ನನ್ನ ಕೈಯಲ್ಲಿರುವ ಪೆನ್ನು "ಕನ್ನಡಪ್ರಭ ದಿನಪತ್ರಿಕೆಯ ..... ಮೊತ್ತವನ್ನು ಪೇಪರ್ ಬಿಲ್ಲಿನಲ್ಲಿ ಬರೆಯುತ್ತಿದ್ದರೂ ನನ್ನ ಕಣ್ಣು ಮಾತ್ರ...ಆ ಗಿಡದ ಕಡೆಗಿತ್ತು.....ಮತ್ತೇನಿಲ್ಲಾ, ಸುಮ್ಮನೇ ಕುತೂಹಲ......ನಾನು ಯಾವುದೆ ಮನೆಯ ಬಾಗಿಲಿನ ಮುಂದೆ ನಿಂತರೂ ಅವರು ಮನೆಯ ಮುಂದೆ ವರಾಂಡದಲ್ಲಿ, ಕುಂಡಗಳಲ್ಲಿ ಹಾಕಿರುವ ಹೂವಿನ ಗಿಡಗಳ ಕಡೆ ಕಣ್ಣು ವಾಲಿರುತ್ತದೆ...
ಗಿಡಗಳಲ್ಲಿರುವ ಹೂಗಳಿಗಿಂತ ಅದರ ಎಲೆಗಳು ನನ್ನನ್ನೂ ಹೆಚ್ಚಾಗಿ ಸೆಳೆಯುತ್ತವೆ..... ಅದರಲ್ಲೂ ಅಂಗವಿಕಲ ಎಲೆಗಳು!! ಒಂದೆರಡು ಎಲೆಗಳು ಈ ರೀತಿ ಯಾವುದೇ ಗಿಡದಲ್ಲಿದ್ದರೂ ನನ್ನ ಕುತೂಹಲ ಬೆರಗಿನಿಂದ ಹೆಚ್ಚಾಗುತ್ತದೆ.... ಹತ್ತಿರ ಹೋಗಿ ಎಲೆಯ ಕೆಳಬಾಗದಲ್ಲಿ ನೋಡಿದರೆ ಯಾವುದಾದರೂ ಒಂದು ಹುಳು [ಕ್ಯಾಟರ್‌ಪಿಲ್ಲರ್] ಅದೇ ಎಲೆಯನ್ನೇ ತಿನ್ನುತ್ತಿರುತ್ತದೆ.....
ಇಷ್ಟಾದರೇ ಸಾಕು...........ಅಲ್ಲಿಂದ ಶುರುವಾಗುತ್ತದೆ.....ನನ್ನ ಹೊಸ ಆಸೈನ್ ಮೆಂಟು... ಮನೆಗೆ ಬಂದು ನನ್ನ ಬಳಿ ಇರುವ ಚಿಟ್ಟೆ, ಹುಳುಗಳ ಪುಸ್ತಕಗಳಿಂದ ಗಿಡದ ಹೆಸರು, ಹುಳುವಿನ ಬಣ್ಣ ಆಕಾರ ನೋಡಿ ತಿಳಿದ ಮಾಹಿತಿಯಿಂದ ನನ್ನ ಕ್ಯಾಮೆರಾ ಜಾಗ್ರುತವಾಗುತ್ತದೆ.....
ಹೀಗೆ ಗಮನ ಸೆಳೆದ ಆ ಮನೆಯ ಕಾಂಪೌಂಡಿನಲ್ಲೇ ಬೆಳೆದಿದ್ದ ನುಗ್ಗೆ ಎಲೆಯಷ್ಟೆ ಚಿಕ್ಕದಾದ ಹಸಿರೆಲೆಗಳನ್ನು ತನ್ನ ಕಾಂಡಗಳ ತುಂಬಾ ತುಂಬಿಕೊಂಡಿದ್ದ ಆ "ಮುಳ್ಳಿನ ಗಿಡ" ನನ್ನ ಗಮನ ಸೆಳೆದಿತ್ತು..... ಆ ಮನೆಯವರು ನನ್ನ ಕೈಯಿಂದ ರಸೀತಿ ಪಡೆದು ಹಣತರಲು ಒಳ ಹೋದ ಮೇಲೆ ನಾನು ಕೆಳಗೆ ಕುಳಿತು ನಿದಾನವಾಗಿ ನೋಡಿದರೆ ಹಸಿರು ಬಣ್ಣದ ಹತ್ತಾರು ಹುಳುಗಳು ಗಿಡದ ಎಲೆಗಳ ಮೇಲೆ ಕೆಳಗೆ ಬಸವನ ಹುಳುವಿನ ವೇಗದಲ್ಲಿ ಹರಿದಾಡುತ್ತಾ ಅದೇ ಎಲೆಗಳನ್ನೇ ತಿನ್ನುತ್ತಿವೆ....!!ತಕ್ಷಣ ನೋಡಿದರೆ ಎಲೆಯಾವುದು.. ಹುಳು ಯಾವುದು ಗೊತ್ತಾಗದ ಹಾಗೆ ಎಲೆಗಳ ಜೊತೆಗೆ ಕೋಮೊಪ್ಲೇಜ್ ಆಗಿವೆ..... ಇದು ಅವುಗಳ ಪ್ರೆಡೇಟರುಗಳಾದ, ಜೇಡ, ಪ್ರೈಯಿಂಗ್ ಮ್ಯಾಂಟಿಸ್, ದುಂಬಿಗಳು, ಮತ್ತು ಇತರ ಪಕ್ಷಿಗಳಿಂದ ರಕ್ಷಿಸಿಕೊಳ್ಳಲು ದೇವರ ಸಹಜ ಸೃಷ್ಥಿ!!.
ನನ್ನ ಜೇಬಿನಲ್ಲಿ ಸದಾ ಒಂದು ಪೆನ್ನು, ಚೂರು ಕಾಲಿ ಕಾಗದ, ಒಂದಷ್ಟು ರಬ್ಬರ್ ಬ್ಯಾಂಡ್‌ಗಳು, ಮತ್ತು ಸಣ್ಣ ಕಟ್ಟರ್[ಚಾಕು ] ಇರುತ್ತದೆ. ಚಾಕುವಿನಿಂದ ಗಿಡದಲ್ಲಿ ಆ ಹಸಿರು ಹುಳುಗಳಿರುವ ಒಂದು ಕಾಂಡವನ್ನು ನಿದಾನವಾಗಿ ಕತ್ತರಿಸಿ.. .ಹುಳುಗಳಿಗೆ ನೋವಾಗದ ಹಾಗೆ ನನ್ನ ಬ್ಯಾಗಿನಲ್ಲಿ ಸೇರಿಸಿ... ಬರುವ ದಾರಿಯಲ್ಲಿ ಆಟೋದವರು ಬಸುರಿ ಹೆಂಗಸರು ಕೂತಾಗ ಅಲ್ಲಿಲ್ಲಿ ಸಿಗುವ ಹಂಪ್ಸುಗಳಲ್ಲಿ ನಿದಾನ ನಾಜೂಕಾಗಿ ಡ್ರೈವ್ ಮಾಡುವಂತೆ ನಾನು ಕೂಡ ಹಂಪ್ಸುಗಳಲ್ಲಿ ಕುಲುಕದ ಹಾಗೆ ನನ್ನ ಟೂವೀಲರ್‌ನಲ್ಲಿ ಮನೆಗೆ ಅವುಗಳನ್ನು ತಂದಿದ್ದೆ.
ನೋಡಲು ಅವರೇ ಕಾಯಿ ಹುಳುಗಳಿಗಿಂತ ಚಿಕ್ಕದಾಗಿ ಸಣ್ಣದಾಗಿದ್ದ ಅವುಗಳನ್ನು ನನ್ನಾಕೆ ನೋಡಿ
...."ಓಹ್ ಇನ್ನಷ್ಟು ಹುಳಗಳನ್ನು ತಂದಿರಾ... ಮುಗಿಯಿತು ಬಿಡಿ... ಇನ್ನೂ ನಿಮಗೆ ಹೆಂಡತಿ, ಮನೆ ಮಠ, ಸಂಸಾರ, ಎಲ್ಲ ಮರೆತಂತೆ" ಅಂತ ಗೊಣಗುತ್ತಾ ಅಡುಗೆ ಮನೆಗೆ ಹೋದಳು... .[ ಇದೇ ರೀತಿ ಪ್ರಯೋಗವನ್ನು ಹೋಲಿಯಂಡರ್ ಹಾಕ್ ಮಾತ ಪತಂಗದ ಮೇಲೆ ಮಾಡಲು ಹೋಗಿ, ಆ ಹುಳು ಮಾಡಿದ ತರಲೇ ತಾಪತ್ರಯ, ಅದರ ಕಣ್ಣು ಮುಚ್ಚಾಲೆ ಆಟ, ನಂತರ ನಮ್ಮ ಜೊತೆ ಆದು ಚಿತ್ರದುರ್ಗಕ್ಕೆ ಪ್ರವಾಸ ಹೋಗಿಬಂದಿದ್ದು, ಮತ್ತೆ ಅಲ್ಲಿಂದ ಗೋವಾಗೆ ನಮ್ಮ ಜೊತೆಯಲ್ಲೇ ಬಂದು ಅಲ್ಲೇ ಅದರ ಡೆಲಿವರಿಯಾದದ್ದು ಎಲ್ಲಾ ನನ್ನಾಕೆ ನೋಡಿದ್ದಳು.. ಅದರ ಸ್ವಾರಸ್ಯಕರ ಸನ್ನಿವೇಶಗಳನ್ನು ಮುಂದೆ ಎಂದಾದರು ಬರೆಯುತ್ತೇನೆ.]
ನಾನು ತಂದಿದ್ದ ಕಾಂಡದಲ್ಲಿ ನಾಲ್ಕು ಹುಳುಗಳಿದ್ದವು.... ಅವುಗಳಲ್ಲಿ ಎರಡು ದೊಡ್ಡದಾಗಿ ಸುಮಾರು ಮುಕ್ಕಾಲು ಇಂಚಿನಷ್ಟು ಬೆಳೆದು ಸರಸರ ಹರಿದಾಡುತ್ತಿದ್ದವು... ಇನ್ನೆರಡು ಒಂದು ಸೆಂಟಿಮೀಟರ್ ಇದ್ದು ನಿದಾನವಾಗಿ ಎಲೆಗಳನ್ನು ತಿನ್ನುತ್ತಿದ್ದವು...
ಎರಡು ದಿನ ಕಳೆಯಿತು... ನನಗೂ ತಿಂಗಳ ಮೊದಲವಾರ ಅವುಗಳನ್ನೇ ನೋಡಿಕೊಂಡು ಕೂರಲೂ ಆಗುವುದಿಲ್ಲವಲ್ಲ... ಹಣವಸೂಲಿ... ಇತ್ಯಾದಿ ಕೆಲಸಗಳಿಗಾಗಿ ಬ್ಯುಸಿಯಾಗಿದ್ದೆ.... .ಮೂರನೆ ದಿನ ನೋಡುತ್ತೇನೆ. ದೊಡ್ಡವೆರಡು ಪ್ಯೂಪ ಹಾಗಿವೆ.!!
ಅಷ್ಟರಲ್ಲಿ ಇನ್ನೆರಡು ತಮ್ಮಂದಿರು ತಿಂದುಂಡು ಬೆಳೆಯುತ್ತಿದ್ದವು..... ಅಣ್ಣಂದಿರು ಪ್ಯೂಪ ಆಗುವುದನ್ನು ನೋಡಲಾಗಲಿಲ್ಲ ಇವುಗಳನ್ನು ಸರಿಯಾಗಿ ಗಮನಿಸಬೇಕು ಅಂದುಕೊಂಡು ಅವುಗಳನ್ನು ಸಂಪೂರ್ಣವಾಗಿ ಗಮನಿಸತೊಡಗಿದೆ... ಜೊತೆಗೆ ಗೋಡೆಯ ಮೇಲಿನ ಹಲ್ಲಿಗಳು, ಇದ್ದಂಕ್ಕಿದ್ದಂತೆ ಹಾಜರಾಗುವ ಜೇಡಗಳು, ಏನೇ ಸಿಕ್ಕರೂ ಬಲಿಹಾಕಿ ಶೇಕರಿಸುವ ಕೆಂಪಿರುವೆಗಳಿಂದಲೂ ಈ ಹುಳು ಮತ್ತು ಪ್ಯೂಪಗಳನ್ನು ರಕ್ಷಿಸುವ ಜವಾಬ್ದಾರಿಯೂ ನನ್ನ ಮೇಲಿತ್ತು.
ನಾಲ್ಕನೆ ದಿನ ಮದ್ಯಾಹ್ನದ ಹೊತ್ತಿಗೆ ಮೂರನೆ ತಮ್ಮ ತನ್ನ ಹೊರಗಿನ ಚರ್ಮವನ್ನು ಹಾವಿನ ಪೊರೆಯಂತೆ ಕಳಚಿ ತನ್ನ ದೊಡ್ಡ ಆಕಾರವನ್ನು ಸಂಪೂರ್ಣ ಕುಗ್ಗಿಸಿ ಅರ್ದ ಭಾಗಕ್ಕೆ ತಂದು, ತನ್ನ ದೇಹದ ಹಿಂಬಾಗವನ್ನು ಕಾಂಡದ ಒಂದು ತುದಿಗೆ ಅಂಟಿಸಿದ....!! ಮತ್ತೊಂದು ತುದಿಯನ್ನು [ತಲೆಭಾಗ] ಕಾಂಡದ ಮತ್ತೊಂದು ತುದಿಗೆ ಸಣ್ಣ ದಾರದ ಎಳೆಯಂತ ಅಂಟನ್ನು ತನ್ನ ದೇಹದಿಂದಲೇ ಸೃಷ್ಠಿಸಿ ಅದರೊಳಗೆ ತನ್ನ ಕುಗ್ಗಿಸಿದ ದೇಹವನ್ನು ತೂರಿಸಿ ನೇತಾಡತೊಡಗಿತು...... ಇದಿಷ್ಟು ಪ್ರಕ್ರಿಯೆ ನಡೆದಿದ್ದು ಸುಮಾರು ನಾಲ್ಕು ತಾಸಿನಲ್ಲಿ..!!. ಮರುದಿನ ಕೊನೆ ತಮ್ಮನದೂ ಇದೇ ಪ್ರಕ್ರಿಯೆ ! ಮರುದಿನ ಅವೆರಡು ಹಚ್ಚ ಹಸುರಿನ ಬಣ್ಣ ಹೊತ್ತ ಪ್ಯೂಪಗಳಾಗಿ ಬಿಟ್ಟಿವೆ.
ದೊಡ್ಡಣ್ಣನಿದ್ದ ಪ್ಯೂಪ ಏಳನೇ ದಿನದ ಸಂಜೆ ಹೊತ್ತಿಗೆ ನಿದಾನವಾಗಿ ಬಣ್ಣ ಬದಲಿಸುತ್ತಿದೆಯಲ್ಲ......ರಾತ್ರಿ ವೇಳೆಗೆ ಹಸಿರು ಬಣ್ಣದ ಗುರುತೇ ಇಲ್ಲದಂತೆ ಕೆಳಗೆಲ್ಲಾ ಹಳದಿ ಬಣ್ಣ ಮತ್ತು ಮೇಲಿನ ಸ್ವಲ್ಪ ಭಾಗ ಕಂದು ಬಣ್ಣಕ್ಕೆ ತಿರುಗಿದೆ.!!
ನಾನು ಇದುವರೆಗೂ ಸುಮಾರು ೧೨ ವಿಧದ ಚಿಟ್ಟೆಗಳನ್ನು ಪ್ಯೂಪ ಸಮೇತ ತೆಗೆದಿರುವ ಅನುಭವದ ಪ್ರಕಾರ ಯಾವ ಪ್ಯೂಪ ಸಂಜೆ ಹೊತ್ತಿಗೆ ಬಣ್ಣ ಬದಲಿಸುತ್ತದೋ ಮರುದಿನ ಖಂಡಿತ ಪ್ಯೂಪವನ್ನು ಭೇದಿಸಿ ಚಿಟ್ಟೆ ಹೊರಬರುತ್ತದೆ...!
ಮರುದಿನ ಮುಂಜಾನೆ ನನ್ನ ದಿನಪತ್ರಿಕೆ ಕೆಲಸವನ್ನು ಹುಡುಗರಿಗೆ ವಹಿಸಿ ೬ ಗಂಟೆಗೆ ಮನೆಗೆ ಓಡಿ ಬಂದೆ. ಕ್ಯಾಮೆರಾವನ್ನು ಪ್ಯೂಪ ಮುಂದೆ ಸೆಟ್ ಮಾಡಿ ಕಾಯುತ್ತಾ ಕುಳಿತೆ.... ನನ್ನ ಅದೃಷ್ಟಕ್ಕೆ ತೆಳುವಾದ ಬೆಳಕು ಪ್ಯೂಪ ಮೇಲೆ ಬಿದ್ದು ಒಳ್ಳೆ ಪಿಕ್ಟೋರಿಯಲ್ ಬೆಳಕಿನಲ್ಲಿ ಚಿಟ್ಟೆಯ ಚಿತ್ರ ಸೆರೆಯಿಡಿಯುವ ಅವಕಾಶ ಸಿಕ್ಕಿತ್ತು.
ಮುಂಜಾನೆ ಬ್ಲಾಹ್ಮಿ ಮಹೂರ್ತದಲ್ಲಿ ಡೆಲಿವರಿ... ಚಿಟ್ಟೆ ಪ್ಯೂಪವನ್ನು ತೆರೆದುಕೊಂಡು ತಲೆಮುಖಾಂತರ ಹೊರಬರುತ್ತಿದೆ...!!
ಆಗ ತಾನೆ ಪೂರ್ತಿ ಹೊರ ಬಂದ "ಟ್ರೀ ಎಲ್ಲೋ" ಚಿಟ್ಟೆ
ನನ್ನ ಕಣ್ಣು ಕ್ಯಾಮೆರಾ ಕಣ್ಣಿನೊಳಗೆ.... .ಕಣ್ಣು ನೋವು ಬಂದಾಗ ಹೊರತೆಗೆದು ಅತ್ತ ಇತ್ತ ನೋಡುವುದು... ಹೀಗೆ ಸುಮಾರು ಅರ್ಧಗಂಟೆ ನಡೆಯಿತು.....
ರ್ರೀ.....ರೀ......ಚಿಟ್ಟೆ ಆಚೆ ಬಂತು...... ತೆಗೀರಿ ಫೋಟೊ.....ಹೇಮಾಶ್ರೀ ಕೂಗಿದಾಗ ಗಡಿಬಿಡಿಯಲ್ಲಿ ಪಟಪಟನೇ ಐದಾರು ಫೋಟೊ ತೆಗೆದಿದ್ದೆ....ಅದೇ ಸಮಯಕ್ಕೆ ಸಣ್ಣಗೆ ಗಾಳಿಯೂ ಬೀಸಿ ಪ್ಯೂಪ ಅಲುಗಾಡಿ ಕೆಲವು ಫೋಟೊಗಳು ಫೋಕಸ್ ಹೌಟ್ ಆಗಿದ್ದವು.....ಎರಡೇ ಕ್ಷಣದಲ್ಲಿ ಚಿಟ್ಟೆಯ ಡೆಲಿವರಿಯಾಗಿ ಅದೇ ಪ್ಯೂಪವನ್ನು ತನ್ನ ಕಾಲುಗಳಿಂದ ಹಿಡಿದುಕೊಂಡು ತಲೆಕೆಳಗಾಗಿ ನೇತಾಡುತ್ತಿತ್ತು......
ತಮ್ಮಂದಿರಿಬ್ಬರೂ ಮೊದಲು ಪ್ಯೂಪದೊಳಗೆ ಹೀಗೆ ಒಳಗೆ ಕುಳಿತ್ತಿದ್ದರು........"ಟ್ರೀ ಎಲ್ಲೋ.." ಚಿಟ್ಟೆಯ ಮೂರನೆ ತಮ್ಮ ಹೊರಬಂದಿದ್ದಾನೆ...ನಾಲ್ಕನೆಯವನು ಹೊರಲು ಕಾಯುತ್ತಿದ್ದಾನೆ.
ಇದೇ ರೀತಿ ಮರುದಿನ ಮೊದಲನೆ ತಮ್ಮ, ಮೂರುದಿನ ಬಿಟ್ಟು ಕೊನೆಯ ಇಬ್ಬರೂ ತಮ್ಮಂದಿರಲ್ಲಿ ಒಬ್ಬ ಆರು ಗಂಟೆಗೆ ಮತ್ತೊಬ್ಬ ೭-೩೦ಕ್ಕೆ ಡೆಲಿವರಿಯಾಗಿ ನನ್ನ ಕ್ಯಾಮೆರಾದಲ್ಲಿ ಸೆರೆಯಾಗಿದ್ದರು....ಸುಮಾರು ಎಂಟು ಗಂಟೆಯ ಹೊತ್ತಿಗೆ ಜೇನು ಹೀರಲು ಹೂಗಳನ್ನರಸಿ ಹಾರಿ ಹೋದವು.
ಪೇಪರ್ ಬಿಲ್ಲು ಹೋಯ್ತು......ಕ್ಯಾಟರ್‌ಪಿಲ್ಲರ್ ಸಿಕ್ತು... ಡುಂ..ಡುಂ...
ಕ್ಯಾಟರ್‌ಪಿಲ್ಲರ್ ಹೋಯ್ತು....ಪ್ಯೂಪ ಆಯ್ತು.......ಡುಂ..ಡುಂ.....
ಪ್ಯೂಪ ಹೋಯ್ತು....ಚಿಟ್ಟೆ ಬಂತು ಡುಂ...ಡುಂ.......
ಇಷ್ಟಕ್ಕೂ ಈ ಚಿಟ್ಟೆಯ ಹೆಸರು "ಟ್ರೀ ಎಲ್ಲೋ". ಇವು "ಕಾಮನ್ ಗ್ರಾಸ್ ಎಲ್ಲೋ" ಪ್ರಭೇದಕ್ಕೆ ಸೇರಿದರೂ ಗಾತ್ರದಲ್ಲಿ ಸಲ್ಪ ದೊಡ್ಡವು.... ಸುಮಾರು ೫೦-೬೦ ಎಮ್ ಎಮ್ ಇರುತ್ತವೆ . ಈ "ಟ್ರೀ ಎಲ್ಲೋ" ಎಲ್ಲೋ ಚಿಟ್ಟೆಯೂ ಪಿಯಾರಿಡೈ, PIERIDAE ಜಾತಿಗೆ ಸೇರಿದೆ....... ಸಾಧ್ಯವಾದರೆ ಎಲ್ಲಾ ಪ್ರಭೇದಗಳ ವಿವರವನ್ನು ಮುಂದೆ ಚಿತ್ರ ಸಮೇತ ಕೊಡಲು ಪ್ರಯತ್ನಿಸುತ್ತೇನೆ....
"ಟ್ರೀ ಎಲ್ಲೋ" ಚಿಟ್ಟೆಯೂ ಆಲ್ಬ್‌ಜಿಯಾ [Albzia ] ಅನ್ನುವ ಮುಳ್ಳೀನ ಗಿಡದ ಎಲೆಗಳ ಮೇಲೆ ಸಾಸುವೆಕಾಳಿಗಿಂತ ಚಿಕ್ಕದಾದ ಮೊಟ್ಟೆಗಳನ್ನು ಇಡುತ್ತದೆ....ಮೊಟ್ಟೆಯೊಡೆದು ಹೊರಬಂದ ಹುಳು [ಇದನ್ನು ಲಾರ್ವ ಅಂತಲೂ ಕರೆಯುತ್ತಾರೆ] ನಿದಾನವಾಗಿ ಅದೇ ಎಲೆಯನ್ನು ತಿನ್ನುವುದರಿಂದ ಮತ್ತು ಬೆಳೆದು ದೊಡ್ಡದಾಗಿ ಪ್ಯೂಪ ಆಗುವುದು . ಅದೇ ಗಿಡದಲ್ಲಿ ಅದ್ದರಿಂದ ಈ ಗಿಡವೇ ಚಿಟ್ಟೆಯ " ತವರುಮನೆ" [host plant ] ಎನ್ನಬಹುದು..
ನಿಮಗೆ ಈ ಗಿಡದ ಆಡುಭಾಷೆಯ ಹೆಸರನ್ನು ಗುರುತಿಸಲು ಸಾಧ್ಯವಾದರೆ ಹೇಳಿ...............
ಇವು ಜಾಲಿಗಿಡ, ದೊಡ್ಡ ಗೋಣಿಸೊಪ್ಪಿನ ಗಿಡ, ನೆಲಬೇಲಿಗಿಡ, ಲಂಟಾನ, ಹೊಂಗೆ ಮರದ ಬಳ್ಳೀಗಳು, ಬ್ಯಾಚುಲರ್ಸ್ ಬಟನ್, ಮೇಲೆ ಕೂರುತ್ತವೆ....ಇವುಗಳು ಆಹಾರಕ್ಕಾಗಿ ಕೆಳದರ್ಜೆಯ ದಾಲ್ಚಿನಿ ಗಿಡ, ಜಾಲಿಗಿಡದ ಹೂಗಳನ್ನು ಆಶ್ರಯಿಸುತ್ತವೆ..
ಕಾಮನ್ ಗ್ರಾಸ್ ಎಲ್ಲೋ ಚಿಟ್ಟೆ .......ಇದರ ವೈಜ್ಞಾನಿಕ ಹೆಸರು
"Eurema hecabe"
ಈ ವಿಭಾಗದ "ಕಾಮನ್ ಗ್ರಾಸ್ ಎಲ್ಲೋ" ಚಿಟ್ಟೆಯೂ ಇದೇ ರೀತಿ ಇದ್ದರೂ ಎರಡು ರೆಕ್ಕೆಯ ಹಿಂಬಾಗದಲ್ಲಿ ಅರ್ಧ ಚಂದ್ರಾಕೃತಿಯಲ್ಲಿ ಸ್ವಲ್ಪ ಕಪ್ಪು ಬಣ್ಣವಿರುತ್ತದೆ. ಈ ಗಿಡದ ಹೋಸ್ಟ್ ಪ್ಲಾಂಟ್ "
ಕಾಶಿಯಾ ಟೋರ" [
cassia tora ] ಅಂದರೆ ನಮ್ಮ ಆಡುಭಾಷೆಯಲ್ಲಿ ಅದರಲ್ಲೂ ಉತ್ತರ ಕನ್ನಡದ ಕಡೆ "
ನಾಯಿ ಶೇಂಗ " ಅಂತಲೂ ದಕ್ಷಿಣಾ ಕರ್ನಾಟಕ ಭಾಗದಲ್ಲಿ
" ತಂಗಡಿ ಗಿಡ" ಅಂತ ಕರೆಯುತ್ತಾರೆ.
ಭಾರತ, ಶ್ರೀಲಂಕ, ಪಾಕಿಸ್ಥಾನ, ಬಾಂಗ್ಲದೇಶ, ಬರ್ಮಾ, ಮಲೇಶಿಯಾ, ಥೈಲ್ಯಾಂಡ್, ಇಂಡೋನೇಷಿಯಾ, ಆಪ್ರಿಕಾ, ಮಡ್ಗಾಸ್ಕರ್, ಮಾರಿಷಶ್, ಫುಜಿ, ಜಪಾನ್, ಟಾಂಗ, ನ್ಯೂ ಗಿನಿಯಾ, ಕೊರಿಯಾ, ಆಷ್ಟ್ರೇಲಿಯಾ ಮತ್ತು ದಕ್ಷಿಣ ಪೂರ್ವ ಚೀಣದಲ್ಲಿ ಕಂಡುಬರುತ್ತವೆ...
ಮತ್ತಷ್ಟು ಚಿಟ್ಟೆಗಳ ಕುತೂಹಲಕಾರಿ ವಿಚಾರಗಳನ್ನು ಮತ್ತೊಂದು ಚಿಟ್ಟೆಯ ಪ್ರಯೋಗ-ಫೋಟೊ-ಅನುಭವ ಭಾಂದವ್ಯಗಳ ಜೊತೆ ಜೊತೆಯಲ್ಲಿ ಹೇಳುತ್ತೇನೆ....
ಚಿತ್ರ ಮತ್ತು ಲೇಖನ:
ಶಿವು.