Monday, August 30, 2010

"ಈ ಬಾಟಲಿಸ್ಟ್ ಯಾರು?"

ಇದೊಂದು ವಿಶೇಷ ಸೂಚನೆ:
ಗೆಳೆಯರೆ,

ನಮ್ಮ ತುಂತುರು ಪ್ರಕಾಶನದ ಪುಸ್ತಕಗಳಾದ ಜಲನಯನ, ಗುಬ್ಬಿ ಎಂಜಲು ಮತ್ತು ವೆಂಡರ್ ಕಣ್ಣು ಪುಸ್ತಕಗಳು. ಕರ್ನಾಟಕದಾದ್ಯಂತ ನವಕರ್ನಾಟಕ ಪುಸ್ತಕ ಮಳಿಗೆಗಳು, ಬೆಂಗಳೂರಿನ ಸ್ವಪ್ನ ಬುಕ್ ಹೌಸ್, ಗಾಂಧಿಬಜಾರಿನ ರಸ್ತೆಯಲ್ಲಿರುವ ಅಂಕಿತ ಪುಸ್ತಕ ಮಳಿಗೆ, ಜಯನಗರದ ಕೂಲ್ ಜಾಯಿಂಟ್ ಎದುರು ರಸ್ತೆಯಲ್ಲಿರುವ "ಟೋಟಲ್ ಕನ್ನಡ ಡಾಟ್ ಕಾಂ" ಅಂಗಡಿಯಲ್ಲಿ ದೊರೆಯುತ್ತದೆ.

ಪ್ರೀತಿಯಿಂದ...
ಶಿವು.ಕೆ

ತುಂತುರು ಪ್ರಕಾಶನ
-------------------------------------------------------------------------------------------------


 "ನಿಮ್ಮಲ್ಲಿ ಯಾರಾದರೂ ಬಾಟನಿಸ್ಟ್ ಇದ್ದಾರ?"  ಈಶ್ವರ ಪ್ರಸಾದ್ ಕೇಳಿದರು.
 
 "ಇಲ್ಲಸಾರ್ ಬೇಕಾದರೆ ಬಾಟಲಿಸ್ಟ್ ಸಿಗುತ್ತಾರೆ." ತಕ್ಷಣ ಪ್ರಕಾಶ್ ಹೆಗಡೆ ಉತ್ತರಿಸಿದರು.

"ಈ ಬಾಟಲಿಷ್ಟ್ ಯಾರು?"   ಈ ಪ್ರಶ್ನೆಯನ್ನು ಕೇಳಿದ್ದು ಈಶ್ವರ ಪ್ರಸಾದ್.

 "ಅದೇ ಸರ್, ಬಾಟಲಿಸ್ಟು," ಕೈಬಾಯಿ ಸನ್ನೆ ಮಾಡಿ ತೋರಿಸಿದರು.

 ಈಶ್ವರ ಪ್ರಸಾದ್ ಸೇರ್‍ಇದಂತೆ ನಮ್ಮ ಬ್ಲಾಗಿಗರೆಲ್ಲಾ ಎಷ್ಟು ಜೋರಾಗಿ ನಕ್ಕೆವೆಂದರೆ  ಹೊಟ್ಟೆ ಹಿಡಿದುಕೊಂಡು ಕೂರುವಷ್ಟು.


                                 -------------------------------

 "ಶಿವು ನಿಮ್ಮ ವಯಸ್ಸೆಷ್ಟು?"  ಈಶ್ವರ ಪ್ರಸಾದ್ ನಮ್ಮ ಜೊತೆ ಊಟ ಮಾಡುತ್ತಾ ನನ್ನನ್ನು ಕೇಳಿದರು.

 ನಾನು ನನ್ನ ವಯಸ್ಸು ಹೇಳಿದೆ.  ಮತ್ತೆ ಹಾಗೆ ಸುತ್ತ ಕುಳಿತಿದ್ದ ಪರಂಜಪೆ, ಉಮೇಶ್ ದೇಸಾಯಿ, ನಂಜುಂಡ,....ಹೀಗೆ ಒಬ್ಬೊಬ್ಬರಾಗಿ ಹೇಳುತ್ತಿದ್ದರು.  ಪ್ರಕಾಶ್ ಹೆಗಡೆ ಸರದಿ ಬಂತು.

 "ಪ್ರಕಾಶ್ ನಿಮ್ಮ ವಯಸ್ಸು ಎಷ್ಟು?"  ಮತ್ತೆ ಕೇಳಿದರು ಈಶ್ವರ ಪ್ರಸಾದ್,

 "ನೀವೇ ಹೇಳಿ ಸರ್,"

 "ನಾನು ಮರಗಳ ವಯಸ್ಸನ್ನು ಹೇಳಬಲ್ಲೆ. ಆದ್ರೆ ನಿಮ್ಮ ವಯಸ್ಸನ್ನು ಹೇಗೆ ಹೇಳುವುದು?"

 "ಹಾಗಾದ್ರೆ ಸರ್, ಮರಗಳ ವಯಸ್ಸನ್ನು ಹೇಗೆ ಗುರುತಿಸುವಿರಿ?

 "ಮರಗಳಿಗೆ ಬಂದಿರುವ ಹೊರಪದರಗಳ ಲೇಯರುಗಳಿಂದ."

 "ಹಾಗಾದರೆ ನನ್ನ ಲೇಯರಿನ ಟಯರನ್ನು[ಸೊಂಟದ ಸುತ್ತಳತೆ] ನೋಡಿ ನೀವು ಸುಲಭವಾಗಿ ನನ್ನ ವಯಸ್ಸು ಹೇಳಬಹುದು!"  
 ಊಟ ಮಾಡುತ್ತಿದ್ದವರೆಲ್ಲಾ ಈ ಮಾತು ಕೇಳಿ ನಗು ತಡೆಯಲಾಗಲಿಲ್ಲ.

                                        --------------------------------


ಇವೆರಡು ದಿನಾಂಕ ೨೯-೮-೨೦೧೦ರ ಭಾನುವಾರ ನಾವು ಬ್ಲಾಗಿಗರೆಲ್ಲಾ ತಿಪ್ಪಗೊಂಡನಹಳ್ಳಿ ಜಲಾಶಯದ ಬಳಿ ಇರುವ ಸಸ್ಯವನಕ್ಕೆ ಗಿಡನೆಡಲು ಹೋಗಿದ್ದಾಗ ಉಕ್ಕಿದ ನೂರಾರು ನಗೆಬುಗ್ಗೆಗಳಲ್ಲಿ ಇವೆರಡು ಸ್ಯಾಂಪಲ್.

 ಅವತ್ತು ಬೆಳಿಗ್ಗೆ ೨೮ ಬ್ಲಾಗಿಗರು ಬಸ್ಸಿನಲ್ಲಿ ಹೊರಟಾಗ ಬೆಳಿಗ್ಗೆ ಒಂಬತ್ತುಗಂಟೆ. ದಾರಿಯುದ್ದಕ್ಕೂ ಅಂತ್ಯಾಕ್ಷರಿ, ನಗು ಜೋಕು ಅನ್ನುವಷ್ಟರಲ್ಲಿ ತಿಪ್ಪಗೊಂಡನಹಳ್ಳಿ ಜಲಾಶಯ ಬಂದುಬಿಟ್ಟಿತ್ತು.  ಎಲ್ಲರು ಇಳಿದು ಈಶ್ವರ ಪ್ರಸಾದ್ ಹಿಂದೆ ನಡೆದೆವು. ಸ್ವಲ್ಪ ದೂರನಡೆಯುವಷ್ಟರಲ್ಲಿ ಒಂದು ಪುಟ್ಟ ಚಪ್ಪರವನ್ನು ಹಾಕಿದ ಜಾಗದ ಮುಂದೆ ನಿಂತರು. ನಮ್ಮ ಅದೃಷ್ಟಕ್ಕೆ ಮೋಡದ ವಾತಾವರಣವಿದ್ದು ಒಂಥರ ತಣ್ಣನೇ ಗಾಳಿ ಬೀಸುತ್ತಿದ್ದರಿಂದ ಎಲ್ಲರಿಗೂ ಒಂಥರ ಹಿತವೆನಿಸುತ್ತಿತ್ತು.  ಮೊದಲು ಎಲ್ಲರ ಪರಿಚಯವಾಯ್ತು. ಈಶ್ವರ ಪ್ರಸಾದ್ ಕೂಡ ತಮ್ಮ ಪರಿಚಯವನ್ನು ಮಾಡಿಕೊಂಡರು.

 ನಂತರ ಸ್ಥಳ ಮಹಾತ್ಮೆಯ ಬಗ್ಗೆ ತಿಳಿಸಲು ನವೀನ್[ಹಳ್ಳಿಹುಡುಗ]ಗೆ ಓದಲು ತೇಜಸ್ವಿಯವರು ಅನುವಾದ ಮಾಡಿದ ಕೆನೆತ್ ಆಂಡರ್ಸನ್‍ರವರ ಕಾಡಿನ ಕಥೆಗಳು ಮೂರನೇ ಭಾಗವಾದ "ಮುನಿಸ್ವಾಮಿ ಮತ್ತು ಚಿರತೆ" ಪುಸ್ತಕವನ್ನು ಕೊಟ್ಟರು. 
 
 ಮೊದಲಿಗೆ ಪರಸ್ಪರ ಪರಿಚಯ ಕಾರ್ಯಕ್ರಮ

ಅದರಲ್ಲಿ ನಾವು ನಿಂತ ಜಾಗ[ತಿಪ್ಪಗೊಂಡನಹಳ್ಳಿ ವಿಶೇಷತೆ], ಪರಿಚಯ, ವಾತವರಣದಲ್ಲಿನ ನೀರಿನ ಮಟ್ಟ, ಇತ್ಯಾದಿ ವಿಚಾರವನ್ನು ಅವರು ಎಲ್ಲರಿಗೂ ಅರ್ಥವಾಗುವಂತೆ ಹೇಳಿದ ರೀತಿ ತುಂಬಾ ಚೆನ್ನಾಗಿತ್ತು.  ನಡುವೆ ನಾವು ಬೆಂಗಳೂರಿನಲ್ಲಿ ಬಳಸುವ ನೀರು ಮತ್ತು ವಿಧ್ಯುತ್ತನ್ನು ಹೇಗೆ ನಮಗೆ ಗೊತ್ತಿಲ್ಲದಂತೆ ಪೋಲು ಮಾಡುತ್ತಿದ್ದೇವೆ ಸ್ವಲ್ಪ ಅಲೋಚನೆ ಮತ್ತು ಬುದ್ದಿವಂತಿಕೆಯನ್ನು ಉಪಯೋಗಿಸಿದರೇ ಎಷ್ಟು ವಿಧ್ಯುತ್ ಮತ್ತು ನೀರು ಉಳಿಸಬಹುದು ಎನ್ನುವುದನ್ನು ತಿಳಿಸಿಕೊಟ್ಟರು.  ನಾವು ಮನೆಯಲ್ಲಿ ತರಕಾರಿ ತೊಳೆದ ನೀರು, ಪಾತ್ರೆ ತೊಳೆದ ನೀರು, ಊಟವಾದ ಮೇಲೆ ಎಂಜಲನೀರು, ಇದನ್ನೆಲ್ಲಾ ಒಟ್ಟು ಮಾಡಿ ಇಟ್ಟರೆ ಮುಸುರೆ ನೀರು ಅನ್ನುತ್ತಾರೆ. ಅದೇ ನೀರನ್ನು ನಾವು ಒಂದು ಬಕೆಟಿನಲ್ಲಿ ಸಂಗ್ರಹಿಸಿ ನಮ್ಮ ಮನೆಗಳ ವರಾಂಡದಲ್ಲಿ, ಬಾಲ್ಕನಿಗಳಲ್ಲಿ ಎಲ್ಲವಿಧವಾದ ತರಕಾರಿ ಗಿಡಗಳನ್ನು ಬೆಳೆಸುತ್ತಾ ಇದೇ ನೀರನ್ನು ಅದಕ್ಕೆ ಉಣಿಸಿದರೆ, ಇಂಥ ನೀರನ್ನು ಎಷ್ಟು ಸಮಂಜಸವಾಗಿ ಬಳಸಬಹುದು ಮತ್ತು ಅದಕ್ಕೆ ತಕ್ಕಂತೆ ನಾವು ಹಾಕಿದ ತರಕಾರಿಗಳು ಎಷ್ಟು ಚೆನ್ನಾಗಿ ಯಾವುದೇ ರಸಾಯನಿಕ ಗೊಬ್ಬರಗಳಿಲ್ಲದೆಯೂ ಎಂಥ ಸಮೃದ್ದ ಫಲ ಕೊಡುತ್ತವೆ ಎನ್ನುವುದನ್ನು ತಮ್ಮ ಮನೆಯಲ್ಲಿ ಬೆಳೆದ ತರಕಾರಿಗಳನ್ನು ಉದಾಹರಿಸುತ್ತಾ ಹೇಳಿದಾಗ ನಾವು ಇದನ್ನು ಮಾಡಲು ಸಾಧ್ಯವಿದೆಯಲ್ಲಾ ಎನಿಸಿತ್ತು.  ಅವರ ಮಾತಿನ ನಡುವೆಯೇ ಅಲ್ಲಿಯೇ ನಮ್ಮಂತೆ ಬೆಳಸಿದ ಮರಗಳಲ್ಲಿ ಬಿಟ್ಟ ಸೀತಾಫಲ ಹಣ್ಣುಗಳನ್ನು ನಮಗೆ ತಿನ್ನಲು ಕೊಟ್ಟರು.  ಯಾವುದೇ ರಸಾಯನಿಕಗಳಿಲ್ಲದೇ ಬೆಳೆದ ಸೀತಾಫಲಹಣ್ಣುಗಳನ್ನಂತೂ ನಮ್ಮ ಬ್ಲಾಗಿಗರೂ ಮಕ್ಕಳಂತೆ ಸಂಭ್ರಮದಿಂದ ತಿನ್ನುತ್ತಾ ತಮ್ಮ ಹಳೆಯ ನೆನಪುಗಳನ್ನು ಮೆಲುಕು ಹಾಕಿಕೊಳ್ಳುತ್ತಿದ್ದರು.


 ಸ್ಥಳ ಪರಿಚಯ, ನೀರು, ವಿಧ್ಯುತ್ ಉಳಿಕೆ, ನೆಲದಲ್ಲಿ ನೀರನ್ನು ಹಿಂಗಿಸುವುದು ಹೇಗೆ ಎನ್ನುವುದನ್ನು  ನಮಗೆಲ್ಲಾ ವಿವರಿಸುತ್ತಿರುವ ಈಶ್ವರ ಪ್ರಸಾದ್


 ಈಶ್ವರ್ ಪ್ರಸಾದ್ ಪರಿಚಯವನ್ನು ನಾನು ಮಾಡಿಕೊಡಲೇ ಬೇಕು. ಚಿಕ್ಕಮಗಳೂರಿನಲ್ಲಿ ಕೆಲವರ್ಷ ನೆಲಸಿ, ಸಣ್ಣಮಟ್ಟದ ಫ್ಯಾಕ್ಟರಿ ತೆರೆದು, ಅದರಲ್ಲಿ ವಿಫಲರಾಗಿ ನಂತರ ತೇಜಸ್ವಿಯವರ ಜೊತೆ ಹದಿನೆಂಟು ವರ್ಷಗಳ ಒಡನಾಟದಿಂದ  ತಾವು ಕಲಿತ ಪರಿಸರ ಪಾಠ, ಅವರಿಂದ ಪ್ರತಿಯೊಂದು ವಿಚಾರಕ್ಕೂ ಬೈಸಿಕೊಳ್ಳುತ್ತಾ ಮುಂದುವರಿದಿದ್ದು,  ಅವರ ನಂತರ ನಾಗೇಶ್ ಹೆಗಡೆಯವರ ಒಡನಾಟ.  ಪ್ರೀತಿಯಿಂದ ನಾಗೇಶಣ್ಣ ಎನ್ನುವ ಇವರು ನಾಗೇಶ್ ಹೆಗಡೆ ಬರೆದ ಲೇಖನದ ವಿಚಾರಗಳನ್ನು ಕಾರ್ಯರೂಪಕ್ಕೆ ತರುವಲ್ಲಿ ಮುನ್ನುಗ್ಗುತ್ತಿದ್ದಾರೆ. ಕೆಲವು ವಿಚಾರಗಳಲ್ಲಿ ಯಶಸ್ವಿಯಾಗುತ್ತಿದ್ದಾರೆ.  ಅವರ ಮಾತುಗಳಲ್ಲಿನ ಆತ್ಮವಿಶ್ವಾಸವಂತೂ ನಮಗೆಲ್ಲಾ ಸ್ಪೂರ್ತಿಯೆನಿಸಿತ್ತು.  ಅವರು ಪರಿಸರದ ಬಗ್ಗೆ ತುಂಬಾ ತಿಳಿದುಕೊಂಡಿದ್ದಾರೆ. ಮಳೆಯ ನೀರು ಬಿದ್ದರೆ ಎಲ್ಲಿ ಹರಿದುಹೋಗುತ್ತದೆ, ಅದನ್ನು ಹೇಗೆ ತಡೆದು ನಿಲ್ಲಿಸಬಹುದು, ಹೇಗೆ ನೀರನ್ನು ಭೂಮಿಯೊಳಗೆ ಹಿಂಗಿಸಬಹುದು,  ಭೂಮಿಯೊಳಗೆ ನೀರು ಈಗ ಇರುವುದೆಷ್ಟು, ಮೊದಲು ಎಷ್ಟಿತ್ತು, ಇತ್ಯಾದಿ ವಿಚಾರಗಳನ್ನು ತಾವೇ ಖುದ್ದಾಗಿ  ಅಲ್ಲೆಲ್ಲಾ ಮಾಡಿರುವುದನ್ನು ತೋರಿಸಿದರು. ಇದಲ್ಲದೇ ನಮ್ಮ ಕಾಗದ ಬಳಕೆ, ನಾವು ಬಳಸುವ ಸೋಪು ಸಾಂಫು, ಇತ್ಯಾದಿಗಳಿಗೆ ಮರುಳಾಗುವ ಬದಲು ನಮ್ಮದೇ ಅಜ್ಜಿಕಾಲದ ಕೆಲವು ಉತ್ಪನ್ನಗಳಿಂದ ಹೇಗೆ ನಾವು ಹಣ ಮತ್ತು ಪರಿಸರವನ್ನು ಉಳಿಸಬಹುದು ಎನ್ನುವುದನ್ನು ತಿಳಿಸಿಕೊಟ್ಟರು.  ನಮ್ಮಗೊಂದು ಪುಟ್ಟ ಚಾರ್‍ಅಣದಂತೆ ನಡೆಸುತ್ತಾ ಅವರು ತಮ್ಮ ಪರಿಚಯದ ಕತೆಯನ್ನು ಹೇಳುತ್ತಿದ್ದರೇ ನಮಗೆಲ್ಲಾ ಆ ಸಮಯದಲ್ಲಿ ರೋಚಕವೆನಿಸಿತ್ತು.

 ಮುಂದೆ ಗಿಡನೆಡುವ ಕಾರ್ಯಕ್ರಮ.  ಅದಂತೂ ಒಂಥರ ಹೃದಯಸ್ಪರ್ಶಿಯಾಗಿತ್ತು. ಮೊದಲಿಗೆ ನಾನು ನನ್ನ ಶ್ರೀಮತಿಯ ಜೊತೆಗೂಡಿ "ಛಾಯಾಕನ್ನಡಿ" ಹೆಸರಿನಲ್ಲಿ ಹಿಪ್ಪೆಮರವನ್ನು ನೆಟ್ಟೆವು.  ಆ ಸಮಯದಲ್ಲಿ ಈಶ್ವರಪ್ರಸಾದ್ "ಹಿಪ್ಪೆಮರ ಸಾವಿರಕ್ಕೂ ಹೆಚ್ಚು ವರ್ಷ ಬದುಕುವಂತದ್ದು ನಿಮ್ಮ ಬ್ಲಾಗ್ ಹೆಸರು ಕೂಡ ಹಾಗೆ ಸಾವಿರ ವರ್ಷಗಳು ನೆನಪಿರಲಿ ಎಂದಾಗ ನಾನು ಭಾವುಕನಾಗಿದ್ದೆ.  ನಂತರ ಆಜಾದ್, ಸ್ವತಂತ್ರದ ಹೆಸರಿನಲ್ಲಿ ಗಿಡ ನೆಟ್ಟರು. ನಂತರ ಪ್ರಕಾಶ್ ಹೆಗೆಡೆ ದಂಪತಿಗಳು, ಸುಗುಣ ಮಹೇಶ್ ದಂಪತಿಗಳು, ದಿಲೀಪ್ ಹೆಗಡೆ ದಂಪತಿಗಳು, ಉಮೇಶ್ ದೇಸಾಯಿ ಕುಟುಂಬ, ನಂಜುಂಡ ಮತ್ತು ಚೇತನಭಟ್ ಕುಟುಂಬ ಗಿಡನೆಟ್ಟರು. ಆಮೇಲೆ ನಮ್ಮ ಬ್ಯಾಚುಲರ್ ಹೈಕಳಾದ, ಶಿವಪ್ರಕಾಶ್, ಗುರುಪ್ರಸಾದ್, ನವೀನ್[ಹಳ್ಳಿಹುಡುಗ], ಫ್ರಶಾಂತ್,  ರಾಘವೇಂದ್ರ, ಅನಿಲ್ ಬೆಡಗೆ, ಕೊನೆಯಲ್ಲಿ ಮೈಸೂರಿನ ನಿಮ್ಮೊಳಗೊಬ್ಬ ಬಾಲು ಹೆಸರಲ್ಲಿ ಸ್ವತಃ ಈಶ್ವರ ಪ್ರಸಾದ್ ಗಿಡನೆಟ್ಟರು.   ಒಬ್ಬರಿಗೆ ನೇರಳೆ ಗಿಡ ಸಿಕ್ಕರೆ ಮತ್ತೊಬ್ಬರಿಗೆ ಮಹಾಘನಿ, ಸೀತಾಫಲ, ಬೇವು, ಹೊಂಗೆ, ಹೀಗೆ ಅನೇಕ ಗಿಡಗಳು ಈಶ್ವರ ಪ್ರಸಾದರಿಂದ ತಮ್ಮ ವಿಶೇಷಣಗಳನ್ನು ಹೇಳಿಸಿಕೊಳ್ಳುತ್ತಾ ನಮ್ಮ ಬ್ಲಾಗ್ ಗೆಳೆಯರಿಂದ ನೆಡಲ್ಪಟ್ಟವು.  ನಡುವೆ ಫೋಟೊಗಾಗಿ ಫೋಸು, ನಗು, ಭಾವುಕತೆ, ಆನಂದ, ಜೋಕು, ಇತ್ಯಾದಿಗಳು ಚಾಲ್ತಿಯಲ್ಲಿದ್ದವು.


 ನನ್ನ ಶ್ರೀಮತಿ ಜೊತೆ ನಾನು "ಛಾಯಾಕನ್ನಡಿ" ಹೆಸರಿನಲ್ಲಿ ಹಿಪ್ಪೆ ಮರವನ್ನು ನೆಟ್ಟೆವು.


 ಆಜಾದ್ "ಸ್ವಾತಂತ್ರ"ದ ಹೆಸರಿನಲ್ಲಿ ಗಿಡನೆಟ್ಟರು.

  
ಉಮೇಶ್ ದೇಸಾಯಿ ಕುಟುಂಬ ಗಿಡ ನೆಟ್ಟರು.


 ದಿಲೀಪ್ ದಂಪತಿಗಳು ಗಿಡ ನೆಟ್ಟರು.

 ಪ್ರಶಾಂತ್ ಮತ್ತು ಆಶೀಷ್ ಇಬ್ಬರಿಗೂ ಗಿಡನೆಡುವಲ್ಲಿನ ಸಂಭ್ರಮ


 ಈಶ್ವರ ಪ್ರಸಾದ್ ನಿಮ್ಮೊಳಗೊಬ್ಬ ಬಾಲು[ಮೈಸೂರು]ಹೆಸರಿನಲ್ಲಿ  ಒಂದು ಗಿಡ ನೆಟ್ಟು ನೀರು ಹಾಕುತ್ತಿದ್ದಾರೆ!


 ನಿಮ್ಮ ಮಗ ಮತ್ತು ಶ್ರೀಮತಿ ಮಣ್ಣಿನ ಮಕ್ಕಳಾಗಿದ್ದರೆ ನೀವು ಹೀಗೆ ಫೋಸು ಕೊಡುವುದು ಯಾವ ನ್ಯಾಯ ಮಹೇಶ್ ಸರ್?


 ನಂಜುಂಡ ದಂಪತಿಗಳು ಮತ್ತು ಅವರ ಮಗ ಸೃಜನ್


 ನವೀನ್ ಹಳ್ಳಿ ಹುಡುಗನೇ ಸರಿ!


 ಪ್ರಕಾಶ್ ಹೆಗಡೆ ದಂಪತಿಗಳು



 ಗಿಡ ನೆಡುವುದರಲ್ಲಿ ಇಷ್ಟೊಂದು ಆನಂದವೇ!



                                                      ಬ್ರಹ್ಮಚಾರಿ ಶಿವಪ್ರಕಾಶ್


 ನಮ್ಮ ಅಧಿಕೃತ ಕಾರ್ಯಕ್ರಮಗಳ ನಡುವೆ ಕೆಲವು ಅನಧಿಕೃತ ಕಾರ್ಯಕ್ರಮಗಳು ನಡೆಯುತ್ತಿದ್ದವು. ಅವುಗಳು ಯಾವುವೆಂದರೆ, ಅದೇಕೋ ಗುರುಪ್ರಸಾದ್‍ಗೆ ಮನುಜರ ಫೋಟೊ ಕ್ಲಿಕ್ಕಿಸುತ್ತಾ ನಡುವೆ ಗಿಡಗಳ ಮುಳ್ಳುಗಳ ಫೋಟೊಗಳನ್ನು ಕ್ಲಿಕ್ಕಿಸುತ್ತಿದ್ದರು. ಎರಡೂ ಫೋಟೊಗಳ ನಡುವೆ ಯಾವಾ ಗೂಡಾರ್ಥಗಳಿವೆಯೋ ನೀವೇ ಕಂಡುಹಿಡಿಯಬೇಕು. ಹಾಗೇ ಹೊಸ ಮದುವೆ ಗಂಡು ದಿಲೀಪ್ ತಮ್ಮ ಶ್ರೀಮತಿಯಿಂದ ಬಿಡುವು ಸಿಕ್ಕಾಗಲೆಲ್ಲಾ ತರಾವರಿ ಸಣ್ಣ ಸಣ್ಣ ಹೂಗಳ ಫೋಟೊ ತೆಗೆಯಲು ನೆಲದ ಮೇಲೆ ಕೂತು ಮಲಗಿ ಇತ್ಯಾದಿ ಸರ್ಕಸ್ ಮಾಡುತ್ತಿದ್ದರು. ಪಕ್ಕದಲ್ಲಿ ಹೂಮನಸ್ಸಿನ ಮಡದಿಯನ್ನು ಬಿಟ್ಟು ಹೂಗಳ ಹಿಂದೆ ಏಕೆ ಬಿದ್ದಿರಬಹುದು?  ಚಿಪ್ಸ್ ಪಾಕೆಟ್ಟು ತೆರೆದು ಪುಟ್ಟ ಸೃಜನ್ ಕೈಗೆ ಕೊಟ್ಟು  ತಮ್ಮ ಬಾಯಿಗೆ ಹಾಕಿಸಿಕೊಳ್ಳುತ್ತಿದ್ದರು. ನವೀನ್ ತೇಜಸ್ವಿಯವರ ಪುಸ್ತಕ ಓದುವಾಗ ವಸುದೇಶ್ ಪಾಠಕ್ ಅಂತೂ ಅದ್ಯಾಕೋ ಪಕ್ಕದ ಪುಟ್ಟದ ಬಂಡೆಯ ಮೇಲೆ ಸುಮ್ಮನೇ ಏನೋ ಅಲೋಚನೆಯಲ್ಲಿ ಕುಳಿತುಬಿಟ್ಟಿದ್ದರು. ಅವರು ಪರಿಸರ, ತೇಜಸ್ವಿ ಬಗ್ಗೆ ಯೋಚಿಸುತ್ತಿದ್ದರೋ ಇನ್ನೇನು ಕನಸು ಕಾಣುತ್ತಿದ್ದರೋ ಗೊತ್ತಿಲ್ಲ.

ನಮಗೆ ಕಾಣದ್ದು ನಿಮಗೇನು ಕಂಡಿರಬಹುದು ದಿಲೀಪ್!


ಏಕಾಂತದಲ್ಲಿ ಚಿಂತನೆಯೋ? ಚಿಂತನೆಯಲ್ಲಿ ಏಕಾಂತವೋ?


ನನಗೆ ಬಿಟ್ಟು ಬೇರಾರಿಗೂ ಕೊಡಬೇಡ ಪುಟ್ಟ


ಗುರುಪ್ರಸಾದ್‍ರವರ ಮುಳ್ಳಿನ ಫೋಟೊ


 ಒಂದೊಂದೇ ಎಲೆಗಳನ್ನು ತೋರಿಸುತ್ತಾ "ಇದು ಯಾವ ಗಿಡದ್ದು" ಅಂತ ಕೇಳುತ್ತಿರುವ ಈಶ್ವರ ಪ್ರಸಾದ್.

 ಈ ನಡುವೆ ಸುಗುಣ ಮಹೇಶ್‍ರವರ ಮಗ ಮನುವಚನ ಒಂದು ತರಲೇ ಕೆಲಸ ಮಾಡಿಬಿಟ್ಟಿದ್ದ. ನೋಡುವುದಕ್ಕೆ ತರಲೇ ಕೆಲಸವಾದರೂ ಅದು ಎಲ್ಲರ ತಲೆಗೂ ಕೆಲಸ ಕೊಡುವಂತದ್ದಾಗಿತ್ತು.  ಅದೇನೆಂದರೆ ಆತ ಹತ್ತಾರು ಮರಗಳ ಎಲೆಗಳನ್ನು ಯಾರಿಗೂ ಗೊತ್ತಿಲ್ಲದಂತೆ ಕಿತ್ತು ತಂದಿದ್ದ.  ಗಿಡ ನೆಡುವ ಕಾರ್ಯಕ್ರಮವಾದ ನಂತರ ಅದನ್ನು ನೇರ ಈಶ್ವರ ಪ್ರಸಾದ್ ಕೈಗ್ ತಲುಪಿಸಿ ಈ ಎಲೆಗಳು ಯಾವ ಮರಗಳದ್ದು ಹೇಳಲೇಬೇಕು ಎಂದು ದುಂಬಾಲು ಬಿದ್ದಿದ್ದ. ಎಲ್ಲರಿಗಿಂತ ಒಂದು ಕೈ ಹೆಚ್ಚೇ ಕುತೂಹಲಿಯಾದ ಈಶ್ವರಪ್ರಸಾದ್  ಅದರಲ್ಲೂ ಒಂದು ಆಟ ಹೂಡಿಬಿಟ್ಟರು. ಅದೇನೆಂದರೆ ಎಲ್ಲರನ್ನು ಒಟ್ಟಿಗೆ ಸೇರಿಸಿದರು. ಒಂದೊಂದು ಎಲೆಯನ್ನು ತೋರಿಸುತ್ತಾ ಇದು ಯಾವ ಮರದ ಎಲೆ? ಎಂದು ಕೇಳುವುದು?  ಪ್ರಾರಂಭವಾಯಿತಲ್ಲ.  ಮತ್ತೆ ಮಕ್ಕಳಂತೆ ಎಲ್ಲರೂ ಕುತೂಹಲದಿಂದ ಒಂದೊಂದು ಎಲೆಗೂ ಉತ್ತರಿಸತೊಡಗಿದರು. ಸರಿ ಉತ್ತರ ಕೊಟ್ಟವರಿಗೆ ಬೆನ್ನು ತಟ್ಟುವಿಕೆ ಚಪ್ಪಾಳೆ. ಈ ಆಟದಲ್ಲಿ ಅನೇಕ ವಿಷಯಗಳು ಎಲ್ಲರ ಮನಸ್ಸಿನಲ್ಲಿ ಜಾಗ ಮಾಡಿಕೊಂಡವು. ಇದು ಮುಗಿಯಿತು ಎನ್ನುವಷ್ಟರಲ್ಲಿ ದೂರದಲ್ಲಿ ಹಕ್ಕಿಯೊಂದು ಕೂಗಿತು. ಅದನ್ನು ನೋಡಿ ನಮ್ಮ ಪ್ರಕಾಶ್ ಹೆಗಡೆ ಸುಮ್ಮನಿರಬೇಕಲ್ಲ. ಅವರು ಅದಕ್ಕೆ ಉತ್ತರವಾಗಿ ಕೂಗಿದರು. ಹೀಗೆ ಕೂಗಾಟ ಎಲ್ಲರಲ್ಲೂ ಶುರುವಾಯಿತು. ಕೊನೆಗೆ ಅದೇ ಒಂದು ಹೊಸ ಆಟವಾಗಿ ಪರಿವರ್ತನೆಯಾಗಿಬಿಟ್ಟಿತ್ತು.

 23.48 ಸೆಕೆಂಡು ಒಂದೇ ಸಮನೇ ಕೂಗಿದ ಪ್ರಕಾಶ್ ಹೆಗಡೆ

 ಈ ಆಟದ ನಿಯಮವೇನೆಂದರೆ ಯಾರು ಎಷ್ಟು ಸಮಯ ಕೂಗುತ್ತಾರೋ ನೋಡೋಣ ಎನ್ನುವ ಪರೀಕ್ಷೆ.   ಒಬ್ಬೊಬ್ಬರಾಗಿ ಉಸಿರು ಹಿಡಿದು ಬಿಡುವವರೆಗೆ ಕೂಗುವಂತದ್ದು.  ರಾಘು, ನವೀನ್, ಉಮೇಶ್, ಪರಂಜಪೆ, ಅನಿಲ್, ಗುರುಪ್ರಸಾದ್, ವಸುದೇಶ್, ಯುವಕರಾದಿಯಾಗಿ ಎಲ್ಲರೂ ಕೂಗಿದರು. ದಂಪತಿಗಳ ಪತಿಗಳಂತೂ  ತಮ್ಮ ಮಡದಿಯರನ್ನು ಮೆಚ್ಚಿಸಲೋಸುವೇನೋ ಸ್ವಲ್ಪ ಜೋರಾಗಿಯೇ ಕೂಗಿದರು. ಮದುವೆಯಾಗದ ಪಡ್ಡೇ ಹೈಕಳಂತೂ ಎಷ್ಟು ಜೋರಾಗಿ ಕೂಗಿದರೆಂದರೆ ದೂರದಲ್ಲಿರುವ ತಮ್ಮ ಮೆಚ್ಚಿನ ಗೆಳತಿಗೆ ಕೇಳುತ್ತಿದೆಯೇನೋ[ಹಾಗೆ ಅಂದುಕೊಂಡಿದ್ದು ಅವರ ಭಾವನೆ]ಅಂತ ಮಧುರವಾದ ಭಾವನೆಗಳನ್ನು ವ್ಯಕ್ತಪಡಿಸುತ್ತಾ ಕೂಗಿದರು.  ನಂತರ ಹೆಣ್ಣುಮಕ್ಕಳ ಸರಧಿ. ದಿವ್ಯ ಕೂಗಿದ್ದೂ ಯಾರ್‍ಇಗೂ ಕೇಳಿಸಲೇ ಇಲ್ಲ.  ಅದೇ ರೀತಿ ಇನ್ನೂ ದಂಪತಿಗಳಲ್ಲಿ ದಂಗಳ ಕೂಗು. ಅವರು ಕೂಗಿ ಕಿರುಚಿದ್ದು ಯಾರ್‍ಇಗೂ ಸರಿಯಾಗಿ ಕೇಳಿಸಲೇ ಇಲ್ಲ.  ನಿಮ್ಮ ಯಜಮಾನರ ಮೇಲೆ ಅದೆಷ್ಟು ವರ್ಷಗಳ ಸಿಟ್ಟಿದೆಯೋ ಜೋರಾಗಿ ಕೂಗಿ ತೀರಿಸಿಕೊಳ್ಳಿ ಎಂದು ನಾವೆಲ್ಲ ಅದೆಷ್ಟು ಸ್ಪೂರ್ತಿ ತುಂಬಿದರೂ ಚೇತನಭಟ್, ಇಬ್ಬರೂ ಆಶಾ ಅಕ್ಕಂದಿರು, ಶ್ರೀಮತಿ ಉಮೇಶ್ ದೇಶಾಯಿ, ಹೇಮಾ, ಪ್ರಗತಿ ಹೆಗಡೆ, ಸುಗಣಕ್ಕ.........ಯಾರ ಕೂಗೂ ಜೋರಾಗಿ ಕೇಳಿಸಲೇ ಇಲ್ಲ.  ಬಹುಶಃ ಇಲ್ಲೆಲ್ಲಾ ಕೂಗಾಡಿದರೇ ಏನು ಉಪಯೋಗ ಮನೆಯಲ್ಲಿ ತಮ್ಮ ಪತಿಗಳ ಮೇಲೆ ಪ್ರಯೋಗಿಸಿದರೆ ಉಪಯೋಗಕ್ಕೆ ಬರುತ್ತದೆ ಎಂದುಕೊಂಡು ನಮ್ಮ ಅಮಿಶಗಳನ್ನೆಲ್ಲ ತಿರಸ್ಕರಿಸಿಬಿಟ್ಟರು. ಈ ಸ್ಪರ್ಧೆಯ ಪೈಪೋಟಿಯಲ್ಲಿ ಈಶ್ವರ ಪ್ರಸಾದ್ ಸೇರಿದಂತೆ ಅನೇಕ ಯುವಕರು ಮುಂದಿದ್ದರೂ ಕೊನೆಗೂ ಈ ಕೂಗಾಟದಲ್ಲಿ  ಗೆದ್ದವರು ಪಕ್ಕುಮಾಮ. ಅವರು ಉಸಿರು ಹಿಡಿದು ೨೩.೫೨ ಸೆಕೆಂಡು ಕೂಗಿದ್ದರು. ಅವರಿಗೆ ಕೊನೆಯಲ್ಲಿ ಬಹುಮಾನ ಕೊಡಲಾಯಿತು. ಅವರಿಗೆ ಹತ್ತಿರವಾಗಿ ಕೂಗಿದವರು ಉಮೇಶ್ ದೇಸಾಯಿ ೧೯ ಸೆಕೆಂಡು. ಪಕ್ಕುಮಾಮನ ಮಗ ಆಶೀಶ್ ಕೂಡ ೧೪ ಸೆಕೆಂಡುಗಳವರೆಗೆ ಕೂಗಿದ್ದ.


       ಅದಾದ ನಂತರ ಊಟ.  ಊಟ ಸರಳವಾಗಿತ್ತು.  ಒಟ್ಟಿಗೆ ಕೂತು ಎಲ್ಲರೂ ಕೂತು ತಮಾಷೆ ಮಾಡುತ್ತಾ, ನಗುತ್ತಾ ಆನಂದಿಸುತ್ತಾ ತಮ್ಮ ಮನೆಮನೆಕತೆಗಳನ್ನು ಹೇಳುತ್ತಾ ತೃಪ್ತಿಯಿಂದ ಊಟಮಾಡಿದೆವು. ಊಟ ನಡುವೆ ಕೋತಿಗಳ ಕಾಟ ತಪ್ಪಿಸಲು ಕೆಲವು ಬಾರ್ಡರ್ ಸೆಕ್ಯುರಿಟಿ ಫೋರ್ಸ್[ರಾಘು,ನವೀನ್, ಅನಿಲ್]ನವರು ಕೈಯಲ್ಲಿದ್ದ ಕೋಲುಗಳನ್ನು ಗನ್ನುಗಳೆಂದುಕೊಂಡು ಫೋಸ್ ಕೊಡುತ್ತಾ ಕೋತಿಗಳಿಗೆ ಬೆದರಿಕೆ ಹಾಕುತ್ತಾ, ನಮ್ಮ ಊಟ ಸರಾಗವಾಗಿ ಆಗುವಂತೆ ನೋಡಿಕೊಂಡರು.

 ಹಳೆ ಪ್ಲಾಸ್ಟಿಕ್, ಹಳೇ ದಬ್ಬಾ. ಕೈಲೊಂದು ಮೊಬೈಲು..ಕಣೊ ಹೋಯಿ....
 ಊಟವಾದ ಮೇಲೆ ಒಂದು ಸಣ್ಣ ನಡಿಗೆ. ತಿಪ್ಪಗೊಂಡನಹಳ್ಳಿ ಜಲಾಶಯದ ಸೇತುವೆ ಮೇಲೆ ನಡೆದಿದ್ದು ನಿಜಕ್ಕೂ ಖುಷಿಯ ಅನುಭವ. ಅಲ್ಲಿಂದ ನಮ್ಮ ಪಯಣ ಅಲ್ಲಿನ ಅತಿಥಿ ಗೃಹಕ್ಕೆ.  ೧೯೩೦ರಲ್ಲಿ ಬ್ರಿಟಿಸರು ಕಟ್ಟಿದ ಆ ಆತಿಥಿಗೃಹ ನಮ್ಮನ್ನು ಮೋಡಿ ಮಾಡಿತ್ತು.  ಒಳಗೆ ಹೋಗುತ್ತಿದ್ದಂತೆ ಅಲ್ಲಿದ್ದ ಕೆಲಸಗಾರರು ನಮಗಾಗಿ ಕುಡಿಯಲು ನೀರು ಕೊಟ್ಟರು. ನಡುವೆ ಈಶ್ವರ ಪ್ರಸಾದ್ ಕಲ್ಲಹತ್ತಿ ಮರವನ್ನು ತೋರಿಸಿ ಅದು ಹೇಗೆ ಒಂದು ಬಂಡೆಸಿಕ್ಕಿದರೆ ಅದನ್ನು ಕೊರೆದು ಸೀಳಿಕೊಂಡು ತನ್ನ ಬೇರು ಬಿಟ್ಟುಕೊಂಡು ಹೋಗುತ್ತದೆ ಎನ್ನುವುದನ್ನು ವಿವರಿಸಿದರು.


 ಗೆಸ್ಟ್ ಹೌಸ್ ಒಳಗೆ ಒಂದು ಸಣ್ಣ ಪವರ್ ಪಾಯಿಂಟ್ ಕಾರ್ಯಕ್ರಮ. ೨೦೭೦ದಲ್ಲಿ ನಮ್ಮ ಪರಿಸ್ಥಿತಿ ಹೇಗಿರಬಹುದು ಎನ್ನುವುದರ ಬಗ್ಗೆ ತಿಳುವಳಿಕೆ ಮೂಡಿಸಲು ವಿಜ್ಞಾನಿ, ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಬರೆದ ಪತ್ರವದು. ಎಲ್ಲರೂ ನೋಡುತ್ತಿದ್ದಂತೆ ನಮ್ಮ ಮಕ್ಕಳ ಮತ್ತು ಮೊಮ್ಮೊಕ್ಕಳ ಪರಿಸ್ಥಿತಿ ಹೇಗಿರಬಹುದು ಅನ್ನುವುದನ್ನು ಕಲ್ಪಿಸಿಕೊಂಡಾಗ ಎಲ್ಲರಿಗೂ ದಿಗಿಲಾಗಿತ್ತು.  ಎಲ್ಲರೂ ಗೆಸ್ಟ್ ಹೌಸಿನ ವರಾಂಡಕ್ಕೆ ಬಂದು ಗುಂಡಾಗಿ ಕುಳಿತೆವಲ್ಲ!  ಅಮೇಲೆ ನಡೆದಿದ್ದು ನಿಜಕ್ಕೂ ಫನ್.

 ಮೊದಲಿಗೆ ನಾನು ಕೆಲವು ಚುಟುಕು ಆಟಗಳನ್ನು ಆಡಿಸಿದೆ. ಅದರಲ್ಲಿ ಮೊದಲನೆಯದು ಗೋವಿಂದನ ಆಟ. ಗೋವಿಂದನ ಆಟದಲ್ಲಿ ಸಿಕ್ಕಿಕೊಂಡವರು ನಡುವೆ ಬಂದು ತಮಗೆ ತಿಳಿದ ನೃತ್ಯ ಮಾಡಬೇಕು. ಬೇರೆಲ್ಲೂ ಸಿಗದ ತರಾವರಿ ನೃತ್ಯಗಳು ಅವು. ಒಬ್ಬರ ನಾಚಿಕೆಯೇನು, ಮಗದೊಬ್ಬರ ನಡುಕುಲುಕುವೆಯೇನು, ಒಂದೇ ಎರಡೇ.... ನೋಡಲು ತರಾವರಿ ಸಿಕ್ಕಿದ್ದವು. ಅದಾದ ಮೇಲೆ ಒಬ್ಬೊಬ್ಬರಾಗಿ ತಮ್ಮ ಪಕ್ಕದವರ ಹೆಸರನ್ನು ಸೇರ್‍ಇಸಿಕೊಂಡು ಹೇಳುವ ಆಟ. ಇದಂತೂ ಬಲೇ ಮಜವಾಗಿತ್ತು. ಮೊದಲನೆಯವರಿಗೆ ತಮ್ಮ ಹೆಸರಿನ ಜೊತೆಗೆ ಪಕ್ಕದವರ ಹೆಸರು ಮಾತ್ರ ಹೇಳಬೇಕಿದ್ದರೆ ಕೊನೆಯವರಿಗೆ ಮೊದಲಿಂದ ಕೊನೆಯವರೆಗಿನ ಎಲ್ಲರ ಹೆಸರನ್ನು ಹೇಳಬೇಕಿತ್ತು. ಈ ಆಟವನ್ನು ಆಡಿಸಿದ್ದು ನಾನಾದ್ದರಿಂದ ಮೊದಲು ನನ್ನಿಂದಲೇ ಪ್ರಾರಂಭವಾಗಿತ್ತು. ಅದಕ್ಕೆ ನಾನು ಎಲ್ಲರ ಹೆಸರು ನೆನಪಿಸಿಕೊಂಡು ಹೇಳುವುದರಿಂದ ತಪ್ಪಿಸಿಕೊಂಡಿದ್ದೆ.

 ನಂತರ ಶುರುವಾಗಿದ್ದು ಗುರುಪ್ರಸಾದ್‍ರವರು ಆಡಿಸಿದ ಮೈಂಡ್ ಗೇಮ್.  ಎಲ್ಲರನ್ನೂ ನಾಲ್ಕು ಗುಂಪುಗಳಾಗಿ ವಿಂಗಡಿಸಿ ಆಡಿದ್ದ ಆಟವಂತೂ ನಿಜಕ್ಕೂ ಮರೆಯಲಾಗದ್ದು. ಈ ಆಟದಲ್ಲಿ ಮೊದಲಿಗೆ ನಮ್ಮ ಪರಿಚಯಿಸುವ ಕ್ರಮದಲ್ಲಿ ನಮ್ಮ ತಂಡ ಅದ್ಬುತವೆನ್ನುವ ಕ್ರಿಯೇಟಿವಿಟಿ ಪ್ರದರ್ಶಿಸಿ ಮುಂದೆ ಇದ್ದೆವು.  ಆದರೆ ನಂತರ ನಮಗೆ ಸಿಕ್ಕಿದ್ದೆಲ್ಲಾ ತುಂಬಾ ಕಷ್ಟದ್ದು. ಉಳಿದ ಮೂರು ತಂಡಗಳಿಗೆ ಒಂದಲ್ಲ ಒಂದು ಸುಲಭ ವಿಷಯಗಳು ಸಿಕ್ಕು ಅವರ ಅಂಕಗಳು ಸಹಜವಾಗಿ ನಮಗಿಂತ ಹೆಚ್ಚಾಗಿಬಿಟ್ಟವು.  ಇದೆಲ್ಲಾ ಮೋಸ, ನಮಗೆ ಅನ್ಯಾಯವಾಗಿದೆ, ಏಕೆಂದರೆ ನಮಗೆ ತುಂಬಾ ಕಷ್ಟ ವಿಷಯಗಳು ಸಿಕ್ಕಿವೆ. ನಮ್ಮ ಕಡೆ ಅದೃಷ್ಟವಿಲ್ಲ. ಆದರೂ ನಾವು ನಮ್ಮ ಶಕ್ತಿಮೀರಿ ಇಷ್ಟು ಅಂಕ ಗಳಿಸಿದ್ದೇವೆ. ಅದು ಉಳಿದವರು ಗಳಿಸಿದ ಅಂಕಗಳಿಗೆ ಹೋಲಿಸಿದರೆ ಎರಡರಷ್ಟು ಲೆಕ್ಕ ಎಂದು ತೆಗೆದುಕೊಳ್ಳಬೇಕೆಂದು ನಾವು ಅಪೀಲ್ ಮಾಡಿದರೂ ಜಡ್ಜುಗಳಾದ ಗುರುಪ್ರಸಾದ್ ಮತ್ತು ಶಿವಪ್ರಕಾಶ್ ನಮ್ಮ ಕಡೆ ಸ್ಕೋರು ಹೆಚ್ಚು ಕೊಡಲಿಲ್ಲ. ಕೊನೆಯಲ್ಲಿ ಶಿವಪ್ರಕಾಶನನ್ನು ನಿಶ್ಯಬ್ದವಾಗಿ ಕರೆದು "ನಿನದೊಂದು ಅಮೇಜಿಂಗ್ ಫೋಟೊ ತೆಗೆದಿದ್ದೇನೆ. ಅದನ್ನು ಯಾರಾದರೂ ಹುಡುಗಿ ನೋಡಿದರೆ ಕ್ಲೀನ್ ಬೋಲ್ಡ್, ಅದನ್ನು ನಿನಗೆ ಪರ್ಸನಲ್ಲಾಗಿ ಕಳಿಸುತ್ತೇನೆ. ನಮಗೆ ಹೆಚ್ಚು ಮಾರ್ಕ್ಸ್ ಹಾಕಿ ನಮ್ಮನ್ನು ಮೊದಲ ಸ್ಥಾನದಲ್ಲಿ ನಿಲ್ಲಿಸು" ಅಂತ ಆತನ ಕಿವಿಯಲ್ಲಿ ಹೇಳಿ ಮ್ಯಾಚ್ ಫಿಕ್ಸ್ ಮಾಡಿದರೂ ಆಟ ನನ್ನ ಕುತಂತ್ರಕ್ಕೆ ಸೊಪ್ಪು ಹಾಕದೇ ನಾನು ಈ ಮಾತನ್ನು ಹೇಳಿದ್ದೇ ಅಪರಾಧವಾಯಿತೇನೋ ಎನ್ನುವಂತೆ ಇದ್ದ ಸ್ಥಾನಕಿಂತ ಕೊನೆಯ ಸ್ಥಾನಕ್ಕೆ ತಳ್ಳಿಬಿಟ್ಟಿದ್ದ.

ಸುಗುಣಕ್ಕ, ದಿವ್ಯ, ಪ್ರಗತಿ, ದಿಲೀಪ್ ಮತ್ತು ನಾನಿದ್ದ ಸೃಜನಶೀಲತೆ ಎನ್ನುವ ನಮ್ಮ ತಂಡ ಕೊನೆಯ ಸ್ಥಾನಕ್ಕೆ ಬಿದ್ದರೆ, ಪ್ರಕಾಶ್ ಹೆಗಡೆ, ಹೇಮಾಶ್ರಿ, ಆಶೀಷ್, ಪ್ರಶಾಂತ್ ಮತ್ತು ವಸುದೇಶ್ ಇದ್ದ "ಕಾರಂತ" ತಂಡ ಮೂರನೇ ಸ್ಥಾನಕ್ಕಿಳಿದಿತ್ತು.  ಅಂಜಲಿ ಅಕ್ಕ, ನಂಜುಂಡ, ಮಹೇಶ್, ಮನು, ಮತ್ತು  .......ಇದ್ದ ಪೋಲಿ ಪಠಾಲಂ ತಂಡ ಹೆಸರಿಗೆ ಎರಡನೇ ಸ್ಥಾನವನ್ನು ಗಳಿಸಿತು. ಅಜಾದ್, ರಾಘು, ಚೇತನ, ಆಶಾಕ್ಕ ಮತ್ತು .........ಇದ್ದ "ಅಪ್ರತಿಮ ಕನ್ನಡಿಗರು" ತಂಡ ಮೊದಲನೇ ಸ್ಥಾನ ಗಳಿಸಿತು.

 ಕೊನೆಯಲ್ಲಿ ಕುಳಿತಲ್ಲೇ ಆಡುವ ಬಾಲ್ ಗೇಮ್. ಈ ಆಟದಲ್ಲಿ ಒಬ್ಬರಿಗೊಬ್ಬರೂ ಬಾಲನ್ನು ಕೊಡುತ್ತಾ ಹೋಗುವುದು. ಸಂಗೀತ ನಿಂತಾಗ ಬಾಲ್ ಯಾರ ಕೈಯಲ್ಲಿರುತ್ತದೋ ಅವರು ಔಟ್. ಹೀಗೆ ಎಲ್ಲರೂ ಔಟಾದ ನಂತರ ಕೊನೆಯಲ್ಲಿ ಗೆದ್ದಿದ್ದು ಪ್ರಗತಿ ಹೆಗಡೆ.


ಎಲ್ಲ ಮುಗಿಯಿತಲ್ಲ. ಕೊನೆಯಲ್ಲಿ ಒಂದು ಸುಂದರ ಗ್ರೂಪ್ ಫೋಟೊ.  ಅದಾದ ನಂತರ ಬಹುಮಾನ ಕಾರ್ಯಕ್ರಮ. ಬಹುಮಾನ ಏನು ಎನ್ನುವುದನ್ನು ನಾನು ಹೇಳಲಾರೆ. ಆ ಫೋಟೊಗಳನ್ನು ನಾನು ಕ್ಲಿಕ್ಕಿಸಲಾಗಲಿಲ್ಲ. ಪ್ರಕಾಶ್ ಹೆಗಡೆ ಇನ್ನಿತರರು ಕ್ಲಿಕ್ಕಿಸಿದ್ದಾರೆ ಅವರು ಬ್ಲಾಗಿಗೆ ಬಂದಾಗ ನೋಡಬೇಕು.
\
ಮುಂಗಾರು ಮಳೆಯ ಹಾಡನ್ನು ಕೆಟ್ಟದಾಗಿ ಆಡುವ ಬಹುಮಾನ ಗಿಟ್ಟಿಸಿದ ಗುರುಪ್ರಸಾದ್ ಹಾಡನ್ನು ಸೊಗಸಾಗಿ ಕೆಟ್ಟತನದಲ್ಲಿ ಹಾಡಿ ಎಲ್ಲರ ಮೆಚ್ಚುಗೆ ಗಳಿಸಿದರು.


ಚಿತ್ರಬಂಧವನ್ನು ಜೋಡಿಸುವಲ್ಲಿ ನಿರತರಾದ "ಕಾರಂತ" ತಂಡ.
ಎಲ್ಲವೂ ಮುಗಿದು ಹೊರಡುವಾಗ ಎಲ್ಲರ ಹೃದಯ ತುಂಬಿಬಂದಿತ್ತು. ಈಶ್ವರಪ್ರಸಾದರಿಗೆ ಆತ್ಮೀಯವಾದ ಧನ್ಯವಾದಗಳನ್ನು ಹೇಳಿ ಹೊರಟಾಗ ಇವತ್ತಿನ ದಿನವನ್ನು ನಮ್ಮ ದಿನವಾಗಿ ಪರಿವರ್ತಿಸಿಕೊಂಡು ಹೊರಗಿನ ಪ್ರಪಂಚವನ್ನು ಮರೆತು ಹಕ್ಕಿಯಂತೆ ಆಕಾಶದಲ್ಲಿ ತೇಲಿದ ಅನುಭವ. ಒಟ್ಟಾರೆ ಕಾರ್ಯಕ್ರಮದಲ್ಲಿ ನಾವು ಅನುಭವಿಸಿದ ಖುಷಿ, ಗೆಳೆತನದಲ್ಲಿನ ಮುಗ್ದತನ, ಹೊಸತನ್ನು ನೋಡಬೇಕು, ಕಲಿಯಬೇಕು ಎನ್ನುವ ಮಗುವಿನ ಮನಸ್ಸು, ಗಿಡನೆಡುವಾಗ ಮತ್ತು ಇಡೀದಿನವನ್ನು ನಮ್ಮದಾಗಿಸಿಕೊಂಡ ಸಾರ್ಥಕತೆ, ಹಕ್ಕಿಯಂತೆ ನಮ್ಮದೇ ಲೋಕದಲ್ಲಿ ಆಟವಾಡುತ್ತಾ ಕಂಡ ಕನಸು..........ಇನ್ನೂ ಏನೇನೋ ವರ್ಣಿಸಲು ಪದಗಳಲ್ಲ.

ನಂಜುಂಡ ಭಟ್ ಮತ್ತು ಚೇತನಭಟ್ ದಂಪತಿಗಳ ಮಗ ಸೃಜನ್ ನನ್ನ ಕ್ಯಾಮೆರಾಗೆ ಸೆರೆಯಾದದ್ದು ಹೀಗೆ!


ಮೊದಲ ಪ್ರಯತ್ನದಲ್ಲಿ ನಮ್ಮ ಬ್ಲಾಗ್ ವನಕ್ಕೆ ಹನ್ನೆರಡು ಗಿಡಗಳನ್ನು ನೆಟ್ಟಿದ್ದೇವೆ. ಮುಂದೆ ಅದು ನೂರಹನ್ನೆರಡು..ಸಾವಿರದ ಹನ್ನೆರಡು...ಅಮೇಲೆ ಲಕ್ಷ......ಹೀಗೆ ಮುಂದುವರಿಯಲು ನಮ್ಮಿಂದಾದ ಸಹಕಾರವನ್ನು ಮಾಡುತ್ತೇವೆ ಎಂದು ಎಲ್ಲರೂ ವಾಗ್ದಾನ ಮಾಡಿ ತಿಪ್ಪಗೊಂಡನಹಳ್ಳಿ ಬಿಟ್ಟು ನಮ್ಮ ಮಿನಿ ಬಸ್ ಹತ್ತಿದಾಗ ಸಮಯ ಆಗಲೇ ಏಳುಗಂಟೆದಾಟಿತ್ತು.


ಎಡದಿಂದ ಬಲಕ್ಕೆ ಆಜಾದ್, ಪ್ರಕಾಶ್ ಹೆಗಡೆ, ಆಶಾಅಕ್ಕ, ಈಶ್ವರ್ ಪ್ರಸಾದ್. ಮದ್ಯದ ಸಾಲಿನಲ್ಲಿ ನಿಂತವರು ಎಡದಿಂದ ಬಲಕ್ಕೆ: ಮನುವಚನ್, ದಿವ್ಯಹೆಗಡೆ, ಪ್ರಕಾಶ್ ಹೆಗಡೆಯವರ ಅಮ್ಮ, ಪ್ರಕಾಶ್ ಹೆಗಡೆಯವರ ಮಗ ಆಶೀಷ್, ಪರಂಜಪೆಯವರ ಶೀಮತಿ ಆಶಾ, ಪರಂಜಪೆ, ಉಮೇಶ್ ದೇಸಾಯಿ, ಅನಿಲ್ ಬೆಡಗೆ, ನಂಜುಂಡ ಭಟ್, ಸುಗುಣಕ್ಕ, ಚೇತನಭಟ್, ಅವರ ಕೈಯಲ್ಲಿ ಅವರ ಮಗ ಸೃಜನ್, ಉಮೇಶ್ ದೇಸಾಯಿಯವರ ಶ್ರೀಮತಿ ಅಂಜಲಿ, ನನ್ನ ಶ್ರೀಮತಿ ಹೇಮಾಶ್ರಿ. 
ಅರ್ಧಕುಳಿತವರು ಎಡದಿಂದ ಬಲಕ್ಕೆ:  ಶಿವು,  ವಸುದೇಶ್ ಪಾಠಕ್, ಗುರುಪ್ರಸಾದ್, ಶಿವಪ್ರಕಾಶ್,ರಾಘವೇಂದ್ರ, ನವೀನ್, ಪೂರ್ತಿ ಕುಳಿತವರು ಎಡದಿಂದ ಬಲಕ್ಕೆ:  ದಿಲೀಪ್ ಹೆಗಡೆ, ಪ್ರಗತಿ ಹೆಗಡೆ, ಸುನಿಧಿ, ಮಹೇಶ್.

ಇಡೀ ದಿನದ ಕಾರ್ಯಕ್ರಮದಲ್ಲಿ ನಾನು ಬರೆದಿದ್ದು ಸ್ವಲ್ಪ ಮಾತ್ರ. ಪ್ರತಿಯೊಂದು ಪ್ರಸಂಗವನ್ನು ಬರೆದರೆ ಹತ್ತಕ್ಕಿಂತ ಹೆಚ್ಚು ಲೇಖನಗಳಾಗುವುದು ಖಂಡಿತ. ಮತ್ತೆ ಇಡೀ ದಿನದ ದೊಡ್ಡ ಜೋಕ್ ಎಂದರೆ ಹೊರಡುವ ಕೊನೆ ಗಳಿಗೆಯ ಗಡಿಬಿಡಿಯಲ್ಲಿ ನಮ್ಮ ಕ್ಯಾಮೆರಾ ಭ್ಯಾಗನ್ನು ಮರೆತುಬಂದಿದ್ದು.  ಹಾಗಾಗಿ ನವೀನ್[ಹಳ್ಳಿಹುಡುಗನ ಸಣ್ಣ ಕ್ಯಾಮೆರವನ್ನು ಕಿತ್ತುಕೊಂಡು ಅದರಲ್ಲಿಯೇ ಕೆಲವು ಫೋಟೊಗಳನ್ನು ಕ್ಲಿಕ್ಕಿಸಿ ಸಮಾಧಾನ ಮಾಡಿಕೊಂಡಿದ್ದೆ.


ಚಿತ್ರಗಳು.
ಶಿವು.ಕೆ,  ನವೀನ್,  ಗುರುಪ್ರಸಾದ್,
ಶಿವಪ್ರಕಾಶ್,
ಲೇಖನ. ಶಿವು.ಕೆ

Monday, August 23, 2010

ಟಿ.ವಿ, ಡಿವಿಡಿ ಪ್ಲೆಯರ್, ಸ್ಪೀಕರ್ ಬಾಕ್ಸ್, ಮಿಕ್ಸರ್ ಗ್ರೈಂಡರ್, ಮಿಕ್ಸಿ......


      ಕಳೆದ ಒಂದು ತಿಂಗಳಿಂದ ಇಡೀ ಕಾರ್ಯಕ್ರವನ್ನು ಒಂದು ಸಿನಿಮಾದ ಚಿತ್ರಕತೆಯಂತೆ ರೂಪರೇಷೆಗಳನ್ನು ಪಕ್ಕಾ ಮಾಡಿಕೊಂಡು ಕೊನೆಯಲ್ಲಿ ನಮ್ಮ ಹುಡುಗರಾದ ಅನಿಲ್, ನಾಗರಾಜ್, ನವೀನ್, ಪ್ರವೀಣ್, ಶಿವಪ್ರಕಾಶ್, ಉದಯ್ ಹೆಗಡೆ ಇವರೆಲ್ಲರ ಜೊತೆ ಸೇರಿ ಚರ್ಚಿಸಿದ್ದೆ.   ಚಿತ್ರಕತೆ ಚೆನ್ನಾಗಿದ್ದಿದ್ದರಿಂದ ಕಾರ್ಯಕ್ರಮವೂ ಚೆನ್ನಾಗಿ ಆಯಿತು. ಇಡೀ ಕಾರ್ಯಕ್ರಮದಲ್ಲಿ ಕುವೈಟಿನ ಮೃದುಮನಸ್ಸಿನ ಸುಗುಣಕ್ಕ ಮತ್ತು ದೆಹಲಿಯ ಮನದಾಳದ ಪ್ರವೀಣ್ ಎನ್ನುವ ಸುಂದರಾಂಗನ ನಿರೂಪಣೆ ಸೇರಿದಂತೆ ಇತರ ವ್ಯವಸ್ಥೆಗಳು ಚೆನ್ನಾಗಿದ್ದು ನಾವು ನಿರೀಕ್ಷಿಸಿದ ಎಲ್ಲರೂ  ಕಾರ್ಯಕ್ರಮದ ಯಶಸ್ಸಿಗೆ ಕಾರಣರಾಗಿಬಿಟ್ಟಿದರು. ಆ ನಂತರ ನಡೆದಿದ್ದನ್ನು ನಾನು ಈಗ ಹೇಳಲೇಬೇಕಾಗಿದೆ. ಇನ್ನೇನು ಎಲ್ಲಾ ಮುಗಿಯಿತು ಎನ್ನುವಷ್ಟರಲ್ಲಿ ನಮ್ಮ ಹುಡುಗರು ತಮ್ಮ ತರಲೆ ಬುದ್ದಿಯನ್ನು ಹೊರಹಾಕಿಬಿಟ್ಟಿದ್ದರು. ಮತ್ತೆ ನನಗೆ "ದಿ ಮಿರರ್" [ಇರಾನಿ ಸಿನಿಮಾ]ನೆನಪಾಗತೊಡಗಿತು. ಏಕೆಂದರೆ ನಾನು ಆ ಚಿತ್ರದ ನಿರ್ಧೇಶಕನ ಸ್ಥಿತಿಗೆ ಬಂದುಬಿಟ್ಟಿದ್ದೆ. ಆ ಸಿನಿಮಾದ ಅರ್ಧದಲ್ಲೇ ಬಾಲನಟಿ ತನ್ನಿಂದ ಇದು ಸಾಧ್ಯವಿಲ್ಲವೆಂದು ತನ್ನ ಕೈಗೆ ಕಟ್ಟಿದ ಬ್ಯಾಂಡೇಜನ್ನು ಕಿತ್ತೆಸೆದು ನಾನು ನಟಿಸಲಾರೆ ಎಂದು ಹೊರನಡೆದಾಗ ಆ ನಿರ್ಧೇಶಕ ಜಾಫರ್ ಫನಾಯ್ ಅನುಭವಿಸಿದ ಸ್ಥಿತಿಯನ್ನು ನನಗೆ ತಂದೊಡ್ಡಿದ್ದರು.


ಇಷ್ಟಕ್ಕೂ ಅವರು ಮಾಡಿದ್ದೇನೆಂದರೆ  ನನಗೆ ಗೊತ್ತಿಲ್ಲದಂತೆ ಅವರು ಹೊಸದೊಂದು ವಿಭಿನ್ನತೆಯನ್ನು ತೋರಿಸಿದ್ದು.   ಇರಾನಿ ನಿರ್ಧೇಶಕ ಜಾಫರ್ ಫನಾಯ್‍ನಂತೆ ಮುಂದೆ ಏನಾಗುತ್ತದೆಯೆನ್ನುವುದನ್ನು ನೋಡೇ ಬಿಡೋಣ ಅಂತ ಆತ ನಿರ್ಧರಿಸಿದಂತೆ ನಾನು ಕೂಡ ಮಗುವಿನಂತೆ ಕುತೂಹಲಗೊಂಡಿದ್ದೆ. ಆ ಸಿನಿಮಾದಂತೆ ಮುಂದೆ ಆಗಿದ್ದೆಲ್ಲಾ ನನ್ನ ಮನಸ್ಸಿಗೆ, ಕನಸಿಗೆ, ಕಲ್ಪನೆಗೆ, ಮೀರಿದ್ದು. ಮತ್ತೆ ನಿಮ್ಮ ಮನಸ್ಸಿಗೆ, ಕನಸಿಗೆ, ಕಲ್ಪನೆಗೆ ಮೀರಿದ್ದು ಕೂಡ.

 ಕಾರ್ಯಕ್ರಮ ಮುಗಿದ ಮೇಲೆ ಬ್ಲಾಗ್ ಗೆಳೆಯರೆಲ್ಲರೂ ಸ್ವಲ್ಪ ಹೊತ್ತು ಇರಬೇಕು ಮತ್ತೊಂದು ಬಹುಮಾನ ವಿತರಣೆ ಕಾರ್ಯಕ್ರಮವಿದೆಯೆಂದು ಮೈಕಿನಲ್ಲಿ ಹೇಳಿದ್ದರಿಂದ ವಿದೇಶಗಳಿಂದ ಬಂದ ಬ್ಲಾಗಿಗರೂ ಸೇರಿದಂತೆ ಎಲ್ಲರೂ ಹಾಗೆ ತಮ್ಮ ತಮ್ಮ ಆಸನದಲ್ಲಿ ಕುಳಿತರು.  
   ಶುರುವಾಯಿತಲ್ಲ ಬಹುಮಾನ ವಿತರಣೆ ಕಾರ್ಯಕ್ರಮ. ಬಹುಮಾನ ವಿತರಣೆಗಾಗಿ ಮತ್ತೆ ಸುಗುಣಕ್ಕ ಮೈಕ್ ಹಿಡಿದರು. ಒಬ್ಬೊಬ್ಬರಾಗಿ ಬಂದು ಬಹುಮಾನವನ್ನು ಪಡೆದುಕೊಂಡರು. ನಾನು ನಾಲ್ಕು  ಬ್ಲಾಗಿಗರಿಗೆ ಕೊಡುವಷ್ಟರಲ್ಲಿ ಸುಸ್ತಾಗಿಬಿಟ್ಟೆ. ಏಕೆಂದರೆ ಒಂದೊಂದು ಬಹುಮಾನವೂ ಟಿ.ವಿ ಬಾಕ್ಸುಗಳಷ್ಟು ದೊಡ್ಡದಾಗಿದ್ದು ಬಾರವಾಗಿದ್ದವು.  ನನಗೆ ಸುಸ್ತಾಗಿ ನಂತರ ಬಹುಮಾನ ಕೊಡಲು ವಿ.ಅರ್.ಭಟ್ ಮತ್ತು ಡಾ.ಕೃಷ್ಣಮೂರ್ತಿಯವರನ್ನು ವೇದಿಕೆಗೆ ಕರೆದು ನಾನು ತಪ್ಪಿಸಿಕೊಂಡೆ. ಅವರಿಗೂ ಭಾರವನ್ನು ಹೊರಲಾರದೆ ಕೊನೆಗೆ ಪ್ರಕಾಶ್ ಹೆಗೆಡೆ ಬಂದರು.  ಕೊನೆಗೆ ನೋಡಿದರೆ ನಾನು ಮತ್ತು ನನ್ನ ಶ್ರೀಮತಿ ಹೇಮಾಶ್ರೀ ಸೇರಿದಂತೆ ಪ್ರತಿಯೊಬ್ಬ ಬ್ಲಾಗಿಗನೂ ಬಹುಮಾನ ವಿಜೇತ ಆಗಿದ್ದರು. ಎಲ್ಲರ ಕೈಯಲ್ಲೂ ದೊಡ್ಡ ಬಹುಮಾನದ ಬಾಕ್ಸುಗಳು.  ಇಷ್ಟು ದೊಡ್ಡದಾದ ಬಾಕ್ಸುಗಳನ್ನು ಬಹುಮಾನವಾಗಿ ಕೊಟ್ಟಿದ್ದಾರಲ್ಲ ಇದರೊಳಗೆ ಏನಿರಬಹುದು? ಟಿ.ವಿ, ಡಿವಿಡಿ ಪ್ಲೆಯರ್, ಸ್ಪೀಕರ್ ಬಾಕ್ಸ್, ಮಿಕ್ಸರ್ ಗ್ರೈಂಡರ್, ಮಿಕ್ಸಿ................ಹೀಗೆ ಎಲ್ಲರ ಕಲ್ಪನೆಗಳೂ ಆಕಾಶಕ್ಕೆ ಹಾರಾಡುತ್ತಿದ್ದವು.
     

         ನಮ್ಮ ಸಂಭ್ರಮ ಹೇಗಿತ್ತೆಂದರೆ ನಾವು ಬುಕ್ ಮಾಡಿದ್ದ ನಯನ ಸಭಾಂಗಣದ ಸಮಯ ಮುಗಿದಿದ್ದು ಗೊತ್ತಾಗಲಿಲ್ಲ. ಎಲ್ಲರೂ ಹೊರಗೆ ಬಂದೆವು.   ಹೊರಗೆ ಬಂದಾಗ ಅಲ್ಲೊಂದು ವಿಶಾಲ ಜಾಗದ ನಡುವೆ ಹತ್ತು ಮೆಟ್ಟಿಲುಗಳ ಜಾಗವೇ ನಮಗೆ ಒಂಥರ ವೇದಿಕೆಯಾಗಿಬಿಟ್ಟಿತ್ತು.  ಒಬ್ಬೊಬ್ಬರಾಗಿ ತಮಗೆ ಬಂದ ಬಾಕ್ಸುಗಳನ್ನು ಬಿಚ್ಚಿ ತಮ್ಮ ಗಿಫ್ಟುಗಳನ್ನು ಹೊರತೆಗೆಯತೊಡಗಿದರು.  ಅದನ್ನು ನಾನು ಬರೆದು ವಿವರಿಸುವುದಕ್ಕಿಂತ ನೀವೇ ಫೋಟೊಗಳನ್ನು ನೋಡಿಬಿಡಿ.  ನಕ್ಕು ನಕ್ಕು ಹೊಟ್ಟೆಯಲ್ಲಿ ಹುಣ್ಣಾದರೆ ನಾನು ಜವಾಬ್ದಾರನಲ್ಲ...........

 ಭಾರವಾದ ತಮ್ಮ ಉಡುಗೊರೆ ಬಾಕ್ಸುಗಳನ್ನು ಹೊತ್ತು ಹೊರತರುತ್ತಿರುವ ಬ್ಲಾಗಿಗರು.


 ತುಂಟ ರಾಘವೇಂದ್ರನಿಗೆ ಹುಡುಗಿಯರಿಗೆ ಲೈನ್ ಹೊಡೆಯಲು ಬಿಳಿಹಾಳೆಯ ಮೇಲೆ ಒಂದು ಸ್ಕೇಲು ಮತ್ತು ಗುರಿಯಿಡಲು ಒಂದು ಚಾಟರಬಿಲ್ಲು

  
ವಿ.ಅರ್‍.ಭಟ್ ರವರಿಗೆ ಸಿಕ್ಕಿದ್ದು ಗಣೇಶ ಬೀಡಿ ಮತ್ತು ಬೆಂಕಿಪೊಟ್ಟಣ. ಅದನ್ನು ಸೇದಲು ಜೊತೆಯಾದದ್ದು ಡಾ.ಡಿ.ಟಿ.ಕೆ ಕೃಷ್ಣಮೂರ್ತಿ ಸರ್.[ಇದೆಲ್ಲಾ ತಮಾಷೆಗಾಗಿ ಮಾಡಿದ್ದರಿಂದ ಭಟ್ಟರ ಗೆಳೆಯರು ಮತ್ತು ಅಭಿಮಾನಿಗಳು ಮತ್ತು ಡಾ.ಡಿ.ಟಿ.ಕೆ ಕೃಷ್ಣಮೂರ್ತಿಯವರ ಗೆಳೆಯರು, ಮನೆಯವರು, ಮತ್ತು ಅವರ ಗ್ರಾಹಕರು ತಪ್ಪುತಿಳಿಯಬಾರದಾಗಿ ವಿನಂತಿ]


 ಮದುಮಗ ಶಿವಪ್ರಕಾಶನಿಗೆ ಬಹ್ಮಚರ್ಯವೇ ಜೀವನ ಪುಸ್ತಕ



ಕುವೈಟಿನಿಂದ ಬಂದಿರುವ   ಮೃದುಮನಸ್ಸಿನ ಸುಗಣಕ್ಕನಿಗೆ ಪ್ಲಾಸ್ಟಿಕ್ ಬಳೆ, ಪ್ಲಾಸ್ಟಿಕ್ ಏರ್‍ಪಿನ್,  ಕಿವಿಯೋಲೆ, ಜೊತೆಗೊಂದು ಕರವಸ್ತ್ರ

 ಶಶಿ ಅಕ್ಕನಿಗೆ  ಮಗ್ಗಿ ಪುಸ್ತಕ ಮತ್ತು ಮ್ಯಾಗಿ ಪೊಟ್ಟಣ.


 ಮೇಸ್ಟು ನವೀನ್‍ಗೆ[ಹಳ್ಳಿಹುಡುಗ]  ಸಿಕ್ಕಿದ್ದು ಸೀಮೆ ಸುಣ್ಣ

 ಲಂಡನ್ನಿನ ಚೇತನ ಭಟ್ ಮತ್ತು ನಂಜುಂಡ ಭಟ್ ದಂಪತಿಗಳಿಗೆ ಸಿಕ್ಕಿದ್ದು ಮಕ್ಕಳಾಟದ ಪೀಪಿ.


ನನಗೆ ಸಿಕ್ಕಿದ್ದು ಮಕ್ಕಳಾಟದ ಪೀಪಿ

 ಉಡುಗೊರೆ ಬಾಕ್ಸ್ ಬಿಚ್ಚುತ್ತಿರುವ ಮಂಗಳೂರಿನ ದಿನಕರ್ ಮೊಗರ್ ಸರ್,


ದಿನಕರ್ ಸರ್‍ಗೆ  ಹಾಕಿಕೊಳ್ಳಲು ಶಾಂಪು, ಬಾಚಿಕೊಳ್ಳಲು ಬಾಚಣಿಕೆ.[ಆದ್ರೆ ಬಾಚಿಕೊಳ್ಳಲು ಕೂದಲೇ ಇಲ್ಲವಲ್ಲ!]


ಕುವೈಟಿನ ಮಹೇಶ್ ಸರ್‍ಗೆ ಸಿಕ್ಕಿದ್ದು ಈ ಬಫೂನ್ ಮುಖವಾಡ


ನಾವೆಲ್ಲಾ ಮನಃಪೂರ್ವಕವಾಗಿ ಆನಂದಿಸಿದ್ದು ಹೀಗೆ......


ನನ್ನ ಶ್ರೀಮತಿ ಹೇಮಾಶ್ರಿಗೆ ಸಿಕ್ಕಿದ್ದು ಯಶವಂತಪುರದ ಸೌತೆಕಾಯಿ, ಟಮೋಟೊ, ಬೆಂಡೆಕಾಯಿ........


ಸಿನಿಮಾ ಸಾಹಿತ್ಯ ಬರೆಯುತ್ತಿರುವ ಗೌತಮ್ ಹೆಗಡೆಗೆ  ರಿಫಿಲ್ ಇಲ್ಲದ ಕಾಲಿಪೆನ್ನು  ಬಹುಮಾನ.

 

ಜಲನಯನದ ಡಾ.ಅಜಾದ್‍ಗೆ ಸಿಕ್ಕಿದ್ದು  ಭಾರತ ಬಾವುಟ,. ಮತ್ಸ್ಯ ಗೊಂಬೆಗಳು.


ಹೊಸಪೇಟೆಯ ಸೀತರಾಮ್ ಸರ್‍ಗೆ ಸಿಕ್ಕಿದ್ದು ಕೂದಲಿಲ್ಲದ ತಮ್ಮ ತಲೆ ಬಾಚಿಕೊಳ್ಳಲು ಬಾಚಣಿಗೆ ಮತ್ತು ಹಾಕಿಕೊಳ್ಳಲು ಶಾಂಪು.


ತಮ್ಮ ಬ್ಲಾಗ್ ಬರಹದಲ್ಲಿ ದೊಡ್ದ ಗದ್ದಲವೆಬ್ಬಿಸಿದರೂ ನಮ್ಮ ಜೊತೆಯಲ್ಲಿದ್ದಾಗಲೆಲ್ಲಾ ಪರಂಜಪೆ ಸದಾ ಮೌನಿ. ಅದಕ್ಕಾಗಿ ಜೋರಾಗಿ ಸದ್ದು ಮಾಡಿ ಗದ್ದಲವೆಬ್ಬಿಸಲು, ಗಲಾಟೆ ಮಾಡಲು ಸಿಕ್ಕಿದ್ದು ಮಕ್ಕಳಾಟದ ಗನ್ನುಗಳು.


ದೆಹಲಿಯಿಂದ ಬಂದಿರುವ ಮನದಾಳದ ಪ್ರವೀಣ್ ಸದಾ ಶೇವಿಂಗ್ ಮಾಡಿಕೊಂಡು ಮಿಂಚುವ ಸುಂದರಾಂಗ. ಆದಕ್ಕೆ ಆತ ಮತ್ತಷ್ಟು ಮಿಂಚಲಿಕ್ಕಾಗಿ ಸಿಕ್ಕಿದ್ದು ಶೇವಿಂಗ್ ಬ್ರಶ್


ಎಪ್ಪತ್ತೈದು ವರ್ಷದ ಚಿರಯುವಕ ನಮ್ಮ ಹೆಬ್ಬಾರ್ ಸರ್‍ಗೆ ಸಿಕ್ಕಿದ್ದು ಕೊಂಪ್ಲಾನ್ ಬಾಕ್ಸ್. ಅದನ್ನು ಕಂಡು ಅವರು ಸಂಭ್ರಮಿಸಿದ್ದು ಹೀಗೆ. " I am a complan boy"


ನವದಂಪತಿಗಳಾದ ದಿಲೀಪ್ ಹೆಗಡೆ ಮತ್ತು ಪ್ರಗತಿ ಹೆಗಡೆಯವರ ಮಿಲನಕ್ಕಾಗಿ ಅವರಿಗೆ ಈ ಮಿಲನ.


                 ಹೇಗಿದೆ ನಮ್ಮ  ಬ್ಲಾಗ್ ಕುಟುಂಬ!

   
ಮತ್ತೆ ಕೆಲವು ಚಿತ್ರಗಳು ನಮ್ಮ ಸಂತೋಷದಲ್ಲಿ ಕ್ಲಿಕ್ಕಿಸಲಾಗಿಲ್ಲವಂತೆ. ಅದರಲ್ಲಿ ಮುಖ್ಯವಾಗಿ   ಪ್ರಕಾಶ್ ಹೆಗಡೆಯವರಿಗೆ  ಚಪಾತಿ ಮಣೆ ಮತ್ತು ಲಟ್ಟಾಣಿಗೆ...........ಮುಂದೆ ಕೆಲವು ಚಿತ್ರಗಳು  ಸಿಕ್ಕರೆ ಬ್ಲಾಗಿಗೆ ಹಾಕುತ್ತೇನೆ.   ಅಲ್ಲಿಯವರೆಗೆ ನಗುತ್ತಾ ಇರಿ....
                
ಚಿತ್ರಗಳು: ಕೇಶವ, ಮಲ್ಲಿಕಾರ್ಜುನ್,
ಲೇಖನ : ಶಿವು.ಕೆ

Saturday, August 14, 2010

  
 ನಲ್ಮೆಯ ಗೆಳೆಯರೆ,


ಡಾ.ಆಜಾದ್‍ರವರ "ಜಲನಯನ" ಮತ್ತು ನನ್ನ "ಗುಬ್ಬಿ ಎಂಜಲು" ಪುಸ್ತಕಗಳ ಲೋಕಾರ್ಪಣೆ ಕಾರ್ಯಕ್ರಮಕ್ಕೆ  ನೀವೆಲ್ಲಾ ನಮ್ಮೊಟ್ಟಿಗಿದ್ದರೆ ಚೆನ್ನ.  ಇದೆ ನೆಪದಲ್ಲಿ ನಾವೆಲ್ಲಾ ಸೇರೋಣ. ಆನಂದಿಸೋಣ ಬನ್ನಿ.



  ನನ್ನ ಪುಸ್ತಕಕ್ಕೆ "ಗುಬ್ಬಿ ಎಂಜಲು" ಎನ್ನುವ ಹೆಸರು ಇಟ್ಟ ಕಾರಣವನ್ನು ಆನೇಕರು ಕೇಳಿದ್ದಾರೆ.   ಹೆಸರಿಗೊಂದು ಕತೆ ಇರಲೇಬೇಕಲ್ವ,  ಅದಕ್ಕಾಗಿ ನಾನು ಪುಸ್ತಕದಲ್ಲಿ ಬರೆದ ಲೇಖಕನ ಮಾತು ಕೂಡ ಒಂದು ಪುಟ್ಟ ಕತೆಯಾಗಿದೆ.  ಅದನ್ನು  ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.   




  ಶಿಶುವಿಹಾರ ಬಿಟ್ಟ ಕೂಡಲೇ ಓಡಿ ಬರುತ್ತಿದ್ದ ನನಗಾಗಿ ಕಾಯುತ್ತಿದ್ದಳು ನನ್ನ ತಂಗಿ. ಅವಳನ್ನು ನಾನು ಮನೆಯ ಹತ್ತಿರವಿರುವ ಅಂಗಡಿಗೆ ಕರೆದುಕೊಂಡು ಹೋಗಿ ಕಂಬಾರ್‍ಕಟ್ ಕೊಡಿಸಬೇಕೆಂದು ತನ್ನ ಪುಟ್ಟ ಅಂಗೈನಲ್ಲಿ ಐದು ಪೈಸೆಯಿಟ್ಟುಕೊಂಡು ಕಾಯುತ್ತಿರುತ್ತಿದ್ದಳು. ಪೈಸೆಗೊಂದರಂತೆ ಸಿಗುತ್ತಿದ್ದ ಅದು ನಮಗಿಬ್ಬರಿಗೂ ಇಷ್ಟವಾದ ತಿಂಡಿ. ಈಗಿನ ಒಂದು ರೂಪಾಯಿಯ ನಾಲ್ಕು ನಾಣ್ಯಗಳನ್ನು ಒಂದರ ಮೇಲೊಂದರಂತೆ ಜೋಡಿಸಿದಾಗ ಸಿಗುವ ಗಾತ್ರದಲ್ಲಿರುತ್ತಿತ್ತು.  ಬೆಲ್ಲದ ಪಾಕ, ಇನ್ನಿತರ ವಸ್ತುಗಳನ್ನು ಹಾಕಿ ತಯಾರಿಸುತ್ತಿದ್ದ ಅದಕ್ಕೆ ಒಂದು ಪುಟ್ಟ ಪ್ಲಾಸ್ಟಿಕ್ ಪೇಪರನ್ನು ಈಗಿನ ಚಾಕಲೇಟಿನಂತೆ ಸುತ್ತಿರುತ್ತಿದ್ದರು.  ಬಹುಶಃ ಆಗ ಚಾಕಲೇಟು ಇತ್ತೋ ಇಲ್ಲವೋ ಗೊತ್ತಿಲ್ಲ. ಅದ್ರೆ ಅದರ ಮೊದಲ ರೂಪ ಇದೇ ಇದ್ದಿರಬಹುದಾ ಅಂತ ನನಗೆ ಈಗ ಅನ್ನಿಸುತ್ತಿದೆ.  ಐದು ಪೈಸೆಗೆ ಐದು ಕಂಬಾರ್‍ಕಟನ್ನು ನನ್ನ ಕೈಲಿ ಕೊಡುತ್ತಿದ್ದಂತೆ ಒಂದನ್ನು ನನ್ನ ತಂಗಿಗೆ ಗೊತ್ತಾಗದ ಹಾಗೆ ಚಡ್ಡಿ ಜೇಬಿಗೆ ಹಾಕಿಕೊಂಡು ಉಳಿದ ನಾಲ್ಕನ್ನು ಅವಳ ಕೈಗೆ ಕೊಡುತ್ತಿದ್ದೆ. ಮೂರನ್ನು ತನ್ನ ಬಲಗೈನಲ್ಲಿ ಇಟ್ಟುಕೊಂಡು ಒಂದನ್ನು ನನಗಾಗಿ ಕೊಡುತ್ತಿದ್ದಳು.  ಅವಳನ್ನು ಅಂಗಡಿಗೆ ಕರೆದುಕೊಂಡು ಬಂದಿದ್ದಕ್ಕೆ ಬಕ್ಷೀಸಾಗಿ ಒಂದು ಕಂಬರ‍ಕಟ್ಟು ಸಿಕ್ಕಿತ್ತಲ್ಲ ಆಂತ ನಾನು ಖುಷಿಪಡುವಂತಿರಲಿಲ್ಲ. ಏಕೆಂದರೆ ಅವಳಿಗೆ ಅದರಲ್ಲಿ ಅರ್ಧ ನಾನು ಹಲ್ಲಿನಲ್ಲಿ ಕಚ್ಚಿ ತುಂಡು ಮಾಡಿ ಇನ್ನರ್ಧವನ್ನು ವಾಪಸ್ಸು ಅವಳಿಗೇ ಕೊಡಬೇಕಿತ್ತು. ಅಂಗಡಿಗೆ ಕರೆದುಕೊಂಡುಬಂದಿದ್ದಕ್ಕೆ ನನ್ನ ಬಕ್ಷೀಸು ಅರ್ಧ ಮಾತ್ರ. ಮತ್ತೆ ಪ್ಲಾಸ್ಟಿಕ್ ಕವರನ್ನು ಬಿಚ್ಚಿ ಹಾಗೆ ಹಲ್ಲಿನಲ್ಲಿ ನಾನು ಕಡಿಯುವಂತಿರಲಿಲ್ಲ. ಹಾಗೆ ನೇರವಾಗಿ  ಕಡಿದರೆ ಎಂಜಲಾಗುತ್ತದೆ ಅಂತ ಅದನ್ನು ಗುಬ್ಬಿ ಎಂಜಲು ಮಾಡಬೇಕಿತ್ತು.  ಗುಬ್ಬಿ ಎಂಜಿಲು ಎಂದರೆ ನಾನು ಹಾಕಿದ ಅಂಗಿಬಟ್ಟೆಯ ಒಳಗೆ ಅವಳು ಕೊಟ್ಟ ಕಂಬಾರ್‍ಕಟ್ಟನ್ನು ಅದೇ ಚಾಕಲೇಟುವಿನಂತೆ ಅಂಗಿಬಟ್ಟೆಯಲ್ಲಿ ಸುತ್ತಿ ನಂತರ ಹಲ್ಲಿನಲ್ಲಿ ಕಚ್ಚಿ ಎರಡು ತುಂಡುಗಳನ್ನು ಮಾಡಿ ಅದರಲ್ಲಿ ಒಂದನ್ನು ಅವಳು ಮತ್ತೆ ಎತ್ತಿ ಬಾಯಿಗೆ ಹಾಕಿಕೊಂಡ ಮೇಲೆ ನಾನು ಉಳಿದರ್ಧ ತುಂಡನ್ನು ತಿನ್ನಬೇಕಿತ್ತು.


 ಅಮೇಲೆ ಇದೇ ಕಂಬಾರ್‍ಕಟ್ಟು ಐದು ಪೈಸೆಗೆ ಒಂದು, ಹತ್ತು ಪೈಸೆಗೆ ಒಂದು ಅಂತ ಬೆಲೆ ಹೆಚ್ಚಾಗಿ ಅಮೇಲೆ ನಿದಾನವಾಗಿ ಮರೆಯಾಗಿಬಿಟ್ಟಿತ್ತು. ಬಹುಶಃ ಚಾಕಲೇಟ್ ಅದರ ಜಾಗವನ್ನು ಆಕ್ರಮಿಸಿಬಿಟ್ಟಿತ್ತೇನೋ. ಈಗ ಹಳ್ಳಿಗಳಲ್ಲೂ  ಸಿಗುತ್ತದೊ ಇಲ್ಲವೋ ಗೊತ್ತಿಲ್ಲ. ಅದರ ರುಚಿಯ ಸ್ವಾದದ ಸಂಭ್ರಮವೇ ಬೇರೆ. ಗುಬ್ಬಿ ಎಂಜಲು ಮಾಡಿ ಹಂಚಿಕೊಳ್ಳುವ ಆನಂದವೇ ಬೇರೆ.  ಸಿಕ್ಕುವ ತಿಂಡಿಯನ್ನು ಹಂಚಿಕೊಂಡು ತಿನ್ನಬೇಕೆನ್ನುವ ಆಸೆಯಿದ್ದರೂ ಹಲ್ಲಿನಲ್ಲಿ ಕಚ್ಚಿ ಎಂಜಲು ಮಾಡಬಾರದು, ಬೇಕಾದರೆ ಹೀಗೆ ಕಚ್ಚಿ ತುಂಡುಮಾಡಿ ಕೊಡಬಹುದು ಅಂತ ನನ್ನ ಅಜ್ಜಿ ತನ್ನ ಸೆರಗಿನೊಳಗಿಟ್ಟು ಮಾಡಿ ತೋರಿಸಿದಾಗ ಅದನ್ನೇ ನಾವಿಬ್ಬರೂ ಅನುಸರಿಸುತ್ತಿದ್ದವು.  ಇನ್ನು ನಾವು ಗೆಳೆಯರೆಲ್ಲಾ ಕೂಡಿ ತಿಂಡಿ ಹಂಚಿಕೊಳ್ಳುವಾಗ ಹೀಗೆ ಮಾಡಬೇಕಿತ್ತು. ಬಹುಶಃ ನನ್ನ ಗೆಳೆಯರ ಅಜ್ಜಿಯರು ಹೀಗೆ ಅವರಿಗೂ ಹೇಳಿಕೊಟ್ಟಿರಬೇಕೆಂದು ನನಗೆ ಅನಿಸುತ್ತದೆ. ಹಾಗಾದರೆ ನನ್ನ ಅಜ್ಜಿ ಮತ್ತು ಆಕೆಯ ಗೆಳತಿಯರು ಅವರ ಬಾಲ್ಯದಲ್ಲಿ ತಿಂಡಿಯನ್ನು ಹೀಗೆ ಗುಬ್ಬಿ ಎಂಜಲು ಮಾಡಿ ಹಂಚಿಕೊಂಡಿರಬಹುದಲ್ಲವೇ ಅಂತ ನನಗೆ ಅನ್ನಿಸಿದ್ದು ಸಹಜ.  


ಆಗ ಬಡವ ಶ್ರೀಮಂತ ಎನ್ನುವ ಭೇದ ಭಾವವಿರಲಿಲ್ಲ. ನಾವೆಲ್ಲಾ ಪುಟ್ಟ ಗೆಳೆಯರು ಒಟ್ಟಾಗಿ ಸೇರಿ ಆಡುತ್ತಿದ್ದೆವು. ಆಗ ನಮ್ಮ ಮನೆಗೆ ನನ್ನ ಗೆಳೆಯರು ಬಂದಾಗ ಎಲ್ಲರಿಗೂ ಅಮ್ಮ ತಿಂಡಿ ಕೊಡುತ್ತಿದ್ದಳು. ಹಾಗೆ ಅವರ ಮನೆಗೆ ಹೋದಾಗಲು ಅವರ ಅಮ್ಮಂದಿರಿಂದ ನಮಗೆಲ್ಲಾ ತಿಂಡಿ ತಿನಿಸುಗಳು ಸಿಗುತ್ತಿತ್ತು.  ಹೀಗಿನಂತೆ ಒಬ್ಬರ ಮನೆಯ ಮಕ್ಕಳು ಎದುರು ಮನೆಯ ಮಕ್ಕಳ ಜೊತೆ ಸೇರದಂತೆ ಬಾಗಿಲು ಹಾಕಿಕೊಳ್ಳುತ್ತಿರಲಿಲ್ಲ. ತೆರೆದ ಬಾಗಿಲುಗಳ ನಡುವೆ ನಾವೆಲ್ಲಾ ಓಡಾಡಿ ಆಡುತ್ತಿದ್ದೆವು. ನಮಗೆ ಸಿಗುವ ತಿಂಡಿಗಳನ್ನು ಹೀಗೆ ಹಂಚಿಕೊಂಡು ತಿನ್ನುತ್ತಿದ್ದೆವು. ಈ ಗುಬ್ಬಿ ಎಂಜಲು ಎನ್ನುವುದು ನಮಗೆಲ್ಲಾ ತಮಾಷೆ. ಆದರೆ ಅದಕ್ಕೆ ಅರ್ಥಪೂರ್ಣವಾದ ಭಾವವಿದೆ.  ಯಾವುದೇ ತಿನಿಸನ್ನು ಹಂಚಿಕೊಳ್ಳಬೇಕಾದರೂ ಹೀಗೆ ಗುಬ್ಬಿ ಎಂಜಲು ಮಾಡಿ ಕೊಡುವಾಗ ಅದರ ಸಿಹಿಯನ್ನು ಸವಿಯನ್ನು ಆ ಕ್ಷಣದ ಆನಂದವನ್ನು ಅನುಭವಿಸುತ್ತಾ ಹಂಚಿಕೊಳ್ಳಬೇಕೆನ್ನುವ ಮುಗ್ದ ಮನಸ್ಸಿತ್ತು. ಹಾಗೆ ಅದನ್ನು ಪಡೆದುಕೊಳ್ಳುವವನಿಗೂ ಇಷ್ಟಪಟ್ಟು ಸ್ವೀಕರಿಸಿ ತಿಂದು ಸಂಭ್ರಮಿಸುವ ಆಸೆಯಿತ್ತು.  


ಈ ಪುಸ್ತಕದಲ್ಲಿ ಇರುವ ಒಂದೊಂದು ಬರಹಗಳನ್ನು ಓದುವಾಗಲು ಮಗುವಿನಂತೆ ಮುಗ್ದವಾಗಿ ನಕ್ಕುಬಿಡಬಹುದು,  ಬುದ್ಧಿವಂತರಂತೆ  ಮುಗುಳ್ನಗು ಚಿಮ್ಮಿಸುತ್ತಾ ಮುಂದೆ ಸಾಗಬಹುದು, ಕೆಲವೊಮ್ಮೆ ಗಹಗಹಿಸಿ ನಕ್ಕು ಗೆಳೆಯರೊಂದಿಗೆ, ಹೆಂಡತಿಯೊಂದಿಗೆ, ಮಕ್ಕಳೊಂದಿಗೆ ಹಂಚಿಕೊಳ್ಳಬಹುದು, ಓದುತ್ತಾ ಕೆಲವೊಂದು ಲೇಖನಗಳಿಂದ ವಿಷಾಧ ಭಾವನೆಗಳು ತುಂಬಿ ಮೌನವಾಗಲೂ ಬಹುದು.  

  ಇದನ್ನು ಹೀಗೆ ಗುಬ್ಬಿ ಎಂಜಲು ಮಾಡುತ್ತಾ ಅದರ ಸವಿಯನ್ನು ಸವಿಯುತ್ತಾ ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ನೀವು ಹಾಗೆ ಮುಗ್ದ ಭಾವನೆಯಿಂದ ನನ್ನ ಪುಸ್ತಕವನ್ನು ಸ್ವೀಕರಿಸುತ್ತೀರೆಂದು ಭಾವಿಸುತ್ತೇನೆ.



ವಿಶೇಷ ಸೂಚನೆನಮ್ಮ ಕಾರ್ಯಕ್ರಮದ ನಂತರ ನಾವು ಕೈಗೊಳ್ಳಬೇಕೆಂದುಕೊಂಡಿದ್ದ ಬ್ಲಾಗಿಗರ ಸಮಾವೇಶದ ಬಗ್ಗೆ ಹಿರಿಯ ಬ್ಲಾಗಿಗರ ಜೊತೆ ನಾವೆಲ್ಲ ಸೇರಿ ಒಂದು ವಿಚಾರ ಮಂಥನದ ಕಾರ್ಯಕ್ರಮದ ಯೋಚನೆಯನ್ನೂ ನಮ್ಮ ಹಿರಿಯ ಬ್ಲಾಗಿಗಳು ಹೊಂದಿದ್ದಾರೆ. ಇದನ್ನು ಗಮನದಲ್ಲಿಟ್ಟು ಹೆಚ್ಚು ಹೆಚ್ಚು ಬ್ಲಾಗಿಗರು ಕಾರ್ಯಕ್ರಮಕ್ಕೆ ಆಗಮಿಸಬೇಕಾಗಿ ಕೋರಿಕೆ.

ಪ್ರೀತಿಯಿಂದ
ಶಿವು.ಕೆ.


Sunday, August 8, 2010

ಮುಖಪುಟಗಳು


      ಇದೇ ಆಗಸ್ಟ್ ತಿಂಗಳ 22ನೇ ಭಾನುವಾರ ಬೆಳಿಗ್ಗೆ 10-00 ಗಂಟೆಗೆ ಕನ್ನಡ ಭವನದ "ನಯನ ಸಭಾಂಗಣ" ದಲ್ಲಿ   ಬಿಡುಗಡೆಯಾಗಲಿರುವ ನನ್ನ ಮತ್ತು ಡಾ. ಅಜಾದ್‍ರ ಪುಸ್ತಕಗಳ ಮುಖಪುಟಗಳು                       

ನನ್ನ ಎರಡನೇ ಹೊಸ ಪುಸ್ತಕದ ಹೆಸರು "ಗುಬ್ಬಿ ಎಂಜಲು" ಮುಖಪುಟ




 ಡಾ.ಆಜಾದ್ ಅವರ ಮೊದಲ ಕವನ ಸಂಕಲನ "ಜಲನಯನ" ಮುಖಪುಟ


ಗುಬ್ಬಿ ಎಂಜಲು" ಮುಖಪುಟದ ಫೋಟೊಗಳು, ವಿನ್ಯಾಸ ನನ್ನದು.

"ಜಲನಯನ" ಮುಖಪುಟದ ವಿನ್ಯಾಸ ಕುವೈಟಿನ ಸುಗುಣ ಮಹೇಶ್ ಅವರದು.


ಮುಖಪುಟ ವಿನ್ಯಾಸಗಳು ಹೇಗಿದೆ ಹೇಳಿ?

ಶಿವು.ಕೆ