Sunday, October 6, 2013

ಕೊಲ್ಕತ್ತ-ದಿಘಾ ನಾಲ್ಕು ದಿನದ ಪ್ರವಾಸ (ಕೊನೆಯ ಭಾಗ)

 [ಮೊದಲ ಎರಡು ಭಾಗವನ್ನು ಓದಲು ಈ ಕೆಳಗಿನ ಲಿಂಕ್ ಕ್ಲಿಕ್ಕಿಸ]

 http://chaayakannadi.blogspot.in/2013/09/blog-post.html

http://chaayakannadi.blogspot.in/2013/09/2.html

                 ಅಂತರ ರಾಷ್ಟ್ರೀಯ ಛಾಯಚಿತ್ರ ಸ್ಪರ್ಧೆಗಳ ತೀರ್ಪುಗಾರಿಕೆ ಪ್ರಾರಂಭವಾಗುವ ಮೊದಲು

                    ನಮ್ಮ ಕುಂದಾಪುರದಷ್ಟೇ ಚಿಕ್ಕದಾಗಿರುವ "ದಿಘಾ" ಪಟ್ಟಣ ರಾತ್ರಿಯಲ್ಲಿ

                            ರಾತ್ರಿ ಸಮಯದಲ್ಲಿ "ದಿಘಾ" ರಸ್ತ

                       
   ಮೂರನೇ ದಿನ ಸಂಜೆ ಮತ್ತೆ ದುರಂತೋ ರೈಲಿನಲ್ಲಿ ಹೊರಟು ಹೌರಾ ತಲುಪುವ ಹೊತ್ತಿಗೆ ಸಂಜೆ ಏಳುಗಂಟೆ.  ಹೂಗ್ಲಿ ನದಿಯ ಮೇಲೆ ಒಂದು ಕಡೆಯಿಂದ ಮತ್ತೊಂದು ಕಡೆಗೆ ಹೋಗಲು ಅಲ್ಲಿ ದೊಡ್ದ ದೊಡ್ದ ಬೋಟುಗಳ ವ್ಯವಸ್ಥೆಯಿದೆ.  ನಾವು ಆ ಬೋಟಿನೊಳಗೆ ಸೇರಿಕೊಂಡೆವು. ಬೋಟ್ ನಿದಾನವಾಗಿ ಚಲಿಸುತ್ತಾ ದೊಡ್ದದಾದ ಹೌರ ಬ್ರಿಡ್ಜ್ ಕೆಳಗೆ ಸಾಗುತ್ತಾ...ಅದನ್ನು ದಾಟಿ ಮುಂದೆ ರವಿಂದ್ರ ನಾಥ್ ಠಾಕೂರ್ ಸಮಾಧಿ, ಧಾಟಿಕೊಂಡು ಮುಂದೆ ಸಾಗಿದಾಗ ನಾವೆಲ್ಲ ಬಲಗಡೆಗೆ ಇಳಿದುಕೊಂಡೆವು. ಅಲ್ಲಿಗೆ ನಮ್ಮ ಜೊತೆಯಲ್ಲಿ ಬಂದಿದ್ದ ಪಶ್ವಿಮ ಬಂಗಾಲದ ನಾನಾಕಡೆಯಿಂದ ಬಂದಿದ್ದ ಫೋಟೋಗ್ರಫಿ ಜ್ಯೂರಿಗಳು, ಛಾಯಾಗ್ರಾಹಕರು ಮತ್ತು ಕೆಲವು ಆಯೋಜಕರು ಅವರವರ ಊರುಗಳಿಗೆ ತೆರಳುವ ಸಮಯವಾಗಿತ್ತು. ನಮಗೆಲ್ಲಾ ವಿಶ್ ಮಾಡಿ ಅವರೆಲ್ಲ ಅತ್ತ ಹೊರಟರು. ನಾವು ಪಕ್ಕದಲ್ಲಿಯೇ ಇದ್ದ ಲೋಕಲ್ ರೈಲು ನಿಲ್ದಾಣದ ಕಡೆಗೆ ಹೊರಟೆವು. ಮುಂದೆ ನಮ್ಮ ಪ್ರಯಾಣ ನೇರವಾಗಿ ಗೆಳೆಯ ಅಭಿಜಿತ್ ಮನೆಗೆ.  ಅವತ್ತು ರಂಜಾನ್ ರಜಾದಿನ ಮತ್ತು ಮತ್ತು ರಾತ್ರಿ ಏಳುವರೆಯಾಗಿದ್ದರಿಂದ ಪ್ರಯಾಣಿಕರು ಕಡಿಮೆ ಇದ್ದರು. ಮುಕ್ಕಾಲು ಗಂಟೆಯಲ್ಲಿ ಗೆಳೆಯ ಅಭಿಜಿತ್ ಡೇಯ ಬರಕ್ ಪುರ್‍ಅ ಮನೆ ತಲುಪಿದೆವು. 

                              "ದಿಘಾ" ಸಮುದ್ರ ಕಿನಾರ

                         ಆಭಿಜಿತ್ ಡೆ ಮನೆಯಲ್ಲಿ ಅವರ ಕುಟುಂಬದ ಜೊತ

          ನ್ನ ಗಮನವನ್ನು ಸೆಳೆದ ಅಭಿಜಿತ್ ಡೇ ಮನೆಯಲ್ಲಿರುವ ಕಲಾತ್ಮಕ ಚಿತ್ರವಿರುವ ಟೀ ಕಪ್


    ರಾತ್ರಿ ಊಟಕ್ಕೆ ನನಗಾಗಿ ಮನೆಯಲ್ಲಿ ವಿಶೇಷ ಅಡುಗೆಯ ತಯಾರಿಯಲ್ಲಿದ್ದ ಅಭಿಜಿತ್ ಡೇ ಮನೆಗೆ ಫೋನ್ ಮಾಡಿ ನನಗೆ ಸ್ವಲ್ಪ ಇಲ್ಲಿಯ ಊಟ ಸೆಟ್ ಆಗಿಲ್ಲ., ಮಧ್ಯಾಹ್ನ ಎರಡು ಭಾರಿ ವಾಂತಿಯಾಗಿದೆ. ಅದಕ್ಕೆ ಕಾರಣ ಇಲ್ಲಿ ಬಳಸುವ ಸಾಸುವೆ ಎಣ್ಣೆ ಇರಬಹುದು. ಈಗ ರಾತ್ರಿಗೆ ನನಗೆ ಹೆಚ್ಚೇನು ಬೇಡ ಸ್ಪಲ್ಪ ಮೊಸರನ್ನ ಮಾತ್ರ ಸಾಕು ಎಂದು ಹೇಳಿದ್ದೆ. ಹಾಗೆ ಅಭಿಜಿತ್ ಮನೆಗೆ ಫೋನ್ ಮಾಡಿ ಹೇಳಿದರು. ಕೊನೆಯ ದಿನದ ರಾತ್ರಿ ರುಚಿರುಚಿಯಾದ ಅಡುಗೆಯನ್ನು ಮಾಡಬೇಕೆನ್ನುವ ತಯಾರಿಯಲ್ಲಿದ್ದ ಅವರಿಗೆ ಈ ಮಾತನ್ನು ಸ್ವಲ್ಪ ನಿರಾಶೆಯಾಗಿತ್ತು. ಇಲ್ಲಿನ ಊಟದ ವಿಚಾರವನ್ನು ಸ್ವಲ್ಪ ಹೇಳಲೇಬೇಕು. ಇಲ್ಲಿ ಎಲ್ಲ ಆಡುಗೆಗೂ ಸಾಸುವೆ ಎಣ್ಣೆಯನ್ನು ಬಳಸುತ್ತಾರೆ. ವೆಚ್ ಅಥವ ನಾನ್‍ವೆಜ್, ಮೀನು ಹೀಗೆ ಯಾವುದೇ ತರಹದ ಖಾದ್ಯಕ್ಕೂ ಸಾಸುವೆ  ಎಣ್ಣೇ ಅವರಿಗೆ ಬೇಕೇ ಬೇಕು. ಮೊದಲೆರಡು ದಿನ ನಾನು ಅದರ ಬಗ್ಗೆ ಗಮನಿಸಿದೆ ಹೊಂದಿಕೊಂಡಿದ್ದೆ.  ನನ್ನ ಮನಸ್ಸು ಫೋಟೊಗ್ರಫಿ ಮತ್ತು ಊರು ಸುತ್ತುವ ಮತ್ತು ನೋಡುವ ನೆಪದಲ್ಲಿ ಹೊಂದಿಕೊಂಡರೂ ದೇಹ ಹೊಂದಿಕೊಳ್ಳಬೇಕಲ್ಲವೇ...ಅದಕ್ಕೆ ಸಾಧ್ಯವಾಗಲಿಲ್ಲ. ಮೂರನೇ ದಿನಕ್ಕೆ ಸಾಸುವೆ ಎಣ್ಣೆ ನನ್ನ ದೇಹಕ್ಕೆ ಬೇಡ ಎಂದು ರೆಜೆಕ್ಟ್ ಮಾಡಿತ್ತು. ಆ ಕಾರಣದಿಂದಾಗಿ ಮೂರನೇ ದಿನ ದಿಘದಲ್ಲಿ ವಾಂತಿಯಾಗಿತ್ತು. ಅವತ್ತು ರಾತ್ರಿ ನನಗೊಬ್ಬನಿಗೆ ಮೊಸರನ್ನ ಕಾದಿತ್ತು.  ಆ ಮೊಸರನ್ನವಾದರೂ ಹೇಗಿತ್ತು ಗೊತ್ತಾ......ಅನ್ನ ಪಶ್ಚಿಮದ ಕಡೆ, ಮೊಸರು ಪೂರ್ವದ ಕಡೆ, ಬಿಸಿಬಿಸಿಯಾದ ಹಾಲು ನನ್ನ ಕಡೆ. ಹೀಗೆ ತ್ರಿಕೋನ ಆಕಾರದಲ್ಲಿ ಮೂರು ಬಟ್ಟಲುಗಳಲ್ಲಿ ಮಿಕ್ಸ್ ಆಗದ ಮೊಸರನ್ನ ಸಿದ್ದವಾಗಿತ್ತು. ಪಾಪ ಅವರಿಗೇನು ಗೊತ್ತು ಮೊಸರನ್ನ ಹೇಗಿರುತ್ತದೆಂದು.  ಊಟಕ್ಕೆ ಕುಳಿತಾಗ ಮೊಸರನ್ನಕ್ಕೆ ಹಾಲು ಆಗತ್ಯವಿಲ್ಲ, ಅನ್ನ ಮೊಸರು ಎರಡೇ ಬೇಕು, ಸ್ವಲ್ಪ ಸಾಲ್ಟ್ ಸಾಕು ಎಂದು ಅವರಿಗೆ ವಿವರಿಸಿ ಮೂರನ್ನು ಹದವಾಗಿ ಮಿಕ್ಸ್ ಮಾಡಿ ತಿನ್ನುತ್ತಿದ್ದರೇ ಅವರಿಗೆಲ್ಲಾ ನನ್ನ ರಾತ್ರಿ ಊಟ ಆಶ್ಚರ್ಯವಾಗಿತ್ತು.  ಅಕ್ಕಿ ಮತ್ತು ಅನ್ನದ ವಿಚಾರಕ್ಕೆ ಬಂದರೆ ಅಲ್ಲಿ ಬೆಳೆಯುವ ಭತ್ತದಿಂದ ಬರುವ ಅಕ್ಕಿ ದಪ್ಪದಾದ ಹಳದಿ ಬಣ್ಣದ್ದು.  ಅದರ ರುಚಿಯೂ ಅಷ್ಟಕಷ್ಟೆ. ನಮ್ಮ ದಕ್ಷಿಣ ಭಾರತದಲ್ಲಿ ಬೆಳೆಯುವ ಶ್ವೇತಬಣ್ಣದ ಅಕ್ಕಿ ಮತ್ತು ಅದರಿಂದಾಗುವ ಅನ್ನ, ಅದರ ರುಚಿ!..ಆಹಾ! ನಾವು ನಿಜಕ್ಕೂ ಅದೃಷ್ಟವಂತರೆ ಸರಿ.  ನಿಮ್ಮಲ್ಲಿ ಬೆಳೆಯುವ ಭತ್ತದೊಳಗಿನ ಅಕ್ಕಿಯ ಹಳದಿ ಬಣ್ಣಕ್ಕೆ ಕಾರಣವೇನೆಂದು ಕೇಳಿದರೆ ಅವರು ಗಂಗಾ ನದಿಯತ್ತ ಕೈ ತೋರಿಸುತ್ತಾರೆ. ನಮ್ಮ ಗಂಗಾ ನದಿ ನೀರು ಇಂಥ ಬೆಳೆಯನ್ನು ಕೊಡುತ್ತದೆ ನಾವೇನು ಮಾಡೋಣ ಹೇಳಿ" ಎಂದು ಅವರು ನಗುತ್ತಾ ಹೇಳುವಾಗ ಅವರಿಗಿಂತ ಉತ್ತಮವಾದ ಮತ್ತು ರುಚಿಯಾದ ಅನ್ನವನ್ನು ತಿನ್ನುವ ನಮಗೆ ಅವರ ಬಗ್ಗೆ ವಿಷಾಧ ವ್ಯಕ್ತವಾಗುತ್ತದೆ. ನಾವು ಇಲ್ಲಿ ಕಾವೇರಿ, ಕೃಷ್ಣಾ, ಮಹಾದಾಯಿ, ಇನ್ನೂ ಅನೇಕ ನದಿಗಳ ನೀರಿಗೆ ಕಿತ್ತಾಡಿದರೂ, ಪ್ರವಾಹವಲ್ಲದಿದ್ದರೂ ಹರಿದಷ್ಟೇ ನೆಲದಲ್ಲಿ ಚಿನ್ನದಂತ ಅನ್ನವನ್ನು ಉಣ್ಣುವ ನಾವು, ದೂರದಿಂದ ಮತ್ತು ಹೊರಗಿನಿಂದ ನೋಡಿದಾಗ ಇವುಗಳ ಮಹತ್ವವೇನೆಂಬುದು ಅರಿವಾಗಿತ್ತು. ಬೆಳೆಯುವ ತರಕಾರಿಗಳಲ್ಲಿ ಆಲುಗಡ್ಡೆಗೆ ಆಗ್ರಸ್ಥಾನ, ಹಾಗೆ ನಿತ್ಯ ಬಳಕೆಯಲ್ಲೂ ಕೂಡ. ಕೊಲ್ಕತ್ತ, ಬರಕ್‍ಪುರ, ದಿಘಾ, ಹೌರಾ, ಹೀಗೆ ಎಲ್ಲಿಗೇ ಹೋಗಿ ಬೆಳಿಗ್ಗೆ ನಿಮಗೆ ಪೂರಿ ಮತ್ತು ಅಲುಗಡ್ಡೆಯಿಂದ ಮಾಡಿದ ಪಲ್ಯ ಎಲ್ಲಾ ಪುಟ್ಟ ಹೋಟಲುಗಳು ಮತ್ತು ಮನೆಗಳಲ್ಲಿ ಸಿದ್ಧವಾಗಿರುತ್ತದೆ. ಮಧ್ಯಾಹ್ನ ಮತ್ತು ರಾತ್ರಿ ಊಟಕ್ಕೂ ಆಲುಗಡ್ಡೆ ಸಾಗು ಅಥವ ಪಲ್ಯ ಸಿದ್ದವಿರುತ್ತದೆ. ಬೆಂಗಾಲಿಗಳು ರಾತ್ರಿ ಹೊತ್ತು ಅನ್ನವನ್ನು ತಿನ್ನುವುದಿಲ್ಲ. ಆದ್ರೆ ರೋಟಿ, ಚಪಾತಿ ಜೊತೆಗೆ ಆಲುಗಡ್ಡೆ ಪಲ್ಯ ಅಥವ ಸಾಗು ಇದ್ದೇ ಇರಬೇಕು. ಇತರೆಲ್ಲ ತರಕಾರಿಗಳಿಗಿಂತ ಮೂರು ರೂಪಾಯಿಗೆ ಒಂದು ಕಿಲೋ ಆಲುಗಡ್ಡೆ ಅಲ್ಲಿ ದೊರೆಯುತ್ತದೆ. ರಾತ್ರಿ ಊಟ ಮುಗಿಯುತ್ತಿದ್ದಂತೆ ಪ್ರಯಾಣದ ಆಯಾಸದಿಂದಾಗಿ ನನಗೆ ಬೇಗನೇ ನಿದ್ರೆ ಆವರಿಸಿತ್ತು.

             ಕೊಲ್ಕತ್ತದ ಉಪನಗರ ಭಾರಕ್‍ಪುರದ ಒಂದು ಪುಟ್ಟ ರಸ್ತ


   ಮರುದಿನ ಬೆಳಿಗ್ಗೆ ಬೇಗ ಆರುಗಂಟೆಗೆ ಎದ್ದು ಒಂದು ವಾಕ್ ಹೋಗಬೇಕೆನ್ನುವ ಆಸೆಯಿಂದ ಅಭಿಜಿತ್‍ಗೆ ಹೇಳಿದರೆ...ಅರೆರೆ...ಶಿವುಜೀ, ಅಮಾರ ಶಹರ್ ತುಮ್‍ಕೋ ಮಾಲುಮ್ ನಹೀ, ತುಮ್ ಬಹರ್  ಐಸೇ ಮಿಸ್ ಹೋಗಯಾ ತೋ, ತುಮಾರ ಪ್ಲೈಟ್ ಬಿ ಮಿಸ್ ಹೋತಾಹೇ" ಎಂದು ತಮಾಷೆ ಮಾಡಿದರು.  ಇಲ್ಲ ಇಲ್ಲ ನನಗೆ ಗೊತ್ತು ಎರಡು ಮೂರು ಕಿಲೋಮೀಟರ್ ಮಾತ್ರ ಗೊತ್ತಿರುವ ರಸ್ತೆಯಲ್ಲಿಯೇ ಹೋಗಿಬರುತ್ತೇನೆ ಎಂದು ಹೇಳಿ ಹೊರಟೆ. ಮತ್ತೆ ಬೆಳಗಿನ ಭರಕ್ ಪುರ ಎಂದಿನಂತೆ ಚುರುಕಾಗಿತ್ತು. ಅಷ್ಟುಹೊತ್ತಿಗಾಗಲೇ ನೂರಾರು ಸೈಕಲ್ ರಿಕ್ಷಾಗಳಲ್ಲಿ ರೈಲು ನಿಲ್ದಾಣಕ್ಕೆ ಸಾಗುವ ಸರ್ಕಾರಿ ಮತ್ತು ಖಾಸಗಿ ಉದ್ಯೋಗಿಗಳು, ಕಾಲೇಜು ಹುಡುಗ ಹುಡುಗಿಯರು,.....ಸಾಗುತ್ತಿದ್ದರು. ಸುಮಾರು ಮೂರು ಕಿಲೋಮೀಟರ್ ದೂರದವರೆಗೆ ನಡೆಯುತ್ತಾ ಅಲ್ಲಿ ಸಾಗುವ ಈ ಸೈಕಲ್ ರಿಕ್ಷಾಗಳು, ಜನರು, ಸ್ಕೂಲಿಗೆ ಹೋಗುವ ಮಕ್ಕಳು...ಎಲ್ಲರನ್ನು ನೋಡುತ್ತಾ ಮತ್ತೆ ವಾಪಸ್ ಬರುವ ವೇಳೆಗೆ ಎಂಟುಗಂಟೆ.   ಅವತ್ತು ಮೂರು ಗಂಟೆಯ ವಿಮಾನಕ್ಕೆ ಬೆಂಗಳೂರಿಗೆ ನನ್ನ ಟಿಕೆಟ್ ನಿಗದಿಯಾಗಿತ್ತು.  ಅವತ್ತು ಕೊನೆಯ ದಿನವಾದ್ದರಿಂದ ಅಭಿಜಿತ ಮಗಳಾದ ಆದ್ರಿತಾ ಡೆ ಅರ್ಥಾತ್ ಅವರು ಪ್ರೀತಿಯಿಂದ "ರೂಪು" ಜೊತೆ ತುಂಬಾ ಹೊತ್ತು ಕಳೆದೆ. ಅವಳ ಆಸಕ್ತಿಕರ ವಿಚಾರ ಡ್ರಾಯಿಂಗ್ ಮತ್ತು ಪೈಂಟಿಂಗ್, ನನ್ನ ವೆಂಡರ್ ಕಣ್ಣು ಪುಸ್ತಕದಲ್ಲಿ ನಾನು ಬರೆದ ಕೆಲವು ಚಿತ್ರಗಳನ್ನು ಅವಳು ನೋಡಿ ತುಂಬಾ ಇಷ್ಟಪಟ್ಟಳು. ಅವಳು ಬರೆದ ಹತ್ತಾರು ಚಿತ್ರಗಳನ್ನು ನನಗೆ ತೋರಿಸಿದಳು. ಕೊನೆಯಲ್ಲಿ ಅವರ ಮನೆಯಲ್ಲಿ ಎಲ್ಲರ ಜೊತೆ ಫೋಟೊ ತೆಗೆಸಿಕೊಂಡು ಮಧ್ಯಾಹ್ನ ಹನ್ನೆರಡುವರೆಗೆ ಎಲ್ಲರಿಗೂ ಬೈ ಹೇಳಿ ಅವರಿಂದ ಬೀಳ್ಕೊಡುವಾಗ ಮತ್ತೆ ಮತ್ತೆ ಬರುತ್ತಿರಿ ಎಂದರು ಅವರ ಶ್ರೀಮತಿ. ಅವರ ಪ್ರೀತಿಪೂರ್ವಕ ಅತಿಥ್ಯವನ್ನು ಅನುಭವಿಸಿದ ನನಗೆ ಅಲ್ಲಿಂದ ಹೊರಡುವಾಗ ಮನಸ್ಸು ವಿಶಾಧಕ್ಕೊಳಗಾಗಿತ್ತು.

                     

ಕೊಲ್ಕತ್ತದ ವಿಮಾನ ನಿಲ್ದಾಣ. ಇದನ್ನು ಲೋಕಲ್ ರೈಲಿನಲ್ಲಿ ಕುಳಿತು ಕ್ಲಿಕ್ಕಿಸಿದ್ದು. ವಿಮಾನ ನಿಲ್ಡಾಣದ  ಕಾಂಪೌಂಡಿನವರೆಗೆ ಲೋಕಲ್ ರೈಲು ಸೌಕರ್ಯವಿದೆ.    ಭರಕ್ ಪುರ ರೈಲು ನಿಲ್ದಾಣದಲ್ಲಿ ನನಗಾಗಿ ರೈಲು ಟಿಕೆಟ್ ತೆಗೆದುಕೊಂಡ ಅಭಿಜಿತ್ ಅದನ್ನು ತೋರಿಸಿದರು. ಅದರೊಳಗಿನ ಟಿಕೆಟ್ ಮೊತ್ತವನ್ನು ನೋಡಿ ನನಗೆ ಆಶ್ಚರ್ಯವಾಗಿತ್ತು. ಮಧ್ಯಾಹ್ನವಾದ್ದರಿಂದ ಲೋಕಲ್ ರೈಲು ಕಾಲಿಯಿತ್ತು. ಅರ್ಧಗಂಟೆಯಲ್ಲಿ ಡಂಡಂ ನಿಲ್ದಾಣ ತಲುಪಿದೆವು. ಮತ್ತು ಅಲ್ಲಿಂದ ಮತ್ತೊಂದು ರೈಲು ನೇರವಾಗಿ ಕೊಲ್ಕತ್ತ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ. ಅದರ ಟಿಕೆಟ್‍ನ ಮೊತ್ತವನ್ನು ನೋಡಿದಾಗಲೂ ಅದೇ ಆಶ್ಚರ್ಯವಾಗಿತ್ತು. ಮುಂದೇ ಹದಿನೈದೇ ನಿಮಿಷದಲ್ಲಿ ನಾವು ಪ್ರಯಾಣಿಸುತ್ತಿರುವ ಲೋಕಲ್ ರೈಲು ವಿಮಾನ ನಿಲ್ದಾಣದ ಕೌಂಪೌಂಡಿನ ಪಕ್ಕದಲ್ಲಿಯೇ ನಮ್ಮನ್ನು ಇಳಿಸಿತ್ತು. ಕೇವಲು ಮುಕ್ಕಾಲು ಗಂಟೆಯ ಅವಧಿಯಲ್ಲಿ ಭರಕ್‍ಪುರದಿಂದ ಐದು ರೂಪಾಯಿ ಟಿಕೆಟಿನಲ್ಲಿ ಇಪ್ಪತ್ತೆರಡು ಕಿಲೋಮೀಟರ್ ದೂರದ ಒಂದು ನಿಲ್ದಾಣ, ಅಲ್ಲಿಂದ್ ಮುಂದಕ್ಕೆ ನಾಲ್ಕು ರುಪಾಯಿ ಟಿಕೆಟ್‍ನಲ್ಲಿ ಹತ್ತು ಕಿಲೋಮೀಟರ್ ದೂರದಲ್ಲಿರುವ ಡಂಡಂ ವಿಮಾನ ನಿಲ್ದಾಣವನ್ನು ತಲುಪಿದ್ದೆವು.  ಬೆಂಗಳೂರಿನಲ್ಲಿ ನಮ್ಮ ಮನೆಯಿಂದ ಬೆಂಗಳೂರು ವಿಮಾನ ನಿಲ್ದಾಣ ಇಷ್ಟೇ ದೂರದಲ್ಲಿದೆ. ಮಲ್ಲೇಶ್ವರಂ ಅಥವ ಮೆಜೆಸ್ಟಿಕ್‍ನಿಂದ ಮುವತ್ತೆರಡು ಕಿಲೋಮೀಟರ್ ದೂರದ ವಿಮಾನ ನಿಲ್ದಾಣ ತಲುಪಲು ನಮ್ಮ ಬಿಎಂಟಿಸಿಯ ವಾಯುವಜ್ರದಲ್ಲಿ ಇನ್ನೂರು ರೂಪಾಯಿಗಳನ್ನು ಮನಸ್ಸಿಲ್ಲದ ಮನಸ್ಸಿನಿಂದ ಕೊಡಬೇಕು. ಆದ್ರೆ ಕೊಲ್ಕತ್ತದಲ್ಲಿ ಇಷ್ಟೇ ಮುವತ್ತೆರಡು ಕಿಲೋ ಮೀಟರ್ ದೂರದ ವಿಮಾನ ನಿಲ್ದಾಣ ತಲುಪಲು ಕೇವಲ ಒಂಬತ್ತು ರೂಪಾಯಿ ಸಾಕು! ಬೆಂಗಳೂರಿನಲ್ಲಿ ಇನ್ನೂರು ರೂಪಾಯಿಗಳನ್ನು ಕೊಟ್ಟರೂ ಟ್ರಾಫಿಕ್ ಜಾಮ್‍ನಲ್ಲಿ ಸಿಕ್ಕಿಕೊಳ್ಳುವ ಭಯದಿಂದಾಗಿ ಮೂರು ತಾಸು ಮೊದಲೇ ಮನೆ ಬಿಡಬೇಕು. ಇಲ್ಲಿ ಮುವತ್ತು ಕಿಲೋಮೀಟರ್ ದೂರದ ವಿಮಾನ ನಿಲ್ದಾಣ ತಲುಪಲು ಒಂದುವರೆ ತಾಸು ಮೊದಲು ಮನೆಯನ್ನು ಬಿಟ್ಟರೆ ಸಾಕಾಗುತ್ತದೆ. ಅಲ್ಲಿ ನಲವತ್ತು ಕಿಲೋಮೀಟರ್ ದೂರದ ಪ್ರತಿನಿತ್ಯದ ಓಡಾಟಕ್ಕೆ ತಿಂಗಳಿಗೆ ನೂರೈವತ್ತರಿಂದ ಇನ್ನೂರು ರೂಪಾಯಿ ಪಾಸ್ ತೆಗೆದುಕೊಂಡರೆ ಸಾಕು ದಿನದಲ್ಲಿ ಎಷ್ಟು ಸಲ ಬೇಕಾದರೂ ಎಲ್ಲಿಗೆ ಬೇಕಾದರೂ ಲೋಕಲ್ ರೈಲಿನಲ್ಲಿ ಪ್ರಯಾಣಿಸಬಹುದು.  ನಮ್ಮ ಬೆಂಗಳೂರಿನಲ್ಲಿ ಲೋಕಲ್ ರೈಲು ಸೌಕರ್ಯವಿಲ್ಲ. ಇರುವ ಬಿಎಂಟಿಸಿಯಲ್ಲಿ ಒಂದು ದಿನಕ್ಕೆ ಓಡಾಡಲು ನಲವತ್ತೈದು ರೂಪಾಯಿಗಳ ಟಿಕೆಟ್ ಪಡೆಯಬೇಕು. ಇನ್ನೂ ಪುಸ್ಪಕ್, ಓಲ್ವೋ, ಇನ್ನಿತರ ಬಸ್ಸುಗಳಲ್ಲಿ ಓಡಾಡಬೇಕಾದರೆ ತಿಂಗಳಿಗೆ ಸಾವಿರಾರು ರೂಪಾಯಿಗಳಾದರೂ ಬೇಕು. ನೋಡಿದ್ರಾ ನಮ್ಮ ಬೆಂಗಳೂರು ಈ ವಿಚಾರದಲ್ಲಿ ಇಷ್ಟೊಂದು ಮುಂದುವರಿದಿದೆ ಎನ್ನಲು ನನಗೆ ನಾಚಿಕೆಯಾಗುತ್ತದೆ.

                   ಕೊಲ್ಕತ್ತದ ವಿಮಾನ ನಿಲ್ದಾಣದಲ್ಲಿ  ವಿಮಾನ ಇಳಿಯುವ ಮೊದಲು ಸಿಕ್ಕ ಚಿತ್ರವಿದ


   ಒಟ್ಟಾರೆಯಾಗಿ ಕೊಲ್ಕತ್ತದಲ್ಲಿ ನನಗಿಷ್ಟವಾದ ಸಂಗತಿಗಳೆಂದರೆ, ಅಲ್ಲಿನ ಜನರ ಕಷ್ಟ ಸಹಿಷ್ಣುತೆ, ಸೈಕಲ್ ರಿಕ್ಷಾ, ಲೋಕಲ್ ರೈಲು, ಹಣವೇ  ಮುಖ್ಯವಲ್ಲವೆಂದು ಬದುಕುವ ಜನರು, ಕಲಾತ್ಮಕ ಫೋಟೊಗ್ರಫಿಯಲ್ಲಿ ಅವರು ಸಾಧಿಸಿರುವ ಸಾಧನೆ, ರಸಗುಲ್ಲ, ಜಾಮೂನು, ಕೊನೆಯಲ್ಲಿ ನಮ್ಮ ಕನ್ನಡ ನಾಡಿನವರಾಗಿ ಪಶ್ಚಿಮ ಬಂಗಾಲದ ಜಲಪೈಗುರಿಯಲ್ಲಿ ಕೆಲಸ ಮಾಡುತ್ತಿರುವ ಸೋದರ ಡಾ.ಎಂ.ನಟರಾಜ್ ಮತ್ತು ಕೊಲ್ಕತ್ತದ ಐಐಎಂ ನಲ್ಲಿ ಓದುತ್ತಿರುವ  ದಿನಪತ್ರಿಕೆ ಹಾಕುತ್ತಲೇ ಆ ಮಟ್ಟಕ್ಕೆ ಮೇಲೆ ಬಂದ ನಮ್ಮ ಹುಡುಗ ಶಿವಪ್ರಕಾಶ್‍, ಇಬ್ಬರನ್ನು ಬೇಟಿಯಾಗಬೇಕೆನ್ನುವ ಆಸೆಯಿತ್ತು. ಆದರೆ ನನಗಿರುವ ಟೈಟ್ ಶೆಡ್ಯೂಲ್‍ನಿಂದಾಗಿ ಆಗದಿದ್ದರೂ ಅಲ್ಲಿ ಅವರೊಂದಿಗೆ ಫೋನಿನಲ್ಲಿ ಮಾತಾಡಿದ್ದು ಕೂಡ ಸಂತೋಷವಾಗಿತ್ತು.  ಇಷ್ಟೆಲ್ಲಾ ಇಷ್ಟಗಳ ನಡುವೆ ನನ್ನ ದೇಹಸ್ಥಿತಿ ರಿಜೆಕ್ಟ್ ಮಾಡಿದ ಸಾಸುವೆ ಎಣ್ಣೆ ಮಾತ್ರ ನನಗೆ ಕಷ್ಟದ ಸಂಗತಿಯಾಗಿತ್ತು.

    ರೈಲು ಇಳಿದು ನಿದಾನವಾಗಿ ವಿಮಾನ ನಿಲ್ದಾಣದ ಕಡೆಗೆ ನಾನು ಮತ್ತು ಅಭಿಜಿತ್ ಹೆಜ್ಜೆ ಹಾಕುತ್ತಿದ್ದರೆ ನಮ್ಮ ಹೆಜ್ಜೆಗಳು ಭಾರವಾಗುತ್ತಿವೆಯೇನೋ ಅನ್ನಿಸತೊಡಗಿತ್ತು. ಇನ್ನೇನು ಕೆಲವೇ ನಿಮಿಷಗಳಲ್ಲಿ ನಾವು ಒಬ್ಬರೊನ್ನಬ್ಬರು ಬಿಟ್ಟು ತಮ್ಮ ಸ್ಥಳಗಳಿಗೆ ಹೋಗಿಬಿಡುತ್ತೇವೆ, ಮೊದಲ ದಿನ  ಇದೇ ವಿಮಾನ ನಿಲ್ದಾಣದಲ್ಲಿ ನನ್ನನ್ನು ಸ್ವಾಗತಿಸಿ ಕರೆದುಕೊಂಡು ಹೋದ ಇದೇ ಅಭಿಜಿತ್ ಡೇ ಎನ್ನುವ ಒಬ್ಬ ಛಾಯಾಗ್ರಾಹಕ ಎರಡು ದಿನ ಮನೆಯಲ್ಲಿ ನನ್ನ ಮಟ್ಟಿಗೆ ಅದ್ಬುತವೆನಿಸುವ ಅತಿಥಿ ಸತ್ಕಾರದ ಜೊತೆಗೆ ಅಣ್ಣನಂತೆ ಪ್ರೀತಿ ವಾತ್ಸಲ್ಯ ಹಿರಿಯ ಛಾಯಾಗ್ರಾಹಕ ಗೆಳೆಯನಂತೆ ಫೋಟೊ ವಿಚಾರವಾಗಿ ನನಗೆ ನೀಡಿದ ಸಲಹೆ ಮತ್ತು ಟಿಫ್ಸ್‍ಗಳು......ಈಗ ಮತ್ತೆ ನನ್ನನ್ನು ಬೀಳ್ಕೊಡಲು ವಿಮಾನ ನಿಲ್ದಾಣದಲ್ಲಿ ನನ್ನೊಂದಿಗೆ ಹೆಜ್ಜೆ ಹಾಕುತ್ತಿದ್ದಾರೆ. ನಾಲ್ಕು ದಿನದಲ್ಲಿ ಬದುಕು, ಬವಣೆ, ಕೆಲಸ, ಮನೆ, ಹೆಂಡತಿ, ಉದ್ಯೋಗ, ಫೋಟೊಗ್ರಫಿ ಇತ್ಯಾದಿ ವಿಚಾರವಾಗಿ ಬಿಡುವಿಲ್ಲದಂತೆ ಮಾತಾಡಿದ್ದೆವು....ಈಗ ಕೊನೆಯ ಕ್ಷಣಗಳಲ್ಲಿ ಇಬ್ಬರ ನಡುವೆ ನಮಗೆ ಅರಿಯದಂತ ವಿವರಿಸಲಾಗದಂತಹ ಭಾವುಕತೆ ತುಂಬಿಕೊಂಡು ಮಾತುಗಳಿಗೆ ಜಾಗವಿಲ್ಲವಾಗಿತ್ತು.

    "ಶಿವುಜೀ ನೀವು ಅನುಮತಿಯನ್ನು ಕೊಟ್ಟರೆ ನಾನು ಹೊರಡುತ್ತೇನೆ" ಎಂದು ನನ್ನನ್ನೇ ನೋಡುತ್ತಾ ಅಭಿಜಿತ್ ಹೇಳಿದಾಗ ಅವರ ಕಣ್ಣುಗಳಲ್ಲಿ ಕಂಡರೂ ಕಾಣದ ಹಾಗೆ ಹನಿಗೂಡುತ್ತಿತ್ತು.  ಅದನ್ನೂ ನೋಡುತ್ತಿದ್ದ ನನಗೂ ಕೂಡ ಕಣ್ಣುಗಳು ತುಂಬಿಕೊಂಡಂತಾಗಿ ಇಬ್ಬರೂ ಗಟ್ಟಿಯಾಗಿ ಅಪ್ಫಿಕೊಂಡೆವು. ಕೆಲವು ದಿನಗಳ ಹಿಂದೆ ಯಾವುದೇ ರೀತಿಯಲ್ಲಿ ಸಂಭಂದವಿಲ್ಲದ, ಎರಡೂವರೆ ಸಾವಿರ ಕಿಲೋಮೀಟರ್ ದೂರದಲ್ಲಿ ಇರುವ ವ್ಯಕ್ತಿಯೊಬ್ಬ ನಾಲ್ಕೇ ದಿನಕ್ಕೆ ನನಗೆ ಗೆಳೆಯನಾಗಿ, ಅಣ್ಣನಾಗಿ, ಆತ್ಮೀಯನಾಗಿ ಹಿತೈಸಿಯಾಗಿ, ಹೀಗೆ ಬೀಳ್ಕೊಡುವುದಿದೆಯಲ್ಲ....

       ಹಾಗೇ ನಿದಾನವಾಗಿ ಸ್ವಲ್ಪ ಸ್ವಲ್ಪ ವೇಗವಾಗಿ ಹೋಗುತ್ತಿರುವ ಅಭಿಜಿತ್‍ರನ್ನು ನೋಡುತ್ತಿದ್ದೆ. ಆತ ಮತ್ತೆ ತಿರುಗಿ ನೋಡದೇ ಹಾಗೆ ಮರೆಯಾಗುತ್ತಿದ್ದಾಗ ನನ್ನ ಕಣ್ಣಂಚಿಗೆ ಬಂದ ಹನಿಯನ್ನು ತಡೆಯಲಾಗಲಿಲ್ಲ. 

       ವಿಮಾನ ನಿಲ್ದಾಣದ ವಿಧಿ ವಿಧಾನಗಳನ್ನು ಅರ್ಧಗಂಟೆಯೊಳಗೆ  ಬೆಂಗಳೂರಿಗೆ ಹೊರಡುವ ವಿಮಾನವನ್ನು ಕಾಯುತ್ತ ಕುಳಿತಿದ್ದಾಗ ಫೋನ್ ರಿಂಗಣಿಸಿತ್ತು. "ಶಿವುಜೀ, ಈಗ ನಿಮ್ಮಿಂದ ಬೇಗ ಹೊರಟು ಬಂದೆನೆಂದು ಬೇಸರಿಸಬೇಡಿ,, ನಾನು ಸ್ವಲ್ಪ ಹೆಚ್ಚೇ ಭಾವುಕ. ಇನ್ನು ಸ್ವಲ್ಪ ಹೆಚ್ಚೇ ಇದ್ದಿದ್ದರೆ ನನ್ನೊಳಗಿನ ಭಾವುಕತೆ ತಡೆದುಕೊಳ್ಳಲಾಗದೆ ಕಣ್ತುಂಬಿಬಿಡುತ್ತಿತ್ತು.  ಅದನ್ನು ತಪ್ಪಿಸಿಕೊಳ್ಳಲಿಕ್ಕಾಗಿ ನಿಮ್ಮಿಂದ ಹೊರಟು ಹಿಂದೆ ತಿರುಗಿ ನೋಡದೇ ಹೊರಟು ಬಂದೆನಾದರೂ ಮನಸ್ಸಿಗೆ ಸಮಧಾನವಾಗಲಿಲ್ಲ.  ವಿಮಾನ ನಿಲ್ದಾಣದಲ್ಲಿ ನಿಮ್ಮೆ ಎಲ್ಲಾ ಕ್ಲಿಯರೆನ್ಸ್ ಸರಿಯಾಗಿ ಆಯ್ತಲ್ಲ...ಬೆಂಗಳೂರು ತಲುಪಿದ ತಕ್ಷಣ ಫೋನ್ ಮಾಡುವುದು ಮರೆಯಬೇಡಿ...ಬೈ...ಬೈ..."ಅಭಿಜಿತ್ ಮತ್ತೆ ಫೋನ್ ಮಾಡಿದಾಗ ನನಗೆ ಏನೆಂದು ಉತ್ತರಿಸಬೇಕೆಂದು ಗೊತ್ತಾಗಲಿಲ್ಲ. ರನ್‍ವೇನಲ್ಲಿ ಬೆಂಗಳೂರಿಗೆ ಹೊರಡುವ ವಿಮಾನ ಸಿದ್ಧವಾಗಿತ್ತು.

 ವಿಮಾನ ಮೇಲೇರಿದ ಕೆಲವೆ ಕ್ಷಣಗಳಲ್ಲಿ ಕೊಲ್ಕತ್ತದ ಪಕ್ಷಿನೋಟ ಕಂಡಿದ್ದ   ಹೀಗ

 

                    ಕೊಲ್ಕತ್ತದ ಲೋಕಲ್ ರೈಲು [ವೃತ್ತಕಾರದ ಒಳಗೆ] ವಿಮಾನದಿಂದ ನನ್ನ ಕ್ಯಾಮೆರಕ್ಕೆ ಸೆರೆ ಸಿಕ್ಕಿದ್ದು ಹೀಗೆ..

                              

ವಿಮಾನ ಮೇಲೇರಿದ ಮೇಲೆ ಕಂಡ ಕೊಲ್ಕತ್ತದ ಮತ್ತೊಂದು ಪಕ್ಷಿನೋಟ

                ಬಂಗಾಲ ಕೊಲ್ಲಿ ಸಮುದ್ರ ಮೇಲೆ ಹತ್ತಿಯಂತ ಮೋಡಗಳು..ವಿಮಾನದಿಂದ ಒಂದು ಪಕ್ಷಿನೋಟ

                         ಮತ್ತೊಂದು ಪಕ್ಷಿನೋಟ

                       ಬೆಂಗಳೂರಿನಲ್ಲಿ ವಿಮಾನ ಇಳಿಯುವ ಹತ್ತು ನಿಮಿಷದ ಮೊದಲು

ಬೆಂಗಳೂರಿನಲ್ಲಿ ವಿಮಾನ ಇಳಿಯುವ ಐದು ನಿಮಿಷದ ಮೊದಲು                              

ಚಿತ್ರಗಳು ಮತ್ತು ಲೇಖನ:

ಶಿವು.ಕೆ.

ಬೆಂಗಳೂರು