Monday, December 7, 2009

ನೀವೇಕೆ ಹೀಗೆ




ಓ ಭಾವಗಳೇ... ನೀವೇಕೆ ಹೀಗೆ
ಕುಂತಲ್ಲಿ ಕೂರದೆ ನಿಂತಲ್ಲಿ ನಿಲ್ಲದೆ
ಹಾರುತ್ತಾ ಜಾರುತ್ತಾ ಮೋಡದ
ಮರೆಯ ಚಂದ್ರಮನ ಹಾಗೆ.

ಏನು ಅರಿಯದ
ಮನವೇನು ನಿಮ್ಮಪ್ಪನ ಸ್ವತ್ತೇ?
ನಿಮ್ಮೀ ಕಿತ್ತಾಟದಿಂದಾಗಿ
ಒಮ್ಮೆ ಆತ್ಮಹತ್ಯೆಗೆ ಯತ್ನಿಸಿದ್ದೆ ಗೊತ್ತೆ?

ಸೋತಾಗ ಸೊರಗಿ, ಗೆದ್ದಾಗ ಜಿನುಗಿ
ಕರುಣೆಗೆ ಕರಗಿ ಕರುಳಿಗೆ ಮರುಗಿ
ಬಣ್ಣ ಬದಲಿಸೋ ಗೋಸುಂಬೆಗಳು
ಜಿಗಣೆಯಂತೆ ಹಿಂಬಾಲಿಸೋ ನೆರಳುಗಳು.

ಒಬ್ಬರ ದ್ವೇಷಕ್ಕೆ ನೂಕಿ
ಮತ್ತೊಬ್ಬರ ಒಲವಲ್ಲಿ ಜೀಕಿ
ಹಗಲೆಲ್ಲಾ ಕಾಲ್ಚೆಂಡಾಯ್ತು ಮನಸ್ಸು
ಇರುಳಂಕಣವಾಯ್ತು ನಿದ್ರೆಯ ಕನಸು.

ನಿನ್ನೆಯದು ಇಂದಿಗೆ ಹಳತಾದರೂ
ಇಂದಿನದು ನಾಳೆಗೆ ಕೊಳೆತುಹೋದರೂ
ಮತ್ತೆ ಹುಟ್ಟಿ ನಿಮ್ಮ ಆಸ್ಥಿತ್ವಕ್ಕಾಗಿ
ನನ್ನ ಆಸ್ಥಿತ್ವವನ್ನೇ ಅಲುಗಾಡಿಸುತ್ತಿರೇಕೆ?

ಬದುಕೆಲ್ಲಾ ಇಷ್ಟೊಂದು ಕಾಡುವಿರೇಕೆ?
ಖಾತ್ರಿಯೇನು? ಸತ್ತ ಮೇಲಾದರೂ ಬಿಡುತ್ತೀರೆನ್ನುವುದಕ್ಕೆ
ಓ ಭಾವಗಳೇ...ನೀವೇಕೆ ಹೀಗೆ
ಬೆಂಕಿ ಇಲ್ಲದಿದ್ದರೂ ಹೊಗೆಯೇಳುವ ಹಾಗೆ.
ಶಿವು.ಕೆ

56 comments:

ಚುಕ್ಕಿಚಿತ್ತಾರ said...

ಶಿವು ಸರ್..
ನಿಜ ಭಾವಗಳು ಬಿಡದೇ ಬೆನ್ನತ್ತಿಬರುತ್ತವೆ.
ಅಳಿಸಿ ಹಾಕುವುದು ತು೦ಬಾ ಕಷ್ಟ.
ಚ೦ದದ ಕವನ ...ವ೦ದನೆಗಳು.

ದಿನಕರ ಮೊಗೇರ said...

ಶಿವೂ ಸರ್,
ತುಂಬಾ ಭಾವಪೂರ್ಣ ಕವನಕ್ಕೆ ಧನ್ಯವಾದಗಳು..... ಮನಸ್ಸಿನ ಅಸ್ತಿತ್ವವೇ ಕಾಮಿಡಿ..... ಯಾಕಂದ್ರೆ ಅದು ಎಲ್ಲಿರತ್ತೆ ಅಂತಾನೆ ಗೊತ್ತಾಗಲ್ಲ..... ಇಲ್ಲಿರಬೇಕು ಅಂದ್ರೆ ಇಲ್ಲಿರಲ್ಲ..... ಅಲ್ಲಿರಲೇಬೇಕು ಅಂದ್ರೆ ಎಲ್ಲೋಹೋಗಿರತ್ತೆ.....

shivu.k said...

ವಿಜಯಶ್ರೀಯವರೆ,

ಭಾವನೆಗಳ ಬಗ್ಗೆ ಈ ಕವನವನ್ನು ಸುಮಾರು ಎಂಟು ವರ್ಷಗಳ ಹಿಂದೆ ಬರೆದಿದ್ದೆ. ಸಂಯುಕ್ತ ಕರ್ನಾಟಕದಲ್ಲಿ ಪ್ರಕಟವಾಗಿಯೂ ಇತ್ತು. ಅದನ್ನು ಮತ್ತೆ ಇಲ್ಲಿ ಹಾಕಿದ್ದೇನೆ. ಕವನ ಇಷ್ಟಪಟ್ಟಿದ್ದಕ್ಕೆ ಥ್ಯಾಂಕ್ಸ್...

shivu.k said...

ದಿನಕರ್ ಸರ್,

ಭಾವನೆಗಳ ಬಗ್ಗೆ ಎಷ್ಟು ಬರೆದರೂ ಕಡಿಮೆಯೇ. ನೀವು ಹೇಳಿದಂತೆ ಕಾಮಿಡಿ ಮತ್ತು ಟ್ರ್ಯಾಜಿಡಿ ಎರಡು ಭಾವನೆಗಳಲ್ಲೇ ಅಡಗಿರುತ್ತೆ ಅಲ್ವಾ....ಕವನ ಮೆಚ್ಚಿದ್ದಕ್ಕೆ ಧನ್ಯವಾದಗಳು.

ಸೀತಾರಾಮ. ಕೆ. / SITARAM.K said...

very nice poetry shivu sir

shivu.k said...

ಸೀತಾರಾಮ್ ಸರ್,

ಧನ್ಯವಾದಗಳು.

ಮನಸು said...

ವಾಹ್!!! ಸೂಪರ್ ಇದೆ ಸರ್ ಕವನ ಎಷ್ಟು ಚೆಂದವಾಗಿ ಬರೆದಿದ್ದೀರಿ.

shivu.k said...

ಮನಸು ಮೇಡಮ್,

ಕವನ ತುಂಬಾ ಹಿಂದೆ ಬರೆದಿದ್ದು. ಆಗಿನ ಮನಸ್ಥಿತಿಯಂತೆ ಬರೆದ ಕವನ. ನಿಮಗಿಷ್ಟವಾಗಿದ್ದಕ್ಕೆ ಥ್ಯಾಂಕ್ಸ್...

ಆನಂದ said...

ಭಾವಗಳಿಲ್ಲದೇ ಬದುಕುವುದು ಸಾಧ್ಯವೇ, ಸಾಧುವೇ?
ಅಷ್ಟಲ್ಲದೇ, ಮನುಷ್ಯನನ್ನು ಭಾವಜೀವಿ ಅಂತೇಕೆ ಕರೆಯಬೇಕು!

ಆದರೂ, ನೀವು ಬರೆದಹಾಗೆ, ಒಂದೊಂದ್ಸಲ ಅಟ್ಟಿಸಿಕೊಂಡು ಬರುವ ಭಾವಗಳಿಂದ ತಪ್ಪಿಸಿಕೊಂಡರೆ ಸಾಕಾಗಿರುತ್ತೆ.
ನಿಮ್ಮ ಈ ಕವಿತೆ ಭಾವಗಳನ್ನು ಹೊಮ್ಮಿಸುತ್ತೆ!. ( ನೋಡಿದಿರಾ, ಮತ್ತದೇ ಚಕ್ರಸುಳಿ ) :)

ಆನಂದ said...

ಇಲ್ಲಿ ಹಾಕಿರುವ ಚಿತ್ರದ collage ಕೂಡ ಚೆನ್ನಾಗಿದೆ.

L'Étranger said...

ಹೌದು, ಭಾವಗಳೇ ಹಾಗೆ!

ಹಾರುತ್ತಾ ಜಾರುತ್ತಾ ಮೋಡದ ಮರೆಯ ಚಂದ್ರಮನ ಹಾಗೆ ಮಧುರವೂ ಹೌದು, ಮನಸ್ಸು ಕಾಲ್ಚೆಂಡಾಯ್ತು ಅನಿಸುವಂತೆ ಒರಟೂ ಹೌದು!

"ಇರುಳಂಕಣವಾಯ್ತು ನಿದ್ರೆಯ ಕನಸು" -- ಒಂಥರಾ ಚನ್ನಾಗಿದೆ!

ಸುಂದರವಾಗಿದೆ ಪದ್ಯ.

ಇನ್ನೊಂದು ಮಾತು: ಪ್ರತಿ ಕಾಮೆಂಟಿಗೂ ಉತ್ತರ ಕೊಡುವ ನಿಮ್ಮ ಸಹೃದಯತೆ/ನಮ್ರಭಾವ ಇತ್ತೀಚೆಗೆ ತುಂಬಾ ಅಪರೂಪ. ಬ್ಲಾಗ್ ಓದಿ ಪ್ರತಿಕ್ರಿಯಿಸುವವರ ಆಸಕ್ತಿ-ಸಮಯಗಳಿಗೆ ಗೌರವ ಕೊಡಬೇಕು ಅನ್ನುವುದನ್ನೇ ಮರೆತುಬಿಟ್ಟಿರುವ ನಮ್ಮ ಕನ್ನಡ ಬ್ಲಾಗಿಗರ ಮಧ್ಯೆ ನಿಮ್ಮಂಥವರೂ ಇರುವುದನ್ನು ನೋಡಿ ಖುಶಿಯಾಗತ್ತೆ! :-)

Dileep Hegde said...

ಕಾಡಿ ಕೊಲ್ಲುವ ಭಾವನೆಗಳ ಬಗೆಗೆ ಭಾವಪೂರ್ಣ ಕವನ...
ತುಂಬಾ ಚೆನ್ನಾಗಿದೆ..

shivu.k said...

ಆನಂದ್,

ಭಾವನೆಗಳ ಬಗ್ಗೆ ಪ್ರತಿಯೊಬ್ಬರ ಅಭಿಪ್ರಾಯವೂ ಬೇರೆಯಾದರೂ ಅರ್ಥ ಮಾತ್ರ ಒಂದೇ ಅಲ್ಲವೇ...
ಮತ್ತೆ ಭಾವನೆಗಳು ಒಂಥರ ಚಕ್ರಸುಳಿಗಳು ಹೌದು.

ನಿಮ್ಮ ಪ್ರತಿಕ್ರಿಯೆಗಳಿಗೆ ಧನ್ಯವಾದಗಳು.

Unknown said...

ಕವಿ ಶಿವು ಅವರಿಗೆ ಸ್ವಾಗತ. ಕಥೆ ಬರೆದ ಮೇಲೆ ಕವಿತೆಯನ್ನು ಬರೆಯಲು ಮನಸ್ಸು ಮಾಡಿದ್ದಕ್ಕೆ ಅಭಿನಂದನೆಗಳು. ಒಂದು ಒಳ್ಳೆಯ ಕವಿತೆ ಓದಿಸಿದ್ದೀರಿ. ಭಾವನೆಗಳ ಮೆರವಣಿಗೆಯನ್ನು ಸೊಗಸಾಗಿಸಿದ್ದೀರಿ.

ಎರಡನೇ ಪದ್ಯದ ಮೊದಲ ಸಾಲು ''ಏನು ಹರಿಯದ '' ಎಂಬಲ್ಲಿ ''ಏನು ಅರಿಯದ'' ಎಂದಾಗಬೇಕಲ್ಲವೆ?
ಹರಿ> ವಿಷ್ಣು, ಕತ್ತರಿಸು, ಕಡಿ: ಹರಿಯದ> ಕತ್ತರಿಸದ
ಅರಿವು>ತಿಳುವಳಿಕೆ, ಜ್ಞಾನ: ಅರಿಯದ> ತಿಳಿಯದ, ಗ್ರಹಿಸದ

L'Étranger said...

ಡಾ. ಸತ್ಯನಾರಾಯಣ ಅವರೆ:

ಅದು "ಅರಿಯದ" ಅಂತಾದರೆ, "ಏನೂ ಅರಿಯದ" ಅಥವಾ "ಏನು, ಅರಿಯದ" ಆಗಬೇಕಾಗುತ್ತದೆ. :-)

ಕವಿ ಶಿವು ಅವರ ಕವನದಲ್ಲಿ ಕೆಲವು ಕಾಗುಣಿತ ತಪ್ಪುಗಳಿರುವುದರಿಂದ ಆ ಸಾಲನ್ನು ನಾನು ಹೀಗೆ ಓದಿಕೊಂಡೆ:

"ಏನು, ಹರೆಯದ ಮನವೇನು ನಿಮ್ಮಪ್ಪನ ಸ್ವತ್ತೇ?"

ಶಿವು ಅವರೇ ಹೇಳಿದಂತೆ ಅವರು ಈ ಕವನವನ್ನು ಅವರ ಕಾಲೇಜು ವಯಸ್ಸಿನಲ್ಲಿ ಬರೆದಿರಬೇಕು. :-)

PARAANJAPE K.N. said...

ಕವಿತೆ ಚೆನ್ನಾಗಿದೆ. ಅರ್ಥಪೂರ್ಣವಾಗಿದೆ. ಮುಂದುವರಿಸಿ. ಸತ್ಯನಾರಾಯಣರು ಹೇಳಿದ ತಿದ್ದುಪಡಿ ನನಗೂ ಸರಿಯೆನಿಸಿತು. ಛಾಯಾಚಿತ್ರಕಾರ, ಕಥೆಗಾರ ಶಿವೂ ಈಗ ಕವಿಯಾಗುತ್ತಿರುವುದು ಸ೦ತೋಷದ ವಿಷಯ

umesh desai said...

ಶಿವು ಕವಿತಾ ಛಲೊ ಅದ ಅಥವಾ ಅದರ ಪ್ರಯತ್ನ ಚೆನ್ನಾಗಿದೆ

ಕ್ಷಣ... ಚಿಂತನೆ... said...

ಶಿವು ಅವರೆ,
ಕವನ ಓದಿದೆ. ಚೆನ್ನಾಗಿದೆ. ಭಾವನೆಗಳ ಬೆನ್ನೇರಿ.. ಬರೆದ ಕವಿತೆ ಹಾಡಿಕೊಳ್ಳುವಂತಿದೆ.

ಶಿವು ಅವರಲ್ಲಿ ಒಬ್ಬ ಕವಿಯೂ, ಕಥೆಗಾರನೂ, ಚಿತ್ರಕಾರನೂ, ಇನ್ನೂ.. ಏನೇನು??? ಇರುವನೋ?


ಧನ್ಯವಾದಗಳು.

Unknown said...

ನಾವಿರೋದೆ ಹೀಗೆ ಸ್ವಾಮೀ... ಅಂತಾವೆ ಭಾವಗಳು... ಅವ್ಯಾವತ್ತೂ ನಮ್ಮನ್ನು ಬಿಟ್ಟು ಹೋಗೋದಿಲ್ಲ..."ಬನ್ನಿ ಭಾವಗಳೇ ಬನ್ನಿ ನನ್ನೆದೆಗೆ ಕರೆಯುವೆ ಕೈಬೀಸಿ..."..

Shweta said...

shivu sir ,
olleya prayatna,chennagide.....

ಬಿಸಿಲ ಹನಿ said...

ಭಾವಪೂರ್ಣ ಕವನ್!!

ಜಲನಯನ said...

ಶಿವು, ಚಿತ್ರ, ಕಥೆ, ಕಥನ ಈಗ ಕವನ....ಛಲೋ ಐತ್ರೀ,,,....ಬಹಳ ಚನ್ನಾಗಿ ನಿಮ್ಮ ಮನದ ಮರ್ಕಟಕ್ಕೆ ಮದ್ಯ ಕುಡಿಸಿ..ಭಾವನೆಗಳನ್ನ ಚಿವುಟಿ...ಪೆನ್ ಕೈಗೆಕೊಟ್ಟು ಕುಣಿಯೋಕೆ ಬಿಟ್ಟಿದ್ದೀರಿ...ಕುಣಿತ ಎಂತಹ ಕೃತಿ ಮೂಡಿಸ್ತು...ಅಭಿನಂದನೆಗಳು.

ಶಿವಪ್ರಕಾಶ್ said...

Nice one shivu

ಸಾಗರದಾಚೆಯ ಇಂಚರ said...

ಶಿವೂ ಸರ್
ನಿಮ್ಮ ಕವನ ನೋಡಿ ತುಂಬಾ ಖುಷಿಯಾಯಿತು
ಭಾವಗಳೇ ಹಾಗೆ ಅಲ್ಲವೇ
ಒಳ್ಳೆಯ ಅರ್ಥ ಪೂರ್ಣ ಸಾಲುಗಳು
ಫೋಟೋ ಕೂಡಾ ಚೆನ್ನಾಗಿದೆ

ಮಲ್ಲಿಕಾರ್ಜುನ.ಡಿ.ಜಿ. said...

ಶಿವು,
ಕವನ ನೀವು ಮುಂಚೆಯೇ ಬರೆದಿದ್ದರೂ ಎಲ್ಲಾ ಕಾಲಕ್ಕೂ ಸಲ್ಲುವಂತಿದೆ. ಅದೇ ಅದರ ವೈಶಿಷ್ಟ್ಯವೂ ಹೌದು. ಎಲ್ಲರಿಗೂ ತಟ್ಟುವ ಭಾವಜೀವಿಗಳನ್ನು ಜೀಕುವ ಕವನ ತುಂಬಾ ಸೊಗಸಾಗಿದೆ.

ಬಾಲು said...

ಕಾಡುವ ಭಾನೆಗಳ ಬಗ್ಗೆ ಒಳ್ಳೆಯ ಕವನ.

shivu.k said...

L.Etranger,

ನನ್ನ ಕವನದ ಸಾಲುಗಳನ್ನು ಹೇಳಿ ಮೆಚ್ಚಿದ್ದೀರಿ...

"ಇರುಳಂಕಣವಾಯ್ತು ನಿದ್ರೆಯ ಕನಸು" ನನಗೂ ಒಂಥರ ಇಷ್ಟದ ಸಾಲು. ಅದನ್ನು ಕಲ್ಪಿಸಿಕೊಂಡರೆ ಒಂಥರ ಬೇರೆ ಲೋಕಕ್ಕೆ ಕರೆದುಕೊಂಡು ಹೋದಂತೆ ಆಗುತ್ತದೆ. ಕಲ್ಪನೆಯಲ್ಲಿನ ಥ್ರಿಲ್ ಅಂದರೆ ಇದೇ ಅಲ್ಲವೇ.

ಮತ್ತೆ ಕಾಮೆಂಟಿಗೆ ಪ್ರತಿಕ್ರಿಯಿಸುವ ವಿಚಾರಕ್ಕೆ ಬಂದಾಗ ಇದರಲ್ಲಿ ಅನೇಕರಿಗೆ ಗೊಂದಲಗಳಿವೆ. ಆ ವಿಚಾರವಾಗಿ ನನ್ನಲ್ಲಿ ಚರ್ಚಿಸಿಯೂ ಇದ್ದಾರೆ. ನೀವ್ಯಾಕೆ ಪ್ರತಿಯೊಬ್ಬರಿಗೂ ವೈಯಕ್ತಿಕವಾಗಿ ಪ್ರತಿಕ್ರಿಯಿಸುತ್ತೀರಿ ಅಂತ. ಅವರ ಮನಸ್ಸಿನ ಭಾವನೆಗಳು ಏನಿದೆಯೋ ನನಗೆ ಗೊತ್ತಿಲ್ಲ. ಆದ್ರೆ ನನ್ನ ಬ್ಲಾಗಿಗೆ ಬಂದು ಲೇಖನ ಓದಿ ಅಥವ ಚಿತ್ರಗಳನ್ನು ನೋಡಿ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸುವ ಪ್ರತಿಯೊಬ್ಬ ಬ್ಲಾಗ್ ಗೆಳೆಯರು ಕೂಡ ನನ್ನ ಮನೆಗೆ ಬರುವ ಅತಿಥಿಯಂತೆ. ಬಂದ ಅತಿಥಿಗಳನ್ನು ಒಟ್ಟಾಗಿ ಮಾತನಾಡಿಸಿ ಪ್ರತಿಕ್ರಿಯಿಸಿದರೆ ಹೇಗಿರುಬಹುದು ಅಂತ ಊಹಿಸಿ. ಅದೇ ಒಬ್ಬೊಬ್ಬರನ್ನು ವೈಯಕ್ತಿಕವಾಗಿ ಮಾತಾಡಿಸಿದಾಗ ಅವರನ್ನು ಗುರುತಿಸಿ ಗೌರವಿಸಿದಂತಾಗುತ್ತದೆ. ಅದು ಅವರಿಗೂ ಖುಷಿ, ನನಗೂ ಸಮಾಧಾನ. ಇದೊಂಥರ ಆತ್ಮೀಯತೆಯ ಭಾಂಧವ್ಯವೆಂದು ನನ್ನ ಅನಿಸಿಕೆ.
ನಾನು ಬ್ಲಾಗಿನ ಪ್ರತಿಕ್ರಿಯೆಗಳಿಗೆ ವೈಯಕ್ತಿಕವಾಗಿ ಪ್ರತಿಯೊಬ್ಬರ ಕಾಮೆಂಟಿಗೂ ಉತ್ತರಿಸುವ ಕಾರಣ ಇದೇ ಆಗಿದೆ.

ಧನ್ಯವಾದಗಳು.

shivu.k said...

ದಿಲೀಪ್,

ಕವನದ ಭಾವನೆಗಳನ್ನು ಅರ್ಥಮಾಡಿಕೊಂಡಿದ್ದಕ್ಕೆ ಧನ್ಯವಾದಗಳು.

shivu.k said...

ಸತ್ಯನಾರಾಯಣ ಸರ್,

ಈಗ ಖಂಡಿತ ನನಗೆ ಕವಿತೆ ಬರೆಯಬೇಕೆನ್ನುವ ಆಸೆಯಿಲ್ಲ.

ಇದು ಸುಮಾರು ಏಳು ವರ್ಷಗಳ ಹಿಂದೆ ಬರೆದ ಕವನ. ಆಗ ನಾನು ಬರಹವನ್ನು ಪ್ರಾರಂಭಿಸಿದ್ದೇ ಸಣ್ಣ ಸಣ್ಣ ಚುಟುಕು ಕವನಗಳನ್ನು ಬರೆಯುವ ಮೂಲಕ. ಅದು ಸುಧಾ, ಮಯೂರ, ತುಷಾರ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿತ್ತು. ಇಷ್ಟು ದೊಡ್ಡ ಕವಿತೆ ಬರೆಯಲು ಒಂದು ಕಾರಣವೂ ಇದೆ. ಒಮ್ಮೆ ಚಂಡಮಾರುತದ ಮಳೆ ಇದ್ದಾಗ ನನ್ನ ಗೆಳೆಯರೆಲ್ಲಾ ಒಂದು ರೂಮಿನಲ್ಲಿ ಸೇರಿದ್ದೆವು[ಮಳೆಯಲ್ಲಿ ಉಆರಿಗೂ ಎಲ್ಲಿಗೂ ಹೋಗಲು ಸಾಧ್ಯವಾಗದ್ದರಿಂದ]. ಆಗ ಅನೇಕ ಗೆಳೆಯರು ತಮಗಿಷ್ಟವಾದ ಪದಗಳನ್ನು ಕವನಗಳಲ್ಲ್ಲಿ ಹೇಳುತ್ತಿದ್ದರು. ನಾನು ಮೊದಲ ಬಾರಿಗೆ ಹೊರಗೆ ಬೀಳುತ್ತಿದ್ದ ಜಡಿಮಳೆಯನ್ನು ಹೆಣ್ಣಿಗೆ ಹೋಲಿಸಿ ಒಂದು ದೊಡ್ಡ ಕವನವನ್ನು ಬರೆದು ಓದಿದೆ. ಅದು ಎಲ್ಲರಿಗು ಇಷ್ಟವಾಯಿತು. ಅದನ್ನು ಮುಂದೆ ಎಂದಾದರೂ ಬ್ಲಾಗಿಗೆ ಹಾಕುತ್ತೇನೆ. ಅದೇ ನನ್ನ ಪೂರ್ಣಮಟ್ಟದ ಕವನ. ನಂತರ ಅನೇಕ ಕವನಗಳನ್ನು ಬರೆದಿದ್ದೇನೆ. ಆಗ ನನ್ನ ಕವನಗಳೆಲ್ಲಾ ಕರ್ಮವೀರ, ಹೊಸದಿಗಂತ, ಸುಧಾ, ಇತ್ಯಾದಿ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಈ ಕವನವೂ ಕೂಡ ಕನ್ನಡಪ್ರಭದಲ್ಲಿ ಆಗ ಪ್ರಕಟವಾಗಿತ್ತು. ಇದು ನನ್ನ ಕವನ ಬರೆಯುವ ಪ್ರಯತ್ನದ ಕತೆ.

ಮತ್ತೆ ನೀವು ಹೇಳಿದಂತೆ ಕಾಗುಣಿತದ ತಪ್ಪನ್ನು ತಿದ್ದಿದ್ದೇನೆ. ಆಗಾಗ ನೀವು ಹೀಗೆ ಆಕ್ಷರಗಳ ತಪ್ಪನ್ನು ತಿದ್ದಿ ಎಚ್ಚರಿಸುತ್ತಿದ್ದೀರಿ. ಇದು ನನ್ನ ಬರಹದ ಬೆಳವಣಿಗೆಗೆ ಸಹಕಾರವಾಗುತ್ತದೆ. ಧನ್ಯವಾದಗಳು.

shivu.k said...

L.Etranger,

ನನ್ನ ಕವನದ ತಪ್ಪನ್ನು ನೀವು ಸರಿಪಡಿಸಿಕೊಂಡು ಬೇರೊಂದು ಅರ್ಥದಲ್ಲಿ ಓದಿಕೊಂಡಿದ್ದು ಖುಷಿಯಾಯ್ತು. ಇದು ನನ್ನ ಕಾಲೇಜು ದಿನಗಳ ನೆನಪನ್ನು ಮರುಕಳಿಸಿತು.

ಧನ್ಯವಾದಗಳು.

shivu.k said...

ಪರಂಜಪೆ ಸರ್,

ಕವನ ಬರೆಯುವ ನನ್ನ ಪ್ರಯತ್ನದ ಬಗ್ಗೆ ವಿವರಿಸಿದ್ದೇನೆ.

ನೀವು ಕವನವನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು.

shivu.k said...

ಉಮೇಶ್ ದೇಸಾಯಿ ಸರ್,

ನನ್ನ ಕವನ ಬರೆಯುವ ಪ್ರಯತ್ನವನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು.

shivu.k said...

ಕ್ಷಣ ಚಿಂತನೆ ಚಂದ್ರು ಸರ್,

ನನ್ನಲ್ಲಿರುವ ಎಲ್ಲಾ ಪ್ರಯತ್ನಗಳನ್ನು ನೀವು ಗುರುತಿಸಿ ಮೆಚ್ಚುಗೆ ಸೂಚಿಸುತ್ತಿದ್ದೀರಿ. ಅದಕ್ಕಾಗಿ ಧನ್ಯವಾದಗಳು.

ಇಷ್ಟೆಲ್ಲಾ ಬರಹಗಳ ನಡುವೆ ಈಗ ನನ್ನ ಫೋಟೊಗ್ರಫಿ ಸಾಧನೆ ಕಡಿಮೆಯಾಗಿದೆ. ಆದ್ದರಿಂದ ಇನ್ನು ಮೂರು ತಿಂಗಳು ಸೀರಿಯಸ್ಸಾಗಿ ಫೋಟೋಗ್ರಫಿ ಮಾಡಬೇಕು ಅಂದುಕೊಂಡಿದ್ದೇನೆ. ಈಗ ಫೋಟೊಗ್ರಫಿಗೆ ಉತ್ತಮ ಅವಕಾಶ. ನೆರಳು ಮತ್ತು ಬೆಳಕು ಉತ್ತಮವಾಗಿರುತ್ತದೆ. ಈ ಸಮಯದಲ್ಲಿ ಪ್ರತಿಯೊಬ್ಬರೂ ಫೋಟೊಗ್ರಫಿಯಲ್ಲಿ ತೊಡಗಿಕೊಂಡರೇ ಕೆಲವು ಉತ್ತಮ ಚಿತ್ರಕೃತಿಗಳನ್ನು ಖಂಡಿತ ಕ್ಲಿಕ್ಕಿಸಬಹುದು. ಮತ್ತು ಇನ್ನೆರಡು ತಿಂಗಳು ರಾಷ್ಟ್ರ ಮತ್ತು ಅಂತರರಾಷ್ಟ್ರ್ರೀಯ ಮಟ್ಟದಲ್ಲಿ ಹತ್ತಾರು ಸ್ಪರ್ಧೆಗಳಿವೆಯಾದ್ದರಿಂದ ಸ್ವಲ್ಪ ಬರಹದಿಂದ ಹೊರಬರಲು ಬಯಸಿದ್ದೇನೆ. ಆದರೂ ಬ್ಲಾಗಿಗೆ ಆಗಾಗ ಕೆಲವು ಲೇಖನಗಳನ್ನು ಖಂಡಿತ ಹಾಕುತ್ತೇನೆ.

ನೀವು ಒಬ್ಬ ಛಾಯಾಗ್ರಾಹಕರಾದ್ಧರಿಂದ ನಿಮಗೆ ಇಷ್ಟು ವಿಚಾರಗಳನ್ನು ಹೇಳಬೇಕಾಯಿತು.
ಧನ್ಯವಾದಗಳು.

shivu.k said...

ರವಿಕಾಂತ್ ಗೋರೆ ಸರ್,

ನನ್ನ ಕವನದ ಭಾವನೆಗಳನ್ನು ಗುರುತಿಸಿ ನಿಮ್ಮ ಭಾವನೆಗಳನ್ನು ವ್ಯಕ್ತಪಡಿಸಿದ್ದೀರಿ...ಧನ್ಯವಾದಗಳು.

shivu.k said...

ಶ್ವೇತ ಮೇಡಮ್,

ನಿಮ್ಮ ಅನಿಸಿಕೆಗಳಿಗೆ ಧನ್ಯವಾದಗಳು.

shivu.k said...

ಉದಯ ಸರ್,

ಧನ್ಯವಾದಗಳು.

shivu.k said...

ಡಾ.ಆಜಾದ್ ಸರ್,

ನಾನು ಈಗ ಏನೇನು ಮಾಡುತ್ತಿದ್ದೇನೆ ಅನ್ನುವುದು ನಿಮಗೆ ಗೊತ್ತಿದೆ. ಎಲ್ಲಾ ವಿಚಾರದಲ್ಲಿ ತೊಡಗಿಕೊಳ್ಳಬೇಕೆಂದು ನನಗೆ ಏಕೆ ಅನ್ನಿಸುತ್ತೋ ನನಗೆ ಗೊತ್ತಿಲ್ಲ. ಒಂದೇ ವಿಚಾರದ ಹಿಂದೆ ಬಿದ್ದಾಗ ನನಗೆ ಬೇಗನೆ ಬೇಸರವಾಗಿಬಿಡುತ್ತದೆ. ಆಗ ಮತ್ತೊಂದು ವಿಚಾರದ ಬೆನ್ನು ಹತ್ತುತ್ತೇನೆ. ಫೋಟೊಗ್ರಫಿ ಬೇಸರವಾದಾಗ, ಲೇಖನ ಬರೆಯಬೇಕೆನ್ನಿಸುತ್ತದೆ, ಇದು ಬೇಸರವಾದಾಗ, ಸಣ್ಣ ಕತೆ ಬರೆಯಬೇಕೆನ್ನಿಸುತ್ತದೆ, ಮತ್ತೆ ಕತೆ ಬೇಸರವಾದಾಗ ಕವನ ಬರೆಯಬೇಕೆನ್ನಿಸುತ್ತದೆ. ನಂತರ ರೇಖಾ ಚಿತ್ರಗಳೂ ಹೀಗೆ ಸಾಗುತ್ತದೆ. ಮತ್ತೆ ವಾಪಸ್ ಫೋಟೋಗ್ರಫಿ.......ಹೀಗೆ ಸಾಗುತ್ತದೆ..

ಕವನದ ಪ್ರಯತ್ನವನ್ನು ವಿಭಿನ್ನವಾಗಿ ವ್ಯಕ್ತಪಡಿಸಿದ್ದಕ್ಕೆ ಧನ್ಯವಾದಗಳು.

shivu.k said...

ಶಿವಪ್ರಕಾಶ್,

ಧನ್ಯವಾದಗಳು.

shivu.k said...

ಗುರುಮೂರ್ತಿ ಹೆಗಡೆ ಸರ್,

ನನ್ನ ಕವನದ ಪ್ರಯತ್ನವನ್ನು ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು.ನಿಮ್ಮ ಪ್ರೋತ್ಸಾಹ ಹೀಗೆ ಇರಲಿ..

shivu.k said...

ಮಲ್ಲಿಕಾರ್ಜುನ್,

ಈ ಕವನದ ಬಗ್ಗೆ ನಿಮ್ಮ ಅನಿಸಿಕೆ ನನ್ನ ಅನಿಸಿಕೆಯೂ ಕೂಡ. ಆಗ ಬರೆದಿದ್ದು ಈಗಲೂ ಎಲ್ಲರಿಗೂ ಇಷ್ಟವಾಗುತ್ತಿದೆಯಲ್ಲ ಅದೇ ಖುಷಿ.

ಪ್ರತಿಕ್ರಿಯೆಗೆ ಧನ್ಯವಾದಗಳು.

shivu.k said...

ಬಾಲು ಸರ್,

ಧನ್ಯವಾದಗಳು.

Nisha said...

kavana thumba chennagide

sunaath said...

ಶಿವು,
ಇಷ್ಟು ಒಳ್ಳೆಯ ಕವನ ಬರೆಯಬಲ್ಲ ನೀವು, ನಿಲ್ಲಿಸಿದ್ದು ಯಾಕೆ? ಕವನದ ಮೇಲಿನ ಚಿತ್ರವೂ ಸಹ ಚೆನ್ನಾಗಿದೆ.

AntharangadaMaathugalu said...

ಶಿವು ಸಾರ್...
ಕವನ ಚೆನ್ನಾಗಿದೆ. ಭಾವವನ್ನು ಪೂರ್ಣ ಅರ್ಥಮಾಡಿಕೊಳ್ಳುವುದು ಯಾರಿಂದ ಸಾಧ್ಯ? ಸಧ್ಯದಲ್ಲೇ ಒಳ್ಳೊಳ್ಳೆಯ ಚಿತ್ರಗಳನ್ನು ನೋಡಲು ನಿಮ್ಮಿಂದಾಗಿ ನಮಗೆ ಸಿಗುತ್ತದೆ. ಕಾಯುತ್ತಿರುತ್ತೇವೆ........
ಶ್ಯಾಮಲ

ದೀಪಸ್ಮಿತಾ said...

ಶಿವು ಸರ್, ನೀವು ಛಾಯಾಗ್ರಾಹಕ, ಬ್ಲಾಗಿಗ, ಕತೆಗಾರ ಎಂದಷ್ಟೆ ಅಂದುಕೊಂಡಿದ್ದೆ. ಕವಿಯೂ ಕೂಡ ಎಂದು ತಿಳಿದು ತುಂಬಾ ಸಂತೋಷವಾಗುತ್ತಿದೆ. ಅಭಿನಂದನೆಗಳು

Prabhuraj Moogi said...

ಇರುಳಂಕಣವಾಯ್ತು ನಿದ್ರೆಯ ಕನಸು, ಈ ಸಾಲು ಬಹಳ ಹಿಡಿಸಿತು.. ಅದು ನಿಜಾವಗಲೂ ಹಗಲಿನ ಬಗೆಗಿನ ಇರುಳ ಅಂಕಣವೇ ಅಲ್ಲವೇ...
ಬಹಳ ದಿನಗಳ ಬಂದು ಎಲ್ಲ ಈವತ್ತೇ ನೋಡಿದೆ, ಈ ಕೆಲ್ಸದೊತ್ತಡದಲ್ಲಿ ಬ್ಲಾಗಿಂಗ ಸಮಯ ಸಿಗುತ್ತಿಲ್ಲ, ಹಿಂದಿನ ಲೇಖನದಲ್ಲಿನ ಚಿತ್ರಗಳಂತೂ ಮನ ಕಲಕುವಂತಿದ್ದವು.. ಅಲ್ಲ ಏನು ಛಲ ಅಂತೀನಿ ಅವರದು... ಆ ಕಾಲಿಲ್ಲದೇ ಲಾಂಗ್ ಜಂಪ್ ಮಾಡಿದ ಫೊಟೊ ನೋಡಿ ಮನಸಿದ್ದರೆ ಮಾರ್ಗ್ ಅನ್ನೊದು ಸುಳ್ಳಲ್ಲ ಅನಿಸಿತು...

shivu.k said...

Nisha ಮೇಡಮ್,

ನನ್ನ ಬ್ಲಾಗಿಗೆ ಸ್ವಾಗತ. ಕವನ ಮೆಚ್ಚಿದ್ದಕ್ಕೆ ಥ್ಯಾಂಕ್ಸ್...

shivu.k said...

ಸುನಾಥ್ ಸರ್,

ಆಗ ಸದಾ ಕವನ ಬರೆಯುತ್ತಿದ್ದೆ. ಆದ್ರೆ ಸದ್ಯ ಖಂಡಿತ ಕವನ ಬರೆಯುವ ತನ್ಮಯತೆ ಮತ್ತು ಮನಸ್ಸು ಇಲ್ಲ. ಆದ್ರೆ ನನಗೆ ಗೊತ್ತಿಲ್ಲ ಸರ್ ಯಾವಾಗ ಏನು ಮಾಡಲು ಮನಸ್ಸು ಸೆಳೆಯುತ್ತದೋ ಅದನ್ನು ಮಾಡುತ್ತ enjoy ಮಾಡುವುದಷ್ಟೇ ನನಗೆ ಬೇಕಿರುವುದು. ಮುಂದೆ ಸದಾ ಕವನದ ಹಿಂದೆ ಬೀಳಬಹುದೇನೋ...

ಕವನ ಇಷ್ಟಪಟ್ಟಿದ್ದಕ್ಕೆ ಥ್ಯಾಂಕ್ಸ್..

shivu.k said...

ಶ್ಯಾಮಲ ಮೇಡಮ್,

ನೀವು ಕವನವನ್ನು ಇಷ್ಟಪಟ್ಟಿದ್ದೀರಿ ಅಂತ ಗೊತ್ತಾಯ್ತು. ಜೊತೆಗೆ ಬರಹ ಜಾಸ್ತಿಯಾಯ್ತು ಸ್ವಲ್ಪ ಫೋಟೋಗಳು ಬೇಕು ಅಂತ ಪರೋಕ್ಷವಾಗಿ ಹೇಳುತ್ತಿದ್ದೀರಿ. ಖಂಡಿತ ಮುಂದಿನ ಲೇಖನದಲ್ಲಿ ಪೋಟೊಗಳನ್ನೇ ಕೊಡುತ್ತೇನೆ.

ಆದ್ರೆ ಒಂದು ಮನವಿ. ನನ್ನ ಮನಸ್ಸಿನಲ್ಲಿ ಒಂದು ಲೇಖನ ಹೊರಬರಲು ಹಾತೊರೆಯುತ್ತಿದೆ. ಈಗ ಪದವಿ ಕಾಲೇಜುಗಳಿಗೆ ರಜ ಸಮಯ. ನಾನು ದ್ವಿತಿಯ[B.com] ಪದವಿಯಲ್ಲಿದ್ದು ರಜೆಯ ಸಮಯದಲ್ಲಿ NSS ಕ್ಯಾಂಪಿಗೆ ಹೋಗಿದ್ದು ಅಲ್ಲಿ ನಡೆದ ಕೆಲವು ಅನಿರೀಕ್ಷಿತ ಘಟನೆಗಳು, ಕೆಲವು ಪ್ರೀತಿ ಪ್ರೇಮಗಳು, ಸೂಜಿ ಕತೆ, ಗಲಾಟೆ,ಗದ್ದಲಗಳು, ಶಸ್ತ್ರಚಿಕಿತ್ಸೆ, ಇತ್ಯಾದಿಗಳ ಬಗ್ಗೆ ಬರೆಯಬೇಕೆಂದು ಮನಸ್ಸು ಹಾತೊರೆಯುತ್ತಿದೆ. ನೋಡಬೇಕು ಯಾವುದು ಮೊದಲು ಬರುತ್ತೋ ಅದನ್ನು ಬ್ಲಾಗಿಗೆ ಹಾಕುತ್ತೇನೆ.

ಧನ್ಯವಾದಗಳು.

shivu.k said...

ದೀಪಸ್ಮಿತ ಸರ್,

ಸದ್ಯಕ್ಕೆ ನೀವು ನನ್ನ ಕವನವನ್ನು ಇಷ್ಟಪಟ್ಟಿದ್ದೀರಿ. ನನಗೆ ನಾನು ಏನು ಅಂತ ಗೊತ್ತಾಗುತ್ತಿಲ್ಲ. ಆದ್ರೆ ಇಷ್ಟಪಟ್ಟ ವಿಚಾರದ ಹಿಂದೆ ಬೀಳುವುದಂತೂ ಖಚಿತ. ಅದರಿಂದ ಖುಷಿಯಂತೂ ಸಿಗುತ್ತದೆ.
ಧನ್ಯವಾದಗಳು.

shivu.k said...

ಪ್ರಭು,

"ಇರುಳಂಕಣವಾಯ್ತು ನಿದ್ರೆಯ ಕನಸು" ಈ ಪದ ಪ್ರಯೋಗದ ಹೇಗೆ ಬಂತು ಗೊತ್ತಿಲ್ಲ. ಆಗ ಸುಮ್ಮನೆ ಕವನ ಬರೆಯುತ್ತಿದ್ದೆ. ಈಗ ಅದೇ ಪದಗಳ ಸಾಲಿನ ಅರ್ಥವನ್ನು ನೋಡಿದಾಗ ನಿಜಕ್ಕೂ ಕಲ್ಪನೆಯಲ್ಲಿ ಜಾರಿದಂತಾಗುತ್ತದೆ.

ಮತ್ತೆ ಹಗಲು ನಾವು ಕಾಣುವ ನಿತ್ಯ ಸತ್ಯಗಳನ್ನೇ ರಾತ್ರಿ ನಿದ್ರೆಯಲ್ಲಿ[ಇರುಳ ಮೈದಾನದಲ್ಲಿ]ಮತ್ತೆ ಮತ್ತೆ ಕಾಣುತ್ತೇವಲ್ಲ. ನೀವು ಗಮನಿಸಿದರೆ ಗೊತ್ತಾಗುತ್ತದೆ.

ಮತ್ತೆ ನನ್ನ ಹಿಂದಿನ ಲೇಖನದ ಚಿತ್ರಗಳನ್ನು ನೋಡಿದಾಗ ನೀವು ಹೇಳಿದಂತೆ ಅವರ ಸಾಧನೆ ವರ್ಣಿಸಲು ಸಾಧ್ಯವಿಲ್ಲ. ಎರಡು ಕಾಲಿಲ್ಲದ ಜರ್ಮನಿ ಹುಡುಗಿ ಓಡಿಬಂದು ಲಾಂಗ್ ಜಂಪ್ ಮಾಡಿದಾಗ ನಾನೊಮ್ಮೆ ಆಕೆಯ ಪಕ್ಕ ಪೋಟೊ ತೆಗೆಯಲು ಕುಳಿತಿದ್ದೆ. ಜಂಪ್ ಮಾಡಿದ ಮೇಲೆ ಕಾಲು ಮಡಿಚಲು ಆಗದೆ[ಎರಡು ಕಾಲಿಲ್ಲ] ತೆವಳಿಕೊಂಡು ಪಕ್ಕ ಬಂದು "please give space" ಅಂತ ನನಗೆ ಹೇಳಿ ನಿದಾನವಾಗಿ ಎದ್ದು ನಿಂತು, ನನಗೆ "ಥ್ಯಾಂಕ್ಸ್" ಹೇಳಿ ನಂತರ ನಡೆದು ಹೋದದ್ದು ನಾನು ಕಣ್ಣಾರೆ ನೋಡಿ ನನಗೆ ಏನು ಹೇಳಲಾಗಲಿಲ್ಲ. ಅಲ್ಲಿನ ಕೆಲವು ಅನುಭವಗಳು ವಿವರಿಸಲು ಆಗದಂತವು.

ಧನ್ಯವಾದಗಳು.

ಸೀತಾರಾಮ. ಕೆ. / SITARAM.K said...

olle kavana bhavanegalanna vimarshisuvalli yashaswiyaagide kavana.

shivu.k said...

ಸೀತಾರಾಮ್ ಕೆ ಸರ್,

ಕವನವನ್ನು ಇಷ್ಟಪಟ್ಟಿದ್ದಕ್ಕೆ ಥ್ಯಾಂಕ್ಸ್..

ಸುಧೇಶ್ ಶೆಟ್ಟಿ said...

ತು೦ಬಾ ಲೇಟಾಗಿ ಬರುತ್ತಿದ್ದೇನೆ ಶಿವಣ್ಣ... ಕವಿತೆ ಇಷ್ಟ ಆಯಿತು ಎ೦ದು ಹೇಗೆ ಹೇಳದಿರಲಿ.... ಭಾವನೆಗಳೇ ಎಲ್ಲಕ್ಕೂ ಮೂಲ ಹೇತು ಅಲ್ವೇ...?

shivu.k said...

ಸುಧೇಶ್,

ಕವನ ಮೆಚ್ಚಿದ್ದಕ್ಕೆ ಥ್ಯಾಂಕ್ಸ್...ನಿಮ್ಮಂತೆ ನನಗೂ ಕೆಲಸ ಹೆಚ್ಚು. ಅದರಿಂದಾಗಿ ನಿಮ್ಮ ಹೊಸ ಲೇಖನಕ್ಕೆ ಬರಲಾಗಲಿಲ್ಲ. ಬಿಡುವು ಮಾಡಿಕೊಂಡು ಓದುತ್ತೇನೆ...

Pradeep said...

ಸರ್.. ಚೆನ್ನಾಗಿದೆ! :-) ಇನ್ನೂ ಬರಲಿ!