Tuesday, April 6, 2010

ಬ್ಲಾಗ್ ಲೋಕದ ಮನಸ್ಸು ದೊಡ್ಡದು.

ಫೋನಿಗೆ ಅಥವ ಎದುರಿಗೆ ಸಿಕ್ಕಾಗ ಮನಃಪೂರ್ವಕವಾಗಿ ಶಿವಣ್ಣ ಅಂತಲೇ ಕರೆಯುವ ನವೀನ್ ಅದೊಂದು ಮದುವೆ ಮನೆಯಲ್ಲಿ ದೊಡ್ಡ ಮಟ್ಟದ ಚೆಕ್ [ನನಗೆ, ನವೀನ್‍ಗೆ ಮತ್ತು ಅಪಘಾತಕೊಳ್ಳಗಾದ ವಿಶ್ವನಾಥನಿಗಂತೂ ದೊಡ್ದಮೊತ್ತ]ನನ್ನ ಕೈಗಿತ್ತಾಗ ಅಚ್ಚರಿಯ ಜೊತೆಗೆ ಹೀಗಾಗನ್ನಿಸಿದ್ದು ನಿಜ. ಈ ಲೇಖನವನ್ನು ನಾನು ಬರೆಯಬಾರದೆಂದುಕೊಂಡು ಅದೆಷ್ಟೋ ಬಾರಿ ಮುಂದೂಡಿದರೂ ನವೀನ್ ನನ್ನ ಕೈಗೆ ಆ ಚೆಕ್ ಕೊಟ್ಟಾಗ ಬರೆಯಲೇ ಬೇಕೆನಿಸಿತ್ತು.

ದಿನಪತ್ರಿಕೆಯ "ವೆಂಡರ್" ವಿಶ್ವನಾಥನಿಗೆ ಅಪಘಾತವಾದಾಗ ನಾನು ಸಹಜವಾದ ಕಾಳಜಿಯಿಂದ ಒಂದು ಪುಟ್ಟ ಲೇಖನವನ್ನು ಬರೆದು ಬ್ಲಾಗಿನಲ್ಲಿ ಹಾಕಿದೆ. ಆಗ ನನಗೆ ಕೇವಲ ಒಂದು ಸಣ್ಣ ಕಾಳಜಿಯುಕ್ತ ಸುದ್ದಿಯಾಗಿ ಬ್ಲಾಗಿನಲ್ಲಿ ಹಾಕಬೇಕೆನ್ನುವುದಷ್ಟೇ ನನ್ನ ಉದ್ದೇಶವಾಗಿತ್ತು. ಆತನ ವಿವರಗಳನ್ನು ಪಡೆದು ಬ್ಲಾಗಿನಲ್ಲಿ ಹಾಕಿದ ಮರುಕ್ಷಣವೇ ಶ್ವೇತರವರು ಮೊದಲು ಪ್ರತಿಕ್ರಿಯಿಸಿದ್ದು ಹೀಗೆ. ವಿಶ್ವನಾಥನಿಗೆ ನನ್ನ ಕೈಲಾದ ಸಹಾಯ ಮಾಡುತ್ತೇನೆ ಅವರ ಬ್ಯಾಂಕ್ ಅಕೌಂಟ್ ನಂಬರ್ ಪಡೆದು ಬ್ಲಾಗಿನಲ್ಲಿ ಹಾಕಿ ಅಂತ. ಇದನ್ನು ನಿರೀಕ್ಷಿಸದಿದ್ದರೂ ಅವರ ಪ್ರತಿಕ್ರಿಯೆಯಿಂದಾಗಿ ಕೂಡಲೇ ಆತ ಆಡ್ಮಿಟ್ ಆಗಿದ್ದ ಪ್ರಿಸ್ಟೇನ್ ಆಸ್ಪತ್ರೆಗೆ ಹೋಗಿ ಆತನ ಬ್ಯಾಂಕ್ ಅಕೌಂಟ್ ನಂಬರ್ ಮತ್ತು ಇತರ ಪುಟ್ಟ ವಿವರಗಳನ್ನು ಹಾಕಿದೆ. ಆಮೇಲೆ ನಡೆದಿದ್ದು ಅಚ್ಚರಿಯ ಸಂಗತಿ. ಹತ್ತಾರು ಮೇಲ್‍ಗಳು ಬಂದವು. ಮೊದಲಿಗೆ ಹೊಸಪೇಟೆಯ ಬ್ಲಾಗ್ ಗೆಳೆಯರಾದ ಸೀತಾರಾಂ ಸರ್ ಅವನ ಬ್ಯಾಂಕ್ ಖಾತೆಗೆ ಹಣ ತುಂಬಿದರು. ಕುವೈಟಿನಿಂದ ಗೆಳೆಯ ಡಾ.ಆಜಾದ್ ಹಣ ಸಹಾಯದ ಜೊತೆಗೆ ವಿಶ್ವನ ಬಗ್ಗೆ ಚಾಟಿನಲ್ಲಿ ವಿಚಾರಿಸಿಕೊಳ್ಳುತ್ತಿದ್ದರು. ಉಮೇಶ್ ದೇಸಾಯಿ, ಕೊಪ್ಪಳದ ಸಲೀಮ್, ಮೈಸೂರಿನಿಂದ ಜಿ.ಮಾದವ್, ಲೋಕೇಶ್ ಲಕ್ಷ್ಮಿದೇವಿ, ಬೆಂಗಳೂರಿನಿಂದ ಸುರೇಶ್, ಹೀಗೆ ಅನೇಕರು ಅವನ ಖಾತೆ ಹಣ ಹಾಕಿದರು. ಮತ್ತೆ ನೂರಾರು ನನ್ನ ಬ್ಲಾಗ್ ಗೆಳೆಯರು ಅವನ ಅರೋಗ್ಯವನ್ನು ನಿತ್ಯ ವಿಚಾರಿಸಿ ಮೇಲ್ ಮಾಡುತ್ತಿದ್ದರು. ಫೋನ್ ಮಾಡುತ್ತಿದ್ದರು. ಅವನು ಬೇಗ ಗುಣಮುಖನಾಗಲಿ ಅಂತ ಆರೈಸುತ್ತಿದ್ದರು. ಇವೆಲ್ಲದರ ಪ್ರತಿಫಲವೇ ಏನೋ ಸದ್ಯ ವಿಶ್ವ ಗುಣಮುಖನಾಗಿದ್ದಾನೆ. ಆವನ ಶಸ್ತ್ರಚಿಕಿತ್ಸೆ, ಆಸ್ಪತ್ರೆ ಖರ್ಚಿನ ನಾಲ್ಕನೇ ಒಂದು ಭಾಗವನ್ನು ನಮ್ಮ ಬ್ಲಾಗ್ ಗೆಳೆಯರ ಬಳಗ ತುಂಬಿದೆ. ಇನ್ನೂ ಕೆಲವೇ ದಿನಗಳಲ್ಲಿ ಮೊದಲಿನಂತೆ ಆಗುತ್ತಾನೆ ತನ್ನ ನಿತ್ಯ ಕೆಲಸದಲ್ಲಿ ತೊಡಗಿಕೊಳ್ಳುತ್ತಾನೆ. ಇಂಥ ಇಷ್ಟು ಒಳ್ಳೆಯ ಮನಸಿನ, ಕಾಳಜಿಯುತ, ಮನಃಪೂರ್ವಕವಾಗಿ ತನು,ಮನ, ಧನ ಸಹಾಯ ಹೊರಗಿನ ಯಾವ ಮಾದ್ಯಮದಲ್ಲಿದೆ ತೋರಿಸಿ ಸ್ವಾಮಿ!

ಇದೇ ವಿಚಾರವಾಗಿ ಮೊದಲಿಗೆ ಪತ್ರಿಕೆ ಮಾದ್ಯಮಗಳಿಗೆ ಸುದ್ಧಿ ಮುಟ್ಟಿಸಿದೆ. ನನಗೆ ಗೊತ್ತಿರುವ ಎಲ್ಲಾ ಪತ್ರಿಕಾ ಪ್ರತಿನಿಧಿಗಳು, ವರದಿಗಾರರು, ಡೆಸ್ಕ್ ಆಪರೇಟರುಗಳು, ಹೀಗೆ ಪ್ರತಿಯೊಬ್ಬರಿಗೂ ಮೆಸೇಜ್ ಮಾಡಿದೆ. ಮೇಲ್ ಮಾಡಿದೆ. ಯಾರೊಬ್ಬರಿಂದಲೂ ಸರಿಯಾದ ಪ್ರತಿಕ್ರಿಯೆಯಿಲ್ಲ, ಉತ್ಸಾಹವಿಲ್ಲ. ಮೊದಲಿಗೆ ಕಾಳಜಿಯಂತೂ ಇಲ್ಲವೇ ಇಲ್ಲ. ಏಕೆಂದರೆ ನಮ್ಮ ವಿಶ್ವನೇನು ದೊಡ್ಡ ಸೆಲಬ್ರಟಿಯೇ, ಸಿನಿಮಾನಟನೇ, ಪ್ರಖ್ಯಾತ ಕ್ರೀಡಾಪಟುವೆ, ಅಥವ ರಾಜ್ಯ, ರಾಷ್ಟ್ರಮಟ್ಟದ ರಾಜಕಾರಣಿಯೇ! ಯಾವುದ ಅಲ್ಲವಲ್ಲ. ಕರ್ನಾಟಕದ ಆರು ಕೋಟಿ ಜನಸಂಖ್ಯೆಯಲ್ಲಿ ಒಬ್ಬನಾದ ಬಡ ದಿನಪತ್ರಿಕೆ ವಿತರಕ. ಆತನಿಗೆ ಸಹಾಯ ನೀಡದಿದ್ದರೂ ತೊಂದರೆಯಿಲ್ಲ. ದಿನಪತ್ರಿಕೆ ವಿತರಿಸುವ "ವೆಂಡರ್" ಆಗಿರುವುದರಿಂದ ಪತ್ರಿಕಾ ಮಾದ್ಯಮವೆನ್ನುವ ಅವಿಭಕ್ತ ಕುಟುಂಬದ ಸದಸ್ಯನೇ ತಾನೇ!. ಅದಕ್ಕಾಗಿಯಾದರೂ ಕೊನೇ ಪಕ್ಷ ಒಂದು ಕಾಳಜಿಯುಕ್ತ, ಸಹಾನುಭೂತಿಯ ಸುದ್ಧಿಯನ್ನು ಸಣ್ಣಕಾಲಂನಲ್ಲಿ ನಮ್ಮ ಪ್ರಖ್ಯಾತ ಪತ್ರಿಕೆಗಳು ಹಾಕಬಹುದಿತ್ತು. ಕನ್ನಡಪ್ರಭ ಮತ್ತು ಇಂಗ್ಲೀಷಿನ ಡಿ.ಎನ್.ಎ ಪತ್ರಿಕೆಗಳು ಮಾತ್ರ ವಿಶ್ವನ ವಿಚಾರವಾಗಿ ಸಣ್ಣ ಕಾಲಂನಲ್ಲಿ ಪ್ರಕಟಿಸಿದ್ದು ಬಿಟ್ಟರೆ ಉಳಿದ ಬೆಂಗಳೂರಿನ ಪತ್ರಿಕೆಗಳ್ಯಾವುವು ಕೂಡ ವಿಶ್ವನ ಬಗ್ಗೆ ಕಾಳಜಿವಹಿಸಲಿಲ್ಲ. ನಿಮಗೆ ತಿಳಿದಿರಲಿ ಅಂತ ಒಂದು ವಿಚಾರವನ್ನು ತಿಳಿಸುತ್ತೇನೆ. ಈ ವಿಚಾರವನ್ನು ನಾನು ಇಂಗ್ಲೀಷಿನ ನಂಬರ್ ಒನ್ ಪತ್ರಿಕೆಯೆಂದು ಸ್ವಘೋಷಿತ ಪತ್ರಿಕೆಗೆ ಇಂಥ ವಿಚಾರವನ್ನು ಹಾಕಬೇಕಾದರೆ ನಾವೇ ಹಣಕೊಡಬೇಕಂತೆ! ಅವರದು ಪ್ರತಿ ಆಕ್ಷರಕ್ಕೂ ಹಣದ ಲೆಕ್ಕಚಾರವಿದೆಯಂತೆ! ಆ ಪತ್ರಿಕೆ ಸಂಪಾದಕೀಯ ವಿಭಾಗಕ್ಕೆ ಹೊರಗಿನವರಿಗೆ ಹೋಗಲು ಸಾಧ್ಯವೇ ಇಲ್ಲ. ಏಕೆಂದರೆ ಅದು ಒಂಥರ ಸಾಪ್ಟ್ ವೇರ್ ಕಂಪನಿಯ ರೀತಿಯ ಸೆಕ್ಯುರಿಟಿ ಇದೆ. ಇರಲಿಬಿಡಿ ಅಷ್ಟು ದೊಡ್ಡ ಕಛೇರಿಗೆ ಬೇಕು ಒಪ್ಪಿಕೊಳ್ಳುತ್ತೇನೆ. ಆದ್ರೆ ನಾವು ಯಾವುದೇ ಸುದ್ಧಿಯ ಕವರನ್ನು ಅಲ್ಲಿ ಹೊರಗೆ ಕುಳಿತಿರುವ ಸೆಕ್ಯುರಿಟಿ ಗಾರ್ಡ್ ಕೈಗೆ ಕೊಟ್ಟುಬರಬೇಕು. ಅವನೇ ಸಂಪಾದಕನಂತೆ ನಮ್ಮ ಬಳಿ ಎಲ್ಲಾ ವಿಚಾರಿಸುತ್ತಾನೆ. ಕೊನೆಗೆ ತಲುಪಿಸುತ್ತೇನೆ ಎಂದು ಹೇಳುತ್ತಾನೆ. ಕಳೆದ ನಾಲ್ಕು ವರ್ಷಗಳಿಂದ ನಾನು ತಲುಪಿಸಿದ ಯಾವ ಸುದ್ಧಿಯೂ ಆ ಪತ್ರಿಕೆಯಲ್ಲಿ ಬರಲಿಲ್ಲ ಏಕೆಂದರೆ ನಾನು ಸುದ್ಧಿಯನ್ನು ಹಾಕಲು ಹಣಕೊಡಲಿಲ್ಲ. ಸದ್ಯದ ಪರಿಸ್ಥಿತಿಯಲ್ಲಿ ನಮ್ಮ ವಿಶ್ವ ಅದೇ ದಿನಪತ್ರಿಕೆಯನ್ನು ನೂರಕ್ಕೂ ಹೆಚ್ಚು ಮನೆಗಳಿಗೆ ಮುಟ್ಟಿಸುತ್ತಾನೆ. ಇನ್ನುಳಿದ ದಿನಪತ್ರಿಕೆಗಳ ಕಚೇರಿಗಳಲ್ಲಿ ಒಳಗೆ ಹೋಗಿ ವಿಚಾರವಿನಿಮಯ, ಸುದ್ಧಿಗಳನ್ನು ನೇರವಾಗಿ ಮುಟ್ಟಿಸುವ ಅವಕಾಶವಿದೆಯಾದರೂ ಇಂಥ ಸುದ್ಧಿಗಳು ಬರುವುದಿಲ್ಲ. ಏಕೆಂದರೆ ಅಲ್ಲಿರುವ ವರದಿಗಾರರನ್ನು, ಡೆಸ್ಕ್ ಆಪರೇಟರುಗಳನ್ನು, ಉಪಸಂಪಾದಕರನ್ನು ಮರ್ಜಿ ಮಾಡಬೇಕು. ಇದು ಸುದ್ಧಿ ವಿಚಾರಕ್ಕೆ ಮಾತ್ರ ನಿಲ್ಲುವುದಿಲ್ಲ. ನೀವು ಪ್ರತಿಭಾವಂತರಾಗಿ ಒಳ್ಳೆಯ ಲೇಖನ, ಫೋಟೊ ಚಿತ್ರ ಇತ್ಯಾದಿಗಳನ್ನು ಇಷ್ಟಪಟ್ಟು ಕಷ್ಟಪಟ್ಟು ಮಾಡಿದ್ದರೆ ಅದನ್ನು ಪತ್ರಿಕೆಯಲ್ಲಿ ಪ್ರಕಟವಾಗಬೇಕಾದರೆ ಅದು ಸುಲಭವಲ್ಲ. ಏಕೆಂದರೆ ಅಲ್ಲಿ ನಿಮಗೆ ಪರಿಚಯವಿರಬೇಕು. ನಿಮ್ಮಿಂದ ಅವರಿಗೆ ಉಪಯೋಗವಾಗಬೇಕು. ನೀವೆಷ್ಟೇ ಪ್ರತಿಭಾವಂತರಾದರೂ ಸುಮ್ಮಸುಮ್ಮನೇ ಪತ್ರಿಕೆಯಲ್ಲಿ ನಿಮ್ಮ ಲೇಖನ, ಫೋಟೋಗಳನ್ನು ಪ್ರಕಟಿಸಲು ಅವರೇನು ದಡ್ಡರೇ! ಹಾಗೂ ಹೀಗೂ ನಿಮ್ಮ ಲೇಖನ, ಫೋಟೊಗಳನ್ನು ಅನೇಕ ಬಾರಿ ಹಾಕುತ್ತಾರೆ ಅಂದುಕೊಂಡರೂ ನೀವು ಜನಪ್ರಿಯರಾಗಿಬಿಟ್ಟರೇ ಅವರನ್ನು ಮೀರಿಸಿ ಜನಪ್ರಿಯರಾಗಿಬಿಟ್ಟರೆ ಮುಂದೆ ನಿಮ್ಮ ಯಾವ ಲೇಖನಗಳು, ಚಿತ್ರಗಳು, ವ್ಯಂಗ್ಯಚಿತ್ರಗಳು ಪ್ರಕಟವಾಗುವುದಿಲ್ಲ. ಆದರೂ ನೀವು ಹೋದರೆ ಚೆನ್ನಾಗಿ ಮಾತಾಡಿಸುತ್ತಾರೆ. ಹೊಸ ಲೇಖನವನ್ನು ಕೊಟ್ಟರೆ ನಮ್ಮ ಕಚೇರಿಯವರೇ, ವರದಿಗಾರರೇ ಮಾಡುತ್ತಾರಲ್ಲ ಅಂತ ನಿಮ್ಮನ್ನು ನಿರಾಸೆಗೊಳಿಸುತ್ತಾರೆ. ಅದು ಯಾವ ಮಟ್ಟದ ಪರಿಣಾಮ ಬೀರುತ್ತದೆಂದರೆ ನೀವು ಬರೆಯುವುದನ್ನೇ ನಿಲ್ಲಿಸುತ್ತೀರಿ. ನನ್ನ ಅನೇಕ ಪ್ರತಿಭಾವಂತ ಗೆಳೆಯರು ಸದ್ಯ ಇದೇ ಕಾರಣದಿಂದಾಗಿ ಬರೆಯುವುದನ್ನು ನಿಲ್ಲಿಸಿದ್ದಾರೆ.

ನೀವೇ ಪತ್ರಿಕೆಯಲ್ಲಿ ಓದಿರುವಂತೆ ಎಷ್ಟು ಜನ ದಿನಪತ್ರಿಕೆ ಹಂಚುವ ಹುಡುಗರು, ವೆಂಡರುಗಳು ಅಪಘಾತದಲ್ಲಿ ಸತ್ಯ ಸುದ್ಧಿ ಬಂದಿದೆ ಹೇಳಿ. ಅದೇ ಯಡಿಯೂರಪ್ಪನವರು ಸೈಕಲ್ಲಿನಿಂದ ಬೀಳುವ ದೃಶ್ಯ ರಾಷ್ಟ್ರವ್ಯಾಪಿ ಸುದ್ಧಿಯಾಗುತ್ತದೆ. ಇಷ್ಟೆಲ್ಲಾ ಹೇಳಿದ ಮೇಲೆ ನಮ್ಮ ವಿಶ್ವನಂಥವರಿಗೆ ಪತ್ರಿಕಾ ಮಾದ್ಯಮದಿಂದ ಸಹಾಯ ಸಾಧ್ಯವೇ? ಇನ್ನೂ ಟಿ.ವಿ ಮಾಧ್ಯಮವೂ ಇದಕ್ಕಿಂತ ಬೇರೆಯಲ್ಲ. ಅವರಿಗೆ ಟಿ ಆರ್ ಪಿ ಹೆಚ್ಚುತ್ತಿರಬೇಕು. ನಮ್ಮ ವಿಶ್ವನಿಗೆ ಚಾನಲ್ಲುಗಳ ಟಿ ಅರ್ ಪಿ ಹೆಚ್ಚಿಸಲು ಸಾಧ್ಯವೇ?

ನಿಮಗೆ ತಿಳಿದಿರಲಿ ಅಂತ ಮತ್ತೊಂದು ವಿಚಾರವನ್ನು ತಿಳಿಸುತ್ತೇನೆ. ನನ್ನಂಥ ವಿಶ್ವನಂಥ ಸಾವಿರಾರು "ವೆಂಡರುಗಳು" ನಿತ್ಯ ಬೆಳಗಿನ ದಿನಪತ್ರಿಕೆ ವಿತರಣೆ ಕೆಲಸದಲ್ಲಿ ತೊಡಗಿ ನಮ್ಮದೇ ಟೆನ್ಷನ್‍ನಲ್ಲಿರುವಾಗ ಆ ಕ್ಷಣ ಹಾಜರಾಗುತ್ತಾರೆ ಇದೇ ಪತ್ರಿಕೆಗಳ ಸರ್ಕುಲೇಷನ್ ವಿಭಾಗದ ಪ್ರತಿನಿಧಿಗಳು. ನಮ್ಮನ್ನೂ ಯಾವ ರೀತಿ ಓಲೈಸುತ್ತಾರೆಂದರೆ ಬೇರೆಲ್ಲಾ ಪತ್ರಿಕೆಗಳನ್ನು ನಿಲ್ಲಿಸಿ ಅವರ ಪತ್ರಿಕೆಯನ್ನೇ ಗ್ರಾಹಕರಿಗೆ ಮುಟ್ಟಿಸಬೇಕಂತೆ. ಅದಕ್ಕೆ ಏನೆಲ್ಲಾ ತಂತ್ರ ಪ್ರತಿತಂತ್ರ. ಒಟ್ಟಾರೆ ಮುಂಜಾನೆ ಲೋಕದಲ್ಲಿ ಒಬ್ಬರ ಕಾಲೆಳೆದು ಬೀಳಿಸಿ ಇವರು ಎದ್ದು ನಿಲ್ಲಲೂ ಇವರು ಮಾಡದಿದ್ದ ಕುತಂತ್ರವೇ ಇಲ್ಲ. ಆದ್ರೆ ನಮ್ಮಲ್ಲಿ ಯಾರಿಗೆ ಅಪಘಾತವಾಗಲಿ, ತೊಂದರೆಯಾಗಲಿ, ವಿಚಾರ ತಿಳಿದ ತಕ್ಷಣ "ಅರೆರೆ...ಅಯ್ಯೋ ಪಾಪ ತುಂಬಾ ಒಳ್ಳೆ ಹುಡುಗ ಕಣ್ರೀ..ಹೀಗಾಗಬಾರದಿತ್ತು" ಅಂತ ಸಹಾನುಭೂತಿ ವ್ಯಕ್ತಪಡಿಸಿ ಸುಮ್ಮನಾಗಿಬಿಡುತ್ತಾರೆ. ಮರುದಿನ ಆತ ಏನಾದನೆಂದು ಯಾರಿಗೂ ತಿಳಿದುಕೊಳ್ಳುವ ಕಾಳಜಿಯಿಲ್ಲ. ಇದೇ ಪ್ರತಿನಿಧಿಗಳಿಗೆ ವಿಶ್ವನ ವಿಚಾರವನ್ನು ಮೊದಲು ಮುಟ್ಟಿಸಿದ್ದು. ಒಬ್ಬೊಬ್ಬರದು ಒಂದೊಂದು ರೀತಿ. ಒಬ್ಬ ವಿಶ್ವನಿಂದ ಒಂದು ಲೆಟರ್ ತರಲು ಸಾಧ್ಯವೇ ಅಂತ ಕೇಳಿದರೆ, ಮತ್ತೊಬ್ಬ ತಕ್ಷಣವೇ ಹೋಗಿ ಸಹಾಯ ಮಾಡುವಂತೆ ಮಾತಾಡುತ್ತಾನೆ. ಆದ್ರೆ ಪಲಿತಾಂಶ ಮಾತ್ರ ಸೊನ್ನೆ.

ಈ ಲೇಖನದಲ್ಲಿ ನನ್ನ ವೈಯಕ್ತಿಕ ಅನುಭವಗಳನ್ನು ಅನಿಸಿಕೆಗಳನ್ನು ಹೇಳಿದ್ದೇನೆ. ಮತ್ತೆ ಎಲ್ಲಾ ದಿನಪತ್ರಿಕೆಗಳು ಕೆಟ್ಟವಲ್ಲ. ಅಲ್ಲಿಯೂ ಒಳ್ಳೆಯ ಮನಸ್ಸಿನ ವರದಿಗಾರರಿದ್ದಾರೆ. ಎಲ್ಲರ ಬಗೆಗೂ ಕಾಳಜಿಯುಳ್ಳ ಸಂಪಾದಕರು ಇದ್ದಾರೆ. ಸಮಾಜದ ಸ್ವಾಸ್ಥ ಸುಧಾರಿಸಲು ಸಹಕರಿಸುತ್ತಿದ್ದಾರೆ.

ಈಗ ಹೇಳಿ ಯಾವ ಮಾದ್ಯಮದಲ್ಲಿ ಆತ್ಮೀಯವಾದ ಒಳ್ಳೆಯ ಹೃದಯವಂತಿಕೆಯ ಮನಸ್ಸಿದೆ? ನಮ್ಮ ಬ್ಲಾಗ್ ಲೋಕವಲ್ಲವೇ....ವಿಶ್ವನ ವಿಚಾರವಾಗಿ ತನು, ಮನ ಧನವನ್ನು ಹೃದಯಪೂರ್ವಕವಾಗಿ ಸಹಾಯ ಮಾಡಿದ ನಮ್ಮ ಪರಿಶುದ್ಧ ಬ್ಲಾಗ್ ಲೋಕಕ್ಕೆ ಬ್ಲಾಗ್ ಗೆಳೆಯರಿಗೆ ವಿಶ್ವನ ಪರವಾಗಿ ನಮ್ಮ ದಿನಪತ್ರಿಕೆ ವಿತರಕರ ಪರವಾಗಿ, ಬೀಟ್ ಹುಡುಗರ ಪರವಾಗಿ ಹೃತ್ಪೂರ್ವಕವಾದ ಧನ್ಯವಾದಗಳನ್ನು ಮತ್ತೊಮ್ಮೆ ತಿಳಿಸುತ್ತೇನೆ.

ವಿಶ್ವನಿಗೆ ಅವನ ಬ್ಯಾಂಕ್ ಅಕೌಂಟಿಗೆ ಬಂದ ಹಣವನ್ನು ನಾನು ಖುದ್ದಾಗಿ ತಂದು ಹಾಕಿದ್ದೇನೆಂದು ಕಲೆಕ್ಟ್ ಮಾಡಿದ್ದೇನೆಂದು ಆತ ತಿಳಿದುಕೊಂಡಿದ್ದ. ಅವನಿಗೆ ಈ ಬ್ಲಾಗ್ ಲೋಕದ ಬಗ್ಗೆ ವಿವರಿಸಿ, ಹಣವೆಲ್ಲಾ ಅವನ ಅಕೌಂಟಿಗೆ ಹೇಗೆ ಬಂತು ಅಂತ ಅವನಿಗೆ ವಿವರಿಸಿದೆ. ಅವನಿಗೆ ಆಶ್ಚರ್ಯವಾಗಿ ಇದೆಲ್ಲವೂ ನಿಜವಾ? ಅಂತ ಕೇಳಿದ. ನಾನು ನಿಜವೆಂದೆ. ಹಾಗೆ ನೋಡಿದರೆ ನನಗೆ ಇದೆಲ್ಲಾ ಆಗಿರುವುದು ನಿಜವಾ? ಅಂತ ಅನೇಕ ಬಾರಿ ಅನ್ನಿಸಿದ್ದು ಉಂಟು.

ವಿಶ್ವನಿಗೆ ಹಣ ಯಾವ ಯಾವ ಬ್ಯಾಂಕ್ ನಂಬರುಗಳ ಮೂಲಕ ಬಂದಿದೆ ಎನ್ನುವುದನ್ನು ಕೆಳಗೆ ಬರೆದಿದ್ದೇನೆ. ಇದನ್ನು ಇಲ್ಲಿ ಅಂಕಿಅಂಶ ಸಮೇತ ಕೊಡುವ ಉದ್ದೇಶ ಬೇರೇನು ಅಲ್ಲ. ಒಳ್ಳೆಯ ಮನಸ್ಸಿನಿಂದ ನೀವು ಕಳಿಸಿರುವ ಹಣ ವಿಶ್ವನ ಬ್ಯಾಂಕ್ ಖಾತೆ ಸರಿಯಾಗಿ ಜಮೆಯಾಗಿದೆಯೆನ್ನುವದನ್ನು ತಿಳಿಸಲಿಕ್ಕಾಗಿ ಅದರ ವಿವರಣೆಯನ್ನು ಕೊಡುತ್ತಿದ್ದೇನೆ..
೧] NEFT customer payment inwa ref:SBINH10056032305:---Rs.150
2] By ABB DEP-HOSPET.Dep.slip NO. 0000000/ABB S-------Rs.2480-00
3] By ABB Dep-Bangalore-J.Umesh Desai----------------------Rs.500-00
4] By ABB Dep-Ranibennur By Cash Nanda--------------------RS.101-00
5]By Shivu.k Cheque.7820---೦೧-೦೩-೨೦೧೦--------------------Rs. 3000-00
6]By ABB cheque Dep at 022 Thrru Inst.0088875-26-2-2010.Rs. 1001-00
7]By NEFT Customer payment inwa.
Ref:CITIN10006705947 Date:3-3-2010---------------- Rs. 300-00
8] By ABB Dep-Bangalore-S Cash by suresh-------------------Rs.1480-00
9]By Cash-----------------------------------------------------Rs-500-00
10]By NEFI Customer payment Inwa
Ref: AMBR4060310X4K1---Date:8-3-2010--------------- Rs.5000-00
11] By ABB Dep-Mysore-K B Lokesh
Dep.slip no.0000000/ABB S------------------------------ Rs. 480-00
12]By Inst.no: 468672 on SYNDICATE BANK-
Lakshmi Devi--------------------------------------------- Rs. 100-00
13] By Inst.no.:311894 on Vijaya Bank-------------------------Rs.1000-00
14] Cheque by Navin Indian------Date:5-4-2010--------------Rs.5000-00

ಇಲ್ಲಿರುವ ವಿವರಣೆಗಳೆಲ್ಲಾ ವಿಶ್ವನ ಬ್ಯಾಂಕ್ ಪಾಸ್‍ಬುಕ್‍ನಲ್ಲಿರುವಂತದ್ದು. ಅದನ್ನು ಹಾಗೇ ಇಲ್ಲಿ ಬರೆದಿದ್ದೇನೆ. ಆತನ ಆಸ್ಪತ್ರೆಯ ಖರ್ಚು ವೆಚ್ಚದ ನಾಲ್ಕನೇ ಒಂದು ಭಾಗದ ಹಣವನ್ನು ತುಂಬಿರುವ ನಮ್ಮ ಬ್ಲಾಗ್ ಲೋಕಕ್ಕೆ ಸಾವಿರ ಪ್ರಣಾಮಗಳು ಅಂತ ವಿಶ್ವನಾಥ ಧನ್ಯವಾದಗಳನ್ನು ಹೇಳಿದ್ದಾನೆ.

ಅಪಘಾತಕ್ಕೊಳಗಾಗಿ ಚೇತರಿಸಿಕೊಂಡಿರುವ ವಿಶ್ವ. ಈ ಫೋಟೋ ಎರಡು ದಿನಗಳ ಹಿಂದೆ ಕ್ಲಿಕ್ಕಿಸಿದ್ದು. ಈಗ ಎಂದಿನಂತೆ ಮತ್ತೆ ದಿನಪತ್ರಿಕೆ ವಿತರಣೆ ಕೆಲಸಕ್ಕೆ ಹೋಗುತ್ತಿದ್ದಾನೆ.

----------------------------------------
----------------------------------------

ಕೊನೆಯದಾಗಿ ಮತ್ತೊಂದು ವಿಚಾರವೇನೆಂದರೆ ನನ್ನ ಛಾಯಾಕನ್ನಡಿಯಲ್ಲಿ ಇದು ನೂರನೇ ಲೇಖನ. "ಛಾಯಾಕನ್ನಡಿ"ಯಲ್ಲಿ ನನ್ನ ನೂರನೇ ಲೇಖನ ಬರುತ್ತಿದೆಯೆಂದರೆ ಅದಕ್ಕೆ ನೀವು ನೀಡುತ್ತಿರುವ ತುಂಬು ಹೃದಯದ ಪ್ರೋತ್ಸಾಹ. ನೀವು ಛಾಯಾಕನ್ನಡಿಗೆ ಬಂದು ನೋಡಿ, ಓದಿಖುಷಿಪಟ್ಟು ಈ ಮಟ್ಟದ ಪ್ರೋತ್ಸಾಹ ನೀಡುತ್ತಿದ್ದೀರಿ. ಆಗಾಗ ನಡೆಯುವ ತಪ್ಪುಗಳನ್ನು ತಿದ್ದುತ್ತಿದ್ದೀರಿ. ಅದಕ್ಕಾಗಿ ನನ್ನ ಬ್ಲಾಗ್ ಗೆಳೆಯರಿಗೆಲ್ಲಾ ಹೃತ್ಪೂರ್ವಕ ನಮನಗಳು. ನಿಮ್ಮ ಪ್ರೋತ್ಸಾಹ ಹೀಗೆ ಇರಲಿ...

ಶಿವು.ಕೆ

55 comments:

ಸೀತಾರಾಮ. ಕೆ. / SITARAM.K said...

ಸೆ೦ಚುರಿ ಶಿವೂರವರಿಗೇ ಅಭಿನ೦ದನೆಗಳು. ತಮ್ಮಬ್ಲೊಗ್ ಸ್ಕೋರ್ ನಿರ೦ತರವಾಗಿ ಹರಿಯಲಿ ಎ೦ದು ಹಾರೈಸುತ್ತೆನೆ. ವಿಶ್ವ ಗುಣಮುಖನಾಗಿದ್ದು ಮತ್ತೇ ಕೆಲಸಕ್ಕೆ ರೆಡಿ ಆಗಿದ್ದು ಸ೦ತಸದ ವಿಷಯ. ತಮ್ಮ ಲೇಖನ ಚೆನ್ನಾಗಿ ಮೂಡಿದೆ. ಎಲ್ಲಾ ಸ್ಪ೦ದಿಸಿದ ಬ್ಲೊಗ್-ಮಹನೀಯರಿಗೆ ನಾನೂ ವ೦ದಿಸುವೆ.

Anonymous said...

ಶಿವು, ನನ್ನ ಗಲಾಟೆಯಲ್ಲಿ ನಾನಿದ್ದು ನನಗೆ ಸ್ಪಂದಿಸಲೇ ಆಗಲಿಲ್ಲ.. ಅದಕ್ಕೆ ಈಗ ವಿಷಾದವೆನಿಸುತ್ತಿದೆ. i am sorry.
ವಿಶ್ವನಾಥ ಗುಣವಾಗಿದ್ದು ತುಂಬಾ ಖುಷಿಯ ವಿಚಾರ. ಪತ್ರಿಕಾ ಮಾಧ್ಯಮದಲ್ಲೂ ವ್ಯಾಪಾರೀ ಬುದ್ದಿ ಹಬ್ಬಿದೆ ಅನ್ನೋದು ಮಾತ್ರ ಸುಳ್ಳಲ್ಲ ಅಲ್ವಾ?

ನಿಮ್ಮ ನೂರಕ್ಕೆ ಶುಭಾಶಯಗಳು. ಇದು ಹೀಗೆ ಶತಕಗಳನ್ನು ಬಾರಿಸುತ್ತಾ ದಾಖಲೆಯನ್ನ ನಿರ್ಮಿಸಲಿ ಎಂಬ ಹಾರೈಕೆ!

ವಿ.ರಾ.ಹೆ. said...

ಪತ್ರಿಕಾ ಕಛೇರಿಗಳ ಮರ್ಮಗಳನ್ನು ಸರಿಯಾಗಿ ಬಿಚ್ಚಿಟ್ಟಿದ್ದೀರಿ.

ಅದಿರಲಿ, ಸ್ಪಂದಿಸಿದ ಎಲ್ಲರಿಗೂ, ನಿಮಗೂ ನನ್ನ ವಂದನೆಗಳು ಮತ್ತು ಸೆಂಚುರಿಗೆ ನಿಮಗೆ ಅಭಿನಂದನೆಗಳು.

Unknown said...

ಶಿವೂ ನಿಮಗೆ ಮತ್ತು ಎಲ್ಲಾ ಬ್ಲಾಗ್ ಮಿತ್ರರಿಗೆ ಅಭಿನಂದನೆಗಳು ಮತ್ತು ಧನ್ಯವಾದಗಳು...

ತೇಜಸ್ವಿನಿ ಹೆಗಡೆ said...

ಮೊದಲಿಗೆ ನಿಮ್ಮ ಮಾನವೀಯತೆಗೆ, ಸ್ನೇಹಕ್ಕೆ ಸಿಕ್ಕ ಜಯ ಹಾಗೂ ಸ್ಪಂದನೆಗಳಿಗೆ ಅಭಿನಂದನೆಗಳು. ಒಂದು ಉತ್ತಮ ಕಾರ್ಯ ಮಾಡಲು ಮನಃಸಂಕಲ್ಪ ಮಾಡಿ ಮುನ್ನೆಡೆದರೆ ಎಷ್ಟೇ ತೊಡರು ಬಂದರೂ ದೈವವೂ ಜೊತೆಗೂಡಿ ಅದನ್ನು ಸಾಕಾರಗೊಳಿಸುವುದಂತೆ. ನಿಮ್ಮ ಕಾರ್ಯದಲ್ಲಿ ದಿನಪತ್ರಿಕೆಗಳು ಕೈಕೊಟ್ಟರೇನು ನಿಮ್ಮ ಸಹೃದಯ ಸ್ನೇಹಿತರು ಬ್ಲಾಗಿಗರು, ಪ್ರಾರ್ಥನೆಯ ಮೂಲಕ, ಹಣಕಾಸಿನ ಮೂಲಕ ಉತ್ತಮವಾಗಿ ಸ್ಪಂದಿಸಿದರು. ತುಂಬಾ ಶ್ಲಾಘನೀಯ ಕಾರ್ಯ. ನಿಮ್ಮ ಹಾಗೂ ಎಲ್ಲರ ಸ್ಪಂದನೆಗೆ ನನ್ನ ಪರವಾಗಿಯೂ ಅಭಿನಂದನೆಗಳು.

ಎರಡನೆಯದಾಗಿ ನೂರನೆಯ ಪೋಸ್ಟ್ ಅನ್ನು ಇಷ್ಟೋಳ್ಳೆ ಹೃದಯಸ್ಪರ್ಶಿ ಬರಹದ ಮೂಲಕ ಸಾಕಾರಗೊಳಿಸಿದ್ದಕ್ಕೆ ತುಂಬಾ ಅಭಿನಂದನೆಗಳು.

sunaath said...

ಶಿವು,
ಒಂದು ಒಳ್ಳೆಯ ಕೆಲಸ ಮಾಡಿದ ನಿಮಗೆ ಹಾಗು ನಿಮ್ಮೆಲ್ಲ ಸ್ನೇಹಿತರಿಗೆ ಅಭಿನಂದನೆಗಳು. ಎರಡನೆಯದಾಗಿ, ಶತಕ ಬಾರಿಸಿದ ನಿಮಗೆ ಮತ್ತೊಮ್ಮೆ ಅಭಿನಂದನೆಗಳು.

Subrahmanya said...

ಎಲ್ಲಕ್ಕಿಂತ ಹೆಚ್ಚಾಗಿ, ವಿಶ್ವನಾಥರ ಬಗ್ಗೆ ಹೇಳಿದ ನಿಮ್ಮ ಮನಸು ದೊಡ್ಡದು !. ಎಲ್ಲವೂ ಒಳ್ಳೆಯದೇ ಅಯಿತಲ್ಲಾ...ನಿಮ್ಮ ಲೇಖನದ ಶತಕ ಸಂಭ್ರಮ ಕೂಡಾ ..

ಸಾಗರದಾಚೆಯ ಇಂಚರ said...

ಶಿವೂ ಸರ್
ನಿಮ್ಮ ಅಂತ:ಕರಣ ತುಂಬಾ ದೊಡ್ಡದು
ವಿಶ್ವ ಬೇಗ ಗುಣ ಮುಖ ರಾಗಲಿ
ನಿಮ್ಮ ನೂರನೇ ಬರಹದ ಸಂಭ್ರಮಕ್ಕೆ ಅಭಿನಂದನೆಗಳು
ಇಂಥಹ ನೂರಾರು ಬರಹಗಳು ನಿಮ್ಮಿಂದ ಹೊರ ಬರಲಿ

Unknown said...

ಶಿವು ಸರ್ ,
ಪತ್ರಿಕಾ ಕಚೇರಿಗಳು ಹೀಗೂ ಇರುತ್ತವೆಯೇ ಎ೦ದು ಅಚ್ಚರಿ ಆಯಿತು .
ನಿಮ್ಮ ೧೦೦ ನೇ ಪೋಸ್ಟ್ ಗೇ ನನ್ನ ಅಭಿನ೦ದನೆಗಳು. ಹೀಗೆ ನಿಮ್ಮ ಬರಹಗಳು ೧೦೦೦ ವಾಗಲಿ ಎ೦ದು ಹಾರೈಸುತ್ತೇನೆ.

ಮನದಾಳದಿಂದ............ said...

ಶಿವೂ ಅವರೇ, ವಿಶ್ವ ಗುನಮುಖನಾಗಿದ್ದಕ್ಕೆ ತುಂಬಾ ಸಂತೋಷ, ನಾನು ವಿಶ್ವನ ಬಗ್ಗೆ ಸ್ಪಂದಿಸದೇ ಇರುವುದಕ್ಕೆ ಕ್ಷಮೆ ಇರಲಿ.
ಬ್ಲಾಗಿನಲ್ಲಿ ಶತಕ ಬಾರಿಸಿದ್ದೀರಾ ಶುಭಾಶಯಗಳು. ದೇವರು ನಿಮಗೆ ಇನ್ನಷ್ಟು ಬರೆಯುವ ಶಕ್ತಿಯನ್ನು ಕೊಡಲಿ. ಇನ್ನಷ್ಟು ಶತಕಗಳು ಆಗಲಿ.
ಧನ್ಯವಾದಗಳು.

ವನಿತಾ / Vanitha said...

ಶಿವು.. ಇದೆಲ್ಲವೂ ನಿಮ್ಮ ಪರಿಶುದ್ದ ಸ್ನೇಹಕ್ಕೆ ಸಿಕ್ಕ ಪ್ರತಿಫಲ,
ಹಾಗು ಶತಕದ ಲೇಖನಕ್ಕೆ ಅಭಿನಂದನೆಗಳು..ಹೀಗೆಯೇ ಬರೆಯುತ್ತಿರಿ:-)

ಜಲನಯನ said...

ಶಿವು, ಮೊದಲಿಗೆ...ನಿಮ್ಮ ಈ ಶತಕದ ಬ್ಲಾಗುಬರಹ/ಲೇಖನಕ್ಕೆ ತುಂಬುಹೃದಯದ ಶುಭಾಷಯಗಳು...ಇನ್ನೂ ಇಂತಹ ಶತಕಗಳು ಶತಕಗಳಾಗಲಿ ಎಂದೇ ನಮ್ಮ ಹಾರೈಕೆ....
ಶತಕ ಮುಟ್ಟಿಸುವ ಲೇಖನ ಹೃದಯ-ಮನ ಮುಟ್ಟುವ ಲೇಖನವಾಗಿರುವುದೂ ಸಂತಸದ ಮತ್ತು ಸಾರ್ಥಕದ ಸಂಕೇತ..ವಿಶ್ವನಾಥ್ ಗುಣಮುಖರಾಗಿರುವುದು ನಮಗೆಲ್ಲಾ ಇಮ್ಮಡಿ ಸಂತಸತಂದಿದೆ...ನಿಮ್ಮಂತಹ ದಿಶಾದರ್ಶಕರು ಅವರಿಗೆ ಸಿಕ್ಕಿದ್ದೂ ಅವರ ಅದೃಷ್ಟವೆನ್ನಬಹುದು...ಸ್ನೇಹಿತರಿಂದ ನಿಮ್ಮ ಬರಹದ ಮೂಲಕ ವಿಶ್ವನಿಗೆ ಸಹಾಯ ನೀಡಿದ್ದು ಮಾನವೀಯತೆಗೆ ಹಿಡಿದ ಕನ್ನಡಿ....ನಿಜ...ಸಹಾಯದ ಪ್ರಮಾಣ ನೋಡಿ ನನಗೂ ಆಶ್ಚರ್ಯ ಆಯಿತು...ವ್ಯಾಪಾರೀ ಬುದ್ಧಿಯ ಪತ್ರಿಕೆಗಳಿಗೆ ಮಾನವೀಯತೆಯ ಕಾಲ್ಂನಲ್ಲಾದರೂ ವಿಶ್ವನಂತಹವರಿಗೆ ಸಹಾಯ ಸಿಗುತ್ತೇನೋ ಎಮ್ದು ಆಶಿಸುವವರಿಗೆ ನಿರಾಶೆ ಕಾದಿದ್ದೇ ಎನ್ನುವ ನಿಮ್ಮ ಮಾತು...ಛೇ..ಏಕೆ ಹೀಗೆ ನಮ್ಮ ಮಾಧ್ಯಮಗಳು ಎನಿಸುತ್ತದೆ...

ಶಿವು ಮತ್ತೊಮ್ಮೆ ನಿಮಗೆ ಶುಭವಾಗಲಿ...ಶತಕಕ್ಕೆ ಶುಭವಾಗಲಿ, ಅಭಿನಂದನೆಗಳು

ಕ್ಷಣ... ಚಿಂತನೆ... said...

ಶಿವು ಲೇಖನ ಓದಿದೆ. ಸಹೃದಯಿ ಸಹಬ್ಲಾಗಿಗರು ವಿಶ್ವನಿಗೆ ಸಹಾಯ ಮಾಡಿದ ವಿಚಾರವಾಗಿ, ಹಾಗೂ ಪತ್ರಿಕೆ ಹಂಚಿಕೆಯ ಹುಡುಗನಿಗೆ ಪತ್ರಿಕಾ ಲೋಕದಲ್ಲಿನ ಅಸಡ್ಡೆಗಳನ್ನೂ ಸರಳವಾಗಿ (ನಿಮ್ಮ ಮನದಾಳದ ನೋವಿನಿಂದ ಮೂಡಿದ ಎನ್ನಬಹುದು) ತಿಳಿಸಿದ್ದೀರಿ. ನಿಮ್ಮೆಲ್ಲ ಬ್ಲಾಗ್ ಮಿತ್ರರಿಗೂ ಧನ್ಯವಾದಗಳು.

ವಿಶ್ವ ಗುಣಮುಖನಾಗುತ್ತಿರುವ ವಿಚಾರ ಸಂತಸ ತಂದಿದೆ.

ನಿಮ್ಮ ನೂರನೆಯ ಬ್ಲಾಗಿನ ಮೂಲಕ ಒಂದು ಒಳ್ಳೆಯ/ಶುಭ ಸಮಾಚಾರ ತಿಳಿಸಿದ್ದೀರಿ.

ನನಗೆ ಈ ವಿಷಯದಲ್ಲಿ ಸ್ಪಂದಿಸಲಾಗಲಿಲ್ಲವಾಗಿ ವಿಷಾದಿಸುತ್ತೇನೆ.

ಸಸ್ನೇಹಗಳೊಂದಿಗೆ,

Shashi jois said...

ಶಿವೂ,
ನಿಮ್ಮ ಬ್ಲಾಗ್ ಸೆಂಚುರಿ ಬರಿಸಿದ್ದಕ್ಕೆ ಧನ್ಯವಾದಗಳು.ಹೀಗೆಯೇ ಸೆಂಚುರಿಯನ್ನು ಹೊಡೆಯುತ್ತಿರಿ ಅಂತ ನನ್ನ ಹಾರೈಕೆ.ವಿಶ್ವ ಗುಣಮುಖ ನಾಗಿ ಕೆಲಸ ಮಾಡಲು ಶುರುಮಾಡಿದನಲ್ಲ ಅದೇ ಸಂತೋಷ..

ಮನಸು said...

ಶಿವು ಸರ್,
ಮೊದಲಿಗೆ ನಿಮಗೆ ಅಭಿನಂದನೆಗಳು, ನಿಮ್ಮ ಸ್ನೇಹಿತರು ಗುಣಮುಖರಾಗಿದ್ದಾರೆಂದು ತಿಳಿದು ಖುಷಿಯಾಯಿತು..... ಒಳ್ಳೆಯ ವಿಚಾರ ಹಂಚಿಕೊಂಡಿದ್ದೀರಿ.
ವಂದನೆಗಳು

Chaithrika said...

ನೂರನೇ ಲೇಖನವೆಂಬ ಮಹತ್ವ ಒಳ್ಳೆಯ ಲೇಖನಕ್ಕೇ ಸಿಕ್ಕಿದೆ. ಸಹಕರಿಸಿದವರಿಗೆ ಧನ್ಯವಾದ ಹೇಳಿ ಬಹಳ ಒಳ್ಳೆಯ ಕೆಲಸ ಮಾಡಿದ್ದೀರಿ. ವಿಶ್ವ ಅವರು ಚೇತರಿಸಿಕೊಂಡದ್ದನ್ನು ಕಂಡು ಖುಷಿಯಾಯಿತು.

AntharangadaMaathugalu said...

ಶಿವು ಸಾರ್...
ನಿಮ್ಮ ದಾಖಲೆಗಳ ಮಾಲೆ ಮೊದಲ ಶತಕದಿಂದ ಆರಂಭವಾಗಿದೆ... ಅಭಿನಂದನೆಗಳು... ವಿಶ್ವನಾಥ ಗುಣವಾಗಿದ್ದು ನನಗೆ ಸಂತಸ ತಂದಿದೆ. ನೀವು ಒಳ್ಳೆಯ ಮನಸ್ಸಿನಿಂದ ಸಹಾಯ ಮಾಡಬೇಕೆನ್ನುವಾಗ, ದೇವರು ನಿಮ್ಮ ಅಭಿಲಾಷೆಯನ್ನು ಸಹೃದಯರಿಂದ ನೆರವೇರಿಸುತ್ತಾನೆ... ಸಮಯಕ್ಕೆ ಸರಿಯಾಗಿ ನೀವು ಲೇಖನ ಬರೆದು, ವಿಶ್ವನಾಥನ ಸಹಾಯಕ್ಕೆ ಬ್ಲಾಗ್ ಲೋಕದ ಸ್ನೇಹಿತರು ಧಾವಿಸುವಂತೆ ಮಾಡಿದಿರಿ.. ಅಭಿನಂದನೆಗಳು.........

ಮನಸಿನಮನೆಯವನು said...

ಶತಕವೀರ ಶಿವೂ ಅವರೇ,
ನಿಮ್ಮೀ ಪಯಣ ಮುಂದುವರಿಯಲಿ... ಜೊತೆಗೆ ಅಳಿಲುಸೇವೆಯಂತೆ ನನ್ನ ಸಹಕಾರ ನೀಡುವೆನು..

Shweta said...
This comment has been removed by the author.
Shweta said...

ಶಿವು ಸರ್ ,ಕುಶಿ ಆಯ್ತು ವಿಶ್ವನಸುದ್ದಿ ಕೇಳಿ ,
ಆದಿನ ,
ಅದೇ ಸಮಯಕ್ಕೆ ನಮ್ಮ ಆಫೀಸಿನಲ್ಲಿ ಒಬ್ಬ ಬ್ಲಡ್ ಕ್ಯಾನ್ಸರ್ ನಿಂದ ನರಳುತ್ತಿದ್ದ,ಆತನಿಂದ ಬಂದ 'ಬದುಕಲಿಕ್ಕೆ ಕೊನೆಯ ಅವಕಾಶ ಕೊಡಿ' ಸಹಾಯ ಮಾಡಿ ,ಎನ್ನುವ ಈಮೇಲ್(ಆತನ ಕವನ ಗಳು ,ಬದುಕಬೇಕೆಂಬ ಪ್ರೀತಿ ,ಆತನ ಮೆಡಿಕಲ್ ರಿಪೋರ್ಟ್ಸ್ ...) ನೋಡಿ ಇಡೀ ದಿನವೇ ಕೆಟ್ಟು ಹೋಗಿತ್ತು,.....
ಶತಕಕ್ಕೊಂದು ಅಭಿನಂದನೆಗಳು ...ಹೀಗೆ ಹೊಸ ಹೊಸ ವಿಷಯಗಳನ್ನು ಬರೆಯುತ್ತಿರಿ ...

rukminimalanisarga.blogspot.com said...

vishva chetarisi endinante kelasakke hoguttiruvudu harshada vichara. santoshavayitu.

ದಿನಕರ ಮೊಗೇರ said...

ಶಿವೂ ಸರ್,
ಶತಕವನ್ನು ತುಂಬಾ ಒಳ್ಳೆಯ ವಿಚಾರ ತಿಳಿಸಿ ಆಚರಿಸಿಕೊಂಡಿದ್ದೀರಿ ಸರ್.... ನಾನೂ ಸಹ ವಿಶ್ವನಿಗೆ ಏನೂ ಕಲಿಸಲು ಆಗದೆ ಹಳಿಯುತ್ತಿರುವ ಆಸಾಮಿ..... ನನ್ನ ಹಾಳು ಮೂಳು ಕೆಲಸದ ನಡುವೆ ಈತನ ಬಗ್ಗೆ ಮರೆತು ಬಿಟ್ಟೆ....... ನಿಮ್ಮ ಲೇಖನ ಓದಿ ಅಕೌಂಟ್ ನಂಬರ್ ಬರೆದಿತ್ತುಕೊಂಡಿದ್ದೆ... ಅದು ಈ ಲೇಖನ ಓದಿ ನೆನಪಾಯ್ತು............ ಸಾರೀ ಶಿವೂ ಸರ್... ಸಾರೀ ವಿಶ್ವ....... ನಿಮ್ಮ ಬ್ಲಾಗ್ ಗೆ ನನ್ನ ಶುಭ ಕಾಮನೆಗಳು.......... ಹೀಗೆ ಮುಂದುವರೆಸಿ ಸರ್..........

balasubramanya said...

ಶಿವೂ ನಿಮ್ಮ ನೂರನೇ ಲೇಖನ ಅದ್ಭುತವಾದ ಸಿಕ್ಸರ್ !!! ನಿಮ್ಮ್ಮ ಈ ನೂರು ಮುಂದೆ ಸಾವಿರಾರು ಆಗಿ ಬ್ಲಾಗ್ ಲೋಕ ಬೆಳಗಲಿ. ಪತ್ರಿಕಾ ಕಛೇರಿಗಳ ಒಳಮರ್ಮ ಬಿಚ್ಚಿ ಸತ್ಯ ಹೇಳಿದ್ದಿರಿ !!! ಈ ಪತ್ರಿಕೆಗಳು ಪತ್ರಿಕೆ ಹಂಚುವ ಹುಡುಗರನ್ನು ಕಡೆಗಣಿಸಿದರೆ ಇವರಿಗೆ ಸಮಾಜದ ಬಗ್ಗೆ ಬರೆಯುವ ನೈತಿಕತೆ ಇರುವುದೇ !!! ನಿಮ್ಮ್ಮ ಕೂಗಿಗೆ ಸಹಕರಿಸದ ಆ ಜನರಿಗೆ ಇದನ್ನು ನೋಡಿ ನಾಚಿಕೆ ಆಗಬೇಕು.ನಿಮ್ಮ ಶ್ರಮಕ್ಕೆ, ಕಾಳಜಿಗೆ ನನ್ನ ನಮನಗಳು. ಮುಂದೆ ಇಂತಹ ಸನ್ನಿವೇಶಗಳಲ್ಲಿ ನಾನು ಜೋತೆಯಾಗುತ್ತೇನೆ ನಿಮಗೆ ಧನ್ಯವಾದಗಳು.

Ranjita said...

ಶಿವೂ ಸರ್ ..
ಶತಕ ಬಾರಿಸಿದ ನಿಮಗೆ ಶುಭಾಶಯಗಳು ...
ವಿಶ್ವನಾಥ್ ಸರ್ ಗುನಮುಖರಾಗುತ್ತಿರೋದನ್ನ ಕೇಳಿ ಖುಷಿ ಆಯಿತು .. ಅವರ ಮುಂದಿನ ಜೀವನ ಚೆನ್ನಾಗಿರಲಿ ಅಂತ ಆಷಿಸೋಣ ..

umesh desai said...

ಶಿವು ಅವರಿಗೆ, ಸೆಂಚುರಿಯ ಅಭಿನಂದನೆಗಳು.ನಿಮ್ಮ ಅಥವಾ ನಮ್ಮೆಲ್ಲರ ವಿಶ್ವನಾಥ ಗುಣಮುಖನಾಗಿದ್ದನೆ ಕೇಳಿ ಖುಷಿ ಆತು.
ಹೂವಿನ ಜೊತೆಗೆ ನಾರು ಸಗ್ಗ ಸೇರೋರೀತಿ ನಾವು ಈ ಪುಣ್ಯದಲ್ಲಿ ಭಾಗಿ ಅದಕೆ ಅವಕಾಶಕೊಟ್ಟೋರು ನೀವು ನಿಮಗೆ ಅಭಿನಂದನೆ.

ಸಾಗರಿ.. said...

ತಮ್ಮ ನೂರನೇಯ ಲೇಖನ ವಿಶ್ವ ಗುಣ್ಮುಖನಾಗುತ್ತಿದ್ದಾನೆಂಬ ಖುಷಿಯ ಸಂಗತಿ ತಿಳಿಸಿದೆ. ನಿಮಗೆ ನನ್ನ ಶುಭ ಹಾರೈಕೆಗಳು.

ದೀಪಸ್ಮಿತಾ said...

ಶಿವು ಸರ್, ನೂರನೆ ಬರಹಕ್ಕೆ ಅಭಿನಂದನೆಗಳು. ನಿಮ್ಮ ಬರಹ ಕೇವಲ ಮಾಹಿತಿ ಮನೋರಂಜನೆ ಮಾತ್ರವಲ್ಲ, ಸಾಮಾಜಿಕ ಕಳಕಳಿ ಉಳ್ಳದ್ದು ಎಂದು ನಿಮ್ಮ ಲೇಖನ ತೋರಿಸುತ್ತದೆ. ಅಲ್ಲದೆ ಪತ್ರಿಕಾ ಪ್ರಪಂಚದ ಕರಾಳ ಮುಖವನ್ನು ಕೂಡಾ ಪರಿಚಯಿಸಿದ್ದೀರಿ.

ನನಗೂ ಕೂಡ ಸ್ಪಂದಿಸಲಾಗಲಿಲ್ಲ ಎಂದು ವಿಷಾದವಾಗುತ್ತಿದೆ.

shivu.k said...

ಸೀತಾರಾಮ್ ಸರ್,

ವಿಶ್ವನ ಮೊದಲ ಲೇಖನಕ್ಕೆ ಮೊದಲು ಮೇಲ್ ಮಾಡಿ ವಿಚಾರಿಸಿಕೊಂಡಿದ್ದು ನೀವು. ಆತನಿಗೆ ಸಹಾಯ ಮಾಡಿದ್ದಲ್ಲದೇ ನನ್ನ ವೆಂಡರ್ ಕಣ್ಣು ಪುಸ್ತಕವನ್ನು ತರಿಸಿಕೊಂಡಿದ್ದು,ಅದರ ಬಗ್ಗೆ ವಿಮರ್ಶಿಸಿದ್ದು ಎಷ್ಟು ಬೆಳವಣಿಗೆಯಲ್ಲವೇ...ನಿಮ್ಮಂತೆ ನಾನು ಎಲ್ಲಾ ಬ್ಲಾಗಿಗರಿಗೂ ವಂದಿಸುತ್ತೇನೆ...

shivu.k said...

ಸುಮನಾ ಮೇಡಮ್,

ನೀವು ತಡವಾಗಿ ಸ್ಪಂದಿಸಿದ್ದಕ್ಕೆ ವಿಷಾದಿಸುವ ಅಗತ್ಯವಿಲ್ಲ ಮತ್ತು ಸಾರಿ ಕೇಳುವ ಅವಶ್ಯಕತೆಯೂ ಇಲ್ಲ. ಎಲ್ಲರಿಗೂ ಅವರವರದೇ ಗಡಿಬಿಡಿ ಇದ್ದೇ ಇರುತ್ತದಲ್ಲವೇ...ಆದರೂ ಅವನ ಬಗ್ಗೆ ಕಾಳಜಿಯಿದೆಯಲ್ಲಾ ಅಷ್ಟು ಸಾಕು. ನನ್ನ ನೂರನೇ ಲೇಖನವು ಇಂಥ ವಿಚಾರಕ್ಕೆ ಸಿಕ್ಕಿದ್ದು ನನಗೂ ಖುಷಿ. ನಿಮ್ಮ ಹಾರೈಕೆಗೆ ಧನ್ಯವಾದಗಳು.

shivu.k said...

ವಿಕಾಶ್ ಹೆಗಡೆ,

ಪತ್ರಿಕಾ ಕಛೇರಿಗಳ ಬಗ್ಗೆ ಸ್ವಲ್ಪ ಮಾತ್ರ ಬರೆದಿದ್ದೇನೆ. ಪೂರ್ತಿ ಬರೆದರೆ ಎಲ್ಲರಿಗೂ ಪತ್ರಿಕೆಗಳ ಮೇಲೆ ಬೇಸರವಾಗಿಬಿಡುತ್ತದೆ. ಮತ್ತೆ ನಾವೆಲ್ಲಾ ಬ್ಲಾಗಿಗೆ ಹೀಗೆ ಗಂಟುಬಿದ್ದಿರುವುದು ಅವರ ಇಂಥ ನಡುವಳಿಕೆಯಿಂದಲೇ ಅಲ್ಲವೇ...
ನೂರನೇ ಲೇಖನಕ್ಕೆ ಸ್ಪಂದಿಸಿದ್ದಕ್ಕೆ ಧನ್ಯವಾದಗಳು.

shivu.k said...

ರವಿಕಾಂತ್ ಸರ್,

ನಿಮ್ಮ ಸ್ಪಂದನೆಗೆ ಧನ್ಯವಾದಗಳು.

shivu.k said...

ತೇಜಸ್ವಿನಿ ಮೇಡಮ್,

ವಿಶ್ವನ ಲೇಖನದ ವಿಚಾರದಲ್ಲಿ ನನ್ನದೇನು ಹೆಗ್ಗಳಿಕೆಯಿಲ್ಲ. ಯಾರೇ ನೊಂದರೂ ಸ್ಪಂದಿಸಬೇಕೆನಿಸುತ್ತದೆ ಅಷ್ಟೇ. ನಾನು ಮಾಡಿದ್ದು ಅಷ್ಟೇ. ಈ ವಿಚಾರದಲ್ಲಿ ನೀವು ಹೇಳಿದಂತೆ ಸ್ವಲ್ಪ ಹೆಚ್ಚೇ ಕಾಳಜಿಯಿಂದ ಮುನ್ನುಗ್ಗಿದ್ದರ ಪ್ರತಿಫಲವೇ ಈಗ ಸಿಕ್ಕಿದೆ.
ನಿಜಕ್ಕೂ ನಮ್ಮ ಬ್ಲಾಗ್ ಲೋಕ ಒಳ್ಳೆಯ ಮನಸ್ಸುಳ್ಳದ್ದು ಅಂಥ ಈ ವಿಚಾರದಲ್ಲಿ ಪ್ರೂವ್ ಆಗಿದೆ. ನೂರನೇ ಲೇಖನಕ್ಕೆ ಇಂಥ ವಿಚಾರ ದೊರಕಿದ್ದು ಕೂಡ ನನಗೆ ಸಂತೋಷ. ನಿಮ್ಮ ಹಾರೈಕೆಗೆ ಧನ್ಯವಾದಗಳು.

shivu.k said...

ಸುನಾಥ್ ಸರ್,

ಒಳ್ಳೆಯ ಉದ್ದೇಶ ಮತ್ತು ಕಾಳಜಿಯಿಂದ ಕತ್ತಲ್ಲಲ್ಲಿ ಬಿಟ್ಟ ಬಾಣ ಸರಿಯಾಗಿ ಕೆಲಸ ಮಾಡಿದೆ ಅನ್ನಿಸಿದೆ. ಅದಕ್ಕೆ ಎಲ್ಲಾ ಬ್ಲಾಗಿಗರಿಗೂ ಧನ್ಯವಾದಗಳನ್ನು ಹೇಳಬೇಕು.

ನಿಮ್ಮ ಹಾರೈಕೆಗೂ ಧನ್ಯವಾದಗಳು.

shivu.k said...

ಸುಬ್ರಮಣ್ಯ ಸರ್,

ಖಂಡಿತ ಎಲ್ಲವೂ ಒಳ್ಳೆಯದೇ ಆಯಿತು. ನೂರರ ಸಂಬ್ರಮಕ್ಕೆ ನನಗೂ ಖುಷಿ. ಧನ್ಯವಾದಗಳು.

shivu.k said...

ಗುರುಮೂರ್ತಿ ಸರ್,

ನನ್ನ ಅಂತಃಕರಣಕ್ಕಿಂತ ಸಹಾಯ ಮಾಡಿದ ಬ್ಲಾಗ್ ಗೆಳೆಯರ ಅತಃಕರಣ ದೊಡ್ಡದೆಂದು ನನ್ನ ಭಾವನೆ. ನಾನು ಪ್ರಾರಂಭಿಸಿದೆ ಅಷ್ಟೇ. ನನ್ನೆಲ್ಲಾ ಲೇಖನಗಳನ್ನು ಸಹಿಸಿಕೊಳ್ಳುತ್ತಾ ನೂರಕ್ಕೆ ಬಂದು ಮುಟ್ಟಿದರೂ ಹಾರೈಸುತ್ತಿರುವದಕ್ಕೆ ಧನ್ಯವಾದಗಳು.

shivu.k said...

ರೂಪ ಮೇಡಮ್,

ಪತ್ರಿಕೆ ಕಛೇರಿಗಳ ಬಗ್ಗೆ ಬರೆದರೇ ಇನ್ನೂ ಇದೆ. ಅಮೇಲೆ ನನ್ನ ಮೇಲೆ ದ್ವೇಷ ಸಾಧಿಸಿಬಿಟ್ಟರೆ ಅನ್ನುವ ಭಯದಿಂದ ಸ್ವಲ್ಪವನ್ನು ಮಾತ್ರ ಬರೆದಿದ್ದೇನೆ...
ನೂರನೇ ಲೇಖನವನ್ನು ಓದಿ ಹಾರೈಸಿದ್ದಕ್ಕೆ ಧನ್ಯವಾದಗಳು.

shivu.k said...

ಮನದಾಳದ ಪ್ರವೀಣ್ ಸರ್,

ನೀವು ವಿಶ್ವನ ವಿಚಾರದಲ್ಲಿ ಸ್ಪಂದಿಸಲಿಲ್ಲವೆಂದು ಬೇಸರಬೇಡ. ಮನದಲ್ಲಿ ಕಾಳಜಿ ಇದ್ದರೇ ಸಾಕು. ಲೇಖನದ ಶತಕದಿಂದ ಖುಷಿಯಾಗಿದೆ. ನಿಮ್ಮ ಪ್ರೋತ್ಸಾಹ ಮತ್ತಷ್ಟು ಬರೆಯಲು ಹುರುಪು ಕೊಡುತ್ತಿದೆ. ಧನ್ಯವಾದಗಳು.

shivu.k said...

ವನಿತಾ,

ನಿಮ್ಮ ಅಭಿನಂದನೆಗೆ ಧನ್ಯವಾದಗಳು. ನಿಮ್ಮ ಪ್ರೋತ್ಸಾಹ ಹೀಗೆ ಇರಲಿ...

shivu.k said...

ಅಜಾದ್.

ಲೇಖನಗಳ ಶತಕ ಮತ್ತಷ್ಟು ಶತಕಗಳಾಗಲಿ ಎನ್ನುವ ಹಾರೈಕೆಯೇ ನನ್ನಲ್ಲಿ ಹೊಸ ಸ್ಪೂರ್ತಿ ನೀಡುತ್ತಿದೆ. ವಿಶ್ವನ ಬಗೆಗಿನ ಲೇಖನವೇ ನೂರನೆಯದಾಗಿರುವುದು ಕಾಕತಾಳಿಯ. ಬ್ಲಾಗ್ ಹೀಗೆ ಉಪಯೋಗವಾಗಿರುವುದು ನಿಜಕ್ಕೂ ಸಂತೋಷ. ನೀವು ಅಷ್ಟು ದೂರದಿಂದ ಆಗಾಗ ವಿಶ್ವನ ಬಗ್ಗೆ ವಿಚಾರಿಸುತ್ತಾ, ತನು ಮನ ಧನ ಸಹಾಯ ಮಾಡಿದ್ದೀರಿ. ಅದಕ್ಕೆ ಆತ ತುಂಬಾ ಖುಷಿಪಟ್ಟಿದ್ದಾನೆ.

ಧನ್ಯವಾದಗಳು.

shivu.k said...

ಚಂದ್ರು ಸರ್,

ಪತ್ರಿಕೆಗಳ ಬಗ್ಗೆ ಇನ್ನೂ ಅನೇಕ ವಿಚಾರಗಳಿವೆ. ಅದನ್ನು ಮತ್ತೆಂದಾದರೂ ಬರೆಯುತ್ತೇನೆ. ವಿಶ್ವನ ವಿಚಾರದಲ್ಲಿ ಸ್ಪಂದಿಸಲಿಲ್ಲವೆಂದು ಬೇಸರಬೇಡ ಸರ್, ನೀವು ದೂರದಿಂದಲೇ ಆತ ಗುಣಮುಖನಾಗಲಿ ಅಂತ ಹಾರೈಸಿದರೂ ಸಾಕು. ಒಟ್ಟಾರೆ ಬ್ಲಾಗ್ ಲೋಕದ ಹೃತ್ಪೂರ್ವಕ ಮನಸ್ಸು ಇಲ್ಲಿ ತೆರೆದುಕೊಂಡಿದೆಯೆಂದೇ ಹೇಳಬಹುದು..

ಧನ್ಯವಾದಗಳು.

shivu.k said...

ಶಶಿ ಜೋಯಿಸ್ ಮೇಡಮ್,

ನೂರನೇ ಲೇಖನದ ಹಾರೈಕೆಗೆ ಧನ್ಯವಾದಗಳು. ವಿಶ್ವ ಮೊದಲಿನಂತೆ ಆಗಿರುವುದಕ್ಕೆ ನಿಮ್ಮೆಲ್ಲರ ಹಾರೈಕೆ ಕಾರಣ. ಹೀಗೆ ಬರುತ್ತಿರಿ..ಸ್ಪಂದಿಸುತ್ತಿರಿ...

shivu.k said...

ಮನಸು ಮೇಡಮ್,

ನನ್ನ ಪತ್ರಿಕಾ ಗೆಳೆಯ ಗುಣಮುಖನಾಗಿ ಎಂದಿನಂತೆ ನಿತ್ಯ ಕೆಲಸಕ್ಕೆ ಹಾಜರಾಗುತ್ತಿದ್ದಾನೆ. ಅವನಿಗೆ ಸಹಾಯ ಮಾಡಿದ ಎಲ್ಲರಿಗೂ ಅಭಿನಂದನೆಗಳು. ನಿಮ್ಮ ಹಾರೈಕೆಗೆ ಧನ್ಯವಾದಗಳು.

shivu.k said...

ಚೈತ್ರಿಕಾ ಮೇಡಮ್,

ನೂರನೇ ಲೇಖನವೂ ಇದಾಗಲಿ ಅಂತ ಕನಸು ಕಂಡಿದ್ದೆ. ಅದೇ ಆಗಿರುವುದಕ್ಕೆ ತುಂಬಾ ಖುಷಿಯಾಗಿದೆ. ಸಹಾಯದ ಹೊರೆಯನ್ನು ಮನಃಪೂರ್ವಕವಾಗಿ ಹೇಳುವ ಮೂಲಕ ಇಳಿಸಿಕೊಳ್ಳಬಹುದು ಅನ್ನೋದು ನನ್ನ ಭಾವನೆ.

shivu.k said...

ಶ್ಯಾಮಲ ಮೇಡಮ್,

ದಾಖಲೆ ಎನ್ನುವ ವಿಚಾರವನ್ನು ಹೇಳಿದ್ದೀರಿ. ಆದ್ರೆ ನಾನು ಇನ್ನೂ ಯಾವ ದಾಖಲೆಯನ್ನು ಸಾಧಿಸಿಲ್ಲ. ಸಾಧಿಸುವುದು ತುಂಬಾ ಇದೆ. ನೀವು ಹೇಳಿದಂತೆ ದೇವರಿಗೆ ಈ ವಿಚಾರದಲ್ಲಿ ಎಷ್ಟು ವಂದಿಸಿದರೂ ಸಾಲದು. ಎಲ್ಲರಿಗೂ ಸ್ಪಂದಿಸುವ ಮನಸ್ಸು ಕೊಟ್ಟ ದೇವರನ್ನು ವಂದಿಸುತ್ತೇನೆ.

ನನ್ನ ನೂರನೇ ಲೇಖನಕ್ಕೆ ನಿಮ್ಮ ಹಾರೈಕೆಗೆ ಧನ್ಯವಾದಗಳು.

shivu.k said...

ಗುರುದೆಸೆ,

ನಾನು ಶತಕಗಳ ಲೇಖನವನ್ನು ಮಾಡಿದ್ದರೇ ವೀರನಲ್ಲ. ನಿಮ್ಮ ಅಳಿಲು ಸೇವೆಗೆ ಧನ್ಯವಾದಗಳು.

shivu.k said...

ಶ್ವೇತ ಮೇಡಮ್,

ವಿಶ್ವನ ಲೇಖನವನ್ನು ಬರೆದಾಗ ಮೊದಲು ಪ್ರತಿಕ್ರಿಯಿಸಿ ಆತ ಬ್ಯಾಂಕ್ ಅಕೌಂಟ್ ನಂಬರ್ ಕೇಳಿದ್ದು ನೀವು. ನೀವು ಕೇಳಿದ್ದಕ್ಕೆ ನಾನು ಅದನ್ನು ತಿಳಿದುಕೊಂಡು ಬ್ಲಾಗಿನಲ್ಲಿ ಹಾಕಿದ್ದು. ಇಲ್ಲದಿದ್ದಲ್ಲಿ ನನಗೆ ಅದರ ಉಪಾಯವೇ ಗೊತ್ತಿರಲಿಲ್ಲ. ಇಂಥ ಐಡಿಯವನ್ನು ಕೊಟ್ಟ ನಿಮಗೂ ಧನ್ಯವಾದಗಳು. ನಿಮ್ಮ ಅಫೀಸಿನಲ್ಲಿನ ಅನುಭವವನ್ನು ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು.

shivu.k said...

ಮಾಲಾ ಮೇಡಮ್,

ವಿಶ್ವನ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಆರೈಸಿದ್ದಕ್ಕೆ ಧನ್ಯವಾದಗಳು.

shivu.k said...

ದಿನಕರ್ ಸರ್,

ವಿಶ್ವನಿಗೆ ಸಹಾಯ ಮಾಡಲಿಲ್ಲವೆಂದು ಬೇಸರಿಸಬೇಡಿ. ಕೆಲಸದ ಒತ್ತಡದಿಂದ ಹೀಗಾಗುವುದು ಸಹಜ. ಕಾಳಜಿ ಇದ್ದರೇ ಸಾಕು. ಸದ್ಯ ನಿಮ್ಮೆಲ್ಲರ ಆಶೀರ್ವಾದದಿಂದ ಎಂದಿನಂತೆ ಆಗಿದ್ದಾನೆ. ನೂರನೆ ಲೇಖನಕ್ಕೆ ಇಂಥ ವಸ್ತು ಸಿಕ್ಕಿದ್ದು ನನ್ನ ಬರವಣಿಗೆಗೆ ಸಾರ್ಥಕತೆ ಸಿಕ್ಕಂತ ಅನುಭವ...

ಧನ್ಯವಾದಗಳು.

shivu.k said...

ನಿಮ್ಮೊಳಗೊಬ್ಬ ಬಾಲು ಸರ್,

ನೂರನೇ ಲೇಖನ ಸಿಕ್ಸರ್ ಬಾರಿಸಿದೆಯೋ ಇಲ್ಲವೋ ಗೊತ್ತಿಲ್ಲ. ಆದ್ರೆ ಸಾರ್ಥಕತೆಯನ್ನು ಮೂಡಿಸಿರುವುದು ಖಂಡಿತ. ಪತ್ರಿಕಾ ಕಚೇರಿಗಳಿಂದ ನನಗಾದ ಅನುಭವವನ್ನು ಬರೆದಿದ್ದೇನೆ. ಆಗ ನಾಗೇಶ್ ಹೆಗಡೆ, ಮಂಜುಳ ಮೇಡಮ್....ಹೀಗೆ ಕೆಲವರು ತುಂಬಾ ಪ್ರೋತ್ಸಾಹ ನೀಡುತ್ತಿದ್ದರು. ಅವರಿಂದಾಗಿ ನೂರಾರು ಯುವ ಬರಹಗಾರರು ಹುಟ್ಟಿಕೊಂಡರು. ಈಗಿನ ಪರಿಸ್ಥಿತಿಯಲ್ಲಿ ಹುಟ್ಟಿಕೊಂಡ ಬರಹಗಾರರೆಲ್ಲಾ ಬರೆಯುವುದನೆಲ್ಲಾ ನಿಲ್ಲಿಸಿದ್ದಾರೆ. ಕಾರಣ ನಾನು ಇಲ್ಲಿ ವಿವರಿಸಿದಂತೆ. ಇಂಥ ಸಮಯದಲ್ಲಿ ವಿಶ್ವನ ಸಹಾಯಕ್ಕೆ ನಿಂತ ನಿಮಗೆಲ್ಲಾ ಧನ್ಯವಾದಗಳು.

shivu.k said...

ರಂಜಿತ,

ವಿಶ್ವನ ಆರೋಗ್ಯದ ಬಗ್ಗೆ ಮತ್ತು ನನ್ನ ನೂರನೇ ಲೇಖನಕ್ಕೆ ನಿಮ್ಮ ಅಭಿನಂದನೆಗೆ ಧನ್ಯವಾದಗಳು.

shivu.k said...

ಉಮೇಶ್ ದೇಸಾಯಿ ಸರ್,

ವಿಶ್ವನ ಬಗ್ಗೆ ಕಾಳಜಿ ವಹಿಸಿ ಧನ ಮತ್ತು ಮನದ ಸಹಾಯವನ್ನು ನೀಡಿದ್ದಕ್ಕೆ ಧನವಾದಗಳು. ನನ್ನ ಬರವಣಿಗೆಯ ನೂರನೇ ಲೇಖನದವರೆಗೆ ಪ್ರೋತ್ಸಾಹಿಸುತ್ತಿದ್ದೀರಿ.

ಧನ್ಯವಾದಗಳು.

shivu.k said...

ಸಾಗರಿ ಮೇಡಮ್,

ನಿಜ ನೀವು ಹೇಳಿದಂತೆ ವಿಶ್ವನ ಆರೋಗ್ಯ ವಿಚಾರದ ಬಗ್ಗೆ ನನ್ನ ನೂರನೇ ಲೇಖನದಲ್ಲಿ ಅವಕಾಶ ಸಿಕ್ಕಿದ್ದು ನನಗೂ ಸಂತೋಷ. ನಿಮ್ಮ ಆರೈಕೆಗೆ ಧನ್ಯವಾದಗಳು.

shivu.k said...

ಕುಲದೀಪ್ ಸರ್,

ನನ್ನ ಬ್ಲಾಗು ಮೊದಲು ಮಾಡಿದ್ದು ಸಣ್ಣ ಸಣ್ಣ ಲೇಖನವನ್ನು ಬರೆಯಲು ಮಾತ್ರ. ಆದ್ರೆ ಈಗ ಅದರಲ್ಲಿ ಅನೇಕ ಸಾಮಾಜಿಕ ಕಳಕಳಿಯ ಬರಹಗಳು ಬರುವುದಕ್ಕೆ ಕಾರಣ ನಿಮ್ಮೆಲ್ಲರ ಪ್ರೋತ್ಸಾಹದಿಂದಾಗಿ. ಪತ್ರಿಕೆಯವರ ಬಗ್ಗೆ ಮತ್ತಷ್ಟು ಬರೆಯಬೇಕಿದ್ದರೂ ಬೇಡವೆಂದು ಸುಮ್ಮನಾಗಿದ್ದೆ. ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು.

Harish Athreya said...

ಆತ್ಮೀಯ
ನಿಮ್ಮ ಬ್ಲಾಗನ್ನು ಮೊದಲ ಬಾರಿ ನೋಡುತ್ತಿದ್ದೇನೆ.ಇ೦ಥ ಬ್ಲಾಗನ್ನು ನೋಡದಿದ್ದುದಕ್ಕೆ ನಾಚಿಕೆಯಾಗುತ್ತಿದೆ.ಸುದ್ದಿ ಮನೆಯಲ್ಲಿ ಕೆಲಸ ಮಾಡುವವರಷ್ಟೇ ಪತ್ರಿಕೆ ಹ೦ಚುವವರೂ ಮುಖ್ಯ.ಅವರಿಲ್ಲದೇ ಸುದ್ದಿ ನಮಗೆ ತಲುಪದು.ಅ೦ಥ ಒಬ್ಬ ಹುಡುಗನ ಬಗ್ಗೆ ಬರೆದು ಅವನಿಗೆ ಸಹಾಯ ಹಸ್ತವನ್ನೂ ಚಾಚಿದ್ದೀರ. ನಿಮ್ಮ ಸದ್ಕಾರ್ಯಕ್ಕೆ ಮಾತುಗಳೇ ಇಲ್ಲ.
ಇನ್ನು ನಮ್ಮ ಬ್ಲಾಗ್ ಮಿತ್ರರು ಅವರ ಬಗ್ಗೆ ಏನು ಹೇಳಲಿ ಪ್ರತಿಯೊ೦ದಕ್ಕೂ ಬೇಗ ಸ್ಪ೦ದಿಸುವ ತಪ್ಪಿದ್ದರೆ ತಿದ್ದುವ , ನಮ್ಮ ಸ೦ತೋಷದಲ್ಲಿ ತಾವೂ ಖುಷಿಯನ್ನು ಅನುಭವಿಸುವ.ಜೊತೆಗೆ ಹೀಗೆ ಸಹಾಯವನ್ನೂ ಮಾಡೂವ ನಿಜಕ್ಕೂ ದೊಡ ಮನಸ್ಸಿನವರು.ಸ್ಪ೦ದಿಸಿದ ಎಲ್ಲರಿಗೂ ಅಭಿನ೦ದನೆಗಳು
ನಿಮ್ಮವ
ಹರಿ

shivu.k said...

ಹರೀಶ್ ಸರ್,

ಸಧ್ಯದ ಪರಿಸ್ಥಿತಿಯಲ್ಲಿ ಪತ್ರಿಕೆಗಳ ಒಳಗೆ ನಡೆಯುವ ವಿಚಾರವನ್ನು ನಾನು ಅನುಭವಿಸಿ ನಮ್ಮಲ್ಲಿ ಆಗುವ ಬೆಳವಣಿಗೆಗಳ ಬಗ್ಗೆ ಬರೆದಿದ್ದೇನೆ. ನೀವು ತಡವಾಗಿಯಾದರೂ ನನ್ನ ಬ್ಲಾಗ್ ನೋಡಿದ್ದಕ್ಕೆ ನನಗೆ ಸಂತೋಷವಾಗಿದೆ. ಸದ್ಯದ ನಮ್ಮ ಲೋಕವೇ ಸ್ವಲ್ಪ ಪರಿಶುದ್ಧವಾಗಿದೆ, ಹಾಗೂ ತಕ್ಷಣ ಸ್ಪಂದಿಸಿದ್ದು ನಮ್ಮ ಕಣ್ಣೆದುರಿಗೆ ಇದೆ.
ಮತ್ತೆ ನಾನು ಒಬ್ಬ ಪತ್ರಿಕೆ ವಿತರಕನಾಗಿರುವುದರಿಂದ ಇಂಥದ್ದಕ್ಕೆ ಸ್ಪಂದಿಸಬೇಕಾಗಿರುವುದು ನನ್ನ ಕರ್ತವ್ಯ.

ನನ್ನ ಬರಹ ನಿಮಗೆ ಇಷ್ಟವಾದರೆ ನನ್ನ ಇನ್ನುಳಿದ ಲೇಖನಗಳನ್ನು ಬಿಡುವು ಮಾಡಿಕೊಂಡು ಓದಿ..
ಧನ್ಯವಾದಗಳು.