೧. ಚಿತ್ರಸಂತೆಯಲ್ಲಿ ಆತ ಗಾಂಧಿಭವನದ ಬಳಿ ಚಿತ್ರಗಳನ್ನು ನೋಡಲು ಪ್ರಾರಂಭಿಸಿದಾಗ ಮಧ್ಯಾಹ್ನ ೧೨ ಗಂಟೆ. ಇಡೀ ಚಿತ್ರಸಂತೆಯನ್ನು ನೋಡಿ ಮುಗಿಸಿ ನಮ್ಮ ಬಳಿಗೆ ಬರುವ ಹೊತ್ತಿಗೆ ಸಂಜೆ ಆರುಗಂಟೆ. ಆ ಕಲಾಭಿಮಾನಿ ಚಿತ್ರಸಂತೆಯಲ್ಲಿನ ಎಲ್ಲಾ ಚಿತ್ರಗಳನ್ನು ನೋಡಿ ಅದೆಷ್ಟು ಗೊಂದಲಗೊಂಡಿದ್ದನೆಂದರೆ ನನ್ನ ಫೋಟೊಗಳನ್ನು ಮುಟ್ಟಿ ನೋಡಿ "ಅಹಾ ಈ ಪೇಂಟಿಂಗ್ಸ್ ಎಷ್ಟು ಚೆನ್ನಾಗಿದೆ" ಅಂದವನೇ ಪಕ್ಕದಲ್ಲಿದ್ದ ನನ್ನ ಭಾವನ ದೊಡ್ಡ ಚಿತ್ರಕಲಾಕೃತಿಯನ್ನು ನೋಡಿ ಈ ಫೋಟೊ ಎಲ್ಲಿ ತೆಗೆದಿದ್ದು ಅಂತ ಕೇಳಿದ. ಅವನ ಮಾತನ್ನು ಕೇಳಿ ನಾವಿಬ್ಬರೂ ಅಚ್ಚರಿಯಿಂದ ಮುಖ ನೋಡಿಕೊಂಡೆವು.

೨. ಆ ಪ್ರೇಮಿಗಳು ಕಳೆದ ಚಿತ್ರಸಂತೆಗೂ ಬಂದಿದ್ದರು. ಈ ಬಾರಿಯೂ ಬಂದಿದ್ದಾರೆ. ಆದ್ರೆ ಚಿತ್ರಸಂತೆಯೊಂದು ಅವರಿಗೆ ನೆಪ. ಬೆಂಗಳೂರಿನ ಎಲ್ಲಾ ಜಾಗದಲ್ಲಿ ಆಡ್ಡಾಡಿ ಸಾಕಾಗಿ ಚಿತ್ರಸಂತೆಯಲ್ಲಿ ಮತ್ತಷ್ಟು ಪ್ರೇಮಿಗಳಾಗುತ್ತಿದ್ದಾರೆ. ಅವರಂದುಕೊಂಡಿದ್ದಾರೆ ನಮ್ಮನ್ಯಾರು ಗಮನಿಸುವುದಿಲ್ಲವೆಂದು. ಆದ್ರೆ ಆವನ್ಯಾವನೋ ಛಾಯಾಗ್ರಾಹಕ ಇವರ ಪ್ರೇಮದಾಟವನ್ನು ಫೋಟೊ ತೆಗೆದೇಬಿಟ್ಟಿದ್ದ. ಆ ಫೋಟೊ ಇನ್ನೊಬ್ಬ ಚಿತ್ರಕಾರನ ಕೈಸೇರಿ ಅದ್ಭುತ ಕಲಾಕೃತಿಯಾಗಿ ಈ ವರ್ಷದ ಸಂತೆಯಲ್ಲಿ ಮಾರಾಟಕ್ಕಿದೆ. ಮತ್ತೆ ಈ ಬಾರಿ ಇವರನ್ನು ನೋಡಿದ ಛಾಯಾಗ್ರಾಹಕ ಕ್ಯಾಮೆರಾ ಕೈಗೆತ್ತಿಕೊಂಡ. ಆದ್ರೆ ಇವರಿಬ್ಬರೂ ಇದ್ಯಾವುದರ ಪರಿವೆಯೂ ಇಲ್ಲದೇ ಮತ್ತಷ್ಟು ಪ್ರೇಮಿಗಳಾಗುತ್ತಿದ್ದರು.



೪.ಆತ ಕುಳಿತಲ್ಲೇ ಮುಖಚಿತ್ರ ರಚಿಸುವ ಕಲಾವಿದ. ಸಂಜೆ ಐದುಗಂಟೆಗೆ ಒಂದು ಪುಟ್ಟ ಹುಡುಗಿಯನ್ನು ಎದುರಿಗೆ ಕೂರಿಸಿ ಮುಖಚಿತ್ರ ಬರೆಯಲು ಶುರುಹಚ್ಚಿಕೊಂಡ. ಕಣ್ಣಮುಂದೆ ಕಂಡಿದ್ದನ್ನು ಕಣ್ಣಿಗೆ ಕಟ್ಟುವಂತೆ ಬರೆಯುವ ಮುಖಚಿತ್ರ ಕಲಾವಿದನಾದರೂ ಅವನದು ನಿಧಾನವೇ ಪ್ರಧಾನ ಎನ್ನುವದು ಅವನ ಮಂತ್ರ. ಅದರ ಪರಿಣಾಮ ಆರುಗಂಟೆಯ ಹೊತ್ತಿಗೆ ಮುಖದ ಹೊರರೇಖೆಗಳನ್ನು ಎಳೆದಿದ್ದ. ೬-೩೦ರ ಹೊತ್ತಿಗೆ ಕತ್ತಲಾಗಿ ಆ ಬೆಳ್ಳಗಿನ ಮಗುವಿನ ಮುಖಕ್ಕೂ ಕತ್ತಲು ಆವರಿಸುತ್ತಿತ್ತು. ೭-೩೦ಕ್ಕೆ ಎದುರಿಗೆ ಕುಳಿತಿದ್ದ ಬೆಳ್ಳಂಬೆಳಗಿನ ಮಗುವಿನ ಮುಖ ಚಿತ್ರದಲ್ಲಿ ಕಪ್ಪಾಗಿತ್ತು.

೫. ಸದಾ ಹೊಸತರ ಬಗ್ಗೆ ಚಿಂತಿಸುವ ಕಲಾವಿದನಾಗಿದ್ದ ಆತ ಅವತ್ತು ಮಾರಾಟಕ್ಕೆ ಯಾವುದೇ ಕಲಾಕೃತಿಯನ್ನು ತಂದಿರಲಿಲ್ಲ. ಆದ್ರೆ ಕೈಯಲ್ಲಿ ಒಂದು ಕ್ಯಾನ್ವಸ್,ಬ್ರಷ್, ಬಣ್ಣಗಳನ್ನು ಹಿಡಿದಿದ್ದ. ಅರ್ಧದಿನ ಚಿತ್ರಸಂತೆ ಸುತ್ತಾಡಿದರೂ ಹೊಸತೇನು ಸ್ಪೂರ್ತಿ ಸಿಕ್ಕಲಿಲ್ಲವಾದ್ದರಿಂದ ಬೇಸರಗೊಂಡು ಇದೆಲ್ಲಾ ಗೊಡವೆಯೇ ಬೇಡವೆಂದು ಪಕ್ಕದಲ್ಲಿದ್ದ ಅಪಾರ್ಟ್‍ಮೆಂಟಿನ ಟೆರಸ್ ಮೇಲೆ ವಿಶ್ರಾಂತಿಗೆಂದು ಕುಳಿತವನು ಕೆಳಗೆ ನೋಡಿದ. ಸಾಗರೋಪಾದಿಯಲ್ಲಿ ಚಿತ್ರಸಂತೆ ನೋಡಲು ಬರುತ್ತಾಹೋಗುತ್ತಿದ್ದರು. ನೋಡನೋಡುತ್ತಿದ್ದಂತೆ ಅದನ್ನೆ ಕ್ಯಾನ್ವಸ್ ಮೇಲೆ ಬಿಡಿಸಿ ಬಣ್ಣದಿಂದ ಅಲಂಕರಿಸಿ ಕೆಳಗೆಬಂದು ತನ್ನ ಜಾಗದಲ್ಲಿ ಪ್ರದರ್ಶನಕ್ಕಿಟ್ಟ. ಇದು ನಿಜಕ್ಕೂ ಹೊಸತನವೆಂದು ಕಲಾಸಕ್ತರು ಅದನ್ನು ಕೊಳ್ಳಲು ಮುಗಿಬಿದ್ದರು.
ಈ ನ್ಯಾನೋ ಕತೆಗಳೆಲ್ಲಾ [14-3-2010]ಭಾನುವಾರ ವಿಜಯಕರ್ನಾಟಕದಲ್ಲಿ ಬಂದಿದ್ದವು.
ಚಿತ್ರಗಳು ಮತ್ತು ಲೇಖನ
ಶಿವು.ಕೆ.
