Friday, September 7, 2012

ಕೈಯಿಂದ ಜಾರುವ ತೇಜಸ್ವಿಯವರ ಪುಸ್ತಕಗಳು!

ಸೆಪ್ಟಂಬರ್ 8 ಅಂದರೆ ಇವತ್ತು ನನ್ನ ಮೆಚ್ಚಿನ ಲೇಖಕ ಪೂರ್ಣಚಂದ್ರ ತೇಜಸ್ವಿಯವರ ಹುಟ್ಟುಹಬ್ಬ.  ಅವರ ಕತೆ, ಲೇಖನ, ಪ್ರಕೃತಿ ಅನ್ವೇಷಣೆ, ಫೋಟೊಗ್ರಫಿಯಿಂದಾಗಿ ಈಗಲೂ ನಮ್ಮೊಂದಿಗೆ ಇದ್ದಾರೆ.  ಕಳೆದ ನಾಲ್ಕು ದಿನದಲ್ಲಿ ನಮ್ಮ ಮನೆಯಲ್ಲಿಯೇ ನಡೆದ ಘಟನಾವಳಿಗಳನ್ನು ಆಧರಿಸಿ ಬರೆದ  ಈ ಲಲಿತಪ್ರಬಂಧ ಅವರಿಗೆ ಸಮರ್ಪಣೆ.
                                -----------------------------

    ನಮ್ಮ ಮಂಚದ ಕೆಳಗಿದ್ದ ಒಂದೊಂದೇ ವಸ್ತು ಹೊರತೆಗೆಯತೊಡಗಿದ್ದೆ. ಹಳೆಯ ಕ್ಯಾಮೆರ ಬ್ಯಾಗು, ಹಳೆಯ ಗೋಣಿ ಚೀಲ, ನನ್ನ ಒಂದಷ್ಟು ಪೇಪರ್ ಬ್ಯಾಗುಗಳು ಅದರೊಳಗೆ ಬೇಡದ ಹಳೆಯ ಪುಸ್ತಕಗಳು, ನಾನು ವ್ಯಾಯಾಮ ಮಾಡಲು ಇಟ್ಟುಕೊಂಡಿದ್ದ ಕಬ್ಬಿಣದ ಡಂಬಲ್ಸುಗಳು, ಡಿಪ್ಸುಗಳು, ಊರಿಂದ ತಂದ ಸುಲಿದ ತೆಂಗಿನ ಕಾಯಿಗಳು, ನಾವು ತೂಕ ನೋಡಿಕೊಳ್ಳಲು ಇಟ್ಟುಕೊಂಡಿರುವ ತೂಕದ ಯಂತ್ರ, ಹಳೆಯ ನೀರಿನ ಪೈಪು, ಮಂಚದ ಪಕ್ಕದಲ್ಲೇ ನೀರು ಕಾಯಿಸುವ ಹಳೆಯ ವಿದ್ಯುತ್ ಬಾಯ್ಲರ್, ಅದರ ಮೇಲೆ ಕಾಲೊರಿಸಿಕೊಳ್ಳಲು ಬೇಕಾಗುವ ಹೊಸ ಹೊಸ ಕಾರ್ಪೆಟ್ಟುಗಳು, ಅವುಗಳ ಮೇಲೆ ನನ್ನ ಹೆಲ್ಮೆಟ್ಟು, ಅದರ ಪಕ್ಕದಲ್ಲೇ ನನ್ನ ಸಮಕ್ಕೆ ನಿಲ್ಲಿಸಿದ್ದ ಎರಡು ಹಳೆಯ ಒಂದು ಹೊಸ ಚಾಪೆಗಳು, ಅದರ ಪಕ್ಕದಲ್ಲೇ ಅದರ ತಮ್ಮನಂತೆ ನಿಂತಿದ್ದ ಊಟದ ಚಾಪೆ....ಒಂದೇ ಎರಡೇ ಎಷ್ಟು ತೆಗೆದರೂ ಮುಗಿಯದ ಈ ವಸ್ತುಗಳನ್ನು ಕಂಡು ಹೇಮಳ ಮೇಲೆ ನನಗೆ ಕೋಪ ಬಂತು. 

"ಏನಿದು ಹೇಮ, ಇದು ಇಷ್ಟೊಂದು  ಸಾಮಾನುಗಳು, ಇವನ್ನೆಲ್ಲಾ ಇಡಲು ಬೇರೆ ಜಾಗ ಇರಲಿಲ್ಲವಾ?

   ಅಯ್ಯೋ ಅದಕ್ಯಾಕೆ ನನ್ನ ಬಯ್ಯುತ್ತೀರಿ ಎಲ್ಲವನ್ನು ನಾನೇ ಇಟ್ಟಿಲ್ಲ. ನಾನು ಇಟ್ಟಿರುವುದು ಕೇವಲ ಒಂದೆರಡು ತೆಂಗಿನ ಕಾಯಿ, ಪೈಪು, ಚಾಪೆ ಕಾರ್ಪೆಟ್ಟುಗಳು. ಉಳಿದವೆಲ್ಲಾ ನಿಮ್ಮವೇ, ಕ್ಯಾಮೆರ ಬ್ಯಾಗು, ವ್ಯಾಯಾಮದ ವಸ್ತುಗಳು, ತೂಕದ ಯಂತ್ರ ಪೇಪರ್ ಬ್ಯಾಗು ಅದರೊಳಗಿನ ಪುಸ್ತಕಗಳು, ಇವುಗಳೆಲ್ಲವನ್ನು ಮೀರಿ ನೀವು ಪ್ರತಿ ರಾತ್ರಿ ಓದುತ್ತಲೇ ನಿದ್ರೆಹೋಗುವಾಗ ಕೈಯಿಂದ ಜಾರಿ ಮಂಚದ ಸಂದಿನಿಂದ ಕೆಳಗೆ ಬಿದ್ದ ಪುಸ್ತಕಗಳು ಬೇರೆ! ಎಂದು ಶಾಂತವಾಗಿ ಪ್ರತಿಕ್ರಿಯಿಸಿದಾಗ ನನ್ನ ಕೋಪ ನನಗೆ ತಿರುಮಂತ್ರವಾಗಿತ್ತು. ಹೌದಲ್ಲವಾ? ಇವೆಲ್ಲವನ್ನು ನಾನೇ ಇಟ್ಟಿದ್ದು, ಮೇಲಿಟ್ಟಿದ ಅನೇಕ ವಸ್ತುಗಳನ್ನು ಯಾವುದ್ಯಾವುದೋ ಕಾರಣಕ್ಕೆ ಕೆಳಗೆ ತೆಗೆದುಕೊಂಡು ಮತ್ತೆ ಸೋಮಾರಿತನದಿಂದ ಮೇಲಿಡಲಾಗದೆ ಮಂಚದ ಕೆಳಗೆ ತಳ್ಳಿದ್ದೆ. ಅದಕ್ಕೆ ತಕ್ಕಂತೆ ಇವಕ್ಕೆಲ್ಲ ಕಿರೀಟವಿಟ್ಟಂತೆ ರಾತ್ರಿ ನಿದ್ರೆಹೋಗುವ ಮೊದಲು ಕೈಯಿಂದ ಜಾರುವ ಪೂರ್ಣಚಂದ್ರ ತೇಜಸ್ವಿಯವರ ಪುಸ್ತಕಗಳು!    ಇಷ್ಟೆಲ್ಲಾ ಸಾಮಾನುಗಳನ್ನು ಮಂಚದ ಕೆಳಗಿನಿಂದ ಹೊರತೆಗೆದಿದ್ದಕ್ಕೆ ಕಾರಣವೇನು ಗೊತ್ತಾ? ಒಂದು ಇಲಿ ನಮ್ಮ ಮನೆಯನ್ನು ಸೇರಿಕೊಂಡಿರುವುದು! ಅದನ್ನು ಹಿಡಿಯಬೇಕೆಂದು ನಾವು ತೀರ್ಮಾನಿಸಿರುವುದು! 

    "ರೀ...ಮಂಚದ ಕೆಳಗಿನಿಂದ ನನ್ನ ಟೈಲರಿಂಗ್ ಮಿಷಿನ್ ಕೆಳಗೆ ಹೋಯ್ತು..."

   ಅವಳು ಜೋರಾಗಿ ಕೂಗಿದಾಗ ಅತ್ತ ನೋಡಿದೆ. ನನಗೇನು ಕಾಣಲಿಲ್ಲ. ಏಕೆಂದರೆ ನಾನು ಮಂಚದ ಮೇಲೆ ಕುಳಿತು, ಬಗ್ಗಿ, ತಲೆಕೆಳಗೆ ಮಲಗಿಕೊಂಡು ಎಲ್ಲಾ ಸಮಾನುಗಳನ್ನು ಎಳೆದುಹಾಕಿದ್ದೆನೇ ಹೊರತು ನೆಲದ ಮೇಲೆ ಮಾತ್ರ ಕಾಲಿಟ್ಟಿರಲಿಲ್ಲ.

ನೆಲದ ಮೇಲೆ ನಿಂತು ಅಥವ ಕುಳಿತು ಮಂಚದ ಕೆಳಗೆ ಬಗ್ಗಿ ಎಲ್ಲ ಸಾಮಾನುಗಳನ್ನು ಹೊರತೆಗೆಯುವಾಗ ಆ ಇಲಿ ನನ್ನ ಮೈ ಕೈ ಕಾಲುಗಳ ಮೇಲೆ ಹರಿದಾಡಿಬಿಟ್ಟರೆ!

   ನಾವು ಕಾಡು, ಕೆರೆ ತೊರೆ ಹಳ್ಳಗಳಲ್ಲಿ ಹಕ್ಕಿ, ಚಿಟ್ಟೆಗಳ ಫೋಟೊ ತೆಗೆಯುವಾಗ ಪಕ್ಕದಲ್ಲಿ ಹಾವುಗಳು ಹರಿದಾಡಿದರೂ ಭಯಪಡದೇ, ಸ್ವತಃ ಹಾವುಗಳಿಂದ ಮೂರು ನಾಲ್ಕು ಆಡಿ ಅಂತರದಲ್ಲಿ ನಿಂತು ಹಾವುಗಳ ಫೋಟೊ ತೆಗೆಯುವಾಗಲು ಭಯಪಡದ ನಾನು ನಮ್ಮ ಮನೆಯಲ್ಲಿ ಸೇರಿಕೊಂಡ ಇಲಿ ಅಚಾನಕ್ಕಾಗಿ ಮೈಮೇಲೆ ಹರಿದಾಡಿದರೆ ಅದ್ಯಾಕೇ ಭಯವಾಗುತ್ತದೋ ನನಗಂತೂ ಗೊತ್ತಿಲ್ಲ.  ಹಾಗೆ ನೋಡಿದರೆ ನಮಗಿಂತ ಅವಕ್ಕೆ ಜೀವ ಭಯ ಜಾಸ್ತಿ. ಅವು ತಪ್ಪಿಸಿಕೊಳ್ಳಲು ದಾರಿ ಗೊತ್ತಾಗದೇ ದಿಕ್ಕಾಪಾಲಾಗಿ ಹೀಗೆ ಓಡಿಹೋಗುತ್ತವೆ ಅಂತಲೂ ಗೊತ್ತು. ಆದ್ರೂ ಈ ರೀತಿ ಅವುಗಳನ್ನು ಮೊದಲ ಬಾರಿ ಕಂಡಾಗ, ಕಾಲುಗಳ ಮೇಲೆ ಹರಿದಾಡಿದಾಗ ಕೈಗಳ ರೋಮಗಳು ನಿಂತುಕೊಳ್ಳುವ, ಮೈ ಜುಮ್ ಎನಿಸಿ ಮೈ ಕೊಡವಿಕೊಳ್ಳುವ ಹಾಗೆ ಏಕಾಗುತ್ತದೆ?

    "ರೀ ಇಲಿ ಬೀರುವಿನ ಹಿಂಭಾಗಕ್ಕೆ ಹೋಯ್ತು."  ಮತ್ತೆ ಅವಳು ಕೂಗಿದಾಗ ನನ್ನ ಅಲೋಚನೆಯಿಂದ ಹೊರಬಂದು ಅತ್ತ ನೋಡಿದೆ. ಏನು ಕಾಣಲಿಲ್ಲ.

   "ರೀ...ಅಲ್ಲೇ ಇದೆ ಬೇಗ ಮಂಚದಿಂದ ಇಳಿದು ಬೀರುವಿನ ಕೆಳಗೆ ನೋಡ್ರಿ"....ಅಂದಾಗ ನಿದಾನವಾಗಿ ಮಂಚದಿಂದ ಇಳಿದು ನೆಲದ ಮೇಲೆ ಕಾಲಿಟ್ಟಿದ್ದೆ.

    ನನ್ನಾಕೆಯಂತೂ ನಮ್ಮ ರೂಮಿನ ಬಾಗಿಲನ್ನು ಮುಕ್ಕಾಲು ಭಾಗ ಮುಚ್ಚಿ, ಒಂದು ಹಳೆಯ ಪೇಪರ್ ಬ್ಯಾಗನ್ನು ಕಾಲು ಭಾಗದಷ್ಟೇ ಜಾಗದಲ್ಲೇ ನೆಲಕ್ಕೆ ತಗುಲಿಕೊಂಡಂತೆ ಅದರ ಬಾಯಿಯನ್ನು ತೆರೆದು ಹಿಡಿದುಕೊಂಡಿದ್ದಳು. ನಾನು ಮಂಚದ ಕೆಳಗೆ, ಬೀರು, ಟೈಲರಿಂಗ್ ಮಿಷಿನ್ ಕೆಳಗೆಲ್ಲಾ ಕಸದ ಪೊರಕೆಯಿಂದ ಗದ್ದಲ ಮಾಡಿದರೆ ಅದು ತಪ್ಪಿಸಿಕೊಳ್ಳಲು ಬಾಗಿಲ ಕಡೆಗೆ ಬಂದು ಬ್ಯಾಗಿನಲ್ಲಿ ಸಿಕ್ಕಿಹಾಕಿಕೊಳ್ಳುತ್ತದೆ ತಕ್ಷಣ ಬ್ಯಾಗನ್ನು ಮುಚ್ಚಿ ಅದನ್ನು ಬಂಧಿಸಿಬಿಡಬಹುದೆನ್ನುವುದು ಅವಳ ಪ್ಲಾನ್.

   ಬೀರುವಿನ ಕೆಳಗಿರುವ ಸಾಮಾನುಗಳ ನಡುವೆ ಕಸಪೊರಕೆಯನ್ನು ನುಗ್ಗಿಸಿ ಅಲುಗಾಡಿಸತೊಡಗಿದೆ. ಸ್ವಲ್ಪ ಹೊತ್ತಿಗೆ ಬೀರುವಿನ ಕೆಳಗಿನಿಂದ ನನ್ನ ಪುಸ್ತಕ ಮನೆಯ ಗೋಡೆಯ ಕಡೆಗೆ ಕಿರುಬೆರಳ ಗಾತ್ರ ಇಲಿಯೊಂದು ಓಡಿದ್ದು ಸ್ಪಷ್ಟವಾಗಿ ಕಾಣಿಸಿತ್ತು. ಅರೆರೆ...ಇಷ್ಟು ಸಣ್ಣ ಇಲಿಯನ್ನು ಹೊಡೆಯಲು  ಒಂದು ಕೈಯಲ್ಲಿ ಮತ್ತೊಂದು ಕೈಯಲ್ಲಿ ಕೋಲನ್ನು ಹಿಡಿದು ನಿಂತಿದ್ದೆನಲ್ಲ ಅಂತ ಆ ಕ್ಷಣದಲ್ಲಿ ಅನ್ನಿಸಿತು. "ಹೇಮ ಇದು ಇಲಿ ತೀರ ಸಣ್ಣದು ಕಣೇ"..ಅಂದವನೇ ಆ ಜಾಗದಲ್ಲಿ ಇಣುಕಿ ನೋಡಲು ಪ್ರಯತ್ನಿಸಿದೆ. ಸಾಧ್ಯವಾಗಲಿಲ್ಲ. ಏಕೆಂದರೆ ಗೋಡೆಗೂ ನನ್ನ ಐನೂರರಷ್ಟಿರುವ ಪುಸ್ತಕಗಳ ಮರದ ಅಲಮೇರ ಅರ್ಧಾತ್ ನನ್ನ ಪುಸ್ತಕ ಮನೆಗೂ[ಅಂಕೇಗೌಡರ ಪುಸ್ತಕ ಮನೆಗೆ ಹೋಗಿ ಬಂದಮೇಲೆ ನನ್ನ ಪುಟ್ಟ ಪುಸ್ತಕಗಳ ಗ್ರಂಥಾಲಯಕ್ಕೆ ಪುಸ್ತಕ ಮನೆ ಎಂದೇ ಹೆಸರಿಟ್ಟಿಕೊಂಡಿದ್ದೇನೆ]ನಡುವೆ ಕೇವಲ ಅರ್ಧ ಇಂಚು ಜಾಗ ಮಾತ್ರವಿದ್ದು ಬೆಳಕಿಲ್ಲದ ಕಾರಣ ಅದರೊಳಗೆ ಆಡಗಿಕೊಂಡ ಇಲಿ ಕಾಣಿಸಲಿಲ್ಲ. ಕಸದ ಪೊರಕೆ ಅದರೊಳಗೆ ಹೋಗುವುದಿಲ್ಲ. ಕೋಲಂತೂ ಸಾಧ್ಯವೇ ಇಲ್ಲ. ಈಗೇನು ಮಾಡುವುದು? ಯೋಚನೆಯಲ್ಲಿದ್ದಾಗಲೇ ಮನೆಯ ಮೂಲೆಯಲ್ಲಿದ್ದ ತೆಂಗಿನ ಕಡ್ಡಿಯ ಕಸದ ಪೊರಕೆಯಿಂದ ಎರಡು ಕಡ್ದಿಗಳನ್ನು ಎಳೆದುಕೊಟ್ಟಳು.

  "ಡಾರ್ಲಿಂಗ್ ಇದರಿಂದ ಆ ಇಲಿಯನ್ನು ಚುಚ್ಚಲು ಅಥವ ಸಾಯಿಸಲು ಸಾಧ್ಯವೇ? ಬೇರೆ ಯಾವುದಾದರೂ ಕಬ್ಬಿಣದ ಕಂಬಿ ಇದ್ದರೆ ಕೊಡು" ಅಂದೆ.

   "ಹೂ ಕಣ್ರಿ, ನಾನು ಈಗಲೇ ಅದನ್ನು ಸರಿಯಾಗಿ ನೋಡಿದ್ದು, ನಮ್ಮ ಮನೆಯಲ್ಲಿ ದೊಡ್ಡ ಇಲಿ ಸೇರಿಕೊಂಡುಬಿಟ್ಟಿದೆ ಅಂತ ದಿಗಿಲಾಗಿತ್ತು. ಈಗ ಬೀರುವಿನ ಕೆಳಗಿನಿಂದ ಪುಸ್ತಕದ ಬೀರುವಿನ ಕಡೆಗೆ ಹೋಯ್ತಲ್ಲ...ಅದು ಎಷ್ಟು ಸಣ್ಣದು ಅಂತ ಗೊತ್ತಾಯ್ತು. ನೀವೆಲ್ಲಿ ಅದನ್ನು ಚುಚ್ಚಿ ಅಥವ ಪೊರಕೆಯಲ್ಲಿ ಹೊಡೆದು ಸಾಯಿಸಿಬಿಡುತ್ತೀರೋ ಅಂತ ಭಯವಾಯ್ತು. ಅದಕ್ಕೆ ಈ ತೆಂಗಿನ ಕಡ್ಡಿಗಳನ್ನು ಕೊಟ್ಟಿದ್ದು, ಇದರಿಂದ ಅಲುಗಾಡಿಸಿ, ಅದು ಹೊರಗೆ ಬರುತ್ತದೆ. ಅದನ್ನು ಬ್ಯಾಗಿನಲ್ಲಿ ಹಿಡಿದುಕೊಂಡು ಹೋಗಿ ದೂರ ಬಿಟ್ಟುಬಿಡೋಣ"  ಅಂದಳು.
 
    "ಹೇಮ ನಿನಗೆ ಗೊತ್ತಾಗುವುದಿಲ್ಲ. ಇಲಿ ಸಣ್ಣದಾಗಲಿ ಅಥವ ದೊಡ್ಡದಾಗಲಿ ಸಾಯಿಸುವುದೇ ಒಳ್ಳೆಯದು" ಅಂದು ನಾನು ಬೇರೇನಾದ್ರು ಸಿಗುತ್ತದೋ ಅಂತ ಹುಡುಕತೊಡಗಿದೆ. 

"ರೀ..ಪ್ಲೀಸ್ ಬೇಡ ಕಣ್ರಿ..ನೋಡಿ ಇವತ್ತು ಸಂಕಷ್ಟಿ. ಅದರಲ್ಲೂ ವರ್ಷಕ್ಕೊಂದೇ ದಿನ ಮಂಗಳವಾರ ಬರುವ ಸಂಕಷ್ಟಿ ತುಂಬಾ ಶ್ರೇಷ್ಟ. ಅದಕ್ಕಾಗಿ ಬೆಳಿಗ್ಗಿನಿಂದ ಉಪವಾಸವಿದ್ದು ಈಗ ತಾನೆ ಗಣೇಶ ಗುಡಿಗೆ ಹೋಗಿಬಂದಿದ್ದೇನೆ. ಗಣೇಶನನ್ನು ಪೂಜಿಸುವವರು ಇಲಿಯನ್ನು ಸಾಯಿಸಬಾರದು. ಅದರಲ್ಲೂ ಇವತ್ತು ಸಾಯಿಸಲೇಬಾರದು".

    ಓಹೋ ಈ ಇಲಿಯನ್ನು ಸಾಯಿಸಬಾರದೆನ್ನುವ ವಿಚಾರದ ಹಿಂದೆ ಅಡಗಿರುವ ರಹಸ್ಯ, ಅದನ್ನು ಉಳಿಸಿಕೊಳ್ಳಲು ತಿಂಗಳಿಗೊಮ್ಮೆ ಬರುವ ಸಂಕಷ್ಟಿ, ಅದರಲ್ಲೂ ವರ್ಷಕೊಮ್ಮೆ ಮಾತ್ರ ಬರುವ ಮಂಗಳವಾರದ ಶ್ರೇಷ್ಠ ಸಂಕಷ್ಟಿ, ಗಣೇಶನ ಇನ್ಪ್ಲೂಯನ್ಸು, ಇತ್ಯಾದಿಗಳಿಂದಾಗಿ ನಾನು ಒಪ್ಪಲೇಬೇಕಾಯ್ತು.
ಭಕ್ತಿ, ಭಾವಗಳನ್ನೊಳಗೊಂಡ ಅವಳ ವಿಚಾರದ ಸೂಕ್ಷ್ಮತೆಯನ್ನು ಗಮನಿಸಿ ಆ ಇಲಿಯನ್ನು ಉಳಿಸಿಬಿಡೋಣವೆಂದುಕೊಂಡರೂ ನಮಗೆ ಗೊತ್ತಾಗದ ಹಾಗೆ ನನ್ನ ಪುಸ್ತಕ ಮನೆಯೊಳಗೆ ಸೇರಿಕೊಂಡುಬಿಟ್ಟರೆ..ಇಲಿಗಳಿಗೆ ಪುಸ್ತಕಗಳು ಮತ್ತು ಪೇಪರುಗಳೆಂದರೆ ಪ್ರಿಯವಂತೆ. ತಿಂದು ಹೊಟ್ಟೆ ತುಂಬಿಸಿಕೊಳ್ಳಲಿಕ್ಕಲ್ಲ ಹಲ್ಲಿನಲ್ಲಿ ಕಡಿದು ಕಡಿದು ಹರಿದು ಹಾಕಲಿಕ್ಕೆ. ಈ ಆಧುನಿಕ ಕಾಲದಲ್ಲಿ ಕೆಲವರು ಕೆಲಸದ ಒತ್ತಡದಿಂದಾಗಿ ತಿನ್ನುವ ಆಹಾರವನ್ನು ಹಲ್ಲಿನಿಂದ ಚೆನ್ನಾಗಿ ಕಚ್ಚಿ ಅಗಿದು ಅದರ ಸ್ವಾದವನ್ನು ಸವಿಯಲು ಮೈಮರೆತು ಸಮಯವಿಲ್ಲವೆಂದು ಕೇವಲ ನುಂಗುವಂತ ಕುಡಿಯುವಂತ ಆಹಾರವನ್ನು ಸೇವಿಸುವಷ್ಟು ಸೋಮಾರಿಗಳಾಗಿರುವಂತೆ ಈ ಇಲಿಗಳೂ ಸೋಮಾರಿಗಳಾಗಿಬಿಟ್ಟರೆ ಅವುಗಳ ಹಲ್ಲುಗಳು ಅದರ ದೇಹಗಾತ್ರದ ಮೂರರಷ್ಟು ಬೆಳೆದುಬಿಡುತ್ತವಂತೆ. ಅದಕ್ಕೆ ಅವು ಏನನ್ನಾದರೂ ಕಡಿಯುತ್ತಲೇ ಇರಬೇಕು. ನಿರಂತರವಾಗಿ ಏನನ್ನಾದರೂ ಕಡಿಯುತ್ತಿರುವುದರ ಮೂಲಕ ಬೆಳೆಯುತ್ತಿರುವ ಹಲ್ಲುಗಳನ್ನು ಮೊಂಡುಮಾಡಿಕೊಳ್ಳುತ್ತಿರಬೇಕು ಎನ್ನುವುದು ಇಲಿಗಳಿಗೆ ದೇವರು ಕೊಟ್ಟ ವರವೋ ಅಥವ ಶಾಪವೇ ನನಗೆ ಗೊತ್ತಿಲ್ಲ. ಇದನ್ನು ಪ್ರಪಂಚದಾದ್ಯಂತ ಎಲ್ಲಾ ಕಡೆಯಲ್ಲಿರುವ ಇಲಿಗಳು ಪುಸ್ತಕಗಳು ಸೇರ್‍ಇದಂತೆ ಎಲ್ಲವನ್ನು ಕಡಿಯುವ ಪ್ರಕ್ರಿಯೆಯನ್ನು ಸಂತೋಷದಿಂದ ಮಾಡುವುದಕ್ಕೆ ನನ್ನ ಅಭ್ಯಂತವೇನು ಇಲ್ಲ. ಆದ್ರೆ ನನ್ನ ಪುಸ್ತಕ ಮನೆಯೊಳಗೆ ಇರುವ ಪೂರ್ಣಚಂದ್ರ ತೇಜಸ್ವಿ, ರವಿಬೆಳಗೆರೆ, ಕುಂ.ವಿ. ವಸುದೇಂದ್ರ, ಕುವೆಂಪು, ಕಾರಂತ, ಬೈರಪ್ಪ, ನಮ್ಮ ಬ್ಲಾಗರುಗಳನ್ನೊಳಗೊಂಡ  ಐದುನೂರಕ್ಕೂ ಹೆಚ್ಚು ಪುಸ್ತಕಗಳನ್ನು ಕಡಿಯಲು ಪ್ರಾರಂಭಿಸಿದರೆ? ಮುಂದೆ ಸಜ್ಜೆಗಳ ಮೇಲಿಟ್ಟಿರುವ ಸಾವಿರಕ್ಕೂ ಮೇಲ್ಪಟ್ಟ ನನ್ನ ವೆಂಡರ್ ಕಣ್ಣು, ಗುಬ್ಬಿ ಎಂಜಲು, ಅಜಾದರ ಜಲನಯನ ಪುಸ್ತಕಗಳನ್ನು ಕಡಿಯಲು ಪ್ರಾರಂಭಿಸಿದರೆ ಏನು ಮಾಡುವುದು?

   ಮುಂದೆ ಇದೇ ಇಲಿಗೆ ಪುಸ್ತಕಗಳ ರುಚಿ ಬೇಸರವಾಗಿ ನನ್ನ ಬೀರುವಿನೊಳಗೆ ಸೇರಿಕೊಂಡು ಬಿಟ್ಟರೆ ಅದರಲ್ಲಿರುವ ನನ್ನ ದುಬಾರಿ ಕ್ಯಾಮೆರ ಮತ್ತು ಇತರ ಉಪಕರಣಗಳ ಗತಿ? ನನ್ನ ಕಂಪ್ಯೂಟರ್ ರೂಮಿನೊಳಗೆ  ಸೇರಿಕೊಂಡು ವಿಧ್ಯುತ್ ತಂತಿಗಳನ್ನು ಕಡಿದು ತುಂಡರಿಸಲು ಪ್ರಾರಂಭಿಸಿದರೆ, ಅದರ ಪಕ್ಕದಲ್ಲಿನ ಮರದ ಬೀರುವಿನಲ್ಲಿ ಸ್ಪರ್ಧೆಗೆ ಕಳಿಸಲು ಪ್ರಿಂಟ್ ಮಾಡಿ ಇಟ್ಟಿರುವ ಫೋಟೊಗಳ ಕಡೆಗೆ ಬಂದು ಬಿಟ್ಟರೆ?   ಚಿಟ್ಟೆ, ದುಂಬಿ, ಇನ್ನಿತರ ಕೀಟಗಳಿರುವ ಫೋಟೊಗಳನ್ನು ನೋಡಿ ಈ ಇಲಿ ತನಗೆ ಮೃಷ್ಟಾನ್ನ ಬೋಜನವೆಂದುಕೊಂಡು ಸಂಭ್ರಮದಿಂದ ಕಡಿದು ಅದರ ರುಚಿಯನ್ನು ನೋಡಿ ತತ್! ಇದು ಕೂಡ ಒಂಥರ ಗಟ್ಟಿ ಪೇಪರ್ ಅಷ್ಟೇ ಎನ್ನುವ ಕೋಪದಿಂದ ಎಲ್ಲಾ ಫೋಟೊಗಳನ್ನು ಕಡಿದು ಚಿಂದಿ ಚಿಂದಿ ಮಾಡಿ ಪಕ್ಕದಲ್ಲೇ ಇರುವ ನನ್ನ ಫೋಟೊಗ್ರಫಿಯಲ್ಲಿ ಗಳಿಸಿದ ಸರ್ಟಿಫಿಕೇಟುಗಳನ್ನೆಲ್ಲಾ ತುಂಡು ತುಂಡು ಮಾಡಲು ಪ್ರಾರಂಭಿಸಿ ಇದೇ ಕಾಯಕಕ್ಕಾಗಿ ನನ್ನ ಮನೆಯಲ್ಲಿಯೇ ಖಾಯಂ ಟಿಕಾಣಿ ಹೂಡಿಬಿಟ್ಟರೆ ಏನಪ್ಪ ಗತಿ?

   ಇಲ್ಲ ಇದರಿಂದ ಮುಂದಿನ ಭವಿಷ್ಯದಲ್ಲಿ ಘನ ಘೋರ ಅಪಾಯವಿದೆ ಇದನ್ನು ಸಾಯಿಸಿಬಿಟ್ಟರೆ ಒಳ್ಳೆಯದೆಂದು ತೀರ್ಮಾನಿಸಿ ಅದನ್ನು ಚುಚ್ಚಲು ಒಂದು ಕಂಬಿಯನ್ನು ಹುಡುಕತೊಡಗಿದೆ. ನನ್ನ ದುರಾದೃಷ್ಟಕ್ಕೋ ಅಥವ ಅದರ ಅದೃಷ್ಟಕ್ಕೋ ಅದು ಆಡಗಿರುವ ಅರ್ಧ ಇಂಚಿನೊಳಗೆ ಹೋಗುವ ಸಣ್ಣ ಕಂಬಿ ಸಿಗಲಿಲ್ಲ. ಈಗೇನು ಮಾಡುವುದು ಎಂದು ಚಿಂತಿಸುತ್ತಿರುವಾಗಲೇ ಅದಿನ್ನು ಪುಟ್ಟ ಮರಿ ಇಲಿ, ಅದಕ್ಕಿರುವುದು ಈಗ ಪುಟ್ಟ ಮಕ್ಕಳಿಗಿರುವಂತ ಹಾಲು ಹಲ್ಲು ಮಾತ್ರ. ಅದರಿಂದಾಗಿ ನನ್ನ ಪುಸ್ತಕ ಇತ್ಯಾದಿಗಳನ್ನು ಕಡಿದು ಹಾಕಲು ತುಂಡು ಮಾಡಲು ಸಾಧ್ಯವಿಲ್ಲ. ಹಾಗಾಗಿ ಸಾಯಿಸುವುದು ಬೇಡವೆಂದು ತೀರ್ಮಾನಿಸಿದೆ. ನಮ್ಮಿಬ್ಬರ ತೀರ್ಮಾನವೂ ಸಾಯಿಸಬಾರದೆಂದು ಅಯ್ತು.  ಹಾಗಂತ ಅದನ್ನು ಮುದ್ದು ಮಗುವಿನಂತೆ ಮನೆಯ ತುಂಬಾ ಓಡಾಡಿಕೊಂಡಿರು ಅಂತ ಬಿಟ್ಟಿರಲು ಸಾಧ್ಯವೇ? ಹಾಗೆ ಬೇಕಾದರೆ ಅದು ಬೇರೆಯವರ ಮನೆಯಲ್ಲಿ ಆ ರೀತಿ ಸಂತೋಷದಿಂದ ಇರಲಿ ಎಂದುಕೊಂಡು ಕಿಟಕಿ ಬಾಗಿಲನ್ನು ತೆಗೆದು ಅದರ ಮೂಲಕ ಹೋಗಿಬಿಡಲಿ ಎಂದು ಕೆಳಗಿನಿಂದ ತೆಂಗಿನ ಕಡ್ಡಿಯನ್ನು ಅ ಅರ್ಧ ಇಂಚಿನ ಸಂಧಿಯಲ್ಲಿ ಹಾಕಿದೆ. ಕಣ್ಣಿಗೆ ಏನು ಕಾಣುತ್ತಿರಲಿಲ್ಲವಾದ್ದರಿಂದ  "ಹೇಮ ಅದು ನನಗೆ ಕಾಣಿಸುತ್ತಿಲ್ಲ ನಾನು ಅಂದಾಜಿನಲ್ಲಿ ಆ ಸಂದಿಯಲ್ಲಿ ಈ ಕಡ್ದಿಯನ್ನು ಚುಚ್ಚುತ್ತೇನೆ. ನನ್ನ ಗದ್ದಲಕ್ಕೆ ಅದು ಬೇಕಾದರೆ ಕಿಟಕಿಯಿಂದ ಹೊರಗೆ ಹೋಗಿಬಿಡಲಿ ಹಾಗೆ ಹೋಗದೆ ಮತ್ತೆ ಬಾಗಿಲ ಮೂಲಕ ಹೋಗುವುದಾದರೆ ಅದನ್ನು ಬ್ಯಾಗ್‍ನೊಳಗೆ ಹಿಡಿದುಬಿಡು ಎಂದು ಅವಳಿಗೆ ಸೂಚನೆ ಕೊಟ್ಟು ಅಂದಾಜಿನ ಮೇಲೆ ಅದರಲ್ಲಿ ಕಡ್ಡಿ ಆಡಿಸತೊಡಗಿದೆ.

   ಸುಮಾರು ಹೊತ್ತಾದರೂ ಸಂದುವಿನಲ್ಲಿ ಏನು ಶಬ್ದವಾಗಲಿಲ್ಲ. ಇತ್ತ ನಮ್ಮ ಕಣ್ಣೆದುರೇ ಸಾಗಿ ಬಾಗಿಲ ಮೂಲಕ ಬ್ಯಾಗಿನೊಳಗೂ ಸೆರೆಯಾಗಲಿಲ್ಲ ಅತ್ತ ಕಿಟಕಿಯ ಮೂಲಕ ಹೊರಗಡೆ ಹೋಗಿದ್ದು ನಮಗೆ ಕಾಣಿಸಲಿಲ್ಲ. ಅರ್ಧ ಗಂಟೆ ಅದರ ಹುಡುಕಾಟದಲ್ಲಿ ತೊಡಗಿದರೂ ನಮ್ಮ ಕಣ್ಣಿಗೆ ಕಾಣಿಸಲಿಲ್ಲ. ಆ ಇಲಿ ನಮ್ಮಿಬ್ಬರ ಅಲೋಚನೆಗಳ ಅನುಕೂಲತೆಯನ್ನು ಪಡೆದುಕೊಂಡು ನಮಗಿಬ್ಬರಿಗೂ ಚಳ್ಳೆಹಣ್ಣು ತಿನ್ನಿಸಿ ತಪ್ಪಿಸಿಕೊಂಡಿತ್ತು.

     ಇಷ್ಟಕ್ಕೂ ಈ ಪುಟ್ಟ ಇಲಿ ನಮ್ಮ ಮನೆಗೆ ಹೇಗೆ ಬಂತು? ನಾವು ಇರುವ ಜಾಗದಲ್ಲಿ ದೊಡ್ಡದಾಗ ಚರಂಡಿ, ಮೋರಿಗಳಿರಲಿ ಚಿಕ್ಕ ಚಿಕ್ಕವೂ ಕೂಡ ಇಲ್ಲ. ಮತ್ತೆ ಇತ್ತೀಚೆಗೆ ನಮ್ಮ ಸಣ್ಣ ಪಾದಚಾರಿ ಮಾರ್ಗಗಳಿಗೆಲ್ಲಾ ಮಾರ್ಬಲ್ ಕಲ್ಲುಗಳನ್ನೇ ಹಾಕಿ ನಡುವೆ ಚೆನ್ನಾಗಿ ಸಿಮೆಂಟ್ ಪ್ಲಾಸ್ಟರಿಂಗ್ ಮಾಡಿರುವುದರಿಂದ ಜಿರಲೆ, ಇಲಿ ಹೆಗ್ಗಣಗಳು ನುಸುಳಲು ಸಾಧ್ಯವಾಗದಂತೆ ಮಾಡಿಬಿಟ್ಟಿದ್ದಾರೆ. ಇದರಿಂದಾಗಿ ವಾಸಮಾಡಲು ನಮ್ಮ ರಸ್ತೆಯಲ್ಲಿ ಜಾಗವೇ ಇಲ್ಲದ್ದರಿಂದ ಅವು ವಿಧಿಯಿಲ್ಲದೇ ಬೇರೆ ರಸ್ತೆಗೆ ಹೋಗಲೇಬೇಕಾದ ಪರಿಸ್ಥಿತಿಯಿದೆ. ದೇವಯ್ಯ ಪಾರ್ಕ್ ರಸ್ತೆಯಲ್ಲಿನ ಮೆಟ್ರೋ ರೈಲು ಸೇತುವೆ ಕೆಲಸದಿಂದಾಗಿ ಎಲ್ಲಾ ದ್ವಿಚಕ್ರ ಮತ್ತು ಕಾರುಗಳು ನಮ್ಮ ರಸ್ತೆಯಲ್ಲೇ ಬೆಳಿಗಿನಿಂದ ರಾತ್ರಿಯವರೆಗೆ ಪರ್ಯಾಯ ರಸ್ತೆಯಾಗಿ ಬಳಸಿಕೊಳ್ಳುತ್ತಿರುವುದರಿಂದ ಅಪರೂಪಕ್ಕೆ ಕಾಣುವ ಜಿರಲೆಗಳು, ಇಲಿ ಹೆಗ್ಗಣಗಳಿಗೆ ಅಪಘಾತದಿಂದ ಸಾವು ಖಚಿತ. ಹಾಗಾದರೆ ಮತ್ತೆಲ್ಲಿಂದ ಇದು ನಮ್ಮ ಮನೆಗೆ ಬಂತು? ನಿದಾನವಾಗಿ ಯೋಚಿಸಿದಾಗ ಅದರ ಲಿಂಕ್ ನಮ್ಮ ಮುಂಜಾನೆ ದಿನಪತ್ರಿಕೆ ವಿತರಣೆಯ ಸ್ಥಳಕ್ಕೆ ಕನೆಕ್ಟ್ ಆಗಿತ್ತು.
ಒಂದು ವಾರದ ಹಿಂದೆ ನನ್ನ ಪೇಪರ್ ಹಾಕುವ ಹುಡುಗರು ನಾವು ನಿತ್ಯ ಕುಳಿತುಕೊಳ್ಳುವ ಜಾಗವನ್ನು ಮತ್ತೊಂದು ಕಡೆಗೆ ಬದಲಾಯಿಸಿದ್ದರು. ನಸುಕಿನ ಐದುಗಂಟೆಯ ಹೊತ್ತಿಗೆ ಈ ಮೊದಲು ಕುಳಿತುಕೊಳ್ಳುತ್ತಿದ್ದ ಫುಟ್‍ಪಾತ್‍ನಲ್ಲಿ ರಸ್ತೆಯ ಬದಿಯ ವಿಧ್ಯುತ್ ದೀಪದ ಬೆಳಕು ರಾತ್ರಿಯೆಲ್ಲಾ ಇದ್ದರೂ ಸರಿಯಾಗಿ ನಸುಕಿನ ಐದುವರೆಗೆ ಆಫ್ ಆಗಿಬಿಡುತ್ತಿತ್ತು. ಮುಖ್ಯ ಪೇಪರುಗಳ ನಡುವೆ ಸಪ್ಲಿಮೆಂಟರಿಗಳು ಸೇರಿಸುವುದು, ಆನಂತರ ಅವುಗಳನ್ನು ಬೀಟ್ ವಿಭಾಗ ಮಾಡಿ ಜೋಡಿಸುವುದು ಇದಕ್ಕೆಲ್ಲ ಬೆಳಕಿಲ್ಲದಂತಾಗಿ ತೊಂದರೆಯಾಗಿಬಿಡುತ್ತಿತ್ತು. ಹೀಗೆ ಎಣಿಸಿಕೊಡುವ ಪ್ರಕ್ರಿಯೆಯಲ್ಲಿ ಕನ್ನಡಪ್ರಭ ಬದಲಿಗೆ ಉದಯವಾಣಿ, ವಿಜಯವಾಣಿಯ ಬದಲಿಗೆ ವಿಜಯಕರ್ನಾಟಕ ಹೀಗೆ ಬದಲಾಗಿ ಮನೆಗಳಿಗೆ ಸರಿಯಾದ ಪೇಪರುಗಳು ತಲುಪದೆ ತೊಂದರೆಯಾಗುತ್ತಿತ್ತು. ಇದಕ್ಕೆಲ್ಲಾ ಪರಿಹಾರವೆಂದು ನಮ್ಮ ಹುಡುಗರು ಶೇಷಾದ್ರಿಪುರಂ ಸ್ವಸ್ಥಿಕ್ ವೃತ್ತದ ಬಳಿ ಶೇಷಾದ್ರಿಪುರಂ ಕಾಲೇಜ್ ಕಡೆಗೆ ಹೋಗುವ ಎಡಭಾಗದ ಮೂಲೆಗೆ ಜಾಗ ಬದಲಾಗಿಸಿದರು. ಅಲ್ಲಿ ಮುಖ್ಯವಾಗಿ ಸ್ವಸ್ಥಿಕ್ ವೃತ್ತದ ನಡುವೆ ನಿಲ್ಲಿಸಿದ್ದ ಎಂಬತ್ತು ಅಡಿ ಎತ್ತರದ ಕಂಬದಲ್ಲಿರುವ ವಿದ್ಯುತ್ ದೀಪಗಳಿಂದ ಸುತ್ತಲು ವಿಶಾಲವಾಗಿ ಬೆಳಕು ಬೆಳಿಗ್ಗೆ ಆರುವರೆಯವರೆಗೂ ಇರುತ್ತಿತ್ತು. ಬೆಳಕಿನ ಅನುಕೂಲ ಮತ್ತು ಹೊಸ ಜಾಗದಲ್ಲಿ ಪತ್ರಿಕೆಗಳ ಒಳಗೆ ಸೇರಿಸುವ ಪಾಂಪ್ಲೆಟ್ಸುಗಳು ಹೆಚ್ಚಾಗಿ ಬರುವ ಕಾರಣ ಅವರ ನಿತ್ಯದ ಆಧಾಯವೂ ಹೆಚ್ಚಾಗಿದ್ದಿದ್ದೂ ಮತ್ತೊಂದು ಕಾರಣವಾಗಿತ್ತು. ನಾವು ಕುಳಿತುಕೊಳ್ಳುವ ಪಕ್ಕದಲ್ಲೇ ಪೋಲಿಸ್ ಚೌಕಿಯೂ ಇದ್ದು ಅದರೊಳಗೆ ಸೇರಿ ಫೋಲಿಸರಂತೆ ನಟಿಸುವುದು, ಅವರನ್ನು ಅಣಕಿಸುವುದು ಇತ್ಯಾದಿ ಕಾರಣಗಳಿಗಾಗಿ ಅವರಿಗೆಲ್ಲಾ ಹೊಸ ಜಾಗ ಇಷ್ಟವಾಗಿತ್ತು. ಇಷ್ಟೆಲ್ಲಾ ಇಷ್ಟದ ನಡುವೆ ಕಷ್ಟವೂ ಇರಲೇಬೇಕಲ್ಲವೇ...ನಾವು ಕುಳಿತುಕೊಂಡು ಪೇಪರ್ ಜೋಡಿಸುವ ಈ ಸ್ಥಳದ ಹಿಂಭಾಗದಲ್ಲಿ ಒಂದು  ಹಳೆಯ ಕಾಂಪೌಂಡ್ ಅದರ ಒಳಗೆ ಒಂದಷ್ಟು ಗಿಡಕಂಟಿಗಳು ಆಡ್ಡದಿಡ್ಡಿಯಾಗಿ ಬೆಳೆದಿದ್ದವು.  ಅದರೊಳಗೆ ಒಂದು ಹಳೆಯ ಮನೆಯಿತ್ತು. ಆದ್ರೆ ಅದರಲ್ಲಿ ಯಾರು ವಾಸವಿರಲಿಲ್ಲ. ಬದಲಾಯಿಸಿದ ಎರಡೇ ದಿನಕ್ಕೆ ಕಾಂಪೌಂಡ್ ಕೆಳಗಿನ ಸಣ್ಣ ಸಣ್ಣ ತೂತುಗಳಿಂದ ಇಲಿಗಳು  ನಮ್ಮ ಪೇಪರುಗಳ ಮೇಲೆ ಓಡಿಹೋಗುವುದು, ಇತ್ಯಾದಿಗಳು ನಡೆದಿತ್ತು. ಅದನ್ನು ನೋಡಿ ನಮ್ಮ ಹುಡುಗರು ಸ್ವಲ್ಪ ಪಕ್ಕಕ್ಕೆ ಬದಲಾಯಿಸಿಕೊಂಡರು.  ಆದರೂ ಅಪರೂಪಕ್ಕೆ ಅಲ್ಲೊಂದು ಇಲ್ಲೊಂದು ಇಲಿ ನಮ್ಮ ಮುಂದೆಯೇ ಕಾಂಪೌಂಡ್ ತೂತುಗಳಿಂದ ಹೊರಬರುವುದು ಮತ್ತೆ ಒಳಹೋಗುವುದು, ಕಾಂಪೌಂಡಿಗೆ ಹೊಂದಿಕೊಂಡಂತೆ ಇರುವ "ಶೇಷಾದ್ರಿಪುರಂ ರಸ್ತೆ" ಕಾಂಕ್ರೀಟ್ ಪಲಕದ ಮೇಲೆ ಕುಳಿತು  ಕೆಳಗೆ ಇಣುಕುವುದು ಮತ್ತೆ ಇಳಿಯುವುದು, ಅದರ ಪಕ್ಕ ಇಟ್ಟಿದ್ದ ನಮ್ಮ ಪೇಪರ್ ಬ್ಯಾಗುಗಳ ಪಕ್ಕದಲ್ಲೇ ಓಡಿಹೋಗುವುದು ನಮಗೆಲ್ಲಾ ಕಾಣುತ್ತಿತ್ತು.  ಬಹುಶಃ ಕಳೆದ ಭಾನುವಾರ ಒಂದು ಪುಟ್ಟ ಇಲಿ ಮರಿ ಹೀಗೆ ನನ್ನ ಪೇಪರ್ ಬ್ಯಾಗಿನೊಳಗೆ ಸೇರ್‍ಇಕೊಂಡಿರಬಹುದು. ಏಕೆಂದರೆ ಮರುದಿನ ನಸುಕಿನ ನಾಲ್ಕುವರೆಗೆ ನಾನು ಎದ್ದು ಬಚ್ಚಲು ಮನೆ ಕಡೆಗೆ ಹೋಗುವಾಗ ಅನಿರೀಕ್ಷಿತವಾಗಿ ಕಸದ ಡಬ್ಬ ಇಟ್ಟಿದ್ದ ಬಾಗಿಲ ಕಡೆಯಿಂದ ಟಿವಿ ಸ್ಯಾಂಡ್ ಕಡೆಗೆ ಕಪ್ಪಗಿನ ವಸ್ತುವೊಂದು ವೇಗವಾಗಿ ಓಡಿದ್ದು ಕಾಣಿಸಿತ್ತು.  ಇನ್ನೂ ನಿದ್ರೆಯ ಮಂಪರಿನಿಂದಾಗಿ ಆಗ ಓಡಿದ್ದು ಇಲಿ ಅಂತ ಅನ್ನಿಸಿರಲಿಲ್ಲ.


ಈಗ ಇದೆಲ್ಲ ವಿದ್ಯಾಮಾನಗಳನ್ನು ಗಮನಿಸಿದಾಗ ಖಚಿತವಾಗಿ ನಮ್ಮ ದಿನಪತ್ರಿಕೆ ವಿತರಣೆಯ ಸ್ಥಳದಲ್ಲಿ ನನ್ನ ಬ್ಯಾಗಿನೊಳಗೆ ಬಂದ ಪುಟ್ಟ ಇಲಿಯೇ ನಮ್ಮ ಮನೆಯೊಳಗೆ ಸೇರಿಕೊಂಡು ನಮಗಿಬ್ಬರಿಗೂ ಇಷ್ಟೊಂದು ಕಾಟ ಕೊಡುತ್ತಿದೆ!   

    ಮರುದಿನ ಬೆಳಿಗ್ಗೆ ಒಂಬತ್ತು ಗಂಟೆಯ ಹೊತ್ತಿಗೆ ನಮ್ಮ ಹಾಲ್‍ನಲ್ಲಿ ಕಸದ ಡಬ್ಬವನ್ನಿಡುವ ಈಶಾನ್ಯ ಮೂಲೆಯಿಂದ ದೇವಮೂಲೆಯಾದ ದಿವಾನ ಕೆಳಗೆ ಓಡಿದ್ದನ್ನು ಹೇಮ ನೋಡಿ ನನ್ನನ್ನು ಕರೆದಳು.  ದಿವಾನವನ್ನು ಸರಿಸಿದರೆ ಟಿವಿ ಸ್ಟ್ಯಾಂಡ್ ಇರುವ ಅಗ್ನಿ ಮೂಲೆಯತ್ತ ಹೋಗುವುದು, ಅತ್ತ ಹುಡುಕಿದರೆ ಮತ್ತೆ ರೂಮಿಗೆ ಹೋಗುವುದು  ಹೀಗೆ ಅದು ನಮ್ಮನ್ನು ಆಟವಾಡಿಸುತ್ತಿದೆ! ಅದು ಓಡಾಡುವಾಗ ನಮ್ಮ ಕೈಯಲ್ಲಿ ಅದನ್ನು ಹಿಡಿಯಲು ಏನು ಇರಲಿಲ್ಲ. ಎಲ್ಲವನ್ನು ಹೊಂದಿಸಿಕೊಳ್ಳುವ ಹೊತ್ತಿಗೆ ಅದು ಮತ್ತೆಲ್ಲೋ ನಮಗೆ ಗೊತ್ತಾಗದ ಜಾಗಕ್ಕೆ ಹೋಗಿಬಿಡುವುದು, ಹೀಗೆ ಅವತ್ತು ಸಂಜೆ ಮತ್ತೆ ಅಡುಗೆ ಮನೆಯಲ್ಲಿ ಕಾಣಿಸಿಕೊಂಡು ಮತ್ತೆ ನಮ್ಮ ಮಲಗುವ ಕೋಣೆಗೆ ಓಡಿತ್ತು. ಮತ್ತೆ ಮಂಚದ ಕೆಳಗಿನದನ್ನು ಎಳೆದುಹಾಕುವ ಪ್ರಸಂಗ ಬೇಡವೇ ಬೇಡ ಎಲ್ಲಿ ಹೋಗುತ್ತದೆ ನಮ್ಮ ಕೈಗೆ ಸಿಗಲೇಬೇಕು ಅದು ಅಂದುಕೊಂಡು ನಾವೇ ಅವತ್ತು ಸುಮ್ಮನಾದೆವು.

   ನಾಲ್ಕನೇ ದಿನ ಪೂರ್ತಿ ಒಂದು ಬಾರಿಯೂ ಇಲಿ ಕಾಣಲಿಲ್ಲವಾದ್ದರಿಂದ ನಾವಿಬ್ಬರೂ ಅದರ ಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲ. ಸಂಜೆಯ ಹೊತ್ತಿಗೆ ನಮ್ಮ ಮನೆಯಲ್ಲಿ ಸೇರಿದ್ದ ಇಲಿ ವಿಚಾರ ಮರೆತೇ ಹೋಗಿತ್ತು. ಶುಕ್ರವಾರ ಬೆಳಿಗ್ಗೆ ಎಂದಿನಂತೆ ಮುಂಜಾನೆ ನಾಲ್ಕುವರೆಗೆ ಎದ್ದು ಕೈಕಾಲು ಮುಖ ತೊಳೆದು ದಿನಪತ್ರಿಕೆ ವಿತರಣೆ ಕೆಲಸಕ್ಕೆ ಹೊರಟೆ. ಎಂದಿನಂತೆ ನಮ್ಮ ಹುಡುಗರು ಪೇಪರುಗಳಿಗೆ ಸ್ಪಪ್ಲಿಮೆಂಟರಿ ಮತ್ತು ಪಾಂಪ್ಲೆಟ್ಸ್ ಹಾಕುವ ಕಾಯಕದಲ್ಲಿದ್ದರು. ನಾನು ಆಗತಾನೆ ನನ್ನ ಸ್ಕೂಟಿಯನ್ನು ನಿಲ್ಲಿಸಿ ಮನೆಯಿಂದ ನಿತ್ಯ ತೆಗೆದುಕೊಂಡು ಹೋಗುವ ಪೇಪರ್ ಬ್ಯಾಗನ್ನು ಎತ್ತಿದೆನಷ್ಟೆ. ಚಂಗನೆ ಅದರೊಳಗಿನಂದ ಇಲಿಯೊಂದು ಹೊರಬಂದು ನನ್ನ ಕೈಮೇಲೆ ಬಂದಲ್ಲ! ಗಾಬರಿಯಾಗಿ ಕೈಕೊಡವಿಬಿಟ್ಟೆ. ಬ್ಯಾಗ್ ಎಲ್ಲಿಯೋಬಿತ್ತು. ಅಲ್ಲಿಂದ ಹಾರಿದ ಇಲಿ ಕುಳಿತಿದ್ದ ನನ್ನ ಪೇಪರ್ ಹುಡುಗನ ಬೆನ್ನ ಮೇಲೆ ಹಾರಿತು. ಅವನಿಗೆ ದಿಗಿಲಾಗಿ ಮೈಕೊಡವಿದನಲ್ಲ! ಹರಡಿಕೊಂಡಿದ್ದ ಪೇಪರುಗಳ ಮೇಲೆಲ್ಲಾ ಓಡಾಡಿ ಸುತ್ತ ಕುಳಿತಿದ್ದ ನಮ್ಮ ಹುಡುಗರನೆಲ್ಲಾ ಗಲಿಬಿಲಿ ಮಾಡಿ ಕಾಂಪೌಂಡಿನ ತೂತಿನೊಳಗೆ ಹೋಗಿಬಿಡ್ತು.

   ನಮ್ಮ ಹುಡುಗರಿಗೆ ಗಾಬರಿ, ಗೊಂದಲ, ನಗು, ತಮಾಷೆ ಎಲ್ಲವೂ ಒಟ್ಟಿಗೆ ಆಗಿ ಗಂಭೀರವಾಗಿದ್ದ ವಾತವರಣವೆಲ್ಲಾ ಮಾಯವಾಯ್ತು. ಮಾತನಾಡಲು ಏನು ವಿಚಾರವಿಲ್ಲದಾಗ ನಮ್ಮ ಹುಡುಗರಿಗೆ ಇಂಥ ಘಟನೆಗಳು ಸಿಕ್ಕಿದರೆ ಸಾಕು ತಮಗೆ ತಾವೆ ಮೈಮರೆತು ಹಳೆಯ ನೆನಪುಗಳನ್ನೆಲ್ಲಾ ಕಕ್ಕಲು ಪ್ರಾರಂಭಿಸಿಬಿಡುತ್ತಾರೆ. ಒಬ್ಬ ಶುರುಮಾಡಿದ ನೋಡಿ..ಇದ್ಯಾಕೋ ಸರಿಯೋಗಲ್ಲವೆಂದುಕೊಂಡು  "ಲೋ ಕುಮಾರ ನಿಲ್ಲಿಸೋ...ಆಗಲೇ ಟೈಮ್ ಐದುವರೆಯಾಗುತ್ತಿದೆ....ತಗೊಳ್ಳೋ...ದುಡ್ಡು ಎಲ್ಲರಿಗೂ ಟೀ ತಗೊಂಡು ಬಾ ಹೋಗು"  ಅಂತ ಅವನನ್ನು ಸಾಗಹಾಕಿದೆ. ಅಲ್ಲಿಗೆ ಮತ್ತೆ ಎಂದಿನಂತೆ ಹುಡುಗರು ತಮ್ಮ ಕೆಲಸದ ಪ್ರಕ್ರಿಯೆಯನ್ನು ತೊಡಗಿಕೊಂಡರು.

  ಈ ಪುಟ್ಟ ಇಲಿ ನಾಲ್ಕುದಿನ ನಮ್ಮನೆಯಲ್ಲಿ ಸೇರಿಕೊಂಡು ನಮಗಿಬ್ಬರಿಗೂ ಚೆನ್ನಾಗಿ ಆಟವಾಡಿಸಿ ಎಲ್ಲಿಂದ ಬಂದಿತ್ತೋ ಅದೇ ಸ್ಥಳಕ್ಕೆ ತನಗರಿವಿಲ್ಲದಂತೆ ತಲುಪಿದ್ದು ಮಾತ್ರ ಎಂಥ ಕಾಕತಾಳೀಯವೆನಿಸಿತ್ತು.
ಇವತ್ತಿನಿಂದ ನಮ್ಮ ಹುಡುಗರು ಮತ್ತೆ ಸ್ಥಳ ಬದಲಾಯಿಸಿದ್ದಾರೆ!

ಲೇಖನ ಮತ್ತು ಚಿತ್ರಗಳು : ಶಿವು.ಕೆ
 ಬೆಂಗಳೂರು.

12 comments:

sunaath said...

Shivu,
We too had a lot of difficulty in throwing away a small mouse from our house. Your beautiful article reminded me those troubles.

Keshav.Kulkarni said...

Sakattaagide mooshika puraana.

ಚುಕ್ಕಿಚಿತ್ತಾರ said...

ಸು೦ದರವಾಗಿ ಬರೆದಿದ್ದೀರಿ. ಇಲಿ ಹಿಡಿಯುವ ಕೆಲಸವೆ೦ದರೆ ಡಶ್ಟ್ ಬಿನ್ ಮಗುಚಿದ೦ತೆ ಇಡೀ ಮನೆಯನ್ನೆಲ್ಲಾ ಮಗುಚಬೇಕಾಗುತ್ತದೆ. ವ೦ದನೆಗಳು.

Srikanth Manjunath said...

ನಿಮ್ಮ ಬ್ಲಾಗನ್ನು ಕಳೆದ ಎರಡು ಮೂರು ದಿನಗಳಿಂದ ಓದಬೇಕು ಅಂತ ತೆಗೆಯೋದು..ಅಷ್ಟರಲ್ಲಿ ಇನ್ನೇನು ಕೆಲಸವಾಗಿ ತಪ್ಪಿಸಿಕೊಳ್ಳುತಿತ್ತು ನಿಮ್ಮ ಮನೆಯ ಇಲಿಯ ಹಾಗೆ..ಇಂದು ಆಗಿದ್ದಾಗಲಿ ಎಂದು ಹಠ ಮಾಡಿ ಓದಲು ಕುಳಿತೆ..ಒಂದು ಚಿಕ್ಕ ಘಟನೆಯನ್ನು ಎಲ್ಲೋ ಬೋರಾಗದೆ ಎಷ್ಟು ನವಿರಾಗಿ ವಿವರಿಸಿದ್ದೀರಿ..ಹ್ಯಾಟ್ಸ್ ಆಫ್ ನಿಮಗೆ..ಗಣೇಶನ ಹಬ್ಬ ಬರುವ ಮೊದಲು ಗಣಪನ ವಾಹನ ನಿಮ್ಮ ಮನೆಗೆ ಬಂದಿದ್ದು ಒಳ್ಳೆಯ ಶಕುನ..(ಹ ಹ ಹ) ಕಾರಣ ನಾನೂ ಕೂಡ ಗಣಪನ ಪರಮ ಭಕ್ತ...ಲೇಖನ ಸೂಪರ್..ಅಭಿನಂದನೆಗಳು..ಹಾಗೆಯೇ ನಿಮ್ಮ ಎಲ್ಲ ಕಾರ್ಯಗಳಿಗೂ ಗಣಪ ಶುಭ ಮಾಡಲಿ..

ದೀಪಸ್ಮಿತಾ said...

ತೇಜಸ್ವಿ ಅವರು ತಂದೆಗೆ ತಕ್ಕ ಮಗ. ಇತಿಹಾಸದಲ್ಲಿ ತಂದೆಯಷ್ಟೇ ಪ್ರತಿಭೆ, ಕೀರ್ತಿ ಹೊಂದಿದ ಮಕ್ಕಳು ಅಪರೂಪ. ಇರಲಿ, ನಿಮ್ಮ ಮೂಷಿಕ ಪುರಾಣ ಚೆನ್ನಾಗಿದೆ. ಪೂರ್ತಿ ಓದಿಲ್ಲ, ಮೇಲಿಂದ ಮೇಲೆ ಓದಿದ್ದು. ಸಮಯ ಮಾಡಿಕೊಂಡು ಪೂರ್ತಿ ಓದಬೇಕು. ಯಾಕೋ ಕೆಲಸದ ಕಾರಣದಿಂದ ಇತ್ತೀಚೆಗೆ ಸರಿಯಾಗಿ ಬ್ಲಾಗ್ ಲೋಕಕ್ಕೆ ಬರಲು ಆಗುತ್ತಿಲ್ಲ. ನಾನೂ ಹೊಸದೇನು ಹಾಕಿಲ್ಲ, ಬೇರೆಯವರದ್ದು ನೋಡಲೂ ಆಗಿಲ್ಲ. ಮತ್ತೆ ಪ್ರಾರಂಭಿಸಬೇಕು.

Ashok.V.Shetty, Kodlady said...

ನಿಮ್ ಮೂಷಿಕ ಪುರಾಣ ಕೇಳಿ ನಾನು ಮತ್ತೆ ನನ್ನ ಪತ್ನಿ ಇಲಿ ಹಿಡಿಯುವ ಪ್ರಯತ್ನದಲ್ಲಿ ಒಬ್ಬರಿಗೊಬ್ಬರು ತಲೆ ಕುಟ್ಟಿಕೊಂಡ ಘಟನೆ ನೆನಪಾಯಿತು. ಸುಂದರ ಬರಹ....ಧನ್ಯವಾದಗಳು...

shivu.k said...

ಸುನಾಥ್ ಸರ್,
ನನ್ನ ಮೂಸಿಕ ಪುರಾಣದಿಂದಾಗಿ ನಿಮ್ಮ ನೆನಪುಮಾಡಿಕೊಂಡಿದ್ದೀರಿ.ಹಳೆಯ ನೆನಪುಗಳು ಖುಷಿಕೊಡುತ್ತವೆ ಅಲ್ವ..ಧನ್ಯವಾದಗಳು.

shivu.k said...

KeShav Kulkarni sir

Thanks

shivu.k said...

ಚುಕ್ಕಿ ಚಿತ್ತಾರ:
ನಿಮ್ಮ ಮಾತು ಅಕ್ಷರಶ: ನಿಜ. ಡಸ್ಟಬಿನ್ ಮಗುಚಬೇಕು...ಈ ಪದ ಇಷ್ಟವಾಯ್ತು.

shivu.k said...

ಶ್ರೀಕಾಂತ್ ಮಂಜುನಾಥ್ ಸರ್;
ಬಿಡುವು ಮಾಡಿಕೊಂಡು ಓದಿದ್ದು ನನಗೂ ಖುಷಿಯಾಯ್ತು. ಇದನ್ನು ಬರೆಯುವ ಉದ್ದೇಶವಿರಲಿಲ್ಲ. ಗುಬ್ಬಿ ಎಂಜಲು ಓದಿ ವೆಂಕಟೇಶ್‍ರವರು ಬರೆದ ಪತ್ರದ ನಂತರ ಅವರೊಂದಿಗೆ ಮಾತಾಡುವಾಗ ಚಿಕ್ಕ ಚಿಕ್ಕ ವಿಚಾರಗಳು ನಿಮಗೆ ಹೇಗೆ ಗೊತ್ತಾಗುತ್ತವೆ ಎಂದಾಗ ಅವತ್ತೇ ನಡೆದ ಈ ಇಲಿಯ ಘಟನೆಯನ್ನು ಸ್ವಲ್ಪ ವಿವರಿಸಿದೆ. ಅವರಿಗೆ ತುಂಬಾ ಖುಷಿಯಾಯ್ತು. ಮತ್ತೆ ಅದೇ ಮೂಡಿನಲ್ಲಿ ಬರೆದುಬಿಟ್ಟೆ..ನಿಮ್ಮ ಪ್ರೀತಿಪೂರ್ವಕ ಪ್ರತಿಕ್ರಿಯೆಗೆ ಧನ್ಯವಾದಗಳು.

shivu.k said...

ದೀಪಸ್ಮಿತ:
ಪೂರ್ತಿ ಓದಿಬಿಡಿ. ನಿಮಗೆ ಖಂಡಿತ ಖುಷಿಯಾಗುತ್ತದೆ ಎನ್ನುವ ನಂಬಿಕೆ ನನ್ನದು.

shivu.k said...

ಆಶೋಕ್ ಕೊಡಲಾಡಿ ಸರ್,
ನಿಮ್ಮ ಡಿಕ್ಕಿ ಪುರಾಣ ನೆನಪಿಗೆ ನನ್ನ ಲೇಖನ ಕಾರಣವಾಗಿದ್ದು ಖುಷಿಯ ವಿಚಾರ...ಧನ್ಯವಾದಗಳು.