"ಹೇಮ ಗೀಸರಿನಿಂದ ತಣ್ಣೀರು ಬರುತ್ತಿದೆ, ಬಿಸಿನೀರು ಬರುತ್ತಿಲ್ಲ"..ಗೀಸರ್ ನಲ್ಲಿ ತಿರುಗಿಸುತ್ತಾ ಕೇಳಿದೆ.
"ಎಷ್ಟು ದಿನಾನ್ರೀ ನಿಮಗೆ ಹೇಳಿಕೋಡೋದು. ಇನ್ನು ಗೊತ್ತಾಗಲಿಲ್ಲವಲ್ರಿ ನಿಮಗೆ" ಅಂತ ಆಡಿಗೆ ಮನೆಯಿಂದ ಗೊಣಗುತ್ತಾ ಬಂದಳು. ನಾನು ತಿರುಗಿಸಿದ್ದ ಟ್ಯಾಂಕ್ ನಲ್ಲಿ ಹಾಗೂ ಪಕ್ಕದಲ್ಲಿದ್ದ ಗೀಸರ್ ನಲ್ಲಿಯನ್ನು ನಿಲ್ಲಿಸಿದಳು. ಅವೆರಡಕ್ಕಿಂತ ಸ್ವಲ್ಪ ದೂರದಲ್ಲಿ ಮತ್ತೊಂದು ನಲ್ಲಿ[ಅದು ಟಾಯ್ಲೆಟ್ ನೀರಿಗಾಗಿ ಇದ್ದಂತದ್ದು]ತಿರುಗಿಸಿದಳು. ಅದರಿಂದ ನೀರು ನಿದಾನವಾಗಿ ಬರತೊಡಗಿತು. ಆರೆರೆ.....ಇದೇನು ನಾನು ಬಿಸಿನೀರಿಗಾಗಿ ಗೀಸರ್ ನಲ್ಲಿ ತಿರುಗಿಸಿದರೆ ಇವಳು ಅದನ್ನು ಬಂದ್ ಮಾಡಿ ಟಾಯ್ಲೆಟ್ ನಲ್ಲಿಯಲ್ಲಿ ನೀರು ಬರುವಂತೆ ಮಾಡಿದ್ದಾಳಲ್ಲ ಅಂತ ನನಗೆ ಆಶ್ಚರ್ಯವಾಗಿತ್ತು.
"ಇದೇನೇ ಇದು ಗ್ಯಾಸ್ ಗೀಸರ್ ಆನ್ ಆಗದೆ ಬಿಸಿನೀರು ಬರ್ತಿಲ್ಲ ಅಂದರೆ, ನೀನು ಬಕೆಟ್ಟು ಇಟ್ಟು ಆ ನಲ್ಲಿ ತಿರುಗಿಸಿದ್ದಿಯಲ್ಲ...ಏನು ತಣ್ಣೀರು ಸ್ನಾನ ಮಾಡಿಕೊಂಡು ಹೋಗಬೇಕಾ" ಅಂದೆ.
"ರೀ....ಸ್ವಲ್ಪ ತಡಕೊಳ್ರಿ"...ಅಂತ ನೇರ ಆಡಿಗೆ ಮನೆಗೆ ಹೋದಳು. ಅವಳ ಉದ್ದೇಶವೇನೆಂದು ನನಗೆ ಅರ್ಥವಾಗಲಿಲ್ಲ.
"ನೀವು ಹೊರಗೆ ಎಷ್ಟೋ ಜನರ ಬಳಿ ನಯ ನಾಜೂಕಾಗಿ ವ್ಯವಹರಿಸಬಹುದು, ಪ್ರಾಣಿ ಪಕ್ಷಿಗಳು, ಮನುಷ್ಯರು ಹೀಗೆ ಜೀವವಿರುವಂತ ಎಲ್ಲರನ್ನು ಏಮಾರಿಸಿ ಫೋಟೋ ತೆಗೆಯಬಹುದು, ಆದ್ರೆ ನಿರ್ಜೀವವಿರುವ ಈ ನಲ್ಲಿಗಳು ಹೇಗೆ ವರ್ತಿಸುತ್ತವೆ ಅಂತ ತಿಳಿದು ಅವುಗಳ ಜೊತೆ ವ್ಯವಹಾರ ಮಾಡೋಕೆ ಕಲಿತುಕೊಳ್ಳಲಿಲ್ಲ ನೀವು, ಕೊನೆ ಪಕ್ಷ ಅವುಗಳ ನಡುವಳಿಕೆ ಏನು ಅಂತ ತಿಳಿದುಕೊಳ್ಳಲಿಕ್ಕೆ ಹಾಗಲಿಲ್ಲವಲ್ರೀ"....ನಯವಾಗಿ ಕುಟುಕಿದಳು.
ಆವಳ ಮಾತು ಸತ್ಯವೆನಿಸಿತ್ತು. ಈ ಮನೆಗೆ ಬಂದಾಗಿನಿಂದ ನಮ್ಮ ಆಡಿಗೆ ಮನೆಯ ಮೂರು ನಲ್ಲಿಗಳು, ಮತ್ತು ಬಚ್ಚಲು ಮನೆಯ ಮೂರು ನಲ್ಲಿಗಳು ನನ್ನನ್ನು ಚೆನ್ನಾಗಿ ಆಟವಾಡಿಸುತ್ತಿವೆ. ಅವುಗಳನ್ನು ನಾನು ಇವತ್ತಿನವರೆಗೂ ಅರಿತುಕೊಳ್ಳಲು ಆಗುತ್ತಿಲ್ಲ. ನಾನು ಏನು ನಿರೀಕ್ಷೆ ಮಾಡುತ್ತೇನೊ ಅದಕ್ಕೆ ತದ್ವಿರುದ್ಧವಾಗಿ ನಡೆದುಕೊಳ್ಳುವುದು ಅವುಗಳ ಜನ್ಮಸಿದ್ಧ ಹಕ್ಕು ಎಂದುಕೊಂಡು ಬಿಟ್ಟಿವೆಯೇನೋ...ಆಷ್ಟರಲ್ಲಿ ಅಲ್ಲಿಟ್ಟಿದ್ದ ಬಕೆಟ್ಟಿನ ತುಂಬಾ ನೀರು ತುಂಬಿತ್ತು.
"ಹೇಮಾ ಬಕೆಟ್ಟು ತುಂಬಿತು. ಹೀಗೇನು ಮಾಡಲಿ"
"ಮತ್ತೊಂದು ಬಕೆಟ್ಟು ಇಡಿ"
ನನಗೆ ಇವತ್ತು ತಣ್ಣೀರೆ ಗತಿ ಎಂದುಕೊಂಡು "ಅಲ್ಲಾ ಕಣೇ ನಾನು ಕೇಳಿದ್ದು ಬಿಸಿನೀರು, ಗೀಸರಿನಿಂದ ಬರುತ್ತಿಲ್ಲ ಅಂದ್ರೆ ಹೋಗ್ಲಿ ಆಡಿಗೆ ಮನೆಯಲ್ಲಿ ಎರಡು ದೊಡ್ಡ ಪಾತ್ರೆಯಲ್ಲಿ ಕಾಯಿಸಿಕೊಡು, ನಾನು ತಣ್ಣೀರು ಸ್ನಾನ ಮಾಡಿದರೆ ನೆಗಡಿ ಗ್ಯಾರಂಟಿ"
"ಸ್ವಲ್ಪ ತಡಕೊಳ್ರೀ....ಅದ್ಯಾಕೆ ಆತುರ ಪಡುತ್ತೀರಿ, ಆ ಕೊಳಯಿ ಒಮ್ಮೆ ಜೋರಾಗಿ ಉಗಿಯಲಿ"
ಆಹಾಂ! ಕೊಳಾಯಿ ಉಗಿಯಬೇಕಾ? ವಿಚಾರವೇ ಹೊಸತಲ್ಲ. ಮನುಷ್ಯರಿಗೆ ಮಾತ್ರ ಉಗಿದು ಉಪ್ಪು ಹಾಕುವುದು ಗೊತ್ತು ಆದ್ರೆ ಈ ನಲ್ಲಿಗಳು ಉಗಿಯೋದು ಅಂದ್ರೆ ಏನು? ನಾನು ಚಿಂತೆಗೆ ಬಿದ್ದೆ. ಆಷ್ಟರಲ್ಲಿ,
"ರೀ ನೋಡ್ರೀ...ಉಗಿಯಿತು ನೋಡ್ರೀ....ಇನ್ನು ಒಂದೆರಡು ಬಾರಿ ಚೆನ್ನಾಗಿ ಉಗಿಯಲಿ ನಂತರ ನಿಮಗೆ ಬೇಕಾದ ಬಿಸಿನೀರು ಸಿಗುತ್ತೆ" ಅಂದಳು.
ನಾನು ನಲ್ಲಿ ಕಡೆ ನೋಡಿದೆ. ಒಂದುವರೆ ಬಕೆಟ್ ತುಂಬಿದ ಮೇಲೆ ನಲ್ಲಿಯಿಂದ ನೀರು ಜೋರಾಗಿ ಬರುತ್ತಿದೆ! ನಿದಾನವಾಗಿ ಬರುತ್ತಿದ್ದ ನೀರು ವೇಗವಾಗಿ ಬರುವುದಕ್ಕೆ ಮೊದಲು ಕೆಲವು ಜೋರಾದ ಶಬ್ದಮಾಡಿ ಒಳಗಿನ ಗಾಳಿಯನ್ನು ಹೊರಹಾಕುವಾಗ ಕ್ಯಾ....ಶೂ....ಟಪ್...ಗರರ್.ಡ್ರೂರ್......ಹುಷ್..........ಇನ್ನೂ ಏನೇನೋ ಶಬ್ದಮಾಡುತ್ತಿದೆ. ಹೇಮಾಶ್ರೀ ಪ್ರಕಾರ ಅದು ಈಗ ಚೆನ್ನಾಗಿ ಉಗಿಯುತ್ತಿದೆ! ಹೌದು! ವೇಗವಾಗಿ ನೀರು ಕ್ಯಾಕರಿಸಿ, ಕೆಮ್ಮಿ ಉಗಿದಂತೆ ನಲ್ಲಿಯಿಂದ ಜೋರಾಗಿ ಬರುತ್ತಿದೆಯಲ್ಲಾ ! ಮುಂದೇನು?
"ಈಗ ಹೋಗಿ ಅದನ್ನು ನಿಲ್ಲಿಸಿ. ನಂತರ ಗ್ಯಾಸ್ ಗೀಸರ್ ನಲ್ಲಿಯನ್ನೂ ತಿರುಗಿಸಿ ಬಿಸಿನೀರು ತಕ್ಷಣ ಬರುತ್ತೆ" ಎಂದಳು. ಅವಳು ಹೇಳಿದಂತೆ ಮಾಡಿದೆ, ಹೌದು! ಈಗ ಖಂಡಿತ ಬಿಸಿನೀರು ಬರುತ್ತಿದೆ. ಖುಷಿಯಾಯ್ತು. ನೋಡ್ರೀ.. ಮೊದಲು ನೀರು ಪೋರ್ಸ್ ಇರಲಿಲ್ಲವಾದ್ದರಿಂದ ಗೀಸರುನಲ್ಲಿ ನೀರು ಬರಲು ಪ್ರೆಶ್ಶರ್ ಸಾಕಾಗುತ್ತಿರಲಿಲ್ಲ. ಅದಕ್ಕಾಗಿ ಪಕ್ಕದ ಆ ನಲ್ಲಿಯಲ್ಲಿ ನೀರು ಬಿಟ್ಟಾಗ ಸ್ವಲ್ಪಹೊತ್ತಿನ ನಂತರ ಪ್ರೆಶರ್ ಹೆಚ್ಚಾಗುತ್ತಿದ್ದಂತೆ ಅದು ಹೀಗೆ ಕ್ಯಾಕರಿಸಿ ಉಗಿಯುತ್ತಾ, ಅನೇಕ ಶಬ್ದಮಾಡಿ ನೀರು ಜೋರಾಗಿ ನಮಗೆ ಪೋರ್ಸ್ ಸಿಗುತ್ತದೆ. ಆಗ ತಕ್ಷಣ ಅದನ್ನು ನಿಲ್ಲಿಸಿ ಗೀಸರ್ ನಲ್ಲಿ ತಿರುಗಿಸಿದರೆ ನಾಲ್ಕೇ ಸೆಕೆಂಡುಗಳಲ್ಲಿ ಬಿಸಿನೀರು ಬರುತ್ತದೆ. ಈ ಮನೆಗೆ ಬಂದು ಎಂಟು ತಿಂಗಳಾದ್ರೂ ನಿಮಗೆ ಗೊತ್ತಾಗಲಿಲ್ಲವಲ್ರೀ....ಹೋಗಿ ಸ್ನಾನಮಾಡಿಕೊಳ್ಳಿ, ಅಂಗಿಸುತ್ತಾ ಮತ್ತೆ ಆಡುಗೆ ಮನೆಗೆ ಹೋದಳು.
"ಆದ್ರೆ ಇದೇ ನಲ್ಲಿಯಲ್ಲೇ ಪೋರ್ಸ್ ಇದೆಯೋ ಇಲ್ಲವೋ ಅಂತ ನೀರು ಬಿಟ್ಟು ಕಂಡುಕೊಳ್ಳಬಹುದಲ್ವೇನೇ?
"ಅದಕ್ಕೆ ಹೇಳೋದು ನಿಮಗೆ ಗೊತ್ತಾಗೊಲ್ಲ ಅಂತ. ನೇರವಾಗಿ ಟ್ಯಾಂಕಿನಿಂದ ನೀರು ಈ ನಲ್ಲಿಗೆ ಬರುತ್ತದೆ. ಅಂದ್ರೆ ಟ್ಯಾಂಕಿನೊಳಗೆ ಏನೇನು ಆಗುತ್ತೆ ಅಂತ ಮೊದಲು ಈ ನಲ್ಲಿಗೆ ಗೊತ್ತಾಗುತ್ತೆ. ಅದಕ್ಕೆ ತಕ್ಕಂತೆ ಹೀಗೆ ವರ್ತಿಸಿ ನಮಗೆ ಸೂಚನೆ ಕೊಡುತ್ತೆ. ಇದು ಒಂಥರ ಟ್ರೈಯಲ್ ವರ್ಷನ್. ಅದನ್ನು ನೋಡಿ ನಾವು ಹೀಗೆ ನೀರಿನ ವಿಚಾರದಲ್ಲಿ ತಣ್ಣೀರು ಮತ್ತು ಬಿಸಿನೀರನ್ನು ಅನಲೈಸ್ ಮಾಡಬೇಕು ಗೊತ್ತಾಯ್ತ" ಅಂದಳು.
ಎಲಾ! ನಲ್ಲಿಯೇ....ನಿನ್ನೊಳಗೆ ಏನೆಲ್ಲಾ ಆಟ ಉಂಟು! ಅಂದುಕೊಳ್ಳುತ್ತಾ ಸ್ನಾನ ಮುಗಿಸಿದ್ದೆ.
"ಸ್ನಾನ ಆಯ್ತೇನ್ರೀ....ಆಗಿದ್ರೆ ಬನ್ನಿ ಇಲ್ಲಿ, ಆಡುಗೆ ಮನೆಯ ನಲ್ಲಿಗಳ ವಿಚಾರ ತಿಳಿಸಿಕೊಡುತ್ತೇನೆ" ಅಂತ ಕರೆದಳು.
ಇಷ್ಟಕ್ಕೂ ಈ ವಿಚಾರದಲ್ಲಿ ದೊಡ್ಡ ಕತೆಯೇ ಇದೆ. ನಮ್ಮ ಮನೆಯ ನಲ್ಲಿಗಳೆಲ್ಲಾ ಬುಗುರಿಯಂತೆ ಗುಂಡಾದ ತಿರುಗಣೆಗಳನ್ನು ಹೊಂದಿರುವಂತವು. ನನಗೂ ನಮ್ಮ ಮನೆಯ ನಲ್ಲಿಗಳಿಗೂ ಆಗಿಬರುವುದಿಲ್ಲ. ಯಾಕಂದ್ರೆ ನಮ್ಮ ಮನೆಯ ನಲ್ಲಿಗಳಿಗೆ ಯಾವಾಗ ಜೀವ ಬರುತ್ತೆ ಮತ್ತು ಜೀವ ಹೋಗುತ್ತೆ ಅನ್ನುವುದು ಗೊತ್ತಾಗೋದೆ ಇಲ್ಲ. ಹೇಮಾಶ್ರೀ ನನ್ನೂರಿಗೆ ಅಥವ ಅವಳ ತವರು ಮನೆಗೋ ಮೂರ್ನಾಲ್ಕು ದಿನದ ಮಟ್ಟಿಗೆ ಹೋದರೂ ಅವಳಿಗೆ ಈ ನಲ್ಲಿಗಳು, ಗ್ಯಾಸ್ ಸಿಲಿಂಡರ್, ಮನೆಯ ದೀಪದ ಸ್ವಿಚ್ಚುಗಳ ಬಗ್ಗೆ, ಮತ್ತು ಇವೆಲ್ಲಕ್ಕೂ ಹೊಂದಿಕೊಳ್ಳಲಾಗದ ನನ್ನ ಬಗ್ಗೆ ಚಿಂತಿಸುತ್ತಿರುತ್ತಾಳೆ. ಏಕೆಂದರೆ ಈ ಮೂರು ವಸ್ತುಗಳ ಬಗ್ಗೆ ನನ್ನ ಗಮನ ಎಳ್ಳಷ್ಟು ಇರುವುದಿಲ್ಲವೆಂದು ಅವಳಿಗೆ ನೂರಕ್ಕೆ ನೂರರಷ್ಟು ಖಚಿತವಾಗಿ ಗೊತ್ತು.
ಮೂರು ತಿಂಗಳ ಹಿಂದೆ ಅವರ ಊರಿನ ಹಬ್ಬಕ್ಕೆ ನನಗೆ ಕೆಲಸದ ಒತ್ತಡದಿಂದಾಗಿ ಹೋಗಲಾಗದೆ ಹೇಮಾಶ್ರೀಯನ್ನು ಮಾತ್ರ ಕಳುಹಿಸಿದ್ದೆ. ಆಗ ಮಳೆ ಕಡಿಮೆಯಾಗಿದ್ದರಿಂದ ನಮಗೆ ದಿನಕ್ಕೆ ಆರೇಳು ಗಂಟೆ ವಿದ್ಯುತ್ ತೆಗೆದುಬಿಡುತ್ತಿದ್ದರು. ಮನೆಯಲ್ಲಿ ಹೆಂಡತಿ ಇದ್ದಾಗ ಇಂಥವೆಲ್ಲಾ ನಮಗೆ ಗೊತ್ತಾಗೊಲ್ಲ. ಅವರು ಹೇಗೋ ಎಲ್ಲವನ್ನು ಹೊಂದಿಸಿಕೊಂಡು ನಮಗೆ ಸಮಯಕ್ಕೆ ಬೇಕಾದ ಹಾಗೆ ಎಲ್ಲಾ ತಯಾರು ಮಾಡಿಕೊಡುತ್ತಾರಾದ್ದರಿಂದ ನಮಗೆ ಗೊತ್ತಾಗುತ್ತಿರಲಿಲ್ಲ. ಆ ಸಮಯದಲ್ಲಿ ಅವತ್ತು ಬೆಳಗಿನ ದಿನಪತ್ರಿಕೆ ಕೆಲಸ ಮುಗಿಸಿ ಬೆಳಿಗ್ಗೆ ಏಳು ಗಂಟೆಗೆ ಮನೆಗೆ ಬಂದಾಗ ಕರೆಂಟು ಇರಲಿಲ್ಲ. ಮನೆಗೆ ಬಂದ ಕೂಡಲೆ ಸ್ನಾನ ಮಾಡಲೆಂದು ನಲ್ಲಿ ತಿರುಗಿಸಿದೆ. ನೀರು ಬರಲಿಲ್ಲ. ಸರಿ ಕರೆಂಟು ಬಂದ ಮೇಲೆ ನೋಡೋಣ ಅಂದುಕೊಂಡು ಸ್ವಲ್ಪ ಹೊತ್ತು ಕುಳಿತು ಪೇಪರ್ ಓದುತ್ತಿದ್ದೆ. ಆಗ ಶುರುವಾಯಿತಲ್ಲ ಮಲಮೂತ್ರ ವಿಷರ್ಜನೆಯ ಒತ್ತಡ. ಬಚ್ಚಲು ಮನೆಗೆ ಹೋದೆ ಅಲ್ಲಿ ಒಂದು ತೊಟ್ಟು ನೀರಿಲ್ಲ. ಆಡುಗೆ ಮನೆಯೊಳಗೆ ನೋಡಿದರೆ ಅಲ್ಲಿಯೂ ಒಂದು ಚಿಕ್ಕ ಪಾತ್ರೆಯಲ್ಲಿ ಮೂರು ಗ್ಲಾಸ್ ಆಗುವಷ್ಟು ನೀರು ಮಾತ್ರ ಇದೆ. ಮನೆಯಲ್ಲಿ ನೀರಿಲ್ಲ. ನೀರನ್ನು ಮೊದಲೇ ತುಂಬಿಸಿಟ್ಟುಕೊಳ್ಳಿ ಅಂತ ಹೇಮಾಶ್ರೀ ಕಿವಿಮಾತು ಹೇಳಿದ್ದರೂ ನಾನು ಕೆಲಸದ ಒತ್ತಡದಲ್ಲಿ ಮತ್ತು ಕಂಪ್ಯೂಟರ್ ಮುಂದೆ ಕೂತು ಮೈಮರೆತು ನೀರು ತುಂಬಿಸಿಕೊಳ್ಳುವುದು ಮರೆತುಬಿಟ್ಟಿದ್ದೆ. ಈಗ ಏನು ಮಾಡುವುದು ? ಕಾವೇರಿ ನೀರು ಬರುವ ಸಮಯ ಇದಲ್ಲ. ಮತ್ತೆ ಮನೆಯ ಬೋರ್‌ವೆಲ್ ನೀರನ್ನು ಟ್ಯಾಂಕಿಗೆ ತುಂಬಿಸಿ ನಂತರ ನಮ್ಮ ಮನೆಗೆ ಬಿಟ್ಟುಕೊಳ್ಳಬೇಕಾದರೆ ಕರೆಂಟು ಬೇಕೇ ಬೇಕು. ಅದು ಬರುವವರೆಗೂ ಕಾಯಲೇಬೇಕು. ಎದುರುಗಡೆಯ ಓನರ್ ಮನೆಯಲ್ಲಿ ಒಂದೆರಡು ಬಿಂದಿಗೆ ನೀರು ಕೇಳೋಣವೆಂದರೆ ಒಂಥರ ನಾಚಿಕೆ! ಹೋಗಿ ಹೋಗಿ ನೀರು ಕೇಳುವುದಾ ಅಂತ. ಹೊರಗೆ ರಸ್ತೆಯಲ್ಲಿರುವ ಬೋರ್‌ವೆಲ್ ನೀರನ್ನು ತರೋಣವೆಂದು ಹೋದರೆ ಅಲ್ಲಿಯೂ ಇದೇ ಕರೆಂಟು ತೊಂದರೆಯಿಂದಾಗಿ ನೀರೇ ಇಲ್ಲ. ಕೊನೆಗೆ ಮನೆಯಲ್ಲೇ ಕುಳಿತರೆ ಸರಿಹೋಗಲ್ಲ, ಹೊರಗೆ ಹೋಗಿ ಒಂದು ಸುತ್ತು ಹಾಕಿಕೊಂಡು ಬಂದರೇ ಆ ಒತ್ತಡದ ಗಮನದಿಂದ ಮನಸ್ಸನ್ನು ಬೇರೆಡೆ ಸೆಳೆಯಬಹುದೆಂದುಕೊಂಡು ಅರ್ಧಗಂಟೆ ಸುತ್ತಾಡಿಕೊಂಡು ಮನೆಗೆ ಬಂದರೆ ಆಗಲೂ ಕರೆಂಟು ಬಂದಿರಲಿಲ್ಲ. ಕೊನೆಗೆ ವಿಧಿಯಿಲ್ಲದೇ ಇರುವ ವಿಚಾರವನ್ನು ಅವರಿಗೆ ಹೇಳಿ ಎರಡು ಬಕೆಟ್ ನೀರು ಕೊಡಿ ಎಂದು ಓನರ ಮನೆಯವರನ್ನು ಕೇಳಬೇಕಾಯಿತು. ಅದಕ್ಕವರು ನಾವು ನೀರು ತುಂಬಿಸಿಕೊಂಡಿರಲಿಲ್ಲವಾದ್ದರಿಂದ ನಮಗೂ ನೀರಿಲ್ಲ ತೊಗೊಳ್ಳಿ ಒಂದೇ ಬಕೆಟ್ ಇರೋದು ಅಂತ ಕೊಟ್ಟರು. ಇಷ್ಟಾದರೂ ಸಿಕ್ಕಿತಲ್ಲ ಅಂದುಕೊಂಡು ಮೊದಲು ಮಲಮತ್ತು ಜಲಭಾದೆಯನ್ನು ತೀರಿಸಿಕೊಂಡಾಗ ಸ್ವರ್ಗಸುಖ! ಉಳಿದ ನೀರಿನಲ್ಲಿ ಮುಖ ತೊಳೆದ ಶಾಸ್ತ್ರಮಾಡಿ ಹೊರಗೆ ಹೋಗಿ ಹೋಟಲ್ಲಿನಲ್ಲಿ ತಿಂಡಿ ತಿಂದು ಬರುವಷ್ಟರಲ್ಲಿ ೯ ಗಂಟೆ. ಇದೆಲ್ಲದ ನಡುವೆ ಮತ್ತೊಂದು ಆಚಾತುರ್ಯ ನಡೆದಿತ್ತು. ಮುಖ ತೊಳೆದ ನಂತರ ಟೀ ಕುಡಿಯಲೆಂದು ಮನೆಯಲ್ಲಿದ್ದ ಹಾಲಿಗೆ ಟೀ ಪುಡಿ, ಸಕ್ಕರೆ ಹಾಕಿದ ಹಾಲಿನ ಪಾತ್ರೆಯನ್ನು ಗ್ಯಾಸ್ ಸ್ಟವ್ ಮೇಲಿಟ್ಟವನು ಯಾವುದೋ ಫೋನ್ ಬಂದ ನೆಪದಲ್ಲಿ ಹಾಗೆ ಮರೆತು ಹೋಟಲ್ಲಿಗೆ ಬಂದು ಬಿಟ್ಟಿದ್ದೆ. ಮನೆಗೆ ಬರುವ ಹೊತ್ತಿಗೆ ಟೀ ಎಲ್ಲಾ ಉಕ್ಕಿ ಪಾತ್ರೆಯಿಂದ ಹೊರಬಿದ್ದು ಗ್ಯಾಸ್ ಸ್ವವ್ ಮೇಲೆಲ್ಲಾ ಹರಡಿ ಅದರ ಕೆಳಗಿನ ಕಪ್ಪು ಕಡಪ ಕಲ್ಲಂತೂ ಕಜ್ಜಿ ಬಂದು ಬಿಳಚಿಕೊಂಡಂತೆ ಬಿಳಿ ಬಣ್ಣಕ್ಕೆ ಬದಲಾಗಿಬಿಟ್ಟಿತ್ತು. ಅಷ್ಟೇ ಅಲ್ಲಾ ಅಂತ ಮಳೆಯಿಲ್ಲದ ಕಾಲದಲ್ಲೂ ಕಡಪ ಕಲ್ಲನ್ನು ದಾಟಿ ಕೋಡಿಹರಿದಂತೆ ಆಗಿ ನೆಲವೆಲ್ಲಾ ಚಿತ್ತಾರವಾಗಿಬಿಟ್ಟಿತ್ತು.
ಒಹ್! ಎಂಥ ಪ್ರಮಾದವಾಗಿಬಿಡ್ತು, ಎಷ್ಟು ಚೆನ್ನಾಗಿದ್ದ ಆಡುಗೆ ಮನೆಯನ್ನು ನಾನು ಮೈಮರೆತು ಎಂತ ಪರಿಸ್ಥಿತಿಗೆ ತಂದುಬಿಟ್ಟೆ. ಇದನ್ನು ನೋಡಿದರೆ ಹೇಮಾಶ್ರೀ ನನಗೊಂದು ಗತಿ ಕಾಣಿಸುತ್ತಾಳೆ ಅಂದುಕೊಳ್ಳುತ್ತಾ ಅದನ್ನೆಲ್ಲಾ ತೊಳೆಯಲು ಸಿದ್ದನಾಗಿ ನೀರಿನ ಪಾತ್ರೆಗೆ ಕೈಹಾಕಿದರೆ ಎಲ್ಲಿದೆ ನೀರು? ಕರೆಂಟು ಇನ್ನೂ ಬಂದಿಲ್ಲವಾದ್ದರಿಂದ ನೀರು ಇಲ್ಲ. ಆಗ ಏನು ಮಾಡಲಿಕ್ಕಾಗದೇ ಸುಮ್ಮನೆ ಕುಳಿತುಬಿಟ್ಟೆ. ಆಗ ನನ್ನ ಪರಿಸ್ಥಿತಿಯಂತೂ ಅದೋಗತಿಯಾಗಿತ್ತು. ಅವತ್ತು ಹತ್ತು ಗಂಟೆಯಾದರೂ ಕರೆಂಟು ಬರಲಿಲ್ಲವಾದ್ದರಿಂದ ಮದ್ಯಾಹ್ನದ ಮೇಲೆ ಬಂದು ನೋಡಿಕೊಳ್ಳೋಣವೆಂದು ಮನೆಯಿಂದ ಹೊರಬಿದ್ದಿದ್ದೆ. ಮದ್ಯಾಹ್ನ ಮನೆಗೆ ಬಂದು ನೋಡುತ್ತೇನೆ! ಓನರ್ ನನಗಾಗಿ ಕಾಯುತ್ತಿದ್ದಾರೆ.
"ಏನ್ರೀ ಶಿವು, ನಲ್ಲಿಗಳನ್ನು ತಿರುಗಿಸಿಬಿಟ್ಟಿದ್ದೀರಲ್ಲ....ಕರೆಂಟು ಬಂದು ನಾವು ಮೋಟರ್ ಹಾಕಿ ಟ್ಯಾಂಕಿನಲ್ಲಿ ನೀರು ತುಂಬಿಸಿದ ಮೇಲೆ ಆ ನೀರೆಲ್ಲಾ ನಿಮ್ಮ ಮನೆಯ ನಲ್ಲಿ ಮೂಲಕ ಹರಿದು ಹೋಗುತ್ತಿದೆ, ಅದನ್ನು ನಿಲ್ಲಿಸೋಣವೆಂದರೆ ನೀವು ಮನೆಯನ್ನು ಲಾಕ್ ಮಾಡಿಕೊಂಡು ಹೋಗಿಬಿಟ್ಟಿದ್ದೀರಿ. ಎಷ್ಟು ನೀರು ಪೋಲಾಗಿಹೋಯ್ತು. ಬೇಗ ಬಾಗಿಲು ತೆಗೆದು ನಲ್ಲಿಗಳನ್ನು ನಿಲ್ಲಿಸ್ರೀ" ಅಂದಾಗ ನನ್ನ ಪರಿಸ್ಥಿತಿ ಹೇಗಾಗಿತ್ತು ಅಂದರೆ ಅದನ್ನು ಇಲ್ಲಿ ವರ್ಣಿಸಲಾರೆ!
ಆಗ ಅನ್ನಿಸಿದ್ದು ಈ ನಲ್ಲಿಗಳಿಗೇ ಯಾವಾಗ ಜೀವ ಬರುತ್ತೋ ಆ ದೇವರಿಗೇ ಗೊತ್ತು. ಅವು ಬುಗುರಿಯಾಕಾರವಾದ್ದರಿಂದ ತಿರುಗಿಸಿ ಟೈಟ್ ಮಾಡಿದಾಗ ಟೈಟ್ ಆದಂತೆ ವರ್ತಿಸಿದರೂ ಇದ್ದಕ್ಕಿದ್ದಂತೆ ಯಾವಾಗಲೋ ಲೂಸ್ ಆಗಿ ನೀರನ್ನು ಕ್ಯಾಕರಿಸಿ ಕೆಮ್ಮಿ, ಕಕ್ಕುತ್ತಾ, ಉಗಿಯುತ್ತಾ, ನಮ್ಮ ತಲೆಯೆಲ್ಲಾ ತಿರುಗುವಂತೆ ಮಾಡಿಬಿಡುತ್ತವೆ!
ಈ ಸಮುದ್ರದ ಮರಳ ಮೇಲಿನ ನಲ್ಲಿ[ಏಡಿ]ಗಳಿಗೂ ಬಚ್ಚಲು ಮನೆಯ ನಲ್ಲಿಗಳಿಗೂ ಏನಾದರೂ ಸಂಭಂದವಿದೆಯಾ, ಇಲ್ಲಾ ಹೋಲಿಕೆಯಿದೆಯಾ ಅಂತ ನೋಡಿದಾಗ ಸಂಭಂದವಿರದಿದ್ದರೂ ಹೋಲಿಕೆಯಂತೂ ಖಂಡಿತ ಇದೆ. ನಾವು ಸಮುದ್ರದ ಮರಳಿನಲ್ಲಿ ನಡೆಯುವ ಮೊದಲು ಆ ನಲ್ಲಿ[ಏಡಿ]ಗಳು ಆರಾಮವಾಗಿ ಓಡಾಡಿಕೊಂಡಿರುತ್ತವೆ. ಯಾವಾಗ ನಮ್ಮ ಹೆಜ್ಜೆ ಸದ್ದುಗಳು ಕೇಳಿಸುತ್ತವೋ ಪುಳಕ್ಕನೇ ಆ ಮರಳಿನಲ್ಲಿ ಮಾಯವಾಗಿಬಿಡುತ್ತವೆ. ಮತ್ತೆ ಅವು ಹೊರಗೆ ಕಾಣಿಸಿಕೊಳ್ಳುವುದು ಯಾರು ಇಲ್ಲದಾಗಲೇ. ಅದೇ ರೀತಿ ಇಲ್ಲಿ ಬಚ್ಚಲು ಮನೆಯ ನಲ್ಲಿಗಳು ನಾವು ಮನೆಯಲ್ಲಿದ್ದು ನೀರು ಬೇಕೆಂದು ತಿರುಗಣೆ ತಿರುಗಿಸಿದಾಗ ನೀರನ್ನು ಕಕ್ಕುವುದಿಲ್ಲ, ಆದ್ರೆ ನಮಗೆ ಬೇಡದ ಸಮಯದಲ್ಲಿ ಕುಡಿದವರಂತೆ ಶಬ್ದ ಮಾಡುತ್ತಾ ನೀರನ್ನು ಕ್ಯಾಕರಿಸಿ ಉಗಿಯುತ್ತವೆಯಾದ್ದರಿಂದ ಇವೆರಡರ ನಡಾವಳಿಯಲ್ಲಿ ಹೋಲಿಕೆಯಂತೂ ಇದ್ದೇ ಇದೆ.
ಒಂದೆರಡು ದಿನ ಕಳೆಯಿತು. ಊರಿನಿಂದ ಫೋನ್ ಮಾಡಿದಳು.
"ರೀ.......ಏನ್ಸಮಚಾರ......ನಲ್ಲಿ ನಿಲ್ಲಿಸಿದ್ದೀರಾ? ಗ್ಯಾಸ್ ಆಪ್ ಮಾಡಿದ್ದೀರಾ? ಎಲ್ಲಾ ಲೈಟುಗಳ ಸ್ವಿಚ್ ಆಪ್ ಮಾಡಿದ್ದೀರಾ?"
"ಏನೇ ಇದು ನನ್ನನ್ನು ವಿಚಾರಿಸಿಕೊಳ್ಳುವುದು ಬಿಟ್ಟು ಮೊದಲು ನಲ್ಲಿ, ಲೈಟು, ಗ್ಯಾಸ್ ಅಂತ ಕೇಳುತ್ತಿದ್ದೀಯಾ?"
"ಹೌದ್ರೀ....ಅವಕ್ಕೆಲ್ಲಾ ಏನು ಹೆಚ್ಚು ಕಮ್ಮಿಯಾಗದಿದ್ದರೇ ನೀವು ಖಂಡಿತ ಚೆನ್ನಾಗಿರುತ್ತೀರಿ ಅಂತ ನನಗೆ ಗೊತ್ತು"
ಅವಳು ನನ್ನನ್ನು ವಿಚಾರಿಸಿಕೊಳ್ಳುವ ಪರಿ ಈ ರೀತಿಯದಾಗಿತ್ತು.
ಅದಕ್ಕಾಗಿ ಈಗ ಅವಳು ಊರಿಗೆ ಹೋಗಿ ಅಲ್ಲಿಂದ ಫೋನ್ ಮಾಡಿದಾಗಲೆಲ್ಲಾ ನನ್ನಿಂದ ಬೇರೆ ರೀತಿ ಉತ್ತರವನ್ನು ಕೊಡುವ ಅಬ್ಯಾಸ ಮಾಡಿಕೊಂಡುಬಿಟ್ಟಿದ್ದೆ.
ಈ ಬಾರಿಯ ಗೌರಿಹಬ್ಬಕ್ಕೆ ಊರಿಗೆ ಹೋಗಿದ್ದಳಲ್ಲ...ಅಲ್ಲಿಂದ ಫೋನ್ ಮಾಡಿದಳು.
"ರೀ....ಹೇಗಿದ್ದೀರಿ....ಬೆಳಿಗ್ಗೆ ತಿಂಡಿ ಏನು ಮಾಡಿಕೊಂಡ್ರಿ?
"ಹೇಮ ನಾನು ಗ್ಯಾಸ್ ಸ್ಟವ್ ಹಚ್ಚಲೇ ಇಲ್ಲ. ಮತ್ತೆ ಹೋಟಲ್ಲಿಗೆ ಹೋಗಿ ದೋಸೆ ತಿಂದೆ."
"ಮತ್ತೆ ಸ್ನಾನ ಮಾಡಿದ್ರಾ?"
"ಸ್ನಾನಾನು ಮಾಡಲಿಲ್ಲ. ಕೊಳಾಯಿಯ ಸಹವಾಸಕ್ಕೆ ಹೋಗಲಿಲ್ಲ. ನೀನು ಊರಿಗೆ ಹೋಗುವಾಗ ದೊಡ್ಡ ಡ್ರಮ್ಮಿನಲ್ಲಿ ತುಂಬಿಸಿದ ತಣ್ಣಿರಲ್ಲೇ ಸ್ನಾನ ಮಾಡಿದೆ."
"ಅಯ್ಯೋ ತಣ್ಣೀರಾ...ನಿಮಗೆ ನೆಗಡಿಯಾಗಿಬಿಡುತ್ತೇ"
"ಆದ್ರೂ ಪರ್ವಾಗಿಲ್ಲ ನಲ್ಲಿ ಸಹವಾಸಕ್ಕಿಂತ ನೆಗಡೀನೇ ಬೆಟರ್ರೂ.....
"ಮತ್ತೆ ಲೈಟ್ ಸ್ವಿಚ್ ಆಪ್ ಮಾಡುತ್ತಿದ್ದೀರಿ ತಾನೆ?
"ಇಲ್ಲಾ ಕಣೇ"
"ಮತ್ತೆ ಹಾಗೆ ಬಿಟ್ಟು ಹೋಗುತಿದ್ರಾ?" ಅವಳ ಮಾತಿನ ದ್ವನಿಯಲ್ಲಿ ಗಾಬರಿಯಿತ್ತು.
"ನಾನು ಲೈಟ್ ಬೆಳಕನ್ನೇ ಉಪಯೋಗಿಸಲಿಲ್ಲವಾದ್ದರಿಂದ ಸ್ವಚ್ಚನ್ನು ಮುಟ್ಟುವ ಪ್ರಮೇಯವೇ ಬರಲಿಲ್ಲವಲ್ಲಾ"
"ಮತ್ತೆ ಕತ್ತಲಲ್ಲಿ ಹೇಗೆ ಇದ್ರೀ...."
"ಮೇಣದ ಬತ್ತಿಯನ್ನು ಹೊತ್ತಿಸಿ ಅದರ ಬೆಳಕಿನಲ್ಲಿ ಆದಿವಾಸಿಯಂತೆ ಕಾಲ ಕಳೆಯುತ್ತಿದ್ದೆ"
ಇಷ್ಟೆಲ್ಲಾ ಮಾತಾಡುವ ಹೊತ್ತಿಗೆ ನಾನು ಹೇಳಿದ್ದೆಲ್ಲಾ ಸುಳ್ಳು ಅಂತ ಗೊತ್ತಾಗಿ ಇನ್ನೇನಾದ್ರು ಕೇಳಿದ್ರೆ ಇವರು ಮತ್ತಷ್ಟು ಸಿನಿಮಾ ಕತೆಯನ್ನು ಹೇಳುವುದು ಗ್ಯಾರಂಟಿ ಅಂತ ಸುಮ್ಮನಾಗಿಬಿಡುತ್ತಿದ್ದಳು.
ಇನ್ನೂ ನಮ್ಮ ಮನೆಯ ಮೋಟರ್ ಸ್ವಿಚ್ ಮತ್ತು ಪೈಪುಗಳ ಕತೆಯೇ ಬೇರೊಂದು ತೆರನಾದ್ದು. ಕರೆಂಟು ಬಂತಲ್ಲ ಅಂತ ಸ್ವಿಚ್ ಹಾಕಿಬಿಟ್ಟರೆ ನೀರು ನೇರವಾಗಿ ನಮ್ಮ ಮನೆಯ ಟ್ಯಾಂಕಿಗೆ ತುಂಬುವುದಿಲ್ಲ. ಮಾಲೀಕರ ಮನೆಯ ಓವರ್ ಹೆಡ್ ಟ್ಯಾಂಕ್ ತುಂಬಿ ಹರಿದಿರುತ್ತದೆ[ನಮ್ಮ ಬಿಲ್ಡಿಂಗಿನಲ್ಲಿ ಮೂರು ಓವರ್‌ಹೆಡ್ ವಾಟರ್ ಟ್ಯಾಂಕುಗಳಿವೆ ಅವಕ್ಕೆಲ್ಲಾ ಒಂದೇ ಮೋಟರ್ ಸ್ವಿಚ್ಚಿದೆ]. ಅಥವ ನಮ್ಮ ಪಕ್ಕದ ಮನೆಯ ಟ್ಯಾಂಕು ಉಕ್ಕಿಹರಿದು ಕೋಡಿ ಬಿದ್ದಿರುತ್ತದೆ. ಇದನ್ನೆಲ್ಲಾ ತಪ್ಪಿಸಲು ನಮ್ಮ ಹದಿಮೂರು ಮನೆಯ ಬಿಲ್ಡಿಂಗಿನಲ್ಲಿ ಚಕ್ರವ್ಯೂಹದಂತ ನೀರಿನ ಪೈಪುಗಳ ಲಿಂಕುಗಳಿವೆ. ಮೋಟರ್ ಸ್ವಿಚ್ ಹಾಕುವ ಮೊದಲು ಯಾವುದೋ ಪೈಪಿನ ವಾಲ್ ಮೇಲಕ್ಕೆ ಎತ್ತಬೇಕು. ಎದುರಿಗಿರುವ ಪೈಪಿನ ವಾಲನ್ನು ಕೆಳಕ್ಕೆ ಮಾಡಬೇಕು. ಮತ್ಯಾವುದೋ ತಿರುಪಣೆಯನ್ನು ಬಲಕ್ಕೆ ತಿರುಗಿಸಿ ಟೈಟ್ ಮಾಡಬೇಕು. ಇಲ್ಲಿಯೂ ಕೆಲವೊಮ್ಮೆ ಬಲವೋ ಎಡವೊ ಗೊಂದಲವುಂಟಾಗಿ ನೀರು ಯಾವುದೋ ಟ್ಯಾಂಕಿಗೆ ಹರಿದು ಒಂದು ಕಡೆ ಅತೀವೃಷ್ಟಿ ಮತ್ತೊಂದು ಕಡೆ ಆನಾವೃಷ್ಟಿಯಾಗಿಬಿಟ್ಟಿರುತ್ತದೆ.
ಇಂಥ ಚಕ್ರವ್ಯೂಹವನ್ನೆಲ್ಲಾ ಅಧ್ಯಾಯನ ಮಾಡಿ ಅದರೊಳಗೆ ನುಗ್ಗಿ ಜಯಿಸಲು ನಾನೇನು ಅಭಿಮನ್ಯುವೇ? ಇದರ ಸಹವಾಸವೇ ಬೇಡವೆಂದು ಸುಮ್ಮನಾಗಿಬಿಡುತ್ತೇನೆ. ಮನೆಯಲ್ಲಿ ತುಂಬಿಸಿಟ್ಟ ನೀರನ್ನೇ ರೇಷನ್ ತರಹ ಬಿಂದಿಗೆಯಷ್ಟು ನೀರಿನ ಅವಶ್ಯಕತೆಯಿರುವಾಗ ಚೆಂಬಿನಷ್ಟು ಉಪಯೋಗಿಸುತ್ತಾ, ಚೆಂಬಿನಷ್ಟು ಅವಶ್ಯಕತೆಯಿರುವಾಗ ಲೋಟದಷ್ಟೇ ಉಪಯೋಗಿಸುತ್ತಾ...ನನ್ನ ಶ್ರೀಮತಿ ಬರುವವರೆಗೂ ಕಾಲಹಾಕುತ್ತೇನೆ. ಇನ್ನೂ ವಿದ್ಯುತ್ ಸ್ವಿಚ್ಚುಗಳ ಬಗ್ಗೆ ಬರೆದರೇ ನಿಮಗೆ ಅದೊಂದು ದೊಡ್ಡ ಕತೆಯಾಗುತ್ತದೆಂಬ ಭಯದಿಂದ ಇಲ್ಲಿಗೆ ನಿಲ್ಲಿಸಿದ್ದೇನೆ.
ಚಿತ್ರ ಮತ್ತು ಲೇಖನ.
ಶಿವು.ಕೆ
__________________________________________________
ಮತ್ತೊಂದು ಸುದ್ಧಿ.
ನವೆಂಬರ್ ೧೫ನೇ ೨೦೦೯ ಭಾನುವಾರದಂದು ನನ್ನ ಬರವಣಿಗೆಯ ಹೊಸ ಪುಸ್ತಕ "ವೆಂಡರ್ ಕಣ್ಣು" ಪ್ರಕಾಶ್ ಹೆಗಡೆ ಮತ್ತು ದಿವಾಕರ ಹೆಗಡೆಯವರ ಪುಸ್ತಕಗಳ ಜೊತೆಗೆ ಚಾಮರಾಜಪೇಟೆಯಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಲೋಕರ್ಪಣೆಯಾಗಲಿದೆ. ಆ ಪುಸ್ತಕಕ್ಕಾಗಿ ಗೆಳೆಯ ಪಿ.ಟಿ ಪ್ರಮೋದ್ ರಚಿಸಿಕೊಟ್ಟ ಅನೇಕ ಚಿತ್ರಗಳಲ್ಲಿ ಇದು ಒಂದು.
ಜೊತೆಗೆ ನನ್ನ ಬರವಣಿಗೆಯನ್ನು ಭಾವನಾತ್ಮಕವಾಗಿ ಮತ್ತು ವಸ್ತುನಿಷ್ಟವಾಗಿ ತಿದ್ದಿತೀಡಿ ಪ್ರೋತ್ಸಾಹಿಸಿ, ಬೆನ್ನುಡಿಯನ್ನು ಬರೆದುಕೊಟ್ಟಿದ್ದಾರೆ ಅನಂತಪುರದ ಶ್ರೀಕೃಷ್ಣ ದೇವರಾಯ ವಿಶ್ವವಿದ್ಯಾಲಯದಲ್ಲಿ ಪ್ರೊಫೆಶರ್ ಆಗಿರುವ ಡಾ. ಆರ್. ಶೇಷಾಶಾಸ್ತ್ರಿಗಳು. ಅದನ್ನು ಹಾಗೆ ನೇರವಾಗಿ ಇಲ್ಲಿ ಬ್ಲಾಗಿಗೆ ಹಾಕಿದ್ದೇನೆ.
ಕನ್ನಡ ಸಾಹಿತ್ಯವನ್ನು ತಮ್ಮ ವಿಶಿಷ್ಟ ಅನುಭವ ಮತ್ತು ಅಭಿವ್ಯಕ್ತಿಯಿಂದ ಶ್ರೀಮಂತಗೊಳಿಸುತ್ತಿರುವ ಯುವಕರ ಪಡೆಯಲ್ಲಿ ಶ್ರೀ ಶಿವು ಅವರದು ವಿಶಿಷ್ಟ ಸ್ಥಾನ. ಶಿವು ಅವರ ಅಭಿವ್ಯಕ್ತಿ ಮಾಧ್ಯಮಗಳು ಎರಡು. ಒಂದು ಭಾಷೆ ಎರಡನೆಯದು ಕ್ಯಾಮೆರಾ. ಈ ಎರಡರ ಮೂಲಕವೂ ಅವರು ಸೆರೆಹಿಡಿಯುತ್ತಿರುವುದು ಈ ಮನುಷ್ಯರ ಚಹರೆಗಳನ್ನು ಸ್ವಭಾವಗಳನ್ನು. ಶಿವು ಸ್ವಭಾವತಃ ಸಾತ್ವಿಕ ಆದ್ದರಿಂದ ಆತನಿಗೆ ಬದುಕಿನ ಪಾಸಿಟೀವ್ ಅಂಶಗಳೇ ಕಾಣುತ್ತವೆಯೇ ಹೊರತು ನೆಗಟೀವ್ ಅಂಶಗಳಿಲ್ಲ. ಬದುಕಿನಲ್ಲಿ ಸ್ವಯಂಕೃಷಿಯಿಂದ ಮೇಲೇರುತ್ತಿರುವ ಶಿವು "ಸಹನೆ" ಒಂದು ಉತ್ತಮೋತ್ತಮ ಗುಣ ಎಂಬುದನ್ನೇ ಅರಿತವರು. ಅದನ್ನು ರೂಢಿಸಿಕೊಂಡವರು. ಪ್ರತಿಯೊಂದು ಘಟನೆಯನ್ನು ಒಂದು ಚೌಕಟ್ಟಿನಲ್ಲಿಟ್ಟು ನೋಡಬಲ್ಲರು. ತಾವು ಕಂಡಿದ್ದನ್ನು ಮಾತಿನ ಮೂಲಕವೋ, ಕ್ಯಾಮೆರಾ ಮೂಲಕವೋ ನಮಗೆ ತೋರಿಸಬಲ್ಲವರು. ಅವರವರ ಬದುಕು ಅವರಿಗೆ ದೊಡ್ಡದು, ಪ್ರಯೋಗಶೀಲವಾದದು. ಆ ಬದುಕಿನ ಮೂಲಕ ಅವರು ಕಂಡುಕೊಂಡ ದರ್ಶನ ಅವರಿಗೆ ವಿಶಿಷ್ಟವಾದುದು. ಈ ರೀತಿ ವಿಶಿಷ್ಟ ದರ್ಶನಗಳ ಸಮಾಹಾರವೇ ಸಂಸ್ಕೃತಿ. ಊರೆಲ್ಲರಿಗೂ ನಸುಕು ಹರಿಯುತ್ತಿರುವಂತೆ ಪ್ರಪಂಚದ ಮೂಲೆ ಮೂಲೆಯಲ್ಲಿನ ಸುದ್ಧಿಗಳನ್ನು ಹಂಚುವ ವಿತರಕರ, ಹುಡುಗರ ಬದುಕಿನ ಹಲವಾರು ಸಂಗತಿಗಳನ್ನು ನಮ್ಮ ಮುಂದಿಟ್ಟಿದ್ದಾರೆ. "ಇಲ್ಲಿನ ಪ್ರತಿಯೊಂದು ಬರಹವೂ ತನ್ನ ತಾಜಾತನದಿಂದ, ಸರಳತನದಿಂದ ಓದಿಸಿಕೊಂಡು ಹೋಗುತ್ತದೆ. ಮಿತ್ರ ಶಿವು ಅವರ ಲೇಖನದಿಂದ ಇನ್ನೂ ಇಂಥ ಹಲವಾರು ಬರಹಗಳು ಬರಲಿ"
ಡಾ. ಆರ್. ಶೇಷಶಾಸ್ತ್ರಿ.
ಪುಸ್ತಕದ ಇನ್ನಷ್ಟು ವಿಚಾರಗಳನ್ನು ಮುಂದಿನ ಪೋಷ್ಟಿಂಗ್‍ನಲ್ಲಿ ತಿಳಿಸುತ್ತೇನೆ.