Saturday, June 19, 2010

ನಾಗರಹೊಳೆ ಛಾಯಾಗ್ರಹಣ ಪ್ರವಾಸ ಭಾಗ-೧

"ಶಿವು, ನಿಮಗೆ ಆ ಶಬ್ದ ಕೇಳಿಸುತ್ತಿದೆಯಾ?"

"ಯಾವ ಶಬ್ದ ಸಾರ್?"

"ಸ್ವಲ್ಪ ಗಮನವಿಟ್ಟು ಕೇಳಿ?"

ನಾನು ಮೈಯಲ್ಲಾ ಕಿವಿಯಾಗಿ ಆಲಿಸಿದೆ. "ಜೊಯ್ಯ್..ಯ್........" ಶಬ್ದವೊಂದೇ ಜೋರಾಗಿ ಕೇಳಿಸುತ್ತಿತ್ತು.

"ಸಾರ್, ಇದು ಸಿಕಾಡಗಳ ಶಬ್ದವಲ್ಲವೇ?" ಕೇಳಿದೆ.

ನಾನು ಮತ್ತೆ ಮೈ ಮನಸ್ಸನ್ನೆಲ್ಲಾ ಕಿವಿಯಾಗಿಸಿದರೂ ಗೊತ್ತಾಗಲಿಲ್ಲ.

"ಗೊತ್ತಾಗುತ್ತಿಲ್ಲ ಸರ್", ಅಂದೆ.

"ಅರೆರೆ ಇದೇನ್ ಶಿವು, ನೀವು ಭಲೇ ಚುರುಕು ಅಂದುಕೊಂಡಿದ್ದೆ. ನೀವು ನಿಮ್ಮ ಕಣ್ಣುಮುಚ್ಚಿಕೊಳ್ಳಿ. ಈಗ ಹೊರಗಿನ ಪ್ರಪಂಚದ ಶಬ್ದವನ್ನು ಏಕಾಗ್ರತೆಯಿಂದ ಆಲಿಸಿ ನೋಡಿ," ಅಂದರು.

ಕೊನೆ ಪ್ರಯತ್ನವೂ ಆಗಿಹೋಗಲಿ ಅಂತ ಅವರು ಹೇಳಿದಂತೆ ಕಣ್ಣು ಮುಚ್ಚಿದೆ. ಸಿಕಾಡಗಳ ಅರಚಾಟದ ನಡುವೆ ಹೊಸ ಶಬ್ದ ಕೇಳಿಸಿತು.

"ಸಾರ್ ವಟರ್ ವಟರ್ ಅಂತ ಕೇಳಿಸುತ್ತಿದೆ, ಅದು ಕಪ್ಪೆ ಶಬ್ದಗಳಲ್ಲವೇ"

ಹೌದು, ಅದನ್ನೇ ನಾನು ಹೇಳಿದ್ದು, ಈಗ ಗೊತ್ತಾಯಿತಾ? ಹತ್ತಿರದಲ್ಲಿ ಇಲ್ಲೆಲ್ಲೋ ಕಪ್ಪೆಗಳಿವೆ ಹುಡುಕೋಣವೇ" ಅಂದರು.

ಅವರ ಉತ್ಸಾಹಕ್ಕೆ ನಾನು ಬೆರಗಾಗಿದ್ದೆ. ಅವರು ನಿವೃತ್ತ ಜೀವಶಾಸ್ತ್ರ ಉಪನ್ಯಾಸಕರು. ಜೀವಶಾಸ್ತ್ರವೆಂದ ಮೇಲೆ ಕೇಳಬೇಕೆ? ಕಪ್ಪೆ ಜಿರಲೆಗಳನ್ನೇ ಕುಯ್ದು ಅದರ ಭಾಗಗಳನ್ನು ವಿವರಿಸುತ್ತಾ ಪಾಠ ಮಾಡಿದವರು. ಅದಕ್ಕೆ ಅವರಿಗೆ ಕಪ್ಪೆ ಕೂಗುವ ಶಬ್ದ ನಮಗೆಲ್ಲರಿಗಿಂತ ಚೆನ್ನಾಗಿ ಅವರಿಗೆ ಕೇಳಿಸುತ್ತಿದೆ.

ಸರ್, ಈಗ ಸಮಯ ರಾತ್ರಿ ಹತ್ತು ಗಂಟೆ. ನಾವು ಇಲ್ಲಿಗೆ ಬಂದಾಗಿನಿಂದ ವಿದ್ಯುತ್ ಇಲ್ಲ. ಮೇಡದ ಬತ್ತಿಯಲ್ಲೇ ರಾತ್ರಿ ಜೀವನವನ್ನು ಕಳೆಯುತ್ತಿದ್ದೇವೆ. ಹೊರಗೆ ಇಣುಕಿದರೆ ಗಾಢಕತ್ತಲು. ನಾವು ಈ ಅತಿಥಿಗೃಹದಿಂದ ಹೊರಗೆ ಹೋದರೆ ಈ ಕಾಡಿನಲ್ಲಿ ಒಂದು ಅಡಿ ಅಂತರದಲ್ಲೂ ಒಬ್ಬರಿಗೊಬ್ಬರೂ ಕಾಣುವುದಿಲ್ಲ. ಅಂತದ್ದರಲ್ಲಿ ಆ ಕಪ್ಪೆಗಳು ನಮಗೆ ಸಿಗುತ್ತವೆಯೇ ಸರ್? ಪ್ರಶ್ನಿಸಿದೆ.

ನೋಡಿ ಶಿವು, ನಮ್ಮೆಲ್ಲರ ಬಳಿಯೂ ಬ್ಯಾಟರಿ ಇದೆ. ಸಂಜೆ ಮಳೆಬಂದು ನಿಂತು ವಾತಾವರಣವೆಲ್ಲಾ ಒಂಥರ ಹಿತವಾಗಿದೆ. ಪ್ರಯತ್ನಿಸಿದರೆ ತಪ್ಪೇನು?" ಅಂತ ಅವರು ಹೇಳಿದಾಗ ಅವರ ಉತ್ಸಾಹ ಕಂಡು ನಮಗೂ ಸ್ಫೂರ್ತಿ ಬಂತು.

ಸರಿ ಸರ್, ಹೋಗೋಣ, ನಡೀರಿ" ಅಂದೆನಾದರೂ ನಿಜಕ್ಕೂ ನಮಗೆ ಈ ಗಾಢ ಕತ್ತಲಿನಲ್ಲಿ ಆ ಕಪ್ಪೆಗಳ ಫೋಟೊ ತೆಗೆಯಲು ಸಾಧ್ಯವೇ ಅನ್ನಿಸಿತ್ತು.

ಇದಿಷ್ಟು ಸಂಭಾಷಣೆ ನಡೆದಿದ್ದು ನಾಗರಹೊಳೆ ಕಾಡಿನ ವಲಯದ ಕಲ್ಲಹಳ್ಳದಲ್ಲಿರುವ ಅರಣ್ಯ ಇಲಾಖೆಯವರ ಅತಿಥಿಗೃಹದಲ್ಲಿ. ನಾವು ನಾಲ್ವರು ಛಾಯಾಗ್ರಾಹಕರು[ನನ್ನ ಜೊತೆ ರಮಾಕಾಂತ್ ಆತ್ರೇಯ, ರಾಜೇಂದ್ರ, ದೇವರಾಜ್] ಎರಡು ದಿನದ ಮಟ್ಟಿಗೆ ನಾಗರಹೊಳೆ ಫೋಟೋಗ್ರಫಿ ಪ್ರವಾಸ ಹೊರಟು ಅಲ್ಲಿ ಉಳಿದುಕೊಂಡಿದ್ದೆವು. ಆ ದಟ್ಟಕಾಡಿನ ನಡುವೆ ಇರುವ ಈ ಅತಿಥಿಗೃಹದ ಜೊತೆಗೆ ಅರಣ್ಯ ಇಲಾಖೆಯ ಕಛೇರಿ, ನಮಗೆಲ್ಲಾ ಆಡುಗೆ ಮಾಡಿಕೊಡುವ ಭಟ್ಟನ ಮನೆ ಬಿಟ್ಟರೆ ಸುತ್ತ ಹದಿನೈದು ಕಿಲೋಮೀಟರ್ ಅಳತೆಯಲ್ಲಿ ಒಂದು ಮನೆಯೂ ಇಲ್ಲ ಮನೆಯಲ್ಲಿನ ಬೆಂಕಿಪಟ್ಟಣವೂ ಸಿಗುವುದಿಲ್ಲ. ಸರ್ಕಾರಿ ಅತಿಥಿಗೃಹವಾದ್ದರಿಂದ ನಾವಿದ್ದ ಎರಡು ದಿನವೂ ವಿದ್ಯುತ್ ಇರಲೇಇಲ್ಲ. ಹಗಲೆಲ್ಲಾ ಫೋಟೊಗ್ರಫಿಗೆ ಅಂತ ಕಾಡು ಮೇಡು ಸುತ್ತಾಡಿ, ಸಂಜೆಯಾಗುತ್ತಿದ್ದಂತೆ ಮೇಣದಬತ್ತಿ ಹೊತ್ತಿಸಿಕೊಂಡೇ ರಾತ್ರಿ ಜೀವನವನ್ನು ಕಳೆಯುತ್ತಿದ್ದೆವು. ಎರಡನೇ ದಿನದ ಕಾಡೆಲ್ಲಾ ಸುತ್ತಾಡಿ ಬಂದು ರಾತ್ರಿ ಕತ್ತಲಿನಲ್ಲೇ ಊಟ ಮುಗಿಸುವ ಹೊತ್ತಿಗೆ ಸಮಯ ಒಂಬತ್ತು ದಾಟಿತ್ತು. ಮಳೆಬಂದು ನಿಂತಿದ್ದರಿಂದ ವಾತಾವರಣ ಹಿತಕರವಾಗಿತ್ತು. ಹಾಗೆ ಅತಿಥಿಗೃಹದ ಬಾಲ್ಕನಿಯಲ್ಲಿ ನಿಂತಾಗ ಈ ಕಪ್ಪೆಯ ವಟರ್‌ಗುಟ್ಟುವಿಕೆಯನ್ನು ಕೇಳಿಸಿಕೊಂಡಿದ್ದರು ರಮಾಕಾಂತ್ ಆತ್ರೇಯ. ಅವರಿಗೆ ಉಪನ್ಯಾಸದ ಜೊತೆಗೆ ಫೋಟೋಗ್ರಫಿ ಹವ್ಯಾಸ.

ನಾಲ್ಕು ಜನರು ಕ್ಯಾಮೆರಾ, ಸ್ಟ್ಯಾಂಡ್, ಬ್ಯಾಟರಿಗಳ ಸಮೇತ ಸಜ್ಜಾಗಿ ಹೊರಬರುವಾಗ ರಾತ್ರಿ ಹತ್ತು ಗಂಟೆಯಾಗಿತ್ತು. ಹೊರಗೆ ವಾತಾವರಣ ತಂಪಾಗಿದ್ದರೂ ಒಬ್ಬರಿಗೊಬ್ಬರು ಕಾಣುತ್ತಿರಲಿಲ್ಲ. ಬ್ಯಾಟರಿಬಿಟ್ಟುಕೊಂಡೇ ಮುಖನೋಡಿಕೊಳ್ಳಬೇಕಾಗಿತ್ತು. ನಮಗೆಲ್ಲರಿಗಿಂತ ಮುಂದೆ ರಮಾಕಾಂತ್ ಇದ್ದರು. ಸ್ವಲ್ಪ ದೂರ ನಡೆಯುವಷ್ಟರಲ್ಲಿ ಮತ್ತೆ ಅದೇ ಶಬ್ದ ಕೇಳಿಸಿತು. ಎಲ್ಲರು ನಿಶ್ಯಬ್ದವಾಗಿ ನಿಂತು ಮೈಯಲ್ಲಾ ಕಿವಿ ಮಾಡಿಕೊಂಡೆವು. ನಿದಾನವಾಗಿ ಸಿಕಾಡಗಳ ಗುಯ್‍ಗುಡುವ ಶಬ್ದದ ನಡುವೆ "ವಟರ್ ವಟರ್, ವಟರ್, ವಟರ್, ಅಂತ ಕೇಳಿಸುತ್ತಿದೆ. ಅದರೆ ಅವನ್ನು ಈ ಗಾಢ ಕತ್ತಲಿನಲ್ಲಿ ಎಲ್ಲಿ ಅಂತ ಹುಡುಕುವುದು? ಶಬ್ದ ಚೆನ್ನಾಗಿ ಕೇಳಿಸುತ್ತಿತ್ತಾದರೂ ಆ ಕತ್ತಲಿನಲ್ಲಿ ಯಾವ ದಿಕ್ಕಿನಿಂದ ಬರುತ್ತಿದೆ ಎನ್ನುವುದು ಗೊತ್ತಾಗುತ್ತಿರಲಿಲ್ಲ. ನಮ್ಮ ಪ್ರಯತ್ನ ಸುಮ್ಮನೆ ಗುರಿಯಿಲ್ಲದೇ ಅಕಾಶಕ್ಕೆ ಕಲ್ಲುಹೊಡೆದಂತೆ ಅನ್ನಿಸುತ್ತಿತ್ತು.

"ಸರ್, ಯಾವ ದಿಕ್ಕಿನಿಂದ ಶಬ್ಬ ಬರುತ್ತಿದೆಯೆಂದು ಗೊತ್ತಾಯ್ತಾ?" ಕೇಳಿದೆ.

"ಶಿವು, ಒಂದು ನಿಮಿಷ ಸುಮ್ಮನಿರಿ," ಅಂದವರು ನಿದಾನವಾಗಿ ಆ ಶಬ್ದವನ್ನು ಆಲಿಸಿ ಕತ್ತಲಿನಲ್ಲಿ ಬ್ಯಾಟರಿ ಬಿಟ್ಟು ಹುಡುಕತೊಡಗಿದರು. ರಾಜೇಂದ್ರ ಮತ್ತು ದೇವರಾಜ್ ಕೂಡ ಅವರ ಜೊತೆ ಹುಡುಕತೊಡಗಿದರು. ನಾನು ನಿಂತಿದ್ದ ಜಾಗವನ್ನೊಮ್ಮೆ ಬ್ಯಾಟರಿ ಬೆಳಕಿನಿಂದ ನೋಡಿದೆ. ಅದು ಕುರುಚಲುಗಿಡಗಳು ಪೊದೆಗಳು ಇರುವಂತ ಸ್ಥಳ. ಕಾಡುಪ್ರಾಣಿಗಳಿಗೆ ಇಷ್ಟವಾಗುವಂತ ಸ್ಥಳ. ಆಗಲೇ ನಮಗೆ ಸೊಳ್ಳೆಗಳು ಕಚ್ಚಲು ಪ್ರಾರಂಭಿಸಿದ್ದವು. ಅಷ್ಟರಲ್ಲಿ ನಮ್ಮ ರೂಮಿನ ಆಡಿಗೆ ಭಟ್ಟ ಹೇಳಿದ ಮಾತು ನೆನಪಾಯಿತು.

ನಾವು ಉಳಿದುಕೊಂಡಿದ್ದ ಕಲ್ಲಹಳ್ಳದ ಅರಣ್ಯ ಇಲಾಖೆ ಅತಿಥಿಗೃಹ.

" ಸಾರ್, ಈ ಗೆಸ್ಟ್ ಹೌಸ್ ಚಾವಣಿಗಳ ಮೇಲೆ ಮರಗಳ ಕೊಂಬೆಗಳು ಇಳಿಬಿದ್ದಿರುವುದರಿಂದ ಯಾವುದೇ ಕಾರಣಕ್ಕೂ ಬಾಲ್ಕನಿ ಮತ್ತು ರೂಮುಗಳ ಕಿಟಕಿಗಳನ್ನು ತೆರೆಯಬೇಡಿ, ಇಲ್ಲಿ ಹಾವುಗಳ ಕಾಟ ಜಾಸ್ತಿ, ಮರದ ಕೊಂಬೆಗಳ ಮೇಲಿಂದ ಇಳಿದು ಕಿಟಕಿಗಳ ಮೂಲಕ ಅವು ಬಂದುಬಿಡಬಹುದು, ಯಾವುದೇ ಕಾರಣಕ್ಕೂ ಕಿಟಕಿಗಳನ್ನು ತೆರೆಯಬೇಡಿ ಅಂದಿದ್ದು ನೆನಪಾಯಿತು. ಮೊದಲನೆ ರಾತ್ರಿ ಎಲ್ಲಾ ಬಂದ್ ಮಾಡಿ ಮಲಗಿದ್ದೆವು. ಅಂತ ಗೆಸ್ಟ್ ಹೌಸ್ ಹತ್ತಿರವೇ ಹಾವು ಬರಬಹುದಾದರೇ ಇಂಥ ಪೊದೆಗಳ ಇರುವುದಿಲ್ಲವೆನ್ನುವುದಕ್ಕೆ ಏನು ಗ್ಯಾರಂಟಿ" ಮನಸ್ಸಿಗೆ ಇಂಥ ಒಂದು ಆಲೋಚನೆ ಬಂದ ಕೂಡಲೇ ಅಂತ ಚಳಿಯಲ್ಲೂ ಮೈಬೆವರಿತ್ತು. ಇದು ಮೊದಲೇ ಹಾವುಗಳ ವಿಶ್ರಾಂತಿಗೆ ಹೇಳಿಮಾಡಿಸಿದಂತ ಪೊದೆಯಂತ ಜಾಗ. ಕಪ್ಪೆಗಳಿದ್ದ ಮೇಲೆ ಅವುಗಳನ್ನು ಬೇಟೆಯಾಡಲು ಹಾವುಗಳು ಬರದಿರುತ್ತವೆಯೇ?, ಇದೆಲ್ಲಾ ಅಲೋಚನೆ ಒಮ್ಮೇಗೆ ತಲೆಗೆ ಬಂದು ಭಯಕ್ಕೆ ಆ ಕತ್ತಲಿನಲ್ಲಿ ನನ್ನ ಬ್ಯಾಟರಿಯಿಂದ ಬೆಳಕು ಹರಿಸಿದೆ. ಸುತ್ತಲಿದ್ದ ಪೊದೆಗಳು ಹೇಗೆ ಕಾಣತೊಡಗಿದವೆಂದರೆ, ಅವುಗಳ ಒಳಗೆಲ್ಲಾ ಅಲ್ಲಲ್ಲಿ ನಾಗರಹಾವು, ಕಿಂಗ್ ಕೋಬ್ರ, ............ಇನ್ನೂ ಅನೇಕವು ತೆಕ್ಕೆಹಾಕಿಕೊಂಡು ಮಲಗಿದ್ದಂತೆ, ಕೆಲವು ತಲೆಯೆತ್ತಿ ನಮ್ಮನ್ನೇ ನೋಡುತ್ತಿರುವಂತೆ ಭಾಷವಾಗತೊಡಗಿತ್ತು.

ಶಿವು, ಏನು ಹುಡುಕುತ್ತಿದ್ದೀರಿ, ನನ್ನ ಬ್ಯಾಟರಿ ಬೆಳಕು ಡಲ್ ಆಗಿದೆ, ನಿಮ್ಮ ಬ್ಯಾಟರಿ ಇತ್ತ ಬಿಡಿ" ಅಂತ ರಮಾಕಾಂತ ಕೇಳಿದಾಗ ಆ ಆಲೋಚನೆಯಿಂದ ಹೊರಬಂದಾಗಿ ಅವರು ಹೇಳಿದ ಕಡೆ ಬ್ಯಾಟರಿ ಬಿಟ್ಟೆ. ನಡುವೆ ಮತ್ತೊಮ್ಮೆ ಕಪ್ಪೆಯ "ವಟರ್ ವಟರ್, ವಟರ್ ವಟರ್.....ಕೇಳಿಬಂತು. ಎಲ್ಲರೂ ಆ ಕತ್ತಲಲ್ಲಿ ಶಬ್ದ ಬಂದ ಕಡೆ ನೋಡಿ ಅತ್ತ ನಡೆದೆವು. ಹತ್ತು ಹೆಜ್ಜೆ ಇಡುವಷ್ಟರಲ್ಲಿ ಆ ಶಬ್ದ ನಿಂತುಹೋಯಿತು. ಅವಕ್ಕೆ ನಾವು ಬಂದಿರುವುದು ಗೊತ್ತಾಯಿತೇನೋ. ಸುಮ್ಮನಾಗಿಬಿಟ್ಟವು. ಈ ಕಪ್ಪೆಗಳು ನಮ್ಮನ್ನು ಸರಿಯಾಗಿ ಯಾಮಾರಿಸುತ್ತಿವೆ ಅಂದುಕೊಂಡು ಸುಮ್ಮನೇ ಬೆಪ್ಪುತಕ್ಕಡಿಗಳಂತೆ ಒಬ್ಬರ ಮುಖದ ಮೇಲೆ ಮತ್ತೊಬ್ಬರೂ ಬ್ಯಾಟರಿ ಬಿಟ್ಟುಕೊಂಡೆವು. ನೋಡಿ ಅವು ಇಲ್ಲೇ ಎಲ್ಲೋ ಕೆಳಗೆ ಆಡಗಿರುತ್ತವೆ. ನೆಲದ ಮೇಲೆ, ಅದರ ಪಕ್ಕದಲ್ಲಿರುವ ಪೊದೆಗಳ ಮೇಲೆ ಬೆಳಕುಬಿಟ್ಟು ಹುಡುಕಿ ಅಂತ ಹೇಳುತ್ತಾ, ತಾವು ಹುಡುಕತೊಡಗಿದರು.
ಮೊದಲ ಸಲ ಕಾಣಿಸಿದ ಕಪ್ಪೆ

ಮತ್ತೊಂದು ವಿಭಿನ್ನ ಕಪ್ಪೆ


ಶಿವು, ಬನ್ನಿ ಇಲ್ಲಿ. ಈ ಗಿಡದ ಎಲೆಯ ಮೇಲೆ ಇದ್ದ ಒಂದು ಕಪ್ಪೆ ಬೆಳಕನ್ನು ನೋಡಿ ಪಕ್ಕನೆ ಎಲೆಯ ಮರೆಯಲ್ಲಿ ಹೋಗಿಬಿಡ್ತು! ಅಂದರು ರಾಜೇಂದ್ರ, ನಾನು ಅವರು ಹೇಳಿದ ಕಡೆ ನನ್ನ ಬ್ಯಾಟರಿಯಿಂದ ಬೆಳಕು ಬಿಟ್ಟು ಎಲೆಯನ್ನು ತಿರುಗಿಸಿ ನೋಡಿದೆ ಅಷ್ಟೇ. ಪಣ್ಣನೆ ಬೆಳಕಿನಿಂದ ಕತ್ತಲೆಯೆಡೆಗೆ ಹಾರಿ ಮಾಯವಾಯಿತು ಆ ಕಪ್ಪೆ. ನನಗೆ ಹಾರಿದ್ದು ಮಾತ್ರ ಗೊತ್ತಾಯಿತು. ಕೊನೇ ಪಕ್ಷ ಒಂದು ಕ್ಷಣವಾದರೂ ನೋಡಲು ಸಿಕ್ಕಿತಲ್ಲ ಅಂದುಕೊಂಡೆನಾದರೂ ಹಾರಿದ ಜಾಗವನ್ನು ಹುಡುಕಲಾರಂಭಿಸಿದೆ. ಒಂದೆರಡು ನಿಮಿಷದಲ್ಲಿ ಮತ್ತೊಂದು ಎಲೆಯ ತುದಿಯಲ್ಲಿ ಕುಳಿತಿದ್ದು ಕಾಣಿಸಿತು. ಈಗ ಸ್ಪಷ್ಟವಾಗಿ ಕಾಣುತ್ತಿದೆ! ಇಷ್ಟಕ್ಕೂ ಅದರ ಗಾತ್ರವಿದ್ದುದ್ದು ಕಿರುಬೆರಳ ತುದಿಯಷ್ಟು ಮಾತ್ರ. ಮತ್ತೆ ಅದರ ಮೇಲೆ ಬ್ಯಾಟರಿ ಬೆಳಕು ಬಿಟ್ಟರೆ ಮತ್ತೆಲ್ಲಿ ಹಾರಿಹೋದರೆ ಕಷ್ಟ ಅಂದುಕೊಂಡು ಅದು ಇರುವ ಜಾಗವನ್ನು ಕತ್ತಲಲ್ಲಿ ಗುರುತಿಸಿಕೊಂಡು ನಿದಾನವಾಗಿ ನನ್ನ ಕ್ಯಾಮೆರಾ, ಲೆನ್ಸು, ಸ್ಟ್ಯಾಂಡು, ಎಲ್ಲವನ್ನು ನೆಲದ ಮೇಲೆ ಕುಳಿತುಕೊಂಡು ಸಿದ್ದಮಾಡಿಕೊಂಡೆ. ನನ್ನ ಸಹಾಯಕ್ಕೆ ದೇವರಾಜ್ ನಿಂತಿದ್ದರು. ನಡುವೆ ಸಮಯವನ್ನು ನೋಡಿಕೊಂಡಾಗ ಹನ್ನೊಂದುಗಂಟೆ. ಇರಲಿ ಅಂದುಕೊಳ್ಳುತ್ತಾ ನಿದಾನವಾಗಿ ಕ್ಯಾಮೆರ ಸೆಟ್ ಮಾಡಿದ ಸ್ಟ್ಯಾಂಡ್ ಅನ್ನು ಅರ್ಧರ್ಧ ಅಡಿ ಮಾತ್ರವೇ ಮುಂದೆ ಸರಿಸುತ್ತಾ ಕಪ್ಪೆಯಿದ್ದ ಕಡೆ ತೆವಳಿಕೊಂಡು ಅದಕ್ಕೆ ಒಂದು ಅಡಿಯಷ್ಟು ಹತ್ತಿರವಾದೆ. ಈಗ ನಿದಾನವಾಗಿ ಕಪ್ಪೆ ಕುಳಿತಿದ್ದ ಎಲೆಯ ಪಕ್ಕದ ಎಲೆಯ ಮೇಲೆ ಬೆಳಕು ಬಿಡಲು ದೇವರಾಜ್‍ಗೆ ಹೇಳಿದೆ. ಕಪ್ಪೆಯ ಮೇಲೆ ನೇರವಾಗಿ ಬಿಟ್ಟರೆ ಅದು ದಿಗಿಲುಗೊಂಡು ಹಾರಿಬಿಟ್ಟರೆ? ಅದಕ್ಕಾಗಿ ದೇವರಾಜ್‍ಗೆ ಅದರ ಪಕ್ಕದ ಎಲೆಯ ಮೇಲೆ ಬೆಳಕು ಬಿಡಲು ಹೇಳಿದೆ. ದೇವರಾಜ್ ಹಾಗೆ ಮಾಡಿದರು. ಆ ಮಬ್ಬು ಬೆಳಕಿನಲ್ಲಿ ನಿದಾನವಾಗಿ ಕ್ಯಾಮೆರವನ್ನು ಮತ್ತಷ್ಟು ಹತ್ತಿರ ತಂದು ಫೋಕಸ್ ಮಾಡಲೆತ್ನಿಸಿದೆ. ನಮ್ಮಂತೆ ಕ್ಯಾಮೆರಾಗೂ ಬೆಳಕು ಬೇಡವೇ? ಫೋಕಸ್ ಆಗಲು ಕ್ಯಾಮೆರಾ ಒಪ್ಪಲಿಲ್ಲ. ಲೆನ್ಸ್ ಮಾತ್ರ ನಾನೆಲ್ಲಿ ಫೋಕಸ್ ಮಾಡಬೇಕೆಂಬುದು ಅದಕ್ಕೂ ತಿಳಿಯದೆ ಸುಮ್ಮನೇ ಹಿಂದೆ ಮುಂದೆ ಚಲಿಸುತ್ತಿತ್ತು. ಇದ್ಯಾಕೋ ಸರಿಹೋಗೊಲ್ಲವೆಂದುಕೊಂಡು ದೇವರಾಜ್ ಈಗ ನಿದಾನವಾಗಿ ಕಪ್ಪೆಯಮೇಲೆ ಬ್ಯಾಟರಿ ಬೆಳಕು ಬಿಡಿ ಎಂದೆ. ನಿದಾನವಾಗಿ ತನ್ನತ್ತ ಸರಿದ ಬೆಳಕು ಕಂಡು ಒಮ್ಮೆ ಜಗ್ಗಿತ್ತಾದರೂ ಯಾಕೋ ಮತ್ತೆ ಹಾರಲಿಲ್ಲ. ಅದೇ ಸಮಯವೆಂದು ನಾನು ಕ್ಲಿಕ್ ಬಟನ್ ಆರ್ಧ ಪ್ರೆಸ್ ಮಾಡಿದೆ. ಈಗ ಕ್ಯಾಮೆರಾಗೂ ಬೆಳಕಿನಿಂದ ಕಣ್ಣು ಕಾಣಿಸಿತಲ್ಲ. ತಕ್ಷಣ ಫೋಕಸ್ ಮಾಡಿತು. ಇನ್ನೂ ತಡ ಮಾಡಬಾರದೆಂದು ಕ್ಲಿಕ್ ಬಟನ್ ಪೂರ್ತಿ ಒತ್ತಿದೆ. ....ಕ್ಲಿಕ್...ಕ್ಲಿಕ್...ಕ್ಲಿಕ್ ಹೀಗೆ ಮೂರ್ನಾಲ್ಕು ಫೋಟೊ ತೆಗೆಯುವಷ್ಟರಲ್ಲಿ ಮತ್ತೊಮ್ಮೆ ಹಾರಿ ಕತ್ತಲಲ್ಲಿ ಮಾಯವಾಯಿತು. ಇಂಥದ್ದೆ ಸರ್ಕಸ್ ಅನ್ನು ನಮಗಿಂತ ಇಪ್ಪತ್ತು ಆಡಿ ದೂರದಲ್ಲಿ ರಮಕಾಂತ್ ಸರ್ ರಾಜೇಂದ್ರ ಸಹಾಯದಿಂದ ಮತ್ತೊಂದು ಕಪ್ಪೆಯ ಫೋಟೊ ಕ್ಲಿಕ್ಕಿಸಿದ್ದರು. ಹೀಗೆ ನೈಟ್ ಸರ್ಕಸ್ ಮಾಡಿ ಮೂರು ವಿವಿಧ ರೀತಿಯ ಕಪ್ಪೆಗಳ ಫೋಟೊವನ್ನು ಕ್ಲಿಕ್ಕಿಸಿದ್ದೆವು. ಎಲ್ಲಾ ಪ್ಯಾಕ್ ಮಾಡಿ ವಾಪಸ್ ರೂಮಿನ ಕಡೆಗೆ ಬರುವಷ್ಟರಲ್ಲಿ ಹನ್ನೊಂದು ಮುಕ್ಕಾಲು ದಾಟಿತ್ತು. ಈ ಸ್ಥಳದಲ್ಲಿ ಮೊದಲು ಬೆಳಕು ಬಿಟ್ಟಾಗ ಹಾವಿನ ಕಲ್ಪನೆ ಬಂದು ದಿಗಿಲಾದರೂ ಕಪ್ಪೆ ಕಾಣಿಸಿದ ತಕ್ಷಣ ಅದೆಲ್ಲಾ ಹೇಗೆ ಮರೆತುಹೋಯಿತು ಅನ್ನೋದೇ ನನಗೆ ಆಶ್ಚರ್ಯವಾಗಿತ್ತು.


"ಸರ್, ಇಂಥ ಸರಿರಾತ್ರಿಯಲ್ಲಿ ನಾವು ಹೋಗಿದ್ದ ಜಾಗದಲ್ಲಿ ಹಾವುಗಳಿದ್ದಿದ್ದರೇ ಏನು ಗತಿ? ನನಗಂತೂ ಆ ಕ್ಷಣದಲ್ಲಿ ಅದನ್ನು ನೆನೆಸಿಕೊಂಡು ದಿಗಿಲಾಗಿತ್ತು. ಆ ಪೊದೆಯಲ್ಲೆಲ್ಲಾ ಹಾವುಗಳು ಕುಳಿತಂತೆ ಮಲಗಿದ್ದಂತೆ ಅನ್ನಿಸಿ ಭಯವಾಗಿತ್ತು. ಅದನ್ನು ನಿಮ್ಮ ಬಳಿ ಹೇಳಿದರೇ ನನ್ನಂತೆ ನೀವು ಭಯದಿಂದ ವಾಪಸ್ ಹೋಗಿಬಿಡುತ್ತೀರೇನೋ ಅಂತ ಹೇಳಲಿಲ್ಲ ನಾನು" ಅಂದೆ

ಮಗದೊಂದು ರೀತಿಯ ಪುಟ್ಟ ಕಪ್ಪೆ

ಶಿವು, ನಿಮಗೆ ಅನ್ನಿಸಿದಂತೆ ನನಗೂ ಹಾವಿನ ಭಯ ಬಂತು. ಹೇಳಿದರೇ ಎಲ್ಲರೂ ಹೆದರಿ ವಾಪಸ್ ಹೋಗಿಬಿಡುತ್ತಿರೇನೋ ಅಂದುಕೊಂಡು ನಾನು ಸುಮ್ಮನಾದೆ ಅಂದರು ದೇವರಾಜ್. ರಮಾಕಾಂತ್ ಮತ್ತು ರಾಜೇಂದ್ರರಿಗೂ ಕೂಡ ಹೀಗೆ ಅನ್ನಿಸಿದನ್ನು ಹೇಳಿ ನಕ್ಕರು. ಹೀಗೆ ಎಲ್ಲರ ಮನದಲ್ಲೂ ಬಂದ ಭಯವನ್ನು ಹೊರಹಾಕದಂತೆ ಮಾಡಿದ್ದು ಈ ಹುಚ್ಚು ಫೋಟೊಗ್ರಫಿ ಅಲ್ಲವೇ? ಇದೊಂತರ ಹೆಂಡತಿ ಇದ್ದಹಾಗೆ, ಕಟ್ಟಿಕೊಂಡ ಮೇಲೆ ಎಂಥ ಕಷ್ಟಬಂದರೂ ಎದುರಿಸಲೇ ಬೇಕು" ಅಂತ ರಮಾಕಾಂತ್ ಹೇಳಿದಾಗ ಆ ಕತ್ತಲಲ್ಲೂ ಎಲ್ಲರೂ ಜೋರಾಗಿ ನಕ್ಕೆವು.

ಕಿರುಬೆರಳ ತುದಿಗಾತ್ರದ ಕಪ್ಪೆಗಳ ಚಿತ್ರಗಳು ನಮ್ಮೆಲ್ಲರ ಕ್ಯಾಮೆರದ ನೆನಪಿನ ಪೆಟ್ಟಿಗೆಯಲ್ಲಿ ಸದ್ದು ಮಾಡದೆ ಮಲಗಿದ್ದರೇ, ಅದಕ್ಕೆ ವಿರುದ್ಧವಾಗಿ ದೂರದಲ್ಲಿ ನಮ್ಮ ಕ್ಯಾಮೆರಾಗೆ ಫೋಸ್ ಕೊಟ್ಟ ಕಪ್ಪೆಗಳು "ವಟರ್ ವಟರ್...ವಟರ್ ವಟರ್....ಶಬ್ಧವನ್ನು ರಾತ್ರಿಪೂರ ಮಾಡುತ್ತಲೇ ಇದ್ದವು.

[ಮುಂದಿನ ಭಾರಿ ಕಾಡಿನಲ್ಲಿ ನನ್ನ ಮೊಬೈಲ್ ಕಳೆದುಹೋಗಿ ಮತ್ತೆ ಸಿಕ್ಕಿದ್ದು, ಪ್ರಾಣಿಪಕ್ಷಿಗಳ ಫೋಟೊ ಮತ್ತಷ್ಟು ವಿಚಾರಗಳು.
ಚಿತ್ರಗಳು ಮತ್ತು ಲೇಖನ
ಶಿವು.ಕ

Sunday, June 13, 2010

ಬದುಕಲ್ಲಿ ನಟಿಸಲು ಸಾಧ್ಯವೇ?



ಇಂಥದೊಂದು ಪ್ರಶ್ನೆಯನ್ನು ನಿಮ್ಮಲ್ಲಿ ಕೇಳಿದರೆ ಎಂಥ ಉತ್ತರ ಸಿಗಬಹುದು.? ಕೆಲವರು ಸಾಧ್ಯವಿಲ್ಲವೆಂದರೆ ಇನ್ನೂ ಕೆಲವರು ಅಸಾಧ್ಯವೆಂದು ಹೇಳಬಹುದು.

ಇಷ್ಟಕ್ಕು ಈ ಪ್ರಶ್ನೆ ಮೂಡಲು ಕಾರಣ ಇತ್ತೀಚೆಗೆ ನಾನು ನೋಡಿದ ಒಂದು ಅದ್ಬುತ ಸಿನಿಮಾ!


ಅದ್ಬುತವೆಂದ ಮಾತ್ರಕ್ಕೆ ಆತ್ಯುಕೃಷ್ಟ ತಾಂತ್ರಿಕತೆ ಹೊಂದಿದ ದುಬಾರಿ ವೆಚ್ಚದ ಅವತಾರ್ ಟೈಟಾನಿಕ್, ಡೈನೋಸಾರ್,...... ಸಾಲಿನ ಸಿನಿಮಾಗಳಾಗಲಿ, ಅಥವ ಅತ್ಯುತ್ತಮ ಕತೆ, ಚಿತ್ರಕತೆ, ಉತ್ತಮ ನಟನೆಯಿಂದಲೇ ಕಲಾಕೃತಿಗಳೆನಿಸಿದ ನೂರಾರು ಸಿನಿಮಾಗಳು ನಮ್ಮ ನೆನಪಿಗೆ ಬಂದುಬಿಡಬಹುದು. ಆದ್ರೆ ಅವುಗಳನ್ನು ಒಮ್ಮೆ ಬದಿಗೆ ಸರಿಸಿಬಿಡಿ. ಯಾವುದೇ ಅದ್ದೂರಿ ಸೆಟ್‍ಗಳಿಲ್ಲದೇ, ತಾಂತ್ರಿಕವಾಗಿಯೂ ಉತ್ತಮವಲ್ಲದ, ತೀರ ಸರಳವೆನಿಸುತ್ತಾ, ನೇರವಾದ, ಅದಕ್ಕಿಂತ ಸಹಜತೆಯನ್ನೇ ಕೃತಿಯನ್ನಾಗಿಸಿಕೊಂಡು, ಇರಾನಿನ ಪ್ರಖ್ಯಾತ ನಿರ್ಧೇಶಕ "ಜಾಫರ್ ಫನಾಯ್"ನ "ದಿ ಮಿರರ್" ಚಿತ್ರವನ್ನು ನೋಡಿದಾಗ ನನಗೆ ಮೂಡಿದ ಪ್ರಶ್ನೆಯಿದು.



ಇದರ ಕತೆಯೇ ಒಂದು ರೀತಿಯಲ್ಲಿ ವಿಭಿನ್ನಕ್ಕಿಂತ ವಿಭಿನ್ನವೆಂದು ನನ್ನ ಅನಿಸಿಕೆ. ಮೊದಲ ತರಗತಿ ಓದುತ್ತಿರುವ ಒಂದು ಪುಟ್ಟ ಸ್ಕೂಲ್ ಹುಡುಗಿ "ಮಿನಾ" ಮೇಲೆ ಕೇಂದ್ರಿಕೃತವಾಗಿ ಕೇವಲ ರಸ್ತೆಯ ಮೇಲೆ ಚಿತ್ರಿಕರಿಸಿದ ಚಿತ್ರವಿದು. ನೀವು ಸಿನಿಮಾವನ್ನು ನೋಡಲು ಪ್ರಾರಂಭಿಸಿದಾಗ ಆ ಪುಟ್ಟ ಹುಡುಗಿಯ ನಟನೆಯನ್ನು ನೋಡುತ್ತಾ ನೀವು ಆ ಪಾತ್ರದಲ್ಲಿ ಒಂದಾಗಿ ಆ ಹುಡುಗಿಯ ಎಲ್ಲಾ ಭಾವನೆಗಳು ನಿಮ್ಮಲ್ಲೂ ಉಂಟಾಗಿ ಆ ತನ್ಮಯತೆಯಿಂದ ಮೈಮರೆತಿರುವಾಗಲೇ, ಇನ್ನು ಮುಂದೆ ನಾನು ನಟಿಸೋಲ್ಲ, ನನಗಿಷ್ಟವಿಲ್ಲವೆಂದು ತನಗೆ ಕೃತಕವಾಗಿ ಕೈಗೆ ಹಾಕಿದ್ದ ಬ್ಯಾಂಡೇಜ್ ಕಿತ್ತು ಬಿಸಾಡಿ, ಅರ್ಧ ಸಿನಿಮಾ ನಡುವೆಯೇ ಇಡೀ ಸಿನಿಮಾ ತಂಡವನ್ನು ಬಿಟ್ಟು ಆ ಪುಟ್ಟ ಹುಡುಗಿ ಹೊರಬಂದಾಗ ನಿಮಗೆ ಹೇಗನ್ನಿಸಬಹುದು? ನೀವು ಕೂಡ ಮರುಕ್ಷಣವೇ ವಾಸ್ತವಕ್ಕೆ ಬಂದುಬಿಡುತ್ತೀರಿ. ನನಗೆ ಇಂಥ ಅವಕಾಶ ಸಿಕ್ಕಿದ್ದರೆ ಹೀಗೆ ಅರ್ಧಕ್ಕೆ ಕೈಯೆತ್ತಿ ಬರುತ್ತಿರಲಿಲ್ಲ. ಪೂರ್ತಿಯಾಗಿ ನಟಿಸಿ ಮುಗಿಸಿಕೊಡುತ್ತಿದ್ದೆ. ಈ ಹುಡುಗಿಗೇನು ಪೆಚ್ಚಾ? ಅಂತ ನನಗನ್ನಿಸಿದಂತೆ ನಿಮಗೂ ಅನ್ನಿಸುತ್ತದೆ. ಆ ಮಗುವಿನಿಂದಾಗಿ ಅರ್ಧಕ್ಕೆ ನಿಂತ ಸಿನಿಮಾ ಬಗ್ಗೆ ನಿರ್ಧೇಶಕ ಅಧೀರನಾಗುವುದಿಲ್ಲ. ಆದ್ರೆ ಇದೆಲ್ಲವನ್ನೂ ಮೀರಿ ಆ ಕ್ಷಣದಲ್ಲಿ ಆತನ ತಲೆ ಕೆಲಸ ಮಾಡಲಾರಂಭಿಸುತ್ತದೆ. ಇದುವರೆಗೂ ತನ್ನ ನಿಯಂತ್ರಣದಲ್ಲಿಯೇ ಇದ್ದ ಸಿನಿಮಾ ಕತೆಯನ್ನು, ಆ ಸನ್ನಿವೇಶದ ನಂತರ ಮುಂದೇನಾಗುತ್ತದೆಯೋ ನೋಡೇಬಿಡೋಣವೆಂದು ತನ್ನ ನಿಯಂತ್ರಣದಲ್ಲಿ ಇಲ್ಲದ ಮುಂದಿನ ಸನ್ನಿವೇಶಗಳನ್ನು ಯಥಾವತ್ತಾಗಿ ಚಿತ್ರೀಕರಿಸುವುದೇ ಆ ಚಿತ್ರದ ಸೊಬಗು. ಇಂಥದೊಂದು ಪ್ರಯತ್ನವನ್ನು ನಮ್ಮ ಕನ್ನಡ, ತಮಿಳು, ತೆಲುಗು...ಹೋಗಲಿ ಭಾರತದ ಯಾವುದೇ ಭಾಷೆಯಲ್ಲಿ ಮಾಡಲು ನಮ್ಮ ನಿರ್ಧೇಶಕರು ಸಿದ್ಧರಾಗುತ್ತಾರ?

ಸಿನಿಮಾಗೆ ಹಣ ಹಾಕಿ ಹಣವನ್ನೇ ವಾಪಸ್ಸು ಪಡೆಯುವ ಉದ್ದೇಶವನ್ನು ಹೊಂದಿರುವ ನಮ್ಮ ನಿರ್ಧೇಶಕರು, ನಿರ್ಮಾಪಕರುಗಳೆಲ್ಲಾ ತಮ್ಮ ಆತ್ಮತೃಪ್ತಿಗಾದರೂ ಒಮ್ಮೆ ಇಂಥದೊಂದು ಸಿನಿಮಾವನ್ನು ನೋಡಬೇಕು.

ಶಾಲೆ ಬಿಟ್ಟ ಕೂಡಲೇ ಗೇಟು ತೆರೆದುಕೊಂಡು ಹೊರಬರುವ ಪ್ರಾಥಮಿಕ ಶಾಲಾ ಮಕ್ಕಳು ರಸ್ತೆ ದಾಟುವುದರೊಂದಿಗೆ ಪ್ರ್‍ಆರಂಭವಾಗುತ್ತದೆ ಸಿನಿಮಾ. ಕಾಂಪೌಂಡ್ ಹೊರಗೆ ಕಾದು ಕುಳಿತ ಮಕ್ಕಳನ್ನು ಅವರವರ ತಂದೆ ತಾಯಿಯರು ಕರೆದುಕೊಂಡು ಹೋಗುತ್ತಿದ್ದರೂ ಅದೊಂದು ಪುಟ್ಟ ಹುಡುಗಿ ಹಾಗೇ ಕುಳಿತಿರುತ್ತದೆ. ನಿತ್ಯವೂ ಸರಿಯಾದ ಸಮಯಕ್ಕೆ ಬಂದು ಕರೆದುಕೊಂಡು ಹೋಗುವ ಆ ಮಗುವಿನ ತಾಯಿ ಇನ್ನೂ ಬಂದಿಲ್ಲವಾದ್ದರಿಂದ ಆ ಹುಡುಗಿ ಕಾಯುತ್ತಿರುತ್ತಾಳೆ. ಎಡಗೈ ಮುರಿದಿದ್ದರಿಂದಲೇ ಏನೋ ಅದಕ್ಕೆ ಬ್ಯಾಂಡೇಜ್ ಹಾಕಿಸಿಕೊಂಡಿದ್ದ ಆ ಮಗು ಸ್ಕೂಲ್ ಕಾಂಪೌಂಡ್ ಬಳಿ ನಿಂತುಕೊಂಡು ತನ್ನ ತಾಯಿಗಾಗಿ ಕಾಯುವ ಕೆಲವು ಕ್ಷಣಗಳನ್ನು ನೋಡುತ್ತಿದ್ದರೆ ನೀವು ಆ ಕ್ಷಣಕ್ಕೆ ನೀವು ಪಾತ್ರದಲ್ಲಿ ಒಂದಾಗಿಬಿಡುತ್ತೀರಿ. ಚಿತ್ರದಲ್ಲಿನ ಆ ಕ್ಷಣಗಳಲ್ಲಿ ಆ ಮಗು ಅನುಭವಿಸುವ ಆತಂಕ, ಕಾಯುವಿಕೆ, ಇನ್ನೂ ಬರದಿದ್ದಲ್ಲಿ ನಾನು ತಪ್ಪಿಸಿಕೊಂಡುಬಿಡುತ್ತೇನಾ? ಮರುಕ್ಷಣದಲ್ಲಿ ಇಲ್ಲ ಅಮ್ಮ ಬಂದೇ ಬರುತ್ತಾರೆ ಅನ್ನುವ ಭರವಸೆ ಇದೆಲ್ಲವನ್ನು ಸಹಜವಾಗಿ ಕಣ್ಣಿನಲ್ಲೇ ವ್ಯಕ್ತಪಡಿಸುವ ಆ ಮಗುವಿನ ನಟನೆ ನಿಮ್ಮನ್ನು ಬಾಲ್ಯದ ನೆನಪಿಗೆ ತಳ್ಳಿಬಿಡುತ್ತದೆ. ಅಮ್ಮ ಇನ್ನೇನು ಬಂದುಬಿಡುತ್ತಾರೆ ಅಲ್ಲಿನವರೆಗೆ ಸ್ವಲ್ಪ ಕಾಯುತ್ತಿರು ಅಂತ ಹೇಳುವ ಆಕೆಯ ಮತ್ತೊಬ್ಬ ಟೀಚರ್, ಆ ಟೀಚರನ್ನೇ ನೋಡಲು ಬರುವ ವ್ಯಾಪಾರಿ, ಅವರಿಬ್ಬರ ನಡುವೆ ವ್ಯಾಪಾರದ ವಿಚಾರದ ದಾಕ್ಷಿಣ್ಯಕ್ಕೆ ಮಗುವನ್ನು ಮನೆಗೆ ತಲುಪಿಸುತ್ತೇನೆ ಎಂದು ಒಪ್ಪಿಕೊಳ್ಳುವ ಆತನ ಮೊಪೆಡ್ ಮೇಲೆ ಆ ಮಗು ಜಾಗಮಾಡಿಕುಳಿತುಕೊಳ್ಳುವ ಪರಿ, ದಾರಿಯುದ್ದಕ್ಕೂ ಸಾಗುವ ಅವರಿಬ್ಬರ ಸಂಭಾಷಣೆ, ಅಷ್ಟರಲ್ಲಿ ಒಂದು ಬಸ್ ಸ್ಟ್ಯಾಂಡ್ ಕಂಡು ನನ್ನಮ್ಮ ಇಲ್ಲೆ ಬಸ್ ಹತ್ತೋದು ಅಂತ ಆ ಪುಟ್ಟ ಹುಡುಗಿ ಇಳಿದುಬಿಡುತ್ತಾಳೆ. ಮತ್ತೆ ಅಲ್ಲಿಗೆ ಬಂದ ಒಂದು ಬಸ್ಸನ್ನು ಹತ್ತಿಬಿಡುತ್ತಾಳೆ. ಬಸ್ಸಿನಲ್ಲಿ ಆವಳ ಅಮ್ಮ ಇರುವುದಿಲ್ಲ. ಆದ್ರೆ ಚಲಿಸುವ ಬಸ್ಸಿನಲ್ಲಿ ತಕ್ಷಣಕ್ಕೆ ಇಳಿಯುವಂತಿಲ್ಲ. ಆ ಬಸ್ಸು ಎಲ್ಲಿಗೋ ಕರೆದುಕೊಂಡು ಹೋಗುತ್ತದೆ. ಅಷ್ಟರಲ್ಲಿ ಈ ಹುಡುಗಿ ದಾರಿ ತಪ್ಪಿರುತ್ತಾಳೆ. ಅಮ್ಮ ಕಾಣುತ್ತಾಳ ಅಂತ ಆಗಾಗ ಕಿಟಕಿಯಲ್ಲಿ ನೋಡುತ್ತಿರುವಂತೆಯೇ ಬಸ್ಸಿನ ಕೊನೆ ನಿಲ್ದಾಣ ಬಂದುಬಿಡುತ್ತದೆ. ಆ ಬಸ್ ಚಾಲಕ ಈ ಹುಡುಗಿಯನ್ನು ಮತ್ತೊಬ್ಬ ಬಸ್ ಚಾಲಕನಿಗೆ ಮನೆತಲುಪಿಸುವಂತೆ ಜವಾಬ್ದಾರಿ ವಹಿಸುವುದು, ಆತನು ಮತ್ತೊಂದು ಬಸ್ಸಿನಲ್ಲಿ ಈಕೆಯನ್ನು ಕರೆದೊಯ್ಯುವುದು...ಹೀಗೆ ಆ ಹುಡುಗಿ ದಾರಿತಪ್ಪಿದ ಪುಟ್ಟಹುಡುಗಿಯಾಗಿಬಿಡುತ್ತಾಳೆ.

ಇಷ್ಟೆಲ್ಲದರ ನಡುವೆ ನಿರ್ಧೇಶಕರು ರಸ್ತೆಯಲ್ಲಿ, ಟ್ರಾಫಿಕ್ಕಿನಲ್ಲಿ, ಬಸ್ಸಿನಲ್ಲಿ, ನಡೆಯುವ ಸಂಭಾಷಣೆಗಳು, ಶಬ್ದಗಳನ್ನು ಯಥಾವತ್ತಾಗಿ ಸೇರಿಸಿರುವುದರಿಂದ ಚಿತ್ರಕ್ಕೆ ಮತ್ತಷ್ಟು ಸಹಜತೆಯನ್ನು ತಂದುಕೊಡುತ್ತಾರೆ. ಬಸ್ಸಿನಲ್ಲಿ ಜ್ಯೋತಿಷ್ಯ ಹೇಳುವ ಹೆಂಗಸು, ತನ್ನ ಸೊಸೆಯ ಮೇಲೆ ದೂರನ್ನು ಹೇಳುತ್ತಲ್ಲೇ ಮಗನನ್ನು ಹೊಗಳುತ್ತಾ ದಾರಿಯುದ್ದಕ್ಕೂ ವಟಗುಟ್ಟುವ ಮುದುಕಿ, ಅಗಾಗ ಇರಾನ್ ಕೊರಿಯಾ ಫುಟ್‍ಬಾಲ್ ಆಟದ ಬಗ್ಗೆ ಚರ್ಚೆಗಳು, ಬಸ್ಸಿನಲ್ಲಿ ಬರುವ ಬಿಕ್ಷುಕನ ಹಾಡು.........ಇಂಥ ಅನೇಕ ವಾಸ್ತವ ಚಿತ್ರಣವನ್ನು ಹಾಗೇ ಕಟ್ಟಿಕೊಡುತ್ತಲೇ....ಆ ಮಗು ಬಸ್ಸಿನಲ್ಲಿ ಆನುಭವಿಸುವ ಮುಗ್ದತೆ, ಆತಂಕ, ಗೊಂದಲ, ಭಯ, ಅದಕ್ಕೆ ತೀರ್ವತೆಯನ್ನು ತಂದುಕೊಡುವಂತೆ ನಡುವೆ ಆ ಹುಡುಗಿಯನ್ನು ಬಸ್ಸಿಂದ ಇಳಿಸಿಬಿಡುವ ನಿರ್ವಾಹಕ, ಗೊತ್ತಿಲ್ಲದ ಜಾಗದಲ್ಲಿ ಆ ಹುಡುಗಿ ಕಳೆದುಹೋಗಿರುವೆನೆಂಬ ಭಾವದಲ್ಲಿ ಅನುಭವಿಸುವ ಆತಂಕ, ಅದರ ಕಡೆಗೆ ಗಮನ ಕೊಡದೇ ತಮ್ಮದೇ ಲೋಕದಲ್ಲಿರುವ ಜನರು, ಅಮ್ಮ ಸಿಕ್ಕಿ ಇನ್ನೂ ನನ್ನನ್ನು ಮನೆಗೆ ಕರೆದುಕೊಂಡು ಹೋಗಲಿಲ್ಲವಲ್ಲ ಎನ್ನುವ ದಿಗಿಲಿಗೆ ಇನ್ನೇನು ಅವಳ ಕಣ್ಣಂಚಿನಿಂದ ಒಂದು ಹನಿ ಕೆನ್ನೆಯ ಮೇಲೆ ಇಳಿಯಬೇಕು ಎನ್ನುವಷ್ಟರಲ್ಲಿ ನೀವದನ್ನು ನೋಡುತ್ತಾ ಅನುಭವಿಸುತ್ತಾ ನಿಮ್ಮ ಕಣ್ತುಂಬಿ ಹನಿಯೊಂದು ಜಾರಿರುತ್ತದೆ. ಆ ಮಗುವಿನ ಕಣ್ಣಿಂದ ಒಂದೂ ಹನಿಯನ್ನು ದುಮುಕಿಸಿದೇ ಅದೇ ಭಾವದಿಂದ ನಿಮ್ಮ ಕಣ್ಮಂಚಲ್ಲಿ ಹನಿ ದುಮುಕಿಸುವುದು ಆ ನಿರ್ಧೇಶಕನ ಗೆಲವು. ಇಷ್ಟರ ಮಟ್ಟಿಗೆ ನಿಮ್ಮನ್ನು ಮಗುವಾಗಿಸುವ ನಿರ್ಧೇಶಕನನ್ನು ಮೀರಿ ಇಡೀ ಸಿನಿಮಾ ಇಲ್ಲಿಂದ ತಿರುವು ಪಡೆದುಕೊಳ್ಳುತ್ತದೆ. ಆಷ್ಟೊಂದು ಸಹಜವಾಗಿ ಅಭಿನಯಿಸಿದ್ದ ಆ ಪುಟ್ಟಹುಡುಗಿ ತನ್ನ ಎಡಗೈಗೆ ಕಟ್ಟಿದ್ದ ಬ್ಯಾಂಡೇಜ್ ಕಿತ್ತೆಸೆದು ನಾನು ಇನ್ನು ನಟಿಸೊಲ್ಲ ಅಂತ ಹೊರನಡೆದುಬಿಡುತ್ತಾಳೆ. ಯಾರು ಎಷ್ಟು ಹೇಳಿದರೂ ಆ ಹುಡುಗಿ ಒಪ್ಪುವುದಿಲ್ಲ. ಕೆಲವೊಮ್ಮೆ ಮಕ್ಕಳು ಹಟ ಹಿಡಿದರೆ ಏನು ಮಾಡಿದರೂ ಒಪ್ಪಿಕೊಳ್ಳುವುದಿಲ್ಲ. ಇಲ್ಲೂ ಅದೇ ಆಗುತ್ತದೆ. ಅಷ್ಟರಲ್ಲಿ ನೀವು ವಾಸ್ತವಕ್ಕೆ ಬಂದುಬಿಡುತ್ತೀರಿ. ಅರ್ಧಕ್ಕೆ ನಿಂತ ಸಿನಿಮಾ ಬಗ್ಗೆ ನೀವು ಸೇರಿದಂತೆ ಎಲ್ಲರೂ ಯೋಚಿಸುತ್ತಿದ್ದರೆ, ನಿರ್ಧೇಶಕ ಮುಂದೆ ಏನಾಗುತ್ತದೆಯೋ ನೋಡೋಣ, ಮತ್ತದೇ ಹುಡುಗಿಯನ್ನು ಹಿಂಭಾಲಿಸಿ ಸೂಟಿಂಗ್ ಮಾಡೋಣವೆಂದು ನಿರ್ಧರಿಸುತ್ತಾನೆ. ಇಲ್ಲಿಂದ ಮುಂದೆ ನಿಮಗೆ ಕಾಣಸಿಗುವುದು ಸಿನಿಮಾವಲ್ಲದ ಸಿನಿಮಾ.

ಇದುವರೆಗೂ ನಿರ್ಧೇಶಕರ ಅಣತಿಯಂತೆ ದಾರಿತಪ್ಪಿದ ಹುಡುಗಿಯಂತೆ ನಟಿಸಿದ್ದ ಆ ಪುಟ್ಟ ಹುಡುಗಿ, ಸಿನಿಮದಿಂದ ಅರ್ಧಕ್ಕೆ ಹೊರಬಂದಮೇಲೆ ಈಗ ನಿಜಕ್ಕೂ ಮನೆಗೆ ವಾಪಸ್ ಹೋಗಲು ದಾರಿಗೊತ್ತಿರುವುದಿಲ್ಲ. ಆಕೆಯ ಬಳಿ ಆಡ್ರೆಸ್ ಕೂಡ ಇರುವುದಿಲ್ಲ. ಇಲ್ಲಿಂದ ಮುಂದೆ ನಟನೆಯನ್ನು ಮೀರಿದ ಬದುಕಿನ ಕ್ಷಣಗಳನ್ನು ಹಾಗೆ ಸೆರೆಯಿಡಿಯಲು ಆ ಮಗುವಿಗೆ ಗೊತ್ತಿಲ್ಲದಂತೆ ಕ್ಯಾಮೆರಾ ಹಿಡಿದು ಆಕೆಯನ್ನು ಹಿಂಭಾಲಿಸುತ್ತಾರೆ..


ವಾಸ್ತವಕ್ಕೆ ತೀರ ಹತ್ತಿರವೆನ್ನುವಂತೆ ಸಿನಿಮಾ ತೆಗೆಯುವ ಇರಾನಿನ ನಿರ್ಧೇಶಕರು ಇಲ್ಲಿ ಅದಕ್ಕಿಂತ ಒಂದು ಹೆಜ್ಜೆ ಮುಂದೆ ಹೋಗಿ ಆಗುವ ಅನಿರೀಕ್ಷಿತ ಘಟನೆಯಿಂದ ಕತೆ ತಮ್ಮ ನಿಯಂತ್ರಣ ತಪ್ಪಿದಾಗಲೂ ಮುಂದೇನಾಗಬಹುದು ನೋಡೇಬಿಡೋಣ ಅಂತ ಪ್ರೇಕ್ಷಕನ ಕುತೂಹಲವನ್ನು ತಾವು ಅನುಭವಿಸುತ್ತಾ ಚಿತ್ರೀಕರಿಸಲು ಪ್ರಾರಂಭಿಸುತ್ತಾರೆ.

ಒಂದು ಸಿನಿಮಾ ಅಂದರೆ ಹಣ ಎನ್ನುವ ಈಗಿನ ಪ್ರಪಂಚದಲ್ಲಿ, ಸಿನಿಮಾ ಎನ್ನುವ ಮಾಧ್ಯಮ ಕಲೆಯನ್ನು ಪ್ರತೀಕ್ಷಣದ ಕುತೂಹಲವನ್ನು ಅನುಭವಿಸುತ್ತಾ, ಮುಂದಾಗುವ ಪ್ರತೀಕ್ಷಣವನ್ನು ಮಗುವಿನಂತೆ ಅಸ್ವಾದಿಸುತ್ತಾ, ನಮ್ಮನ್ನು ಹಾಗೆ ಅಸ್ವಾದಿಸುವಂತೆ ಮಾಡುವ ಜಾಪರ್ ಫನಾಯಿಗೆ ಹ್ಯಾಟ್ಸಪ್ ಹೇಳಲೇಬೇಕು. ಇಲ್ಲಿಂದ ಮುಂದೆ ತನಗೆ ಗೊತ್ತಿಲ್ಲದ ದಾರಿಯನ್ನು ಮಗು ಹುಡುಕಿಕೊಂಡು ಹೇಗೆ ಹೋಗುತ್ತದೆ. ಅದು ಸರಿಯಾಗಿ ಮನೆ ತಲುಪುತ್ತದಾ? ಸಿನಿಮಾಗೆ ನಟಿಸಿದಂತೆ ಅದರ ಭಾವನೆಗಳೂ ಇಲ್ಲೂ ವ್ಯಕ್ತವಾಗುತ್ತವಾ? ಅಥವ ಅದನ್ನು ಮೀರಿ ಮತ್ತೇನೋ ಹೊಸದು ನಮಗೆ ಕಾಣಸಿಗಬಹುದಾ? ಅನ್ನುವುದು ನನ್ನ ಕುತೂಹಲ. ಈ ಸಮಯದಲ್ಲಿ ನನಗೆ ಈ ಪ್ರಶ್ನೆ ಹುಟ್ಟಿದ್ದು.


ಹೌದು ನಾವು ನಿಜಬದುಕಿನಲ್ಲಿ ನಟಿಸಲು ಸಾಧ್ಯವಾ? ಅಂತ. ಇದೇ ಪ್ರಶ್ನೆ ನಿರ್ಧೇಶಕ ಜಾಫರ್ ಫನಾಯ್‍ಗೂ ಮೂಡಿರಬೇಕು. ಈಗ ನಿಮಗೂ ಮೂಡಿರಬೇಕಲ್ಲವೇ? ಮುಂದೇನಾಗುತ್ತದೆಯೋ ನೋಡೋಣ.

ಬಸ್ಸಿಳಿದು ಹೊರಗೆ ಬಂದು ಕುಳಿತುಕೊಂಡ ಆ ಪುಟ್ಟ ಹುಡುಗಿ ಏನು ಹೇಳಿದರೂ ಸಿನಿಮಾದಲ್ಲಿ ನಟಿಸಲು ಇಷ್ಟಪಡುವುದಿಲ್ಲ. ಕಾರಣ ಕೇಳಿದರೆ, "ನನಗೆ ಸಿನಿಮಾದಲ್ಲಿ ಆಳಲು ಹೇಳುತ್ತಾರೆ, ಇದನ್ನು ನನ್ನ ಗೆಳತಿಯರು ನೋಡಿದಾಗ ನನ್ನನ್ನು ಅಳುಮುಂಜಿ ಅಂತ ಅಂಗಿಸುತ್ತಾರೆ" ಅಂತ ಹೇಳುತ್ತಾಳೆ. ಅಲ್ಲಿಂದಾಚೆಗೆ ಅವಳೇ ತನಗೆ ಅಲ್ಲಲ್ಲಿ ಆಡ್ರೆಸ್ ಕೇಳುವುದು, ಯಾವುದೋ ಬಸ್ ಹತ್ತಿ ಮತ್ತೆಲ್ಲೋ ಇಳಿಯುವುದು, ಟ್ರಾಫಿಕ್ ಪೋಲಿಸ್‍ನವನನ್ನು ಕೇಳುವುದು, ಹೀಗೆ ಸಾಗುತ್ತಾಳೆ. ಹೀಗೆ ಅಲೆದು ಕೊನೆಗೊಮ್ಮೆ ಹೇಗೋ ಮನೆ ತಲುಪುತ್ತಾಳೆ. ಅಲ್ಲಲ್ಲಿ ನಿಂತು ತನಗೆ ಎಟುಕದ ಫೋನ್ ಭೂತಿಗೆ ನಾಣ್ಯವನ್ನು ಹಾಕಿ ಮನೆಗೆ ಫೋನ್ ಮಾಡುವುದು, ಟ್ಯಾಕ್ಸಿ ಹತ್ತಿ ತನ್ನಲ್ಲಿರುವ ಸ್ವಲ್ಪ ಹಣದಲ್ಲೇ ಟ್ಯಾಕ್ಸಿ ಹತ್ತಿ ಹೋಗುವುದು, ಕೊನೆಗೂ ಹೇಗೋ ಮನೆ ಸೇರಿಕೊಳ್ಳುತ್ತಾಳೆ.


ಸಿನಿಮಾ ಅಂತ್ಯವಾದ ಮೇಲೆ ಬದುಕಿನಲ್ಲಿ ಖಂಡಿತ ನಟಿಸಲು ಸಾಧ್ಯವಿಲ್ಲ ಅಂತ. ಸಿನಿಮಾ ನಟನೆಯಲ್ಲಿ ಎಲ್ಲಾ ಭಾವನೆಗಳಲ್ಲೂ ತೀರ್ವತೆಯನ್ನು ಬಯಸುತ್ತಾರೆ ನಿರ್ಧೇಶಕರು. ಪ್ರಾರಂಭದಲ್ಲಿ ಉತ್ತಮವಾಗಿ ಎಲ್ಲಾ ಭಾವನೆಗಳನ್ನು ಅದ್ಬುತವಾಗಿ ಕಣ್ಣಲ್ಲೇ ಬಿಂಬಿಸುವ ಆ ಮಗುವಿಗೆ ಇದ್ದಕ್ಕಿದ್ದಂತೆ ಅವೆಲ್ಲ ಇಷ್ಟವಿಲ್ಲದಂತಾಗಿಬಿಡುವುದು, ಅದು ಕೃತಕತೆಯೆನಿಸಿ ಅದರಿಂದ ಹೊರಬಂದುಬಿಡುವುದು ನೋಡಿದಾಗ, ಎಲ್ಲೋ ಒಂದು ಆ ಮಗುವಿನ ನಿರ್ಧಾರ ನಮ್ಮದೇ ಅನ್ನಿಸಿಬಿಡುತ್ತದೆ. ನಾವು ಕೂಡ ನಮ್ಮ ನಿತ್ಯ ಜೀವನದಲ್ಲಿ ನಮ್ಮ ಸಹಜ ಭಾವನೆಗಳನ್ನು ನಮಗರಿವಿಲ್ಲದಂತೆ ಮರೆತು ಯಾವುದೋ ಒತ್ತಾಸೆಗೆ, ಒತ್ತಡಕ್ಕೆ, ಮರ್ಜಿಗೆ, ಓಲೈಕೆಗೆ, ಮಣಿದು ನಟಿಸಲಾರಂಭಿಸಿಬಿಡುತ್ತೇವಲ್ವಾ? ಇಲ್ಲಿ ಮಗು ನಟನೆಯನ್ನು ದಿಕ್ಕರಿಸಿ ಹೊರಬಂದುಬಿಡುವುದು ನಮನ್ನೆಲ್ಲಾ ಆ ಕ್ಷಣದಲ್ಲಿ ಎಚ್ಚರಿಸಿದಂತಾಗಿಬಿಡುತ್ತದೆ. ಇದು ನಿರ್ಧೇಶಕನ ಉದ್ದೇಶವಾ? ಕುತೂಹಲವಾ? ಅವನಲ್ಲೂ ಮಗುವಿನಂತ ಆಸೆ ಮೊಳಕೆಯೊಡೆಯಿತಾ? ಇವೆಲ್ಲಾ ಸಿನಿಮಾ ನೋಡಿ ಮುಗಿದಾಗ ನನ್ನೊಳಗೆ ಮೂಡಿದ ಪ್ರಶ್ನೆಗಳು ಅಭಿಪ್ರಾಯಗಳು. ಇಷ್ಟೊಂದು ವಿಚಾರಗಳನ್ನೊಳಗೊಂಡ ಸಿನಿಮಾದಲ್ಲಿ ತಪ್ಪುಗಳಿಲ್ಲವೇ ಅಂತ ನಿಮಗನ್ನಿಸಬಹುದು. ಖಂಡಿತ ಅನೇಕ ತಪ್ಪುಗಳಿವೆ. ಮೊದಲರ್ಧ ವಿಭಿನ್ನ ಚಿತ್ರಕತೆಯಿಂದ ಬಿಗಿಯಾಗಿ ಸಾಗುವ ಸಿನಿಮಾ, ನಂತರ ಚಿತ್ರಕತೆಯಿಲ್ಲದೇ ಸಾಗುವುದರಿಂದ ಮೊದಲರ್ಧದಲ್ಲಿರುವ ಭಾವನೆಗಳ ತಾಕಲಾಟ ದ್ವಿತಿಯಾರ್ಧದಲ್ಲಿ ಇರುವುದಿಲ್ಲ. ಏಕೆಂದರೆ ಕ್ಯಾಮೆರಾ ಹುಡುಗಿಯನ್ನು ಹಿಂಬಾಲಿಸುವಾಗ ರಸ್ತೆಯ ನಡುವಿನ ಟ್ರಾಪಿಕ್ಕಿನಿಂದಾಗಿ ಅವಳು ಅನೇಕ ಸಲ ಮರೆಯಾಗಿಬಿಡುತ್ತಾಳೆ, ಅನೇಕ ಬಾರಿ ಅವಳನ್ನು ಕ್ಯಾಮೆರಾವೇ ಹುಡುಕಲಾರಂಭಿಸುತ್ತದೆ. ಆಗ ಅರೆರೆ ಇದೇನಿದು ಸಿನಿಮಾನಾ ಅನ್ನಿಸುವುದು ಅವಾಗಲೇ. ಸನ್ನಿವೇಶಗಳೇ ಆ ರೀತಿ ಇರುವಾಗ ಅವೆಲ್ಲಾ ತಪ್ಪುಗಳಲ್ಲವೆಂದು ನನ್ನ ಭಾವನೆ. ಪ್ರತಿಸಿನಿಮಾದಲ್ಲೂ ಒಂದು ಕ್ಲೈಮ್ಯಾಕ್ಸ್ ಇರುತ್ತದೆಯೆನ್ನುವುದು ಎಲ್ಲರ ಭಾವನೆ. ಇದೊಂಥರ ಕ್ಲೈಮ್ಯಾಕ್ಸ್ ಇಲ್ಲದೇ ಅಂತ್ಯವಾಗುವ ಸಿನಿಮಾವೆಂದು ಹೇಳಬಹುದು. ಇವೆಲ್ಲಾ ಈ " ದಿ ಮಿರರ್" ಸಿನಿಮಾ ನೋಡಿದಾಗ ಕಾಡಿದ ಅನುಭವಗಳು. ನಿಮಗೂ ಹೀಗೆ ಕಾಡುವಂತ ಅನುಭವ ಆಗಬೇಕಿದ್ದರೆ ಆ ಸಿನಿಮಾವನ್ನು ನೋಡಿ.

ನಿರ್ಧೇಶಕ ಜಾಫರ್ ಫನಾಯ್


೧೯೯೭ರಲ್ಲಿ ತಯಾರಾದ ಸಿನಿಮಾ ಇಸ್ತಾನ್‍ಬುಲ್ ಪಿಲ್ಮೊತ್ಸವದಲ್ಲಿ "ಗೋಲ್ಡನ್ ಟುಲಿಫ್, ಲೊಕಾರ್ನೋ ಫಿಲ್ಮ್ ಫಸ್ಟಿವಲ್‍ನಲ್ಲಿ "ಗೋಲ್ಡನ್ ಲೆಪ್ಪರ್ಡ್", ಸಿಂಗಪೂರ್ ಫಿಲ್ಮ್ ಫೆಸ್ಟಿವಲ್‍ನಲ್ಲಿ "ಸಿಲ್ವರ್ ಸ್ಕ್ರೀನ್ ಆವರ್ಡ್", ಬಹುಮಾನಗಳನ್ನು ಗೆದ್ದಿದೆ.

ಶಿವು.ಕೆ

Saturday, June 5, 2010

ಮದುವೆ ಮಾತು-ಭಾಗ ೨


ಮತ್ತೊಂದು ಸುತ್ತು ಮದುವೆ ಮನೆಗಳಿಂದ ಚೆನ್ನಾಗಿ ಊಟ ಮಾಡಿಕೊಂಡು ಬಂದಿದ್ದೇನೆ. ಊಟವಾದ ಮೇಲೆ ಮಾತು ಬೇಡವೇ?, ಅರೆರೆ ಸ್ವಲ್ಪ ತಡೀರಿ, ಮದುವೆ ಮನೆಯೆಂದರೆ.....ಮಾತು.....ಮಾತಿಗೆ ಮಾತು......ಅದ್ಸರಿ ಎಂಥೆಂಥ ಮಾತು......ಅದನ್ನು ಮಾತಲ್ಲಿ ಯಾಕೆ ನಾನು ಹೇಳಬೇಕು...ನೀವು ಯಾಕೆ ಕೇಳಬೇಕು....? ಹಾಗಾದ್ರೆ ಮಾತಿಲ್ಲದ ಮಾತ? ಹೌದ್ರಿ, ಇದೊಂತರ ಮಾತಿಲ್ಲದ ಮಾತು ಕಣ್ರೀ, ಕುತೂಹಲ, ಕಾತುರ ಜಾಸ್ತಿಯಾಯಿತಾ? ನನಗೂ ನಿಮ್ಮಂಗೆ ಆಯ್ತು ಕಣ್ರೀ, ಮುಂದಾ? ಅದಕ್ಕೆ ನಾನು ಮಾತಿಲ್ಲದೇ ಮಾತುಗಳನ್ನು ಕ್ಯಾಮೆರಾದಲ್ಲಿ ಕಟ್ಟಿಕೊಡೋಕೆ ಎರಡನೇ ಬಾರಿ ಪ್ರಯತ್ನ ಮಾಡಿದ್ದೀನಿ. ನೀವು ಒಮ್ಮೆ ನೋಡೋ ಬಿಡ್ರೀ...

೧. ಅಚ್ಚರಿ ಮಾತು--ಎಚ್ಚರದ ಮಾತು

೨. ಟೋಪಿ ಜೊತೆ ಭೂಪಟದ ಮಾತು

೩. ಮುಗಿದ ಮಾತು-ಕೈ ಮುಗಿದ ಮಾತು

೪. ಅನಂದದ ಮಾತು-ಆನಂದ ಭಾಷ್ಪದ ಮಾತು

೫. ನೀರಿನ ಮಾತು-ನೀರೆಯರ ಮಾತು

೬. ಧಾರೆಯ ಮಾತು-ಧೀರೆಯರ ಮಾತು

೭. ನಲ್ಲನ ಮಾತು-ಗಲ್ಲದ ಮಾತು

೮. ಅಡುಗೆ ಮಾತು-ಗಡಿಗೆ ಮಾತು

೯. ಕಾಲುಗಳ ಮಾತು-ಕಾಲುಂಗರದ ಮಾತು
೧೦. ಕನ್ನಡಿ ಮಾತು- ಕಣ್ ಕಣ್ ಮಾತ್
೧೧. ಜಸ್ಟ್ ಮಾತ್ ಮಾತಲ್ಲಿ-ಲಾಸ್ಟ್ ಮಾತ್ ಮಾತಲ್ಲಿ

ಚಿತ್ರಗಳು ಮತ್ತು ಲೇಖನ.
ಶಿವು.ಕೆ