Sunday, May 31, 2009

ಓಡಿದರು.. ಓಡಿದರು......ಆದ್ರೆ ಯಾರು ಯಾರು ಓಡಿದರು...?


ಓಡಿದರು....ಓಡಿದರು...ಓಡಿದರು...ಇಂದು ಬೆಳಿಗ್ಗೆ[೩೧-೫-೨೦೦೯] ವರ್ಲ್ಡ್ ಟೆನ್ ಕೆ ಎನ್ನುತ್ತಾ ಬೆಂಗಳೂರಿನಲ್ಲಿ ಜನ ಓಡಿದರು.....

ನಾನು ಮುಂಜಾನೆ ಇವರ ಜೊತೆ ಓಡಬೇಕಿತ್ತು. ನನ್ನ ದಿನಪತ್ರಿಕೆ ಕೆಲಸದ ತೊಂದರೆಯಿಂದಾಗಿ ಓಡಲಾಗಲಿಲ್ಲ. ಹೋಗಲಿ ಫೋಟೋ ತೆಗೆಯೋಣವೆಂದು ವಿಧಾನ ಸೌಧದ ಮುಂದಿನ ರಸ್ತೆಯಲ್ಲಿ ಬೆಳಿಗ್ಗೆ ಏಳುವರೆಯ ಹೊತ್ತಿಗೆ ಕಾದು ನಿಂತಿದ್ದೆ. ಆಗ ಪ್ರಾರಂಭವಾಯಿತಲ್ಲ ಓಟ....

ಮೊದಲು ಯಾವುದಾದರೂ ಸ್ಪರ್ಧಾತ್ಮಕ ಚಿತ್ರಗಳನ್ನು ಕ್ಲಿಕ್ಕಿಸಬಹುದು ಅಂತ ಸೀರಿಯಸ್ಸಾಗಿ ಕ್ಲಿಕ್ಕಿಸತೊಡಗಿದೆ....ಸ್ವಲ್ಪ ಹೊತ್ತಿನ ನಂತರ ಆ ಸೀರಿಯಸ್‌ನೆಸ್ ಹೊರಟೇ ಹೋಯಿತು...ಕಾರಣ "ರನ್ ಮಾಡಿ ರನ್" ಅನ್ನುವುದನ್ನು ಬಿಟ್ಟು ಬೇರೆ ಏನೇನು ಮಾಡಿದರು ಅನ್ನುವುದು ಫೋಟೋ ಸಮೇತ ದಾಖಲಾಗತೊಡಗಿತು. ಎಲ್ಲಾ ತಮಾಷೆಯಾಗತೊಡಗಿತು. ವಿಧಾನಸೌಧದ ಮುಂದೆ ನಾನು ಕ್ಲಿಕ್ಕಿಸುತ್ತಿದ್ದಾಗ ಓಡುವುದನ್ನು ಬಿಟ್ಟು ಬೇರೆ ಏನೇನು ಮಾಡಿದರು ಅನ್ನುವ ತಮಾಷೆಯನ್ನು ಮುಂದಿನ ಭಾಗದಲ್ಲಿ ಚಿತ್ರ ಸಮೇತ ಬರೆಯುತ್ತೇನೆ.

ಈಗ ಅದಕ್ಕಿಂತಲೂ ಆಸಕ್ತಿಕರ ವಿಚಾರವನ್ನು ಇದೇ ಓಟದಲ್ಲಿ ನಾನು ಕಂಡೆನು. ಅದೇನೆಂದರೇ ಯಾರು ಯಾರು ಓಡಿದರು.?

ಅದನ್ನು ಗಮನಿಸಿದರೆ ದೊಡ್ಡ ಪಟ್ಟಿಯೇ ಆಗುತ್ತದೆ. ಅದಕ್ಕಾಗಿ ಕೆಲವನ್ನು ಮಾತ್ರ ತಿಳಿಸುತ್ತೇನೆ. ಫೋಟೋಗಳನ್ನು ನೋಡುತ್ತಾ ಓದಿಕೊಂಡು ಓದಿ.

ಮೊದಲು ವಿದೇಶಿ ಪಕ್ಕಾ ಓಟಗಾರರಿದ್ದರು, ಅವರ ಹಿಂದೆ ಅಂಗವಿಕಲ ವ್ಹೀಲ್ ಚೇರ್ ಓಟಗಾರರು, ಜೊತೆಗೆ ನಮ್ಮ ಸ್ವದೇಶಿ ಸ್ಪರ್ಧಾತ್ಮಕ ಓಟಗಾರರು, ನಂತರ ಬಂದರಲ್ಲ.....ಎಂಬತ್ತಕ್ಕೂ ಹೆಚ್ಚು ವಯಸ್ಸಾದ ವಯಸ್ಕರು ಅದಕ್ಕೆ ತದ್ವಿರುದ್ದವಾಗಿ ೧೦ ವರ್ಷದ ಮಕ್ಕಳು, ಹತ್ತು ಕಿಲೋ ಮೀಟರ್ ಸೀರಿಯಸ್ಸಾಗಿ ಓಡಿ ಇವತ್ತೇ ಹತ್ತು ಕೇಜಿ ತೂಕ ಇಳಿಸುವ ಧೃಡ ಸಂಕಲ್ಪ ಮಾಡಿದ ಸೀರಿಯಸ್ ಬೆವರಿನ ಮುಖಿಗಳು, ಅಯ್ಯೋ ಎನೋ ಓಡಿದರಾಯಿತು ಅಂದುಕೊಂಡ ಹಸನ್ಮುಖಿಗಳು, ಹತ್ತು ಕಿಲೋ ಮೀಟರ್ ಮುಗಿಯವವರೆಗೂ ಒಂದು ತೊಟ್ಟು ನೀರು ಕುಡಿಯೊಲ್ಲವೆಂದು ಸಫತಗೈದವರ ನಡುವೆಯೇ ನಿಮಿಷಕ್ಕೊಂದು ಗುಟುಕು ನೀರನ್ನು ಓಟದುದ್ದಕ್ಕೂ ಕುಡಿದವರು, ಇವರೆಲ್ಲಾ ಸೀರಿಯಸ್ಸ್ ಓಟಗಾರರು.

ಇವರ ನಡುವೆ ಮುಗುತಿಧಾರಿ ಸುಂದರ ಹುಡುಗಿಯರು, ಯುವತಿಯರು ಅವರನ್ನು ನೋಡುತ್ತಾ ಓಡಲಿಕ್ಕೆ ಬಂದ ಪಡ್ಡೆ ಹೈಕಳು, ಓಡುತ್ತಲೇ "ಕಣ್ಸನ್ನೆ ಕೈಕಾಲ್ ಸನ್ನೇಗಳನ್ನು" ಪಾಸ್ ಮಾಡುತ್ತಿದ್ದ ಕಾಲೇಜು ಯುವಕ ಯುವತಿಯರು, ಯುವ ಪ್ರೇಮಿಗಳು, ನವಜೋಡಿಗಳು, ವಿರಹಿಗಳು, ಗಟ್ಟಿ ಮಾತಿನ ಗಟ್ಟಿಗಿತ್ತಿ ಗೃಹಿಣಿಯರು, ಅವರ ಪಕ್ಕ ತಮ್ಮದೇ ಲೋಕದಲ್ಲಿ ಓಡುತ್ತಾ ವಿವರಿಸುತ್ತಿದ್ದ ಅಜ್ಜಂದಿರು ಓಡುತ್ತಿದ್ದಾರೆ.


ನೋಡಿ ಎಂಥೆಂಥವರು ಓಡುತ್ತಿದ್ದಾರೆ.!!




ಓಟ-ಬದುಕು ಎರಡರಲ್ಲೂ ಗೆಲ್ಲಬೇಕೆಂಬ ಛಲ...!!



ಓಟಕ್ಕೆ ವಯಸ್ಸಿನ ಅಂತರವಿದೆಯೇ?


ಆದೋ ಬಂದರು ತರಾವರಿ ಟೋಪಿದಾರರು, ಅವರ ಹಿಂದೆ ಮಗನನ್ನು ಹೆಗಲಮೇಲೆ ಕೂರಿಸಿಕೊಂಡ ಅಪ್ಪ, ನಾನೇನು ಕಮ್ಮಿಯಿಲ್ಲವೆಂದು ಮತ್ತೊಬ್ಬ ಅಪ್ಪ ಪುಟ್ಟಮಗುವನ್ನು ಹೊಟ್ಟೆಯ ಮೇಲೆ ಕೂರಿಸಿಕೊಂಡು ಓಡುತ್ತಿದ್ದಾರೆ. ಒಟ್ಟೊಟ್ಟಿಗೆ ಓಡುತ್ತಿದ್ದಾ ಅಪ್ಪ ಮಗಳು, ಫ್ರೆಂಚ್ ಗಡ್ಡದಾರಿಗಳು ಕಂಡರು......ಹಿಂದೆಯೇ ಬಂದಳಲ್ಲ ಕುದುರೆ ಬಾಲದಷ್ಟೇ ಸೊಗಸಾಗಿದ್ದ ಕೆಂಚುಕೂದಲನ್ನು ಹೊಂದಿದ್ದ ವಿದೇಶಿ ಯುವತಿ. ಅವಳು ಓಡುವಾಗ ಕೂದಲ ಹಾರಾಟ ನನ್ನ ಕ್ಯಾಮೆರದಲ್ಲಿ ಸೆರೆಯಾಯಿತು. ಆಷ್ಟರಲ್ಲಿ ಅಯ್ಯೋ ಅದನ್ನೇನು ತೆಗೆಯುತ್ತೀಯಾ ಇಲ್ಲಿ ನೋಡು ಅದಕ್ಕಿಂತ ಸಕ್ಕತ್ತಾಗಿದೆ ಅನ್ನುವ ಹಾಗೆ ಹೆಣ್ಣಿನಷ್ಟೆ ಉದ್ದ ಕೂದಲು ಹೊಂದಿದ್ದ ವ್ಯಕ್ತಿಯೊಬ್ಬ ಓಡಿಬಂದ.

ಮಕ್ಕಳನ್ನು ಇನ್ನೂ ಎಲ್ಲೆಲ್ಲಿ ಕೂರಿಸಿಕೊಂಡು ಓಡುತ್ತೀರಿ ಸ್ವಾಮಿ.!!

ಓಟ..ಓಟ...ಓಟಾನೋ... ಅಪ್ಪ ಮಗಳ ಓಟನೋ......


ಎಲೇ ಹೆಣ್ಣೇ ನಿನ್ನ ಕೂದಲಿಗೆ ನನ್ನ ಕೂದಲು ಸವಾಲ್..!!



ಅದೆಷ್ಟು ಕುಳ್ಳಗಿದ್ದಾನೆ ಈತ ಅಂದುಕೊಳ್ಳುವಷ್ಟರಲ್ಲಿಯೆ, ದೂರದಲ್ಲಿ ಏಳು ಆಡಿಗಿಂತ ಎತ್ತರವಿರುವ ವಿದೇಶಿ ಓಟಗಾರನೊಬ್ಬ ಬರುತ್ತಿದ್ದಾನೆ. ಒಂದು ಕ್ವಿಂಟಾಲ್ ತೂಕದ ಯುವತಿಯ ಹಿಂದೆಯೇ ತೆಳ್ಳನೆ ಓಟಗಾತಿಯೂ ನನ್ನ ಕ್ಯಾಮರಾದಲ್ಲಿ ದಾಖದಾದರು.


ಓಟಕ್ಕೆ ಎತ್ತರ-ಗಿಡ್ಡತನದ ತಡೆಯುಂಟೇ..!!

ನೀನೆಷ್ಟೇ ತೆಳ್ಳಗಿದ್ರೂ ನಿನಗಿಂತ ಜೋರಾಗಿ ನಾನು ಓಡ್ತೀನಿ...!


ಅದೋ ನೋಡಿ ಪಂಜಾಬಿನ ಸಿಂಗ್ ಬರುತ್ತಿದ್ದಾನೆ. ಅದಕ್ಕೆ ಮೊದಲೇ ಕ್ಲಿಕ್ಕಿಸಿದ್ದು ಮೇಘಾಲಯದ ರಾಜಧಾನಿ ಷಿಲ್ಲಾಂಗ್ ನಿಂದ ಒಂದು ಮಗುವಿನ ಸಮೇತ ಬಂದ ದಂಪತಿಗಳನ್ನು. ನಡುವೆ ಸಣ್ಣ ಕಣ್ಣಿನ ಚಪ್ಪಟೆ ಮೂಗಿನ ಟೆಬೆಟ್ ಜನರು ಅವರ ಜೊತೆಗೆ ಚೀನಾ ಮಲೇಶಿಯಾ ಸಿಂಗಪೂರದವರು,

ಭೂತದ ಮುಖವಾಡದಾರಿಗಳು, ಆಶೋಕ ಮರದ ಎಲೆಗಳನ್ನೇ ಬಟ್ಟೆಗಳನ್ನಾಗಿ ಪರಿವರ್ತಿಸಿಕೊಂಡ ಪರಿಸರವಾದಿಗಳು, ಎಡಭಾಗ ಅರ್ಧಪ್ಯಾಂಟು ಶರ್ಟು, ಬಲಭಾಗ ಚೂಡಿಧಾರದಂತ ವಸ್ತ್ರ ಧರಿಸಿದ್ದ ಆಧುನಿಕ ಅರ್ಧನಾರೀಶ್ವರೀ, ಪೈರೈಟ್ಸ್ ಆಪ್ ದಿ ಕೆರೆಬಿಯನ್ ಚಿತ್ರದ ಜಾನಿ ಡೆಫ್ ಚಿತ್ರನಟನಂತೆ ವೇಷ ತೊಟ್ಟವನೊಬ್ಬ ಓಡಿಬರುತ್ತಿದ್ದಾನೆ. ಇಲ್ಲೊಬ್ಬಳು ಆಧುನಿಕ ಮತ್ಸ್ಯಕನ್ಯೆಯಾಗಿದ್ದರೇ ಅವಳ ಜೊತೆ ಅದೆಂತದೋ ಮುಖವಾಡವನ್ನು ಹಾಕಿಕೊಂಡವಳು ಜೊತೆಗಾರ್ತಿಯಾಗಿದ್ದಾಳೆ. ಭಾರತದೇಶದ ಭೂಪಟವನ್ನೇ ಬೆನ್ನಿಗಾಕಿಕೊಂಡು ಈತನೊಬ್ಬ ಓಡುತ್ತಿದ್ದಾನೆ ಇವನ ಉದ್ದೇಶ ದೇಶವನ್ನು ಮುನ್ನಡೆಸುವುದೋ ಅಥವ ದೇಶವನ್ನು ಬೆನ್ನ ಹಿಂದೆ ಹಾಕಿ ಓಡಿಹೋಗುವುದೋ ತಿಳಿಯುತ್ತಿಲ್ಲ.


ಕೊಡಗಿನ ವೀರ ನೀನೆಲ್ಲೇ ಓಡು, ನಿನ್ನನ್ನು ಹಿಡಿಯಲು ನಾನು ಹಿಂದೆನೇ ಇದ್ದೇನೆ...


ನೀನು ಜಾನಿಢೆಫ್ ಆದರೆ ನಾನು ಆಧುನಿಕ ಅರ್ಧನಾರಿಶ್ವರಿ...ನಾನು ಪರಿಸರವಾದಿ...


ಮಸ್ತ್ಯ ಕನ್ಯೆಯ ಜೊತೆ ನನ್ನ ಬೆಕ್ಕಿನ ಮುಖವಾಡ ಹೇಗಿದೇ...!!


ಇಡೀ ಭಾರತದ ಜವಾಬ್ದಾರಿ ನನ್ನದೇ...!!, ಬಲು ಅಪರೂಪ ನಮ್ ಕುಟುಂಬ[ಮೇಘಾಲಯದಿಂದ ಬಂದವರು]


ಆಹಾ! ಈ ಗುಂಪಿನಲ್ಲಿ ಕಾಲಬೈರವ, ದೆವ್ವದಂತ ಮೂಳೆ ಮನುಷ್ಯ, ಬುಡಕಟ್ಟು ಜನಾಂಗ, ಇತ್ಯಾದಿ ವೇಷಗಳೊಂದಿಗೆ ಸಂಸ್ಕೃತಿ ಉಳಿಸಿ ಅಂತ ಓಡುತ್ತಿದ್ದಾರೆ. ಇಲ್ಲೊಂದು ಮಗು ಮೀರಬಾಯಿಯಾಗಿ ಓಡುತ್ತಿದ್ದರೆ, ಅದೋ ಅಲ್ಲಿ ಕಥಕ್ಕಳಿ ವೇಷಧಾರಿಯೊಬ್ಬ ಓಡಿಬರುತ್ತಿದ್ದಾನೆ. ಇವರ ನಡುವೆ ನಮ್ಮ ಮೆಟ್ರೋ ರೈಲನ್ನು ಹೊತ್ತ ಹುಡುಗರು ಬರುತ್ತಿದ್ದಾರೆ. ಅದೋ ನೋಡಿ ಆತ ಭಾಯಿಯ ಬಳಿ ಕೈಯಿಡಿದುಕೊಂಡೇ ಓಡಿಬರುತ್ತಿದ್ದಾನೆ...ನನಗೆ ಕುತೂಹಲ ತಡೆಯಲಾರದೇ ಕೇಳೀಯೇ ಬಿಟ್ಟೆ ಅದಕ್ಕೆ ಅವನು ಕೊಟ್ಟ ಉತ್ತರ ಹಲ್ಲುನೋವು. ಅಂತ ನೋವಿನಲ್ಲಿ ಓಟದಲ್ಲಿ ಭಾಗವಹಿಸಿದ್ದ ಅವನ ಬಗ್ಗೆ ಹೆಮ್ಮೆಯೆನಿಸಿತು. ಆಷ್ಟೇ ಅದೇ ರೀತಿ ಪೂರ್ತಿ ಬಲಗೈ, ಎಡಗೈ, ಇಲ್ಲದ ಓಟಗಾರರು ಅವರ ಚಲದ ಬಗ್ಗೆ ನನಗೆ ಅಭಿಮಾನ ಉಂಟಾಯಿತು.

೨೦೨೦ರ ವರೆಗೂ ಇದು ನಮ್ಮ ತಲೆಮೇಲೆ ಇರುತ್ತೆ...[ಅಲ್ಲಿವರೆಗೂ ಮೆಟ್ರೋ ಬರಲ್ಲ]

ನಾವೆಲ್ಲಾ ಈ ವಿಧಾನಸೌಧದ ಮುಂದೆ ಓಡಬೇಕಾದ ಗತಿ ಬಂತಲ್ಲ...!!


ಮೀರಾ ನಿನ್ನ ಭಜನೆಯನ್ನು ಕೇಳುತ್ತಾ ನಾನು ಓಡುತ್ತಿದ್ದೇನೆ. ನಾನೇ ಗೆಲ್ಲೋದು...!!




ಹಲ್ಲುನೋವಿರಲಿ...ಕೈಗಳೇ ಇಲ್ಲದಿರಲಿ..ನಾವೂ ಓಡಿ ಗೆಲ್ಲುತ್ತೇವೆ....


ಅರೆರೆ...ಇಲ್ಲಿ ನೋಡಿ ನಮ್ಮ ಕೊಡಗಿನ ವೀರದಂಪತಿಗಳ ಜೊತೆಗೆ, ಮೈಸೂರು ಪೇಟಧಾರಿಗಳು, ನೇಪಾಳಿ ಟೋಪಿಧಾರರು, ಕವ್ವಾಲಿ ಹಾಡುವವರು, ನಮ್ಮದೇ ಸಂಸ್ಕೃತಿಯ ಪ್ರತೀಕದಂತ ವಸ್ತ್ರ ಧರಿಸಿದಂತ ಪುಟ್ಟ ಹುಡುಗಿಯೊಬ್ಬಳು ಅವರ ಜೊತೆ ಓಡುತ್ತಿದ್ದಾಳೆ. ನಡುವೆ ಮುಖಕ್ಕೆ ಬಣ್ಣ ಬಳಿದುಕೊಂಡ ಹುಡುಗರು, ನಮ್ಮ ಸಂಸ್ಕೃತಿಯ ಬಿಂಬಿಸುವ ವಸ್ತ್ರಗಳನ್ನು ತೊಟ್ಟಿದ್ದ ಕಿರುತೆರೆ ಕಲಾವಿದರು......ಹೀಗೆ ವಿವರಿಸಿದರೆ ನಿಮಗೆಲ್ಲಾ ಬೋರ್ ಆಗಿಬಿಡಬಹುದು ಅಂತ ನಿಲ್ಲಿಸಿದ್ದೇನೆ.


ನಾವೆಲ್ಲಾ ಭಾರತೀಯ ಸಂಷ್ಕೃತಿಯ ಪ್ರತೀಕಗಳು...


ನಟನೆಗೆ ವಿಶ್ರಾಂತಿ...ಈಗೇನಿದ್ದರೂ ಓಟ..

ಕ್ಲಿಕ್ಕಿಸಿದ್ದು ನೂರಾರಿದ್ದರೂ ಕೆಲವನ್ನು ಆಯ್ಕೆ ಮಾಡಿಕೊಂಡು ಬ್ಲಾಗಿಗೆ ಹಾಕಿದ್ದೇನೆ. ಇದರ ಜೊತೆಗೆ ಆನೇಕ ವೈವಿಧ್ಯತೆಯ ಟೋಪಿಗಳು ಸಿಕ್ಕಿವೆ. ಹಾಗೇ ಓಡುತ್ತಿರುವ ಭೂಪಟಗಳನ್ನು ಕ್ಲಿಕ್ಕಿಸುವಾಗ ಆದ ಅನುಭವಗಳೆಲ್ಲಾ ಮುಂದಿನ ಭಾರಿ.
ನಿಮಗೆ ಇಷ್ಟವಾದರೆ ಮುಂದಿನ ಬಾರಿ ಓಡುವುದಕ್ಕೆ ಬಂದವರು ಓಡುವುದನ್ನು ಬಿಟ್ಟು ಬೇರೆ ಏನೇನು ಮಾಡಿದರು ಬರೆಯುತ್ತೇನೆ...


ಚಿತ್ರ ಲೇಖನ
ಶಿವು.ಕೆ ARPS.

Monday, May 25, 2009

ಆ ಐವತ್ತು ಪೈಸೆಯ ಪೋಸ್ಟ್ ಕಾರ್ಡು

"ತಗೋಳ್ರೀ....ನಿಮಗೊಂದು ಪ್ರೇಮ ಪತ್ರ ಬಂದಿದೆ"

ಕಲ್ಕತ್ತ, ಲಕ್ನೋ, ಮುಂಬೈ, ಇಂದೋರ್, ದೆಹಲಿ, ಇತ್ಯಾದಿ ನಗರಗಳಲ್ಲಿ ರಾಷ್ಟ್ರೀಯ-ಅಂತರಾಷ್ಟ್ರೀಯ ಫೋಟೋಗ್ರಫಿ ಸ್ಪರ್ಧೆಗಳು ಹೆಚ್ಚಾಗಿ ನಡೆಯುವುದರಿಂದ[ಕೆಲವೊಮ್ಮೆ ವಿದೇಶಗಳಿಂದಲೂ] ಅವುಗಳ ಪ್ರವೇಶ ಪತ್ರ, ನಂತರ ಪಲಿತಾಂಶದ ವಿವರಣೆಯ ಪತ್ರ, ಕ್ಯಾಟಲಾಗ್, ಇತ್ಯಾದಿಗಳು ಆಗಾಗ ನನಗೆ ಬರುತ್ತಿರುವುದರಿಂದ ನನ್ನಾಕೆ ನನ್ನನ್ನು ಪರೋಕ್ಷವಾಗಿ ರೇಗಿಸುವುದು ಹೀಗೆ.

ನಾನು ಮದ್ಯಾಹ್ನ ಮನೆಗೆ ಬರುತ್ತಲೇ ಕೈಗಿತ್ತಳು. ಅದನ್ನು ನೋಡುತ್ತಲೇ ನನಗೆ ಆಶ್ಚರ್ಯವಾಗಿತ್ತು. ಅದು ಐವತ್ತು ಪೈಸೆಯ ಪೋಸ್ಟ್ ಕಾರ್ಡು. ನಾನು ಚಿಕ್ಕವನಿದ್ದಾಗ ನಮ್ಮಪ್ಪನಿಗೆ ತಂದುಕೊಡುತ್ತಿದ್ದಾಗ ಅದರ ಬೆಲೆ ಹತ್ತು ಪೈಸೆ. ನಂತರ ಹದಿನೈದು ಪೈಸೆ. ಇಪ್ಪತ್ತು, ಇಪ್ಪತೈದು, ಈಗ ಐವತ್ತು ಪೈಸೆಯಾಗಿದೆ.

ಈಗಿನ ಈ-ಮೇಲ್, ಎಸ್ ಎಮ್ ಎಸ್ ಯುಗದಲ್ಲೂ ಈ ಪತ್ರವನ್ನು ಕಳಿಸಿರುವವರು ಯಾರೆಂದು ನನಗೂ ಕುತೂಹಲ ಉಂಟಾಯಿತು. ಬೆಳಿಗ್ಗೆಯಿಂದ ಮದ್ಯಾಹ್ನದವರೆಗೆ ಅನೇಕ ಆಫೀಸುಗಳನ್ನು ಸುತ್ತಾಡಿ ಸುಸ್ತಾಗಿ ಮನೆಗೆ ಬಂದಾಗ ಆಗ ತಾನೆ ಬಂದ ಫೋಟೋಗ್ರಫಿಯ ಪತ್ರಗಳು ಸಹಜವಾಗಿ ಖುಷಿಯನ್ನುಂಟುಮಾಡುತ್ತವೆ.

ಆದರೆ ಆ ಪತ್ರವನ್ನೋದಿ ಇರಿಸುಮುರಿಸುಂಟಾಯಿತು.

ದಿನಾಂಕ ೧೩-೧-೨೦೦೯ ಮತ್ತು ೨೪-೧-೨೦೦೯ರಂದು ಟೈಮ್ಸ್ ಆಫ್ ಇಂಡಿಯ ದಿನಪತ್ರಿಕೆ ಬಂದಿಲ್ಲವೆಂದು ಅದರ ಬದಲಿಗೆ ಇಂಡಿಯನ್ ಎಕ್ಸ್‌ಪ್ರೆಸ್ ಕಳಿಸಿಬಿಟ್ಟಿದ್ದೀರೆಂದು ಬರೆದಿರುವ ಪತ್ರ. ಮತ್ತೆ ನಾನು ಹಣ ವಸೂಲಿ ಮಾಡುವಾಗ ಅವೆರಡು ದಿನಗಳ ದಿನಪತ್ರಿಕೆ ಹಣವನ್ನು ಮುರಿದುಕೊಂಡು ಕೊಡುತ್ತೇವೆಂದು ನನಗೆ ಪರೋಕ್ಷವಾಗಿ ಹೇಳುವ ಪ್ರಯತ್ನ.




ಅರೆರೆ.... ಎರಡು ದಿನ ಟೈಮ್ಸ್ ಆಪ್ ಇಂಡಿಯ ದಿನಪತ್ರಿಕೆಯನ್ನು ನಮ್ಮ ಹುಡುಗ ಹಾಕದಿದ್ದಲ್ಲಿ ಹಣ ವಸೂಲಿಗೆ ಹೋದಾಗ ಬಂದಿರದ ಎರಡು ದಿನದ ಹಣ ಆರು ರೂಪಾಯಿ ಮುರಿದು ಕೊಡಬಹುದಿತ್ತು. ಆ ಪತ್ರಿಕೆ ಬದಲಿಗೆ ಎರಡು ರೂಪಾಯಿ ಬೆಲೆಯ ಇಂಡಿಯನ್ ಎಕ್ಸ್‌ಪ್ರೆಸ್ ಹಾಕಿದ್ದಾನೆ. ಅಂದಮೇಲೆ ವ್ಯತ್ಯಾಸ ಕೇವಲ ಎರಡು ರೂಪಾಯಿ ಮಾತ್ರ. ಅದನ್ನು ತಿಳಿಸಲಿಕ್ಕೆ ಈ ರೀತಿ ಐವತ್ತು ಪೈಸೆಯ ಅಂಚೆಕಾರ್ಡನ್ನು ಉಪಯೋಗಿಸಿರುವ ಆ ಗ್ರಾಹಕ ಯಾರು.?



ಅಗಲ ಮತ್ತು ಮೊಂಡಾದ ಮೂಗು, ಒರಟು ಕೆನ್ನೆ, ಗುಳಿಬಿದ್ದ ಕಣ್ಣುಗಳು, ಸದಾ ಕೋಲುನಾಮವಿಟ್ಟ ಹಗಲವಾದ ಹಣೆ. ಗುಂಡು ಮುಖ. ಅದರ ಮೇಲಕ್ಕೆ ಸಂಪೂರ್ಣವಾಗಿ ಭೂಪಟವಾಗಿರುವ ತಲೆ, ದೇಹದ ರುಂಡಭಾಗ 60-60-70 ಅಳತೆಯ ಸರ್ವಕಾಲ ಸಮೃದ್ಧಿ ಹೊಂದಿದ ಸೈಜು, ಸರಾಸರಿ ೧೦೦ ಕಿಲೋ ತೂಗುವ ಅವನ ಸಂಪೂರ್ಣ ಚಿತ್ರ ಒಂದು ಕ್ಷಣ ನನ್ನ ಮನಃಪಠಲದ ಪರದೆ ಮೇಲೆ ಮೂಡಿಬಂತು

ಓಹೋ...ಆತ ಕಂಜೂಸ್. ಪ್ರತಿತಿಂಗಳು ಹಣ ವಸೂಲಿಗೆ ಹೋದರೆ ಕ್ಯಾಲೆಂಡರ್ ಹಿಡಿದುಕೊಂಡು ಪೈಸಾ-ಪೈಸಾ ಲೆಕ್ಕಾ ಹಾಕುವ ಮಹಾನ್ ಲೆಕ್ಕಿಗ.

ಇರಲಿ ನನಗೆ ಪ್ರತಿಯೊಬ್ಬ ಗ್ರಾಹಕನು ಅನ್ನದಾತನೇ...ಅವನು ಜಿಪುಣನೋ, ಧಾರಾಳಿಯೋ, ವಾಚಾಳಿಯೋ, ದಳ್ಳಾಳಿಯೋ ನನಗೇಕೆ, ಅವನಿಗೆ ಬೇಕಿರುವುದು ದಿನಪತ್ರಿಕೆ ನನಗೆ ಬೇಕಿರುವುದು ಅದರ ಹಣವಷ್ಟೇ.

ಮತ್ತೆ ಈಗಿನ ಕಾಲದಲ್ಲೂ ಜೀವನದ ಪ್ರತಿಯೊಂದು ವಿಚಾರಕ್ಕೂ ಪತ್ರವ್ಯವಹಾರದ ಮುಖಾಂತರವೇ ವ್ಯವಹರಿಸುತ್ತಾ, ತಮ್ಮದೇ ಧ್ಯೇಯೋದ್ದೇಶಗಳನ್ನು ಇಟ್ಟುಕೊಂಡು ನೆಮ್ಮದಿಯಿಂದ ಬಾಳುತ್ತಿರುವ ಅನೇಕರಲ್ಲಿ ಈತನು ಇರಬಹುದು. ಅವನ ಈ ಪತ್ರವೊಂದರಿಂದಲೇ ನಾನು ಪೂರ್ವಗ್ರಹ ಪೀಡಿತನಾಗಿ ಅವನ ಬಗ್ಗೆ ಏಕೆ ತಪ್ಪು ತಿಳಿಯಲಿ.!

ನನಗಿರುವ ಫೋಟೋಗ್ರಫಿ ಹವ್ಯಾಸದಂತೆ ಈತನಿಗೂ ಜೀವನದಲ್ಲಿ ಪತ್ರ ಬರೆಯುವ ಒಳ್ಳೆಯ ಹವ್ಯಾಸವಿರಬಹುದಲ್ಲವೇ. ಪತ್ರ ಐವತ್ತು ಪೈಸೆಯದೋ ಅಥವ ೧೦೦ ರೂಪಾಯಿಯದೋ ಮುಖ್ಯವಲ್ಲ...ಅದರೊಳಗಿನ ಭಾವನೆ ಮುಖ್ಯ. ಅದನ್ನು ಗೌರವಿಸಲೇಬೇಕು. ಮುಂದಿನ ಬಾರಿ ಹಣವಸೂಲಿಗೆ ಅವನ ಬಳಿಗೆ ಹೋದಾಗ ಈ ವಿಚಾರವಾಗಿ ಅವನ ಅಭಿಪ್ರಾಯವನ್ನು ಕೇಳಬೇಕು ಅಂದುಕೊಂಡು ಸುಮ್ಮನಾದೆ. ಆ ದಿನವೂ ಬಂತು.

"ಸರ್ ಪೇಪರ್ ಬಿಲ್ಲು,"

"ಆಹಾಂ! ಬನ್ನಿ.....ಎಷ್ಟಾಯ್ತು.. ಅದರಲ್ಲಿ ಎರಡು ದಿನ ಬಂದಿಲ್ಲ ಅಂತ ಪತ್ರ ನಿಮಗೆ ಪತ್ರ ಬರೆದಿದ್ದೆ...ಬಂತಾ ?"

"ಬಂತು ಸರ್"

ನಂತರ ಹುಡುಗನ ಬಗ್ಗೆ ದೂರು ಇತ್ಯಾದಿಯಾಗಿ ಇಬ್ಬರ ನಡುವೆ

"ಈ ಸಂಭಾಷಣೆ...ನಮ್ಮ ಈ ಪ್ರೇಮ ಸಂಭಾಷಣೆ"

ನಡೆಯಿತು. ಕೊನೆಯಲ್ಲಿ

"ನಾನು ಇಂಡಿಯನ್ ಎಕ್ಷಪ್ರೆಸ್ ಕೇಳಿರಲಿಲ್ಲ, ಆದ್ರೂ ನಿಮ್ಮ ಹುಡುಗ ಟೈಮ್ಸ್ ಬದಲಿಗೆ ಹಾಕಿಬಿಟ್ಟಿದ್ದಾನೆ."

ಅಂತ ಹೇಳಿ ಆರು ರುಪಾಯಿ ಮುರಿದುಕೊಂಡೇ ಉಳಿದ ಹಣ ಕೊಟ್ಟ.

"ಹೋಗ್ಲಿಬಿಡಿ ಸರ್, ಮತ್ತೆ ನೀವು ನನಗೆ ಪತ್ರ ಬರೆದಿದ್ದೀರಲ್ಲಾ...ಈ ಹವ್ಯಾಸ ನಿಮಗೆ ತುಂಬಾ ದಿನದಿಂದ ಇದೇಯಾ ? ಇದ್ದರೇ ಎಲ್ಲಾದಕ್ಕೂ ಹೀಗೆ ಪತ್ರ ಬರೆಯುತ್ತೀರಾ" ....

ನಾನು ಕುತೂಹಲದಿಂದ ಕೇಳಿದೆ.

"ಅಯ್ಯೋ ಹೋಗ್ರಿ....ಅದೇನು ಹವ್ಯಾಸ-ಅಭ್ಯಾಸ ಎಂಥದ್ದು ಅಲ್ಲ. ನೀವು ಹಾಕದಿರುವ ಪೇಪರಿಗೆ ನಾವು ಏಕೆ ದುಡ್ಡು ಕೊಡಬೇಕು ? ಮತ್ತೆ ಪೇಪರ್ ಬಂದಿಲ್ಲವೆಂದು ನಿಮಗೆ ತಿಳಿಸದಿದ್ದರೆ....ನೀವು ಬಂದು ಸುಮ್ಮನೆ ವಾದ ಮಾಡುತ್ತೀರಿ. ಅದಕ್ಕಾಗಿ ಫೋನ್ ಮಾಡಿ ಎರಡು ನಿಮಿಷ ಮಾತಾಡಿದರೆ ಎರಡು ರೂಪಾಯಿ ಖರ್ಚಾಗುತ್ತದೆ. ದುಡ್ಡು ಸುಮ್ಮನೆ ಬರೊಲ್ಲ. ಪೈಸಾ-ಪೈಸಾ ಉಳಿಸಿದರೆ ತಾನೆ ಈಗಿನ ಕಾಲದಲ್ಲಿ ಬದುಕಲಿಕ್ಕೆ ಆಗುವುದು, ಅದಕ್ಕೆ ಈ ಐವತ್ತು ಪೈಸೆ ಕಾರ್ಡಿನಲ್ಲಿ ಬರೆದು ಕಳಿಸಿರುವುದು."

ಆವನ ಮಾತಿಗೆ ನಾನು ಮರುಮಾತಾಡದೇ ಥ್ಯಾಂಕ್ಸ್ ಹೇಳಿದೆ.

"ಹೋಗಿಬನ್ನಿ" ಅಂದ. ಬಾಗಿಲು ದಡ್ ಅಂತ ಹಾಕಿದ.

"ಆಹಾ..ಬೆಂಗಳೂರಿನ ಹೃದಯಭಾಗವಾದ ಗಾಂಧಿನಗರದ ಒಂದು ದುಬಾರಿ ಅಪಾರ್ಟ್‌ಮೆಂಟಿನಲ್ಲಿ ನನಗೆ ಎಂಥ ಗ್ರಾಹಕ, ಈತನ ಬಗ್ಗೆ ಏನೇನೋ ಭಾವನೆಗಳನ್ನು ಇಟ್ಟುಕೊಂಡಿದ್ದೆನಲ್ಲಾ." ಯೋಚಿಸುತ್ತಾ ನಿದಾನವಾಗಿ ಮೆಟ್ಟಿಲಿಳಿಯುತ್ತಿದ್ದೆ.

[ಪತ್ರದಲ್ಲಿರುವ ಗ್ರಾಹಕನ ಹೆಸರು ಮತ್ತು ವಿಳಾಸವನ್ನು ಬದಲಾಯಿಸಿದ್ದೇನೆ.]

ಚಿತ್ರ ಮತ್ತು ಲೇಖನ
ಶಿವು.ಕೆ

Monday, May 18, 2009

ಮಾಡೆಲ್ ಒಂದೇ. ಅದ್ರೆ ತಂದೆ ತಾಯಿ ಬೇರೆ."

" ಮೊಬೈಲಿನ ಮೇಲೆ ಅದರ ಮಾಡೆಲ್ ನಂಬರ್ ಯಾಕಿರೊಲ್ಲ.."

" ನಿನ್ ತಲೆ ನಿನ್ನ್ ಮುಖದ ಮೇಲೆ ನೀನು ಸುಬ್ಬ ಅಂತ ಹೆಸರಿದೆಯ...? ಇಲ್ಲವಲ್ಲ...ಹಾಗೇ ಅದರ ಮೇಲು ಇರಲ್ಲ..."

" ಆದ್ರೆ ಇದೇ ಮಾಡಲ್ ನಂಬರಿನ ಮೊಬೈಲ್ ಇವರತ್ರ ಇದೆ. ಹಾಗೇ ನಿಮ್ಮ ಅಪ್ಪನತ್ರನೂ ಇದೆ. ಇವೆರಡರು ನೋಡಲಿಕ್ಕೆ ಒಂದೇ ತರಹ ಇದೆ. ಅದ್ರೂ ಅದು ನಿಮ್ಮಪ್ಪನದು.....ಇದು ಇವರದು ಇದು ಹೇಗೆ ಗೊತ್ತಾಗುತ್ತೆ...."

"ಇವನು ಸಿಕ್ಕಾಪಟ್ಟೆ ತರಲೆ....ಆದ್ರೂ ಇವನು ಫೂರ್ಣ ಪ್ರಜ್ಞ. ನಮ್ಮ ಕ್ಲಾಸಲ್ಲಿ ಇವನ ತರಾನೇ ಇದ್ದಾನೆ. ನೋಡಲಿಕ್ಕೆ ಇವನೇ....ಅದ್ರೆ ಅವನು ಫೂರ್ಣಪ್ರಜ್ಞನಲ್ಲ. ಅವನು ಅಪ್ರಮೇಯ.....ಈಗ ಗೊತ್ತಾಯ್ತಲ್ಲ..ಮಾಡೆಲ್ ಒಂದೇ. ಅದ್ರೆ ತಂದೆ ತಾಯಿ ಬೇರೆ."

------------- ------------------------

" ಶೆಟಲ್ ಕಾಕ್ ಹೋದ್ರೆ ಹೊಸದು ತರಬಹುದು ಜೀವ ಹೋದ್ರೆ ತರಲಿಕ್ಕೆ ಆಗುತ್ತಾ..." ಬ್ಯಾಟ್‌ಮಿಂಟನ್ ಆಡುತ್ತಿದ್ದಾಗ ರಸ್ತೆಯಲ್ಲಿ ವೇಗವಾಗಿ ಬಂದ ಟೂವೀಲರ್ ನೋಡಿ ಎರಡನೇ ತರಗತಿಯ ಆಲೋಕ್ ಕೇಳಿದ...

" ಆಯ್ಯೋ....ಹೋಗೋ....ನಾನಿಲ್ಲ ಅಂದ್ರೆ ನನಗೆ ಇನ್ನೋಬ್ಬ ತಮ್ಮ ಇದ್ದಾನೆ.." ಗಣೇಶ ಪ್ರತಿಕ್ರಿಯಿಸಿದ್ದ....

ಇವರಿಬ್ಬರ ಮಾತನ್ನು ದೂರದಿಂದ ಗಮನಿಸಿದ್ದ ನಾನು ಆ ಕ್ಷಣ ದಂಗಾಗಿದ್ದೆ...

ಹಾಗೆ ಹೇಳಿದ ಗಣೇಶನ ಜೀವನದ ಮುಖ್ಯ ಗುರಿ ರೇಡಿಯೋ ಜಾಕಿ ಆಗುವುದಂತೆ.

-------------- ----------------------

" ಅಂಕಲ್ ನೀವು ನಿಮ್ಮ ಗಾಡಿ ಅಲ್ಲಿ ನಿಲ್ಲಿಸುವಂತಿಲ್ಲ.."

"ಯಾಕೋ ಪ್ರೇರಿತ್"

" ಅಂಕಲ್ ನಾನು ಸೈಕಲ್ ನಮ್ಮ ಓಣಿಯಲ್ಲಿ ಕಲಿತಿದ್ದೀನಲ್ವ...? ನಮ್ಮ ಮನೆಯಿಂದ ಓಣಿಯ ಗೇಟಿನವರೆಗೆ ಹೋಗಿ ಅಲ್ಲಿ ವಾಪಸ್ ಯೂ ಟರ್ನ್ ತೆಗೆದುಕೊಳ್ಳಲು ನಿಮ್ಮ ಗಾಡಿ ನನಗೆ ಆಡ್ಡವಾಗುತ್ತೆ. ಅದಕ್ಕೆ ಇಲ್ಲಿ ನಿಲ್ಲಿಸಿ" ಅವನು ವಯಸ್ಸು ನಾಲ್ಕು. ಆದ್ರೆ ಅವನಿಂದ ಬಂದ ಆರ್ಡರನ್ನು ನಾನು ಪ್ರತೀದಿನ ಪಾಲಿಸುತ್ತಿದ್ದೇನೆ.

---------- ---------------------- -------------

"ಯಾಕೇ ಇಷ್ಟು ತಡವಾಗಿ ಬಂದೆ ?" ಮೈಸೂರಿಂದ ಬೇಸಿಗೆ ರಜೆಗಾಗಿ ಬಂದಿದ್ದ ಅಮಿತ್ ಕೇಳಿದ್ದ. ಅವನು ೯ನೇ ತರಗತಿ.

"ಬಸ್ ವೆರಿ ಸ್ಲೋ. ಅದಕ್ಕೆ ಲೇಟಾಗಿಬಿಡ್ತು ಕಣೋ..." ಆಗ ತಾನೆ ಬಂದ ತೇಜಸ್ವಿನಿ ಉತ್ತರ. ಅವಳು ಮೊದಲ ಪಿ.ಯು.ಸಿ.

"ಮತ್ತೆ ನಿಮ್ಮ ಕಡೇ ಹೇಗೇ ಸಮಾಚಾರ ?"

"ನೋ ಪ್ರಾಬ್ಲಂ ಕಣೋ...ಚಲ್ತಾ ಹೈ...ಅದ್ಸರಿ ಅಲ್ಲಿ ವೆದರ್ ಹೇಗೇ ಕೂಲ್ ಆಗಿದೆಯಾ...?"

"ಪರ್ವಾಗಿಲ್ಲ.......ಆದ್ರೆ ನಿಮ್ಮ ಕಡೆಯಷ್ಟು ತಂಪಿಲ್ಲ ನೋಡು.....?"

"ಹೌದು ನಿಮ್ಮ ರೆಸಲ್ಟ್ ಯಾವಾಗ ಬರುತ್ತೆ?"

"ನಮ್ಮದು ಹದಿನೈದನೇ ತಾರೀಖು. ನಿಮ್ಮ ಪರೀಕ್ಷೆ ಪಲಿತಾಂಶ ಯಾವಾಗ ?"

"ನಮ್ಮದು ದಿಸ್ ಮಂಥ್ ಟೆಂತ್ ಗೆ ಬರುತ್ತೆ."

ಅವರಿಬ್ಬರ ನಡುವೆ ಮಾತು ಸಾಗಿತ್ತು. ಅಷ್ಟರಲ್ಲಿ ಅಲ್ಲಿಗೆ ಪ್ರಶಾಂತ್ ಬಂದ. ಅವನು ೭ನೇ ತರಗತಿ.

" ಹೇ ಪೌಡ್ರು......ಎಲ್ಲಿ ಹೋಗಿದ್ಯೋ..." ಅವನನ್ನು ನೋಡಿ ತೇಜಸ್ವಿನಿ ಕೇಳಿದಳು.

"ಮನೆಗೆ ಹೋಗಿದ್ದೆ ಕಣೆ ಸೆಂಟು....". ಅವಳ ಮಾತಿಗೆ ಪ್ರಶಾಂತನ ಉತ್ತರ.

"ಅರೆರೆ ಇದೇನೇ, ನೀನು ಇವನನ್ನು ಪೌಡ್ರು ಅಂತೀಯಾ..?" ಅಮಿತ್ ಕೇಳಿದ ಆಶ್ಚರ್ಯದಿಂದ.

"ಹೂ ಕಣೋ ಇವನು ಹುಡುಗ ಅಲ್ವಾ ಅದಕ್ಕೆ ಅವನ ಹೆಸರು ಪೌಡ್ರೂ...ಅಂತೀವಿ..".

"ಅಂಗಾದ್ರೆ ಹುಡುಗಿಯರಿಗೆ ಸೆಂಟ್ ಅನ್ನಬೇಕಾ...."

"ಹೌದು ನನಗಿವಳು ಪೌಡ್ರು ಅಂದ್ರೆ ನಾನು ಇವಳನ್ನು ಸೆಂಟು ಅಂತೀನಿ.."...ಪ್ರಶಾಂತ್ ತಟ್ಟನೆ ಹೇಳಿದ್ದ.

ಅಲ್ಲೇ ನಿಂತು ಇವರ ಮಾತು ಕೇಳಿಸಿಕೊಳ್ಳುತ್ತಿದ್ದ ನಾನು ಅವರ ಬಳಿ ಹೋದೆ.

ಅಮಿತ್ ಬಂದು ಒಂದು ವಾರವಾಗಿತ್ತು. ನನಗಾಗಲೇ ಗೆಳೆಯನಾಗಿಬಿಟ್ಟಿದ್ದ. ಇವರ ಮಾತುಗಳನ್ನೆಲ್ಲಾ ಕೇಳಿ ಅವನಿಗೆ ಸಿಟ್ಟು ಬಂದಿರಬೇಕು. ನಾನು ಬರುವುದನ್ನೇ ಕಾಯುತ್ತಿದ್ದವನು,

"ನೋಡಿ ಅಂಕಲ್ ಇವರಿಬ್ಬರ ಮಾತುಗಳು...! ಥೂ....ಇವರಿಬ್ಬರದೂ ಅದೇನು ಭಾಷೇನೋ.....ಇವಳು ಪೌಡ್ರು ಅಂತಾಳೆ..ಅವನು ಸೆಂಟು ಅಂತಾನೆ. ಮತ್ತೆ ಇವಳ ಮಾತಿನಲ್ಲಿ ಅದೇಷ್ಟು ಇಂಗ್ಲೀಷ್ ಪದಗಳು ಇವೆ ನೋಡಿ....ನಿಮ್ಮ ಬೆಂಗಳೂರಿನವರೇ ಹೀಗೆ! ಎಲ್ಲಾ ಭಾಷೆಯನ್ನು ಕನ್ನಡಕ್ಕೆ ಮಿಕ್ಸ್ ಮಾಡಿ ಮಾತಾಡೋದು....ಇಲ್ಲಿ ನೋಡಿ..ನಮ್ಮ ಮೈಸೂರಿನವರದೂ ಅಚ್ಚ ಕನ್ನಡ, ಮಂಗಳೂರಿನವರದು ಸ್ವಚ್ಚ ಕನ್ನಡ, ಅದ್ರೆ ನಿಮ್ಮ ಬೆಂಗಳೂರಿನವರದು ಕಚ್ಚಾ ಅಥವ ಮಿಕ್ಸ್ ಕನ್ನಡ ಕಣ್ರೀ...."

ಅಮಿತ್ ಮಾತನ್ನು ನಾನು ಒಪ್ಪಿಲೇ ಬೇಕಾಗಿತ್ತು...

-------------- -------------- --------------

ನಮ್ಮ ಓಣೀಯ ಮಕ್ಕಳಿಗೆ ನನ್ನ ಸ್ಕೂಟಿಯ ಮೇಲೆ ಕೂತುಕೊಳ್ಳಬೇಡಿ ಅಂದಿದ್ದೆ. ಅದರ ಸೆಂಟರ್ ಸ್ಟ್ಯಾಂಡ್ ಸರಿಯಾಗಿಲ್ಲದ ಕಾರಣ ಕೂತರೆ ಬಿದ್ದುಹೋಗುತ್ತದೆಂಬ ಭಯ ನನಗೆ. ಆದರೂ ನಾನಿಲ್ಲದಾಗ ಅವರು ಕೂತುಬಿಡುತ್ತಿದ್ದರು....ಅದನ್ನು ಬದಲಾಯಿಸಲು ಪ್ರಯತ್ನಿಸಿದರೂ ನನ್ನ ಗಾಡಿಯ ಮಾಡೆಲ್ ಈಗ ಬರುತ್ತಿಲ್ಲವಾದ್ದರಿಂದ ಅದರ ಸ್ಪೇರ್ ಪಾರ್ಟುಗಳು ಸಿಗುತ್ತಿರಲಿಲ್ಲವಾದ್ದರಿಂದ ನಾನು ಅದನ್ನೇ ಮೇನೇಜ್ ಮಾಡಬೇಕಿತ್ತು. ಇನ್ನೂ ಸೈಡ್ ಸ್ಟ್ಯಾಂಡ್ ಮೊದಲೇ ಹಾಳಾಗಿತ್ತು...ಅದರ ಕತೆಯೂ ಹೀಗೆ ಆಗಿತ್ತು.

ನಮ್ಮ ಹುಡುಗರಿಗೆ ಇದೆಲ್ಲಾ ಕತೆ ವಿವರಿಸಿದಾಗ ಅಲ್ಲೇ ಇದ್ದ ಅಮಿತ್ "ಬನ್ನಿ ಅಂಕಲ್ ನಾನು ಕೊಡಿಸುತ್ತೀನಿ" ಅಂದ.

ನನಗೆ ಸಿಗದಿರುವುದು ಮೈಸೂರಿನವನಾದ ಇವನಿಗೆ ಹೇಗೆ ಸಾಧ್ಯ ಅಂದುಕೊಂಡರೂ ಕುತೂಹಲಕ್ಕಾಗಿ ಅವನ ಜೊತೆ ಹೊರಟೆ. ಅಲ್ಲಿಗೆ ಹೋಗುವ ಮೊದಲು ನನ್ನ ಗಾಡಿಯ ಮಾಡೆಲ್ ತಯಾರಾದ ವರ್ಷ ಎಲ್ಲವನ್ನು ನನ್ನ ಬಳಿ ಕೇಳಿ ತಿಳಿದುಕೊಂಡಿದ್ದ. ಅಧಿಕೃತ ಸ್ಪೇರ್ ಪಾರ್ಟ್ ಷೋ ರೂಂಗೆ ಹೋದೆವು.

"ಸರ್ ಎರಡು ಸಾವಿರದ ಮೂರರಲ್ಲಿ ತಯಾರಾದ ಸ್ಕೂಟಿಯ ಸೆಂಟರ್ ಸ್ಟ್ಯಾಂಡ್ ಕೊಡಿ.!"

"ಅದು ಇಲ್ಲಪ್ಪ.."

" ಯಾಕಿಲ್ಲ..."

"ಆ ಮಾಡೆಲ್ ಬರುತ್ತಿಲ್ಲವಾದ್ದರಿಂದ ಅದರ ಸ್ಪೇರ್ಸ್ ಕೂಡ ಬರುತ್ತಿಲ್ಲ..."

"ಹಾಗಾದರೆ ಈ ಸ್ಕೂಟಿಯನ್ನೇನು ಮಾಡಬೇಕು ?"

"ಬೇಕಾದ್ರೆ ನೀವು ಬೇರೆ ಲೋಕಲ್ ಆಟೋ ಸ್ಪೇರ್ಸ್ ಅಂಗಡಿಯಲ್ಲಿ ಪ್ರಯತ್ನಿಸಬಹುದು.!"

"ನಿಮ್ಮ ಕಂಪನಿಯ ಗಾಡಿ ನೀವು ಮಾರಿದ ಮೇಲೆ ಅದು ರಸ್ತೆ ಮೇಲೆ ಓಡಾಡುವವರೆಗೂ ಅದರ ಸ್ಪೇರ್ಸ್ ತಯಾರಿಸುತ್ತಿರಬೇಕು ಮತ್ತು ಮಾರ್ರಬೇಕು ಅಲ್ವಾ ಸರ್ ?"

"ಹೌದಪ್ಪ ನಿನ್ನ ಮಾತು ಒಪ್ಪುತ್ತೀನಿ..ಅದ್ರೆ ಕಂಪನಿಯವರಿಗೆ ಮೇಲಾಧಿಕಾರಿಗಳಿಗೆ ಇದು ಗೊತ್ತಾಗಲ್ವಲ್ಲ..."

"ಅವರಿಗೆ ಗೊತ್ತಾಗಲಿಲ್ಲವೆಂದ ಮೇಲೆ ಅಂಗಡಿ ಯಾಕೆ ಇಟ್ಟುಕೊಂಡಿದ್ದೀರಿ...ಬಾಗಿಲು ಮುಚ್ಚಿಬಿಟ್ಟು ಮನೆಗೆ ಹೋಗಿ ಮಲಕ್ಕೊಳ್ಳಿ. !"

ಅಮಿತ್‌ನ ಪಟ್ ಪಟ್ ಪಟಾಕಿಯಂತ ಮಾತಿಗೆ ಅಂಗಡಿಯವನು ಚೆನ್ನಾಗಿ ಬೈಯ್ಯಬಹುದು ಅಂದುಕೊಂಡಿದ್ದೆ. ಅದರೆ ಅವನು ಈ ಹುಡುಗನ ಪಟಾಕಿಯಂತ ಮಾತಿಗೆ ಮಂಕಾಗಿದ್ದ. ಅಮಿತ್ ಮಾತ್ರವಲ್ಲ ನಮ್ಮ ಓಣಿಯ ಎಲ್ಲಾ ಮಕ್ಕಳು ಹೀಗೇನೇ. ಪಟ್ ಪಟ್ ಪಟಾಕಿಯ ಹಾಗೆ. ಯಾವಾಗಲು ಹೀಗೆ ಸಿಡಿಯುತ್ತಿರುತ್ತಾರೆ.[ನಮ್ಮ ಓಣಿಯ ಮಕ್ಕಳು ಮಾತ್ರವಲ್ಲ ನಿಮ್ಮ ಓಣಿಯ ಮಕ್ಕಳು ಹೀಗೇನೇ. ನೀವು ಗಮನಿಸಬೇಕಷ್ಟೆ.]

ಹೊಸಮನೆಗೆ ಬಂದು ಮೂರು ತಿಂಗಳಾಗಿತ್ತು. ಕೆಲಸದ ಒತ್ತಡದಿಂದ ಆಯಾಸ ಪರಿಹರಿಸಿಕೊಳ್ಳಲು ಸಂಜೆ ಒಂದು ಗಂಟೆ ಈ ಮಕ್ಕಳ ಜೊತೆ ಬ್ಯಾಟ್‌ಮಿಂಟನ್, ಕ್ರಿಕೆಟ್, ಮಾತುಕತೆಗಳು ಅಂತ ಕಳೆಯುತ್ತಿದ್ದೇನೆ. ಈಗ ಬೇಸಿಗೆ ರಜೆ. ಅದರ ಪರಿಣಾಮವೇ ಈ ಲೇಖನ.. ಬರೆದಷ್ಟು ದೊಡ್ಡದಾಗುತ್ತಾ ಹೋದ ಈ ಲೇಖನ ನಿಮಗೆಲ್ಲಾ ಓದಲು ಬೋರಾಗಬಾರದೆಂದು ಸಾಕಷ್ಟು ಟ್ರಿಂ ಮಾಡಿದ್ದೇನೆ. ಓದಿ ಖುಷಿಯಾದರೆ ನನಗೂ ಖುಷಿ...

ಲೇಖನ

ಶಿವು.ಕೆ ARPS.

Monday, May 11, 2009

ಕೂತ ಜಾಗದಲ್ಲಿ ಕೂರುತ್ತಿಲ್ಲ...ನಿಂತ ಜಾಗದಲ್ಲಿ ನಿಲ್ಲುತ್ತಿಲ್ಲ.... ಆ ಭೂಪಟ.....!!

ಮೂಂಜಾನೆ ಏಳು ಗಂಟೆಗೆ ಶುರುವಾದ ನಾಂದಿ ಪೂಜೆಯ ಫೋಟೋಗಳನ್ನು ಮದುವೆಮನೆಯಲ್ಲಿ ಕ್ಲಿಕ್ಕಿಸುತ್ತಿದ್ದೆ. ಅನೇಕ ಅತಿಥಿಗಳಂತೆ ಆ ಬಾಲ್ಡಿ ತಲೆಯು ಬಂದಿತ್ತು. ಬಾಲ್ಡಿ ತಲೆ ಕಂಡಾಗ ನನ್ನ ಕ್ಯಾಮೆರಾ ಅತ್ತ ತಿರುಗುವುದು ಖಚಿತ.

ಆ ಬಾಲ್ಡಿ ತಲೆ ವಿಭಿನ್ನವಾಗಿತ್ತು. ಥೇಟ್ ಥೋತಾಪುರಿ ಮಾವಿನಕಾಯಿ ಆಗಿತ್ತು. ಖುಷಿಯಿಂದ ಕ್ಲಿಕ್ಕಿಸಲೆತ್ನಿಸಿದೆ. ಆಗಲಿಲ್ಲ...ಆ ಬಾಲ್ಡಿತಲೆಯ ವ್ಯಕ್ತಿ ಹತ್ತು ನಿಮಿಷ ಕುಂತಜಾಗದಲ್ಲಿ ಕೂರುತ್ತಿಲ್ಲ, ನಿಂತ ಜಾಗದಲ್ಲಿ ನಿಲ್ಲುತ್ತಿಲ್ಲ. ಕಾಲಿಗೆ ಚಕ್ರಹಾಕಿಕೊಂಡಂತೆ ಓಡಾಡುತ್ತಿದ್ದಾನೆ.

ಆತ ಕುಂತಾಗ...ಅಥವ ನಿಂತು ಯಾರೊಡನೆಯೋ ಮಾತಾಡುವಾಗ ನನಗೆ ಪೂಜೆ ಇತ್ಯಾದಿ ಫೋಟೋ ತೆಗೆಯುವ ಕೆಲಸವಿರುತ್ತಿತ್ತು. ಹೀಗೆ ಆತನ ಮಾವಿನಕಾಯಿ ಬಾಲ್ಡಿ ಮದ್ಯಾಹ್ನದವರೆಗೆ ತಪ್ಪಿಸಿಕೊಂಡಿತ್ತು.

ಸಂಪೂರ್ಣ ಎಣ್ಣೆಮಯವಾಗಿರುವ ಮದುವೆ ಊಟಗಳು ನಮಗೆ ಆಷ್ಟು ಇಷ್ಟವಾಗೊಲ್ಲ. ನಾಲ್ಕು ದಿನ ಸತತವಾಗಿ ಅದೇ ಊಟ ತಿಂದರೆ[ನಮಗೆ ಅದೇ ಗತಿ] ಖಂಡಿತ ದೇಹ ತೂಕ ಹೆಚ್ಚಾಗಿ ಆರೋಗ್ಯ ಅಲ್ಲೋಲಕಲ್ಲೋಲವಾಗುವುದು ಖಚಿತವಾಗುವುದರಿಂದ ಏನಾದರೂ ನೆಪಹೇಳಿ ಅಲ್ಲಿನ ಊಟದಿಂದ ತಪ್ಪಿಸಿಕೊಳ್ಳುತ್ತೇವೆ.

ಆ ಮದುವೆ ಇದ್ದುದ್ದು ಮೈಸೂರಲ್ಲಿ. ಮದ್ಯಾಹ್ನ ಮೂರು ಗಂಟೆಗೆ ಅವರೇ ವ್ಯವಸ್ಥೆ ಮಾಡಿದ್ದ ಬಸ್ಸಿನಲ್ಲಿ ಹೋಗಬೇಕಿತ್ತು. ನಾನು ಮೊದಲೇ ಬಸ್ಸು ಹತ್ತಿ ಕುಳಿತ್ತಿದ್ದೆ. ಮದುವೆ ಸಂಭ್ರಮ, ಗದ್ದಲ. ಅವುಗಳಿಂದ ತಪ್ಪಿಸಿಕೊಳ್ಳಲು ನಾನು ತೇಜಸ್ವಿಯವರ "ಅಲೆಮಾರಿ ಆಂಡಮಾನ್" ಎತ್ತಿಕೊಂಡಿದ್ದೆ. ಮತ್ತೆ ಕಣ್ಣಿಗೆ ಬಿತ್ತಲ್ಲ ಮಾವಿನಕಾಯಿ... ಆ ತಲೆಯೂ ಮೈಸೂರಿಗೆ ಬರಲು ಸಿದ್ದವಾಗಿತ್ತು. ಸದ್ಯ ನನ್ನ ಜೊತೆಯಲ್ಲೇ ಬರುತ್ತಿದೆಯಲ್ಲ ಮೈಸೂರಿನ ಮದುವೆ ಮಂಟಪದಲ್ಲಿ ಎಲ್ಲಾದರೂ ಕೂತಾಗ ಕ್ಲಿಕ್ಕಿಸಿಬಿಡಬೇಕು ಅಂದುಕೊಂಡು ಅಂಡಮಾನ್‌ನಲ್ಲಿ ಮುಳುಗಿದೆ.

ರಾತ್ರಿ ವರಪೂಜೆ, ಊಟ ಇತ್ಯಾದಿಗಳ ನಡುವೆ ಪ್ರಯತ್ನಿಸಿದೆ. ಆಗಲಿಲ್ಲ. ಮರುದಿನ ಬೆಳಿಗ್ಗೆಯಿಂದ ಕಾಶಿಯಾತ್ರೆ, ಗೌರಿಪೂಜೆ, ಮಹೂರ್ತ, ಹೋಮ, ಸಪ್ತಪದಿ, ಭೂಮದೂಟ, ಲಾಜವಾಮ್, ಹೆಣ್ಣೊಪ್ಪಿಸುವುದು, ಕೊನೆಯಲ್ಲಿ ಮನೆತುಂಬಿಸಿಕೊಳ್ಳುವುದು... ಎಲ್ಲಾ ಮುಗಿಯುವ ಹೊತ್ತಿಗೆ ಸಂಜೆ ನಾಲ್ಕು ಗಂಟೆ. ಒಂದು ಕಣ್ಣಲ್ಲಿ ಇವೆಲ್ಲಾ ಕ್ಲಿಕ್ಕಿಸುತ್ತಿದ್ದರೂ ಮತ್ತೊಂದು ಕಣ್ಣಲ್ಲಿ ಆ ಮಾವಿನ ಕಾಯಿ ಎಲ್ಲಿದೆ ಅಂತ ಹುಡುಕುತ್ತಲೇ ಇದ್ದೆ.

ಅದೋ ಅಲ್ಲಿ ಕುಳಿತಿದೆ. ಯಾರೊಂದಿಗೋ ಹರಟುತ್ತಿದೆ. ಈಗ ಹೋಗಿಬಿಡಬೇಕು ಅಂದುಕೊಂಡು ಅಲ್ಲಿ ಸಾಗುವಷ್ಟರಲ್ಲಿ ಜಾಗ ಬದಲಾಯಿಸಿಬಿಡುತ್ತಿತ್ತು. ಇಡೀದಿನ ಪ್ರಯತ್ನಿಸಿದರೂ ಆದು ಸಿಗಲಿಲ್ಲ. ಅದರ ಬದಲಾಗಿ ಬೇರೆ ಅನೇಕ ಭೂಪಟಗಳು ಸಿಕ್ಕಿದ್ದವು. ಕಣ್ಣ ಮುಂದೆ ಚಂಪಾಕಲಿ, ಮೈಸೂರ್‌ಪಾಕ್ ಇತ್ಯಾದಿ ಸಿಹಿತಿಂಡಿಗಳಿದ್ದರೂ........ಉಪ್ಪು ಹುಣಸೇಹಣ್ಣು ಮೆಣಸು ಹಾಕಿ ಮಾಡಿದ ಬಾಲ್ಯದ ಆ ತಿಂಡಿಯೇ ಬೇಕು ಅಂದಾಗ ಇವೆಲ್ಲಾ ನಗಣ್ಯವೆನಿಸುವ ಹಾಗೆ ನನಗೂ ಮಾವಿನಕಾಯಿ ಭೂಪಟವೇ ಬೇಕಾಗಿತ್ತು.

ಸಂಜೆ ಅರತಕ್ಷತೆ ಪ್ರಾರಂಭವಾಗುವ ಮುನ್ನ ಏನಾದರೂ ಮಾಡಬೇಕು. ಸತಾಯ ಗತಾಯ ಪ್ರಯತ್ನಿಸಿ ಕ್ಲಿಕ್ಕಿಸಬೇಕು ಅಂದುಕೊಂಡೆ.

ಸಮಯ ಸಂಜೆ ಆರುಗಂಟೆ. ರೇಷ್ಮೆ ಪಂಚೆ ಮತ್ತು ಜುಬ್ಬದಾರಿಯಾಗಿ ಪ್ರೆಶ್ಶಾಗಿ ರೆಡಿಯಾಗಿಬಂದಿದ್ದ ಮಾವಿನಕಾಯಿ ಬಾಲ್ಡಿ ತಲೆ ಬಂದು ಸುಮ್ಮನೆ ಕುಳಿತಿತ್ತು. ಎರಡು ದಿನದಿಂದ ಕುಳಿತಲ್ಲಿ ಕೂರದೆ ನಿಂತಲ್ಲಿ ನಿಲ್ಲದೇ ಎಡಬಿಡದೇ ಓಡಾಡಿಕೊಂಡಿದ್ದರಿಂದ ಸುಸ್ತಾಗಿತ್ತೇನೋ ಸುಮ್ಮನೇ ಕುಳಿತಿತ್ತು. ಇದೇ ಸಮಯವೆಂದು ನಾನು ಮದುವೆ ಮನೆಯ ಬಲಬಾಗಿಲಲ್ಲಿ ಹೋಗಿ ಊಟದ ಹಾಲ್ ದಾಟಿ ಮುಖ್ಯದ್ವಾರದಿಂದ ಕ್ಯಾಮೆರಾ ಸಿದ್ದವಾಗಿಟ್ಟುಕೊಂಡೇ ಆತನ ಹಿಂಬಾಗ ಬಂದು ಅರತಕ್ಷತೆಯ ಆಲಂಕಾರವನ್ನು ಕ್ಲಿಕ್ಕಿಸುವ ನೆಪದಲ್ಲಿ ಆ ಭೂಪಟವನ್ನು ನನಗೆ ಬೇಕಾದ ಹಾಗೆ ಕ್ಲಿಕ್ಕಿಸಿದ್ದೆ.

ಮನೆಯಲ್ಲಿ ನಕಾಶೆ ಪುಸ್ತಕ ತೆಗೆದುನೋಡಿ ಹೋಲಿಸಿದಾಗ ಅದು ಪಕ್ಕಾ ವೆಸ್ಟ್ ಇಂಡೀಸ್ ದ್ವೀಪಸಮಾಹ ರಾಷ್ಟವಾದ " ಗ್ರೆನೆಡ" ಆಗಿತ್ತು. ನನಗಂತೂ "ಗ್ರೆನೇಡ"ಗೆ ಹೋಗಿ ಬಂದಷ್ಟು ಖುಷಿಯಾಗಿತ್ತು.

ಸೂಡಾನ್ ದೇಶದ ಭೂಪಟ !



"ಗ್ರೆನೆಡ" ದೇಶದ ಭೂಪಟ.


ಭಾರ್ಬಡೋಸ್ ದ್ವೀಪ ದೇಶದ ಭೂಪಟ!

ಭೂತಾನ್ ದೇಶದ ಭೂಪಟ!


ಚಿತ್ರ ಮತ್ತು ಲೇಖನ
ಶಿವು.ಕೆ ARPS.

Sunday, May 3, 2009

ಆ ಮೂಗು ಆರ್ಡರ್ ಕೊಟ್ಟು ಮಾಡಿಸಿದಂತಿದೆಯಲ್ವೇ ಸರ್........



ಕಳೆದೊಂದು ತಿಂಗಳಿಂದ ಮದುವೆ ಫೋಟೋ ತೆಗೆಯುವುದರಲ್ಲಿ ನಿರತನಾಗಿದ್ದ ನನಗೆ ಈ ಸಮಯದಲ್ಲಿ ನಮ್ಮದೇ ವೃತ್ತಿಯಲ್ಲಿನ ಜೊತೆಗಾರರ ಮಾತುಕತೆಗಳು ಬಲು ಸೋಜಿಗವೆನಿಸಿ ತುಂಬಾ ಎಂಜಾಯ್ ಮಾಡಿದ್ದೇನೆ...ಅವುಗಳಲ್ಲಿ ಕೆಲವನ್ನು ನಿಮ್ಮೊಂದಿಗೂ ಹಂಚಿಕೊಳ್ಳುವ ಆಸೆ. ಇಲ್ಲಿ ಕೆಲವನ್ನು ಸಂದರ್ಭೋಚಿತವಾಗಿ ನಡೆಯುವ ಸನ್ನಿವೇಶಗಳಲ್ಲಿ ನಮ್ಮ ನಡುವೆ ನಡೆಯುವ ಮಾತಿನ ತುಣುಕುಗಳನ್ನು ತೆರೆದಿಡುತ್ತಿದ್ದೇನೆ...



ಮದುವೆ ಹೆಣ್ಣಿನ ಅಲಂಕಾರ ರೂಮಿನಲ್ಲಿ ಭರ್ಜರಿಯಾಗಿ ನಡೆಯುತ್ತಿತ್ತು.. ಮದುಮಗಳು ಹೇಗೇ ಇರಲಿ ಅವಳನ್ನು ರಾಜಕುಮಾರಿಯಂತೆ ಇನ್ನಷ್ಟು ಚೆಂದವಾಗಿ ಸುಂದರವಾಗಿ, ಸಹಜವಾಗಿ ಫೋಟೋ ಮತ್ತು ವಿಡಿಯೋ ತೆಗೆಯುವುದು ಮದುವೆಯಲ್ಲಿ ನಮಗಿರುವ ದೊಡ್ಡ ಜವಾಬ್ದಾರಿ ಆಷ್ಟೇ ರಿಸ್ಕು ಕೂಡ.




ಮೊದಲಿಗೆ ಅವರು ಹೇಗಿರುತ್ತಾರೆ ನೋಡಬೇಕು. ಇದರಲ್ಲಿ ಎರಡು ವಿಧ. ವಿದ್ಯೆ ಬುದ್ಧಿಯ ಜೊತೆಗೆ ಸಹಜ ಸೌಂದರ್ಯವಿರುವವರು ಮಗುವಿನಂತೆ ಮುಗ್ದತೆಯಿದ್ದರೆ ನಮ್ಮ ಕೆಲಸ ನೀರು ಕುಡಿದಷ್ಟು ಸುಲಭ. ಅವರನ್ನು ಸುಲಭವಾಗಿ ರಾಜಕುಮಾರಿಯನ್ನಾಗಿ ಮಾಡಬಹುದು.


ಅವರ ಜೊತೆ ನಮ್ಮ ಮಾತುಕತೆ ಹೀಗೆ ಸಾಗುತ್ತದೆ.


"ಮೇಡಮ್, ಹೇಗಿದ್ದೀರಿ........ನಿಮಗೆ ಈ ಕಲ್ಯಾಣಮಂಟಪ ಇಷ್ಟವಾಯಿತಾ"...ನಮ್ಮ ಕುತ್ತಿಗೆಯಲ್ಲಿನ ಕ್ಯಾಮೆರಾವನ್ನು ನೋಡಿ ನಮ್ಮ ಮಾತಿಗೆ ಖಂಡಿತ ಒಂದು ಮುಗುಳ್ನಗು ಚಿಮ್ಮಿರುತ್ತದೆ.


"ಹೇಗಿದ್ದರೂ ನಾವೆಲ್ಲಾ ಇರುವುದು ಕೇವಲ ೨೪ ಗಂಟೆ ಇಲ್ಲಿರುತ್ತೇವೆ ಅಲ್ವೇ.....ನೀವೇನು ಇಲ್ಲಿ ಸಂಸಾರ ಮಾಡಬೇಕಿಲ್ಲವಲ್ಲ.....ಹೊಂದಿಕೊಂಡರೇ ಆಯ್ತು.....


ನಮ್ಮ ಮಾತಿಗೆ ಮತ್ತೊಂದು ಸುಂದರ ಮುಗ್ದ ಮುಗಳ್ನಗು ಮದುಮಗಳಿಂದ.


ಇಷ್ಟು ಸಾಕು ನಾವು ಮುಂದುವರಿಯಲು......ಆಕೆಯ ವಿದ್ಯೆಯೆಲ್ಲಾ ಮದುವೆ ಕಾರ್ಡಿನಲ್ಲಿರುತ್ತದೆ. ಬುದ್ಧಿ ಇನ್ನು ಸ್ವಲ್ಪ ಹೊತ್ತಿನಲ್ಲೇ ಗೊತ್ತಾಗುತ್ತದೆ.


" ಆರೆರೆ...ಮೇಡಮ್, ನಿಮಗ್ಯಾರು ಮೇಕಪ್ ಮಾಡಿದ್ದು ?"


ಆಕೆಯ ಮುಖದಲ್ಲಿ ತಕ್ಷಣ ಆಶ್ಚರ್ಯ...ಗೊಂದಲ ಉಂಟಾಗುತ್ತದೆ...


ಪಕ್ಕದಲ್ಲಿರುವವರ ಕಡೆ ಕೈ ತೋರಿಸುತ್ತಾಳೆ. ಅವರ ಕಡೆ ನೋಡಿ "ಅಯ್ಯೋ ನೀವು ಯಾಕೆ ಮೇಕಪ್ ಮಾಡಿದ್ರಿ"........ಆಕೆಗೂ ಕೂಡ ನನ್ನ ಮಾತಿನಿಂದ ಆಶ್ಚರ್ಯ..


ಅವರು ಮಾತಿಗೆ ಅವಕಾಶ ಕೊಡದೇ... " ನೀವು ಇವರಿಗೆ ಮೇಕಪ್ ಮಾಡಬೇಕಾಗಿಲ್ಲ...ಹಾಕಿದ ಪೌಡರನ್ನು ನಿದಾನವಾಗಿ ಒರೆಸುತ್ತಾ ಬಂದರೆ ಸಾಕು. ಅದೇ ನಿಜವಾದ ಮೇಕಪ್. ಮೇಕಪ್ ಅನ್ನೋದು ಇವರಿಗಲ್ಲ....ರಾಜಕುಮಾರಿಗೆ ಯಾರಿದ್ರು ಮೇಕಪ್ ಮಾಡಲಿಕ್ಕೆ ಸಾದ್ಯವೇ....ಆವರಿಗೆ ಅವಮಾನ....."

ಇಷ್ಟು ಹೇಳುತ್ತಿದ್ದಂತೆ ಮೇಕಪ್ ಹಾಕಿದವಳ ಮುಖದಲ್ಲಿ ಇರಿಸು ಮುರಿಸು....ಮತ್ತು ಮದುಮಗಳ ಮುಖದಲ್ಲಿ ಚಂದ್ರನಷ್ಟು ಕಾಂತಿ ಹೊರಹೊಮ್ಮಿರುತ್ತದೆ....ಆ ಕ್ಷಣದಲ್ಲೇ ಒಂದೆರೆಡು ಫೋಟೊ ಅವರಿಗರಿವಿಲ್ಲದಂತೆ ಕ್ಲಿಕ್ಕಿಸಿರುತ್ತೇನೆ.... ಆಕೆಯ ಗೆಳತಿಯರು ಇದ್ದರಂತೂ ನಮ್ಮ ಕೆಲಸ ಮತ್ತಷ್ಟು ಸುಲಭ. ನಮ್ಮ ಮಾತಿಗೆ ಅವರು ಮಾತು ಬೆರೆಸುತ್ತಾರೆ...ಇದರಿಂದ ಮದುಮಗಳ ಮುಖದಲ್ಲಿ ಎಲ್ಲಾ ರೀತಿಯ ಭಾವನೆಗಳು ಹೊರಹೊಮ್ಮುತ್ತಿರುತ್ತವೆ....ಜೊತೆಗೆ ನಮ್ಮ ಕ್ಯಾಮೆರಾ ಕೂಡ ಅವರಿಗೆ ಗೊತ್ತಾಗದಂತೆ ಕ್ಲಿಕ್ ...ಕ್ಲಿಕ್ ಅನ್ನುತ್ತಿರುತ್ತದೆ. ಅಲ್ಲಿಗೆ ಒಂದು ಜವಾಬ್ದಾರಿ ಮುಗಿದಂತೆ.


ಮತ್ತೆ ವಿದ್ಯೆ ಬುದ್ಧಿ ಎರಡು ಕಡಿಮೆಯಿರುವ ಮದುಮಗಳನ್ನು ಕೂಡ ನಾವು ಸುಂದರ ರಾಜಕುಮಾರಿಯನ್ನಾಗಿ ಕ್ಲಿಕ್ಕಿಸಬಹುದು. ಏಕೆಂದರೆ ಅವರಲ್ಲಿ ಖಂಡಿತ ಮುಗ್ದತೆಯಿರುತ್ತದೆ.. ಯಾವುದೇ ಬಣ್ಣವಿದ್ದರೂ ಅದೊಂದು ಗುಣವಿದ್ದರೇ ಸಾಕು...ಅವರಿಗೂ ಬೇರೆ ಬೇರೆ ರೀತಿಯ ಮಾತುಗಳನ್ನಾಡಿ ಮತ್ತಷ್ಟು ಪ್ರಕೃತಿ ಸಹಜ ಮುಗ್ದನಗು ಹೊರಹೊಮ್ಮಿಸಿ ಫೋಟೋದಲ್ಲಿ ಚಂದವಾಗಿಸಬಹುದು....


ವಿದ್ಯೆ ಬುದ್ಧಿ ಎರಡೂ ಇದ್ದು ಮುಗ್ದತೆ ಇಲ್ಲದ ಹೆಣ್ಣಿನ ಫೋಟೋ ಕ್ಲಿಕ್ಕಿಸುವುದು. ನಮಗಂತೂ ಕಷ್ಟಸಾಧ್ಯವೇ ಸರಿ....ನಾವು ಏನೇ ಪ್ರಯತ್ನ ಪಟ್ಟರೂ ಅವರಿಂದ ಅದಕ್ಕೆ ವಿರುದ್ಧವಾದ ಭಾವನೆಗಳೇ ಹೊರಹೊಮ್ಮುತ್ತವೆ.. ಎಷ್ಟು ಪ್ರಯತ್ನಿಸಿದರೂ ನಗುಮುಖವಿರುವುದಿಲ್ಲ. ನಕ್ಕರೂ ಅದರಲ್ಲಿ ತೋರಿಕೆಯ ನಗುವಿರುತ್ತದೆ...ನಡುವೆ ಮೊಬೈಲು ಫೋನ್ ಮಾತುಗಳು ಸತತವಾಗಿ ನಡೆದಿರುತ್ತವೆ. ಅವರಿಂದ ಬೈಸಿಕೊಳ್ಳುವುದು ಉಂಟು....ಇವರು ಎರಡನೇ ವಿಧಕ್ಕೆ ಸೇರುತ್ತಾರೆ.


----------- ---------------- ------------


ಕಳೆದ ವಾರ ಮೈಸೂರಿನಲ್ಲಿ ಹೆಣ್ಣಿನ ಫೋಟೋ ತೆಗೆಯುವಾಗ ನನ್ನ ವಿಡಿಯೋ ಗ್ರಾಫರ್ ಸುಮ್ಮನಿರಲಾರದೇ...

" ಮೇಡಮ್, ನಿಮ್ಮ ಮೂಗು ಆರ್ಡರ್ ಕೊಟ್ಟು ಮಾಡಿಸಿದಂತಿದೆ" ಅಂದುಬಿಟ್ಟ.

ಆಷ್ಟಕ್ಕೆ ಆ ಹುಡುಗಿಯ ಮುಖದಲ್ಲಿ ಗುಲಾಬಿಯಂತ ಕಾಂತಿ. ನಂತರ ಪೂರ್ತಿ ಮದುವೆಯಲ್ಲಾ ಅವಳಿಗೆ ಅದೇ ಕಾಂತಿಯಿತ್ತು....ಕೊನೆಯಲ್ಲಿ ನಾನು ವಾಪಸ್ಸು ಬರುವಾಗ ನವಜೋಡಿಗೆ ಶುಭಾಶಯ ತಿಳಿಸುವುದು ನನ್ನ ಪದ್ದತಿ....ಆಗ ನಾನು ಅದೇ ಮಾತನ್ನು ಹೇಳಿ ಅದನ್ನು ಮುಂದಿನ ನಿಮ್ಮ ಇಪ್ಪತ್ತೈದನೇ ಮದುವೆ ವಾರ್ಷಿಕೋತ್ಸವದವರೆಗೆ ನಿಮ್ಮ ಮೂಗಿನ ಅಂದವನ್ನು ಹೀಗೆ ಕಾಪಾಡಿಕೊಳ್ಳಿ ಅಂದೆ. ಅವಳ ಮುಖವಂತೂ ನೂರು ಕ್ಯಾಂಡಲ್ ಲೈಟಿನಷ್ಟು ಅರಳಿತ್ತು.


----------- ------------- --------------


ಮದುವೆ ಮನೆಯಲ್ಲಿ ನಮ್ಮ ಫೋಟೊ ಮತ್ತು ವಿಡಿಯೋ ಕ್ಯಾಮೆರಾಗಳಿಗೆ ಆಡ್ಡ ಬರುವವರನ್ನು ಕಂಡರೇ ನಮಗೆಲ್ಲಾ ಸಿಟ್ಟು ಬರುತ್ತದೆ...ಸ್ವಲ್ಪ ಸಮಯದ ನಂತರ ಹೊಂದಿಕೊಂಡುಬಿಡುತ್ತೇವೆ...ಅದರಲ್ಲೂ ಪುರೋಹಿತ ಯಾವಾಗಲೂ ಅಡ್ಡ ಬರುವುದರಿಂದ ಅವನ ಮೇಲೆ ನಮಗೇ ಸದಾ ಸಿಟ್ಟಿರುತ್ತದೆ.... ನಾವು ಏನು ಹೇಳಿದರೂ ಅದಕ್ಕೆ ವಿರುದ್ಧವಾಗಿ ಮಾಡುವುದೇ ಅವನಿಗೆ ಇಷ್ಟ. ಅದೇ ನಮಗೇ ಕಷ್ಟ. ಪ್ರತಿ ನಿಮಿಷವೂ ಅವನ ಕೈಕಾಲು ಮತ್ತು ತಲೆ ನಮ್ಮ ಫೋಟೊದೊಳಗೆ ನುಸುಳುತ್ತಿರುತ್ತವೆ. ಅದಕ್ಕೆ ನಮ್ಮ ವಿಡಿಯೋಗ್ರಾಫರುಗಳು ಹೇಳುವುದು ಹೀಗೆ "ಸಾರ್ ಮದುವೆ ಮನೆಯಲ್ಲಿ ಖರ್ಚಿಲ್ಲದೇ ತುಂಬಾ ದಾರಾಳವಾಗಿ ಬೇಸರವಾಗುವಷ್ಟು ಸಿಗೋದು ಇದೊಂದೇ ನೋಡಿ..."


------------- ------------- --------------


ಮದುವೆ ಮನೆಗಳಲ್ಲಿ ಮಂಗಳಾರತಿಗೆ ಮಹಾನ್ ಸ್ಥಾನ. ಒಂದು ಮದುವೆಯಲ್ಲಿ ಕನಿಷ್ಟ ೨೫ ಆರತಿ ಎತ್ತುತ್ತಾರೆ. ನಂತರ ಆರತಿ ಎತ್ತಿಸಿಕೊಂಡವರು ಹಣ ಹಾಕಲೇ ಬೇಕು....ಇದಕ್ಕೆ ನಾವುಗಳು " ಪಾರ್ಕಿಂಗ್ ಅನ್ನುತ್ತೇವೆ.... ನಾವು ನಮ್ಮ ಗಾಡಿಯಲ್ಲಿ ಎಲ್ಲೇ ಸುತ್ತಾಡಿದರು ಅಲ್ಲಿಲ್ಲಿ ಪಾರ್ಕಿಂಗ್ ಮಾಡುತ್ತೇವಲ್ಲ....ಮತ್ತೆ ಅಲ್ಲಲ್ಲಿ ಅದಕ್ಕೆ ಪಾರ್ಕಿಂಗ್ ಶುಲ್ಕವನ್ನು ತೆರಬೇಕಲ್ವ....ಹಾಗೇ ಮದುವೆಮನೆಯಲ್ಲೂ ಸುಮಾರು ಪಾರ್ಕಿಂಗು...ಶುಲ್ಕ ವಸೂಲಿ ನಡೆಯುತ್ತಿರುತ್ತದೆ....


------------- --------------- ------------


ಸಮಯ ರಾತ್ರಿ ಹನ್ನೊಂದು ಗಂಟೆ. ಮೈಸೂರಲ್ಲಿ ರೆಸೆಪ್ಷನ್ ಮುಗಿಯುವ ಹಂತದಲ್ಲಿತ್ತು. ತಕ್ಷಣ ಅಲ್ಲೊಂದು ಆರತಿ ಎತ್ತುವ ಹೆಂಗಳೆಯರ ಗುಂಪು ಬಂತು. ನಾನು ಕೇಳಿದೆ.. " ರೆಸೆಪ್ಷನ್ ಅನ್ನುವುದು ವಿದೇಶಿ ಶೈಲಿ ಇದಕ್ಕೂ ಆರತಿ ಎತ್ತಿ ಮುಗಿಸುತ್ತಾರಲ್ಲ...ಇದನ್ನೂ ಫೋಟೊ ತೆಗೆಯಬೇಕಾ ?" ಅಂದೆ... ತಕ್ಷಣ ವಿಡಿಯೋ ಗ್ರಾಪರ್


"ಶಿವು.... ನಿಮಗೆ ಬೇಕಾದ್ರೆ ಕ್ಲಿಕ್ ಮಾಡಬಹುದು...ಬೇಡದಿದ್ದಲ್ಲಿ ಬಿಡಬಹುದು.....ಇದೊಂದರ ಸರ್ಕಾರದ ಸಿ.ಎಲ್[ಬೇಕಾದರೆ ಹಾಕಿಕೊಳ್ಳುವ ರಜೆ] ರಜೆ ತೆಗೆದುಕೊಂಡಂತೆ." ಅನ್ನಬೇಕೆ...






ಈ ಲೇಖನ ನಿಮಗಿಷ್ಟವಾದಲ್ಲಿ ನಗುವೇ ಗೊತ್ತಿರದ ಮದುವೆಗಂಡು, ಮತ್ತು ಸದಾ ನಗುತ್ತಿರುವ ಮಧುಮಗನ ಬಗ್ಗೆ, ಅವನ ಗೆಳೆಯರು, ಬಂದುಹೋದ ಜನಗಳು....ಪುರೋಹಿತನ ಹಾವಭಾವಗಳು, ಆಡಿಗೆ ಭಟ್ಟರ ಮಾತಿಲ್ಲದ ನವರಸಗಳು..... ಜೊತೆ ಜೊತೆಯಲ್ಲಿ ನಮ್ಮ ಮಾತುಕತೆಗಳ ಬಗ್ಗೆ ಇನ್ನೂ ಅನೇಕ ವಿಚಾರಗಳನ್ನು ಮುಂದಿನ ಸಂಚಿಕೆಗಳಲ್ಲಿ ಬರೆಯುತ್ತೇನೆ...


ಚಿತ್ರ ಮತ್ತು ಲೇಖನ
ಶಿವು.ಕೆ ARPS.