Monday, July 25, 2011

ಭಾರತೀಯ ರೈಲ್ವೆ ನಿನಗೆ ನನ್ನ ಸಾವಿರ ಪ್ರಮಾಣಗಳು!



"ನಿಮಗೇನ್ ತಲೆಕೆಟ್ಟಿದೆಯಾ?
ಕಳೆದ ನಾಲ್ಕು ದಿನದಿಂದ ಈ ಪುಸ್ತಕಗಳಿಗೆ ಆಡಿಕ್ಟ್ ಆಗಿಬಿಟ್ಟಿದ್ದೀರಿ. ಹಗಲೆಲ್ಲಾ ಓದುವುದು ಓಕೆ. ರಾತ್ರಿ ನಿದ್ರೆಬರದಿದ್ದಲ್ಲಿ ಯಾವುದಾದರೂ ಕತೆ ಕಾದಂಬರಿ ಓದುವುದು ಎಲ್ಲರೂ ಮಾಡುವ ಕೆಲಸ, ನೀವೇನ್ರಿ ಈ ಪುಸ್ತಕವನ್ನು ಹಿಡಿದಿದ್ದೀರಿ? ಇದನ್ನು ಓದಿ ಯಾವರೈಲು ಓಡಿಸಬೇಕು?"  ಹೀಗೆ ನನ್ನ ಶ್ರೀಮತಿ ಬೈಯ್ಯುತ್ತಿದ್ದಾಳೆ.
ಆ ಪುಸ್ತಕದಲ್ಲಿ ಒಂದು ಕತೆಯಿಲ್ಲ, ಕವನವಿಲ್ಲ, ಲಲಿತಪ್ರಭಂದಗಳಿಲ್ಲ. ಹರಟೆಯಿಲ್ಲ, ಕಾವ್ಯವಿಲ್ಲ. ಕಗ್ಗವಿಲ್ಲ, ಓದಿ ಪಾಸು ಮಾಡೋಣವೆಂದರೆ ಅಧ್ಯಾಯನ ಪುಸ್ತಕವಂತೂ ಅಲ್ಲವೆ ಅಲ್ಲ! ಆದರೂ ನಾನು ಇದನ್ನು ಇಷ್ಟಪಟ್ಟು ಓದುತ್ತೇನೆ. ಮತ್ತು ಅಬ್ಯಾಸಮಾಡುತ್ತೇನೆ.
 

ನಾನು ಇಷ್ಟಕ್ಕೂ ಹೀಗೆ ಇಷ್ಟಪಟ್ಟು ಓದುತ್ತಿರುವ ಪುಸ್ತಕ ಯಾವುದು ಅಂದುಕೊಂಡ್ರಿ?

ನಮ್ಮ ಭಾರತದ ಹೆಮ್ಮೆಯ ರೈಲ್ವೇ ಟೈಮ್ ಟೇಬಲ್ ಪುಸ್ತಕಗಳು ಕಣ್ರಿ.

"TRAIN AT A GLANCE" 





  "SOUTERN ZONE TIME TABLE"


              
A4 ಸೈಜಿನಲ್ಲಿ ಮುನ್ನೂರು ಪುಟದ ಮೊದಲ ಪುಸ್ತಕದ ಬೆಲೆ ಕೇವಲ 35-00 ರೂಪಾಯಿಗಳು ಮಾತ್ರ
A4 ಸೈಜಿನಲ್ಲಿ ಮುನ್ನೂರ ಎಂಬತ್ತೈದು ಪುಟದ ಎರಡನೇ ಪುಸ್ತಕದ ಬೆಲೆ ಕೇವಲ 30-00 ರೂಪಾಯಿಗಳು ಮಾತ್ರ.


ನಮ್ಮ ದಕ್ಷಿಣಭಾರತದ ಎಲ್ಲಾ ರಾಜ್ಯಗಳ ನಕ್ಷೆಗಳು, ಅದರಲ್ಲಿ ರೈಲು ದಾರಿಗಳು, ಅದರ ಮೇಲೆ 24 ಗಂಟೆ ಓಡಾಡುವ ಎಲ್ಲಾ ಎಕ್ಸ್ ಪ್ರೆಸ್, ಪ್ಯಾಸಿಂಜರ್, ಇಂಟರ್ ಸಿಟಿ, ಶತಾಬ್ಧಿ ಜನಶತಾಭ್ದಿ, ರಾಜಧಾನಿ, ದುರಂತೋ, ಸಂಪರ್ಕ ಕ್ರಾಂತಿ ರೈಲುಗಳು,....ಪ್ಯಾಸಿಂಜರ್ ರೈಲುಗಾಡಿಗಳು ನಿಲ್ಲುವ ಸಣ್ಣ ನಿಲ್ದಾಣಗಳ ವಿವರ, ಶತಾಬ್ಧಿ ರೈಲುಗಳು ನಿಲ್ಲು ದೊಡ್ಡ ನಗರಗಳ ವಿವರ, ಸಮಯ, ಎಲ್ಲಾ ದರ್ಜೆಯ ರೈಲಿನ ದರಗಳು, ರೈಲು ನಿಲ್ದಾಣಗಳಲ್ಲಿನ ಗೆಸ್ಟ್ ಹೌಸುಗಳು, ಅವುಗಳ ದರಗಳು, ಸಾವಿರಾರು ರೈಲುಗಾಡಿಗಳ ಸಂಖ್ಯೆ ಮತ್ತು ಹೆಸರುಗಳು............. ಹೀಗೆಒಂದೇ ಎರಡೇ...ಇನ್ನೂ ಸಾವಿರಾರು ಪಕ್ಕಾ ವಿವರಗಳು. ಎಲ್ಲವೂ ಅಚ್ಚುಕಟ್ಟು ಮತ್ತು ಕರಾರುವಾಕ್ಕು. ಇಂಥ ಒಂದು ಪುಸ್ತಕ ನಿಮ್ಮಲ್ಲಿದ್ದು ಕಂಪ್ಯೂಟರಿನಲ್ಲಿ ಇಂಟರ್‍ನೆಟ್ ಸೌಲಬ್ಯವಿದ್ದಲ್ಲಿ ನೀವು ಹೋಗಬೇಕಾದ ಸ್ಥಳಕ್ಕೆ ರೈಲುಗಾಡಿ ವಿವರ, ದರ, ಸಮಯ ಇತ್ಯಾದಿಗಳನ್ನೆಲ್ಲಾ ಈ ಪುಸ್ತಕದಿಂದ ತಿಳಿದು ಮನೆಯಲ್ಲೇ ಕುಳಿದು ಒಂದು ಅಚ್ಚುಕಟ್ಟಾದ ಮತ್ತು ಕರಾರುವಕ್ಕಾದ ಪ್ರವಾಸ ಕಾರ್ಯಕ್ರಮವನ್ನು ಸಿದ್ದಪಡಿಸಬಹುದು. ಹಾಗೆ ಇಂಟರ್‍ನೆಟ್ಟಿನಿಂದಲೇ ಎಲ್ಲಾ ಟಿಕೆಟ್ಟುಗಳನ್ನು ಬುಕ್ ಮಾಡಿಕೊಂಡುಬಿಡಬಹುದು. ಇದಲ್ಲದೇ ಪ್ರಖ್ಯಾತ ಪ್ರವಾಸಿ ತಾಣಗಳ ಚಿತ್ರಸಹಿತ ವಿವರಗಳು ಇವೆ.


ಈ ಪುಸ್ತಕದಿಂದಾಗಿ ನಾವು ಬೆಟ್ಟ ಕಣಿವೆಗಳಲ್ಲಿ ಸಾಗುವ ಊಟಿ-ಕೂನೂರ್ ರೈಲು ಪ್ರಯಾಣ ಆನಂದಿಸಿದ್ದು. ಮುನ್ನಾರ್ ಪ್ರವಾಸಗಳನ್ನು ಯಶಸ್ವಿ ಮಾಡಿಕೊಂಡಿದ್ದು. ಸುಬ್ರಮಣ್ಯ ಘಾಟ್ ರೈಲು ಪ್ರಯಾಣದಲ್ಲಿ ಫೋಟೊಗ್ರಫಿಯನ್ನು enjoy ಮಾಡಿದ್ದು.

ಈಗ ಹೇಳಿ ಮುವ್ವತ್ತು ರೂಪಾಯಿಗಳಿಗೆ ಒಂದು ಈರುಳ್ಳಿ ದೋಸೆ[ನನ್ನ ಇಷ್ಟದ್ದು]ಸಿಗದಿರುವ ಈ ಕಾಲದಲ್ಲಿ ಇಂಥ ಒಂದು ಅದ್ಬುತ ಪುಸ್ತಕವನ್ನು ಸಾರ್ವಜನಿಕರಿಗೆ ಕೊಟ್ಟಿರುವ ನಮ್ಮ ಭಾರತೀಯ ರೈಲ್ವೇ ಸಂಸ್ಥೆ ಗ್ರೇಟ್ ಅಲ್ವಾ?
ಮತ್ತೆ "TRAIN AT A GLANCE" ಎನ್ನುವ ಮತ್ತೊಂದು ಪುಸ್ತಕದಲ್ಲಂತೂ ಇಡೀ ಭಾರತ ದೇಶದಲ್ಲಿ ಸಂಚರಿಸುವ ಎಕ್ಸ್‍ ಪ್ರೆಸ್ ರೈಲುಗಳ ಮೇಲೆ ವಿವರಿಸಿದ ಎಲ್ಲಾ ವಿವರಗಳಿವೆ.
ಇಡೀ ಪುಸ್ತಕದಲ್ಲಿ ಒಂದೇ ಒಂದು ರೈಲುಗಾಡಿಯ ಸಂಖ್ಯೆ, ಹೆಸರು, ದಾರಿ, ಮಾರ್ಗ, ಸಮಯ, ನಿಲ್ದಾಣ, ಹುಡುಕಿದರೇ ಒಂದು ತಪ್ಪು ಸಿಗುವುದಿಲ್ಲ.
ಈಗ ಹೇಳಿ ಇಂಥ ಒಂದು ಅದ್ಬುತ ಪುಸ್ತದ ಹಿಂದೆ ಕೆಲಸ ಮಾಡಿದ ಸಾಪ್ಟ್ ವೇರ್ ಪರಿಣಿತರು, ನಕ್ಷಾ ತಜ್ಞರು, ಪುಟ ವಿನ್ಯಾಸಕರು, ಪ್ರೂಪ್ ರೀಡರುಗಳು, ಒಂದು ಅದ್ಬುತ ಸಾರ್ವಜನಿಕ ಹಿತಾಸಕ್ತಿಯುಳ್ಳ ರೈಲ್ವೆ ಅಧಿಕಾರಿಗಳು..........
ಅವರಿಗೆ ನಾವೆಷ್ಟು ಕೃತಜ್ಞತೆ ಸಲ್ಲಿಸಿದರೂ ಸಾಲದು.
ಪ್ರತೀ ವರ್ಷ ಹೊಸದಾಗಿ ಬರುವ ಈ ಪುಸ್ತಕಗಳಿಗೆ ಬಕಪಕ್ಷಿಯಂತೆ ಕಾಯುತ್ತಿರುತ್ತೇನೆ. ಒಂದು ತಿಂಗಳ ಮೊದಲೇ ರೈಲು ನಿಲ್ದಾಣದಲ್ಲಿ " ಪುಸ್ತಕ ಬಂತಾ" ಅಂತ ವಿಚಾರಿಸುತ್ತಿರುತ್ತೇನೆ.

ಭಾರತೀಯ ರೈಲ್ವೆ ನಿನಗೆ ನನ್ನ ಸಾವಿರ ಪ್ರಮಾಣಗಳು!


ಚಿತ್ರಗಳು ಮತ್ತು ಲೇಖನ
ಶಿವು.ಕೆ

Thursday, July 14, 2011

ಗೆಳೆಯನಿಗೊಂದು ಅವಾರ್ಡು

          ಈಗ ನನ್ನ ವಾಸ ಮಾರುತಿ ಬಡಾವಣೆ ಮಲ್ಲೇಶ್ವರಂ ರೈಲ್ವೇ ನಿಲ್ದಾಣಕ್ಕೆ ಮಗ್ಗಲು. ಈ ಬಡಾವಣೆಯ ಕಾಲು ದೇವಯ್ಯ ಪಾರ್ಕ್. ಹಬ್ಬ ಹರಿದಿನಗಳಿಗೆ ಒಮ್ಮೆ ನಾನು ದೇವಯ್ಯ ಪಾರ್ಕಿನ ಗಣೇಶ ದೇವಸ್ಥಾನಕ್ಕೆ ಹೋಗುತ್ತೇನೆ ನನ್ನ ಶ್ರೀಮತಿಯ ಒತ್ತಾಯದ ಮೇರೆಗೆ.  ದೇವಸ್ಥಾನಕ್ಕಿಂತ ನನಗೆ ತುಂಬಾ ಇಷ್ಟವಾಗುವುದು ಮಲ್ಲೇಶ್ವರಂ ರೈಲ್ವೇ ನಿಲ್ದಾಣ. ನಿತ್ಯ ಒಮ್ಮೆ ಬೇಟಿ ನೀಡಿದಿದ್ದರೆ ನನಗೆ ಸಮಾಧಾನವೇ ಆಗುವುದಿಲ್ಲ. ಅದೆಲ್ಲ ಈಗಿನ ಮಾತು. ಆದ್ರೆ ಹದಿಮೂರು ವರ್ಷಗಳ ಹಿಂದೆ ನನ್ನ ಮನೆ ಒಂದು ಮೈಲಿ ದೂರದ ಶ್ರೀರಾಮಪುರಂನಲ್ಲಿದ್ದರೂ ಫೇವರೇಟ್ ಜಾಗ ದೇವಯ್ಯ ಪಾರ್ಕ್ ಆಗಿತ್ತು. ಅಲ್ಲಿ ಗಣೇಶ ದೇವಸ್ಥಾನವಿದೆ ಅಂತ ಅಲ್ಲ. ಅಲ್ಲಿ  ಏಳೆಂಟು ಹುಡುಗರ ಒಂದು ಗುಂಪು ಸಂಜೆ ಆರು ಗಂಟೆಗೆ ಸೇರುತ್ತಿತ್ತು. ಏಕೆ ಸೇರುತ್ತಿತ್ತು ಅಂತ ಮುಂದೆ ವಿವರಿಸುತ್ತೇನೆ ಮೊದಲಿಗೆ ಅವರೆಲ್ಲರ ಪರಿಚಯ.

 ೨೦-೨೫ ವಯಸ್ಸಿನ ಆಗತಾನೆ ಪದವಿ ಮುಗಿಸಿದವರು ಕೆಲವರು. ಇನ್ನೂ ಕೆಲವರು ಎಂ ಎ ಮಾಡುತ್ತಿರುವವರು ಇದ್ದರು. ಅವರ ಗುಂಪಿನಲ್ಲಿ ನಾನು ಇದ್ದೆ.  ನಾನು ಸೇರಿದಂತೆ ಎಲ್ಲರೂ  ತಾತ್ಕಾಲಿಕ ಉದ್ಯೋಗಗಳನ್ನು ಮಾಡುತ್ತಿದ್ದೆವು.  ಒಬ್ಬ ಶಿವಶಂಕರ್ ಅಂತ. ಆತ ಆಗತಾನೆ ಕಾಲೇಜು ಮುಗಿಸಿ ಮೈಕೊ ಫ್ಯಾಕ್ಟರಿಯಲ್ಲಿ ಕೆಲಸಕ್ಕೆ ಸೇರಿದ್ದರು.  ಆತ ಮೌನಿ. ಆದರೆ ಮಹಾ ತಿಳಿವಳಿಕಸ್ತ.  ನಮ್ಮ ಹತ್ತು ಮಾತಿಗೆ ಒಂದು ಮಾತಾಡುತ್ತಿದವರು. ಈತ ಲಕ್ಷ್ಮಿ ನಾರಾಯಣ.  ನಾವು ಸೇರುವ ವೇಳೆಗೆ ಎಂ. ಎ ಮಾಡುತ್ತಿದ್ದರು. ಇವರಿಬ್ಬರೂ ಮೊದಲಿನಿಂದಲೇ ಗೆಳೆಯರು. ಆ ವಯಸ್ಸಿನ ಉತ್ಸಾಹ ಹೇಗಿರುತ್ತದೆಯೆಂದರೆ ಪ್ರಪಂಚದಲ್ಲಿ ನಾವು ಏನಾದರೂ ಸಾಧಿಸಬೇಕು ಅನ್ನುವ ಮಹತ್ವಾಕಾಂಕ್ಷೆ. ಇವನ್ನೊಬ್ಬ ಮಂಜುನಾಥ. ಈಗ ಹಳ್ಳಿಯ ಹಿನ್ನೆಲೆಯಲ್ಲಿ ಬೆಳೆದು ಬಂದವನು ಕಾಲೇಜಿನಲ್ಲಿ ಪರಿಚಯವಾಗಿದ್ದಾನೆ. ಕಾಲೇಜು ಮುಗಿದಮೇಲೆ ಏನಾದರೂ ಹೊಸದನ್ನು ಮಾಡೋಣ ಎನ್ನುವ ಇವರಿಬ್ಬರ ಮಾತಿಗೆ ಈತನೂ ಅವರ ಜೊತೆಗೂಡಿದ್ದಾನೆ. ಆತ ರಮೇಶ್  ಶಿವಶಂಕರ್ ಗೆಳೆಯ.  ಆಟೋ ಓಡಿಸುತ್ತಿದವನು. ಆದರೂ ಆತನ ಮನಸ್ಸಿನಲ್ಲಿ ಏನಾದರೂ ಸಾಧಿಸಬೇಕು ಎನ್ನುವ ಹಂಬಲ. ಇವನೊಬ್ಬ ರಾಘವೇಂದ್ರ ಕಾಮತ್. ಆಗ ಸಂಜೆ ಕಾಲೇಜಿನಲ್ಲಿ ಕೊನೇ ವರ್ಷದ ಬಿ.ಕಾಂ ಓದುತ್ತಿದ್ದ.  ಮತ್ತೊಬ್ಬನಿದ್ದ  ಭದ್ರಾವತಿ ಶ್ರೀನಿವಾಸ ಆಂತ. ಭದ್ರಾವತಿ ಇವನ ಹುಟ್ಟೂರಾದರೂ ಓದಿನಲ್ಲಿ ಇವರ ಜೊತೆಯಾಗಿದ್ದ. ಇಂಥವರ ಜೊತೆ ಸೇರಿದ ಮೇಲೆ ಅವನಿಗೂ ಬದುಕಿನಲ್ಲಿ ಏನಾದರೂ ಸಾಧಿಸಬೇಕು ಅನ್ನುವ ಆಸೆ ಉಂಟಾಗುತ್ತದೆಯಲ್ಲವೇ...ಹಾಗೆ ಈತ ಅದ್ಬುತ ಮಿಮಿಕ್ರಿ ಕಲಾವಿದ. ಮಗದೊಬ್ಬ ನನಗೆ ನನ್ನ ಗೆಳೆಯರ ಮೂಲಕ ಪರಿಚಯವಾದವನು. ಓಹಿಲೇಶ್ವರ್. ಕಾಲೇಜಿನಲ್ಲಿ ಇವರಿಗೆ  ಗೆಳೆಯನಾದವನು ಆಗ ಅದ್ಬುತವಾಗಿ ಕವನ ಬರೆಯುತ್ತಿದ್ದ. ಇವರೆಲ್ಲರ ಜೊತೆಗೆ ಪರಿಚಯವಾದವರು ನಾಗೇಂದ್ರ ಪ್ರಸಾದ್ ಮತ್ತು ಶಿವಪ್ರಕಾಶ್. ನಮ್ಮೆಲ್ಲರ ಗುರಿ ಒಂದೇ ಆಗಿತ್ತು ನಾನು ಆಗ ಕವನ ಮತ್ತು ಲೇಖನಗಳನ್ನು ಪತ್ರಿಕೆಗಳಿಗೆ ಬರೆಯುತ್ತಿದ್ದರಿಂದ ಓಹಿಲೇಶ್ವರ್ ಮೂಲಕ ಇವರಿಗೆ ಪರಿಚಯವಾಗಿದ್ದೆ. ನಮ್ಮ ತಂಡಕ್ಕೆ  ಇಷ್ಟಪಟ್ಟು ಇಟ್ಟುಕೊಂಡಿದ್ದ ಹೆಸರು  "ಸುಪ್ತ."   ನಾವು ಏಳೆಂಟು ಹುಡುಗರು ನಿತ್ಯ ಸಂಜೆ ಆರುಗಂಟೆಗೆ ದೇವಯ್ಯಪಾರ್ಕಿನಲ್ಲಿ ಸೇರುತ್ತಿದ್ದೆವು.


    ಒಟ್ಟಿಗೆ ಸೇರಿದ ಮೇಲೆ ಏನಾದರೂ ಮಾಡಬೇಕಲ್ಲ. ಮೊದಲಿಗೆ ಒಂದು ನಾಟಕವನ್ನು ಮಾಡಬೇಕೆಂದು ತೀರ್ಮಾನಿಸಿದೆವು.  ನಾಗೇಂದ್ರ ಪ್ರಸಾದ್ ಆಗ ಬರೆದಿದ್ದ ಒಂದು ನಾಟಕದ ಹೆಸರು "ಶ್ವೇತಾರ್ಕ" ಅದನ್ನು ನಿತ್ಯ ಅಭ್ಯಾಸ ಮಾಡಲು ದೇವಯ್ಯ ಪಾರ್ಕಿನ ಸಭಾಂಗಣವನ್ನು ಹತ್ತಿರದ ಕೌನ್ಸಿಲರ್ ಬಳಿ ರಿಕ್ವೆಸ್ಟ್ ಮಾಡಿ ಪಡೆದುಕೊಂಡಿದ್ದೆವು.  ಅದೊಂತರ ತುಂಬಾ ವಿಭಿನ್ನವಾದ ನಾಟಕ.  ಐದು ಹುಡುಗರು ಪ್ರೀತಿಯ ಬಗ್ಗೆ ಮಾಡಿದ ಒಂದು ನಾಟಕ. ಈ ಐದು ಜನ ಹುಡುಗರು ಪ್ರೀತಿ ಪ್ರೇಮದ ಬಗ್ಗೆ ಅಭಿಪ್ರಾಯಗಳು ಬೇರೆ  ಬೇರೆ ಆಗಿರುವುದೇ ಈ ನಾಟಕದ ವಸ್ತು.   ಪ್ರೀತಿಯ ಬಗ್ಗೆ ಪಕ್ಕಾ ತರಲೇ ಅಭಿಪ್ರಾಯವನ್ನು ಹೊಂದಿದ್ದ ವ್ಯಕ್ತಿತ್ವದ್ದಾಗಿತ್ತು ನನ್ನ ಪಾತ್ರ. ನಾಗೇಂದ್ರ ಪ್ರಸಾದ್ ಬರೆದ ಆ ನಾಟಕ ಪೂರ್ತಿ ವಿವರವನ್ನು ಎಂದಾದರೂ ಮುಂದೆ ವಿವರವಾಗಿ ಬರೆಯುತ್ತೇನೆ.  ನಾವು ಈ ನಾಟಕವನ್ನು ಅದ್ಯಾವ ಮಟ್ಟಿಗೆ ಅಭ್ಯಾಸ ಮಾಡಿದೆವೆಂದರೆ  ನಮ್ಮ ತಂಡ ಮಂಡ್ಯ, ಬೆಂಗಳೂರಿನ  ರವೀಂದ್ರ ಕಲಾಕ್ಷೇತ್ರ. ಮುಂಬೈ.ಹೀಗೆ ಹತ್ತಾರು ಕಡೆ ಪ್ರಯೋಗ ಮಾಡಿದ್ದೆವು. 

     ಆಗಲೇ ನಾನು ಪದವಿ ಮುಗಿಸಿ ದಿನಪತ್ರಿಕೆ ವಿತರಣೆ ಪಡೆದುಕೊಂಡಿದ್ದರೆ ಈ ಗುಂಪಿನಲ್ಲಿ ರಾಘವೇಂದ್ರ್ ಕಾಮತ್ ಎನ್ನುವ ಮಂಗಳೂರಿನ ಹುಡುಗ ನರ್ಸಿಂಗ್ ಹೋಂಗಳಲ್ಲಿ ಕಾಫಿ ಮೆಸಿನ್ ಇಟ್ಟು ಕೊಂಡು ಕಾಫಿ ಮಾರುತ್ತಿದ್ದ. ಬಿಡುವಿನ ವೇಳೆಯಲ್ಲಿ ನನ್ನಂತೆ ಈ ತಂಡವನ್ನು ಸೇರುತ್ತಿದ್ದ.  ಈ ನಡುವೆ ಅದ್ಯಾಕೋ ನನಗೆ ಹೊಸ ವಿಚಾರವಾದ ಫೋಟೊಗ್ರಫಿ ಬಗ್ಗೆ ಒಲವು ಮೂಡಿತು. ನಾನು ಸಹಜವಾಗಿ ಈ ತಂಡವನ್ನು ಬಿಟ್ಟೆ.  ಒಬ್ಬಬ್ಬರಾಗಿ ಎಲ್ಲರೂ ಬೇರೆಯಾಗಿ ತಮ್ಮ ಬದುಕಿನ ಕಡೆಗೆ ಗಮನ ಹರಿಸಿದರು. ಆದ್ರೆ ಎಲ್ಲರೂ ವೈಯಕ್ತಿಕವಾಗಿ ತಮ್ಮ ಕಲೆಯನ್ನು ಎಲೆಮರೆಕಾಯಿಯಂತೆ ಮುಂದುವರಿಸಿದೆವು.  ನಾಗೇಂದ್ರ ಪ್ರಸಾದ್ ಈಗ ದೊಡ್ಡ ಸಿನಿಮಾ ಹಾಡಿನ ಸಾಹಿತ್ಯ ಕವಿ ಮತ್ತು ನಿರ್ಧೇಶಕನಾಗ ಹೆಸರು ಮಾಡಿದ್ದಾರೆ. ಅವರ ಆಗಿನ ಕೆಟ್ಟ ಮತ್ತು ಒಳ್ಳೆಯ ಗುಣಗಳನ್ನು ಎಂದಾದರೂ ಬರೆಯುತ್ತೇನೆ.. ಇವರ ನಡುವೆ ನನ್ನಂತೆ ರಾಘವೇಂದ್ರ ಕಾಮತ್ ಕೆಲಸದ ನೆಪವೊಡ್ಡಿ ಹೊರಬಂದರೂ ಆತನ ಮನಸ್ಸಿನೊಳಗಿನ ಕವಿ ಮನಸ್ಸು ಸದಾ ಎಚ್ಚರವಾಗಿತ್ತು. ಅಲ್ಲೊಂದು ಇಲ್ಲೊಂದು  ಸಿನಿಮಾ ಹಾಡಿಗೆ ಸಾಹಿತ್ಯ ಬರೆದಿದ್ದರೂ ಅದು ಗಮನಿಸುವಂತಿರಲಿಲ್ಲ. ಮುಂದೆ ನಾನು ಆತನನ್ನು ಸೇರಿದಂತೆ ಇಡೀ ಸುಪ್ತತಂಡವನ್ನು ಮರೆತೆ. ನನ್ನ ಕೆಲಸದಲ್ಲಿ ತೊಡಗಿಕೊಂಡೆ. ಹಾಗೆಂದ ಮಾತ್ರಕ್ಕೆ ನಾವ್ಯಾರು ನಮ್ಮ ಗೆಳೆತನವನ್ನು ಮರೆತಿರಲಿಲ್ಲ.  ಪತ್ರಿಕೆಯಲ್ಲಿ ನಾನು ಬರೆದ ಲೇಖನವನ್ನು ಓದಿ ಯಾರಾದರೂ ಮೆಚ್ಚುಗೆ ಸೂಚಿಸಿ ಪೋನ್ ಮಾಡುತ್ತಿದ್ದರು. ಹಾಗೆ ನಾನು ಅವರ ಮನೆಯ ಮದುವೆ ಇತ್ಯಾದಿ ಕಾರ್ಯಕ್ರಮಗಳಿಗೆ ಹೋಗಿಬರುತ್ತಿದ್ದೆ.

        ಅದೊಂದು ದಿನ ಸುಧೀಪ್ ನಿರ್ಧೇಶನದ ಜಸ್ಟ್ ಮಾತ್ ಮಾತಲ್ಲಿ ಸಿನಿಮಾ ಹಾಡಗಳನ್ನು ಕೇಳಿದಾಗ ಮೊದಲ ಬಾರಿಗೆ ಒಂದು ಹಾಡು ತುಂಬಾ ಕಾಡುವಂತಿದೆಯಲ್ಲಾ ಅನ್ನಿಸುತ್ತು.  ನಾನು ತುಂಬಾ ಇಷ್ಟಪಡುವ ಸುಧೀಪ್ ಸಿನಿಮಾಗಳಲ್ಲಿ ಮೊದಲಿಗೆ "ಆಟೋಗ್ರಾಫ್"  ಆಗಿದ್ದರೂ ಅದು ರಿಮೇಕ್ ಆಗಿದ್ದರಿಂದ ಸುಧೀಪ್ ಎಂದಾದರೂ ಒಂದು ಸ್ವಂತ ಅತ್ಯುತ್ತಮ ಸಿನಿಮ ಕೊಡುತ್ತಾರೆಂಬ ನಂಬಿಕೆಯಿತ್ತು.  "ಜಸ್ಟ್ ಮಾತ್ ಮಾತಲ್ಲಿ"  ನಾನು ತುಂಬಾ ಇಷ್ಟಪಡುವ ಸುಧೀಪ್ ಸಿನಿಮ. ಅದ್ಬುತವಾದ ಫೋಟೊಗ್ರಫಿ, ನಟನೆ, ಕೊನೆಯವರೆಗೂ ಉಳಿಸಿಕೊಳ್ಳುವ ಕುತೂಹಲ..ಇವೆಲ್ಲದರ ಜೊತೆಗೆ ರಘು ದೀಕ್ಷಿತ್  ಸಂಗೀತ ಅದ್ಯಾಕೊ ವಿಭಿನ್ನವೆನಿಸಿತ್ತು. ಅದರಲ್ಲೂ "ಮುಂಜಾನೆ ಮಂಜಲ್ಲಿ"  ಗೀತೆಯನ್ನು  ಕೇಳಿದಾಗ ನನಗೆ ಅರಿವಿಲ್ಲದಂತೆ ಒಂದು ವಿಷಾದ ಕಾಡಲಾರಂಭಿಸಿತ್ತು. ಆ ಹಾಡನ್ನು ಕೇಳಿದ ನಂತರವೂ ಮತ್ತೆ ಮತ್ತೆ ಮನಸ್ಸಿನಲ್ಲಿ ಗುನುಗಿಕೊಳ್ಳುವಂತೆ ಕಾಡುತ್ತಿತ್ತಲ್ಲ...ಆಗ ಅದನ್ನು ಬರೆದವರಾರು ಅಂತ ಹುಡುಕಿದೆ. ಹೆಸರು ರಾಘವೇಂದ್ರ ಕಾಮತ್ ಅಂತ ಇತ್ತು.  ಯಾರೋ ಹೊಸಬ ಇರಬೇಕು ಅಂದುಕೊಂಡಿದ್ದೆ.
                                                   ರಾಘವೇಂದ್ರ ಕಾಮತ್

   ಕೆಲವೇ ದಿನಗಳಲ್ಲಿ ಇದೇ ರಾಘವೇಂದ್ರ ಕಾಮತ್‍ನಿಂದ ಫೋನ್ ಕರೆ ಬಂತು. ನಾನು ಮರೆತರೂ ಆತ ಮರೆತಿರಲಿಲ್ಲ. ತನ್ನ ತಮ್ಮನ ಮದುವೆಗೆ ಅಹ್ವಾನಿಸಲು ಆತ ಫೋನ್ ಮಾಡಿದ್ದ.  ನಾನು ಮದುವೆಗೆ ಹೋಗಿಬಂದಿದ್ದೆ. ಅಲ್ಲಿ ಸಹಜವಾಗಿ ಮಾತಾಡುವಾಗ ಈ ಹಾಡು ಬರೆದಿದ್ದು ಆತನೆಂದು ಗೊತ್ತಾ ಅದು ನನ್ನ ಮೆಚ್ಚಿನ ಹಾಡು ಅಂತ ಹೇಳಿ  ಅಭಿನಂದಿಸಿದ್ದೆ.

       ಫೋಟೊ ಟುಡೆ ಕಾರ್ಯಕ್ರಮವನ್ನು ಮುಗಿಸಿ ಸುಸ್ತಾಗಿ  ಅವತ್ತು ಟೀವಿ ನೋಡೋಣವೆಂದು ಟೀವಿ ಹಚ್ಚಿದರೆ ಸಿನಿಮಾದವರಿಗೆ ಸುವರ್ಣದವರು ನೀಡುವ ಅವಾರ್ಡ್ ಕಾರ್ಯಕ್ರಮ ಬರುತ್ತಿತ್ತು. ಕಾರ್ಯಕ್ರಮವನ್ನು ಎಂಜಾಯ್ ಮಾಡುತ್ತಿದ್ದಂತೆ ಅತ್ಯುತ್ತಮ ಹಾಡಿನ ಸಾಹಿತ್ಯದ ನಾಮಿನಿಗಳನ್ನು ಅನೌನ್ಸ್ ಮಾಡಿದಾಗ ಇದರಲ್ಲಿ ಕನ್ನಡದ ಅತಿರಥ ಮಹರಥರ ಹೆಸರಿನ ಜೊತೆಗೆ ಈ "ರಾಘವೇಂದ್ರ ಕಾಮತ್"  ಹೆಸರು ಜಸ್ಟ್ ಮಾತಲ್ಲಿ ಸಿನಿಮಾದ ಜೊತೆಗೆ ಬಂತಲ್ಲ. ನನ್ನ ಕುತೂಹಲ ಇಮ್ಮಡಿಯಾಯಿತು. ಮೊದಲೇ ನನಗೆ ಆ ಹಾಡು ಫೇವರೇಟ್ ಆಗಿತ್ತು.  ಈತ ಜಯಂತ್ ಕಾಯ್ಕಿಣಿ, ಕವಿರಾಜ್, ಯೋಗರಾಜ್ ಭಟ್, ನಾಗೇಂದ್ರಪ್ರಸಾಧ್ ಇವರನ್ನೆಲ್ಲಾ ಮೀರಿಸಿ ಈತ ಈ ವರ್ಷದ ಅತ್ಯುತ್ತಮ ಸಿನಿಮಾ ಹಾಡಿನ ಸಾಹಿತ್ಯಕ್ಕಾಗಿ ಸುವರ್ಣ ವಾಹಿನಿಯವರ ಪ್ರಶಸ್ತಿಯನ್ನು ಪಡೆದಾಗ ನನಗಂತೂ ನಾನೇ ಪಡೆದಷ್ಟು ಖುಷಿಯಿಂದ ಕುಣಿದಾಣಿದೆ. ಪೋನ್ ಮಾಡಿ ವಿಷ್ ಮಾಡಿದೆ.  ಆತನಿಗೆ ಇದು ಮೊದಲ ಅವಾರ್ಡ್. ನನ್ನ ಸಂತೋಷವನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆಂದು ಆತನನ್ನು ಕೇಳಿದಾಗ ಖುಷಿಯಿಂದ ತನ್ನ ಫೋಟೊ ಕಳಿಸಿಕೊಟ್ಟ.  ನೀವು ಅವನಿಗೆ ವಿಷ್ ಮಾಡಿ ಅಭಿನಂದನೆ ತಿಳಿಸಿ..ಹಾರೈಸಿ.

   ನಿಮಗಾಗಿ ಅವನು ಬರೆದ ಹಾಡಿನ ವಿಡಿಯೋವನ್ನು ಹಾಕಿದ್ದೇನೆ. ನೀವು ನೋಡಿ ಸಂತೋಷದಿಂದ ಗೆಳೆಯನಿಗೆ ಆಶೀರ್ವಾದಿಸಿ..




     ರಾಘವೇಂದ್ರ ಕಾಮತ್ ಬರೆದ ಹಾಡಿನ ವಿಡಿಯೋ ನೋಡಲು  ಈ ಕೆಳಗಿನ ಲಿಂಕ್  ಕ್ಲಿಕ್ಕಿಸಿ



      http://www.youtube.com/watch?v=TcwUH_nZxno&feature=related


ಲೇಖನ
ಶಿವು. ಕೆ.

Saturday, May 21, 2011

ಪ್ರಳಯವಾಗೋಯ್ತು...



      ನನ್ನ ಕೈ ಬೆರಳುಗಳು ನಿದಾನವಾಗಿ ಜಾರುತ್ತಿವೆ.....ಮೈಯೆಲ್ಲಾ ನಡುಗುತ್ತಿದೆ ಯಾವಕ್ಷಣದಲ್ಲಿ ಬೇಕಾದರೂ ನನ್ನ ಜೀವ ಹಾರಿ ಹೋಗಬಹುದು, ಕೇವಲ ಎರಡು ಕೈ ಬೆರಳುಗಳ ಆಧಾರದಲ್ಲಿ ನೇತಾಡುತ್ತಿದ್ದ ನಾನು ಒಮ್ಮೆ ಭಯದಿಂದ ಕೆಳಗೆ ನೋಡಿದೆ.  ಪಾತಾಳ ಕಂಡಂತೆ ಆಗಿತ್ತು.  ಏಕೆಂದರೆ ನಾನು ಆ ಕಟ್ಟಡದ ಸಜ್ಜೆಯನ್ನೆ ಬೆರಳಗಳ ಆಧಾರದಲ್ಲಿ ಹಿಡಿದು ನೇತಾಡುತ್ತಿದೆ. ಆ ಕಟ್ಟಡದ ಗೋಡೆಗೆ ಸರಿಯಾಗಿ ಆಳಕ್ಕೆ ಭೂಮಿ ಬಿರುಕು ಬಿಟ್ಟಿತ್ತು. ಎಷ್ಟು ಆಳಕ್ಕೆ ಎಂದರೆ ಕಡಿಮೆ ಎಂದರೂ ಒಂದು ಸಾವಿರ ಅಡಿಗಳಿರಬಹುದು.  ಇಷ್ಟಕ್ಕೂ ನಾನೊಬ್ಬನೇ ನೇತಾಡುತ್ತಿಲ್ಲ.  ಆ ಸಾಲಿನ ಎಲ್ಲಾ ಕಟ್ಟಡಗಳಲ್ಲಿ ಅನೇಕರು ಪೈಪುಗಳು, ಮುರಿದ ಬಾಗಿಲುಗಳು, ಕಿಟಕಿಗಳು, ಸಜ್ಜೆಗಳನ್ನಿಡಿದು ನೇತಾಡುತ್ತಿದ್ದರೆ ಎಷ್ಟೋ ಜನ ಗಾಳಿಯಲ್ಲಿ ತೇಲಿ ಕೆಳಗೆ ಬೀಳುತ್ತಿದ್ದಾರೆ. ಬಿದ್ದವರು ಸಾವಿರ ಅಡಿ ಆಳಕ್ಕೆ.  ಬೀಳುವಾಗಲೇ ಅವರ ಜೀವ ಹೋಗಿಬಿಟ್ಟಿರುತ್ತದೋ,, ಕೆಳಗೆ ಬಿದ್ದ ಮೇಲೆ ದೇಹ ಚೂರುಚೂರಾಗಿ ಸಾಯುತ್ತಾರೋ ಒಟ್ಟಾರೆ ಒಂದಲ್ಲ ಒಂದು ರೀತಿ ಎಲ್ಲರೂ ಸಾಯುತ್ತಿದ್ದಾರೆ.  ನನ್ನ ಸಾವಿನ ಕ್ಷಣಗಣನೆಯೂ ಆಗುತ್ತಿದೆ. ಇಡೀ ಬೆಂಗಳೂರಿಗೆ ಬೆಂಗಳೂರು, ಕರ್ನಾಟಕ, ಭಾರತ, ಅಷ್ಟೇ ಇಡೀ ಪ್ರಪಂಚವೇ ಪ್ರಳಯಕ್ಕೆ ಸಿಲುಕಿ ಸುನಾಮಿ, ಭೂಕಂಪ, ಬಿರುಗಾಳಿ, ಚಂಡಮಾರುತ.....ಪ್ರವಾಹ ಎಲ್ಲವೂ ಒಟ್ಟಿಗೆ ಆಗುತ್ತಿದ್ದೂ  ಪ್ರಪಂಚಕ್ಕೆ ಪ್ರಪಂಚವೇ ನಾಶವಾಗುತ್ತಿದೆ!   ಅಂತ ಪರಿಸ್ಥಿತಿಯಲ್ಲೂ ಒಮ್ಮೆ ಇದೆಲ್ಲವನ್ನು ನೆನಪಿಸಿಕೊಳ್ಳತೊಡಗಿದೆ.  ಇವತ್ತು ಸರಿಯಾಗಿ ಮೇ ತಿಂಗಳ ೨೧ನೇ ತಾರೀಖು. ಸಂಜೆ ಒಂದು ಮದುವೆ ಅರತಕ್ಷತೆ ಫೋಟೊಗ್ರಫಿಗೆ ಬಂದಿದ್ದ ನಾನು ಮುಗಿಯುವ ಹೊತ್ತಿಗೆ ರಾತ್ರಿ ಹತ್ತು ಗಂಟೆಯಾಗಿತ್ತು.

    ನಾನು ಬರುವುದು ತಡವಾಗುತ್ತದೋ ಇಲ್ಲವೋ ಎನ್ನುವ ವಿಚಾರಕ್ಕಾಗಿ ಎಂದಿನಂತೆ ಹೇಮಾಳಿಂದ ಒಂದು ಪೋನ್ ಕಾಲ್ ಬಂತು. "ರೀ ಇಲ್ಲಿ ಬಿರುಗಾಳಿ ಬೀಸುತ್ತಿದೆ, ಕಿಟಕಿ ಬಾಗಿಲುಗಳೆಲ್ಲಾ ಕಿತ್ತುಕೊಂಡು ಹೋಗಿವೆ, ಒಳಗೆ ನಿಲ್ಲಲಾರದಷ್ಟು ಗಾಳಿಯಿದೆ, ನಮ್ಮ ಮನೆಯ ಗೋಡೆ ಮದ್ಯಕ್ಕೆ ಸೀಳಾಗಿ ಅಡುಗೆ ಮನೆ ಮತು ಬೆಡ್ ರೂಮ್ ಎಲ್ಲ ನಾಶವಾಗಿಬಿಟ್ಟಿದೆ. ನಾನಿದ್ದ ಮತ್ತೊಂದು ರೂಮ್ ಕೂಡ ಅಲುಗಾಡುತ್ತಿದೆ. ನಾನು ಆಕಡೆಗೆ ಹೋಗಲಾಗುತ್ತಿಲ್ಲ, ಮೆಟ್ಟಿಲುಗಳು ಕುಸಿದುಬಿಟ್ಟಿವೆ,  ಎಲ್ಲರ ಮನೆಯಲ್ಲೂ ಹೀಗೆ ಅವರ ಮನೆಗಳಾಗಲೇ ನೆಲಸಮವಾಗಿವೆ,  ಅಕ್ಕಪಕ್ಕದ ಮನೆಯವರು ಯಾರು ಬದುಕಿದಂತೆ ಕಾಣುತ್ತಿಲ್ಲ. ನನಗೆ ಭಯವಾಗುತ್ತಿದೆ"...ಎನ್ನುವಷ್ಟರಲ್ಲಿ ಅವಳ ಫೋನ್ ಕಟ್ಟಾಗಿತ್ತು.  ನಾನು ಫೋಟೊ ತೆಗೆಯುವುದು ಬಿಟ್ಟು ಅಲ್ಲಿಂದ ಹೊರಗೆ ಓಡಿಬಂದೆ ಅಷ್ಟೇ. ಮುಂದೆ ಹೆಜ್ಜೆ ಇಡಲಾಗಲಿಲ್ಲ. ನನ್ನ ಮುಂದಿದ್ದ ಮೆಟ್ಟಿಲುಗಳ ಸಮೇತ ಅರ್ಧ ಕಟ್ಟಡವೇ ನಿದಾನವಾಗಿ ನನ್ನ ಕಣ್ಣೆದುರೇ ಕುಸಿಯತೊಡಗಿತ್ತು. ಒಂದು ಕ್ಷಣ ನಾನು ಮೈಮರೆತು ಹೆಜ್ಜೆಇಟ್ಟಿದ್ದರೂ ನಾನು ಅದರ ಜೊತೆ ನೆಲಸಮವಾಗಿಬಿಡುತ್ತಿದೆ.  ಹಿಂದಕ್ಕೆ ಓಡಿಬಂದು ನೋಡುವಷ್ಟರಲ್ಲಿ ಮದುವೆ ಮನೆಯಲ್ಲಿನ ಸಂಭ್ರಮವೆಲ್ಲಾ ಮಾಯವಾಗಿ ಎಲ್ಲರೂ ದಿಕ್ಕಾಪಾಲಾಗಿ ಓಡುತ್ತಿದ್ದಾರೆ. ಎಲ್ಲ ಬೇರೆ ಊರುಗಳಲ್ಲಿಯೂ ಹೀಗೆ ಆಗಿ ಊರಿಗೆ ಊರೇ ಮುಳುಗಿಹೋಗುತ್ತಿರುವುದು ಅವರ ಆತಂಕದಿಂದ ಮಾತಾಡುತ್ತಿರುವ ಮೊಬೈಲುಗಳಿಂದ ಕೇಳಿಸುತ್ತಿದೆ.  ಇನ್ನೇನು ನನ್ನ ಕತೆಯೂ ಮುಗಿಯಿತು ಅಂದುಕೊಳ್ಳುವಷ್ಟರಲ್ಲಿ ನಾನು ನಿಂತಿದ್ದ ನೆಲವೇ ನಿದಾನವಾಗಿ ಬಿರುಕುಬಿಡತೊಡಗಿತ್ತು.  ಎಚ್ಚೆತ್ತ ನಾನು ಓಡಿ ಅಲ್ಲೊಂದು ಸಜ್ಜೆಯನ್ನು ಎರಡು ಕೈಗಳಿಂದ ಹಿಡಿದು ನೇತಾಡತೊಡಗಿದೆ. ನನ್ನ ಕ್ಯಾಮೆರ ಬ್ಯಾಗ್ ಎಲ್ಲಿಹೋಯಿತೋ ಗೊತ್ತಿಲ್ಲ. ಆದ್ರೆ ಕ್ಯಾಮೆರಾ ಮಾತ್ರ ಬೆಲ್ಟಿನ ಸಮೇತ ಭುಜದಲ್ಲಿ ನೇತಾಡುತ್ತಿತ್ತು.

ಕೊನೆಯ ಬಾರಿ ಎನ್ನುವಂತೆ ನಿದಾನವಾಗಿ ಮೇಲೆ  ನೋಡಿದೆನಲ್ಲಾ, ಆಕಾಶದೆತ್ತರಕ್ಕೆ ಈ  ಬಾರಿ ಬ್ರಹ್ಮಾಂಡ ಸ್ವಾಮೀಜಿ  ನಿಂತು ನಗುತ್ತಿದ್ದಾನೆ. ನಾನು ಹೇಳಿದ್ದು ಹೇಗೆ ನಿಜವಾಯಿತು ನೋಡಿ ಅಂತ ಜೋರಾಗಿ ಗಹಗಹಿಸಿ ನಗುತ್ತಿದ್ದಾನೆ. "ಪಾಪಿ ಮುಂಡೇವ, ನಾನು ಎಷ್ಟು ಹೇಳಿದ್ರೂ ನಂಬಲಿಲ್ಲ ಅಲ್ವಾ ನಿಮ್ಮ ಕರ್ಮಕಾಂಡವನ್ನು ಅನುಭವಿಸಿ"  ಅಂತ ಒಂದು ಕೈಯಲ್ಲಿ ಷಣ್ಮುಖನ ಪುಟ್ಟ ಈಟಿ ಮತ್ತೊಂದು ಕೈಯಲ್ಲಿ ಮೊಸರನ್ನದ ಪೊಟ್ಟಣವನ್ನು ಹಿಡಿದುಕೊಂಡು ಗಹಗಹಿಸಿ ನಗುತ್ತಿದ್ದಾನೆ.  ಆತ ಈ ಭೂಮಿಯನ್ನೇ ನಾಶ ಮಾಡುವ ರಾಕ್ಷಸನಂತೆ ಕಾಣುತ್ತಿದ್ದಾನೆ. ಆಷ್ಟರಲ್ಲೇ ದೂರದಲ್ಲೊಂದು ಬಸ್ಸು ಹೊರಡಲು ನಿಂತಿದೆ.    ಆ ಬಸ್ಸಿನೊಳಗೆ ಆಗಲೇ ನೂರಕ್ಕಿಂತ ಹೆಚ್ಚು ಜನ ಒಳಗೆ ತುಂಬಿದ್ದಾರೆ.  ಇನ್ನಷ್ಟೂ ಮತ್ತಷ್ಟೂ, ಬಸ್ಸಿನ ಮೇಲೆ ಬಸ್ಸಿನ ಅಕ್ಕಪಕ್ಕ ಹೀಗೆ ಒಂದು ಸಾವಿರಕ್ಕೂ ಹೆಚ್ಚು ಜನರೂ ತುಂಬಿ ಆದು ಯಾವ ಕಾಣುತ್ತಿದೆಯೆಂದರೆ ಒಂದುದೊಡ್ಡ ಬಾಲ್ ಆಕಾರದಲ್ಲಿ ಕಂಡು ಕೆಳಗೆ ನಾಲ್ಕು ಚಕ್ರಗಳನ್ನು ಬಿಟ್ಟರೆ ಅದೊಂದು ಬಸ್ಸು ಅನ್ನುವ ಸೂಚನೆಯೇ ಇಲ್ಲದಂತೆ ಅದನ್ನು ಸುತ್ತುವರಿದುಬಿಟ್ಟಿದ್ದಾರೆ.  ಬಸ್ಸಿನ ಹಿಂಭಾಗದಲ್ಲೊಂದು ಬೋರ್ಡು ಅದರ ಮೇಲೆ "ಬೆಳಗಾವಿಯ ಹತ್ತಿರದ ಹಳ್ಳಿಗೆ" ಅಂತ ಬರೆದಿದೆ. ಪ್ರಪಂಚವೇ ಪ್ರಳಯದಲ್ಲಿ ಮುಳುಗಿ ನಾಶವಾದರೂ ಅದೊಂದು ಹಳ್ಳಿ ಉಳಿದುಕೊಳ್ಳುತ್ತದೆ ಅಂತ ಈ ಬ್ರಹ್ಮಾಂಡ ಸ್ವಾಮೀಜಿ ಹೇಳಿದ್ದರಿಂದ ಎಲ್ಲರೂ ಆ ಬಸ್ಸನ್ನು ಈ ಪರಿ ಹತ್ತಿದ್ದಾರೆ.  ನಿದಾನವಾಗಿ ಆ ಬಸ್ಸು ಹೊರಟಿತು.  ಸ್ವಲ್ಪ ದೂರ ಹೋಗುವಷ್ಟರಲ್ಲಿ ಒಬ್ಬೊಬ್ಬರೇ ಕೆಳಗೆ ಹಾರಿ ಬೀಳುತ್ತಿದ್ದಾರೆ. ಮತ್ತಷ್ಟು ದೂರ ಸಾಗಿರಬಹುದು,  ಬಸ್ಸಿನ ಮುಂಭಾಗದ ಸೇತುವೆ ನಿದಾನವಾಗಿ ಕುಸಿಯುತ್ತಿದೆ, ಅದರ ಮೇಲೆ ಚಲಿಸುತ್ತಿರುವ ಬಸ್ಸು ಕೂಡ ಸೇತುವೆ ಸಮೇತ ಕುಸಿಯುತ್ತಾ ನಿದಾನವಾಗಿ ನೀರಿನೊಳಗೆ ಮುಳುಗುತ್ತಿದೆ...
    
       ಇದನ್ನು ನೋಡಿ ಈ ರಾಕ್ಷಸ ಸ್ವಾಮಿ ಜೋರಾಗಿ ಗಹಗಹಿಸಿ ನಗುತ್ತಿದ್ದಾನೆ.  ಅಯ್ಯೋ ನನ್ನ ಕೈ  ಜಾರಿಹೋಗುತ್ತಿದೆಯಲ್ಲಾ  ಇನ್ನೇನು ನಾನು ಕೆಳಗೆ ಬಿದ್ದು ಸಾಯುತ್ತಿದ್ದೇನೆ ಅಂದುಕೊಳ್ಳುತ್ತಿರುವಷ್ಟರಲ್ಲಿ ನನ್ನ ಆಶ್ಚರ್ಯ " ನನ್ನ ಕೈಬೆರಳುಗಳು ರಬ್ಬರಿನಂತೆ ಬೆಳೆಯುತ್ತಿವೆ! ಇಡೀ ದೇಹವೇ ಮತ್ತೆ ರಬ್ಬರಿನಂತೆ ಆಗಿ ದೇಹ ಹೂವಿನಂತೆ ಹಗುರಾಗುತ್ತಿದೆ!  ಒಮ್ಮೆ ನಾನು ಕೈಬೆರಳುಗಳನ್ನು ಒತ್ತಿದೆನಲ್ಲ. ಚಂಗನೆ ಹಾರಿದಂತೆ ಟೆರಸ್ ಹತ್ತಿಬಿಟ್ಟಿದ್ದೆ.  ನನಗೇನೋ ಈಗ ಒಂದು ಕಟ್ಟಡದಿಂದ ಮತ್ತೊಂದು ಕಟ್ಟಡಕ್ಕೆ ಹಾರಬೇಕೆನಿಸುತ್ತಿದೆ! ಹಾರಿದೆ. ಹಾಗೇ ಗಾಳಿಯಲ್ಲಿ ತೇಲುತ್ತಿರುವ ಅನುಭವ! ಆ ಕಟ್ಟಡದಲ್ಲಿ ನಿದಾನವಾಗಿ ಕಾಲೂರಿ ನಿಂತ ಅನುಭವ.  ಸರಿ ಹೇಗಾದರೂ ಸಾಯುತ್ತೇನೆಲ್ಲ ಅಂದುಕೊಂಡು ಕಟ್ಟಡದಿಂದ ಕಟ್ಟಡಕ್ಕೆ ಹಾರಿ ನಾಶವಾಗುತ್ತಿರುವ ಈ ಎಲ್ಲಾ ದೃಶ್ಯಗಳನ್ನು ಫೋಟೊ ತೆಗೆಯತೊಡಗಿದೆ.   ಈ ಪ್ರಪಂಚ ಮುಳುಗಿ ಎಲ್ಲಾ ನಾಶವಾಗಿ ಮುಂದೆ ಎಷ್ಟೋ ಸಾವಿರ ವರ್ಷಗಳ ನಂತರ ಈ ಭೂಮಿಯಲ್ಲಿ ಮುಂದೆಂದೋ ಹುಟ್ಟುವ ಜೀವಿಗೆ  ನಮ್ಮ ಹಿಂದಿನ ಪ್ರಪಂಚ ಹೇಗಿತ್ತೋ ಅನ್ನುವುದನ್ನು ತಿಳಿದುಕೊಳ್ಳಲು ಈ ಫೋಟೊಗಳು ಸಹಕಾರಿಯಾಗಲಿ ಅಂತ ತನ್ಮಯತೆಯಿಂದ ಫೋಟೊ ತೆಗೆಯುತ್ತಿದ್ದೆ.

     ಮೊಸರನ್ನವನ್ನು ಆಗ ತಾನೆ ತಿಂದು ಮುಗಿಸಿದ್ದ ಈ ಬಾಡಿ ಬ್ರಹ್ಮಂಡ ನಾನು ಸಾಯದೇ ಉಳಿದಿರುವುದನ್ನು ನೋಡಿದನಲ್ಲ, ತನ್ನ ಕೈಯಲಿದ್ದ ಈಟಿಯಿಂದ ತಿವಿಯಲು ಓಡಿಬಂದ. ಮತ್ತೊಂದು ಕೈಯಲ್ಲಿ ದೇವರ ಗಂಟೆಯನ್ನು ಅಲುಗಾಡಿಸುತ್ತಾ ಶಬ್ದ ಮಾಡುತ್ತಿದ್ದ.  ನನ್ನ ಮುಂದೆ ಆಕಾಶದೆತ್ತರಕ್ಕೆ ಬಾಡಿ ಬ್ರಹ್ಮಾಂಡ ನಿಂತಿದೆ. ಸಾಯಿಸುವ ಮುನ್ನ ಒಮ್ಮೆ ಗಹಗಹಿಸಿ ನಕ್ಕು ಜೋರಾಗಿ ಗಂಟೆ ಬಾರಿಸತೊಡಗಿದ..... ಆ ಸದ್ದು ಕೇಳಲಾಗದೇ ನಾನು ಕಿವಿಮುಚ್ಚಿಕೊಂಡರೂ  ತಡೆಯಲಾಗುತ್ತಿಲ್ಲ. ಒಮ್ಮೆ ಶಂಖವನ್ನು ಊದಿ ಜೋರಾಗಿ ಗಂಟೆ ಬಾರಿಸಿ ಇನ್ನೇನು ನನ್ನ ಎದೆಗೆ ಈಟಿಯನ್ನು ಚುಚ್ಚಿ ಸಾಯಿಸಬೇಕು.... 

"ರೀ...ರೀ...ಎದ್ದೇಳ್ರಿ.... ಮೊಬೈಲ್ ಅಲಾರಂ ಆಗಿನಿಂದ ಒಂದೇ ಸಮನೆ ಹೊಡ್ಕೋತಿದ್ರೂ ಯಾಕೆ ಇವತ್ತು ನಿಮಗೆ  ಎಚ್ಚರವಾಗುತ್ತಿಲ್ಲ. ಎದ್ದೇಳ್ರೀ ಆಗಲೇ ಗಂಟೆ ನಾಲ್ಕುವರೆಯಾಯ್ತು"... ನನ್ನನ್ನು ಅಲುಗಾಡಿಸಿದ್ದಳು ನನ್ನ ಶ್ರೀಮತಿ.

"ಅರೆರೆ...ಇದೇನಿದೂ ನಾನಿನ್ನು ಮಲಗೇ ಇದ್ದೀನಲ್ಲ. ಸತ್ತೋಗಿಲ್ವಾ",  ಸುತ್ತಲೂ ಕಣ್ಣು ತೆರೆದು ನೋಡಿದೆ. ಮಸುಕುಮಸುಕಾಗಿಯೇ ಎಲ್ಲವೂ ಕಾಣುತ್ತಿತ್ತು. ಓಹ್! ಮಲಗುತ್ತಲೇ ಸಾಯುತ್ತಿದ್ದೇನೆ, ಬ್ರಹ್ಮಾಂಡ ಗುರುಜೀ ಹೇಳಿದ್ದಾನಲ್ಲ ಅದು ತಪ್ಪುವುದಿಲ್ಲವೆಂದು ಮತ್ತೆ ಕಣ್ಣು ಮುಚ್ಚಿದೆ. "ಏನ್ರೀ ನೀವು ಮತ್ತೆ ಮಲಗಿಕೊಳ್ಳುತ್ತಿದ್ದೀರಿ, ಇವತ್ತು ಪೇಪರ್ ಕೆಲಸಕ್ಕೆ ರಜಾನಾ"  ಅಂತ ಮತ್ತೆ ಅಲುಗಾಡಿಸಿದಳಲ್ಲ ಈ ಬಾರಿ ಪೂರ್ತಿ ಎಚ್ಚರವಾಯಿತು.   ಎದ್ದು ನೋಡುತ್ತೇನೆ. ನನ್ನ ಪಕ್ಕ ಹೇಮಾಶ್ರೀ, ನನ್ನ ಮನೆ, ರೂಮು, ಎದುರಿದ್ದ ಕಪಾಟಿನಲ್ಲಿರುವ ಪುಸ್ತಕಗಳು, ಇತ್ಯಾದಿಗಳೆಲ್ಲಾ ಹಾಗೆ ಇವೆ.  ನಾನು ಸತ್ತಿಲ್ಲ. ಇವು ಯಾವುವು ಪ್ರಳಯದಿಂದ ಕೊಚ್ಚಿಕೊಂಡುಹೋಗಿಲ್ಲ. ಎಲ್ಲಿವಿಯೋ ಆಗೆ ಇವೆಯಲ್ಲಾ!  ಹಾಗಾದರೆ ಇದುವರೆಗೂ ಕಂಡಿದ್ದೆಲ್ಲಾ ಕನಸು ಅಂದುಕೊಂಡಾಗ"  ಆ ನಿದ್ರೆ ಕಣ್ಣಿನಲ್ಲಿ ನಗುಬಂತು.  "ನಿಮಗೇನೋ ಆಗಿದೆ ಇವತ್ತು ಎದ್ದ ತಕ್ಷಣ ಮೊದಲ ಬಾರಿಗೆ ಹೀಗೆ ನಗುತ್ತಿದ್ದೀರಿ"  ಅಂದುಕೊಂಡು ಅಂತ ಮುಂಜಾನೆಯಲ್ಲೇ ಚಿಂತೆಗೊಳಗಾದಳು.

"ಓಹ್! ಹಾಗಾದರೆ ನಿನ್ನೆ ದಿನಾಂಕ ಮೇ ಇಪ್ಪತ್ತೊಂದು ಬಾಡಿ ಬ್ರಹ್ಮಾಂಡ ಗುರೂಜಿ ಹೇಳಿದಂತೆ ಪ್ರಳಯವಾಗಿ ಯಾರು ಉಳಿಯೊಲ್ಲವೆಂದುಕೊಂಡು ಅದೇ ರಾತ್ರಿ ಅದೇ ಯೋಚನೆಯಲ್ಲಿ ಮಲಗಿದ್ದೆನಲ್ಲಾ ಅದಕ್ಕೆ ರಾತ್ರಿಯೆಲ್ಲಾ ಕನಸಿನಲ್ಲಿ ಪ್ರಳಯ, ಭೂಕಂಪ, ಸುನಾಮಿಗಳೇ ಕಾಣಿಸಿಕೊಂಡು ನಮ್ಮನ್ನೆಲ್ಲಾ ನಾಶಮಾಡುತ್ತಿರುವ ದೃಶ್ಯಾವಳಿಗಳೇ ಕಾಣಿಸುತ್ತಿದ್ದಿದ್ದು ಇದಕ್ಕೇ ಇರಬೇಕು"   ಎಂದುಕೊಂಡು ಎದ್ದು ಮುಖತೊಳೆದುಕೊಂಡು ಬಟ್ಟೆಬದಲಾಯಿಸಿಕೊಂಡು ಮುಂಜಾನೆ ನಾಲ್ಕು ಮುಕ್ಕಾಲಿನ ಕತ್ತಲಲ್ಲಿ ನನ್ನ ದಿನಪತ್ರಿಕೆ ವಿತರಣೆ ಕೆಲಸಕ್ಕೆ ಹೊರಟೆ.  ಪ್ರಳಯದ ಕನಸಿನಿಂದ ಹೊರಬಂದು ಇವತ್ತು ಏನೇನು ಕೆಲಸವುಂಟು ಅಂತ ಒಮ್ಮೆ ಯೋಚಿಸಿದಾಗ ಆಗಾಧಪಟ್ಟಿಯೇ ಹೊರಬಿತ್ತು.

       ಮೊದಲನೆಯದು ದಿನಪತ್ರಿಕೆಯ ವಿತರಣೆಯ ಕೆಲಸ, ನಂತರ ಸ್ನಾನ ತಿಂಡಿ, ಅರ್ಧವಾಗಿರುವ ಫೋಟೊಗ್ರಫಿ ಲೇಖನದ  ನಾಲ್ಕನೇ ಭಾಗವನ್ನು ಮುಗಿಸಬೇಕು, ಆಗಬೇಕಾಗಿರುವ ಐದು ಮದುವೆ ಫೋಟೊಗಳ ಅಲ್ವಂಗಳಲ್ಲಿ ಒಂದನ್ನಾದರೂ ಇವತ್ತು ಸಿದ್ಧಗೊಳಿಸಬೇಕು, ಕಳೆದ ಒಂದು ತಿಂಗಳಿಂದ ಭಾನುವಾರದ ಯಶವಂತಪುರ ತರಕಾರಿ ಸಂತೆಗೆ ಹೋಗಲಾಗಿರಲಿಲ್ಲ. ಇವತ್ತಾದರೂ ನನ್ನಾಕೆ ಜೊತೆ ಹೋಗಿಬಂದರೇ ಆಕೆಗೆ ಖಂಡಿತ ಖುಷಿಯಾಗುತ್ತದೆ.   ನಡುವೆ ಬಿಡುವಾದರೆ ಹೆಂಡತಿಗೆ ಇಷ್ಟವಾದ "ಹುಡುಗರು" ಅಥ್ವ  "ಸಂಜು ವೆಡ್ಸ್ ಗೀತ" ಚಿತ್ರಕ್ಕೆ ಕರೆದುಕೊಂಡು ಹೋಗಬೇಕು, ಅಥವ ನಾನೊಬ್ಬನೇ "ಪೈರೈಟ್ಸ್ ಅಫ್ ಕೆರೆಬಿಯನ್-ಭಾಗ ನಾಲ್ಕು"  ನೋಡಿಬಿಡಬೇಕು. ಸಂಜೆ ನನ್ನ ದಿನಪತ್ರಿಕೆ ವಿತರಣೆ ಗೆಳೆಯನ ಅಕ್ಕನ ಮದುವೆಯ ಅರತಕ್ಷತೆಯಿದೆ. ಅದಕ್ಕೆ ತಪ್ಪಿಸಿಕೊಳ್ಳುವಂತಿಲ್ಲ. ತುಮಕೂರಿನಿಂದ ಅಣ್ಣನ ಮಕ್ಕಳಾದ ಮೋಹನ, ಮೇಘನ ಮತ್ತು ತೇಜು ಬರುತ್ತಿದ್ದಾರೆ  . ಅವರನ್ನು ಸಂಜೆ ಹೊರಗೆ ಕರೆದುಕೊಂಡು ಹೋಗಬೇಕು.     ಬಳ್ಳಾರಿಯಿಂದ ಕಾಶಿನಾಥ್ ನಗಲೂರ್ ಮಠ್ ಮತ್ತು ಹಾವೇರಿಯಿಂದ ಶಶಿಧರ್ ಹಿರೇಮಠ್ ಫೋಟೊಗ್ರಫಿ ವಿಚಾರವಾಗಿ ಮನೆಗೆ ಬರುತ್ತಿದ್ದಾರೆ ಅವರೊಂದಿಗೆ ಕೆಲವೊತ್ತು ಕಳೆಯಬೇಕು!.............ಅಯ್ಯೋ ಇವತ್ತು ಭಾನುವಾರ ಒಂದೇ ಎರಡೇ ಇಷ್ಟೇಲ್ಲಾ ಇರುವಾಗ ನಾನು ಈ ಬೂಟಾಟಿಕೆ ಬಾಡಿ ಬ್ರಹ್ಮಾಂಡ ಮೊಸರನ್ನ ಗುರುಜೀ ಪ್ರಳಯವಾಗುತ್ತೆ ಅನ್ನುವ ಮಾತನ್ನು ಯೋಚಿಸುತ್ತಲ್ಲೇ ಮಲಗಿ ಪ್ರಳಯದ ಕನಸನ್ನು ಕಂಡು ಹಾಳಾದೆನಲ್ಲಾ....ಛೇ ಇವನಿಂದಾಗಿ ನಿನ್ನೆ ರಾತ್ರಿ ಒಂದು ಸುಂದರ ಕನಸು ಕಾಣುವ ಸಮಯ ಹಾಳಾಯಿತಲ್ಲ ಎಂದುಕೊಂಡು ನನ್ನ ಪತ್ರಿಕೆ ವಿತರಣೆ ಕೆಲಸಕ್ಕೆ ಹೊರಟೆ.  ಆ ಕೆಲಸ ಮುಗಿಸಿ ಮನೆಗೆ ಬಂದು ಸ್ವಲ್ಪ ವ್ಯಾಯಾಮ, ಸ್ನಾನ ತಿಂಡಿ ಮುಗಿಸಿ ಟಿ ವಿ ಹಚ್ಚಿದರೆ!  ಅದೇ ಬಾಡಿ ಬ್ರಹ್ಮಾಂಡವಿಲ್ಲದ ಗುರುಜೀ ಕಾಣಿಸಿಕೊಂಡಿದ್ದಾನೆ.  "ನಿನ್ನೆ ಪ್ರಳಯವಾಗಲಿಲ್ಲ. ಕಾರಣ ನಿಮ್ಮ ಮನೆಯ ಹೆಂಗಸರೆಲ್ಲಾ ನಿನ್ನೆ ರಾತ್ರಿ ಲಕ್ಷಣವಾಗಿ ರೇಷ್ಮೇ ಸೀರೆಯುಟ್ಟು ನಿಮ್ಮ ಮನೆಯ ಆಡುಗೆ ಕೆಲಸ ಮಾಡಿದ್ದಾರೆ ಅದರ ಪ್ರಭಾವದ ಪವಿತ್ರತೆಯಿಂದಾಗಿ ಭೂಮಿಗೆ ಒದಗಬಹುದಾದ ಭೂಕಂಪ ಮುಂದಕ್ಕೆ ಹೋಗಿದೆ"
ಆ ದಿನಾಂಕವನ್ನು ಮುಂದೆ ತಿಳಿಸಲಾಗುವುದು"   ಅಂದನಲ್ಲ ಅವನ ಮಾತನ್ನು ಕೇಳಿಸಿಕೊಳ್ಳುತ್ತಲ್ಲೇ  ಹೇಮಾಶ್ರೀಯ ಕಡೆಗೆ ನೋಡಿದೆ.  ನಿನ್ನೆ ರಾತ್ರಿ ಅವಳು ಕೆಂಪುಬಣ್ಣದ ನೈಟಿಯನ್ನು ಧರಿಸಿದ್ದಾಳೆ. ಹೋಗಲಿ ನಮ್ಮ ಓಣಿಯ ಎಲ್ಲಾ ಹೆಣ್ಣುಮಕ್ಕಳು ರಾತ್ರಿ ನೈಟಿಯಲ್ಲಿಯೇ ಇದ್ದಿದ್ದು ನೆನಪಾಗಿ,  "ತತ್,  ಇವನು ನನಗೆ ಎಲ್ಲಾದರೂ ಒಬ್ಬಂಟಿಯಾಗಿ ಸಿಗಲಿ ಆಗ ವಿಚಾರಿಸಿಕೊಳ್ಳುತ್ತೇನೆ"  ಅಂದುಕೊಳ್ಳುತ್ತಾ ಮಾಡಬೇಕಾದ ದೊಡ್ದಪಟ್ಟಿಯಲ್ಲಿ ಯಾವುದನ್ನು ಮೊದಲು ಪ್ರಾರಂಭಿಸಲಿ ಎಂದು ಯೋಚಿಸುತ್ತಿದ್ದವನಿಗೆ ನಮ್ಮ ಓಣಿಯ ಮಕ್ಕಳು ಆಗಲೆ ರಸ್ತೆಯಲ್ಲಿ ಕ್ರಿಕೆಟ್ ಆಡುತ್ತಿದ್ದುದ್ದು ನೋಡಿ,   ಇಷ್ಟೆಲ್ಲಾ ಕೆಲಸಗಳ ಮನೆ ಹಾಳಾಗಲಿ ಅದನ್ನು ಅಮೇಲೆ ನೋಡಿಕೊಳ್ಳೋಣ ಸ್ವಲ್ಪ ಹೊತ್ತು ಈ ಮಕ್ಕಳ ಜೊತೆ ಕ್ರಿಕೆಟ್ ಆಡೋಣವೆಂದುಕೊಂಡು ಹೊರ ನಡೆದೆ.

 ಲೇಖನ :  ಶಿವು.ಕೆ   

Friday, May 20, 2011

ಮೋನಾಲಿಸ


        ಬಿಡುವಿಲ್ಲದ ಕೆಲಸದ ಒತ್ತಡದಿಂದಾಗಿ ಫೋಟೊಗ್ರಫಿ ಲೇಖನಕ್ಕೆ ನಾಲ್ಕೈದು ದಿನದ ಮಟ್ಟಿಗೆ ಬ್ರೇಕ್.  ಅದಕ್ಕಾಗಿ ಒಂದು ಕವನವನ್ನು ಬ್ಲಾಗಿಗೆ ಹಾಕುವ ಆಸೆಯಾಯ್ತು.   ಮತ್ತೆ ಈ ಕವನ ಈಗ ಬರೆದಿದ್ದಲ್ಲ. ಹತ್ತು ವರ್ಷಗಳ ಹಿಂದೆ ಬರೆದಿದ್ದು ಮತ್ತು ಆಗಲೇ ಕರ್ಮವೀರದಲ್ಲಿ ಪ್ರಕಟವಾಗಿತ್ತು.  ಅದು ಈಗ ನಿಮಗಾಗಿ.

ಕ್ಯಾನ್ವಸ್ಸಿಗೆ ಸ್ಕೆಚ್ ಹಾಕುವ
ಬಣ್ಣ ಹಚ್ಚುವ ಚಿತ್ರಕಲೆಗಾರ ನಾನು
ಬೇಸತ್ತಿದ್ದೆ ಬದುಕಿನ ವಾಸ್ತವ
ಸಂಕೀರ್ಣ ಕೃತಿ ರಚನೆಗಳಿಂದ
ಬರೆಯಲು ಸಿದ್ಧವಾಯ್ತು ಕುಂಚ, ಬಣ್ಣ, ಮನಸ್ಸು
ಬೇಷ್ ಎನಿಸಿಕೊಳ್ಳುವ ಮೋನಾಲಿಸಳನ್ನು.

ಅರೆರೆ....ಇದೇನಿದು! ಆಗ್ತಿಲ್ಲವಲ್ಲ!!?
ನುಣುಪು ಕೆನ್ನೆಗಾಗಿ ಕುಂಚ ಆಡಿಸಿದರೆ
ಇದ್ಯಾಕೆ ಮೂಡುತ್ತಿವೆ ಮುಖದ ಮೇಲೆ
ಅಲ್ಲಲ್ಲಿ ಮೊಡವೆಗಳು
ನಮ್ಮ ದೇಶದ ರೋಗಗಳಂತೆ

ಸಂಪಿಗೆಯಂಥ ಮೂಗು ಮೂಡಲಿಲ್ಲ
ನೂರಾರು ಮೂಢನಂಬಿಕೆಗಳ ಗೊಂದಲದಲ್ಲಿ

ಗುರಿ ಆಕಾಂಕ್ಷೆ ಇಲ್ಲದ ಯುವ ಜನಾಂಗದ್ದೆ!
ಸತ್ವಹೀನ ಸರ್ಕಾರಿ ಯೋಜನೆಗಳೇ!
ಈ ಹೊಳಪಿಲ್ಲದ ಕಣ್ಣುಗಳು  ಯಾವುದರ ಸಂಕೇತ?
 ಭವ್ಯ ನಾಡಿನ ಭವಿಷ್ಯವನ್ನು
ಅಧೋಗತಿಗೆಳೆಯುತ್ತಿರುವ ಸರ್ಕಾರಗಳ ಗುರುತೇ!

ಬಿಳಿ ಜಾಳುಜಾಳು ಕೇಶರಾಶಿ
ಅಪಘಾತಕ್ಕೆ ಆಹ್ವಾನ ಕೊಡೋ ರಸ್ತೆಗಳೇ
ಹಣೆ ಕಣ್ಣುಬ್ಬುಗಳಂತೂ ಥೇಟ್!

ತುಟಿಗಳಂತೂ ನಗುವನ್ನೇ ಮರೆತ ನಾಗರಿಕರ ಗುರುತು.
ಭಯೋತ್ಪಾದನೆ, ತೆರಿಗೆ ಉತ್ಪಾದನೆ ಭಯದಲ್ಲಿ.

ಕೊನೆಗೂ ಮೂಡಿದ ಮಂದಹಾಸ
ರಾಜಕಾರಣಿಗಳ ಅಶ್ವಾಸನೆಯಂತೆ ಕಾಣಬೇಕೇ!

ತೋರುತ್ತಿದೆಯಲ್ಲ ವ್ಯವಸ್ಥೆಯ ಚಿತ್ರ
ರೋಗಿಷ್ಟ ಮುದುಕಿಯ ಮುಖ

ಇದೇನಿದು ಮೊನಾಲಿಸ ಬದಲಿಗೆ
ಹೆಚ್ಚಾಗುತ್ತಿವೆಯಲ್ಲ ಗೋಜಲುಗಳು
ಮತ್ತೆ ತಿದ್ದಿ ತೀಡಲೋದರೆ

ಕೈ ಚೆಲ್ಲಿದ್ದೆ ಪರಿಹಾರ ಕಾಣದೆ
ದೊಡ್ದ ಬಹುಮಾನ ಗಳಿಸಿದವನಿಂದು
ಬಿಡಿಸಲಾಗಲಿಲ್ಲ ಮಂದಹಾಸದ ಮೋನಲಿಸಳನ್ನು.

ಶಿವು.ಕೆ.





        

Tuesday, April 12, 2011

ಮುತ್ಮರ್ಡು ಹಳ್ಳಿ ಲೇಖನ-೨



           ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎನ್ನುವಂತೆ ಮುತ್ಮರ್ಡು ಊರಿನ ಸಾಧನೆ ಇಷ್ಟಕ್ಕೆ ಮುಗಿದಿಲ್ಲ ಇನ್ನೂ ಇದೆ. ಮೊದಲ  ಭಾಗದಲ್ಲಿ ವಿವರಿಸಿದ ವಿಶಿಷ್ಟ ವ್ಯಕ್ತಿಗಳ ಜೊತೆಗೆ ಮತ್ತಷ್ಟು ಸಾಧಕರ ಪರಿಚಯವನ್ನು ಈ ಭಾರಿ ಮಾಡಲು ಪ್ರಯತ್ನಿಸುತ್ತಿದ್ದೇನೆ.

                    ವಿಜ್ಞೇಶ್ವರ ಹೆಗಡೆ ತಮ್ಮ ಕಲಾಕೃತಿಯೊಂದಿಗೆ...

ಇವರು  ೪೫  ವರ್ಷದ  ವಿಜ್ಞೇಶ್ವರ ಹೆಗಡೆ ಎನ್ನುವವರು  ದೊಡ್ಡ ದೊಡ್ಡ ನಾಟಕ ಪರಧೆಗಳ ಚಿತ್ರಗಳನ್ನು  ಬರೆಯುವುದರಲ್ಲಿ ಪರಿಣಿತರು.  ಜಾತ್ರೆಗಳಲ್ಲಿ, ಉತ್ಸವಗಳಲ್ಲಿ ನಡೆಯುವ ದೊಡ್ದ ದೊಡ್ಡ ನಾಟಕಗಳಿಗೆ  ಬಳಸುವ  ದೊಡ್ಡ ಪರದೆಗಳ[ಕ್ಯಾನ್‌ವಸ್ ಬಟ್ಟೆ]ಪೌರಾಣಿಕ  ಚಿತ್ರಗಳನ್ನು  ಬರೆಯುವ  ಅದ್ವಿತೀಯ ಕಲಾವಿದರು.

ಯುವ ಸಂಗೀತಗಾರ.ವಿನಾಯಕ ಹೆಗಡೆ

          
ಇವರ ತಮ್ಮನಾದ  ವಿನಾಯಕ ಹೆಗಡೆ ಎನ್ನುವವರು ಹಿಂದುಸ್ಥಾನಿ ಸಂಗೀತ ಕಲಾವಿದರು.  ಇವರೆಂಥ  ಪ್ರತಿಭಾವಂತರೆಂದರೇ  ಕೇಂದ್ರ ಸರ್ಕಾರದಿಂದ  ಹಿಂದುಸ್ಥಾನಿ ಕ್ಲಾಸಿಕಲ್ ಸಂಗೀತ ಕಲಿಯಲು ಪ್ರತಿತಿಂಗಳಿಗೆ ಆರುಸಾವಿರ ರೂಪಾಯಿಯಂತೆ  ಎರಡುವರ್ಷಗಳವರೆಗೆ ಸ್ಕಾಲರ್‌ಷಿಪ್ ಸಿಕ್ಕಿದೆ. ಈ  ರೀತಿಯ ಕರ್ನಾಟಕದಿಂದ ಅವಕಾಶ ಸಿಕ್ಕಿರುವ  ಇಬ್ಬರಲ್ಲಿ  ಇವರೊಬ್ಬರು  ಅಂದರೇ  ಇವರ ಸಾಧನೆ ಎಂಥದ್ದು  ಎಂದು ಊಹಿಸಬಹುದು...


ಇಷ್ಟೆಲ್ಲಾ ಹೇಳಿದ ಮೇಲೆ  ಇಲ್ಲಿನ ಹೆಣ್ಣು ಮಕ್ಕಳು ಏನು ಸಾಧಿಸಿಲ್ವಾ  ಅಂತ ನಿಮಗನ್ನಿಸಬಹುದು...ಯಾಕಿಲ್ಲ. ಈ ಊರಿನ ಮಣ್ಣಿನಲ್ಲೇ ಕಲೆಯಾ ಗುಣವಿರುವಾಗ  ಅವರನ್ನು ಬಿಟ್ಟಿರಲು ಹೇಗೆ ಸಾಧ್ಯ.?  ...ಸ್ವಾತಿಯ ತಾಯಿ ಉಷಾ ಹೆಗಡೆ, ಮತ್ತು  ಜಯಂತ್ ತಾಯಿ ಜಯಲಕ್ಷ್ಮಿ ಹೆಗಡೆ ಇಬ್ಬರೂ ಸೊಗಸಾಗಿ ಬಟ್ಟೆ ಹೊಲೆಯುತ್ತಾರೆ.  ಸುತ್ತಮುತ್ತಲ ಊರಿಗೆಲ್ಲಾ  ಮಕ್ಕಳ ಮತ್ತು  ಹೆಣ್ಣು  ಮಕ್ಕಳ ಬಟ್ಟೆ ಹೊಲಿಯುವುದರಲ್ಲಿ  ಇವರು ತುಂಬಾ ಫ಼ೇಮಸ್ಸು....!

ಜಯಲಕ್ಷ್ಮಿ ಹೆಗಡೆ


 ಉಷಾ ಹೆಗಡೆ.
             

ನಾಗೇಂದ್ರರವರ ಶ್ರೀಮತಿ  ನಾಗರತ್ನ ಹೆಗಡೆಯವರು  ಆಡಿಕೆ  ಬೀಜಗಳನ್ನು  ಸಂಗ್ರಹಿಸಿ ಕಸಿ ಮಾಡಿ  ಪ್ರತಿವರ್ಷ ಸಾವಿರಾರು  ಆಡಿಕೆ ಸಸಿಗಳನ್ನು  ಸುತ್ತಲ ಊರಿಗೆ ಮಾರುತ್ತಾರೆ.  ಜೊತೆಗೆ  ಬೆಟ್ಟದಲ್ಲಿ ಸಿಗುವ  ಅಂಟುವಾಳ, ಕೋಕಮ್, ಬೆಟ್ಟದ ಹಲಸು,  ಮಾವು,  ವಾಟೆ, ಸೀಗೆಪುಡಿಗಿಡ, ಬೆಟ್ಟದ ನೆಲ್ಲಿಕಾಯಿ, ಆಳಲೇಕಾಯಿ......ಇನ್ನೂ ಅನೇಕ ಔಷದೀಯಾ ಗಿಡಗಳು ಇವರೇ  ಮನೆಯ ಸುತ್ತ ಮಾಡಿಕೊಂಡ  ನರ್ಸರಿಯಲ್ಲಿ  ಪ್ರತಿವರ್ಷ ಸಿದ್ಧವಾಗುತ್ತವೆ.  ಮತ್ತೆ ಇದೆಲ್ಲವನ್ನು   ಮನೆಯ ಕೆಲಸ, ಮಕ್ಕಳ ಓದು, ಅವರನ್ನು  ಸ್ಕೂಲಿನ ಸಮಯದಲ್ಲಿ ಸಿದ್ಧಮಾಡಿಕಳಿಸುವುದು, ಮನೆಯ ಹಿರಿಯರೆಲ್ಲರಿಗೆ ಆಡಿಗೆ ಊಟ ತಿಂಡಿ, ಇತ್ಯಾದಿ ಮನೆಕೆಲಸಗಳನ್ನು ಮಾಡುತ್ತಾ  ಮನೆಯ ಹಿರಿಯರ ಕೃಷಿಕೆಲಸದಲ್ಲಿ ಸಹಾಯ ಮಾಡುತ್ತಾ ಇಂಥ ನರ್ಸರಿ ನಡೆಸುತ್ತಾರೆಂದರೇ ನಂಬಲಿಕ್ಕೆ ಸಾಧ್ಯವಿಲ್ಲ ಅಲ್ಲವೇ....ಹಾಗೆ  ಇವರು  ಆಡಿಕೆ ಸುಲಿಯುವುದರಲ್ಲಿ  ಪಳಗಿದ ಕೈ ಕೂಡ...

ನಾಗರತ್ನ ಹೆಗಡೆ

ನಾನು ಇದುವರೆಗೆ ಹೇಳಿದ್ದೆಲ್ಲಾ ಇದೇ ಊರಿನಲ್ಲಿ ಇದ್ದು ಸಾದನೆ ಮಾಡಿದವರ ಬಗ್ಗೆ.   ಈಗ  ಈ ಊರಿನಲ್ಲಿ  ಹುಟ್ಟಿ ಬೆಳದು  ಹೊರರಾಜ್ಯ,  ವಿದೇಶಗಳಲ್ಲಿ ನೆಲಸಿ ದೊಡ್ಡ ಸಾಧನೆ ಮಾಡಿ  ಊರಿಗೆ  ಕೀರ್ತಿ ತಂದವರ ಬಗ್ಗೆ  ಮುಂದಿನ ಭಾಗದಲ್ಲಿ ಹೇಳುತ್ತೇನೆ.

ಚಿತ್ರಗಳು: ನಾಗೇಂದ್ರ ಮತ್ಮುರ್ಡು.
ಲೇಖನ :  ಶಿವು.ಕೆ


Sunday, April 10, 2011

ಫೋಟೋ ಸುಖ...ಪ್ರಜಾವಾಣಿ ದು:ಖ

       

          ದಿನಾಂಕ ೧೦-೪-೨೦೧೧ರ ಭಾನುವಾರದ ಪ್ರಜಾವಾಣಿ ಸಾಪ್ತಾಹಿಕ ಪುರವಣಿಯಲ್ಲಿನ ಮುಖಪುಟದಲ್ಲಿ ನನ್ನ ಆತ್ಮೀಯ ಗೆಳೆಯ ಚಿಕ್ಕಮಗಳೂರಿನ ಪ್ರಜಾವಾಣಿ ಮುಖ್ಯ ಪ್ರತಿನಿಧಿ ಡಿ.ಎಂ.ಘನಶ್ಯಾಮ ಬರೆದ "ಫೋಟೊ ಸುಖ... ಹಕ್ಕಿ ದು:ಖ"  ಲೇಖನವನ್ನು ಓದಿದೆ. ಓದಿದ ಮೇಲೆ ಅದು ಪ್ರಜಾವಾಣಿಯ ದು:ಖವೆನಿಸಿತ್ತು.  ಪ್ರತಿಷ್ಟಿತ ಪ್ರಜಾವಾಣಿಗೆ ಇಂಥ ಲೇಖನವನ್ನು ಪ್ರಕಟಿಸುವ ಮುನ್ನ ಆ ಲೇಖನದ ಹಿಂದೆ ಎಷ್ಟರ ಮಟ್ಟಿಗಿನ ಶ್ರಮವಿದೆ ಅಂತ ಏಕೆ ನೋಡಲಿಲ್ಲ.  ಘನಶ್ಯಾಮ ನನ್ನ ಆತ್ಮೀಯ ಗೆಳೆಯ. ಆತ ಹತ್ತಾರು ಉತ್ತಮ ಲೇಖನಗಳನ್ನು ಬರೆದಿದ್ದಾರೆ. ಅವರ ಬಗ್ಗೆ ಮೆಚ್ಚುಗೆ ಮತ್ತು ಗೌರವವಿದೆ.  ಪತ್ರಿಕೆಯಲ್ಲಿ ತನ್ನ ಲೇಖನ ಬಂದು ತುಂಬ ದಿನವಾಯಿತಲ್ಲ ಎನ್ನುವ ಹಫಾಹಫಿತನದಿಂದಾಗಿ ಬರೆದ ಲೇಖನವನ್ನು ಪ್ರಜಾವಾಣಿಯ ಸಾಪ್ತಾಹಿಕ ಸಂಪಾದಕರು ಅದನ್ನು ಪರಾಮರ್ಶಿಸದೆ ಪ್ರಕಟಿಸಿದ್ದಾರೆ. ಪ್ರಕಟಿಸುವುದರ ಜೊತೆಗೆ ನೂರಾರು ವನ್ಯಜೀವಿ ಛಾಯಾಗ್ರಾಹಕರನ್ನು ಅವಮಾನಿಸಿದ್ದಾರೆ. "ಪಕ್ಷಿಗಳ ಮಟ್ಟಿಗೆ ಹೆಸರು ಮಾಡುವ ಏಕೈಕ ಉದ್ದೇಶದಿಂದ ಬರುವ ಫೋಟೊಗ್ರಾಫರುಗಳೇ ದೊಡ್ಡ ಅಪತ್ತು. ಫೋಟೊ ಕ್ಲಿಕ್ಕಿಸುವ ಭರದಲ್ಲಿ ಇವರು ಮಾಡುವ ಅವಾಂತರ ಒಂದೆರಡಲ್ಲ.............ಹೀಗೆ ಬರೆದಿರುವ ಘನಶ್ಯಾಮ್  ಎಷ್ಟು ಪಕ್ಷಿ ಛಾಯಾಗ್ರಾಹಕರು ಹಕ್ಕಿಗಳ ಗೂಡುಗಳನ್ನು ಹಾಳುಮಾಡುವುದನ್ನು ಖುದ್ದಾಗಿ ನೋಡಿದ್ದಾರೆ? ಹೋಗಲಿ ಕಲೆಹಾಕಿದ ಮಾಹಿತಿಯಿಂದ ಬರೆದಿರುವ ವಿಚಾರವೆಂದು ತಿಳಿಯೋಣವೆಂದರೆ ಆ ಮಾಹಿತಿಗೂ ತಲೆಬುಡ ಸರಿಯಿಲ್ಲ.  ಏಕೆಂದರೆ ಅವರೇ ಕೊಟ್ಟ ಒಂದು ಉದಾಹರಣೆಯನ್ನು ತೆಗೆದುಕೊಳ್ಳುವುದಾದರೆ   "ಚಿಕ್ಕಮಗಳೂರು-ಬೇಲೂರು ರಸ್ತೆಯಲ್ಲಿರುವ ಕೋಟೆಕೆರೆಯಲ್ಲಿ ಸಾಮಾನ್ಯವಾಗಿ ಬೆಳ್ಳಕ್ಕಿ ಹಿಂಡು ಬೀಡು ಬಿಟ್ಟಿರುತ್ತದೆ. ಕೆರೆಯ ಒಂದು ಬದಿಯಲ್ಲಿ ವಿಶ್ರಮಿಸುತ್ತಿರುವ ಬೆಳ್ಳಕ್ಕಿಗಳ ಫೋಟೊ ತೆಗೆದ ಫೋಟೊಗ್ರಾಫರ್ ಒಬ್ಬರಿಗೆ ಅವು ರೆಕ್ಕೆ ಬಿಚ್ಚಿ ಹಾರುವ ಫೋಟೊಗಳು ಬೇಕು ಎನಿಸಿತ್ತು. ಆದರೆ ಅವರು ಹಿಂದುಮುಂದು ಯೋಚಿಸದೆ ಕಲ್ಲು ತೆಗೆದು ಬೀಸಿದರು. ಕಲ್ಲೊಂದು ಬೆಳ್ಳಕ್ಕಿ ಕಾಲಿಗೆ ತಾಗಿ ಗಾಯವಾಯಿತು. ಉಳಿದವು ಹಾರಿದವು. ಈ ಮಹಾನುಭಾವ ಫೋಟೊ ತೆಗೆದು ಸಂಭ್ರಮಿಸಿದ."    ಹೀಗೆ ಬರೆದಿದ್ದಾರೆ.  ಒಬ್ಬ ಪಕ್ಷಿ ಫೋಟೋ ತೆಗೆಯುವ ಛಾಯಾಗ್ರಾಹಕ ಇದೇ ಬೆಳ್ಳಕ್ಕಿಗಳ ಫೋಟೊ ತೆಗೆಯುವ ಸಮಯದಲ್ಲಿ ತನ್ನ ಬಳಿಯಿರುವ ನಾಲ್ಕರಿಂದ ಆರುಕೇಜಿ ತೂಕವಿರುವ ಕ್ಯಾಮೆರ ಮತ್ತು ಜೊತೆಗಿರುವ ದೊಡ್ದ ಲೆನ್ಸ್ ಅನ್ನು ನೆಲದ ಮೇಲಿಟ್ಟು ಒಂದು ಕಲ್ಲನ್ನೆತ್ತಿಕೊಂಡು ಪಕ್ಷಿಗಳಿಗೆ ಗುರಿಯಿಟ್ಟು ಹೊಡೆದು ಮರುಕ್ಷಣ ಅಷ್ಟು ತೂಕವಿರುವ ಕ್ಯಾಮೆರ ಮತ್ತು ಲೆನ್ಸುಗಳನ್ನೆತ್ತಿ ಯಾವುದೋ ಒಂದು ಹಕ್ಕಿಯನ್ನು ಫೋಕಸ್ ಮಾಡಿ ಫೋಟೊ ತೆಗೆಯಲು ಸಾಧ್ಯವೇ? ಬಹುಶಃ ಇಂಥ ವರದಿಗಾಗಿ ಘನಶ್ಯಾಮ್ ತನ್ನ ಗೆಳೆಯರನ್ನು ಅದೇ ಜಾಗಕ್ಕೆ ಕಳಿಸಿ ಅಲ್ಲಿ ಹಕ್ಕಿಗಳಿಗೆ ಕಲ್ಲು ಹೊಡೆಸಿ ಗಾಯಮಾಡಿ ತಮ್ಮ ಪುಟ್ಟ ಕ್ಯಾಮೆರದಲ್ಲಿ ಫೋಟೊ ಕ್ಲಿಕ್ಕಿಸುವ ಹಾಗೆ ಮಾಡಿದ್ದಾರ ಅಂತ ಸಂಶಯ ಬರುವುದು ಖಂಡಿತ.  ಒಬ್ಬ ವನ್ಯ ಜೀವಿ ಅಥವ ಪಕ್ಷಿಗಳ ಛಾಯಾಗ್ರಾಹಕರು ಮೊದಲಿಗೆ ಅವರು ಪ್ರಕೃತಿ ಪ್ರೇಮಿಗಳಾಗಿರುತ್ತಾರೆ.  ಅವರು ಮೊದಲಿಗೆ ಹಕ್ಕಿಗಳ ಬಗ್ಗೆ ತಿಳಿದುಕೊಳ್ಳಲು ಪ್ರಯತ್ನಿಸುತ್ತಾರೆ. ಅವುಗಳ ಸಂರಕ್ಷಣೆಗಾಗಿ ಉಳಿವಿಗಾಗಿ ಮತ್ತು ಮಾಹಿತಿಗಾಗಿ ಫೋಟೊಗ್ರಫಿ ಮಾಡುತ್ತಾರೆ.  ಒಳ್ಳೆಯ ಮತ್ತು ಅದ್ಬುತ ಫೋಟೊಗ್ರಫಿ ಮಾಡಿ ಅದು ಪತ್ರಿಕೆಗಳಲ್ಲಿ, ಪುಸ್ತಕಗಳಲ್ಲಿ ಮಾದ್ಯಮಗಳಲ್ಲಿ ಬಂದರೆ ಪಕ್ಷಿವೀಕ್ಷಕರಿಗೆ ಅಧ್ಯಾಯನ ಮಾಡುವವರಿಗೆ, ಅದರ ಬಗ್ಗೆ ಆಸಕ್ತಿಯಿರುವವರಿಗೆ ಆಗುವ ಉಪಯೋಗಗಳು ನೂರಾರು. ಇಂಥ ಪ್ರಯತ್ನದಿಂದಾಗಿ ಆ ಛಾಯಾಗ್ರಹಕನಿಗೆ  ಹೆಸರು ಮತ್ತು ಖ್ಯಾತಿ ಬಂದರೆ ಅದು ಛಾಯಾಗ್ರಾಹಕನಿಗೆ ಬೋನಸ್ ಮಾತ್ರ.  ಆದು ಬಿಟ್ಟು ಘನಶ್ಯಾಮ್ ಬರೆದ ಹಾಗೆ ನಡೆದುಕೊಳ್ಳುವ ವನ್ಯಜೀವಿ ಛಾಯಾಗ್ರಾಹರಿರುವುದಿಲ್ಲ. 


ಮತ್ತೊಂದು ವಿಚಾರವೇನೆಂದರೆ ನಮ್ಮ ನಾಡಿನ ಪ್ರಖ್ಯಾತ ವನ್ಯಜೀವಿ ಛಾಯಾಗ್ರಾಹಕರು ಪಕ್ಷಿಗಳ ಫೋಟೊಗ್ರಫಿ ಮಾಡಿ ಲಂಡನ್ನಿನ ರಾಯಲ್ ಫೋಟೊಗ್ರಫಿ ಸೊಸೈಟಿ ಮತ್ತು ಫ್ಯಾರಿಸ್ಸಿನ "ಫೆಡರೇಷನ್ ಅಪ್ ಇಂಟರ್‌ನ್ಯಾಷನಲ್ ಡಿ ಲ ಅರ್ಟ್  ಫೋಟೊಗ್ರಫಿ" ಸಂಸ್ಥೆಗಳಿಂದ ಪ್ರತಿಷ್ಟಿತ ಡಿಸ್ಟಿಂಕ್ಷನ್ ಪಡೆದಿದ್ದಾರೆ.  ಆ ರೀತಿ 2011ರವರೆಗೆ 50ಕ್ಕೂ ಹೆಚ್ಚು ಕರ್ನಾಟಕದ ಛಾಯಾಗ್ರಾಹಕರು ಮತ್ತು  200ಕ್ಕೂ ಹೆಚ್ಚು ಡಿಸ್ಟಿಂಕ್ಷನ್ ಪಡೆದ ಛಾಯಾಗ್ರಾಹಕರು ಭಾರತದಾದ್ಯಂತ ಇದ್ದಾರೆ. ಹಾಗಾದರೆ ಇವರಿಗೆಲ್ಲಾ ಡಿಸ್ಟಿಂಕ್ಷನ್ ಕೊಟ್ಟ ಆ ಅಂತರರಾಷ್ಟ್ರೀಯ ಸಂಸ್ಥೆಗಳಿಗೆ ಬುದ್ದಿಯಿಲ್ಲವೇ?   ಇವರೆಲ್ಲಾ ಘನಷ್ಯಾಮ್ ಬರೆದಂತೆ ಫೋಟೊಗ್ರಫಿಗಾಗಿ ಹಕ್ಕಿಗಳನ್ನು ಸಾಯಿಸಿದ್ದಾರೆಯೇ?  ಒಂದುವೇಳೆ  ಸಾಯಿಸಿದ್ದಾರೆ ಅಂತಲೇ ಅಂದುಕೊಂಡರೆ ಅವರು ಕ್ಲಿಕ್ಕಿಸಿದ ಹಕ್ಕಿಗಳ ಚಿತ್ರಗಳನ್ನು ನಿಮ್ಮದೇ ಪತ್ರಿಕೆಯಲ್ಲಿ ಇದುವರೆಗೂ ಪ್ರಕಟಿಸಿದ್ದೀರಲ್ಲ ಅದು ಎಷ್ಟು ಸರಿ? 

            ಯಾವುದೋ ಇಂಟರ್‍ನೆಟ್ ಲೇಖನವನ್ನು ಓದಿ ಹೀಗೆ ಬರೆಯುವ ಡಿ.ಎಂ ಘನಶ್ಯಾಂ ಈಗ ಪತ್ರಿಕೆಯ ಮುಖ್ಯ ವರಧಿಗಾರನಾಗಿರುವುದು ಚಿಕ್ಕಮಗಳೂರಿನಲ್ಲಿ. ಘನಶ್ಯಾಂ ಅವರು ಬರೆದ ಲೇಖನ ಪ್ರಕಟವಾಗಿದ್ದು ದಿನಾಂಕ 10-4-2011ರ ಭಾನುವಾರದಂದು. ಆದ್ರೆ ಅದೇ ದಿನಾಂಕದಂದು ಪ್ರಜಾವಾಣಿಯ ನಾಲ್ಕನೆ ಪುಟದಲ್ಲಿ "ಪ್ರಜಾವಾಣಿ ಕ್ಲಿಕ್" ಕಾಲಂನಲ್ಲಿ "ತುತ್ತಾ ಮುತ್ತಾ" ಕೆಂಪಕ್ಷರದ ಹೆಡ್ಡಿಂಗಿನಲ್ಲಿ "ನಗರದ ಕಬ್ಬನ್ ಉದ್ಯಾನದಲ್ಲಿನ ಮರದ ಪೊಟರೆಯಲ್ಲಿ ಗಿಳಿಯೊಂದು ತನ್ನ ಮರಿಗೆ ಗುಟುಕು ನೀಡಿದ ದೃಶ್ಯ ಶನಿವಾರ ಕಂಡುಬಂತು."  "ಪ್ರಜಾವಾಣಿ ಚಿತ್ರ: ಬಿ.ಕೆ. ಜನಾರ್ಧನ್." ಎನ್ನುವ ಪುಟ್ಟ ಶೀರ್ಷಿಕೆಯ ಮೇಲೆ ಒಂದು ಗಿಳಿ ತನ್ನ ಮರಿಗಿಳಿಗೆ ಗುಟುಕು ನೀಡುತ್ತಿರುವ ಸುಂದರ ಚಿತ್ರವನ್ನು ಪ್ರಕಟಿಸಿಬಿಟ್ಟಿದ್ದಾರೆ. ಈ ಚಿತ್ರದಿಂದಾಗಿ ಪ್ರಜಾವಾಣಿ ಪತ್ರಿಕೆಗೂ ಅದನ್ನು ತೆಗೆದ ಛಾಯಾಗ್ರಾಹಕನಿಗೂ ಹೆಸರು ಮತ್ತು ಕೀರ್ತಿ ಅವತ್ತಿನ ಮಟ್ಟಿಗೆ ಬಂದಿರುವುದಂತೂ ನಿಜ.  ಪಾಪ ಘನಶ್ಯಾಮರಿಗೆ ಮರದ ಪೊಟರೆಯಲ್ಲಿ ಗೂಡುಮಾಡಿರುವ ಆ ಗಿಳಿಯು ತನ್ನ ಮರಿಗೆ ಗುಟುಕು ನೀಡುವುದನ್ನು ಫೋಟೊ ತೆಗೆದ ತಮ್ಮ ಪ್ರಜಾವಾಣಿಯ ಛಾಯಾಗ್ರಾಹಕ ಬಿ.ಕೆ ಜನಾರ್ಧನ್ ಫೋಟೊಗ್ರಫಿ ಮಾಡುವ ಸಲುವಾಗಿ ಆ ಗಿಳಿ ಮತ್ತು ಅದರ ಮರಿಗೆ ತೊಂದರೆ ಕೊಡುತ್ತಿದ್ದಾರೆ ಅಂತ ಏಕೆ ಅನ್ನಿಸಲಿಲ್ಲ. ಪತ್ರಿಕೆಯಲ್ಲಿ ಪ್ರಕಟವಾದ ಈ ಚಿತ್ರವನ್ನು ನೋಡಿ ಅಲ್ಲೊಂದು ಗಿಳಿಗೂಡಿದೆ. ಅದರಲ್ಲೊಂದು ಮರಿಯಿದೆ. ತಾಯಿ ಗಿಳಿಯಿದೆ. ಅದರಿಂದ ನಮಗೆ ಮಾಂಸ ಸಿಗುತ್ತದೆ ಅಂತ ಹಕ್ಕಿಗಳ ಬೇಟೆಗಾರರು ಖುಷಿಪಡುವುದಿಲ್ಲವೇ... ಇಂಥ ಚಿತ್ರಗಳನ್ನು ಪ್ರಕಟಿಸಿ ಆ  ಹಕ್ಕಿಗಳ ಸಾವಿಗೆ ಪತ್ರಿಕೆ ಪರೋಕ್ಷವಾಗಿ  ಕಾರಣವಾಗುವುದಿಲ್ಲವೇ?  ಪಾಪ ಆ ಛಾಯಾಗ್ರಾಹಕರಿಗೆ ಗೊತ್ತಿರದಿದ್ದರೂ ಘನಶ್ಯಾಂ ಲೇಖನವನ್ನು ಪ್ರಕಟಿಸುವ ಪ್ರಜಾವಾಣಿ ಪತ್ರಿಕೆಗೆ ಏಕೆ ಅನ್ನಿಸಲಿಲ್ಲ. ತಮ್ಮ ಪತ್ರಿಕೆಯ ಛಾಯಾಗ್ರಾಹಕರು ಇಂಥ ಫೋಟೊಗಳನ್ನು ಕ್ಲಿಕ್ಕಿಸಿದರೆ ಅದರಿಂದ ತಮ್ಮ ಪತ್ರಿಕೆಗೆ ಮತ್ತು ಛಾಯಾಗ್ರಾಹಕನಿಗೆ ಕೀರ್ತಿ. ಇತರ ವನ್ಯ ಜೀವಿ ಛಾಯಾಗ್ರಾಹಕರು ಇಂಥ ಫೋಟೊಗಳನ್ನು ಕ್ಲಿಕ್ಕಿಸಿದರೆ ಹಕ್ಕಿಗಳಿಗೆ ದು:ಖ ಅಲ್ಲವೇ....

ತಮ್ಮ ಪತ್ರಿಕೆಯ ವರದಿಗಾರ ಈ ಲೇಖನದ ಮೂಲಕ ಎಲ್ಲಾ ವನ್ಯಜೀವಿ ಛಾಯಾಗ್ರಾಹಕರನ್ನು ಅವಮಾನಿಸಿರುವುದಲ್ಲದೇ ಇಂಥ ಆಧಾರವಿಲ್ಲದ ಲೇಖನವನ್ನು ಪ್ರಕಟಿಸಿರುವ ಪ್ರಜಾವಾಣಿಯ ಸಾಪ್ತಾಹಿಕ ಪುರವಾಣಿಯ ಸಂಪಾದಕರು ಇದಕ್ಕೆ ಉತ್ತರಿಸುವರೆ?

ಪ್ರಜಾವಾಣಿಯ ಸಾಪ್ತಾಹಿಕ ಪುರವಣಿಯ ಲೇಖನಕ್ಕಾಗಿ ಇಲ್ಲಿ ಕ್ಲಿಕ್ಕಿಸಿ..

http://220.227.178.12/prajavani/web/include/story.php?news=1591&section=54&menuid=13


ಲೇಖನ: ಶಿವು.ಕೆ


Friday, April 1, 2011

ನದಿತಟದಲ್ಲಿ



ಕಾಣದ ಅವಳಿಗಾಗಿ
ದಿನಕ್ಕೊಂದು ಕವನ ಬರೆಯುತ್ತಿದ್ದೆ
ನದಿತಟದಲ್ಲಿ ಕುಳಿತು
ದೋಣಿಗಳಲ್ಲಿ ಪದಗಳನ್ನು ತೇಲಿಬಿಡುತ್ತಿದ್ದೆ

ತುಂಟ ಮೀನೊಂದು ನೀರಿಂದ
ಚಿಮ್ಮಿ ಕಣ್ಣು ಮಿಟುಕಿಸಿ ಹಾರಿಳಿದಾಗ
ತುಂತುರು ಮಳೆಯಲ್ಲಿ ಕೋಲ್ಮಿಂಚು
ಭೂರಮೆಯ ಛಾಯಾಚಿತ್ರ ಕ್ಲಿಕ್ಕಿಸಿ ಮರೆಯಾದಾಗ
ಕೊಂಬೆಯಲ್ಲಿದ್ದ ಮೈನ ಹಕ್ಕಿ
ಇನಿಯನಿಗೆ ಕಿಸಕ್ಕನೆ ಕಚಗುಳಿಯಿಟ್ಟಾಗ
ಮಕರಂದವೀರಿದ ಪತಂಗವನ್ನೇ
ನೋಡುತ್ತಾ ಹೂ ಸಂಕೋಚದಿ ನಾಚಿಕೊಂಡಾಗ

ಅವಳ ಕಾಣಲೆತ್ನಿಸಿ ಕಾಣದೇ
ಕವನ ಬರೆದು ದೋಣಿಯಾಗಿ ತೇಲಿಬಿಡುತ್ತಿದ್ದೆ.

ಅಂದು ಹಾಗಾಗಲಿಲ್ಲ
ಮೈನ ಜೋಡಿಯಿಲ್ಲ, ಮಿಂಚೊಳೆಯಲಿಲ್ಲ,
ಪತಂಗ ಬರಲಿಲ್ಲ, ಮೀನು ಚಿಮ್ಮಲಿಲ್ಲ
ಪ್ರಕೃತಿಗೆ ಪ್ರತಿರೂಪವಾಗಿ ಎದುರಲ್ಲಿ
ಅವಳಲ್ಲಿ  ಎಲ್ಲಾ ಅಡಗಿರುವಾಗ ಪ್ರಕೃತಿಗೆಲ್ಲಿ ಬೆಲೆ
ಕ್ರಿಯಾಕರ್ಮಕ್ಕೆಲ್ಲಿ ನೆಲೆ?

ಲೇಖನಿ ತುಂಬಿದ್ದರೂ ದಂಡಿ ಪದಗುಚ್ಛಗಳು ಮನದಲ್ಲಿದ್ದರೂ
ದೋಣಿ ಇರಲಿ ಕವನ ಕಾಗದದ
ಮೇಲೆ ಇಳಿದು ತೇಲುತ್ತಿಲ್ಲ

ನಿಸರ್ಗ ನಿದ್ರಿಸುತ್ತಿತ್ತೆ? ನಾನದರಲ್ಲಿ ಸೇರಿದ್ದೆನೇ?
ಒಂದೇ ದಿನ ಅವಳು ಮಾಯ
 ಪ್ರಕೃತಿಗೆ ಸ್ಪರ್ಧಿಯೆಲ್ಲಿ, ನನ್ನ ಕವನಕ್ಕೆ ಕೊನೆ ಎಲ್ಲಿ

ಎಂದಿನಂತೆ ಕಾಣದ ನನ್ನವಳಿಗಾಗಿ
ದಿನಕ್ಕೊಂದು ಕವನ ಬರೆಯುತ್ತಿದ್ದೆ
ನದಿತಟದಲ್ಲಿ ಕುಳಿತು
ದೋಣಿಗಳನ್ನು ಪದಗಳನ್ನು ತೇಲಿಬಿಡುತ್ತಿದ್ದೆ.


       ಇದು ಈಗ ಬರೆದ ಕವನವಲ್ಲ.  2001 ನೇ ಜುಲೈ ತಿಂಗಳಲ್ಲಿ ಬರೆದಿದ್ದು.  ನಂತರ ಆಗ ಹೊಸ ದಿಗಂತ ಮಾಸಪತ್ರಿಕೆಯಲ್ಲಿ ದಿನಾಂಕ 22-12-2001 ರಲ್ಲಿ ಪ್ರಕಟವೂ ಆಗಿತ್ತು.   ಆಂಗ್ಲ ಕವಿಯೊಬ್ಬ ಹೇಳಿದಂತೆ ನಾವು ಬರೆದಿದ್ದನ್ನು ಒಂಬತ್ತು ವರ್ಷ ಎಲ್ಲೂ ಪ್ರಕಟಿಸದೆ...ಒಂಬತ್ತನೇ ವರ್ಷದ ನಂತರ ಮತ್ತೊಮ್ಮೆ ನಾವೇ ಓದಿದಾಗ ಅದು ನಿಜಕ್ಕೂ ಇಷ್ಟವಾದರೇ ನಂತರ ಅದು ಇಡೀ ಪ್ರಪಂಚಕ್ಕೆ ಇಷ್ಟವಾಗುತ್ತದಂತೆ...ಈ ಮಾತನ್ನು ಏಕೆ ಹೇಳುತ್ತಿದ್ದೇನೆಂದರೆ...ಒಂಬತ್ತು ವರ್ಷದ ಹಿಂದೆ ಬರೆದ ನನ್ನ ಕವಿತೆಗಳನ್ನು ಈಗ ಓದುತ್ತಿದ್ದೇನೆ. ಅವು ಯಾಕೋ ಇಷ್ಟವಾಗುತ್ತಿವೆ ಅದರಲ್ಲಿ ಇದು ಮೊದಲನೆಯದು. ಆಗ ಪ್ರಕಟವಾಗಿದ್ದರೂ ಈಗ ಮತ್ತೊಮ್ಮೆ ಓದಿದಾಗ ಒಂಥರ ಇಷ್ಟವಾಯಿತು. ಆಗ ಹುಡುಗಾಟದ ಮನಸ್ಥಿತಿಯಲ್ಲಿ ಬರೆದಿದ್ದರೂ ನಿಮಗೂ ಇಷ್ಟವಾಗಬಹುದು  ಅಂತ ಬ್ಲಾಗಿಗೆ ಹಾಕಿದ್ದೇನೆ.

 ಚಿತ್ರ ಮತ್ತು ಕವನ: ಶಿವು.ಕೆ