Friday, October 2, 2009

ಇಂಥ ಸಿನಿಮಾಗಳನ್ನು ಹೇಗೆ ತಯಾರಿಸುತ್ತಾರೆ?

ಅವತ್ತು ಬಿಡುವಿತ್ತು. ನಾನು ತುಂಬಾ ದಿನದಿಂದ ಕಾಯುತ್ತಿದ್ದ ಆ ಸಿನಿಮಾ ಡಿವಿಡಿ ಸಿಕ್ಕಿತ್ತು. ಅದೊಂದು ತೀರ ಸರಳ ಕತೆಯಿರುವ ಸಿನಿಮವಾದರೂ ಅಂಥ ಸಿನಿಮಗಳಂದ್ರೆ ನನಗೆ ತುಂಬಾ ಇಷ್ಟ. ತನ್ಮಯತೆಯಿಂದ ನೋಡುತ್ತೇನೆ. ಅದರ ಕತೆ ಹೀಗಿದೆ.ಅದೊಂದು ಮಂಜಿನ ಲೋಕ. ಅರ್ಧಾತ್ ಮಂಜುಗಡ್ಡೆಯದೇ ಲೋಕ. ಆನೆ ದಂಪತಿಗಳ ಜೊತೆ ಒಂದು ಸಿಂಹ, ಕಾಡುಕುರಿ, ಮುಂಗುಸಿ ಮರಿಗಳ ಜೋಡಿ, ಇವುಗಳ ಜೊತೆ ಎಲ್ಲಾ ರೀತಿಯ ಕಾಡು ಪ್ರಾಣಿಗಳು ಜೊತೆಯಾಗಿ ಸಂತೋಷದಿಂದ ಜೀವಿಸುತ್ತಿರುತ್ತವೆ. ಒಮ್ಮೆ ಮೂರು ದೊಡ್ಡ ಗಾತ್ರದ ಮೊಟ್ಟೆಗಳು ಸಿಕ್ಕಿ ಅವುಗಳಿಂದ ಮರಿಗಳು ಹೊರಬರುತ್ತವೆ. ಅವು ಡೈನಾಸಾರ್ ಮರಿಗಳು. ಇತರೆಲ್ಲಾ ಮರಿಗಳ ಜೊತೆಗೆ ಆಡಿ ಬೆಳೆಯುತ್ತಾ ಎಲ್ಲ ಪ್ರಾಣಿಗಳಿಗೂ ಕಾಟ ಕೊಡುತ್ತಾ ಬೆಳೆಯುತ್ತಿರುವಾಗ ಮೊಟ್ಟೆಗಳನ್ನು ಕಳೆದುಕೊಂಡ ದೊಡ್ಡ ಡೈನೋಸಾರ್ ಹುಡುಕಿಕೊಂಡು ಅಲ್ಲಿಗೆ ಬರುತ್ತದೆ. ಅಲ್ಲಿರುವ ಪ್ರ್‍ಆಣಿ ಪಕ್ಷಿಗಳಿಗೆಲ್ಲಾ ಭಯ ಮತ್ತು ಅಚ್ಚರಿ. ಎಲ್ಲವು ತಮಗೆ ದೊಡ್ಡ ವಿಪತ್ತು ಬಂತು ಅಂತ ದಿಗಿಲುಪಟ್ಟುಕೊಂಡಿರುವಾಗ ಎಲ್ಲಾ ಪ್ರಾಣಿಗಳನ್ನು ಎದುರಿಸಿ ದೈತ್ಯ ಡೈನೋಸಾರ್ ತನ್ನ ಮೂರು ಮರಿಗಳನ್ನು ಜೊತೆಯಲ್ಲಿರುವ ಕಾಡುಕುರಿಯನ್ನು ಎತ್ತಿಕೊಂಡು ಹೋಗಿಬಿಡುತ್ತದೆ. ಆದುವರೆವಿಗೂ ತಮ್ಮದೇ ಲೋಕದಲ್ಲಿ ಸುಖವಾಗಿದ್ದ ಈ ಪ್ರಾಣಿಗಳಿಗೆ ಈ ಡೈನೋಸಾರುಗಳ ಆಗಮನದಿಂದ ತಾವು ಬದುಕುವುದು ಕಷ್ಟವಾಗುತ್ತದೆ. ನಡುವೆ ಇತರ ಡೈನೋಸಾರುಗಳಿಂದ ಆಕ್ರಮಣಕ್ಕೆ ತಮ್ಮದೇ ತಂತ್ರಗಳಿಂದ ತಪ್ಪಿಸಿಕೊಳ್ಳುವುದು. ನಡುವೆ ದೊಡ್ಡ ರಾಕ್ಷಸ ಗಾತ್ರದ ಮಾಂಸಹಾರಿ ಗಿಡಗಳಿಂದ ಆನೆ, ಸಿಂಹದಂತ ಪ್ರಾಣಿಗಳ ಮೇಲೆ ಆಕ್ರಮಣ, ರಾಕ್ಷಸಾಕಾರದ ಕೀಟಗಳು, ಹುಳುಗಳು, ಅದರಿಂದ ತಪ್ಪಿಸಿಕೊಳ್ಳುವುದು, ಹಾಗೆ ಸಾಗುತ್ತಾ ಜಾರುವ ದೊಡ್ಡ ದೊಡ್ಡ ಬಂಡೆಗಳ ನಡುವೆ ಸಾಗುವಾಗ ಬಂಡೆಗಳು ಜರುಗಿ ಎಲ್ಲಾ ಪ್ರಾಣಿಗಳು ಅಲ್ಲೋಲ ಕಲ್ಲೋಲ. ಇಷ್ಟೆಲ್ಲದರ ನಡುವೆ ಹೆಣ್ಣಾನೆಗೆ ಒಂದು ಮರಿಯಾನೆ ಹುಟ್ಟುತ್ತದೆ.

ಮತ್ತೊಂದು ಕಡೆ ಮರಿ ಡೈನಾಸಾರುಗಳ ಜೊತೆ ದೊಡ್ಡ ಡೈನಾಸರ್ ಮತ್ತೊಂದು ಅದಕ್ಕಿಂತ ದೊಡ್ಡದಾದ ಡೈನಸರ್ ಬಂದಾಗ ಅದರಿಂದ ತಪ್ಪಿಸಿಕೊಳ್ಳುವುದು. ಆಷ್ಟು ದೊಡ್ಡ ಡೈನಸರನ್ನು ಒಂದು ಪುಟ್ಟ ಜಂಬದ ನರಿ ಸೋಲಿಸಿ ಕಟ್ಟಿಹಾಕುವುದು ಆ ಸಮಯದಲ್ಲಿ ಆನೆಗಳು ಸಿಂಹ, ಇತರ ಪ್ರಾಣಿಗಳು ಅದರಿಂದ ತಪ್ಪಿಸಿಕೊಳ್ಳುವುದು ಹೀಗೆ ಸಾಗುತ್ತ ಕೊನೆಗೆ ಅಷ್ಟು ದೊಡ್ಡ ಡೈನಾಸರ್ ಜಾರಿ ಪ್ರಪಾತಕ್ಕೆ ಬಿದ್ದು ಸಾಯುವಂತೆ ಮಾಡುವುದು ಈ ಜಂಬದ ಬುದ್ಧಿವಂತ ನರಿ. ಅಲ್ಲಿಗೆ ಕತೆ ಸುಖಾಂತ್ಯವಾಗುತ್ತದೆ.

ಇದು ಐಸ್ ಎಜ್ ೩[Dawn of the dinosours] ಅನಿಮೇಶನ್ ಸಿನಿಮಾದ ಕತೆ. ಇದರ ಮೊದಲ ಎರಡು ಭಾಗಗಳಲ್ಲಿ ಒಂದು ಅಳಿಲು ಮತ್ತು ಒಂದು ಗೇರುಬೀಜದೊಂದಿಗೆ ಪ್ರಾರಂಭವಾದರೆ ಇಲ್ಲಿ ಅಳಿಲಿಗೊಂದು ಹೆಣ್ಣ ಅಳಿಲು ಜೊತೆಯಾಗುವುದರೊಂದಿಗೆ ಕತೆ ಪ್ರಾರಂಭವಾಗುತ್ತದೆ. ಮತ್ತು ಕತೆ ಅಂತ್ಯವಾಗುವುದು ಈ ಅಳಿಲುಗಳಿಂದಲೇ.

ಮನಷ್ಯನ ಸಕಲ ಗುಣಗಳು ಅದರಲ್ಲೂ ಮಕ್ಕಳ ಎಲ್ಲಾ ಗುಣಗಳನ್ನು ಎಲ್ಲಾ ಪ್ರಾಣಿಗಳಿಗೂ ಆಳವಡಿಸಿ ತಯಾರಿಸಿರುವ ಈ ಕಾರ್ಟೂನ್ ಸಿನಿಮಾ ಮಕ್ಕಳಿಂದ ದೊಡ್ಡವರವರೆಗೆ ಮೈಮರೆತು ನೋಡುವಂತೆ ಮಾಡುತ್ತದೆ. ಅದ್ಬುತ ತಾಂತ್ರಿಕತೆಯಿಂದ ಕೂಡಿದ ಈ ಅನಿಮೇಶನ್ ಸಿನಿಮಾಗಳು ನಮ್ಮನ್ನು ಬೇರೆಯದೆ ಲೋಕಕ್ಕೆ ಕರೆದೊಯ್ಯುತ್ತವೆ. ನಿಜ ಹೀರೋಗಳ ಹೀರೋಹಿನ್‍ಗಳ ನಟನೆಗಿಂತ ಒಂದು ಕೈ ಮೇಲೆ ಎನ್ನುವಂತೆ [ಅತಿರೇಕವೆನಿಸಿದರೂ]ನಟಿಸುವ ಅದ್ಬುತ ಸಾಹಸಗಳನ್ನು ಮಾಡುವ ಇಂಥ ಸಿನಿಮಾದೊಳಗಿನ ಪಾತ್ರಗಳು ನಿಜಕ್ಕೂ ಮನಸ್ಸನ್ನು ಉಲ್ಲಾಸಗೊಳಿಸುತ್ತವೆ. ಲಯನ್ ಕಿಂಗ್ ಸರಣಿ, ಟಾರ್ಜನ್ ಸರಣಿ, ನೆಮೊ, ಶ್ರೇಕ್, ಇನ್ಕ್ರಿಡಬಲ್, ಬೀ ಮೂವಿ, ಆಂಟ್ಸ್ ಮೂವಿ, ಮಾನ್‍ಸ್ಟರ್ ಇಂಕ್, ಕುಂಗ್‍ಪೂ ಫಾಂಡ, ಒಂದೇ ಎರಡೇ ಎಲ್ಲಾ ನೂರಾರು ಅನಿಮೇಶನ್ ಸಿನಿಮಾಗಳಿವೆ. ಮತ್ತೆ ಹೊಸದು ಯಾವುದು ಬಂದರೂ ನಾನು ಟಾಕೀಸಿಗೆ ಹೋಗಿ ನೋಡುತ್ತೇನೆ. ಅಥವ ಮನೆಯಲ್ಲಿ ಡಿವಿಡಿ ತಂದು ನೋಡಿಬಿಡುತ್ತೇನೆ.


ಅದೆಲ್ಲಾ ಸರಿ ಈ ಅನಿಮೇಶನ್ ಸಿನಿಮಾಗಳನ್ನು ತಯಾರಿಸುವುದು ಹೇಗೆ ?


ಇದು ಖಂಡಿತ ಕ್ಯಾಮರದಿಂದ ಅದರೊಳಗಿನ ಲೆನ್ಸ್ ಮೂಲಕ ಚಿತ್ರತವಾಗುವುದಿಲ್ಲ. ಯಾವುದೇ ಸಿನಿಮಾ ರೀಲ್ ಉಪಯೋಗಿಸುವುದಿಲ್ಲ. ಮತ್ತೇಗೆ ಈ ಚಿತ್ರಗಳು ತಯಾರಾಗುತ್ತವೆ ? ಹೇಗೆಂದರೆ ಇವೆಲ್ಲಾ "ಮಾಯಾ", "೩ಡಿ ಮ್ಯಾಕ್ಸ್" ಇನ್ನಿತರ ಅನಿಮೇಶನ್ ಸಾಪ್ಫವೇರುಗಳಿಂದ ಸೃಷ್ಟಿಯಾದಂತವುಗಳು. ಅರೆರೆ ಹಾಗಾದರೆ ಇದು ತುಂಬಾ ಸುಲಭ ಕೆಲವು ಮಾಯಾ ಅಥವ ೩ಡಿ ಮ್ಯಾಕ್ಸ್ ಕಲಿತ ವಿದ್ಯಾರ್ಥಿಗಳನ್ನಿಟ್ಟುಕೊಂಡು ಒಂದು ಪುಟ್ಟ ಮನಸೆಳೆಯುವ ಕತೆಯನ್ನಿಟ್ಟುಕೊಂಡು ಸಿನಿಮಾ ತೆಗೆದುಬಿಡಬಹುದಲ್ಲ ಅನ್ನಿಸುತ್ತದೆ ಅಲ್ಲವೇ. ಹಾಗೆ ಖಂಡಿತ ಸಾದ್ಯವಿಲ್ಲ. ಏಕೆಂದರೆ ಬೇರೆ ಸಿನಿಮಾ ರೀಲಿನ ಚಿತ್ರಗಳಿಗೆ ಹತ್ತಾರು ನೂರಾರು ಕೆಲಸಗಾರರು, ತಾಂತ್ರಿಕ ತಜ್ಞರು, ನಟರು, ನಿರ್ಧೇಶಕರು, ಇದ್ದಂತೆ ಇಲ್ಲಿ ನೂರಾರು ಕೆಲವೊಮ್ಮೆ ಸಾವಿರಾರು ಅನಿಮೇಶನ್ ಡಿಸೈನರುಗಳು ಬೇಕಾಗುತ್ತದೆ. ಈ ಡಿಸೈನರುಗಳಿದ್ದರೆ ಕಾರ್ಟೂನ್ ಸಿನಿಮಾ ತಯಾರಾಗುತ್ತದಾ?

ಆಗುವುದಿಲ್ಲ. ಮೊದಲು ಎಂದಿನಂತೆ ಇದರ ಬಗ್ಗೆ ಆಸಕ್ತಿಯುಳ್ಳ ಒಬ್ಬ ನಿರ್ಮಾಪಕ ಬೇಕು. ನಿರ್ದೇಶಕ ಬೇಕೇ ಬೇಕು. ಆತ ಆನಿಮೇಶನ್‍ನಲ್ಲಿ ಪಕ್ಕಾ ಪರಿಣತನಾಗಿರಬೇಕು. ಅವನು ಬರೆದ ಕತೆಗೆ ತಕ್ಕಂತ ಪಾತ್ರಗಳನ್ನು ಸೃಷ್ಟಿಸಬೇಕು. ಅವು ಭೂಮಿಯ ಮೇಲಿರುವ ಪ್ರಾಣಿ ಪಕ್ಷಿಗಳಾಗಬಹುದು, ಕೀಟಗಳಾಗಬಹುದು, ಮನುಷ್ಯನಾಗಿರಬಹುದು, ಆಕಾಶದಾಚೆಗಿನ ಅನ್ಯಜೀವಿಗಳಾಗಬಹುದು, ಕೊನೆಗೆ ಮರಗಿಡ ಕಲ್ಲು ಮಣ್ಣು ಯಾವುದೇ ಆಗಿರಬಹುದು. ಅವೆಲ್ಲಕ್ಕೂ ಮಾತು ಇರಲೇ ಬೇಕು.

ನಂತರ ಆತನ ಕಲ್ಪನೆಗೆ ತಕ್ಕಂತೆ ಪಾತ್ರಧಾರಿಗಳನ್ನು ಅಂದರೆ ಮಾಡೆಲ್ಲುಗಳನ್ನು ಸೃಷ್ಟಿಸಲು[ಮಾಡೆಲಿಂಗ್ ಸ್ಪೆಷಲೈಜೇಷನ್ ಮಾಡಿರುವವರು]ಹತ್ತಾರು ಮಾಡೆಲಿಂಗ್ ಪರಿಣತರಿಂದ ಕೆಲಸ ತೆಗೆಸುತ್ತಾನೆ. ಅವರು ನಿರ್ಧೇಶಕನ ಅನಿಸಿಕೆಯಂತೆ ತಿಂಗಳಾನುಗಟ್ಟಲೆ ಕುಳಿತು "ಮಾಯಾ" ಅಥವ ೩ಡಿ ಮ್ಯಾಕ್ಸ್" ಇನ್ನೂ ಅನೇಕ ಸಾಫ್ಟವೇರುಗಳಿಂದ ಕಂಪ್ಯೂಟರಿನಲ್ಲಿ ಮಾಡೆಲಿಂಗ್ ಸೃಷ್ಟಿಸುತ್ತಾರೆ. ಇದು ಏನು ಸಾಮಾನ್ಯ ಕೆಲಸವಲ್ಲ. ಇಲ್ಲಿ ಏನೇ ಯಡವಟ್ಟಾದರೂ ಅದು ಮುಂದಿನ ಪ್ರತಿ ಹಂತಕ್ಕೂ ತೊಂದರೆ ಕೊಡುತ್ತಿರುತ್ತದೆಯಾದ್ದರಿಂದ ಅದನ್ನು ಸರಿಪಡಿಸದೇ ಮುಂದೆ ಹೋಗುವಂತಿಲ್ಲ. ಒಂದು ಪ್ರಾಣಿಯ ಮಾಡೆಲ್ ಮಾಡಬೇಕೆಂದರೆ ಅದಕ್ಕೆ ಹೊರಮೈ ಅಂದರೆ ಚರ್ಮದ ಕಲ್ಪನೆಯಲ್ಲಿ ರಚಿಸುತ್ತಾರೆ. ಮಾಯಾ ಸಾಪ್ಟವೇರಿನ ಆನೇಕ ಟೂಲ್‍ಗಳನ್ನು ಉಪಯೋಗಿಸಿ ವಿವಿಧ ಮಾಡೆಲ್ಲುಗಳನ್ನು ತಯಾರಿಸುತ್ತಾರೆ. ಆದ್ರೆ ಅವೆಲ್ಲಾ ಬಣ್ಣವಿಲ್ಲದ ಮಾಡೆಲ್ಲುಗಳು.

ಮಾಡೆಲ್ಲುಗಳು ಅಂದರೆ ಪಾತ್ರದಾರಿಗಳು ಸಿದ್ಧರಾದರೂ ಅವಕ್ಕೆ ಸುಣ್ಣ ಬಣ್ಣ ಹಾಕುವವರೇ ಬೇರೆಯವರು. ಅವರನ್ನು ಟೆಕ್ಷರಿಂಗ್ ಸ್ಪೆಷಲಿಷ್ಟ್ ಎನ್ನುತ್ತಾರೆ. ಇವರು ಈ ವಿಭಾಗದಲ್ಲಿ ಪಕ್ಕಾ ತರಬೇತಿಯನ್ನು ಪಡೆದಿರುತ್ತಾರೆ. ಇವರು ಎಲ್ಲಾ ಮಾಡೆಲ್ಲುಗಳಿಗೂ ನಿರ್ಧೇಶಕನ ಕಲ್ಪನೆಯಂತೆ ಬೇಕಾದ ರೀತಿಯಲ್ಲಿ ಬಣ್ಣವನ್ನು ಕೊಡುತ್ತಾರೆ.

ಮೂರನೆಯದು. ಲೈಟಿಂಗ್. ಇದರಲ್ಲಿ ನಾಲ್ಕು ವಿಭಾಗಗಳಿರುತ್ತವೆ. ಟಾಪ್ ವ್ಯೂ, ಸೈಡ್ ವ್ಯೂ, ಪ್ರಂಟ್ ವ್ಯೂ, ಮತ್ತು ಕ್ಯಾಮೆರಾ ವ್ಯೂ ಅಂತ. ಮೊದಲ ಮೂರು ದಿಕ್ಕುಗಳಿಂದ ನೋಡಿದರೆ ಮಾಡೆಲ್ಲು ಮತ್ತು ಹಿನ್ನೆಲೆ ದೃಶ್ಯಗಳ ಮೇಲೆ ಬೆಳಕು ಹೇಗಿರಬೇಕು. ಮತ್ತು ಸಮಯಕ್ಕೆ ತಕ್ಕಂತೆ ಹೇಗೆ ಬದಲಾವಣೆಯನ್ನು ಹೊಂದುತ್ತಿರಬೇಕು, ಮಾಡೆಲ್ಲುಗಳ ಯಾವ ಭಾಗ ಹೈಲೈಟ್ ಮಾಡಬೇಕು, ಎಲ್ಲೆಲ್ಲಿ ಕತ್ತಲನ್ನು ಉಂಟು ಮಾಡಬೇಕು ಎನ್ನುವುದನ್ನು ಥೇಟ್ ಸಿನಿಮಾ ಸೂಟಿಂಗ್‍ನಲ್ಲಿ ಮಾಡುವಂತೆ ಇಲ್ಲಿಯೂ ಲೈಟಿಂಗ್ ಸ್ಪೆಷಲಿಷ್ಟುಗಳು ಕೆಲಸ ಮಾಡುತ್ತಾರೆ. ಕೊನೆಯದು ಕ್ಯಾಮೆರಾ ದೃಷ್ಟಿಕೋನ. ಇಲ್ಲಿ ಪ್ರತಿಹಂತದಲ್ಲೂ ಇವರು ಕೈಚಳಕ ತೋರಿಸಬೇಕು. ಊದಾಹರಣೆಗೆ ಒಂದು ಹುಲಿ ಕಾಡಿನ ಹುಲ್ಲುಗಾವಲಿನಲ್ಲಿ ಓಡುತ್ತಿರುವಾಗ ಬೆಳಕು ಅದರ ಮೇಲೆ ಪ್ರಕರವಾಗಿ ಬೀಳುತ್ತಿದ್ದರೂ ಮರುಗಳಿಗೆಯಲ್ಲಿ ಮರಗಳ ಕೆಳಗೆ ಚಲಿಸುವಾಗ ನೆರಳಿನ ವಾತಾವರಣದಲ್ಲಿ ಚಲಿಸುವಾಗ ಇರುವ ಬೆಳಕನ್ನು ಸೃಷ್ಟಿಸಬೇಕು. ಹೀಗೆ ಪ್ರತಿ ಹಂತದಲ್ಲೂ ಇವರ ಕೆಲಸ ಸೃಜನಶೀಲತೆಯನ್ನು ಬೇಡುತ್ತದೆ.


ಇದರ ನಂತರ ಶುರುವಾಗುತ್ತದೆ ಅತಿಮುಖ್ಯವಾದದು. ಅದೆಂದರೇ ಪ್ರತಿ ಪಾತ್ರಕ್ಕೂ ಮೂಳೆಗಳನ್ನು ಜೋಡಿಸಬೇಕು ಮತ್ತು ಮೂಳೆಗಳ ನಡುವೆ ಕೊಂಡಿಗಳನ್ನು ಹಾಕಬೇಕು ಇದಕ್ಕೆ ಎಂಥ ತಾಂತ್ರಿಕ ಪರಿಣತಿ ಬೇಕೇಂದರೆ ಮನುಷ್ಯನಿಗೆ ಎರಡು ಕಾಲಿರುವುದರಿಂದ ಅದಕ್ಕೆ ತಕ್ಕಂತೆ ಕಾಲು ಬೆರಳುಗಳು ಮತ್ತು ಕೈಬೆರಳುಗಳ ಗಂಟುಗಳ ನಡುವೆ ಕೊಂಡಿ ಹಾಕುವುದರಿಂದ ಪ್ರಾರಂಬಿಸಿ ದೇಹದ ಚಲಿಸುವ ಪ್ರತಿಭಾಗಗಳಿಗೂ ಕೊಂಡಿ ಹಾಕಬೇಕು ಅದು ನಿಯಮಕ್ಕೆ ತಕ್ಕಂತೆ ಹಾಕಬೇಕು. ಉದಾ: ಬೆರಳುಗಳು ಮುಂದಕ್ಕೆ ಮಡಿಚುತ್ತವೆ ವಿನಃ ಹಿಂಭಾಗಕ್ಕೆ ಮಡಿಚುವುದಿಲ್ಲ. ಇಂಥ ಸಾಮಾನ್ಯ ಜ್ಞಾನವಿರಬೇಕು. ಹೀಗೆ ಹಲ್ಲುಗಳು, ನಾಲಿಗೆ, ಬಾಯಿಯ ಮೇಲೆ ಮತ್ತು ಕೆಳ ತುಟಿಗಳು, ಕುತ್ತಿಗೆ, ಎದೆ ಸೊಂಟ, ಕುಂಡಿ, ತೊಡೆ, ಮಣಿಕಟ್ಟು, ಹಿಂಗಾಲು, ಪಾದ, ಹೀಗೆ ಪ್ರತಿಯೊಂದಕ್ಕು ಮೂಳೆ ಮತ್ತು ಕೀಲುಗಳನ್ನು ಜೋಡಿಸಬೇಕು. ಮಾಡೆಲ್ಲುಗಳು ಸರಿಯಾಗಿರದಿದ್ದಲ್ಲಿ ಇಲ್ಲಿನ ಕೆಲಸ ಮತ್ತೆ ತಪ್ಪುತ್ತದೆ. ಮತ್ತೆ ಮೊದಲಿನಿಂದ ಪ್ರಾರಂಭಿಸಬೇಕಾಗುತ್ತದೆ. ಹೀಗೆ ನಾಲ್ಕು ಕಾಲಿನ ಪ್ರಾಣಿಗಳು, ಕೀಟಗಳು, ಡೈನೋಸಾರ್‍ಗಳು, ಕೊನೆಗೆ ಗಿಡಮರಗಳು ಮಾತಾಡುವ ಸ್ಥಿತಿಇದ್ದರೆ ಅವಕ್ಕೂ ಇವೆಲ್ಲಾ ಅವಶ್ಯಕ ಮತ್ತು ಅದರದೇ ಗುಣಲಕ್ಷಣಗಳಿಗನುಗುಣವಾಗಿಯೇ ಇರಬೇಕು. ಇದಕ್ಕೂ ನೂರಾರು ಜನರು ಹಗಲು ರಾತ್ರಿ ಕೆಲಸ ಮಾಡುತ್ತಿರುತ್ತಾರೆ. ಇದಕ್ಕೆ ಆನಿಮೇಶನಲ್ಲಿ ರಿಗ್ಗಿಂಗ್ ಎನ್ನುತ್ತೇವೆ. ಈ ಇದರಲ್ಲಿಯೇ ಪರಿಣತಿ ಪಡೆದಿರುವವರನ್ನು ರಿಗ್ಗಿಂಗ್ ಸ್ಪೆಷಲಿಷ್ಟ್ ಎನ್ನುತ್ತಾರೆ.ಇದು ಮುಗಿದ ನಂತರ ಇನ್ನೂ ಮುಖ್ಯ ಕೆಲಸವೆಂದರೆ ಪ್ರತಿ ಪಾತ್ರಕ್ಕೂ ಚಲನೆಯನ್ನು ಕೊಡುವುದು ಈ ಚಲನೆ ಪಾತ್ರಗಳಿಗನುವಾಗಿ ತಕ್ಕಂತೆ ಇರುತ್ತದೆ. ಮನುಷ್ಯ ನಡೆಯುವುದು, ಓಡುವುದು, ಕಾಗೆಹಾರುವುದು, ಪ್ರಾಣಿಗಳು ನಾಲ್ಕುಕಾಲಿನಲ್ಲಿ ನಡೆಯುವುದು, ಓಡುವುದು, ಕೆಲವು ಹಾರುವುದು, ಕೀಟಗಳು ಹಾರುವುದು, ತನ್ನ ಆರು ಎಂಟು ಕೈಗಳಲ್ಲಿ ಚಲಿಸುವುದು, ಬಳಸುವುದು, ಮತ್ತೆ ತೆವಳುವ ಜೀವಿಗಳಿಗೆ ಅದಕ್ಕೆ ತಕ್ಕಂತೆ ಚಲನೆ , ಜಲಚರಗಳಿಗೆ ಈಜುವ ಚಲನೆ ಹೀಗೆ ಈ ವಿಭಾಗದಲ್ಲೂ ನೂರಾರು ಪರಿಣತರು ಕೆಲಸ ಮಾಡುತ್ತಾರೆ. ಇವರ ಕೆಲಸದ ಬಗ್ಗೆ ಒಂದು ಉದಾಹರಣೆಯನ್ನು ಕೊಡುತ್ತೇನೆ.

ಸಿನಿಮಾದ ಭಾಷೆಯಲ್ಲಿ ಒಂದು ಸೆಕೆಂಡಿಗೆ ೨೪ ಪ್ರೇಮುಗಳು ಚಲಿಸುವಂತೆ ಕ್ಯಾಮೆರಾದಲ್ಲಿ ಸೆಟ್ಟಿಂಗ್ ಇರುತ್ತದೆ. ಇಲ್ಲಿಯೂ ಅದೇ ನಿಯಮವನ್ನು ಬಳಸಿಕೊಳ್ಳುತ್ತಾರೆ. ಮನುಷ್ಯರು ನಟಿಸುವ ಸಿನಿಮಾಗಳಲ್ಲಿ ಕ್ಯಾಮೆರಾಗಳು ಇಂಥ ಕೆಲಸಗಳನ್ನು ಮಾಡುವುದರಿಂದ ಅಲ್ಲಿ ನಿರ್ಧೇಶಕ, ಛಾಯಾಗ್ರಾಹಕ ಯಾರಿಗೂ ತಲೆಬಿಸಿಯಿಲ್ಲ. ಆದ್ರೆ ಅನಿಮೇಶನ್ ಸಿನಿಮಾದಲ್ಲಿ ಕ್ಯಾಮೆರ ಇಲ್ಲದ್ದರಿಂದ ಎಲ್ಲವನ್ನು ಅನಿಮೇಶನ್ ಸ್ಪೆಷಲಿಷ್ಟ್ ಮಾಡಬೇಕು.

ಒಂದು ಸೆಕೆಂಡಿಗೆ ೨೪ ಪ್ರೇಮುಗಳಂತೆ ಪ್ರತಿ ಪ್ರೇಮು ಕೂಡ ಪಾತ್ರಧಾರಿಯ ಕಾಲುಗಳು[ಎರಡಾಗಲಿ ನಾಲ್ಕಾಗಲಿ] ಎಷ್ಟು ದೂರ ಚಲಿಸಬೇಕು, ಜೊತೆಗೆ ಕಾಲಿನ ಮೇಲಿನ ಹಿಮ್ಮಡಿ ಎಷ್ಟು ಎತ್ತಬೇಕು ಮತ್ತು ಮುಂದಿನ ಯಾವ ಪ್ರೇಮಿನಲ್ಲಿ ಕೆಳಗೆ ಇಳಿಸಬೇಕು ಎನ್ನುವ ಪಕ್ಕಾ ಲೆಕ್ಕಾಚಾರವಿರಬೇಕು. ಜೊತೆ ಜೊತೆಗೆ ಮಂಡಿ, ಕುಂಡಿ ಎದೆ ತಲೆ, ಕಣ್ಣುಗಳು, ಈ ಸಮಯದಲ್ಲಿ ಒಂದು ಕೈ ಮುಂದಿದ್ದರೆ ಮತ್ತೊಂದು ಕೈ ಹಿಂದಕ್ಕೆ ಹೀಗೆ ೨೪ ಪ್ರೇಮುಗಳಲ್ಲಿ ನಡಿಗೆ ಸೃಷ್ಟಿಸಬೇಕು ಹೀಗೆ ಮುಂದಿನ ಸೆಕೆಂಡಿಗೆ ಮತ್ತೆ ಚಲನೆಯಲ್ಲಿ ವ್ಯತ್ಯಾಸವಾಗುವುದಾದರೆ [ನಡೆಯುವವನು ಓಡಿಲಿಚ್ಚಿಸಿದರೆ]ಅದಕ್ಕೆ ತಕ್ಕಂತೆ ಮತ್ತೆ ಬದಲಿಸಬೇಕು. ಜೊತೆಗೆ ಪಾತ್ರದಾರಿಯ ಮಾತುಕತೆಗೆ ಅನುಗುಣವಾಗಿ ಬಾಯಿ ಮತ್ತು ತುಟಿ ಚಲನೆ, ಕಣ್ಣುಗಳ ಹುಬ್ಬೇರಿಸುವಿಕೆ, ಹಣೆಯ ಚಲನೆ, ಹೀಗೆ ಪ್ರತಿ ಪ್ರೇಮಿನಲ್ಲೂ ಪಕ್ಕಾ[ನಿರ್ಧೇಶಕನ ಆಶಯದಂತೆ]ಚಲನೆಯಂತೆ ೨೪ ಪ್ರೇಮು ಸರಿಯಾಗಿದ್ದರೆ ಒಂದು ಸೆಕೆಂಡಿನ ಆನಿಮೇಶನ್ ಸಿದ್ದವಾಗುತ್ತದೆ. ನಡುವೆ ೧೬ ಅಥವ ೨೦ನೇ ಪ್ರೇಮಿನಲ್ಲಿ ತಪ್ಪಾದರೇ ಮತ್ತೆ ಅದನ್ನು ಸರಿಪಡಿಸಲು ಬೇರೊಬ್ಬರಿರುತ್ತಾರೆ.

ಹೀಗೆ ಒಂದು ಪ್ರೇಮು ಚಲನೆ[ಅನಿಮೇಟ್] ಕೊಡುವುದಕ್ಕೆ ಎಂಥ ಪರಿಣತನಿಗಾದರೂ ಕನಿಷ್ಟ ೨೫ ಕೊಂಡಿಗಳನ್ನು ಸಮನಾಂತರ ಚಲಿಸಲು ಹತ್ತಾರು ಕೀಗಳನ್ನು ಉಪಯೋಗಿಸಬೇಕಾಗುತ್ತದೆ. ಅದಕ್ಕಾಗಿ ಕಡಿಮೆಯೆಂದರೂ ಹತ್ತು ನಿಮಿಷ ಬೇಕಾಗುತ್ತದೆ. ಒಂದು ಸೆಕೆಂಡಿಗೆ ಎಷ್ಟಾಗಬಹುದು....ಒಂದು ನಿಮಿಷಕ್ಕೆ ಎಷ್ಟು, ಒಂದುಗಂಟೆಗೆ ಎಷ್ಟು ಮತ್ತು ಒಂದು ಸಿನಿಮಾ ಅನಿಮೇಶನ್ ಮಾಡಲು ಎಷ್ಟು ಸಮಯ ಬೇಕಾಗಬಹುದು? ಲೆಕ್ಕ ನಿಮಗೆ ಬಿಟ್ಟಿದ್ದು.

ಹೀಗೆ ಒಂದು ಅನಿಮೇಶನ್ ಸಿನಿಮಾ ಒಂದುವರೆಗಂಟೆ ಇದ್ದರೆ ಒಂದು ಲಕ್ಷ ಇಪ್ಪತ್ತೊಂಬತ್ತು ಸಾವಿರದ ಆರುನೂರು[೧೨೯೬೦೦] ಪ್ರೇಮುಗಳ ಚಲನೆಯನ್ನು ಅನಿಮೇಶನ್ ಸ್ಪೆಷಲಿಷ್ಟುಗಳು ಕೊಡಬೇಕಾಗುತ್ತದೆ. ಇಲ್ಲಿಯೂ ಅಷ್ಟೇ ಯಾವುದೇ ಒಂದು ಪ್ರೇಮಿನ ನಡೆಯು ತಪ್ಪಾದರೂ ಆ ಸೆಕೆಂಡಿನ ಅನಿಮೇಶನ್ ಅಸಂಬದ್ದವಾಗುತ್ತದೆ.

ಇದರ ನಡುವೆ ಮತ್ತೊಬ್ಬರು ಬರುತ್ತಾರೆ ಡೈನಮಿಕ್ಸ್ ಸ್ಪೆಷಲಿಷ್ಟ್ ಅಂತ. ಅವರ ಕೆಲಸವೇನೆಂದರೆ ಸಿನಿಮಾದಲ್ಲಿ ಬಾಂಬ್ ಸ್ಪೋಟಿಸುವುದು, ಮಳೆ ಬರಿಸುವುದು, ಹೊಗೆ ಬರಿಸುವುದು, ಜಲಪಾತ ಹರಿಸುವುದು, ಪ್ರವಾಹ ತರಿಸುವುದು, ಅಗ್ನಿಪರ್ವತವನ್ನು ಸ್ಪೋಟಿಸುವುದು, ಚಂಡಮಾರುತ ಬರಿಸುವುದು, ಸಮುದ್ರ ಉಕ್ಕಿಸುವುದು, ಭೂಕಂಪ ಮಾಡಿಸುವುದು..............ಹೀಗೆ ನೂರಾರು ಕೆಲಸಗಳನ್ನು ಈ ಸಿನಿಮಾಗೆ ಬೇಕಾದ ಹಾಗೆ ಮಾಡುತ್ತಾರೆ. ಇವರೆಲ್ಲರ ಕೆಲಸ ಮುಗಿದ ಮೇಲೆ ಸಿನಿಮಾ ಹೈ ಕ್ವಾಲಿಟಿಯಲ್ಲಿ ರೆಂಡರಿಂಗ್ ಆಗಿ ಮೂಕಿ ಸಿನಿಮಾ ಆಗಿ ದಾಖಲಾಗುತ್ತದೆ. ಆನಂತರವೇ ಅದನ್ನು ಪ್ರೊಜೆಕ್ಟ್ ಮಾಡಿ ಮಾತಿನ ಡಬ್ಬಿಂಗ್, ಹಿನ್ನೆಲೆ ಸಂಗೀತ, ಡಾಲ್ಬಿ ಡಿಜಿಟಲ್ ಎಫೆಕ್ಟ್ ಇತ್ಯಾದಿಗಳನ್ನು ಮಾಡುತ್ತಾರೆ ಅದಕ್ಕೆ ಹೆಸರಾಂತ ನಟರು ಅಥವ ಡಬ್ಬಿಂಗ್ ಕಲಾವಿದರು ಇರುತ್ತಾರೆ.

ಒಂದು ಅತ್ಯುತ್ತಮ ತಾಂತ್ರಿಕತೆಯ ಅನಿಮೇಶನ್ ತಯಾರಾಗಬೇಕಾದರೆ ೨೦ ಜನ ಮಾಡಲರುಗಳು, ೨೦ ಜನ ಟೆಕ್ಷರ್[ಬಣ್ಣಹಾಕುವವರು]. ೨೦ ಜನ ಲೈಟಿಂಗ್ ಸ್ಪೆಷಲಿಷ್ಟ್, ೨೦ ಜನ ರಿಗ್ಗಿಂಗ್ ಸ್ಪೆಷಲಿಷ್ಟ್, ಕೊನೆಯಲ್ಲಿ ೨೦೦ ಜನ ಅನಿಮೇಟರುಗಳು ೧೦೦ ಜನ ಡೈನಮಿಕ್ಸ್ ಸ್ಪೆಷಲಿಷ್ಟುಗಳು ಆರುತಿಂಗಳು ವರ್ಷಾನುಗಟ್ಟಲೇ ಒಂದು ಸಿನಿಮಾ ತಯಾರಿಕೆಯಲ್ಲಿ ತೊಡಗಿಕೊಂಡಿರುತ್ತಾರೆ. [ಮತ್ತೆ ನಾನು ಹೇಳುತ್ತಿರುವುದು ಪೂರ್ಣಪ್ರಮಾಣದ ಅನಿಮೇಶನ್ ಸಿನಿಮಾದ ಬಗ್ಗೆ ಮಾತ್ರ. ಕೆಲವು ಚಿತ್ರಗಳಲ್ಲಿ ಅನಿಮೇಶನ್ ಮತ್ತು ನಿಜವ್ಯಕ್ತಿಗಳ ಸಿನಿಮಾ ರೀಲ್ ಚಿತ್ರೀಕರಣ ಎರಡು ಇರುತ್ತದೆ. ಉದಾ: ಸ್ಪೈಡರ್ ಮ್ಯಾನ್, ಟ್ರಾನ್‍ಫಾರ್ಮರ್, ಇತ್ಯಾದಿ ಸಿನಿಮಾಗಳು.]

ಇಷ್ಟೆಲ್ಲಾ ಸಾಧಕರ ಕೆಲಸವನ್ನು ನಾವು ಒಂದುವರೆ ಗಂಟೆಯಲ್ಲಿ ನೋಡಿ ಥತ್! ಇದೆಂಥ ಸಿನಿಮಾ ಅಂದುಬಿಡುತ್ತೇವಲ್ಲ...

ಇದೆಲ್ಲಾ ನನಗೆ ಹೇಗೆ ಗೊತ್ತಾಯಿತು ಅಂದುಕೊಳ್ತೀದ್ದೀರಿ ಅಲ್ವಾ.....ಖಂಡಿತ ಇದೆಲ್ಲಾ ಮಾಹಿತಿಯನ್ನು ಇಂಟರ್‌ನೆಟ್ ಮೂಲಕವಾಗಿ ಪಡೆದುಕೊಂಡಿಲ್ಲ. ಮತ್ತೆ ಹೇಗೆ ಗೊತ್ತಾಯಿತು ಅಂತೀರಾ! ನಾನು ಆರು ತಿಂಗಳು "ಮಾಯಾ" ಸಾಪ್ಟವೇರಿನಲ್ಲಿ ಅನಿಮೇಶನ್ ಕೋರ್ಸ್ ಮಾಡಿದ್ದೆ. ನನಗೆ "ಟೆಕ್ಷರಿಂಗ್" ವಿಭಾಗದಲ್ಲಿ ಪರಿಣತಿ ಪಡೆಯಬೇಕೆನ್ನುವ ಮಹತ್ವಾಕಾಂಕ್ಷೆಯಿತ್ತು. ಮೊದಲು ಬೇಸಿಕ್ ಕೋರ್ಸ್ ಮುಗಿಸಿದ್ದೆ. ಇನ್ನೇನು ಆಡ್ವಾನ್ಸ್ ಕೋರ್ಸ್ ಸೇರಬೇಕೆನ್ನುವಷ್ಟರಲ್ಲಿ ನನ್ನ ತಂದೆ ತೀರಿಹೋದರು. ಮನೆಯ ಜವಾಬ್ದಾರಿ ಪೂರ್ಣವಾಗಿ ನನ್ನ ಮೇಲೆ ಬಿತ್ತು. ಎರಡು ದುಡಿಮೆಗಳಾದ ದಿನಪತ್ರಿಕೆ ವಿತರಣೆ ಮತ್ತು ಫೋಟೊಗ್ರಫಿಯ ಜೊತೆಗೆ ಈ ಆನಿಮೇಶನ್ ಕಲಿಕೆಯಿಂದಾಗಿ ನನಗೆ ನಿದ್ರಾ ಸಮಯ ಪ್ರತಿದಿನ ೩ ಅಥವ ೪ ಗಂಟೆ ಮಾತ್ರ ಇರುತ್ತಿತ್ತು.

ಈ ಅನಿಮೇಶನ್ ಕೋರ್ಸಿನಲ್ಲಿ ತರಗತಿಗಿಂತ ಅಭ್ಯಾಸಕ್ಕೆ ತುಂಬಾ ಸಮಯ ಬೇಡುತ್ತದೆ. ಎಷ್ಟು ಸಮಯವೆಂದರೆ ದಿನಕ್ಕೆ ಕಡಿಮೆಯೆಂದರೆ ೧೦ ಗಂಟೆ ಎಡಬಿಡದೆ ಅಬ್ಯಾಸ ಮಾಡಬೇಕು. ಮತ್ತು ಸಿಕ್ಕಾಪಟ್ಟೆ ಸೃಜನಶೀಲತೆಯನ್ನು ಬೇಡುತ್ತದೆ. ಆದರೂ ಒಂದು ಕೈ ನೋಡೇ ಬಿಡೋಣವೆಂದು ಸೇರಿಕೊಂಡು ಆರು ತಿಂಗಳ ಬೇಸಿಕ್ ಕೋರ್ಸ್ ಮುಗಿಸಿದ್ದೆ. ನಂತರ ನಡೆದ ಕೆಲವು ಅನಿರೀಕ್ಷಿತ ಘಟನೆಗಳಿಂದಾಗಿ ಮತ್ತು ಅ ಸಮಯದಲ್ಲಿ ಕೈತುಂಬ ಫೋಟೊಗ್ರಫಿ ಕೆಲಸ, ದಿನಪತ್ರಿಕೆ ವಿತರಣೆ ಕೆಲಸಗಳ ನಡುವೆ ದಿನದ ೨೪ ಗಂಟೆಗಳಲ್ಲಿ ೧೦ ಗಂಟೆಯನ್ನು ಅನಿಮೇಶನ್ ಅಭ್ಯಾಸಕ್ಕೆ ಹೊಂದಿಸಿಕೊಳ್ಳಲಾಗುತ್ತಿರಲಿಲ್ಲ. ಇದೆಲ್ಲಾ ಕಾರಣಗಳಿಂದಾಗಿ ನಾನು ಅಂತ ಅದ್ಬುತ "ಮಾಯಾ"ಲೋಕದ ಕೆಲಸದಲ್ಲಿ ಮುಂದುವರಿಯಲು ಸಾಧ್ಯವಾಗಲಿಲ್ಲ. ಬಹುಶಃ ನಾನು ಅದರಲ್ಲೇ ಮುಂದುವರಿದಿದ್ದರೇ ಈಗ ಯಾವುದೋ ಕಂಪನಿಯ ಜಾಹಿರಾತಿಗೋ, ಅಥವ ಸಿನಿಮಾಗೋ ಟೆಕ್ಷರ್ ಆರ್ಟಿಷ್ಟ್ [ನನಗೆ ಮಾಡೆಲ್ಲುಗಳಿಗೆ ಮತ್ತು ಪ್ರಕೃತಿಗೆ ಬಣ್ಣ ಹಾಕುವುದು ಇಷ್ಟ] ಆಗಿ ಕಂಪ್ಯೂಟರ್ ಕುಟ್ಟುತ್ತಿದ್ದೆ.

ಮಾಯಾ ಅನಿಮೇಶನ್ ಕಲಿಕೆಯ ಸಮಯದಲ್ಲಿ ನಾನೇ ಮಾಡೆಲ್ ತಯಾರಿಸಿ ಟೆಕ್ಷರ್[ಬಣ್ಣ]ಕೊಟ್ಟ ಎರಡು ಮುಸೆಂಬಿ ಹಣ್ಣುಗಳು ಒಂದಕೊಂದು ಪ್ರೀತಿಯಿಂದ ಮುತ್ತು ಕೊಡುತ್ತಿರುವ ಚಿತ್ರ.

ಕೊನೆಗೆ ನನ್ನ ಹಣೆಬರಹದಲ್ಲಿ ಏನು ಬರೆದಿದೆಯೋ ಅದು ಆಗುತ್ತದೆ ಅಂದುಕೊಂಡು ಸುಮ್ಮನಾದೆ.

ಈ ವಿಚಾರವನ್ನು ತುಂಬಾ ದಿನದಿಂದ ಹೇಳಿಕೊಳ್ಳಬೇಕೆನಿಸಿದರೂ ಸಾಧ್ಯವಾಗಿರಲಿಲ್ಲ. ಅನಿಮೇಶನ್ ಸಿನಿಮಾ ತಯಾರಿಕೆ ಬಗ್ಗೆ ಮತ್ತು ಕಲಿಕೆಯ ಬಗ್ಗೆ ಯಾವುದೇ ತಾಂತ್ರಿಕ ಪದಗಳನ್ನು ಬಳಸದೆ ಸರಳವಾಗಿ ಹೇಳಬೇಕೆನಿಸಿ ಪ್ರಯತ್ನಿಸಿದ್ದೇನೆ. ಲೇಖನವನ್ನು ಎಷ್ಟು ಚಿಕ್ಕದು ಬರೆಯಬೇಕೆನಿಸಿದರೂ ಸಾಧ್ಯವಾಗದೇ ಇಷ್ಟು ದೀರ್ಘವಾಗುವುದನ್ನು ನನಗೆ ತಡೆಯಲಾಗಲಿಲ್ಲ. ಮತ್ತೆ ಅನಿಮೇಶನ್ ಡಬ್ಬಿಂಗ್ ಬಗ್ಗೆ ಬರೆದರೆ ಮತ್ತಷ್ಟು ಪುಟಗಳು ತುಂಬಿ ನಿಮಗೆ ಬೇಸರವಾಗಬಹುದೆನಿಸಿ ಇಲ್ಲಿಗೆ ನಿಲ್ಲಿಸಿದ್ದೇನೆ. ಲೇಖನ ಅರ್ಥವಾದರೇ ನನ್ನ ಪ್ರಯತ್ನ ಸಾರ್ಥಕ. ಓದಿದ ನಂತರ ದಯವಿಟ್ಟು ನಿಮ್ಮ ಪ್ರತಿಕ್ರಿಯೆಯನ್ನು ಬರೆಯಿರಿ....

ಚಿತ್ರ ಮತ್ತು ಲೇಖನ.
ಶಿವು.ಕೆ

98 comments:

ಅಲೆಮಾರಿ said...

intha chitragala konege toarisuva taantikavargada list noadi enappa idu ivarella enu maadtare , ishtella jana yaake beku anta nannalli prashne mooduttittu.nimma e baraha nanna prashnege uttara kottide:)

ಜಲನಯನ said...

ಶಿವು ನಿಮ್ಮ ಬಯಕೆ ಈಡೇರಲಿಲ್ಲ ಎನ್ನುವ ಕೊರಗು ನಿಮ್ಮನ್ನು ಕಾಡಿಸಿದಷ್ಟೇ ನಮಗೂ ಬೇಸರ ತರಿಸಿದೆ. ನಿಮ್ಮ ಸೃಜನಶೀಲತೆಗೆ ಒಳ್ಲೆಯ ಸವಾಲಾಗಿರುತ್ತಿತ್ತು. ನಿಮ್ಮ ಲೇಖನ ಸವಿಸ್ತಾರವಾಗಿದ್ದು ಕೆಲವು ಉಪಯುಕ್ತ ಮಾಹಿತಿಗಳನ್ನೂ ನೀಡಿದ್ದೀರಿ...ನಿಮ್ಮ ಲೇಖನ ಹಲವರಿಗೆ ದಾರಿತೋರಬಹುದು. ಅನಿಮೇಷನ್ ಒಂದು ಪರಿಶ್ರಮ ಭರಿತ ಕಲೆ ಮತ್ತು ಅದರಲ್ಲೂ ಒಂದು ಪೂರ್ಣ ಪ್ರಮಾಣದ ಚಲನ ಚಿತ್ರ ಮಾಡಬೇಕಾದರೆ ಎಷ್ಟು ಜನರ ಶ್ರಮ ಅಡಗಿದೆ ಎಂದೂ ನೀವು ವಿವರವಾಗಿ ಹೇಳಿದ್ದೀರಿ..
ನಿಮ್ಮ ಅನಿಮೇಶನ್ ಕಲಿಯುವ ಆಸೆ ಬೇಗ ಈಡೇರಲಿ ಎಂದು ನನ್ನ ಹಾರೈಕೆ

ಬಾಲು said...

ಅನಿಮೇಟೆಡ್ ಮೂವಿಗಳನ್ನ ಹ೦ಗೆ ಮಾಡ್ತಾರೆ, ಹಿ೦ಗೆ ಮಾಡ್ತಾರೆ ಅ೦ತ ಕೇಳಿದ್ದೆ, ಆದ್ರೆ ಇಗ ಸ್ವಲ್ಪ ತಲೆಗೆ ಹೊಕ್ಕಿತು.

ನಿಮ್ಮ ಬಯಕೆ ಈಡೇರಲಿಲ್ಲ ಅನ್ನುವ ಬೇಸರ ನಮಗೂ ಕಾಡುತ್ತಿದೆ. ಮಾಯಾಲೋಕಕ್ಕೆ ಆದಷ್ಟು ಬೇಗ ಜಿಗಿಯುವ ಸುಸ೦ಧರ್ಭ ಬರಲಿ ಎ೦ದು ಹಾರೈಸುವೆ.

YAKSHAMANDAARA said...

thumba channagi artha agoo hagey bardiddir... nanu animation chitra madlikkey thumba kastta antha keyliddey . odiddey... adrey nevu thumba channagi bidi bidiyagi bareydu thilisiddrii... nemm asey adashttu beyga eddeyralli antha harisutteyney...

ದೀಪಸ್ಮಿತಾ said...

ಶಿವು ಸರ್, ತುಂಬಾ ಉಪಯುಕ್ತ ಹಾಗೂ ಮಾಹಿತಿಭರಿತ ಲೇಖನ. ಈ ಕ್ಷೇತ್ರದ ಬಗ್ಗೆ ಬಹಳ ಆಸಕ್ತಿ ಇರುವ ನನಗೆ ಇದರಲ್ಲಿ ಅಡಗಿರುವ ಶ್ರಮ ಹಾಗೂ ಸಮಯದ ಅಗತ್ಯ ಅರ್ಥವಾಗುತ್ತದೆ. ಪ್ರತಿ ಫ್ರೇಮ್‍ಗೂ ಬೇಕಾಗುವ ಕೆಲಸ, ತಂತ್ರಜ್ಞಾನ ಅಗಾಧವಾದುದು. ಟಿವಿ, ಸಿನೆಮಾ, ಜಾಹೀರಾತುಗಳಲ್ಲಿ ಬರುವ ಅನಿಮೇಶನ್‍ಗಳನ್ನು ನಾವು ನೋಡಿ ಮರೆತು ಬಿಡುತ್ತೇವೆ. ಅದರ ಸೃಷ್ಟಿಯ ಬಗ್ಗೆ ತುಂಬ ವಿವರವಾಗಿ ಸರಳವಾಗಿ ಬರೆದಿದ್ದೀರಿ.

ಇನ್ನು ನಿಮ್ಮ ಕೈಗೂಡದಿರುವ ಆಸೆ. ಏನು ಮಾಡುವುದು, ಜೀವನವೇ ಹಾಗಲ್ಲವೇ? ಪ್ರತಿಯೊಬ್ಬರಲ್ಲೂ ಒಂದೊಂದು ನನಸಾಗದಿರುವು ಕನಸು ಇದ್ದೇ ಇರುತ್ತದೆ. ಆದರೆ ಏನು, ನೀವು ಈಗ ಮಾಡುತ್ತಿರುವ ಕೆಲಸ ಕಡಿಮೆ ಸೃಜನಾತ್ಮಾಕವೇ? ಬ್ಲಾಗ್, ಛಾಯಾಚಿತ್ರಣ, ಕತೆ ರಚನೆ...

ಅನಿಮೇಶನ್, ಗಾಫಿಕ್ ಡಿಸೈನ್, ವೆಬ್ ಡಿಸೈನ್, ಕಂಪ್ಯೂಟರ್ ಗಾಫಿಕ್, ಫೋಟೋಗ್ರಾಫಿ, ವಿಡಿಯೋಗ್ರಾಫಿ - ಇಂಥ ಕ್ಷೇತ್ರಗಳಲ್ಲಿ ನನಗೂ ವಿಪರೀತ ಆಸಕ್ತಿ. ಮುಂದುವರೆಯುವುದು ಹೇಗೆ ಎಂದು ಗೊತ್ತಾಗುತ್ತಿಲ್ಲ ಅಷ್ಟೆ. ಅನುಭವಸ್ಥರು, ಈ ಕೆಲಸಗಳಲ್ಲಿ ಇರುವವರ ಸಲಹೆ, ಮಾರ್ಗದರ್ಶನ ಸಿಗಲು ಪ್ರಯತ್ನಿಸುತ್ತಿದ್ದೇನೆ.

ನೀವು ತರಬೇತಿ ಪಡೆದಿದ್ದು ವ್ಯರ್ಥವಾಗದೇ ಇರಲಿ. ಇದನ್ನು ಮುಂದುವರೆಸಲು ನಿಮಗೆ ಸಮಯ, ಮಾರ್ಗದರ್ಶನ, ಒಳ್ಳೆ projectಗಳು ಸಿಗಲಿ ಎಂದು ಹಾರೈಸುತ್ತೇನೆ.

shivu.k said...

ಗೌತಮ್ ಸರ್,

ನನ್ನ ಬ್ಲಾಗಿಗೆ ಸ್ವಾಗತ.
ನನ್ನ ಬ್ಲಾಗಿಗೆ ಈ ಲೇಖನಕ್ಕೆ ಮೊದಲಿಗರಾಗಿ ಬಂದಿದ್ದೀರಿ. ಅನಿಮೇಶನ್ ಚಿತ್ರಗಳ ಕೊನೆಯಲ್ಲಿ ತೋರಿಸುವ ತಾಂತ್ರಿಕ ವರ್ಗದವರ ಹೆಸರು ಕೇವಲ ಟೀಮ್ ಲೀಡರುಗಳದು. ಒಬ್ಬೊಬ್ಬರ ಕೈಕೆಳಗೂ ಹತ್ತಾರು ಜನರು ಕೆಲಸ ಮಾಡುತ್ತಾರೆ.
ನಿಮ್ಮಲ್ಲಿ ಮೂಡುತ್ತಿದ್ದ ಪ್ರಶ್ನೆಗೆ ನನ್ನ ಈ ಲೇಖನದಿಂದ ಉತ್ತರ ಸಿಕ್ಕಿದ್ದರೇ ನನ್ನ ಪ್ರಯತ್ನ ಸಾರ್ಥಕ.
ಧನ್ಯವಾದಗಳು.

shivu.k said...

ಆಜಾದ್ ಸರ್,

ಈ ವಿಚಾರದಲ್ಲಿ ನನ್ನ ಬಯಕೆ ಈಡೇರಲಿಲ್ಲವೆಂದು ನನಗೆ ಆಗ ನನಗೆ ಬೇಸರವಿದ್ದರೂ ಈಗ ಖಂಡಿತ ಇಲ್ಲ. ನೀವು ಹೇಳಿದಂತೆ ಅದು ನನ್ನ ಸೃಜನಶೀಲತೆಗೆ ಸವಾಲಾಗುತ್ತಿತ್ತು. ಅದರೂ ಈಗ ಬೇರೆ ವಿಚಾರಗಳಲ್ಲಿ ತೊಡಗಿಕೊಂಡಿರುವುದರಿಂದ ತೊಂದರೆಯಿಲ್ಲ. ನನ್ನ ಹಲವರಿಗೆ ದಾರಿ ತೋರಬಹುದು ಅಂತ ನಿಮಗನ್ನಿಸಿದರೇ ಅದಕ್ಕೆ ಧನ್ಯವಾದಗಳನ್ನು ಹೇಳುತ್ತೇನೆ.

shivu.k said...

ಬಾಲು ಸರ್,

ಇಂಥ ಸಿನಿಮಾಗಳ ಬಗ್ಗೆ ನಿಮಗೆ ಗೊತ್ತಾಗಿದ್ದರೆ ನನ್ನ ಪ್ರಯತ್ನ ಸಾರ್ಥಕ. ನೀವು ಹೇಳಿದಂತೆ ನಾನು ಮತ್ತೆ ಆ ರಂಗಕ್ಕೆ ಇಳಿಯಬೇಕಾದರೆ ಮೊದಲಿನಿಂದ ಎಲ್ಲಾ ಕಲಿಯಬೇಕು. ಅದೊಂಥರ ಇವತ್ತು ಕಲಿತಿದ್ದು ಅಭ್ಯಾಸಮಾಡುತ್ತಿರಬೇಕು. ಬಿಟ್ಟರೆ ಮತ್ತೆ ಮೊದಲಿಂದ ಕಲಿಯಬೇಕು. ಆದ್ದರಿಂದ ಈಗ ಮೊದಲಿನಿಂದ ಕಲಿಯುವಷ್ಟು ಸಮಯವಂತೂ ಖಂಡಿತ ಇಲ್ಲವಾದ್ದರಿಂದ ಅದರ ಆಸೆಯನ್ನು ಬಿಟ್ಟಿದ್ದೇನೆ..
ಧನ್ಯವಾದಗಳು.

shivu.k said...

ಸುಜನ್ ಸರ್,

ನನ್ನ ಬ್ಲಾಗಿಗೆ ಸ್ವಾಗತ. ನೀವು ಅಂದುಕೊಂಡಂತೆ ಇಂಥ ಸಿನಿಮಗಳನ್ನು ಮಾಡುವುದು ತುಂಬಾ ಕಷ್ಟ. ನನ್ನ ಲೇಖನ ನಿಮಗೆ ಸುಲಭವಾಗಿ ಅರ್ಥವಾಗಿದ್ದು ನನಗೆ ಖುಷಿಯಾಯ್ತು..
ಧನ್ಯವಾದಗಳು.

ಮನಸು said...

shivu sir,
animated films bagge chennagi tilisiddeeri...vivaraNe tumba chennagide..
naanu animation kalitiddene tumba interesting, neevu kaliri chennagirutte... nimagu use agabahudu

shivu.k said...

ದೀಪಸ್ಮಿತ ಸರ್,

ನನ್ನ ಲೇಖನವನ್ನು ಓದಿ ಸುಧೀರ್ಘ ಅಭಿಪ್ರಾಯವನ್ನು ಬರೆದಿದ್ದೀರಿ.

ನಿಮಗೂ ಈ ಕ್ಷೇತ್ರದಲ್ಲಿ ಆಸಕ್ತಿಯಿರುವುದರಿಂದ ನಿಮಗೆ ನಾನು ಬರೆದಿರುವುದೆಲ್ಲಾ ಸುಲಭವಾಗಿ ಅರ್ಥವಾಗಿರಬಹುದು ಅಂದುಕೊಂಡಿದ್ದೇನೆ. ಇಂಥ ಸಿನಿಮಾಗಳು ನೋಡಲು ನಮಗೆ ಅದೆಷ್ಟು ಖುಷಿಕೊಡುತ್ತವೆ. ಆದ್ರೆ ಅದರ ಹಿಂದೇ ರಾತ್ರಿ ಹಗಲು ಕೆಲಸ ಮಾಡಿದ ಅನಿಮೇಶನ್ ಡಿಸೈನರುಗಳ ಸೃಜನಶೀಲತೆಯನ್ನು ನಾವೆಲ್ಲಾ ಗಮನಿಸುವುದಿಲ್ಲ. ನಾನು ಕಲಿತು ಅದರ ಬಗ್ಗೆ ಸ್ವಲ್ಪ ತಿಳಿದುಕೊಂಡಿದ್ದರಿಂದ ಬರೆದಿದ್ದೇನೆ. ಇಂಥವನ್ನೆಲ್ಲಾ ತಿಳಿದುಕೊಂಡ ನಂತರ ಈಗ ಹೊಸ ಆನಿಮೇಶನ್ ಸಿನಿಮಾಗಳಾದ, bolt, madgaskar 2, kungfu fanda, ಇತ್ಯಾದಿಗಳನ್ನು ನೋಡಿ. ಆಗ ಅದರ ಆನಂದವೇ ಬೇರೆ.

ಮತ್ತೆ ನನ್ನ ಆಸೆ ಈಡೇರಲಿಲ್ಲವೆನ್ನುವುದಕ್ಕೆ ಖಂಡಿತ ಬೇಸರವಿಲ್ಲ. ನೀವೇ ಹೇಳಿದಂತೆ ಈಗ ಮಾಡುತ್ತಿರುವ ಕೆಲಸದಲ್ಲಿ ಖಂಡಿತ ಖುಷಿಯಿದೆ, ಸುಖವಿದೆ, ತೃಪ್ತಿಯಿದೆ.

ಮತ್ತೆ ನಿಮಗೆ ಆಸಕ್ತಿಯಿರುವ ಕ್ಷೇತ್ರಗಳಲ್ಲಿ ಮುಂದುವರಿಯಬೇಕಾದರೆ ನೇರ ಆ ತರಗತಿಗಳಿಗೆ ಸೇರಿ ಅಭ್ಯಾಸ ಮಾಡುವುದಷ್ಟೇ ಬಾಕಿ. ಆಭ್ಯಾಸವೇ ನಮ್ಮನ್ನು ಪ್ರತಿಯೊಂದು ಕ್ಷೇತ್ರದಲ್ಲೂ ಮುನ್ನಡೆಸುವ ದಾರಿದೀಪ.
ಪ್ರಯತ್ನಿಸಿ.

ಲೇಖನ ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು.

shivu.k said...

ಮನಸು ಮೇಡಮ್,

ಅನಿಮೇಶನ್ ನೀವು ಕಲಿತಿರುವುದು ಕೇಳಿ ಸಂತೋಷವಾಯಿತು.
ನನ್ನ ಬರಹ ಅರ್ಥಮಾಡಿಕೊಂಡಿದ್ದರೆ ನನ್ನ ಶ್ರಮ ಸಾರ್ಥಕ.
ನಾನು ಈ ಮೊದಲು ಕಲಿತ ವಿಚಾರಗಳನ್ನು ಫೋಟೋಗ್ರಫಿಯಲ್ಲಿ ಆಳವಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೇನೆ.
ಮತ್ತೆ ಕಲಿಯುವ ಮನಸ್ಸು ನನಗಿಲ್ಲ. ನೀವು ಪ್ರಯತ್ನಿಸಿ ನಿಮಗೆ ಒಳ್ಳೆಯದಾಗಲಿ...ಧನ್ಯವಾದಗಳು.

Laxman (ಲಕ್ಷ್ಮಣ ಬಿರಾದಾರ) said...

ಶಿವುರವರೆ,
ನಿಮ್ಮ ಲೇಖನ ತುಂಬಾ ಮಾಹಿತಿಯುಕ್ತ ವಾಗಿದೆ. ೧೫ ವರ್ಷದ ಹಿಂದೆ ನಾನು 3D studio ನಲ್ಲಿ ವರ್ಕ ಮಾಡಿದ್ದೆ. ನನಗೆ ಟೆಕ್ನಿಕಲ್ ಗೊತ್ತಿತ್ತು. ಆದರೆ ನನಗೆ ಚಿತ್ರ ಬಿಡಿಸಿಲು ಬರುತ್ತಿರಲಿಲ್ಲಾ ಅದಕ್ಕೆ ಬಿಟ್ಟು ಬಿಟ್ಟೆ. ಅನಿಮೇಶನ್ ಕಷ್ಟ ಎನು ಅಂತ ಗೊತ್ತು. ನಿಮಗೆ ಆಗಲಿಲ್ಲಾ ಅಂತ ಬೇಜರಾಯ್ತು. ಇರಲಿ
ನಿಮ್ಮ ಹತ್ತಿರ ಕ್ರಿಯಾಶೀಲತೆ ಇದೆ. ಯೋಚಿಸಿ ಒಂದು ಜಾಹಿರಾತು ಅಥವಾ ಕಥೆ ಎನಾದರು ಅಸಮಾನ್ಯವದುದನ್ನು ಕನ್ನಡದಲ್ಲಿ ಮಾಡಿ. ಮುಂದೆ ತಾನಾಗಿ ನಿಮ್ಮ ಆಸೆ ಈಡೇರುತ್ತೆ.
ನಿಜವಾದ ಹಂಬಲ ಇದ್ದರೆ ತಡವಾದರೂ ಸರಿ ಅದು ನೇರವೇರುತ್ತದೆ ಅಂತ ನನ್ನ ನಂಬಿಕೆ.

ನಿಮ್ಮ ಆಸೆ ಈಡೆರಲಿ ಎಂದು ಆಶಿಸುವ
ಲಕ್ಷ್ಮಣ

ಸವಿಗನಸು said...

ಶಿವು ಸರ್,
ಅನಿಮೇಟೆಡ್ ಮೂವಿ ಬಗೆ ಉಪಯುಕ್ತವಾಗಿ ತಿಳಿಸಿದ್ದೀರಾ...
ಧನ್ಯವಾದಗಳು...
ಮಹೇಶ್!

Dileep Hegde said...

ಶಿವೂ ಸರ್...
ತುಂಬಾ ದಿನಗಳ ಹಿಂದೆಯೇ ಹುಟ್ಟಿದ ಅನಿಮೇಷನ್ ಕಲಿಯುವ ಆಸಕ್ತಿ ನನ್ನಲ್ಲಿ ಇನ್ನೂ ಜೀವಂತವಾಗಿದೆ.. ಸ್ವಲ್ಪ ಮಟ್ಟಿಗೆ ಚಿತ್ರ ಬಿಡಿಸೋದು ಗೊತ್ತು.. ಅನಿಮೇಷನ್ ಕಲಿಯೋದು ಸುಲಭ ಅಂದುಕೊಂಡಿದ್ದೆ... ಆದರೆ ಅದಕ್ಕೇ ಎಷ್ಟೆಲ್ಲಾ ಪರಿಶ್ರಮ, ಏಕಾಗ್ರತೆಯ ಅವಶ್ಯಕತೆಯಿದೆ ಅಂತ ತಿಳಿದಮೇಲೆ ಅನಿಮೇಷನ್ ಕಲಿಕೆ ಅಷ್ಟೇನೂ ಸುಲಭದ ಮಾತಲ್ಲ ಅಂತ ಅರಿವಾಗಿದೆ...

ಲೇಖನ ಮಾಹಿತಿಪೂರ್ಣವಾಗಿದೆ..

ಮತ್ತಿನ್ನು ಐಸ್ ಏಜ್ ಚಲನಚಿತ್ರದ ವಿಚಾರ... ಆ ಅಳಿಲನ್ನು ಮರೆಯೋದು ಸಾಧ್ಯವೇ ಇಲ್ಲ.. ಒಂದು ಗೆರುಬೀಜಕ್ಕಾಗಿ ಅದು ಪರದಾಡೋ ಪರಿ ನಗೆ ತರಿಸಿದರೂ, ಚಿಕ್ಕ ಚಿಕ್ಕ ಸಂತೋಷಗಳನ್ನು ನಮ್ಮದಾಗಿಸಿಕೊಳ್ಳೋಕೆ ನಾವೆಷ್ಟು ಶ್ರಮ ವ್ಯಯಿಸಬೇಕಾಗುತ್ತದೆ ಅಂತ ನಮಗೆ ಅರಿವು ಮಾಡಿಕೊಡುತ್ತದೆ...

ನಿಮ್ಮ ಅನಿಮೇಶನ್ ಕಲಿಯುವ ಆಸೆ ಬೇಗ ಈಡೇರಲಿ ಅನ್ನೋದು ನನ್ನ ಅಭಿಲಾಷೆ..

ಉತ್ತಮ ಮಾಹಿತಿಭರಿತ ಲೇಖನಕ್ಕಾಗಿ ಅನಂತ ಅಭಿನಂದನೆಗಳು..

shivu.k said...

ಲಕ್ಷ್ಮಣ್ ಸರ್,

ಮಾಹಿತಿ ಇನ್ನೂ ಇದೆ ಆದ್ರೆ ಹೆಚ್ಚಾದರೆ ಅರ್ಥವಾಗುವುದು ಕಷ್ಟವೆಂದು ಸಂಕ್ಷಿಪ್ತವಾಗಿ ಬರೆಯಲೆತ್ನಿಸಿದ್ದೇನೆ.

ಮತ್ತೆ ಆನಿಮೇಶನ್ ಕಷ್ಟವಲ್ಲ ಸರ್, ಯಾವುದೇ ಕಮಿಟ್‍ಮೆಂಟು, ಮತ್ತು ಜವಾಬ್ದಾರಿ ಇರದಿದ್ದಾಗ ಅವರ ಸಮಯವನ್ನೆಲ್ಲಾ ಅಭ್ಯಾಸಕ್ಕಾಗಿ ಮೀಸಲಿಡುವುದರಿಂದ ಕಾಲೇಜು ಯುವಕರಿಗೆ ಸುಲಭಸಾಧ್ಯ.
ಮದುವೆಯಾಗಿಬಿಟ್ಟರೆ ಮನೆಯ ಜವಾಬ್ದಾರಿ ಇತ್ಯಾದಿಗಳು ಬಂದುಬಿಡುತ್ತವಲ್ಲ, ಆಗ ಸಂಪಾದನೆಯ ಕಡೆಗೆ ಹೆಚ್ಚು ಗಮನಕೊಡಲೇ ಬೇಕಾಗುತ್ತದೆ. ಆಗ ಅಭ್ಯಾಸಕ್ಕೆಲ್ಲಿದೆ ಸಮಯ ಇದು ನನ್ನ ಕತೆ. ಆದ್ದರಿಂದ ನಾನು ಅರ್ಧಕ್ಕೆ ನಿಲ್ಲಿಸಬೇಕಾಯಿತು. ಯಾವುದೇ ಕಮಿಟ್‍ಮೆಂಟುಗಳಿರದೆ ಮತ್ತೆ ಶುರು ಮಾಡಲು ಸಾಧ್ಯವೇ?

ಲೇಖನವನ್ನು ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು.

shivu.k said...

ಮಹೇಶ್ ಸರ್,

ಲೇಖನವನ್ನು ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು.

shivu.k said...

ದಿಲೇಪ್,

ನೀವಿನ್ನು ಯುವಕ, ಮತ್ತು ನಿಮಗೆ ಚಿತ್ರ ಬರೆಯುವ ಕಲೆ ಸಿದ್ಧಿಸಿದೆ. ನೀವು ಪ್ರಯತ್ನ ಪಟ್ಟರೇ ಅದು ಖಂಡಿತ ಆಗುತ್ತದೆ.

ಮತ್ತೆ ಐಸ್ ಏಜ್ ಸಿನಿಮ ನನ್ನ ಪ್ರೀತಿಪಾತ್ರವಾದದು. ಅದರ ಎಲ್ಲಾ ಸರಣಿಗಳನ್ನು ನೋಡಿದ್ದೇನೆ. ನಮ್ಮ ಡಬ್ಬ ಹೀರೋಗಳಿಗಿಂತ ಅನಿಮೇಶನ್ ಸಿನಿಮಾ ನೋಡಿದರೆ ನಮ್ಮ ಸೃಜನಶೀಲತೆಯೂ ಕ್ರಿಯಾಶೀಲವಾಗುತ್ತದೆ ಇದು ನನ್ನ ಅನುಭವ. ಸಾಧ್ಯವಾದರೆ ಎಲ್ಲಾ ಸಿನಿಮಾಗಳನ್ನು ನೋಡಿ...
ಧನ್ಯವಾದಗಳು.

ಮಲ್ಲಿಕಾರ್ಜುನ.ಡಿ.ಜಿ. said...

ಶಿವು,
ಕಾರ್ಟೂನ್ ಚಿತ್ರಗಳು ನನ್ನ ಮಗನಿಗೆ ತುಂಬಾ ಇಷ್ಟ. ಅವನ ಜೋತೆಯಲ್ಲಿ ನಾವೂ ನೋಡಿ ಎಂಜಾಯ್ ಮಾಡುತ್ತೇವೆ. ಅದನ್ನು ಕಂಪ್ಯೂಟರ್ ಬಳಸಿ ಸೃಷ್ಟಿಸುವರೆಂದು ತಿಳಿದಿದೆ. ಆದರೂ ಚಿತ್ರ ತಯಾರಿಕೆಯ ಹಿಂದಿನ ವಿವರಗಳನ್ನು ಮಾಹಿತಿಯನ್ನೂ ನಿಮ್ಮ ಬರಹದಲ್ಲಿ ಓದಿ ತುಂಬಾ ವಿಷಯ ತಿಳಿಯಿತು. ಅದರಲ್ಲೂ ನಿಮ್ಮ ಅನುಭವದ ಪಾಕವಿರುವುದರಿಂದ ನಮಗೂ ಸಲೀಸಾಗಿ ಅರ್ಥವಾಗುವಂತಿದೆ. ಧನ್ಯವಾದಗಳು.

umesh desai said...

ಶಿವು ಅವರೆ ಕಾರ್ಟೂನ್ ಚಿತ್ರ ಅಥವಾ ಎನಿಮೇಶನ್ ಟಿವಿಯಲ್ಲಿ ನೋಡೋದಕ್ಕೆ ಚೆನ್ನ ಆದರೆ ಅದರ ಹಿಂದೆ ಅಡಗಿದಅನೇಕರ ಶ್ರಮ ಇರುತ್ತದೆ.ನಿಮ್ಮ ಲೇಖನ ಚೆನ್ನಾಗಿತ್ತು ಟೆಕ್ನಿಕಲಿ...

ಸುಮ said...

ಶಿವು ಸರ‍್ ಲೇಖನ ಮಾಹಿತಿಪೂರ್ಣವಾಗಿದೆ. ಅನಿಮೇಷನ್ ಮಾಡುವವರ ಕಷ್ಟದ ಅರಿವಿದೆ.ತುಂಬ ಸಮಯ ಬೇಡುವ ಕ್ಷೇತ್ರವದು. ಓದಿನಲ್ಲಿ ಹೆಚ್ಚಿನ ಆಸಕ್ತಿ ಇಲ್ಲದ ನನ್ನ ಭಾವನವರ ಮಗ ಈ ಅನಿಮೇಷನ್ ಕೋರ್ಸ್ ಮಾಡಿ ಈಗ ಒಳ್ಳೆಯ ಕಂಪನಿಯಲ್ಲಿ ಉತ್ತಮ ಹುದ್ದೆಯಲ್ಲಿದ್ದಾನೆ. ಕೋರ್ಸ್ ಮಾಡುವಾಗ ಅವನು ದಿನಕ್ಕೆ ಸುಮಾರು ೧೨-೧೪ ತಾಸು ಅಭ್ಯಸಿಸುತ್ತಿದ್ದ. ಆಸಕ್ತ ವಿದ್ಯಾರ್ಥಿಗಳಿಗೆ ತುಂಬ ಅವಕಾಶಗಳಿರುವ ಕ್ಷೇತ್ರವದು.

Ittigecement said...

ಶಿವು ಸರ್...

ನಿಮ್ಮ ಬ್ಲಾಗ್ ಇಷ್ಟವಾಗುವದು ಇದಕ್ಕೆನೇ....
ಪ್ರತಿ ಬರಹವೂ ವಿಭಿನ್ನವಾಗಿರುತ್ತದೆ...

ನಾನೂ ಕೂಡ ನನ್ನ ಮಗನ ಸಂಗಡ ನೋಡುತ್ತಿದ್ದರೂ
ಅದರ ಬಗೆಗೆ ಮಾಹಿತಿ ಇರಲಿಲ್ಲ...

ನೀವು ಅದರ ಸವಿವರವಾಗಿ ತಿಳಿಸಿಕೊಟ್ಟಿದ್ದೀರಿ...
ಇದರ ಬಗೆಗೆ ಇನ್ನಷ್ಟು ಮಾಹಿತಿ ತಿಳಿಸಿಕೊಡಿ...

ನಿಮ್ಮ ಪ್ರಯತ್ನ, ಶ್ರಮಕ್ಕೆ ನನ್ನದೊಂದು ಸಲಾಮ್...

Unknown said...

ನಾನು Ice Age ಭಾಗ 1 ಮತ್ತು 2 ನೋಡಿದ್ದೇನೆ. ನನ್ನ ಮಗಳಿಗೆ ಅತಿ ಹೆಚ್ಚು ಇಷ್ಟವಾದದ್ದು ಭಾಗ 1. ಇನ್ನು ಮೂರನ್ನು ನೋಡಿಲ್ಲ. ಆದರೆ ಆ ಚಿತ್ರಗಳ ತೆರೆ ಹಿಂದಿನ ವಿಚಾರಗಳನ್ನು ನಿಮ್ಮ ಲೇಖನ ತಿಳಿಸಿಕೊಟ್ಟಿದೆ. ಧನ್ಯವಾದಗಳು

ನಮ್ಮನೆ.. SWEET HOME..... said...

ಶಿವು ಅವರೆ
ನಾನು ನಿಮ್ಮ ಫೋಟೊ ಲೇಖನಗಳನ್ನು ತಪ್ಪದೆ ನೋಡುತ್ತೆನೆ.
ನನಗೆ ಕನ್ನಡ ಸ್ವಲ್ಪ ಕಷ್ಟವಾಗುತ್ತದೆ.
ನಿಮ್ಮ ಬರಹಗಳನ್ನು ಪ್ರಕಾಶ್ ಓದಿ ಹೇಳುತ್ತಾರೆ..

ನಿಮ್ಮನ್ನು ಅನುಸರಿಸುವವರ ಸಂಖ್ಯೆ ಸೆಂಚುರಿಯಾಗಿದೆ...
ಕಂಗ್ರಾಟ್ಸ್..

Prashanth Arasikere said...

hi shivu nivu kotta mahiti tumba chennagide hagu sarala vagide,nanu animation nodthini ella nanna magala prabava hinde chikkoriddaga nodi enjoy madtha idvi,iglu saha TV munde kutu cartoon ella nodtha idre aste enjoy madthivi..ade specility adraddu..hogli bidi nivu ee daralli nadillilla antha bejar madbedi illa andiddre nivu elli namge sigtha idri..munde adukke time barali endu haraisuttene..

ಗೌತಮ್ ಹೆಗಡೆ said...

nanna SIR anta sambhodisabedi sir.naanu chikkavanu. goutam anta heli saaku:)

ಕ್ಷಣ... ಚಿಂತನೆ... said...

ಶಿವು ಅವರೆ,
ಈ ಲೇಖನ ತುಂಬಾ ಮಾಹಿತಿದಾಯಕವಾಗಿತ್ತು. ಒಂದು ಅನಿಮೇಶನ್‌ ಚಿತ್ರಕ್ಕೆ ಬೇಕಾಗುವ ತಂತ್ರಜ್ಞರ ಬಗೆಗೆ ತಿಳಿಯಿತು.

ನೀವೂ ಸಹ ಅನಿಮೇಶನ್ ಕೋರ್ಸ್ ಆರು ತಿಂಗಳು ಮಾಡಿದ್ದರ ಬಗ್ಗೆ ಓದಿದಾಗ ಮತ್ತೂ ಖುಷಿಯಾಯಿತು ಮತ್ತು ನೀವೇ 'ಮಾಯಾ'ದಲ್ಲಿ ಚಿತ್ರಿಸಿರುವ ಚಿತ್ರ ತುಂಬಾ ಚೆನ್ನಾಗಿದೆ.

ನಾನೂ ಮತ್ತು ನನ್ನ ಸ್ನೇಹಿತ ಒಂದು ಶಾಲೆಗೆ ಮಕ್ಕಳ ಚಿತ್ರ ಮಾಡುವ ಇರಾದೆಯಿತ್ತು. ಆತ ಚಿತ್ರ ಬಿಡಿಸಿದ್ದ, ನಾನು ಮ್ಯಾಕ್ರೋಮೀಡಿಯಾ ಫ್ಲಾಶ್ ೩ ನಲ್ಲಿ ಅನಿಮೇಶನ್‌ ಮಾಡಲು ಪ್ರಯತ್ನಿಸಿದ್ದೆವು. ಆದರೆ, ಅದು ಸಾಧ್ಯವಾಗಲಿಲ್ಲ.
ಈಗ ಆತ ಒಂದು ಮೀಡಿಯಾ ಸಂಸ್ಥೆಯಲ್ಲಿ ಕೆಲಸದಲ್ಲಿದ್ದಾರೆ.

ಸ್ನೇಹದಿಂದ,
ಚಂದ್ರು

ಉಷಾ said...

ಉತ್ತಮ ಲೇಖನ.Better late than never
ಅಂತಾರಲ್ಲ ಹಾಗೇ ಮುಂದಾದರೂ ನಿಮ್ಮ ಆಸೆ ಪೂರೈಸಲಿ.ಪ್ರಯತ್ನಿಸಿ ನೋಡಿ.

ಬಿಸಿಲ ಹನಿ said...

ಅಬ್ಬಾ ಅನಿಮೇಟೆಡ್ ಚಿತ್ರಗಳ ಹಿಂದೆ ಇಷ್ಟೊಂದು ಪರಿಶ್ರಮವಿರುತ್ತೆ ಅಂತ ನನಗೆ ಗೊತ್ತೇ ಇರಲಿಲ್ಲ! ಅದನ್ನು ತಯಾರಿಸಲು ಬೇಕಾಗುವ ಶ್ರಮ ಮತ್ತು ಸೃಜನಶೀಲತೆಯ ಬಗ್ಗೆ ತುಂಬಾ ಸರಳವಾಗಿ ಆದರೆ ಪರಿಣಾಮಕಾರಿಯಾಗಿ ವಿವರಿಸಿದ್ದಕ್ಕೆ ತುಂಬಾ ಥ್ಯಾಂಕ್ಸ್!ಅಂದಹಾಗೆ ನೀವೇ ತಯಾರಿಸಿದ ಮುತ್ತು ಕೊಡುವ ಚಿತ್ರ ತುಂಬಾ ಮುದ್ದಾಗಿದೆ.
ಆದರೆ ನಿಮ್ಮ ಕೋರ್ಸಿನ ಮುಂದಿನಭಾಗವನ್ನು ಮಾಡದಂತೆ ಕಟ್ಟಿಹಾಕಿದ ಬದುಕನ್ನು ನೆನೆಸಿಕೊಂಡರೆ ವಿಷಾದವೆನಿಸುತ್ತದೆ. ಆದಷ್ಟು ಬೇಗ ಮುಂದೆ ಎಂದಾದರು ನೀವು ಆ ಕೋರ್ಸ್ ಮಾಡುವಂತಾಗಲಿ ಎಂದು ಹಾರೈಸುವೆ. ಅದು ನಿಮ್ಮಿಂದ ಖಂಡಿತ ಸಾಧ್ಯ. ಮನಸ್ಸಿದ್ದಲ್ಲಿ ಮಾರ್ಗ!

Unknown said...

Dear Shivu sir,
ತು೦ಬ ಸರಳವಾಗಿ ಅರ್ಥ ಆಗೂ ತರಹ ವಿವರಿಸಿದ್ದಿರ ಧನ್ಯವಾದಗಳು ಮುರಲಿ

Unknown said...

ಉತ್ತಮ ಬರಹ ಶಿವೂ ಸರ್,
3D ಮಾಡೆಲ್ ಮಾಡೋದು ಅಷ್ಟೇನೂ ಸುಲಭದ ಕೆಲಸ ಅಲ್ಲ ಅನ್ನೋದು ಉತ್ತಮವಾಗಿ ವಿವರಿಸಿದ್ದೀರಿ.

ಇಂತಿ
ವಿನಯ

ದಿನಕರ ಮೊಗೇರ said...

ವಿವರಿಸಲು ತುಂಬಾ ಕಷ್ಟವಾದ ವಿಷಯವನ್ನ, ಎಲ್ಲರಿಗೂ ತಿಳಿಯುವ ಹಾಗೆ ತುಂಬಾ ಸರಳವಾಗಿ ಹೇಳಿದ್ದಿರಿ.... ಥ್ಯಾಂಕ್ಸ್.... ನಿಮ್ಮ ಆಶೆ ಬೇಗ ಇದೆರಲಿ....

ವನಿತಾ / Vanitha said...

ಅನಿಮೇಷನ್ ಟೆಕ್ನಿಕಲ್ ಬಗ್ಗೆ ಎಷ್ಟೊಂದು ಒಳ್ಳೆಯ ರೀತಿ ಯಲ್ಲಿ ವಿವರಿಸಿದ್ದೀರಿ.ತುಂಬಾ ಥ್ಯಾಂಕ್ಸ್.ನಮ್ಮ ಮನೆಯಲ್ಲಿ ಮಗಳು ಎಚ್ಚರದ ಲ್ಲಿರುವಾಗೆಲ್ಲ ಈ ಮೂವಿಗಳನ್ನೇ ನೋಡುವುದು..ತುಂಬಾ ಕುಶಿಯಾಗುತ್ತದೆ.. ..ಹಾಗೆ UP ಸಿನಿಮಾ ನೋಡಿ ತುಂಬಾ ಚೆನ್ನಾಗಿದೆ..ನನ್ನ ಮೈದುನ ಈಗ ಅನಿಮೇಷನ್ ಕಲಿತಿದ್ದಾನೆ.ಟೈಮ್ ಕೂಡ ತುಂಬಾ ಬೇಕು..ಹಾಗೇನೇ ಫೀಸ್ ಕೂಡ ಸ್ವಲ್ಪ ಜಾಸ್ತಿನೆ..!!!

Guruprasad said...

ಶಿವೂ,
ಕೆಲವೊಂದು ಸಾರಿ, ನಾವು ಅಂದುಕೊಂಡ ಹಾಗೆ ಹೋಗುವುದಕ್ಕೆ ಆಗೋದಿಲ್ಲ.. ಅಲ್ವ.....
ನನಗು ಅಸ್ಟೇ.. ಈ ಅನಿಮೇಷನ್ , ಫೋಟೋ ಎಡಿಟಿಂಗ್ ಅಂದ್ರೆ ತುಂಬ ಇಷ್ಟ.. ಆದರೆ ನಾನು ಯಾವುದೇ ಕೋರ್ಸ್ ಗೆ ಹೋಗದೆ ಹಾಗೆ ಕಲಿತುಕೊಂಡ್ ಇದ್ದೇನೆ,, ಆದರೆ ಬಿಡುವಿದ್ದಾಗ, ಅಥವಾ ಇಂಟರೆಸ್ಟ್ ಇದ್ದಾಗ ಮಾತ್ರ ಏನಾದ್ರು ಮಾಡ್ತಾ ಇರುತ್ತೇನೆ,,, ನನ್ನ ಸಂತೋಷಕ್ಕೆ....ಇವಾಗಲು ನಾನು ಇದೆ ಕಂಪ್ಯೂಟರ್ ಫೀಲ್ಡ್ ನಲ್ಲಿ ಇರೋದ್ರಿಂದ ಸದ್ಯವಗ್ತಾ ಇದೆ...ಅಸ್ಟೇ
ಇರಲಿ,, ಅನಿಮೇಷನ್ ಚಿತ್ರಗಳ ಬಗ್ಗೆ ಹಾಗು ಅವುಗಳ ತಾಂತ್ರಿಕತೆ ಬಗ್ಗೆ, ಒಂದು ಚಿತ್ರವನ್ನು ಮಾಡುವಾಗಿನ ಶ್ರಮ ಹಾಗು ಕಷ್ಟದ ಬಗ್ಗೆ ಚೆನ್ನಾಗಿ ವಿವರಿಸಿದ್ದಿರ...
ಧನ್ಯವಾದಗಳು...

Me, Myself & I said...

ಶಿವೂ ಸಾರ್,

ಲೇಖನ ಓದ್ಬೇಕಾದ್ರೆ, ಯಾಕಪ್ಪಾ ಇದನ್ನ ಎರಡು ತುಂಡಾಗಿ ಆಕಿಲ್ಲ ಅನ್ನಿಸ್ತು. ಆದ್ರೆ ಕೊನೆಗೆ ಅದು ಭಾಗಶಃ ನನ್ನ ತಪ್ಪು ಕಲ್ಪನೆ ಅನ್ನಿಸ್ತು.

ನಂಗೂ ಈ ತರಹ ಚಿತ್ರಗಳಂದ್ರೆ ತುಂಬಾ ಇಷ್ಟ. ಸಾಧ್ಯವಾದರೆ ಮಾಡಗಸ್ಕಾರ್ ಸೀರೀಸ್ ಚಿತ್ರಗಳನ್ನ ನೋಡಿ.
ಈ ರೀತಿ 3D ಚಿತ್ರಗಳ ಬಗ್ಗೆ ನನಗೆ ಮೊದಲೇ ಸ್ವಲ್ಪ ಜ್ಞಾನ ಇತ್ತು. ಯಾಕಂದ್ರೆ ಅಂತ ಒಂದು ಸಾಫ್ಟ್ವೇರ್ ಬರಿಲಿಕ್ಕೆ ನಾನೂ ಕೆಲವು ಲೈನ್ ಕೋಡ್ ಬರ್ದು ಸಹಾಯ ಆಗಿದ್ದೆ.

ನಿಮ್ಮ ಜೀವನದ ಕೆಲವು ಅನಿರೀಕ್ಷಿತ ಘಟನೆಗಳ ಬಗ್ಗೆ ತಿಳಿಸಿದ್ದೀರಿ. ನಿಮ್ಮ ಆತ್ಮೀಯತೆ ತುಂಬಾ ಇಷ್ಟ ಆಯಿತು. ಇನ್ನೊಬ್ಬ ಆತ್ಮೀಯ ಸ್ನೇಹಿತ ಸಿಕ್ಕ ತೃಪ್ತಿ ಆಯ್ತು. ಹೀಗಿ ಪ್ರಾಮಾಣಿಕವಾಗಿ ನೈಜ ಘಟನೆಗಳನ್ನ ಆತ್ಮೀಯರೊಂದಿಗೆ ಹಂಚಿ ಕೊಳ್ಲೋದರಿಂದ ಮನಸ್ಸು ಹಗುರ ಆಗುತ್ತೆ.

PARAANJAPE K.N. said...

ಅನಿಮೇಶನ್ ಚಿತ್ರಗಳ ಬಗೆಗಿನ, ಅವುಗಳ ತಯಾರಿಕೆ ಹಿಂದಿನ ಶ್ರಮ ಮತ್ತು ತಾಂತ್ರಿಕ ಅ೦ಶಗಳ ಮಾಹಿತಿ ಚೆನ್ನಾಗಿದೆ. ನಿಮ್ಮದು ಬಹುಮುಖಿ ಪ್ರತಿಭೆ. ನಿಮಗೆ ಹೊಸ ಹೊಸ ಅವಕಾಶಗಳು ಕೂಡಿಬರಲಿ ಎ೦ದು ಹಾರೈಸುವೆ.

shivu.k said...

ಮಲ್ಲಿಕಾರ್ಜುನ್,

ಕಾರ್ಟೂನ್ ಚಿತ್ರಗಳು ಮಕ್ಕಳು ಮಾತ್ರವೇ ಅಲ್ಲ ಎಲ್ಲರನ್ನೂ ಸೆಳೆಯುತ್ತವೆ. ಏಕೆಂದರೆ ಅದರ ಮೂಲ ಉದ್ದೇಶ ಮನರಂಜನೆ. ಇತರ ಸಿನಿಮಾಗಳಂತೆ ಗಿಮಿಕ್‍, ಅಶ್ಲೀಲತೆಯ ಪರಿಗಳನ್ನು ದಾಟಿ ಪರಿಶುದ್ಧವಾದ ಪ್ರೀತಿ, ಮಾನವೀಯ ಆಂಶಗಳನ್ನು ಚಿತ್ರದಲ್ಲಿ ಆಳವಡಿಸಿವುದರಿಂದ ಎಲ್ಲರನ್ನೂ ಮಕ್ಕಳಾಗಿಸುತ್ತವೆ.

ನನ್ನ ಅನಿಮೇಶನ್ ಅನುಭವ ಏನೆಂಬುದು ನಿಮಗೆ ಗೊತ್ತಿದೆ. ಆಗ ನಾನು ಸಮಯಕ್ಕಾಗಿ ಒದ್ದಾಡುವುದು, ಆದರ ಅನುಭವವೇ ಲೇಖನ ಧನ್ಯವಾದಗಳು.

shivu.k said...

ದೇಸಾಯಿ ಸರ್,'

ಕಾರ್ಟೂನ್ ಚಿತ್ರಗಳು ನೋಡಲು ಖುಷಿಕೊಡುತ್ತವೆ. ನನ್ನ ಲೇಖನದ ಮಾಹಿತಿಗಳು ನಿಮಗಿಷ್ಟವಾಗಿದ್ದಕ್ಕೆ ಥ್ಯಾಂಕ್ಸ್..
ಹೀಗೆ ಬರುತ್ತಿರಿ.

shivu.k said...

ಸುಮ ಮೇಡಮ್,

ನಿಮ್ಮ ಭಾವನವರ ಮಗ ಅನಿಮೇಶನ್‍ನಲ್ಲಿ ವೃತ್ತಿಯಲ್ಲಿರುವುದು ಕೇಳಿ ಸಂತೋಷವಾಯಿತು. ಅವರು ಅದರಲ್ಲಿ ಮತ್ತಷ್ಟು ತಮ್ಮ ಸೃಜನಶೀಲತೆಯನ್ನು ತೋರಿ ದೊಡ್ಡ ಹೆಸರು ಮಾಡಲಿ ಅದರಿಂದ ನಮ್ಮ ದೇಶಕ್ಕೆ ಕೀರ್ತಿತರಲಿ ಎಂದು ಆರೈಸುತ್ತೇನೆ.
ಲೇಖನವನ್ನು ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು.

shivu.k said...

ಪ್ರಕಾಶ್ ಸರ್,

ನನ್ನ ಬ್ಲಾಗಿನಲ್ಲಿ ಏನಾದರೂ ಹೊಸತು ಇರಬೇಕೆಂದು ಬಯಸುವುದರಲ್ಲಿ ಮೊದಲಿಗ ನಾನು ನನ್ನ ಬರವಣಿಗೆ, ಚಿತ್ರಗಳು ಮೊದಲು ನನಗೆ ಇಷ್ಟವಾಗಬೇಕು. ಬರೆಯುವ ಮೊದಲು ನಾನು ಹೊರಗಿನ ಓದುಗನಾಗಿ ನೋಡಿದಾಗ ಚೆನ್ನಾಗಿದ್ದರೆ ಅದನ್ನು ಬ್ಲಾಗಿನಲ್ಲಿ ಹಾಕುತ್ತೇನೆ. ಇದರಿಂದಾಗಿ ಪ್ರತಿಭಾರಿಯೂ ಹೊಸತನ್ನು ಕೊಡಲು ಸಾಧ್ಯವಾಗುತ್ತದೆ.
ಇದರ ಬಗ್ಗೆ ಇನ್ನಷ್ಟು ಮಾಹಿತಿ, ಡಬ್ಬಿಂಗ್, ಎಡಿಟಿಂಗ್, ಇತ್ಯಾದಿಗಳ ಬಗ್ಗೆ ಬರೆದರೆ ಅದರಲ್ಲೂ ಅವುಗಳನ್ನೆಲ್ಲಾ ತಾಂತ್ರಿಕಪದಗಳನ್ನು ಬಳಸಿ ಬರೆದಾಗ ಓದುವವರಿಗೆ ಬೋರ್ ಅನ್ನಿಸುಬಿಡುವುದರಿಂದ, ಇಲ್ಲಿಗೆ ನಿಲ್ಲಿಸಿದ್ದೇನೆ..
ಲೇಖನವನ್ನು ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು.

shivu.k said...

ಸತ್ಯನಾರಾಯಣ ಸರ್,

ಐಸ್ ಏಜ್ ಮೂರು ಚಿತ್ರಗಳು ಮಾತ್ರವಲ್ಲ ಇನ್ನೂ ಕೆಲವು ಚಿತ್ರಗಳಿವೆ, ಬೀ ಮೂವಿ, ಬೋಲ್ಟ್, ಮಡ್‍ಗಾಸ್ಕರ್, ಕುಂಗ್‍ಪು ಫಾಂಡ, ಆಂಟ್ಸ್ ಮೂವಿ, ಹೀಗೆ ನೂರಾರು ಸಿನಿಮಾಗಳಿವೆ. ಅವುಗಳನ್ನು ನಿಮ್ಮ ಮಗಳೊಂದಿಗೆ ನೀವು ಒಟ್ಟಿಗೆ ನೋಡಿ. ಅದರಿಂದ ನಮ್ಮ ಕ್ರೀಯಾಶೀಲತೆ ಹೆಚ್ಚುತ್ತದೆ. ನಾನು ಹೊಸದೇನಾದ್ರೂ ಬಂದ್ರೆ ಮೊದಲು ತಂದು ನೋಡುತ್ತೇನೆ.
ಧನ್ಯವಾದಗಳು.

shivu.k said...

ಆಶಾ ಮೇಡಮ್,

ನನ್ನ ಚಿತ್ರಲೇಖನಗಳನ್ನು ನೋಡುತ್ತೇನೆ ಅಂದಿದ್ದೀರಿ ಥ್ಯಾಂಕ್ಸ್. ನೀವು ಕನ್ನಡ ಬೇಗ ಪರಿಣತಿ ಪಡೆದು ನಿಮ್ಮದೇ ನಿಮ್ಮ ಯಜಮಾನರಿಗಿಂತ ವಿಭಿನ್ನ ವಾಗಿ ಲೇಖನ ಬರೆಯುವುದನ್ನು ನಾನು ಕಾಯುತ್ತೇನೆ. ಪ್ರಯತ್ನಿಸಿ. ಅವರಿಗೆ ಸ್ಪೂರ್ತಿ ನೀಡುವ ನಿಮಗೆ ಅಸಾಧ್ಯವಾದದು ಯಾವುದು ಇಲ್ಲ.
ಮತ್ತೆ ನನ್ನ ಬ್ಲಾಗ್ ಹಿಂಬಾಲಕರು ನೂರು ಮುಟ್ಟಿದ್ದನ್ನು ನಾನು ಗಮನಿಸಿರಲಿಲ್ಲ. ಹೇಳಿದ್ದಾಕ್ಕಾಗಿ ಧನ್ಯವಾದಗಳು. ಹೀಗೆ ಬರುತ್ತಿರಿ...

shivu.k said...

ಪ್ರಶಾಂತ್,

ಅನಿಮೇಶನ್ ಸಿನಿಮಾ ಮಾಹಿತಿ ಸರಳವಾಗಿದೆ ಅಂತ ಇಷ್ಟಪಟ್ಟಿದ್ದೀರಿ ಥ್ಯಾಂಕ್ಸ್. ಮತ್ತೆ ಚಿಕ್ಕವರಿದ್ದಾಗ ಮಾತ್ರ ಕಾರ್ಟೂನ್ ನೋಡುತ್ತೇನೆ ಅಂದಿದ್ದಿರಿ. ಈಗಲೂ ನೋಡಿ. ಚೆನ್ನಾಗಿರುತ್ತೆ. ನಾನಂತೂ ನನಗೆ ಬೇಕಾದಾಗಲೆಲ್ಲಾ ಅನಿಮೇಶನ್ ಸಿನಿಮಾಗಳನ್ನೇ ನೋಡುವುದು. ಒಂಥರ ಮಜವೆನಿಸುತ್ತೆ. ಮತ್ತು ನಮಗೆ ಹೊಸ ಆಲೋಚನೆಗಳು, ಕಲ್ಪನೆಗಳು ಗರಿಗೆದರುತ್ತವೆ.

ಧನ್ಯವಾದಗಳು.

shivu.k said...

ಗೌತಮ್,

ಕ್ಷಮಿಸಿ, ನೀವು ಒಂದು ಪುಸ್ತಕ ಸಮಾರಂಭದಲ್ಲಿ ಬೇಟಿಯಾಗಿದ್ದಿರಲ್ವಾ...ನಾನು ಯಾರೋ ಹೊಸಬರು ಅಂತ ಹಾಗೆ ಕರೆದೆ. ಓಕೆ ಈಗ ಗೊತ್ತಾಯಿತು ಬಿಡಿ.

ಮತ್ತೆ ಬ್ಲಾಗಿಗೆ ಬಂದಿದ್ದಕ್ಕೆ ಥ್ಯಾಂಕ್ಸ್...ಹೀಗೆ ಬರುತ್ತಿರಿ..

shivu.k said...

ಕ್ಷಣಚಿಂತನೆ ಸರ್,

ನಾನು ಅನಿಮೇಶನ್‍ನಲ್ಲಿ ಬಿಡಿಸಿದ ಚಿತ್ರವನ್ನು ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು. ನೀವು ನಿಮ್ಮ ಪ್ರಯತ್ನವನ್ನು ಮುಂದುವರಿಸಿ..ಅದಕ್ಕೆ ಮೊದಲು ಯಾವುದಾದರೂ ಕೋರ್ಸ್ ಸೇರಿಕೊಂಡು ಕಲಿತು ಮುಂದುವರಿಸಿ ಆಗ ಸುಲಭವಾಗುತ್ತದೆ.
ನನ್ನ ಲೇಖನವನ್ನು ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು.

shivu.k said...

ಉಷಾ ಮೇಡಮ್,

ನಿಮ್ಮ ಅನಿಸಿಕೆಗೆ ಧನ್ಯವಾದಗಳು. ನಾನು ಮತ್ತೆ ಆ ಕೋರ್ಸ್ ಸೇರಲಾರೆ. ಏಕೆಂದರೆ ನನಗಿರುವ ಎರಡು ಕೆಲಸಗಳು ಸದ್ಯಕ್ಕೆ ಎರಡು ದೋಣಿಗಳಲ್ಲಿ ಕಾಲಿಟ್ಟಂತೆ ಆಗಿದೆ. ಮತ್ತೆ ಈ ಕೋರ್ಸ್ ಕಡೆ ಗಮನ ಹರಿಸಿದರೆ....ಅಷ್ಟೇ...
ಬ್ಲಾಗಿಗೆ ಹೀಗೆ ಬರುತ್ತಿರಿ...ಧನ್ಯವಾದಗಳು.

shivu.k said...

ಉದಯ್ ಸರ್,
ಅನಿಮೇಶನ್ ಚಿತ್ರಗಳ ಬಗ್ಗೆ ನಾನು ಬರೆದಿದ್ದು ತುಂಬಾ ದೊಡ್ಡದಾಯಿತು ಅಂದುಕೊಂಡಿದ್ದೆ. ಅದ್ರೆ ನೀವೆಲ್ಲಾ ಸರಳವಾಗಿದೆ ಅಂತ ಇಷ್ಟಪಟ್ಟಿದ್ದೀರಿ..ಅದರ ಪರಿಶ್ರಮಗಳ ಬಗ್ಗೆ ಬರೆದರೆ ಇನ್ನೂ ಅನೇಕ ಪುಟಗಳೇ ಆಗುತ್ತವೆ.

ಮಾಯಾ"ದಲ್ಲಿ ತಯಾರಿಸಿ ಬಣ್ಣ ತುಂಬಿದ ನನ್ನ ಚಿತ್ರವನ್ನು ಮೆಚ್ಚಿಕೊಂಡಿದ್ದಕ್ಕೆ ಧನ್ಯವಾದಗಳು.

shivu.k said...

ಮುರಳಿಧರ್ ಸರ್,

ನನ್ನ ಬ್ಲಾಗಿಗೆ ಸ್ವಾಗತ.
ಲೇಖನವನ್ನು ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು ಹೀಗೆ ಬರುತ್ತಿರಿ..

shivu.k said...

ವಿನಯ್[ಆರ್ಯ ಫಾರ್ ಯೂ]


ಲೇಖನವನ್ನು ಇಷ್ಟಪಟ್ಟಿದ್ದಕ್ಕೆ ಥ್ಯಾಂಕ್ಸ್..ನಿಮ್ಮ ಬ್ಲಾಗಿನ ಕವನಗಳು ತುಂಬಾ ಚೆನ್ನಾಗಿರುತ್ತವೆ. ಹೀಗೆ ಬರುತ್ತಿರಿ.

shivu.k said...

ದಿನಕರ್ ಸರ್,

ನನ್ನ ಬ್ಲಾಗಿಗೆ ಸ್ವಾಗತ. ನನ್ನ ಲೇಖನವನ್ನು ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು. ಹೀಗೆ ಬರುತ್ತಿರಿ..

shivu.k said...

ವನಿತಾರವರೆ,

ಅನಿಮೇಶನ್ ಸಿನಿಮಾವನ್ನು ನಿಮ್ಮ ಮಗಳ ಜೊತೆ ನೀವು ನೋಡಿ. ತುಂಬಾ ಚೆನ್ನಾಗಿರುತ್ತೆ. ನೀವು ಹೇಳಿದ ಸಿನಿಮಾವನ್ನು ಖಂಡಿತ ನೋಡುತ್ತೇನೆ. ನಿಮ್ಮ ಮೈದುನ ಚೆನ್ನಾಗಿ ಪರಿಣತಿಯನ್ನು ಪಡೆಯಲಿ ಎಂದು ಹಾರೈಸುತ್ತೇನೆ.
ಮತ್ತೆ ನೀವು ಹೇಳಿದಂತೆ ಇಂಥ ಕೋರ್ಸುಗಳ ಪೀಸ್ ಹೆಚ್ಚಾಗಿಯೇ ಇರುತ್ತದೆ.
ಲೇಖನವನ್ನು ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು.

shivu.k said...

ಗುರು,

ನಾವು ಅಂದುಕೊಂಡಿದ್ದು ಆಗುವುದಿಲ್ಲವೆನ್ನುವ ನಿಮ್ಮ ಮಾತು ನಿಜ. ನೀವು ಅನಿಮೇಶನ್ ಕಲಿಯದೆ ಅದರಲ್ಲಿ ಪ್ರಯತ್ನಿಸಿದ್ದೀರಿ ಗುಡ್. ನಿಮಗೆ ಮಾಯಾ ಸಾಪ್ಟ್ ವೇರ್ ಬೇಕಾದರೆ ನನಗೆ ಮೇಲ್ ಮಾಡಿ. ನಿಮ್ಮ ಪ್ರಯತ್ನಕ್ಕೆ ನನ್ನ ಎಲ್ಲಾ ಸಹಕಾರವಿದೆ.

ನನ್ನ ಚಿತ್ರಲೇಖನವನ್ನು ಸುಲಭವಾಗಿ ಅರ್ಥಮಾಡಿಕೊಂಡಿದ್ದಕ್ಕೆ ಧನ್ಯವಾದಗಳು.

shivu.k said...

ಲೋದ್ಯಾಶಿ ಸರ್,

ನನ್ನ ಬ್ಲಾಗಿನ ಲೇಖನ ಮೊದಲು ನನಗೂ ದೊಡ್ಡದೆನಿಸಿತ್ತು. ಆದರೆ ಎರಡುಭಾಗವಾಗಿ ಹಾಕಿದ್ದರೆ ಚೆನ್ನಾಗಿರುತ್ತಿರಲಿಲ್ಲವೆನಿಸಿದ್ದರಿಂದ ಒಂದೇ ಲೇಖನವನ್ನು ಹಾಕಿದ್ದೇನೆ. ನೀವು ಹೇಳಿದ ಮಡ್ಗಾಸ್ಕರ್ ಸರಣಿ ಚಿತ್ರಗಳನ್ನು ನೋಡಿದ್ದೇನೆ. ನೀವು ಈ ಸಾಪ್ಟ್ ವೇರಿಗೆ ಕೋಡ್ ಬರೆಯುತ್ತಿರುವುದು ನನಗೆ ಖುಷಿಯಾಗಿದೆ.
ಮತ್ತೆ ನನ್ನ ಗೆಳೆಯರಾಗಿರುವುದು ನನಗೂ ಖುಷಿಯಾಗಿದೆ. ಹೀಗೆ ಬರುತ್ತಿರಿ..ಮತ್ತೆ ನಿಮ್ಮ ಮಸಾಲೆ ದೋಸೆ ತುಂಬಾ ಚೆನ್ನಾಗಿದೆ.ಆಗಾಗ ನೋಡುತ್ತಿರುತ್ತೇನೆ.

ಧನ್ಯವಾದಗಳು.

shivu.k said...

ಪರಂಜಪೆ ಸರ್,

ನನ್ನ ಅನಿಮೇಶನ್ ಲೇಖನವನ್ನು ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು. ನಿಮ್ಮ ಪ್ರೋತ್ಸಾಹ ಹೀಗೆ ಇರಲಿ.

AntharangadaMaathugalu said...

ಶಿವು ಸಾರ್...
ಅನಿಮೇಷನ್ ಚಿತ್ರಗಳ ತಯಾರಿಕೆಯ ಹಿಂದೆ ಇಷ್ಟೊಂದು ಕಷ್ಟ ಇದೆ ಎಂದು ಗೊತ್ತಿರಲಿಲ್ಲ. ತುಂಬಾ ವಿಷಯ ತಿಳಿಯಿತು. ಆದರೆ ಎಲ್ಲವೂ ಅರ್ಥ ಆಗಲಿಲ್ಲ (ನನ್ನ ಆಸಕ್ತಿಕರ ದಾರಿ ಅಲ್ಲವಾದ್ದರಿಂದ ಇರಬಹುದು :-(). ಸಾಮಾನ್ಯ ಜ್ಞಾನಹೆಚ್ಚಿಸುವಂತ ಲೇಖನ. ಇನ್ನು ನಿಮ್ಮ ಮುಂದಿನ ಎಲ್ಲಾ ಕನಸುಗಳೂ ನನಸಾಗಲಿ ಎಂದು ಹಾರೈಸುವೆ.......
ಶ್ಯಾಮಲ

ಸುಧೇಶ್ ಶೆಟ್ಟಿ said...

ಶಿವಣ್ಣ ಎಲ್ಲೂ ಬೋರು ಆಗದ೦ತೆ ಬರೆದಿದ್ದೀರಿ ಈ ಲೇಕನವನ್ನು. ಅನಿಮೇಷನ್ ಸಿನಿಮಾದ ಹಿ೦ದೆ ಎಷ್ಟು ದೊಡ್ಡ ಕಥೆ ಇದೆ ಎ೦ದು ತಿಳಿದು ಆಶ್ಚರ್ಯ ಆಯಿತು. ತು೦ಬಾ ಮಾಹಿತಿಪೂರ್ಣ ಬರಹ. ಆರೇ೦ಜಿನ ಅನಿಮೇಷನ್ ತು೦ಬಾ ಚ೦ದ ಇದೆ.

ರಾಜೀವ said...

ಶಿವು ಅವರೆ,

ಅನಿಮೇಶನ್ ಚಿತ್ರಗಳ ತಾಂತ್ರಿಕ ವಿಚಾರಗಳನ್ನು ಸಾಮಾನ್ಯ ಜನರಿಗೆ ಅರ್ಥವಾಗುವಂತೆ ತಿಳಿಸಿದ್ದೀರ. ಇದರ ಬಗ್ಗೆ ಮುಂಚೆ ಕೇಳಿದ್ದೆಯಾದರೂ, ಕನ್ನಡದಲ್ಲಿ ಓದುವ ರುಚಿಯೇ ಬೇರೆ ;-)
ಕಲಿಯಲು ಆಸಕ್ತಿಯಿರಬೇಕು. ಯಾವ ವಯಸ್ಸಿನಲ್ಲಾದರೂ ಕಲಿಯಬಹುದು. ನೀವು ಈಗಲೂ ಮಾಯಾಲೋಕಕ್ಕೆ ಹೋಗಬಹುದು. ನಿಮ್ಮಿಂದ ಇಂತಹ ವಿಚಾರಗಳು ನಮಗೆ ಇನ್ನೂ ಹೆಚ್ಚು ಲಭಿಸುತ್ತದೆ.

Shweta said...

ಶಿವೂ ಸರ್ ,ಈಸ್ಟೆಲ್ಲಾ ಇದೆಯಲ್ಲಾ...ಮಾಯಾಚಿತ್ರಗಳ ಹಿಂದೆ...ಓ ಯೋಚನೆಯೂ ಬಂದಿಲ್ಲವಾಗಿತ್ತು.....ಅಲ್ಲ ಸರ್ ಈಗಲೂ ಸಮಯವಾದಾಗಲೆಲ್ಲ ಕ್ಲಾಸ್ ಗೆ ಸೇರಿ ಮತ್ತೆ ಕಲಿಯಬಹುದಲ್ಲ? ಆಗುವದಿಲ್ಲವೇ? ತುಂಬಾ ವಿವರವಾಗಿ ಬರೆದಿದ್ದೀರ...ಉಪಯುಕ್ತ ಮಾಹಿತಿಗಳಿವೆ....ತುಂಬಾ ಖುಷಿ ಆಯಿತು.....
ಧನ್ಯವಾದಗಳು ........................

Pradeep said...

ನಿಜ ಕಣ್ರೀ.. ಇಂಥ animation ಚಲನಚಿತ್ರ ಮಾಡೋದು ತುಂಬಾ ಶ್ರಮದ ಕೆಲಸ....

ಸಾಗರದಾಚೆಯ ಇಂಚರ said...

ಅನಿಮೇಶನ್ ಚಿತ್ರಗಳು ಒಂದು ದೊಡ್ಡ ಸವಾಲು ನಿರ್ದೇಶಕರಿಗೆ,
ನೀವು ತುಂಬಾ ಸುಂದರವಾಗಿ ವಿವರಿಸಿದ್ದೀರಿ,
ನಿಮ್ಮ ಆಸೆ ಬೇಗ ಸಿದ್ದಿಸಲಿ

sunaath said...

animationದಲ್ಲಿ ಇಷ್ಟೆಲ್ಲಾ ಪರಿಶ್ರಮ ಇರುತ್ತದೆ ಅಂತ ಗೊತ್ತಿರಲಿಲ್ಲ. ಓದಿದ ಮೇಲೆ ಅಬ್ಬಾ ಎನಿಸಿತು. Thanks for the info.

ಕನಸು said...

ವ್ಹಾ..!! ಶಿವಣ್ಣ
ನೀವು ಎನೇ ಮಾಡಿದರೂ
ಡಿಪರೆಂಟ್ ಇರುತ್ತೆ
ಅದೇ ನಂಗೆ ತುಂಭಾ ಇಷ್ಟ..!!

AntharangadaMaathugalu said...

ಶಿವು ಸಾರ್...
ಈಗತಾನೆ ನೋಡಿದೆ ನಿಮ್ಮನ್ನು ಅನುಸರಿಸುವವರ ಸಂಖ್ಯೆ ಶತಕ ದಾಟಿದೆ... ಹೃದಯಪೂರ್ವಕ ಅಭಿನಂದನೆಗಳು....
ಈ ಶತಕ ದ್ವಿ...ತ್ರಿ...ಆಗುತ್ತಾ... ಹಾಗೇ ಮುಂದುವರೆಯಲಿ ಎಂದು ಹಾರೈಸುವೆ.

ಶ್ಯಾಮಲ

ಶಾಂತಲಾ ಭಂಡಿ (ಸನ್ನಿಧಿ) said...

ಶಿವು ಅವರೆ...
ಇಂಥ ಸಿನೇಮಾಗಳ ಬಗ್ಗೆ ಮಾಹಿತಿಭರಿತ ಲೇಖನ, ತುಂಬ ಇಷ್ಟವಾಯಿತು, ಅಷ್ಟೇ ಉಪಯೋಗವೂ.
ಧನ್ಯವಾದ.

ಶಿವಪ್ರಕಾಶ್ said...

ಶಿವೂ ಅವರೇ,
ಇದಕ್ಕೆ ಕಠಿಣ ಅಭ್ಯಾಸ ಅಗತ್ಯ. ಇಲ್ಲಿ creativity ಗೆ ಹೆಚ್ಚು ಒಟ್ಟು ಕೊಡಬೇಕು...
ಒಟ್ಟಿನಲ್ಲಿ, ಇದು ಸಿಂಪಲ್ ಅಲ್ಲ..
ಕೊನೆಯಲ್ಲಿ ನೀವು ಬಿಡಿಸಿದ ಅನಿಮೇಷನ್ ಚಿತ್ರ ಚನ್ನಾಗಿದೆ...
ಅನಿಮೇಶನ್ ಬಗ್ಗೆ ನಮಗೆ ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು..

prashi said...

ಶಿವೂ ಸರ್ ನಾನೂ ಈ ಸಿನಿಮಾ ನೋಡಿದೀನಿ. ತುಂಬಾ ಅಂದ್ರೆ ತುಂಬಾ ಚೆನ್ನಾಗಿದೆ, ಜೊತೆಗೆ ನಕ್ಕು ನಕ್ಕು ಸಾಕಾಯ್ತು. ಸರ್ ಇನ್ನು ನಿಮ್ಮ ಲೇಖನದ ಬಗ್ಗೆ ನಾನೇನೆ ಬರೆದರು ಕಡಿಮೆ ಅನ್ನಿಸುತ್ತೆ. ಒಮ್ಮೆ ನಿಮ್ಮೊಂದಿಗೆ ಮಾತಾಡಿದ್ದೆ. ಇನ್ನೊಮ್ಮೆ ನಿಮ್ಮನ್ನು ಖಂಡಿತ ಭೇಟಿ ಮಾಡ್ತೇನೆ. ಸರ್ ನನ್ ಬ್ಲಾಗ್ ನೋಡ್ತೀರ ಪ್ಲೀಸ್. neenandre.blogspot.com

Prabhuraj Moogi said...

ಸರ್ ಅನಿಮೇಷನ ಜಾತಕವನ್ನೇ ಜಾಲಾಡಿಬಿಟ್ಟಿದ್ದೀರಿ, ನೀವು ಮಾಯಾ ಕೊರ್ಸ ಮಾಡಿದರಿಂದ ಎಲ್ಲ ಗೊತ್ತಾಗಿದೆ, ನನಗೆ ಇದೆಲ್ಲ ಹೊಸ ಮಾಹಿತಿ ಸಿಕ್ಕಂತಾಯಿತು...
ಹೀಗೆ ಅನಿಮೇಷನ ಫಿಲ್ಮಗಳಲ್ಲಿ ನನಗೆ ಬಹಳ ಇಷ್ಟವಾದದ್ದವೆಂದರೆ ವಾಲ್-ಈ(WALL-E) ಮತ್ತು ಕುಂಗ್ ಫೂ ಪಾಂಡ ನಿಮಗೆ ಸಿಕ್ಕರೆ ಖಂಡಿತ ನೋಡಿ ನಿಮಗಿಷ್ಟವಾಗುತ್ತವೆ...
ನೀವು ಹೇಳಿದ ಮೇಲೆ ಈ ಸಿನಿಮಾ ನನಗೂ ನೋಡಬೇಕೆನಿಸಿದೆ ಈ ವಾರಂತ್ಯವೇ ನೋಡುತ್ತೇನೆ.

Ganesh Bhat said...

ನಿಮ್ಮ ಪ್ರಯತ್ನ ಖಂಡಿತಾ ಸಾರ್ಥಕ ಸರ್,ತುಂಬಾ ಸುಂದರವಾಗಿದೆ.ವಿದ್ಯಾರ್ಥಿಗಳಿಗೆ ನಿಮ್ಮ ಸಲಹೆ ತುಂಬಾ ಅಗತ್ಯ ಎಂದನಿಸುತ್ತಿದೆ.ಮತ್ತಷ್ಟು ಇಂತಹ ಕೃತಿಗಳನ್ನು ನಿರೀಕ್ಷೆ ಮಾಡ್ತಾ ಇದ್ದೇನೆ...

ವಿನುತ said...

ನಾನೂ ಮೊನ್ನೆ ಫ್ಲೈಟ್ ನಲ್ಲಿ ನೋಡಿದ ಚಿತ್ರ ಐಸ್ ಏಜ್. ಮಡಗಾಸ್ಕರ್ ಅದೆಷ್ಟು ಬಾರಿ ನೋಡಿದ್ದೇನೋ! ಅವುಗಳಲ್ಲಿನ ವಿಭಿನ್ನತೆಯೇ ಒ೦ದು ಸವಾಲು. ತೆರೆಯ ಮೇಲೆ - ತೆರೆಯ ಹಿಂದೆ , ಒಳ್ಳೆಯ ಮಾಹಿತಿಯುಳ್ಳ ಬರಹ. ಅಭಿನಂದನೆಗಳು.

Roopa said...

ಶಿವು
ಈ ನಿಮ್ಮ ಲೇಖನವನ್ನ ಮಂಗಳವಾರವೇ ಓದಿದ್ದರೂ ಐಸ್ ಏಜ್ ೩ ನೋಡಿ ರಿಪ್ಲೈ ಮಾಡೋಣ ಎಂದು ಸುಮ್ಮನಾದೆ
ನೆನ್ನೆ ಡಿವಿಡಿ ತಂದು ನೋಡಿದ್ದಾಯ್ತು. ನಿಮ್ಮ ಲೇಖನ ಮನಸಲ್ಲಿ ಉಳಿದಿದ್ದರಿಂದ ಚಿತ್ರವನ್ನು ನೋಡುತ್ತಾ ಪ್ರತಿಯೊಂದು ಭಾಗವನ್ನು ಇದರ ಅನಿಮೇಶ್‌ನ್ ಹೇಗೆ ಮಾಡಿರಬಹುದು ಎಂದು ಊಹಿಸುತ್ತಿದೆ
ಒಳ್ಳೆಯ ಮಾಹಿತಿ
ಹಾಗೆ ನನ್ನ ಮಗಳಿಗೆ ತುಂಬಾ ಇಷ್ಟವಾಗಿದ್ದು ಮರಿ ಆನೆ

Annapoorna Daithota said...

ಸರಳ, ಸ್ಪಷ್ಟ, ಮಾಹಿತಿಯುಕ್ತ ಲೇಖನ ಶಿವು...

ಮೊಸಂಬಿ ಮಾಡೆಲ್, ಟೆಕ್ಚರಿಂಗ್ ಚೆನ್ನಾಗಿದೆ, ನೀವೆಷ್ಟು ಸೃಜನಶೀಲರು ಎನ್ನುವುದು ಈ ಮೊದಲು ನಿಮ್ಮ ಛಾಯಾಚಿತ್ರಗಳನ್ನು ನೋಡಿದಾಗಲೇ ಅರ್ಥವಾಗಿತ್ತು :)

Unknown said...

ಶಿವು ಸರ್ ,
ಕೆಲಸ ಒತ್ತಡದಲ್ಲಿ ಇದ್ದೆ ಹಾಗಾಗಿ ಪ್ರತಿಕ್ರಿಯೆ ನೀಡಲು ಆಗಿಲ್ಲ . ನಿಮ್ಮ ಮೊದಲ ಬರಹಗಳನ್ನು ಓದಿದೆ . ಒಳ್ಳೆಯ ಕತೆ .
. ಮಾಹಿತಿ ಪೂರ್ಣ ಬರಹ . ಓದಿ ಸುಮಾರು ವಿಷಯ ತಿಳಿದ೦ತೆ ಆಯಿತು .
ವ೦ದನೆಗಳು .

ಬಿಸಿಲ ಹನಿ said...

ಶಿವು,
congrats! ಈಗಷ್ಟೆ ಪ್ರಜಾವಾಣಿಯಲ್ಲಿ ದೀಪಾವಳಿ ವಿಶೇಷಾಂಕಕ್ಕಾಗಿ ಏರ್ಪಡಿಸಿದ್ದ ಛಾಯಾಗ್ರಹಣ ಸ್ಪರ್ಧೆಯಲ್ಲಿ ತಮಗೆ ಬಹುಮಾನ ಬಂದ ವಿಷಯವನ್ನು ಓದಿ ಖುಶಿಯಾಯಿತು. Congrats! Keep it up.

Chamaraj Savadi said...

ಸೊಗಸಾದ ಮಾಹಿತಿಪೂರ್ಣ ಬರಹ ಶಿವು. ಇಷ್ಟೆಲ್ಲ ಮಾಹಿತಿಯನ್ನು ಗೊತ್ತಿರುವವರು ಮಾತ್ರ ಬರೆಯಲು ಸಾಧ್ಯ ಎಂಬುದು ಲೇಖನ ಓದಿದ ನಂತರವೇ ಗೊತ್ತಾಗಬಲ್ಲದು. ಸೂಕ್ತ ಚಿತ್ರಗಳನ್ನು ಸೇರಿಸುವ ಮೂಲಕ ಲೇಖನವನ್ನು ಅರ್ಥಪೂರ್ಣವಾಗಿಸಿದ್ದೀರಿ. ನಿಮ್ಮ ಅಭಿರುಚಿಗೆ ನಿಜಕ್ಕೂ ಅಭಿನಂದನೆಗಳು. ಆದರೆ, ನಿಮ್ಮ ಮಹತ್ವಾಕಾಂಕ್ಷೆ ಅಪೂರ್ಣವಾದ ಬೇಸರವೂ ಮನಸ್ಸಿನಲ್ಲಿ ಹಾಗೇ ಉಳಿದುಬಿಡುತ್ತದೆ. ಅದು ಶೀಘ್ರ ಈಡೇರಲಿ ಎಂದು ಹಾರೈಸುತ್ತೇನೆ.

shivu.k said...

ಶ್ಯಾಮಲ ಮೇಡಮ್,

ಲೇಖನವನ್ನು ಓದಿ ನಿಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದ್ದೀರಿ...ಅನಿಮೇಶನ್ ಬಗ್ಗೆ ನಾನು ಬರೆದಿದ್ದು ಇಲ್ಲಿ ಕಡಿಮೆ ಎಲ್ಲಾ ವಿಚಾರವಾಗಿ ಬರೆದರೆ ಬೋರ್ ಆಗಿಬಿಡಬಹುದೆಂದು ಸಾಧ್ಯವಾದಷ್ಟು ಸಂಕ್ಷಿಪ್ತಗೊಳಿಸಿದ್ದೇನೆ.

ಧನ್ಯವಾದಗಳು.

shivu.k said...

ಸುಧೇಶ್,

ಲೇಖನ ಎಲ್ಲೂ ಬೋರ ಆಗಲಿಲ್ಲವೆಂದಿದ್ದೀರಿ. ನನ್ನ ಆರೆಂಜ್ ಚಿತ್ರವನ್ನು ಇಷ್ಟಪಟ್ಟಿದ್ದೀರಿ. ಥ್ಯಾಂಕ್ಸ್..

shivu.k said...

ರಾಜೀವ ಸಾರ್,

ಅನಿಮೇಶನ್ ಬಗ್ಗೆ ಕನ್ನಡದಲ್ಲಿ ಬರೆಯಲು ಮೊದಲ ಪ್ರಯತ್ನವಿದು. ಅದು ನಿಮಗೆ ಅರ್ಥವಾಗಿದೆಯೆಂದರೆ ನನ್ನ ಪ್ರಯತ್ನ ಸಾರ್ಥಕ. ನಿಮ್ಮ ಪ್ರೋತ್ಸಾಹ ನನಗೆ ಇನ್ನಷ್ಟು ಹೊಸದರತ್ತ ತೊಡಗಿಸಿಕೊಳ್ಳಲು ಪ್ರೇರಣೆಯಾಗುತ್ತದೆ.

ಧನ್ಯವಾದಗಳು.

shivu.k said...

ಶ್ವೇತ ಮೇಡಮ್,

ಅನಿಮೇಶನ್ ಬಗ್ಗೆ ಹೇಳುತ್ತಿದ್ದರೆ ಇನ್ನೂ ಇದೆ. ನಾನು ಏಕೆ ಕ್ಲಾಸ್ ಮುಂದುವರಿಸಲಿಲ್ಲವೆಂಬುದಕ್ಕೆ ಕಾರಣವನ್ನು ತಿಳಿಸಿದ್ದೇನೆ.

ಬ್ಲಾಗಿಗೆ ಬಂದು ಲೇಖನವನ್ನು ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು.

shivu.k said...

ಪ್ರದೀಪ್,

ನಿಮ್ಮ ಅಭಿಪ್ರಾಯ ಸರಿಯಿದೆ...ಧನ್ಯವಾದಗಳು.

shivu.k said...

ಗುರುಮೂರ್ತಿ ಸರ್,

ನಮ್ಮವರಿನ್ನೂ ಹಾಲಿಹುಡ್‍ನವರಷ್ಟು ಅನಿಮೇಶನಲ್ಲಿ ಪಳಗಿಲ್ಲ. ಅದಕ್ಕೆ ಪಕ್ಕಾ ವೃತ್ತಿಪರತೆ ಬೇಕು. ಇದು ನಿಜಕ್ಕೂ ಸವಾಲು.
ಲೇಖನವನ್ನು ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು.

shivu.k said...

ಸುನಾಥ್ ಸರ್,

ಅನಿಮೇಶನ್ ಬಗ್ಗೆ ಇನ್ನೂ ಇದೆ ಸರ್. ಮುಂದೆ ಎಂದಾದರೂ ತಿಳಿಸುತ್ತೇನೆ. ಧನ್ಯವಾದಗಳು.

shivu.k said...

ಕನಸು,

ನನ್ನ ಬರಹದ ವೈವಿಧ್ಯತೆಯನ್ನು ಇಷ್ಟಪಟ್ಟಿದ್ದಕ್ಕೆ ಥ್ಯಾಂಕ್ಸ್..

shivu.k said...

ಶ್ಯಾಮಲ ಮೇಡಮ್,

ನನ್ನ ಬ್ಲಾಗ್ ಹಿಂಬಾಲಿಸುವವರು ೧೦೦ ದಾಟಿದ್ದಾರೆನ್ನುವುದು ನಾನು ಗಮನಿಸಿರಲಿಲ್ಲ. ನೀವು ತಿಳಿಸಿದ್ದಕ್ಕೆ ಧನ್ಯವಾದಗಳು.

shivu.k said...

ಶಾಂತಲ ಮೇಡಮ್,

ಲೇಖನದ ವಿವರ ನಿಮಗೆ ಉಪಯೋಗವೆನಿಸಿದೆಯಾ? ಮತ್ತು ಮಾಹಿತಿಯನ್ನು ಇಷ್ಟಪಟ್ಟಿದ್ದೀರಿ...ಧನ್ಯವಾದಗಳು.

shivu.k said...

ಶಿವಪ್ರಕಾಶ್,

ಅನಿಮೇಶನ್ ಕಲಿಕೆಗೆ ತುಂಬಾ ಸಮಯ, ಶ್ರಮ ಬೇಕು. ಅದಕ್ಕಾಗಿ ಹಗಲು ರಾತ್ರಿ ಅಬ್ಯಾಸ ಅಗತ್ಯ. ಲೇಖನವನ್ನು ಇಷ್ಟಪಟ್ಟಿದ್ದಕ್ಕೆ ಥ್ಯಾಂಕ್ಸ್.

shivu.k said...

ಪ್ರಶಾಂತ್,

ಅನಿಮೇಶನ್ ತಯಾರಿಕೆಯ ಎಲ್ಲಾ ಸಿನಿಮಾ ನೋಡಿ. ನಿನ್ನೆ ನಾನು ಬೀ ಮೂವಿ, ಆಂಟ್ಸ್, ಹ್ಯಾಪಿ ಫೀಟ್, ಮೂರು ಸಿನಿಮಾಗಳನ್ನು ಮದುವೆ ಅಲ್ಬಂ ಹಾಕುತ್ತಾ ನೋಡಿದೆ. ತುಂಬಾ ಚೆನ್ನಾಗಿವೆ. ನನ್ನ ಬರವಣಿಗೆಯನ್ನು ಮೆಚ್ಚಿದ್ದೀರಿ...ನಿಮ್ಮ ಬ್ಲಾಗ್ ಲಿಂಕ್ ಕಳಿಸಿರಿ ಖಂಡಿತ ನೋಡುತ್ತೇನೆ..

ಧನ್ಯವಾದಗಳು.

shivu.k said...

ಪ್ರಭು,

ಅನಿಮೇಶನ್ ಎಲ್ಲಾ ಜಾತಕವನ್ನು ನಾನು ತೋರಿಸಲು ಆಗುವುದಿಲ್ಲ. ಏಕೆಂದರೆ ನಾನು ಆದರಲ್ಲಿ ಕೇವಲ ಆರುತಿಂಗಳ ಕೋರ್ಸ್ ಮಾತ್ರ ಮಾಡಿರುವುದು. ಮತ್ತೆ ಕುಂಗ್ ಪೂ ಫಾಂಡ ನೋಡಿದ್ದೇನೆ. wall E ನೋಡುತ್ತೇನೆ.

ಲೇಖನವನ್ನು ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು.

shivu.k said...

ಗಣೇಶ್ ಭಟ್ ಸರ್,

ನನ್ನ ಬ್ಲಾಗಿಗೆ ಸ್ವಾಗತ.
ನನ್ನ ಬರಹ ನಿಮಗೆ ಇಷ್ಟವಾಗಿದ್ದಕ್ಕೆ ಥ್ಯಾಂಕ್ಸ್. ನೀವು ಹೇಳಿದಂತೆ ಯಾರಾದರೂ ಕಲಿಯಲು ಮನಸ್ಸು ಮಾಡಿದರೆ ಅದು ಸುಲಭಸಾಧ್ಯವೆಂದು ಅರ್ಥ ಮಾಡಿಸುವುದಕ್ಕಾಗಿ ಈ ಬರಹವನ್ನು ಬರೆದಿದ್ದೇನೆ. ನಿಮ್ಮ ನಿರೀಕ್ಷೆಯಂತೆ ಮತ್ತಷ್ಟು ಬರಹಗಳನ್ನು ಕೊಡುತ್ತೇನೆ..
ಧನ್ಯವಾದಗಳು.

shivu.k said...

ವಿನುತಾ,

ನೀವು ಮಡ್ಗಾಸ್ಕರ್, ಐಸ್ ಏಜ್ ಅಲ್ಲದೆ ಅನಿಮೇಶನ್ ನ ಎಲ್ಲಾ ಸಿನಿಮಾ ನೋಡಿರಿ. ಇನ್ನು ಮುಂದೆ ನೋಡುವಾಗ ನನ್ನ ಬರಹ ವಿಚಾರವನ್ನು ನೆನಪಿಸಿಕೊಂಡರೆ ಸಿನಿಮಾ ನೋಡುವಾಗ ಮತ್ತಷ್ಟು enjoy ಮಾಡುತ್ತೀರಿ...

ಲೇಖನವನ್ನು ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು.

shivu.k said...

ರೂಪ ಮೇಡಮ್,

ನನ್ನ ಲೇಖನವನ್ನು ಓದಿ ನಂತರ ಸಿನಿಮಾ ನೋಡಿದ್ದೀರಿ. ಥ್ಯಾಂಕ್ಸ್..ಸಾಧ್ಯವಾದರೆ ಎಲ್ಲಾ ಸಿನಿಮಾಗಳನ್ನು ನೋಡಿ, ಸಾಧ್ಯವಾದರೆ ನಿಮ್ಮ ಮಗಳ ಜೊತೆ ನೋಡಿ..ಅವರಿಗೂ ಜ್ಞಾನ ಹೆಚ್ಚುತ್ತದೆ.

ಧನ್ಯವಾದಗಳು.

shivu.k said...

ಅನ್ನಪೂರ್ಣ ಮೇಡಮ್,

ನಾನು ಮಾಯಾ ಸಾಪ್ಟ್ ವೇರಿನಲ್ಲಿ ಸೃಷ್ಟಿಸಿದ ಮುಸೆಂಬಿಯ ಮಾಡಲ್, ಟೆಕ್ಷರಿಂಗ್ ಇಷ್ಟಪಟ್ಟಿದ್ದೀರಿ. ಬರಹವನ್ನು ಇಷ್ಟಪಟ್ಟಿದ್ದಕ್ಕೆ ಥ್ಯಾಂಕ್ಸ್...ಹೀಗೆ ಬರುತ್ತಿರಿ...

shivu.k said...

ರೂಪ ಮೇಡಮ್,

ತಡವಾಗಿ ಬಂದರೂ ತೊಂದರೆಯಿಲ್ಲ. ನಿದಾನವಾಗಿ ಎಲ್ಲಾ ಓದಿದ್ದೇನೆ ಅಂದಿದ್ದೀರಿ. ಮತ್ತು ಈ ಲೇಖನವನ್ನು ಓದಿ ಇಷ್ಟಪಟ್ಟಿದ್ದೀರಿ..ಹೀಗೆ ಬರುತ್ತಿರಿ...

ಧನ್ಯವಾದಗಳು.

shivu.k said...

ಉದಯ ಸರ್,

ಪ್ರಜಾವಾಣಿ ವಿಶೇಷಾಂಕದ ಛಾಯಾಚಿತ್ರ ಸ್ಪರ್ಧೆಯಲ್ಲಿ ಬಹುಮಾನಕ್ಕೆ ಅಭಿನಂದಿಸಿದ್ದೀರಿ ಧನ್ಯವಾದಗಳು.. ಬಹುಮಾನಿತ ಚಿತ್ರ ಮತ್ತು ನಿನ್ನೆ ದಿನಪತ್ರಿಕೆಯ ಡೆಕ್ಕನ್ ಹೆರಾಲ್ಡ್, ಪ್ರಜಾವಾಣಿ, ಬಹುಮಾನ ವಿಜೇತರ ಚಿತ್ರಗಳನ್ನು ಹಾಕಿದ್ದಾರೆ. ಅದರ ಲಿಂಕನ್ನು ನಾನು ಅರ್ಕುಟ್‍ನಲ್ಲಿ ಹಾಕಿದ್ದೇನೆ. ಬಿಡುವು ಮಾಡಿಕೊಂಡು ನೋಡಿ ಸರ್

shivu.k said...

ಸಾವಡಿ ಸರ್,

ನಾನು ಆನಿಮೇಶನ್‍ನಲ್ಲಿ ದೊಡ್ಡ ಮಹತ್ವಾಕಾಂಕ್ಷೆಯಿಟ್ಟುಕೊಂಡಿದ್ದೆ. ಅದಕ್ಕಾಗಿ ಹಗಲು ರಾತ್ರಿ ಕಷ್ಟಪಟ್ಟು ಅಭ್ಯಾಸ ಮಾಡುತ್ತಿದ್ದೆ. ಆಗಲಿಲ್ಲ. ಈಗ ಅದರ ಬಗ್ಗೆ ಬರೆಯೋಣವೆನಿಸಿತು. ನಿಮಗೆ ಇಷ್ಟವಾಗಿದ್ದರೆ ನನ್ನ ಪ್ರಯತ್ನ ಸಾರ್ಥಕ.

ನಿಮ್ಮ ಪ್ರೋತ್ಸಾಹ ಹೀಗೆ ಇರಲಿ...ಧನ್ಯವಾದಗಳು ಸರ್.

Unknown said...

ನಿಮ್ಮ ಪ್ರಯತ್ನ ಇದೆರುವನ್ತಾಗಲಿ...
ನಿಮ್ಮ ಲೇಖನಗಳು ಓದಲು ತುಂಬಾ ಸಮಯ ತೆಗೆದುಕೊಳ್ಳುತ್ತವೆ ಸ್ವಲ್ಪ ಅದರ ಉದ್ದ ಕಡಿಮೆ ಗೊಳಿಸಿದರೆ ಒಳಿತು ಎಣಿಸುವುದು.

shivu.k said...

ಈಶಕುಮಾರ್,

ನಿಮ್ಮ ಅಭಿಪ್ರಾಯವನ್ನು ಒಪ್ಪುತ್ತೇನೆ. ಇಂಥ ಲೇಖನಗಳನ್ನು ಚಿಕ್ಕದು ಮಾಡಲು ಪ್ರಯತ್ನಿಸಿದರೂ ಆಗಲಿಲ್ಲ. ಮುಂದಿನ ಬಾರಿ ಪ್ರಯನ್ನಿಸುತ್ತೇನೆ.

ಆಹಾಂ! ಹೊಸ ಲೇಖನವನ್ನು ಚಿತ್ರಸಹಿತ ಪುಟ್ಟದಾಗಿ ಹಾಕಿದ್ದೇನೆ. ಬಿಡುವು ಮಾಡಿಕೊಂಡು ನೋಡಿ ನಿಮಗಿಷ್ಟವಾಗಬಹುದು..
ಧನ್ಯವಾದಗಳು.

sirikannadajnanadeepa said...

ನಾನೊಬ್ಬ ಶಿಕ್ಷಕ ಅನಿಮೇಶನ್ ಬಳಸಿಕೊಂಡು ವಿದ್ಯಾರ್ಥಿಗಳಿಗೆ ಪಾಠಗಳಿಗೆ ಸಂಬಂಧಿಸಿದ ವೀಡಿಯೋ ತಯಾರಿಸಬೇಕು ಅಂತ ಬಹಳ ದಿನದ ಕನಸು ಆದರೆ ತರಬೇತಿ ಪಡೆಯಲು ಸಾಧ್ಯವಾಗಿಲ್ಲ .ಇಲ್ಲಿರುವ ಲೇಖನ ಉಪಯುಕ್ತವಾಗಿದೆ.ಪ್ರಯತ್ನ ಮಾಡಲು ಇನ್ನೂಷ್ಟು ಸಹಕಾರ ಕೋರುತ್ತಾ...

sirikannadajnanadeepa said...

ನಾನೊಬ್ಬ ಶಿಕ್ಷಕ ಅನಿಮೇಶನ್ ಬಳಸಿಕೊಂಡು ವಿದ್ಯಾರ್ಥಿಗಳಿಗೆ ಪಾಠಗಳಿಗೆ ಸಂಬಂಧಿಸಿದ ವೀಡಿಯೋ ತಯಾರಿಸಬೇಕು ಅಂತ ಬಹಳ ದಿನದ ಕನಸು ಆದರೆ ತರಬೇತಿ ಪಡೆಯಲು ಸಾಧ್ಯವಾಗಿಲ್ಲ .ಇಲ್ಲಿರುವ ಲೇಖನ ಉಪಯುಕ್ತವಾಗಿದೆ.ಪ್ರಯತ್ನ ಮಾಡಲು ಇನ್ನೂಷ್ಟು ಸಹಕಾರ ಕೋರುತ್ತಾ...