ಮೊದಲ ಭಾಗವನ್ನು ಓದಿಲ್ಲದವರು ಇಲ್ಲಿ ಕ್ಲಿಕ್ಕಿಸಿ ದೇವರಿಗೆ ಇರಿಸುಮುರಿಸಾಗಬಹುದು, ಬೇಡ ಸುಮ್ಮನಿರ್ರೀ..... ಇದನ್ನು ಓದಿದ ನಂತರ ಎರಡನೆ ಭಾಗವನ್ನು ಓದಿದರೆ ನಿಮಗೂ ಆ ರೈಲಿನಲ್ಲಿ ಕುಳಿತು ಪ್ರಯಾಣಿಸಿದ ಅನುಭವವಾಗಬಹುದು!]
[ಬೆಂಗಳೂರು-ಮಂಗಳೂರು ರೈಲು ಪ್ರಯಾಣ ಅನುಭವ ಭಾಗ-2
ಇದುವರೆಗೆ ಉತ್ತಮ ವೇಗದಲ್ಲಿ ಸಾಗುತ್ತಿದ್ದ ರೈಲು ಇಲ್ಲಿಂದಾಚೆಗೆ ನಿದಾನಗತಿಯಲ್ಲಿ ಚಲಿಸಲಾರಂಭಿಸಿ ಎಲ್ಲರ ತಾಳ್ಮೆಯನ್ನು ಪರೀಕ್ಷಿಸುತ್ತದೆ. ಅನೇಕ ಕಡೆ ತೆವಳುತ್ತದೆ, ಕೆಲವೊಮ್ಮೆ ಸುಮಾರು ಹೊತ್ತು ನಿಂತೇ ಬಿಡುತ್ತದೆ. ಆಗ ಒಳಗಿದ್ದ ಪ್ರಯಾಣಿಕರಿಗೆಲ್ಲಾ ಇದರ ಸಹವಾಸವೇ ಬೇಡವೆಂದು ಅರಾಮವಾಗಿ ನಿದ್ರೆಹೋಗಿಬಿಡುತ್ತಾರೆ. ಮಧ್ಯಾಹ್ನ ಒಂದು ಗಂಟೆಯ ಹೊತ್ತಿಗೆ ಸಕಲೇಶಪುರ ದಾಟಿ ಬಾಳ್ಳುಪೇಟೆ ತಲುಪುವ ಹೊತ್ತಿಗೆ ನಿದಾನವಾಗಿ ನಮ್ಮ ಶಿರಾಡಿ ಘಾಟಿನ ವಿವಿಧ ಮಜಲುಗಳು ತೆರೆದುಕೊಳ್ಳಲಾರಂಭಿಸುತ್ತವೆ. ನಿದಾನವಾಗಿ ತೆವಳುವ ರೈಲು ಹಾವಿನಂತೆ ಚಲಿಸುತ್ತದೆ. ನೂರಾರು ಅಡಿ ಎತ್ತರದ ಸೇತುವೆ ಮೇಲೆ ಸಾಗುವಾಗ ನಮ್ಮ ಬೋಗಿಯಿಂದ ಕೆಳಗೆ ಇಣುಕಿದರೆ ಹೃದಯ ಬಾಯಿಗೆ ಬಂದಂತೆ ಆಗುತ್ತದೆ. ಇಂಥ ಐವತ್ತಕ್ಕೂ ಹೆಚ್ಚು ಸೇತುವೆಗಳ ಮೇಲೆ ಸಾಗುವಾಗ ಒಂದು ಬದಿಯಲ್ಲಿ ದೊಡ್ಡಬೆಟ್ಟಗಳಿದ್ದರೇ ಮತ್ತೊಂದು ಕಡೆ ಹತ್ತಾರು ಕಿಲೋಮೀಟರುಗಟ್ಟಲೇ ಹರಡಿಕೊಂಡಿರುವ ಶಿರಾಡಿಘಾಟು ದಟ್ಟ ಹಸಿರಿನ ಕಾಡು ನಮ್ಮ ಕಣ್ತುಂಬಿಕೊಳ್ಳುತ್ತದೆ. ಮತ್ತೆ ಇಲ್ಲಿನ ಸುರಂಗದಲ್ಲಿ ಸಾಗುವಾಗ ಸಿಗುವ ಅನುಭವ ಅನುಭೂತಿಯೇ ಬೇರೆ ರೀತಿಯದು. ಕೆಲವು ಸುರಂಗಗಳಂತೂ ಅರ್ಧಕ್ಕೂ ಹೆಚ್ಚು ಕಿಲೋಮೀಟರ್ ದೂರವಿರುವುದುಂಟು. ಕೆಲವು ಸುರಂಗದಲ್ಲಿ ನಮ್ಮ ರೈಲು ಯೂ ಆಕಾರದಲ್ಲಿ ಚಲಿಸುವಾಗ ನಮ್ಮ ಕಣ್ಣಗಲಿಸಿದರೆ ಹೆಬ್ಬಾವಿನ ಹೊಟ್ಟೆಯೊಳಗೆ ಚಲಿಸುತ್ತಿರುವಂತೆ ಭಾಸವಾಗುತ್ತದೆ.
ಬೃಹಾದಾಕಾರದ ಸೇತುವೆಯ ಮೇಲೆ ಚಲಿಸುವ ನಮ್ಮ ರೈಲಿನ ಫೋಟೊವನ್ನು ಸುಲಭವಾಗಿ ಕ್ಲಿಕ್ಕಿಸಿದೆನಾದರೂ ಸುರಂಗದಲ್ಲಿ ಫೋಟೊಗ್ರಫಿ ಒಂದು ಸವಾಲು. ನಮ್ಮ ಕಣ್ಣು ಕತ್ತಲಿಗೆ ಹೊಂದಿಕೊಂಡಷ್ಟು ಸುಲಭವಾಗಿ ಕ್ಯಾಮೆರಾ ಕಣ್ಣು ಹೊಂದಿಕೊಳ್ಳುವುದಿಲ್ಲ. ಆದರೂ ಅದರದೇ ಭಾಷೆಯಲ್ಲಿ ತಾಂತ್ರಿಕವಾಗಿ ಲೆಕ್ಕಚಾರಮಾಡಿ ಒಂದಷ್ಟು ಫೋಟೊಗಳನ್ನು ಕ್ಲಿಕ್ಕಿಸಿದ್ದೆ. ಕೆಲವು ಸುರಂಗಗಳಿಗೆ ಒಳಗಿನಿಂದ ಸಿಮೆಂಟ್ ಪ್ಲಾಸ್ಟರಿಂಗ್ ಮಾಡಿದರೆ ಇನ್ನೂ ಕೆಲವು ರಾಕ್ಷಸಾಕಾರದ ಬಂಡೆಗಳನ್ನು ಕೊರೆದು ಮಾಡಿರುವುದರಿಂದ ಸಿಮೆಂಟ್ ಪ್ಲಾಸ್ಟರಿಂಗ್ ಮಾಡದೇ ಹಾಗೆ ಬಿಟ್ಟಿದ್ದಾರೆ. ಸುರಂಗದ ಫೋಟೊ ಕ್ಲಿಕ್ಕಿಸಲು ರೈಲಿನ ಬಾಗಿಲಲ್ಲಿ ಕುಳಿತು ಸರ್ಕಸ್ ಮಾಡುತ್ತಿರಬೇಕಾದರೆ ನನ್ನ ತಲೆ ಮತ್ತು ಕ್ಯಾಮೆರಾ ಮೇಲೆ ತುಂತುರು ಹನಿಗಳ ಹಾಗೆ ನೀರು ಬಿದ್ದಿದ್ದು ನನಗೆ ಆಶ್ಚರ್ಯವಾಯಿತು. ತಲೆಯೆತ್ತಿ ನೋಡಿದೆ. ಈ ಮಟಮಟ ಉರಿಬೇಸಿಗೆಯಲ್ಲಿ ರೈಲಿನ ಮೇಲ್ಬಾಗದಿಂದ ನೀರು ಬೀಳಲು ಹೇಗೆ ಸಾಧ್ಯ? ಮತ್ತೊಂದು ಸುರಂಗದಲ್ಲೂ ಹೀಗೆ ನೀರು ಬಿತ್ತು. ಇದ್ಯಾಕೋ ಸರಿಬರುತ್ತಿಲ್ಲವೆಂದು ಕ್ಯಾಮೆರವನ್ನು ಬ್ಯಾಗಿನೊಳಗೆ ಇಟ್ಟು ಮತ್ತೊಂದು ಸುರಂಗ ಬಂದಾಗ ಬಾಗಿಲಲ್ಲಿ ನಿಂತೆ. ಆಗ ಮೈಮೇಲೆ ಬಿದ್ದ ನೀರು ಬೇಸಿಗೆಯಲ್ಲಿ ಹಾಯ್ ಎನಿಸಿ ಅದನ್ನು ಆನಂದಿಸತೊಡಗಿದೆ. ಇಷ್ಟಕ್ಕೂ ಈ ನೀರು ಎಲ್ಲಿಂದ ಬರುತ್ತದೆಂದರೇ ಬೆಟ್ಟದ ತುದಿಯ ಮೇಲಿಂದ ಹರಿವ ಸಣ್ಣ ಸಣ್ಣ ಜರಿಗಳ ಕೆಳಗೆ ಪರ್ಲಾಂಗುಗಳಷ್ಟು ದೂರ ಸುರಂಗಗಳನ್ನು ಕೊರೆದು ರೈಲು ಹಳಿಗಳನ್ನು ಹಾಕಿರುವುದರಿಂದ ಅಂತ ಬೃಹತ್ ಬಂಡೆಗಳ ನಡುವೆ ಝರಿನೀರು ಜಿನುಗುತ್ತಿರುತ್ತದೆ. ನಾವು ರೈಲಿನಲ್ಲಿ ಹೋಗುವಾಗ ಬಾಗಿಲಲ್ಲಿ ಹುಷಾರಾಗಿ ನಿಂತುಕೊಂಡರೆ ನಮ್ಮ ಮೇಲೂ ಬಿದ್ದು ತಂಪನ್ನೆರೆಯುತ್ತವೆ.
ಬಂಡೆಗಳ ಒಳಗಿಂದ ಜಿನುಗುವ ನೀರು ನನ್ನ ಕ್ಯಾಮೆರಾ ಕಣ್ಣಿಗೆ!

ಸಕಲೇಶಪುರ ದಾಟುತ್ತಿದ್ದಂತೆ ಸುಬ್ರಮಣ್ಯ ರೋಡ್ ನಿಲ್ದಾಣದವರೆಗೆ ಮೂರು ಗಂಟೆಯ ಪ್ರಯಾಣದಲ್ಲಿ ತಿನ್ನಲು ಚುರುಮುರಿ, ಕಡ್ಲೆಕಾಯಿ, ಕಾಫಿ,ಟೀ ಇತ್ಯಾದಿಗಳೇನು ಬರದಿರುವುದರಿಂದ ವಯಸ್ಸಾದವರೆಲ್ಲಾ ಮಲಗಿದ್ದರು. ಆದ್ರೆ ಯುವಕ-ಯುವತಿಯವರು, ಮಕ್ಕಳು ಅದರ ಪರಿವೇ ಇಲ್ಲದೇ "ಯು" ಆಕಾರದಲ್ಲಿ "ಎಸ್ " ಆಕಾರದಲ್ಲಿ ಸಿಗುವ ಸುರಂಗಗಳು ಮತ್ತು ಸೇತುವೆಗಳನ್ನು ನೋಡಿ ಆನಂದಿಸುತ್ತಿದ್ದರು. ಪ್ರಾರಂಭದಲ್ಲಿ ಸೀಟಿಗಾಗಿ ಟಿಕೆಟ್ ಹೊಂದಾಣಿಕೆ ಮಾಡಿಕೊಂಡು ಶಿರಾಡಿ ಘಾಟ್ ದೃಶ್ಯವನ್ನೇ ನೋಡಲು ರೈಲುಹತ್ತಿದ್ದ ಹಿರಿಯರು ಉತ್ಸಾಹದಿಂದ ರೈಲಿನ ಎಮರ್ಜೆನ್ಸಿ ಕಿಟಕಿಗಳಲ್ಲಿ ಜಾಗ ಹಿಡಿದು ಸುರಂಗಗಳು ಮತ್ತು ಸೇತುವೆಗಳು ಬಂದಾಗ ತಲೆಹೊರಗೆ ಹಾಕಿ ನೋಡಿ ಮಕ್ಕಳಂತೆ ಅನಂದಿಸುತ್ತಿದ್ದರು.
ಬೃಹತ್ ಸೇತುವೆ, ಹಸಿರು ಕಾಡಿನ ನಡುವೆ ಹಾವಿನಂತೆ ಚಲಿಸುವ ನಮ್ಮ ರೈಲು

ಸೇತುವೆ ದಾಟುತ್ತಿದ್ದಂತೆ ಸಿಗುವ ಸುರಂಗ ಮಾರ್ಗ!

ಎಡಕುಮೇರಿ ರೈಲು ನಿಲ್ದಾಣದ ನಂತರ ಕಾಣಸಿಗುವ ಹಸಿರು ಕಾಡು!

ಸುರಂಗದೊಳಗಿನ ಬಂಡೆಗಳಿಗೆ ಸಿಮೆಂಟ್ ಪ್ಲಾಸ್ಟರಿಂಗ್.

ಬಲಭಾಗದಲ್ಲಿ ಸುರಂಗ ಮಾರ್ಗದೊಳಗಿನ ಬಂಡೆಗಳ ಚಿತ್ರ
ಎಡಭಾಗದ ಸುರಂಗ ಮಾರ್ಗದಲ್ಲಿ ಬಂಡೆಗಳ ಚಿತ್ರ

ಹಸಿರೊಳಗೆ ನುಗ್ಗುತ್ತಿರುವಂತೆ ಭಾಷವಾಗುತ್ತಿದೆಯಲ್ಲವೇ!

ಇಳಿಜಾರು ಬೆಟ್ಟ ಕೊರೆದು ಮಾಡಿದ ಸೇತುವೆ ಮೇಲೆ ನಮ್ಮ ರೈಲು

"ಬೆಳಿಗ್ಗೆ ಹತ್ತು ಗಂಟೆಗೆ ಕೆಲಸ ಶುರುಮಾಡಿದರೆ ಸಂಜೆ ನಾಲ್ಕುಗಂಟೆಯ ಹೊತ್ತಿಗೆ ಕೆಲಸ ನಿಲ್ಲಿಸಬೇಕಾಗಿತ್ತಂತೆ, ನಂತರವೂ ಕೆಲಸಗಾರರು ಅಲ್ಲೇ ಇದ್ದರೆ ಕಾಡಿನ ಆನೆಗಳು ಇವರನ್ನು ಸೊಂಡಿಲಿನಿಂದ ಎತ್ತಿ ಪುಟ್‍ಬಾಲಿನಂತೆ ಕಣಿವೆಯೊಳಕ್ಕೆ ಬಿಸಾಡುತ್ತಿದ್ದವಂತೆ, ಹೀಗೆ ಪ್ರಾಣ ಕಳೆದುಕೊಂಡವರೆಷ್ಟೋ ಜನ", ಅಂತ ಒಬ್ಬ ಹಿರಿಯ ಹೇಳಿದರೆ,
"ಹೌದಪ್ಪ ಅವರ ತ್ಯಾಗದಿಂದಾಗಿಯೇ ನಾವೆಲ್ಲಾ ಇಷ್ಟು ಸುಖವಾಗಿ ಇಂಥ ದೃಶ್ಯಗಳನ್ನು ನೋಡುತ್ತಿರುವುದು" ಅಂತ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದರು ಮತ್ತೊಬ್ಬರು.
"ಇಲ್ಲಿ ಹಾವುಗಳು ಹೆಚ್ಚಂತೆ. ಇಲ್ಲಿ ರಾತ್ರಿ ಮತ್ತು ಹಗಲು ಎರಡೇ ರೈಲು ಓಡಾಡುವುದರಿಂದ ಉಳಿದ ಸಮಯದಲ್ಲಿ ಸುರಂಗದಲ್ಲಿ ನಾಗರಹಾವು ಕೋಬ್ರ ಸೇರಿದಂತೆ ಎಲ್ಲಾ ರೀತಿಯ ಹಾವುಗಳು ಹರಿದಾಡುತ್ತಿರುತ್ತವೆ" ಅಂದರು ಒಬ್ಬರು.
"ಹೌದಾ ಹಾಗಾದರೆ ನಾವು ಇಲ್ಲಿ ಹುಷಾರಾಗಿರಬೇಕು ಅಲ್ವಾ" ಮತ್ತೊಬ್ಬರು ಭಯದಿಂದ ಉತ್ತರಿಸಿದರು. ಅವರ ಮಾತನ್ನು ಕೇಳುತ್ತಿದ್ದ ಉಳಿದವರಿಗೂ ಒಂದು ರೀತಿಯ ಭಯದ ಛಾಯೆ ಮುಖದಲ್ಲಿ ಮೂಡಿತ್ತು.
"ನಾವು ಚಲಿಸುತ್ತಿರುವ ರೈಲು ಸುರಂಗದಲ್ಲಿ ನಿದಾನವಾಗಿ ಸಾಗುತ್ತಿದೆ. ಇದೇ ಸಮಯದಲ್ಲಿ ಸುರಂಗದ ಒಳಬದಿಯ ಪೊಟರೆಗಳಲ್ಲಿರುವ ಹಾವುಗಳು ರೈಲು ಹೀಗೆ ನಿದಾನವಾಗಿ ಸಾಗುತ್ತಿರುವಾಗ ನಮ್ಮ ಬೋಗಿಯ ಮೇಲ್ಬಾಗಕ್ಕೆ ಬಿದ್ದು ಅಲ್ಲಿಂದ ಕಿಟಕಿಗಳ ಮೂಲಕ ಬೋಗಿಯೊಳಕ್ಕೆ ಬರಲೂಬಹುದು" ಅಂದರು.
ಅವರ ಮಾತನ್ನು ಕೇಳಿದ ತಕ್ಷಣ ಎಮರ್ಜೆನ್ಸಿ ಕಿಟಕಿಯಿಂದ ತಲೆ ಹೊರಹಾಕಿ ಉತ್ಸಾಹದಿಂದ ನೋಡುತ್ತಿದ್ದ ಹಿರಿಯರೆಲ್ಲಾ ಭಯದಿಂದ ತಲೆಯನ್ನು ಒಳಗೆ ಎಳೆದುಕೊಂಡು ಕಿಟಕಿಗಳನ್ನು ಮುಚ್ಚಿದರು. ಆ ಮಾತು ಎಲ್ಲಾ ಬೋಗಿಗಳಿಗೂ ಹರಡಿ ಎಲ್ಲರ ಮನದೊಳಗೂ ಒಂಥರ ಭಯ ಮತ್ತು ದಿಗಿಲು ಮುಖದಲ್ಲಿ ಆವರಿಸಿ ಕಿಟಕಿಗಳನ್ನು ಮುಚ್ಚಿದರು. ಅಲ್ಲಿಯವರೆಗೆ ತಮ್ಮ ತಮ್ಮ ಗಂಡಸರ ಉತ್ಸಾಹವನ್ನು ಹತೋಟಿಗೆ ತರಲಾಗದೆ ಒಳಗೊಳಗೆ ಸಿಟ್ಟಿನಿಂದಿದ್ದ ಮಹಿಳಾಮಣಿಗಳಂತೂ ಉತ್ಸಾಹದಿಂದಿದ್ದ ತಮ್ಮ ತಮ್ಮ ಯಜಮಾನರಿಗೆ "ತಲೆಹೊರಹಾಕದೆ ಕಿಟಕಿಗಳನ್ನು ಬಂದು ಮಾಡಿ ತೆಪ್ಪಗೆ ಕುಳಿತುಕೊಳ್ಳಿ" ಅಂತ ಬುದ್ಧಿವಾದ ಹೇಳಿ ತಮ್ಮ ಮಾಂಗಲ್ಯದ ಸುರಕ್ಷತೆಯನ್ನು ಕಾಯ್ದುಕೊಂಡರು. ಮತ್ತೆ ಅಲ್ಲಿದ್ದ ಹೆಂಗಸರಿಗೆಲ್ಲಾ ಇಂಥ ಭಯದ ವಾತಾವರಣದ ವಿಚಾರ ಚರ್ಚಿಸಲು ಸಿಕ್ಕಿದ್ದರಿಂದ ಮತ್ತೊಮ್ಮೆ ಅವರಲ್ಲೇ ಗುಸುಗುಸು ಪ್ರಾರಂಭವಾಗಿತ್ತು. "ತಮ್ಮ ದುರಾದೃಷ್ಟಕ್ಕೆ ಕಿಟಕಿ ಬಾಗಿಲುಗಳಿಂದ ನುಗ್ಗಿದ ಹಾವು ಕಾಲ ಕೆಳಗೆ ಬಂದುಬಿಟ್ಟರೆ " ಎನ್ನುವ ಭಯದ ಕಾರಣಕ್ಕೆ ತಮ್ಮ ತಮ್ಮ ಕಾಲುಗಳನ್ನು ಮೇಲೆತ್ತಿ ಸೀಟಿನಲ್ಲಿ ಚಕ್ಕಳಬಕ್ಕಳ ಹಾಕಿ ಕೂತರು. ಈ ವಿಚಾರದ ಚರ್ಚೆಯಂತೂ ಅವರ ಪ್ರಯಾಣದ ಅವಧಿ ಮುಗಿಯುವವರೆಗೂ ನಡೆದೇ ಇತ್ತು. ಇದೆಲ್ಲದರ ನಡುವೆಯೂ ನನ್ನಂತೆ ಹತ್ತಾರು ಪ್ರಯಾಣಿಕರು ಇವ್ಯಾದಕ್ಕೂ ತಲೆಕೆಡಿಸಿಕೊಳ್ಳದೇ ಫೋಟೊ ವಿಡಿಯೋ ಮಾಡಿ ಆನಂದಿಸಿದರು. ಅವರ ಮಾತುಗಳನ್ನು ಕೇಳುತ್ತಲೇ ಸುರಂಗ ಫೋಟೊಗಳನ್ನು ಕ್ಲಿಕ್ಕಿಸುತ್ತಿದ್ದ ನನಗೆ ಆ ಕತ್ತಲ್ಲಲ್ಲಿ ಸುರಂಗದೊಳಗೆ ಕೆಲಸ ಮಾಡುವ ರೈಲ್ವೇ ಕೆಲಸಗಾರ ಅವನ ಬಿಟ್ಟಿದ್ದ ಟಾರ್ಚ್ ಬೆಳಕಿನಿಂದಾಗಿ ಕಾಣಿಸಿದ. ದೂರದಿಂದಲೇ ಆ ಕತ್ತಲಲ್ಲಿ ಅವನೆಡೆಗೆ ನನ್ನ ಕ್ಯಾಮೆರಾ ಫೋಕಸ್ ಮಾಡಿದೆ. ನನ್ನ ಕ್ಯಾಮೆರಾ ಬೆಳಕನ್ನು ನೋಡಿ ಅದಕ್ಕೆ ಉತ್ತರವಾಗಿ ತನ್ನ ಟಾರ್ಚನ್ನು ಬಿಟ್ಟು ಪ್ರತಿಕ್ರಿಯಿಸಿದ. ಅಷ್ಟರಲ್ಲಿ ಅವನಿಗೆ ಹತ್ತಿರವಾಗಿದ್ದರಿಂದ ಅವನ ಫೋಟೊ ಕ್ಲಿಕ್ಕಿಸಿದ್ದೆ. ಆ ಕತ್ತಲೆಯಲ್ಲೂ ಚಲಿಸುವ ರೈಲಿನಲ್ಲಿರುವ ನನ್ನ ಕ್ಯಾಮೆರಾಗೆ ನಗುತ್ತಾ ಕೆಲಸ ಮಾಡುತ್ತಿದ್ದುದ್ದು ನನ್ನ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಒಳಗಿದ್ದವರೆಲ್ಲಾ ಭ್ರಮೆಯ ಹಾವುಗಳನ್ನು ಸೃಷ್ಟಿಸಿಕೊಂಡು ದಿಗಿಲಿನಿಂದ ಮಾತಾಡುತ್ತಿದ್ದರೇ...ಸುರಂಗದಲ್ಲಿ ಹಾವುಗಳು ಇರುವ ಜಾಗದಲ್ಲಿ ನಗುತ್ತಾ ಕೆಲಸ ಮಾಡುವ ಅವನ ಬದುಕು ನಿಜಕ್ಕೂ ಶ್ಲಾಘನೀಯವೆನಿಸಿತ್ತು. ಕೊನೆಗೂ ಸುಬ್ರಮಣ್ಯ ರೋಡ್ ರೈಲುನಿಲ್ದಾಣವನ್ನು ನಮ್ಮ ರೈಲು ತಲುಪಿದಾಗ ಸಂಜೆಯ ನಾಲ್ಕುಗಂಟೆ ದಾಟಿತ್ತು.
ಸುರಂಗದೊಳಗೆ ಕೆಲಸ ಈ ಕೆಲಸಗಾರನಿಗೆ ಹಾವುಗಳ ಭಯವಿಲ್ಲವೇ?

ಇಲ್ಲಿಂದ ಸುಬ್ರಮಣ್ಯ ದೇವಸ್ಥಾನ ೧೨ ಕಿಲೋಮೀಟರ್ ದೂರದಲ್ಲಿದೆ. ಆಟೋದಲ್ಲಿ ಹೋದರೆ ೧೫೦ ರೂಪಾಯಿ. ಜೀಪಿನಲ್ಲಿ ಒಬ್ಬರಿಗೆ ೨೦ ರೂಪಾಯಿ. ಐದುಜನರು ಕೂತು ಪ್ರಯಾಣಿಸುವ ಜೀಪಿನಲ್ಲಿ ಹನ್ನೊಂದು ಜನರನ್ನು ಕೂರಿಸಿಕೊಳ್ಳುವ ಇಲ್ಲಿನ ಡ್ರೈವರುಗಳು ತಮ್ಮ ಡ್ರೈವಿಂಗ್ ಜಾಗವನ್ನು ಮತ್ತೊಬ್ಬರಿಗೆ ಸೀಟುಮಾಡಿಕೊಟ್ಟು ಬಲಬದಿಯ ತುದಿಯಲ್ಲಿ ದೇಹವನ್ನು ಪೂರ್ತಿಹೊರಹಾಕಿ ಒಂದೇ ಕುಂಡಿಯಲ್ಲಿ ಕುಳಿತು ಜೀಪು ಓಡಿಸುವ ಪರಿ ನೋಡಿದಾಗ ನಿಜಕ್ಕೂ ಮೊದಲಿಗೆ ನಮಗೆ ದಿಗಿಲಾಗುತ್ತದೆ. ಆದ್ರೆ ಸ್ವಲ್ಪ ಹೊತ್ತಿಗೆ ಅವರ ಪ್ರತಿಭೆ, ಪರಿಣತಿ, ಚಾಕಚಕ್ಯತೆಯನ್ನು ಗಮನಿಸಿದಾಗ ಅವರ ಮೇಲೆ ನಂಬಿಕೆಯುಂಟಾಗುತ್ತದೆ. ಸುಬ್ರಮಣ್ಯ ದೇವಸ್ಥಾನ ತಲುಪುವುದು ನಾಲ್ಕು ಕಿಲೋಮೀಟರ್ ಇದೆಯೆನ್ನುವಾಗ ಸಡನ್ನಾಗಿ ರಸ್ತೆಯಲ್ಲಿ ವೇಗವಾಗಿ ದಾಟುತ್ತಿದ್ದ ಹಾವೊಂದರ ಮೇಲೆ ನಾವು ಕುಳಿತಿದ್ದ ಜೀಪಿನ ಮುಂದಿನ ಚಕ್ರ ಹತ್ತೇ ಬಿಟ್ಟಿತು ಅಂದುಕೊಳ್ಳುವಷ್ಟರಲ್ಲಿ ಒಂದೇ ಕುಂಡಿಯಲ್ಲಿ ಕುಳಿತು ಡ್ರೈವ್ ಮಾಡುವ ನಮ್ಮ ಡ್ರೈವರ್ ಚಾಕಚಕ್ಯತೆಯಿಂದಾಗಿ ಹಾವು ಬಚಾವಾಗಿತ್ತು.
ಮರುದಿನ ಬೆಳಿಗ್ಗೆ ಇದೇ ರೈಲು ಮಂಗಳೂರಿನಿಂದ ಹೊರಡುತ್ತದೆ. ಇಲ್ಲಿ ಸರಿಯಾಗಿ ಹತ್ತುಗಂಟೆಗೆ ಬರುತ್ತದೆ ಅಂತ ಸಮಯವನ್ನು ಕೊಟ್ಟಿರುತ್ತಾರೆ ಆದ್ರೆ ಅರ್ಧ ಅಥವ ಮುಕ್ಕಾಲು ಗಂಟೆ ತಡವಾಗಿಯೇ ಬರುತ್ತದೆ. ಮತ್ತದೇ ಸುರಂಗಗಳು ಸೇತುವೆಗಳು, ಅಲ್ಲಲ್ಲಿ ಕೆಲಸ ಮಾಡುವ ರೈಲ್ವೇ ಕೆಲಸಗಾರರು, ಕೂಲಿಕಾರರು, ಹೀಗೆ ಸಾಗಿ ಎಡಕುಮೇರಿ ಸಕಲೇಶಪುರ, ಹಾಸನ, ಅರಸೀಕೆರೆ ತಲುಪುವವರೆಗೆ ನಿದಾನವಾಗಿ ಸಾಗುವ ರೈಲು ಅಲ್ಲಿಂದ ಮತ್ತೆ ವೇಗವನ್ನು ಪಡೆದುಕೊಳ್ಳುತ್ತದೆ. ಇದೇ ರೈಲಿನಲ್ಲಿ ಒಮ್ಮೆ ಹೋಗಿಬಂದಾಗ ನಿಮಗೆ ಮ್ಯಾರಥಾನ್ ಓಟಗಾರನ ನೆನಪಾಗುತ್ತದೆ. ಮ್ಯಾರಥಾನ್ ಓಟಗಾರನಂತೆ ಈ ರೈಲು ಪ್ರಾರಂಭದಲ್ಲಿ ವೇಗವಾಗಿ ಅರಸೀಕೆರೆಯವರೆಗೆ ಚಲಿಸಿ, ಅಲ್ಲಿಂದಾಚೆಗೆ ನಿದಾನವಾಗಿಬಿಡುತ್ತದೆ. ಮತ್ತೆ ವಾಪಸು ಬರುವಾಗ ಗುರಿ ಹತ್ತಿರವಾಗುತ್ತಿದ್ದಂತೆ ವೇಗ ಪಡೆದುಕೊಳ್ಳುವ ಓಟಗಾರನಂತೆ ವೇಗ ಹೆಚ್ಚಿಸಿಕೊಳ್ಳುತ್ತದೆ. ತುಮಕೂರಿನಿಂದ ಯಶವಂತಪುರಕ್ಕೆ ಒಂದೇ ಉಸುರಿಗೆ ಓಡಿಬಂದಂತೆ ಭಾಷವಾಗುತ್ತದೆ.
ನಮ್ಮ ರೈಲು ಸುರಂಗದೊಳಗೆ ನುಗ್ಗುತ್ತಿರುವಾಗ...

ಮತ್ತೊಂದು ಕೋನದಲ್ಲಿ ಬೆಂಗಾಲಿ ಬಿಕ್ಷುಕಿಯ ಚಿತ್ರ!

ಸಕಲೇಶಪುರ ರೈಲುನಿಲ್ದಾಣದಲ್ಲಿ ಕೋತಿಗಳ ಚೆಲ್ಲಾಟ!

ಒಟ್ಟಾರೆ ನನಗೆ ಈ ಪ್ರಯಾಣದಲ್ಲಿ ಇಷ್ಟೆಲ್ಲಾ ಅನುಭವಗಳ ನಡುವೆ ತೇಜಸ್ವಿಯವರ ಎರಡು ಪುಸ್ತಕಗಳನ್ನು ಓದಿಮುಗಿಸಿದ್ದು ಒಂಥರ ಖುಷಿಕೊಟ್ಟಿತ್ತು.
ಚಿತ್ರಗಳು ಮತ್ತು ಲೇಖನ.
ಶಿವು.ಕೆ.