Monday, March 9, 2009

"ಆಹಾ ನನ್ನ ಮದುವೆಯಂತೆ"


"ರೀ....ಶಿವು ಏನ್ರೀ....ಯಾವಾಗ್ಲು ಬ್ಯುಸಿಯಾಗಿರ್ತೀರಿ......ಒಂದು ನಿಮಿಷ ಬಿಡುವು ಮಾಡಿಕೊಳ್ರೀ....ಬನ್ನಿ ಇಲ್ಲಿ,"

ಎಂದು ಸಣ್ಣ ಬ್ಯಾಗಿನಿಂದ ಒಂದು ಮದುವೆ ಕಾರ್ಡ್ ತೆಗೆದು ಅದರಲ್ಲಿ ಶಿವು ಮತ್ತು ಕುಟುಂಬದವರಿಗೆ ಅಂತ ಬರೆದು ನನ್ನ ಕೈಗೆ ಕೊಟ್ಟ ಗೆಳೆಯ ಅವನ ರಾಜು.

"ನನ್ನ ಮದುವೆ, ದಯವಿಟ್ಟು ಬರಬೇಕು, ಮಿಸ್ ಮಾಡಬೇಡಿ, ಅವತ್ತು ಆ ಕೆಲಸ ಈ ಕೆಲಸ ಪೇಪರ್ ಏಜೆನ್ಸಿ ಕೆಲಸ ಅಂತ ಸಬೂಬು ಹೇಳಬ್ಯಾಡ್ರೀ..... ನೀವು ಖಂಡಿತ ಬರಬೇಕು"

ಅಂತ ಮೂರ್ನಾಲ್ಕು ಸಲ ಹೇಳಿದಾಗ ನಾನು,

"ಆಯ್ತು ಖಂಡಿತ ಬರ್ತೀನಿ ಕಣ್ರೀ.....ಅಂತ ಫಾರ್ಮಾಲಿಟಿಸ್ ಮಾತುಗಳನ್ನು ಆಡಿ ಮರುಕ್ಷಣವೇ,

"ಅಲ್ರೀ ರಾಜು ನಾನು ಈ ರೀತಿ ಕೇಳ್ತೀನಿ ಅಂತ ತಪ್ಪು ತಿಳ್ಕೋಬೇಡಿ, ನಿಮಗೆ ಹುಡುಗರ ತೊಂದರೆ ಇದೆ ಅಲ್ವಾ" ಪ್ರತಿದಿನಾ ಮೂರು-ನಾಲ್ಕು ಬೀಟಿಗೆ ಹೋಗಿ ಪೇಪರ್ ಸಪ್ಲೆ ಮಾಡಿ ಬರ್ತೀರಾ, ಎಲ್ಲಾ ಕೆಲಸ ಮುಗಿಸಿ ಮನೆಗೆ ಹೋಗೋ ಹೊತ್ತಿಗೆ ೯ ಗಂಟೆ ಆಗುತ್ತೆ ನಿಮಗೆ, ಮದುವೆ ಮಹೂರ್ತದ ದಿನ ಎಂಗೆ ಮಾಡ್ತೀರ್ರೀ......."

ನಾನು ಕುತೂಹಲದಿಂದ ಕೇಳಿದಾಗ,

"ಏನ್ ಮಾಡೋದ್ ಹೇಳಿ ಶಿವು, ನೀವೇ ಏನಾದ್ರು ಒಂದು ಐಡಿಯಾ ಕೊಡ್ರೀ...., ನನ್ನ ಮದುವೆ ದಿನ, ಮತ್ತು ಅನಂತರ ಮೂರ್ನಾಲ್ಕು ದಿನ ಹುಡುಗರೆಲ್ಲಾ ತಪ್ಪಿಸಿಕೊಳ್ಳದೇ ಬಂದು ಎಲ್ಲಾ ರೆಡಿಮಾಡಿಕೊಂಡು ಎಲ್ಲಾರ ಮನೆಗೂ ಸರಿಯಾಗಿ ಪೇಪರ್ ಹಾಕಿ ಬಿಡ್ರಪ್ಪ, ತಪ್ಪಿಸಬೇಡಿ ಅಂತ ಹೇಳೀದ್ದೇನೆ ದೇವರಿದ್ದಾನೆ" ದೇವರ ಮೇಲೆ ಭಾರ ಹಾಕಿದ ರಾಜು.

ಸ್ವಲ್ಪ ತಡೆದು,

" ಆದ್ರೆ ಗೊತ್ತಲ್ಲ ನಾನು ಹೇಳೋದು ಹೇಳಿದ್ದೀನಿ, ನಿಮಗೇ ಗೊತ್ತಲ್ಲ, ನಿಮಗೂ ಆನುಭವ ಆಗಿದೆಯಲ್ಲಾ " ಎಂದಾಗ ಆ ಕ್ಷಣವೇ ನನ್ನ ಮದುವೆಯ ನೆನಪು ಮರುಕಳಿಸಿತ್ತು.


ನನ್ನ ಮಹೂರ್ತದ ಹಿಂದಿನ ದಿನದವರೆಗೆ ದಿನಪತ್ರಿಕೆ ವಿತರಣೆ ಮಾಡಿ ಒಂಬತ್ತು ಗಂಟೆಗೆ ಮನೆಗೆ ಹೋದಾಗ ಬೆಳಿಗ್ಗೆ ೬ ಗಂಟೆಗೆ ಚಪ್ಪರದ ಪೂಜೆಗೆ ಬರಲಿಲ್ಲವೆಂದು " ನಿನ್ನದು ಯಾವಾಗಲು ಇದ್ದದ್ದೆ, ಇವತ್ತು ಹೋಗಬೇಕಿತ್ತಾ, ಬೆಳಿಗ್ಗೆ ಚಪ್ಪರ ಪೂಜೆ ತಪ್ಪಿಸಿಕೊಂಡೆಯಲ್ಲಾ" ಅಂತ ಮನೆಯಲ್ಲಿ ಅಮ್ಮನಿಂದ ಬೈಸಿಕೊಂಡಿದ್ದು ನೆನಪಾಯಿತು.

ಅವತ್ತು ಮದ್ಯಾಹ್ನ ನನ್ನಾಕೆ ಊರಿಗೆ ಹೋಗಿ ಮರುದಿನ ನನ್ನ ಮದುವೆ ಮುಗಿಸಿಕೊಂಡು ಅಂದೇ ರಾತ್ರಿ ಬೆಂಗಳೂರಿಗೆ ತಲುಪಿ, ಮರುದಿನ ಬೆಳಿಗ್ಗೆ ದಿನಪತ್ರಿಕೆ ವಿತರಣೆಗೆ ಮುಂಜಾನೆ ಐದು ಗಂಟೆಗೆ ಎದ್ದು ಹೋದಾಗ.,.....

"ಏನೋ ಇವತ್ತೆ ಬಂದು ಬಿಟ್ಟಿದ್ದೀಯಾ ! ಒಂದು ವಾರ ಅರಾಮವಾಗಿದ್ದು ಬಂದಿದ್ದರೆ ನಿನ್ನ ಗಂಟೇನು ಹೋಗ್ತಿತ್ತಾ ? ಇದೆಲ್ಲಾ ಇದ್ದಿದ್ದೇ" ಅಂತ ಗೆಳೆಯರೆಲ್ಲಾ ಹೇಳಿದಾಗ "ಅರೆರೆ ........ಹೌದಲ್ವ " ಅನ್ನಿಸಿತ್ತು.

ಮದುವೆ ಸಂಬ್ರಮದಲ್ಲಿ ತೇಲಿದ್ದ ನನಗೆ ಹಾಗೆ ಅನ್ನಿಸಿದರೂ ನಿಜವಾದ ತೊಂದರೆಗಳು ಏನು ? ಒಂದು ದಿನ ಪತ್ರಿಕೆ ಬೆಳಗಿನ ೬ ಗಂಟೆಗೆ, ೬-೩೦ ಕ್ಕೆ ಬರದಿದ್ದರೆ ತಕ್ಷಣ ನನ್ನ ಮೊಬೈಲಿಗೆ ಫೋನ್ ಮಾಡಿ .,

"ರ್ರೀ ಶಿವು, ಏನ್ರೀ..... ಇನ್ನೂ ಪೇಪರ್ ಬಂದಿಲ್ಲವಲ್ರೀ....ನಮ್ಮ ಮನೆಗೆ"

ಅಂತ ದಿನಕ್ಕೆ ಕಡಿಮೆಯೆಂದರೂ ೧೦-೧೫ ಫೋನ್ ಕಾಲ್ ಬರುವ ನೆನಪಾಗಿ, ದೇವರೇ..... ನಮ್ಮಂಥ ಕಷ್ಟ ಇನ್ಯಾರಿಗೂ ಬರಬಾರದು ಅಂತ ಆ ಕ್ಷಣ ಅನ್ನಿಸಿದ್ದು ಇದೆ. ಎದುರಿಗೆ ಎಲ್ಲಾ ಸುಖ ಸಂತೋಷಗಳು ಕೈಗೆಟುಕಿದ್ದರೂ ಅದನ್ನು ಅನುಭವಿಸುವುದಕ್ಕಾಗುವುದಿಲ್ಲ. ಎದುರಿಗೆ ನಮಗಿಷ್ಟವಾದ ಊಟ, ಉಪಹಾರವೋ ಇದ್ದು ತಿನ್ನಬೇಕೆನಿಸಿದರೂ ತಿನ್ನುವಷ್ಟರಲ್ಲಿ ಕರ್ತವ್ಯದ ಕರೆ ಬಂದು ಬಿಟ್ಟಿರುತ್ತದೆ.

ಕರ್ತವ್ಯದ ಕರೆಯನ್ನು ಮುಗಿಸಿ ಬರುವಷ್ಟರಲ್ಲಿ ಸಿದ್ದವಾಗಿದ್ದ ಮೃಷ್ಟಾನ್ನ ಬೋಜನ ತಣ್ಣಗಾಗಿಯೋ, ಅಥವಾ ಹಳಸಿಯೋ ಅದರ ರುಚಿಯೇ ಇಲ್ಲದಂತಾಗಿ ಹೋಗುವ ಸಂದರ್ಭಗಳೇ ಹೆಚ್ಚು. ಅವೆಲ್ಲಾ ಈಗ ನೆನಪಾಗಿ "ನನ್ನ ಗೆಳೆಯ ರಾಜುವಿಗೂ ಆ ರೀತಿ ಆಗದಿರಲಪ್ಪ ದೇವರೇ....." .ಅವನು ಮದುವೆಯ ಸಂಬ್ರಮವನ್ನೆಲ್ಲಾ ಅನುಭವಿಸಲಿ, ಸಂತೋಷ ಪಡಲಿ ಎಂದು ಹಾರೈಸುವಂತಾಯಿತು.

ಆದರೂ ಈ ಹಾರೈಕೆಗಳೆಲ್ಲಾ ಕೇವಲ ನೀರ ಮೇಲಿನ ಗುಳ್ಳೆಗಳೇ !! ನೋಡಲಿಕ್ಕೆ ವರ್ಣಿಸುವುದಕ್ಕೆ ತುಂಬಾ ಚೆನ್ನಾಗಿರುತ್ತವೆ !.! ಯಾವ ಕ್ಷಣದಲ್ಲಿ ಒಡೆದು ಹೋಗುತ್ತವೋ!! ಗೊತ್ತಿಲ್ಲ. ಇದು ನಮ್ಮ ಎಲ್ಲಾ ವೃತ್ತಿಭಾಂಧವರಿಗೆಲ್ಲಾ ಗೊತ್ತು.

" ಶಿವು ಏನು ಯೋಚಿಸುತ್ತಿದ್ದೀರಿ...... ನೀವು ಮದುವೆಗೆ ತಪ್ಪಿಸಿಕೊಳ್ಳಬೇಡ್ರಿ......."

ಎಂದು ನನ್ನ ಗೆಳೆಯ ಮತ್ತೊಮ್ಮೆ ಹೇಳಿದಾಗ ನನ್ನ ಮದುವೆಯ ಆಲೋಚನೆಯಿಂದ ಹೊರಬಂದೆ. ಆ ಕ್ಷಣದಲ್ಲಿ ನನಗನ್ನಿಸಿದ್ದು,

ಇದೆಲ್ಲಾ ಗೊತ್ತಿದ್ದು ಇಂಥ ಸಂಬ್ರಮಕ್ಕಾಗಿಯೇ ಅಲ್ಲವೇ ನಾವೆಲ್ಲ ಕಾಯುವುದು !! ನೀರ ಮೇಲಿನ ಗುಳ್ಳೆಗಳಂತೆ.!!

ಆತ ಅಲ್ಲಿಂದ ಸರಿದು ಹೋದಾಗ ಆದೇ ಗುಂಗಿನಲ್ಲಿದ್ದ ನನಗೆ ಆ ಕ್ಷಣದಲ್ಲಿ ನನ್ನ ತಂದೆಯ ನೆನಪಾಯಿತು.

ಅವತ್ತು ನನ್ನ ಮೊಬೈಲು ಗುನುಗುನಿಸಿದಾಗ ಮದ್ಯರಾತ್ರಿ ೧ ಗಂಟೆ. ನನಗೆ ಊರಿಂದ ಫೋನ್ ಬಂತು. "ನಿಮ್ಮಪ್ಪ ಹೋಗಿಬಿಟ್ರು. ನೀನು ಬೇಗ ಬಾ" ಅಂತ. ನನ್ನ ತಂದೆಗೆ ಪಾರ್ಶ್ವವಾಯು ಬಡಿದು ಬೆಂಗಳೂರಿನಲ್ಲಿ ಚಿಕಿತ್ಸೆಗಾಗಿ ಬಂದು ಸ್ವಲ್ಪ ಹುಷಾರಾದ ನಂತರ ಊರಿಗೆ ಹೋಗಿಬಿಡುತ್ತೇನೆ, ನನಗೆ ಅಲ್ಲಿಯೇ ಇಷ್ಟ ! ಎಂದು ಹಠ ಮಾಡಿ ಹೋಗಿದ್ದರು.

ಆಗಾಗ ಫೋನ್ ಮಾಡಿ ಆರೋಗ್ಯ ವಿಚಾರಿಸುತ್ತಿದ್ದಾಗ ಚೆನ್ನಾಗಿದ್ದೇನೆ ಎಂಬ ಉತ್ತರ ಬರುತಿತ್ತು. ಆದರೂ ನನಗಂತೂ ಆತಂಕ ಮನದ ಒಂದು ಮೂಲೆಯಲ್ಲಿ ಮನೆ ಮಾಡಿತ್ತು.

ಆ ರಾತ್ರಿ ನಿದ್ರೆ ಬರಲಿಲ್ಲ. ಬೆಳಿಗ್ಗೆ ಬೇಗ ಎದ್ದು ಊರಿಗೆ ಹೋಗೋಣವೆಂದರೆ ಈ ದಿನಪತ್ರಿಕೆ ಕೆಲಸವಿದೆಯಲ್ಲಾ ! ಯಾವ ಹುಡುಗರು ಬರುತ್ತಾರೊ ? ಯಾವ ಹುಡುಗರು ತಪ್ಪಿಸಿಕೊಳ್ಳುತ್ತಾರೊ ? ಗೊತ್ತಿಲ್ಲ. ನಾನು ಹೋಗಲೇ ಬೇಕಿದೆ. ಜೊತೆಗೆ ನಮಗೆ ಬೇಗ ಬೇಕು ಎನ್ನುವ ಮನೆಯವರ ಫೋನ್ ಕಾಲ್‌ಗಳು.

ಇವತ್ತೊಂದಿನ ಇವರ ಕಾಟದಿಂದ ತಪ್ಪಿಸಿಕೊಳ್ಳಲು ಮೊಬೈಲು ಸ್ವಿಚ್ಚ್ ಆಪ್ ಮಾಡೋಣವೆಂದುಕೊಂಡೆ.! ಆಗದು !! ಊರಿನಿಂದ ನನ್ನ ಅಮ್ಮ ಫೋನ್ ಮಾಡಿ ಏನನ್ನಾದರೂ ತರಲು ಹೇಳಬಹುದು. ಆಗ ನನ್ನ ಮೊಬೈಲ್ ಸ್ವಿಚ್ ಆಪ್ ಆಗಿದ್ದರೆ ! ತಪ್ಪು ತಪ್ಪು ನಾನು ಈ ಸಮಯದಲ್ಲಿ ಸ್ವಿಚ್ ಆಪ್ ಮಾಡಬಾರದು..

ಒಂದು ಕಡೆ ಕರ್ತವ್ಯ. ಮತ್ತೊಂದು ಕಡೆ ಭವಿಷ್ಯ... ಆ ದಿನ ಕೆಲಸ ಮುಗಿಸಿ ಊರಿಗೆ ಹೋಗುವ ಹೊತ್ತಿಗೆ ಮೈ ಮನಸ್ಸು ಗೊಂದಲದ ಗೂಡಗಿತ್ತು. ಈ ಜೀವನವೇ ಬೇಸರವೆನಿಸಿತ್ತು.

ಇದು ನನ್ನೊಬ್ಬನ ವಿಚಾರವಲ್ಲ, ನನ್ನಂಥ ಸಾವಿರಾರು ದಿನಪತ್ರಿಕೆ ವಿತರಕರ, ಹಾಲು ವಿತರಕರ ನಿತ್ಯ ಬದುಕು.

"ರ್ರೀ........ಯಜಮಾನ್ರೇ..... ಏನ್ರೀ... ಹೋದ ಕಡೆಗೆ ಹೋಗಿಬಿಡೋದ ನಿಮಗೇನು ಜವಾಬ್ದಾರಿ ಇಲ್ಲವಾ " ಎಂದು ವ್ಯಂಗ್ಯದೊಳಗೊ ಪ್ರೀತಿ ಸೇರಿಸಿ ನನ್ನ ಬೀಟ್ ಬಾಯ್ ಕೂಗಿದ್ದ.

ಅವನ ಹೆಸರು ಮಿಮಿಕ್ರಿ ಸೋಮ. ನಾನು ಮಾತಾಡುವ ಶೈಲಿ, ಹುಡುಗರನ್ನು ಅಣಕಿಸುವುದು, ಗದರಿಸುವುದು, ಕೋಪಬಂದಾಗ, ಖುಷಿಯಾಗಿದ್ದಾಗ ನನ್ನ ಮಾತುಗಳು ಇವೆಲ್ಲವನ್ನು ಮಿಮಿಕ್ರಿ ಮಾಡಿ ನನ್ನನ್ನು ಆಣಕಿಸುತ್ತಾನೆ. ಆಷ್ಟೇ ಅಲ್ಲದೇ ನನ್ನ ಬೀಟಿನ ಹುಡುಗರ ಎಲ್ಲಾ ದ್ವನಿ ಮತ್ತು ನಡುವಳಿಕೆಗಳನ್ನು ತದ್ರೂಪು ಮಾಡುವುದರಲ್ಲಿ ಸಿದ್ದ ಹಸ್ತ ಆತ. ಅವನು ನನ್ನ ದ್ವನಿಯನ್ನೇ ಅನುಕರಿಸಿ ನನ್ನನ್ನೇ ಕರೆದಾಗ ನನ್ನೆಲ್ಲಾ ನೆನಪುಗಳಿಗೆ ತಡೆ ಬಿದ್ದಂತಾಗಿ ವಾಸ್ತವಕ್ಕೆ ಬರುವಂತಾಯಿತು.

[ಲೇಖನವನ್ನು ಮೊದಲೇ ಬರೆದಿದ್ದರೂ ಇದಕ್ಕಾಗಿ ಒಂದೆರಡು ರೇಖಾಚಿತ್ರಗಳನ್ನು ಬರೆಯೋಣವೆಂದು ಅನ್ನಿಸಿತ್ತು....ಸಮಯಾಭಾವದಿಂದ ಬರೆಯಲಾಗಲಿಲ್ಲ...ಮುಂದಿನ ಬಾರಿ ರೇಖ ಚಿತ್ರಗಳೊಂದಿಗೆ ನನ್ನ ಮುಂಜಾನೆ ದಿನಪತ್ರಿಕೆಯ ಲೇಖನಗಳನ್ನು ಕೊಡುತ್ತೆನೆ....]

ಲೇಖನ..
ಶಿವು.

82 comments:

Umesh Balikai said...

ನಿಮ್ಮ ಕೆಲಸದ ಜೊತೆಗೆ ಬರುವ ಜವಾಬ್ದಾರಿ ನಿಮ್ಮ ವೈಯಕ್ತಿಕ ಜೀವನದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಅಂತ ತಿಳಿದು ಬೇಸರವಾಯಿತು. ಆದರೆ ಏನು ಮಾಡುವದು, ಇಷ್ಟವಿದ್ದೋ ಇಲ್ಲದೆಯೋ, ಕಡೆಗೆ ನಮ್ಮ ಕೆಲಸ ನಮ್ಮದೇ ಆಯ್ಕೆ ಅಲ್ಲವೇ...

Dr.Gurumurthy Hegde said...

Nija, jeevanave haage allave

ಕ್ಷಣ... ಚಿಂತನೆ... said...

ಸರ್‍ ದಿನಪತ್ರಿಕೆ ಲೇಖನ ಓದಿದೆ. ಪತ್ರಿಕೆ ವಿತರಣೆಯ ಹೊಣೆಹೊತ್ತವರಿಗಷ್ಟೇ ಅದರ ಆಳ-ಅಗಲ ಅರ್ಥವಾಗುವುದು. ನೋವಿರಲಿ ನಲಿವಿರಲಿ ದಿನಪತ್ರಿಕೆ ಹಂಚುವ ಕೆಲಸ ಇದ್ದೇ ಇರುತ್ತದೆ. ಹಾಗೆಯೇ ಹಾಲಿನವರ, ಪೋಲಿಸರು ಹಾಗೂ ಉನ್ನತ ಹುದ್ದೆಯಲ್ಲಿರುವವರ ಪಾಡೂ ಸಹ ಹೀಗೆಯೇ ಇರುತ್ತದೆ, ಅಲ್ಲವೆ? ಇದರೊಂದಿಗೆ ನನ್ನ ಸ್ಥಿತಿ ತಿಳಿಸುವುದಾದರೆ ನಾನೊಬ್ಬ ಶೀಘ್ರಲಿಪಿಗಾರ. ನನಗೂ ಸಹ ಒಂದರ್ಧ ದಿನ ರಜೆ ಬೇಕೆಂದರೆ ನೂರೆಂಟು ವಿಘ್ನಗಳೇ ಕಂಡುಬರುತ್ತವೆ. ಈ ತಿಂಗಳಂತೂ ನನಗೆ `ಉಗಾದಿ' ಹಬ್ಬದ ದಿನವೂ ಕಚೇರಿಗೆ ಹೋಗಬೇಕಿದೆ. ಹೀಗೆಯೇ ಪ್ರತಿಯೊಬ್ಬರ ಅನಿವಾರ್ಯತೆಯೂ ದೈನಂದಿನ ಜಂಜಾಟದಲ್ಲಿ ಇದ್ದೇ ಇರುತ್ತದೆ.

Anonymous said...

ನಮಸ್ತೇ ಶಿವು ಅಣ್ಣ
ಕೆಲಸ ಅಂದ್ರೆ ಜವಾಬ್ದಾರಿ ಜಾಸ್ತಿ ಇರುತ್ತದಲ್ಲ ಅದರಲ್ಲೂ ನೀವು ನಿಮ್ಮ ಮದುವೆಲಿ ಪಟ್ಟ ಪಾಡು ಓದಿ ಬೇಜಾರಾಯಿತಣ್ಣ. ಜೀವನದಲ್ಲಿ ಮದುವೆ ಅನ್ನೋದು ಓಂದೇ ಸಲ ನಡೆಯುವಂತದು. ಆ ಶಾಸ್ತ್ರ ಗಳನೆಲ್ಲಾ ಮರೆತು ನೀವು ಕೆಲಸಕ್ಕೆ ಹೋಗಿದ್ದು ಕೇಳಿ ಎಷ್ಟು ಕಷ್ಟ ಈ ಕೆಲಸ ಅಂತ ಅನಿಸಿಬಿಟ್ಟಿತು. ಒಂದು ಕಡೆಯಿಂದ ಮದುವೆ ಎಂದು ಸಂಭ್ರಮದಲ್ಲಿ ಮೈಮರೆಯುವಂತಿಲ್ಲ ಇನ್ನೋದು ಕಡೆಯಿಂದ ಪೇಪರ್ ತೆಗೆದುಕೋಳ್ಳುವವರ ಫೋನ್ ಕಾಲ್ ನಿಂದ ತಪ್ಪಿಸುವ ಹಾಗಿಲ್ಲ ಅಲ್ವಾ ಅಣ್ಣ

ಕೃಪಾ said...

ಅಯ್ಯೋ .... ಶಿವಣ್ಣ ಹೀಗೂ ಕಷ್ಟ ಇರುತ್ತಾ....?

ಜೀವನದ ಅತಿ ಮುಖ್ಯ ಘಟ್ಟಗಳಲ್ಲೇ....ಈ ತರ ಸಮಸ್ಯೆ....!!!

ಅಂತೂ ಕೆಲಸದ ಜವಾಬ್ಧಾರಿಯೂ ಮುಖ್ಯವೇ... ಓದುಗರು ನಿಮ್ಮ ಅನ್ನದಾತಾರೆ....

ಆದರು ಮನುಷ್ಯರಲ್ವಾ....ಪರಿಸ್ಥಿತಿಗೆ ಹೊಂದುಕೊಳ್ಳುತ್ತಾ ಇದ್ರೇನೋ....?

ನನಗಂತೂ ನನ್ನ ಮನೆ.... ಮಗು....ಗಂಡ..... ಇವಕ್ಕೆಲ್ಲ ಮೊದಲ ಪ್ರಾಶಶ್ತ್ಯ...

ಕೆಲಸಕ್ಕೆ ಎರಡನೇ....ಸ್ಥಾನ...... ತಪ್ಪೋ.... ಸರಿಯೋ ತಿಳಿಯದು.....

ನನ್ನ ಮದುವೆಗೆ.... Engagement ಆದಲ್ಲಿಂದನೆ... ತಯಾರಿ ನಡೆಸಿದ್ದೆ.....

(ಅಂದರೆ ಮೂರು ತಿಂಗಳಿಂದನೆ... ಹ್ಹಿ ...ಹ್ಹಿ....ಹ್ಹಿ....)

ಮನಸು said...

ಸರ್ ಮತ್ತೊಂದು ಲೇಖನ, ಜೀವನದ ಸಾಗರದಲ್ಲಿ ಹಲವು ಎಡರು ತೊಡರಿನ ಚಿತ್ರಣ ಸುಂದರ ಬರಹ ಜೊತೆಗೆ ಕೆಲವು ನೋವಿನ ನೆನಪು ಇದೆ...

ಮದುವೆಯಾ ದಿನ ಕೂಡ ನಿಮ್ಮ ಕೆಲಸ ಬಿಡಲಿಲ್ಲ ಛೆ ... ಇನ್ನು ನಿಮ್ಮ ಮದುವೆ ಮಾಡಿಕೂಂಡವರು ಪಾಪ....
ಪೇಪರ್ ಒಂದು ದಿನ ಬರಲಿಲ್ಲವೆಂದರೆ ಎಷ್ಟು ಹಾರಡುತ್ತೇವೆ ಆ ಪೇಪರಿನ ಹಿಂದೆ ಇರುವ ಕತೆ ನಿಮಗೆ ಗೊತ್ತು...
ತಂದೆಯವರ ಮರಣ ದಿನವೂ ಕರ್ತವ್ಯದ ಕರೆ ನೋವುಣಿಸಿರಬೇಕು ಅದನ್ನು ಯಾರು ಬೇಕಾದರೂ ಊಹಿಸುತ್ತಾರೆ..

ಬಾಲು said...

ನಿಮ್ಮ ಮಾತು ಸರಿ, ಪತ್ರಿಕೆ ಯಲ್ಲಿ ಕೆಲಸ ಮಾಡೊ ( ಪತ್ರ ಕರ್ತರು ಹಾಗು ವಿತರಣೆ ಗಾರರು) ರಿಗೆ ಇ ಸಮಸ್ಯೆ ತಪ್ಪಿದ್ದಲ್ಲ. ಯಾಕೆ೦ದರೆ ಇದರ ಪ್ರತ್ಯಕ್ಷ ಅನುಭವ ನನಗೆ ಇದೆ!!!

PARAANJAPE K.N. said...

ಶಿವೂ,
ಲೇಖನ ಚೆನ್ನಾಗಿದೆ. ಕೆಲವೊಮ್ಮೆ ಕರ್ತವ್ಯ ಮತ್ತು ಕಾಯಕಕ್ಕಾಗಿ ಇ೦ತಹ ತ್ಯಾಗಗಳು ಅನಿವಾರ್ಯ. ಜೀವನವೇ ಒ೦ದು ಥರಾ adjustment. ಜೀವನದಲ್ಲಿ ಇದೆಲ್ಲ ಇದ್ದದ್ದೇ ? ಅಲ್ಲವೇ ?

Keshav.Kulkarni said...

ಶಿವು,
ಲೇಖನ ಚುರುಕಾಗಿದೆ, ತುಂಬ ಇಷ್ಟವಾಯಿತು. ಹಿಂದಿನ ಪೋಸ್ಟ್ ಓದಿದ್ದೇನೆ, ನೋಡಿದ್ದೇನೆ. ಅದೇಕೋ ಕಮೆಂಟ್ ಬರ್ಯುವುದು ಮಿಸ್ ಆಯಿತು. ಕ್ಷಮೆಯಿರಲಿ.
ಇನ್ನೂ ಬರೆಯುತ್ತಿರಿ, ನಿಮ್ಮ ಬರಹ, ಚಿತ್ರಗಳು ನನಗೆ ತುಂಬ ಇಷ್ಟ.
- ಕೇಶವ (www.kannada-nudi.blogspot.com)

shivu.k said...

ಉಮಿ ಸರ್.,

ನೀವು ಕೆಲಸಗಳ ಬಗ್ಗೆ ಚೆನ್ನಾಗಿ ಅರಿತಿದ್ದೀರಿ....ಒಂದು ಜವಾಬ್ದಾರಿ ತೆಗೆದುಕೊಂಡ ಮೇಲೆ ಏನೇನು ಆಗುತ್ತದೆ ಅನ್ನುವದರ ಬಗ್ಗೆ ನನ್ನ ಅನುಭವ ಹೇಳಿದ್ದೇನೆ...ಥ್ಯಾಂಕ್ಸ್...ಹೀಗೆ ಬರುತ್ತಿರಿ...

shivu.k said...

ಡಾ. ಗುರುಮೂರ್ತಿ ಹೆಗಡೆ ಸರ್,

ನಿಮ್ಮ ಮಾತು ಜೀವನದ ಬಗ್ಗೆ ಸರಿಯಿದೆ...ಹಾಗೆ ಅದನ್ನು ಮುಂದುವರಿಸಿ...ಜೀವನವೆಂದರೆ ಹೇಗೇಗೋ...ಅಲ್ಲವೇ....

shivu.k said...

ಕ್ಷಣ ಚಿಂತನೆ ಸರ್,

ನೀವು ನಮ್ಮಂತೆ ಜವಾಬ್ಡಾರಿ ಹೊತ್ತು ಸಾರ್ವಜನಿಕ ಸೇವೆ ಸಲ್ಲಿಸುವವರು ಅಂತ ತಿಳಿದು ತುಂಬಾ ಸಂತೋಷವಾಯಿತು..ಪೋಲಿಸರು ಸೇರಿದಂತೆ ಉನ್ನತ ಹುದ್ದೆಯಲ್ಲಿರುವ ಜವಾಬ್ದಾರಿ ಏನೆಂದು ಅರಿತರೆ ಅವರ ಬಗ್ಗೆ ನಮಗೆ ಗೌರವ ಭಾವನೆ ಮೂಡುತ್ತದೆ..ರಜೆಯ ವಿಚಾರದಲ್ಲಿ ನಾವು-ನೀವೆಲ್ಲಾ ಕಳೆದ ಜನ್ಮದಲ್ಲಿ ಭಯಂಕರ ಪಾಪ ಮಾಡಿದ್ದೆವೆಂದು ಕಾಣುತ್ತದೆ...ಅದಕ್ಕೆ ನೀವು ಮತ್ತು ನಾನು ಯುಗಾದಿ ಹಬ್ಬದ ದಿನವೂ ನಮ್ಮ ಜವಾಬ್ದಾರಿ ನಿರ್ವಹಿಸಬೇಕಾಗಿದೆ ನೋಡಿ....
ಪ್ರತಿಕ್ರಿಯಿಸುವ ನೆಪದಲ್ಲಿ ಒಂದು ಒಳ್ಳೆಯ ವಿಚಾರ ಹಂಚಿಕೊಂಡಿರಿ ಥ್ಯಾಂಕ್ಸ್...ಹೀಗೆ ಬರುತ್ತಿರಿ..

sunaath said...

ಶಿವು,
ಪೇಪರ ಹಂಚಿಕೆದಾರರ ವೃತ್ತಿಯಲ್ಲಿ ಇಷ್ಟೆಲ್ಲಾ ಸಮಸ್ಯೆಗಳು ಇರುವದು ನನಗೆ ಮೊದಲು ಗೊತ್ತಿರಲಿಲ್ಲ.
‘ಬಂದದ್ದೆಲ್ಲಾ ಬರಲಿ ಗೋವಿಂದನ ದಯೆಯೊಂದಿರಲಿ’ ಅಂತ ಮುನ್ನಡೆಯ ಬೇಕಷ್ಟೆ!

ಶಿವಪ್ರಕಾಶ್ said...

ಶಿವು ಅವರೇ,
ಇ ಥರ ಸನ್ನಿವೇಶದಲ್ಲಿ ಏನು ಮಾಡಬೇಕೋ ಗೊತ್ತಾಗೊಲ್ಲ..
ಹಾಲಿನವರ ಪರಿಸ್ಥಿತಿಯು ಹಾಗೆ, ರಾತ್ರಿಯೆಲ್ಲಾ ಹಾಲು ಬರುವುದನ್ನು ಕಾದು ಕುಳಿತು, ಬೆಳಿಗ್ಗೆ ಬೇಗನೆ ಎದ್ದು ವಿತರಿಸಬೇಕು...

ಹೆಚ್ಚಿಗೆ ನಾನೇನು ಹೇಳಲಾರೆ.
ಧನ್ಯವಾದಗಳು...

ವಿನುತ said...

ಶಿವು ಅವರೇ,

ಚಿಂತನಾರ್ಹ ಲೇಖನ. ನಮ್ಮ ಸಹುದ್ಯೋಗಿಯೊಬ್ಬರ ಚಿಕ್ಕಪ್ಪ ತೀರಿಕೊಂಡಾಗ ಅವರು ಇಲ್ಲಿನ ಕೆಲಸದ ಅನಿವಾರ್ಯತೆಗಳಿಂದಾಗಿ ಹೋಗಲಾಗದೆ ಪರಿತಪಿಸಿದ್ದರು.
ಇವೆಲ್ಲ ಘಟನೆಗಳು, ದ್ವಂದ್ವಗಳನ್ನು ನೋಡಿದಾರ, ಡಿವಿಜಿ ಯವರ ಕಗ್ಗ ಜ್ಞಾಪಕವಾಗುತ್ತದೆ, ’ಬದುಕು ಜಟಕಾ ಬಂಡಿ, ವಿಧಿಯದರ ಸಾಹೇಬ, ಕುದುರೆ ನೀನ್, ಅವನು ಪೇಳ್ದಂತೆ ಪಯಣಿಗರು, ಮದುವೆಗೋ ಮಸಣಕೋ ಓಡೆಂದ ಕಡೆಗೋಡು, ಪದಕುಸಿಯೆ ನೆಲವಿಹುದು - ಮಂಕುತಿಮ್ಮ’. ಇದೇ ಜೀವನವೇನೋ.

shivu.k said...
This comment has been removed by the author.
shivu.k said...

ರೋಹಿಣಿ ಮರಿ,

ನನ್ನ ಕೆಲಸದ ಅನುಭವಗಳ ಒಂದು ತುಣುಕು ಇದಷ್ಟೇ...ಜವಾಬ್ದಾರಿ ಮತ್ತು ಸಂತೋಷಗಳೆರಡನ್ನು ಬ್ಯಾಲೆನ್ಸ್ ಮಾಡುವವನು ಇಂಥ ಕೆಲಸಗಳಲ್ಲಿ ಯಶಸ್ವಿಯಾಗುತ್ತಾನೆ....ನಾನು ಈ ಕೆಲಸದ ಜೊತೆಗೆ ಮದುವೆ ಫೋಟೊ ತೆಗೆಯಲು ಹೋಗುತ್ತೇನೆ....ಆಗ ಕೆಲವೊಮ್ಮೆ..ರಾತ್ರಿ ೨-೩ ಗಂಟೆಯವರೆಗೆ ಮದುವೆ ಫೋಟೊ ತೆಗೆದು ಮನೆಗೆ ಬಂದು ೧ ಅಥವ ೨ ಗಂಟೆ ಕೋಳಿನಿದ್ರೆ ಮಾಡಿ, ಮತ್ತೆ ನಾಲ್ಕು ಗಂಟೆ ಎದ್ದು ಹೋಗುವುದಿದೆಯಲ್ಲ....ಅದರ ಬಗ್ಗೆ ಮುಂದೆ ಎಂದಾದರೂ ಬರೆದೇನು....ಹೀಗೆ ಬರುತ್ತಿರು....ಥ್ಯಾಂಕ್ಸ್...

PaLa said...

ಶಿವು,
ನಿಮ್ಮ ಜವಾಬ್ದಾರಿಯನ್ನು ಇಷ್ಟೊಂದು ಚೆನ್ನಾಗಿ ನಿಭಾಯಿಸುತ್ತಾ, ಇಷ್ಟೆಲ್ಲಾ ಹವ್ಯಾಸಗಳನ್ನು ರೂಢಿಸಿಕೊಂಡಿರುವುದನ್ನು ನೋಡಿ ನಿಜಕ್ಕೂ ಸಂತೋಷ ಆಗ್ತಾ ಇದೆ.
ಶುಭಾಷಯಗಳೊಂದಿಗೆ
--
ಪಾಲ

shivu.k said...

ಕೃಪಾ ಅಕ್ಕ,

ನೀವಂದುಕೊಂಡಂತೆ ಇದು ಕಷ್ಟವೇನಲ್ಲ...ಇದರ ಜೊತೆಗೆ ಆಗಾಗ ಬೆಂಗಳೂರಿಗೆ ರಚ್ಚೆಹಿಡಿದಂತೆ ಬರುವ ಸೈಕ್ಲೋನ್ ಮಳೆಯನ್ನು ಬೆಳಗಿನ ಸಮಯದಲ್ಲಿ ನೆನೆಸಿಕೊಳ್ಳಿ...ಜೊತೆಗೆ...ಜೇಬಿನಲ್ಲಿ ಹಣವಿಲ್ಲದ್ದು...ಟೂ ವೀಲರುಗಳು ಕೆಲಸದ ಮದ್ಯೆ ಪಂಚರ್ ಆಗುವುದು....ಇನ್ನೂ ಏನೇನೋ ಇವೆ...ಅವೆಲ್ಲ ಸೇರಿದಾಗ ನಮಗೆ ಅಗ್ನಿಪರೀಕ್ಷೆ...

ಅವುಗಳನ್ನೆಲ್ಲಾ ತಿಳಿಯಲು ಹೀಗೆ ಬರುತ್ತಿರಿ...ಥ್ಯಾಂಕ್ಸ್...

shivu.k said...

ಮನಸು ಮೇಡಮ್,

ನಮ್ಮ ಗ್ರಾಹಕರುಗಳಿಗೆ.......ನಮ್ಮ ಎಷ್ಟೋ ಗ್ರಾಹಕರುಗಳಿಗೆ ದಿನಪತ್ರಿಕೆ ಕೆಲಸಗಾರರು, ಏಜೆಂಟರುಗಳ ಮದುವೆ....ಸಾವು....ಇವುಗಳ ಮದ್ಯೆ ವ್ಯತ್ಸಾಸವೇನಿಲ್ಲ...ಎಷ್ಟೋ ಜನ ೫ ಗಂಟೆಗೆ ಎದ್ದು ಕುಳಿತು...ನಮ್ಮದೇ ದ್ಯಾನದಲ್ಲಿರುತ್ತಾರೆ...ಈ ಕತೆಯನ್ನೆಲ್ಲಾ ಕೇಳುವವರು ಯಾರು?

ಇದು ನಮ್ಮ ವೃತ್ತಿಯ ಕೆಲವೇ ಪುಟ್ಟ ಅನುಭವಗಳು...ಕೆಲವನ್ನು ಹೇಳಲು..ಅಥವ ಬರೆಯಲು ಆಗದಷ್ಟು ಮಟ್ಟ ತಲುಪಿದ್ದು ಇದೆ...ಥ್ಯಾಂಕ್ಸ್...ಹೀಗೆ ಬರುತ್ತಿರಿ...

shivu.k said...

ಬಾಲು ಸರ್,

ನನ್ನ ಈ ಜವಾಬ್ದಾರಿಯಂತೆ, ವಿತರಕರು, ವರದಿಗಾರರು...ಇದೆಲ್ಲಕ್ಕಿಂತ ಮುಖ್ಯವಾಗಿ ಮೆಟಡಾರ್ ವಾಹನದಲ್ಲಿ ಪತ್ರಿಕೆ ಸಾಗಿಸುವವರದ್ದು ಕೂಡ ದೊಡ್ಡ ಜವಾಬ್ದಾರಿಯೇ...ಅಲ್ಲವೇ...

shivu.k said...

ಪರಂಜಪೆ ಸರ್,

ನಿಮ್ಮ ಮಾತಿನಂತೆ.ಎಲ್ಲಾ ಆಗಿಬಿಟ್ಟಿದೆ........ಅದಕ್ಕೆ ಇದರ ಜೊತೆ...ಮದುವೆ ಫೋಟೋ-ವಿಡಿಯೋ.. ಬರವಣಿಗೆ...ಹವ್ಯಾಸಿ ಛಾಯಾಗ್ರಹಣ...ಬ್ಲಾಗು...ಇತ್ಯಾದಿಗಳಿಗೆ...ನಾನು ಈಗ adjustment ನಲ್ಲಿ ಸಿಕ್ಕಪಟ್ಟೆ ಪಳಗಿಬಿಟ್ಟಿದ್ದೇನೆ

b.saleem said...

ಶಿವು ಸರ್
ಪತ್ರಿಕೆ ವಿತರಣೆ ಕೆಲಸ ತುಂಬಾ ಸವಾಲಿನದ್ದು.
ಅಂತಹ ಕೆಲಸದೊಂದಿಗೆ ನಿಮ್ಮ ಬದುಕನ್ನು ತುಂಬಾ ಚನ್ನಾಗಿ ರೂಪಿಸಿಕೊಂಡಿದ್ದಿರಿ.
ಮತ್ತೊಮ್ಮೆ ಬೊಳು ತಲೆಯಿಂದ ಭೂಪಟ ತೊರಿಸಿದ್ದಕ್ಕೆ ಧನ್ಯವಾದಗಳು.
ತಡವಾಗಿ ಪ್ರತಿಕ್ರಿಯಿಸಿದ್ದಕ್ಕೆ ಕ್ಷಮೆಯಿರಲಿ

ಚಿತ್ರಾ said...

ಶಿವೂ,
ಲೇಖನ ಸರಳವಾಗಿದ್ದರೂ ನಿಮ್ಮ ಕೆಲಸ ವೈಯುಕ್ತಿಕ ಜೀವನದ ಮೇಲೆ ಬೀರುವ ಪರಿಣಾಮಗಳನ್ನು ಗಂಭೀರವಾಗಿಯೇ ತೆರೆದಿಟ್ಟಿದೆ. ಬದುಕಿನಲ್ಲಿ ಎಷ್ಟೋ ಹೊಂದಾಣಿಕೆಗಳು ಅನಿವಾರ್ಯವಾದರೂ ಕೆಲವೊಮ್ಮೆ ಮನಃಶಾಂತಿಗೆ ಸವಾಲಾಗಿಬಿಡುತ್ತವೆ . ತಾಳ್ಮೆಯನ್ನು ಪರೀಕ್ಷಿಸುತ್ತವೆ.
ನಾನೂ ಬಹಳಷ್ಟು ಸಲ ನಮ್ಮ ಪೇಪರ್ ನವನಿಗೆ ಫೋನ್ ಮಾಡಿ ತಲೆ ತಿನ್ನುತ್ತಿರುತ್ತೇನೆ. (ಹಾಂ , ಅದು ೮ ಗಂಟೆ ಯಾದರೂ ಪೇಪರ್ ಪತ್ತೆಯಿಲ್ಲದಿದ್ದರೆ ಮಾತ್ರ ! ) ಅವನೂ ಎಂದಿನಂತೆ ,ಹುಡುಗ್ರು ಬಂದಿಲ್ಲ ಮೇಡಂ ಎಂಬ ಮಾಮೂಲು ಉತ್ತಾರಾನೇ ಕೊಡ್ತಿರ್ತಾನೆ !!

ಮಲ್ಲಿಕಾರ್ಜುನ.ಡಿ.ಜಿ. said...

ಶಿವು,
ನಿಮ್ಮ ಕೆಲಸದ ಬಗ್ಗೆ ಗೊತ್ತಿದ್ರೂ,"ನಾವೆಲ್ಲಾ ಎದ್ದೇಳೋಷ್ಟೊತ್ತಿಗೆ ನಿಮ್ಮ ಕೆಲಸ ಮುಗಿದಿರುತ್ತೆ" ಅಂತ ರೇಗಿಸುತ್ತಿರುತ್ತೀವಿ.
ನಿಮ್ಮ ಸ್ಥಾನದಲ್ಲಿ ನಿಂತು ನೋಡಿದ್ರೇನೇ ಗೊತ್ತಾಗೋದು ಅದರ ಕಷ್ಟ ಸುಖ.
ಎಲ್ಲರೂ ಪೇಪರ್ ನೋಡ್ತೀವಿ. ಆದರೆ ಅದು ಹೇಗೆ ಬರುತ್ತೆ ಎಂಬ ಬಗ್ಗೆ ಯೋಚಿಸುವುದಿಲ್ಲ. ನಮಗೆ ತಿಳಿಯದ ಆ ಮುಖಗಳನ್ನು ಚೆನ್ನಾಗಿ ಪರಿಚಯಿಸುತ್ತಿರುವಿರಿ.

hEmAsHrEe said...

ಶಿವು ಅವ್ರೇ,
ನಿಮ್ಮ ಬರಹ ಓದಿ ಬೆಂಗಳೂರಿನಲ್ಲಿದ್ದಾಗಿನ ದಿನಗಳು ನೆನಪಾದವು. ಅದೆಷ್ಟು ಸಲ ನಮ್ಮ ಪೇಪರ್ ಏಜೆಂಟ್‍ಗೆ ಫೋನ್ ಮಾಡಿ ಪೇಪರ್ ಇನ್ನೂ ಬರ್ಲಿಲ್ವಲ್ಲಾ ಸಾರ್ ಅಂತ ಕೇಳಿದ್ರೆ ಅವ್ರು, ಈಗಷ್ಟೇ ಮಗಳನ್ನು ಸ್ಕೂಲಿಗೆ ಬಿಟ್ಟು ಬರ್ತಾ ಇದ್ದೇನೆ, ಹುಡುಗ್ರು ಬಂದಿಲ್ಲ ಇವತ್ತು, ನಾನೇ ಬಂದು ಮನೆಗೆ ಪೇಪರ್ ಹಾಕಿ ಹೋಗ್ತೇನೆ ಅಂತಿದ್ರು. ಕರ್ತವ್ಯ ಪ್ರಜ್ನೆ ಮತ್ತು ಅನಿವಾರ್ಯತೆ ಕೂಡ ಅಲ್ವಾ.
thanks for the write up.

shivu.k said...

ಕುಲಕರ್ಣಿ ಸರ್,

ಕಳೆದ ಲೇಖನ ಭೂಪಟಕ್ಕೆ ಕಾಮೆಂಟು ಹಾಕಲಿಲ್ಲವೆಂದು ಬೇಸರವಿಲ್ಲ..ನೋಡಿದ್ದಿರಲ್ಲ...ಅದೇ ಸಂತೋಷ...ಮತ್ತೆ ನಮ್ಮ ನಿತ್ಯ ಜೀವನವನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್...ಹೀಗೆ ಬರುತ್ತಿರಿ....

shivu.k said...

ಸುನಾಥ್ ಸರ್,

ನಮ್ಮ ಬೆಳಗಿನ ವೃತ್ತಿಯಲ್ಲಿ ಇನ್ನೂ ನೂರಾರು ಸಮಸ್ಯೆಗಳಿವೆ..ಅದ್ರೂ ನಿಮ್ಮ ಮಾತನ್ನು ಪಾಲಿಸಿಕೊಂಡು ಹೋಗುತ್ತಿದ್ದೇವೆ...ಥ್ಯಾಂಕ್ಸ್...

shivu.k said...

ಶಿವ ಪ್ರಕಾಶ್,

ಇಂಥ ಪರಿಸ್ಥಿತಿಗಳಲ್ಲಿ ನಮ್ಮ ಸ್ಥಿತಿ...ದೇವರೇ ಗತಿ.....ಸಾಧ್ಯವಾದರೆ ಹಾಲಿನವರ ಬಗ್ಗೆ ಎಂದಾದರೂ ಬರೆಯುತ್ತೀನಿ...ಧನ್ಯವಾದಗಳು....

shivu.k said...

ವಿನುತಾ ಮೇಡಮ್,

ನಮಗೆ ಯಾರ ಸಾವೇ ಅಗಲಿ....ಅದಕ್ಕೆ ಬೆಲೆ ಇಲ್ಲ...

ಡಿವಿಜಿ ರವರ ಮಂಕುತಿಮ್ಮನ ಅನೇಕ ಕಗ್ಗಗಳು ನಮ್ಮ ವೃತ್ತಿಜೀವನದಲ್ಲಿ ಅನ್ವಯವಾಗುತ್ತವೆ....

ಸಾವಿನ ವಿಚಾರದಲ್ಲಿ ದಿನಪತ್ರಿಕೆ ಹಂಚುವಾಗ ಅಪಘಾತವಾಗಿ ಸತ್ತ ಹುಡುಗನ ಬಗ್ಗೆ ಯಾವಾಗಲಾದರೂ ಬರೆಯುತ್ತೇನೆ...ಧನ್ಯವಾದಗಳು...

shivu.k said...

ಪಾಲಚಂದ್ರ,

ನನಗೆ ಇಷ್ಟೇಲ್ಲಾ ಜವಾಬ್ದಾರಿಗಳನ್ನು ಸುಲಭವಾಗಿ ನಿರ್ವಹಿಸುತ್ತಿರುವುದು....ನಿಮ್ಮಂಥ ಗೆಳೆಯರ ಪ್ರೋತ್ಸಾಹದಿಂದಾಗಿಯೇ ಅಂತ ಹೇಳಬಲ್ಲೇ...ಥ್ಯಾಂಕ್ಸ್...

shivu.k said...

ಬಿ.ಸಲೀಂ,

ಮತ್ತೆ ಬ್ಲಾಗಿಗೆ ಬಂದಿದ್ದಕ್ಕೆ ಥ್ಯಾಂಕ್ಸ್....ದಿನಪತ್ರಿಕೆ ಕೆಲಸದ ಮುಂಜಾನೆ ಸ್ವರ್ಗದ ಬಗ್ಗೆ ಬರೆಯಲು ನಿಮ್ಮ ಮಾತುಗಳು ಸ್ಪೂರ್ತಿ ನೀಡುತ್ತಿವೆ....

Ittigecement said...

ಶಿವು...

ಲೇಖನ ತುಂಬಾ ಚೆನ್ನಾಗಿದೆ..

ಕೆಲಸದ ಮೇಲಿನ ಶ್ರದ್ಧೆ.. , ಆಸಕ್ತಿ..
ನಮ್ಮನ್ನು ಮೇಲ್ಮಟ್ಟಕ್ಕೆ ತರುತ್ತದೆ..

ನೀವು ಅದರಲ್ಲಿ ಸಂತೋಷ ಅನುಭವಿಸಿದ್ದಲ್ಲದೆ..
ನಮಗೂ ಉಣ ಬಡಿಸಿದ್ದೀರಿ...

ಚಂದದ ಲೇಖನಕ್ಕೆ ಅಭಿನಂದನೆಗಳು...

ಸಂದೀಪ್ ಕಾಮತ್ said...

ನಿಮ್ ಕೆಲ್ಸ ಎಷ್ಟು ಕಶ್ಟ:(

bhadra said...

ಅನುಭವ ಲೇಖನವನ್ನು ಸೊಗಸಾಗಿ ನಿರೂಪಿಸಿದ್ದೀರಿ - ನಿಮ್ಮ ಜೀವನವನ್ನು ಕಾಯಕಕ್ಕೇ ಮುಡುಪಿಟ್ಟಿರುವುದು ಶ್ಲಾಘನೀಯ - ನಿಮ್ಮಂತಹವರು ಸಿಗುವುದು ಬಹಳ ಅಪರೂಪ - ಅಲ್ಲದೇ, ನೀವು ಅನುಭವಿಸಿ, ಅನುಭವಿಸುತ್ತಿರುವ ಪಾಡು ಇತರರಿಗೆ ಬಾರದಿರಲೆಂಬ ಮನದ ಚಿಂತನೆ ಉತ್ತಮವಾದದ್ದು. ನಿಮ್ಮಂತಹವರ ಸಂತತಿ ಇನ್ನೂ ಹೆಚ್ಚಿದರೆ, ದೇಶ ಉನ್ನತಿ ಕಾಣುವುದರಲ್ಲಿ ಸಂಶಯವೇ ಇಲ್ಲ

ಗುರುದೇವ ದಯಾ ಕರೊ ದೀನ ಜನೆ

Unknown said...

""ಆಹಾ ನನ್ನ ಮದುವೆಯಂತೆ"" ನಿಮ್ಮ ಲೇಖನದ ತಲೆ ಬರಹವೇ ನನಗೆ ಒಂದೆರಡು ನಿಮಿಷ ನಗೆ ತರಿಸಿತು.
ನಿಮ್ಮ ಮದುವೆಯ ಅನುಭವವನ್ನು ತುಂಬಾ ಸೊಗಸಾಗಿ ಚಿತ್ರಿಸಿದ್ದಿರಿ. ಆದರೂ ನೀವು ಅಷ್ಟು ಬೇಗ ನಿಮ್ಮ ಕೆಲಸಕ್ಕೆ ಹಾಜರು ಆಗಿದ್ದು ತಪ್ಪು..:)-
ನಿಮ್ಮ ಸುನಿಲ್ ಮಲ್ಲೇನಹಳ್ಳಿ

ತೇಜಸ್ವಿನಿ ಹೆಗಡೆ said...

ಶಿವು ಅವರೆ,

ನಿಮ್ಮ ಮನದ ಬೇಗುದಿಯನ್ನು ಓದಿ ಮನಸು ಬೇಸರಗೊಂಡಿತು. ನಿಜ... ಜೀವನವೇ ಹೀಗೇ.. ಕಷ್ಟ-ನಷ್ಟಗಳ ನಡುವೆ ತೂಗುಯ್ಯಾಲೆ. ನಿಮ್ಮ ಈ ಬರಹದಿಂದ ಪೇಪರ್ ವಿತರಕರ ಸಮಸ್ಯೆಗಳು ಅರ್ಥವಾದವು. ಇನ್ನು ಮುಂದೆ ನಮ್ಮ ಮನೆಗೆ ಪೇಪರ್ ತುಸು ತಡವಾಗಿಯೋ ಇಲ್ಲ ಒಂದು ದಿನ ಬರದೆಯೋ ಇದ್ದರೆ ಸಹನೆಯಿಂದಿರುವೆ. ಅವರಿಗೂ ಸ್ವಂತ ಸಮಸ್ಯೆಗಳಿರುತ್ತವೆ ಎಂಬುದನ್ನು ಮನದಲ್ಲಿಟ್ಟುಕೊಂಡು ವ್ಯವಹರಿಸುವೆ. ಧನ್ಯವಾದಗಳು.

ಪಾಚು-ಪ್ರಪಂಚ said...

ಶಿವು ಅವರೇ,

ಒಂದೇ ಲೇಖನದಲ್ಲಿ, ಕರ್ತವ್ಯ, ಹಾಸ್ಯ, ನೋವು, ದುಗುಡ ಎಲ್ಲ ಸೇರಿದೆ...! ಚಂದದ ಬರಹ..

ಅಭಿನಂದನೆಗಳು.
ಪ್ರಶಾಂತ್ ಭಟ್

Guruprasad said...

ಶಿವೂ,
ನಿಮ್ಮ ಈ ಲೇಖನ ತುಂಬ ಚೆನ್ನಾಗಿ ಇದೆ. ಕರ್ತವ್ಯ , ಮನೆಯ ಜಂಜಾಟ ಇದರ ನಡುವೆ ಕೆಲಸದ ಒತ್ತಡ ಒಹ್ ........ ಕೆಲವೊಮ್ಮೆ ತುಂಬ ಕಷ್ಟ ಅಂತ ಅನ್ನಿಸುವುದುಂಟು ಈ ಜೇವನ ಎಂಬ ಸಮುದ್ರ,, ಆದರು,,,ಈಜ ಬೇಕು ಹಾಗೆ ಈಜಿಕೊಂಡು ಮುಂದೆ ಹೋಗುತ್ತಾ ಇರಬೇಕು,, ನಿಮ್ಮ ಈ ಚಿಕ್ಕ ಫ್ಲಾಶ್ ಬ್ಯಾಕ್. ಅರ್ಥ ಗರ್ಬಿಥಾವಾಗಿ ಇದೆ......

ಗುರು

Greeshma said...
This comment has been removed by the author.
Greeshma said...

ಎಲ್ಲ ವೃತ್ತಿಯಲ್ಲೂ ಒಂದಲ್ಲ ಒಂದ್ ರೀತಿ ಕಷ್ಟ ಇದ್ದೆ ಇರತ್ತೆ. ಆದ್ರೆ ನಿಮ್ಮ ವ್ರುತ್ತಿಯಂತಹ ಕೆಲೊದ್ರಲ್ಲಿ ಮಾತ್ರ ಮದುವೆಗೂ ಪುರುಸೊತ್ತು ಮಾಡಿಕೊಳ್ಳೋದಕ್ಕೆ ಆಗದೇ ಇರೋ ಕಷ್ಟ.. ಒಂಥರಾ ಬೇಜಾರ್ ಆಯ್ತು.
ಕೆಲಸದ ಜವಾಬ್ದಾರಿ ಮತ್ತು ವಯಕ್ತಿಕ ಜೀವನನ balance ಮಾಡೋದೇ ಎಲ್ಲರಿಗೂ ಇರೋ challenge ಅಲ್ವಾ?

shivu.k said...

ಚಿತ್ರ ಮೇಡಮ್,

ನಮ್ಮ ಕೆಲಸದ ಕೆಲವು ಅನುಭವ ನಿಮಗಾಗಿದೆ ಅಂದುಕೊಳ್ಳುತ್ತೇನೆ...ಇದರಿಂದಾಗುವ ಗಂಬೀರ ಸಮಸ್ಯೆಗಳನ್ನು ನನ್ನಾಕೆ ಎಷ್ಟು ಅಂತ ಸಹಿಸಿಕೊಳ್ಳುತ್ತಾಳೆ ಹೇಳಿ....ಅವಳು ಅನೇಕ ಬಾರಿ ಕೆಲಸ ಬದಲಾಯಿಸಿ[ಈ ಕೆಲಸವು ಕೂಡ ಅವಳ ಮನಃಶಾಂತಿಗೆ ತೊಂದರೆ ಕೊಟ್ಟಿದೆ]ಅಂತ ಜೋರು ಮಾಡಿದ್ದಾಳೆ..
ಇನ್ನು ಮುಂದೆ ನೀವು ನಿಮ್ಮ ದಿನಪತ್ರಿಕೆ ವಿತರಕರಿಗೆ [ಅವರ ಎಲ್ಲಾ ಕಷ್ಟ ಗೊತ್ತಾಗಿರುವುದರಿಂದ]ಪೋನ್ ಮಾಡುವುದಿಲ್ಲವೆಂದುಕೊಳ್ಳುತ್ತೇನೆ...ಥ್ಯಾಂಕ್ಸ್...

Rajesh Manjunath - ರಾಜೇಶ್ ಮಂಜುನಾಥ್ said...

ಶಿವೂ ಸರ್,
ದಿನ ಪತ್ರಿಕೆ ಹಂಚುವ ಹುಡುಗನಾಗಿ ನನ್ನ ಹೈಸ್ಕೂಲು ದಿನಗಳಲ್ಲಿ ಕೆಲಸ ಮಾಡಿದ್ದರಿಂದ ಇದರ ಅನುಭವ ನನಗೆ ಚೆನ್ನಾಗಿಯೇ ಇದೇ, ಬೆಳಿಗ್ಗೆ ಪತ್ರಿಕೆ ಹಂಚಿ, ನೇರ ಪರೀಕ್ಷೆ ಕೋಣೆಗೆ ನಡೆದ ದಿನವು ನೆನಪಿದೆ. ಆದರೆ ಇಷ್ಟ ಪಟ್ಟು ಮಾಡುವ ಕೆಲಸ ಕೊಡುವ ತೃಪ್ತಿ ಅಪರಿಮಿತ ಅಲ್ಲವೇ...

Srinidhi said...

ಬೆಳಿಗ್ಗೆ ಎದ್ದ ತಕ್ಷಣ ಪೇಪರ್ರು ಕೈಗೆ ಬರ್ಲಿಲ್ಲ ಅಂದ್ರೆ ಸಿಟ್ಟಾಗುವ ನಾವು ಆ ಪೇಪರ್ರು ನಮ್ ಕೈಗೆ ತಲ್ಪೋದಕ್ಕೆ ಎಷ್ಟೆಲ್ಲ ಜನರು ಶ್ರಮ ಪಟ್ಟಿರ್ತಾರೆ ಅಂತ ಯಾವಾಗ್ಲೂ ಯೋಚ್ನೆ ಮಾಡಿರಲ್ಲ... ಅಂಥ ಯೋಚ್ನೆ ಮಾಡೋ ಹಾಗೆ ಮಾಡಿದ್ದಕ್ಕೆ ಥ್ಯಾಂಕ್ಸು :-)

shivu.k said...

ಮಲ್ಲಿಕಾರ್ಜುನ್,

ನಿಮಗೆ ನನ್ನ ಕಷ್ಟ ಚೆನ್ನಾಗಿ ಗೊತ್ತಿದೆ...ಅದರ ಅನುಭವವೂ ಅಗಿರಬೇಕು...ಅಲ್ಲವೇ....ನಾವಿಬ್ಬರೂ ಮೈಸೂರು ರೈಲು ಬೆಳಿಗ್ಗೆ ೭ ಗಂಟೆಗೆ ಹಿಡಿಯಲು ಹಿಂದಿನ ರಾತ್ರಿಯೇ...ಮಾಡುವ ಯೋಚನೆ-ಯೋಜನೆಗಳು..ಮತ್ತೆ ನಿಮಿಷ-ನಿಮಿಷಗಳ ಲೆಕ್ಕಾಚಾರ...ಕೊನೆಗೆ ನನ್ನ ಈ ಕೆಲಸ ಮುಗಿದು ಟಿಕೆಟ್ ತೆಗೆದುಕೊಂಡು ನೀವು ಜೊತೆಯಾಗಿ ರೈಲು ಹತ್ತುವ ವೇಳೆಗೆ ಇನ್ನೂ ಎರಡು ನಿಮಿಷ, ಐದು ನಿಮಿಷಗಳಿರುತ್ತದೆ...ಅಲ್ಲವೇ.. ಅದರೆ ಎಂದು ರೈಲು ನಮಗೆ ತಪ್ಪಿಹೋಗಿಲ್ಲ...
ಇಂಥ ಅನೇಕ ಅನುಭವಗಳು ನನ್ನ ಜೊತೆ ನಿಮಗೆ ಆಗಿದೆ...

shivu.k said...

ಹೇಮಾಶ್ರಿ ಮೇಡಮ್,

ನನ್ನ ಲೇಖನ ಓದಿದ ಮೇಲೆ ಮತ್ತೆ ನೀವು ನಿಮ್ಮ ಏಜೆಂಟಿಗೆ ಮತ್ತೆ ಫೋನ್ ಮಾಡಿ ಪೇಪರ್ ಬಂದಿಲ್ಲ ಅಂತ ಹೇಳುವುದಿಲ್ಲ ಅಂದುಕೊಂಡಿದ್ದೀನಿ....

ಅಂದಹಾಗೆ ನೀವು ಇರುವ ಅಮೇರಿಕಾದಲ್ಲಿ ಅಲ್ಲಿನ ನಿತ್ಯದ ದಿನಪತ್ರಿಕೆ ವಿತರಕರ ಕತೆಯನ್ನು ನೀವು ಗಮನಿಸಿರುತ್ತೀರಿ...ನಮಗೆ ಅದರ ಕತೆಯನ್ನು ಹೇಳಿ...ಕೇಳಲು ಸಿದ್ಧನಿದ್ದೇನೆ....

shivu.k said...

ಪ್ರಕಾಶ್ ಸರ್,

ನೀವು ನನ್ನನ್ನು ಮೊದಲ ಬಾರಿ ಬೇಟಿಯಾಗಿದ್ದೆ ನಾನು ದಿನಪತ್ರಿಕೆ ವಿತರಕನ ಧಿರಿಸಿನಲ್ಲಿದ್ದಾಗ. ಮುಂಜಾನೆ ಹೊತ್ತಿನಲ್ಲಿ....ನನ್ನ ಅವತಾರ ನೋಡಿ ನಿಮಗೇನನ್ನಿಸಿತೋ...ಗೊತ್ತಿಲ್ಲ...ಗೆಳೆತನವಂತೂ ಬೆಳೆಯಿತು....

ಥ್ಯಾಂಕ್ಸ್...

shivu.k said...

ಸಂದೀಪ್,

ನನ್ನ ಕೆಲಸ ಕಷ್ಟದ ಜೊತೆಗೆ ಇಷ್ಟ!!

shivu.k said...

ಶ್ರೀನಿವಾಸ್ ಸರ್,

ನೀವು ನನ್ನ ಬಗ್ಗೆ ಮತ್ತು ನನ್ನ ವೃತ್ತಿಭಾಂದವರ ಬಗ್ಗೆ, ಇಂಥ ವೃತ್ತಿಗಳ ಬಗ್ಗೆ ಇಟ್ಟಿರುವ ಅಭಿಮಾನಕ್ಕೆ ನಾನು ಚಿರಋಣಿ. ಮತ್ತೆ ಈ ಕೆಲಸ ಬದಲಿಸಬೇಕೆಂದು ನನ್ನ ಶ್ರೀಮತಿ ಅದೆಷ್ಟೋ ಸಲ ಹೇಳಿದರೂ ನಾನು ಇದಕ್ಕೆ ಹೊಂದಿಕೊಂಡುಬಿಟ್ಟಿದ್ದೇನೆ....ಬೇರೆಯವರನ್ನು ನೋಡಿದಾಗ ಹೋಲಿಸಿಕೊಂಡಾಗ ಕೆಲವೊಮ್ಮೆ ಬೇಸರವಾದರೂ, ಅವರ ಕಷ್ಟಗಳನ್ನು ನನ್ನ ಸಂತೋಷಗಳಿಗೆ ಹೋಲಿಸಿಕೊಂಡು....ನಾನೆ ಧನ್ಯ ಅಂದುಕೊಳ್ಳುತ್ತೇನೆ....ಪ್ರತಿಕ್ರಿಯಿಸಿದ್ದಕ್ಕೆ ಥ್ಯಾಂಕ್ಸ್...

shivu.k said...

ಸುನಿಲ್,

ನನ್ನ ಲೇಖನ ನಗು ತರಿಸಿದೆಯೆಂದರೆ ನಾನು ಬರೆದಿದ್ದಕ್ಕೂ ಸಾರ್ಥಕವೆನಿಸುತ್ತದೆ....ಮತ್ತೆ ಪ್ರತಿ ನಗುವಿನ ಹಿಂದೆ ನೋವು ಇದ್ದೇ ಇರುತ್ತದೆ..

ನೀವು ಹೇಳೀದಂತೆ ನಾನು ಮದುವೆಯ ಮರುದಿನ ಕೆಲಸಕ್ಕೆ ಹಾಜರಾಗಿದ್ದು ತಪ್ಪು ಅಂತ ಗೊತ್ತಿತ್ತು...ಅದರೆ ವಿಧಿಯಿಲ್ಲ..ಹುಡುಗರ ತೊಂದರೆ...ಅದಕ್ಕೆ ಬಂದೆ..

ಪ್ರತಿಕ್ರಿಯಿಸಿದ್ದಕ್ಕೆ ಥ್ಯಾಂಕ್ಸ್...

shivu.k said...

ತೇಜಸ್ವಿನಿ ಮೇಡಮ್,

ನಮ್ಮ ಕೆಲಸದ ಕಷ್ಟ-ಸುಖ[ಸುಖವನ್ನು ಬರೆಯುತ್ತೇನೆ.]ಗಳನ್ನು ಈ ಲೇಖನದಿಂದ ತಿಳಿದಿದ್ದಕ್ಕೆ ಥ್ಯಾಂಕ್ಸ್...
ಮತ್ತೆ ಪೇಪರಿನವರು ಮಾತ್ರವಲ್ಲ...ಹಾಲು ವಿತರಕರದ್ದು ನಮಗಿಂತ ದೊಡ್ಡ ಸಮಸ್ಯೆ. ಅವರ ಜೊತೆಯೂ ಸಹಕರಿಸಿ..ಧನ್ಯವಾದಗಳು...

shivu.k said...

ಪ್ರಶಾಂತ್ ಭಟ್,

ಈ ಲೇಖನದಲ್ಲಿ ನನಗೆ ಪ್ರತಿನಿತ್ಯ ಆಗಿರುವ ಅನುಭವವನ್ನು ಬರೆದಿದ್ದೇನೆ....ಥ್ಯಾಂಕ್ಸ್....ಹೀಗೆ ಬರುತ್ತಿರಿ...

shivu.k said...

ಗುರು,

ನಾನು ಒಮ್ಮೆ ಇದೇ ಕಾರಣಕ್ಕಾಗಿ ನನ್ನ ಶ್ರೀಮತಿಯ ಅಣ್ಣನ ಮದುವೆಗೆ ತಪ್ಪಿಸಿಕೊಂಡಿದ್ದಕ್ಕೆ ಅವರೆಲ್ಲಾ ನನ್ನ ಬಗ್ಗೆ ಬೇಸರಗೊಂಡಿದ್ದರು..

ನೀವು ಹೇಳಿದಂತೆ ಜೀವನ ಸಮುದ್ರದಲ್ಲಿ ವಿರುದ್ದ ದಿಕ್ಕಿನಲ್ಲಿ ಈಜಬೇಕಾದಾಗ ಈ ರೀತಿ ಕತ್ತಿನ ಹಲಗಿನ ಮೇಲಿನ ನಡಿಗೆ ಮುಂದುವರಿಸಬೇಕಾಗುತ್ತದೆ...

shivu.k said...

ಗ್ರೀಷ್ಮ ಮೇಡಮ್,

ನಿಮ್ಮ ಮಾತು ನಿಜ...ಸಾವು, ನೋವು, ಮದುವೆ, ಸಂಬ್ರಮ ಯಾವುದೇ ಇರಲಿ...ಅವಕ್ಕೆ ನಮ್ಮ ವೃತ್ತಿಯಲ್ಲಿ ಸಂಪೂರ್ಣ ಅನುಭವಿಸಲು ಸಾಧ್ಯವಾಗದು...
ನಮ್ಮ ಕತೆಯ ಬೇಸರವನ್ನು ಹಂಚಿಕೊಂಡಿದ್ದಕ್ಕೆ ಥ್ಯಾಂಕ್ಸ್...

shivu.k said...

ರಾಜೇಶ್,

ದಿನಪತ್ರಿಕೆಯ ಕೆಲಸ ನೀವು ಮಾಡಿರುವುದರಿಂದ...ನಿಮಗೆ ನಮ್ಮ ಕಷ್ಟ-ಸುಖಗಳು ನನಗೆ ಗೊತ್ತು..ನೀವು ಆಗ ಮಾಡಿದಂತೆ ಈಗಿನ ಹುಡುಗರು ಮಾಡುವುದಿಲ್ಲ...ಮತ್ತು ಅವರಿಗೆ ಅಂತಹ ಕಾಳಜಿಯೂ ಇರುವುದಿಲ್ಲ..

ಕಷ್ಟವಾದರೂ ಇಷ್ಟಪಟ್ಟು ಮಾಡುವುದರಲ್ಲಿನ ಆನಂದವೇ ಬೇರೆ...ಥ್ಯಾಂಕ್ಸ್...

shivu.k said...

ಶ್ರೀನಿಧಿ ಸರ್,

ನನ್ನ ಬ್ಲಾಗಿಗೆ ಸ್ವಾಗತ..

ಬೆಳಿಗ್ಗೆ ಎದ್ದ ದಿನಪತ್ರಿಕೆ ಸಿಗದಿದ್ದಲಿ...ಸಿಟ್ಟಾಗುವುದಿಲ್ಲವೆಂದು ಹೇಳಿದ್ದೀರಿ ಥ್ಯಾಂಕ್ಸ್...ಇದು ನನ್ನ ಲೇಖನದ ಪಲಿತಾಂಶವೆಂದುಕೊಳ್ಳುತ್ತೇನೆ....ಥ್ಯಾಂಕ್ಸ್....ಹೀಗೆ ಬರುತ್ತಿರಿ..

shivu.k said...

ಸತ್ಯನಾರಾಯಣ ಸರ್ ಹೇಳಿದರು,

ಶಿವು ಅವರೇ
ಈಗಾಗಲೇ ನಾನು ನಿಮ್ಮ ಬ್ಲಾಗನ್ನು ಹಿಂಬಾಲಿಸಿದ್ದೇನೆ. ಇವತ್ತು ಕೂಡಾ ನೋಡಿದೆ. ಆಹಾ ನನ್ನ ಮದುವೆಯಂತೆ ಓದಿದೆ. ನೀವು ಮದುವೆಯ ಹಿಂದನ ದಿನ ಲೇಟಾಗಿ ಬಂದದ್ದು ತಿಳಿಯಿತು. ಬಹುಶಃ ಮದುವೆಯಾದಮೇಲೆ 'ನಿಮ್ಮ ಮನೆಯವರು' ವಿಚಾರಸಿಸಿಕೊಂಡಿರಲೂ ಬಹುದು!
ಪ್ರತಿಕ್ರಿಯೆಗೆ ಧನ್ಯವಾದಗಳು
ಸತ್ಯನಾರಾಯಣ

ಗಿರಿ said...

ಶಿವಣ್ಣ,
ನಿಮ್ಮ ಲೇಖನಗಳು ನೈಜತೆಗೆ ಕನ್ನಡಿ... ಸೂಕ್ಷ್ಮವಾಗಿ ಬರೆದಿದ್ದೀರ...
ಇಷ್ಟೊಂದು ಪ್ರತಿಕ್ರಿಯೆಗಳಿಗೆ ವಾರಸುದಾರರಾಗಿದ್ದೀರಾ... ಅಭಿನಂದನೆಗಳು...

ನಿಮ್ಮಲ್ಲಿ ಮೆಚ್ಚಲೆಬೇಕಾದ ಇನ್ನೊದು ಅಂಶ... ನೀವು ಬರೆಯೋ ಪ್ರತಿಕ್ರಿಯೆಗಳು...

ಕಟಾವಿಗೆ ಹತ್ತಿರವಾದಾಗ, ಮಂಡ್ಯ ಮದ್ದೂರುಲ್ಲಿ ಕಾಡಾನೆಗಳು ಹಿಂಡು ಹಿಂಡಾಗಿ ಬಂದು ಕಬ್ಬಿನ ಗದ್ದೆಗೆ ನುಗ್ಗಿ, ಸುಗ್ಗಿಯ ಸವಿದು , ಸಂತೋಷದಿಂದ ಹಿಂತಿರುಗ್ತವೆ....
ಹಾಗೆಯೆ ನೀವು,
ಎಲ್ಲರ ಬ್ಲಾಗಲ್ಲಿ ನುಗ್ಗಿ, ಕಾಫಿ ಟೀ ಕುಡಿದು,
ಇದ್ರೆ ಒಂದಿಷ್ಟು ತಿಂಡಿ ಸವಿದು,
ಇನ್ನೊಂದ್ ಸಲ ಊಟಕ್ಕೆ ಬರ್ತೇನೆ, ಅಂತ ಹೇಳಿ ಹೋಗ್ತೀರ..
ಜೊತೆಗೆ ಕಾಫಿ ಟೀ ಚೆನ್ನಾಗಿತ್ತು ಅಂತೀರ...
ತಿಂಡಿಗೆ ಚಟ್ನಿ ಇದ್ರೆ ಚೆನ್ನಾಗಿತ್ತು ಅಂತೀರ...
ಇನ್ನೊಂದ್ ಸಲ ಮಾಡಿ ನನ್ನ ಕರೀರಿ ಅಂತೀರ...
ಜೊತೆಗೆ ಮೃಷ್ಟಾನ್ಹ ಭೋಜನಕ್ಕೆ ಯಾವಾಗ ಕರೀತೀರ ಅಂತ ನೀವೇ ಕೇಳ್ತೀರ...

ನಿಮ್ಮ ಪ್ರೋತ್ಸಾಹಕ್ಕೆ ಅದೆಷ್ಟು ಮರಿ ಗುಬ್ಬಿಗಳು ರೆಕ್ಕೆ ಪುಕ್ಕ ಗಟ್ಟಿ ಮಾಡಿ ಆಕಾಶದೆತ್ತರಕ್ಕೆ ಹಾರಡಿಲ್ಲ...?
ಸತ್ಯ ಹೇಳಲಾ ನಾನು, ಅಸೂಯೆ ಆಗುತ್ತೆ ನಂಗೆ ನಿಮ್ ಕ್ರಿಯಾಶೀಲತೆಯನ್ನ ನೋಡಿ...

ಬನ್ನಿ, ನನ್ನ ಪುಟ್ಟ ಬ್ಲಾಗಿಗೊಂದು ಹೆಜ್ಜೆಯಿಟ್ಟು...
ಸ್ವಾಗತದೊಂದಿಗೆ ಕಾಯುವ,
-ಗಿರೀಶ್

ಚಂದ್ರಕಾಂತ ಎಸ್ said...

ನಿಮ್ಮ ಈ ಬರಹ ಓದುವಾಗ 33 ಕಾಮೆಂಟ್ ಗಳಿದ್ದುವು.ಪ್ರತಿಕ್ರಿಯಿಸುವಷ್ಟರಲ್ಲಿ ಅರ್ಧಶತಕ ದಾಟಿದೆ.ಪರವಾಗಿಲ್ಲ.
ನಿಮ್ಮ ಬರಹ ಮನೋಜ್ಞವಾಗಿದೆ. ನನಗಿಷ್ಟವಾದದ್ದು ಕೆಲಸದ ಮೇಲಿನ ನಿಮ್ಮ ಶ್ರದ್ಧೆ, ಕೆಲಸದ ಮೇಲಿನ ಪ್ರೀತಿ ಮತ್ತು ಪೇಪರ್ ಹುಡುಗರನ್ನು ಸರಿಯಾಗಿ ಜಡ್ಜ್ ಮಾಡುವ ರೀತಿ!
ನನಗೂ ಸಹ ಬೇಗ ಪೇಪರ್ ಬರದಿದ್ದರೆ ಮೈಪರಚಿಕೊಳ್ಳುವಂತಾಗುತ್ತೆ. ಪಾಪ ಕೆಲವೊಮ್ಮೆ ಆ ಓನರ್ ರೇ ಬೇಗ ಪೇಪರ್ ಹಾಕುತ್ತಾರೆ.ಇನ್ನು ಮೇಲೆ ಪೇಪರ್ ಬೇಗ ಬರದಿದ್ದರೆ ಸಿಟ್ಟು ಮಾಡಿಕೊಳ್ಳದೆ ಕಾಯುವೆ.
ಉತ್ತಮ ಬರಹಕ್ಕೆ ಧನ್ಯವಾದಗಳು

shivu.k said...

ಸತ್ಯನಾರಾಯಣ ಸರ್,


ನನ್ನ ಹೊಸ ಲೇಖನ ನೋಡಿ ಪ್ರತಿಕ್ರಿಯಿಸಿದ್ದಕ್ಕೆ ಥ್ಯಾಂಕ್ಸ್...

ನಾನಾಗ ಹೊಸ ಮದುವೆ ಗಂಡಾಗಿದ್ದರಿಂದ ನನ್ನ ಬಗ್ಗೆ ನನ್ನಾಕೆ ಏನು ಗೊತ್ತಾಗಲಿಲ್ಲ...ನಂತರ ಕೆಲವೇ ದಿನಗಳಲ್ಲಿ..ಈ ನನ್ನ ಕೆಲಸದ ಬಗ್ಗೆ ತುಂಬಾ ವಾದ ವಿವಾದಗಳು ಇಬ್ಬರ ನಡುವೆ ನಡೆದವು...ಕೊನೆಗೆ ನಿದಾನವಾಗಿ ಅವಳಿಗೂ ಎಲ್ಲಾ ತಿಳಿದು....ಈಗ ಹೊಂದಿಕೊಂಡಿದ್ದಾಳೆ...ಮತ್ತು ಬೇರೆಯವರಿಗಿಂತ ನನ್ನ ಕೆಲಸವೇ ಉತ್ತಮ ಎಂದು ಸೆರ್ಟಿಫಿಕೇಟ್ ಕೊಟ್ಟಿದ್ದಾಳೆ...

shivu.k said...

ಗಿರಿ,

ನನ್ನ ಬ್ಲಾಗಿಗೆ ನಿಮಗೆ ಸ್ವಾಗತ.......ತುಂಬಾ ದಿನದಿಂದ ನನ್ನ ಬ್ಲಾಗ್ ಮತ್ತು ನನ್ನ ಕಾಮೆಂಟು-ರೆಪ್ಲೇಗಳನ್ನು ಗಮನಿಸಿದ್ದೀರೆನಿಸುತ್ತದೆ...
ಮೊದಲ ಬಾರಿಗೆ ಬ್ಲಾಗಿಗೆ ಬರುತ್ತಲೇ ನನ್ನನ್ನು ಸಿಕ್ಕಾಪಟ್ಟೆ ಹೊಗಳಿಕೊಂಡು ಬರುತ್ತಿದ್ದೀರಿ..
ನೀವು ಇಷ್ಟೊಂದು ಹೊಗಳಬಾರದು ಕಣ್ರೀ...ಆಮೇಲೆ ನಾನು ಇದೇ ಹೊಗಳಿಕೆಯ ಹಾಸಿಗೆ ಮೇಲೆ ಸಿಕ್ಕಾಪಟ್ಟೇ ಸೋಮಾರಿಯಾಗಿ ಹೊಗಳಿಕೆಯ ಹಾಸಿಗೆಯ ಸುಖವನ್ನು ಅನುಭವಿಸುತ್ತಾ ಮಲಗಿಬಿಡುತ್ತೇನೇನೋ ಅನ್ನುವ ಭಯ...
ನೀವು ನನ್ನನ್ನು ಕಂಡರೆ ಅಸೂಯೆ ಅಂದಿರಿ...ಥ್ಯಾಂಕ್ಸ್..
ಮುಂದೆ ಕೆಲವೇ ದಿನಗಳ ನಂತರ ನಾನು ನಿಮ್ಮ ಬ್ಲಾಗಿಗೆ ಬಂದು ಹೀಗೆ ನಿಮ್ಮನ್ನು ಕಂಡರೆ ನನಗೆ ಸಿಕ್ಕಾಪಟ್ಟೆ ಅಸೂಯೆ ಕಣ್ರೀ ಗಿರಿ...ಅನ್ನಬೇಕು...ಆ ಮಟ್ಟಿಗೆ ನೀವು ಬರೀಬೇಕು....ಅದರಲ್ಲಿ ಯಶಸ್ಸು ಗಳಿಸಬೇಕು...ಅದು ನನ್ನ ಆಸೆ...
ಮತ್ತೆ ನನ್ನನ್ನು ಇಷ್ಟು ಪ್ರೀತಿಯಿಂದ ಕರೆದಿದ್ದೀರಿ ಅಂದರೆ ನಾನು ಬರದೇ ಇರುತ್ತೇನಾ...ಬಂದು ಭರ್ಜರಿ ಊಟ ಮಾಡಿಕೊಂಡೇ ಹೋಗುತ್ತೇನೆ....
ನಿಮ್ಮ ಮೊದಲ ಪ್ರತಿಕ್ರಿಯೆಯೇ ಇಷ್ಜೊಂದು ತುಂಟತನದಿಂದ ಇರಬೇಕಾದರೆ ನಿಮ್ಮ ಬರವಣಿಗೆ ಹೇಗಿರಬಹುದು..ನನಗೆ ಕುತೂಹಲವಿದೆ...ಬರುತ್ತೇನೆ....
ಧನ್ಯವಾದಗಳು...

ಅಂತರ್ವಾಣಿ said...

ಶಿವಣ್ಣ,
ಹಾಸ್ಯವಾಗಿದ್ದ ಲೇಖನ ಧಿಡೀರನೆ sentiment ಆಯಿತು.
ಬೇವು ಬೆಲ್ಲ ತಿಂದ ಅನುಭವ ಆಯ್ತು.

Naveen ಹಳ್ಳಿ ಹುಡುಗ said...

shivanna..

Nimagu mathu Nimma Vruthigu... Hats Offf....

shivu.k said...

nಜಯಶಂಕರ್,

ದಿನಪತ್ರಿಕೆ ಕೆಲಸದಲ್ಲಿ ಎಲ್ಲಾ ಕೆಲಸದಂತೆ ಬೇವು ಮತ್ತು ಬೆಲ್ಲ ಎರಡು ಇರುತ್ತದೆ....ಥ್ಯಾಂಕ್ಸ್...

shivu.k said...

ಚಂದ್ರ ಕಾಂತ ಮೇಡಮ್,

ನನ್ನ ಕೆಲಸವನ್ನು ನೀವು ಮೆಚ್ಚಿದ್ದಕ್ಜೆ ಥ್ಯಾಂಕ್ಸ್..ಮತ್ತೆ ನೀವು ಹೇಳಿದಂತೆ..ನಾನು ಹುಡುಗರನ್ನು ಜಡ್ಜ ಮಾಡುವ ರೀತಿ ಸರಿಯಿದೆ ಅಂತ....ಅದ್ರೆ ನಿಜಕ್ಕೂ ಇವತ್ತಿಗೂ ನನಗೆ ಅದೊಂದು ವಿಚಾರದಲ್ಲಿ ನಾನು ಸೋತಿದ್ದೇನೆ...ಅದಕ್ಕೆ ಆ ಅನುಭವನ್ನು ಈ ರೀತಿ ಬ್ಲಾಗಿನಲ್ಲಿ ಬರಯೋದು ಅನ್ನಿಸುತ್ತೆ.

ಇನ್ನು ಮೇಲೆ ದಿನಪತ್ರಿಕೆ ಹುಡುಗರ ಮೇಲೆ ಕೋಫ ಮಾಡಿಕೊಳ್ಳುವುದಿಲ್ಲವೆಂದು ಹೇಳಿದ್ದೀರಿ...ಥ್ಯಾಂಕ್ಸ್...

shivu.k said...

ನವೀನ್,

ನನ್ನ ಬ್ಲಾಗಿಗೆ ಸ್ವಾಗತ....ನನ್ನ ವೃತ್ತಿ ಮೆಚ್ಚಿದ್ದಕ್ಕೆ ಥ್ಯಾಂಕ್ಸ್...ಹೀಗೆ ಬರುತ್ತಿರಿ...

ಮತ್ತೆ ನಿಮ್ಮ ಬ್ಲಾಗಿಗೆ ಹೋಗಿ ಲೇಖನ ಓದಿ ಕಾಮೆಂಟು ಮಾಡಿದರೆ ಲೇಖನ ಪೋಷ್ಟ ಆಗುತ್ತಿಲ್ಲ...ಪರೀಕ್ಷಿಸಿ....

guruve said...

ನೀವು ವೃತ್ತಿ ಜೀವನ ಮತ್ತು ವ್ಯಯಕ್ತಿಕ ಜೀವನವನ್ನು ಸಂಭಾಳಿಸುತ್ತಿರುವದನ್ನು ಪರಿಯನ್ನು ಓದಿ ಖುಷಿಯಾಯ್ತು. ನನ್ನ ವೃತ್ತಿಯಲ್ಲಿ ಇಂತಹ ಸಂದಿಗ್ಧಗಳು ಇಲ್ಲಿಯವರೆಗೂ ಎದುರಾಗಿಲ್ಲ! ನಾನು ಎಷ್ಟೋ ಬಾರಿ ನನ್ನ ದಿನಪತ್ರಿಕೆಯ ವಿತರಕರ ಮೇಲೆ ಕೂಗಾಡಿದ್ದುಂಟು. ಆದರೂ ನೀವು ಈ ಕೆಲಸವನ್ನು/ವೃತ್ತಿಯನ್ನು ಮೆಚ್ಚಿ ನಿಭಾಯಿಸುತ್ತಿರುವುದು ಶ್ಲಾಘನೀಯ. ಶುಭವಾಗಲಿ.

shivu.k said...

ಗುರುವೇ,

ನೀವು ನನ್ನ ವೃತ್ತಿಯನ್ನು ಮತ್ತು ವೈಯಕ್ತಿಕ ಜೀವನವನ್ನು ಮೆಚ್ಚಿದ್ದಲ್ಲದೇ ದಿನಪತ್ರಿಕೆ ಹುಡುಗರು ಮತ್ತು ಏಜೆಂಟರುಗಳ ಮೇಲೆ ಕೂಗಾಡುವುದಿಲ್ಲವೆಂದು ಹೇಳಿದ್ದು ಹೆಚ್ಚು ಖುಷಿ ತಂದಿತು....ಥ್ಯಾಂಕ್ಸ್...ಹೀಗೆ ಬರುತ್ತಿರಿ....

Anonymous said...

ಅದು ಯಾವಾಗ್ಲೂ ಹಾಗೆಯೇ ಸಾರ್... ಕಾಯಕವೇ ಕೈಲಾಸವೆಂದರೂ, ಬೇರೆ ಜವಾಬ್ದಾರಿಗಳೂ ಇರುತ್ತವೆ...
ರೇಖಾಚಿತ್ರಗಳಿಗೆ ಕಾಯುತ್ತಿರುವೆ! :-)

shivu.k said...

ಪ್ರದೀಪ್

ಕಾಯಕವೇ ಕೈಲಾಸ, ಜವಾಬ್ದಾರಿ ವೈಕುಂಠ....ಪ್ರತಿಕ್ರಿಯಿಸಿದ್ದಕ್ಕೆ ಥ್ಯಾಂಕ್ಸ್....

ಈ ಲೇಖನ ಬರೆದು ಎರಡು ತಿಂಗಳಾಗಿದ್ದರೂ ರೇಖಾಚಿತ್ರಕ್ಕಾಗಿ ಕಾಯುತ್ತಿದ್ದೆ...ಸಮಯದ ಅಭಾವದಿಂದ ರೇಖಾಚಿತ್ರ ಬರೆಯಲಾಗಲಿಲ್ಲ...ಮುಂದಿನ ಬಾರಿ ಖಂಡಿತ ಬರೆಯುತ್ತೇನೆ. ಥ್ಯಾಂಕ್ಸ್...

Annapoorna Daithota said...

:-)

ಧರಿತ್ರಿ said...

ಶಿವಣ್ಣ..
'ಆಹಾ ನನ್ನ ಮದುವೆಯಂತೆ'! ಅಂತ ಶೀರ್ಷಿಕೆ ಓದಿದಾಗ ನಮ್ ಶಿವಣ್ಣ ಇನ್ನೊಂದು ಮದುವೆಯಾಗಕೆ ಹೊರಟ್ರಾ? ಅಂತ ಕೀಟಲೆ ಯೋಚನೆಯೊಂದು ಹಾಗೇ ತಲೆಯೊಳಗೆ ಹೊಳೆದೇಬಿಟ್ಟಿತು. ಸಾರೀ ಶಿವಣ್ಣ..
ಮದುವೆಯ ಕರೆಯೋಲೆ..ನಿಮ್ಮ ಮದುವೆಯನ್ನು ನೆನಪಿಸಿತ್ತಲ್ಲಾ..ಅದನ್ನು ನೀವು ಬರೆದ ರೀತಿ..ಚೆನ್ನಾಗಿದೆ. ಈ 'ಕರ್ತವ್ಯ'ಗಳ ನಡುವೆ ಮದುವೆಯ ಖುಷಿಯನ್ನೇ ಮರೆತು..ಪೇಪರ್ ಹಾಕೋದ್ರಲ್ಲಿ ಬ್ಯುಸಿಯಾಗಿದ್ದ ನಿಮ್ಮ ಕಷ್ಟದ ಪಾಡು ಕಂಡಾಗ ನಿಜಕ್ಕೂ ನಂಗೆ ಬೇಜಾರಾಗಿಲ್ಲ..ನಗುಬಂತು! ನಿಮ್ಮಂಥವರು ಇರೋದು ತುಂಬಾ ಕಡಿಮೆ..ಅಲ್ಲ ಶಿವಣ್ಣ..ಪೇಪರ್ ಹಾಕಕೆ, ಆ ಕೆಲಸ., ಈ ಕೆಲಸ ಮಾಡಕೆ ಬೇರೆ ಹುಡುಗ್ರನ್ನು ಕರೆಸಬೇಕಿತ್ತು..ಒಂದು ವಾರ ಆರಾಮವಾಗಿ ಇರಬಹುದಿತ್ತಲ್ಲಾ...ಒಳ್ಳೆಯ ಬರಹಕ್ಕೆ ಅಭಿನಂದನೆಗಳು. ಮತ್ತೆ ಬರುವೆ..
ಇಂತೀ,
ಧರಿತ್ರಿ

shivu.k said...

ಅನ್ನ ಪೂರ್ಣ ಮೇಡಮ್,

ಥ್ಯಾಂಕ್ಸ್....

shivu.k said...

ಧರಿತ್ರಿ ಮೇಡಮ್,

ನನ್ನ ಬ್ಲಾಗಿಗೆ ಸ್ವಾಗತ. ನಾನು ಇವತ್ತೆ ನನ್ನ ಬ್ಲಾಗಿನಲ್ಲಿ ನಿಮ್ಮ ಕಾಮೆಂಟು ನೋಡಿರೋದು....ಅದ್ರೆ ನೀವು ನೋಡಿದ್ರೆ ನನ್ನನ್ನು ತುಂಬಾ ದಿನದಿಂದ ಪರಿಚಯವಿರುವಂತೆ ಮಾತಾಡಿಸುತ್ತಿದ್ದೀರಿ...ಥ್ಯಾಂಕ್ಸ್.. ಹಾಗು ನನ್ನ ಬ್ಲಾಗನ್ನು ತುಂಬಾ ದಿನದಿಂದ ನೋಡುತ್ತಿರುವಂತೆ ಕಾಣುತ್ತದೆ.

ಮದುವೆಯ ಸಂಭ್ರಮ ಯಾರಿಗೆ ಬೇಡ ಹೇಳಿ....ಅದರೇನು ಮಾಡುವುದು...ಜವಾಬ್ದಾರಿ ಹಾಗೆ ಇತ್ತಲ್ಲ....ನನ್ನ ಸಮಸ್ಯೆ ಏನೆಂದರೆ ಬೇರೆ ಸಮಯದಲ್ಲಿ ನಮ್ಮ ಬೀಟು ಹುಡುಗರು ಸರಿಯಾಗಿ ಬರುತ್ತಾರೆ...ನಮಗೆ ಎಲ್ಲಿಗಾದರೂ ಹೋಗಬೇಕಾದಾಗ ಅಥವ ಇಂಥ ಕಾರ್ಯಕ್ರಮಗಳಲ್ಲಿ ಅವರು ಬೇಜವಾಬ್ದಾರಿತನದಿಂದ ತಪ್ಪಿಸಿಕೊಳ್ಳುವುದು ಹೆಚ್ಚು....ಮತ್ತೆ ನಿಮ್ಮಲ್ಲಿ ಹೆಚ್ಚು ಎಷ್ಟು ಹುಡುಗರಿದ್ದರೂ ನನ್ನ ಕಡೆ ಕಳಿಸಿ ನಾನು ದಿನಪತ್ರಿಕೆ ಹಂಚುವ ಕೆಲಸ ಖಂಡಿತ ಕೊಡುತ್ತೇನೆ...

ಮತ್ತೆ ಮತ್ತೊಮ್ಮೆ ಮದುವೆ ಆಸೆ ತೋರಿಸಿದ್ದಕ್ಕೆ ಥ್ಯಾಂಕ್ಸ್ ಕಣ್ರೀ..[ನನ್ನಾಕೆಗೆ ಹೇಳಬೇಡ್ರಿ...]ನಿಮ್ಮ ಈ ಮಾತಿನಿಂದ ನನ್ನ ಹಳೆಯ ಮಜವಾದ ನೆನಪು ಮರುಕಳಿಸಿತು...ಅದನ್ನು ಬ್ಲಾಗಿನಲ್ಲಿ ಬರೆಯಬೇಕೆನಿಸಿದೆ...

ಹೀಗೆ ಬರುತ್ತಿರಿ ...ಥ್ಯಾಂಕ್ಸ್....

Prabhuraj Moogi said...

ಒಂದು ದಿನ ಪತ್ರಿಕೆ ಬರದಿದ್ದರೆ ಅಥವಾ ಲೇಟಾಗಿ ಬಂದ್ರೆ, ಎನೊ ನಾವು ಪೇಪರು ಓದದೇ ಇದ್ರೆ ಜಗತ್ತೇ ನಿಂತುಬಿಡುತ್ತೊ ಅನ್ನೊ ಹಾಗೇ ಹಾರಾಡಿಬಿಡುತ್ತೀವಿ... ಆದ್ರೆ ಅದರ ಹಿಂದ ಹೀಗೊಂದು ಬದುಕಿದೆ ಅನ್ನೊದನ್ನ ಬಹಳ ಎಳೆ ಎಳೆಯಾಗಿ ಬಿಡಿಸಿ ಹೇಳಿದ್ದೀರಿ, ತುಂಬಾ ಧನ್ಯವಾದಗಳು...

Anonymous said...

ಹೌದಲ್ವಾ ಶಿವು ಅವರೆ,
ಜೀವನಕ್ಕಾಗಿ ಕರ್ತವ್ಯ ಮುಖ್ಯ. ಆದ್ರೆ ಸಂಬಂಧಗಳನ್ನು ಬಿಡಲಾದೀತೇ? ಒಳ್ಳೇ ಇಕ್ಕಟ್ಟು...
ಚೆನ್ನಾಗಿ ವಿವರಿಸಿದ್ದೀರಿ.

shivu.k said...

ಪ್ರಭು,

ನಮ್ಮ ಪ್ರತಿನಿತ್ಯದ ಕಷ್ಟಗಳನ್ನು ಈ ಲೇಖನದ ಮುಖಾಂತರ ಗೊತ್ತಾಗಿದ್ದಕ್ಕೆ ಥ್ಯಾಂಕ್ಸ್....

ಮುಂದೆ ನಮ್ಮ ವೃತ್ತಿ ಭಾಂದವರನ್ನು ನೀವು ಬೈಯ್ಯುವುದಿಲ್ಲವೆಂದು ಹೇಳೀದ್ದೀರಿ...ಥ್ಯಾಂಕ್ಸ್....ಹೀಗೆ ಬರುತ್ತಿರಿ....

shivu.k said...

ಅವಿ ಸರ್,

ನನ್ನ ಬ್ಲಾಗಿಗೆ ಸ್ವಾಗತ....ಜೀವನ ಮುಖ್ಯ ಸರ್, ಅದಕ್ಕೆ ಇದೆಲ್ಲಾ ಪೇಚಾಟಗಳು...ಥ್ಯಾಂಕ್ಸ್....

ಮಿಥುನ ಕೊಡೆತ್ತೂರು said...

ನಿಮ್ಮ ಬರೆಹ ಖುಷಿ ಕೊಟ್ಟಿತು. ಅದಕ್ಕಿಂತ ಹೆಚ್ಚು ಖುಷಿ ಕೊಟ್ಟದ್ದು ನಿಮ್ಮ ಬರೆಹಕ್ಕೆ ಬಂದ ಭರ್ಜರಿ ಸಂಖ್ಯೆಯ ಕಮೆಂಟುಗಳು.

Unknown said...

ಲೇಖನ ಚೆನ್ನಾಗಿದೆ... ಇದನ್ನು ಓದಿದ ಮೇಲೆ ಪೇಪರ್ ಬಂದಿಲ್ಲ ಅಂತ ಪೇಪರ್ ಹಾಕೊನಿಗೆ ಫೋನ್ ಮಾಡೋದು ನಿಲ್ಲಿಸಿದ್ದಿನಿ... :-)

http://ravikanth-gore.blogspot.com

shivu.k said...

ಮಿಥುನ,

ಮತ್ತೆ ನನ್ನ ಬ್ಲಾಗಿಗೆ ಸ್ವಾಗತ...ಲೇಖನ ಇಷ್ಟಪಟ್ಟಿದ್ದಕ್ಕೆ ಥ್ಯಾಂಕ್ಸ್...

ನಿಮ್ಮಂಥ ಬ್ಲಾಗ್ ಗೆಳೆಯರ ಅಲ್ಲವೇ ನನ್ನನ್ನೂ ಈ ಮಟ್ಟಕ್ಕೆ ಪ್ರೋತ್ಸಾಹಿಸುತ್ತಿರುವುದು...

shivu.k said...

ರವಿಕಾಂತ್ ಗೋರೆ ಸರ್,

ಲೇಖನ ಮೆಚ್ಚಿದ್ದಕ್ಕೆ ಮತ್ತು ದಿನಪತ್ರಿಕೆ ಏಜೆಂಟ್ ಮೇಲೆ ನಿಮಗಿದ್ದ ಅಭಿಪ್ರಾಯ ಬದಲಿಸಿಕೊಂಡಿದ್ದಕ್ಕೆ ಥ್ಯಾಂಕ್ಸ್....ಹೀಗೆ ಬರುತ್ತಿರಿ...