ಮತ್ತೆ ನಾನು ಕೆಲವು ದಿನಗಳು ಕೆಲಸದಲ್ಲಿ ಬ್ಯುಸಿಯಾಗಿಬಿಟ್ಟೆ. ಅವರು ಇಲ್ಲಿ ಬೇರೆ ಬೇರೆ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದರೂ ಆಗಾಗ ಫೋನ್ ಮಾಡುತ್ತಿದ್ದರು.
ನಾಲ್ಕು ದಿನಗಳ ನಂತರ ಮತ್ತೆ ಫೋನ್ ಮಾಡಿ "ಕನಕಪುರ ರಸ್ತೆಯಲ್ಲಿರುವ ಹೋಟಲ್ ಅತಿಥಿ ಗ್ರ್ಯಾಂಡ್‍ನಲ್ಲಿ ಮಂಗಳವಾರ ಸಂಜೆ ಸೇರೋಣ ಎಲ್ಲರೂ ಬರುತ್ತಿದ್ದಾರೆ ನೀವು ಕುಟುಂಬ ಸಮೇತರಾಗಿ ಬನ್ನಿ." ಎಂದು ಆಹ್ವಾನವಿತ್ತರು. ಅನೇಕ ಬ್ಲಾಗ್ ಗೆಳೆಯರನ್ನು ಈ ಮೂಲಕ ಬೇಟಿಯಾಗುವ ಅವಕಾಶ ಸಿಕ್ಕಿರುವಾಗ ಬಿಡುವುದುಂಟೆ! ಒಪ್ಪಿಕೊಂಡೆ.
ಪ್ರಕಾಶ್ ಹೆಗಡೆ, ಮಲ್ಲಿಕಾರ್ಜುನ್ ಮತ್ತು ನಾನು ಕೊನೆಯಲ್ಲಿ ತಡವಾಗಿ ಹೋಗಿದ್ದರಿಂದ ಬೇರೆ ಬ್ಲಾಗಿಗರೆಲ್ಲಾ ಆಗಲೇ ಸೇರಿದ್ದರು. ಸಂಪದದ ಹರಿಪ್ರಸಾದ್ ನಾಡಿಗ್, ಚಾಮರಾಜ ಸಾವಡಿಯವರ ಕುಟುಂಬ, ಶಿವಪ್ರಕಾಶ್, ಓಂ ಪ್ರಕಾಶ್, ಡಾ.ಸತ್ಯನಾರಾಯಣ್ ಕುಟುಂಬ, ಪರಂಜಪೆ ಜೊತೆಗೆ ನಾವು ಮೂವರು ಅತಿಥಿಗಳಾಗಿದ್ದರೇ, ಉದಯ ಇಟಗಿ ಅವರ ಶ್ರೀಮತಿಯವರು ಮತ್ತು ಅವರ ಮಗಳು ಭೂಮಿಕ ಅತಿಥೇಯರಾಗಿದ್ದರು. ಪರಸ್ಪರ ಪರಿಚಯ ಉಭಯ ಕುಶಲೋಪರಿಯಿಂದ ಶುರುವಾಗಿ ಅಲ್ಲಿ ಅನೇಕ ಆರೋಗ್ಯಕರ ಚರ್ಚೆಗಳು ಇತ್ತು. ವಿಕಿಪೀಡಿಯ ಬಳಸುವ ವಿಧಾನ ಇತ್ಯಾದಿಗಳ ಬಗ್ಗೆ ಹರಿಪ್ರಸಾದ್ ನಾಡಿಗ್ ವಿವರಿಸಿ ಅದರ ಬಗ್ಗೆ ಇಡೀ ರಾಜ್ಯಾ ಎಲ್ಲಾ ಜಿಲ್ಲೆಯ ವಿಶ್ವವಿದ್ಯಾಲಯಗಳಲ್ಲೂ ಕಾರ್ಯಕ್ರಮ ಆಗುತ್ತಿದ್ದು ಅದರ ಪಲಿತಾಂಶ ಅದ್ಬುತವಾಗಿದೆ ಎನ್ನುವುದನ್ನು ಅಂಕಿಅಂಶ ಸಹಿತ ವಿವರಿಸಿದರು. ಎಪ್ಪತ್ತು ವರ್ಷದ ವೃದ್ಧರು ವಿಕೀಪೀಡಿಯಾ ಬಳಕೆಯಿಂದ ಈಗ ಇಂಟರ್ ನೆಟ್ ಬಳಸಲು ಅಸಕ್ತಿ ತೋರಿರುವುದನ್ನು ವಿವರಿಸಿದರು. ಚಾಮರಾಜಸಾವಡಿಯವರು ಇತ್ತೀಚಿನ ಪತ್ರಿಕೋದ್ಯಮ ಬೆಳವಣಿಗೆ ಬಗ್ಗೆ ಕಳವಳ ವ್ಯಕ್ತಪಡಿಸಿ ಸ್ವಲ್ಪ ಗಂಭೀರ ವಿಚಾರದ ಬಗ್ಗೆ ಮಾತಾಡಿದರೆ, ಡಾ.ಸತ್ಯನಾರಯಣ್ ಸರ್ ತಮ್ಮ ಬ್ಲಾಗಿನ ಇತ್ತೀಚಿನ ಬರಹದ ಬಗ್ಗೆ ಮಾತಾಡಿದರು. ಅದರಲ್ಲಿ ಬೀಡಿ ಸೇದುವ ಪ್ರಕರಣವಂತೂ ಅಲ್ಲಿದ್ದ ಅನೇಕ ಬ್ಲಾಗಿಗರಿಗೆ ತಮ್ಮ ಬಾಲ್ಯದ ಅನುಭವಗಳನ್ನು ಅದರಲ್ಲೂ ಮೊದಲು ಬೀಡಿ ಸಿಗರೇಟು ಸೇದಿದ ಬಗ್ಗೆ ಬರೆಯಲು ಮುಂದಾದರು. ನಡುನಡುವೆ ಪ್ರಕಾಶ್ ಹೆಗಡೆಯವರು ತಮ್ಮ ಮೂಲನಿವಾಸಿಗಳ ಬಗ್ಗೆ ನಾಗು ಬಗ್ಗೆ, ಮತ್ತೆ ಪುಸ್ತಕದ ಬಗ್ಗೆ ಅಲ್ಲಲ್ಲಿ ತಮ್ಮ ಎಂದಿನ ನಗೆ ಚಟಾಕಿಗಳನ್ನು ಹಾರಿಸುತ್ತ ಎಲ್ಲರನ್ನು ರಂಜಿಸುತ್ತಿದ್ದರು. ಬ್ಲಾಗ್ ಎನ್ನುವ ವಿಚಾರ ಮೊದಲು ತಲೆಗೆ ಹೇಗೆ ಬಂತು ಮೊದಲು ಕಬ್ಬಿಣ ಕಡಲೆಯೆನಿಸಿದ್ದ ಅದು ಹೇಗೆ ನಂತರ ಸುಲಭವಾಯಿತು, ಅದಕ್ಕೆ ಸ್ಪೂರ್ತಿಯಾರು.....ಹೀಗೆ ಶುರುವಾಗಿ ಎಲ್ಲರ ಬ್ಲಾಗಿಂಗುಗಳ ತರಲೇ ಆಟಗಳು, ಬರಹಗಳಿಗೆ ಯಾರ್ಯಾರು ಪ್ರೋತ್ಸಾಹ ನೀಡಿದ್ದರು ಎನ್ನುವ ವಿಚಾರಗಳೆಲ್ಲಾ ಚರ್ಚೆಗೆ ಬಂತು. ಪ್ರೋತ್ಸಾಹದ ವಿಚಾರದಲ್ಲಿ ನಾಗೇಶ್ ಹೆಗಡೆಯವರು ಎಲ್ಲಿರುವ ಎಲ್ಲರಿಗೂ ಒಂದಲ್ಲ ಒಂದು ರೀತಿ ಪ್ರೋತ್ಸಾಹ ನೀಡಿರುವುದನ್ನು ತಿಳಿದಾಗ ನಮಗಂತೂ ಅವರ ಬಗ್ಗೆ ಗೌರವ ಇಮ್ಮಡಿಯಾಗಿತ್ತು. ಊಟದ ನಡುವೆ ಕ್ಯಾಷ್ಟ್ ಅವೆ, ಲೈಪ್ ಇಸ್ ಬ್ಯುಟಿಪುಲ್, ಮಾಜಿದ್ ಮಜ್ದಿಯ ಚಿಲ್ಡ್ರನ್ ಆಪ್ ಹೆವನ್, ಬಾರನ್, ಸಾಂಗ್ ಅಪ್ ಸ್ಪ್ಯಾರೋ, ಶ್ಯಾಮ್ ಬೆನಗಲ್ ರವರ ಜರ್ನಿ ಟು ಸಜ್ಜನ್ ಪುರ್....ಕೊನೆಗೆ ಇತ್ತೀಚಿನ ಮೊಗ್ಗಿನ ಮನಸ್ಸು, ನಟ ಪ್ರಕಾಶ್ ರೈ ಇತ್ಯಾದಿ ನಟರ ಬಗ್ಗೆ ಆರೋಗ್ಯಕರವಾದ ಚರ್ಚೆಯೂ ಆಯಿತು. ಎಲ್ಲರು ತಮ್ಮ ತಮ್ಮ ಅನುಭವವನ್ನು ಹಂಚಿಕೊಂಡರು.
ನಾನು ಮತ್ತು ಮಲ್ಲಿಕಾರ್ಜುನ್ ಸುಮ್ಮನಿರಲಿಲ್ಲ ಎಲ್ಲರ ಮಾತುಗಳನ್ನು ಕೇಳುತ್ತಾ ಆಗಾಗ ಅವರ ಸಹಜ ಫೋಟೋಗಳನ್ನು ಕ್ಲಿಕ್ಕಿಸುತ್ತಿದ್ದೆವು. ಉದಯ್ ಇಟಗಿಯವರು ಲಿಬಿಯ ದೇಶ, ಅಲ್ಲಿನ ಅಗ್ಗದ ಪೆಟ್ರೋಲ್, ಜನರ ವಿದ್ಯಾಬ್ಯಾಸದ ಪರಿಸ್ಥಿತಿ, ವಾತಾವರಣದ ಬಿಸಿ, ರಾಜಧಾನಿ ಟ್ರಿಪೋಲಿಯ ಹಸಿರುವಾತವರಣ ಉಳಿದೆಡೆಯಲ್ಲಾ ಮರಳುಗಾಡು, ಅಲ್ಲಿನ ಆರ್ಥಿಕ ಪರಿಸ್ಥಿತಿ, ಎಲ್ಲಾ ವಿಚಾರವನ್ನು ನಮ್ಮೊಂದಿಗೆ ಅಲ್ಲಲ್ಲಿ ಹಾಸ್ಯ ಮಾತುಗಳಲ್ಲಿ ಹಂಚಿಕೊಂಡರು.
ನಡುವೆಯೇ ಚಾಮರಾಜ್ ಸಾವಡಿಯವರ ಇಬ್ಬರು ಮಕ್ಕಳು, ಉದಯ್ ಇಟಗಿಯವರ ಮಗಳು ಭೂಮಿಕ, ಸತ್ಯನಾರಾಯಣ್ ಮಗಳು ಇಂಚಿತ, ಆಟವಾಡಿಕೊಳ್ಳುತ್ತಾ ಇಡೀ ರೂಮಿನ ತುಂಬಾ ಓಡಾಡಿಕೊಂಡು ತಮ್ಮದೇ ಲೋಕದಲ್ಲಿ ಮುಳುಗಿದ್ದರು.
ಉದಯ ಇಟಗಿಯವರ ಮಗಳು ಭೂಮಿಕ..







ನಾವೆಲ್ಲಾ ಬ್ಲಾಗಿಗರು.

ಎಲ್ಲರ ಮಾತುಗಳ ನಡುವೆ ಆಂದ್ರ ಶೈಲಿಯ ಸೊಗಸಾದ ಊಟ, ಐಸ್‍ಕ್ರೀಮ್, ಮೊಗಲಾಯ್ ಬೀಡ, ಕೊನೆಗೆ ಗ್ರೂಪ್ ಫೋಟೊ ಇಟಗಿ ಕುಟುಂಬದ ಫೋಟೋ ಇತ್ಯಾದಿಗಳೆಲ್ಲಾ ಸಾಂಗವಾಗಿ ಜರುಗಿ ಒಂದು ಉತ್ತಮ ಸಂಜೆಯನ್ನು ನಮ್ಮ ಆತ್ಮೀಯ ಬ್ಲಾಗ್ ಗೆಳೆಯರ ಜೊತೆ ಕಳೆದಿದ್ದು ನನ್ನ ತುಂಬಾ ಚೆನ್ನಾಗಿತ್ತು.
ಬಿಸಿಲಹನಿ ಬ್ಲಾಗಿನ ಉದಯ ಇಟಗಿಯವರ ಒಂದು ಸೊಗಸಾದ ಇಚ್ಛಾಶಕ್ತಿಯಿಂದ ಒಂದಷ್ಟು ಬ್ಲಾಗ್ ಗೆಳೆಯರು ತಮ್ಮ ನಿತ್ಯದ ದುಗುಡ ದುಮ್ಮಾನಗಳನ್ನು ಮರೆತು ಮನೆಸಾರೆ ನಕ್ಕು ಒಂದು ಒಳ್ಳೆಯ ಊಟವನ್ನು ಮಾಡಿ ಎಲ್ಲರೂ ಬೀಳ್ಕೊಡುವಾಗ ಬ್ಲಾಗ್ ಎನ್ನುವ ಲೋಕದಲ್ಲಿ ಎಷ್ಟು ಸೊಗಸಾದ ಸಂತೃಪ್ತಿಯಿದೆ ಅನ್ನಿಸಿತ್ತು. ಅದಕ್ಕಾಗಿ ಉದಯ ಇಟಗಿಯವರಿಗೆ ನನ್ನ ಹೃದಯಪೂರ್ವಕ ಧನ್ಯವಾದಗಳು.
[ಕಳೆದೊಂದು ವಾರದಿಂದ ಪ್ರವಾಸ, ಕೆಲಸ ಇತ್ಯಾದಿಗಳಿಂದಾಗಿ ಬೆಂಗಳೂರಿನಲ್ಲಿರಲಿಲ್ಲವಾದ್ದರಿಂದ ಬ್ಲಾಗಿಗೆ ಹೊಸ ಪೋಸ್ಟ್ ಹಾಕುವುದು, ಗೆಳೆಯರ ಬ್ಲಾಗುಗಳನ್ನು ನೋಡುವುದು ಸಾಧ್ಯವಾಗಲಿಲ್ಲ. ಈಗ ಎಲ್ಲವನ್ನು ಒಂದೊಂದಾಗಿ ನೋಡಬೇಕಿದೆ...ನಿಮ್ಮ ಪ್ರೋತ್ಸಾಹ ಹೀಗೆ ಇರಲಿ.]
ಚಿತ್ರ ಲೇಖನ
ಶಿವು.ಕೆ.