇರಿಕೊಂಡಿರುವುದು! ಅದನ್ನು ಹಿಡಿಯಬೇಕೆಂದು ನಾವು ತೀರ್ಮಾನಿಸಿರುವುದು! 

    "ರೀ...ಮಂಚದ ಕೆಳಗಿನಿಂದ ನನ್ನ ಟೈಲರಿಂಗ್ ಮಿಷಿನ್ ಕೆಳಗೆ ಹೋಯ್ತು..."

   ಅವಳು ಜೋರಾಗಿ ಕೂಗಿದಾಗ ಅತ್ತ ನೋಡಿದೆ. ನನಗೇನು ಕಾಣಲಿಲ್ಲ. ಏಕೆಂದರೆ ನಾನು ಮಂಚದ ಮೇಲೆ ಕುಳಿತು, ಬಗ್ಗಿ, ತಲೆಕೆಳಗೆ ಮಲಗಿಕೊಂಡು ಎಲ್ಲಾ ಸಮಾನುಗಳನ್ನು ಎಳೆದುಹಾಕಿದ್ದೆನೇ ಹೊರತು ನೆಲದ ಮೇಲೆ ಮಾತ್ರ ಕಾಲಿಟ್ಟಿರಲಿಲ್ಲ.

ನೆಲದ ಮೇಲೆ ನಿಂತು ಅಥವ ಕುಳಿತು ಮಂಚದ ಕೆಳಗೆ ಬಗ್ಗಿ ಎಲ್ಲ ಸಾಮಾನುಗಳನ್ನು ಹೊರತೆಗೆಯುವಾಗ ಆ ಇಲಿ ನನ್ನ ಮೈ ಕೈ ಕಾಲುಗಳ ಮೇಲೆ ಹರಿದಾಡಿಬಿಟ್ಟರೆ!

   ನಾವು ಕಾಡು, ಕೆರೆ ತೊರೆ ಹಳ್ಳಗಳಲ್ಲಿ ಹಕ್ಕಿ, ಚಿಟ್ಟೆಗಳ ಫೋಟೊ ತೆಗೆಯುವಾಗ ಪಕ್ಕದಲ್ಲಿ ಹಾವುಗಳು ಹರಿದಾಡಿದರೂ ಭಯಪಡದೇ, ಸ್ವತಃ ಹಾವುಗಳಿಂದ ಮೂರು ನಾಲ್ಕು ಆಡಿ ಅಂತರದಲ್ಲಿ ನಿಂತು ಹಾವುಗಳ ಫೋಟೊ ತೆಗೆಯುವಾಗಲು ಭಯಪಡದ ನಾನು ನಮ್ಮ ಮನೆಯಲ್ಲಿ ಸೇರಿಕೊಂಡ ಇಲಿ ಅಚಾನಕ್ಕಾಗಿ ಮೈಮೇಲೆ ಹರಿದಾಡಿದರೆ ಅದ್ಯಾಕೇ ಭಯವಾಗುತ್ತದೋ ನನಗಂತೂ ಗೊತ್ತಿಲ್ಲ.  ಹಾಗೆ ನೋಡಿದರೆ ನಮಗಿಂತ ಅವಕ್ಕೆ ಜೀವ ಭಯ ಜಾಸ್ತಿ. ಅವು ತಪ್ಪಿಸಿಕೊಳ್ಳಲು ದಾರಿ ಗೊತ್ತಾಗದೇ ದಿಕ್ಕಾಪಾಲಾಗಿ ಹೀಗೆ ಓಡಿಹೋಗುತ್ತವೆ ಅಂತಲೂ ಗೊತ್ತು. ಆದ್ರೂ ಈ ರೀತಿ ಅವುಗಳನ್ನು ಮೊದಲ ಬಾರಿ ಕಂಡಾಗ, ಕಾಲುಗಳ ಮೇಲೆ ಹರಿದಾಡಿದಾಗ ಕೈಗಳ ರೋಮಗಳು ನಿಂತುಕೊಳ್ಳುವ, ಮೈ ಜುಮ್ ಎನಿಸಿ ಮೈ ಕೊಡವಿಕೊಳ್ಳುವ ಹಾಗೆ ಏಕಾಗುತ್ತದೆ?

    "ರೀ ಇಲಿ ಬೀರುವಿನ ಹಿಂಭಾಗಕ್ಕೆ ಹೋಯ್ತು."  ಮತ್ತೆ ಅವಳು ಕೂಗಿದಾಗ ನನ್ನ ಅಲೋಚನೆಯಿಂದ ಹೊರಬಂದು ಅತ್ತ ನೋಡಿದೆ. ಏನು ಕಾಣಲಿಲ್ಲ.

   "ರೀ...ಅಲ್ಲೇ ಇದೆ ಬೇಗ ಮಂಚದಿಂದ ಇಳಿದು ಬೀರುವಿನ ಕೆಳಗೆ ನೋಡ್ರಿ"....ಅಂದಾಗ ನಿದಾನವಾಗಿ ಮಂಚದಿಂದ ಇಳಿದು ನೆಲದ ಮೇಲೆ ಕಾಲಿಟ್ಟಿದ್ದೆ.

    ನನ್ನಾಕೆಯಂತೂ ನಮ್ಮ ರೂಮಿನ ಬಾಗಿಲನ್ನು ಮುಕ್ಕಾಲು ಭಾಗ ಮುಚ್ಚಿ, ಒಂದು ಹಳೆಯ ಪೇಪರ್ ಬ್ಯಾಗನ್ನು ಕಾಲು ಭಾಗದಷ್ಟೇ ಜಾಗದಲ್ಲೇ ನೆಲಕ್ಕೆ ತಗುಲಿಕೊಂಡಂತೆ ಅದರ ಬಾಯಿಯನ್ನು ತೆರೆದು ಹಿಡಿದುಕೊಂಡಿದ್ದಳು. ನಾನು ಮಂಚದ ಕೆಳಗೆ, ಬೀರು, ಟೈಲರಿಂಗ್ ಮಿಷಿನ್ ಕೆಳಗೆಲ್ಲಾ ಕಸದ ಪೊರಕೆಯಿಂದ ಗದ್ದಲ ಮಾಡಿದರೆ ಅದು ತಪ್ಪಿಸಿಕೊಳ್ಳಲು ಬಾಗಿಲ ಕಡೆಗೆ ಬಂದು ಬ್ಯಾಗಿನಲ್ಲಿ ಸಿಕ್ಕಿಹಾಕಿಕೊಳ್ಳುತ್ತದೆ ತಕ್ಷಣ ಬ್ಯಾಗನ್ನು ಮುಚ್ಚಿ ಅದನ್ನು ಬಂಧಿಸಿಬಿಡಬಹುದೆನ್ನುವುದು ಅವಳ ಪ್ಲಾನ್.

   ಬೀರುವಿನ ಕೆಳಗಿರುವ ಸಾಮಾನುಗಳ ನಡುವೆ ಕಸಪೊರಕೆಯನ್ನು ನುಗ್ಗಿಸಿ ಅಲುಗಾಡಿಸತೊಡಗಿದೆ. ಸ್ವಲ್ಪ ಹೊತ್ತಿಗೆ ಬೀರುವಿನ ಕೆಳಗಿನಿಂದ ನನ್ನ ಪುಸ್ತಕ ಮನೆಯ ಗೋಡೆಯ ಕಡೆಗೆ ಕಿರುಬೆರಳ ಗಾತ್ರ ಇಲಿಯೊಂದು ಓಡಿದ್ದು ಸ್ಪಷ್ಟವಾಗಿ ಕಾಣಿಸಿತ್ತು. ಅರೆರೆ...ಇಷ್ಟು ಸಣ್ಣ ಇಲಿಯನ್ನು ಹೊಡೆಯಲು  ಒಂದು ಕೈಯಲ್ಲಿ ಮತ್ತೊಂದು ಕೈಯಲ್ಲಿ ಕೋಲನ್ನು ಹಿಡಿದು ನಿಂತಿದ್ದೆನಲ್ಲ ಅಂತ ಆ ಕ್ಷಣದಲ್ಲಿ ಅನ್ನಿಸಿತು. "ಹೇಮ ಇದು ಇಲಿ ತೀರ ಸಣ್ಣದು ಕಣೇ"..ಅಂದವನೇ ಆ ಜಾಗದಲ್ಲಿ ಇಣುಕಿ ನೋಡಲು ಪ್ರಯತ್ನಿಸಿದೆ. ಸಾಧ್ಯವಾಗಲಿಲ್ಲ. ಏಕೆಂದರೆ ಗೋಡೆಗೂ ನನ್ನ ಐನೂರರಷ್ಟಿರುವ ಪುಸ್ತಕಗಳ ಮರದ ಅಲಮೇರ ಅರ್ಧಾತ್ ನನ್ನ ಪುಸ್ತಕ ಮನೆಗೂ[ಅಂಕೇಗೌಡರ ಪುಸ್ತಕ ಮನೆಗೆ ಹೋಗಿ ಬಂದಮೇಲೆ ನನ್ನ ಪುಟ್ಟ ಪುಸ್ತಕಗಳ ಗ್ರಂಥಾಲಯಕ್ಕೆ ಪುಸ್ತಕ ಮನೆ ಎಂದೇ ಹೆಸರಿಟ್ಟಿಕೊಂಡಿದ್ದೇನೆ]ನಡುವೆ ಕೇವಲ ಅರ್ಧ ಇಂಚು ಜಾಗ ಮಾತ್ರವಿದ್ದು ಬೆಳಕಿಲ್ಲದ ಕಾರಣ ಅದರೊಳಗೆ ಆಡಗಿಕೊಂಡ ಇಲಿ ಕಾಣಿಸಲಿಲ್ಲ. ಕಸದ ಪೊರಕೆ ಅದರೊಳಗೆ ಹೋಗುವುದಿಲ್ಲ. ಕೋಲಂತೂ ಸಾಧ್ಯವೇ ಇಲ್ಲ. ಈಗೇನು ಮಾಡುವುದು? ಯೋಚನೆಯಲ್ಲಿದ್ದಾಗಲೇ ಮನೆಯ ಮೂಲೆಯಲ್ಲಿದ್ದ ತೆಂಗಿನ ಕಡ್ಡಿಯ ಕಸದ ಪೊರಕೆಯಿಂದ ಎರಡು ಕಡ್ದಿಗಳನ್ನು ಎಳೆದುಕೊಟ್ಟಳು.

  "ಡಾರ್ಲಿಂಗ್ ಇದರಿಂದ ಆ ಇಲಿಯನ್ನು ಚುಚ್ಚಲು ಅಥವ ಸಾಯಿಸಲು ಸಾಧ್ಯವೇ? ಬೇರೆ ಯಾವುದಾದರೂ ಕಬ್ಬಿಣದ ಕಂಬಿ ಇದ್ದರೆ ಕೊಡು" ಅಂದೆ.

   "ಹೂ ಕಣ್ರಿ, ನಾನು ಈಗಲೇ ಅದನ್ನು ಸರಿಯಾಗಿ ನೋಡಿದ್ದು, ನಮ್ಮ ಮನೆಯಲ್ಲಿ ದೊಡ್ಡ ಇಲಿ ಸೇರಿಕೊಂಡುಬಿಟ್ಟಿದೆ ಅಂತ ದಿಗಿಲಾಗಿತ್ತು. ಈಗ ಬೀರುವಿನ ಕೆಳಗಿನಿಂದ ಪುಸ್ತಕದ ಬೀರುವಿನ ಕಡೆಗೆ ಹೋಯ್ತಲ್ಲ...ಅದು ಎಷ್ಟು ಸಣ್ಣದು ಅಂತ ಗೊತ್ತಾಯ್ತು. ನೀವೆಲ್ಲಿ ಅದನ್ನು ಚುಚ್ಚಿ ಅಥವ ಪೊರಕೆಯಲ್ಲಿ ಹೊಡೆದು ಸಾಯಿಸಿಬಿಡುತ್ತೀರೋ ಅಂತ ಭಯವಾಯ್ತು. ಅದಕ್ಕೆ ಈ ತೆಂಗಿನ ಕಡ್ಡಿಗಳನ್ನು ಕೊಟ್ಟಿದ್ದು, ಇದರಿಂದ ಅಲುಗಾಡಿಸಿ, ಅದು ಹೊರಗೆ ಬರುತ್ತದೆ. ಅದನ್ನು ಬ್ಯಾಗಿನಲ್ಲಿ ಹಿಡಿದುಕೊಂಡು ಹೋಗಿ ದೂರ ಬಿಟ್ಟುಬಿಡೋಣ"  ಅಂದಳು.
 
    "ಹೇಮ ನಿನಗೆ ಗೊತ್ತಾಗುವುದಿಲ್ಲ. ಇಲಿ ಸಣ್ಣದಾಗಲಿ ಅಥವ ದೊಡ್ಡದಾಗಲಿ ಸಾಯಿಸುವುದೇ ಒಳ್ಳೆಯದು" ಅಂದು ನಾನು ಬೇರೇನಾದ್ರು ಸಿಗುತ್ತದೋ ಅಂತ ಹುಡುಕತೊಡಗಿದೆ. 

"ರೀ..ಪ್ಲೀಸ್ ಬೇಡ ಕಣ್ರಿ..ನೋಡಿ ಇವತ್ತು ಸಂಕಷ್ಟಿ. ಅದರಲ್ಲೂ ವರ್ಷಕ್ಕೊಂದೇ ದಿನ ಮಂಗಳವಾರ ಬರುವ ಸಂಕಷ್ಟಿ ತುಂಬಾ ಶ್ರೇಷ್ಟ. ಅದಕ್ಕಾಗಿ ಬೆಳಿಗ್ಗಿನಿಂದ ಉಪವಾಸವಿದ್ದು ಈಗ ತಾನೆ ಗಣೇಶ ಗುಡಿಗೆ ಹೋಗಿಬಂದಿದ್ದೇನೆ. ಗಣೇಶನನ್ನು ಪೂಜಿಸುವವರು ಇಲಿಯನ್ನು ಸಾಯಿಸಬಾರದು. ಅದರಲ್ಲೂ ಇವತ್ತು ಸಾಯಿಸಲೇಬಾರದು".

    ಓಹೋ ಈ ಇಲಿಯನ್ನು ಸಾಯಿಸಬಾರದೆನ್ನುವ ವಿಚಾರದ ಹಿಂದೆ ಅಡಗಿರುವ ರಹಸ್ಯ, ಅದನ್ನು ಉಳಿಸಿಕೊಳ್ಳಲು ತಿಂಗಳಿಗೊಮ್ಮೆ ಬರುವ ಸಂಕಷ್ಟಿ, ಅದರಲ್ಲೂ ವರ್ಷಕೊಮ್ಮೆ ಮಾತ್ರ ಬರುವ ಮಂಗಳವಾರದ ಶ್ರೇಷ್ಠ ಸಂಕಷ್ಟಿ, ಗಣೇಶನ ಇನ್ಪ್ಲೂಯನ್ಸು, ಇತ್ಯಾದಿಗಳಿಂದಾಗಿ ನಾನು ಒಪ್ಪಲೇಬೇಕಾಯ್ತು.
ಭಕ್ತಿ, ಭಾವಗಳನ್ನೊಳಗೊಂಡ ಅವಳ ವಿಚಾರದ ಸೂಕ್ಷ್ಮತೆಯನ್ನು ಗಮನಿಸಿ ಆ ಇಲಿಯನ್ನು ಉಳಿಸಿಬಿಡೋಣವೆಂದುಕೊಂಡರೂ ನಮಗೆ ಗೊತ್ತಾಗದ ಹಾಗೆ ನನ್ನ ಪುಸ್ತಕ ಮನೆಯೊಳಗೆ ಸೇರಿಕೊಂಡುಬಿಟ್ಟರೆ..ಇಲಿಗಳಿಗೆ ಪುಸ್ತಕಗಳು ಮತ್ತು ಪೇಪರುಗಳೆಂದರೆ ಪ್ರಿಯವಂತೆ. ತಿಂದು ಹೊಟ್ಟೆ ತುಂಬಿಸಿಕೊಳ್ಳಲಿಕ್ಕಲ್ಲ ಹಲ್ಲಿನಲ್ಲಿ ಕಡಿದು ಕಡಿದು ಹರಿದು ಹಾಕಲಿಕ್ಕೆ. ಈ ಆಧುನಿಕ ಕಾಲದಲ್ಲಿ ಕೆಲವರು ಕೆಲಸದ ಒತ್ತಡದಿಂದಾಗಿ ತಿನ್ನುವ ಆಹಾರವನ್ನು ಹಲ್ಲಿನಿಂದ ಚೆನ್ನಾಗಿ ಕಚ್ಚಿ ಅಗಿದು ಅದರ ಸ್ವಾದವನ್ನು ಸವಿಯಲು ಮೈಮರೆತು ಸಮಯವಿಲ್ಲವೆಂದು ಕೇವಲ ನುಂಗುವಂತ ಕುಡಿಯುವಂತ ಆಹಾರವನ್ನು ಸೇವಿಸುವಷ್ಟು ಸೋಮಾರಿಗಳಾಗಿರುವಂತೆ ಈ ಇಲಿಗಳೂ ಸೋಮಾರಿಗಳಾಗಿಬಿಟ್ಟರೆ ಅವುಗಳ ಹಲ್ಲುಗಳು ಅದರ ದೇಹಗಾತ್ರದ ಮೂರರಷ್ಟು ಬೆಳೆದುಬಿಡುತ್ತವಂತೆ. ಅದಕ್ಕೆ ಅವು ಏನನ್ನಾದರೂ ಕಡಿಯುತ್ತಲೇ ಇರಬೇಕು. ನಿರಂತರವಾಗಿ ಏನನ್ನಾದರೂ ಕಡಿಯುತ್ತಿರುವುದರ ಮೂಲಕ ಬೆಳೆಯುತ್ತಿರುವ ಹಲ್ಲುಗಳನ್ನು ಮೊಂಡುಮಾಡಿಕೊಳ್ಳುತ್ತಿರಬೇಕು ಎನ್ನುವುದು ಇಲಿಗಳಿಗೆ ದೇವರು ಕೊಟ್ಟ ವರವೋ ಅಥವ ಶಾಪವೇ ನನಗೆ ಗೊತ್ತಿಲ್ಲ. ಇದನ್ನು ಪ್ರಪಂಚದಾದ್ಯಂತ ಎಲ್ಲಾ ಕಡೆಯಲ್ಲಿರುವ ಇಲಿಗಳು ಪುಸ್ತಕಗಳು ಸೇರ್‍ಇದಂತೆ ಎಲ್ಲವನ್ನು ಕಡಿಯುವ ಪ್ರಕ್ರಿಯೆಯನ್ನು ಸಂತೋಷದಿಂದ ಮಾಡುವುದಕ್ಕೆ ನನ್ನ ಅಭ್ಯಂತವೇನು ಇಲ್ಲ. ಆದ್ರೆ ನನ್ನ ಪುಸ್ತಕ ಮನೆಯೊಳಗೆ ಇರುವ ಪೂರ್ಣಚಂದ್ರ ತೇಜಸ್ವಿ, ರವಿಬೆಳಗೆರೆ, ಕುಂ.ವಿ. ವಸುದೇಂದ್ರ, ಕುವೆಂಪು, ಕಾರಂತ, ಬೈರಪ್ಪ, ನಮ್ಮ ಬ್ಲಾಗರುಗಳನ್ನೊಳಗೊಂಡ  ಐದುನೂರಕ್ಕೂ ಹೆಚ್ಚು ಪುಸ್ತಕಗಳನ್ನು ಕಡಿಯಲು ಪ್ರಾರಂಭಿಸಿದರೆ? ಮುಂದೆ ಸಜ್ಜೆಗಳ ಮೇಲಿಟ್ಟಿರುವ ಸಾವಿರಕ್ಕೂ ಮೇಲ್ಪಟ್ಟ ನನ್ನ ವೆಂಡರ್ ಕಣ್ಣು, ಗುಬ್ಬಿ ಎಂಜಲು, ಅಜಾದರ ಜಲನಯನ ಪುಸ್ತಕಗಳನ್ನು ಕಡಿಯಲು ಪ್ರಾರಂಭಿಸಿದರೆ ಏನು ಮಾಡುವುದು?

   ಮುಂದೆ ಇದೇ ಇಲಿಗೆ ಪುಸ್ತಕಗಳ ರುಚಿ ಬೇಸರವಾಗಿ ನನ್ನ ಬೀರುವಿನೊಳಗೆ ಸೇರಿಕೊಂಡು ಬಿಟ್ಟರೆ ಅದರಲ್ಲಿರುವ ನನ್ನ ದುಬಾರಿ ಕ್ಯಾಮೆರ ಮತ್ತು ಇತರ ಉಪಕರಣಗಳ ಗತಿ? ನನ್ನ ಕಂಪ್ಯೂಟರ್ ರೂಮಿನೊಳಗೆ  ಸೇರಿಕೊಂಡು ವಿಧ್ಯುತ್ ತಂತಿಗಳನ್ನು ಕಡಿದು ತುಂಡರಿಸಲು ಪ್ರಾರಂಭಿಸಿದರೆ, ಅದರ ಪಕ್ಕದಲ್ಲಿನ ಮರದ ಬೀರುವಿನಲ್ಲಿ ಸ್ಪರ್ಧೆಗೆ ಕಳಿಸಲು ಪ್ರಿಂಟ್ ಮಾಡಿ ಇಟ್ಟಿರುವ ಫೋಟೊಗಳ ಕಡೆಗೆ ಬಂದು ಬಿಟ್ಟರೆ?   ಚಿಟ್ಟೆ, ದುಂಬಿ, ಇನ್ನಿತರ ಕೀಟಗಳಿರುವ ಫೋಟೊಗಳನ್ನು ನೋಡಿ ಈ ಇಲಿ ತನಗೆ ಮೃಷ್ಟಾನ್ನ ಬೋಜನವೆಂದುಕೊಂಡು ಸಂಭ್ರಮದಿಂದ ಕಡಿದು ಅದರ ರುಚಿಯನ್ನು ನೋಡಿ ತತ್! ಇದು ಕೂಡ ಒಂಥರ ಗಟ್ಟಿ ಪೇಪರ್ ಅಷ್ಟೇ ಎನ್ನುವ ಕೋಪದಿಂದ ಎಲ್ಲಾ ಫೋಟೊಗಳನ್ನು ಕಡಿದು ಚಿಂದಿ ಚಿಂದಿ ಮಾಡಿ ಪಕ್ಕದಲ್ಲೇ ಇರುವ ನನ್ನ ಫೋಟೊಗ್ರಫಿಯಲ್ಲಿ ಗಳಿಸಿದ ಸರ್ಟಿಫಿಕೇಟುಗಳನ್ನೆಲ್ಲಾ ತುಂಡು ತುಂಡು ಮಾಡಲು ಪ್ರಾರಂಭಿಸಿ ಇದೇ ಕಾಯಕಕ್ಕಾಗಿ ನನ್ನ ಮನೆಯಲ್ಲಿಯೇ ಖಾಯಂ ಟಿಕಾಣಿ ಹೂಡಿಬಿಟ್ಟರೆ ಏನಪ್ಪ ಗತಿ?

   ಇಲ್ಲ ಇದರಿಂದ ಮುಂದಿನ ಭವಿಷ್ಯದಲ್ಲಿ ಘನ ಘೋರ ಅಪಾಯವಿದೆ ಇದನ್ನು ಸಾಯಿಸಿಬಿಟ್ಟರೆ ಒಳ್ಳೆಯದೆಂದು ತೀರ್ಮಾನಿಸಿ ಅದನ್ನು ಚುಚ್ಚಲು ಒಂದು ಕಂಬಿಯನ್ನು ಹುಡುಕತೊಡಗಿದೆ. ನನ್ನ ದುರಾದೃಷ್ಟಕ್ಕೋ ಅಥವ ಅದರ ಅದೃಷ್ಟಕ್ಕೋ ಅದು ಆಡಗಿರುವ ಅರ್ಧ ಇಂಚಿನೊಳಗೆ ಹೋಗುವ ಸಣ್ಣ ಕಂಬಿ ಸಿಗಲಿಲ್ಲ. ಈಗೇನು ಮಾಡುವುದು ಎಂದು ಚಿಂತಿಸುತ್ತಿರುವಾಗಲೇ ಅದಿನ್ನು ಪುಟ್ಟ ಮರಿ ಇಲಿ, ಅದಕ್ಕಿರುವುದು ಈಗ ಪುಟ್ಟ ಮಕ್ಕಳಿಗಿರುವಂತ ಹಾಲು ಹಲ್ಲು ಮಾತ್ರ. ಅದರಿಂದಾಗಿ ನನ್ನ ಪುಸ್ತಕ ಇತ್ಯಾದಿಗಳನ್ನು ಕಡಿದು ಹಾಕಲು ತುಂಡು ಮಾಡಲು ಸಾಧ್ಯವಿಲ್ಲ. ಹಾಗಾಗಿ ಸಾಯಿಸುವುದು ಬೇಡವೆಂದು ತೀರ್ಮಾನಿಸಿದೆ. ನಮ್ಮಿಬ್ಬರ ತೀರ್ಮಾನವೂ ಸಾಯಿಸಬಾರದೆಂದು ಅಯ್ತು.  ಹಾಗಂತ ಅದನ್ನು ಮುದ್ದು ಮಗುವಿನಂತೆ ಮನೆಯ ತುಂಬಾ ಓಡಾಡಿಕೊಂಡಿರು ಅಂತ ಬಿಟ್ಟಿರಲು ಸಾಧ್ಯವೇ? ಹಾಗೆ ಬೇಕಾದರೆ ಅದು ಬೇರೆಯವರ ಮನೆಯಲ್ಲಿ ಆ ರೀತಿ ಸಂತೋಷದಿಂದ ಇರಲಿ ಎಂದುಕೊಂಡು ಕಿಟಕಿ ಬಾಗಿಲನ್ನು ತೆಗೆದು ಅದರ ಮೂಲಕ ಹೋಗಿಬಿಡಲಿ ಎಂದು ಕೆಳಗಿನಿಂದ ತೆಂಗಿನ ಕಡ್ಡಿಯನ್ನು ಅ ಅರ್ಧ ಇಂಚಿನ ಸಂಧಿಯಲ್ಲಿ ಹಾಕಿದೆ. ಕಣ್ಣಿಗೆ ಏನು ಕಾಣುತ್ತಿರಲಿಲ್ಲವಾದ್ದರಿಂದ  "ಹೇಮ ಅದು ನನಗೆ ಕಾಣಿಸುತ್ತಿಲ್ಲ ನಾನು ಅಂದಾಜಿನಲ್ಲಿ ಆ ಸಂದಿಯಲ್ಲಿ ಈ ಕಡ್ದಿಯನ್ನು ಚುಚ್ಚುತ್ತೇನೆ. ನನ್ನ ಗದ್ದಲಕ್ಕೆ ಅದು ಬೇಕಾದರೆ ಕಿಟಕಿಯಿಂದ ಹೊರಗೆ ಹೋಗಿಬಿಡಲಿ ಹಾಗೆ ಹೋಗದೆ ಮತ್ತೆ ಬಾಗಿಲ ಮೂಲಕ ಹೋಗುವುದಾದರೆ ಅದನ್ನು ಬ್ಯಾಗ್‍ನೊಳಗೆ ಹಿಡಿದುಬಿಡು ಎಂದು ಅವಳಿಗೆ ಸೂಚನೆ ಕೊಟ್ಟು ಅಂದಾಜಿನ ಮೇಲೆ ಅದರಲ್ಲಿ ಕಡ್ಡಿ ಆಡಿಸತೊಡಗಿದೆ.

   ಸುಮಾರು ಹೊತ್ತಾದರೂ ಸಂದುವಿನಲ್ಲಿ ಏನು ಶಬ್ದವಾಗಲಿಲ್ಲ. ಇತ್ತ ನಮ್ಮ ಕಣ್ಣೆದುರೇ ಸಾಗಿ ಬಾಗಿಲ ಮೂಲಕ ಬ್ಯಾಗಿನೊಳಗೂ ಸೆರೆಯಾಗಲಿಲ್ಲ ಅತ್ತ ಕಿಟಕಿಯ ಮೂಲಕ ಹೊರಗಡೆ ಹೋಗಿದ್ದು ನಮಗೆ ಕಾಣಿಸಲಿಲ್ಲ. ಅರ್ಧ ಗಂಟೆ ಅದರ ಹುಡುಕಾಟದಲ್ಲಿ ತೊಡಗಿದರೂ ನಮ್ಮ ಕಣ್ಣಿಗೆ ಕಾಣಿಸಲಿಲ್ಲ. ಆ ಇಲಿ ನಮ್ಮಿಬ್ಬರ ಅಲೋಚನೆಗಳ ಅನುಕೂಲತೆಯನ್ನು ಪಡೆದುಕೊಂಡು ನಮಗಿಬ್ಬರಿಗೂ ಚಳ್ಳೆಹಣ್ಣು ತಿನ್ನಿಸಿ ತಪ್ಪಿಸಿಕೊಂಡಿತ್ತು.

     ಇಷ್ಟಕ್ಕೂ ಈ ಪುಟ್ಟ ಇಲಿ ನಮ್ಮ ಮನೆಗೆ ಹೇಗೆ ಬಂತು? ನಾವು ಇರುವ ಜಾಗದಲ್ಲಿ ದೊಡ್ಡದಾಗ ಚರಂಡಿ, ಮೋರಿಗಳಿರಲಿ ಚಿಕ್ಕ ಚಿಕ್ಕವೂ ಕೂಡ ಇಲ್ಲ. ಮತ್ತೆ ಇತ್ತೀಚೆಗೆ ನಮ್ಮ ಸಣ್ಣ ಪಾದಚಾರಿ ಮಾರ್ಗಗಳಿಗೆಲ್ಲಾ ಮಾರ್ಬಲ್ ಕಲ್ಲುಗಳನ್ನೇ ಹಾಕಿ ನಡುವೆ ಚೆನ್ನಾಗಿ ಸಿಮೆಂಟ್ ಪ್ಲಾಸ್ಟರಿಂಗ್ ಮಾಡಿರುವುದರಿಂದ ಜಿರಲೆ, ಇಲಿ ಹೆಗ್ಗಣಗಳು ನುಸುಳಲು ಸಾಧ್ಯವಾಗದಂತೆ ಮಾಡಿಬಿಟ್ಟಿದ್ದಾರೆ. ಇದರಿಂದಾಗಿ ವಾಸಮಾಡಲು ನಮ್ಮ ರಸ್ತೆಯಲ್ಲಿ ಜಾಗವೇ ಇಲ್ಲದ್ದರಿಂದ ಅವು ವಿಧಿಯಿಲ್ಲದೇ ಬೇರೆ ರಸ್ತೆಗೆ ಹೋಗಲೇಬೇಕಾದ ಪರಿಸ್ಥಿತಿಯಿದೆ. ದೇವಯ್ಯ ಪಾರ್ಕ್ ರಸ್ತೆಯಲ್ಲಿನ ಮೆಟ್ರೋ ರೈಲು ಸೇತುವೆ ಕೆಲಸದಿಂದಾಗಿ ಎಲ್ಲಾ ದ್ವಿಚಕ್ರ ಮತ್ತು ಕಾರುಗಳು ನಮ್ಮ ರಸ್ತೆಯಲ್ಲೇ ಬೆಳಿಗಿನಿಂದ ರಾತ್ರಿಯವರೆಗೆ ಪರ್ಯಾಯ ರಸ್ತೆಯಾಗಿ ಬಳಸಿಕೊಳ್ಳುತ್ತಿರುವುದರಿಂದ ಅಪರೂಪಕ್ಕೆ ಕಾಣುವ ಜಿರಲೆಗಳು, ಇಲಿ ಹೆಗ್ಗಣಗಳಿಗೆ ಅಪಘಾತದಿಂದ ಸಾವು ಖಚಿತ. ಹಾಗಾದರೆ ಮತ್ತೆಲ್ಲಿಂದ ಇದು ನಮ್ಮ ಮನೆಗೆ ಬಂತು? ನಿದಾನವಾಗಿ ಯೋಚಿಸಿದಾಗ ಅದರ ಲಿಂಕ್ ನಮ್ಮ ಮುಂಜಾನೆ ದಿನಪತ್ರಿಕೆ ವಿತರಣೆಯ ಸ್ಥಳಕ್ಕೆ ಕನೆಕ್ಟ್ ಆಗಿತ್ತು.
ಒಂದು ವಾರದ ಹಿಂದೆ ನನ್ನ ಪೇಪರ್ ಹಾಕುವ ಹುಡುಗರು ನಾವು ನಿತ್ಯ ಕುಳಿತುಕೊಳ್ಳುವ ಜಾಗವನ್ನು ಮತ್ತೊಂದು ಕಡೆಗೆ ಬದಲಾಯಿಸಿದ್ದರು. ನಸುಕಿನ ಐದುಗಂಟೆಯ ಹೊತ್ತಿಗೆ ಈ ಮೊದಲು ಕುಳಿತುಕೊಳ್ಳುತ್ತಿದ್ದ ಫುಟ್‍ಪಾತ್‍ನಲ್ಲಿ ರಸ್ತೆಯ ಬದಿಯ ವಿಧ್ಯುತ್ ದೀಪದ ಬೆಳಕು ರಾತ್ರಿಯೆಲ್ಲಾ ಇದ್ದರೂ ಸರಿಯಾಗಿ ನಸುಕಿನ ಐದುವರೆಗೆ ಆಫ್ ಆಗಿಬಿಡುತ್ತಿತ್ತು. ಮುಖ್ಯ ಪೇಪರುಗಳ ನಡುವೆ ಸಪ್ಲಿಮೆಂಟರಿಗಳು ಸೇರಿಸುವುದು, ಆನಂತರ ಅವುಗಳನ್ನು ಬೀಟ್ ವಿಭಾಗ ಮಾಡಿ ಜೋಡಿಸುವುದು ಇದಕ್ಕೆಲ್ಲ ಬೆಳಕಿಲ್ಲದಂತಾಗಿ ತೊಂದರೆಯಾಗಿಬಿಡುತ್ತಿತ್ತು. ಹೀಗೆ ಎಣಿಸಿಕೊಡುವ ಪ್ರಕ್ರಿಯೆಯಲ್ಲಿ ಕನ್ನಡಪ್ರಭ ಬದಲಿಗೆ ಉದಯವಾಣಿ, ವಿಜಯವಾಣಿಯ ಬದಲಿಗೆ ವಿಜಯಕರ್ನಾಟಕ ಹೀಗೆ ಬದಲಾಗಿ ಮನೆಗಳಿಗೆ ಸರಿಯಾದ ಪೇಪರುಗಳು ತಲುಪದೆ ತೊಂದರೆಯಾಗುತ್ತಿತ್ತು. ಇದಕ್ಕೆಲ್ಲಾ ಪರಿಹಾರವೆಂದು ನಮ್ಮ ಹುಡುಗರು ಶೇಷಾದ್ರಿಪುರಂ ಸ್ವಸ್ಥಿಕ್ ವೃತ್ತದ ಬಳಿ ಶೇಷಾದ್ರಿಪುರಂ ಕಾಲೇಜ್ ಕಡೆಗೆ ಹೋಗುವ ಎಡಭಾಗದ ಮೂಲೆಗೆ ಜಾಗ ಬದಲಾಗಿಸಿದರು. ಅಲ್ಲಿ ಮುಖ್ಯವಾಗಿ ಸ್ವಸ್ಥಿಕ್ ವೃತ್ತದ ನಡುವೆ ನಿಲ್ಲಿಸಿದ್ದ ಎಂಬತ್ತು ಅಡಿ ಎತ್ತರದ ಕಂಬದಲ್ಲಿರುವ ವಿದ್ಯುತ್ ದೀಪಗಳಿಂದ ಸುತ್ತಲು ವಿಶಾಲವಾಗಿ ಬೆಳಕು ಬೆಳಿಗ್ಗೆ ಆರುವರೆಯವರೆಗೂ ಇರುತ್ತಿತ್ತು. ಬೆಳಕಿನ ಅನುಕೂಲ ಮತ್ತು ಹೊಸ ಜಾಗದಲ್ಲಿ ಪತ್ರಿಕೆಗಳ ಒಳಗೆ ಸೇರಿಸುವ ಪಾಂಪ್ಲೆಟ್ಸುಗಳು ಹೆಚ್ಚಾಗಿ ಬರುವ ಕಾರಣ ಅವರ ನಿತ್ಯದ ಆಧಾಯವೂ ಹೆಚ್ಚಾಗಿದ್ದಿದ್ದೂ ಮತ್ತೊಂದು ಕಾರಣವಾಗಿತ್ತು. ನಾವು ಕುಳಿತುಕೊಳ್ಳುವ ಪಕ್ಕದಲ್ಲೇ ಪೋಲಿಸ್ ಚೌಕಿಯೂ ಇದ್ದು ಅದರೊಳಗೆ ಸೇರಿ ಫೋಲಿಸರಂತೆ ನಟಿಸುವುದು, ಅವರನ್ನು ಅಣಕಿಸುವುದು ಇತ್ಯಾದಿ ಕಾರಣಗಳಿಗಾಗಿ ಅವರಿಗೆಲ್ಲಾ ಹೊಸ ಜಾಗ ಇಷ್ಟವಾಗಿತ್ತು. ಇಷ್ಟೆಲ್ಲಾ ಇಷ್ಟದ ನಡುವೆ ಕಷ್ಟವೂ ಇರಲೇಬೇಕಲ್ಲವೇ...ನಾವು ಕುಳಿತುಕೊಂಡು ಪೇಪರ್ ಜೋಡಿಸುವ ಈ ಸ್ಥಳದ ಹಿಂಭಾಗದಲ್ಲಿ ಒಂದು  ಹಳೆಯ ಕಾಂಪೌಂಡ್ ಅದರ ಒಳಗೆ ಒಂದಷ್ಟು ಗಿಡಕಂಟಿಗಳು ಆಡ್ಡದಿಡ್ಡಿಯಾಗಿ ಬೆಳೆದಿದ್ದವು.  ಅದರೊಳಗೆ ಒಂದು ಹಳೆಯ ಮನೆಯಿತ್ತು. ಆದ್ರೆ ಅದರಲ್ಲಿ ಯಾರು ವಾಸವಿರಲಿಲ್ಲ. ಬದಲಾಯಿಸಿದ ಎರಡೇ ದಿನಕ್ಕೆ ಕಾಂಪೌಂಡ್ ಕೆಳಗಿನ ಸಣ್ಣ ಸಣ್ಣ ತೂತುಗಳಿಂದ ಇಲಿಗಳು  ನಮ್ಮ ಪೇಪರುಗಳ ಮೇಲೆ ಓಡಿಹೋಗುವುದು, ಇತ್ಯಾದಿಗಳು ನಡೆದಿತ್ತು. ಅದನ್ನು ನೋಡಿ ನಮ್ಮ ಹುಡುಗರು ಸ್ವಲ್ಪ ಪಕ್ಕಕ್ಕೆ ಬದಲಾಯಿಸಿಕೊಂಡರು.  ಆದರೂ ಅಪರೂಪಕ್ಕೆ ಅಲ್ಲೊಂದು ಇಲ್ಲೊಂದು ಇಲಿ ನಮ್ಮ ಮುಂದೆಯೇ ಕಾಂಪೌಂಡ್ ತೂತುಗಳಿಂದ ಹೊರಬರುವುದು ಮತ್ತೆ ಒಳಹೋಗುವುದು, ಕಾಂಪೌಂಡಿಗೆ ಹೊಂದಿಕೊಂಡಂತೆ ಇರುವ "ಶೇಷಾದ್ರಿಪುರಂ ರಸ್ತೆ" ಕಾಂಕ್ರೀಟ್ ಪಲಕದ ಮೇಲೆ ಕುಳಿತು  ಕೆಳಗೆ ಇಣುಕುವುದು ಮತ್ತೆ ಇಳಿಯುವುದು, ಅದರ ಪಕ್ಕ ಇಟ್ಟಿದ್ದ ನಮ್ಮ ಪೇಪರ್ ಬ್ಯಾಗುಗಳ ಪಕ್ಕದಲ್ಲೇ ಓಡಿಹೋಗುವುದು ನಮಗೆಲ್ಲಾ ಕಾಣುತ್ತಿತ್ತು.  ಬಹುಶಃ ಕಳೆದ ಭಾನುವಾರ ಒಂದು ಪುಟ್ಟ ಇಲಿ ಮರಿ ಹೀಗೆ ನನ್ನ ಪೇಪರ್ ಬ್ಯಾಗಿನೊಳಗೆ ಸೇರ್‍ಇಕೊಂಡಿರಬಹುದು. ಏಕೆಂದರೆ ಮರುದಿನ ನಸುಕಿನ ನಾಲ್ಕುವರೆಗೆ ನಾನು ಎದ್ದು ಬಚ್ಚಲು ಮನೆ ಕಡೆಗೆ ಹೋಗುವಾಗ ಅನಿರೀಕ್ಷಿತವಾಗಿ ಕಸದ ಡಬ್ಬ ಇಟ್ಟಿದ್ದ ಬಾಗಿಲ ಕಡೆಯಿಂದ ಟಿವಿ ಸ್ಯಾಂಡ್ ಕಡೆಗೆ ಕಪ್ಪಗಿನ ವಸ್ತುವೊಂದು ವೇಗವಾಗಿ ಓಡಿದ್ದು ಕಾಣಿಸಿತ್ತು.  ಇನ್ನೂ ನಿದ್ರೆಯ ಮಂಪರಿನಿಂದಾಗಿ ಆಗ ಓಡಿದ್ದು ಇಲಿ ಅಂತ ಅನ್ನಿಸಿರಲಿಲ್ಲ.


ಈಗ ಇದೆಲ್ಲ ವಿದ್ಯಾಮಾನಗಳನ್ನು ಗಮನಿಸಿದಾಗ ಖಚಿತವಾಗಿ ನಮ್ಮ ದಿನಪತ್ರಿಕೆ ವಿತರಣೆಯ ಸ್ಥಳದಲ್ಲಿ ನನ್ನ ಬ್ಯಾಗಿನೊಳಗೆ ಬಂದ ಪುಟ್ಟ ಇಲಿಯೇ ನಮ್ಮ ಮನೆಯೊಳಗೆ ಸೇರಿಕೊಂಡು ನಮಗಿಬ್ಬರಿಗೂ ಇಷ್ಟೊಂದು ಕಾಟ ಕೊಡುತ್ತಿದೆ!   

    ಮರುದಿನ ಬೆಳಿಗ್ಗೆ ಒಂಬತ್ತು ಗಂಟೆಯ ಹೊತ್ತಿಗೆ ನಮ್ಮ ಹಾಲ್‍ನಲ್ಲಿ ಕಸದ ಡಬ್ಬವನ್ನಿಡುವ ಈಶಾನ್ಯ ಮೂಲೆಯಿಂದ ದೇವಮೂಲೆಯಾದ ದಿವಾನ ಕೆಳಗೆ ಓಡಿದ್ದನ್ನು ಹೇಮ ನೋಡಿ ನನ್ನನ್ನು ಕರೆದಳು.  ದಿವಾನವನ್ನು ಸರಿಸಿದರೆ ಟಿವಿ ಸ್ಟ್ಯಾಂಡ್ ಇರುವ ಅಗ್ನಿ ಮೂಲೆಯತ್ತ ಹೋಗುವುದು, ಅತ್ತ ಹುಡುಕಿದರೆ ಮತ್ತೆ ರೂಮಿಗೆ ಹೋಗುವುದು  ಹೀಗೆ ಅದು ನಮ್ಮನ್ನು ಆಟವಾಡಿಸುತ್ತಿದೆ! ಅದು ಓಡಾಡುವಾಗ ನಮ್ಮ ಕೈಯಲ್ಲಿ ಅದನ್ನು ಹಿಡಿಯಲು ಏನು ಇರಲಿಲ್ಲ. ಎಲ್ಲವನ್ನು ಹೊಂದಿಸಿಕೊಳ್ಳುವ ಹೊತ್ತಿಗೆ ಅದು ಮತ್ತೆಲ್ಲೋ ನಮಗೆ ಗೊತ್ತಾಗದ ಜಾಗಕ್ಕೆ ಹೋಗಿಬಿಡುವುದು, ಹೀಗೆ ಅವತ್ತು ಸಂಜೆ ಮತ್ತೆ ಅಡುಗೆ ಮನೆಯಲ್ಲಿ ಕಾಣಿಸಿಕೊಂಡು ಮತ್ತೆ ನಮ್ಮ ಮಲಗುವ ಕೋಣೆಗೆ ಓಡಿತ್ತು. ಮತ್ತೆ ಮಂಚದ ಕೆಳಗಿನದನ್ನು ಎಳೆದುಹಾಕುವ ಪ್ರಸಂಗ ಬೇಡವೇ ಬೇಡ ಎಲ್ಲಿ ಹೋಗುತ್ತದೆ ನಮ್ಮ ಕೈಗೆ ಸಿಗಲೇಬೇಕು ಅದು ಅಂದುಕೊಂಡು ನಾವೇ ಅವತ್ತು ಸುಮ್ಮನಾದೆವು.

   ನಾಲ್ಕನೇ ದಿನ ಪೂರ್ತಿ ಒಂದು ಬಾರಿಯೂ ಇಲಿ ಕಾಣಲಿಲ್ಲವಾದ್ದರಿಂದ ನಾವಿಬ್ಬರೂ ಅದರ ಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲ. ಸಂಜೆಯ ಹೊತ್ತಿಗೆ ನಮ್ಮ ಮನೆಯಲ್ಲಿ ಸೇರಿದ್ದ ಇಲಿ ವಿಚಾರ ಮರೆತೇ ಹೋಗಿತ್ತು. ಶುಕ್ರವಾರ ಬೆಳಿಗ್ಗೆ ಎಂದಿನಂತೆ ಮುಂಜಾನೆ ನಾಲ್ಕುವರೆಗೆ ಎದ್ದು ಕೈಕಾಲು ಮುಖ ತೊಳೆದು ದಿನಪತ್ರಿಕೆ ವಿತರಣೆ ಕೆಲಸಕ್ಕೆ ಹೊರಟೆ. ಎಂದಿನಂತೆ ನಮ್ಮ ಹುಡುಗರು ಪೇಪರುಗಳಿಗೆ ಸ್ಪಪ್ಲಿಮೆಂಟರಿ ಮತ್ತು ಪಾಂಪ್ಲೆಟ್ಸ್ ಹಾಕುವ ಕಾಯಕದಲ್ಲಿದ್ದರು. ನಾನು ಆಗತಾನೆ ನನ್ನ ಸ್ಕೂಟಿಯನ್ನು ನಿಲ್ಲಿಸಿ ಮನೆಯಿಂದ ನಿತ್ಯ ತೆಗೆದುಕೊಂಡು ಹೋಗುವ ಪೇಪರ್ ಬ್ಯಾಗನ್ನು ಎತ್ತಿದೆನಷ್ಟೆ. ಚಂಗನೆ ಅದರೊಳಗಿನಂದ ಇಲಿಯೊಂದು ಹೊರಬಂದು ನನ್ನ ಕೈಮೇಲೆ ಬಂದಲ್ಲ! ಗಾಬರಿಯಾಗಿ ಕೈಕೊಡವಿಬಿಟ್ಟೆ. ಬ್ಯಾಗ್ ಎಲ್ಲಿಯೋಬಿತ್ತು. ಅಲ್ಲಿಂದ ಹಾರಿದ ಇಲಿ ಕುಳಿತಿದ್ದ ನನ್ನ ಪೇಪರ್ ಹುಡುಗನ ಬೆನ್ನ ಮೇಲೆ ಹಾರಿತು. ಅವನಿಗೆ ದಿಗಿಲಾಗಿ ಮೈಕೊಡವಿದನಲ್ಲ! ಹರಡಿಕೊಂಡಿದ್ದ ಪೇಪರುಗಳ ಮೇಲೆಲ್ಲಾ ಓಡಾಡಿ ಸುತ್ತ ಕುಳಿತಿದ್ದ ನಮ್ಮ ಹುಡುಗರನೆಲ್ಲಾ ಗಲಿಬಿಲಿ ಮಾಡಿ ಕಾಂಪೌಂಡಿನ ತೂತಿನೊಳಗೆ ಹೋಗಿಬಿಡ್ತು.

   ನಮ್ಮ ಹುಡುಗರಿಗೆ ಗಾಬರಿ, ಗೊಂದಲ, ನಗು, ತಮಾಷೆ ಎಲ್ಲವೂ ಒಟ್ಟಿಗೆ ಆಗಿ ಗಂಭೀರವಾಗಿದ್ದ ವಾತವರಣವೆಲ್ಲಾ ಮಾಯವಾಯ್ತು. ಮಾತನಾಡಲು ಏನು ವಿಚಾರವಿಲ್ಲದಾಗ ನಮ್ಮ ಹುಡುಗರಿಗೆ ಇಂಥ ಘಟನೆಗಳು ಸಿಕ್ಕಿದರೆ ಸಾಕು ತಮಗೆ ತಾವೆ ಮೈಮರೆತು ಹಳೆಯ ನೆನಪುಗಳನ್ನೆಲ್ಲಾ ಕಕ್ಕಲು ಪ್ರಾರಂಭಿಸಿಬಿಡುತ್ತಾರೆ. ಒಬ್ಬ ಶುರುಮಾಡಿದ ನೋಡಿ..ಇದ್ಯಾಕೋ ಸರಿಯೋಗಲ್ಲವೆಂದುಕೊಂಡು  "ಲೋ ಕುಮಾರ ನಿಲ್ಲಿಸೋ...ಆಗಲೇ ಟೈಮ್ ಐದುವರೆಯಾಗುತ್ತಿದೆ....ತಗೊಳ್ಳೋ...ದುಡ್ಡು ಎಲ್ಲರಿಗೂ ಟೀ ತಗೊಂಡು ಬಾ ಹೋಗು"  ಅಂತ ಅವನನ್ನು ಸಾಗಹಾಕಿದೆ. ಅಲ್ಲಿಗೆ ಮತ್ತೆ ಎಂದಿನಂತೆ ಹುಡುಗರು ತಮ್ಮ ಕೆಲಸದ ಪ್ರಕ್ರಿಯೆಯನ್ನು ತೊಡಗಿಕೊಂಡರು.

  ಈ ಪುಟ್ಟ ಇಲಿ ನಾಲ್ಕುದಿನ ನಮ್ಮನೆಯಲ್ಲಿ ಸೇರಿಕೊಂಡು ನಮಗಿಬ್ಬರಿಗೂ ಚೆನ್ನಾಗಿ ಆಟವಾಡಿಸಿ ಎಲ್ಲಿಂದ ಬಂದಿತ್ತೋ ಅದೇ ಸ್ಥಳಕ್ಕೆ ತನಗರಿವಿಲ್ಲದಂತೆ ತಲುಪಿದ್ದು ಮಾತ್ರ ಎಂಥ ಕಾಕತಾಳೀಯವೆನಿಸಿತ್ತು.
ಇವತ್ತಿನಿಂದ ನಮ್ಮ ಹುಡುಗರು ಮತ್ತೆ ಸ್ಥಳ ಬದಲಾಯಿಸಿದ್ದಾರೆ!

ಲೇಖನ ಮತ್ತು ಚಿತ್ರಗಳು : ಶಿವು.ಕೆ
 ಬೆಂಗಳೂರು.