ನೇಚರ್ ಫೋಟೊಗ್ರಫಿಯ ವಿಶ್ವಕಪ್ ಸ್ಪರ್ಧೆ ತೀರ್ಪುಗಾರರಾಗಿ ಬೆಂಗಳೂರಿಗೆ ಮೂವರು ವಿದೇಶಿ ಸ್ಥಿರ ಛಾಯಾಗ್ರಾಹಣ ಕಲೆಯ ದಿಗ್ಗಜರು ಬಂದಿದ್ದರು. ಸೌತ್ ಅಫ್ರಿಕದ ಮೇಡಮ್ ಸ್ನೀಜ್ ಜಿಸ್ಬೆ[Ms. Jill Sneesby, ESFIAP]. ಫೋಟೊಗ್ರಫಿ ಸಾಧನೆ ಮತ್ತು ಸೇವೆಗಾಗಿ ESFIAP ಡಿಸ್ಟಿಂಕ್ಷನ್ ಪಡೆದಿದ್ದರೆ, ಫೆಡರೇಷನ್ ಅಪ್ ಇಂಟರ್‌ನ್ಯಾಷನಲ್ ಫೋಟೊಗ್ರಫಿ ಉಪಾದ್ಯಕ್ಷರಾದ ಜಾಕೀ ಮಾರ್ಟಿನ್[Mr.Jacky Martin,EFIAP] ಬಂದಿದ್ದರು. ಇವರ ಅಮೋಘ ಫೋಟೊಗ್ರಫಿ ಸಾಧನೆಗಾಗಿ ಎಕ್ಸಲೆನ್ಸ್ ಅಪ್ ಆಶೋಷಿಯೇಟ್ ಫೋಟೊಗ್ರಫಿ ಡಿಸ್ಟಿಂಕ್ಷನ್[EFIAP] ಗೌರವ ದೊರೆತಿದೆ. ಇನ್ನೂ ಮೂರನೇಯವರಾದ ಇಟಲಿಯ ರೆಕಾರ್ಡೋ ಬುಸಿ[Mr. Riccardo Busi,MFIAP, HonEFIAP]ಇವರಂತೂ ತಮ್ಮ ಫೋಟೊಗ್ರಫಿ ಸಾಧನೆಗೆ ಮಾಸ್ಟರ್ ಆಪ್ ಫೆಡರೇಷನ್ ಇಂಟರ್‌ನ್ಯಾಷನಲ್ ಡಿ ಲ ಆಶೋಷಿಯೇಟ್ ಫೋಟೊಗ್ರಫಿ" ಎನ್ನುವ ಗೌರವವನ್ನೇ ಪಡೆದಿದ್ದಾರೆ. ಇದಂತೂ ಫೋಟೋಗ್ರಫಿ ಸಾಧನೆಗೆ ಸಿಗುವ ಅತ್ಯುನ್ನತ ಗೌರವ. ಈ ಮೂವರು ವಿದೇಶಿ ತೀರ್ಪುಗಾರರ ಜೊತೆ ರೆಕಾರ್ಡೋ ಬುಸಿಯಷ್ಟೇ ಉನ್ನತ ಗೌರವ ಹೊಂದಿರುವುದರ ಜೊತೆಗೆ ರಾಯಲ್ ಫೋಟೊಗ್ರಫಿ ಲಂಡನ್‍ನಿಂದ [ ]ಫೆಲೊಶಿಪ್ ಅಫ್ ರಾಯಲ್ ಫೋಟೊಗ್ರಫಿ ಸೊಸೈಟಿ ಮನ್ನಡೆ ಪಡೆದಿರುವ ನಮ್ಮ ದೇಶದ ಪ್ರಖ್ಯಾತ ಛಾಯಾಗ್ರಾಹಕರಾದ ಬಿ.ಶ್ರೀನಿವಾಸ[B.SRinivasa,MFIAP,FRPS]ಮತ್ತು ಟಿ.ಎನ್.ಎ. ಪೆರುಮಾಳ್[T.N.A.Perumal,MFIAP,FRPS] ಕೂಡ ತೀರ್ಪುಗಾರರಾಗಿದ್ದರು. ಇವರನ್ನೆಲ್ಲಾ ಒಟ್ಟಿಗೆ ನೋಡುವುದು ಮಾತಾಡಿಸುವುದು ನನ್ನ ನೂರಾರು ಕನಸುಗಳಲ್ಲಿ ಇದೂ ಒಂದು. ಅವತ್ತು ನನಸಾಗಿತ್ತು.
T.N.A.Perumal, B.Srinivasa, Riccardo busi, Jacky Martin, Jill Sneesby.
ಸೆಪ್ಟಂಬರ್ ೧೦ ಮತ್ತು ೧೧ರಂದು ಹೋಟಲ್ ತಾಜ ವೆಸ್ಟೆಂಡ್ ನಲ್ಲಿ ಫೋಟೋಗ್ರಫಿಯ ತೀರ್ಪು ಕಾರ್ಯಕ್ರಮ ಮುಗಿದ ಮೇಲೆ ಸೆಪ್ಟಂಬರ್ ಹದಿನಾಲ್ಕರಂದು ಈ ಐವರು ಸಾಧಕರ ಫೋಟೊಗ್ರಫಿ ಪ್ರೊಜೆಕ್ಷನ್ ಷೋ ಮತ್ತು ಸಂವಾದ ನಡೆಯಿತು. ನಿಜಕ್ಕೂ ನನ್ನಂತ ಛಾಯಾಗ್ರಾಹಕರಿಗೆ ಮರೆಯಲಾಗದ ಅನುಭವ. ಮೊದಲಿಗೆ ಮೇಡಮ್ ಸ್ನೀಜ್ ಜಿಸ್ಬೆ ಸೌತ್ ಆಫ್ರಿಕಾದ ಕಾಡುಗಳಲ್ಲಿ ಕ್ಲಿಕ್ಕಿಸಿದ ಅದ್ಬುತ ಚಿತ್ರಗಳನ್ನು ಪ್ರದರ್ಶಿಸಿದರು. ನಡುವೆ ಕೆಲವು ಫೋಟೊಗಳನ್ನು ತೆಗೆಯಲು ಕಾಡಿನ ನಡುವೆ ಹಳ್ಳ ತೆಗೆದು ಅದರೊಳಗೊಂದು ಬಂಕರ್ ನಿರ್ಮಿಸಿ ಅದರೊಳಗೆ ಕುಳಿತು ನೆಲಮಟ್ಟದಲ್ಲಿ ಕುಳಿತು, ಮಲಗಿ ಫೋಟೊ ತೆಗೆಯುವಾಗಿನ ಅನುಭವಗಳನ್ನು ಹಂಚಿಕೊಂಡರು. ಒಂಟಿಸಲಗಗಳು ಇವರು ಬಂಕರಿನೊಳಗೆ ಇದ್ದಾಗ ಇಪ್ಪತ್ತು ಅಡಿ ಅಂತರದಲ್ಲಿ ಬಂದು ಬಂಕರನ್ನೆಲ್ಲಾ ಮೂಸಿ ನೋಡಿ ಹೋಗಿದ್ದು ಅವಕ್ಕೆ ತಲೆಕೆಟ್ಟು ಬಂಕರಿನೊಳಗೆ ಕಾಲಿಟ್ಟುಬಿಟ್ಟಿದ್ದರೆ ನಾನಿಲ್ಲಿ ನಿಮಗೆ ಇದನ್ನೆಲ್ಲಾ ತೋರಿಸಲು ಬರಲಾಗುತ್ತಿರಲಿಲ್ಲವೆಂದಾಗ ಅಲ್ಲಿ ನೆರೆದಿದ್ದ ಛಾಯಾಭಿಮಾನಿಗಳಲ್ಲಿ ರೋಮಾಂಚನ.
ಈ ಚಿತ್ರವನ್ನು ನೀವು ಎಲ್ಲಾ ಕಡೆ ನೋಡಿರುತ್ತೀರಿ. ಅಷ್ಟು ಪ್ರಸಿದ್ಧಿಯಾದ ಚಿತ್ರ.
ಜೀಬ್ರಾಗಳ ಕಾದಾಟ
ಸೌತ್ ಆಫ್ರಿಕಾದ ಜಿಂಕೆಗಳು
ಆಸ್ಟ್ರಿಚ್ ಹಕ್ಕಿ ಸೂರ್ಯಾಸ್ತದ ದೂಳಿನ ಹಿನ್ನೆಲೆಯಲ್ಲಿ
ಸೌತ್ ಅಫ್ರಿಕಾದ ಸ್ಪ್ರಿಂಗ್ ಬಾಕ್ ಜಿಂಕೆ
ನಂತರ ಬಂದವರು ಬಂದವರು ಇಂಟರನ್ಯಾಷನಲ್ ಫೆಡರೇಷನ್ ಅಪ್ ಫೋಟೊಗ್ರಫಿಯ ಉಪಾದ್ಯಕ್ಷರಾದ ಪ್ರಾನ್ಸಿನ ಜಾಕಿ ಮಾರ್ಟಿನ್. ಅವರು ತಮಗಿಷ್ಟವಾದ ಅಮೇರಿಕಾದ ಫೀನಿಕ್ಸ್ ನಗರದ ಕೆಲವು ಲ್ಯಾಂಡ್‍ಸ್ಕೇಪಿನ ಅಮೋಘ ಚಿತ್ರಗಳನ್ನು ಪ್ರದರ್ಶಿಸಿದರು. ಅವರ ಕೆಲವು ಚಿತ್ರಗಳು ಇಲ್ಲಿವೆ.
ಎಷ್ಟು ಚೆಂದವಲ್ವ ಈ ಒಂಟಿಮರದ ದೃಶ್ಯ
ಹೀಗೊಂದು ಸುಂದರ ಪ್ರಕೃತಿ ಸೌಂದರ್ಯ
ಬ್ರೈಸ್ ಕ್ಯಾನಿಯನ್‍ನ ಒಂದು ಲ್ಯಾಂಡ್‍ಸ್ಕೇಪ್
ಮೂರನೇಯದಾಗಿ ಇಟಲಿಯ ರೆಕಾರ್ಡೋ ಬುಸಿಯಂತೂ ತಮ್ಮ ಅಷ್ಟು ಚಿತ್ರಗಳನ್ನು ಎಂಟು ನಿಮಿಷಗಳ ಪವರ್ ಪಾಯಿಂಟ್ ಪ್ರದರ್ಶನದಲ್ಲಿ ತೋರಿಸಿ ಇಟಲಿಯವರ ಸೃಜನಶೀಲತೆಯನ್ನು ಮೆರೆದರು. ಅವರ ಕೆಲವು ಚಿತ್ರಗಳು ಇಲ್ಲ
ಹರಿವ ನೀರಿಗೆ ವಿರುದ್ಧವಾಗಿ ಈಜಿ ಮೇಲೆ ಹಾರಿದ ಮೀನನ್ನು ಹಿಡಿಯುತ್ತಿರುವ ಹಿಮಕರಡಿ
ಪಫಿಟ್ ಹಕ್ಕಿಗಳ ಫೋಸು
ಕಾಡುಬೆಕ್ಕು ಬೇಟೆಗಾಗಿ ಓಟ
ಓಡಿ ಪ್ರಾಣ ಉಳಿಸಿಕೊಳ್ಳುತ್ತಿರುವ ಜಿಂಕೆ
ಇವರ ನಂತರ ಬಂದವರು ನಮ್ಮವರೇ ಆದ ಬಿ.ಶ್ರೀನಿವಾಸ. ತಮ್ಮ ನಲವತ್ತು ವರ್ಷಗಳ ಫೋಟೊಗ್ರಫಿ ಅನುಭವವನ್ನು ಹಂಚಿಕೊಳ್ಳುವುದಲ್ಲದೇ ಕೆಲವು ವಿಶೇಷವೆನ್ನುವ ಪಕ್ಷಿಗಳ ಛಾಯಾಚಿತ್ರಗಳನ್ನು ತೋರಿಸಿದರು.
ರಂಗನತಿಟ್ಟಿನಲ್ಲಿ ಹಕ್ಕಿಗಳ ಲವ್ ಲವಿಕೆ
ಬ್ಲೂ ಜೇ ಹಕ್ಕಿಯ ಹಾರಾಟ
ಕೆಸ್ಟ್ರಾಲ್ ಎನ್ನುವ ಗಿಡುಗನ ಹಾರಾಟ
ಎರಡೂ ಗ್ರೀನ್ ಬೀಈಟರುಗಳ ಬಾಯಲ್ಲಿ ಬೇಟೆ. ಖುಷಿಯ ವಿಚಾರವೆಂದರೆ ಈ ಚಿತ್ರವನ್ನು ನನ್ನ ಜೊತೆಗೆಯಲ್ಲಿ ಕ್ಲಿಕ್ಕಿಸಿದ್ದು.
ಕೊನೆಯಲ್ಲಿ ಬಂದವರು ಇವರೆಲ್ಲರಿಗಿಂತ ಹಿರಿಯರಾದ ೭೬ ವರ್ಷದ ಟಿ.ಎನ್.ಎ. ಪೆರುಮಾಳ್. ಅವರ ಐವತ್ತು ಫೋಟೊಗ್ರಫಿ ಅನುಭವಗಳ ಜೊತೆಗೆ ಕೀಟಲೋಕದ ವಿಶೇಷಗಳು, ಪಕ್ಷಿಲೋಕದ ವೈವಿಧ್ಯಗಳನ್ನು ವಿವರಿಸಿದರು. ಜೊತೆಗೆ ಒಂದು ಗೂಬೆಯ ಫೋಟೊ ಕ್ಲಿಕ್ಕಿಸಲು ಸುಮಾರು ೩೨ ರಾತ್ರಿಗಳನ್ನು ನಿದ್ರೆಯಿಲ್ಲದೇ ಕಳೆದ ಆನುಭವಗಳನ್ನು ವಿವರಿಸಿದಾಗ ನಮ್ಮಂತ ಯುವ ಛಾಯಾಗ್ರಾಹಕರಿಗಂತೂ ಮೈಜುಮ್ಮೆನ್ನಿಸಿತ್ತು. ಅವರ ಕೆಲವು ಚಿತ್ರಗಳು ಇಲ್ಲಿವೆ.
ಕಾಡುನಾಯಿಗಳು ಲವ್‍ಲವಿಕೆ
ಒಂದು ರೀತಿಯ ವಿಶೇಷ ನೊಣ ಮತ್ತೊಂದು ನೊಣವನ್ನು ಹಿಡಿದು ತಿನ್ನುತ್ತಿರುವುದು ಇದು ಕೀಟಲೋಕದ ವೈವಿಧ್ಯತೆ
ಇದೊಂದು ಗೂಬೆಯ ಚಿತ್ರವನ್ನು ಕ್ಲಿಕ್ಕಿಸಲು ಪೆರುಮಾಳ್‍ರವರು ೩೨ ರಾತ್ರಿಗಳನ್ನು ವ್ಯಯಿಸಿದ್ದಾರೆ. ಅದಕ್ಕೆ ತಕ್ಕಂತೆ ಈ ಚಿತ್ರವೂ ಅವರಿಗೆ ನೂರಾರು ಬಹುಮಾನಗಳನ್ನು ಗಳಿಸಿಕೊಟ್ಟಿದೆ.
ಛಾಯಾಚಿತ್ರ ಪ್ರದರ್ಶನ ಮತ್ತು ಸಂವಾದದಲ್ಲಿ ಭಾಗವಹಿಸಿದ್ದ ಛಾಯಾಗ್ರಾಹಕರು ಮತ್ತು ಅಭಿಮಾನಿಗಳು
ಇವರೆಲ್ಲರ ಛಾಯಾಚಿತ್ರಗಳ ಪ್ರದರ್ಶನದ ನಂತರ ಸಂವಾದ ಕಾರ್ಯಕ್ರಮವಿತ್ತು. ಯುವ ಛಾಯಾಗ್ರಾಹಕರೊಂದಿಗೆ ಪ್ರಶ್ನೋತ್ತರ ಕಾರ್ಯಕ್ರಮವಿತ್ತು.
ಎಲ್ಲ ಮುಗಿದ ಮೇಲೆ ವಿದೇಶಿ ದಿಗ್ಗಜರಾದ ಪ್ರಾನ್ಸಿನ ಜಾಕಿ ಮಾರ್ಟಿನ್ ಮತ್ತು ಇಟಲಿಯ ರೆಕಾರ್ಡೋ ಬುಸಿಯ ಜೊತೆ ನಾನು ಫೋಟೊ ತೆಗೆಸಿಕೊಳ್ಳುವ ಆಸೆ ಈಡೇರಿತ್ತು. ನನ್ನ ಜೊತೆ ಬಂದಿದ್ದ ಉದಯ್ ಹೆಗಡೆ ನಮ್ಮ ಫೋಟೊ ತೆಗೆದುಕೊಟ್ಟಿದ್ದರು.
ನಾನು ಮುಂದಿನ ವರ್ಷ EFIAP ಮನ್ನಣೆಗಾಗಿ ಅರ್ಜಿ ಸಲ್ಲಿಸಬೇಕು ಎಂದಾಗ ನನಗೆ ಅವರಿಬ್ಬರೂ "ALL THE BEST" ಹೇಳಿದಾಗ ನನಗೆ ತುಂಬಾ ಖುಷಿಯಾಗಿತ್ತು.
ಚಿತ್ರಗಳು ಮತ್ತು ಲೇಖನ.
ಶಿವು.ಕೆ



























































