'ಖುಷಿಯಾಗಿದೆ ಯಾಕೋ ನಿಮ್ಮಿಂದಲೇ.......!! ಹಾಡಬೇಕೆನಿಸುತ್ತದೆ.............
ಇವು ಪ್ರತಿದಿನ ನಮ್ಮ ಜೀವನದಲ್ಲಿ ಮಿಂಚಾಗಿ ಬಂದು ಹೋಗುತ್ತಿರುತ್ತವೆ......

ಬಿಡಿ ಬಿಡಿ ಹೂಗಳ ಹಾಗೆ.....
ಮನಸ್ಸನ್ನು ನವಿರಾಗಿ ತಾಕಿ ಹೋಗುತ್ತಿರುತ್ತವೆ. ಪುಳಕಗೊಳಿಸುತ್ತಿರುತ್ತವೆ...............
ಆವುಗಳಲ್ಲಿ ಕೆಲವು ಇಲ್ಲಿವೆ.............
ಕಳೆದ ವಾರ ನನಗಿಷ್ಟವಿಲ್ಲದಿದ್ದರೂ ನನ್ನವಳ ಜೊತೆ ಹೊಸ ಬಟ್ಟೆ ಖರೀದಿಗೆ ಹೋಗಿದ್ದೆ. ಅವಳು ಇಷ್ಟಪಡುವ ಬಣ್ಣದ, ವಿನ್ಯಾಸದ ಬಟ್ಟೆಗಳನ್ನು ನಾನು ಹಾಕಿಕೊಳ್ಳಬೇಕೆಂಬ ಆಸೆ. ಆವಳು ಕೊಡಿಸಿದ ಬಟ್ಟೆಗಳನ್ನು ಹಾಕಿಕೊಂಡಾಗ ನನಗಿಷ್ಟವಾಗಿರದಿದ್ದರೂ ಹೊರಗೆ ಗೆಳೆಯ ಗೆಳತಿಯರು ಚೆನ್ನಾಗಿದೆ ಅಂದಿದ್ದರು.. ಮನೆಗೆ ಬಂದು ಇದನ್ನು ಅವಳಿಗೆ ಹೇಳಿದಾಗ ಅವಳ ಮುಖದಲ್ಲಿ ಖುಷಿಯ ಮಿಂಚು.........
ನೀವು ಟ್ರಾಫಿಕ್‌ನಲ್ಲಿ ನಿಂತಿರುತ್ತೀರಿ...... ಸುತ್ತಲು ದೂಳೂ, ಗಾಳಿ. ನಿಮಗೆ ಕಷ್ಟವಾಗುತ್ತಿರುತ್ತದೆ.... ಪಕ್ಕದಲ್ಲಿ ಒಂದು ಕಾರು ಬಂದು ನಿಲ್ಲುತ್ತದೆ... ನಿಮಗೆ ಗೊತ್ತಿಲ್ಲದ ಹಾಗೆ ಒಂದು ಕ್ಷಣ ಕಾರಿನ ಕಿಟಕಿಯ ಕಡೆಗೆ ನೋಡುತ್ತೀರಿ.. ಕಾರಿನಲ್ಲಿ ಅಮ್ಮನ ತೊಡೆಯಮೇಲೆ ಕುಳಿತಿದ್ದ ತುಂಟ ಮಗು ನೀವು ನೋಡುವುದನ್ನೇ ಕಾಯುತ್ತಿದ್ದು ತಕ್ಷಣ ನಿಮ್ಮೆಡೆಗೆ ಒಂದು ಕಿರುನಗೆ ಚಿಮ್ಮುತ್ತದೆ.........ಆಹಾ! ನಿಮ್ಮ ಮೈ ಮನಸೊಳಗೆ ಮಿಂಚಿನಂತೆ ಖುಷಿಯೊಂದು ಅವರಿಸಿದಂತಾಗುವುದಿಲ್ಲವೇ !...............
ಮನೆಯಲ್ಲಿ ಬಟ್ಟೆ ಬದಲಿಸಿಕೊಳ್ಳುವಾಗ ಪ್ಯಾಂಟಿನಿಂದ ಹತ್ತರ ನೋಟುಗಳು ಕೆಳಗೆ ಬಿದ್ದಾಗ ಅದನ್ನು ಗಮನಿಸಿದ ನನ್ನಾಕೆ, ಅದನ್ನು ಕೈಗಿತ್ತಿಕೊಳ್ಳುತ್ತಾಳೆ. ಓಹೋ ಇವತ್ತು ಹತ್ತು ರೂಪಾಯಿ ಹೋಯ್ತಲ್ಲ ಅನ್ನುವ ಅಲೋಚನೆ, ಅದು ಬಂದ ಮರುಕ್ಷಣದಲ್ಲಿಯೇ ತಪ್ಪಾಗುತ್ತದೆ. ಕೆಳಗೆ ಬಿದ್ದ ನೋಟನ್ನು ತೆಗೆದುಕೊಂಡು ನನ್ನ ಎರಡು ಕಣ್ಣುಗಳಿಗೊತ್ತಿ, ನಂತರ ನನ್ನ ಪ್ಯಾಂಟ್ ಜೇಬಿನೊಳಗೆ ಇಡುತ್ತಾಳೆ......ಇದ್ಯಾಕೆ ಹೀಗೆ ಎಂದರೆ ನೀವೆ ತಾನೆ ಬೀಳಿಸಿ ತಪ್ಪು ಮಾಡಿದ್ದು , ಆ ತಪ್ಪನ್ನು ಸರಿಮಾಡಬೇಕಾದರೆ ಆ ನೋಟನ್ನು ನಿಮ್ಮ ಕಣ್ಣಿಗೆ ಮುಟ್ಟಿಸುವುದೇ ಸರಿ ಎಂದಾಗ ಅಲ್ಲಿ ನಗೆ ಅಲೆ ಉಕ್ಕಿರುತ್ತದೆ.....
ಅಕ್ಕನ ಮಕ್ಕಳಾದ ಚೇತನ್ ಮತ್ತು ವರ್ಷಿಣಿ ೯ ಮತ್ತು ೭ ವರ್ಷದವರು. ನನ್ನ ಹುಟ್ಟಿದ ದಿನಕ್ಕಾಗಿ ಒಂದೊಂದು ಗ್ರೀಟಿಂಗ್ ಕಾರ್ಡುಗಳನ್ನು ಕೊಟ್ಟಿದ್ದು ನನಗೆ ಖುಷಿಯಾಗಿತ್ತು.

ಅವುಗಳನ್ನು ಅವರು ರಾತ್ರಿ ಒಂದು ಗಂಟೆಯವರಿಗೆ ಕೂತು ತಮ್ಮ ಕೈಯಾರೆ ಚಿತ್ರಬಿಡಿಸಿ....ಅಕ್ಷರ ಜೋಡಿಸಿದ್ದರಂತೆ........ ಅದನ್ನು ನೋಡಿದಾಗ ನನಗೆ ನಾನು ಬಾಲ್ಯದಲ್ಲಿ ಹೀಗೆ ಮಾಡುತ್ತಿದ್ದ ನೆನಪು ಮರುಕಳಿಸಿದ ಅನಂದವನ್ನು ಹೇಗೆ ವರ್ಣಿಸಲಿ.......!!

ಇದೇ ಮಾತನ್ನು ಕಾನ್ಸೂರಿನ ಹತ್ತಿರದ ಮುತ್ಮರ್ಡುನಲ್ಲಿರುವ ನಾಗೇಂದ್ರನ ಮಗನಾದ ಸುಹಾಸನ ಬಗ್ಗೆ ಹೇಳಬೇಕೆನಿಸುತ್ತದೆ........ಈ ಪೋರ ಪಾತ್ರದಾರಿಯಾಗಿರುವ ನನ್ನ ಆನೇಕ ಛಾಯಾಚಿತ್ರಗಳು ರಾಷ್ಟ್ರೀಯ ಅಂತರಾಷ್ಟ್ರಿಯ ಪ್ರಶಸ್ತಿಯನ್ನು ಗಳಿಸಿಕೊಟ್ಟಿವೆ......ಹೊಸ ವರ್ಷಕ್ಕೆ ಈತ ನನಗೆ ಕಳಿಸಿರುವ ಗ್ರೀಟೀಂಗ್ ಕಾರ್ಡು ಅವನೇ ಸ್ವತಃ ಅದರಲ್ಲಿ ಚಿತ್ರ ರಚಿಸಿ....ಬರೆದಿರುವುದು.....!!

ಇಂಥ ಸುಹಾಸನಂಥ ಸುಹಾಸನೇ ನಮ್ಮ ಮನೆಯಲ್ಲಿ ರಾಗಿ ಮುದ್ದೆಯನ್ನು ಎಷ್ಟು ಕಷ್ಟಪಟ್ಟರೂ ನುಂಗಲಾಗದೆ....ಅಗಿದು ನುಂಗಲೆತ್ನಿಸಿದ್ದು.......ಆ ಸಮಯದಲ್ಲಿ ಅವನ ಮುಖಭಾವ..........
"ಶಿವು ಮಾಮ...." ಅಂತ ಓಡಿ ಬಂದು ಪುಟ್ಟ ತೋಳುಗಳಿಂದ ನನ್ನ ಕುತ್ತಿಗೆ ಬಳಸುವ ನಾಗೇಂದ್ರನ ಎರಡನೇ ಮಗನಾದ ಆರುವರ್ಷದ ವಿಕಾಶನ ಮುಗ್ಧತೆ,........
ನಾನು " ಚಿಕ್ಕ ಬಿನ್ನೆತ್ತಿ" [ಎಲ್ ಕೆ ಜಿ] ಎನ್ನುತ್ತಾ ಹತ್ತಾರು ಮುಖಭಾವ ಪ್ರದರ್ಶಿಸುವ ೪ ವರ್ಷದ ಜಯಂತ......
ಜಯಂತ ಮತ್ತು ಆಶ್ವಿನಿ...ನನ್ನ ಕ್ಯಾಮೆರಾದಲ್ಲಿ ಈ ರೀತಿ ಸೆರೆಯಾದರು..........

ನಿಮ್ಮ ನೂರು ಮಾತಿಗೂ ಒಂದು ಮಾತು ಆಡದ ೪ ವರ್ಷದ ಆಶ್ವಿನಿ........
ಜೇಬಿನಲ್ಲೇ ತಿಂಡಿಯನ್ನು ಇಟ್ಟುಕೊಂಡು ಸ್ವಲ್ಪ ಸ್ವಲ್ಪ ತಿಂದು ಮತ್ತೆ ಜೇಬಿಗಿಳಿಸುವ ಅವನ ಅಣ್ಣ ಭರತ.............
ಫೋಟೋಗ್ರಫಿಯ ಬಗ್ಗೆ ಸದಾ ಕುತೂಹಲ ತೋರಿಸುವ ಅವಳಿಗಿಂತ ಎರಡೇ.... ವರ್ಷ ದೊಡ್ಡವ ಅವಳಣ್ಣ ಆಕ್ಷಯ....
ಇವರೆಲ್ಲರಿಗೂ ಲೀಡರಾಗಿ ಮುಂದಿರುವ ಸ್ವಾತಿ.......ಈ ಪುಟಾಣಿಗಳು........ಅವರ ಪುಟ್ಟ ಪುಟ್ಟ ಸಂತೋಷಗಳು.....
ದಿನಪತ್ರಿಕೆ ಕೆಲಸಗಳಿಗಾಗಿ ಕಛೇರಿಗಳಿಗೆ ನನ್ನ ಟೂ ವೀಲರ್‌ನಲ್ಲಿ ಓಡಾಡುವಾಗ, ಲಂಕೇಶ್, ಹಾಯ್ ಬೆಂಗಳೂರ್ ಪತ್ರಿಕೆಯಲ್ಲಿ ಬಂದಿರುವ " ಸ್ಲಂ ಡಾಗ್ ಮಿಲಿಯನೇರ್ " ಲೇಖನವನ್ನು ಬೆಂಗಳೂರಿನ ಪ್ರತಿ ಟ್ರಾಫಕ್‌ನಲ್ಲೂ ನಿಂತಾಗ ಹತ್ತತ್ತು ಸಾಲುಗಳನ್ನು ಓದುವುದರಲ್ಲಿನ ಮಜಾ, ಆನಂದ......ಆಹಾ........[ಇದು ಪ್ರತಿದಿನ ಬೇರೆ ಬೇರೆ ಪತ್ರಿಕೆ, ವಿವಿಧ ವಿಚಾರಗಳು...........ಬೆಂಗಳೂರಿನ ಟ್ರಾಫಿಕ್ ನನಗೆಂದೂ ಕಿರಿಕಿರಿಯೆನಿಸಿಲ್ಲ.!!..........
"ಸಿಲಿಂಡರ್ ಮಾಡೋ, ಕಾಯಿ ಹೊಡಿ, ಹಣ್ಣು ಮಾಡೋ, ನಿದಾನವಾಗಿ ಫಾಲೋ ಮಾಡೋ.......!! " ಈ ಮಾತುಗಳು ನಾನು ಮೊನ್ನೆ ನಾಗಮಂಗಲ ರಸ್ತೆಯ ನಮ್ಮ ಹಳ್ಳಿಗೆ ಹೋಗುವ ತಿರುವಿನಲ್ಲಿ ಬಸ್ಸಿಗೆ ಕಾಯುವಾಗ ಅಲ್ಲಿರುವ ಅರಳಿಕಟ್ಟೆಯ ಮೇಲೆ ಹಿರಿಯರೆಲ್ಲಾ ಚೌಕಾಬಾರ ಆಡುತ್ತಾ ಹೇಳುತ್ತಿದ್ದ ಮಾತುಗಳು...ನಮ್ಮೂರಿನ ರಸ್ತೆ ಬದಿಯ ಚೌಕಾಬಾರ ಆಟನಿರತ ಗುಂಪು..........

ಇನ್ನಷ್ಟು ಹೊತ್ತು ನಿಂದಿದ್ದರೆ ಮತ್ತಷ್ಟು ಮಾತುಗಳು ಕೇಳಿಬರುತ್ತಿದ್ದವೇನೋ..........ಅವರ ತನ್ಮಯತೆ, ಕುತೂಹಲ, ಮಾತುಗಾರಿಕೆ.......ಆಹಾ...............
ನನ್ನೂರಿನಲ್ಲಿ ಚುಮುಚುಮು ಚಳಿಯಲ್ಲಿ, ದೊಡ್ಡ ಹಂಡೆಯ ತುಂಬಾ ತೆಂಗಿನ ಸೋಗೆಯಿಟ್ಟು ಕಾಯಿಸಿದ ನೀರು.....ನನ್ನಮ್ಮ ಬೆಳಗಿನ ಚಳಿಯಲ್ಲಿ ಎದ್ದೇಳಿಸಿ ಸ್ನಾನ ಮಾಡಿಕೊ ಅಂದಾಗ ಮನಸ್ಸಿಲ್ಲದ ಮನಸ್ಸಿನಲ್ಲಿ ಎದ್ದು ಹೋದೆ....ಗಣಗಣ ಕಾಯುತ್ತಿರುವ ನೀರು......ಹೊರಗೆ ಚಳಿಯಂಥ ಚಳಿ.....ಉರಿಯುವ ಹೊಲೆಮುಂದೆ ಕೂತು ಬೆಂಕಿ ಕಾಯಿಸಿಕೊಳ್ಳುತ್ತಿದ್ದರೇ.........
ಆ ಬೆಂಗಳೂರಿನ ಟೆನ್ಸನ್ ಜೀವನವನ್ನು ನೀವಾಳೀಸಿ ಎಸೆದುಬಿಡಬೇಕೆನ್ನಿದ್ದುನಿಜ....
ಸೂರ್ಯ ಮತ್ತು ಇತರ ಗ್ರಹಗಳಿಂದ ನಮ್ಮೆಡೆಗೆ ಹರಿದುಬರುವ ಫಲ ಫಲಾಗಳಿಗೂ, ದೆಹಲಿಯ ಪ್ರಧಾನ ಮಂತ್ರಿ ಫಂಡ್‌ನಿಂದ ಹರಿದುಬರುವ ಹಣ ತಾಲ್ಲೂಕು ಪಂಚಾಯಿತಿ ಅಧಿಕಾರಿಗೆ ತಲುಪಿ ಅದರಿಂದ ಆಗುವ ಜನಕಾರ್ಯಕ್ಕೂ ಲಿಂಕಿಸುವ ನಮ್ಮೂರಿನ ಅಡುಗೆ ಭಟ್ಟನ ಅಧ್ಬುತ ಮಾತೂಗಾರಿಕೆಗಳೂ.......
ವಿಂಧ್ಯಾಳಿಂದ ಆಗಾಗ ಬರುವ ಮಿಸ್ಸ್‌ಡ್ ಕಾಲುಗಳು...............ಎಸ್ ಎಮ್ ಎಸ್ ಜೊತೆಗೆ ಬರುವ ಕೈಗಳು......
ಗದ್ದೆ ಬಯಲಿನಲ್ಲಿ ಮುಂಜಾನೆ ನಡೆಯುತ್ತಿದ್ದರೆ.........ತೆಂಗಿನ ಮರಗಳ ನಡುವೆ ತೂರಿ ಬರುವ ಬಿಸಿಲ ಕೋಲುಗಳು.........
ಹಂಚಿಕಡ್ಡಿ ಮೇಲೆ ಕುಳಿತ ಚಿಟ್ಟೆಯ ಕಾಮನಬಿಲ್ಲಿನಂತ ರೆಕ್ಕೆಗಳ ಮೇಲೆ ಕುಳಿತ ತುಷಾರ ಬಿಂದುಗಳು.........
ಇವುಗಳನ್ನು ಎಂಜಾಯ್ ಮಾಡುವಷ್ಟೇ ಚೆನ್ನಾಗಿ........
ರಾಗಿ ಮುದ್ದೆ ನುಂಗುವುದಾ ಅಥವಾ ಅಗಿಯುವುದಾ.........
ನ್ಯೂಡಲ್ಸ್ ಕೈಯಲ್ಲಿ ತಿನ್ನೋದ ಅಥವ ಚಮಚದಲ್ಲಿ ತಿನ್ನೋದ...........ಅಂಥ ಅವರದೇ ಶೈಲಿಯಲ್ಲಿ ತರ್ಕಿಸುವ ಪ್ರಕಾಶ ಹೆಗಡೆಯವರ ಮಾತುಗಾರಿಕೆ.........
ಗೊತ್ತಿಲ್ಲದೇ ಪೂರ್ತಿ ಅಮುಕಿ ಹೊರಬಂದ ಟೂತ್ ಪೇಷ್ಟನ್ನು ಮತ್ತೆ ಬಂದದಾರಿಯಲ್ಲೇ ಒಳಹಾಕುವ ಪ್ರಯತ್ನದಲ್ಲಿ. ಗೊತ್ತಿಲ್ಲದಾ ಹಾಗೆ ನನ್ನ ಬಾಯಿಂದ ಗಾಳಿಯನ್ನು ಒಳಗೆ ಎಳೆದುಕೊಳ್ಳುತ್ತಾ............
ಪುಸ್ತಕ ಓದುತ್ತಾ ನಿದ್ರೆ ಮಾಡೋದ್ ಸರೀನಾ ? ಅಥವ ನಿದ್ರೆ ಮಾಡುತ್ತಾ ಪುಸ್ತಕ ಓದೋದ್ ಸರಿನಾ ?......
ಅಂತ ಕನ್‌ಪ್ಯೂಸನ್ ಮಾಡಿಕೊಳ್ಳುವ ಗೆಳೆಯರನ್ನು ನೋಡುವಾಗ ಆಗುವ ಪುಟ್ಟ...ಪುಟ್ಟ ಪುಟಾಣಿ ಸಂತೋಷಗಳಗೆ ಬೆಲೆಕಟ್ಟಲು ಸಾಧ್ಯವೇ ?
ಇನ್ನೂ ನನ್ನ ಮೆಚ್ಚಿನ ವೃತ್ತಿ ಮತ್ತು ಹವ್ಯಾಸವಾದ[ದಿನಪತ್ರಿಕೆ ಕೆಲಸವೂ ಮೆಚ್ಚಿನದೇ]ಫೋಟೋ ತೆಗೆಯುವಾಗ ಅದು ಮದುವೆ ಮನೆಯಿರಲಿ, ಚಿಟ್ಟೆ ಹುಳುಗಳಾಗಲಿ, ಪಕ್ಷಿಗಳಾಗಲಿ.....ಪಿಕ್ಟೋರಿಯಲ್ ಫೋಟೊಗ್ರಫಿಯ ನೆರಳು ಬೆಳಕಿನ ದೃಶ್ಯಗಳಾಗಲಿ................ನನ್ನ ಕಣ್ಣಿಗೂ-ಕ್ಯಾಮೆರಾ ಕಣ್ಣಿಗೂ ಸಲಿಗೆ.....ಸಲುಗೆಯಲ್ಲ....ಇಂಥ ಪುಟ್ಟ ಪುಟ್ಟ ಸಂತೋಷಗಳ ಸುಲಿಗೆ. ..........
ಇಂಥವು ಸಾವಿರಾರು. ಅವುಗಳಲ್ಲಿ ಕೆಲವನ್ನು ನಿಮಗಿಲ್ಲಿ ಕಟ್ಟಿಕೊಡಲು ಪ್ರಯತ್ನಿಸುತ್ತಿದ್ದೇನೆ.......ಎಂಜಾಯ್ ಮಾಡಿ....ನಿಮಗೂ ನೆನಪಾಗಬಹುದು.....ಹಂಚಿಕೊಳ್ಳಿ.........
ಚಿತ್ರ ಮತ್ತು ಲೇಖನ....
ಶಿವು......














































