Showing posts with label ಸಂತೆ. Show all posts
Showing posts with label ಸಂತೆ. Show all posts

Monday, April 12, 2010

"ಯಾವ ವಾರದ ಸುತ್ತಳತೆ ಹೇಳಲಿ ಹೇಳು"

ದೃಶ್ಯ-೧

"ಸರ್, ಕ್ಯಾನ್ ಐ ಹೆಲ್ಪ್ ಯೂ"....ಆತ ನನ್ನನ್ನು ನೋಡುತ್ತಾ ಕೇಳಿದ...
"ಇಟ್ಸ್ ಓಕೆ. ಐ ವಿಲ್ ಟೆಲ್ ಲೇಟರ್"...ನಾನಂದೆ.
"ಮೇಡಮ್, ನಿಮ್ಮ ಮನೆಗೆ ಇದು ತುಂಬಾ ಚೆನ್ನಾಗಿರುತ್ತೆ" ಅಂದ.
"ಇದು ನಮ್ಮ ಮನೆಯಲ್ಲಿದೆ ನಾನು ಬೇರೆಯದನ್ನು ನೋಡಲಿಕ್ಕೆ ಬಂದಿದ್ದೇನೆ." ನನ್ನಾಕೆ ಹೇಳಿದಳು.

ಸ್ವಲ್ಪ ಮುಂದೆ ಸಾಗಿ ಬಟ್ಟೆಗಳ ಬಳಿ ಬಂದೆವು. ತಕ್ಷಣ ಅಲ್ಲಿದವನೊಬ್ಬ,
"ಸರ್, ಯುವರ್ ವೇಸ್ಟ್ ಸೈಜ್ ಪ್ಲೀಸ್" ಕೇಳಿದ.

ಅರೆರೆ ನನ್ನ ಸೊಂಟದ ಸೈಜು ನನಗೇ ಗೊತ್ತಾಗದ ಹಾಗೆ ವ್ಯತ್ಸಾಸವಾಗುತ್ತಿರುತ್ತದೆ? ಅಂತದ್ದರಲ್ಲಿ ಇವನಿಗೆ ಹೇಗೆ ಸರಿಯಾಗಿ ಹೇಳುವುದು? ಅಂದುಕೊಂಡು, ನೋಡಪ್ಪ ನನ್ನ ಸೊಂಟದ ಸುತ್ತಳತೆ ಪ್ರತಿವಾರ ವ್ಯತ್ಯಾಸವಾಗುತ್ತಿರುತ್ತದೆ. "ಯಾವ ವಾರದ ಸುತ್ತಳತೆ ಹೇಳಲಿ ಹೇಳು" ಕೇಳಿದೆ.

ನನ್ನ ಮಾತಿಗೆ ಅವನಿಗೆ ನಗು ಬಂದರೂ ನಗುವಂತಿರಲಿಲ್ಲ. ಒಂದು ಮುಗುಳ್ನಗು ನಕ್ಕು ಸುಮ್ಮನಾದ.

ದೃಶ್ಯ-೨

ಅಲ್ಲೊಬ್ಬ ಉರಿಬಿಸಿಲನ್ನು ಲೆಕ್ಕಿಸದೆ ಹತ್ತಕ್ಕೆ ಒಂದುವರೆ, ಹತ್ತಕ್ಕೆ ಒಂದುವರೆ ಎಂದು ರಾಗವಾಗಿ ಕೂಗಿ ಈರುಳ್ಳಿ ಮಾರುತ್ತಿದ್ದ. ಹತ್ತಕ್ಕೆ ಒಂದುವರೆ ಎಂದರೇನು ಅಂತ ನನಗೆ ಗೊತ್ತಾಗಲಿಲ್ಲ. ಅವನ ಬಳಿಯೇ ಹೋಗಿ ಕೇಳಬೇಕೆನಿಸಿ ಕೇಳಿದೆ. ಅವನು ನನ್ನ ಅಪಾದಮಸ್ತಕ ನೋಡಿ,

"ಸಾರ್ ಅದು ನಿಮಗೆ ಗೊತ್ತಾಗೊಲ್ಲ ಬಿಡಿ, ಹೆಂಗಸರಿಗೆ ಬೇಗ ಗೊತ್ತಾಗಿಬಿಡುತ್ತೆ" ಅಂತ ನಕ್ಕ.

"ಅದಕ್ಕೆ ಕಣ್ರೀ ಕೇಳೀದ್ದು ಗೊತ್ತಾಗಿದ್ದರೆ ಯಾರು ಕೇಳುತ್ತಿದ್ದರು ಹೇಳಿ?" ನನ್ನನ್ನು ಸಮರ್ಥಿಸಿಕೊಳ್ಳುತ್ತಾ ಮರು ಪ್ರಶ್ನೆ ಹಾಕಿದೆ.

"ಒಂದುವರೆ ಕೇಜಿಗೆ ಹತ್ತು ರೂಪಾಯಿ ಅಷ್ಟೇ ಎಷ್ಟು ಕೊಡಲಿ?" ಅಂದ. ಅಷ್ಟರಲ್ಲಿ ನನ್ನ ಪಕ್ಕ ಒಂದು ವಯಸ್ಕ ಹೆಂಗಸು " ಕಡಿಮೆ ಮಾಡಿಕೊಳ್ಳಪ್ಪ ಸ್ವಲ್ಪ" ಅಂದಳು.

"ಓ ಇದಕ್ಕಿಂತ ಕಡಿಮೇನಾ., ನಾನು ಇಬ್ಬರು ಹೆಂಡ್ತೀ ನಾಲ್ಕು ಹೆಣ್ಣುಮಕ್ಕಳು ಸಾಕಬೇಕು. ಇನ್ನೂ ಕಡಿಮೆ ಮಾಡಿದ್ರೆ ಅಷ್ಟೆ" ತಕ್ಷಣವೇ ಅವನಿಂದ ಉತ್ತರ ಬಂತು. ಅಲ್ಲಿದ್ದವರೆಲ್ಲಾ ಅವನ ಮಾತು ಕೇಳಿ ಗೊಳ್ಳೆಂದು ನಕ್ಕರು.

"ಹೋಗ್ಲಿ ಬಿಡಪ್ಪ, ಹತ್ತು ರೂಪಾಯಿಗೆ ಒಂದುವರೆ ಕೆಜಿ ಕೊಟ್ಟು ನಿಮ್ಮ ಹೆಂಡ್ತಿ ಮಕ್ಕಳನ್ನ ಮಹಾರಾಜನಂತೆ ಸಾಕು" ಮರು ಉತ್ತರ ನೀಡಿ ಈರುಳ್ಳಿ ಕೊಂಡು ವಯಸ್ಸಾದ ಮಹಿಳೆ ಹೊರಟುಹೋದಳು.

" ಬನ್ನಿ ಅಕ್ಕ, ಬನ್ನಿ ಅಮ್ಮ....ಹತ್ತಕ್ಕೆ ಒಂದುವರೆ, ನಮ್ಮ ಈರುಳ್ಳಿ ತಿಂದವರ ಮನೆಯಲ್ಲಿ ದೀಪಾವಳಿ ಹಬ್ಬ ಬನ್ನಿ ತಂಗಿ" ಒಂದೇ ಸಮನೇ ಕೂಗುತ್ತಿದ್ದ. ಎಲಾ ಇವನ ಬರೀ ಅಮ್ಮ, ಅಕ್ಕ, ತಂಗಿ ಅಂತ ಕೇವಲ ಹೆಂಗಸರನ್ನೇ ಕರೀತಾನಲ್ಲ, ಕೇಳಿಯೇ ಬಿಡೋಣವೆನ್ನಿಸಿ, "ಏನಪ್ಪ ವ್ಯಾಪಾರಕ್ಕೆ ಹೆಂಗಸರನ್ನು ಮಾತ್ರ ಕರೀತೀಯಲ್ಲ....ನಮ್ಮಂತವರು ನಿಮಗೆ ಗಿಟ್ಟೋದಿಲ್ವೇ" ಅಂದೆ.

"ಸಾರ್ ನೀವು ಅಪರೂಪಕ್ಕೆ ಒಮ್ಮೆ ಬರುತ್ತೀರಿ, ಬೆಲೆ ಕೇಳದೆ ತೆಗೆದುಕೊಂಡು ಹೋಗಿಬಿಡುತ್ತೀರಿ. ಮತ್ತೆ ನೀವು ಬರುವುದು ಮುಂದಿನ ಯುಗಾದಿಗೋ, ಮಾರನವಮಿಗೋ...ಆದ್ರೆ ಹೆಣ್ಮಕ್ಕಳು ಪ್ರತಿ ವಾರ ಬರುತ್ತಾರೆ. ಅವರು ಚೌಕಾಸಿ ಮಾಡಿದರೂ ಯಾಪಾರ ಮಾಡೋರು ಅವರೇ ತಾನೇ! ಅವರು ಚೌಕಾಸಿ ಮಾಡಿದರೂ ಅವರಿಂದಲೇ ನಮ್ಮ ಜೀವನ. ಅವರೇ ಮುಖ್ಯ ಸಾಮಿ ನೀವಲ್ಲ.." ಅಂದ. ಅವನ ಮಾತಿಗೆ ನನ್ನಲ್ಲಿ ಉತ್ತರವಿರಲಿಲ್ಲ.

ಇವರಡು ದೃಶ್ಯಗಳಲ್ಲಿ ಮೊದಲನೆಯದು ಸಂಪಿಗೆ ರಸ್ತೆಯಲ್ಲಿರುವ ಮಂತ್ರಿ ಸ್ಕ್ವೈರ್‍ನ ಸ್ಪಾರ್ ಮಾರ್ಕೆಟಿನದು. ಎರಡನೆಯದು ಯಶವಂತಪುರ ತರಕಾರಿ ಮಾರುಕಟ್ಟೆಯದು.

ಮಂತ್ರಿ ಸ್ಕ್ವೇರ್ ಕಡೆಯಿಂದ ಸಂಪಿಗೆ ರಸ್ತೆ.

ಮಲ್ಲೇಶ್ವರಂ ಕಡೆಯಿಂದ ನೋಡಿದಾಗ ನಮ್ಮ ಸಂಪಿಗೆ ರಸ್ತೆ ಕಾಣುವುದು ಹೀಗೆ!

ಸಂಪಿಗೆ ರಸ್ತೆ ನನ್ನ ಮೆಚ್ಚಿನ ರಸ್ತೆ. ಎರಡೂ ಕಡೇ ರೆಂಬೆಕೊಂಬೆಗಳಲ್ಲಿ ಹಸಿರನ್ನು ತುಂಬಿಕೊಂಡು ಇಡೀ ರಸ್ತೆಗೆ ಹಸಿರುಚತ್ರಿ ಹಿಡಿದಂತೆ ಕಾಣುವ ದೊಡ್ಡ ದೊಡ್ಡ ಸಾಲುಮರಗಳು, ಪಕ್ಕದಲ್ಲಿನ ಉದ್ಯಾನವನ. ನನ್ನ ಹೈಸ್ಕೂಲು ಮತ್ತು ಕಾಲೇಜುದಿನಗಳ ಎಂಟುವರ್ಷಗಳು ಈ ರಸ್ತಯಲ್ಲಿ ನಡೆದಿದ್ದೇನೆ. ಆಗ ಈ ನಡುರಸ್ತೆಯಲ್ಲಿ ಆಯಾಗಿ ಸೈಕಲ್ ತುಳಿದಿದ್ದೇನೆ. ಬೇಸಿಗೆಯಲ್ಲಿ ನೆರಳಿನ ತಂಪನ್ನು, ಚಳಿಗಾಲದಲ್ಲಿ ಬೆಳಗಿನ ಚುಮುಚುಮು ಚಳಿಯ ಇಬ್ಬನಿ ವಾತಾವರಣದಲ್ಲಿ ಚತ್ರಿಗಳಂತಿರುವ ಈ ಮರಗಳ ಎಲೆಗಳ ನಡುವೆ ತೂರಿ ಬರುವ ಬಿಸಿಲಕೋಲನ್ನು ನೋಡಿ ಅಸ್ವಾದಿಸಿದ್ದೇನೆ. ಈಗಲೂ ನಿತ್ಯ ನನ್ನ ಬೆಳಗಿನ ದಿನಪತ್ರಿಕೆ ವಿತರಣೆ ಕೆಲಸದ ಓಡಾಟ ಈ ರಸ್ತೆಯಲ್ಲೇ. ಅಂತ ರಸ್ತೆಯಲ್ಲಿ ಮಾಲ್‍ಗಿಂತ ದೊಡ್ಡದು ಅಂತ ಹೇಳುವ ಮಂತ್ರಿ ಸ್ಕ್ವೇರ್ ಬಂದಿದೆ. ಜೊತೆಗೆ ಬೆಂಗಳೂರಿಗೆ ಮತ್ತೊಂದು ಟ್ರಾಫಿಕ್ ಜಾಮ್ ಸಮಸ್ಯೆಯನ್ನು ಜೊತೆಯಲ್ಲಿಯೇ ಕರೆತಂದಿದೆ. ಆಗೆಲ್ಲಾ ನಿಮಿಷದಲ್ಲಿ ಈ ರಸ್ತೆಯಲ್ಲಿ ಸಾಗುತ್ತಿದ್ದ ನಾವು ಈಗ ಈ ಪುಟ್ಟ ರಸ್ತೆಯನ್ನು ಕ್ರಮಿಸಲು ಹತ್ತು ಹದಿನೈದು ನಿಮಿಷಗಳಾಗುತ್ತಿವೆ. ವಾರಾಂತ್ಯದಲ್ಲಂತೂ ವಾಹನಚಾಲಕರ ಕತೆ ಕೇಳುವುದೇ ಬೇಡ. ಮುಂದೆ ಏನಾಗಬಹುದು? ನಮ್ಮ ಸರ್ಕಾರಕ್ಕೆ ಗೊತ್ತಿರುವುದು ಒಂದೇ ರಸ್ತೆ ಅಗಲ ಮಾಡಲು ಮರಗಳನ್ನು ಕತ್ತರಿಸಿ ಬಿಸಾಡುವುದು. ಇಲ್ಲೂ ಮುಂದೆ ಅದು ಆಗುತ್ತದೆ. ಅದಕ್ಕಾಗಿ ಈ ಸುಂದರ ರಸ್ತೆಯ ಮರಗಳ ಸಮೇತ ಮಳೆಗಾಲ ಚಳಿಗಾಲ ಬೇಸಿಗೆ ಎಲ್ಲಾ ಕಾಲದಲ್ಲಿಯೂ ಫೋಟೊ ತೆಗೆದಿಟ್ಟುಕೊಂಡಿದ್ದೇನೆ. ಮುಂದೆ ಈ ರಸ್ತೆಯಲ್ಲಿ ಮರಗಳು ಇಲ್ಲವಾಗಿ ಈ ರಸ್ತೆಯೂ ಬೋಳಾಗಿಬಿಟ್ಟರೆ ಅನ್ನುವ ಭಯ ಈಗಲೇ ನನಗೆ ಕಾಡುತ್ತಿದೆ. ನಮ್ಮ ಸರ್ಕಾರಕ್ಕೆ ಅಂತ ಆಲೋಚನೆ ಬರದೇ ಟ್ರಾಫಿಕ್ಕಿಗಾಗಿ ಬೇರೆ ದಾರಿ ಹುಡುಕಿಕೊಳ್ಳಲಿ ಅಂತ ದೇವರಲ್ಲಿ ಪ್ರಾರ್ಥಿಸುತ್ತಿದ್ದೇನೆ.

ಈ ಟ್ರಾಫಿಕ್ ಮಂತ್ರಿ ಸ್ಕ್ವೇರ್ ಎಫೆಕ್ಟ್!


ಮಾಲ್ ಸಂಸ್ಕೃತಿ ನಮ್ಮ ಕಡೆ[ಮಲ್ಲೇಶ್ವರಂ, ರಾಜಾಜಿನಗರ, ವೈಯ್ಯಾಲಿಕಾವಲ್, ಶೇಷಾದ್ರಿಪುರಂ, ಇತ್ಯಾದಿ..]ಇರಲಿಲ್ಲ. ಇತ್ತೀಚೆಗೆ ಒಂದು ಬಿಗ್ ಬಜಾರ್, ಅದರ ಪಕ್ಕ ಪ್ಯಾಕ್ಟರಿ ಔಟ್‍ಲೆಟ್, ಸಂಪಿಗೆ ರಸ್ತೆಯಲ್ಲಿ ಮಂತ್ರಿ ಸ್ಕ್ವೇರ್....ದೊಡ್ದದಾದ ರೀತಿಯಲ್ಲಿ ತೆರೆದುಕೊಂಡಿವೆ. ಎಲ್ಲೆಲ್ಲೂ ದೊಡ್ಡ ದೊಡ್ಡ ಜಾಹಿರಾತಿನ ದೊಡ್ದಪಲಕಗಳು, ಟಿ.ವಿ ಮತ್ತು ಎಪ್. ಎಮ್ ರೇಡಿಯೋದಲ್ಲಿ ನಿಮಿಷಕೊಮ್ಮೆ ಜಾಹಿರಾತುಗಳು, ಪತ್ರಿಕೆಗಳಲ್ಲಿ ಪುಟಗಟ್ಟಲೇ ಜಾಹಿರಾತುಗಳನ್ನು, ನಮ್ಮ ಓಣಿಯ ಪುಟ್ಟ ಮಕ್ಕಳು ಈ ಮಾಲ್, ಬಜಾರುಗಳ ಬಗ್ಗೆ ಮಾತಾಡುವುದನ್ನು ನೋಡಿ ನನ್ನ ಶ್ರೀಮತಿ ನಾವು ಹೋಗಿಬರೋಣವೆಂದು ಒತ್ತಾಯ ಮಾಡಿದಳು. ಮೊದಲು ಪ್ಯಾಕ್ಟರಿ ಔಟ್‍ಲೆಟ್, ಬಿಗ್ ಬಜಾರ್...ನಂತರ ಮಂತ್ರಿ ಸ್ಕ್ವೇರ್. ಒಳಗೆ ಹೋಗುತ್ತಿದ್ದಂತೆ ಆಹಾ.....ತರಾವರಿ ಬಣ್ಣ ಬಣ್ಣದ ವಸ್ತುಗಳು, ಮನೆಗೆ ಬೇಕಾದ ಸಕಲವೂ ಇಲ್ಲಿ ಸಿಕ್ಕೇ ಸಿಗುತ್ತವೆ. ನುಣುಪಾದ ಕನ್ನಡಿಯಂತ ನೆಲ, ಮೇಲೇರಿ ಕೆಳಗಿಳಿಯುವ ಎಸ್ಕಲೇಟರುಗಳು, ಸುತ್ತಾಡಿ ಸುಸ್ತಾಗುವಷ್ಟು ದೊಡ್ಡ ಮಾಲುಗಳು ಎಲ್ಲ ಏಸಿ. ಪೂರ್ತಿ ಓಸಿ. ನೋಡುತ್ತಿದ್ದರೇ ಕಾಮನಬಿಲ್ಲಿನ ಎಲ್ಲಾ ಬಣ್ಣಗಳೂ ಇಲ್ಲೇ ಮೇಳೈಸಿದಂತೆ ಅನುಭವ.

ಒಳಗೆ ಜೀನ್ಸ್ ಪ್ಯಾಂಟುಗಳನ್ನು ಒಪ್ಪವಾಗಿ ಜೋಡಿಸಿಟ್ಟಿದ್ದ ಮಂತ್ರಿ ಸ್ಕ್ವೇರಿನ ಒಂದು ಮಾಲ್‍ನೊಳಗೆ ಹೋಗಿ ನೋಡುತ್ತಿದ್ದೆ. ಎಲ್ಲದರ ಬೆಲೆಯೂ ಸಹಜವಾಗಿ ಹೆಚ್ಚೇ ಇತ್ತು. ಯಾವ ಬಟ್ಟೆಯನ್ನು ನೋಡಿದರೂ ಬೆಲೆ ಹೆಚ್ಚಾಗಿಯೇ ಇತ್ತು. ಆಗ ನಮ್ಮ ರಾಮಚಂದ್ರಪುರದ ಟೈಲರ್ ನೆನಪಿಗೆ ಬಂದ. "ಸರ್, ನಿಮಗೆ ಬೇಕಾದ ಬಟ್ಟೆ ಇಲ್ಲಿದೆ ನೋಡಿ ಅಯ್ಕೆ ಮಾಡಿ. ನಿಮಗೆ ಬೇಕಾದ ಪಕ್ಕಾ ಅಳತೆಯಲ್ಲಿ ಬಟ್ಟೆ ಮತ್ತು ಹೊಲೆಯುವ ಕೂಲಿ ಸೇರಿ ಕೇವಲ ಮುನ್ನೂರು ರೂಪಾಯಿಗೆ ಚೆನ್ನಾಗಿ ಹೊಲಿದುಕೊಡುತ್ತೇನೆ" ಅಂತ ಆತ ಹೇಳಿದ್ದು ನೆನಪಿಗೆ ಬಂತು. ಇಂಥ ಮಾಲ್‍ನಲ್ಲಿ ದುಬಾರಿ ಬೆಲೆಯನ್ನು ಕೊಟ್ಟು ನಮ್ಮಂಥ ಮದ್ಯಮ ವರ್ಗದವರು ಬಟ್ಟೆಗಳನ್ನು ಕೊಳ್ಳಲು ಪ್ರಾರಂಭಿಸಿದರೆ ಆ ಟೈಲರುಗಳ ಗತಿಯೇನು? ಅವನ ಹೆಂಡತಿ ಮತ್ತು ಮಕ್ಕಳ ಕತೆಯೇನು? ಯಾವಾಗ ಹೋದರು ಪ್ರೀತಿಯಿಂದ ಮನಃಪೂರ್ವಕವಾಗಿ ಮಾತಾಡಿಸುವ ಆತ ಚೌಕಾಸಿ ಮಾಡಿದರೂ ಬೇಸರಗೊಳ್ಳುವುದಿಲ್ಲ. ಆದ್ರೆ ಇಲ್ಲಿ ಎಲ್ಲವೂ ನಿಗದಿತ ಬೆಲೆ. ತರಕಾರಿ ಆಹಾರ ಪದಾರ್ಥಗಳು, ಖಾದ್ಯಗಳು ಇನ್ನಿತರ ವಿಚಾರದಲ್ಲಿ ಬೆಲೆಗಳು ಸ್ವಲ್ಪ ಕಡಿಮೆಯಿದೆ ಅನ್ನೋದು ನನ್ನ ಶ್ರೀಮತಿಯ ಅಭಿಪ್ರಾಯ. ಕೆಲವು ಉತ್ತಮ ಗುಣಮಟ್ಟದ ವಸ್ತುಗಳ ಬೆಲೆಯೂ ಗುಣಮಟ್ಟಕ್ಕೆ ತಕ್ಕಂತೆ ಇರುವುದರಿಂದ ಗುಣಮಟ್ಟ ನಿರೀಕ್ಷಿಸುವವರು ದಾರಾಳವಾಗಿ ಕೊಂಡುಕೊಳ್ಳುತ್ತಿದ್ದರು. ಮತ್ತೆ ಎಲ್ಲ ವಸ್ತುಗಳಿಗೂ ನಿಗದಿತ ಬೆಲೆ. ಚೌಕಾಸಿಯ ಮಾತೇ ಇಲ್ಲ. ಅದಕ್ಕಿಂತ ಮೊದಲಿಗೆ ಎಲ್ಲಾ ಲೆಕ್ಕಾಚಾರ. ಬ್ರೆಡ್ಡಿನ ಮೇಲೆ ಬೆಣ್ಣೆ ಸವರಿದಂತೆ ಮೇಲುನೋಟಕ್ಕೆ ಎಲ್ಲವೂ ತಳುಕುಬಳುಕು.

ಆದ್ರೂ ಮಂತ್ರಿ ಸ್ಕ್ವೇರಿಗೆ ಬರಬೇಕು ಕಣ್ರಿ... ಏನನ್ನು ಕೊಂಡುಕೊಳ್ಳದಿದ್ದರೂ ಚೆಂದದ ಬಟ್ಟೆ ತೊಟ್ಟ ಬಣ್ಣ ಬಣ್ಣದ ಹುಡುಗಿಯರನ್ನು ನೋಡಲು ಬರಬೇಕು. ಮನೆಯಲ್ಲಿ, ಕಾಲೇಜಿನಲ್ಲಿ, ಅಫೀಸಿನಲ್ಲಿ ಜೈಲುಹಕ್ಕಿಗಳಾಗಿದ್ದರೇನೋ ಅನ್ನುವಷ್ಟರ ಮಟ್ಟಿಗೆ ಹುಡುಗರು ಮತ್ತು ಹುಡುಗಿಯರು ಮೈಮರೆತು ನಲಿಯುವುದನ್ನು ನೋಡಲು ಬರಲೇಬೇಕು. ನುಣುಪಾದ ನೆಲದಲ್ಲಿ ಆಗಾಗ ನಮ್ಮ ಮುಖ ನೋಡಿಕೊಳ್ಳಬೇಕು. ಬಣ್ಣ ಬಣ್ಣದ ಗೋಡೆಗಳು ಅದಕ್ಕೊಪ್ಪುವಂತ ಕಣ್ಕುಕ್ಕುವಂತ ಜಾಹಿರಾತುಗಳುಗಳನ್ನೆಲ್ಲಾ ನೋಡುತ್ತಾ ಮೆಟ್ಟಿಲು ಹತ್ತಿಳಿಯಬೇಕು. ಇಡೀ ಮಾಲನ್ನು ಲೆನ್ಸಿನ ವೈಡ್ ಆಂಗಲಿನಂತೆ ಕಣ್ಣಗಲಿಸಿ ನೋಡಿ ಕಣ್ತುಂಬಿಕೊಳ್ಳಬೇಕು. ಡಾಕ್ಟರು ವಾಕಿಂಗ್ ಮಾಡಿ ಅಂತ ಹೇಳಿದಾಗ ಬೇಸರಗೊಳ್ಳದೆ ಇಲ್ಲಿ ಬಂದು ದಿನಕ್ಕೆ ಎರಡುಗಂಟೆ ಇಡೀ ಮಾಲ್ ತುಂಬಾ ವಾಕ್ ಮಾಡಿ ಮೆಟ್ಟಿಲು ಹತ್ತಿಳಿಯಿರಿ. ಅಂತ ಏಸಿ ಮಾಲಿನಲ್ಲಿ ಕಣ್ಣು ಮತ್ತು ಮನಸ್ಸು ತಂಫು ಮಾಡಿಕೊಳ್ಳೂತ್ತಾ ಉಚಿತವಾಗಿ ದೇಹದ ತೂಕವನ್ನು ಇಳಿಸಿಕೊಳ್ಳಲು ಇದಕ್ಕಿಂತ ಒಳ್ಳೇ ದಾರಿ ಬೇರೊಂದಿಲ್ಲ.

ಮೂರನೆ ಮಹಡಿಯಲ್ಲಿರುವ ಫುಡ್ ಕಾಂಪ್ಲೆಕ್ಸು

ನನ್ನ ಈ ಉಪಾಯವನ್ನು ಕೆಲವು ವಯಸ್ಕರು ಆಗಲೇ ಕಾರ್ಯೋನ್ಮುಖರಾಗಿಬಿಟ್ಟಿದ್ದಾರೆ. ನಾನು ಪರೀಕ್ಷೆಮಾಡಲು ಮೂರು ದಿನ ಸತತವಾಗಿ ಹೋಗಿದ್ದೆ. ಮೂರು ದಿನವೂ ಸಂಜೆಯ ವೇಳೆಯಲ್ಲಿ ಆರು ವಯಸ್ಕರು ಹಾಜರಾಗಿದ್ದಾರೆ. ಅವರು ಸ್ಪಾರ್ ಮಾರ್ಕೆಟ್ಟಿನ ವೈನ್ ಸೆಕ್ಷನ್ನಿನಲ್ಲಿ ತಮ್ಮ ಆಡ್ಡ ಮಾಡಿಕೊಂಡಿದ್ದರು. ಒಬ್ಬ ಹಿರಿಯ ಅಲ್ಲಿರುವ ದುಬಾರಿ ವಿದೇಶಿ ವೈನನ್ನು ತೋರಿಸಿ ’ಫಾರೀನ್‍ನಿಂದ ಬಂದ ನನ್ನ ಅಳಿಯ ಇದೇ ವೈನನ್ನು ನನಗಾಗಿ ತಂದುಕೊಟ್ಟಿದ್ದ, ಅದನ್ನು ಜೋಪಾನವಾಗಿಟ್ಟು ನನ್ನ ಗೆಳೆಯನ ಮದುವೆ ವಾರ್ಷಿಕೋತ್ಸವಕ್ಕೆ ಗಿಫ್ಟ್ ಮಾಡಿದೆ ಕಣಯ್ಯ", ಅಂತ ಹೇಳಿದರೇ, "ನನಗೆ ಐದುನೂರು ವರ್ಷದಷ್ಟು ಹಳೆಯದಾದ ಫಾರಿನ್ನಿನ ವೈನೊಂದು ಗಿಪ್ಟ್ ಬಂದಿತ್ತು ಕಣಯ್ಯ, ಎಂಥ ಪ್ಲೇವರ್ ಅಂತೀಯಾ, ವರ್ಷಾನುಗಟ್ಟಲೇ ಅದರ ವಾಸನೆ ಎಳೆದುಕೊಂಡೇ ಖುಷಿಪಟ್ಟಿದ್ದೆ. ಅದೊಂದು ರಾತ್ರಿ ಸಿಂಗ್ ಜೊತೆಸೇರಿ ಕುಡಿದು ಖಾಲಿಮಾಡಿದ್ದೆ." ಅಂತ ಮತ್ತೊಬ್ಬರು ಹೇಳಿದ್ದು ಕೇಳಿ ನನಗೆ ನಗು ಬಂತು. ಹೀಗೆ ವಯಸ್ಕರು ಏನನ್ನು ಕೊಳ್ಳದೇ ಹೀಗೆ ಅಡ್ದಾಡಿ ವಸ್ತುಗಳ ಮುಂದೆ ನಿಂತು ತಮ್ಮ ಗತಕಾಲದ ನೆನಪುಗಳ ಸುರುಳಿಯನ್ನು ಬಿಚ್ಚಲು ಇದಕ್ಕಿಂತ ಒಳ್ಳೇ ಜಾಗ ಎಲ್ಲಿದೆ ಹೇಳಿ?

ಬೃಹತ್ ಗಾತ್ರ ಜಾಹಿರಾತು ಫಲಕಗಳು ಮಾಲುಗಳಲ್ಲಿ

ನಾನು ಗಮನಿಸಿದ ಮತ್ತೊಂದು ವಿಚಾರವೆಂದರೆ ನಿತ್ಯ ಗಾಂಪರ ಹಾಗೆ ದಿನಪತ್ರಿಕೆ ಹಂಚಲು ಬರುವ ನಮ್ಮ ಬೀಟ್ ಹುಡುಗರು ಮತ್ತು ಯುವಕರು ಇದೇ ಮಾಲುಗಳಲ್ಲಿ ಸಮವಸ್ತ್ರ ಧರಿಸಿ ಸೇಲ್ಸ್ ಬಾಯ್ಸ್ ಆಗಿರುವುದು ಕಾಣಿಸಿತು. ಮತ್ತೆ ದಿನಪತ್ರಿಕೆ ವಸೂಲಿಗೆ ಹೋದಾಗ ಒಂದು ರೂಪಾಯಿ ಮತ್ತು ಐವತ್ತು ಪೈಸೆಗೆ ನನ್ನ ಜೊತೆಗೆ ಚೌಕಾಸಿ ಮಾಡುವ ಅನೇಕ ಗ್ರಾಹಕರು ಮಾಲ್‍ನ ಮೂರನೇ ಮಹಡಿಯಲ್ಲಿರುವ ಪುಡ್ ಕಾಂಪ್ಲೆಕ್ಸುಗಳಿಗೆ ಲಗ್ಗೆ ಹಾಕಿದ್ದರು. ಅದಕ್ಕೆ ನನ್ನ ಅಭ್ಯಂತರವೇನು ಇಲ್ಲ. ಆದ್ರೆ ಇಲ್ಲಿರುವ ಪ್ರತಿಯೊಂದು ತಿಂಡಿಯ ಬೆಲೆಯೂ ನೂರನ್ನೂ ದಾಟುತ್ತದೆ. ಅದನ್ನು ಕ್ಯೂನಲ್ಲಿ ಮಕ್ಕಳ ಜೊತೆ ನಿಂತಿರುವುದು ನೋಡಿ ನನಗೆ ನಗುಬಂತು. ಇಷ್ಟೆಲ್ಲಾ ನೋಡಿದ ಮೇಲೆ ಎಲ್ಲೋ ಒಂದು ಕಡೆ ನಮಗೆ ಗೊತ್ತಿಲ್ಲದ ಹಾಗೆ ಬೇಸರವಾಗುತ್ತದೆ. ಅದ್ಯಾಕೆ ಬೇಸರವಾಗುತ್ತದೆ ಅಂತ ನಿಮ್ಮನ್ನು ನೀವು ಪ್ರಶ್ನಿಸಿಕೊಂಡರೇ ಉತ್ತರ ತಕ್ಷಣಕ್ಕೆ ಹೊಳೆಯುವುದಿಲ್ಲ. ಸ್ವಲ್ಪ ಯೋಚಿಸಿದಾಗ ಹೊಳೆಯಿತು. ಅಲ್ಲಿಗೆ ಬಂದಿರುವ ಪ್ರತಿಯೊಬ್ಬರೂ ಸಹಜವಾಗಿ ಇದ್ದಂತೆ ಕಾಣಲಿಲ್ಲ. ಜೊತೆಗೆ ನಾನು ಕೂಡ ನನಗಾಗಿ ಮಾಲ್‍ನಲ್ಲಿ ಸಹಜವಾಗಿ ಇರಲಿಲ್ಲವಲ್ಲ ಅನ್ನಿಸತೊಡಗಿತು. ಪ್ರತಿಯೊಬ್ಬರೂ ಆಧುನಿಕ ಬಟ್ಟೆಗಳನ್ನು ಧರಿಸಿದ್ದರೂ ಅದು ಅವರಿಗಾಗಿ ಹಾಕಿರಲಿಲ್ಲವೇನೋ, ಬೇರೆಯವರು ಅವರನ್ನು ನೋಡಿ ಮೆಚ್ಚಿಕೊಳ್ಳಲಿ ಎನ್ನುವ ಹಾಗೆ ಅವರ ನಡುವಳಿಕೆಯಿತ್ತು. ಮತ್ತೆ ಕ್ಷಣಕೊಮ್ಮೆ ತಮ್ಮನ್ನು ಯಾರಾದರೂ ಗಮನಿಸುತ್ತಿದ್ದಾರೆಯೇ ಅಂತ ವಾರೆನೋಟದಲ್ಲಿ ನೋಡುವವರೇ ಇದ್ದರು. ಒಟ್ಟಾರೆ ಇಡೀ ಮಾಲ್‍ನಲ್ಲಿ ತಮ್ಮ ಸಹಜಗುಣವನ್ನು ಮರೆತು ಬೇರೆಯವರಿಗಾಗಿ ಹೀಗೆಲ್ಲಾ ವರ್ತಿಸುತ್ತಿದ್ದಾರೇನೋ ಅನ್ನಿಸಿದ್ದು ನಿಜ. ಅವರಿಗೇ ತಮ್ಮ ಮನಸ್ಸಿಗೆ ಬಂದಂತೆ ಹೃದಯಪೂರ್ವಕವಾಗಿ ಬಂದ ಭಾವನೆಗಳನ್ನು ಸಹಜವಾಗಿ ಯಾರೊಂದಿಗೂ ಹಂಚಿಕೊಳ್ಳದೇ ಪ್ರತಿಯೊಬ್ಬರೂ ತೋರಿಕೆಗೆ ಒಬ್ಬರನ್ನೊಬ್ಬರೂ ಮೆಚ್ಚುತ್ತಾ ಮಾಲ್ ಕಾಂಪ್ಲೆಕ್ಸನ್ನು ಹೊಗಳುತ್ತಾ ಕೃತಕವಾಗಿ ಮುಗುಳ್ನಗು ಮಾತ್ರ ಚಿಮ್ಮಿಸುತ್ತಿದ್ದರು.

ಬಣ್ಣದ ದೀಪಗಳಿಂದ ಅಲಂಕೃತವಾದ ಮಾಲ್

ಮತ್ತೊಂದು ವಿಚಾರವೆಂದರೆ ಇಡೀ ಮಾಲ್‍ನಲ್ಲಿ ಎಲ್ಲೂ ನಾವು ಮನ:ಪೂರ್ವಕವಾಗಿ ನಗುವಂತಿಲ್ಲ. ಜೋರಾಗಿ ನಗಬಾರದೆಂದು ಎಲ್ಲೂ ಬೋರ್ಡು ಹಾಕಿಲ್ಲ. ಆದ್ರೂ ಯಾರು ಮನಸೋ ಇಚ್ಚೇ ನಕ್ಕು ಸಂತೋಷಪಡುವಂತಿಲ್ಲ. "ಹಾಗಾದರೆ ಇಂಥ ಮಾಲುಗಳಿಗೆ ಸುಖಾಸುಮ್ಮನೇ ಬರುವುದಕ್ಕೆ ಜನರಿಗೇನು ತಲೆಕೆಟ್ಟಿದೆಯೇ?" ಅಂತ ನಿಮಗನ್ನಿಸಬಹುದು. ನಾನು ಇದೇ ಪ್ರಶ್ನೆಯನ್ನು ಕೇಳಿಕೊಂಡಾಗ ಸಿಕ್ಕ ಉತ್ತರವೇನೆಂದರೆ, ಅವರು ಇಲ್ಲಿಗೆ ಬಂದಾಗ ತುಂಬಾ ಖುಷಿಯಾಗುತ್ತದೆ, ಅದಕ್ಕಾಗಿಯೇ ಬರುತ್ತಾರೆ. ಆದ್ರೆ ಅದನ್ನು ಹೊರಗಡೆ ಮಗುವಿನಂತೆ ಆನಂದಿಸಲು ಅವರಿಗೆ ನಮ್ಮ ಆಧುನಿಕ ನಗರೀಕರಣದ ಗಾಂಭೀರ್ಯ ಸಂಸ್ಕೃತಿ ಆಡ್ಡಬರುತ್ತಿದೆ. ಅಲ್ಲಿ ಮಕ್ಕಳು ಮಕ್ಕಳಂತೆ ಆನಂದಿಸಲು ಅವರ ತಂದೆತಾಯಿಗಳು ಬಿಡುವುದಿಲ್ಲ. ಅವರ ಮೇಲು ಇದೇ ಸಂಸ್ಕೃತಿಯನ್ನು ಹೇರಿಬಿಡುತ್ತಾರೆ. ಇನ್ನೂ ಅದರಲ್ಲಿ ಕೆಲಸ ಮಾಡುವ ಕೆಲಸಗಾರರಿಗೂ ಹಾಗೆ ನೀತಿ ನಿಯಮಗಳಿರುವುದರಿಂದ, ಅವರು ಕೂಡ ಒಳಗೊಳಗೆ ನಗಬೇಕು.

ಯಶವಂತಪುರ ತರಕಾರಿ ಮಾರುಕಟ್ಟೆ.

ಅದೇ ನಮ್ಮ ಮಲ್ಲೇಶ್ವರಂ ೮ನೇ ಆಡ್ಡರಸ್ತೆಗೆ ಬನ್ನಿ. ಅಲ್ಲಿ ರಸ್ತೆಯಲ್ಲಿ ಹೂ ಮಾರುವ ಹುಡುಗಿಯ ಬಳಿ ನಗುತ್ತಾ ಚೌಕಾಸಿ ಮಾಡಬಹುದು. ಕೈಗಾಡಿಯ ಹಣ್ಣಿನವನು ಹೇಳುವ ಅವನ ಸ್ವಂತ ಕತೆಯನ್ನು ಹಿತವಾಗಿ ಕೇಳಬಹುದು. ಉಗುರಿಗೆ ಹಾಕುವ ನೇಲ್ ಪಾಲಿಸ್ ಒಮ್ಮೆ ಹಾಕಿ ನೋಡಿ ಚೆನ್ನಾಗಿಲ್ಲವೆಂದರೆ ವಾಪಸ್ಸು ಕೊಡಬಹುದು, ತರಕಾರಿ ಮಾರುವವಳ ಬಳಿ ಅಮಟೇಕಾಯಿ ಕೊಳ್ಳುತ್ತಾ ಆದರಿಂದ ತಂಬುಳಿ ಮಾಡುವುದನ್ನು ಚರ್ಚಿಸಬಹುದು. ಯಶವಂತಪುರ ತರಕಾರಿ ಮಾರುಕಟ್ಟೆಯಲ್ಲಿ ಮತ್ತಷ್ಟು ಹಳ್ಳಿ ಸೊಗಡು ಭಾಷೆ ಮುಗ್ದತೆಯನ್ನು ನೋಡುತ್ತಾ, ಮನಃಪೂರ್ವಕವಾಗಿ ನಗುತ್ತಾ ವ್ಯಾಪಾರ ಮಾಡಬಹುದು. ಅಲ್ಲಿ ಎಲ್ಲವೂ ಮುಕ್ತ ಮುಕ್ತ. [ಯಶವಂತಪುರ ಸಂತೆಯನ್ನು ಆನಂದಿಸಬೇಕಾದರೆ ನನ್ನ ಈ ವಾರಕೊಮ್ಮೆ ಯಶವಂತಪುರ ಸಂತೆ. ಓದಿ.]
ಮಲ್ಲೇಶ್ವರಂ ಎಂಟನೇ ಆಡ್ಡರಸ್ತೆಯ ರಸ್ತೆ ಮಾರುಕಟ್ಟೆ
ಇಂಥ ಮಾಲುಗಳಲ್ಲಿ ಪ್ರತಿಯೊಂದು ವಸ್ತುವನ್ನು ಪ್ಲಾಸ್ಟಿಕ್ ಪೇಪರಿನಲ್ಲಿ ತುಂಬಿ ತೂಕ ಹಾಕಿ ಸೀಲ್ ಮಾಡಿಟ್ಟಿರುತ್ತಾರೆ. ನನ್ನ ಶ್ರೀಮತಿ ಐದುನೂರು ರೂಪಾಯಿ ಬೆಲೆಯ ವಸ್ತುಗಳನ್ನು ತಂದು ಮನೆಯ ಡಬ್ಬಗಳಿಗೆ ತುಂಬಿದ ನಂತರ ಎಲ್ಲ ಪ್ಲಾಸ್ಟಿಕ್ ಕವರುಗಳನ್ನು ತೂಕ ಮಾಡಿದಾಗ ೨೫೦ ಗ್ರಾಂಗಿಂತಲೂ ಹೆಚ್ಚು ತೂಗುತ್ತಿತ್ತು. ನಮ್ಮಂತೆ ಸಾವಿರಾರು ಗ್ರಾಹಕರು ಸಾವಿರಾರು ರೂಪಾಯಿ ಬೆಲೆಯ ಖರೀದಿಗಳನ್ನು ಮಾಡಿದಾಗ ಅವರಿಗೆ ಕಡಿಮೆಯೆಂದರೂ ಅರ್ಧ ಕೇಜಿ ಪ್ಲಾಸ್ಟಿಕ್ ಅವರ ಮನೆ ಸೇರುತ್ತದೆ. ಇದೇ ಲೆಕ್ಕಾಚಾರದಲ್ಲಿ ಒಂದು ಮಾಲ್ ದಿನಕ್ಕೆ ಅರ್ಧ ಟನ್‍ಗಿಂತಲೂ ಅಧಿಕ ಪ್ಲಾಸ್ಟಿಕ್ ಅನ್ನು ಮನೆಗೆ ಮನೆಗೆ ಕಳಿಸುವುದರಿಂದ ಇಂಥ ಹತ್ತಾರು ಮಾಲುಗಳಿಂದ ಅದೆಷ್ಟು ಟನ್ ಪ್ಲಾಸ್ಟಿಕ್ ಹೊರಬರಬಹುದು. ಇಷ್ಟು ಪ್ಲಾಸ್ಟಿಕ್ ಬೇಡಿಕೆಯನ್ನು ಪರೋಕ್ಷವಾಗಿ ಸೃಷ್ಟಿಸುವ ಮಾಲುಗಳಿಗೆ ಹೋಲಿಸಿದರೆ ಈ ವಿಚಾರದಲ್ಲಿ ನಮ್ಮ ರಸ್ತೆ ಮಾರುಕಟ್ಟೆಗಳೇ ಉತ್ತಮ. ನಾವು ಮಲ್ಲೇಶ್ವರಂ ಅಥವ ಯಶವಂತ ಮಾರುಕಟ್ಟೆಗೆ ಹೊರಟರೆ ಕೈಯಲ್ಲಿ ಒಂದು ದೊಡ್ಡ ಬಟ್ಟೆ ಬ್ಯಾಗುಗಳನ್ನು ತೆಗೆದುಕೊಂಡೇ ಹೊರಡುವುದು. ಕೊಂಡ ಎಲ್ಲಾ ತರಕಾರಿ ರೇಷನ್ ಇತ್ಯಾದಿಗಳನ್ನು ಅದೇ ಬ್ಯಾಗಿನಲ್ಲಿ ತುಂಬಿಸಿಕೊಳ್ಳುತ್ತೇವೆ. ಪ್ಲಾಸ್ಟಿಕ್ ಬಳಕೆ ಇದ್ದರೂ ತೀರ ಕಡಿಮೆ. ಪರೀಕ್ಷೆಗಾಗಿ ಐದುನೂರು ಬೆಲೆಯ ವಸ್ತುಗಳನ್ನು ಮಲ್ಲೇಶ್ವರಂನಲ್ಲಿ ಕೊಂಡು ತಂದಾಗ ನಮಗೆ ಬಂದ ಪ್ಲಾಸ್ಟಿಕ್ ೫೦ ಗ್ರ್‍ಆಂಗಿಂತಲೂ ಕಡಿಮೆಯೆಂದರೇ ನೀವು ನಂಬಲೇ ಬೇಕು. ಹಾಗೆ ಈ ಮಾಲ್‍ಗಳಲ್ಲಿ ನಿತ್ಯ ಉಪಯೋಗಿಸುವ ವಿದ್ಯುತ್ ಲೆಕ್ಕಕ್ಕೆ ಸಿಗುವುದಿಲ್ಲ. ದಿನದ ಹದಿನಾಲ್ಕು ಗಂಟೆ ಲಕ್ಷಾಂತರ ದೀಪಗಳು, ಏಸಿ, ಎಸ್ಕಲೇಟರುಗಳು, ಒಂದೇ ಎರಡೇ......ನಮ್ಮ ಸರ್ಕಾರ ಉತ್ಪಾದಿಸುವ ವಿದ್ಯುತ್ ಇಂಥ ಮಾಲುಗಳಿಗೆ ಸಿಂಹ ಪಾಲು ಸಿಗುವುದರಿಂದ ನಮ್ಮ ಮನೆಗಳಿಗೆ ಗಂಟೆಗೊಮ್ಮೆ ಲೋಡ್ ಸೆಡ್ಡಿಂಗ್. ಅದೆಲ್ಲಾ ಖರ್ಚನ್ನು ಕೊನೆಗೆ ನಮ್ಮ ತಲೆಗೆ ಕಟ್ಟುವುದರಿಂದ ಸಹಜವಾಗಿ ವಸ್ತುಗಳ ಬೆಲೆ ಹೆಚ್ಚೇ ಇರುತ್ತದೆ. ಅದರ ಬದಲಾಗಿ ನಮ್ಮ ರಸ್ತೆಬದಿಯಲ್ಲಿ ಹಗಲೆಲ್ಲಾ ಸೂರ್ಯನಬೆಳೆಕು ರಾತ್ರಿ ಬೀದಿ ದೀಪಗಳಲ್ಲಿ ವ್ಯಾಪಾರ ಮಾಡುವವರೊಂದಿಗೆ ಖುಷಿಯಿಂದ ಚೌಕಾಸಿ ವ್ಯಾಪಾರ ಮಾಡಿ ಸರ್ಕಾರಕ್ಕೆ ಲಕ್ಷಾಂತರ ಯೂನಿಟ್ ವಿದ್ಯುತ್ ಉಳಿಸಬಹುದಲ್ಲವೇ?
ಇವೆಲ್ಲಾ ನನ್ನ ಮನಸ್ಸಿಗೆ ಅನ್ನಿಸಿದ ಭಾವನೆಗಳು ಅಷ್ಟೇ. ಬಡವರ, ಬಡ ಮದ್ಯಮ ವರ್ಗದವರ ದೃಷ್ಟಿಕೋನದ ಅಲೋಚನೆಗಳಷ್ಟೆ. ಶ್ರೀಮಂತರ ದೃಷ್ಟಿಕೋನದಲ್ಲಿ ನೋಡಿದಾಗ ಇದಕ್ಕಿಂತ ಭಿನ್ನ ಚಿತ್ರಗಳೇ ಮೂಡಬಹುದು. ನೀವು ಮಾಲ್‍ಗಳಿಗೆ ಬೇಟಿಕೊಟ್ಟರೆ ನಿಮ್ಮ ಅನುಭವವೂ ಬೇರೆಯಾಗಬಹುದು. ದಿನ ಬದಲಾದಂತೆ ಭಾವನೆಗಳು ಬದಲಾಗಬಹುದು. ಬದಲಾವಣೆ ಜಗದ ನಿಯಮ. ಆದ್ರೆ ಅದು ಪರಿಸರಕ್ಕೆ ಸಂಬಂದಿಸಿದಂತೆ ದಿಡೀರ್ ಬದಲಾವಣೆಯಾಗಬಾರದು, ನಮ್ಮ ಸುಂದರ ಸಾಲುಮರಗಳ ಸಂಪಿಗೆ ರಸ್ತೆಯ ವಾತಾವರಣ ಬದಲಾಗಬಾರದು. ಹಸಿರಿಂದ ನಳನಳಿಸುವ ಮರಗಳು ಮರೆಯಾಗಬಾರದು ಅಲ್ಲವೇ....

ಚಳಿಗಾಲದಲ್ಲಿ ಸಂಪಿಗೆ ರಸ್ತೆ...ಮುಂದೆಯೂ ಈ ಹಸಿರು ಹೀಗೆ ಉಳಿಯುವುದೇ?

ಚಿತ್ರಗಳು ಮತ್ತು ಲೇಖನ.
ಶಿವು.ಕೆ