Monday, March 29, 2010

ಕಿಟಕಿಯಲ್ಲೇನಿದೆ? ಕಿಟಕಿಯೊಳಗಿನ್ನೇನಿದೆ?


ಅರೆರೆ! ಇದೇನಿದು ಕಿಟಕಿ ವಿಚಾರವೆಂದ ತಕ್ಷಣ ಮನಸ್ಸಿನಲ್ಲೇ ಒಂಥರ ಕಸಿವಿಸಿಯುಂಟಾಗುತ್ತದಲ್ಲವೇ? ಅದು ಸಹಜಬಿಡಿ. ನಮ್ಮನೆ ಕಿಟಕಿಯನ್ನೇ ಯಾರಾದರೂ ನೋಡಿದರೆ ನಮಗೊಂತರ ಆಗುತ್ತದೆ. ಇನ್ನೂ ಕಿಟಕಿಯೊಳಗೆ ಇಣುಕಿದರಂತೂ ಅವರ ಮೇಲೆ ಕೋಪ ಬರುವುದು ಗ್ಯಾರಂಟಿ, ಅಂತದ್ದರಲ್ಲಿ ನಾವು ಬೇರೆಯವರ ಮನೆಯ ಕಿಟಕಿ ನೋಡಿದರೆ, ಅದರೊಳಗಿ ಇಣುಕಿದರೆ ಸುಮ್ಮನೇ ಬಿಟ್ಟಾರಯೇ?

ಆದರೂ ನೀವು ಇಂಥ ಕಿಟಕಿಗಳನ್ನು ನೋಡಲೇ ಬೇಕು. ಸಾದ್ಯವಾದರೆ ಇಣುಕಿಯೂ ಬಿಡಬೇಕು. ಆಗ ನೋಡಿ ನಿಮಗೆ ಬಿನ್ನ ವಿಭಿನ್ನ ದೃಶ್ಯಾವಳಿಗಳು ಕಾಣತೊಡಗುತ್ತವೆ! ದಿಗಿಲುಪಡುವಂತದ್ದೇನಿಲ್ಲ. ದೈರ್ಯವಾಗಿ ಕಣ್ಣಗಲಿಸಿ ನೋಡಿ, ಕಣ್ಣುಚಿಕ್ಕದು ಮಾಡಿನೋಡಿ, ಕೆಲವೊಮ್ಮೆ ಓರೆನೋಟ, ಕಿರುನೋಟ ಹೇಗಾದರೂ ಸರಿ, ವಿಭಿನ್ನ ಅನುಭೂತಿಗಾಗಿ ನೋಡಲೇಬೇಕು.! ಸಾಕು ರೈಲುಬಿಡಬೇಡ ವಿಚಾರಕ್ಕೆ ಬಾರಯ್ಯ ಅಂತೀರಾ!

ಖಂಡಿತ ರೈಲುಬಿಡುತ್ತಿಲ್ಲ. ಆದ್ರೆ ಇದು ರೈಲಿನ ಸಮಾಚಾರ, ರೈಲುಕಿಟಕಿಗಳ ಸಮಾಚಾರ. ಅದರೊಳಗಿನ ಕೆಲವು ವಿಭಿನ್ನ ದೃಶ್ಯಗಳ ಸಮಾಚಾರ.

ಇಲ್ಲಿ ನಾನು ತೋರಿಸುತ್ತಿರುವ ರೈಲಿನ ಕಿಟಕಿಗಳು ನಿಮಗೂ ಗೊತ್ತು. ಅಲ್ಲಿ ನಡೆಯುವ ಚಟುವಟಿಕೆಗಳು ನಿಮಗೆ ಗೊತ್ತು. ಆದ್ರೆ ಅದನ್ನು ನೋಡುವ ದೃಷ್ಟಿಕೋನವನ್ನು ಬದಲಿಸಿಕೊಂಡಾಗ ಇಂಥ ಚಿತ್ರಗಳು ಸಿಗುತ್ತವೆ. ನೀವು ಬೇರೆನು ಮಾಡಬೇಕಿಲ್ಲ ನಾನು ಮಾಡಿದಂತೆ ಪ್ರತಿಯೊಂದಕ್ಕು ಒಂದೊಂದು ಪ್ರೇಮುಗಳನ್ನು ಹೀಗೆ ಹಾಕಿಬಿಟ್ಟರೆ ನಿಮಗೂ ಅವು ಹೀಗೆಕಾಣಸಿಗುತ್ತವೆ. ಅವುಗಳನ್ನು ನೋಡಿ ನೀವು ಖುಷಿಪಡಿ.

ಇನ್ನೇಕೆ ತಡ, ಬನ್ನಿ ಕಣ್ಣಲ್ಲಿ, ಅಲ್ಲಿಂದ ನೇರ ಮನಸ್ಸಿನಲ್ಲಿ ಅವುಗಳಿಗೆಲ್ಲಾ ಪ್ರೇಮು ಹಾಕೋಣ.

ಶಿರಾಡಿ ಘಾಟಿನ ಸೌಂದರ್ಯದಷ್ಟೇ ಚೆಂದ ಈ ಬಾಲೆ!


ಅಕ್ಕನ ಜೊತೆ ತಮ್ಮನೂ ಕೂಡ

ಎಲ್ಲೆಲ್ಲೂ ಶಿರಾಡಿಘಾಟ್ ಸೌಂದರ್ಯವೇ! ಅಂತ ಹಾಡುತ್ತಿರಬಹುದೇ ಈ "ಕೈ"

ನನ್ನಲ್ಲಿ ನೀನಾಗಿ......ನಿನ್ನಲ್ಲಿ ನಾನಾಗಿ....ಅಂತ ಹಾಡಿಕೊಳ್ಳುತ್ತಿರಬಹುದೇ ಈ ಕೈಗಳು!

ಊಟವಾದ ಮೇಲೆ ಕೈತೊಳೆಯಲೇ ಬೇಕಲ್ಲವೇ!

ಸುಬ್ರಮಣ್ಯಕ್ಕೆ ಹೀಗೊಂದು ಪಾದಯಾತ್ರೆ!

ಎಮರ್ಜೆನ್ಸಿ ಕಿಟಕಿಯಲ್ಲೊಂದು ಭೂಪಟ!

ಈತ ಸದಾ ಬಾಗಿಲ ಬಳಿ ನಿಲ್ಲುವ ಕನ್ನಡಕಧಾರಿ ಇಣುಕಪ್ಪ!

ಒಳಗಿದ್ದು ಬೇಸರವಾಯಿತೇನೋ! ಹೊರಗಡೆ ರಿಲ್ಯಾಕ್ಸ್!

ರಿಲ್ಯಾಕ್ಸ್ ನಂತರ ಕಿಟಕಿ ಕಂಬಿಗಳೊಂದಿಗೆ ಆಟ!

ನಾನು ಆಟಕ್ಕೆ ಬರಲಾ? ಹೊರಬಂದ ಮಗಳ ಕೈಗಳು!

ಅಪ್ಪನ ಕೈಬೆರಳುಗಳೊಂದಿಗೆ ಮಗಳ ಪುಟ್ಟ ಬೆರಳುಗಳ ಆಟ!

ಈತನಂತೆ ನಾನು ಬಾಗಿಲಲ್ಲಿ ಕುಳಿತು ರೈಲು ವೇಗವಾಗಿ ಚಲಿಸುವಾಗ ಒಂದು ಕೈಯಲ್ಲಿ ಬಾಗಿಲ ಪೈಪನ್ನು ಬೀಳದಂತೆ ಆಧಾರವಾಗಿ ಹಿಡಿದು ನಿಂತು.....ಕುಳಿತು....., ಮತ್ತೊಂದು ಕೈಯಲ್ಲಿ ಮೂರುವರೆ ಕೆಜಿ ತೂಕದ ದೊಡ್ಡಲೆನ್ಸಿನ ಕ್ಯಾಮೆರಾ ಹಿಡಿದು ಕ್ಲಿಕ್..ಕ್ಲಿಕ್..... ಮಗದೊಮ್ಮೆ ಎಮರ್ಜೆನ್ಸಿ ಕಿಟಕಿಯಿಂದ ತಲೆ, ಕ್ಯಾಮೆರಾ, ಕೆಲವೊಮ್ಮೆ ಅರ್ಧ ದೇಹವನ್ನು ಕ್ಯಾಮೆರಾ ಸಮೇತ ಹೊರಹಾಕಿ ಒಂದೇ ಕೈಯಲ್ಲಿ ಹಿಡಿದು ಕ್ಲಿಕ್ಕಾಟವಾಡಿದ್ದೇನೆ.


ಇನ್ನೂ ರೈಲು ಕಿಟಕಿಯೊಳಗೇನಿದೆ ನೋಡೋಣ ಬನ್ನಿ.

ಕೂಸುಮರಿ ಆಟ. ಮಮತೆ ವಾತ್ಸಲ್ಯದ ಆಟ

ಎಂಥ ಸುಖ ನಿದ್ರೆ!

ಓಹ್! ಕೆಟ್ಟ ಕನಸೇ!

ಶ್ರಮಜೀವಿಯ ನಿದ್ರೆಯಲ್ಲಿ ಸ್ವರ್ಗಕ್ಕೆ ಮೂರೇ ಗೇಣು!
ಬೆಳ್ಳಿಕಾಲುಂಗರ ಶ್ರೀಮತಿಗೆ ಸುಂದರ!

ಈ ಹುಡುಗನ ಪಾದಗಳು ನಿದ್ರಿಸುವ ಮೊದಲು ಅದೆಷ್ಟು ಸುತ್ತಾಡಿದ್ದವೋ!
ನಿದ್ರೆಯಲ್ಲಿ ಇರೋ ಸುಖ ಗೊತ್ತೇ ಇರಲಿಲ್ಲ....

ಹಾಯಾಗಿ ಮಲಗು ನನ್ನ ಪುಟ್ಟ ಕಂದ!

ಅಂಗಾಲ ತೊಳೆದೇನು ನಿದ್ರೆ ಮಾಡಿ ಬಾ ನನ ಕಂದ!

ಇವೆಲ್ಲಾ ಚಿತ್ರಗಳನ್ನು ರೈಲು ನಿಂತಾಗ ಹೊರಬಂದು ರೈಲು ನಿಲ್ದಾಣದಲ್ಲಿ ನಿಂತು ಕ್ಲಿಕ್ಕಿಸಿದಲ್ಲ. ಆ ರೀತಿ ಫೋಟೊ ಕ್ಲಿಕ್ಕಿಸಲು ನಮ್ಮ ದೊಡ್ಡ ಕ್ಯಾಮೆರಾ ಹೊರತೆಗೆದರೆ ನಮ್ಮನ್ನು ಉಳಿದ ಪ್ರಯಾಣಿಕರು ಸುತ್ತುವರಿಯುತ್ತಾರೆ, ತರಾವರಿ ಪ್ರಶ್ನೆಗಳನ್ನು ಕೇಳುತ್ತಾರೆ. ಅವರಿಗೆ ಉತ್ತರಿಸುವ ನಿಟ್ಟಿನಲ್ಲಿ ಇಂಥ ಚಿತ್ರಗಳು ತಪ್ಪಿಸಿಕೊಂಡುಬಿಡುತ್ತವೆ. ಎಲ್ಲಕ್ಕಿಂತ ಹೆಚ್ಚಾಗಿ ರೈಲ್ವೇ ಪೋಲಿಸ್ ಗಮನಿಸುತ್ತಿರುತ್ತಾರೆ. ಬಂದು ಕೇಳುತ್ತಾರೆ ಏನು ತೆಗೆಯುತ್ತಿದ್ದೀರಿ? ಏಕೆ ತೆಗೆಯುತ್ತಿದ್ದೀರಿ, ಇಲಾಖೆಯಿಂದ ಅನುಮತಿ ಪಡೆದಿದ್ದೀರಾ? ಇನ್ನೂ ಏನೇನೋ ಪ್ರಶ್ನೆಗಳು. ಅವೆಲ್ಲ ಕಿರಿಕಿರಿಗಳಿಂದಾಗಿ ನಮಗೆ ವೈವಿಧ್ಯಮಯ ಫೋಟೊಗಳು ಸಿಗುವುದಿಲ್ಲ. ಎಲ್ಲಾ ಚಿತ್ರಗಳು ರೈಲು ಚಲಿಸುತ್ತಿರುವಾಗಲೇ ಕ್ಲಿಕ್ಕಿಸಿದಂತವು. ರೈಲಿನ ಒಳಗೆ ನನ್ನ ಕ್ಯಾಮೆರಾ ಕಾಣದಂತೆ ಒಂದು ಬಟ್ಟೆ ಸುತ್ತಿಕೊಂಡು ಸಮಯನೋಡಿ ಯಾರೂ ನನ್ನಡೆಗೆ ನೋಡದಿರುವಾಗ ತೆಗೆದಂತ ಪೋಟೋಗಳಿವು.
ಇವೆಲ್ಲಾ ಚಿತ್ರಗಳಿಗೆ ಪ್ರೇಮು ಹಾಕಿದ್ದು ಬೆಂಗಳೂರು -ಮಂಗಳೂರು ಹಗಲು ರೈಲಿನಲ್ಲಿ. ಕಳೆದ ವಾರ ಕುಕ್ಕೆ ಸುಬ್ರಮಣ್ಯ ದೇವಸ್ಥಾನಕ್ಕೆ ಈ ರೈಲಿನಲ್ಲಿ ಪ್ರಯಾಣ ಮಾಡಿದಾಗ ಸಿಕ್ಕ ಕೆಲವು ಫೋಟೊಗಳಿವು. ಇದನ್ನು ಮೀರಿ ಆ ರೈಲು ಪ್ರಯಾಣವೇ ಒಂದು ಆದ್ಬುತ ಅನುಭವ. ಸೀಟಿಗಾಗಿ ಚರ್ಚೆ, ಆ ರೈಲಿನಲ್ಲಿ ಪುಸ್ತಕ ಮಾರುವ ಹುಡುಗ, ಹೆಂಗಸರ ಮಾತು ಮತ್ತು ಚಟುವಟಿಕೆಗಳು, ಸಂಭಾಷಣೆಗಳು.... ಇಡೀ ಪ್ರಯಾಣದಲ್ಲಿ ರೈಲು ಓಡಿದ್ದು.......ಓಡಿ ಓಡಿ ಸುಸ್ತಾಗಿ....ನಡೆ ನಡೆದು ಕೊನೆಗೊಮ್ಮೆ ಎಲ್ಲಿ ಸ್ವಲ್ಪ ಹೊತ್ತು ಮಲಗಿತ್ತು ಅನ್ನುವ ವಿಚಾರ, ಸಿಗುವ ರಾಕ್ಷಸಾಕಾರದ ಸೇತುವೆಗಳು, ಸುರಂಗಗಳು..... ಅವುಗಳ ಫೋಟೋಗಳು... ಸುಬ್ರಮಣ್ಯ ರೋಡಿನಿಂದ ದೇವಸ್ಥಾನದವರೆಗೆ ಜೀಪುಗಳಲ್ಲಿ ಕರೆದೊಯ್ಯುವ ಡ್ರೈವರುಗಳು ಒಂದೇ ಕುಂಡಿಯಲ್ಲಿ ಕುಳಿತು ಜೀಪು ಓಡಿಸುವ ಪರಿ ಇತ್ಯಾದಿಗಳನ್ನು ಮುಂದಿನ ಲೇಖನದಲ್ಲಿ ಚಿತ್ರಸಹಿತ ಕಟ್ಟಿಕೊಡುತ್ತೇನೆ..

ಚಿತ್ರಗಳು ಮತ್ತು ಲೇಖನ
ಶಿವು. ಕೆ

Tuesday, March 23, 2010

ಚಿತ್ರಸಂತೆಯಲ್ಲಿ ಪುಟ್ಟ ಪುಟ್ಟ ಕತೆಗಳು.


೧. ಚಿತ್ರಸಂತೆಯಲ್ಲಿ ಆತ ಗಾಂಧಿಭವನದ ಬಳಿ ಚಿತ್ರಗಳನ್ನು ನೋಡಲು ಪ್ರಾರಂಭಿಸಿದಾಗ ಮಧ್ಯಾಹ್ನ ೧೨ ಗಂಟೆ. ಇಡೀ ಚಿತ್ರಸಂತೆಯನ್ನು ನೋಡಿ ಮುಗಿಸಿ ನಮ್ಮ ಬಳಿಗೆ ಬರುವ ಹೊತ್ತಿಗೆ ಸಂಜೆ ಆರುಗಂಟೆ. ಆ ಕಲಾಭಿಮಾನಿ ಚಿತ್ರಸಂತೆಯಲ್ಲಿನ ಎಲ್ಲಾ ಚಿತ್ರಗಳನ್ನು ನೋಡಿ ಅದೆಷ್ಟು ಗೊಂದಲಗೊಂಡಿದ್ದನೆಂದರೆ ನನ್ನ ಫೋಟೊಗಳನ್ನು ಮುಟ್ಟಿ ನೋಡಿ "ಅಹಾ ಈ ಪೇಂಟಿಂಗ್ಸ್ ಎಷ್ಟು ಚೆನ್ನಾಗಿದೆ" ಅಂದವನೇ ಪಕ್ಕದಲ್ಲಿದ್ದ ನನ್ನ ಭಾವನ ದೊಡ್ಡ ಚಿತ್ರಕಲಾಕೃತಿಯನ್ನು ನೋಡಿ ಈ ಫೋಟೊ ಎಲ್ಲಿ ತೆಗೆದಿದ್ದು ಅಂತ ಕೇಳಿದ. ಅವನ ಮಾತನ್ನು ಕೇಳಿ ನಾವಿಬ್ಬರೂ ಅಚ್ಚರಿಯಿಂದ ಮುಖ ನೋಡಿಕೊಂಡೆವು.


೨. ಆ ಪ್ರೇಮಿಗಳು ಕಳೆದ ಚಿತ್ರಸಂತೆಗೂ ಬಂದಿದ್ದರು. ಈ ಬಾರಿಯೂ ಬಂದಿದ್ದಾರೆ. ಆದ್ರೆ ಚಿತ್ರಸಂತೆಯೊಂದು ಅವರಿಗೆ ನೆಪ. ಬೆಂಗಳೂರಿನ ಎಲ್ಲಾ ಜಾಗದಲ್ಲಿ ಆಡ್ಡಾಡಿ ಸಾಕಾಗಿ ಚಿತ್ರಸಂತೆಯಲ್ಲಿ ಮತ್ತಷ್ಟು ಪ್ರೇಮಿಗಳಾಗುತ್ತಿದ್ದಾರೆ. ಅವರಂದುಕೊಂಡಿದ್ದಾರೆ ನಮ್ಮನ್ಯಾರು ಗಮನಿಸುವುದಿಲ್ಲವೆಂದು. ಆದ್ರೆ ಆವನ್ಯಾವನೋ ಛಾಯಾಗ್ರಾಹಕ ಇವರ ಪ್ರೇಮದಾಟವನ್ನು ಫೋಟೊ ತೆಗೆದೇಬಿಟ್ಟಿದ್ದ. ಆ ಫೋಟೊ ಇನ್ನೊಬ್ಬ ಚಿತ್ರಕಾರನ ಕೈಸೇರಿ ಅದ್ಭುತ ಕಲಾಕೃತಿಯಾಗಿ ಈ ವರ್ಷದ ಸಂತೆಯಲ್ಲಿ ಮಾರಾಟಕ್ಕಿದೆ. ಮತ್ತೆ ಈ ಬಾರಿ ಇವರನ್ನು ನೋಡಿದ ಛಾಯಾಗ್ರಾಹಕ ಕ್ಯಾಮೆರಾ ಕೈಗೆತ್ತಿಕೊಂಡ. ಆದ್ರೆ ಇವರಿಬ್ಬರೂ ಇದ್ಯಾವುದರ ಪರಿವೆಯೂ ಇಲ್ಲದೇ ಮತ್ತಷ್ಟು ಪ್ರೇಮಿಗಳಾಗುತ್ತಿದ್ದರು.


೩. ಸಂಜೆಯಾಗುತ್ತಿತ್ತು. ಇನ್ನೊಂದು ಸಾವಿರ ವ್ಯಾಪಾರವಾದರೆ ಹತ್ತು ಸಾವಿರವಾಗುತ್ತದೆ ಅಂತ ಆ ಕಲಾವಿದನು ಜೇಬಿನಲ್ಲಿದ್ದ ಒಂಬತ್ತು ಸಾವಿರಗಳ ನೋಟುಗಳನ್ನು ಮುಟ್ಟಿನೋಡಿಕೊಳ್ಳುತ್ತಿದ್ದರೇ, ಉತ್ತಮ ಚಿತ್ರಕಲಾಕೃತಿಯನ್ನು ಕೊಳ್ಳಲು ಹೇಗೆ ಚೌಕಾಸಿ ಮಾಡುಬೇಕು ಅಂತ ಈ ಕಲಾಸಕ್ತ ಜೇಬಿನೊಳಗಿದ್ದ ಒಂದು ಸಾವಿರ ನೋಟನ್ನು ಮುಟ್ಟಿನೋಡಿಕೊಳ್ಳುತ್ತಿದ್ದ. ಹೀಗೆ ಆ ರಸ್ತೆಯಲ್ಲಿದ್ದ ಕಲಾವಿದರು, ನೋಡಲು-ಕೊಳ್ಳಲು ಬಂದ ಕಲಾಭಿಮಾನಿಗಳ ಕೈಗಳೆಲ್ಲಾ ತಮ್ಮ ತಮ್ಮ ಜೇಬುಗಳಲ್ಲಿದ್ದವು. ಇವೆಲ್ಲಾದರ ನಡುವೆ ಅಲ್ಲಲ್ಲಿ ಪುಟ್ಟ ಪುಟ್ಟ ಮಕ್ಕಳು ತಮ್ಮೆದುರಿಗಿದ್ದ ಚಿತ್ರಗಳನ್ನು ಮುಟ್ಟುತ್ತಾ, ಇನ್ನೂ ಹತ್ತಿರ ಹೋಗಿ ಮೂಗಿನಿಂದ ಬಣ್ಣಗಳ ವಾಸನೆಯನ್ನು ಆಹ್ಲಾದಿಸುತ್ತಾ, ಕಣ್ಣರಳಿಸಿ ನೋಡಿ, ಮನತುಂಬಿಕೊಳ್ಳುತ್ತಿದ್ದವು.

Add Image


೪.ಆತ ಕುಳಿತಲ್ಲೇ ಮುಖಚಿತ್ರ ರಚಿಸುವ ಕಲಾವಿದ. ಸಂಜೆ ಐದುಗಂಟೆಗೆ ಒಂದು ಪುಟ್ಟ ಹುಡುಗಿಯನ್ನು ಎದುರಿಗೆ ಕೂರಿಸಿ ಮುಖಚಿತ್ರ ಬರೆಯಲು ಶುರುಹಚ್ಚಿಕೊಂಡ. ಕಣ್ಣಮುಂದೆ ಕಂಡಿದ್ದನ್ನು ಕಣ್ಣಿಗೆ ಕಟ್ಟುವಂತೆ ಬರೆಯುವ ಮುಖಚಿತ್ರ ಕಲಾವಿದನಾದರೂ ಅವನದು ನಿಧಾನವೇ ಪ್ರಧಾನ ಎನ್ನುವದು ಅವನ ಮಂತ್ರ. ಅದರ ಪರಿಣಾಮ ಆರುಗಂಟೆಯ ಹೊತ್ತಿಗೆ ಮುಖದ ಹೊರರೇಖೆಗಳನ್ನು ಎಳೆದಿದ್ದ. ೬-೩೦ರ ಹೊತ್ತಿಗೆ ಕತ್ತಲಾಗಿ ಆ ಬೆಳ್ಳಗಿನ ಮಗುವಿನ ಮುಖಕ್ಕೂ ಕತ್ತಲು ಆವರಿಸುತ್ತಿತ್ತು. ೭-೩೦ಕ್ಕೆ ಎದುರಿಗೆ ಕುಳಿತಿದ್ದ ಬೆಳ್ಳಂಬೆಳಗಿನ ಮಗುವಿನ ಮುಖ ಚಿತ್ರದಲ್ಲಿ ಕಪ್ಪಾಗಿತ್ತು.


೫. ಸದಾ ಹೊಸತರ ಬಗ್ಗೆ ಚಿಂತಿಸುವ ಕಲಾವಿದನಾಗಿದ್ದ ಆತ ಅವತ್ತು ಮಾರಾಟಕ್ಕೆ ಯಾವುದೇ ಕಲಾಕೃತಿಯನ್ನು ತಂದಿರಲಿಲ್ಲ. ಆದ್ರೆ ಕೈಯಲ್ಲಿ ಒಂದು ಕ್ಯಾನ್ವಸ್,ಬ್ರಷ್, ಬಣ್ಣಗಳನ್ನು ಹಿಡಿದಿದ್ದ. ಅರ್ಧದಿನ ಚಿತ್ರಸಂತೆ ಸುತ್ತಾಡಿದರೂ ಹೊಸತೇನು ಸ್ಪೂರ್ತಿ ಸಿಕ್ಕಲಿಲ್ಲವಾದ್ದರಿಂದ ಬೇಸರಗೊಂಡು ಇದೆಲ್ಲಾ ಗೊಡವೆಯೇ ಬೇಡವೆಂದು ಪಕ್ಕದಲ್ಲಿದ್ದ ಅಪಾರ್ಟ್‍ಮೆಂಟಿನ ಟೆರಸ್ ಮೇಲೆ ವಿಶ್ರಾಂತಿಗೆಂದು ಕುಳಿತವನು ಕೆಳಗೆ ನೋಡಿದ. ಸಾಗರೋಪಾದಿಯಲ್ಲಿ ಚಿತ್ರಸಂತೆ ನೋಡಲು ಬರುತ್ತಾಹೋಗುತ್ತಿದ್ದರು. ನೋಡನೋಡುತ್ತಿದ್ದಂತೆ ಅದನ್ನೆ ಕ್ಯಾನ್ವಸ್ ಮೇಲೆ ಬಿಡಿಸಿ ಬಣ್ಣದಿಂದ ಅಲಂಕರಿಸಿ ಕೆಳಗೆಬಂದು ತನ್ನ ಜಾಗದಲ್ಲಿ ಪ್ರದರ್ಶನಕ್ಕಿಟ್ಟ. ಇದು ನಿಜಕ್ಕೂ ಹೊಸತನವೆಂದು ಕಲಾಸಕ್ತರು ಅದನ್ನು ಕೊಳ್ಳಲು ಮುಗಿಬಿದ್ದರು.

ಈ ನ್ಯಾನೋ ಕತೆಗಳೆಲ್ಲಾ [14-3-2010]ಭಾನುವಾರ ವಿಜಯಕರ್ನಾಟಕದಲ್ಲಿ ಬಂದಿದ್ದವು.

ಚಿತ್ರಗಳು ಮತ್ತು ಲೇಖನ
ಶಿವು.ಕೆ.

Saturday, March 13, 2010

ಬೆಕ್ಕಿಗೆ ಜ್ವರ ಬರುವ ಮಾತಾಡಬೇಡ್ರೀ!
ಬೆಳಿಗ್ಗೆ ಸಮಯ ೮-೩೦. ಅವರು ವರಾಂಡದಲ್ಲಿ ದಿನಪತ್ರಿಕೆ ಓದುತ್ತಾ ಕುಳಿತಿದ್ದರು. "ಸರ್, ನ್ಯೂಸ್ ಪೇಪರ್ ಬಿಲ್" ಅಂದೆ. ಒಮ್ಮೆ ಕತ್ತೆತ್ತಿ ನೋಡಿ, ಎಷ್ಟಾಯ್ತು ಅಂದರು. ಹೇಳಿದೆ. ಜೇಬಿಗೆ ಕೈ ಹಾಕಿದರು. ಅವರು ನನ್ನ ಅತ್ಯಂತ ಆತ್ಮೀಯವಾದ ಗ್ರಾಹಕ. ಅವರಿಗೆ ಹದಿಮೂರು ವರ್ಷಗಳಿಂದ ನನ್ನ ಕಡೆಯಿಂದಲೇ ದಿನಪತ್ರಿಕೆ ತಲುಪುತ್ತಿದೆ. ನನ್ನ ವೆಂಡರ್ ಕಣ್ಣು ಪುಸ್ತಕವನ್ನು ಓದಿದ್ದಲ್ಲದೇ ನನ್ನೆಲ್ಲಾ ಚಟುವಟಿಕೆಗಳನ್ನು ಅರಿತವರು. ಜೇಬಿನಿಂದ ಒಂದು ಸಾವಿರದ ನೋಟನ್ನು ತೆಗೆದುಕೊಟ್ಟರು.
"ಸಾರ್ ಚಿಲ್ಲರೆ ಇಲ್ಲವಲ್ಲ"
ನನ್ನ ಕಡೆಗೊಮ್ಮೆ ವ್ಯಂಗ್ಯವಾಗಿ ನೋಡಿ,
"ನಿನ್ನ ಬಳಿ ಸಾವಿರ ರೂಪಾಯಿಗೆ ಚಿಲ್ಲರೆ ಇಲ್ವಾ, ಬೆಕ್ಕಿಗೆ ಜ್ವರ ಬರೋ ಮಾತಾಡಬೇಡ"

ಅವರ ಮಾತಿಗೆ ಮರುಉತ್ತರ ಹೇಳದೆ ಚಿಲ್ಲರೆ ಎಣಿಸಿಕೊಟ್ಟು,

"ಸರ್ ಬೆಕ್ಕಿಗೆ ನಿಜಕ್ಕೂ ಜ್ವರ ಬರುತ್ತಾ" ಕೇಳಿದೆ.

ನನ್ನನ್ನೊಮ್ಮೆ ನೋಡಿ ನಕ್ಕು ಹಣ ಎಣಿಸಿಕೊಂಡರು.

"ಪೋಟೊ ತೆಗಿತೀಯಾ, ಪತ್ರಿಕೆಗೆ ಲೇಖನ ಬರೀತೀಯ, ಬ್ಲಾಗ್ ಬರೀತೀಯಾ, ಪುಸ್ತಕ ಬರೀತೀಯಾ, ಇದನ್ನು ಕಂಡುಹಿಡಿಯಕಾಗೊಲ್ವಾ?" ಅಂದರು.
ನನಗೂ ಹೌದಲ್ವಾ ಅನ್ನಿಸಿತು. ಅವರಿಗೆ ಥ್ಯಾಂಕ್ಸ್ ಹೇಳಿ ಅ ಮನೆಯಿಂದ ಹೊರಬರುವ ಹೊತ್ತಿಗೆ ನನ್ನ ತಲೆಯಲ್ಲಿ ಹೊಸ ಹುಳುವೊಂದು ಹೊಕ್ಕಿತ್ತು.

ಹೌದು ಬೆಕ್ಕಿಗೆ ನಿಜಕ್ಕೂ ಜ್ವರ ಬರುತ್ತಾ? ಜ್ವರ ಬಂದಾಗ ಬೆಕ್ಕು ಏನೇನು ಮಾಡಬಹುದು, ಇದನ್ನು ತಿಳಿಯುವುದು ಹೇಗೆ? ಇಷ್ಟಕ್ಕೂ ಈ ಪದ ಹುಟ್ಟಿದ್ದು ಹೇಗೆ? ಯಾರಾದರೂ ಕನ್ನಡ ಪಂಡಿತರನ್ನು ಕೇಳಿದರೆ ಹೇಗೆ ಅನ್ನಿಸಿತು ಇನ್ನೇಕೆ ತಡ,

ಓವರ್ ಟು ಡಾ.ಶೇಷಾಶಾಸ್ತ್ರಿ.

"ಸಾರ್, ಬೆಕ್ಕಿಗೆ ಜ್ವರ ಬರುತ್ತಾ?" ನೇರ ಕೇಳಿದೆ.

"ಇದೇನಪ್ಪ ಹೀಗೆ ಕೇಳ್ತೀಯಾ...ಫೋಟೋ ತೆಗೆಯುವುದು ಬಿಟ್ಟು ಬೆಕ್ಕಿನ ಹಿಂದೆ ಬಿದ್ದಿದ್ದು ಯಾಕೆ" ಅಂದರು.

ಅವರಿಗೆ ನಡೆದ ವಿಚಾರವನ್ನು ವಿವರಿಸಿ ಅವರ ಉತ್ತರಕ್ಕಾಗಿ ಕಾಯುತ್ತಿದ್ದೆ.
"ನೋಡಪ್ಪ ಶಿವು, ಬೆಕ್ಕಿಗೆ ಜ್ವರ ಬರುತ್ತಾ ಅನ್ನುವ ಪದ ಇಲ್ಲ ಅದು ನಿಜಕ್ಕೂ ಬೆಂಕಿಗೆ ಜ್ವರ ಬರುತ್ತಾ ಅಂತ ಇತ್ತು. ಬೆಂಕಿ ಅಂದರೆ ಬಿಸಿ, ಜ್ವರ ಅಂದರೂ ಬಿಸಿ, ಬೆಂಕಿಗೆ ಜ್ವರ ಬರುತ್ತಾ ಅನ್ನುವ ಮಾತು ಆಡಿಕೊಂಡು ಬಂದ ಜನ ಒಂದು ದಿನ ಸೊನ್ನೆಯನ್ನು ನುಂಗಿಹಾಕಿ ಬೆಕ್ಕು ಮಾಡಿದರು. ಇಷ್ಟಕ್ಕೂ ಅದು ತಪ್ಪೇನಲ್ಲ. ಬೆಕ್ಕಿನ ಮೈ ಕೂಡ ಯಾವಾಗಲೂ ಬಿಸಿಯಾಗಿರುತ್ತದೆ. ಹೀಗಿರುವಾಗ ಅದು ಜ್ವರದಲ್ಲಿದ್ದಂತೆ ತಾನೆ. ಮತ್ತೆ ಅದಕ್ಕೆ ಹೊಸದಾಗಿ ಬಂದ ಜ್ವರಕ್ಕೆ ಜಾಗವೆಲ್ಲಿ ಇರುತ್ತದೆ? ಅಂದರು.
ನನಗೂ ಹೌದಲ್ವಾ ಅನ್ನಿಸಿತು.

"ಇಷ್ಟೇ ಅಲ್ಲಪ್ಪ ಶಿವು, ಬೆಕ್ಕಿನ ಹಿಂದೆ ಬಿದ್ದಿದ್ದೀಯಾ ಅಂತ ಹೇಳ್ತೇನೆ ಕೇಳು, ಬೆಕ್ಕಿನ ಬಗ್ಗೆ ತುಂಬಾ ಮಾತುಗಳಿವೆ, ಬೆಕ್ಕನ್ನು ಕಂಕುಳಲ್ಲಿ ಇಟ್ಟುಕೊಂಡಂತೆ ಆಯ್ತು" ಅಂತ ಹೇಳ್ತಾರೆ ಗೊತ್ತಾ? ಹಾಗಂದರೆ ಬೆಕ್ಕು ಅಪಶಕುನ, ಅದು ಎದುರಿಗೆ ಬಂದರೆ ಅಪಶಕುನ ಅಂತ ಎಲ್ಲರೂ ಹೇಳ್ತಾರೆ, ಇನ್ನು ಅದನ್ನೇ ಕಂಕುಳಲ್ಲಿ ಇಟ್ಟುಕೊಂಡು ಬಂದರೆ ಯಾವ ಶುಭಕೆಲಸವೂ ಆಗುವುದಿಲ್ಲವೆಂದು ಅರ್ಥ" ಅಂದರು.
ನಾನು ಸುಮ್ಮನಿರಲಿಲ್ಲ. "ಸಾರ್, ಈ ಮಾತು ಅಷ್ಟು ಸತ್ಯವಲ್ಲ ಅಂತ ನನ್ನ ಭಾವನೆ ಏಕೆಂದರೆ ನನಗೆ ಪ್ರತಿನಿತ್ಯ ಬೆಳಗಿನ ನಾಲ್ಕು ಗಂಟೆಗೆ ಹೋಗುವಾಗ ಒಂದು ಬೆಕ್ಕು ನನ್ನ ದಾರಿಗೆ ಆಡ್ಡಬರುತ್ತಿರುತ್ತದೆ. ಆದರೂ ನನಗೇನು ತೊಂದರೆಯಾಗಿಲ್ಲ ಅಪಶಕುನವಾಗಿಲ್ಲವಲ್ಲ ಸರ್?" ಅಂದೆ.

"ನೋಡಪ್ಪ, ನಿನಗೆ ಮತ್ತು ನನಗೆ ಅಪಶಕುನ ಆಗಿಲ್ಲದಿರಬಹುದು, ಆದ್ರೆ ಹೊರಪ್ರಪಂಚದಲ್ಲಿ ಈ ಮಾತನ್ನು ಎಲ್ಲರೂ ನಂಬುತ್ತಾರೆ, ಅವರ ನಂಬಿಕೆಯಿಂದ ಅವರಿಗೆ ಖುಷಿಯಾಗುವುದಾದರೆ ಅದು ತಪ್ಪು ಅಂತ ಹೇಳಲು ನಾನು ನೀನು ಯಾರು ?" ಅಂದರು.

ಅವರ ಮಾತು ಕೂಡ ಒಂದು ರೀತಿಯಲ್ಲಿ ಸರಿಯೆನಿಸಿತು. ನಮಗಾಗದ ಅನುಭವ ಬೇರೆಯವರಿಗೆ ಆಗಿರಬಹುದಲ್ಲವೇ? ಆಗಿಲ್ಲದಿದ್ದರೂ ಆದರ ಹಿಂದೆ ಏನೋ ಒಳ್ಳೇ ಉದ್ದೇಶವೇ ಇರುವುದರಿಂದ ಆ ಮಾತು ರೂಡಿಯಲ್ಲಿರಬಹುದು ಅನ್ನಿಸಿತು.
ಹಾಗೆ ಮತ್ತಷ್ಟು ಬೆಕ್ಕಿನ ಕತೆ ಹೇಳಿದರು. ಬಡವರ ಮನೆಯ ಒಲೆಯಲ್ಲಿ ಮಲಗಿದ ಬೆಕ್ಕು ಏಳಲಿಲ್ಲವೆಂದರೆ ಅವತ್ತು ಒಲೆ ಹಚ್ಚಲಿಲ್ಲವೆಂದು ಅರ್ಥ. ಹೇಗೆಂದರೆ ಬೆಕ್ಕು ಸಹಜವಾಗಿ ಬಿಸಿಮೈಯನ್ನು ಹೊಂದಿರುತ್ತದೆ. ಅದು ಮಲಗಿಬಿಟ್ಟಿತೆಂದರೆ ಅದರ ಬಿಸಿ ಇಲ್ಲ. ಅಂದಮೇಲೆ ಬಿಸಿಯಿಲ್ಲದ ಒಲೆ ಎಂದರೆ ಬೆಂಕಿಯಿಲ್ಲದ ಒಲೆ ಅಂತಲೇ ಅರ್ಥವಲ್ಲವೇ? ಅಂದರು. ಜೊತೆಗೆ ತೆನಾಲಿ ರಾಮನ ಬೆಕ್ಕು, ತೆಲುಗಿನಲ್ಲಿ ಬೆಕ್ಕಿನ ಮಾತುಗಳು, ಗಾದೆಗಳು, ಮಠದಲ್ಲಿ ಧ್ಯಾನ ಮಾಡುತ್ತಾ ಕುಳಿತ ಬೆಕ್ಕು, ಸನ್ಯಾಸಿ ಸಾಕಿದ ಬೆಕ್ಕು, ಹೀಗಿನ ಮಾಡ್ರನ್ ಬೆಕ್ಕು,..........ಹೀಗೆ ಬೆಕ್ಕಿನ ಅನೇಕ ಕತೆ ಹೇಳಿದರು.

ಅವರ ಉತ್ತರ ನನಗೆ ಸಮಂಜಸವೆನಿಸಿತ್ತು. ಆದರೂ ನನ್ನ ಮನಸ್ಸಿನಲ್ಲೊಂದು ಕಡೆ ಇದನ್ನು ಪ್ರಾಕ್ಟಿಕಲ್ ಆಗಿ ನೋಡಿದರೆ ಹೇಗೆ? ಅನ್ನಿಸತೊಡಗಿತ್ತು. ಹಾಗಾದರೆ ಅದನ್ನು ಕಂಡುಹಿಡಿಯುವುದು ಹೇಗೆ? ನೇರ ಪಶುವೈದ್ಯರನ್ನೇ ಸಂಪರ್ಕಿಸಿದರೇ?

ಹೌದಲ್ವಾ ಅನ್ನಿಸಿತು. ನನ್ನ ಆರುನೂರು ಗ್ರಾಹಕರನ್ನು ಮನಸ್ಸಿನಲ್ಲಿಯೇ ಸ್ಕ್ಯಾನ್ ಮಾಡಿದೆ. ಅರೆರೆ ನನ್ನ ಕಡೆಯಿಂದಲೇ ದಿನಪತ್ರಿಕೆ ಕೊಳ್ಳುವ ಪಶುವೈದ್ಯರೊಬ್ಬರು ಮಲ್ಲೇಶ್ವರಂನಲ್ಲಿದ್ದಾರಲ್ಲಾ? ಇನ್ನೇಕೆ ತಡ ಹೊರಟೇಬಿಟ್ಟೆ ಅವರ ಮನೆಕಡೆಗೆ.


ಓವರ್ ಟು ವೆಟರ್‍ನರಿ ಡಾಕ್ಟರ್.
"ಸರ್" ಕೂಗಿದೆ. ಅವರು ಹೊರಬಂದು ನನ್ನನ್ನು ನೋಡಿ,
"ರೀ ನಿಮಗೆ ಎರಡು ದಿನಗಳ ಹಿಂದೆ ಪೇಪರ್ ದುಡ್ಡು ಕೊಟ್ಟಿದ್ದೀನಲ್ರೀ?" ಅಂದರು.

"ಸರ್, ನಾನು ಹಣಕ್ಕಾಗಿ ಬರಲಿಲ್ಲ."

"ಮತ್ಯಾಕೆ ಬಂದ್ರಿ,"

"ನೀವು ಪಶುವೈದ್ಯರಲ್ಲವೇ, ನಿಮ್ಮಿಂದ ಒಂದು ವಿಚಾರ ತಿಳಿಯಬೇಕಿತ್ತು." ಕೇಳಿದೆ.

"ಏನದು"

"ಸರ್, ಬೆಕ್ಕಿಗೆ ಜ್ವರ ಬರುತ್ತಾ? ಜ್ವರ ಬಂದ ಬೆಕ್ಕುಗಳಿಗೆ ಚಿಕಿತ್ಸೆ ಮಾಡುತ್ತೀರಾ?" ಕೇಳಿದೆ.

ಅವರು ನನ್ನ ಮುಖವನ್ನೊಮ್ಮೆ ನೋಡಿದರು. ಬೇರೆಯವರು ಬೆಳಿಗ್ಗೆ ಇಂಥ ಪ್ರಶ್ನೆ ಕೇಳಿದ್ದರೇ ಬೈದುಕಳಿಸುತ್ತಿದ್ದರೇನೋ. ನನ್ನ ಇಂಥ ತೆವಲುಗಳನ್ನು ಅರಿತಿದ್ದ ಅವರು,

"ನೋಡ್ರೀ ಶಿವು, ಬೆಕ್ಕಿಗೆ ಜ್ವರ ಬರುತ್ತೇ ಕಣ್ರೀ, ನಮ್ಮಂತೆ ಅದಕ್ಕೂ ಬಾಡಿ ಟೆಂಪರೇಚರ್ ಇರುತ್ತೆ ಅದು ಹೆಚ್ಚಾದಾಗ ಜ್ವರ ಬರುತ್ತೆ ಗೊತ್ತಾ?"

"ಅದಕ್ಕೆ ಜ್ವರ ಬಂದಿದೆ ಅಂತ ನಾವು ಹೇಗೆ ಕಂಡುಹಿಡಿದುಕೊಳ್ಳುವುದು? ಅದನ್ನು ನೀವು ಹೇಗೆ ಪರೀಕ್ಷೆ ಮಾಡುತ್ತೀರಿ?"

"ಮನೆಯಲ್ಲಿ ಸಹಜವಾಗಿರುವ ಬೆಕ್ಕು ಸುಮ್ಮನೆ ಕೂಗಾಡುವುದು, ಊಟ ಸರಿಯಾಗಿ ಮಾಡದಿರುವುದು, ಹೀಗೆ ಅದರ ಚಟುವಟಿಕೆಯಲ್ಲಿ ವ್ಯತ್ಯಾಸ ಕಂಡಾಗ ಮನೆಯ ಯಜಮಾನರು ಅದನ್ನು ನೋಡಿ ಬೆಕ್ಕಿಗೆ ಏನೋ ಕಾಯಿಲೆ ಬಂದಿದೆ ಅಂತ ತಿಳಿದುಕೊಳ್ಳಬೇಕು, ನಮ್ಮಲ್ಲಿಗೆ ಅವನನ್ನು ಕರೆತರಬೇಕು. ನಾವು ಅದನ್ನು ಪರೀಕ್ಷೆ ಮಾಡುತ್ತೇವೆ."

"ನೀವು ನಮ್ಮ ಬಾಯಿಗೆ ಥರ್ಮಾಮೀಟರ್ ಇಟ್ಟಂತೆ ಅದರ ಬಾಯಿಗೂ ಇಟ್ಟು ನೋಡುತ್ತೀರಾ?"

" ನೋಡಿ ಶಿವು ಇಲ್ಲೊಂದು ಸೂಕ್ಷ್ಮವಿದೆ. ಪ್ರತಿಯೊಂದು ಜೀವದ ಗುದದ್ವಾರದಲ್ಲಿ ಥರ್ಮಾಮೀಟರ್ ಇಟ್ಟಾಗ ಮಾತ್ರ ಸರಿಯಾದ ಟೆಂಪರೇಚರ್ ಗೊತ್ತಾಗುವುದು. ನಾವು ಮನುಷ್ಯರು ಆ ವಿಚಾರದಲ್ಲಿ ಮಾನ ಮರ್ಯಾದೆ, ನಾಚಿಕೆ ಅಂತ ಮಾಡಿಕೊಂಡು ಆ ಕೆಲ ಮರ್ಮಗಳನ್ನು ಹೊರ ಪ್ರಪಂಚಕ್ಕೆ ತೋರಿಸಲಾಗದ ಮಟ್ಟದ ಸಂಸ್ಕಾರವಂತರಾಗಿದ್ದೇವೆ. ಈ ಕಾರಣದಿಂದಾಗಿ ನಾವು ಬಾಯಿಯಲ್ಲಿ ಥರ್ಮಾಮೀಟರ್ ಇಟ್ಟು ಜ್ವರ ಬಂದಿದೆಯಾ ಅಂತ ನೋಡುತ್ತೇವೆ. ಆದ್ರೆ ಬೆಕ್ಕಿಗೆ ಅದರ ಗುದದ್ವಾರದಲ್ಲೇ ಥರ್ಮಾಮೀಟರ್ ಇಟ್ಟು ನೋಡಬೇಕು. ಮನುಷ್ಯನ ದೇಹದ ಸಹಜ ಉಷ್ಣಾಂಶ ೯೮ ಡಿಗ್ರಿ ಆಸುಪಾಸು ಇರುತ್ತದೆ. ಅದು ಎರಡು ಮೂರು ಡಿಗ್ರಿ ಹೆಚ್ಚಾದಾಗ ಜ್ವರ ಬಂತು ಅಂದುಕೊಳ್ಳುತ್ತೇವೆ. ಬೆಕ್ಕಿನ ಉಷ್ಣಾಂಶ ಮನುಷ್ಯರಿಗಿಂತ ೨-೩ [ಬೆಕ್ಕಿನ ಸಹಜ ಉಷ್ಣತೆ ೧೦೧.೭]ಡಿಗ್ರಿ ಹೆಚ್ಚೇ ಇರುತ್ತದೆ. ಅದಕ್ಕಿಂತ ಹೆಚ್ಚಾದಾಗ ಅದಕ್ಕೆ ಜ್ವರ ಬಂದಿದೆ ಅಂತ ಅರ್ಥ."

"ಸರ್ ನಮಗೆ ನೀರು, ಊಟದ ವ್ಯತ್ಯಾಸ, ವಾತಾವರಣ, ಕೆಲಸ ಒತ್ತಡದಿಂದ ಜ್ವರ ಬರಬಹುದು. ಆದ್ರೆ ಬೆಕ್ಕಿಗೆ ಜ್ವರ ಬರಲು ಕಾರಣಗಳೇನು?"


"ಬೆಕ್ಕು ಸದಾ ಶುಚಿಯಾಗಿರಲು ಇಷ್ಟಪಡುತ್ತದೆ. ಆದಕ್ಕೆ ಜ್ವರ ಬರುವುದು ಕಡಿಮೆ. ಅದು ತನ್ನ ಆಯುಷ್ಷಿನ ೭೫ % ತನ್ನ ದೇಹದ ಎಲ್ಲಾ ಭಾಗವನ್ನು ನೆಕ್ಕಿ ನಿಕ್ಕಿ ಶುಚಿಮಾಡಿಕೊಳ್ಳುವುದರಲ್ಲೇ ಕಳೆಯುತ್ತದೆ. ಈ ಸಮಯದಲ್ಲಿ ಬಾಯಿಯ ಮೂಲಕ ಅದರದೇ ದೇಹದ ಕೂದಲುಗಳು ದೇಹವನ್ನು ಸೇರಿ ಕರುಳಿನಲ್ಲಿ ಕೂದಲಗಂಟು[ಏರ್‍ಬಾಲ್]ಶೇಖರಣೆಯಾಗಿ ಆಹಾರ ಜೀರ್ಣಕ್ರಿಯೆಗೆ ತೊಂದರೆಯಾಗಿ ಅದರ ಚಟುವಟಿಕೆಯಲ್ಲಿ ವ್ಯತ್ಸಾಸವಾಗುತ್ತದೆ. ಅದು ಇಲಿಯನ್ನು ಹಿಡಿದು ತಿನ್ನುವುದರಿಂದ ಇಲಿಯ ದೇಹದ ಚಿಗುಟಗಳು ಬೆಕ್ಕಿನ ಮೈಮೇಲೆ ಬಂದು ಚರ್ಮದ ತೊಂದರೆಯಾಗಿ ಹೊಟ್ಟೆಯಲ್ಲಿ ಲಾಡಿಹುಳ ಆಗುತ್ತದೆ. ಆಗ ಡಾಕ್ಟರಿಗೆ ತೋರಿಸಬೇಕು. ಬೆಕ್ಕಿಗೂ ರೇಬಿಸ್ ರೋಗ ಬರುವುದರಿಂದ ವರ್ಷಕ್ಕೆ ಒಂದೆರಡು ಬಾರಿ ಚುಚ್ಚು ಮದ್ದು ಕೊಡಿಸಬೇಕು."

"ಅದಕ್ಕೆ ಚಿಕಿತ್ಸೆ ಮಾಡುವಾಗ ಅದರ ಪ್ರತಿಕ್ರಿಯೆ ಹೇಗಿರುತ್ತದೆ?"

ಈ ಪ್ರಶ್ನೆಗೆ ನನ್ನ ಮುಖವನ್ನು ನೋಡಿ " ನೀವು ನಮ್ಮ ಆಸ್ಪತ್ರೆ ಬನ್ನಿ ಅಲ್ಲೇ ನೋಡುವಿರಂತೆ ಅಂದರು."ಓವರ್ ಟು ಪಶು ವೈದ್ಯಶಾಲ.

ಟೇಬಲ್ಲಿನ ಮೇಲೆ ಕುಳಿತ ಬೆಕ್ಕಿನ ಕುತ್ತಿಗೆಗೆ ಒಂದು ಬೆಲ್ಟ್ ಹಾಕಿದ್ದರು. ಅದರ ಮತ್ತೊಂದು ತುದಿಯನ್ನು ಟೇಬಲ್ಲಿನ ಒಂದು ಭಾಗಕ್ಕೆ ಕಟ್ಟಿದ್ದರು. ಹೊಸ ವಾತಾವರಣದಲ್ಲಿ ಚಿಕಿತ್ಸೆ ಮಾಡುವಾಗ ಹೆದರಿ ತಪ್ಪಿಸಿಕೊಳ್ಳಬಾರದೆಂದು ಈ ಕ್ರಮ. ಮೇಲೆ ಹೇಳಿದಂತೆ ಗುದದ್ವಾರದಲ್ಲಿ ಥರ್ಮಾಮೀಟರ್ ಇಟ್ಟು ಜ್ವರವೆಷ್ಟಿದೆಯೆಂದು ತಿಳಿದು ಚುಚ್ಚುಮದ್ದು ಸಿದ್ದಮಾಡಿಕೊಂಡರು. ಇಲ್ಲಿ ತನಗೇನೋ ಮಾಡಲು ಯತ್ನಿಸುತ್ತಿದ್ದಾರೆ ಅಂತ ಬೆಕ್ಕಿಗೆ ಅನ್ನಿಸಿತೇನೋ, ಜೋರಾಗಿ ಕಿರುಚಿತು. ಡಾಕ್ಟರಿಗೆ ಪರಚಲು ಪ್ರಯತ್ನಿಸಿತು. ಈ ವಿಚಾರದಲ್ಲಿ ಡಾಕ್ಟರಿಗೆ ಮೊದಲೇ ಅನುಭವವಿದ್ದದ್ದರಿಂದ ಹುಷಾರಾದರು. ಬೆಕ್ಕಿನ ಎರಡು ಕಿವಿಗಳ ನಡುವೆ ನೇವೇರಿಸಲು ಅದರ ಯಜಮಾನನಿಗೆ ಹೇಳಿದರು. ಆವರು ಹಾಗೆ ಮಾಡಿದಾಗ ಬೆಕ್ಕು ಸಮಾಧಾನವಾಯಿತು. ಅದೇ ಸಮಯದಲ್ಲಿ ನಿದಾನವಾಗಿ ಚುಚ್ಚುಮದ್ದು ಕೊಟ್ಟಾಗ ಒಮ್ಮೇ ಜೋರಾಗಿ ಬಾಯಿ ತೆರೆದು ಮುಖ ಕಿವುಚಿದಂತೆ ಮಾಡಿತು. ಅಷ್ಟರಲ್ಲಿ ಡಾಕ್ಟರು ತಮ್ಮ ಕೆಲಸ ಮುಗಿಸಿದ್ದರು. ಯಜಮಾನನಿಗೆ ಬೆಕ್ಕಿಗೆ ಬೇಕಾದ ಹಾಗೆ ಪತ್ಯವನ್ನು ಹೇಳಿ ಮಾತ್ರೆ ಇತ್ಯಾದಿಗಳನ್ನು ಕೊಟ್ಟು ಕಳಿಸಿದರು.

"ಈಗ ಗೊತ್ತಾಯ್ತಾ ಬೆಕ್ಕಿಗೆ ಜ್ವರ ಬರುತ್ತೇ ಅಂತ?"

"ನಿಮ್ಮಿಂದ ತುಂಬಾ ತುಂಬಾ ವಿಚಾರ ತಿಳಿಯಿತು ಸರ್" ಅಂತ ಅವರಿಗೆ ಧನ್ಯವಾದ ಹೇಳಿ ಮನೆಗೆ ಬಂದೆ. ನಾನು ಬರುವುದನ್ನೇ ಕಾಯುತ್ತಿದ್ದ ಹೇಮಾಶ್ರಿ "ರ್ರೀ.... ಗ್ಯಾಸ್ ಬುಕ್ ಮಾಡಿದ್ರಾ, ಲೈಟ್ ಬಿಲ್ಲಿಗೆ ಇವತ್ತು ಕೊನೇ ದಿನ ಕಟ್ಟಿದ್ರಾ, ಗೋದಿಹಿಟ್ಟು ಖಾಲಿಯಾಗಿತ್ತು ತರಲಿಕ್ಕೆ ಹೇಳಿದ್ದೆ ತಂದ್ರ?" ಕೇಳಿದಳು.
"ಅಯ್ಯೋ ಸಾರಿ ಕಣೆ. ಬೆಕ್ಕಿಗೆ ಜ್ವರ ಬರುತ್ತಾ’ ಅಂತ ತಿಳಿದುಕೊಳ್ಳೋದಿಕ್ಕೆ ಹೋಗಿ ಇವೆಲ್ಲಾ ಮರೆತುಹೋಯ್ತು ನೋಡು." ಹೇಳಿದೆ.

"ರ್ರೀ ಸಾಕು ಸುಮ್ಮನಿರಿ, ಬೆಕ್ಕಿಗೆ ಜ್ವರ ಬರೋ ಮಾತು ಆಡಬೇಡ್ರಿ" ತಕ್ಷಣ ಅವಳಿಂದ ಉತ್ತರ ಬಂತು. ಈ ವಿಚಾರವಾಗಿ ನನ್ನ ಪ್ರಾಮಾಣಿಕತೆಯನ್ನೇ ಪ್ರಶ್ನಿಸಿದ ಅವಳಿಗೆ ನಾನು ಮರು ಉತ್ತರ ಕೊಡದೆ ಸುಮ್ಮನಾಗಿದ್ದೆ.

"ಈಗ ಹೇಳಿ ಬೆಕ್ಕಿಗೆ ಜ್ವರ ಬರುತ್ತಾ?"

ಚಿತ್ರಗಳು ಮತ್ತು ಲೇಖನ.
ಶಿವು.ಕೆ

Sunday, March 7, 2010

ಇದು ತಲೆಕೂದಲಗಳ ಪುರಾಣ

"ರೀ ಈ ಸಲ ಏನಾದ್ರು ಒಂದು ಕೂದಲು ನಿಮ್ಮ ಬಟ್ಟೆ ಮೇಲಿದ್ರೆ ನಾನು ಸುಮ್ಮನಿರೋಲ್ಲ ನೋಡಿ."

"ಯಾಕೆ ? ಏನಾಯ್ತು?"

"ತಲೆಕೂದಲು ಕಟ್ ಮಾಡಿಸಿದ ಮೇಲೆ ನಿಮ್ಮ ಅಂಗಿ ಮೇಲೆ ಉದುರಿದ ಕೂದಲು ಎಷ್ಟೇ ಚೆನ್ನಾಗಿ ಬಟ್ಟೆ ಒಗೆದರೂ ಹಾಗೆ ಕಚ್ಚಿಕೊಂಡಿರುತ್ತೆ, ಥೂ.. ನೋಡಲು ಎಷ್ಟು ಅಸಹ್ಯವೆನಿಸುತ್ತೆ, ನಿಮಗಿದೆಲ್ಲಾ ಎಲ್ಲಿ ಗೊತ್ತಾಗುತ್ತೇ,"

"ಸರಿ ನಾನು ಈಗ ಏನು ಮಾಡಬೇಕು ಹೇಳು?"

"ಮಾಡೋದೇನು, ನೀವು ಕಟಿಂಗ್ ಷಾಪ್‍ನವನಿಗೆ ದುಡ್ಡು ಕೊಡೋದಿಲ್ವಾ, ಕಟಿಂಗ್ ಮಾಡುವ ಮೊದಲು ದೊಡ್ಡದಾದ ಚೆನ್ನಾಗಿರುವ ಬಟ್ಟೆಯನ್ನು ನಿಮ್ಮ ಮೈಸುತ್ತ ಹಾಕಲಿಕ್ಕೆ ಅವನಿಗೇನು ದಾಡಿ, ನಾವು ಬ್ಯೂಟಿ ಪಾರ್ಲರಿಗೆ ಹೋಗಿ ನಮ್ಮ ಕೂದಲು ಕಟ್ ಮಾಡಿಸಿಕೊಂಡರೆ ಒಂದೇ ಒಂದು ಕೂದಲ ತುಣುಕು ಕೂಡ ಮೈಮೇಲೆ ಬೀಳದಂತೆ ಜೋಪಾನವಾಗಿ ನೋಡಿಕೊಳ್ಳುತ್ತಾರೆ. ಈ ವಿಚಾರವನ್ನು ಅವನಿಗೆ ಹೇಳಿ." ಅಂತ ತಾಕೀತು ಮಾಡಿದಳು.

ಕುರ್ಚಿಯ ಮೇಲೆ ಕುಳಿತೆ. ಅವನು ಸುಮಾರಾದ ಒಂದು ಬಟ್ಟೆಯನ್ನು ನನ್ನ ಸುತ್ತ ಸುತ್ತಿ ಕುತ್ತಿಗೆ ಹಿಂಬಾಗ ಒಂದು ಗಂಟು ಹಾಕಿ, ತಲೆಗೆ ನೀರು ಚಿಮುಕಿಸಿ ಒಂದು ಸಾರಿ ಬಾಚಣಿಗೆಯಿಂದ ಬಾಚಿದ. ಅದುವರೆಗೂ ಹೇಗೇಗೋ ಎತ್ತೆತ್ತಲೋ ಅಡ್ಡಾದಿಡ್ಡಿಯಾಗಿ ಸಂತೆಯೊಳಗಿನ ಜನಗಳಂತೆ ಹರಡಿಕೊಂಡಿದ್ದ ಕೂದಲುಗಳೆಲ್ಲಾ ಆತನ ಬಾಚಣಿಗೆ ಸ್ಪರ್ಶಕ್ಕೆ ಪ್ರಾಥಮಿಕ ಶಾಲಾ ಮಕ್ಕಳು ಪ್ರಾರ್ಥನೆಗೆ ಸಾಲಾಗಿ ಭಯಭಕ್ತಿಯಿಂದ ರೋಸ್ ಮತ್ತು ಕಾಲಂ ಎರಡೂ ಕಡೆಯಿಂದ ಸರಿಯಾಗಿ ಸಮವಸ್ತ್ರಸಹಿತರಾಗಿ ನಿಲ್ಲುವಂತೆ ತಲೆಬಾಗಿ ನಿಂತುಬಿಟ್ಟವು. ನಾವು ಮನೆಯಲ್ಲಿ ಸುಹಾಸನೆಬರಿತ ದುಬಾರಿ ಷಾಂಪು ಹಾಕಿ ಕೂದಲಿಗೆ ಸ್ನಾನ ಮಾಡಿಸಿ, ತುಂಬಾ ಚೆನ್ನಾದ ಒಳ್ಳೆಯ ಬಾಚಣಿಕೆಯಲ್ಲಿ ತಲೆಬಾಚಿದರೂ ನಮಗೆ ಬೇಕಾದ ಹಾಗೆ ಮುಂದೆ ಕ್ರಾಪು, ಕಿವಿಗಳ ಮೇಲೆ, ನೆತ್ತಿ ತಲೆ, ಹಿಂಭಾಗದಲ್ಲೆಲ್ಲಾ ನಮಗೆ ಬೇಕಾದ ಹಾಗೆ ಕೂರುವುದೇ ಇಲ್ಲ. ನಾವೆಷ್ಟೇ ಅದುಮಿ ಬಾಚಿದರೂ, ಮತ್ತಷ್ಟು ಎಣ್ಣೆಹಾಕಿ ಮಾಲೀಶ್ ಮಾಡಿದರೂ ನಾವಿರುದೇ ಹೀಗೆ ಅಂತ ಮೊಂಡು ಹಿಡಿದ ಮಕ್ಕಳ ಹಾಗೆ ನಿಂತುಬಿಡುತ್ತಿದ್ದ ಇದೇ ಕೂದಲುಗಳು ಈ ಕಟಿಂಗ್ ಷಾಪ್‍ನವನ ಮಾತನ್ನು ಸುಲಭವಾಗಿ ಕೇಳುತ್ತವಲ್ಲ! ಈ ವಿಚಾರ ನನಗೂ ಬಿಡಿಸಲಾಗದ ಕಗ್ಗಂಟು.

ನನ್ನ ಆಲೋಚನೆ ತುಂಡರಿಸುವಂತೆ "ಸರ್, ಟ್ರಿಮ್ಮಾ, ಮೀಡಿಯಮ್ಮಾ, " ಕೇಳಿದ.

ನಾವು ಟ್ರಿಮ್ ಅಂದುಬಿಟ್ಟರೆ ಮುಗೀತು. ಖುಷಿಯಿಂದ ಸುಮ್ಮನೆ ಒಮ್ಮೆ ತಲೆಮೇಲೆಲ್ಲಾ "ಕಚ್ ಕಚ್ ಕಚ್ ಕಚ್" ಅಂತ ಚೆನ್ನಾಗಿ ಶಬ್ದ ಬರುವಂತೆ ಕತ್ತರಿ ಆಡಿಸಿ ಶಾಸ್ತ್ರಕ್ಕೆ ನೆತ್ತಿ ಮೇಲೆ, ಕಿವಿಗಳ ಮೇಲೆ, ಹಿಂಭಾಗ ಮತ್ತು ಮುಂಭಾಗ ಚೂರೇ ಚೂರು ಕೂದಲು ಕತ್ತರಿಸಿ ಕಳಿಸಿಬಿಡುತ್ತಾನೆ. ಎರಡು ವಾರಗಳ ನಂತರ ಮತ್ತೆ ನೀವು ಅವನ ಬಳಿಗೆ ಹೋಗಲೇಬೇಕು. ಇನ್ನೂ ಮೀಡಿಯಮ್ ಅಂದರೆ ಇನ್ನೂ ಸ್ವಲ್ಪ ಹೆಚ್ಚಾಗಿ ಎಲ್ಲಾ ಕಡೆಯೂ ಕತ್ತರಿಸಿ [ಕತ್ತರಿಸಿದಂತೆ ಮಾಡಿ] ಒಂದು ತಿಂಗಳ ಒಳಗಾಗಿ ಮತ್ತೆ ಬರುವಂತೆ ನೋಡಿಕೊಳ್ಳುವುದು. ಆತನೆಂದೂ ಷಾರ್ಟ್ ಮಾಡಿಬಿಡಲಾ ಅಂತ ಕೇಳುವುದಿಲ್ಲ. ಅದು ಅವರ ವೃತ್ತಿಗೆ ಲಾಭದಾಯಕವಲ್ಲ. ಹಾಗೆ ಆತ ಕೇಳಿದಾಗ ನಾವು ಹೂ ಅಂದುಬಿಟ್ಟರೆ ಅಥವ ನಾನೇ ಷಾರ್ಟ್ ಮಾಡಿಬಿಡು ಅಂದುಬಿಟ್ಟರೆ ವಿಧಿಯಿಲ್ಲದೇ ಆತ ನುಣ್ಣಗೆ ಕತ್ತರಿಸಬೇಕಾಗುತ್ತದೆ. ಮತ್ತೆ ಕೂದಲುಗಳೆಲ್ಲಾ ಉದ್ದ ಬೆಳೆದು ಆತನ ಬಳಿಗೆ ಮತ್ತೊಮ್ಮೆ ಕಟಿಂಗ್ ಬರುವ ಹೊತ್ತಿಗೆ ಎರಡು ತಿಂಗಳು ದಾಟಿಬಿಟ್ಟಿರುತ್ತದಲ್ಲ!

ಮೀಡಿಯಮ್ಮಾಗಿರಲಿ ಅಂತ ಹೇಳಿ ನನ್ನ ಶ್ರೀಮತಿ ಹೇಳಿದ ವಿಚಾರವನ್ನು ಅವನಿಗೆ ನೆನಪಿಸಿದೆ.

" ಅಯ್ಯೋ ಬಿಡಿ ಅಣ್ಣಾ, ನಿಮಗಿದೆಲ್ಲಾ ಗೊತ್ತಾಗೊಲ್ಲ! ಈ ಕೂದಲುಗಳೆಲ್ಲಾ ಒಂಥರ! ಭಲೇ ಆಕ್ಟಿಂಗ್ ಮಾಡ್ತಾವೆ!

ಆಹಾಂ! ಕೂದಲು ಆಕ್ಟಿಂಗ್ ಮಾಡ್ತವ! ಇದೆಂಥದಪ್ಪ ಇದು ಹೊಸ ವಿಚಾರ ಅಂದುಕೊಳ್ಳುತ್ತಿದ್ದಂತೆ ಇದುವರೆಗೆ ಭಯಭಕ್ತಿಯಿಂದ ತಲೆಬಾಗಿದ್ದ ನನ್ನ ತಲೆಕೂದಲುಗಳೆಲ್ಲಾ ಗಕ್ಕನೆ ನಿಂತುಕೊಂಡವು.

"ಇದೇನಣ್ಣಾ ನೀನು ಹೇಳೋದು? ಕೂದಲು ಆಕ್ಟಿಂಗ್ ಸ್ವಲ್ಪ ಬಿಡಿಸಿ ಹೇಳಬಾರದಾ?"

"ನೋಡಣ್ಣ, ಗಂಡ್ಸು ಅಫೀಸಿಂದ ಸಂಜೆ ಮನೆಗೆ ಸುಸ್ತಾಗಿ ಬರುತ್ತಿದ್ದಂತೆ ಹೆಂಡ್ತಿ ಬಿಸಿಬಿಸಿ ಒಂದು ಲೋಟ ಕಾಫಿ ಕೊಟ್ಟು ಗಂಡನ ತಲೆಸವರಿ ತನಗೆ ಬೇಕಾದ ಎಲ್ಲವನ್ನು ವಸೂಲಿ ಮಾಡಿಕೊಂಡುಬಿಡುತ್ತಾಳೆ. ಹಿರಿಯಕ್ಕನ ಚಾಲು ಮನೆಮಕ್ಕಳಿಗೆ ಅನ್ನುವಂತೆ ಅವಳ ಇಂಥ ನಯ, ನಾಜೂಕು, ವೈಯ್ಯಾರದಂತ ಗುಣಗಳನ್ನು ದೇಹದ ಎಲ್ಲಾ ಅಂಗಾಗಗಳು ಕಲಿತುಕೊಂಡಂತೆ ಅವಳ ತಲೆಯ ಕೂದಲುಗಳು ಕೂಡ ಚೆನ್ನಾಗಿ ಕಲಿತುಬಿಡುತ್ತವೆ. ಕಲಿತ ಮೇಲೆ ನಟಿಸೋದು ಸುಲಭ ತಾನೆ! ಅವರ ಬ್ಯೂಟಿ ಪಾರ್ಲರ್‍ನಲ್ಲಿ ಕತ್ತರಿಸಿದಾಗ ಅವರ ಬಟ್ಟೆಗೆ ಅಂಟಿಕೊಳ್ಳದೇ ನಾಜೂಕಾಗಿ ಜಾರಿಬಿದ್ದುಬಿಡುತ್ತವೆ . ಆದ್ರೆ ಗಂಡಸರು ಕೆಲಸ ಕಾರ್ಯ ಅಂತ ಹೊರಗೆ ಹೋಗಿ ಸುತ್ತಾಡಿ ಜಡ್ಡು ಹಿಡಿದು ಕುಲಗೆಟ್ಟು ಹೋಗಿರುವುದರಿಂದ ಅವರ ತಲೆಕೂದಲುಗಳು ವೀಕ್ ಆಗಿಬಿಡುತ್ತವೆ. ಹೀಗಾಗಿ ಕಟಿಂಗ್ ಮಾಡಿದಾಗ ಹಾರಾಡಿ ತೂರಾಡಿ ಸುಸ್ತಾಗಿ ಹೀಗೆ ಬಟ್ಟೆಗೆ ಸಿಕ್ಕಿಹಾಕಿಕೊಳ್ಳುತ್ತವೆ. ಮತ್ತೊಂದು ವಿಚಾರ ಸರ್, ಹೆಂಗಸರು ತಲೆಕೂದಲನ್ನು ಏನೇನೋ ಹಾಕಿ ಚೆನ್ನಾಗಿ ನೋಡಿಕೊಳ್ಳುತ್ತಾರೆ. ಅನೇಕ ಎಣ್ಣೆಗಳನ್ನು ಹಾಕಿ ತಿದ್ದಿ ತೀಡಿ ನೀವಿ ಚೆನ್ನಾಗಿ ನೋಡಿಕೊಳ್ಳುತ್ತಾರೆ, ಆದ್ರೆ ಗಂಡಸರು ಬೇರೆ ಎಣ್ಣೆಗಳನ್ನು ತಲೆಗಾಕದೇ ಬಾಯಿಗೆ ಹಾಕುವುದರಿಂದ ಗಂಡಸರು ಕೂದಲುಗಳಿಗೆ ಈ ಗತಿ ಬಂದಿದೆ ನೋಡಿ". ಅವನ ವಾದಕ್ಕೆ ನಾನು ಮರು ಉತ್ತರ ನೀಡಲಿಲ್ಲ. ಸುಮ್ಮನೇ ಮುಖ ನೋಡುತ್ತಿದ್ದೆ.

"ಅದ್ಯಾಕಣ್ಣ ನನ್ನ ಮುಖ ಹಾಗೆ ನೋಡ್ತಿಯಾ, ನಾನೇನಾದ್ರು ಹೇಳಿದ್ರಲ್ಲಿ ತಪ್ಪಿದಿಯಾ? ಈ ಭೂಮಿ ಮೇಲೆ ನಡೀತಿರೋ ವೈಯ್ಯಾರ, ನಾಜೂಕೆಲ್ಲಾ ಹೆಂಗಸರಿಂದ್ಲೇ ಆಗ್ತಿರೋದು, ಈ ಭೂಮಿ ನಡೀತಿರೋದು ಅವರಿಂದ್ಲೆ ಅಂದ್ರೆ ತಪ್ಪಾಗಿ ತಿಳಿಬೇಡಿ" ಅಂದ. ಓಹ್! ಇವತ್ತೇನೋ ವಿಭಿನ್ನವಾದ ಮೂಡ್‍ನಲ್ಲಿದ್ದಾನೆ ಅನ್ನಿಸುತ್ತೆ, ಇರಲಿ ಯಾವುದೋ ಹೊಸ ವಿಚಾರವನ್ನು ಹೇಳಲೆತ್ನಿಸುತ್ತಿದ್ದಾನೆ, ಮದ್ಯ ನಾನು ಮಾತಾಡಿದರೆ ಆವನ ಮಾತಿನ ದಾರಿ ದಿಕ್ಕು ತಪ್ಪಬಹುದು ಅಂತ ಸುಮ್ಮನೆ ಅವನ ಮುಖವನ್ನು ನೋಡುತ್ತಾ ಕುತೂಹಲದಿಂದ ಕಣ್ಣ ಹುಬ್ಬೇರಿಸಿದೆ. ಒತ್ತಾಗಿ ಬೆಳೆದಿದ್ದ ನನ್ನ ಕಣ್ಣ ಹುಬ್ಬು ಕಂಡರೆ ಅವನಿಗೆ ಇಷ್ಟ. ಅವನಿಗೆ ಅಷ್ಟೇ ಸಾಕಾಯಿತು. ಅದನ್ನು ನೀವುತ್ತಾ.....

"ಹೂ ಕಣಣ್ಣ.....ಅದನ್ನ ನಿಮಗೆ ಅರ್ಥವಾಗುವಂತೆ ಹೇಳ್ತೀನಿ ಇರಿ"....ಅಂದು ಸ್ವಲ್ಪ ಹೊರಗೆ ಅತ್ತ ಇತ್ತ ನೋಡಿದ. ದೂರದಲ್ಲಿ ಒಬ್ಬ ಮುವ್ವತೈದರ ಆಜುಬಾಜು ವಯಸ್ಸಿನ ವ್ಯಕ್ತಿ ಕಟ್ಟೆಯ ಮೇಲೆ ಕುಳಿತು ಬೀಡಿ ಸೇದುತ್ತಿದ್ದ. ತನ್ನ ಕತ್ತರಿ ಕೆಲಸ ನಿಲ್ಲಿಸಿ "ಅದೋ ಅಲ್ಲಿ ಕುಳಿತಿದ್ದಾನಲ್ಲ ಅವನನ್ನೊಮ್ಮೆ ನೋಡಿ, ಅವನು ಯಾವಾಗಲೂ ಹೀಗೆ ಅಲ್ಲಿ ಬಂದು ಕುಳಿತು ಬೀಡಿ ಸೇದುತ್ತಿರುತ್ತಾನೆ. ಅವ್ನ ಮನೇಲಿ ಅವನೆಂಡ್ತಿ, ಮತ್ತೆ ಅವನ ತಾಯಿ ಸೇರಿ ಮೂರೆ ಜನ ಇರೋದು. ಒಂದು ದಿನ ಅವನ ತಾಯಿ ಅರ್ಧ ಕೇಜಿ ಸೇಬು ತಗೊಂಬಾ ಮಗ ತಿನ್ನೋ ಆಸೆಯಾಗ್ತಿದೆ ಅಂತ ಕೇಳಿದ್ಲು. ಅದಕ್ಕೆ ಇವನು, ಓ ಆಸೆ ನೋಡು, ಸಾಯೋ ಮುದ್ಕಿ ನೀನು ಅದನ್ನ ತಿಂದು ಯಾವ ರಾಜ್ಯಭಾರ ಮಾಡಬೇಕಾಗಿದೆ, ಸುಮ್ನೆ ಬಿದ್ಕೋ" ಅಂತ ಬೈದುಬಿಟ್ಟ. ಆ ಯಮ್ಮ ನನ್ನ ಮಗ ಇಂಗಂದುಬಿಟ್ನಲ್ಲ ಅಂತ ಬೇಜಾರು ಮಾಡಿಕೊಂಡುಬಿಟ್ಲು. ಆದ್ರೆ ಅವನ ಹೆಂಡ್ತಿ ರೇಶ್ಮೆ ಸೀರೆ ಕೇಳಿದ್ದಕ್ಕೆ "ನೋಡಮ್ಮಿ ನೀನು ಕೇಳೋದು ಹೆಚ್ಚಾ, ನಾನು ತರೋದು ಹೆಚ್ಚಾ, ತಂದುಕೊಡ್ತೀನಿ ಆದ್ರೆ ಈಗಲ್ಲ ಮುಂದಿನ ಮಾರನವಮಿಗೆ ತಂದುಕೊಟ್ಟುಬಿಡ್ತೀನಿ" ಅಂತ ಹೇಳಿದ್ದಕ್ಕೆ ಅವಳು ಸುಮ್ಮನಾದಳು. ಇಲ್ಲೇ ಇರೋದು ನೋಡಿ ಯತ್ವಾಸ. ತಾಯಿಗೆ ಹೇಳಿದ ಹಾಗೆ ಹೆಂಡ್ತಿಗೆ ಹೇಳಲಿಕ್ಕೆ ಅವನಿಗೆ ಆಗಲಿಲ್ಲವಲ್ಲ, ಯಾಕಂದ್ರೆ ತಾಯಿ ಕೂದಲು ಬೆಳ್ಳಗಾಗಿ ಅವಳಂತೆ ಈಗಲೋ ಆಗಲೋ ಅಂತ ಸಾಯುವ ಸ್ಥಿತಿಗೆ ಬಂದುಬಿಟ್ಟಿದೆ, ಆದ್ರೆ ಹೆಂಡತಿ ಕೂದಲಲ್ಲಿ ವೈಯಾರ, ಯವ್ವನ ತುಂಬಿ ತುಳುಕಾಡುತ್ತಲ್ವಾ ಅದೇನೇ ಅದೇ ಸ್ವಾಮಿ ಆಕರ್ಷಣೆ" ಈ ಕೂದಲು ವಿಚಾರದಲ್ಲಿ ತಿಳಿದುಕೊಳ್ಳೋದು ಬಾಳ ಇದೆ. ಇದೇ ವಿಚಾರದಲ್ಲಿ ಸ್ವಲ್ಪ ಆಳಕ್ಕಿಳಿದು ನೋಡಿದ್ರೆ ಏನೇನೋ ತಿಳಿಯುತ್ತೆ" ಗೊತ್ತಾಣ್ಣ ಅಂದ.

ಅವನ ಮಾತಿಗೆ ನಾನು ಮರುಉತ್ತರ ನೀಡದೇ ಕೇಳಿಸಿಕೊಳ್ಳುತ್ತಿದ್ದೆ. "ಟರ್ರ್ ರ್ರ್... ಟಕ್ ಟಕ್...ಟಕ್ ಟಕ್."...ಎಂದು ಪಕ್ಕದಲ್ಲಿ ಚಿಕ್ಕ ಹುಡುಗನ ತಲೆಕೂದಲು ಕತ್ತರಿಸುತ್ತಿದ್ದ ಮಿಷಿನ್ ಶಬ್ದಮಾಡುತ್ತಿತ್ತು. ಇದ್ದಕ್ಕಿದ್ದಂತೆ ಡರರ್..ರ್......ಅಂತ ಸದ್ದು ಮಾಡಿ ಎಲ್ಲರ ಗಮನವನ್ನು ಸೆಳೆಯಿತು.

"ನೋಡಿದ್ರಾ, ಈ ನಮ್ಮ ಮಿಷಿನ್ ಏನು ಹೇಳ್ತು ನೋಡಿ," ಅಂದು ಅ ಹುಡುಗನ ಕಡೆ ತಿರುಗಿ "ರಾತ್ರಿ ಏನು ತಿಂದ್ಯೋ ಮರಿ" ಕೇಳಿದ. ಹುಡುಗ ಭಯಭಕ್ತಿಯಿಂದ ಹೆದರಿಕೊಂಡು "ಮೊಟ್ಟೆ ತಿಂದೆ" ಅಂದ "ನೋಡಿದ್ರಾ ನಾನು ಹೇಳಲಿಲ್ಲವಾ...ಇವನು ರಾತ್ರಿ ತಿಂದ ಮೊಟ್ಟೆಯಲ್ಲಿನ ಗ್ಯಾಸ್ ದೇಹದ ಮೂಲಕ ತಲೆಗೂ ಹತ್ತಿದೆ. ತಲೆಗೆ ಹತ್ತಿದ ಮೇಲೆ ಕೂದಲಿಗೂ ಬರಲೇಬೇಕಲ್ವಾ.........ಯಾವಾಗ ಅವನ ತಲೆಕೂದಲನ್ನು ನಮ್ಮ ಕಟಿಂಗ್ ಮಿಷಿನ್ ಕತ್ತರಿಸತೊಡಗಿತೊ, ಅದುವರೆಗೂ ಕೂದಲೊಳಗೆ ಕುಳಿತಿದ್ದ ಈ ಮೊಟ್ಟೆ ಗ್ಯಾಸ್ ಮಿಷಿನ್ನಿನ ಹಲ್ಲುಗಳಿಗೆ ತಾಗಿ ಡರರ್....ರ್.....ಅಂದ ಶಬ್ದ ಮಾಡಿದೆ. ಚಿಕನ್ ಮಟನ್ ತಿಂದಿದ್ದರೆ ಇನ್ನೂ ಬೇರೆ ತರ ಶಬ್ದ ಮಾಡುತ್ತೆ ಕಣಣ್ಣ," ಅಂತ ನಕ್ಕ. ಅವನ ಮಾತಿಗೆ ಅಲ್ಲಿ ಕುಳಿತಿದ್ದವರೆಲ್ಲಾ ಜೋರಾಗಿ ನಕ್ಕರು. ಬದುಕಿನ ಪ್ರತಿಯೊಂದು ವಿಚಾರಗಳಿಗೂ, ಆ ಕ್ಷಣದಲ್ಲಿ ನಡೆದ ಸನ್ನಿವೇಶಗಳಿಗೂ ತಲೆಕೂದಲನ್ನು ಲಿಂಕ್ ಮಾಡಿ ತನ್ನದೇ ಒಂದು ಶೈಲಿಯಲ್ಲಿ ವಿಚಾರವನ್ನು ಮಂಡಿಸುತ್ತಿದ್ದ ಅವನ ಚಾಕಚಕ್ಯತೆಗೆ ನಾನು ತಲೆದೂಗಬೇಕಾಯಿತು.

ಅಷ್ಟರಲ್ಲಿ ನನ್ನ ತಲೆಕೂದಲುಗಳೆಲ್ಲಾ ಅವನ ಹದ್ದುಬಸ್ತಿಗೆ ಬಂದು ಗಂಬೀರವಾಗಿರುವಂತೆ ನನಗೆ ಅನ್ನಿಸಿತು. ಬಹುಶಃ ಕಟಿಂಗ್ ಶಾಪ್‍ನಲ್ಲಿರುವವರೆಗೆ ಮಾತ್ರ ಹೀಗಿರಬಹುದು, ನಮ್ಮ ಮತ್ತೆ ನಮ್ಮ ಮನೆಯ ಕನ್ನಡಿಯ ಮುಂದೆ ನಿಂತು ತಲೆ ಬಾಚುವಾಗ ಆಡ್ನಾಡಿ ಬುದ್ದಿ ತೋರಿಸಬಹುದು ಅಂದುಕೊಳ್ಳುತ್ತಾ ಅವನಿಗೆ ಹಣಕೊಟ್ಟು ಹೊರಬರುವಾಗ ನನ್ನ ಬಟ್ಟೆಯನ್ನು ನೋಡಿಕೊಂಡೆ. ಒಂದು ಕೂದಲ ತುಣುಕು ಕೂಡ ಕಾಣಲಿಲ್ಲವಾದ್ದರಿಂದ ಮನಸ್ಸಿಗೆ ಸಮಾಧಾನವಾಗಿತ್ತು. ಆದರೂ ಎಲ್ಲೋ ಅನುಮಾನ. ನನಗೆ ಕಾಣಿಸದೇ ಇದ್ದ ಕೂದಲು ನನ್ನ ಶ್ರೀಮತಿಗೆ ಕಾಣಿಸಿದರೆ! ಅನ್ನಿಸುತ್ತಿದ್ದಂತೆ ಕುತ್ತಿಗೆ ಮೇಲೆ ಮುಲಮುಲವೆಂದಿತು. ಸಂಶಯವಾಗಿ ಮತ್ತೊಮ್ಮೆ ಒಳಗೋಗಿ ದೊಡ್ಡಕನ್ನಡಿಯಲ್ಲಿ ಕುತ್ತಿಗೆಯನ್ನು ನೋಡಿಕೊಂಡೆ. ಒಂದು ಕೂದಲು ಕೂಡ ಕಾಣಲಿಲ್ಲ. ಓಹ್! ಭ್ರಮೆಗೊಳಗಾಗಿರಬೇಕು ಅಂದುಕೊಳ್ಳುತ್ತಾ ಹೊರಬಂದು ಮನೆ ಕಡೆಗೆ ನಡೆಯುತ್ತಿದ್ದೆ. ನಿದಾನವಾಗಿ ಬುಜ, ತೋಳುಗಳು, ಬೆನ್ನಬಾಗವೆಲ್ಲಾ ಮುಲಮುಲ ನವೆ ಪ್ರಾರಂಭವಾಗಿತ್ತು.

ಲೇಖನ: ಶಿವು.ಕೆ