Friday, October 28, 2011

ಆತ್ಮೀಯ ಬ್ಲಾಗ್ ಗೆಳೆಯರೆ,

ಆತ್ಮೀಯ ಬ್ಲಾಗ್ ಗೆಳೆಯರೆ,

ನನ್ನ ಫೋಟೊಗ್ರಫಿ ಲೇಖನ ಹತ್ತು ಬರಹಕ್ಕೆ ಬಂದ ಪ್ರತಿಕ್ರಿಯೆಗಳ ಬಗ್ಗೆ ನಿಮಗೆ ಕೆಲವೊಂದು ಸ್ಪಷ್ಟವಾದ ವಿಚಾರಗಳನ್ನು ತಿಳಿಸಬೇಕಿದೆ.

ಮೊದಲಿಗೆ ನಾನು ಲೇಖನದ ವಿಚಾರವಾಗಿ ಅನೇಕ ಊರುಗಳ ಹೆಸರುಗಳನ್ನು ಬರೆದು ಅಲ್ಲಿರುವವರಿಗೆ ಇಂಗ್ಲೀಷ್ ಬರುವುದಿಲ್ಲವೆಂದು ಬರೆದಿರುವ ಪ್ರತಿಕ್ರಿಯೆಯ ಬಗ್ಗೆ. ನಾನು ಅನೇಕ ಊರುಗಳ ಹೆಸರನ್ನು ಬರೆದು ಅಲ್ಲಿರುವವರಿಗೆ ಇಂಗ್ಲೀಷ್ ಬರುವುದಿಲ್ಲವೆಂದು ಬರೆದಿದ್ದರ ಹಿಂದೆ ಯಾರನ್ನು ಅವಮಾನಿಸಬೇಕು ಅಂತ ಆಗಲಿ ಖಂಡಿತ ಇಲ್ಲ. ಅದು ಆತುರದಲ್ಲಿ ಬರೆದ ಒಂದು ಪ್ರತಿಕ್ರಿಯೆ. ಹಾಗೆ ಬರೆದಿದ್ದಕ್ಕಾಗಿ ನಾನು ಹೆಸರಿಸಿದ ಊರಿನ ಪ್ರತಿಯೊಬ್ಬರ ಬಳಿ ಈ ಮೂಲಕ ಕ್ಷಮೆಯಾಚಿಸುತ್ತೇನೆ.

ಇದು ನಾನು ಆತುರದಲ್ಲಿ ಬರೆದ ಪ್ರತಿಕ್ರಿಯೆ ಎನ್ನುವುದು ಇದನ್ನು ಓದುತ್ತಾ ಹೋದಂತೆ ನಿಮ್ಮ ಅರಿವಿಗೆ ಬರುತ್ತದೆ.

ನಾನು ಕಳೆದ ನಾಲ್ಕು ವರ್ಷಗಳಿಂದ ಬ್ಲಾಗ್ ಬರೆಯುತ್ತಿದ್ದೇನೆ. ನಾನು ಬರೆಯುವ ಲೇಖನಗಳು ನನ್ನ ಖುಷಿಗೆ ಸಂತೋಷಕ್ಕೆ. ಅದಕ್ಕೆ ಬಜ್ ನಲ್ಲಿ ಬ್ಲಾಗಿನಲ್ಲಿ ಹಾಕಿ ನಿಮ್ಮೊಂದಿಗೆ ಹಂಚಿಕೊಂಡಾಗ ಸಿಗುವ ಪ್ರತಿಕ್ರಿಯೆಗಳಿಂದಾಗಿ ಮತ್ತಷ್ಟು ಬರೆಯಲು ಸ್ಪೂರ್ತಿ ಸಿಗುತ್ತದೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಅದೇ ರೀತಿ ಫೋಟೊಗ್ರಫಿ ಲೇಖನಗಳನ್ನು ನನ್ನ ಖುಷಿಗಾಗಿಯೇ ಬರೆಯುತ್ತಿದ್ದೇನೆ ಅಷ್ಟೆ.

ಹಾಗೆ ಈ "ಕಲಾತ್ಮಕ ಫೋಟೊಗ್ರಫಿ ಓದುವುದು ಹೇಗೆ" ಲೇಖನವನ್ನು ನಾನು ಕಲಿತ ಪುಟ್ಟ ಫೋಟೊಗ್ರಫಿ ಅನುಭವವನ್ನು ನಿಮ್ಮೊಂದಿಗೆ ಹಂಚಿಕೊಳ್ಳುವ ಸಲುವಾಗಿ ಮಾತ್ರವೇ ಬ್ಲಾಗಿಗೆ ಮತ್ತು ಬಜ್‍ಗೆ ಹಾಕಿದ್ದು. ಎಂದಿನಂತೆ ನನ್ನ ಬ್ಲಾಗ್ ಗೆಳೆಯರು ಅದನ್ನು ಓದಿದರು. ಹೆಬ್ಬಾರರು, ನನ್ನ ಲೇಖನಕ್ಕೆ ಒಂದು ಕಾಮೆಂಟು ಹಾಕಿದರು. ಮಾನವ ಕಟ್ಟಿದ ಮನೆ ಇತ್ಯಾದಿಗಳಿದ್ದಲ್ಲಿ ಅದು ಲ್ಯಾಂಡ್ ಸ್ಕೇಪ್ ಆಗೊಲ್ಲವೆಂದು ಪ್ರತಿಕ್ರಿಯಿಸಿದರು. ಇಲ್ಲಿ ಒಂದು ವಿಷಯವನ್ನು ಸ್ಪಷ್ಟಪಡಿಸಬೇಕು. ಈ ಲೇಖನ ಪೂರ್ತಿಯಾಗಿ ಪಿಕ್ಟೋರಿಯಲ್ ಫೋಟೊಗ್ರಫಿಗೆ ಸಂಭಂದಿಸಿದ್ದು. ಮತ್ತೆ ನನ್ನ ಅನುಭವಕ್ಕೆ ಸಂಭಂದಿಸಿದ್ದು ಮಾತ್ರ. ಅವರು ಅಷ್ಟಕ್ಕೆ ಸೀಮಿತವಾದ ವಿಚಾರವನ್ನು ತೆರೆದಿಟ್ಟಿದ್ದರೆ ಅದಕ್ಕೆ ತಕ್ಕಂತೆ ಪ್ರತಿಕ್ರಿಯೆಯನ್ನು ನೀಡಿದ್ದರೆ ಇಷ್ಟೆಲ್ಲಾ ಅವಾಂತರಗಳಾಗುತ್ತಿರಲಿಲ್ಲ. ನನ್ನ ಲೇಖನ ಅದ್ಬುತವಾಗಿದೆಯೆಂದು ನಾನೆಲ್ಲಿಯೂ ಹೇಳುವುದಿಲ್ಲ. ಅದರಲ್ಲಿರುವ ವಿಚಾರ ಚರ್ಚೆಗೆ ಒಳಪಟ್ಟರೆ ನಾನು ಸೇರಿದಂತೆ ಅನೇಕರಿಗೆ ಹೊಸತನ್ನು ತಿಳಿದುಕೊಳ್ಳುವ ಅವಕಾಶ ಅಂತ ಪ್ರತಿಭಾರಿಯೂ ಅಂದುಕೊಳ್ಳುತ್ತೇನೆ. ಹೀಗಿರುವಾಗ ಅವರು ಪಿಕ್ಟೋರಿಯಲ್ ವಿಚಾರವಾಗಿ ತಿಳಿಸದೆ ಲ್ಯಾಂಡ್ ಸ್ಕೇಪ್ ಬಗ್ಗೆ ತಿಳಿಸಿ ನಾನು ಹೇಳಿದ್ದು ಲ್ಯಾಂಡ್ ಸ್ಕೇಪ್ ಅಲ್ಲವೆಂದು ಪ್ರತಿಕ್ರಿಯೆ ನೀಡಿದರು. ಹಾಗೆ ಕಂಪೋಜಿಷನ್ ವಿಚಾರವಾಗಿಯೂ ಕೂಡ. ಆಗ ಅವರ ಪ್ರತಿಕ್ರಿಯೆಗೆ ನಾನು ಅವರದೇ ಅನುಭವವವನ್ನು ನೆನಪಿಸಿ ಉತ್ತರ ನೀಡಿ ನಿಮ್ಮ ಅನುಭವವನ್ನು ಕೂಡ ಹಂಚಿಕೊಳ್ಳಿ ಅದಕ್ಕಾಗಿ ನೀವು ಇತ್ತೀಚೆಗೆ ತೆಗೆದ ಫೋಟೊಗಳನ್ನು ಹಾಕಿ ಹಂಚಿಕೊಳ್ಳಿ, ಮತ್ತೆ ಎಲ್ಲರೂ ಇಂಗ್ಲೀಷಿನಲ್ಲಿ ಬರೆಯುತ್ತಾರೆ. ನನಗೆ ಸುಲಭವಾಗಿ ಬರೆಯಲು ಗೊತ್ತಿರುವುದು ಕನ್ನಡ ಮಾತ್ರ, ನೀವು ಬರೆದ ಟಿಪ್ಸುಗಳನ್ನು ಅರ್ಥಮಾಡಿಕೊಳ್ಳಬೇಕಾದರೆ ಮೂರು ಸಲ ಓದಬೇಕಾಯ್ತು. ಹಾಗೆ ನನ್ನಂತೆ ನೂರಾರು ಸಾವಿರಾರು ಛಾಯಾಗ್ರಾಹಕರಿಗೆ ಇಂಗ್ಲೀಷ್ ಬರುವುದಿಲ್ಲ ಅವರೊಂದಿಗೆ ಈ ವಿಚಾರವನ್ನು ಹಂಚಿಕೊಳ್ಳಲಿಕ್ಕಾಗಿ ಬರೆಯುತ್ತಿದ್ದೇನೆ ಅಂತ ಹೇಳಿ ಕೆಲವು ಊರುಗಳ ಹೆಸರುಗಳನ್ನು ಬರೆದುಬಿಟ್ಟೆ. ಆ ಕ್ಷಣದಲ್ಲಿ ನನ್ನ ನೆನಪಿಗೆ ಬಂದಿದ್ದು ನನ್ನ ಗೆಳೆಯರ ಊರುಗಳು ಆದ್ದರಿಂದ ಆತುರದಲ್ಲಿ ಬರೆದುಬಿಟ್ಟೆನೇ ವಿನ: ಅದರ ಹಿಂದೆ ಯಾವ ಕೆಟ್ಟ ಉದ್ದೇಶವಾಗಲಿ ಅಥವ ಯಾರನ್ನಾದರೂ ಅವಮಾನಿಸಬೇಕೆಂದಾಗಲಿ ಅಲ್ಲ. ಹಳ್ಳಿಯಲ್ಲೇ ಇದ್ದು ಚೆನ್ನಾಗಿ ಓದಿ ಒಳ್ಳೆಯ ಸಾಪ್ಟ್ ವೇರು, ವಿಜ್ಞಾನಿಗಳು, ದೊಡ್ಡ ದೊಡ್ಡ ಕಂಪನಿಯಲ್ಲಿ ದೊಡ್ಡ ಹುದ್ದೆಯಲ್ಲಿದ್ದುಕೊಂಡು ಹವ್ಯಾಸವಾಗಿ ಫೋಟೊಗ್ರಫಿ ಮಾಡುತ್ತಿರುವವರು, ಚೆನ್ನಾಗಿ ಓದಿ ಹಳ್ಳಿಯಲ್ಲೇ ಕೃಷಿಯನ್ನು ಮಾಡುತ್ತಾ ಅತ್ಯುತ್ತಮ ಇಂಗ್ಲೀಷ್ ಲೇಖನಗಳನ್ನು ಬರೆಯುತ್ತಾ ಫೋಟೊಗ್ರಫಿ ಮಾಡುತ್ತಿರುವವರ ಮೇಲೆ ನನಗೆ ತುಂಬಾ ಗೌರವವಿದೆ. ನಮ್ಮ ಬದುಕಿಗೆ ಅವರೆಲ್ಲಾ ಮಾದರಿಯಾಗಿದ್ದಾರೆ. ಈ ಕಾರಣಕ್ಕೆ ಕಳೆದ ವರ್ಷ ಮುತ್ಮರ್ಡು ಊರು ಮತ್ತು ಊರಿನ ಹಿರಿಯ ಸಾಧಕರ ಬಗ್ಗೆ ನನ್ನ ಬ್ಲಾಗಿನಲ್ಲಿ ಲೇಖನವನ್ನು ಬರೆದಿದ್ದೇನೆ. ಆದ್ರೆ ಸತ್ಯ ಸಂಗತಿಯೆಂದರೆ ಈಗಲೂ ನಮ್ಮ ಬೆಂಗಳೂರಿನಲ್ಲಿಯೇ ಇಂಗ್ಲೀಷ್ ಬರದ ನೂರಾರು ಛಾಯಾಗ್ರಾಹಕರಿದ್ದಾರೆ, ಅದೇ ರೀತಿ ಕರ್ನಾಟಕದಾದ್ಯಂತ ಇರುವ ಸಾವಿರಾರು ಛಾಯಾಗ್ರಾಹಕರಲ್ಲಿ ನಾಲ್ಕು ಜನರಿಗೆ ಇಂಗ್ಲೀಷ್ ಬಂದರೆ ಇನ್ನೂ ನಲವತ್ತು ಜನರಿಗೆ ಇಂಗ್ಲೀಷ್ ಬರುವುದಿಲ್ಲವೆನ್ನುವುದು ಸತ್ಯಸಂಗತಿ. ನಾನು ಈ ಗುಂಪಿನಲ್ಲಿ ಒಬ್ಬನಾಗಿದ್ದು ಆ ಕ್ಷಣದಲ್ಲಿ ನನ್ನ ಅಲೋಚನೆಯೂ ಅದೇ ಆಗಿದ್ದರಿಂದ ಹಾಗೆ ಉತ್ತರಿಸಿದ್ದು ಬಿಟ್ಟರೆ ಇದರ ಹಿಂದೆ ಇನ್ಯಾವ ಕೆಟ್ಟ ಉದ್ದೇಶವು ಇರಲಿಲ್ಲ. ಇದೇ ಸಮಯಕ್ಕೆ ಹೆಬ್ಬಾರರು ತಮ್ಮ ಫೋಟೊಗ್ರಫಿ ಅನುಭವವನ್ನು ಹಂಚಿಕೊಳ್ಳುವ ಬದಲು "ಹಳ್ಳಿಜನರಿಗೆ ಇಂಗ್ಲೀಷ್ ಬರುವುದಿಲ್ಲವೆಂದು ಏಕೆ ಅಂದುಕೊಳ್ಳುತ್ತಿ" ನಿನಗೊಬ್ಬನಿಗೆ ಅರ್ಥವಾಯಿತಲ್ಲ ಅಷ್ಟು ಸಾಕು" ಅಂತ ವಿಷಯವನ್ನು ತಿರುಗಿಸಿದರಲ್ಲ. ಅಲ್ಲಿಗೆ ಇಡೀ ಫೋಟೊಗ್ರಫಿ ಲೇಖನದ ಅಭಿಪ್ರಾಯಗಳಿಗೆ ತಿರುವುಗಳು ಬಂದುಬಿಟ್ಟಿತ್ತು. ನಾನು ಹೆಸರಿಸಿದ್ದ ಊರುಗಳಲ್ಲಿರುವ ಗೆಳೆಯರಿಗೆ ಸಹಜವಾಗಿ ಈ ವಿಚಾರವಾಗಿ ಅಸಮಧಾನ ಶುರುವಾಗಿತ್ತು. ಒಬ್ಬರು ನಾನು ಬರೆದಿದ್ದು ತಪ್ಪು ಎಂದು ಇಂಗ್ಲೀಷಿನಲ್ಲಿ ಕಾಮೆಂಟ್ ಹಾಕಿದರು. ಅನೇಕರು ಬೇಸರ ಮಾಡಿಕೊಂಡಿದ್ದರು. ಅಷ್ಟರಲ್ಲಿ ಹೆಬ್ಬಾರ್ ಶಿಷ್ಯನೊಬ್ಬ ಅದೆಲ್ಲಿದ್ದನೋ ಬ್ಲಾಗಿಗೆ ಬಂದು ತುಂಬಾ ಕೆಟ್ಟದಾಗಿ ಪೇಜುಗಟ್ಟಲೆ ಕಾಮೆಂಟು ಹಾಕಿದ್ದ. ಅವನು ಏನು ಕೇಳುತಿದ್ದಾನೆ ಅಂತ ಅರ್ಥವಾಗಲಿಲ್ಲ. ಹೆಬ್ಬಾರರಿಗೆ ಅವಮಾನವಾಗಿದೆ ಅಂತ ಬೇರೆ ಹೇಳಿದ್ದ. ಹಾಗೆ ನೋಡಿದರೆ ಅವನು ನನಗೆ ತುಂಬಾ ಗೊತ್ತಿರುವವನೇ. ಬಹುಶಃ ಅವನ ಪ್ರತಿಕ್ರಿಯೆಯಲ್ಲಿನ ವಿಚಾರಗಳನ್ನು ನೋಡಿದಾಗ ಫೋಟೊಗ್ರಫಿ ಸಾಧನೆಯ ವೃತ್ತಿಮತ್ಸರವನ್ನಿಟ್ಟುಕೊಂಡಿದ್ದಾನೆಂದು ತಿಳಿಯಿತು. "ಶಿವು ನನ್ನನ್ನು ಪಿಕ್ಟೋರಿಯಲ್ ಫೋಟೊಗ್ರಫಿಗೆ ಎಲ್ಲಿಗೂ ಕರೆದುಕೊಂಡು ಹೋಗುವುದಿಲ್ಲ" ನನ್ನ ಇತರ ಫೋಟೊಗ್ರಫಿ ಗೆಳೆಯರ ಬಳಿ ಹೇಳಿದ್ದು ನೆನಪಾಗಿ ಅದರ ದ್ವೇಷ ಹೀಗೆ ಹೊರಬಂದಿರಬಹುದು ಅಂದುಕೊಂಡು ಅವನ ಎಲ್ಲಾ ಪ್ರಶ್ನೆಗಳಿಗೂ ಸಮಾಧಾನವಾಗಿಯೇ ಪ್ರತಿಕ್ರಿಯಿಸಿದ್ದೆ. ಇದಾದ ನಂತರ ಹೆಬ್ಬಾರರಿಗೆ ಮೇಲ್ ಮಾಡಿ ನೋಡಿ ಎಂಥ ಕಾಮೆಂಟುಗಳನ್ನು ಹಾಕುತ್ತಿದ್ದಾನೆ ಅಂತ ಕೇಳಿದಾಗ "ಅವನಿಗೆ ಹೇಳಿದ್ದೇನೆ ಈ ವಿಷಯವನ್ನು ಇಲ್ಲಿಗೆ ಬಿಡಿ" ಅಂತ ನನಗೆ ರಿಪ್ಲೆ ಮಾಡಿದರು. ನಾನು ಸುಮ್ಮನಾದೆ. ಅಲ್ಲಿಗೆ ಎಲ್ಲಾ ಮುಗಿಯಿತು ಅಂದುಕೊಳ್ಳುವಷ್ಟರಲ್ಲಿ ಮತ್ತೆ ಹೊಸದೊಂದು ಕಾಮೆಂಟು ಹಾಕಿದ್ದ. ಎರಡನೆ ಭಾರಿ ಹಾಕಿದ ಕಾಮೆಂಟಿನಲ್ಲಿ ಅವನು ಏನು ಬರೆದಿದ್ದಾನೆ ಅಂತ ಅರ್ಥವಾಗಲಿಲ್ಲ. ಅವನು ಫೋಟೊಗ್ರಫಿ ಬಗ್ಗೆ ಮಾತಾಡುತ್ತಿದ್ದಾನೋ, ಅಥವ ನನ್ನ ವಿಚಾರವನ್ನು ಹೇಳುತ್ತಿದ್ದಾನೋ ಗೊತ್ತಾಗಲಿಲ್ಲ ಆದ್ರೆ ಇಡೀ ಪ್ರತಿಕ್ರಿಯೆಯಲ್ಲಿ ಅಸೂಯೆ ಅವರಿಸಿತ್ತು. ಹೆಬ್ಬಾರ್ ಪ್ರತಿಕ್ರಿಯೆ ಪಡೆದೆ ಇದೆಲ್ಲವನ್ನು ಬರೆದಿದ್ದು ಅಂತ ಬೇರೆ ಹೇಳಿದ್ದ. ತಕ್ಷಣ ಹೆಬ್ಬಾರರಿಗೆ ಮತ್ತೊಂದು ಮೇಲ್ ಮಾಡಿ ಇದೆಲ್ಲ ಏನ್ ಸಾರ್? ಅಂದೆ. ಅದಕ್ಕೆ ಅವರು ಉತ್ತರಿಸದೇ ಸುಮ್ಮನಾದರು. ಆಗ ಎಲ್ಲಾ ಗೊತ್ತಾಯಿತು. ಇದೆಲ್ಲಾ ಪಕ್ಕಾ ವ್ಯವಸ್ಥಿತವಾಗಿರುವ ವಿಚಾರವೆಂದು. ಎರಡು ದಿನ ಅವನು ಬರೆದ ಅಸೂಯೆಯನ್ನು ನಮ್ಮ ಬ್ಲಾಗ್ ಗೆಳೆಯರು ಓದಿದರು. ಇವರ ಉದ್ದೇಶವೂ ಅದೇ ಆಗಿತ್ತು ಅನ್ನಿಸುತ್ತೆ. ಯಾಕೋ ತುಂಬಾ ಅವಮಾನವಾದಂತೆ ಆಯಿತು. ಒಂದು ಫೋಟೊಗ್ರಫಿ ಲೇಖನದ ವಿಚಾರ ಅರೋಗ್ಯಪೂರ್ಣ ಚರ್ಚೆಯಾಗುವುದು ಹೀಗೆ ದಾರಿ ತಪ್ಪಿ ನನಗೆ ಈ ಮಟ್ಟಿನ ಅವಮಾನವಾಗುವುದಕ್ಕೆ ಅದಕ್ಕೆ ಮೊದಲು ನನ್ನಿಂದಾದ ತಪ್ಪಿಗೆ ಕಾರಣ ನೀವು, ನನ್ನನ್ನು ಸುಮ್ಮನಿರಿಸಿ ನಿಮ್ಮ ಶಿಷ್ಯ ಬರೆದ ಎರಡನೇ ಪ್ರತಿಕ್ರಿಯೆಯನ್ನು ನೋಡುತ್ತಾ ಎಂಜಾಯ್ ಮಾಡಿದ್ರಿ" ಇದರಿಂದ ನನಗೆ ಅವಮಾನವಾಗಿದೆ. ನನ್ನ ಬರಹ ಮತ್ತು ಲೇಖನಗಳು ಪರೋಕ್ಷವಾಗಿ ಕಳಪೆ ಎನ್ನುವಂತೆ ಮಾತುಗಳು, ಅದಕ್ಕಾಗಿ ನನ್ನೆಲ್ಲಾ ಬಜ್ ಮತ್ತು ಬ್ಲಾಗ್ ಲೇಖನಗಳನ್ನು ಡಿಲಿಟ್ ಮಾಡುತ್ತಿದ್ದೇನೆ. ಇದರಿಂದ ನಿಮಗೆ ತೃಪ್ತಿಯಾದರೆ ಸಾಕು. ನನ್ನೊಳಗೆ ಆತ್ಮಾವಲೋಕನವಾಗಿ ಮತ್ತೆ ನನ್ನ ಬರವಣಿಗೆ ಚೆನ್ನಾಗಿದೆಯೆನಿಸುವವರೆಗೆ ನಾನು ಇಲ್ಲಿ ಬರೆಯುವುದಿಲ್ಲ." ಅಂತ ಒಂದು ದೀರ್ಘವಾದ್ ಪತ್ರವನ್ನು ಬರೆದು ಅವರಿಗೆ ಮೇಲ್ ಮಾಡಿ ನನ್ನಲ್ಲಾ ಬಜ್ ಮತ್ತು ಬ್ಲಾಗಿನ ಒಂದು ವರ್ಷದ ಲೇಖನಗಳನ್ನು ಡಿಲಿಟ್ ಮಾಡಿದ್ದೆ. ಅವರಿಂದ ಇನ್ನೂ ಉತ್ತರ ಬರಲಿಲ್ಲ.

ಮೂರು ದಿನ ಕಳೆಯಿತು. ಯಾವುದೇ ಕಾರಣಕ್ಕೆ ಗೆಳೆಯರೊಬ್ಬರಿಗೆ ಫೋನ್ ಮಾಡಿ ಸಹಜವಾಗಿ ಮಾತಾಡುವಾಗ ಪ್ರತಿಕ್ರಿಯೆಯಲ್ಲಿ ಬರೆದ ಊರುಗಳ ವಿಚಾರವಾಗಿ ತುಂಬಾ ಜನರು ಬೇಜಾರು ಮಾಡಿಕೊಂಡಿದ್ದಾರೆ ಅಂದಾಗ ಅವರಿಗೆ ಇದೆಲ್ಲವನ್ನು ವಿವರಿಸಿ ಹೇಳಿ ಸಾರಿ ಕೇಳಿದೆ. ಅವರು ಅರ್ಥಮಾಡಿಕೊಂಡರು. ಆದರೆ ಮರುಕ್ಷಣದಲ್ಲಿ ಇದು ಎಲ್ಲರ ಮನಸ್ಸಲ್ಲಿ ಎಷ್ಟು ಗಾಢವಾಗಿ ಅವರಿಗೆ ಬೇಸರ ತಂದಿರಬಹುದು ಅಂತ ಅಂದುಕೊಂಡಾಗ ಆತುರದಲ್ಲಿ ಮಾಡಿದ ತಪ್ಪು ನನ್ನನ್ನು ಕಾಡತೊಡಗಿತು. ಇನ್ನು ಸುಮ್ಮನಿರಲಾಗಲಿಲ್ಲ. ಮತ್ತೆ ಎಲ್ಲರಿಗೂ ಫೋನ್ ಮಾಡಿ ಇದೆಲ್ಲವನ್ನು ಅರ್ಥಮಾಡಿಸಲು ಸಾಧ್ಯವಿಲ್ಲವಲ್ಲ. ಅದಕ್ಕೆ ನೇರವಾಗಿ ಎಲ್ಲಿ ಆ ಪ್ರತಿಕ್ರಿಯೆಯನ್ನು ಬರೆದಿದ್ದೆನೋ ಅಲ್ಲಿಯೇ ಕ್ಷಮೆಯಾಚಿಸುವುದು ಒಳ್ಳೆಯದು ಅಂದುಕೊಂಡು ಇದೆಲ್ಲವನ್ನು ಬರೆದಿದ್ದೇನೆ. ಇದೆಲ್ಲ ಆಗಿರುವ ಸಂಗತಿ. ಇದೆಲ್ಲವನ್ನು ಬರೆಯುವ ಮೂಲಕ ನನ್ನೊಳಗಿನ ದುಗಡವನ್ನು ಹೊರಹಾಕಿದ್ದೇನೆ. ಹಾಗೆ ಇದಿಷ್ಟನ್ನು ವಿವರಿಸದಿದ್ದಲ್ಲಿ ಮತ್ತೆ ಈ ವಿಚಾರ ಬೇರೆ ಅರ್ಥವನ್ನು ಪಡೆದುಕೊಳ್ಳುವ ಅವಕಾಶವಿರುವುದರಿಂದ ಇದೆಲ್ಲ ಬರೆಯಬೇಕಾಯಿತು. ಹಾಗೆ ಯಾರಮೇಲು ತಪ್ಪು ಹೊರಿಸುತಿಲ್ಲ. ನನ್ನೊಳಗೆ ಆಗಿರುವ ತಪ್ಪುಗಳು ಕಾಡತೊಡಗಿದರಿಂದ ಇದೆಲ್ಲವನ್ನು ಬರೆಯಬೇಕಾಯ್ತು. ಮುಂದೆ ಇದನ್ನು ಮತ್ತೆ ಮುಂದುವರಿಸಿಕೊಂಡು ಹೋಗಲು ನನಗಿಷ್ಟವಿಲ್ಲ. ಈ ಲೇಖನದಿಂದ ಯಾರಿಗಾದರೂ ಬೇಸರವಾದಲ್ಲಿ ಅದಕ್ಕೂ ಮೊದಲೇ ಕ್ಷಮೆ ಕೇಳಿಬಿಡುತ್ತೇನೆ.

ಪ್ರೀತಿಯಿಂದ..

ಶಿವು.ಕೆ

26 comments:

ಈಶ್ವರ said...

ನಿಮ್ಮ ಕೆಲಸದ, ಬರಹದ ಬಗ್ಗೆ ನಿಮಗಿರುವ ಕಾಳಜಿಯ ಮುಂದೆ ಟೀಕೆಗಳು ಗೌಣ. ಶುಭವಾಗಲಿ ಸರ್.

ಜಲನಯನ said...

ಶಿವು ಈಶ್ವರ್ ಭಟ್ ಹೇಳಿದ್ದು ನೂರಕ್ಕೆ ನೂರು ಸತ್ಯ. ನಮ್ಮ ಬುದ್ಧಿವಂತಿಕೆ ನಿಲುಕಿಗೆ ಸಿಗುವಷ್ಟು ಅಥವಾ ನಮ್ಮ ಕೈಲಾದಷ್ಟು ಇತರರಿಗೆ ಹಂಚುವುದು ನಮ್ಮ ಧರ್ಮ..ಅದು ವಿದ್ಯಾದಾನವಾದರೂ ಅಷ್ಟೇ...ಹಾಗೆಯೇ ಕಲಿಯುತ್ತಲೂ ಇರುತ್ತೇವೆ ಎಂದು ನೀವೇ ಒಮ್ಮೆ ಹೇಳಿದ್ದಿರಿ ಬ್ಲಾಗಲ್ಲಿ ಹಾಗಾಗಿ ಎಲ್ಲಾ ಟೀಕೆ ಟಿಪ್ಪಣಿಗಳಿಂದ ಕಲಿಕೆ ಸಾಧ್ಯ...ಹಾಗಾಗಿ ಅತಿ ಎನಿಸುವ ಟೀಕೆಯ ಬಗ್ಗೆ ಹೆಚ್ಚಿಗೆ ತಲೆ ಕೆಡಿಸಿಕೊಳ್ಳದೇ ಸರಿ ಎನಿಸಿದನ್ನು ಮಾಡಿ..ಹಿರಿಯರ ಮಾರ್ಗದರ್ಶನ ಹಾಗೆ ಮಾಡುವಾಗ ನಿಮ್ಮಿಂದ ತಪ್ಪಾಗದಂತೆ ನಿಮ್ಮನ್ನು ಎಚ್ಚರಿಸುತ್ತದೆ..ಅಲ್ಲವೇ. ಶುಭವಾಗಲಿ.

Aravind GJ said...

ಶಿವು ಸರ್,

ನಿಮ್ಮ ಬರಹಗಳನ್ನು ನಾನು ನೋಡಿದ್ದು ಇತ್ತೀಚೆಗೆ. ನಿಮ್ಮ ಲೇಖನಗಳು ತುಂಬಾ ಚೆನ್ನಾಗಿದ್ದವು. ಕನ್ನಡದಲ್ಲಿ ಈ ರೀತಿಯ ಮಾಹಿತಿ ಸಿಗುವುದು ಬಹಳ ಕಡಿಮೆ. ಆದರೆ ನಿಮ್ಮ ಬರಹಗಳನ್ನು ಡಿಲೀಟ್ ಮಾಡಿರುವುದು ಬೇಸರದ ವಿಷಯ. ಟೇಕೆಗಳು ಹಾಗೂ ಟೀಕೆ ಮಾಡುವವರು ಸದಾ ಇದ್ದದ್ದೇ!! ಮತ್ತೊಮ್ಮೆ ನಿಮ್ಮ ಲೇಖನಗಳನ್ನು ಓದುವ ಅವಕಾಶ ಮಾಡಿರೆಂದು ವಿನಂತಿಸುತ್ತೇನೆ.

ಮನಸು said...

ಶಿವು ನೀವು ಯಾರೋ ಏನೋ ಅಂದರು ಎಂದು ಎಲ್ಲಾ ಲೇಖನಗಳನ್ನು ತೆಗೆದುಹಾಕಬಾರದಿತ್ತು.... ಆ ಲೇಖನ ನಮ್ಮಂತವರಿಗೆ ಬೇಕಾಗಿತ್ತು... ಏನು ಮಾಡಿದರೂ ಜನ ಕೊಂಕು ಮಾತನಾಡುವುದು ಬಿಡುವುದಿಲ್ಲ ಅಂತಹವನ್ನೆಲ್ಲಾ ಕೇಳಿ ಹಾಗೇ ಬಿಟ್ಟುಬಿಡಿ...

shivu.k said...

Ishwara bhat K

ನಿಮ್ಮ ಅಭಿಮಾನಕ್ಕೆ ಥ್ಯಾಂಕ್ಸ್.

shivu.k said...

ಅಜಾದ್,
ನಿಮ್ಮ ಮಾತು ನಿಜ. ನಮ್ಮ ಅನುಭವವನ್ನು ಹಂಚುತ್ತಲೇ ಹೊಸದನ್ನು ಕಲಿಯುತ್ತಿರುತ್ತೇವೆ. ಮತ್ತೆ ಈ ಟೀಕೆ ಟಿಪ್ಪಣಿಗಳು ಆರೋಗ್ಯಪೂರ್ಣವಾಗಿರಬೇಕು. ಕಲಿಕೆಗೆ ಹಿರಿಯರು ಮತ್ತು ಕಿರಿಯರು ಎಂಬುದಿಲ್ಲ. ತಪ್ಪು ಮಾಡುವುದನ್ನು ಯಾರು ಬೇಕಾದರೂ ತಿದ್ದಬಹುದು. ಹೀಗೆ ತಿದ್ದುವ ಕಾರ್ಯದಲ್ಲಿ ತೊಡಗಿರುವವರು ಮಾರ್ಗದರ್ಶನ ಕೊಡುವವರು ಮೊದಲು ಕಲಿತಿರಬೇಕು. ಅದು ಬಿಟ್ಟು ದಾರಿ ತಪ್ಪಿಸುವುದಲ್ಲ. ಅದು ಈಗ ಜಗಜಾಹಿರಾಗಿದೆ.
ಈ ಲೇಖನವನ್ನು ಓದಿದ ಮೇಲು ಮತ್ತೆ ಬಜ್‍ನಲ್ಲಿ ಹಳ್ಳಿಯವರಿಗೆ ಇಂಗ್ಲೀಷ್ ಬರೊಲ್ಲವೆನ್ನುವ ಹೊಸ ಜೋಕುಗಳನ್ನು ಹೇಳುವ ಬದಲು ಎಲ್ಲರ ಬಹುಬೇಡಿಕೆಯ ಒಂದಷ್ಟು ಫೋಟೊಗ್ರಫಿ ವಿಚಾರವನ್ನು ಬರೆದರೆ ತುಂಬಾ ಒಳ್ಳೆಯದು. ಇಲ್ಲದಿದ್ದಲ್ಲಿ ಜೋಕ್ ಹೇಳುವವರು ಜೋಕರ್ ಆಗಿಬಿಡುವ ಸಾಧ್ಯತೆಯಿದೆ..
ನಿಮ್ಮ ಕಾಳಜಿಯುಕ್ತ ಪ್ರತಿಕ್ರಿಯೆಗೆ ಧನ್ಯವಾದಗಳು.

shivu.k said...

ಆರವಿಂದ್ ಜಿಜೆ,
ನನ್ನ ಬರಹಗಳನ್ನು ತಡವಾಗಿ ನೋಡಿದರೂ ಇಷ್ಟಪಟ್ಟಿದ್ದಕ್ಕೆ ಥ್ಯಾಂಕ್ಸ್. ನೀವು ಹೇಳಿತ್ತೀರಿ ಕನ್ನಡದಲ್ಲಿ ಈ ರೀತಿಯ ಮಾಹಿತಿಗಳು ಸಿಗುವುದು ಕಡಿಮೆ ಅಂತ. ಆದ್ರೆ ಇದು ತೀರ ಸಾಮಾನ್ಯವಾದದ್ದು, ಕಳಪೆ ಮಟ್ಟದ್ದು ಅಂತ ಕೆಲವರು ಹೇಳಿದ ಮೇಲೆ ನನ್ನ ಬರವಣಿಗೆಯ ಗುಣಮಟ್ಟವನ್ನು ವೃದ್ಧಿಸಿಕೊಳ್ಳಲು ಬರವಣಿಗೆಯನ್ನೇ ನಿಲ್ಲಿಸಿದ್ದೇನೆ. ಅದೊಮ್ಮೆ ಚೆನ್ನಾಗಿದೆಯೆಂದು ಅನ್ನಿಸಿದರೆ ಮತ್ತೆ ಬರೆಯುತ್ತೇನೆ.
ನೀವು ಸೇರಿದಂತೆ ಹತ್ತಾರು ಜನರ ಮೇಲ್‍ಗಳು, ಪೋನ್ ಕರೆಗಳು ಮತ್ತೆ ನನ್ನ ಬ್ಲಾಗ್ ಲೇಖನಗಳನ್ನು ಓದಬೇಕೆನ್ನುವ ಆಸೆ ವ್ಯಕ್ತಪಡಿಸಿರುವುದರಿಂದ ಸದ್ಯದಲ್ಲೇ ಹಾಕುತ್ತೇನೆ.

shivu.k said...

ಸುಗುಣಕ್ಕ,

ಆ ಲೇಖನ ನಮ್ಮಂತವರಿಗೆ ಬೇಕಾಗಿತ್ತು..
ಇದೊಂದು ಮಾತು ನನ್ನ ಬರವಣಿಗೆಯಲ್ಲಿ ಸತ್ವವಿದೆಯೆಂದುಕೊಳ್ಳಲು. ಖಂಡಿತ ಸದ್ಯದಲ್ಲಿಯೇ ಹಾಕುತ್ತೇನೆ.
ಧನ್ಯವಾದಗಳು.

Jagadeesh Balehadda said...

ok

ವನಿತಾ / Vanitha said...

ಶಿವು,
ಕಳೆದ ಮೂರೂವರೆ ವರುಷಗಳಿಂದ ನಿಮ್ಮ ಬ್ಲಾಗ್ ನಲ್ಲಿ ಬರೆದ ಪ್ರತಿಯೊಂದು ಲೇಖನವನ್ನೂ ಖುಷಿಯಿಂದ ಓದಿದ್ದೇನೆ. ಬ್ಲಾಗ್ ಲೇಖನಗಳು ನಮಗೆ ತಿಳಿದಿರುವುದನ್ನು ಬೇರೆಯವರಿಗೆ ಹಂಚುವ ಮಾಧ್ಯಮವಾಗುವ ಬದಲು ಅನಗತ್ಯ ಟೀಕೆ, ವಿಮರ್ಶೆಗಳಿಗೆ ಹೆಚ್ಚಿನ ಚರ್ಚೆಯಾಗುವುದು ನೋಡಿ ಬೇಸರವಾಗುತ್ತಿದೆ.ಅಂತೆಯೇ ನಿಮ್ಮ ಫೋಟೋಗ್ರಫಿ ಲೇಖನಗಳು ಹೊಸಬರಿಗೆ ಒಳ್ಳೆಯ ಮಾರ್ಗದರ್ಶನದಂತೆ ಇತ್ತು..ಅವನ್ನು ನೀವು ಡಿಲೀಟ್ ಮಾಡಿರುವುದು ವಿಷಾದಕರ :(

ಮುಂದೆಯೂ ನಿಮ್ಮ ಲೇಖನಗಳು ಎಂದಿನoತೆಯೇ ಬರುತ್ತಿರಲಿ.
- ವನಿತಾ :)

Keshav.Kulkarni said...

ಶಿವು,

ಬರೆಯುವುದನ್ನು ನಿಲ್ಲಿಸಬೇಡಿ. ನಿಮ್ಮಿಂದ ಯಾವ ತಪ್ಪೂ ಆಗಿಲ್ಲ, ನೀವು ಕ್ಷಮೆ ಕೇಳುವ ಅಗತ್ಯವೂ ಇಲ್ಲ.

Manjunath said...

ಶಿವು ಸರ್, ದಯವಿಟ್ಟು ನಿಮ್ಮ ಹಳೆ ಲೇಖನಗಳನ್ನ ಮತ್ತೆ ಪೋಸ್ಟ್ ಮಾಡಿ.
ನಿಮ್ಮ ಹಳೆ ಲೇಖನಗಲ್ಲನ್ನ ಓದಿಯೇ ನನ್ನ ಫೋಟೋಗ್ರಫಿ ಬಗ್ಗೆ ಇರೋ ಆಸಕ್ತಿ ಇನ್ನು ಜಾಸ್ತಿ ಆಗಿದ್ದು. ನನ್ನಂತಹ ಎಸ್ಟೋ ಜನಗಳಿಗೆ ನಿಮ್ಮ ಲೇಖನಗಳು ಸ್ಪೂರ್ತಿ.
ನೀವು ಬರೆದ ಲೆನ್ಸೆಗಳ ಮತ್ತು ಕ್ಯಾಮೆರಾ ಲೇಖನಗಳು ನಮ್ಮಂತಹ ಹೊಸಬರಿಗೆ ತುಂಬಾ ಉಪಯುಕ್ತ.
ದಯವಿಟ್ಟು ನೀವು ಬರಿಯೋದನ್ನ ನಿಲ್ಲಿಸಬೇಡಿ.

ವಿನೋದ್ ಕುಮಾರ್ said...

ಶಿವು ಅವರೇ,
ಇತ್ತೀಚಿನ ಬೆಳವಣಿಗೆಗಳನ್ನು ನೋಡಿ ಬೇಸರವಾಯಿತು. ಸಮಯ ತುಂಬಾ ಅಮೂಲ್ಯವಾದುದು. ಅಂಥದರಲ್ಲಿ ತಮ್ಮ ಅಮೂಲ್ಯ ಸಮಯವನ್ನ ವ್ಯಯಿಸಿ ಲೇಖನಗಳನ್ನು ಬರೆದು ಬ್ಲಾಗ್ನಲ್ಲಿ ಹಾಕಿದಾಗ ಅದರಿಂದ ಉಳಿದವರಿಗೆ ಬಹಳ ಉಪಯೋಗ ಆಗುತ್ತದೆ ಅನ್ನೋದರಲ್ಲಿ ಎರಡು ಮಾತಿಲ್ಲ. ನನ್ನ ಪ್ರಕಾರ ಈ ಲೇಖನಗಳ ಉದ್ದೇಶ ಜ್ಞಾನವನ್ನು ಹಂಚುವುದು. ಇಂತಹದರಲ್ಲಿ ಅನಗತ್ಯ ಟೀಕೆ, ವಿಮರ್ಶೆಗಳಿಗೆ ಗಮನಕೊಟ್ಟು ನೀವು ನಿಮ್ಮ ಅಮೂಲ್ಯವಾದ ಸಮಯ ವನ್ನು ಹಾಳು ಮಾಡುವ ಅಗತ್ಯವಿಲ್ಲ ಅನಿಸುತ್ತದೆ. ಮಾತೃಭಾಷೆಯಲ್ಲಿ ಬರೆದ ಲೇಖನಗಳು ಹಳ್ಳಿಯವರಿಗೆ ಮಾತ್ರ ಅಲ್ಲ ಭಾಷೆ ಬಗ್ಗೆ ಅಭಿಮಾನ ಇರುವ ಎಲ್ಲರಿಗೂ ಇಷ್ಟ ಆಗುತ್ತದೆ ಹಾಗು ಸುಲಭವಾಗಿ ಅರ್ಥವಾಗುತ್ತದೆ. ಅದಕ್ಕೆ ತಾನೆ ಜಪಾನ್ ನಂಥಹ ದೇಶ ಶಿಕ್ಷಣ, ವಿಜ್ಞಾನ, ತಂತ್ರಜ್ಞಾನ ಎಲ್ಲ ವಿಷಯದಲ್ಲೂ ಅಷ್ಟೊಂದು ಮುಂದುವರಿದೆದೆ. ಆದುದರಿಂದ ಹೆಚ್ಹು ಹೆಚ್ಹು ಇಂಥಹ ಲೇಖನಗಳು ಕನ್ನಡದಲ್ಲಿ ಬರಬೇಕು. ಪ್ರತಿಯೊಂದು ಕಲೆಯೂ ಕಾಲಘಟ್ಟದಲ್ಲಿ ವಿಕಾಸವಾಗುತ್ತಾ ಹೋಗುತ್ತದೆ. ಅಂಥದರಲ್ಲಿ ಛಾಯಾ ಚಿತ್ರ ಕಲೆಯೂ ಹಾಗೂ ಅದರ ವಿವಿಧ ಆಯಾಮಗಳೂ ನಿಂತ ನೀರಗಿರದೆ ಬದಲಾಗುತ್ತ ಹೋಗುತ್ತದೆ. ಅದ್ದರಿಂದ ನೀವು ನಿಮ್ಮ ನೆಚಿನ ಕಲೆಯನ್ನು ಆನಂದಿಸಿ ಮತ್ತು ಎಲ್ಲಕ್ಕಿಂತ ಮಿಗಿಲಾಗಿ ಉಳಿದವರೊಂದಿಗೆ ಬ್ಲಾಗ್ ಮೂಲಕ ಹಂಚಿಕೊಳ್ಳಿ.

ವಿನೋದ್ ಕುಮಾರ್

Pradeep said...

ಶಿವೂ ಅವರೇ, ದುರದೃಷ್ಟವಶಾತ್ ನಿಮ್ಮ ಫೋಟೊಗ್ರಫಿ ಲೇಖನ ೧೦ ನ್ನು ಓದೇ ಇಲ್ಲ. ನೀವಾಗಲೇ ತೆಗೆದುಬಿಟ್ಟಿದ್ದೀರ. ಮೂರು ದಿನದ ಹಿಂದೆ ನಿಮ್ಮ ಬ್ಲಾಗಿಗೆ ಬಂದಾಗ ಎಲ್ಲಾ ಕಾಣೆಯಾಗಿದ್ದವು. ಏನೋ maintainance ಗೋಸ್ಕರ ತೆಗೆದಿರುತ್ತೀರ ಅಂದುಕೊಂಡೆ.
ಆದರೆ, ಶಿವೂ ಅವರೇ, ಕನ್ನಡದಲ್ಲಿ ಫೋಟೋಗ್ರಫಿಯ ಬಗ್ಗೆ ಮಾಹಿತಿ ನೀಡುವ ನಿಮ್ಮ ಪ್ರಯತ್ನ ನಿಜಕ್ಕೂ ಶ್ಲಾಘನೀಯ. ಯಾರೋ ಏನೋ ಅಂದರು ಅಂತ ಎಲ್ಲವನ್ನೂ ತೆಗೆಯುವುದೂ ಸರಿಯಲ್ಲ. ಟೀಕಿಸುವವರು ಎಲ್ಲೆಡೆಯೂ ಇರುತ್ತಾರೆ. ಮಾನವ ಸಹಜ ಗುಣ ಅದು. ಅದೇನೇ ಟೀಕೆ ಇರಲಿ, ಒಂದು ವೇಳೆ ಅದು ಸರಿಯಾಗಿದ್ದಲ್ಲಿ ಅದನ್ನು ಪರಾಂಬರಿಸಿ ತಪ್ಪು ತಿದ್ದಿಕೊಳ್ಳಿ. ಕೆಟ್ಟ ಆಲೋಚನೆಯಿಂದ ಮಾಡಿದ ಟೀಕೆಯೆಂದು ತಿಳಿದುಬಂದರೆ ಅದನ್ನೆಲ್ಲ ಲೆಕ್ಕಿಸಬಾರದು.
ನಿಮ್ಮ ಲೇಖನ-೧೦ ನೋಡಲಾಗಲಿಲ್ಲ. ಇಲ್ಲಿಗೆ ಬಂದಾಗ ಅದು ಮಾಯವಾಗಿತ್ತು.
ನಿಮ್ಮ ಬಳಿ ವಿನಂತಿಯೇನೆಂದರೆ, ನಿಮ್ಮ ಪೋಸ್ಟ್ ಗಳ ದಿಲೀಟ್ ಮಾಡದಿರಿ.
ಹಾಗೂ, "ಇಂಗ್ಲಿಷ್ ಬರುವುದಿಲ್ಲ ಎಂದರೆ ಅವಮಾನವಾಗುವುದು" ಎನ್ನುವ ಕನ್ನಡಿಗರಿಗೆ ಕನ್ನಡಿಗ ಎಂದು ಕರೆಸಿಕೊಳ್ಳುವ ಹಕ್ಕೇ ಇಲ್ಲ. ಇಂತಹ ಆಂಗ್ಲ ಪ್ರೇಮಿಗಳಿಗೆ ಲೆಕ್ಕಿಸದಿರಿ. ನಾಳೆ ನಮ್ಮ ಕನ್ನಡ ರಾಜ್ಯೋತ್ಸವ. ಆ ಖುಷಿಯಲ್ಲಿ ನಿಮ್ಮ ಪೋಸ್ಟ್ ಗಳ ಮರು ಪ್ರಕಟಣೆಗೊಳಿಸಿ ಎಂದು ವಿನಂತಿಸುವೆ.

balasubramanya said...

zingಶಿವೂ ಇತೀಚಿನ ವಿದ್ಯಾಮಾನಗಳು ಬೇಸರ ಮೂಡಿಸಿದೆ. ನಿಮ್ಮ ಪ್ರತಿಭೆ ನೀವು ಪಟ್ಟಿರುವ ಶ್ರಮದ ಆಧಾರದ ಮೇಲೆ ಬೆಳೆದುಬಂದಿರುತ್ತದೆ. ಇದರ ಬಗ್ಗೆ ಯಾರೂ ಹೊಟ್ಟೆ ಕಿಚ್ಚು ಪಡಲಾರರು, ಹಾಗೊಂದುವೇಳೆ ಪಟ್ಟರು ಅವರ ಸಣ್ಣತನ ಅದರ ಬಗ್ಗೆ ನೀವ್ಯಾಕೆ ಅಷ್ಟು ಬೇಸರ ಮಾಡಿಕೊಳ್ಳಬೇಕು.ಹೊಟ್ಟೆ ಕಿಚ್ಚು ಪಟ್ಟವರು ಅವರ ಅವನತಿಯ ಹಾದಿ ಹಿಡಿಯುತ್ತಾರೆಂಬ ಮಾತು ನಿಮಗೆ ತಿಳಿದಿರಲಿ. ಪ್ರತಿಬೆ ಬೆಳೆಯಲು ಟೀಕೆ ಟಿಪ್ಪಣಿ ಅವಶ್ಯಕ , ಕೆಲವೊಮ್ಮೆ ಅವು ಬೆಳೆಯುವ ಗಿಡಕ್ಕೆ ನೀರು, ಗೊಬ್ಬರದಂತೆ ಇನ್ನೂ ಎತ್ತರಕ್ಕೆ ಬೆಳೆಯಲು ಸಹಕಾರಿಯಾಗುತ್ತವೆ. ಇನ್ನು ಅಜಾದ್ ಸರ್ ಹೇಳಿದ ಮಾತುಗಳು ನೂರಕ್ಕೆ ನೂರರಷ್ಟು ಸರಿಯಿದೆ. ಬ್ಲಾಗಿಗರ ಸ್ನೇಹ ಎಲ್ಲಾ ಎಲ್ಲೇ ಜಾತಿಗಳನ್ನು ಮೀರಿ ಕೇವಲ ಪ್ರೀತಿ, ವಿಶ್ವಾಸ , ಪ್ರಥಿಬೆಗಳ ಆಧಾರದ ಮೇಲೆ ನಿಂತಿದೆ . ನಾವೆಲ್ಲಾ ಯಾರೂ ಗೆಳೆತನ ಬಯಸುವಾಗ ಯಾರ ಹಿನ್ನೆಲೆ, ಹಣವಂತಿಕೆ, ಜಾತಿ, ಪಂಗಡ, ವಿಚಾರಿಸಿ ಸ್ನೇಹಮಾಡಲಿಲ್ಲ. ಬ್ಲಾಗ್ ಲೋಕದಲ್ಲಿ ನಮಗೆ ತಿಳಿಯದ್ದನ್ನು ವಿಚಾರ ತಿಳಿದ ಎಲ್ಲರಿಂದ ಕಲಿಯಲು ನಾವು ಪ್ರಯತ್ನ ಪಡುತ್ತಿದ್ದೇವೆ. ಎಲ್ಲಾ ಗೆಳೆಯರು ಮತ್ತೊಮ್ಮೆ ನಮ್ಮ ನಮ್ಮ ವಿಚಾರಗಳನ್ನು ವಿಮರ್ಶೆ ಮಾಡಿಕೊಂಡು ಎಲ್ಲರೊಳಗೆ ಒಬ್ಬರಾಗಿ ಸಂತಸದಿಂದ ಪರಸ್ಪರ ವಿಶ್ವಾಸದಿಂದ ಬಾಳೋಣ. ನಿಮ್ಮ ಪ್ರತಿಬೆ ಬೆಳಗಲಿ. ನಿಮ್ಮ ಕಾರ್ಯ ಮುಂದುವರೆಸಿ, ಟೀಕೆ ಟಿಪ್ಪಣಿ ನಿಮ್ಮ ಎಲ್ಲಾ ಒಳ್ಳೆಕೆಲಸಗಳಿಗೆ ಅಡ್ಡಿಯಾಗದಿರಲಿ, ಟೀಕೆ ತಿಪ್ಪನಿಗಳನ್ನೇ ಮೆಟ್ಟಿಲು ಮಾಡಿಕೊಂಡು ಹೆಚ್ಚಿನ ಸಾಧನೆ ಮಾಡಿ ಸಂತಸ ಪಡಲು ಎಲ್ಲರೂ ಇದ್ದೇವೆ. ನಿಮಗೆ ಶುಭವಾಗಲಿ.

Shweta said...

Shivu sir,
We expect all the articles back in the blog.

I am reading it and improving my skills on Photography.I am happy reading the articles here.
-Shweta

ಸಂದೀಪ್ ಕಾಮತ್ said...

ಪ್ರೀತಿಯ ಶಿವು,

ಮೊನ್ನೆ ಮೊನ್ನೆ ಶ್ರೀನಿಧಿಯವರ 'ನುಂಗಲಾರದ ಟ್ಯಾಬ್ಲೆಟ್ ...' ಪುಸ್ತಕ ಬಿಡುಗಡೆಯ ಸಂದರ್ಭದಲ್ಲಿ ಶ್ರೀಯುತ ಜಿ.ವಿ ಯವರು ಶ್ರೀನಿಧಿಯವರನ್ನು ಹೊಗಳುತ್ತಾ ತಂತ್ರಜ್ಞಾನದ ಬಗ್ಗೆ ಕನ್ನಡದಲ್ಲಿ ಇಂಥ ಇನ್ನೂ ಹಲವಾರು ಪುಸ್ತಕಗಳು ಹೊರಬರಲಿ ಅಂದಾಗ ನನಗೆ ಥಟ್ಟನೆ ನಿಮ್ಮ ನೆನಪು ಬಂದಿತ್ತು!.

ನೀವು ಫೋಟೇಗ್ರಾಫಿಯ ಬಗ್ಗೆ ಲೇಖನಗಳನ್ನು ಬರೆಯೊದು ನೋಡಿದ್ದೆ. ಖಂಡಿತ ಇದು ಪುಸ್ತಕ ರೂಪದಲ್ಲಿ ಬರಲಿದೆ ಅನ್ನೋ ಭರವಸೆ ಕೂಡಾ ನನಗಿತ್ತು.

ತಪ್ಪು ಎಲ್ಲರೂ ಮಾಡುತ್ತಾರೆ. ಅದನ್ನು ತಿದ್ದಿ ಮುನ್ನಡೆಯುವುದೇ ಜೀವನವಲ್ಲವೇ?

ಹಿಂದೊಮ್ಮೆ ಹಿರಿಯ ಬ್ಲಾಗಿಗರೊಬ್ಬರು ಹೀಗೇ ಯಾವುದೋ ಕಾರಣಕ್ಕೆ ತಮ್ಮ ಬ್ಲಾಗನ್ನೇ ಡಿಲೀಟ್ ಮಾಡಿದ್ದರು!

ನಾನು ಅವರಿಗೆ ಆ ಡಿಲೀಟ್ ಮಾಡಿದ ಬ್ಲಾಗನ್ನು ಗೂಗಲ್ ತಂಡದವರಿಗೆ ಹೇಳಿ ರಿಕವರ್ ಮಾಡುವ ಬಗೆಯನ್ನು ಹೇಳಿದ್ದಕ್ಕೆ ಅವರು ತುಂಬಾ ಖುಷಿ ಪಟ್ಟಿದ್ದರು. ಯಾಕಂದ್ರೆ ಎರಡೆ ದಿವಸಗಳಲ್ಲಿ ಅವರಿಗೆ ಬ್ಲಾಗ್ ಡಿಲೀಟ್ ಮಾಡಿದ್ದು ತಪ್ಪು ಅನಿಸಿತ್ತು!

ನೀವು ಬ್ಲಾಗ್ ಡಿಲೀಟ್ ಮಾಡಿಲ್ಲ ಅನ್ನೋದೇ ಸಮಾಧಾನ.

ನೀವು ಮಾಡಿದ ಸುಂದರ ಮಡಿಕೆಯನ್ನು ನೀವೇ ಒಡೆದು 'ಕುಂಬಾರನಿಗೆ ವರುಷ ದೊಣ್ಣೆಗೆ ನಿಮಿಷ' ಅನ್ನೋ ಗಾದೆಯನ್ನು
'ಕುಂಬಾರನಿಗೆ ವರುಷ ಕುಂಬಾರನಿಗೇ ನಿಮಿಷ!' ಅಂತ ಬದಲಾಯಿಸೋದಕ್ಕೆ ಆಸ್ಪದ ನೀಡಬೇಡಿ.

ಪ್ರೀತಿಯಿಂದ,
ಸಂದೀಪ್ ಕಾಮತ್

rukminimalanisarga.blogspot.com said...

ಶಿವು
ಯಾರದೋ ಮಾತಿಗೆ ನೀವೇಕೆ ಬ್ಲಾಗ್ ಲೇಖನ ಅಳಿಸಿದಿರಿ? ಅದರ ಅಗತ್ಯ ಖಂಡಿತ ಇರಲಿಲ್ಲ. ಮತ್ತೆ ಲೇಖನಗಳನ್ನು ಹಾಕಿ. ಟೀಕೆ ಮಾಡುವವರು ಮಾಡುತ್ತಾರೆ.

shivu.k said...

ವನಿತಾ,
ಬ್ಲಾಗ್ ಲೇಖನಗಳು ನಮ್ಮ ಅನಿಸಿಕೆಗಳನ್ನು ತಿಳಿಸಲು ಇರುವ ಮಾದ್ಯಮವಾಗುವ ಬದಲು ಕೆಸರಾಟಕ್ಕೆ ಮೈದಾನವಾಗುತ್ತಿರುವುದಕ್ಕೆ ಅನೇಕ ಸಾಕ್ಷಿಗಳಿವೆ. ಆದರೂ ಅವನ್ನೆಲ್ಲಾ ಇನ್ನು ಮುಂದೆ ಪರಿಗಣಿಸದೇ ಮುಂದುವರಿಯುತ್ತೇನೆ. ನನ್ನ ಬ್ಲಾಗನ್ನು ಡಿಲೀಟ್ ಮಾಡಿಲ್ಲ ಮತ್ತೆ ಎಲ್ಲವನ್ನು update ಮಾಡಿದ್ದೇನೆ. ನಿಮ್ಮ ಕಾಳಜಿಗೆ ಧನ್ಯವಾದಗಳು.

shivu.k said...

ಕೇಶವ್ ಕುಲಕರ್ಣಿ ಸರ್,
ನಿಮಗೆ ಎಲ್ಲಾ ಸತ್ಯಸತ್ಯತೆಗಳು ಗೊತ್ತಾಗಿದೆ. ಖಂಡಿತ ಇನ್ನು ಮುಂದೆ ಇಂಥ ಕ್ಷಣಿಕ ಅನಾರೋಗ್ಯಕರ ಪ್ರತಿಕ್ರಿಯೆಗಳಿಗೆ ಗಮನ ಕೊಡದೆ ಮುಂದುವರಿಯುತ್ತೇನೆ. ನಿಮ್ಮೆಲ್ಲರ ನಿರೀಕ್ಷೆಯೇ ನನ್ನ ಬರವಣಿಗೆಯ ಟಾನಿಕ್.
ಧನ್ಯವಾದಗಳು.

shivu.k said...

ಮಂಜುನಾಥ್,
ನನ್ನ ಹಳೆಯ ಲೇಖನಗಳನ್ನು ಮತ್ತೆ ಪೋಸ್ಟ್ ಮಾಡಿದ್ದೇನೆ. ನನ್ನ ಲೇಖನಗಳಿಂದಾಗಿಯೇ ನಿಮಗೆ ಫೋಟೊಗ್ರಫಿ ಆಸಕ್ತಿ ಮೂಡಿದ್ದು ಅಂತ ತಿಳಿದು ಸಂತೋಷವಾಗಿದೆ.

ಲೆನ್ಸು ಮತ್ತು ಕ್ಯಾಮೆರ ಬಗ್ಗೆ ಬರೆದಿದ್ದಕ್ಕೆ ಅನೇಕ ಅನಾರೋಗ್ಯಕರ ಟೀಕೆ ಮಾಡಿದರು. ಆದರೆ ನೀವು ಆರೋಗ್ಯಕರವಾಗಿ ಅದನ್ನು ತೆಗೆದುಕೊಂಡಿದ್ದಕ್ಕೆ ಥ್ಯಾಂಕ್ಸ್. ಅದರಿಂದ ನಿಮಗೆ ಉಪಯೋಗವಾದರೆ ನನ್ನ ಪ್ರಯತ್ನ ಸಾರ್ಥಕ.

shivu.k said...

ವಿನೋದ್ ಸರ್,

ನಿಮ್ಮ ಮಾತು ತುಂಬಾ ನಿಜವಾದದ್ದು. ಅದೊಂದು ದಿನ ನೀವು ಕ್ಯಾಮೆರ ಕೊಳ್ಳುವ ಸಲುವಾಗಿ ಕುವೈಟಿನಿಂದ ನನಗೆ ನೇರವಾಗಿ ಫೋನ್ ಮಾಡಿದ್ದು ಅದರ ನಂತರ ನೀವು 5D Mark 2 ಕ್ಯಾಮೆರ ಕೊಂಡಿದ್ದು ಎಲ್ಲಾ ನನಗೆ ನೆನಪಿದೆ. ಅಂತ ಅದ್ಬುತ ಕ್ಯಾಮೆರವನ್ನು ಹೊಂದಿರುವ ನೀವೇ ಧನ್ಯರು. ನನಗೂ ಆ ಕ್ಯಾಮೆರವನ್ನು ನನ್ನದಾಗಿಸಿಕೊಳ್ಳುವ ಕನಸಿದೆ.
ಭಾಷೆ ಬಗ್ಗೆ ನೀವು ಕೊಟ್ಟ ಜಪಾನ್ ಉದಾಹರಣೆ ಅನೇಕರಿಗೆ ತಿಳುವಳಿಕೆ ಮೂಡಿಸಿದರೆ ಸಾಕೆನ್ನುವುದು ನನ್ನ ಭಾವನೆ.
ಫೋಟೊಗ್ರಫಿ ಕಲೆಯು ನಿತ್ಯವೂ ವಿಕಸನವಾಗುತ್ತಿದೆ. ಅದಕ್ಕೆ ಹೊಂದಿಕೊಳ್ಳದೆ ಹೋದಲ್ಲಿ ಹೀಗೆ ವಾದ ವಿವಾದಗಳು. ಹೊಸದೆರೆಡೆಗೆ ನಾವು ಸಾಗಬೇಕಾಗುತ್ತದೆ. ನಿಮ್ಮೆಲ್ಲರ ಪ್ರೋತ್ಸಾಹಗಳು ನನಗೆ ಮತ್ತೆ ಬರೆಯಲು ಉತ್ಸಾಹ ಮೂಡಿಸುತ್ತಿವೆ. ಖಂಡಿತ ಬರೆದು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ.
ಧನ್ಯವಾದಗಳು.

shivu.k said...

ಪ್ರದೀಪ್,

ನನ್ನ ಫೋಟೊಗ್ರಫಿ ಲೇಖನ ಹತ್ತು ಮತ್ತೆ ಪೋಸ್ಟ್ ಮಾಡಿದ್ದೇನೆ. ನೀವು ಕನ್ನಡದಲ್ಲಿ ಬರೆದಿದ್ದಕ್ಕೆ ಹೊಗಳುತ್ತೀರಿ. ಕೆಲವರು ಜೈ ಕನ್ನಡ ಎನ್ನುತ್ತಾರೆ. ಆದ್ರೆ facebook ನ Phototalk ನ ಅಧಿಕೃತ ಭಾಷೆ ಇಂಗ್ಲೀಷ್ ಎನ್ನುತ್ತಾರೆ. ಆದ್ರೆ ಅದರಲ್ಲಿ ಇರುವವರೆಲ್ಲಾ ಪಕ್ಕಾ ಕನ್ನಡಿಗರು. ಈ ಭಾಷೆ ವಿಚಾರವಾಗಿಯೇ ಅವರೆಲ್ಲಾ photo talk ನಿಂದ ನನ್ನ ಸದಸ್ಯತ್ವವನ್ನು ಕಿತ್ತು ಹಾಕಿದರು.
ಟೀಕೆಯು ಸರಿಯಾಗಿದ್ದಲ್ಲಿ ನನಗೆ ತಿದ್ದಿಕೊಳ್ಳುವುದರಲ್ಲಿ ಯಾವುದೇ ಸಂಕೋಚ ಮತ್ತು ಮುಜುಗರವಿಲ್ಲ. ಆದ್ರೆ ನೀವು ನನ್ನ ಫೋಟೊಗ್ರಫಿ ಲೇಖನ ೯ ಮತ್ತು ೧೦ ನ್ನು ಓದಿ. ಆನಂತರ ಬಂದ ಟೀಕೆಗಳು ಆರೋಗ್ಯಕರವಾಗಿರಲಿಲ್ಲ. ದಾರಿತಪ್ಪಿಸುವ ವಿಚಾರವಾಗಿದ್ದವು. ಈಗಲೂ ನಾನು ಫೋಟೊಗ್ರಫಿ ವಿಚಾರವಾಗಿ ಯಾರೊಂದಿಗೆ ಬೇಕಾದರೂ ಆರೋಗ್ಯಕರವಾಗಿ ಚರ್ಚಿಸಲು ಸಿದ್ದ. ಆದರಿಂದ ನನಗೆ ಉಪಯೋಗವಿದೆ. ಕಲಿಯಲು ಸಿದ್ದನಾಗುವವನು ಹೀಗೆ ಸಿದ್ದನಾಗುತ್ತಾನೆ. ಅದಕ್ಕೆ ಸಿದ್ದನಾಗದವನು ಹೀಗೆ ವಿತಂಡವಾದ ಅನಾರೋಗ್ಯಕರ ಚರ್ಚೆ ಮಾಡಿ ದಾರಿ ತಪ್ಪಿಸುತ್ತಾನೆ. ಅವರಿಂದ ನಾವು ಏನನ್ನು ಕಲಿಯಲು ಸಾಧ್ಯವಿಲ್ಲ. ಅದರ ಬದಲು. ಈಗ ಆಗಿರುವ ಪಲಿತಾಂಶವಷ್ಟೆ.
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.

shivu.k said...

ಬಾಲು ಸರ್,

ಈ ವಿಧ್ಯಮಾನಗಳು ನಿಮಗೆ ಬೇಸರ ತಂದಂತೆ ನನಗೂ ಬೇಸರವನ್ನು ತಂದಿವೆ. ಅದಕ್ಕೆ ಬ್ಲಾಗ್ ಮತ್ತು ಬಜ್ನಲ್ಲಿ ಬರೆಯುವುದನ್ನು ಬಿಟ್ಟಿದ್ದೇನೆ. ನಾನು ಬೇರೆಯವರ ಸಣ್ಣತನಕ್ಕೆ ಬೇಸರ ಪಟ್ಟಿಲ್ಲ ಆದ್ರೆ ಅವರಿಂದ ಅನೇಕ ಫೋಟೊಗ್ರಫಿ ಕಲಿಯುತ್ತಿರುವವರು ದಾರಿತಪ್ಪುತ್ತಿದ್ದಾರಲ್ಲ ಎಂದು ಅನಿಸಿದೆ. ಹೊಟ್ಟೆಕಿಚ್ಚು ಪಟ್ಟವರು ಸಾಧಿಸಿದ ಸಾಧನೆ ಈಗ ಎಲ್ಲರಿಗೂ ಗೊತ್ತಾಗಿದೆ. ಬೇರೇನೆನ್ನೋ ಕೊಟ್ಟು ಗೊಬ್ಬರ ನೀರು ಅಂತ ಹೇಳಿದರೆ ಅದನ್ನು ಒಪ್ಪಲು ಸಾಧ್ಯವಿಲ್ಲ. ಹಾಗೆ ಒಪ್ಪುವವರು ಅವರ ಅನುಯಾಯಿಗಳೇ ಮಾತ್ರ.
ಮೊದಲು ಬ್ಲಾಗಿಗರ ಸ್ನೇಹ ನೀವು ಹೇಳಿದಂತೆ ಇತ್ತು. ಆದ್ರೆ ಈಗ ಮೊದಲಿನಂತಿಲ್ಲ.
ಮತ್ತೆ ಬೇಸರಿಸಬೇಡಿ ಇಂಥ ದಾರಿತಪ್ಪಿಸುವ ಟೀಕೆ ಟಿಪ್ಪಣಿಗಳನ್ನು ಮೆಟ್ಟಿಲು ಮಾಡಿಕೊಳ್ಳಲು ಸಾಧ್ಯವಿಲ್ಲ ಏಕೆಂದರೆ ಅವೆಲ್ಲಾ ಅನಾರೋಗ್ಯಕರ ಮೆಟ್ಟಿಲುಗಳು. ಅರೋಗ್ಯಕರ ಟೀಕೆಗಳನ್ನು ಮಾಡುವುದನ್ನು ಮೊದಲು ಕಲಿಯಲಿ ಎನ್ನುವುದು ನನ್ನ ಆಸೆ.
ನಿಮ್ಮ ಕಾಳಜಿ ಪೂರ್ವಕ ಪ್ರತಿಕ್ರಿಯೆಗೆ ಧನ್ಯವಾದಗಳು.

shivu.k said...

ಶ್ವೇತ ಮೇಡಮ್,

ನಿಮ್ಮ ಆಸೆಯಂತೆ ಎಲ್ಲಾ ಬ್ಲಾಗ್ ಲೇಖನಗಳನ್ನು ಮತ್ತೆ ಹಾಕಿದ್ದೇನೆ.
ನನ್ನ ಫೋಟೊಗ್ರಫಿ ಲೇಖನವನ್ನು ಓದಿ ಖುಷಿಪಡುತ್ತಿರುವುದಕ್ಕೆ ಮತ್ತು ಅದರಿಂದ ನೀವು ಕಲಿಯುತ್ತಿದ್ದೇನೆ ಅಂತ ಹೇಳಿದ್ದು ನನ್ನ ಪ್ರಯತ್ನ ಮುಂದುವರಿಸುವುದಕ್ಕೆ ಸ್ಫೂರ್ತಿ ನೀಡಿದಂತಿದೆ. ಧನ್ಯವಾದಗಳು.

shivu.k said...

ಸಂದೀಪ್ ಕಾಮತ್,
ಆತ್ಮೀಯ ಗೆಳೆಯ ಶ್ರೀನಿಧಿಯವರ ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಬರಲಾಗದಿದ್ದಕ್ಕೆ ನನಗೆ ವಿಷಾದವಿದೆ. ಅವತ್ತು ಕೆಲಸವಿದ್ದಿದ್ದರಿಂದ ಬರಲಾಗಲಿಲ್ಲ ಅದು ಶ್ರೀನಿಧಿಯವರಿಗೂ ಗೊತ್ತಿತ್ತು.
ಆವರ ಪುಸ್ತಕವನ್ನು ರಾಜಾಜಿನಗರದ ಆಕೃತಿ ಪುಸ್ತಕಮಳಿಗೆಯಲ್ಲಿ ಕೊಂಡುಕೊಂಡೆ.
ಜಿ.ವಿ.ಯವರ ಮಾತುಗಳನ್ನು ನಿಮ್ಮ ಕಡೆಯಿಂದ ಕೇಳಿ ನನಗೆ ನಿಜಕ್ಕೂ ಖುಷಿಯಾಗುತ್ತಿದೆ.ಆ ಸಮಯದಲ್ಲಿ ನನ್ನನ್ನು ನೆನಪಿಸಿಕೊಂಡಿದ್ದಕ್ಕೆ ಥ್ಯಾಂಕ್ಸ್.
ಕನ್ನಡದಲ್ಲಿ ಆಗುತ್ತಿರುವ ಇಂಥ ಪ್ರಯತ್ನಗಳಿಗೆ ಪ್ರೋತ್ಸಾಹ ಮಾಡುವುದು ಬಿಟ್ಟು ಯಾಕೆ ಹೀಗೆ ಟೀಕೆ ಮಾಡಿ ಕಾಲೆಳೆಯುತ್ತಾರೋ ನನಗೆ ಗೊತ್ತಿಲ್ಲ.
ನಾನು ಫೋಟೊಗ್ರಫಿ ಬಗ್ಗೆ ಸುಮಾರು ಲೇಖನ ಬರೆದಿದ್ದೇನೆ. ಇನ್ನೂ ಅನೇಕ ಭಾಗಗಳಿವೆ ಬರೆಯುತ್ತಿದ್ದೇನೆ. ಆದ್ರೆ ಇನ್ನು ಮುಂದೆ ಸಾಧ್ಯವಾದಷ್ಟು ಮಟ್ಟಿಗೆ ಬ್ಲಾಗಿಗೆ ಫೋಸ್ಟ್ ಮಾಡುವುದು ಬೇಡವೆಂದುಕೊಂಡಿದ್ದೇನೆ.
ಎಲ್ಲವನ್ನು ಪುಸ್ತಕ ರೂಪದಲ್ಲಿ ಕೊಡುವ ಆಸೆ.
ಆಗ ಬ್ಲಾಗ್ ಡಿಲಿಟ್ ಮಾಡುವಷ್ಟು ಬೇಸರವಾಗಿತ್ತು.
ನನ್ನ ಅನುಭವ ಮತ್ತು ಶ್ರಮವನ್ನು ವ್ಯರ್ಥ ಮಾಡಲಾರೆ. ಖಂಡಿತ ಮುಂದುವರಿಸುತ್ತೇನೆ.
ನನ್ನ ಫೋಟೋಗ್ರಫಿ ಬರಹದ ಮೇಲಿನ ಕಾಳಜಿಗೆ ಧನ್ಯವಾದಗಳು.